ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಾಳುವ ಬಂಧಕ್ಕೆ ಸುಮಧುರ ಸಂವಾದ

ಬಾಳುವ ಬಂಧಕ್ಕೆ ಸುಮಧುರ ಸಂವಾದ

ಬಾಳುವ ಬಂಧಕ್ಕೆ ಸುಮಧುರ ಸಂವಾದ

“ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.”—ಜ್ಞಾನೋ. 25:11.

ಉತ್ತರ ಕೊಡುವಿರಾ?

ಸಂಸಾರದಲ್ಲಿ ಉತ್ತಮ ಸಂವಹನಕ್ಕೆ ಒಳನೋಟ ಹೇಗೆ ಸಹಾಯಮಾಡುತ್ತದೆ?

ದಂಪತಿ ಪರಸ್ಪರ ಗೌರವ ತೋರಿಸಬೇಕು ಏಕೆ?

ದೀನತೆ ತೋರಿಸುವುದು ವಿವಾಹ ಜೀವನದ ಮೇಲೆ ಯಾವ ಪ್ರಭಾವ ಬೀರುತ್ತದೆ?

1. ಹಿತಕರ ಸಂವಾದ ವಿವಾಹ ಬಂಧಕ್ಕೆ ಹೇಗೆ ಸಹಾಯಕಾರಿ?

“ನಾನು ನನ್ನ ಹೆಂಡತಿಯೊಂದಿಗೆ ಸಮಯ ಕಳೆಯಲು ಹೆಚ್ಚು ಇಷ್ಟಪಡುತ್ತೇನೆ. ನನ್ನ ಖುಷಿಯನ್ನ ಅವಳೊಟ್ಟಿಗೆ ಹಂಚಿಕೊಂಡಾಗ ಅದು ನೂರುಪಟ್ಟಾಗುತ್ತದೆ. ನೋವನ್ನು ಅವಳಲ್ಲಿ ತೋಡಿಕೊಂಡಾಗ ಮನಸ್ಸು ತಿಳಿಯಾಗುತ್ತೆ.” ಈ ಮನದಾಳದ ಮಾತು ಕೆನಡದ ಸಹೋದರರೊಬ್ಬರದ್ದು. ಆಸ್ಟ್ರೇಲಿಯದ ಸಹೋದರರೊಬ್ಬರು ಬರೆದದ್ದು: “ನಾವು ಮದುವೆಯಾಗಿ 11 ವರ್ಷಗಳಾಗಿವೆ. ಇಲ್ಲಿಯವರೆಗೆ ಒಮ್ಮೆಯೂ ನನ್ನ ಹೆಂಡತಿಯೊಂದಿಗೆ ಮಾತು ಬಿಟ್ಟಿಲ್ಲ. ನಮ್ಮ ವಿವಾಹ ಎಲ್ಲಿ ಮುರಿದುಹೋಗುತ್ತೋ ಅನ್ನೋ ಭಯ, ಚಿಂತೆ ನಮ್ಮಿಬ್ಬರ ಹತ್ತಿರಾನೂ ಸುಳಿಯಲ್ಲ. ಇದಕ್ಕೆಲ್ಲ ಕಾರಣ ಇಷ್ಟೆ. . . ನಾವು ಯಾವಾಗಲೂ ಮಾತಾಡುತ್ತಿರುತ್ತೇವೆ. ನಮ್ಮಲ್ಲಿ ಹಿತಕರ ಸಂಸರ್ಗವಿದೆ.” ಕೊಸ್ಟರೀಕದ ಸಹೋದರಿ ಏನನ್ನುತ್ತಾರೆ ನೋಡೋಣ: “ಹಿತಕರ ಸಂವಾದ ನಮ್ಮ ಬಂಧವನ್ನು ತುಂಬ ಗಟ್ಟಿಗೊಳಿಸಿರೋದು ಮಾತ್ರವಲ್ಲ ಯೆಹೋವ ದೇವರೊಟ್ಟಿಗಿನ ನಮ್ಮ ಸಂಬಂಧವನ್ನು ಹೆಚ್ಚು ದೃಢಗೊಳಿಸಿದೆ. ನಮ್ಮಲ್ಲಿ ಆಪ್ತ ಸಾಂಗತ್ಯ ಬೆಸೆದಿದೆ. ನಮ್ಮ ಬಂಧವನ್ನು ಸಡಿಲಗೊಳಿಸುವ ಯಾವುದನ್ನೂ ಮಾಡದಂತೆ ಕಾಪಾಡಿದೆ. ನಾವಿಬ್ಬರೂ ಒಂದೇ ಅನ್ನೋ ಭಾವವನ್ನು ನಮ್ಮಲ್ಲಿ ತುಂಬಿದೆ. ನಮ್ಮ ಪ್ರೀತಿ ಇಮ್ಮಡಿಯಾಗಿದೆ.”

2. ಹಿತಕರ ಸಂವಾದಕ್ಕೆ ಯಾವೆಲ್ಲ ತಡೆಗಳು ಬರಬಹುದು?

2 ನೀವೂ ನಿಮ್ಮ ಸಂಗಾತಿ ಹಿತಕರ ಸಂವಾದದಲ್ಲಿ ಆನಂದಿಸುತ್ತೀರಾ? ಅಥವಾ ಸಂವಹನ ಮಾಡುವುದು ಕಷ್ಟವೆಂದೆನಿಸುತ್ತಾ? ಕಷ್ಟವೆಂದೆನಿಸುವಲ್ಲಿ ಅದು ಸಹಜವೇ. ಏಕೆಂದರೆ ವಿವಾಹವೆಂಬ ನೌಕೆ ಇಬ್ಬರು ಅಪರಿಪೂರ್ಣ ವ್ಯಕ್ತಿಗಳಿಂದ ಸಾಗುತ್ತೆ. ಇಬ್ಬರ ಗುಣ, ವ್ಯಕ್ತಿತ್ವ, ಬೆಳೆದು ಬಂದ ರೀತಿ, ಹಿನ್ನಲೆ ಬೇರೆಬೇರೆ ಇರಬಹುದು. (ರೋಮ. 3:23) ಅದೂ ಅಲ್ಲದೆ ಸಂವಾದ ಮಾಡುವ ರೀತಿಯೂ ಭಿನ್ನವಾಗಿರಬಹುದು. ಅದಕ್ಕೇ ವಿವಾಹಜೀವನದ ಬಗ್ಗೆ ಅಧ್ಯಯನ ಮಾಡುವ ಜಾನ್‌ ಮತ್ತು ನ್ಯಾನ್‌ ಹೀಗೆ ಹೇಳಿದ್ದಾರೆ: “ಸಂಸಾರ ಬೆಳಗಬೇಕಾದರೆ ಧೈರ್ಯ, ದೃಢತೆ, ಸ್ಥಿರ ಮನಸ್ಸು ಬೇಕು.”

