ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’

“ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವವರಾಗಿ.”—ಫಿಲಿ. 1:10.

ಇದರ ಕುರಿತು ಧ್ಯಾನಿಸಿ:

ಯೆಶಾಯ, ಯೆಹೆಜ್ಕೇಲ, ದಾನಿಯೇಲ ಕಂಡ ದರ್ಶನಗಳು ನಮಗೆ ಯಾವ ಭರವಸೆ ನೀಡುತ್ತವೆ?

ಯೆಹೋವನ ಸಂಘಟನೆಯ ಭೂಭಾಗ ಯಾವುದಕ್ಕೆ ಗಮನಕೊಡುತ್ತಿದೆ ಎಂದು ತಿಳಿಯುವುದರಿಂದ ನಮಗಿರುವ ಪಾಠವೇನು?

ನೀವು ಯಾವ ದೃಢಸಂಕಲ್ಪ ಮಾಡಿದ್ದೀರಿ?

1, 2. ಕಡೇ ದಿವಸದ ಬಗ್ಗೆ ಯೇಸು ನುಡಿದ ಯಾವ ಪ್ರವಾದನೆ ಶಿಷ್ಯರ ಕುತೂಹಲ ಹೆಚ್ಚಿಸಿತು? ಯಾಕೆ?

ಪೇತ್ರ, ಯೋಹಾನ ಯಾಕೋಬ ಮತ್ತು ಅಂದ್ರೆಯ ತಮ್ಮ ಬೋಧಕನಾದ ಯೇಸುವಿನೊಂದಿಗೆ ಏಕಾಂತದಲ್ಲಿದ್ದರು. ದೇವಾಲಯದ ನಾಶನದ ಬಗ್ಗೆ ಅವನು ಹೇಳಿದ ಮಾತುಗಳೇ ಅವರ ಮನ ಪಟಲದಲ್ಲಿ ಓಡಾಡುತ್ತಿದ್ದವು. (ಮಾರ್ಕ 13:1-4) ಆದ್ದರಿಂದ ಅವರು “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು? ನಮಗೆ ಹೇಳು” ಎಂದು ಕೇಳಿದರು. (ಮತ್ತಾ. 24:1-3) ಆಗ ಯೇಸು ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು ಗುರುತಿಸುವ ಸೂಚನೆಗಳನ್ನು ವಿವರಿಸತೊಡಗಿದನು. ಅವು ಮಾನವರ ಬದುಕನ್ನು ಸಹ ಪ್ರಭಾವಿಸಲಿದ್ದವು. ಹೀಗೆ ಹೇಳುತ್ತಿರುವಾಗ ಒಂದು ವಿಷಯ ಶಿಷ್ಯರ ಕುತೂಹಲವನ್ನು ಹೆಚ್ಚಿಸಿತು. ಯಾವುದದು? ಕಡೇ ದಿವಸಗಳಲ್ಲಿ ಯುದ್ಧ, ಆಹಾರದ ಅಭಾವ ಅನ್ಯಾಯ ನಡೆಯುವುದಾದರೂ ಇದರ ಮಧ್ಯೆ ಒಂದು ಒಳ್ಳೆಯ ವಿಷಯ ನಡೆಯುವುದೆಂದು ಯೇಸು ಹೇಳಿದನು. ಅವನು ಹೇಳಿದ್ದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾ. 24:7-14.

2 ಶಿಷ್ಯರು ದೇವರ ರಾಜ್ಯದ ಸುವಾರ್ತೆಯನ್ನು ಈಗಾಗಲೇ ಕ್ರಿಸ್ತನ ಜೊತೆ ಸಾರುತ್ತಾ ಆನಂದಿಸಿದ್ದರು. (ಲೂಕ 8:1; 9:1, 2) ಈಗ ಯೇಸು ಹೇಳಿದ್ದ ಒಂದು ಮಾತು ಅವರ ಜ್ಞಾಪಕಕ್ಕೆ ಬಂದಿರಬೇಕು: “ಕೊಯ್ಲು ನಿಶ್ಚಯವಾಗಿಯೂ ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” (ಲೂಕ 10:2) ಆದರೆ ಅವರಿಗೆ “ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿ” ಕೊಡಲು ಹೇಗೆ ತಾನೆ ಸಾಧ್ಯ? ಅಷ್ಟೊಂದು ಕೆಲಸಗಾರರು ಎಲ್ಲಿಂದ ಬರುತ್ತಾರೆ? ಮತ್ತಾಯ 24:14ರ ಪ್ರವಾದನೆಯ ನೆರವೇರಿಕೆಯ ಬಗ್ಗೆ ಊಹಿಸಲೂ ಅವರಿಗೆ ಕಷ್ಟವಾಗಿದ್ದಿರಬೇಕು.

3. (1) ಲೂಕ 21:34 ಇಂದು ಹೇಗೆ ನೆರವೇರುತ್ತಿದೆ? (2) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

