ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಅರ್ಥಭರಿತ ಬದುಕಿನ ಗುಟ್ಟು

ನಮ್ಮ ಅರ್ಥಭರಿತ ಬದುಕಿನ ಗುಟ್ಟು

ಜೀವನ ಕಥೆ

ನಮ್ಮ ಅರ್ಥಭರಿತ ಬದುಕಿನ ಗುಟ್ಟು

ಪೆಟ್ರಿಶ ಸ್ಮಿತ್‌ ಹೇಳಿದಂತೆ

ನನ್ನ ಮಗ ಗ್ಯಾರೀ ಹುಟ್ಟಿದ್ದು 1958ರಲ್ಲಿ. ಅವನಿಗೇನೋ ಸಮಸ್ಯೆಯಿದೆ ಎಂದು ಅವನು ಹುಟ್ಟಿದಾಗಲೇ ನನಗನಿಸಿತು. ಕಾಯಿಲೆ ಯಾವುದಂತ ಕಂಡುಹಿಡಿಯಕ್ಕೆ ವೈದ್ಯರು ಹತ್ತು ತಿಂಗಳು ತಗೊಂಡರು. ಇನ್ನೈದು ವರ್ಷಗಳ ನಂತರ ಲಂಡನ್ನಿನ ತಜ್ಞರು ಅವನಿಗೆ ಆ ಕಾಯಿಲೆ ಇದೆಯೆಂದು ಖಚಿತಪಡಿಸಿದರು. ಇದಾಗಿ ಒಂಭತ್ತು ವರ್ಷಗಳ ನಂತರ ಮಗಳು ಲವೀಝ್‌ ಹುಟ್ಟಿದಾಗ ನನಗೆ ಇನ್ನೂ ಆಘಾತವಾಯಿತು. ಏಕೆಂದರೆ ಗ್ಯಾರೀಗಿದ್ದಂಥ ಅದೇ ಲಕ್ಷಣಗಳು ಅವಳಲ್ಲೂ ಇದ್ದವು. ಅವಳ ಕಾಯಿಲೆ ಇನ್ನೂ ಗಂಭೀರವಾಗಿತ್ತು.

“ನಿಮ್ಮ ಇಬ್ಬರು ಮಕ್ಕಳಿಗೂ LMBB ಸಿಂಡ್ರೋಮ್‌ ಇದೆ. * ಆದರೆ ಈ ರೋಗಕ್ಕೆ ಔಷಧಿ ಇಲ್ಲ” ಎಂದು ವೈದ್ಯರು ನನಗೆ ತಗ್ಗುದನಿಯಲ್ಲಿ ಹೇಳಿದರು. ಆನುವಂಶೀಯವಾಗಿ ಬರುವ ಈ ಕಾಯಿಲೆಯ ಬಗ್ಗೆ ಆ ಕಾಲದಲ್ಲಿ ಅಷ್ಟೇನೂ ಮಾಹಿತಿಯಿರಲಿಲ್ಲ. ಇದರ ಗುಣಲಕ್ಷಣಗಳು ಹೀಗಿರುತ್ತವೆ: ದೃಷ್ಟಿ ದೌರ್ಬಲ್ಯ, ಕುರುಡುತನ, ಬೊಜ್ಜು, ಹೆಚ್ಚು ಕೈಬೆರಳು ಅಥವಾ ಕಾಲ್ಬೆರಳುಗಳು, ಕುಂಠಿತ ಬೆಳವಣಿಗೆ, ಮಧುಮೇಹ, ಅಸ್ಥಿಸಂಧಿವಾತ, ಕಿಡ್ನಿ ಸಮಸ್ಯೆಗಳು ಇತ್ಯಾದಿ. ಹಾಗಾಗಿ ನನ್ನ ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ. ಇತ್ತೀಚಿಗಿನ ವರದಿಗನುಸಾರ ಬ್ರಿಟನ್‌ನಲ್ಲಿರುವ 1,25,000 ಮಂದಿಯಲ್ಲಿ ಒಬ್ಬರಿಗೆ ಈ ತೀವ್ರತರದ ಕಾಯಿಲೆಯಿದೆ. ಇನ್ನು ಅನೇಕರಿಗೆ ಇದೇ ಕಾಯಿಲೆ ಇದ್ದರೂ ಅದರ ತೀವ್ರತೆ ಕಡಿಮೆಯಿರುತ್ತದೆ.