3. ದಾಂಪತ್ಯ ಜೀವನವನ್ನು ಸುಗಮಗೊಳಿಸಲು ಕೆಲವು ದಂಪತಿಗಳಿಗೆ ಯಾವುದು ಸಹಾಯ ಮಾಡಿದೆ?

3 ಪರಿಶ್ರಮ ಎಂಬ ಇಂಧನ ಹಾಕಿದಾಗಲೇ ದಾಂಪತ್ಯವೆಂಬ ವಾಹನ ಒಳ್ಳೆ ಮೈಲೇಜ್‌ ನೀಡುತ್ತೆ. ಒಬ್ಬರನ್ನೊಬ್ಬರು ಪ್ರೀತಿಸುವ ಜೋಡಿ ಸಂಸಾರದಲ್ಲಿ ಆನಂದಿಸುತ್ತಾರೆ. (ಪ್ರಸಂ. 9:9) ಇಸಾಕ ಮತ್ತು ರೆಬೆಕ್ಕರ ಉದಾಹರಣೆ ತೆಗೆದುಕೊಳ್ಳಿ. (ಆದಿ. 24:67) ವಿವಾಹದ ಆರಂಭದ ವರ್ಷಗಳಲ್ಲಿ ಮಾತ್ರವಲ್ಲ, ಕೆಲವು ವರ್ಷಗಳ ನಂತರವೂ ಅವರಿಬ್ಬರಲ್ಲಿ ಅದೇ ಕೋಮಲ ಪ್ರೀತಿಯಿತ್ತು. ಇಂದಿರುವ ಅನೇಕ ದಂಪತಿಗಳಲ್ಲೂ ಈ ಮಾತು ಸತ್ಯ. ಇದರ ಗುಟ್ಟೇನು? ಅವರು ತಮ್ಮ ಭಾವನೆ ಅನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ, ಕೋಮಲವಾಗಿ ವ್ಯಕ್ತಪಡಿಸಲು ಕಲಿತಿದ್ದಾರೆ. ಒಳನೋಟ, ಪ್ರೀತಿ, ಗೌರವ, ದೀನತೆಯ ಸಮ್ಮಿಶ್ರದೊಂದಿಗೆ ಇದನ್ನು ಮಾಡುತ್ತಾರೆ. ಈ ಎಲ್ಲಾ ಗುಣಗಳು ವಿವಾಹದಲ್ಲಿ ಮೇಳೈಸಿದಾಗ ಸಂಸರ್ಗ ಮಾರ್ಗ ಸುಗಮವಾಗಿರುತ್ತೆ. ಅದು ಹೇಗೆಂದು ನೋಡೋಣ.

ಒಳನೋಟ ತೋರಿಸಿ

4, 5. ಒಳನೋಟ ಇರುವುದಾದರೆ ದಂಪತಿಗಳು ಹೇಗೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು? ಉದಾಹರಣೆ ಕೊಡಿ.

4 ಜ್ಞಾನೋಕ್ತಿ 16:20ರಲ್ಲಿ “[ದೇವರ] ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು” ಎಂದು ಇದೆ. ಈ ಮಾತು ವೈವಾಹಿಕ ಜೀವನದಲ್ಲೂ ನಿಜ. (ಜ್ಞಾನೋಕ್ತಿ 24:3 ಓದಿ.) ದೇವರ ವಾಕ್ಯದ ಮೂಲಕ ನಾವು ವಿವೇಕ ಮತ್ತು ಒಳನೋಟ ಪಡೆಯುತ್ತೇವೆ. ಆದಿಕಾಂಡ 2:18 ತಿಳಿಸುವಂತೆ ದೇವರು ಸ್ತ್ರೀಯನ್ನು ಪುರುಷನ ನಕಲಾಗಿ ಅಲ್ಲ, ಸಹಕಾರಿಣಿಯಾಗಿ ಸೃಷ್ಟಿಸಿದನು. ಅಂದರೆ ಅವರಿಬ್ಬರ ವ್ಯಕ್ತಿತ್ವ ಬೇರೆ ಬೇರೆಯಾಗಿರುವುದರಿಂದ ಒಬ್ಬರಿಗೊಬ್ಬರು ಪೂರಕವಾಗಿರುತ್ತಾರೆ. ಆದ್ದರಿಂದಲೇ ಸ್ತ್ರೀಯರು ಮಾತಾಡುವ ರೀತಿ ಪುರುಷರಿಗಿಂತ ಭಿನ್ನವಾಗಿರುತ್ತೆ. ಅವರು ತಮ್ಮ ಅನಿಸಿಕೆಗಳ ಬಗ್ಗೆ, ಜನರ ಬಗ್ಗೆ ಮತ್ತು ಸಂಬಂಧಗಳ ಬಗ್ಗೆ ಮಾತಾಡುತ್ತಾರೆ. ಪತ್ನಿಯಾಗಿ ಆಕೆ, ಪತಿ ತನ್ನೊಟ್ಟಿಗೆ ಆಪ್ತ ಸಂಭಾಷಣೆ ಮಾಡಬೇಕೆಂದು ಬಯಸುತ್ತಾಳೆ. ಆಗ ಆಕೆಗೆ, ತನ್ನ ಮೇಲೆ ಪತಿಗೆ ಪ್ರೀತಿಯಿದೆ ಎಂಬ ಭಾವ ಮೂಡುತ್ತೆ. ಪುರುಷರಾದರೆ ತಮ್ಮ ಭಾವನೆಗಳ ಬಗ್ಗೆ ಅಷ್ಟಾಗಿ ಮಾತಾಡುವುದಿಲ್ಲ. ಕೆಲಸ, ಸಮಸ್ಯೆ, ಅದಕ್ಕೆ ಪರಿಹಾರ ಹುಡುಕುವುದರ ಬಗ್ಗೆ ಹೆಚ್ಚಾಗಿ ಮಾತಾಡುತ್ತಾರೆ. ತಮಗೆ ಇತರರು ಗೌರವ ಕೊಡಬೇಕೆಂದು ಅವರು ಬಯಸುತ್ತಾರೆ.