3 ಯೇಸು ಕ್ರಿಸ್ತನು ನುಡಿದ ಪ್ರವಾದನೆಯ ನೆರವೇರಿಕೆಯ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಇಡೀ ಭೂಮಿಯನ್ನು ರಾಜ್ಯದ ಸುವಾರ್ತೆಯಿಂದ ತುಂಬಿಸಲು ಇಂದು ಲಕ್ಷಾಂತರ ಮಂದಿ ಜೊತೆ ಸೇರಿದ್ದಾರೆ. (ಯೆಶಾ. 60:22) ಹಾಗಿದ್ದರೂ ಕಡೇ ದಿವಸಗಳಲ್ಲಿ ಕೆಲವು ದೇವಜನರಿಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ, ಅವರ ಗಮನ ಬೇರೆ ವಿಷಯಗಳ ಕಡೆ ತಿರುಗುವುದರಿಂದ “ಕುಗ್ಗಿ ಹೋಗುತ್ತಾರೆ” ಎಂದು ಯೇಸು ಹೇಳಿದನು. (ಲೂಕ 21:34 ಓದಿ.) ಇಂದು ಹಾಗೆಯೇ ಆಗುತ್ತಿದೆ. ಕೆಲವು ದೇವಜನರು ಸತ್ಯದಿಂದ ಹಾದಿ ತಪ್ಪುತ್ತಿದ್ದಾರೆ. ಇದನ್ನು ಬದುಕಿನಲ್ಲಿ ಅವರು ಮಾಡುವ ನಿರ್ಣಯಗಳ ಮೂಲಕ ತಿಳಿಯಬಹುದು. ಅವರು ಹೆಚ್ಚಿನ ಸಮಯವನ್ನು ಕೆಲಸ, ಉನ್ನತ ಶಿಕ್ಷಣ, ಆಸ್ತಿಮಾಡುವುದು, ಆಟ-ಮನರಂಜನೆ ಇದರಲ್ಲೇ ಕಳೆಯುತ್ತಾರೆ. ಇನ್ನಿತರರು ಜೀವನದ ಒತ್ತಡ, ಚಿಂತೆಗಳಿಂದ ಬದುಕನ್ನು ಗೊಂದಲದ ಗೂಡಾಗಿ ಮಾಡಿಕೊಳ್ಳುತ್ತಾರೆ. ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಜೀವನ ಹೇಗಿದೆ? ನಾನು ತೆಗೆದುಕೊಳ್ಳುವ ನಿರ್ಣಯಗಳು ದೇವರ ಸೇವೆಗೆ ಪ್ರಥಮ ಸ್ಥಾನ ಕೊಡುತ್ತಿದ್ದೇನೆಂದು ತೋರಿಸಿಕೊಡುತ್ತವಾ?’

4. (1) ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೋಸ್ಕರ ಪೌಲನು ಏನೆಂದು ಪ್ರಾರ್ಥಿಸಿದನು? (2) ಮತ್ತು ಏಕೆ? (3) ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ನಾವು ಯಾವ ವಿಷಯಗಳನ್ನು ಪರಿಗಣಿಸುತ್ತೇವೆ? (4) ಯಾವ ಉದ್ದೇಶದೊಂದಿಗೆ?

4 ಪ್ರಥಮ ಶತಮಾನದ ಕ್ರೈಸ್ತರು ತಮ್ಮ ಆಧ್ಯಾತ್ಮಿಕ ಆದ್ಯತೆಗಳನ್ನು ಕಾಪಾಡಿಕೊಳ್ಳಲು ಶ್ರಮಹಾಕಬೇಕಿತ್ತು. ಫಿಲಿಪ್ಪಿಯಲ್ಲಿದ್ದ ಕ್ರೈಸ್ತರು ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವಂತೆ’ ಅಪೊಸ್ತಲ ಪೌಲನು ಪ್ರಾರ್ಥಿಸಿದನು. (ಫಿಲಿಪ್ಪಿ 1:9-11 ಓದಿ.) ಆ ಕ್ರೈಸ್ತರಲ್ಲಿ ಅನೇಕರು ಪೌಲನಂತೆ ‘ದೇವರ ವಾಕ್ಯವನ್ನು ನಿರ್ಭಯದಿಂದ ಮಾತಾಡಲು ಇನ್ನಷ್ಟು ಧೈರ್ಯವನ್ನು ತೋರಿಸಿದರು.’ (ಫಿಲಿ. 1:12-14) ಅಂದಿನಂತೆಯೇ, ಇಂದು ಸಹ ನಮ್ಮಲ್ಲಿರುವ ಹೆಚ್ಚಿನವರು ದೇವರ ವಾಕ್ಯದ ಬಗ್ಗೆ ಧೈರ್ಯದಿಂದ ಮಾತಾಡುತ್ತಿದ್ದಾರೆ. ಇಂದು ಯೆಹೋವನ ಸಂಘಟನೆ ಯಾವ ಕೆಲಸವನ್ನು ಪೂರೈಸುತ್ತಿದೆ ಎಂದು ತಿಳಿದುಕೊಳ್ಳುವಾಗ, ನಾವು ಪ್ರಮುಖವಾದ ವಿಷಯವನ್ನು ಅಂದರೆ ಸುವಾರ್ತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಮತ್ತಾಯ 24:14ರ ಮಾತುಗಳು ಸಾಕಾರಗೊಳ್ಳಲು ಯೆಹೋವನು ಯಾವ ಏರ್ಪಾಡನ್ನು ಮಾಡಿದ್ದಾನೆ? ದೇವರ ಸಂಘಟನೆಯ ಮುಖ್ಯ ಗುರಿಯೇನು? ಇದರ ಬಗ್ಗೆ ತಿಳಿದುಕೊಳ್ಳೋದು ಏನನ್ನು ಮಾಡುವಂತೆ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ಪ್ರೋತ್ಸಾಹಿಸುತ್ತದೆ? ಎಂದು ಈ ಲೇಖನದಲ್ಲಿ ನಾವು ನೋಡೋಣ. ಮುಂದಿನ ಲೇಖನದಲ್ಲಿ, ಯೆಹೋವನ ಸಂಘಟನೆಯೊಂದಿಗೆ ಹೆಜ್ಜೆ ಹಾಕುತ್ತಾ ಮುಂದುವರಿಯಲು ಯಾವುದು ಸಹಾಯಮಾಡುವುದೆಂದು ಚರ್ಚಿಸಲಾಗಿದೆ.

