ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರ-ಮಕ್ಕಳ ನಡುವೆ ಪ್ರೀತಿಯ ಸಂವಹನ ಸೇತುವೆ

ಹೆತ್ತವರ-ಮಕ್ಕಳ ನಡುವೆ ಪ್ರೀತಿಯ ಸಂವಹನ ಸೇತುವೆ

ಹೆತ್ತವರ-ಮಕ್ಕಳ ನಡುವೆ ಪ್ರೀತಿಯ ಸಂವಹನ ಸೇತುವೆ

“ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.”—ಯಾಕೋ. 1:19.

ಉತ್ತರ ಕೊಡುವಿರಾ?

ಪರಸ್ಪರ ಸಂವಹನಕ್ಕಾಗಿ ಸಮಯ ಮಾಡಿಕೊಳ್ಳಬೇಕು ಏಕೆ?

ಹೆತ್ತವರು ಯಾಕೋಬ 1:19ನ್ನು ಅನ್ವಯಿಸಿಕೊಳ್ಳುವುದು ಹೇಗೆ?

ಯಾಕೋಬ 1:19ನ್ನು ಮಕ್ಕಳು ಅನ್ವಯಿಸಿಕೊಳ್ಳುವುದು ಹೇಗೆ?

1, 2. (1) ಹೆತ್ತವರ ಮತ್ತು ಮಕ್ಕಳ ನಡುವೆ ಯಾವ ಭಾವ ಇರುತ್ತದೆ? (2) ಆದರೆ ಕೆಲವೊಮ್ಮೆ ಯಾವುದು ಅವರಿಗೆ ಕಷ್ಟವಾಗುತ್ತದೆ?

“ನಿಮ್ಮ ಅಪ್ಪಅಮ್ಮ ನಾಳೆನೇ ಸಾಯ್ತಾರೆ ಅಂತ ನಿಮಗೆ ಹೇಗೋ ಗೊತ್ತಾದರೆ ನೀವು ಅವರಿಗೆ ಕೊನೇದಾಗಿ ಏನು ಹೇಳಲು ಬಯಸ್ತೀರಾ?” ಈ ಪ್ರಶ್ನೆಯನ್ನು ಅಮೆರಿಕದ ನೂರಾರು ಮಕ್ಕಳಿಗೆ ಕೇಳಲಾಯಿತು. ಆ ಮಕ್ಕಳ ಕುಟುಂಬಗಳಲ್ಲಿ ಯಾವುದೇ ಸಮಸ್ಯೆಯಿದ್ದಿರಲಿ, ಅಪ್ಪಅಮ್ಮನ ಮೇಲೆ ಕೋಪವೇ ಇದ್ದಿರಲಿ 95 ಪ್ರತಿಶತ ಮಕ್ಕಳು, ‘ನಾವು ಅವರ ಹತ್ತಿರ “ನನ್ನನ್ನ ಕ್ಷಮಿಸಿ” “ನಾನು ನಿಮ್ಮನ್ನ ತುಂಬ ಪ್ರೀತಿಸ್ತೇನೆ” ಎಂದು ಹೇಳುತ್ತೇವೆ’ ಎಂದರು.—ಹೆತ್ತವರಿಗಾಗಿ ಮಾತ್ರ ಎಂಬ ಪುಸ್ತಕ.

2 ಮಕ್ಕಳು ಹೆತ್ತವರನ್ನು ಪ್ರೀತಿಸುತ್ತಾರೆ. ಹೆತ್ತವರು ಸಹ ಮಕ್ಕಳನ್ನು ಪ್ರೀತಿಸುತ್ತಾರೆ. ಸಾಕ್ಷಿ ಕುಟುಂಬಗಳಲ್ಲಂತೂ ಇದು ಹೆಚ್ಚೇ ಎನ್ನಬಹುದು. ಹೆತ್ತವರು-ಮಕ್ಕಳು ಯಾವಾಗಲೂ ಆಪ್ತರಾಗಿರಲು ಹಂಬಲಿಸುತ್ತಾರೆ. ಆದರೆ ಏಕೋ ಕೆಲವೊಮ್ಮೆ ಅವರ ಮಧ್ಯೆ ಸಂವಹನ ಸುಗಮವಾಗಿ ಸಾಗುವುದಿಲ್ಲ. ಮುಚ್ಚುಮರೆಯಿಲ್ಲದೆ ಅವರು ಮಾತಾಡುವುದಾದರೂ ಕೆಲವೊಂದು ವಿಷಯಗಳ ಬಗ್ಗೆ ಮುಕ್ತವಾಗಿ ಮಾತಾಡಲು ಅವರಿಗೆ ಕಷ್ಟವೆನಿಸುತ್ತದೆ. ಹಾಗೇಕೆ? ಒಳ್ಳೇ ಸಂವಹನಕ್ಕೆ ಯಾವ ಅಡ್ಡಿಗಳಿವೆ? ಅವುಗಳನ್ನು ದಾಟುವುದು ಹೇಗೆ?

ಸಂವಹನಕ್ಕೆ ಸಮಯ “ಖರೀದಿಸಿ”

3. (1) ನಮ್ಮ ಕಾಲದಲ್ಲಿ ಅನೇಕರಿಗೆ ಸಂವಹನ ಮಾಡುವುದು ಕಷ್ಟವಾಗಿಬಿಟ್ಟಿದೆ ಏಕೆ? (2) ಇಸ್ರಾಯೇಲ್‌ ಜನಾಂಗದಲ್ಲಿದ್ದ ಕುಟುಂಬಗಳಿಗೆ ಒಟ್ಟಿಗೆ ಸಮಯಕಳೆಯಲು ಕಷ್ಟವಾಗುತ್ತಿರಲಿಲ್ಲ ಏಕೆ?