ಯೆಹೋವನು ನಮ್ಮ “ಆಶ್ರಯ”ವಾದನು

ನನ್ನ ಮದುವೆಯಾಗಿ ಸ್ವಲ್ಪದರಲ್ಲೇ ಯೆಹೋವನ ಸಾಕ್ಷಿಗಳು ನನ್ನನ್ನು ಭೇಟಿಯಾಗಿದ್ದರು. ಅವರೊಂದಿಗೆ ಮಾತಾಡಿದಾಗ ಸತ್ಯ ನನಗೆ ತಿಳಿದುಬಂತು. ಆದರೆ ನನ್ನ ಪತಿಗೆ ಅದರಲ್ಲಿ ಆಸಕ್ತಿಯೇ ಇರಲಿಲ್ಲ. ಅಷ್ಟೇ ಅಲ್ಲ ಅವರ ಕೆಲಸದ ನಿಮಿತ್ತ ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುತ್ತಿದ್ದದರಿಂದ ಸಭೆಗೆ ಹಾಜರಾಗಲು ನನ್ನಿಂದಾಗುತ್ತಿರಲಿಲ್ಲ. ಆದರೂ ನಾನು ಬೈಬಲ್‌ ಓದುತ್ತಾ ಇದ್ದೆ. ಯೆಹೋವನಲ್ಲಿ ಪ್ರಾರ್ಥಿಸುತ್ತಿದ್ದೆ. “ಯೆಹೋವನು, ಕುಗ್ಗಿಹೋದವರಿಗೆ ಆಶ್ರಯವೂ ಆಪತ್ಕಾಲದಲ್ಲಿ ದುರ್ಗವೂ ಆಗಿರುವನು” ಮತ್ತು ಆತನು ‘ತನ್ನ ಮರೆಹೊಗುವವರನ್ನು ಕೈಬಿಡುವವನಲ್ಲ’ ಎಂದು ಓದುವಾಗೆಲ್ಲ ನನಗೆ ತುಂಬ ಸಾಂತ್ವನ ಸಿಗುತ್ತಿತ್ತು.—ಕೀರ್ತ. 9:9, 10.

ಗ್ಯಾರೀಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಇಂಥವರಿಗೆಂದೇ ಇದ್ದ ಬೋರ್ಡಿಂಗ್‌ ಶಾಲೆಗೆ ಅವನನ್ನು ಸೇರಿಸಲಾಯಿತು. ಅದು ಇಂಗ್ಲೆಂಡಿನ ದಕ್ಷಿಣ ಕರಾವಳಿಯಲ್ಲಿತ್ತು. ಗ್ಯಾರೀ ತನಗೇನಾದರೂ ಸಮಸ್ಯೆಯಿದ್ದಲ್ಲಿ ನನಗೆ ಕರೆಮಾಡಿ ಹೇಳುತ್ತಿದ್ದ. ನಾನು ಬೈಬಲ್‌ ತತ್ವಗಳನ್ನು ವಿವರಿಸುವ ಮೂಲಕ ಅವನಿಗೆ ಸಹಾಯಮಾಡುತ್ತಿದ್ದೆ. ಲವೀಝ್‌ ಹುಟ್ಟಿ ಕೆಲವೇ ವರ್ಷಗಳ ನಂತರ ನಾನೂ ಅಸ್ವಸ್ಥಳಾದೆ. ನರಸಂಬಂಧಿತ ಹಾಗೂ ಸ್ನಾಯು ಮತ್ತು ಸಂದುಗಳಿಗೆ ಸಂಬಂಧಿಸಿದ ಕಾಯಿಲೆಗಳು ನನಗೆ ಬಂದವು. ಗ್ಯಾರೀ 16 ವರ್ಷದವನಾದಾಗ ಬೋರ್ಡಿಂಗ್‌ನಿಂದ ಮನೆಗೆ ಬಂದ. ಅವನ ದೃಷ್ಟಿ ಮಂದವಾಗುತ್ತಾ ಹೋಯಿತು. 1975ರಲ್ಲಿ ಅವನು ಪೂರ್ಣವಾಗಿ ದೃಷ್ಟಿ ಕಳೆದುಕೊಂಡ. 1977ರಲ್ಲಿ ನನ್ನ ಪತಿ ನಮ್ಮನ್ನು ಬಿಟ್ಟುಹೋದರು.