ಮುನ್ನುಗುತ್ತಿರುವ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗ

5, 6. (1) ತನ್ನ ಸಂಘಟನೆಯ ಸ್ವರ್ಗೀಯ ಭಾಗದ ಕುರಿತು ಯೆಹೋವನು ಯಾಕೆ ದರ್ಶನಗಳನ್ನು ಕೊಟ್ಟನು? (2) ಯೆಹೆಜ್ಕೇಲನು ದರ್ಶನದಲ್ಲಿ ಏನನ್ನು ಕಂಡನು?

5 ನಮಗೆ ವಿಸ್ಮಯಕರ ಅಂತ ಅನಿಸುವ ಅನೇಕ ವಿಷಯಗಳನ್ನು ಯೆಹೋವನು ತನ್ನ ವಾಕ್ಯವಾದ ಬೈಬಲ್‌ನಲ್ಲಿ ಸೇರಿಸಬಹುದಿತ್ತು. ಉದಾಹರಣೆಗೆ ನಮ್ಮ ಮಿದುಳು ಹೇಗೆ ಕೆಲಸ ಮಾಡುತ್ತೆ, ವಿಶ್ವ ಹೇಗೆ ಕೆಲಸ ಮಾಡುತ್ತಿದೆ ಎಂಬೆಲ್ಲ ವಿಷಯಗಳು. ಆದರೆ ಅವುಗಳ ಬಗ್ಗೆ ವಿವರಣೆ ಕೊಡುವ ಬದಲು ತನ್ನ ಉದ್ದೇಶಗಳ ಬಗ್ಗೆ ತಿಳಿದು ನಮ್ಮ ಜೀವನವನ್ನು ಅದಕ್ಕೆ ಹೊಂದಿಕೆಯಲ್ಲಿ ನಡೆಸಲು ಏನೆಲ್ಲ ಅವಶ್ಯಕ ಎಂದು ಯೆಹೋವನು ನಮಗೆ ತಿಳಿಸಿದ್ದಾನೆ. (2 ತಿಮೊ. 3:16, 17) ಯೆಹೋವನು ತನ್ನ ಅದೃಶ್ಯ ಸಂಘಟನೆಯ ಬಗ್ಗೆ ನಸುನೋಟವನ್ನು ಕೊಟ್ಟಿರುವುದು ಸಹ ಎಷ್ಟೊಂದು ವಿಸ್ಮಯಕರವಲ್ಲವೇ! ಯೆಶಾಯ, ಯೆಹೆಜ್ಕೇಲ ದಾನಿಯೇಲ ಮತ್ತು ಯೋಹಾನನ ಪ್ರಕಟನೆಯಿಂದ ಯೆಹೋವನು ತನ್ನ ಸ್ವರ್ಗೀಯ ಏರ್ಪಾಡಿನ ಬಗ್ಗೆ ಬರೆಸಿರುವುದನ್ನು ಓದುವಾಗ ನಮ್ಮ ಮನ ಪುಳಕಗೊಳ್ಳುವುದರಲ್ಲಿ ಸಂಶಯವಿಲ್ಲ. (ಯೆಶಾ. 6:1-4; ಯೆಹೆ. 1:4-14, 22-24; ದಾನಿ. 7:9-14; ಪ್ರಕ. 4:1-11) ಆ ವಿಷಯಗಳು ಹೇಗಿವೆಯೆಂದರೆ ದೇವರು ಸ್ವರ್ಗದ ತೆರೆಯನ್ನು ಸ್ವಲ್ಪ ಸರಿಸಿ ನಾವು ಇಣುಕಿ ನೋಡುವಂತೆ ಮಾಡಿದಂತಿದೆ. ದೇವರು ಯಾಕೆ ನಮಗೆ ಈ ವಿಷಯಗಳನ್ನು ಒದಗಿಸಿದನು?

6 ನಾವು ವಿಶ್ವವ್ಯಾಪಿ ಸಂಘಟನೆಯ ಭಾಗ ಎಂಬುದನ್ನು ಎಂದೂ ಮರೆಯಬಾರದೆಂಬುದೇ ಯೆಹೋವನ ಬಯಕೆ. ನಮ್ಮ ಕಣ್ಣೆದುರಿಗೆ ನಡೆಯುವ ವಿಷಯಗಳಲ್ಲದೆ ಇನ್ನೂ ಅನೇಕ ವಿಷಯಗಳು ಯೆಹೋವನ ಉದ್ದೇಶಗಳಿಗೆ ಸಂಬಂಧಿಸಿ ನಡೆಯುತ್ತಿವೆ. ಉದಾಹರಣೆಗೆ ಯೆಹೋವನ ಸಂಘಟನೆಯನ್ನು ಚಿತ್ರಿಸುವ ಮಹಾ ದಿವ್ಯ ರಥದ ದರ್ಶನವನ್ನು ಯೆಹೆಜ್ಕೇಲನು ಕಂಡನು. ಚುರುಕಾಗಿ ಚಲಿಸುವ ಥಟ್ಟನೆ ದಿಕ್ಕು ಬದಲಿಸುತ್ತಾ ಮುಂದೆ ಸಾಗುವ ಸಾಮರ್ಥ್ಯ ಅದಕ್ಕಿತ್ತು. (ಯೆಹೆ. 1:15-21) ಅದರ ಚಕ್ರದ ಪ್ರತಿಯೊಂದು ಸುತ್ತು ತುಂಬ ದೂರದ ಅಂತರವನ್ನು ಮುಟ್ಟುತ್ತಿತ್ತು. ಆ ರಥವನ್ನು ಓಡಿಸುತ್ತಿದ್ದವನ ಮಿನುಗುನೋಟ ಸಹ ಯೆಹೆಜ್ಕೇಲನಿಗೆ ಸಿಕ್ಕಿತು. ಅವನು ಹೇಳಿದ್ದು: “ಬೆಂಕಿಯು ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆನು. . . . ಹೀಗೆ ಯೆಹೋವನ ಮಹಿಮಾದ್ಭುತದರ್ಶನವು ಆಯಿತು.” (ಯೆಹೆ. 1:25-28) ಈ ದರ್ಶನ ಯೆಹೆಜ್ಕೇಲನಲ್ಲಿ ಭಯಭಕ್ತಿ ಹುಟ್ಟಿಸಿರಬೇಕಲ್ಲವೇ! ಯೆಹೋವನು ತನ್ನ ಪವಿತ್ರಾತ್ಮ ಶಕ್ತಿಯ ಮೂಲಕ ತನ್ನ ಇಡೀ ಸಂಘಟನೆಯನ್ನು ಮುನ್ನಡೆಸುತ್ತಿರುವುದನ್ನು ಅವನು ಕಂಡನು. ಮುನ್ನುಗ್ಗುತ್ತಿರುವ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗದ ಎಂಥ ವಿಸ್ಮಯಕರ ನೋಟವಿದು!

