ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Divine Judgments​—Were They Cruel?

Divine Judgments​—Were They Cruel?

ಇದಕ್ಕೆ ಉತ್ತರ ತಿಳಿಯುವ ಮುನ್ನ ನಾವು ಬೈಬಲಿನಲ್ಲಿರುವ ಎರಡು ಘಟನೆಗಳನ್ನು ನೋಡೋಣ. ನೋಹ ಅನ್ನೋ ದೇವಭಕ್ತನ ಕಾಲದಲ್ಲಿ ಆದ ಜಲಪ್ರಳಯ ಮತ್ತು ಕಾನಾನ್‌ ದೇಶದ ಜನರ ನಿರ್ಮೂಲನ.

ನೋಹನ ಕಾಲದಲ್ಲಿ ಆದ ಜಲಪ್ರಳಯ

ಕೆಲವರು ಹೇಳ್ತಾರೆ: “ನೋಹ ಮತ್ತವನ ಕುಟುಂಬವನ್ನು ಮಾತ್ರ ಉಳಿಸಿ ಉಳಿದೆಲ್ಲ ಮನುಷ್ಯರನ್ನು ದೇವರು ಜಲಪ್ರಳಯದಿಂದ ನಾಶಮಾಡಿದನಲ್ಲಾ. ಅವನು ಕ್ರೂರಿ ಅಲ್ಲದೆ ಮತ್ತೇನು.”

ಬೈಬಲ್‌ ಹೇಳುತ್ತೆ: “ದುಷ್ಟನ ಸಾವಿನಲ್ಲಿ [ದೇವರಿಗೆ] ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ [ದೇವರಿಗೆ] ಸಂತೋಷ.” (ಯೆಹೆಜ್ಕೇಲ 33:11) ಹಾಗಾದರೆ ನೋಹನ ಕಾಲದಲ್ಲಿ ಕೆಟ್ಟ ಜನರನ್ನೆಲ್ಲ ನಾಶಮಾಡಿದಾಗ ದೇವರಿಗೆ ಸ್ವಲ್ಪವೂ ಸಂತೋಷವಾಗಲಿಲ್ಲ. ಮತ್ಯಾಕೆ ದೇವರು ಜನರನ್ನು ನಾಶಮಾಡಿದನು?

“ಭಕ್ತಿಹೀನ ವ್ಯಕ್ತಿಗಳಿಗೆ ಸಂಭವಿಸಲಿರುವ ಸಂಗತಿಗಳ ಕುರಿತು ಒಂದು ನಮೂನೆಯನ್ನು” ಸ್ಥಾಪಿಸಲು ದೇವರು ಹೀಗೆ ಮಾಡಿದನು ಎನ್ನುತ್ತದೆ ಬೈಬಲ್‌. (2 ಪೇತ್ರ 2:5, 6) ಯಾವ ನಮೂನೆ ಸ್ಥಾಪಿಸಲು?

ಒಂದನೇದು, ದುಷ್ಟರು ಸಾಯುವಾಗ ದೇವರಿಗೆ ದುಃಖವಾಗುತ್ತಾದರೂ ಆ ದುಷ್ಟ ಜನರು ಬೇರೆಯವರಿಗೆ ಮಾಡಿರುವ ಸಾವು-ನೋವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ ಮತ್ತು ಲೆಕ್ಕ ಕೇಳುತ್ತಾನೆ. ಅದೇ ಸಮಯದಲ್ಲಿ ಲೋಕದಲ್ಲಿ ರಾರಾಜಿಸುತ್ತಿರುವ ಅನ್ಯಾಯ, ಕಷ್ಟ, ಸಮಸ್ಯೆಗಳನ್ನೆಲ್ಲ ದೇವರು ಸರಿಪಡಿಸುತ್ತಾನೆ.