5 ಬ್ರಿಟನ್‌ನ ಸಹೋದರಿಯೊಬ್ಬರು ಹೇಳಿದ್ದು: “ಏನಾದ್ರು ಸಮಸ್ಯೆ ಆದಾಗ ನನ್ನ ಗಂಡ ಅದನ್ನ ಆದಷ್ಟು ಬೇಗ ಪರಿಹರಿಸುವುದರ ಕಡೆಗೆ ಗಮನಕೊಡ್ತಾರೆ. ಆದ್ರೆ ನಾನು ಬಯಸೋದು ನನ್ನ ಭಾವನೆಗಳಿಗೆ ಕಿವಿಗೊಡಲಿ ಅಂತ.” ಅವರು ಮುಂದುವರಿಸಿ ಹೇಳಿದ್ದು: “ಕನಿಕರದ ಮಾತು, ಒಂದು ಕಪ್‌ ಟೀ ಬೇಕು ಅಂತ ಅನಿಸುವಾಗ ನನ್ನ ಗಂಡ ಹೀಗೆ ಪ್ರತಿಕ್ರಿಯಿಸಿದರೆ ನನಗೆ ತುಂಬ ಕಿರಿಕಿರಿಯಾಗುತ್ತೆ.” ಒಬ್ಬ ಪತಿ ಹೀಗೆ ಬರೆದರು: “ನಮ್ಮ ಮದುವೆಯಾದ ಹೊಸದರಲ್ಲಿ ನನ್ನ ಹೆಂಡತಿಗೆ ಯಾವುದೇ ಸಮಸ್ಯೆಯಿದ್ದರೂ ಸರಿ, ಅದಕ್ಕಾಗಿ ನಾನು ಮಾಡ್ತಾ ಇದ್ದ ಮೊದಲ ಕೆಲಸ ಪರಿಹಾರ ಹುಡುಕುವುದು. ಆದರೆ ನಂತರ ಗೊತ್ತಾಯ್ತು ಅವಳು ನಿಜವಾಗಲೂ ಬಯಸುವುದು ಕೇಳುವ ಕಿವಿಯನ್ನ ಅಂತ.” (ಜ್ಞಾನೋ. 18:13; ಯಾಕೋ. 1:19) ಒಳನೋಟವಿರುವ ಗಂಡನೊಬ್ಬನು ತನ್ನ ಹೆಂಡತಿಯ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ ಮತ್ತು ಅವಳಿಗೆ ಹಾಯೆನಿಸುವ ವಿಧದಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತಾನೆ. ಅವಳ ಅನಿಸಿಕೆ ಭಾವನೆಗಳ ಕಡೆಗೆ ತನಗೆ ಕಾಳಜಿಯಿದೆ ಎಂದು ಭರವಸೆ ಕೊಡುತ್ತಾನೆ. (1 ಪೇತ್ರ 3:7) ಹೆಂಡತಿ ಕೂಡ ತನ್ನ ಗಂಡನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪ್ರಶಂಸಿಸಿ, ತಮ್ಮ ಶಾಸ್ತ್ರಾಧಾರಿತ ಪಾತ್ರವನ್ನು ಸರಿಯಾಗಿ ನಿರ್ವಹಿಸುವಾಗ ಅವರ ಆಪ್ತ ಬಂಧಕ್ಕೆ ಮೆರಗು ಹೆಚ್ಚುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ, ವಿವೇಕದ ಮತ್ತು ಸಮತೋಲನ ಹೊಂದಿರುವ ನಿರ್ಣಯಗಳನ್ನು ಮಾಡಿ ಅದರಂತೆ ನಡೆಯಲು ನೆರವಾಗುತ್ತೆ.

6, 7. (1) ದಂಪತಿಯು ಒಳನೋಟ ತೋರಿಸಲು ಪ್ರಸಂಗಿ 3:7ರಲ್ಲಿರುವ ತತ್ವ ಹೇಗೆ ಸಹಾಯ ಮಾಡುತ್ತೆ? (2) ಹೆಂಡತಿ ಹೇಗೆ ವಿವೇಚನೆ ತೋರಿಸಬಲ್ಲಳು? (3) ಗಂಡನು ಯಾವ ಪ್ರಯತ್ನ ಮಾಡಬೇಕು?

6 ಒಳನೋಟವಿರುವ ದಂಪತಿಗೆ ಯಾವುದು “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಎಂದು ತಿಳಿದಿರುತ್ತೆ. (ಪ್ರಸಂ. 3:1, 7) 10 ವರ್ಷಗಳಿಂದ ಸಾಂಸಾರಿಕ ಜೀವನದಲ್ಲಿ ಆನಂದಿಸುತ್ತಿರುವ ಒಬ್ಬ ಸಹೋದರಿ ಹೇಳುತ್ತಾರೆ “ಕೆಲವೊಂದು ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಮಾತಾಡದಿರುವುದು ಒಳ್ಳೇದೆಂದು ನಾನು ಈಗ ಕಲಿತಿದ್ದೇನೆ. ನನ್ನ ಗಂಡ ಕೆಲಸದಲ್ಲಿ ನಿರತರಾಗಿದ್ರೆ ಆ ಸಮಯದಲ್ಲಿ ಅದನ್ನು ಪ್ರಸ್ತಾಪಿಸಲ್ಲ. ಸ್ವಲ್ಪ ಸಮಯ ಬಿಟ್ಟು ಮಾತಾಡ್ತೀನಿ. ಹೀಗೆ ಮಾಡುವುದರಿಂದ ನಂತರ ನಮ್ಮ ಸಂಭಾಷಣೆ ಹೆಚ್ಚು ಸರಾಗವಾಗಿ ಸಾಗುತ್ತೆ.” ವಿವೇಚನೆಯಿರುವ ಹೆಂಡತಿಯರು ಸೌಜನ್ಯದಿಂದ ಮಾತಾಡುತ್ತಾರೆ. ಸರಿಯಾಗಿ ಆಯ್ಕೆಮಾಡಿದ ಅವರ “ಸಮಯೋಚಿತ ಮಾತುಗಳು” ಸಂವಾದಕ್ಕೆ ಪುಷ್ಟಿ ನೀಡುತ್ತೆ. ಅವು ಪ್ರಶಂಸೆಗೂ ಅರ್ಹ.ಜ್ಞಾನೋ. 25:11 ಓದಿ.