7. ದಾನಿಯೇಲ ಕಂಡ ದರ್ಶನದಿಂದ ನಮ್ಮ ಭರವಸೆ ಹೆಚ್ಚುತ್ತದೆ ಹೇಗೆ?

7 ನಮ್ಮ ಭರವಸೆಯನ್ನು ಹೆಚ್ಚಿಸುವಂಥ ದರ್ಶನವನ್ನು ದಾನಿಯೇಲನು ಸಹ ಕಂಡನು. ಯೆಹೋವನನ್ನು ‘ಮಹಾವೃದ್ಧ’ನೋಪಾದಿ ಅಗ್ನಿಜ್ವಾಲೆಗಳಿರುವ ಸಿಂಹಾಸನದಲ್ಲಿ ಆಸೀನನಾಗಿರುವುದನ್ನು ಅವನು ಕಂಡನು. ಆ ಸಿಂಹಾಸನಕ್ಕೆ ಚಕ್ರಗಳಿದ್ದವು. (ದಾನಿ. 7:9) ತನ್ನ ಸಂಘಟನೆ ತನ್ನ ಉದ್ದೇಶಗಳನ್ನು ಪೂರೈಸುತ್ತಾ ಮುಂದೆ ಸಾಗುತ್ತಿರುವುದನ್ನು ದಾನಿಯೇಲನು ನೋಡಿ ಗ್ರಹಿಸಬೇಕೆಂದು ಯೆಹೋವನು ಬಯಸಿದನು. ಸಂಘಟನೆಯ ಭೂಭಾಗದ ಮೇಲ್ವಿಚಾರಣೆಯನ್ನು ‘ಮನುಷ್ಯಕುಮಾರನಂತೆ’ ಇರುವವನಿಗೆ ಅಂದರೆ ಯೇಸುವಿಗೆ ಕೊಡಲಾಗುತ್ತಿರುವುದನ್ನು ಸಹ ದಾನಿಯೇಲ ನೋಡಿದನು. ಕ್ರಿಸ್ತನ ಪರಿಪೂರ್ಣವಾದ ಈ ಆಡಳಿತ ಕೆಲವು ವರ್ಷಗಳಿಗೆ ಮಾತ್ರ ಸೀಮಿತವಲ್ಲ. ಅದು “ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” (ದಾನಿ. 7:13, 14) ಈ ದರ್ಶನ ನಮಗೆ ಯೆಹೋವನಲ್ಲಿ ಮತ್ತು ಆತನು ತನ್ನ ಉದ್ದೇಶಗಳನ್ನು ಪೂರೈಸಲು ಏನೆಲ್ಲಾ ಮಾಡುತ್ತಿದ್ದಾನೊ ಅದರಲ್ಲಿ ಭರವಸೆಯನ್ನು ಹೆಚ್ಚಿಸುತ್ತದಲ್ಲವೇ! ತನ್ನ ಸಮಗ್ರತೆಯನ್ನು ಸಾಬೀತುಪಡಿಸಿದ ಯೇಸುವಿಗೆ “ದೊರೆತನವೂ ಘನತೆಯೂ ರಾಜ್ಯವೂ” ಯೆಹೋವನಿಂದ ಸಿಕ್ಕಿತು. ತನ್ನ ಮಗನಲ್ಲಿ ಯೆಹೋವನಿಗೆ ಸಂಪೂರ್ಣ ಭರವಸೆಯಿರುವಾಗ ನಮಗೂ ಯೇಸುವಿನ ನಾಯಕತ್ವದಲ್ಲಿ ಅದೇ ಭರವಸೆ ಇರಬೇಕು.

8. (1) ಯೆಹೋವನು ತನ್ನ ಸಂಘಟನೆಯ ಬಗ್ಗೆ ಕೊಟ್ಟ ದರ್ಶನ ಯೆಹೆಜ್ಕೇಲ ಮತ್ತು ಯೆಶಾಯನನ್ನು ಹೇಗೆ ಪ್ರಭಾವಿಸಿತು? (2) ನಮ್ಮನ್ನೂ ಹೇಗೆ ಪ್ರಭಾವಿಸಬೇಕು?