ಗ್ಯಾರೀ ಮನೆಗೆ ಹಿಂದಿರುಗಿದ ಸ್ವಲ್ಪದರಲ್ಲೇ ನಾವು ಒಂದು ಪ್ರೀತಿಭರಿತ ಸಭೆಯ ಭಾಗವಾದೆವು. 1974ರಲ್ಲಿ ನಾನು ದೀಕ್ಷಾಸ್ನಾನಪಡೆದೆ. ಒಬ್ಬ ಹಿರಿಯರು ನಮ್ಮ ಕುಟುಂಬಕ್ಕೆ ನೀಡಿದ ಸಹಾಯಕ್ಕೆ ನಾನು ಯಾವಾಗಲೂ ಆಭಾರಿಯಾಗಿದ್ದೇನೆ. ಆ ಹಿರಿಯರು ಗ್ಯಾರೀಗೆ ಹದಿವಯಸ್ಸಿನಲ್ಲಾಗುವ ದೈಹಿಕ ಬದಲಾವಣೆಗಳ ಕುರಿತು ಅರ್ಥಮಾಡಿಸುವ ಮೂಲಕ ನೆರವಾದರು. ಅನೇಕ ಸಹೋದರ ಸಹೋದರಿಯರು ಮನೆಕೆಲಸದಲ್ಲಿ ನೆರವಾದರು. ನಂತರ ಅವರಲ್ಲೇ ಐದು ಮಂದಿ ಸಹೋದರ ಸಹೋದರಿಯರನ್ನು ಸ್ಥಳೀಯ ಸೇವಾ ಸಂಸ್ಥೆಗಳು ನಮ್ಮ ಸಹಾಯಕ್ಕಾಗಿ ನೇಮಿಸಿದವು. ಅವರಿಗೆ ವೇತನವನ್ನು ಕೊಡುತ್ತಿದ್ದವು. ಯೆಹೋವನಿಂದ ಎಂಥ ಆಶೀರ್ವಾದ ನೋಡಿ!

ಗ್ಯಾರೀ ಆಧ್ಯಾತ್ಮಿಕವಾಗಿ ಒಳ್ಳೇ ಪ್ರಗತಿ ಮಾಡಿ 1982ರಲ್ಲಿ ದೀಕ್ಷಾಸ್ನಾನ ಪಡೆದನು. ಅವನಿಗೆ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಬೇಕೆಂದು ತುಂಬ ಆಸೆಯಿತ್ತು. ಆದ್ದರಿಂದ ನಾನೂ ಅವನೊಟ್ಟಿಗೆ ಸೇವೆ ಮಾಡಲು ನಿರ್ಧರಿಸಿದೆ. ಹೀಗೆ ಇಬ್ಬರೂ ಅನೇಕ ವರ್ಷಗಳ ವರೆಗೆ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಿದೆವು. ನಂತರ ಒಮ್ಮೆ ಸರ್ಕಿಟ್‌ ಮೇಲ್ವಿಚಾರಕರು ಗ್ಯಾರೀಗೆ “ನೀನು ರೆಗ್ಯುಲರ್‌ ಪಯನೀಯರ್‌ ಆಗಬಹುದಲ್ಲ?” ಎಂದು ಹೇಳಿದಾಗ ಅವನಿಗಾದ ಸಂತೋಷ ಅಷ್ಟಿಷ್ಟಲ್ಲ! ಇಂಥ ಮಾತುಗಳೇ ಅವನಿಗೆ ಬೇಕಿತ್ತು. 1990ರಲ್ಲಿ ಅವನು ರೆಗ್ಯುಲರ್‌ ಪಯನೀಯರ್‌ ಆದ.