3 ಅನೇಕ ಕುಟುಂಬಗಳಲ್ಲಿ ಒಬ್ಬರೊಂದಿಗೊಬ್ಬರು ಮಾತಾಡಲು ಸಮಯ ಸಿಗುವುದೇ ಕಷ್ಟವಾಗಿಬಿಟ್ಟಿದೆ. ಮುಂಚೆ ಹೀಗಿರಲಿಲ್ಲ. ಮೋಶೆ ಇಸ್ರಾಯೇಲ್ಯರಿಗೆ, “[ದೇವರ ಮಾತುಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು” ಎಂದು ಹೇಳಿದ್ದರು. (ಧರ್ಮೋ. 6:6, 7) ಆ ಸಮಯದಲ್ಲಿ ಮಕ್ಕಳು ಮನೆಯಲ್ಲಾದರೆ ತಾಯಿಯೊಂದಿಗೆ ಅಥವಾ ಹೊಲದಲ್ಲಿ, ಕೆಲಸದ ಸ್ಥಳದಲ್ಲಾದರೆ ತಂದೆಯೊಂದಿಗೆ ಕಾಲಕಳೆಯುತ್ತಿದ್ದರು. ಹೀಗಾಗಿ ಅಪ್ಪಅಮ್ಮ-ಮಕ್ಕಳು ಹೆಚ್ಚಾಗಿ ಒಟ್ಟಿಗಿರುತ್ತಿದ್ದರು, ಮಾತಾಡುತ್ತಿದ್ದರು. ಹೀಗೆ ಹೆತ್ತವರಿಗೆ ಮಕ್ಕಳ ಅಗತ್ಯ, ಆಸೆ, ಅವರ ಗುಣಗಳ ಒಳ್ಳೇ ಪರಿಚಯವಾಗುತ್ತಿತ್ತು. ಮಕ್ಕಳಿಗೂ ತಂದೆತಾಯಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಆಗುತ್ತಿತ್ತು.

4. ಇಂದಿನ ಅನೇಕ ಕುಟುಂಬಗಳಲ್ಲಿ ಸಂವಹನಕ್ಕೆ ಅವಕಾಶವಿರುವುದಿಲ್ಲ ಏಕೆ?

4 ಆದರೆ ಈಗಿನ ಹೊಸ ಜೀವನಶೈಲಿಯಲ್ಲಿ ಎಲ್ಲ ಬುಡಮೇಲಾಗಿದೆ. ಮಕ್ಕಳನ್ನು ತುಂಬ ಎಳೆಯ ಪ್ರಾಯದಲ್ಲೇ ನರ್ಸರಿ ಎಂದೆಲ್ಲ ಕಳುಹಿಸುತ್ತಾರೆ. ಕೆಲವರಂತೂ ಮಗು 2 ವರ್ಷ ಇರುವಾಗಲೇ ಶುರುಮಾಡುತ್ತಾರೆ. ಅಪ್ಪಅಮ್ಮ ಹಗಲಿಡೀ ಹೊರಗಡೆ ದುಡಿಯುತ್ತಾರೆ. ಮನೆಗೆ ಬಂದ ಮೇಲೆ ಒಟ್ಟಿಗೆ ಮಾತಾಡಲು ಸಿಗುವ ಅಲ್ಪಸ್ವಲ್ಪ ಸಮಯವನ್ನೂ ಕಂಪ್ಯೂಟರ್‌, ಟಿವಿ, ಮೊಬೈಲ್‌ಗಳು ಕಸಿದುಕೊಳ್ಳುತ್ತವೆ. ಹೀಗೆ ಹೆತ್ತವರ-ಮಕ್ಕಳ ಸಂವಹನಕ್ಕೆ ಅವಕಾಶವೇ ಇರುವುದಿಲ್ಲ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಜೀವಿಸುತ್ತಾರೆ.

5, 6. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲಿಕ್ಕಾಗಿ ಕೆಲವು ಹೆತ್ತವರು ಹೇಗೆ ಸಮಯ ‘ಖರೀದಿಸಿದ್ದಾರೆ’?

5 ಬೇರೆ ವಿಷಯಗಳಿಂದ ಸ್ವಲ್ಪ ಸಮಯವನ್ನು “ಖರೀದಿಸಿ” ನಿಮ್ಮ ಕುಟುಂಬಕ್ಕಾಗಿ ಬಳಸಬಹುದಲ್ಲವೇ? (ಎಫೆಸ 5:15, 16 ಓದಿ.) ಕೆಲವರು ಟಿವಿ ಕಂಪ್ಯೂಟರ್‌ ಮುಂದೆ ಕೂರುವುದನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಇನ್ನು ಕೆಲವರು ಒಂದು ಊಟವನ್ನಾದರೂ ಕುಟುಂಬವಾಗಿ ಒಟ್ಟಾಗಿ ಮಾಡಲು ಪ್ರಯತ್ನಿಸುತ್ತಾರೆ. ಕುಟುಂಬ ಆರಾಧನೆಯ ಏರ್ಪಾಡಂತೂ ನಮಗೆ ಒಳ್ಳೇ ಅವಕಾಶ ಕೊಡುತ್ತದೆ. ಆಧ್ಯಾತ್ಮಿಕ ವಿಷಯಗಳನ್ನು ಕುಟುಂಬವಾಗಿ ಚರ್ಚಿಸುತ್ತಾ ಹೆತ್ತವರು ಮಕ್ಕಳು ಆಪ್ತರಾಗಲು ಅದು ಒಳ್ಳೇ ಸಹಾಯಕ. ಹೀಗೆ ಆರಾಧನೆಗಾಗಿ ವಾರಕ್ಕೆ ಒಂದು ತಾಸಿನಷ್ಟು ಸಮಯವನ್ನು ಕುಟುಂಬವಾಗಿ ಕಳೆಯುವುದು ಒಳ್ಳೇದೇ. ಆದರೆ ಹೃದಯದಾಳದ ಮಾತುಕತೆಗೆ ಇಷ್ಟೇ ಸಾಕಾಗುವುದಿಲ್ಲ. ಇದಕ್ಕಾಗಿ ನೀವು ಆಗಾಗ್ಗೆ ಮಾತಾಡುತ್ತಲೇ ಇರಬೇಕು. ಉದಾಹರಣೆಗೆ, ಮಗು ಶಾಲೆಗೆ ಹೊರಡುವ ಮುನ್ನ ಪ್ರೋತ್ಸಾಹದ ಮಾತುಗಳನ್ನು ಹೇಳಿ, ದಿನದ ವಚನವನ್ನು ಚರ್ಚಿಸಿ ಅಥವಾ ಪ್ರಾರ್ಥನೆ ಮಾಡಿ ಕಳುಹಿಸಬಹುದು. ಆ ದಿನ ನಿಮ್ಮ ಮಗು ಎಷ್ಟು ಖುಷಿಯಾಗಿರುತ್ತದೆ ಎಂದು ನೀವೇ ನೋಡಿ!