8 ಯೆಹೋವನ ಸಂಘಟನೆಯ ಅದೃಶ್ಯ ಭಾಗದ ಈ ನೋಟ ನಮ್ಮನ್ನು ಹೇಗೆ ಪ್ರಭಾವಿಸಬೇಕು? ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುತ್ತಿರುವ ಈ ಪರಿ ಯೆಹೆಜ್ಕೇಲನಂತೆ ನಮ್ಮನ್ನೂ ಸಹ ಭಯವಿಸ್ಮಿತರನ್ನಾಗಿ ಮತ್ತು ವಿನೀತರನ್ನಾಗಿಸುತ್ತದೆ. (ಯೆಹೆ. 1:28) ಯೆಹೋವನ ಸಂಘಟನೆಯ ಬಗ್ಗೆ ಧ್ಯಾನಿಸುವಾಗ ಯೆಶಾಯನಿಗಾದಂತೆ ನಮಗೂ ಕ್ರಿಯೆಗೈಯುವ ಪ್ರೇರಣೆ ಸಿಗುತ್ತದೆ. ಯೆಹೋವನು ಮಾಡುತ್ತಿರುವ ವಿಷಯಗಳ ಬಗ್ಗೆ ಇತರರಿಗೆ ತಿಳಿಸುವ ಆಮಂತ್ರಣ ಅವನಿಗೆ ಸಿಕ್ಕಾಗ ಹಿಂಜರಿಕೆಯಿಲ್ಲದೆ ಕೂಡಲೆ ಒಪ್ಪಿಕೊಂಡನು. (ಯೆಶಾಯ 6:5, 8 ಓದಿ.) ತನ್ನ ನೇಮಕದಲ್ಲಿ ಏನೇ ಕಷ್ಟ ತೊಂದರೆ ಬಂದರೂ ಅವನ್ನು ಎದುರಿಸಲು ತನಗೆ ಯೆಹೋವನು ಬೆಂಗಾವಲಾಗಿದ್ದು ಸಹಾಯಹಸ್ತ ನೀಡುವನೆಂಬ ದೃಢಭರವಸೆ ಯೆಶಾಯನಿಗಿತ್ತು. ಯೆಹೋವನ ಸಂಘಟನೆಯ ಅದೃಶ್ಯ ಭಾಗದ ಈ ಮಿನುಗುನೋಟ ನಮ್ಮನ್ನು ಸಹ ವಿಸ್ಮಿತರನ್ನಾಗಿಸಿ ಕ್ರಿಯೆಗೈಯಲು ಪ್ರೇರಣೆ ನೀಡಬೇಕು. ಸದಾ ಮುನ್ನುಗ್ಗುತ್ತಾ, ಯೆಹೋವನ ಉದ್ದೇಶಗಳನ್ನು ಪೂರೈಸುವುದರಲ್ಲಿ ತೊಡಗಿರುವ ಈ ಸಂಘಟನೆಯ ಭಾಗವಾಗಿರುವುದು ನಮ್ಮನ್ನು ಪ್ರೋತ್ಸಾಹಿಸುತ್ತದೆ ಮತ್ತು ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವ ಪ್ರಚೋದನೆ ನೀಡುತ್ತದೆ.

ಯೆಹೋವನ ಸಂಘಟನೆಯ ಭೂಭಾಗ

9, 10. ಯೆಹೋವನ ಸಂಘಟನೆಯ ದೃಶ್ಯ ಭಾಗದ ಅಗತ್ಯವೇಕಿದೆ?

9 ಯೆಹೋವನು ತನ್ನ ಮಗನ ಮೂಲಕ ಭೂಮಿಯಲ್ಲಿ ಒಂದು ಏರ್ಪಾಡನ್ನು ಮಾಡಿದ್ದಾನೆ. ಅದು ಆತನ ಸಂಘಟನೆಯ ಅದೃಶ್ಯ ಭಾಗದೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತದೆ. ಮತ್ತಾಯ 24:14ನ್ನು ಸಾಕಾರಗೊಳಿಸಲು ಅದೃಶ್ಯ ಭಾಗವಿರುವಾಗ ಭೂಮಿಯಲ್ಲಿ ದೃಶ್ಯ ಭಾಗದ ಅಗತ್ಯವೇಕಿದೆ? ಈ ಮೂರು ಕಾರಣಗಳನ್ನು ಪರಿಗಣಿಸಿ.

10 ಮೊದಲನೆಯದಾಗಿ, ಯೇಸು ಹೇಳಿದಂತೆ ಅವನ ಶಿಷ್ಯರು ಸುವಾರ್ತೆಯನ್ನು “ಭೂಮಿಯ ಕಟ್ಟಕಡೆಯ ವರೆಗೂ” ಸಾರಬೇಕಿತ್ತು. (ಅ. ಕಾ. 1:8) ಎರಡನೆಯದಾಗಿ, ಆಧ್ಯಾತ್ಮಿಕ ಆಹಾರವನ್ನು ದಯಪಾಲಿಸಲು ಮತ್ತು ಈ ಕೆಲಸದಲ್ಲಿ ತೊಡಗಿರುವವರನ್ನು ನೋಡಿಕೊಳ್ಳಲು ಸರಿಯಾದ ವ್ಯವಸ್ಥೆಯ ಅಗತ್ಯವಿತ್ತು. (ಯೋಹಾ. 21:15-17) ಮೂರನೆಯದಾಗಿ, ಯಾರೆಲ್ಲಾ ಸುವಾರ್ತೆ ಸಾರುತ್ತಾರೊ ಅವರು ಒಟ್ಟಾಗಿ ಕೂಡಿಬಂದು ಯೆಹೋವನನ್ನು ಆರಾಧಿಸಲು ಮತ್ತು ಆತನು ಹೇಳಿರುವ ಕೆಲಸವನ್ನು ಸುಗಮವಾಗಿ ಮಾಡುವುದು ಹೇಗೆಂದು ಕಲಿಯಲು ಏರ್ಪಾಡಾಗಬೇಕಿತ್ತು. (ಇಬ್ರಿ. 10:24, 25) ಇದೆಲ್ಲ ತನ್ನಿಂತಾನೇ ಆಗಲು ಸಾಧ್ಯವಿಲ್ಲ. ಕ್ರಿಸ್ತನ ಹಿಂಬಾಲಕರು ಮಾಡುವ ಕೆಲಸವು ಸಫಲವಾಗಬೇಕಾದರೆ, ಆ ಕೆಲಸಗಳು ಸುಸಂಘಟಿತವಾಗಿರಬೇಕು.