ಗ್ಯಾರೀಗೆ ಎರಡು ಬಾರಿ ಸೊಂಟದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಒಂದು 1999ರಲ್ಲಿ. ಇನ್ನೊಂದು 2008ರಲ್ಲಿ. ಲವೀಝ್‌ ಸ್ಥಿತಿ ಇದಕ್ಕಿಂತ ಹೆಚ್ಚು ಗಂಭೀರ. ಹುಟ್ಟಿದಾಗಲೇ ಅವಳಿಗೆ ಕಣ್ಣು ಕಾಣುತ್ತಿರಲಿಲ್ಲ. ಅವಳ ಒಂದು ಕಾಲಲ್ಲಿ ಒಂದು ಬೆರಳು ಹೆಚ್ಚಿತ್ತು. ಅದನ್ನು ನೋಡಿದಾಗಲೇ ಇವಳಿಗೂ LMBB ಸಿಂಡ್ರೋಮ್‌ ಇದೆ ಎಂದು ನನಗೆ ಗೊತ್ತಾಗಿತ್ತು. ಪರೀಕ್ಷೆಗಳೆಲ್ಲ ನಡೆದ ನಂತರ ಲವೀಝ್‌ಗೆ ದೇಹದ ಅನೇಕ ಒಳ ಅವಯವಗಳಲ್ಲೂ ಗಂಭೀರ ಸಮಸ್ಯೆಗಳಿವೆ ಎಂದು ತಿಳಿದುಬಂತು. ಇಲ್ಲಿವರೆಗೆ ಅವಳಿಗೆ ಅನೇಕ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಅವಳ ಕಿಡ್ನಿಯನ್ನೇ ಐದು ಸಾರಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಗ್ಯಾರೀಗಿದ್ದಂತೆ ಅವಳಿಗೂ ಮಧುಮೇಹವಿದೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಮಸ್ಯೆಗಳಾಗುವ ಸಾಧ್ಯತೆಯಿರುವುದರಿಂದ ಲವೀಝ್‌ ಸರ್ಜನ್‌ರಿಗೆ, ಅರಿವಳಿಕೆ ತಜ್ಞರಿಗೆ ಹಾಗೂ ಆಸ್ಪತ್ರೆಯ ಅಧಿಕಾರಿಗಳಿಗೆ ತನ್ನ ನಂಬಿಕೆಯ ಬಗ್ಗೆ ವಿವರಿಸುತ್ತಾಳೆ. ರಕ್ತರಹಿತ ವೈದ್ಯಕೀಯ ವಿಧಾನಗಳ ಬಗ್ಗೆ ತನ್ನ ನಿರ್ಣಯವನ್ನು ತಿಳಿಸುತ್ತಾಳೆ. ಹೀಗಾಗಿ ಅವಳನ್ನು ಕಾಳಜಿಯಿಂದ ಆರೈಕೆಮಾಡುವ ಈ ಎಲ್ಲರೊಂದಿಗೆ ಅವಳಿಗೆ ಸೌಹಾರ್ದ ಸಂಬಂಧವಿದೆ.

ಒಂದು ಅರ್ಥಭರಿತ ಜೀವನ

ನಮ್ಮ ಮನೆ ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತದೆ. ಯೆಹೋವನ ಆರಾಧನೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ಎಲ್ಲರೂ ನಿರತರಾಗಿರುತ್ತೇವೆ. ಗ್ಯಾರೀ ಮತ್ತು ಲವೀಝ್‌ಗೆ ಓದಲು ಆಗದ ಕಾರಣ ನಾನೇ ಅವರಿಗೆ ಓದಿಹೇಳುತ್ತಿದ್ದೆ. ಹೀಗೆ ತಾಸುಗಟ್ಟಲೆ ಅದರಲ್ಲೇ ನಿರತಳಾಗಿರುತ್ತಿದ್ದೆ. ಈಗ ಎಲೆಕ್ಟ್ರಾನಿಕ್‌ ಸಾಧನಗಳಿಂದಾಗಿ ಅದು ಇನ್ನೂ ಸುಲಭವಾಗಿದೆ. ಸಿಡಿ, ಡಿವಿಡಿ, www.pr418.com ಯಲ್ಲಿರುವ ರೆಕಾರ್ಡಿಂಗ್‌ಗಳನ್ನು ಒಟ್ಟಿಗೆ ಕೇಳುತ್ತೇವೆ. ಇದರಿಂದಾಗಿ ಪ್ರತಿವಾರ ಬೇರೆ ಬೇರೆ ಸಮಯಗಳಲ್ಲಿ ಬೈಬಲನ್ನು ಅಧ್ಯಯನ ಮಾಡುತ್ತಾ ಆನಂದಿಸುತ್ತೇವೆ. ಮಾತ್ರವಲ್ಲ ಕೂಟಗಳಲ್ಲಿ ಚೆನ್ನಾಗಿ ಉತ್ತರಗಳನ್ನು ಕೊಡಲೂ ಇದು ನೆರವಾಗಿದೆ.