6 ಕೆಲವು ಹೆತ್ತವರು ಮಕ್ಕಳಿಗೆ ಸಮಯ ಕೊಡಲಿಕ್ಕಾಗಿ ಜೀವನಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಒಂದು ಉದಾಹರಣೆ ಗಮನಿಸಿ. ಲತಾ * ಇಬ್ಬರು ಮಕ್ಕಳ ತಾಯಿ. ಅವರು ಮಕ್ಕಳಿಗೋಸ್ಕರ ಕೆಲಸವನ್ನು ಬಿಟ್ಟರು. ಅವರು ಹೇಳುತ್ತಾರೆ: “ಬೆಳಿಗ್ಗೆ ಎಲ್ಲರೂ ಕೆಲಸ, ಶಾಲೆ ಎಂದು ಓಡುತ್ತಿದ್ದೆವು. ಕೆಲಸದಿಂದ ಮನೆಗೆ ತಲಪುವ ಹೊತ್ತಿಗೆ ದಾದಿ ಮಕ್ಕಳನ್ನು ಮಲಗಿಸಿರುತ್ತಿದ್ದರು. ನಾನು ಮಕ್ಕಳೊಟ್ಟಿಗೆ ಸಮಯಾನೇ ಕಳೆಯುತ್ತಿರಲಿಲ್ಲ. ನಾನು ಕೆಲಸ ಬಿಟ್ಟದ್ದರಿಂದ ಕಡಿಮೆ ಹಣದಲ್ಲಿ ಜೀವನ ಸಾಗಿಸಬೇಕಾಗಿದೆ. ಆದರೂ ಈಗ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಆಗುತ್ತಿದೆ. ಅವರ ಯೋಚನೆಗಳು, ಸಮಸ್ಯೆಗಳು ನನಗೆ ತಿಳಿದಿವೆ. ಪ್ರಾರ್ಥನೆಯಲ್ಲಿ ಅವರು ಏನು ಹೇಳುತ್ತಾರೆ ಎಂದು ಕೇಳಲು ನನಗೆ ಸಮಯವಿದೆ. ಅವರನ್ನು ಮಾರ್ಗದರ್ಶಿಸುತ್ತೇನೆ. ಪ್ರೋತ್ಸಾಹಿಸುತ್ತೇನೆ. ಕಲಿಸುತ್ತೇನೆ.”

‘ಕಿವಿಗೊಡುವುದರಲ್ಲಿ ಶೀಘ್ರರಾಗಿರಿ’

7. ಮಕ್ಕಳು ಮತ್ತು ಹೆತ್ತವರ ದೂರೇನು?

7 ಹೆತ್ತವರಿಗಾಗಿ ಮಾತ್ರ ಎಂಬ ಪುಸ್ತಕದ ಲೇಖಕರು ಅನೇಕ ಯುವ ಜನರನ್ನು ಇಂಟರ್‌ವ್ಯೂ ಮಾಡಿದಾಗ ಸಂವಹನಕ್ಕೆ ಅಡ್ಡಿಯಾಗುವ ಇನ್ನೊಂದು ವಿಷಯ ತಿಳಿದುಬಂತು. “ಹೆಚ್ಚಿನ ಯುವ ಜನರು ‘ನಾವು ಮಾತಾಡುವಾಗ ಅಪ್ಪಅಮ್ಮ ಕೇಳಿಸಿಕೊಳ್ಳುವುದಿಲ್ಲ’ ಎಂದು ದೂರಿದರು.” ಅಪ್ಪಅಮ್ಮಂದಿರೂ ಮಕ್ಕಳ ಬಗ್ಗೆ ಇದನ್ನೇ ಹೇಳುತ್ತಾರೆ. ಆದ್ದರಿಂದ ಕುಟುಂಬದಲ್ಲಿ ಮುಕ್ತ ಸಂವಹನ ಇರಬೇಕಾದರೆ ಕಿವಿಗೊಡುವ ಅಭ್ಯಾಸವನ್ನು ಎಲ್ಲರೂ ಮಾಡಿಕೊಳ್ಳಬೇಕು. ಒಟ್ಟಾರೆಯಲ್ಲ, ಸರಿಯಾಗಿ ಕಿವಿಗೊಡಬೇಕು.ಯಾಕೋಬ 1:19 ಓದಿ.

8. ಮಕ್ಕಳು ಮಾತನಾಡುವಾಗ ಹೆತ್ತವರು ಕಿವಿಗೊಡುವುದು ಹೇಗೆ?

8 ಹೆತ್ತವರೇ, ಮಕ್ಕಳು ಏನನ್ನಾದರೂ ಹೇಳುತ್ತಿರುವಾಗ ಆಲಿಸುತ್ತೀರಾ? ನೀವು ದಣಿದಿರುವಾಗ ಅಥವಾ ಮಕ್ಕಳು ಹೇಳುವ ವಿಷಯ ಅಷ್ಟೇನು ಪ್ರಾಮುಖ್ಯ ಅಲ್ಲ ಎಂದು ಅನಿಸುವಾಗ ನೀವು ಗಮನಕೊಡದೇ ಇರಬಹುದು. ಆದರೆ ನಿಮಗೆ ಪ್ರಾಮುಖ್ಯವಲ್ಲ ಎಂದನಿಸಿದ ವಿಷಯ ಮಕ್ಕಳಿಗೆ ತುಂಬ ಪ್ರಾಮುಖ್ಯವಾಗಿರಬಹುದು. ‘ಕಿವಿಗೊಡುವುದರಲ್ಲಿ ಶೀಘ್ರರಾಗಿರುವುದು’ ಎಂದರೆ ಅವರು ಹೇಳುವ ವಿಷಯವನ್ನು ಆಲಿಸುವುದು ಮಾತ್ರವಲ್ಲ ಅವರದನ್ನು ಹೇಳುವ ರೀತಿಗೂ ಗಮನಕೊಡಬೇಕು. ಏಕೆಂದರೆ ಆ ವಿಷಯದ ಬಗ್ಗೆ ನಿಮ್ಮ ಮಗ/ಮಗಳಿಗೆ ಹೇಗನಿಸುತ್ತಿದೆ ಎನ್ನುವುದು ಅವರ ಮಾತಿನ ಶೈಲಿ ಮತ್ತು ದೇಹಭಾಷೆಯಿಂದ ತಿಳಿದುಬರುತ್ತದೆ. ಪ್ರಶ್ನೆಗಳನ್ನು ಕೇಳುವುದು ಸಹ ಅಷ್ಟೇ ಮುಖ್ಯ. ಬೈಬಲ್‌ ಹೇಳುತ್ತೆ: “ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.” (ಜ್ಞಾನೋ. 20:5) ಹೌದು, ಕೆಲವು ಸೂಕ್ಷ್ಮ ವಿಷಯಗಳ ಕುರಿತು ಮಕ್ಕಳ ಮನಸ್ಸಿನಲ್ಲಿರುವುದನ್ನು ಹೊರತರಬೇಕಾದರೆ ಒಳನೋಟ ಮತ್ತು ವಿವೇಚನೆ ನಿಮ್ಮಲ್ಲಿರಬೇಕು.

