ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೌವಾರ್ತಿಕರಾಗಿ ನಿಮ್ಮ ನೇಮಕವನ್ನು ಪೂರೈಸಿ

ಸೌವಾರ್ತಿಕರಾಗಿ ನಿಮ್ಮ ನೇಮಕವನ್ನು ಪೂರೈಸಿ

ಸೌವಾರ್ತಿಕರಾಗಿ ನಿಮ್ಮ ನೇಮಕವನ್ನು ಪೂರೈಸಿ

“ಸೌವಾರ್ತಿಕನ ಕೆಲಸವನ್ನು ಮಾಡು, ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು.”—2 ತಿಮೊ. 4:5.

ಉತ್ತರಿಸಿ:

ಸೌವಾರ್ತಿಕ ಅಂದರೇನು?

ಜನರು ಏಕೆ ಸುವಾರ್ತೆಯನ್ನು ತಿಳಿದುಕೊಳ್ಳಬೇಕು?

ಒಳ್ಳೇ ಸೌವಾರ್ತಿಕರು ಏನು ಮಾಡುತ್ತಾರೆ?

1. ಯೆಹೋವ ದೇವರೇ ಮೊಟ್ಟಮೊದಲ ಸೌವಾರ್ತಿಕ ಎಂದು ಏಕೆ ಹೇಳಬಹುದು?

ಒಳ್ಳೇ ವಿಷಯವನ್ನು ತಿಳಿಸುವವನೇ ಸೌವಾರ್ತಿಕ. ಮೊಟ್ಟಮೊದಲ ಸೌವಾರ್ತಿಕ ನಮ್ಮ ದೇವರಾದ ಯೆಹೋವ. ನಮ್ಮ ಮೊದಲ ಹೆತ್ತವರಾದ ಆದಾಮ ಹವ್ವ ದಂಗೆಯೆದ್ದ ತಕ್ಷಣ ಯೆಹೋವ ದೇವರು ಒಂದು ಸುವಾರ್ತೆಯನ್ನು ನುಡಿದನು. ಅದು ಸರ್ಪದ ಅಂದರೆ ಪಿಶಾಚನಾದ ಸೈತಾನನ ನಾಶನದ ಬಗ್ಗೆ. (ಆದಿ. 3:15) ಅನಂತರ ಶತಮಾನಗಳ ವರೆಗೆ ಈ ಸುವಾರ್ತೆಯ ಬಗ್ಗೆ ಸವಿವರವಾಗಿ ಯೆಹೋವ ದೇವರು ನಂಬಿಗಸ್ತ ಪುರುಷರ ಮೂಲಕ ತಿಳಿಸಿದ್ದಾನೆ. ಅಂದರೆ ತನ್ನ ನಾಮ ಹೇಗೆ ಕಳಂಕರಹಿತವಾಗುತ್ತೆ, ಸೈತಾನನಿಂದಾಗಿರುವ ನಷ್ಟವನ್ನು ಹೇಗೆ ತೆಗೆದುಹಾಕಲಾಗುತ್ತೆ ಮತ್ತು ಆದಾಮ ಹವ್ವ ಕಳಕೊಂಡ ಅನಂತಜೀವನ ಮತ್ತೆ ಹೇಗೆ ಸಿಗುವುದು ಎಂದು ಬರೆಯುವಂತೆ ಪ್ರೇರಿಸಿದ್ದಾನೆ.

2. (1) ಸುವಾರ್ತೆ ಸಾರುವುದರಲ್ಲಿ ದೇವದೂತರ ಪಾಲೇನು? (2) ಯೇಸು ಸೌವಾರ್ತಿಕರಿಗೆ ಯಾವ ಮಾದರಿ ಇಟ್ಟನು?

2 ದೇವದೂತರು ಸಹ ಸೌವಾರ್ತಿಕರೇ. ಅವರೂ ಸುವಾರ್ತೆ ಸಾರುತ್ತಾರೆ. ಸಾರುವವರಿಗೂ ನೆರವಾಗುತ್ತಾರೆ. (ಲೂಕ 1:19; 2:10; ಅ. ಕಾ. 8:26, 27, 35; ಪ್ರಕ. 14:6) ಪ್ರಧಾನ ದೇವದೂತ ಮಿಕಾಯೇಲನ ಬಗ್ಗೆ ಏನು? ಯೇಸುವಾಗಿ ಭೂಮಿಯಲ್ಲಿ ಹುಟ್ಟಿದ ಆತನು ಸೌವಾರ್ತಿಕರೆಲ್ಲರಿಗೆ ಮಾದರಿಯಿಟ್ಟನು. ಆತನ ಇಡೀ ಜೀವನ ಸುವಾರ್ತೆ ಸಾರುವುದರ ಸುತ್ತ ಹೆಣೆದಿತ್ತು!—ಲೂಕ 4:16-21.

3. (1) ನಾವು ಸಾರುವ ಸುವಾರ್ತೆ ಯಾವುದು? (2) ಸುವಾರ್ತೆ ಸಾರುವ ನಾವು ಯಾವ ಪ್ರಶ್ನೆಗಳ ಕಡೆಗೆ ಗಮನ ಕೊಡಬೇಕು?