ಎರಡನೇದು, ದೇವರು ದಂಡನೆಯ ತೀರ್ಪನ್ನು ವಿಧಿಸುವ ಮೊದಲು ಪ್ರೀತಿಯಿಂದ ಜನರಿಗೆ ಎಚ್ಚರಿಕೆ ನೀಡುತ್ತಾನೆ. ಜಲಪ್ರಳಯ ಬರುವ ಮುಂಚೆ ದೇವಭಕ್ತ ನೋಹ ನೀತಿನ್ಯಾಯಗಳ ಬಗ್ಗೆ ಜನರಿಗೆ ಸಾರಿ ಹೇಳಿದನು. ಜನರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. “ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ” ಎನ್ನುತ್ತದೆ ಬೈಬಲ್‌.—ಮತ್ತಾಯ 24:39.

ಮುಂದೆ ಕೂಡ ದೇವರು ಇದೇ ನಮೂನೆಯನ್ನು ಅನುಸರಿಸಿದನಾ? ಹೌದು. ಉದಾ: ಪ್ರಾಚೀನ ಇಸ್ರೇಲಿಗಳು ತಮ್ಮ ಸುತ್ತಮುತ್ತಲಿದ್ದ ಬೇರೆ ಜನಾಂಗಗಳ ಜನರ ಹಾಗೇ ಕೆಟ್ಟದ್ದನ್ನು ರೂಢಿಸಿಕೊಳ್ಳಬಾರದು ಅಂತ ದೇವರು ಹೇಳಿದ್ದನು. ಮಾತು ಮೀರಿದರೆ ಶತ್ರುಗಳು ದಾಳಿಮಾಡಿ ಯೆರೂಸಲೇಮನ್ನು ಧ್ವಂಸಮಾಡಿ ಇಸ್ರೇಲಿಗಳನ್ನೆಲ್ಲ ಯುದ್ಧ ಕೈದಿಗಳನ್ನಾಗಿ ಒಯ್ಯುವಾಗ ತಾನು ಸಹಾಯಕ್ಕೆ ಬರಲ್ಲ ಅಂತ ದೇವರು ಎಚ್ಚರಿಕೆ ಕೊಟ್ಟಿದ್ದನು. ಅಷ್ಟು ಹೇಳಿನೂ ಆ ಜನರು ಕೆಟ್ಟದ್ದನ್ನು ರೂಢಿಸಿಕೊಂಡರು. ಮಕ್ಕಳನ್ನೇ ಬಲಿಕೊಡುತ್ತಿದ್ದರು. ಇದಕ್ಕೆ ದೇವರು ದಂಡನೆ ವಿಧಿಸಿದನಾ? ವಿಧಿಸಿದನು. ಆದರೆ ಮೊದಲು ದೇವಪ್ರವಾದಿಗಳ ಮೂಲಕ ಜನರಿಗೆ ಎಚ್ಚರಿಕೆ ಕೊಟ್ಟನು. ಒಮ್ಮೆ ಅಲ್ಲ ಪದೇ ಪದೇ ಎಚ್ಚರಿಸಿದನು. ಕಾಲ ಮಿಂಚಿ ಹೋಗೋ ಮುಂಚೆ ತಪ್ಪನ್ನು ತಿದ್ದಿಕೊಳ್ಳುವಂತೆ ಹೇಳಿದನು. ಅದಕ್ಕೆ ಬೈಬಲ್‌ನಲ್ಲಿ ಹೇಳಿರೋದು “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು” ಅಂತ.—ಆಮೋಸ 3:7.