7 ಕ್ರೈಸ್ತ ಗಂಡನೊಬ್ಬನು ತನ್ನ ಹೆಂಡತಿ ಹೇಳುವುದಕ್ಕೆ ಕಿವಿಗೊಡುವುದು ಮಾತ್ರವಲ್ಲ ತನ್ನ ಭಾವನೆಗಳನ್ನು ಸಹ ಹಂಚಿಕೊಳ್ಳಬೇಕು. ಮದುವೆಯಾಗಿ 27 ವರ್ಷ ಕಳೆದಿರುವ ಹಿರಿಯರೊಬ್ಬರು ಹೇಳುವುದು: “ಹೃದಯದಲ್ಲಿರುವುದನ್ನು ನನ್ನ ಹೆಂಡತಿಗೆ ತಿಳಿಸುವುದರಲ್ಲಿ ನಾನಿನ್ನೂ ಕೆಲಸಮಾಡಬೇಕು.” ವಿವಾಹ ಬಂಧದಲ್ಲಿ 24 ವರ್ಷ ಕಳೆದಿರುವ ಇನ್ನೊಬ್ಬ ಸಹೋದರರ ಮಾತು ಹೀಗಿದೆ: “ಏನೂ ಹೇಳಿಕೊಳ್ಳದಿದ್ದರೆ ಸಮಸ್ಯೆ ಹಾಗೆಯೇ ಪರಿಹಾರವಾಗಬಹುದು ಅಂತ ನಾನು ನೆನೆಸುತ್ತೇನೆ. ಆದರೂ ನಾನು ಕಲಿತಿರುವ ವಿಚಾರ ಏನೆಂದ್ರೆ, ಭಾವನೆಗಳನ್ನ ಹೇಳಿಕೊಳ್ಳುವುದು ದೌರ್ಬಲ್ಯ ಅಲ್ಲ. ಹಾಗಾಗಿ ಭಾವನೆಗಳನ್ನ ಹೇಳಿಕೊಳ್ಳಲು ಕಷ್ಟ ಆದಾಗ ನಾನು ಪ್ರಾರ್ಥಿಸುತ್ತೇನೆ. ಸರಿಯಾದ ಮಾತುಗಳನ್ನು ಸರಿಯಾದ ರೀತಿಯಲ್ಲಿ ಹೇಳಲಾಗುವಂತೆ ಬೇಡುತ್ತೇನೆ. ದೀರ್ಘ ಉಸಿರೆಳೆದು ಮಾತಾಡಲು ಪ್ರಾರಂಭಿಸುತ್ತೇನೆ.” ಸಂಭಾಷಣೆಗೆ ಸರಿಯಾದ ಸ್ಥಳ ಮತ್ತು ಸಮಯ ಕೂಡ ಸಹಕಾರಿ. ದಂಪತಿಗಳು ಇಬ್ಬರೇ ಇದ್ದು ದಿನದ ವಚನ ಅಥವಾ ಬೈಬಲ್‌ ಓದುವ ಸಮಯದಲ್ಲಿ ಮಾತಾಡಬಹುದು.

8. ಸುಖೀ ಸಂಸಾರಕ್ಕೆ ಕ್ರೈಸ್ತ ದಂಪತಿಗಳಿಗೆ ಇನ್ಯಾವ ಸಲಹೆ ಇದೆ?

8 ಗಂಡ ಮತ್ತು ಹೆಂಡತಿ ತಮ್ಮ ಸಂವಹನ ಕೌಶಲವನ್ನು ಉತ್ತಮಗೊಳಿಸಬೇಕಾದರೆ ಅದಕ್ಕಾಗಿ ಅತೀವ ಬಯಕೆ ಮತ್ತು ಪ್ರಾರ್ಥನೆ ತುಂಬ ಮುಖ್ಯ ಎಂದು ನೆನಪಿನಲ್ಲಿಡಬೇಕು. ಆದರೆ ಅಪ್ಪ ನೆಟ್ಟ ಆಲದ ಮರ ಎಂದಂತೆ ಹಳೇ ರೂಢಿಗಳನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಆದರೂ ಯೆಹೋವ ದೇವರನ್ನು ಪ್ರೀತಿಸಿ, ಪವಿತ್ರಾತ್ಮದ ಸಹಾಯಕ್ಕಾಗಿ ಕೇಳಿಕೊಂಡು ತಮ್ಮ ಬಾಂಧವ್ಯವನ್ನು ಪವಿತ್ರವೆಂದೆಣಿಸುವಾಗ ಇದು ಸಾಧ್ಯ. ಮದುವೆಯಾಗಿ 26 ವರ್ಷ ಕಳೆದಿರುವ ಸಹೋದರಿ ಬರೆದಿದ್ದು: “ನಾನು ಮತ್ತು ನನ್ನ ಗಂಡ, ಮದುವೆಯ ಬಗ್ಗೆ ಯೆಹೋವ ದೇವರಿಗೆ ಇರುವ ನೋಟವನ್ನೇ ಇಟ್ಟುಕೊಂಡಿದ್ದೇವೆ. ಆದ್ದರಿಂದ ದೂರವಾಗುವುದರ ಯೋಚನೆನೇ ನಮ್ಮಿಬ್ಬರಲ್ಲಿ ಸುಳಿಯುವುದಿಲ್ಲ. ಈ ನೋಟವಿರುವುದರಿಂದ ಯಾವುದೇ ಸಮಸ್ಯೆ ಬಂದರೂ ಪರಿಹರಿಸಲು ಜತೆಯಾಗಿ ಮಾತಾಡುತ್ತೇವೆ.” ಇಂಥ ನಿಷ್ಠೆ ಮತ್ತು ದೈವಭಕ್ತಿ ದೇವರನ್ನು ಸಂತೋಷಗೊಳಿಸುತ್ತೆ ಮತ್ತು ಅನೇಕ ಆಶೀರ್ವಾದಗಳನ್ನು ತರುತ್ತೆ.—ಕೀರ್ತ. 127:1.

ಪ್ರೀತಿಯ ಒರತೆ ಚಿಮ್ಮಲಿ

9, 10. ದಾಂಪತ್ಯ ಪ್ರೀತಿಭರಿತವಾಗಿರಲು ಸತಿಪತಿ ಏನೆಲ್ಲ ಮಾಡಬಹುದು?