3 ತನ್ನ ಶಿಷ್ಯರು ಸೌವಾರ್ತಿಕರಾಗಬೇಕೆಂದು ಯೇಸು ಆಜ್ಞೆಕೊಟ್ಟನು. (ಮತ್ತಾ. 28:19, 20; ಅ. ಕಾ. 1:8) ಅಪೊಸ್ತಲ ಪೌಲ, ತಮ್ಮ ಜೊತೆ ಕೆಲಸಗಾರನಾಗಿದ್ದ ತಿಮೊಥೆಯನಿಗೆ ಹೀಗೆ ಹೇಳಿದನು: “ಸೌವಾರ್ತಿಕನ ಕೆಲಸವನ್ನು ಮಾಡು, ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು.” (2 ತಿಮೊ. 4:5) ಯೇಸುವಿನ ಹಿಂಬಾಲಕರಾಗಿರುವ ನಾವು ಯಾವ ಸುವಾರ್ತೆಯನ್ನು ಸಾರುತ್ತೇವೆ? ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರು ನಮ್ಮನ್ನು ತುಂಬ ಪ್ರೀತಿಸುತ್ತಾನೆ ಎನ್ನುವುದನ್ನೇ. (ಯೋಹಾ. 3:16; 1 ಪೇತ್ರ 5:7) ಆ ಪ್ರೀತಿಯನ್ನು ಆತನು ವ್ಯಕ್ತಪಡಿಸುವ ಮುಖ್ಯ ವಿಧ ಆತನ ರಾಜ್ಯದ ಮೂಲಕ. ಆದ್ದರಿಂದ ಯಾರು ಆ ರಾಜ್ಯದ ಆಡಳಿತವನ್ನು ಸ್ವೀಕರಿಸಿ ದೇವರಿಗೆ ವಿಧೇಯರಾಗುತ್ತಾರೊ ಮತ್ತು ನೀತಿವಂತರಾಗಿರುತ್ತಾರೊ ಅವರಿಗೆ ಯೆಹೋವ ದೇವರ ಜತೆ ಒಳ್ಳೇ ಸ್ನೇಹ ಸಂಬಂಧ ಸಿಗುತ್ತೆಂದು ನಾವು ಸಾರುತ್ತೇವೆ. (ಕೀರ್ತ. 15:1, 2) ಅನ್ಯಾಯವನ್ನು ಬುಡಸಮೇತ ಕಿತ್ತು ಹಾಕಬೇಕೆಂಬುದೇ ಯೆಹೋವ ದೇವರ ಉದ್ದೇಶ. ಬದುಕಿನ ಕಹಿ ನೆನಪುಗಳು ನೀಡಿರುವ ನೋವನ್ನು ಸಹ ಆತನು ಅಳಿಸಿಹಾಕುತ್ತಾನೆ. ಎಂಥ ಸಿಹಿಸುದ್ದಿ ಅಲ್ಲವೇ! (ಯೆಶಾ. 65:17) ಸುವಾರ್ತೆ ಸಾರುವ ನಾವೆಲ್ಲರು ಈ ಎರಡು ಪ್ರಾಮುಖ್ಯ ಪ್ರಶ್ನೆಗಳಿಗೆ ಈಗ ಉತ್ತರ ಕಂಡುಹಿಡಿಯೋಣ: ಇಂದು ಜನರು ಸುವಾರ್ತೆ ತಿಳಿದುಕೊಳ್ಳಲೇಬೇಕು ಏಕೆ? ಸುವಾರ್ತೆ ಸಾರುವ ಕೆಲಸವನ್ನು ನಾವು ಹೇಗೆ ಚೆನ್ನಾಗಿ ಮಾಡಬಹುದು?

ಜನರಿಗೆ ಸುವಾರ್ತೆ ತಿಳಿಯಬೇಕು ಏಕೆ?

4. ದೇವರ ಬಗ್ಗೆ ಯಾವ ಪೊಳ್ಳು ಕಥೆಗಳನ್ನು ಜನರ ಕಿವಿಯಲ್ಲಿ ತುಂಬಿಸಲಾಗಿದೆ?

4 ಹೀಗೆ ನೆನಸಿ. ಯಾವುದೋ ಕಾರಣಕ್ಕಾಗಿ ನಿಮ್ಮ ತಂದೆ ಬೇರೆಕಡೆ ವಾಸಿಸುತ್ತಿದ್ದಾರೆ. ಯಾರೊ ಒಬ್ಬರು ನಿಮ್ಮ ಹತ್ರ ಬಂದು, ನಿಮ್ಮ ತಂದೆ ನಿಮ್ಮನ್ನೆಲ್ಲ ತ್ಯಜಿಸಿ ಹೋದರೆಂದು ಸುಳ್ಳು ಹೇಳುತ್ತಾರೆ. ಅವರೊಬ್ಬ ಕ್ರೂರಿ, ನಿಮ್ಮಿಂದ ಎಲ್ಲ ವಿಷಯಗಳನ್ನು ಮುಚ್ಚಿಡುತ್ತಿದ್ದರು, ನಿಮ್ಮ ಬಗ್ಗೆ ಅವರಿಗೇನೂ ಚಿಂತೆಯಿಲ್ಲ. ಅವರನ್ನು ಸಂಪರ್ಕಿಸಿ ಯಾವ ಪ್ರಯೋಜನವೂ ಇಲ್ಲ ಅವರು ಸತ್ತು ಹೋಗಿದ್ದಾರೆ ಎಂದು ಸಹ ಹೇಳುತ್ತಾರೆ. ದೇವರ ಬಗ್ಗೆ ಸಹ ಇಂಥದ್ದೇ ಕಟ್ಟುಕಥೆಗಳಿವೆ. ದೇವರೊಬ್ಬ ರಹಸ್ಯ ವ್ಯಕ್ತಿ, ಆತನನ್ನು ಅರ್ಥಮಾಡಿಕೊಳ್ಳಲು ಆಗಲ್ಲ, ತುಂಬ ಕ್ರೂರಿ ಎಂದೆಲ್ಲ ಕಲಿಸುತ್ತಾರೆ. ಉದಾಹರಣೆಗೆ, ದೇವರು ತಪ್ಪು ಮಾಡುವವರನ್ನು ನರಕದಲ್ಲಿ ಹಾಕಿ ಹಿಂಸಿಸುತ್ತಾನೆ ಎಂದು ಕೆಲವು ಧರ್ಮದ ಮುಖಂಡರು ಬೋಧಿಸುತ್ತಾರೆ. ನೈಸರ್ಗಿಕ ವಿಪತ್ತಿಗೆಲ್ಲ ದೇವರೇ ಕಾರಣ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಇಂಥ ವಿಪತ್ತಿನಲ್ಲಿ ಕೆಟ್ಟವರೊಂದಿಗೆ ಒಳ್ಳೆಯವರೂ ಸಾಯುತ್ತಾರಾದರೂ ಇದು ಅವರಿಗೆ ದೇವರಿಂದ ಬಂದ ಶಿಕ್ಷೆಯೆಂದು ಹೇಳುತ್ತಾರೆ.

5, 6. ವಿಕಾಸವಾದ ಮತ್ತು ತಪ್ಪು ಸಿದ್ಧಾಂತಗಳು ಜನರನ್ನು ಹೇಗೆ ಪ್ರಭಾವಿಸಿವೆ?