ಈಗ ನಿಮಗೇನು ಅನಿಸುತ್ತೆ? ಯೆಹೋವ ದೇವರು ಮುಂಚೆಯಿಂದಲೂ ಅನುಸರಿಸಿಕೊಂಡು ಬಂದ ನೀತಿಯನ್ನು ತಿಳಿದಾಗ ನಮ್ಮಲ್ಲಿ ಆಶಾಭಾವ ಮೂಡುತ್ತದೆ. ಕ್ರೂರಿಗಳಿಗೆ ದಂಡನೆ ವಿಧಿಸೇ ವಿಧಿಸುತ್ತಾನೆ ಅನ್ನೋ ಭರವಸೆ ಮೂಡುತ್ತದೆ. ಏಕೆಂದರೆ ಬೈಬಲ್‌ ಹೇಳುತ್ತದೆ: “ಕೆಡುಕರು ತೆಗೆದುಹಾಕಲ್ಪಡುವರು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:9-11) ನೀವೇನು ನೆನಸುತ್ತೀರಾ? ಜನರನ್ನು ಕಷ್ಟಗಳ ಕೂಪಕ್ಕೆ ದೂಡುವ ದುಷ್ಟರನ್ನು ಸಂಹಾರ ಮಾಡಿದರೆ ಅದು ದೇವರ ಕ್ರೂರತನನಾ? ಅಥವಾ ನಮಗೆ ತೋರಿಸುವ ದಯೆನಾ?

ಕಾನಾನ್ಯರ ಸಂಹಾರ

ಕೆಲವರು ಹೇಳ್ತಾರೆ: “ಕಾನಾನ್ಯ ಅನ್ನೋ ಜನಾಂಗದ ಸಂಹಾರ ಆಧುನಿಕ ದಿನಗಳಲ್ಲಿ ನಡೆದ ಹತ್ಯಾಕಾಂಡಗಳಿಗಿಂತ ತುಂಬ ತುಂಬ ಕ್ರೂರವಾದದ್ದು.”

ಬೈಬಲ್‌ ಹೇಳುತ್ತೆ: “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ.” (ಧರ್ಮೋಪದೇಶಕಾಂಡ 32:4) ದೇವರು ನೀಡುವ ದಂಡನೆಯನ್ನು ಮನುಷ್ಯ ಮಾಡುವ ಯುದ್ಧಕ್ಕೆ ಹೋಲಿಸಕ್ಕಾಗಲ್ಲ. ಯಾಕೆಂದರೆ ಮನುಷ್ಯರ ಮನಸ್ಸನ್ನು ಓದುವ ಶಕ್ತಿ ದೇವರಿಗಿದೆ. ಆದರೆ ಮನುಷ್ಯನಿಗಿಲ್ಲ.

ಉದಾಹರಣೆಗೆ ಹಿಂದೆ ಒಮ್ಮೆ ದೇವರು ಸೊದೋಮ್‌ ಮತ್ತು ಗೊಮೋರ ಅನ್ನೋ ಎರಡು ಪಟ್ಟಣಗಳನ್ನು ವಿನಾಶ ಮಾಡೋ ನಿರ್ಣಯ ತೆಗೆದುಕೊಂಡನು. ಆಗ ದೇವಭಕ್ತನಾದ ಅಬ್ರಹಾಮನಿಗೆ ದೇವರ ಈ ನಿರ್ಣಯದಿಂದ ಒಳ್ಳೇ ಜನರಿಗೆ ಎಲ್ಲಿ ಅನ್ಯಾಯವಾಗಿಬಿಡುತ್ತೋ ಅನ್ನೋ ಚಿಂತೆ ಇತ್ತು. ದೇವರು “ದುಷ್ಟರ ಸಂಗಡ ನೀತಿವಂತರನ್ನೂ” ನಾಶಮಾಡಬಹುದು ಅನ್ನೋ ಸಂಶಯ ಅವನಿಗಿತ್ತು. ಆತಂಕದಿಂದ ಅವನಾಡುವ ಮಾತುಗಳನ್ನೆಲ್ಲ ದೇವರು ತಾಳ್ಮೆಯಿಂದ ಕೇಳಿ ಒಂದುವೇಳೆ ಸೊದೋಮ್‌ ಪಟ್ಟಣದಲ್ಲಿ 10 ಜನ ಒಳ್ಳೆಯವರಿದ್ದರೂ ಇಡೀ ಪಟ್ಟಣವನ್ನು ಏನೂ ಮಾಡಲ್ಲ ಅನ್ನೋ ಭರವಸೆಯನ್ನು ದೇವರು ಕೊಟ್ಟನು. (ಆದಿಕಾಂಡ 18:20-33) ಆ ಪಟ್ಟಣಗಳ ಜನರ ಮನಸ್ಸನ್ನು ಸಮಗ್ರವಾಗಿ ಪರಿಶೋಧಿಸಿ ಅವರ ಮನಸ್ಸಲ್ಲಿ ಬೇರೂರಿ ಹೋಗಿದ್ದ ಕೆಟ್ಟತನವನ್ನು ದೇವರು ಅರಿತಿದ್ದನು ಅಂತ ಈ ಘಟನೆಯಿಂದ ತಿಳಿಯಬಲ್ಲೆವು.—1 ಪೂರ್ವಕಾಲವೃತ್ತಾಂತ 28:9.

