ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಉದಾರತೆ ಮತ್ತು ನ್ಯಾಯಸಮ್ಮತತೆ

ಯೆಹೋವನ ಉದಾರತೆ ಮತ್ತು ನ್ಯಾಯಸಮ್ಮತತೆ

“ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.”—ಕೀರ್ತ. 145:9.

1, 2. ಯೆಹೋವನ ಸ್ನೇಹಿತರಿಗೆ ಯಾವ ಅವಕಾಶವಿದೆ?

“ನಮ್ಮ ಮದುವೆಯಾಗಿ 35 ವರ್ಷಗಳಾಗಿವೆ. ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಆದರೂ ಒಬ್ಬರು ಇನ್ನೊಬ್ಬರ ಬಗ್ಗೆ ಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಲೇ ಇದ್ದೇವೆ” ಎನ್ನುತ್ತಾರೆ ಸಹೋದರಿ ಮೋನಿಕಾ. ಈ ಮಾತು ಅನೇಕ ವಿವಾಹಿತರಲ್ಲಿ ಮತ್ತು ಸ್ನೇಹಿತರಲ್ಲಿ ಸತ್ಯ.

2 ನಾವು ಯಾರನ್ನು ಪ್ರೀತಿಸುತ್ತೇವೋ ಅವರ ಜತೆ ಚೆನ್ನಾಗಿ ಬೆರೆಯುತ್ತೇವೆ ಮತ್ತು ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತೇವೆ. ನಮ್ಮ ಎಲ್ಲಾ ಸ್ನೇಹ ಸಂಬಂಧಗಳಲ್ಲೇ ಅತಿ ಪ್ರಾಮುಖ್ಯವಾದದ್ದು ಯೆಹೋವನೊಟ್ಟಿಗಿನ ನಮ್ಮ ಸ್ನೇಹ. ಹಾಗಾಗಿ ನಾವು ಆತನ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕು. ಆತನ ಬಗ್ಗೆ ಎಷ್ಟು ಕಲಿತರೂ ಅದು ಕಮ್ಮಿನೇ. (ರೋಮ. 11:33) ಆದ್ದರಿಂದ ಅನಂತಕಾಲಕ್ಕೂ ಯೆಹೋವನ ಗುಣಗಳ ಬಗ್ಗೆ ಕಲಿತು ಅದರ ಕಡೆಗೆ ನಮ್ಮ ಗಣ್ಯತೆ ಹೆಚ್ಚಿಸಿಕೊಳ್ಳುವ ಅವಕಾಶ ನಮಗಿದೆ.—ಪ್ರಸಂ. 3:11.

3. ಈ ಲೇಖನದಲ್ಲಿ ನಾವೇನನ್ನು ಕಲಿಯಲಿದ್ದೇವೆ?

3 ಯೆಹೋವನ ಸ್ನೇಹಪರತೆ ಮತ್ತು ನಿಷ್ಪಕ್ಷಪಾತದ ಕಡೆಗೆ ನಮ್ಮ ಗಣ್ಯತೆ ಹೆಚ್ಚಿಸಿಕೊಳ್ಳುವಂತೆ ಹಿಂದಿನ ಲೇಖನ ಸಹಾಯಮಾಡಿತು. ಈ ಲೇಖನದಲ್ಲಿ ಆತನ ಇನ್ನೆರಡು ಮನಮುಟ್ಟುವ ಗುಣಗಳ ಬಗ್ಗೆ ಕಲಿಯೋಣ. ಅವು ಉದಾರತೆ ಮತ್ತು ನ್ಯಾಯಸಮ್ಮತತೆ. ಹೀಗೆ, “ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ” ಎಂಬ ಮಾತು ಎಷ್ಟು ಸತ್ಯ ಎಂದು ಗ್ರಹಿಸೋಣ.—ಕೀರ್ತ. 145:9.

ಯೆಹೋವನು ಉದಾರಿ

4. ಉದಾರತೆಯ ನಿಜಾರ್ಥ ಏನು?