9. ಮಕ್ಕಳು ಹೆತ್ತವರ ಮಾತನ್ನು ಏಕೆ ಕೇಳಬೇಕು?

9 ಮಕ್ಕಳೇ, ನೀವು ಹೆತ್ತವರ ಮಾತನ್ನು ಕೇಳುತ್ತೀರಾ? “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ” ಎನ್ನುತ್ತದೆ ಬೈಬಲ್‌. (ಜ್ಞಾನೋ. 1:8) ಅಪ್ಪಅಮ್ಮ ನಿಮ್ಮನ್ನು ತುಂಬ ಪ್ರೀತಿಸುತ್ತಾರೆ. ಯಾವಾಗಲೂ ನಿಮ್ಮ ಹಿತವನ್ನೇ ಬಯಸುತ್ತಾರೆ. ಆದ್ದರಿಂದ ಅವರ ಮಾತನ್ನು ಕೇಳಿ ಅದರಂತೆ ನಡೆಯುವುದು ವಿವೇಕಯುತ. (ಎಫೆ. 6:1) ನೀವು ಹೆತ್ತವರೊಂದಿಗೆ ಒಳ್ಳೇ ಸಂವಹನ ಮಾಡುತ್ತಿದ್ದರೆ ಮತ್ತು ನಿಮ್ಮನ್ನವರು ಪ್ರೀತಿಸುತ್ತಾರೆ ಎಂಬುದನ್ನು ಮನಸ್ಸಿನಲ್ಲಿಟ್ಟರೆ ಅವರ ಮಾತನ್ನು ಪಾಲಿಸುವುದು ಸುಲಭವಾಗುತ್ತದೆ. ನಿಮ್ಮ ಅನಿಸಿಕೆಗಳನ್ನು ಅವರಿಗೆ ತಿಳಿಸಿ. ಆಗ ಅವರು ನಿಮ್ಮನ್ನು ಅರ್ಥಮಾಡಿಕೊಳ್ಳಲು ಆಗುತ್ತದೆ. ಅದೇ ವೇಳೆ ನೀವು ಸಹ ಅವರನ್ನು ಅರ್ಥಮಾಡಿಕೊಳ್ಳಬೇಕು.

10. ರೆಹಬ್ಬಾಮನಿಂದ ನಾವು ಯಾವ ಪಾಠ ಕಲಿಯಬಹುದು?

10 ನಿಮಗೆ ಸಲಹೆ ಬೇಕಾದಾಗ ನಿಮ್ಮಷ್ಟೇ ವಯಸ್ಸಿನವರ ಬಳಿ ಹೋಗಲು ಇಷ್ಟಪಡಬಹುದು. ಆದರೆ ಎಚ್ಚರಿಕೆ ವಹಿಸಿ. ಅವರು ನಿಮಗೆ ಇಷ್ಟವಾಗುವ ಸಲಹೆಯನ್ನೇ ಕೊಡಬಹುದು. ಆದರೆ ಆ ಸಲಹೆಯಿಂದ ನಿಮಗೆ ಪ್ರಯೋಜನವೇ ಆಗಲಿಕ್ಕಿಲ್ಲ. ಕೆಲವೊಮ್ಮೆ ಅದನ್ನು ಪಾಲಿಸಲು ಹೋಗಿ ಕಷ್ಟಪಡಬೇಕಾಗಿ ಬರಬಹುದು. ಏಕೆಂದರೆ ನಿಮ್ಮ ಸಮವಯಸ್ಕರಿಗೆ ದೊಡ್ಡವರಿಗಿರುವಷ್ಟು ಅನುಭವ ಇರಲ್ಲ. ಹೆಚ್ಚಾಗಿ ಅವರು, ಇವತ್ತಿನ ಬಗ್ಗೆ ಮಾತ್ರ ಯೋಚಿಸುತ್ತಾರೆ. ಮುಂದೆ ಪರಿಣಾಮ ಏನಾಗುತ್ತದೆ ಎಂದು ಆಲೋಚಿಸುವುದಿಲ್ಲ. ರಾಜ ಸೊಲೊಮೋನನ ಮಗ ರೆಹಬ್ಬಾಮನ ಬಗ್ಗೆ ನಿಮಗೆ ಗೊತ್ತಿರಬಹುದು. ಅವನು ರಾಜನಾದಾಗ ಹಿರಿಯ ವ್ಯಕ್ತಿಗಳ ವಿವೇಕಯುತ ನುಡಿಯನ್ನು ಕೇಳದೆ ತನ್ನೊಂದಿಗೆ ಬೆಳೆದ ಯುವಕರ ಹುಚ್ಚು ಸಲಹೆಗೆ ಕಿವಿಗೊಟ್ಟನು. ಪರಿಣಾಮ ಏನಾಯಿತು ಗೊತ್ತಾ? ತನ್ನ ಪ್ರಜೆಗಳಲ್ಲಿ ಹೆಚ್ಚಿನವರ ಬೆಂಬಲವನ್ನು ಕಳೆದುಕೊಂಡನು. (1 ಅರ. 12:1-17) ನೀವು ರೆಹಬ್ಬಾಮನಂತೆ ಆಗಬೇಡಿ. ನಿಮ್ಮ ಹೆತ್ತವರೊಂದಿಗೆ ಮುಕ್ತವಾಗಿ ಮಾತಾಡಲು ಪ್ರಯತ್ನಿಸಿ. ನಿಮ್ಮ ಮನದಾಳವನ್ನು ಅವರ ಮುಂದೆ ತೆರೆದಿಡಿ. ಆಗ ಅವರಿಂದ ವಿವೇಕದ ಸಲಹೆಯನ್ನು ಪಡೆಯುವಿರಿ. ಪ್ರಯೋಜನ ಹೊಂದುವಿರಿ.—ಜ್ಞಾನೋ. 13:20.