5 ಇನ್ನು ಕೆಲವರು, ದೇವರು ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಲು ವಿಕಾಸವಾದವನ್ನು ಪರಿಗಣಿಸಿ. ಈ ವಾದವನ್ನು ನಂಬುವವರು ಸೃಷ್ಟಿಕರ್ತನೆಂಬವನೇ ಇಲ್ಲ, ಜೀವ ತನ್ನಿಂತಾನೆ ಬಂತು ಎಂದು ಹೇಳುತ್ತಾರೆ. ಇನ್ನು ಕೆಲವರು, ಮನುಷ್ಯ ಸಹ ಒಂದು ಪ್ರಾಣಿ. ಆದ್ದರಿಂದ ಒಬ್ಬ ಮನುಷ್ಯ ಕ್ರೂರವಾಗಿ ಸ್ವಾರ್ಥಿಯಾಗಿ ವರ್ತಿಸಿದರೆ ಅದರಲ್ಲಿ ಆಶ್ಚರ್ಯಪಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಕೆಲವರು ವಾದಿಸುವುದು ಏನೆಂದರೆ ಅಲ್ಪರ ಮೇಲೆ ಬಲಿಷ್ಠರು ದಬ್ಬಾಳಿಕೆ ಮಾಡುವುದು ಪ್ರಕೃತಿಯ ನಿಯಮ. ಆದ್ದರಿಂದ ಅನ್ಯಾಯ ಯಾವಾಗಲೂ ಇರುತ್ತದೆಂದು ಅವರ ನಂಬಿಕೆ. ಹಾಗಾಗಿ ವಿಕಾಸವಾದವನ್ನು ನಂಬುವವರಿಗೆ ನಿಜ ನಿರೀಕ್ಷೆ ಇರಲ್ಲ.

6 ಈ ಕಡೇ ದಿವಸಗಳಲ್ಲಿ ವಿಕಾಸವಾದ ಮತ್ತು ತಪ್ಪು ಸಿದ್ಧಾಂತಗಳು ಮಾನವಕುಲವನ್ನು ದುರವಸ್ಥೆಗೆ ತಳ್ಳಿವೆ. (ರೋಮ. 1:28-31; 2 ತಿಮೊ. 3:1-5) ಈ ಮಾನವ ಬೋಧನೆಗಳಿಂದ ಜನರಿಗೆ ಬಾಳುವ ಮತ್ತು ನೈಜವಾದ ಸುವಾರ್ತೆ ಸಿಕ್ಕಿಲ್ಲ. ಪೌಲನು ಹೇಳಿರುವಂತೆ ಅವು ಜನರನ್ನು ‘ಮಾನಸಿಕವಾಗಿ ಕತ್ತಲೆಗೆ ತಳ್ಳಿವೆ ಮತ್ತು ದೇವರಿಗೆ ಸೇರಿರುವ ಜೀವದಿಂದ ದೂರ ಮಾಡಿವೆ.’ (ಎಫೆ. 4:17-19) ಮಾತ್ರವಲ್ಲ ಈ ಸಿದ್ಧಾಂತಗಳು ದೇವರಿಂದ ಬಂದಿರುವ ಸುವಾರ್ತೆಯನ್ನು ಸ್ವೀಕರಿಸಲು ಜನರಿಗೆ ಅಡ್ಡಿಯಾಗಿವೆ.ಎಫೆಸ 2:11-13 ಓದಿ.

7, 8. ಜನರು ಸುವಾರ್ತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇರುವ ಒಂದೇ ದಾರಿ ಯಾವುದು?

7 ಜನರು ಯೆಹೋವ ದೇವರ ಜತೆ ಒಳ್ಳೆ ಸಂಬಂಧ ಪಡೆಯಬೇಕಾದರೆ ಮೊದಲು ಯೆಹೋವ ದೇವರ ಅಸ್ತಿತ್ವವನ್ನು ಒಪ್ಪಬೇಕು. ಮತ್ತು ದೇವರಿಗೆ ಆಪ್ತರಾಗುವುದು ಪ್ರಾಮುಖ್ಯ ಅಂತ ಮನಗಾಣಬೇಕು. ಸೃಷ್ಟಿಯನ್ನು ಗಮನಿಸುವ ಮೂಲಕ ಆ ಜ್ಞಾನ ಪಡೆಯುವಂತೆ ನಾವು ಅವರಿಗೆ ಸಹಾಯ ಮಾಡಬಹುದು. ತೆರೆದ ಮನಸ್ಸಿನಿಂದ ಸೃಷ್ಟಿಯ ಬಗ್ಗೆ ಜನರು ಕಲಿಯುವಾಗ ದೇವರ ವಿವೇಕ ಮತ್ತು ಶಕ್ತಿಯ ಅರಿವಾಗುವುದು. (ರೋಮ. 1:19, 20) ದೇವರು ಸೃಷ್ಟಿಸಿರುವುದೆಲ್ಲವೂ ಅದ್ಭುತ ಎಂದು ತಿಳಿಯಲು ನಾವು ಜನರಿಗೆ ಸಹಾಯ ಮಾಡಬೇಕು. ಅದಕ್ಕಾಗಿ ಜೀವವು ಸೃಷ್ಟಿಸಲ್ಪಟ್ಟಿತೊ? ಮತ್ತು ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು ಎಂಬ ಕಿರುಹೊತ್ತಗೆಗಳನ್ನು ಬಳಸಬಹುದು. * ಆದರೂ ಜೀವನದಲ್ಲಿ ಎದುರಾಗುವ ಕೆಲವೊಂದು ಕಂಗೆಡಿಸುವ ಪ್ರಶ್ನೆಗಳಿಗೆ ಸೃಷ್ಟಿಯನ್ನು ಗಮನಿಸುವ ಮೂಲಕ ಮಾತ್ರ ಉತ್ತರ ಸಿಗುವುದಿಲ್ಲ. ಅವುಗಳಲ್ಲಿ ಕೆಲವು: ದೇವರು ಯಾಕೆ ಕಷ್ಟವನ್ನು ಅನುಮತಿಸಿದ್ದಾನೆ? ಭೂಮಿಗಾಗಿ ದೇವರಿಗೆ ಯಾವ ಉದ್ದೇಶವಿದೆ? ದೇವರಿಗೆ ನನ್ನ ಬಗ್ಗೆ ನಿಜವಾಗಿಯೂ ಚಿಂತೆ ಇದೆಯಾ?