4 ಉದಾರತೆ ಎಂದರೇನು? ಇದಕ್ಕೆ ಉತ್ತರ ಅಪೊಸ್ತಲರ ಕಾರ್ಯಗಳು 20:35ರಲ್ಲಿರುವ ಯೇಸುವಿನ ಮಾತಿನಲ್ಲಿದೆ: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” ಈ ಒಂದೇ ಸರಳ ವಾಕ್ಯದಲ್ಲಿ ಯೇಸು ಉದಾರತೆಯ ನಿಜಾರ್ಥವನ್ನು ಸೆರೆಹಿಡಿದಿದ್ದಾನೆ. ಒಬ್ಬ ಉದಾರಭಾವದ ವ್ಯಕ್ತಿ ತನ್ನ ಸಮಯ, ಶಕ್ತಿ, ಸಂಪನ್ಮೂಲಗಳನ್ನು ಇತರರ ಪ್ರಯೋಜನಕ್ಕಾಗಿ ಬಳಸುತ್ತಾನೆ. ಅದನ್ನು ಸಂತೋಷದಿಂದ ಮಾಡುತ್ತಾನೆ. ಉದಾರತೆಯನ್ನು, ಉಡುಗೊರೆಯ ಗಾತ್ರದಿಂದ ಅಳೆಯಲಾಗುವುದಿಲ್ಲ. ಬದಲಿಗೆ ಅದು ಹೇತುಗಳಿಂದ ಗೊತ್ತಾಗುತ್ತೆ. (2 ಕೊರಿಂಥ 9:7 ಓದಿ.) ಉದಾರತೆಯನ್ನು ತೋರಿಸುವುದರಲ್ಲಿ ‘ಸಂತೋಷ ಗುಣವುಳ್ಳ’ ನಮ್ಮ ದೇವರ ಹಾಗೆ ಯಾರೂ ಇಲ್ಲ.—1 ತಿಮೊ. 1:11.

5. ಯಾವೆಲ್ಲಾ ವಿಧಗಳಲ್ಲಿ ಯೆಹೋವನು ಉದಾರತೆಯನ್ನು ತೋರಿಸುತ್ತಾನೆ?

5 ಯೆಹೋವನು ಹೇಗೆ ಉದಾರತೆಯನ್ನು ತೋರಿಸುತ್ತಾನೆ? ಆತನನ್ನು ಆರಾಧಿಸದವರನ್ನೂ ಸೇರಿಸಿ ಮನುಷ್ಯರೆಲ್ಲರ ಅವಶ್ಯಕತೆಗಳನ್ನು ಪೂರೈಸುತ್ತಾನೆ. ಆದ್ದರಿಂದ “ಯೆಹೋವನು ಸರ್ವೋಪಕಾರಿ.” ಆತನು “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:45) ಹಾಗಾಗಿಯೇ ಅಪೊಸ್ತಲ ಪೌಲನು ಅವಿಶ್ವಾಸಿಗಳೊಂದಿಗೆ ಮಾತಾಡುವಾಗ, “ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ಅನುಗ್ರಹಿಸಿ, ಹೇರಳವಾಗಿ ಆಹಾರವನ್ನು ಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುವ ಮೂಲಕ [ಯೆಹೋವನು] ಒಳ್ಳೇದನ್ನು ಮಾಡಿದನು” ಎಂದು ಹೇಳಿದನು. (ಅ. ಕಾ. 14:17) ಯೆಹೋವನು ಎಲ್ಲಾ ಮನುಷ್ಯರಿಗೆ ಉದಾರತೆ ತೋರಿಸುತ್ತಾನೆ.—ಲೂಕ 6:35.

6, 7. (1) ವಿಶೇಷವಾಗಿ ಯಾರಿಗೆ ಸಹಾಯ ಮಾಡಲು ಯೆಹೋವನು ಸಂತೋಷಪಡುತ್ತಾನೆ? (2) ತನ್ನ ನಂಬಿಗಸ್ತ ಸೇವಕರಿಗೆ ಯೆಹೋವನು ಸಹಾಯಮಾಡುತ್ತಾನೆ ಎನ್ನುವುದಕ್ಕೆ ಉದಾಹರಣೆ ಕೊಡಿ.

6 ವಿಶೇಷವಾಗಿ ತನ್ನ ನಂಬಿಗಸ್ತ ಸೇವಕರಿಗೆ ಸಹಾಯ ಮಾಡಲು ಯೆಹೋವನು ತುಂಬ ಸಂತೋಷಪಡುತ್ತಾನೆ. ರಾಜ ದಾವೀದನು ನುಡಿದದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತ. 37:25) ಅನೇಕ ನಂಬಿಗಸ್ತ ಕ್ರೈಸ್ತರು ಯೆಹೋವನ ಕಾಳಜಿಯನ್ನು ತಮ್ಮ ಬದುಕಲ್ಲಿ ಅನುಭವಿಸಿದ್ದಾರೆ. ಈ ಉದಾಹರಣೆ ಗಮನಿಸಿ.