ಗ್ಯಾರೀ ಕೆಲವೊಮ್ಮೆ ಉತ್ತರಗಳನ್ನು ಬಾಯಿಪಾಠ ಮಾಡಿ ಕೊಡುತ್ತಾನೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣವನ್ನು ಟಿಪ್ಪಣಿ ಇಲ್ಲದೆ ಕೊಡುತ್ತಾನೆ. 1995ರಲ್ಲಿ ಅವನನ್ನು ಶುಶ್ರೂಷಾ ಸೇವಕನನ್ನಾಗಿ ನೇಮಿಸಲಾಯಿತು. ರಾಜ್ಯ ಸಭಾಗೃಹದಲ್ಲಿ ಸಹೋದರ ಸಹೋದರಿಯರನ್ನು ಸ್ವಾಗತಿಸುವುದರಲ್ಲಿ ಹಾಗೂ ಸೌಂಡ್‌ ಡಿಪಾರ್ಟ್‌ಮೆಂಟಿನಲ್ಲಿ ಅವನು ಯಾವಾಗಲೂ ನಿರತ.

ಸೇವೆಗೆ ಹೋಗಲು ಗ್ಯಾರೀಗೆ ಸಹೋದರ ಸಹೋದರಿಯರು ಸಹಾಯಮಾಡುತ್ತಾರೆ. ಸಂಧಿವಾತದ ಕಾರಣ ಅವನು ಗಾಲಿಕುರ್ಚಿ ಬಳಸುವುದರಿಂದ ಅನೇಕಬಾರಿ ಅವರದನ್ನು ದೂಡಿಕೊಂಡು ಹೋಗುತ್ತಾರೆ. ಒಂದು ಬೈಬಲ್‌ ಅಧ್ಯಯನ ಮಾಡಲು ಅವನಿಗೆ ಒಬ್ಬ ಸಹೋದರನು ಸಹಾಯಮಾಡಿದನು. 25 ವರ್ಷಗಳಿಂದ ನಿಷ್ಕ್ರಿಯರಾಗಿದ್ದ ಒಬ್ಬ ಸಹೋದರಿಯನ್ನೂ ಗ್ಯಾರೀ ಉತ್ತೇಜಿಸಿದನು. ಈಗ ಆ ಇಬ್ಬರೂ ಕೂಟಗಳಿಗೆ ಹಾಜರಾಗುತ್ತಿದ್ದಾರೆ.

ಲವೀಝ್‌ ಒಂಭತ್ತು ವರ್ಷದವಳಾಗಿದ್ದಾಗ ಅಜ್ಜಿಯಿಂದ ಹೆಣಿಗೆ ಕಲಿತಳು. ನಾನು ಮತ್ತು ಅವಳ ಆರೈಕೆ ಮಾಡುತ್ತಿದ್ದ ಒಬ್ಬಾಕೆ ಅವಳಿಗೆ ಎಂಬ್ರಾಯ್ಡರಿ ಕಲಿಸಿದೆವು. ಹೊಲಿಗೆ ಕೆಲಸವೆಂದರೆ ಅವಳಿಗೆ ತುಂಬ ಇಷ್ಟ. ಹಾಗಾಗಿ ಪುಟಾಣಿ ಕೂಸುಗಳಿಗೆ, ಸಭೆಯಲ್ಲಿರುವ ವೃದ್ಧ ಸಹೋದರ ಸಹೋದರಿಯರಿಗೆ ಬಣ್ಣಬಣ್ಣದ ಹೊದಿಕೆಗಳನ್ನು ಮಾಡಿಕೊಡುತ್ತಾಳೆ. ಚಿಕ್ಕ ಚಿಕ್ಕ ಚಿತ್ರಗಳನ್ನು ಅಂಟಿಸಿ ಕಾರ್ಡ್‌ಗಳನ್ನು ಮಾಡುತ್ತಾಳೆ. ಯಾರಿಗೆ ಈ ಕಾರ್ಡ್‌ಗಳನ್ನು ಕೊಡುತ್ತಾಳೋ ಅವರಿಗದು ಬಹು ಅಮೂಲ್ಯ! ಅವಳು ಹದಿಮೂರು-ಹದಿನಾಲ್ಕು ವಯಸ್ಸಿನವಳಿರುವಾಗ ಟೈಪಿಂಗ್‌ ಕಲಿತಳು. ಮಾತಾಡುವ ಅತ್ಯಾಧುನಿಕ ಕಂಪ್ಯೂಟರ್‌ ಸಹಾಯದಿಂದ ತನ್ನ ಮಿತ್ರವೃಂದಕ್ಕೆ ಇ-ಮೇಲ್‌ ಮಾಡ್ತಾಳೆ. 17 ವರ್ಷದವಳಿದ್ದಾಗ ಲವೀಝ್‌ ದೀಕ್ಷಾಸ್ನಾನ ಪಡೆದಳು. ಸುವಾರ್ತೆ ಸಾರುವ ವಿಶೇಷ ಅಭಿಯಾನಗಳಿದ್ದಾಗ ನಾವಿಬ್ಬರೂ ಒಟ್ಟಿಗೆ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡುತ್ತಾ ಖುಷಿಪಡುತ್ತೇವೆ. ಗ್ಯಾರೀಯಂತೆ ಲವೀಝ್‌ ಕೂಡ ವಚನಗಳನ್ನು ಬಾಯಿಪಾಠ ಮಾಡುತ್ತಾಳೆ. ಹೀಗೆ “ಕುರುಡರ ಕಣ್ಣು ಕಾಣುವ,” “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು” ಹೇಳದ ಹೊಸಲೋಕವನ್ನು ದೇವರು ತರುವನೆಂಬ ತನ್ನ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾಳೆ.—ಯೆಶಾ. 33:24; 35:5.

