ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಜೀವನ ಕಥೆ ಯೆಹೋವನಿಗೆ ವಿಧೇಯತೆ ತಂದಿತು ಆಶೀರ್ವಾದ

ಜೀವನ ಕಥೆ ಯೆಹೋವನಿಗೆ ವಿಧೇಯತೆ ತಂದಿತು ಆಶೀರ್ವಾದ

ನನ್ನ ತಂದೆ ಹೇಳಿದ್ದು ನನಗಿನ್ನೂ ನೆನಪಿದೆ. “ನೋಹನಿಂದ ನಾವು ಎಂಥ ಒಳ್ಳೆ ಪಾಠ ಕಲಿತೆವು ಅಲ್ವ! ನೋಹ ಯೆಹೋವ ದೇವರು ಹೇಳಿದಂತೆ ನಡೆದನು. ಕುಟುಂಬವನ್ನು ಪ್ರೀತಿಯಿಂದ ಪರಾಮರಿಸಿದನು. ಇಡೀ ಪರಿವಾರ ನಾವೆಯಲ್ಲಿ ಹೋಗಿದ್ದರಿಂದ ರಕ್ಷಣೆ ಹೊಂದಿತು.”

ತುಂಬ ಹಳೆ ನೆನಪು. ನಮ್ಮ ತಂದೆ ಸಾಧಾ ವ್ಯಕ್ತಿ. ಶ್ರಮಜೀವಿ. ಅವರಲ್ಲಿದ್ದ ನ್ಯಾಯಪ್ರಜ್ಞೆ 1953ರಲ್ಲಿ ಬೈಬಲ್‌ ಸಂದೇಶವನ್ನು ಸ್ವೀಕರಿಸುವಂತೆ ಮಾಡಿತು. ನಂತರ ಅವರು ಕಲಿತ ವಿಷಯವನ್ನ ಮಕ್ಕಳಿಗೆ ದಾಟಿಸಕ್ಕೆ ತಮ್ಮಿಂದಾದುದೆಲ್ಲವನ್ನು ಮಾಡಿದ್ರು. ಮೊದಮೊದಲು ನಮ್ಮ ತಾಯಿಗೆ ಕ್ಯಾತೊಲಿಕ್‌ ಪದ್ಧತಿಗಳನ್ನು ಬಿಟ್ಟುಬರೋದಕ್ಕೆ ಮನಸ್ಸಿರಲಿಲ್ಲ. ಆದರೆ ಆಮೇಲೆ ಅವರಾಗಿಯೇ ಬೈಬಲ್‌ ಬೋಧನೆಗಳನ್ನು ಅಳವಡಿಸತೊಡಗಿದರು.

ನಮ್ಮೊಟ್ಟಿಗೆ ಬೈಬಲ್‌ ಅಧ್ಯಯನ ಮಾಡಲು ಅಪ್ಪಅಮ್ಮಗೆ ಕಷ್ಟ ಆಗ್ತಿತ್ತು. ಅಮ್ಮಂಗೆ ಓದು ಬರಹ ಇರಲಿಲ್ಲ. ಅಪ್ಪಂಗೆ ಹೊಲದಲ್ಲಿ ದಿನವಿಡೀ ಕೆಲಸ. ಕೆಲವೊಂದು ಸಾರಿ ಅವರಿಗೆಷ್ಟು ಸುಸ್ತಾಗುತಿತ್ತು ಎಂದರೆ ಅಧ್ಯಯನ ಮಾಡುವಾಗ ನಿದ್ದೆ ತಡಿಯಕ್ಕಾಗುತ್ತಿರಲಿಲ್ಲ. ಆದರೂ ಅವರು ಪಟ್ಟ ಕಷ್ಟ ಸಾರ್ಥಕ. ನಮ್ಮ ಮನೇಲಿ ನಾನೇ ದೊಡ್ಡ ಮಗಳಾದ್ದರಿಂದ ತಂಗಿಗೆ ಮತ್ತು ಇಬ್ಬರು ತಮ್ಮಂದಿರಿಗೆ ನಾನೇ ಬೈಬಲ್‌ ಕಲಿಸ್ತಿದ್ದೆ. ಅಪ್ಪ ನನಗೆ ಹೇಳಿಕೊಟ್ಟಿದ್ದನ್ನೆ ಅವರಿಗೆ ಕಲಿಸಿದೆ. ನೋಹನು ತನ್ನ ಕುಟುಂಬದ ಕಡೆಗೆ ತೋರಿಸಿದ ಪ್ರೀತಿ ಬಗ್ಗೆ, ದೇವರ ಮಾತನ್ನು ಕೇಳಿ ನಡೆದಿದ್ದರ ಬಗ್ಗೆ ನಾನವರ ಜತೆ ಮಾತಾಡ್ತಿದ್ದೆ. ನನಗೆ ನೋಹನ ಕಥೆ ಅಂದ್ರೆ ತುಂಬ ಇಷ್ಟ. ಸ್ವಲ್ಪ ಸಮಯ ಆದಮೇಲೆ ನಾವು ಕುಟುಂಬವಾಗಿ ಬೈಬಲ್‌ ಅಧ್ಯಯನ ಶುರುಮಾಡಿದ್ವಿ. ನಂತರ ಇಟಲಿಯ ಆಡ್ರಿಯಾಟಿಕ್‌ ಕೋಸ್ಟ್‌ ನಗರದಲ್ಲಿರುವ ಒಂದು ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗತೊಡಗಿದ್ವಿ.