9 ಪ್ರೀತಿ “ಐಕ್ಯದ ಪರಿಪೂರ್ಣ ಬಂಧ.” ಈ ಗುಣ ವಿವಾಹ ಜೀವನದ ಜೀವಾಳ. (ಕೊಲೊ. 3:14) ನಿಷ್ಠೆಯುಳ್ಳ ಸತಿಪತಿ ಜೊತೆಯಾಗಿ ಸಾಗುತ್ತಾ ಸಂಸಾರ ಸಾಗರದಲ್ಲಿ ಆನಂದವನ್ನೂ ಸವಾಲುಗಳನ್ನೂ ಒಟ್ಟಿಗೆ ಅನುಭವಿಸುವಾಗ ಅವರ ಪ್ರೀತಿ ಹೆಚ್ಚುತ್ತಾ ಹೋಗುತ್ತದೆ. ಅವರು ಗಂಡ-ಹೆಂಡತಿ ಮಾತ್ರವಲ್ಲ ಆಪ್ತ ಗೆಳೆಯರಾಗುತ್ತಾರೆ. ಪರಸ್ಪರ ಸಾಂಗತ್ಯವನ್ನು ಇಷ್ಟಪಡುತ್ತಾರೆ. ಅವರು ಟಿವಿ, ಸಿನೆಮಾಗಳಲ್ಲಿ ತೋರಿಸುವ ಹೀರೋಗಳಂತೆ ಏನೋ ಸಾಧನೆ ಮಾಡಬೇಕೆಂದಿಲ್ಲ. ಪ್ರೀತಿಯಿಂದ ಹೊರಹೊಮ್ಮಿದ ಚಿಕ್ಕಪುಟ್ಟ ವಿಷಯಗಳೂ ಆ ಬಂಧವನ್ನು ಆಪ್ತಗೊಳಿಸುತ್ತವೆ. ಸಣ್ಣ ಅಪ್ಪುಗೆ, ನಲ್ಮೆಯ ನುಡಿ, ಅಕ್ಕರೆಯ ಅಭಿವ್ಯಕ್ತಿ, ಮಂದಹಾಸ ಸಂಸಾರದಲ್ಲಿ ಸರಿಗಮ ಮೂಡಿಸಬಲ್ಲದು. ಮದುವೆಯಾಗಿ 19 ವರ್ಷ ಆಗಿರುವ ಒಂದು ದಂಪತಿ ಪ್ರತಿದಿನ “ತಮ್ಮ ಸಂಗಾತಿಯ ಕುಶಲವನ್ನು ವಿಚಾರಿಸಲು” ಫೋನ್‌ ಅಥವಾ ಮೆಸೇಜ್‌ ಮಾಡುತ್ತಾರಂತೆ.

10 ಪ್ರೀತಿಭರಿತ ದಾಂಪತ್ಯದಲ್ಲಿ ಸತಿಪತಿ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. (ಫಿಲಿ. 2:4) ಆಗ ಪರಸ್ಪರರ ಅಪರಿಪೂರ್ಣತೆಗಳು ಅಲ್ಲಲ್ಲಿ ಗೋಚರಿಸುವುದಾದರೂ ಅವರಲ್ಲಿನ ಪ್ರೀತಿ ಗಾಢವಾಗುತ್ತಾ ಹೋಗುತ್ತದೆ. ವಿವಾಹಬಂಧ ದಿನ ಕಳೆದಂತೆ ಬಲಗೊಳ್ಳುತ್ತಾ ಒಲುಮೆ ಹೆಚ್ಚಾಗುತ್ತಾ ಹೋಗಬೇಕು. ಆದ್ದರಿಂದ ವಿವಾಹಿತ ಕ್ರೈಸ್ತರೇ, ಹೀಗೆ ಕೇಳಿಕೊಳ್ಳಿ: ‘ನನ್ನ ಸಂಗಾತಿ ಬಗ್ಗೆ ನನಗೆ ಎಷ್ಟರಮಟ್ಟಿಗೆ ಗೊತ್ತಿದೆ? ಯಾವುದಾದರೂ ಒಂದು ವಿಷಯ ಬರುವಾಗ ಅವರ/ಅವಳ ಅನಿಸಿಕೆ, ಆಲೋಚನೆಯನ್ನು ನಾನು ಅರ್ಥಮಾಡಿಕೊಳ್ಳುತ್ತೇನಾ? ಯಾವ ಗುಣಗಳನ್ನು ನೋಡಿ ನಾನು ಅವರನ್ನು/ಅವಳನ್ನು ಇಷ್ಟಪಟ್ಟೆ? ನನ್ನ ಸಂಗಾತಿ ಕುರಿತು ಯೋಚಿಸಲು ನಾನು ಎಷ್ಟು ಸಾರಿ ಸಮಯ ಮಾಡಿಕೊಳ್ಳುತ್ತೇನೆ?’

ಗೌರವ ತೋರಿಸಿ

11. ಗಂಡಹೆಂಡತಿ ಮಧ್ಯೆ ಗೌರವ ಇರಲೇಬೇಕು ಏಕೆ? ಉದಾಹರಿಸಿ.

11 ಸಂತೋಷದಿಂದಿರುವ ದಂಪತಿಗಳೆಲ್ಲ ಪರಿಪೂರ್ಣರೆಂದಲ್ಲ. ಸತಿಪತಿ ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಾರೆಂದರೆ ಅವರಲ್ಲಿ ಭಿನ್ನಾಭಿಪ್ರಾಯ ಬರುವುದೇ ಇಲ್ಲವೆಂದೂ ಅಲ್ಲ. ಅಬ್ರಹಾಮ ಮತ್ತು ಸಾರ ಕುರಿತು ಯೋಚಿಸಿ. ಅವರಲ್ಲೂ ವ್ಯತ್ಯಾಸಗಳಿದ್ದವು. (ಆದಿ. 21:9-11) ಆದರೆ ಆ ವ್ಯತ್ಯಾಸದ ಅಲೆಗಳು ಅವರನ್ನು ದೂರ ಸರಿಸಲಿಲ್ಲ. ಏಕೆ? ಏಕೆಂದರೆ ಅವರು ಪರಸ್ಪರರನ್ನು ಘನತೆ, ಗೌರವದಿಂದ ಉಪಚರಿಸಿದರು. ಉದಾಹರಣೆಗೆ, ಅಬ್ರಹಾಮ ಸಾರಳ ಹತ್ತಿರ ಮಾತಾಡುವಾಗ “ದಯಮಾಡಿ” ಎಂದು ಹೇಳಿದನು. (ಆದಿ. 12:13, ಪವಿತ್ರ ಗ್ರಂಥ) ಸಾರ ಅಬ್ರಹಾಮನಿಗೆ ವಿಧೇಯರಾಗಿ “ಯಜಮಾನ” ಎಂದು ಕರೆದರು. (ಆದಿ. 18:12) ಪತಿಪತ್ನಿ ನಡುವೆ ಗೌರವದ ಕೊರತೆಯಿರುವಲ್ಲಿ ಅವರು ಮಾತಾಡುವಾಗ ಬಳಸುವ ಪದಗಳಲ್ಲಿ, ಶೈಲಿಯಲ್ಲಿ ಅದು ಕಂಡುಬರುತ್ತದೆ. (ಜ್ಞಾನೋ. 12:18) ದಾಂಪತ್ಯದಲ್ಲಿ ಇಂಥ ಅಪಸ್ವರ ಕಂಡುಬಂದಾಗ ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಅದು ತೀವ್ರ ಸ್ವರೂಪ ಪಡೆದು ದಾಂಪತ್ಯಕ್ಕೇ ಕೊಳ್ಳಿ ಇಡಬಲ್ಲದು.ಯಾಕೋ. 3:7-10, 17, 18 ಓದಿ.