11. ಹೆತ್ತವರಲ್ಲಿ ಸ್ನೇಹಪರತೆ ಇಲ್ಲದಿದ್ದರೆ ಪರಿಣಾಮ ಏನಾಗಬಹುದು?

11 ಹೆತ್ತವರೇ, ಮಕ್ಕಳು ಸಲಹೆಗಾಗಿ ನಿಮ್ಮನ್ನು ಬಿಟ್ಟು ಸಮವಯಸ್ಕರ ಹತ್ತಿರ ಹೋಗಬಾರದಾದರೆ ನೀವು ಸ್ನೇಹಪರರಾಗಿರಬೇಕು. ನಿಮ್ಮ ಹತ್ತಿರ ಮಾತಾಡಲು ಅವರಿಗೆ ಕಷ್ಟವೆನಿಸಬಾರದು. ಹದಿವಯಸ್ಸಿನ ಒಬ್ಬ ಸಹೋದರಿ ಹೇಳುತ್ತಾರೆ: “ನನ್ನ ಬಾಯಿಂದ ಒಬ್ಬ ಹುಡುಗನ ಹೆಸರು ಬಂದರೆ ಸಾಕು ಅಪ್ಪಅಮ್ಮ ಫುಲ್‌ ಟೆನ್ಷನ್‌ ಆಗಿಬಿಡ್ತಾರೆ. ಆಗ ನನಗೆ ಕಿರಿಕಿರಿ ಎನಿಸುತ್ತೆ. ಮುಂದೆ ಮಾತಾಡಲು ಮನಸ್ಸಾಗುವುದಿಲ್ಲ.” ಒಬ್ಬ ಯುವ ಸಹೋದರಿ ಹೀಗೆ ಹೇಳುತ್ತಾರೆ: “ನಿಜ ಹೇಳಬೇಕೆಂದರೆ ಹದಿವಯಸ್ಸಿನಲ್ಲಿರುವ ಹೆಚ್ಚಿನವರಿಗೆ ಹೆತ್ತವರ ಹತ್ತಿರ ಸಲಹೆ ಕೇಳೋದೆಂದರೆ ಇಷ್ಟ. ಆದರೆ ತಾವು ಹೇಳುವುದಕ್ಕೆ ಅಪ್ಪಅಮ್ಮ ಬೆಲೆಕೊಡುತ್ತಿಲ್ಲ ಎಂದನಿಸಿದರೆ ಮುಂದಿನ ಸಾರಿ ಹೇಳಲಿಕ್ಕೇ ಹೋಗಲ್ಲ. ಯಾರು ಅದನ್ನು ಗಂಭೀರವಾಗಿ ತಕ್ಕೊಳ್ಳುತ್ತಾರೋ ಅವರ ಹತ್ತಿರ ಸಲಹೆಗಾಗಿ ಹೋಗ್ತಾರೆ. ಅನುಭವವಿಲ್ಲದವರ ಹತ್ತಿರವೂ ಹೋಗಬಹುದು.” ಹಾಗಾಗಿ ಹೆತ್ತವರೇ, ಮಕ್ಕಳು ಯಾವುದೇ ವಿಷಯದ ಕುರಿತು ಮಾತಾಡಲಿ, ಅನುಕಂಪದಿಂದ ಕಿವಿಗೊಡಿ. ಆಗ ನೋಡಿ, ನಿಮ್ಮ ಮಕ್ಕಳು ಮನಸ್ಸಲ್ಲಿ ಇರುವುದನ್ನೆಲ್ಲ ತಿಳಿಸುತ್ತಾರೆ. ನೀವು ಕೊಡುವ ಸಲಹೆಯನ್ನೂ ಸ್ವೀಕರಿಸುತ್ತಾರೆ.

‘ಮಾತಾಡುವುದರಲ್ಲಿ ದುಡುಕದಿರಿ’

12. ಹೆತ್ತವರು ಪ್ರತಿಕ್ರಿಯಿಸುವ ವಿಧವು ಹೇಗೆ ಸಂವಹನಕ್ಕೆ ಅಡ್ಡಿಯಾಗಬಹುದು?

12 ಸಂವಹನಕ್ಕೆ ಅಡ್ಡಿಯಾಗುವ ಇನ್ನೊಂದು ವಿಷಯವಿದೆ. ಮಕ್ಕಳು ಯಾವುದಾದರೂ ವಿಷಯ ಹೇಳಿದ ಕೂಡಲೆ ಕೆಲವು ಹೆತ್ತವರು ಭಾವುಕರಾಗಿಯೋ ಕೋಪದಿಂದಲೋ ಪ್ರತಿಕ್ರಿಯಿಸುತ್ತಾರೆ. ಅಪಾಯಗಳೇ ತುಂಬಿಕೊಂಡಿರುವ ಈ “ಕಡೇ ದಿವಸಗಳಲ್ಲಿ” ಹೆತ್ತವರು ಮಕ್ಕಳ ಸುರಕ್ಷೆ ಬಗ್ಗೆ ಹೆಚ್ಚು ಚಿಂತಿಸುವುದು ಸಹಜ. ತಮ್ಮ ಮಕ್ಕಳಿಗೆಲ್ಲಿ ಆಧ್ಯಾತ್ಮಿಕವಾಗಿ ಅಥವಾ ಬೇರೆ ಯಾವುದೇ ವಿಧದಲ್ಲಿ ಅಪಾಯವಾಗುತ್ತದೋ ಎಂಬ ಚಿಂತೆ ಅವರನ್ನು ಕಾಡುತ್ತದೆ. (2 ತಿಮೊ. 3:1-5) ಆದರೆ ಹೆತ್ತವರು ಕೊಡುವ ಈ ಸಂರಕ್ಷಣೆ ಕೆಲವೊಮ್ಮೆ ಮಕ್ಕಳಿಗೆ ಅತಿಯೆನಿಸಬಹುದು.