ಅದು 1955. ನನಗೆ ಆಗ 11 ವಯಸ್ಸು. ನಾನು ಮತ್ತು ಮಮ್ಮಿ ಪಶ್ಚಿಮಕ್ಕಿರುವ ಪರ್ವತ ದಾಟಿ ರೋಮ್‌ನಲ್ಲಿ ನಡೆದ ಅಧಿವೇಶನಕ್ಕೆ ಮೊದಲ ಬಾರಿ ಹಾಜರಾದ್ವಿ. ಆವಾಗಿನಿಂದ ಈಗಿನವರೆಗೂ ಅಂಥ ಒಕ್ಕೂಟಗಳೆಂದರೆ ನನಗೆ ತುಂಬ ಖುಷಿ. ಅದು ಕ್ರೈಸ್ತ ಜೀವನದ ಅವಿಭಾಜ್ಯ ಅಂಗ ಅಂತ ಮಾನ್ಯ ಮಾಡ್ತೀನಿ.

ಅದರ ಮುಂದಿನ ವರ್ಷ ನಾನು ದೀಕ್ಷಾಸ್ನಾನ ಪಡಕೊಂಡೆ. ನಂತರ ಬೇಗನೆ ಪೂರ್ಣಸಮಯದ ಸೇವೆ ಆರಂಭಿಸಿದೆ. ನಾನು 17 ವಯಸ್ಸಿನವಳಾಗಿರುವಾಗ ಲಾಟೀನಾದಲ್ಲಿ ವಿಶೇಷ ಪಯನೀಯರ್‌ ಆಗಿ ನೇಮಕ ಸಿಕ್ಕಿತು. ಈ ನಗರ ಇರೋದು ನಮ್ಮ ಮನೆಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ದಕ್ಷಿಣ ರೋಮ್‌ನಲ್ಲಿ. ಅದು ಹೊಸ ನಗರವಾದದ್ದರಿಂದ ಅಲ್ಲಿನ ಜನರು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸತ್ಯ ಸ್ವೀಕರಿಸುತಿದ್ದರು. ನಾನೂ ನನ್ನ ಜೊತೆ ಪಯನೀಯರ್‌ ತುಂಬ ಬೈಬಲ್‌ ಸಾಹಿತ್ಯವನ್ನು ಹಂಚುವುದರಲ್ಲಿ ಆನಂದಿಸಿದ್ವಿ. ಆದರೂ ನಾನು ಚಿಕ್ಕವಳಾಗಿದ್ದರಿಂದ ಮನೆ ನೆನಪು ತುಂಬ ಬರುತ್ತಿತ್ತು. ಹಾಗಿದ್ರೂ ನನಗೆ ಕೊಟ್ಟ ನೇಮಕಕ್ಕೆ ವಿಧೇಯಳಾಗುವುದೇ ನನ್ನ ಬಯಕೆಯಾಗಿತ್ತು.