12. ವಿಶೇಷವಾಗಿ ನವಜೋಡಿಗಳು ಗೌರವಭರಿತವಾಗಿ ಮಾತಾಡಲು ಶ್ರಮಿಸಬೇಕು ಏಕೆ?

12 ಪರಸ್ಪರ ಪ್ರೀತಿ, ಗೌರವದಿಂದ ಮಾತಾಡುವುದು ಮುಕ್ತ ಸಂವಾದಕ್ಕೆ ದಾರಿಮಾಡಿಕೊಡುತ್ತದೆ. ಈ ರೀತಿ ಸಂವಾದ ಮಾಡಲು ಹೆಚ್ಚು ಶ್ರಮಹಾಕಬೇಕಾದವರು ನವದಂಪತಿಗಳು. ಏಕೆಂದು ಒಬ್ಬ ಸಹೋದರ ಹೀಗೆ ವಿವರಿಸುತ್ತಾರೆ: “ಮದುವೆಯಾದ ಹೊಸತರಲ್ಲಿ ದಂಪತಿ ಆನಂದದಲ್ಲಿ ತೇಲುತ್ತಾರಾದರೂ ಜೊತೆಗೆ ಕಿರಿಕಿರಿಯೂ ನುಸುಳುವ ಸಾಧ್ಯತೆಯಿದೆ. ಪರಸ್ಪರರ ಭಾವನೆಗಳು, ಅಭಿರುಚಿಗಳು, ಅಗತ್ಯಗಳು ಅರಿವಾಗುತ್ತಾ ಹೋದಂತೆ ಸಂಸಾರ ಬಂಡಿ ಸ್ವಲ್ಪ ಸಮತೋಲನ ಕಳೆದುಕೊಳ್ಳಬಹುದು. ಆದರೆ ದಾಂಪತ್ಯದಲ್ಲಿ ಹಾಸ್ಯ ಪ್ರವೃತ್ತಿಯ ಲೇಪವಿದ್ದರೆ, ವಿವೇಚನೆ, ದೀನತೆ, ತಾಳ್ಮೆ ಇದ್ದು ಯೆಹೋವನ ಮೇಲೆ ಆತುಕೊಂಡರೆ ಸಂಸಾರ ಬಂಡಿಯನ್ನು ಸುಗಮವಾಗಿ ಸಾಗಿಸಬಲ್ಲಿರಿ. ಇದು ದಾಂಪತ್ಯದುದ್ದಕ್ಕೂ ಪ್ರಯೋಜನ ತರುತ್ತದೆ.” ಈ ಸಹೋದರನ ಮಾತುಗಳು ಎಷ್ಟು ನಿಜವಲ್ಲವೆ!

ನಿಜ ದೀನತೆ ತೋರಿಸಿ

13. ಸಂತೋಷಭರಿತ ವಿವಾಹಜೀವನಕ್ಕೆ ದೀನತೆ ಮುಖ್ಯವೇಕೆ?

13 ಸತಿಪತಿಯ ಮಧ್ಯೆಯಿರುವ ಹಿತಕರ ಸಂವಹನ ಉದ್ಯಾನದಲ್ಲಿ ಸೌಮ್ಯವಾಗಿ, ಸುಲಲಿತವಾಗಿ ಹರಿಯುವ ಝರಿಯಂತೆ. ಅದು ಹರಿಯುತ್ತಲೇ ಇರಬೇಕಾದರೆ “ದೀನಮನಸ್ಸು” ಬೇಕು. (1 ಪೇತ್ರ 3:8) “ದೀನತೆ ಇದ್ದರೆ ವೈಮನಸ್ಸನ್ನು ಬೇಗನೆ ತಿಳಿಗೊಳಿಸಬಹುದು. ಏಕೆಂದರೆ ಆಗ ‘ತಪ್ಪಾಯ್ತು ಕ್ಷಮಿಸಿ’ ಎಂದು ಹೇಳಲು ನಾವು ಹಿಂಜರಿಯುವುದಿಲ್ಲ” ಎನ್ನುತ್ತಾರೆ 11 ವರ್ಷದಿಂದ ವೈವಾಹಿಕ ಜೀವನ ನಡೆಸುತ್ತಿರುವ ಒಬ್ಬ ಸಹೋದರ. ವಿವಾಹವಾಗಿ 20 ವರ್ಷಗಳಾಗಿರುವ ಸಂತೋಷಿತ ಪತಿ ಹೀಗನ್ನುತ್ತಾರೆ: “ಕೆಲವೊಮ್ಮೆ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅನ್ನೋದಕ್ಕಿಂತ ‘ತಪ್ಪಾಯ್ತು ಕ್ಷಮಿಸಿ’ ಅನ್ನೋದಕ್ಕೆ ತುಂಬ ಬೆಲೆಯಿರುತ್ತೆ. ದೀನತೆ ಬೆಳೆಸಿಕೊಳ್ಳಲು ಸರಳ ಸಹಾಯ ಪ್ರಾರ್ಥನೆ. ನಾನೂ ನನ್ನ ಪತ್ನಿ ಜೊತೆಯಾಗಿ ಪ್ರಾರ್ಥಿಸುವಾಗ, ‘ನಾವು ಅಪರಿಪೂರ್ಣರು, ದೇವರು ನಮಗೆ ಅಪಾತ್ರ ದಯೆ ತೋರಿಸುತ್ತಿದ್ದಾರೆ’ ಎನ್ನುವುದು ನೆನಪಾಗುತ್ತದೆ. ಇದು ನಮ್ಮ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ ಸರಿಯಾದ ನೋಟವನ್ನು ಇಟ್ಟುಕೊಳ್ಳಲು ನೆರವಾಗುತ್ತೆ.”