ಯೆಹೋವನು ತನ್ನ ಪ್ರೇರಿತ ವಾಕ್ಯದ ಮೂಲಕ ಅಮೂಲ್ಯ ಸತ್ಯಗಳನ್ನು ತಿಳಿಯಪಡಿಸಿದ್ದಕ್ಕಾಗಿ ನಾವು ಆಭಾರಿಗಳು! ಸಹೋದರ ಸಹೋದರಿಯರು ಪ್ರೀತಿಯಿಂದ ಕೊಡುವ ಸಹಾಯವನ್ನು ನೆನಸುವಾಗ ಕೃತಜ್ಞತೆಯಿಂದ ನಮ್ಮ ಹೃದಯ ತುಂಬಿಬರುತ್ತದೆ. ಅವರ ಸಹಾಯವಿಲ್ಲದೆ ಹೋಗಿದ್ದರೆ ಈಗ ಮಾಡುತ್ತಿದ್ದದರಲ್ಲಿ ಕಾಲಂಶವನ್ನೂ ನಮ್ಮಿಂದ ಮಾಡಲಾಗುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಒಂದು ಅರ್ಥಭರಿತ ಜೀವನವನ್ನು ನಡೆಸಲು ಸಾಧ್ಯವಾಗಿರುವುದು ಯೆಹೋವ ದೇವರ ಸಹಾಯದಿಂದಲೇ!

[ಪಾದಟಿಪ್ಪಣಿ]

^ ಪ್ಯಾರ. 5 ಈ ಆನುವಂಶೀಯ ಕಾಯಿಲೆಯನ್ನು ಕಂಡುಹಿಡಿದ ನಾಲ್ಕು ವೈದ್ಯರ ಹೆಸರನ್ನೇ ಕಾಯಿಲೆಗೆ ಕೊಡಲಾಗಿದೆ. “ಲಾರನ್ಸ್‌-ಮೂನ್‌-ಬಾರ್ಡೇ-ಬೀಡ್‌ಲ್‌ ಸಿಂಡ್ರೋಮ್‌.” ತಂದೆ, ತಾಯಿ ಇಬ್ಬರಲ್ಲೂ ಈ ರೋಗಕಾರಕ ಜೀನ್‌ ಇದ್ದಾಗ ಅದು ಮಗುವಿಗೆ ಬರುತ್ತದೆ. ಇದನ್ನೀಗ ಬಾರ್ಡೇ-ಬೀಡ್‌ಲ್‌ ಸಿಂಡ್ರೋಮ್‌ ಎಂದು ಕರೆಯುತ್ತಾರೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ.

[ಪುಟ 25ರಲ್ಲಿರುವ ಚಿತ್ರ]

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನು ತನ್ನ ಪ್ರೇರಿತ ವಾಕ್ಯದ ಮೂಲಕ ಅಮೂಲ್ಯ ಸತ್ಯಗಳನ್ನು ತಿಳಿಯಪಡಿಸಿದ್ದಕ್ಕಾಗಿ ನಾವು ಆಭಾರಿ!