1963ನಲ್ಲಿ ಮಿಲಾನ್‌ನಲ್ಲಿ ನಡೆದ “ನಿತ್ಯವಾದ ಸುವಾರ್ತೆ” ಎಂಬ ಅಂತಾರಾಷ್ಟ್ರೀಯ ಸಮ್ಮೇಳನದ ತಯಾರಿಯಲ್ಲಿ ಸಹಾಯ ಮಾಡಲು ನನ್ನನ್ನು ನೇಮಿಸಿದರು. ಈ ಅಧಿವೇಶನದಲ್ಲಿ ನಾನು ಅನೇಕ ಸಹೋದರ ಸಹೋದರಿಯರ ಜತೆ ಸ್ವಯಂಸೇವಕಿಯಾಗಿ ಕೆಲಸ ಮಾಡಿದೆ. ಅವರಲ್ಲಿ ಪೌಲೋ ಪೀಕೋಲೇ ಕೂಡ ಒಬ್ಬರು. ಯುವ ಸಹೋದರರಾದ ಇವರು ಫ್ಲಾರೆನ್ಸ್‌ ನಗರದವರು. ಇವರು ಅಧಿವೇಶನದ ಎರಡನೇ ದಿನ ಅವಿವಾಹಿತರಾಗಿ ಇರುವುದರ ಬಗ್ಗೆ ಹೃದಯಕ್ಕೆ ನಾಟುವಂಥ ಭಾಷಣ ಕೊಟ್ರು. ನನಗಿನ್ನೂ ನೆನಪಿದೆ, ಆ ಭಾಷಣ ಕೇಳಿ ‘ಈ ಸಹೋದರ ಯಾವತ್ತೂ ಮದುವೆ ಆಗಲ್ಲ’ ಅಂತ ಅಂದುಕೊಂಡಿದ್ದೆ. ಸಮಯ ಕಳೆದಂತೆ ನಾವು ಒಬ್ಬರಿಗೊಬ್ಬರು ಪತ್ರ ಬರಿತಿದ್ವಿ. ಆಗ ನನ್ನ ಮತ್ತು ಅವರ ಗುರಿಗಳಲ್ಲಿ, ಅಭಿರುಚಿಗಳಲ್ಲಿ ತುಂಬ ಸಮಾನತೆ ಇದೆ ಅಂತ ಗೊತ್ತಾಯಿತು. ಯೆಹೋವ ದೇವರ ಮೇಲೆ ಪ್ರೀತಿ ಮತ್ತು ಆತನಿಗೆ ವಿಧೇಯರಾಗುವ ಅತೀವ ಬಯಕೆ ನಮ್ಮಿಬ್ಬರಲ್ಲೂ ಇತ್ತು. 1965ರಲ್ಲಿ ನಾವು ಮದುವೆಯಾದೆವು.

ಪಾದ್ರಿಗಳೊಂದಿಗೆ ಮುಖಾಮುಖಿ

ಫ್ಲಾರೆನ್ಸ್‌ನಲ್ಲಿ ಹತ್ತು ವರ್ಷಗಳ ವರೆಗೆ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಿದೆ. ಅಲ್ಲಿನ ಸಭೆಯಲ್ಲಾಗುತ್ತಿದ್ದ ಪ್ರಗತಿ ಅದರಲ್ಲೂ ಯುವಜನರು ಮಾಡುತ್ತಿದ್ದ ಪ್ರಗತಿ ನೋಡಿ ತುಂಬ ಪುಳಕಿತಳಾಗ್ತಿದ್ದೆ. ಪೌಲೋ ಮತ್ತು ನಾನು ಯುವಜನರನ್ನು ಆಧ್ಯಾತ್ಮಿಕವಾಗಿ ಪ್ರೋತ್ಸಾಹಿಸುತ್ತಿದ್ದೆವು ಮತ್ತು ಅವರ ಜತೆ ಮನರಂಜನೆಯಲ್ಲಿ ಸಮಯಕಳೆಯುತ್ತಿದ್ದೆವು. ಪೌಲೋ ಅವರೊಂದಿಗೆ ಫುಟ್‌ಬಾಲ್‌ ಆಡುತ್ತಿದ್ದರು. ನಾನು ಪೌಲೋ ಜೊತೆ ಸಮಯಕಳೆಯಲು ಇಷ್ಟಪಡುತ್ತಿದ್ದೆ ನಿಜ. ಆದರೂ ಸಭೆಯಲ್ಲಿನ ಯುವಜನರಿಗೆ ಅವರ ಸಮಯ, ಸಹಾಯದ ಅಗತ್ಯವಿದೆ ಎನ್ನೋದನ್ನು ಅರ್ಥಮಾಡಿಕೊಂಡಿದ್ದೆ. ಇದರಿಂದ ಯುವಜನರಿಗಾಗುವ ಪ್ರಯೋಜನವನ್ನೂ ಕಣ್ಣಾರೆ ಕಂಡಿದ್ದೇನೆ.