11. ಯೆಹೋವನ ಸಂಘಟನೆ ಮಾಡುವ ಏರ್ಪಾಡುಗಳಿಗೆ ಹೇಗೆ ಬೆಂಬಲ ನೀಡಬಲ್ಲೆವು?

11 ಯೆಹೋವನ ಸಂಘಟನೆ ಮಾಡುವ ಏರ್ಪಾಡುಗಳಿಗೆ ನಾವು ಹೇಗೆ ಬೆಂಬಲ ಕೊಡುವುದು? ಒಂದು ಪ್ರಮುಖ ರೀತಿ ಯಾವುದೆಂದರೆ ಸುವಾರ್ತಾ ಕೆಲಸವನ್ನು ಮುನ್ನಡೆಸಲು ಯೆಹೋವ ಮತ್ತು ಯೇಸು ಯಾರಲ್ಲಿ ನಂಬಿಕೆಯಿಟ್ಟು ನೇಮಿಸಿದ್ದಾರೊ ಅವರಲ್ಲಿ ಯಾವಾಗಲೂ ಭರವಸೆ ಇಡುವುದು. ಮುಂದಾಳತ್ವ ವಹಿಸುವವರು ಈ ಲೋಕದ ಬೇರೆ ವಿಷಯಗಳಿಗೆ ತಮ್ಮ ಸಮಯ ಶಕ್ತಿಯನ್ನು ಬಳಸಲು ಸಾಧ್ಯವಿದೆ. ಆದರೆ ಅವರು ಹಾಗೆ ಮಾಡುತ್ತಾ ಇಲ್ಲ. ಹಾಗಾದರೆ ಯೆಹೋವನ ಸಂಘಟನೆ ಯಾವುದಕ್ಕೆ ಹೆಚ್ಚಿನ ಗಮನ ಕೊಡುತ್ತಿದೆ?

“ಹೆಚ್ಚು ಪ್ರಮುಖವಾದ ವಿಷಯ”ಗಳ ಕಡೆಗೆ ಗಮನ ಕೊಡುತ್ತದೆ

12, 13. (1) ಕ್ರೈಸ್ತ ಹಿರಿಯರು ತಮ್ಮ ನೇಮಕವನ್ನು ಹೇಗೆ ಪೂರೈಸುತ್ತಾರೆ? (2) ಇದರಿಂದ ನಿಮಗೆ ಹೇಗೆ ಪ್ರೋತ್ಸಾಹ ಸಿಕ್ಕಿದೆ?

12 ಭೂಮಿಯಾದ್ಯಂತ ಇರುವ ಅನುಭವೀ ಕ್ರೈಸ್ತ ಹಿರಿಯರು ತಾವು ಸೇವೆಸಲ್ಲಿಸುವ ಕ್ಷೇತ್ರಗಳಲ್ಲಿ ಸುವಾರ್ತೆ ಸಾರುವ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಅದನ್ನು ಸಂಘಟಿಸುತ್ತಾರೆ. ಅವರು ನಿರ್ಣಯಗಳನ್ನು ಮಾಡುವಾಗ ದೇವರ ವಾಕ್ಯದಿಂದ ನಿರ್ದೇಶನ ಪಡೆದು ಅದನ್ನು ತಮ್ಮ ‘ಕಾಲಿಗೆ ದೀಪವನ್ನಾಗಿ, ದಾರಿಗೆ ಬೆಳಕನ್ನಾಗಿ’ ಮಾಡಿಕೊಳ್ಳುತ್ತಾರೆ. ಮತ್ತು ಯೆಹೋವನ ಮಾರ್ಗದರ್ಶನೆಗಾಗಿ ಶ್ರದ್ಧೆಯಿಂದ ಪ್ರಾರ್ಥಿಸುತ್ತಾರೆ.—ಕೀರ್ತ. 119:105; ಮತ್ತಾ. 7:7, 8.

13 ಪ್ರಥಮ ಶತಮಾನದಲ್ಲಿ ಮುಂದಾಳತ್ವ ವಹಿಸಿದ ಪುರುಷರಂತೆ ಇಂದು ಸಹ ಸಾರುವ ಕೆಲಸದ ಮೇಲ್ವಿಚಾರಣೆ ವಹಿಸುವ ಕ್ರೈಸ್ತ ಹಿರಿಯರು ‘ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿ’ ನಿರತರಾಗಿರುತ್ತಾರೆ. (ಅ. ಕಾ. 6:4) ಸ್ಥಳೀಯವಾಗಿ ಮತ್ತು ಭೌಗೋಳಿಕವಾಗಿ ಸುವಾರ್ತಾ ಕೆಲಸದಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡಿ ಸಂತೋಷಪಡುತ್ತಾರೆ. (ಅ. ಕಾ. 21:19, 20) ಹಾಗೇ ಮಾಡಬೇಕು ಹೀಗೇ ಇರಬೇಕು ಎಂದು ಅವರು ಎಲ್ಲದಕ್ಕೂ ನಿಯಮಗಳನ್ನು ಹಾಕುವುದಿಲ್ಲ. ಬದಲಿಗೆ ಸೇವೆಯನ್ನು ಇನ್ನಷ್ಟು ಹೆಚ್ಚಿಸಲು ಬೇಕಾದ ಏರ್ಪಾಡುಗಳನ್ನು ಮಾಡುವಾಗ ದೇವರ ವಾಕ್ಯವನ್ನು ಪಾಲಿಸುತ್ತಾರೆ ಮತ್ತು ಪವಿತ್ರಾತ್ಮದ ಮಾರ್ಗದರ್ಶನೆಯನ್ನು ಅನುಸರಿಸುತ್ತಾರೆ. (ಅಪೊಸ್ತಲರ ಕಾರ್ಯಗಳು 15:28 ಓದಿ.) ಹೀಗೆ ಮಾಡುವ ಮೂಲಕ ಈ ಜವಾಬ್ದಾರಿಯುತ ಸಹೋದರರು ಸಭೆಯಲ್ಲಿರುವ ಎಲ್ಲರಿಗೆ ಒಳ್ಳೆ ಮಾದರಿಯಾಗಿರುತ್ತಾರೆ.—ಎಫೆ. 4:11, 12.