14. ಅಹಂನಿಂದ ವಿವಾಹಬಂಧದ ಮೇಲೆ ಯಾವ ಪರಿಣಾಮವಾಗಬಲ್ಲದು?

14 ಅಹಂಕಾರ ಸಮಾಧಾನಕ್ಕೆ ಕುತ್ತು ತರುತ್ತದೆ. ಅಹಂಕಾರವಿದ್ದರೆ ಕ್ಷಮೆಕೇಳುವ ಮನಸ್ಸೂ ಇರುವುದಿಲ್ಲ, ಆ ಧೈರ್ಯವೂ ಇರುವುದಿಲ್ಲ. ಹಾಗಾಗಿ ಅಹಂಕಾರ ಸಂವಹನಕ್ಕೆ ಅಡ್ಡಿ. ಅಹಂ ಇರುವ ವ್ಯಕ್ತಿ ತಾನು ಮಾಡಿದ್ದಕ್ಕೆ ಸಬೂಬುಗಳನ್ನು ಕೊಡುತ್ತಾನೆ. ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಬೇರೆಯವರ ಮೇಲೆ ತಪ್ಪುಹೊರಿಸುತ್ತಾನೆ. ಮನನೊಂದಾಗ ಸಮಾಧಾನವಾಗಲು ಪ್ರಯತ್ನಿಸುವ ಬದಲು ಕಿಡಿಕಾರುತ್ತಾನೆ. ಅಥವಾ ಮೌನಯುದ್ಧ ಮಾಡುವ ಮೂಲಕ ಪ್ರತೀಕಾರ ತೋರಿಸುತ್ತಾನೆ. (ಪ್ರಸಂ. 7:9) ಅಹಂ ಎಂಬ ಕಿಚ್ಚು ವಿವಾಹಬಂಧವನ್ನು ಭಸ್ಮಮಾಡುತ್ತದೆ. ಅಷ್ಟೇ ಅಲ್ಲ “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.”—ಯಾಕೋ. 4:6.

15. ಭಿನ್ನಾಭಿಪ್ರಾಯ ಉಂಟಾದಾಗ ಎಫೆಸ 4:26, 27ರ ಸಲಹೆಯನ್ನು ಅನ್ವಯಿಸಿಕೊಳ್ಳುವುದರಿಂದ ದಂಪತಿಗೆ ಯಾವ ಪ್ರಯೋಜನವಿದೆ?

15 ಅಹಂಕಾರ ನಮ್ಮ ಹತ್ತಿರವೂ ಸುಳಿಯುವುದಿಲ್ಲ ಎಂದುಕೊಳ್ಳುವುದು ಶುದ್ಧ ದಡ್ಡತನ. ಅದರ ಸುಳಿವು ಸ್ವಲ್ಪವಾದರೂ ಕಂಡುಬರುವಲ್ಲಿ ತಕ್ಷಣ ಸರಿಪಡಿಸಿಕೊಳ್ಳಬೇಕು. ಪೌಲ ಜೊತೆ ಕ್ರೈಸ್ತರಿಗೆ “ನೀವು ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ. ಪಿಶಾಚನಿಗೆ ಅವಕಾಶಕೊಡಬೇಡಿ” ಎಂದು ಬರೆದನು. (ಎಫೆ. 4:26, 27) ದೇವರ ವಾಕ್ಯದಲ್ಲಿರುವ ಈ ಸಲಹೆಗೆ ಕಿವಿಗೊಡದಿದ್ದಲ್ಲಿ ನೋವುಣ್ಣುವುದು ಖಂಡಿತ. ಒಬ್ಬ ಸಹೋದರಿ ತಮ್ಮ ಕಹಿನೆನಪನ್ನು ಹೀಗೆ ಹಂಚಿಕೊಳ್ಳುತ್ತಾರೆ: “ಕೆಲವೊಂದು ಸಾರಿ ನಾನೂ ನನ್ನ ಪತಿ ಎಫೆಸ 4:26, 27ನ್ನು ಅನ್ವಯಿಸಿಕೊಳ್ಳಲಿಲ್ಲ. ಸಮಾಧಾನ ಮಾಡಿಕೊಳ್ಳದೆ ಮಲಗಿದ ಆ ರಾತ್ರಿಗಳು ನನ್ನ ಜೀವನದ ಕರಾಳ ರಾತ್ರಿಗಳು. ನಿದ್ರೆಮಾಡದೆ ಮಾನಸಿಕ ನೋವು ಅನುಭವಿಸಿದ್ದೆ.” ಅಸಮಾಧಾನವಾದಾಗ ಆ ಕೂಡಲೆ ಅದನ್ನು ಸರಿಪಡಿಸಿಕೊಳ್ಳುವುದು ಎಷ್ಟು ಒಳ್ಳೇದಲ್ಲವೆ? ಜಗಳವಾದಲ್ಲಿ ತಣ್ಣಗಾಗಲು ಸ್ವಲ್ಪ ಸಮಯ ಬೇಕಾಗಬಹುದು. ಆಗ ಒಳ್ಳೇ ಮನಸ್ಥಿತಿ ಕೊಡುವಂತೆ ಯೆಹೋವ ದೇವರಲ್ಲಿ ಬೇಡಿಕೊಳ್ಳಿ. ನಮ್ಮಲ್ಲಿ ದೀನಮನಸ್ಸಿದ್ದರೆ ನಮಗಾದ ನೋವಿನ ಮೇಲಲ್ಲ, ಸಮಸ್ಯೆಯ ಮೇಲೆ ಗಮನಹರಿಸುತ್ತೇವೆ. ಹೀಗೆ ಪರಿಸ್ಥಿತಿ ಇನ್ನೂ ಬಿಗಡಾಯಿಸದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.ಕೊಲೊಸ್ಸೆ 3:12, 13 ಓದಿ.

16. ದಂಪತಿ ತಮ್ಮಲ್ಲಿರುವ ಸಾಮರ್ಥ್ಯದ ಕಡೆಗೆ ಸರಿಯಾದ ದೃಷ್ಟಿಕೋನ ಇಟ್ಟುಕೊಳ್ಳಲು ದೀನತೆ ಹೇಗೆ ಸಹಾಯಮಾಡುತ್ತದೆ?