ನಾವು ನಡೆಸಿದ ಅನೇಕ ಬೈಬಲ್‌ ಅಧ್ಯಯನಗಳ ಬಗ್ಗೆ ನೆನೆಸಿದರೆ ಈಗಲೂ ನನ್ನನ್ನು ಹರ್ಷ ಆವರಿಸುತ್ತೆ. ಅವರಲ್ಲಿ ಆಡ್ರಿಯಾನಾ ಒಬ್ಬರು. ಆಕೆ ತನ್ನ ನಂಬಿಕೆಯ ಬಗ್ಗೆ ಎರಡು ಕುಟುಂಬಗಳ ಜತೆ ಮಾತಾಡಿದ್ದರು. ಆ ಕುಟುಂಬದವರೆಲ್ಲ ಪಾದ್ರಿಯ ಜತೆ ಒಂದು ಚರ್ಚೆಯನ್ನು ಏರ್ಪಡಿಸಿದ್ರು. ಅದು ತ್ರಿಯೇಕ ಮತ್ತು ಆತ್ಮದ ಅಮರತ್ವದ ಬಗ್ಗೆ. ಮೂರು ಜನ ಪಾದ್ರಿಗಳು ಬಂದರು. ಬೈಬಲ್‌ನಲ್ಲಿರುವ ವಿಷಯಕ್ಕೂ ಈ ಪಾದ್ರಿಗಳು ಹೇಳುತ್ತಿರುವುದಕ್ಕೂ ಒಂಚೂರು ಸಂಬಂಧ ಇಲ್ಲ ಅಂತ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಬೇಗ ಗ್ರಹಿಸಿದರು. ಆ ಚರ್ಚೆ ನಿಜವಾಗಿಯೂ ಒಂದು ತಿರುಗು ಬಿಂದುವಾಗಿತ್ತು. ಇದರ ಪರಿಣಾಮವಾಗಿ ಆ ಕುಟುಂಬಗಳಿಂದ 15 ಜನ ಸಾಕ್ಷಿಗಳಾದರು.

ಈಗ ಸಾರುವಿಕೆಯ ವಿಧಾನ ಬದಲಾಗಿದೆ. ಆಗ ಪಾದ್ರಿಗಳ ಹತ್ರ ಆಗಿಂದಾಗ್ಗೆ ಹೋಗಿ ಚರ್ಚೆ ನಡೆಸುತ್ತಿದ್ದೆವು. ಪೌಲೋ ಇದರಲ್ಲಿ “ನಿಸ್ಸೀಮರು.” ಅಂಥ ಅನೇಕ ಸಂದರ್ಭಗಳನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಒಂದು ಸಲ ಜನರ ಗುಂಪೊಟ್ಟಿಗೆ ಚರ್ಚೆ ಮಾಡಬೇಕಾಯ್ತು. ವಿಚಿತ್ರ ಪ್ರಶ್ನೆಗಳನ್ನು ಕೇಳುವಂತೆ ಅವರಲ್ಲಿ ಕೆಲವರಿಗೆ ಪಾದ್ರಿಗಳು ಹೇಳಿಕೊಟ್ಟಿದ್ದರು. ಸ್ವಲ್ಪ ಸಮಯದಲ್ಲಿ ಅಲ್ಲಿ ಆದದ್ದೇ ಬೇರೆ. ಆ ಗುಂಪಿನಲ್ಲಿದ್ದ ಒಬ್ಬ ಕೇಳಿದ, ‘ಶತಮಾನಗಳಿಂದ ಚರ್ಚಿನವರು ರಾಜಕೀಯದಲ್ಲಿ ಒಳಗೂಡುತ್ತಿದ್ದಾರಲ್ಲ, ಇದು ಸರಿನಾ?’ ಅಂತ. ಪಾದ್ರಿಗಳಿಗೆ ಸಂಕಟ! ಇದ್ದಕ್ಕಿದ್ದಂತೆ ಕರೆಂಟ್‌ ಹೋಯ್ತು. ಆ ಚರ್ಚೆ ಅಲ್ಲಿಗೇ ಮುಕ್ತಾಯ. ಕೆಲವು ವರ್ಷಗಳಾದ ಮೇಲೆ ನಮಗೆ ಗೊತ್ತಾಯ್ತು ಏನಂದ್ರೆ, ಪಾದ್ರಿಗಳು ಬಯಸಿದ್ದ ಹಾಗೆ ಚರ್ಚೆ ನಡೆಯಲಿಲ್ಲವಾದರೆ ಕರೆಂಟ್‌ ತೆಗೆಯುವಂತೆ ಯಾರಿಗೋ ಹೇಳಿಟ್ಟಿದ್ದರು ಎಂದು.