13. ಹೆತ್ತವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ನಿಗಾ ವಹಿಸಬೇಕು ಏಕೆ?

13 ಹಾಗಾಗಿ ಮಕ್ಕಳು ಸಮಸ್ಯೆಯನ್ನು ಹಂಚಿಕೊಳ್ಳುವಾಗ ತಕ್ಷಣ ಪ್ರತಿಕ್ರಿಯಿಸದಿರುವುದು ಒಳ್ಳೇದು. ಇದೇನು ಸುಲಭದ ವಿಷಯವಲ್ಲ ನಿಜ. ‘ಚಿಂತೆಗೀಡುಮಾಡುವ ವಿಷಯವನ್ನ ಮಕ್ಕಳು ಹೇಳುತ್ತಿರುವಾಗ ಸುಮ್ಮನಿರುವುದು ಹೇಗೆ?’ ಎಂದು ನೀವು ಕೇಳಬಹುದು. ಆದರೆ ಹಾಗೆ ಮಾಡುವುದು ತುಂಬ ಪ್ರಾಮುಖ್ಯ. ಏಕೆಂದು ರಾಜ ಸೊಲೊಮೋನ ಹೇಳಿದ್ದಾನೆ: “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.” (ಜ್ಞಾನೋ. 18:13) ನೀವು ಶಾಂತರಾಗಿದ್ದರೆ ಮಕ್ಕಳು ಹೇಳಿದ್ದನ್ನು ಚೆನ್ನಾಗಿ ಕಿವಿಗೊಡಲು ನಿಮಗೆ ಆಗುತ್ತದೆ. ಮಕ್ಕಳೂ ಮನಸ್ಸಿನಲ್ಲಿರುವುದನ್ನು ನಿಮಗೆ ಹೇಳುತ್ತಾರೆ. ಹಾಗಾಗಿ ಅವರಿಗೆ ಸಹಾಯಮಾಡುವ ಮುಂಚೆ ಅವರು ಹೇಳುವುದನ್ನು ಪೂರ್ತಿಯಾಗಿ ಕೇಳಿ. ಯಾರಿಗೆ ಗೊತ್ತು, ಮಕ್ಕಳು ಹೇಳುತ್ತಿರುವ ‘ಆತುರದ ಮಾತುಗಳ’ ಹಿಂದೆ ಮಾನಸಿಕ ತೊಳಲಾಟ ಇರಬಹುದು. (ಯೋಬ 6:1-3) ಪ್ರೀತಿಯ ಹೆತ್ತವರಾಗಿರುವ ನೀವು ಕಿವಿಗೊಟ್ಟು ಕೇಳಿ ಅವರನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಮಾತು ಅವರ ದುಗುಡವನ್ನು ಶಮನಗೊಳಿಸುವಂತಿರಲಿ.

14. ಮಕ್ಕಳು ಮಾತಾಡುವುದರಲ್ಲಿ ದುಡುಕಬಾರದು ಏಕೆ?

14 ಮಕ್ಕಳೇ, ನೀವು ಸಹ ಮಾತಾಡುವುದರಲ್ಲಿ ದುಡುಕಬಾರದು. ಅಪ್ಪಅಮ್ಮ ಹೇಳಿದ್ದಕ್ಕೆಲ್ಲ ತಕ್ಷಣ ಉತ್ತರ ಕೊಡಬಾರದು. ನಿಮ್ಮನ್ನು ಶಿಸ್ತುಗೊಳಿಸುವ ಜವಾಬ್ದಾರಿಯನ್ನು ದೇವರು ಅವರಿಗೆ ಕೊಟ್ಟಿದ್ದಾನೆ. (ಜ್ಞಾನೋ. 22:6) ನಿಮ್ಮ ಪ್ರಾಯವನ್ನು ಅವರೂ ದಾಟಿಬಂದಿದ್ದಾರೆ. ನೀವು ಅನುಭವಿಸುತ್ತಿರುವುದನ್ನೇ ಅವರೂ ಅನುಭವಿಸಿರಬಹುದು. ಅವರು ಯಾವುದಾದರೂ ತಪ್ಪು ಮಾಡಿದ್ದರೆ, ಅದೇ ತಪ್ಪನ್ನು ನೀವು ಮಾಡಬಾರದೆಂಬ ಉದ್ದೇಶದಿಂದ ನಿಮ್ಮನ್ನು ಅಷ್ಟು ಜೋಪಾನ ಮಾಡುತ್ತಾರೆ. ನಿಮ್ಮ ಅಪ್ಪಅಮ್ಮ ನಿಮ್ಮನ್ನು ಆಪತ್ತಿನಿಂದ ಕಾಪಾಡಲು ಬಯಸುತ್ತಾರೆ, ಕಷ್ಟಕ್ಕೆ ನೂಕಲಿಕ್ಕಲ್ಲ. ಹಾಗಾಗಿ ಅವರನ್ನು ಶತ್ರುಗಳಂತಲ್ಲ, ಮಿತ್ರರಾಗಿ ಕಾಣಿರಿ. (ಜ್ಞಾನೋಕ್ತಿ 1:5 ಓದಿ.) ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಿರಿ.’ ಅವರು ನಿಮ್ಮನ್ನು ಪ್ರೀತಿಸುವಂತೆಯೇ ನೀವು ಸಹ ಅವರನ್ನು ಪ್ರೀತಿಸುತ್ತೀರೆಂದು ತೋರಿಸಿ. ಆಗ ನಿಮ್ಮನ್ನು ‘ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸಲು’ ಅವರಿಗೂ ಸುಲಭವಾಗುವುದು.—ಎಫೆ. 6:2, 4.

‘ಕೋಪಿಸುವುದರಲ್ಲಿ ನಿಧಾನಿಗಳಾಗಿರಿ’

15. ನಮ್ಮ ಪ್ರೀತಿಪಾತ್ರರೊಂದಿಗೆ ವ್ಯವಹರಿಸುವಾಗ ತಾಳ್ಮೆಗೆಡದಂತೆ ಹಾಗೂ ನೊಂದುಕೊಳ್ಳದಂತೆ ಯಾವುದು ಸಹಾಯಮಾಡುತ್ತದೆ?