16 ದೀನತೆ, ವಿನಯವಿರುವ ವ್ಯಕ್ತಿ ಸಂಗಾತಿಯ ಒಳ್ಳೇ ಗುಣಗಳ, ಸಾಮರ್ಥ್ಯಗಳ ಮೇಲೆ ಗಮನಹರಿಸುತ್ತಾರೆ. ಉದಾಹರಣೆಗೆ, ಹೆಂಡತಿ ತನ್ನಲ್ಲಿರುವ ಒಂದು ಕೌಶಲವನ್ನು ಕುಟುಂಬದ ಒಳಿತಿಗಾಗಿ ಬಳಸುತ್ತಾಳೆ. ಗಂಡನು ದೀನನೂ ವಿನೀತನು ಆಗಿರುವಲ್ಲಿ ಹೆಂಡತಿಯಲ್ಲಿರುವ ಆ ಸಾಮರ್ಥ್ಯ ತನ್ನ ಗೌರವ ಕಡಿಮೆ ಮಾಡುತ್ತದೆಂದು ನೆನಸುವುದಿಲ್ಲ. ಬದಲಿಗೆ ಆ ಸಾಮರ್ಥ್ಯವನ್ನು ಇನ್ನೂ ಚೆನ್ನಾಗಿ ಉಪಯೋಗಿಸುವಂತೆ ಪ್ರೋತ್ಸಾಹಿಸುತ್ತಾನೆ. ಹೀಗೆ ಪತ್ನಿ ತನಗೆ ಅಮೂಲ್ಯಳು, ಪ್ರೀತಿಪಾತ್ರಳು ಎಂದು ತೋರಿಸುತ್ತಾನೆ. (ಜ್ಞಾನೋ. 31:10, 28; ಎಫೆ. 5:28, 29) ಹಾಗೆಯೇ ದೀನ, ವಿನೀತ ಪತ್ನಿ ತನ್ನ ಸಾಮರ್ಥ್ಯದ ಪ್ರದರ್ಶನ ಮಾಡುತ್ತಾ ಗಂಡನನ್ನು ಕೀಳಾಗಿ ನೋಡುವುದಿಲ್ಲ. ಅವರಿಬ್ಬರೂ “ಒಂದೇ ಶರೀರ” ತಾನೇ? ಒಬ್ಬರಿಗೆ ನೋವಾದರೆ ಇನ್ನೊಬ್ಬರಿಗೂ ನೋವಾಗುತ್ತದೆ.—ಮತ್ತಾ. 19:4, 5.

17. ವಿವಾಹ ಜೀವನ ಆನಂದಭರಿತವಾಗಲು ಹಾಗೂ ಯೆಹೋವ ದೇವರಿಗೆ ಸ್ತುತಿ ತರುವಂತಿರಲು ಏನು ಮಾಡಬೇಕು?

17 ಅಬ್ರಹಾಮ-ಸಾರ, ಇಸಾಕ-ರೆಬೆಕ್ಕರ ವಿವಾಹ ಜೀವನದಂತೆ ನಿಮ್ಮ ದಾಂಪತ್ಯವೂ ಸಂತೋಷಭರಿತ, ಚಿರಕಾಲ ಬಾಳುವ, ಯೆಹೋವ ದೇವರಿಗೆ ಸ್ತುತಿ ತರುವ ಬಾಂಧವ್ಯವಾಗಬೇಕು ಎಂಬುದೇ ನಿಮ್ಮ ಬಯಕೆಯಲ್ಲವೇ? ಹಾಗಿದ್ದಲ್ಲಿ ವಿವಾಹದ ಬಗ್ಗೆ ದೇವರಿಗಿರುವ ನೋಟವನ್ನು ನಿಮ್ಮದ್ದಾಗಿಸಿ. ದೇವರ ವಾಕ್ಯದಿಂದ ಒಳನೋಟ, ವಿವೇಕ ಪಡೆಯಿರಿ. ಸಂಗಾತಿಯ ಕುರಿತು ಗಣ್ಯತಾಭಾವದಿಂದ ಆಲೋಚಿಸಲು ಸಮಯ ಮಾಡಿಕೊಳ್ಳಿ. ನಿಜ ಪ್ರೀತಿ ತೋರಿಸಿ. (ಪರಮ. 8:6) ದೀನತೆ ತೋರಿಸಲು ಶ್ರಮಿಸಿ. ನಿಮ್ಮ ಸಂಗಾತಿಯನ್ನು ಗೌರವಿಸಿ. ಹೀಗೆ ಮಾಡುವಲ್ಲಿ, ವಿವಾಹಜೀವನದಲ್ಲಿ ಆನಂದಿಸುವಿರಿ. ಯೆಹೋವ ದೇವರನ್ನೂ ಸಂತೋಷಪಡಿಸುವಿರಿ. (ಜ್ಞಾನೋ. 27:11) ಮದುವೆಯಾಗಿ 27 ವರ್ಷವಾಗಿರುವ ಈ ಪತಿಯ ಭಾವನೆಗಳೇ ನಿಮ್ಮ ಭಾವನೆಗಳಾಗಿರುವವು: “ನನ್ನ ಹೆಂಡತಿ ಇಲ್ಲದ ಬದುಕನ್ನು ಊಹಿಸಲೂ ನನ್ನಿಂದ ಸಾಧ್ಯವಿಲ್ಲ. ದಿನದಿನಕ್ಕೆ ನಮ್ಮ ಪ್ರೀತಿ ಗಾಢಗೊಳ್ಳುತ್ತಿದೆ. ಇದಕ್ಕೆ ಕಾರಣ ಯೆಹೋವ ದೇವರ ಮೇಲೆ ನಮಗಿರುವ ಪ್ರೀತಿ ಹಾಗೂ ಪರಸ್ಪರರೊಂದಿಗೆ ಮಾತಾಡಲು ಸಮಯಮಾಡಿಕೊಳ್ಳುವುದೇ.”

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರ]

[ಪುಟ 16ರಲ್ಲಿರುವ ಚಿತ್ರಗಳು]

ಚಿಕ್ಕಪುಟ್ಟ ವಿಷಯಗಳೂ ನಿಮ್ಮ ಬಂಧವನ್ನು ಆಪ್ತಗೊಳಿಸುತ್ತವೆ

[ಪುಟ 17ರಲ್ಲಿರುವ ಚಿತ್ರ]

ಸಂವಹನ ನಿಮ್ಮ ವಿವಾಹ ಜೀವನದ ಜೀವಾಳವಾಗಿರಲಿ