8 ಬೈಬಲನ್ನು ಕಲಿಯುವುದರಿಂದ ಮಾತ್ರ ದೇವರ ಬಗ್ಗೆ, ಅವರ ಉದ್ದೇಶದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯ. ಜನರಿಗೆ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ನೆರವಾಗುವ ಅವಕಾಶ ನಮಗಿರುವುದು ಎಂಥ ಸುಯೋಗವಲ್ಲವೇ! ಆದರೆ ನಮ್ಮ ಕೇಳುಗರ ಹೃದಯವನ್ನು ಮುಟ್ಟಲು ಅವರಿಗೆ ಕೇವಲ ಸತ್ಯವನ್ನು ತಿಳಿಸುವುದಷ್ಟೆ ಸಾಕಾಗದು, ಅದನ್ನು ಅವರಿಗೆ ಮನಗಾಣಿಸಬೇಕು. (2 ತಿಮೊ. 3:14) ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುವ ಮೂಲಕ ನಾವಿದನ್ನು ಚೆನ್ನಾಗಿ ಮಾಡಬಲ್ಲೆವು. ಆತನು ಹೇಗೆ ಅಷ್ಟು ಚೆನ್ನಾಗಿ ಜನರ ಮನವೊಪ್ಪಿಸುತ್ತಿದ್ದನು? ಅದಕ್ಕೆ ಮುಖ್ಯ ಕಾರಣ ಅವನು ಪರಿಣಾಮಕಾರಿ ಪ್ರಶ್ನೆಗಳನ್ನು ಬಳಸಿದ್ದೇ. ನಾವು ಆತನನ್ನು ಅನುಕರಿಸುವುದು ಹೇಗೆ?

ಒಳ್ಳೇ ಸೌವಾರ್ತಿಕರು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ

9. ಜನರಿಗೆ ಆಧ್ಯಾತ್ಮಿಕ ಸಹಾಯ ನೀಡಬೇಕಾದರೆ ನಾವೇನು ಮಾಡಬೇಕು?

9 ಸುವಾರ್ತೆ ಸಾರುವಾಗ ನಾವು ಏಕೆ ಯೇಸುವಿನ ಹಾಗೆ ಪ್ರಶ್ನೆಗಳನ್ನು ಉಪಯೋಗಿಸಬೇಕು? ಈ ಸನ್ನಿವೇಶವನ್ನು ಗಮನಿಸಿ: ನೀವು ವೈದ್ಯನ ಹತ್ತಿರ ಹೋಗಿದ್ದೀರಿ. ಆ ವೈದ್ಯನು, ನಿಮಗಿರೋ ರೋಗವನ್ನು ನಾನು ಗುಣಪಡಿಸ್ತೀನಿ. ನಿಮಗೊಂದು ಆಪರೇಶನ್‌ ಮಾಡ್ಬೇಕಷ್ಟೆ ಅಂತ ಹೇಳುತ್ತಾನೆ. ನೀವು ಅವನನ್ನು ನಂಬಬಹುದು. ಆದರೆ ಆ ವೈದ್ಯ ನಿಮ್ಮ ಸಮಸ್ಯೆ ಬಗ್ಗೆ ಏನೂ ಕೇಳದೆ ಹಾಗೆ ಹೇಳಿದರೆ? ಅವನನ್ನು ನಂಬುವುದು ಕಷ್ಟ ಅಲ್ವ! ಅವನು ಎಷ್ಟೇ ನುರಿತ ವೈದ್ಯನಾಗಿದ್ದರೂ ಮೊದಲು ನಿಮಗೆ ಪ್ರಶ್ನೆಗಳನ್ನು ಕೇಳಿ, ನಿಮ್ಮ ರೋಗದ ಲಕ್ಷಣದ ಬಗ್ಗೆ ತಿಳಿದುಕೊಂಡು ಅನಂತರ ಬೇಕಾದ ಸಹಾಯವನ್ನು ಕೊಡಬೇಕು. ಅದೇ ರೀತಿ ಇಂದು ಜನರು ಸುವಾರ್ತೆಯನ್ನು ಕೇಳಬೇಕಾದರೆ, ನಾವು ಪರಿಣಾಮಕಾರಿ ಪ್ರಶ್ನೆಗಳನ್ನು ಕೇಳುವ ಕಲೆಯಲ್ಲಿ ನಿಪುಣರಾಗಬೇಕು. ಅವರ ಆಧ್ಯಾತ್ಮಿಕ ಸ್ಥಿತಿಯ ಬಗ್ಗೆ ನಮಗೆ ಚೆನ್ನಾಗಿ ತಿಳಿದುಬಂದಾಗ ಮಾತ್ರ ಅವರಿಗೆ ಸಹಾಯ ಮಾಡಲು ಸಾಧ್ಯ.

10, 11. ಯೇಸು ಕ್ರಿಸ್ತನ ಬೋಧನೆಯನ್ನು ಅನುಕರಿಸುವ ಮೂಲಕ ನಾವು ಏನನ್ನು ಸಾಧಿಸಬಲ್ಲೆವು?