14, 15. (1) ಭೂಮಿಯಾದ್ಯಂತ ಸಾರುವ ಕೆಲಸವನ್ನು ಹೆಚ್ಚಿಸಲು ಯಾವೆಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ? (2) ರಾಜ್ಯದ ಕುರಿತು ಸಾರುವುದರಲ್ಲಿ ನಿಮಗೂ ಪಾಲಿರುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ?

14 ಪ್ರಕಾಶನಗಳಲ್ಲಿ, ಕೂಟಗಳಲ್ಲಿ, ಮತ್ತು ಅಧಿವೇಶನಗಳಲ್ಲಿ ಸಿಗುವ ಆಧ್ಯಾತ್ಮಿಕ ಆಹಾರವನ್ನು ತಯಾರು ಮಾಡುವುದರ ಹಿಂದೆ ನಿರಂತರ ದುಡಿಯುವ ಅನೇಕ ಕೈಗಳಿವೆ. ಸಾವಿರಾರು ಸ್ವಯಂಸೇವಕರು ಇಂದು ಅವಿರತವಾಗಿ ದುಡಿಯುತ್ತಾ ಆಧ್ಯಾತ್ಮಿಕ ಸತ್ಯವನ್ನು ಸುಮಾರು 600 ಭಾಷೆಗಳಿಗೆ ಅನುವಾದಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ “ದೇವರ ಮಹೋನ್ನತ ಕಾರ್ಯಗಳ” ಬಗ್ಗೆ ಇನ್ನಷ್ಟು ಜನರು ತಮ್ಮ ಸ್ವಂತ ಭಾಷೆಯಲ್ಲೇ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. (ಅ. ಕಾ. 2:7-11) ಯುವ ಸಹೋದರ ಸಹೋದರಿಯರು ಅತಿವೇಗದ ಮುದ್ರಣ ಯಂತ್ರಗಳನ್ನು ಬಳಸಿ ಸಾಹಿತ್ಯವನ್ನು ಮುದ್ರಿಸುತ್ತಾರೆ. ಬೈಂಡ್‌ ಮಾಡುತ್ತಾರೆ. ಈ ಸಾಹಿತ್ಯವನ್ನು ಹತ್ತಿರದಲ್ಲಿರುವ ಸಭೆಗಳಿಗೆ ಮಾತ್ರ ಅಲ್ಲ, ದೂರದಲ್ಲಿರುವ ಸಭೆಗಳಿಗೂ ವಿತರಿಸಲಾಗುತ್ತದೆ.

15 ನಾವು ಸ್ಥಳೀಯ ಸಭೆಯೊಂದಿಗೆ ಸೇರಿ ಸುವಾರ್ತೆ ಸಾರುವ ಕೆಲಸಕ್ಕೆ ಹೆಚ್ಚು ಗಮನ ಕೊಡಲಾಗುವಂತೆ ಅನೇಕ ಏರ್ಪಾಡುಗಳನ್ನು ಮಾಡಲಾಗಿದೆ. ಉದಾಹರಣೆಗೆ ತೆರೆಮರೆಯಲ್ಲಿದ್ದು ಸಾವಿರಾರು ಸ್ವಯಂಸೇವಕರು ರಾಜ್ಯ ಸಭಾಗೃಹ, ಸಮ್ಮೇಳನ ಸಭಾಂಗಣದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ನೈಸರ್ಗಿಕ ವಿಪತ್ತಿನಿಂದ ಬಾಧಿತರಾದವರಿಗೆ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಾರೆ. ಇನ್ನೂ ಅನೇಕರು ಸಮ್ಮೇಳನ-ಅಧಿವೇಶನಗಳನ್ನು ಸಂಘಟಿಸುವ ಮತ್ತು ದೇವಪ್ರಭುತ್ವಾತ್ಮಕ ಶಾಲೆಗಳಲ್ಲಿ ಬೋಧಿಸುವ ಕೆಲಸಗಳಲ್ಲಿ ತೊಡಗಿದ್ದಾರೆ. ಇದೇ ರೀತಿ ಇನ್ನೂ ಅನೇಕ ಕೆಲಸಗಳು ನಡೆಯುತ್ತಿವೆ. ಈ ಕೆಲಸಗಳ ಉದ್ದೇಶವೇನು? ಸುವಾರ್ತೆ ಸಾರುವ ಕೆಲಸ ಸುಗಮವಾಗಿ ಸಾಗಲು, ಸಾರುವವರು ಆಧ್ಯಾತ್ಮಿಕವಾಗಿ ಪ್ರಗತಿಯಾಗಲು, ಹೆಚ್ಚು ಜನರು ಸತ್ಯಕ್ಕೆ ಬರಲು ಸಹಾಯ ಮಾಡುವುದೇ. ಹಾಗಾದರೆ ಯೆಹೋವನ ಸಂಘಟನೆಯ ಭೂಭಾಗ ಹೆಚ್ಚು ಪ್ರಮುಖ ವಿಷಯಗಳ ಕಡೆಗೆ ಲಕ್ಷ್ಯವಿಟ್ಟಿದೆ ಅಲ್ಲವೇ? ಖಂಡಿತವಾಗಿಯೂ ಹೌದು.