ಹೊಸ ಸೇವಾ ಅವಕಾಶಗಳು

ನಮ್ಮ ಮದುವೆಯಾಗಿ ಹತ್ತು ವರ್ಷಗಳಾದ ಮೇಲೆ ನಮಗೆ ಸರ್ಕಿಟ್‌ ಕೆಲಸಕ್ಕೆ ಆಮಂತ್ರಣ ಸಿಕ್ಕಿತು. ಪೌಲೋಗೆ ಒಳ್ಳೆ ಕೆಲಸವಿದ್ದದ್ದರಿಂದ ಆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರಾರ್ಥನಾಪೂರ್ವಕವಾಗಿ ಇದನ್ನು ಪರಿಗಣಿಸಿದೆವು ಮತ್ತು ಈ ಸೇವಾ ಅವಕಾಶವನ್ನು ಕೈಗೆತ್ತಿಕೊಂಡೆವು. ಸಂದರ್ಶನದ ಅವಧಿಯಲ್ಲಿ ನಾವು ಯಾರ ಮನೆಗಳಲ್ಲಿ ಉಳಿದುಕೊಂಡೆವೋ ಅವರೊಂದಿಗೆ ತುಂಬ ಸಂತೋಷದಿಂದ ಸಮಯ ಕಳೆದೆವು. ಸಂಜೆಯಾದಾಗ ಎಲ್ಲರೂ ಒಟ್ಟಿಗೆ ಅಧ್ಯಯನ ಮಾಡುತ್ತಿದ್ದೆವು. ಪೌಲೋ ಮಕ್ಕಳಿಗೆ ಹೋಮ್‌ವರ್ಕ್‌ ಮಾಡಲು ಸಹಾಯ ಮಾಡುತ್ತಿದ್ದರು. ಅದರಲ್ಲೂ ಗಣಿತ ಅಂದ್ರೆ ಅವರಿಗೆ ತುಂಬ ಇಷ್ಟ. ಪೌಲೋಗೆ ಓದುವುದೆಂದರೆ ತುಂಬ ಆಸಕ್ತಿ. ಅವರು ಓದಿದಂಥ ಆಸಕ್ತಿಕರ ಮತ್ತು ಉತ್ತೇಜನ ನೀಡುವ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಸೋಮವಾರದಂದು ನಾವು ಸಾಕ್ಷಿಗಳೇ ಇಲ್ಲದ ನಗರಗಳಲ್ಲಿ ಸಾರುತ್ತಿದ್ದೆವು. ಮತ್ತು ಆ ದಿನ ಸಂಜೆ ಏರ್ಪಾಡಾಗಿದ್ದ ಭಾಷಣಕ್ಕೂ ಆಮಂತ್ರಿಸುತ್ತಿದ್ದೆವು.

ಸರ್ಕಿಟ್‌ ಕೆಲಸ ಶುರುಮಾಡಿ ಎರಡು ವರ್ಷಗಳಾದ ನಂತರ ರೋಮ್‌ನಲ್ಲಿರುವ ಬೆತೆಲ್‌ನಲ್ಲಿ ಸೇವೆ ಸಲ್ಲಿಸಲು ಆಮಂತ್ರಣ ಸಿಕ್ಕಿತು. ಬದಲಾವಣೆ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ ಆದರೂ ನಾವು ವಿಧೇಯರಾಗಿರಲು ನಿಶ್ಚಯಿಸಿದ್ದೆವು. ಪೌಲೋ ಕಾನೂನು ಸಂಬಂಧಿತ ವಿಷಯಗಳನ್ನು ನೋಡಿಕೊಳ್ಳುತ್ತಿದ್ದರು. ನಾನು ಮ್ಯಾಗಜೀನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಇಟಲಿಯ ಬ್ರಾಂಚ್‌ ಆಫೀಸಿನ ವಿಸ್ತರಿಸುವಿಕೆ ಮತ್ತು ಸಹೋದರರ ಸಂಖ್ಯೆಯಲ್ಲಿ ಆಗುತ್ತಿದ್ದ ವೃದ್ಧಿ ನಮ್ಮ ಮನಸನ್ನು ಪುಳಕಗೊಳಿಸುತ್ತಿತ್ತು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಕಾನೂನುಬದ್ಧ ಅಂಗೀಕಾರ ಸಿಕ್ಕಿತು. ಈ ಸೇವೆಯಲ್ಲಿ ನಾವು ತುಂಬ ಆನಂದಿಸಿದೆವು.