10 ಸರಿಯಾದ ಪ್ರಶ್ನೆಗಳನ್ನು ಕೇಳಿದರೆ ವಿದ್ಯಾರ್ಥಿಯ ಬಗ್ಗೆ ತಿಳಿದುಕೊಳ್ಳಲು ಮಾತ್ರ ಅಲ್ಲ, ವಿದ್ಯಾರ್ಥಿಯನ್ನು ಚರ್ಚೆಯಲ್ಲಿ ಒಳಗೂಡಿಸಲೂ ಆಗುತ್ತೆ ಎಂದು ಯೇಸು ಕ್ರಿಸ್ತನಿಗೆ ಗೊತ್ತಿತ್ತು. ಉದಾಹರಣೆಗೆ ತನ್ನ ಶಿಷ್ಯರಿಗೆ ದೀನತೆಯ ಬಗ್ಗೆ ಪಾಠ ಕಲಿಸಬೇಕೆಂದಿದ್ದಾಗ ಯೇಸು ಕ್ರಿಸ್ತನು ಅವರಿಗೆ ಆಲೋಚನಾಪ್ರೇರಕ ಪ್ರಶ್ನೆಗಳನ್ನು ಕೇಳಿದನು. (ಮಾರ್ಕ 9:33) ಪೇತ್ರನಿಗೆ ಒಂದು ತತ್ವವನ್ನು ಅರ್ಥಮಾಡಿಸಲು ಯೇಸು ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಆಯ್ಕೆಮಾಡಲು ಹೇಳಿದನು. (ಮತ್ತಾ. 17:24-26) ಇನ್ನೊಂದು ಸಲ, ಶಿಷ್ಯರ ಹೃದಯದಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಒಂದರ ನಂತರ ಒಂದು ದೃಷ್ಟಿಕೋನ ಪ್ರಶ್ನೆಯನ್ನು ಬಳಸಿದನು. (ಮತ್ತಾಯ 16:13-17 ಓದಿ.) ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ಅರ್ಥಪೂರ್ಣ ಹೇಳಿಕೆಗಳನ್ನು ನೀಡುತ್ತಾ ಯೇಸು ಸತ್ಯವನ್ನು ತಿಳಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿದನು. ಹೃದಯಗಳನ್ನು ತಲುಪಿದನು, ಸುವಾರ್ತೆಗೆ ಅನುಸಾರವಾಗಿ ಬದುಕಲು ಜನರನ್ನು ಪ್ರೇರಿಸಿದನು.

11 ಯೇಸು ಕ್ರಿಸ್ತನಂತೆ ಪರಿಣಾಮಕಾರಿ ಪ್ರಶ್ನೆಗಳನ್ನು ಉಪಯೋಗಿಸುವ ಮೂಲಕ ನಾವು ಮೂರು ವಿಷಯಗಳನ್ನು ಸಾಧಿಸುತ್ತೇವೆ. ಜನರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದೆಂದು ಕಲಿಯುತ್ತೇವೆ, ಸಂಭಾಷಣೆಗೆ ತಡೆ ಬಂದಾಗ ಅದನ್ನು ಜಯಿಸಲು ಆಗುತ್ತೆ ಮತ್ತು ದೀನ ಹೃದಯದ ಜನರಿಗೆ ಬೋಧಿಸಲು ಸಾಧ್ಯವಾಗುತ್ತೆ. ಈಗ ಪರಿಣಾಮಕಾರಿ ಪ್ರಶ್ನೆಗಳನ್ನು ಬಳಸುವುದು ಹೇಗೆಂದು ಕಲಿಯಲು ಮೂರು ಸನ್ನಿವೇಶಗಳನ್ನು ನೋಡೋಣ.

12-14. ಸುವಾರ್ತೆಯನ್ನು ಧೈರ್ಯದಿಂದ ಸಾರಲು ನಿಮ್ಮ ಮಗನಿಗೆ ಹೇಗೆ ತರಬೇತಿ ನೀಡಬಲ್ಲಿರಿ? ಉದಾಹರಣೆ ಕೊಡಿ.

12 ಸನ್ನಿವೇಶ 1: ನಿಮ್ಮ ಮಗ (ಮಗಳು) ಸೃಷ್ಟಿಯ ಬಗ್ಗೆ ತನಗಿರುವ ನಂಬಿಕೆಯನ್ನು ತನ್ನ ಸಹಪಾಠಿಯೊಂದಿಗೆ ಹಂಚಿಕೊಳ್ಳಲು ಭಯ ಆಯ್ತು ಎಂದು ನಿಮ್ಮ ಬಳಿ ಹೇಳಿದರೆ ನೀವು ಹೇಗೆ ಸಹಾಯ ಮಾಡುತ್ತೀರಾ? ಧೈರ್ಯದಿಂದ ಮಾತಾಡುವಂತೆ ನೀವು ಸಹಾಯಮಾಡಲು ಬಯಸುತ್ತೀರಿ ಅಲ್ವಾ. ಅವನನ್ನು ಟೀಕಿಸಿ ಮಾತಾಡುವ ಬದಲು ಅಥವಾ ತಕ್ಷಣ ಬುದ್ಧಿ ಹೇಳುವ ಬದಲು ಯೇಸು ಕ್ರಿಸ್ತನ ಮಾದರಿಯನ್ನು ಅನುಕರಿಸುತ್ತಾ ದೃಷ್ಟಿಕೋನ ಪ್ರಶ್ನೆಗಳನ್ನು ಬಳಸಬಹುದು. ಅದನ್ನು ಮಾಡೋದು ಹೇಗೆ?

13 ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು ಕಿರುಹೊತ್ತಗೆಯಿಂದ ಕೆಲವು ಭಾಗಗಳನ್ನು ನಿಮ್ಮ ಮಗನೊಂದಿಗೆ ಓದಿ. ಓದಿದ ನಂತರ ಅದರಲ್ಲಿರುವ ಯಾವ ತರ್ಕ ನಿನಗೆ ಇಷ್ಟ ಆಯ್ತು ಅಂತ ಕೇಳಿ. ನಿಮ್ಮ ಮಗ ಸೃಷ್ಟಿಕರ್ತನಲ್ಲಿ ಏಕೆ ನಂಬಿಕೆ ಇಟ್ಟಿದ್ದಾನೆ ಮತ್ತು ದೇವರ ಚಿತ್ತವನ್ನು ಮಾಡಲು ಏಕೆ ಬಯಸುತ್ತಾನೆ ಅನ್ನೋದಕ್ಕೆ ಕಾರಣಗಳನ್ನು ಯೋಚಿಸುವಂತೆ ಉತ್ತೇಜಿಸಿ. (ರೋಮ. 12:2) ಅವನು ಮಾಡುವ ತರ್ಕ ನಿಮ್ಮ ತರ್ಕದಂತೆಯೇ ಇರಬೇಕೆಂದಿಲ್ಲ ಎಂದು ಅವನಿಗೆ ತಿಳಿಸಿ.