ಕಾನಾನ್ಯರು ಕೂಡ ತುಂಬ ಕ್ರೂರಿಗಳು ಅಂತ ದೇವರು ತಿಳಿದುಕೊಂಡ ಮೇಲೆ ಸಂಹಾರದ ತೀರ್ಪನ್ನು ಹೊರಡಿಸಿದನು. ಕಾನಾನ್ಯರು ಕ್ರೂರತನಕ್ಕೆ ಹೆಸರುವಾಸಿಯಾಗಿದ್ದರು. ಮಕ್ಕಳನ್ನು ಜೀವಂತವಾಗಿಯೇ ಸುಟ್ಟು ಬಲಿಕೊಡುತ್ತಿದ್ದರು. * (2 ಅರಸುಗಳು 16:3) ಕಾನಾನ್ಯರು ವಾಸಿಸುತ್ತಿದ್ದ ಆ ಭೂಮಿಯನ್ನೆಲ್ಲ ವಶಪಡಿಸಿಕೊಳ್ಳುವಂತೆ ದೇವರು ಇಸ್ರೇಲಿಗಳಿಗೆ ಹೇಳಿದ್ದನು. ತಾನು ಅವರ ಸಂಗಡ ಇರುವುದಾಗಿ ಮಾತುಕೊಟ್ಟಿದ್ದನು. ಇವೆಲ್ಲ ಕಾನಾನ್ಯರಿಗೆ ಗೊತ್ತಿದ್ದರೂ ತಾವು ಅಲ್ಲೇ ಇರೋದು ಅಂತ ಹಠಹಿಡಿದು ಯುದ್ಧಮಾಡಲು ಹೊರಟಿದ್ದರು. ಇದು ಇಸ್ರೇಲಿಗಳ ವಿರುದ್ಧ ಮಾತ್ರವಲ್ಲ ಅವರ ದೇವರಾಗಿದ್ದ ಯೆಹೋವನ ವಿರುದ್ಧ ಹೂಡಿದ ಯುದ್ಧವಾಗಿತ್ತು.

ಆದರೂ ಯಾರೆಲ್ಲ ತಮ್ಮ ದುರ್ಮಾರ್ಗವನ್ನು ಬಿಟ್ಟು, ಯೆಹೋವ ದೇವರ ನೀತಿನಿಯಮಗಳನ್ನು ಪಾಲಿಸಲು ಆರಂಭಿಸಿದರೋ ಅಂಥ ಕಾನಾನ್ಯರನ್ನು ದೇವರು ಸಂಹರಿಸಲಿಲ್ಲ, ಕಾಪಾಡಿದನು. ವೇಶ್ಯೆಯಾಗಿದ್ದ ರಾಹಾಬ ಅನ್ನೋ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಸಂಹರಿಸಲಿಲ್ಲ. ಹಾಗೇ ಗಿಬ್ಯೋನ್‌ ಅನ್ನೋ ಊರಿನ ಜನರು ಪ್ರಾಣಭಿಕ್ಷೆ ಕೇಳಿದಾಗ ಅವರಿಗೆ ದಯೆ ತೋರಿಸಿದನು. ಅವರನ್ನು ಕೊಲ್ಲಲಿಲ್ಲ.—ಯೆಹೋಶುವ 6:25; 9:3,4, 24-27.