1980ರ ದಶಕದ ಆರಂಭದಷ್ಟಕ್ಕೆ ಬೆತೆಲ್‌ನಲ್ಲಿ ಸೇವೆ ಮಾಡುತ್ತಿರುವಾಗ ಇಟಲಿಯಲ್ಲಿ ಒಂದು ಮೊಕದ್ದಮೆ ತುಂಬ ಪ್ರಚಲಿತವಾಯಿತು. ಒಂದು ಸಾಕ್ಷಿ ದಂಪತಿ ತಮ್ಮ ಮಗಳಿಗೆ ರಕ್ತವನ್ನು ಕೊಡಿಸದೆ ಸಾಯಿಸಿದರು ಎಂಬ ಆರೋಪಕ್ಕೊಳಗಾದರು. ಈ ಆರೋಪ ಸುಳ್ಳಾಗಿತ್ತು. ಏಕೆಂದರೆ ಅವಳು ಸತ್ತಿದ್ದು ರಕ್ತಕ್ಕೆ ಸಂಬಂಧಪಟ್ಟ ಗಂಭೀರ ಕಾಯಿಲೆಯಿಂದ. ಈ ಕಾಯಿಲೆ ಇಟಲಿಯಲ್ಲಿ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ಸಾಮಾನ್ಯವಾಗಿತ್ತು. ಆ ಹೆತ್ತವರ ಪರ ವಕೀಲರಿಗೆ ಬ್ರಾಂಚ್‌ನಲ್ಲಿದ್ದ ಸಹೋದರರ ಸಹೋದರಿಯರು ಸಹಾಯಮಾಡಿದರು. ಒಂದು ಕರಪತ್ರ ಮತ್ತು ಎಚ್ಚರ! ಪತ್ರಿಕೆಯ ವಿಶೇಷ ಸಂಚಿಕೆ ಆ ಕಾಯಿಲೆ ಬಗ್ಗೆ ವಿವರಿಸಿತು ಮತ್ತು ರಕ್ತದ ಬಗ್ಗೆ ಬೈಬಲ್‌ ನೋಟವನ್ನು ತಿಳಿಯಲು ಸಹಾಯಮಾಡಿತು. ಆ ತಿಂಗಳುಗಳಲ್ಲಿ ಪೌಲೋ ದಿನದಲ್ಲಿ 16 ಗಂಟೆ ಬಿಡುವಿಲ್ಲದೆ ಕೆಲಸಮಾಡುತ್ತಿದ್ದರು. ಆವಾಗೆಲ್ಲ ನನ್ನಿಂದಾದಷ್ಟು ಸಹಾಯ ನಾನವರಿಗೆ ಮಾಡುತ್ತಿದ್ದೆ.

ಜೀವನದ ಇನ್ನೊಂದು ತಿರುವು

ನಮ್ಮ ಮದುವೆಯಾಗಿ 20 ವರ್ಷಗಳಾದಾಗ ನೆನಸದೇ ಇದ್ದ ತಿರುವೊಂದು ನಮ್ಮ ಜೀವನದಲ್ಲಾಯಿತು. ನನಗಾಗ 41 ವರ್ಷ ಮತ್ತು ಪೌಲೋಗೆ 49. ನಾನು ತಾಯಿಯಾಗ್ತಿದೀನಿ ಅಂತ ನನಗನಿಸಿತು. ನಾನವರಿಗೆ ಈ ವಿಷಯವನ್ನ ಹೇಳೆ. ಆ ದಿನದ ಬಗ್ಗೆ ಅವರ ಡೈರಿಯಲ್ಲಿ ಈ ಮಾತುಗಳನ್ನ ಬರೆದಿದ್ರು: “ಪ್ರಾರ್ಥನೆ: ಇದು ನಿಜವಾಗಿದ್ರೆ ದಯವಿಟ್ಟು ನಾವು ಪೂರ್ಣ ಸಮಯದ ಸೇವೆಯನ್ನು ಎಂದೂ ನಿಲ್ಲಿಸದಂತೆ ಸಹಾಯ ಮಾಡಪ್ಪ. ಆಧ್ಯಾತ್ಮಿಕವಾಗಿ ಸೊರಗದಂತೆ ಮತ್ತು ಒಳ್ಳೆ ಹೆತ್ತವರಾಗಿರುವಂತೆ ನೆರವಾಗು. ಈ 30 ವರ್ಷಗಳಲ್ಲಿ ನಾನು ಸ್ಟೇಜ್‌ನಿಂದ ಹೇಳಿರುವ ವಿಷಯಗಳಲ್ಲಿ ಒಂದಂಶದಷ್ಟಾದ್ರೂ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಹಾಯ ಮಾಡು.” ಯೆಹೋವನು ನಮ್ಮಿಬ್ಬರ ಪ್ರಾರ್ಥನೆಯನ್ನು ಉತ್ತರಿಸಿದ್ದಾನೆ.

ಇಲಾರಿಯಾ ಹುಟ್ಟಿದ ಮೇಲೆ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳಾದ್ವು. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ” ಎಂದು ಜ್ಞಾನೋಕ್ತಿ 24:10ರಲ್ಲಿ ಹೇಳುವಂತೆ ಕೆಲವು ಸಲ ನಾವು ನಿರುತ್ತೇಜನಗೊಂಡಿದ್ದೂ ಇದೆ. ಆದರೆ ಒಬ್ಬರಿಗೊಬ್ಬರು ಬೆಂಬಲಿಸೊದನ್ನ ಮತ್ತು ಪ್ರೋತ್ಸಾಹಿಸೊದನ್ನ ಮಾತ್ರ ನಿಲ್ಲಿಸಲಿಲ್ಲ.