14 ನೀವು ಬಳಸಿದ ವಿಧಾನವನ್ನೇ ತನ್ನ ಸಹಪಾಠಿಯೊಂದಿಗೆ ಮಾತಾಡುವಾಗ ಬಳಸುವಂತೆ ಪ್ರೋತ್ಸಾಹಿಸಿ. ಅಂದರೆ ಕಿರುಹೊತ್ತಗೆಯಲ್ಲಿರುವ ಮಾಹಿತಿಯನ್ನು ಓದಿಸಿ ನಂತರ ದೃಷ್ಟಿಕೋನ ಪ್ರಶ್ನೆಗಳನ್ನು ಕೇಳುವಂತೆ ಉತ್ತೇಜಿಸಿ. ಉದಾಹರಣೆಗೆ ತನ್ನ ಸಹಪಾಠಿಗೆ ಜೀವದ ಉಗಮ ಕಿರುಹೊತ್ತಗೆಯಿಂದ ಪುಟ 21ರಲ್ಲಿರುವ ಚೌಕವನ್ನು ಓದುವಂತೆ ಕೇಳಿಕೊಳ್ಳಬಹುದು. ನಂತರ ನಿಮ್ಮ ಮಗ ಹೀಗೆ ಕೇಳಬಹುದು: ‘ನಮ್ಮ ದೇಹದಲ್ಲಿರುವ ಡಿಎನ್‌ಎಯಲ್ಲಿ ಎಷ್ಟು ವಿಷಯಗಳನ್ನು ಶೇಖರಿಸಿ ಇಡಬಹುದೆಂದರೆ ನಮ್ಮ ದಿನಗಳಲ್ಲಿರುವ ಯಾವ ಕಂಪ್ಯೂಟರ್‌ ಸಹ ಅದಕ್ಕೆ ಸರಿಸಾಟಿಯಿಲ್ಲ. ಇದನ್ನು ನೀನು ಒಪ್ಪುತ್ತೀಯಾ?’ ಸಹಪಾಠಿ ಒಪ್ಪಬಹುದು. ನಂತರ ನಿಮ್ಮ ಮಗ ಹೀಗೆ ಕೇಳಬಹುದು: ‘ಹಾಗಾದರೆ ಒಂದು ಕಂಪ್ಯೂಟರ್‌ ಅನ್ನು ಯಾರಾದರು ತಯಾರು ಮಾಡಿರುವುದಾದರೆ ಅದಕ್ಕಿಂತಲೂ ಹೆಚ್ಚು ಶಕ್ತಿ ಇರುವ ಡಿಎನ್‌ಎ ಅನ್ನು ಸಹ ಯಾರೋ ಒಬ್ಬರು ತಯಾರು ಮಾಡಿರಬೇಕಲ್ವಾ?’ ಹೀಗೆ, ನಿಮ್ಮ ಮಗ ಭಯಪಡದೆ ಸರಾಗವಾಗಿ ಇತರರ ಜತೆ ಸುವಾರ್ತೆಯನ್ನು ಹಂಚಿಕೊಳ್ಳಬೇಕಾದರೆ ಆಗಿಂದಾಗ್ಗೆ ಅವನಿಗೆ ತರಬೇತಿ ನೀಡಿ. ಪರಿಣಾಮಕಾರಿ ಪ್ರಶ್ನೆಗಳನ್ನು ಕೇಳುವುದು ಹೇಗೆಂದು ಅವನಿಗೆ ಕಲಿಸಿದರೆ, ಅವನು ಸೌವಾರ್ತಿಕನಾಗಿ ತನ್ನ ನೇಮಕವನ್ನು ಸರಿಯಾಗಿ ಮಾಡಲು ಸಹಾಯವಾಗುತ್ತೆ.

15. ಒಬ್ಬ ನಾಸ್ತಿಕನನ್ನು ಭೇಟಿಯಾದಾಗ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ?

15 ಸನ್ನಿವೇಶ 2: ‘ದೇವರೇ ಇಲ್ಲ’ ಅಂತ ಹೇಳುವ ಜನರು ಸಿಗುವಾಗ. ಉದಾಹರಣೆಗೆ ಒಬ್ಬ ವ್ಯಕ್ತಿ ತಾನೊಬ್ಬ ನಾಸ್ತಿಕ ಎಂದು ಹೇಳಬಹುದು. ಇಂಥ ಹೇಳಿಕೆಯಿಂದ ನಾವು ಸಂಭಾಷಣೆಯನ್ನು ನಿಲ್ಲಿಸಿಬಿಡುವ ಬದಲು ‘ಯಾವ ವಿಷಯ ನಿಮಗೆ ಈ ನಿರ್ಧಾರಕ್ಕೆ ಬರುವಂತೆ ಮಾಡಿತು?’ ಎಂದು ಗೌರವಪೂರ್ವಕವಾಗಿ ಕೇಳಬಹುದು. ಅವರ ಉತ್ತರಕ್ಕಾಗಿ ಕಾದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದ ಹೇಳಿದ ನಂತರ ಹೀಗೆ ಕೇಳಬಹುದು: ‘ನೀವು ಬೇಜಾರು ಮಾಡ್ಕೊಳ್ಳಲ್ಲ ಅಂದ್ರೆ ಜೀವದ ಸೃಷ್ಟಿಯ ಬಗ್ಗೆ ಇರುವ ಆಧಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಹುದಾ?’ ಮನೆಯವನು ಬಯಸುವುದಾದರೆ ಜೀವವು ಸೃಷ್ಟಿಸಲ್ಪಟ್ಟಿತೊ? ಅಥವಾ ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು ಎಂಬ ಕಿರುಹೊತ್ತಗೆಯನ್ನು ನೀವು ತೋರಿಸಬಹುದು. ವಿಷಯಗಳನ್ನು ಸಕಾರಾತ್ಮಕವಾಗಿ ತಕ್ಕೊಳ್ಳುವ ವ್ಯಕ್ತಿ ಅವನಾಗಿದ್ದರೆ ಖಂಡಿತ ಮಾಹಿತಿಯನ್ನು ಸ್ವೀಕರಿಸುತ್ತಾನೆ. ಹೀಗೆ ಜಾಣ್ಮೆ, ನಮ್ರತೆಯಿಂದ ಪ್ರಶ್ನೆಗಳನ್ನು ಉಪಯೋಗಿಸಿದರೆ ಒಬ್ಬ ವ್ಯಕ್ತಿಯ ಹೃದಯ ಸುವಾರ್ತೆಗೆ ಸ್ಪಂದಿಸಬಹುದು.