ಯೆಹೋವನ ಸಂಘಟನೆಯನ್ನು ಅನುಸರಿಸಿ

16. ಕುಟುಂಬ ಆರಾಧನೆಯಲ್ಲಿ ಅಥವಾ ವೈಯಕ್ತಿಕ ಅಧ್ಯಯನದಲ್ಲಿ ನೀವು ಯಾವ ವಿಷಯಗಳನ್ನು ಪರಿಗಣಿಸಬಹುದು?

16 ಯೆಹೋವನ ಸಂಘಟನೆ ಮಾಡುತ್ತಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ನಾವು ಆಗಿಂದಾಗ್ಗೆ ಸಮಯ ಕೊಡುತ್ತೇವಾ? ಕೆಲವರು ಸಂಘಟನೆಯ ಬಗ್ಗೆ ಹೆಚ್ಚನ್ನು ತಿಳಿದುಕೊಂಡು ಧ್ಯಾನಿಸಲು ಕುಟುಂಬ ಆರಾಧನೆಯಲ್ಲಿ ಅಥವಾ ವೈಯಕ್ತಿಕ ಅಧ್ಯಯನದಲ್ಲಿ ಸಮಯ ವ್ಯಯಿಸುತ್ತಾರೆ. ಯೆಶಾಯ, ಯೆಹೆಜ್ಕೇಲ, ದಾನಿಯೇಲ ಮತ್ತು ಯೋಹಾನ ಕಂಡ ದರ್ಶನಗಳ ಬಗ್ಗೆ ಅಧ್ಯಯನ ಮಾಡುವುದು ರೋಮಾಂಚನಕಾರಿಯಾಗಿರುತ್ತದೆ. ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಪುಸ್ತಕ ಮತ್ತು ನಿಮ್ಮ ಭಾಷೆಯಲ್ಲಿ ಲಭ್ಯವಿರುವ ಇನ್ನಿತರ ಪ್ರಕಾಶನಗಳು ಅಥವಾ ಡಿವಿಡಿಗಳು ಸಂಘಟನೆಯ ಬಗ್ಗೆ ಇನ್ನಷ್ಟನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

17, 18. (1) ಈ ಚರ್ಚೆ ನಿಮಗೆ ಯಾವ ಪ್ರಯೋಜನ ತಂದಿದೆ? (2) ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು?

17 ಯೆಹೋವನು ತನ್ನ ಸಂಘಟನೆ ಮೂಲಕ ಪೂರೈಸುತ್ತಿರುವ ಕೆಲಸಗಳ ಬಗ್ಗೆ ಧ್ಯಾನಿಸುವುದು ನಮಗೆ ತುಂಬ ಸಹಾಯಕರ. ಈ ಸುಂದರ ಸಂಘಟನೆಯಂತೆ ನಾವು ಸಹ ಹೆಚ್ಚು ಪ್ರಮುಖ ವಿಷಯಗಳ ಮೇಲೆ ಲಕ್ಷ್ಯ ನೆಟ್ಟವರಾಗಿರೋಣ. ಹೀಗೆ ಮಾಡುವಾಗ ಪೌಲನಲ್ಲಿದ್ದ ಈ ದೃಢಸಂಕಲ್ಪ ನಮ್ಮಲ್ಲೂ ಮೂಡುವುದು: “ನಮಗೆ ತೋರಿಸಲ್ಪಟ್ಟಿರುವ ಕರುಣೆಯಿಂದಾಗಿ ಈ ಶುಶ್ರೂಷೆಯು ನಮಗಿರುವುದರಿಂದ ನಾವು ಬಿಟ್ಟುಬಿಡುವುದಿಲ್ಲ.” (2 ಕೊರಿಂ. 4:1) ಅವನು ತನ್ನ ಜೊತೆ ಕೆಲಸಗಾರರಿಗೆ ಹೀಗೆ ಉತ್ತೇಜಿಸಿದನು: “ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ; ನಾವು ದಣಿಯದಿದ್ದರೆ ತಕ್ಕ ಸಮಯದಲ್ಲಿ ಫಲವನ್ನು ಕೊಯ್ಯುವೆವು.”—ಗಲಾ. 6:9.

18 ದಿನನಿತ್ಯದ ಜೀವನದಲ್ಲಿ ಪ್ರಮುಖ ವಿಷಯಗಳಿಗೆ ಆದ್ಯತೆ ಕೊಡಲಾಗುವಂತೆ ವೈಯಕ್ತಿಕವಾಗಿ, ಕುಟುಂಬವಾಗಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾ? ಅತಿ ಪ್ರಾಮುಖ್ಯವಾದ ಸುವಾರ್ತೆ ಸಾರುವ ಕೆಲಸದ ಕಡೆಗೆ ಸಂಪೂರ್ಣ ಗಮನ ಕೊಡಲಾಗುವಂತೆ ನಮ್ಮ ಜೀವನವನ್ನು ಸರಳೀಕರಿಸಬೇಕಾ? ನಮಗಿರುವ ಅಡಚಣೆಗಳನ್ನು ತೊರೆಯಬೇಕಾ? ಮುಂದಿನ ಲೇಖನದಲ್ಲಿ ನಾವು ಯೆಹೋವನ ಸಂಘಟನೆಯ ಜೊತೆಯಲ್ಲೇ ನಡೆಯಲು ಸಹಾಯಮಾಡುವ ಐದು ವಿಷಯಗಳ ಬಗ್ಗೆ ಕಲಿಯೋಣ.

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚಿತ್ರ]

[ಪುಟ 24ರಲ್ಲಿರುವ ಚಿತ್ರ]