ಪೂರ್ಣ ಸಮಯದ ಸೇವೆಯಲ್ಲಿದ್ದ ಸಾಕ್ಷಿ ಹೆತ್ತವರಿಗೆ ಹುಟ್ಟಿದ್ದರಿಂದ ತನಗೆ ತುಂಬ ಖುಷಿ ಅಂತ ಇಲಾರಿಯಾ ಯಾವಾಗಲೂ ಹೇಳ್ತಿರ್ತಾಳೆ. ಅವಳನ್ನ ನಾವು ಯಾವತ್ತೂ ಕಡೆಗಣಿಸಲಿಲ್ಲ. ಎಲ್ಲಾ ಕುಟುಂಬಗಳಲ್ಲಿ ಮಕ್ಕಳಿಗೆ ಸಿಗುವ ಪ್ರೀತಿ ಕಾಳಜಿ ಅವಳಿಗೂ ಸಿಕ್ಕಿತು. ದಿನದಲ್ಲಿ ಅವಳೊಂದಿಗೆ ನಾನಿರ್ತಿದ್ದೆ. ಸಾಯಂಕಾಲ ಪೌಲೋ ಕೆಲಸದಿಂದ ಬಂದ ಮೇಲೆ ಅವರಿಗೆ ಇನ್ನೂ ಕೆಲಸ ಇದ್ರೂ ಮಗಳ ಜತೆ ಸಮಯ ಕಳಿತಿದ್ರು. ಅವಳ ಜತೆ ಆಟ ಆಡ್ತಿದ್ರು, ಅವಳ ಶಾಲಾ ಕೆಲಸದಲ್ಲಿ ಸಹಾಯ ಮಾಡ್ತಿದ್ರು. ಬೆಳಗ್ಗಿನ ಜಾವ ಎರಡು ಮೂರು ಗಂಟೆ ವರೆಗೂ ಎಚ್ಚರ ಇದ್ದು ತಮ್ಮ ಕೆಲಸಗಳನ್ನ ಮುಗಿಸ್ತಿದ್ರು. ಇಲಾರಿಯಾ ಯಾವಾಗಲೂ ಹೇಳ್ತಿದ್ದ ಮಾತು “ಅಪ್ಪ ನನ್ನ ಬೆಸ್ಟ್‌ ಫ್ರೆಂಡ್‌.”

ಯಾವಾಗಲೂ ಸರಿಯಾದದ್ದನ್ನೇ ಮಾಡುವಂತೆ ಅವಳಿಗೆ ಶಿಸ್ತು ಕೊಡ್ತಿದ್ವಿ. ಕೆಲವೊಮ್ಮೆ ಕಟ್ಟುನಿಟ್ಟಾಗಿರಬೇಕಾಗ್ತಿತ್ತು. ಒಂದು ಸಲ ಅವಳು ತನ್ನ ಸ್ನೇಹಿತೆಯೊಟ್ಟಿಗೆ ಆಟವಾಡ್ತಿದ್ದಾಗ ಸರಿಯಾಗಿ ನಡೆದುಕೊಳ್ಳಲಿಲ್ಲ. ಆಗ ನಾವು ಅವಳಿಗೆ ಯಾಕೆ ಹಾಗೆ ನಡೆದುಕೊಳ್ಳಬಾರದು ಅಂತ ಬೈಬಲ್‌ನ ಸಹಾಯದಿಂದ ವಿವರಿಸಿದ್ವಿ. ನಮ್ಮ ಮುಂದೆನೇ ಅವಳು ಸ್ನೇಹಿತೆ ಹತ್ರ ಕ್ಷಮೆ ಕೇಳುವಂತೆ ಹೇಳಿದ್ವಿ.

ಸುವಾರ್ತೆಗಾಗಿ ತನ್ನ ಹೆತ್ತವರು ತೋರಿಸಿದ ಪ್ರೀತಿಯನ್ನು ಯಾವಾಗಲೂ ಮೆಚ್ಚುತ್ತೇನೆ ಅಂತ ಇಲಾರಿಯಾ ಹೇಳ್ತಾಳೆ. ಈಗ ಅವಳಿಗೆ ಮದುವೆಯಾಗಿರೊದ್ರಿಂದ ಯೆಹೋವನಿಗೆ ವಿಧೇಯರಾಗೋದು ಮತ್ತು ಆತನ ಮಾರ್ಗದರ್ಶನಗಳನ್ನು ಪಾಲಿಸೋದು ಎಷ್ಟು ಪ್ರಾಮುಖ್ಯ ಅಂತ ಅವಳು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ.