16. ಬೈಬಲ್‌ ವಿದ್ಯಾರ್ಥಿಯು ಉತ್ತರವನ್ನು ಪುಸ್ತಕದಿಂದ ಓದಿ ಹೇಳುತ್ತಿರುವುದಾದರೆ ಏನು ಮಾಡಬೇಕು?

16 ಸನ್ನಿವೇಶ 3: ಬೈಬಲ್‌ ವಿದ್ಯಾರ್ಥಿಯೊಂದಿಗೆ ನಾವು ಅಧ್ಯಯನ ಮಾಡುತ್ತಿರುವಾಗ ಅವನು ಪುಸ್ತಕದಲ್ಲಿರುವ ಉತ್ತರವನ್ನು ಹಾಗೇ ಓದಿ ಹೇಳುತ್ತಿರಬಹುದು. ಹೀಗೆಯೇ ಆಗುತ್ತಿದ್ದರೆ ನಾವೇ ವಿದ್ಯಾರ್ಥಿಯ ಆಧ್ಯಾತ್ಮಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದ ಹಾಗೆ. ಯಾಕೆ? ಯಾಕೆಂದ್ರೆ ಸುಮ್ಮನೆ ಪುಸ್ತಕದಲ್ಲಿರುವುದನ್ನೇ ಓದಿ ಹೇಳುತ್ತಿದ್ದರೆ ವಿದ್ಯಾರ್ಥಿಗೆ ಧ್ಯಾನಿಸಲು ಆಗಲ್ಲ, ಆಧ್ಯಾತ್ಮಿಕವಾಗಿ ಆಳ ತಲುಪಲು ಸಹ ಆಗಲ್ಲ. ಬಿಸಿಲಿನ ಝಳಕ್ಕೆ ಗಿಡ ಒಣಗಿ ಹೋಗುವಂತೆ ಹಿಂಸೆ ಎದುರಾದಾಗ ಅದನ್ನು ತಾಳಲಾರದೆ ವಿದ್ಯಾರ್ಥಿ ಆಧ್ಯಾತ್ಮಿಕವಾಗಿ ಒಣಗಿ ಹೋಗಬಹುದು. (ಮತ್ತಾ. 13:20, 21) ಹೀಗಾಗದಂತೆ ತಡೆಯಲು, ವಿದ್ಯಾರ್ಥಿಗೆ ತಾನು ಕಲಿಯುತ್ತಿರುವ ವಿಷಯದ ಬಗ್ಗೆ ಏನನಿಸುತ್ತೆ ಅಂತ ಕೇಳಿ. ಹೇಳುತ್ತಿರುವ ವಿಷಯಗಳನ್ನು ಅವನು ಒಪ್ಪುತ್ತಿದ್ದಾನಾ ಎಂದು ಕಂಡುಹಿಡಿಯಿರಿ. ಎಲ್ಲಕ್ಕಿಂತ ಮುಖ್ಯವಾಗಿ ಒಪ್ಪುವುದಕ್ಕೆ ಅಥವಾ ಒಪ್ಪದಿರುವುದಕ್ಕೆ ಕಾರಣ ನೀಡುವಂತೆ ಕೇಳಿ. ನಂತರ ತನ್ನ ನಂಬಿಕೆಯನ್ನು ರುಜುಪಡಿಸಲು ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ ತರ್ಕಿಸುವಂತೆ ಸಹಾಯ ಮಾಡಿ. (ಇಬ್ರಿ. 5:14) ನಾವು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದರೆ ವಿದ್ಯಾರ್ಥಿ ಸತ್ಯದಲ್ಲಿ ಆಳವಾಗಿ ಬೇರೂರುತ್ತಾನೆ ಮತ್ತು ಯಾವುದೇ ಒತ್ತಡ ಹಿಂಸೆ ಬಂದರೂ ಅದನ್ನು ಜಯಿಸುತ್ತಾನೆ. (ಕೊಲೊ. 2:6-8) ಸೌವಾರ್ತಿಕರಾಗಿ ನಮ್ಮ ಕೆಲಸವನ್ನು ಪೂರ್ಣಗೊಳಿಸಲು ನಾವು ಇನ್ನೇನು ಮಾಡಬೇಕು?

ಒಳ್ಳೇ ಸೌವಾರ್ತಿಕರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ

17, 18. ಬೇರೆಯವರೊಂದಿಗೆ ಸೇರಿ ಸುವಾರ್ತೆ ಸಾರುವಾಗ ನಾವು ಏನು ಮಾಡಬೇಕು?

17 ಯೇಸು ಕ್ರಿಸ್ತನು ಇಬ್ಬಿಬ್ಬರನ್ನಾಗಿ ಸುವಾರ್ತೆ ಸಾರಲು ಕಳುಹಿಸಿದನು. (ಮಾರ್ಕ 6:7; ಲೂಕ 10:1) ಅನಂತರ ಅಪೊಸ್ತಲ ಪೌಲ ತನ್ನ ‘ಜೊತೆಕೆಲಸಗಾರರ’ ಬಗ್ಗೆ ತಿಳಿಸುವಾಗ ಅವರು ‘ತನಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದರು’ ಎಂದು ಹೇಳಿದನು. ಇದೇ ತತ್ವವನ್ನು ಅನ್ವಯಿಸುತ್ತಾ 1953ರಲ್ಲಿ ರಾಜ್ಯ ಘೋಷಕರು ಇತರರನ್ನು ಸುವಾರ್ತೆ ಸಾರಲು ತರಬೇತುಗೊಳಿಸಲು ಆರಂಭಿಸಿದರು.