ಈಗ ನಿಮಗೇನು ಅನಿಸುತ್ತೆ? ಕಾನಾನ್ಯರನ್ನು ಸಂಹರಿಸಬೇಕು ಅಂತ ದೇವರು ಕೊಟ್ಟ ತೀರ್ಪಿನಿಂದ ನಮಗೂ ಪಾಠ ಇದೆ. ಈ ಕಾಲದಲ್ಲೂ ‘ನ್ಯಾಯತೀರ್ಪಿನ ದಿನ ಮತ್ತು ದೇವಭಕ್ತಿಯಿಲ್ಲದ ಜನರ ನಾಶನವನ್ನು’ ದೇವರು ನಿಗದಿಪಡಿಸಿದ್ದಾನೆ. (2 ಪೇತ್ರ 3:7) ಆ ದಿನ ಹೆಚ್ಚು ದೂರವೇನೂ ಇಲ್ಲ. ದೇವರ ನ್ಯಾಯಭರಿತ ಆಧಿಪತ್ಯವನ್ನು ತಿರಸ್ಕರಿಸುವ ಜನರನ್ನೆಲ್ಲ ನಾಶಮಾಡಿ ನಮ್ಮ ಕಷ್ಟಗಳಿಗೆ ಕೊನೆ ತರುವ ಸಮಯ ಅದು. ನಾವು ಯೆಹೋವ ದೇವರನ್ನು ಪ್ರೀತಿಸೋದಾದರೆ ಕಷ್ಟಗಳಿಲ್ಲದ ಲೋಕದಲ್ಲಿ ಜೀವಿಸುವ ಪ್ರತೀಕ್ಷೆ ನಮ್ಮದಾಗುತ್ತದೆ.

ಕಾನಾನ್ಯ ದೇಶದವರು ಕ್ರೂರತನಕ್ಕೆ ಹೆಸರುವಾಸಿಯಾಗಿದ್ದರು. ಅವರು ಉದ್ದೇಶಪೂರ್ವಕವಾಗಿ ದೇವರ ಮತ್ತು ದೇವಜನರ ವಿರುದ್ಧ ನಿಂತರು

ಹೆತ್ತವರು ಮಾಡುವ ನಿರ್ಣಯಗಳು ಮಕ್ಕಳನ್ನು ಬಾಧಿಸುತ್ತವೆ ಅಂತ ಯೆಹೋವ ದೇವರು ಎಚ್ಚರಿಸುತ್ತಾನೆ. ದೇವರು ಹೇಳೋದು: “ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ.” (ಧರ್ಮೋಪದೇಶಕಾಂಡ 30:19, 20) ಇವು ಒಬ್ಬ ಕ್ರೂರಿ ದೇವರ ಮಾತು ಅಂತ ನಿಮಗೆ ಅನಿಸುತ್ತಿದೆಯಾ? ಅಥವಾ ಜನರನ್ನು ಪ್ರೀತಿಸುವ, ಜನರು ಸರಿಯಾದ ನಿರ್ಣಯಗಳನ್ನು ಮಾಡಬೇಕು ಅಂತ ಬಯಸುವ ದೇವರ ಮಾತುಗಳಾ? (w13-E 05/01)

^ ಪ್ಯಾರ. 15 ಭೂ ಅಗೆತ ಶಾಸ್ತ್ರಜ್ಞರಿಗೆ ಸಿಕ್ಕಿದ ಸಾಕ್ಷ್ಯಗಳ ಪ್ರಕಾರ, ಕಾನಾನ್ಯರು ದೇವರ ಆರಾಧನೆಯಲ್ಲಿ ಕಂದಮ್ಮಗಳನ್ನೇ ಬಲಿಕೊಡುತ್ತಿದ್ದರು.