ದುಃಖದ ಗಳಿಗೆಯಲ್ಲೂ ವಿಧೇಯತೆ

2008ರಲ್ಲಿ ಪೌಲೋಗೆ ಕ್ಯಾನ್ಸರ್‌ ಇದೆ ಅಂತ ತಿಳಿದುಬಂತು. ಮೊದಮೊದಲು ಅವರು ಇದರಿಂದ ಗುಣ ಹೊಂದುತ್ತಾರೆ ಎಂಬಂತಿತ್ತು, ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಸಿಗೋದರಲ್ಲೇ ಒಳ್ಳೇ ಚಿಕಿತ್ಸೆಯ ನೆರವನ್ನು ಅವರಿಗೆ ಕೊಡಿಸಿದ್ವಿ ಮತ್ತು ನಾವು ಮೂವರೂ ಸೇರಿ ತುಂಬ ಹೊತ್ತು ಪ್ರಾರ್ಥನೆ ಮಾಡಿದ್ವಿ. ಭವಿಷ್ಯವನ್ನು ಎದುರಿಸಲು ಸಹಾಯಕ್ಕಾಗಿ ಯಾಚಿಸಿದ್ವಿ. ಹಾಗಿದ್ದರೂ, ಒಂದು ಸಮಯದಲ್ಲಿ ತುಂಬ ಶಕ್ತಿಯಿದ್ದ ಚುರುಕಾಗಿದ್ದ ವ್ಯಕ್ತಿ ಕ್ರಮೇಣ ದುರ್ಬಲರಾಗೋದನ್ನ ಕಣ್ಣಾರೆ ನೋಡಿದೆ. 2010ರಲ್ಲಿ ಪೌಲೋರ ನಿಧನ ನನ್ನನ್ನ ನಡುಗಿಸಿಬಿಡ್ತು. ಆದರೆ 45 ವರ್ಷ ಜತೆಯಾಗಿದ್ದು ನಾವು ಮಾಡಿದ ಸೇವೆಯನ್ನು ನೆನಸಿ ಸಾಂತ್ವನ ಪಡಿತೀನಿ. ನಮ್ಮಲ್ಲಿದ್ದದರಲ್ಲೇ ಒಳ್ಳೇಯದನ್ನು ಯೆಹೋವನಿಗೆ ಕೊಟ್ಟೆವು. ಯೆಹೋವನು ನಮ್ಮನ್ನ, ನಮ್ಮ ಸೇವೆಯನ್ನ ಮರೆಯಲ್ಲ ಅಂತ ನನಗೆ ಗೊತ್ತು. ಯೋಹಾನ 5:28, 29ರಲ್ಲಿ ಯೇಸು ಹೇಳಿರುವಂತೆ ಪೌಲೋ ಪುನರುತ್ಥಾನವಾಗಿ ಬರೋದನ್ನ ನಾನು ಕಾತರದಿಂದ ಕಾಯುತ್ತಾ ಇದ್ದೀನಿ.

“ಹೃದಯದಾಳದಲಿ ನಾನಿನ್ನೂ ನೋಹನ ಕಥೆಯನ್ನು ಪ್ರೀತಿಸೋ ಅದೇ ಪುಟ್ಟ ಹುಡುಗಿ! ನನ್ನ ದೃಢ ತೀರ್ಮಾನ ಬದಲಾಗಿಲ್ಲ”

ಹೃದಯದಾಳದಲಿ ನಾನಿನ್ನೂ ನೋಹನ ಕಥೆಯನ್ನು ಪ್ರೀತಿಸೋ ಅದೇ ಪುಟ್ಟ ಹುಡುಗಿ! ನನ್ನ ದೃಢ ತೀರ್ಮಾನ ಬದಲಾಗಿಲ್ಲ. ಏನೇ ಆದರೂ ಯೆಹೋವನಿಗೆ ವಿಧೇಯಳಾಗಿ ಇರಬೇಕೆನ್ನೋದೇ ನನ್ನ ಆಶೆ. ಯಾವುದೇ ಅಡೆತಡೆಗಳು ಬಂದರೂ, ತ್ಯಾಗಗಳನ್ನು ಮಾಡಬೇಕಾದರೂ, ಏನನ್ನೇ ಕಳಕೊಂಡರೂ ಅವೆಲ್ಲ ಯೆಹೋವನು ಕೊಡುವ ಭವ್ಯ ಆಶೀರ್ವಾದಗಳ ಮುಂದೆ ತುಂಬ ಚಿಕ್ಕದು. ಇದನ್ನು ನಾನು ನನ್ನ ಜೀವನದಲ್ಲಿ ಅನುಭವಿಸಿದ್ದೇನೆ. ಒಂದು ಮಾತ್ರ ಖಂಡಿತ. . . ಯೆಹೋವನಿಗೆ ವಿಧೇಯರಾಗಲು ಏನೇ ತ್ಯಾಗ ಮಾಡಿದರೂ ಅದು ಸಾರ್ಥಕ.