18 ಬೇರೆಯವರೊಂದಿಗೆ ಸೇರಿ ಸೇವೆಗೆ ಹೋದಾಗ ನಾವು ಏನು ಮಾಡಬೇಕು? (1 ಕೊರಿಂಥ 3:6-9 ಓದಿ.) ನಿಮ್ಮೊಂದಿಗಿರುವ ಸಹೋದರ/ಸಹೋದರಿ ಮನೆಯವರಿಗೆ ವಚನವನ್ನು ತೋರಿಸುತ್ತಿರುವಾಗ ನೀವು ಸಹ ಬೈಬಲ್‌ ತೆರೆದು ನೋಡಿ. ಅವರು ಮನೆಯವರೊಟ್ಟಿಗೆ ಮಾತಾಡುತ್ತಿರುವಾಗ ಇಬ್ಬರ ಕಡೆಗೂ ಗಮನ ಕೊಡಿ. ಮಾತಾಡುವಾಗ ಯಾವುದಾದರೂ ತಡೆಗಟ್ಟನ್ನು ಜಯಿಸಲು ನಿಮ್ಮ ಜೊತೆಯಿರುವವರಿಗೆ ಸಹಾಯ ಮಾಡಲು ಸಿದ್ಧರಾಗಿರಿ. ಅದಕ್ಕಾಗಿ ಅವರ ಮತ್ತು ಮನೆಯವರ ಸಂಭಾಷಣೆಗೆ ಸರಿಯಾಗಿ ಗಮನ ಕೊಡಿ. (ಪ್ರಸಂ. 4:12) ಎಚ್ಚರಿಕೆ: ನಿಮ್ಮ ಜೊತೆ ಇರುವವರು ಒಳ್ಳೆ ತರ್ಕವನ್ನು ಬಳಸಿ ಮಾತಾಡುತ್ತಿರವಾಗ ಮಧ್ಯ ಮಾತಾಡಬೇಡಿ. ನಿಮ್ಮ ತುಡಿಯುವ ಉತ್ಸಾಹ ನಿಮ್ಮ ಜೊತೆ ಸೌವಾರ್ತಿಕರ ಸಂಭಾಷಣೆಗೆ ತಡೆಯಾಗದಿರಲಿ ಮತ್ತು ಮನೆಯವರನ್ನು ಗಲಿಬಿಲಿಗೊಳಿಸದಿರಲಿ. ಕೆಲವು ಸಲ ಮಾತುಕತೆಯಲ್ಲಿ ನೀವೂ ಒಳಗೂಡಬಹುದಾದರೂ ಅದನ್ನು ನಿಯಂತ್ರಣದಲ್ಲಿಡಿ. ಒಂದೆರೆಡು ಮಾತು ಸಾಕು. ನಂತರ ನಿಮ್ಮ ಜೊತೆ ಇರುವವರು ಮಾತಾಡುವಂತೆ ಬಿಟ್ಟುಕೊಡಿ.

19. (1) ನಾವು ಯಾವುದನ್ನು ಯಾವತ್ತೂ ಮರೆಯಬಾರದು? (2) ಏಕೆ?

19 ಮನೆಮನೆ ಸೇವೆಯಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುತ್ತಿರುವಾಗ ನೀವು ಮತ್ತು ನಿಮ್ಮ ಜೊತೆ ಇರುವವರು ಏನು ಮಾಡಬಹುದು? ನಿರೂಪಣೆಗಳನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆಂದು ಮಾತಾಡಿಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿರುವ ಜನರ ಬಗ್ಗೆ ನಕಾರಾತ್ಮಕವಾಗಿ ಮಾತಾಡಬೇಡಿ. ಜೊತೆ ಸೌವಾರ್ತಿಕರ ಬಲಹೀನತೆಗಳನ್ನು ಎತ್ತಿ ಆಡಬೇಡಿ. (ಜ್ಞಾನೋ. 18:24) ನಾವೆಲ್ಲರೂ ಕೇವಲ ಒಂದು ಮಣ್ಣಿನ ಪಾತ್ರೆ ಅಂತ ಮರೆಯಬಾರದು. ಯೆಹೋವ ದೇವರು ನಮಗೆ ಸುವಾರ್ತೆ ಎಂಬ ನಿಕ್ಷೇಪವನ್ನು ದಯಪಾಲಿಸುವ ಮೂಲಕ ವಿಶೇಷ ಕರುಣೆಯನ್ನು ತೋರಿಸಿದ್ದಾನೆ. (2 ಕೊರಿಂಥ 4:1, 7 ಓದಿ.) ನಮ್ಮಿಂದಾದಷ್ಟು ಉತ್ತಮವಾಗಿ ಸುವಾರ್ತೆ ಸಾರುವ ಮೂಲಕ ಅದಕ್ಕಾಗಿ ನಮಗಿರುವ ಕೃತಜ್ಞತೆಯನ್ನು ತೋರಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 7 ಕನ್ನಡದಲ್ಲಿ ಲಭ್ಯವಿಲ್ಲ. ಇಂಗ್ಲಿಷ್‌ನಲ್ಲಿ ಇವುಗಳ ಶೀರ್ಷಿಕೆ: Was Life Created? ಮತ್ತು The Origin of Life—Five Questions Worth Asking.

[ಅಧ್ಯಯನ ಪ್ರಶ್ನೆಗಳು]

[ಪುಟ 3ರಲ್ಲಿರುವ ಚಿತ್ರ]

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಮ್ಮ ಕೇಳುಗರ ಹೃದಯ ತಲುಪಬೇಕಾದರೆ ಅವರ ಮನವೊಪ್ಪಿಸಬೇಕು

[ಪುಟ 6ರಲ್ಲಿರುವ ಚಿತ್ರ]

ಪರಿಣಾಮಕಾರಿ ಪ್ರಶ್ನೆಗಳು ತಮ್ಮ ನಂಬಿಕೆಗೆ ಕಾರಣವನ್ನು ಕೊಡುವಂತೆ ಜನರಿಗೆ ಸಹಾಯಮಾಡುತ್ತವೆ

[ಪುಟ 6ರಲ್ಲಿರುವ ಚಿತ್ರ]

ಪ್ರಶ್ನೆಗಳು ಸತ್ಯವನ್ನು ಸ್ವೀಕರಿಸುವಂತೆ ಅವರ ಹೃದಮನವನ್ನು ತೆರೆಯುತ್ತವೆ

[ಪುಟ 6ರಲ್ಲಿರುವ ಚಿತ್ರ]

ಪ್ರಶ್ನೆಗಳು ತಮ್ಮ ನಂಬಿಕೆಯನ್ನು ರುಜುಪಡಿಸಲು ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ ತರ್ಕಿಸುವಂತೆ ಸಹಾಯಮಾಡುತ್ತವೆ