15 ನಮ್ಮ ಪ್ರೀತಿಪಾತ್ರರೊಂದಿಗೆ ವ್ಯವಹರಿಸುವಾಗ ಕೆಲವೊಮ್ಮೆ ತಾಳ್ಮೆ ತೋರಿಸಲು ಕಷ್ಟವಾಗಬಹುದು. ಅಪೊಸ್ತಲ ಪೌಲನು ‘ಕ್ರಿಸ್ತನೊಂದಿಗೆ ಐಕ್ಯದಲ್ಲಿರುವ ಪವಿತ್ರ ಜನರಿಗೂ ನಂಬಿಗಸ್ತರಾದ ಕೊಲೊಸ್ಸೆಯ ಸಹೋದರರಿಗೆ’ ಬರೆದದ್ದೇನಂದರೆ: “ಗಂಡಂದಿರೇ, ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ; ಅವರ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿರಿ. ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.” (ಕೊಲೊ. 1:1, 2; 3:19, 21) ಎಫೆಸದವರಿಗೆ, “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು . . . ನಿಮ್ಮಿಂದ ತೆಗೆದುಹಾಕಿರಿ” ಎಂದು ಬರೆದನು. (ಎಫೆ. 4:31) ಆದ್ದರಿಂದ ನಾವು ದೇವರಾತ್ಮದ ಫಲದ ಅಂಶಗಳಾದ ದೀರ್ಘಸಹನೆ, ಸೌಮ್ಯಭಾವ, ಸ್ವನಿಯಂತ್ರಣ ಎಂಬ ಗುಣಗಳನ್ನು ಬೆಳೆಸಿಕೊಳ್ಳೋಣ. ಆಗ ಒತ್ತಡದ ಕೆಳಗಿದ್ದರೂ ಶಾಂತರಾಗಿರಲು ಸಾಧ್ಯವಾಗುವುದು.—ಗಲಾ. 5:22, 23.

16. (1) ಯೇಸು ತನ್ನ ಶಿಷ್ಯರನ್ನು ಹೇಗೆ ತಿದ್ದಿದನು? (2) ಅದು ಗಮನಾರ್ಹ ವಿಷಯವಾಗಿದೆ ಏಕೆ?

16 ಯೇಸು ಕುರಿತು ಯೋಚಿಸಿ. ತನ್ನ ಭೂಜೀವನದ ಕೊನೇ ರಾತ್ರಿಯಂದು ಆತನು ಅಪೊಸ್ತಲರೊಟ್ಟಿಗೆ ಊಟ ಮಾಡುತ್ತಿದ್ದನು. ಆಗ ಆತನು ತುಂಬ ಒತ್ತಡದ ಕೆಳಗಿದ್ದನು. ಏಕೆಂದರೆ ತಾನು ಇನ್ನು ಕೆಲವೇ ತಾಸುಗಳಲ್ಲಿ, ಕ್ಷಣಕ್ಷಣವೂ ನರಳಿ ಸಾಯಲಿಕ್ಕಿದ್ದೇನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಿತಿಯಲ್ಲಿ ನಂಬಿಗಸ್ತರಾಗಿ ಉಳಿದರೆ ಮಾತ್ರ ತಂದೆಯ ನಾಮ ಪವಿತ್ರೀಕರಿಸಲ್ಪಡುವುದು ಮತ್ತು ಮಾನವಕುಲವು ರಕ್ಷಣೆ ಪಡೆಯುವುದು ಎಂದೂ ತಿಳಿದಿತ್ತು. ಎಂಥ ಭಾರವಾದ ಜವಾಬ್ದಾರಿ ಆತನ ಹೆಗಲ ಮೇಲಿತ್ತಲ್ಲವೆ! ಆಗಲೇ ಅಪೊಸ್ತಲರು “ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ” ತೀಕ್ಷ್ಣ ವಾಗ್ವಾದ ಮಾಡಲಾರಂಭಿಸಿದರು. ಅದನ್ನು ನೋಡಿ ಯೇಸು ಹೇಗೆ ಪ್ರತಿಕ್ರಿಯಿಸಿದನು? ಆತನು ಕಿರಿಚಾಡಲಿಲ್ಲ. ಶಿಷ್ಯರ ಮೇಲೆ ಸಿಟ್ಟು ಕಾರಲಿಲ್ಲ. ಶಾಂತರಾಗಿದ್ದು ವಿಷಯವನ್ನು ಅವರಿಗೆ ಅರ್ಥಮಾಡಿಸಿದನು. ಅದೂ ಅಲ್ಲದೆ, ‘ನನ್ನ ಕಷ್ಟದಲ್ಲಿ ನೀವು ನನ್ನೊಂದಿಗೆ ಯಾವಾಗಲೂ ಇದ್ದೀರಿ’ ಎಂದು ಅವರಿಗೆ ಹೇಳಿದನು. ‘ಸೈತಾನನು ನಿಮ್ಮನ್ನು ಗೋದಿಯಂತೆ ತೂರಲು ಒತ್ತಾಯಿಸುತ್ತಿದ್ದಾನಾದರೂ ನೀವು ನಂಬಿಗಸ್ತರಾಗಿ ಉಳಿಯುವಿರಿ’ ಎಂದು ಹೇಳಿ ಅವರಲ್ಲಿ ಭರವಸೆ ತುಂಬಿದನು. ಅವರೊಂದಿಗೆ ಒಡಂಬಡಿಕೆ ಸಹ ಮಾಡಿಕೊಂಡನು!—ಲೂಕ 22:24-32.

17. ಶಾಂತರಾಗಿರಲು ಮಕ್ಕಳಿಗೆ ಯಾವುದು ಸಹಾಯಮಾಡುತ್ತದೆ?

17 ಮಕ್ಕಳು ಸಹ ಶಾಂತರಾಗಿರುವುದನ್ನು ಕಲಿತುಕೊಳ್ಳಬೇಕು. ಹದಿವಯಸ್ಸಿನಲ್ಲಂತೂ ಅದು ತುಂಬ ಮುಖ್ಯ. ಏಕೆಂದರೆ ಹೆತ್ತವರು ಮಾರ್ಗದರ್ಶನೆ, ಸಲಹೆ ಕೊಟ್ಟರೆ, ‘ಅಪ್ಪಅಮ್ಮನಿಗೆ ನನ್ನ ಮೇಲೆ ನಂಬಿಕೆನೇ ಇಲ್ಲ’ ಎಂದು ಅವರಿಗೆ ಅನಿಸಬಹುದು. ಆದರೆ ಮಕ್ಕಳೇ, ಅದು ನಿಮ್ಮ ಹೆತ್ತವರಿಗೆ ನಿಮ್ಮ ಮೇಲಿರುವ ಪ್ರೀತಿಯ ಪುರಾವೆ ಎನ್ನುವುದನ್ನು ಮನಸ್ಸಿನಲ್ಲಿಡಿ. ಶಾಂತಚಿತ್ತದಿಂದ ಹೆತ್ತವರ ಮಾತು ಕೇಳಿ ಸಹಕರಿಸಿದರೆ ಹೆತ್ತವರ ಗೌರವ ಗಳಿಸುತ್ತೀರಿ. ಜವಾಬ್ದಾರಿಯಿಂದ ವರ್ತಿಸುವವರು ಎಂಬ ಹೆಗ್ಗಳಿಕೆ ಪಡೆಯುತ್ತೀರಿ. ಆಗ ಅಪ್ಪಅಮ್ಮ ನಿಮಗೆ ಹೆಚ್ಚು ಸ್ವಾತಂತ್ರ್ಯ ಕೊಡಬಹುದು. ಹೀಗೆ ಸ್ವನಿಯಂತ್ರಣ ತೋರಿಸುವುದು ವಿವೇಕದ ಸಂಗತಿ. “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು” ಎನ್ನುತ್ತದೆ ಒಂದು ನುಡಿಮುತ್ತು.—ಜ್ಞಾನೋ. 29:11.

18. ಸಂವಹನಕ್ಕೆ ಪ್ರೀತಿ ಉರುವಲಾಗಿದೆ ಹೇಗೆ?

18 ಪ್ರಿಯ ಹೆತ್ತವರೇ, ಮಕ್ಕಳೇ, ಒಂದುವೇಳೆ ನಿಮ್ಮ ಮಧ್ಯೆ ಸಂವಹನ ನೀವು ನೆನಸಿದಷ್ಟು ಸರಾಗವಾಗಿ ಇರದಿದ್ದರೆ ನಿರಾಶರಾಗಬೇಡಿ. ಅದನ್ನು ಉತ್ತಮಗೊಳಿಸುವತ್ತ ಪ್ರಯತ್ನ ಮಾಡುತ್ತಲೇ ಇರಿ. ಸತ್ಯದಲ್ಲಿ ನಡೆಯುತ್ತಾ ಇರಿ. (3 ಯೋಹಾ. 4) ಹೊಸ ಲೋಕದಲ್ಲಿ ನಾವೆಲ್ಲರೂ ಪರಿಪೂರ್ಣರಾಗಿರುವೆವು. ಆಗ ಅಪಾರ್ಥಗಳೂ ಆಗುವುದಿಲ್ಲ, ಜಗಳ-ಸಂಘರ್ಷಗಳೂ ಇರುವುದಿಲ್ಲ. ಆದರೆ ಈಗ ನಾವು ತಪ್ಪುಮಾಡಿ ಪರಿತಪಿಸುವುದು ಇದ್ದೇ ಇದೆ. ಹಾಗೆ ಆದಾಗ ಕ್ಷಮೆಕೇಳಲು ಹಿಂಜರಿಯಬೇಡಿ. ಇತರರನ್ನು ಕ್ಷಮಿಸಲೂ ಹಿಂದೆಮುಂದೆ ನೋಡಬೇಡಿ. ‘ಪ್ರೀತಿಯಲ್ಲಿ ಹೊಂದಿಕೆಯಿಂದ ಒಟ್ಟಿಗೆ ಕಟ್ಟಲ್ಪಟ್ಟವರಾಗಿರಿ.’ (ಕೊಲೊ. 2:2) ಪ್ರೀತಿಗೆ ತುಂಬ ಶಕ್ತಿಯಿದೆ. ‘ಪ್ರೀತಿಯು ದೀರ್ಘ ಸಹನೆಯುಳ್ಳದ್ದು ದಯೆಯುಳ್ಳದ್ದು ಆಗಿದೆ. ಸಿಟ್ಟುಗೊಳ್ಳುವುದಿಲ್ಲ. ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಎಲ್ಲವನ್ನು ಸಹಿಸಿಕೊಳ್ಳುತ್ತದೆ, ಎಲ್ಲವನ್ನು ನಂಬುತ್ತದೆ, ಎಲ್ಲವನ್ನು ನಿರೀಕ್ಷಿಸುತ್ತದೆ, ಎಲ್ಲವನ್ನು ತಾಳಿಕೊಳ್ಳುತ್ತದೆ.’ (1 ಕೊರಿಂ. 13:4-7) ನಿಮ್ಮ ಪ್ರೀತಿಯನ್ನು ಗಾಢಗೊಳಿಸುತ್ತಾ ಇರಿ. ಇದರಿಂದ ಸರಾಗವಾಗಿ ಸಂವಹನ ಮಾಡಬಲ್ಲಿರಿ. ಆಗ ನಿಮ್ಮ ಕುಟುಂಬದಲ್ಲಿ ಸಂತೋಷದ ಹೊನಲು ಹರಿಯುವುದು. ಯೆಹೋವನಿಗೆ ನೀವು ಸ್ತುತಿ ತರುವಿರಿ.

[ಪಾದಟಿಪ್ಪಣಿ]

^ ಪ್ಯಾರ. 6 ಹೆಸರನ್ನು ಬದಲಾಯಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚಿತ್ರ]

[ಪುಟ 20ರಲ್ಲಿರುವ ಚಿತ್ರ]

ನಿಮ್ಮನ್ನೇ ಪ್ರತ್ಯೇಕಿಸಿಕೊಳ್ಳಬೇಡಿ. ಕುಟುಂಬದಲ್ಲಿನ ಸಂವಹನಕ್ಕೆ ಯಾವುದೂ ಅಡ್ಡಿಯಾಗದಂತೆ ನೋಡಿಕೊಳ್ಳಿ

[ಪುಟ 23ರಲ್ಲಿರುವ ಚಿತ್ರ]

ಮಕ್ಕಳು ಭಾವನೆಗಳನ್ನು ತೋಡಿಕೊಳ್ಳುವಾಗ ಕಿವಿಗೊಡುತ್ತೀರಾ?