7 ಕೆಲವು ವರ್ಷಗಳ ಹಿಂದೆ ಪೂರ್ಣ ಸಮಯದ ಸೇವೆಯಲ್ಲಿದ್ದ ನ್ಯಾನ್ಸಿ ಎಂಬ ಸಹೋದರಿಗೆ ಕಷ್ಟಕರ ಪರಿಸ್ಥಿತಿ ಎದುರಾಯ್ತು. ಅವರು ಹೇಳುವುದು: “ಮನೆ ಬಾಡಿಗೆ ಕಟ್ಟಕ್ಕೆ ನನಗೆ 66 ಡಾಲರ್‌ನಷ್ಟು ಹಣ ಬೇಕಿತ್ತು. ಆದರೆ ನನ್ನತ್ರ ಹಣ ಇರಲಿಲ್ಲ. ಮರುದಿನವೇ ಬಾಡಿಗೆ ಕಟ್ಟಕ್ಕೆ ಕೊನೆ ದಿನ. ಇದರ ಬಗ್ಗೆ ನಾನು ಯೆಹೋವನ ಬಳಿ ಪ್ರಾರ್ಥಿಸಿದೆ. ನಂತರ ಕೆಲಸಕ್ಕೆ ಹೋದೆ. ನಾನು ಹೋಟೆಲ್‌ ಒಂದರಲ್ಲಿ ಪರಿಚಾರಿಕೆಯಾಗಿ ಕೆಲಸಮಾಡುತ್ತಿದ್ದೆ. ಅದು ವಾರದ ಮಧ್ಯದ ದಿನವಾಗಿದ್ದರಿಂದ ಸಾಮಾನ್ಯವಾಗಿ ಹೋಟೆಲ್‌ಗೆ ಹೆಚ್ಚು ಜನರು ಬರಲ್ಲ. ಟಿಪ್ಸ್‌ ಕೂಡ ಜಾಸ್ತಿ ಸಿಗಲ್ಲ. ಆದರೆ ಆವತ್ತು ರಾತ್ರಿ ಹೊಟೆಲ್‌ಗೆ ತುಂಬ ಜನ ಬಂದಿದ್ದರು. ನನ್ನ ಕೆಲಸ ಮುಗಿಸಿ ನನಗೆ ಸಿಕ್ಕಿದ್ದ ಟಿಪ್ಸ್‌ನೆಲ್ಲ ಲೆಕ್ಕ ಮಾಡಿದಾಗ ಒಟ್ಟು ಹಣ ಇದ್ದದ್ದು 66 ಡಾಲರ್‌.” ತನಗೆ ಬೇಕಾದದ್ದನ್ನೇ ಯೆಹೋವನು ಒದಗಿಸಿದ್ದರಿಂದ ಆತನು ಉದಾರತೆಯುಳ್ಳವನು ಎಂಬ ವಿಷಯ ಸಹೋದರಿ ನ್ಯಾನ್ಸಿಯ ಮನಸ್ಸಿನಲ್ಲಿ ಅಚ್ಚೊತ್ತಿತು.—ಮತ್ತಾ. 6:33.

8. ಯೆಹೋವನು ಅತ್ಯಂತ ಉದಾರವಾಗಿ ಕೊಟ್ಟಿರುವ ಉಡುಗೊರೆ ಯಾವುದು?

8 ಯೆಹೋವನು ಅತ್ಯಂತ ಉದಾರವಾಗಿ ಕೊಟ್ಟಿರುವ ಉಡುಗೊರೆ ನಮ್ಮೆಲ್ಲರಿಗೂ ಲಭ್ಯ. ಯಾವುದದು? ತನ್ನ ಮಗನ ವಿಮೋಚನಾ ಮೌಲ್ಯ ಯಜ್ಞವೇ. ಯೇಸು ಹೇಳಿದ್ದು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾ. 3:16) ಇಲ್ಲಿ “ಲೋಕ” ಎಂಬ ಪದ ಇಡೀ ಮಾನವಕುಲವನ್ನು ಸೂಚಿಸುತ್ತೆ. ಯೆಹೋವನ ಈ ಉಡುಗೊರೆ, ಸ್ವೀಕರಿಸುವವರೆಲ್ಲರಿಗೆ ಲಭ್ಯ. ಯೇಸುವಿನಲ್ಲಿ ನಂಬಿಕೆ ಇಡುವವರಿಗೆ ದೇವರ ರಾಜ್ಯದಲ್ಲಿ ಬಹುಕಾಲ ಬದುಕುವ ಸದವಕಾಶ ಕಾದಿದೆ. (ಯೋಹಾ. 10:10) ದೇವರು ಉದಾರ ಗುಣದವನು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ?

ಯೆಹೋವನ ಉದಾರತೆಯನ್ನು ಅನುಕರಿಸಿ

9. ಯೆಹೋವನ ಉದಾರ ಗುಣವನ್ನು ನಾವು ಹೇಗೆ ಅನುಕರಿಸಬಹುದು?

 9 ಯೆಹೋವನ ಉದಾರ ಗುಣವನ್ನು ನಾವು ಹೇಗೆ ಅನುಕರಿಸಬಹುದು? ದೇವರು ‘ನಮ್ಮ ಆನಂದಕ್ಕಾಗಿ ಎಲ್ಲವನ್ನೂ ಹೇರಳವಾಗಿ ಒದಗಿಸಿರುವುದರಿಂದ’ ನಾವು ಯಾವಾಗಲೂ “ಹಂಚಿಕೊಳ್ಳಲು ಸಿದ್ಧರಾಗಿ”ರಬೇಕು ಮತ್ತು ಇತರರ ಆನಂದಕ್ಕೆ ಕಾರಣರಾಗಿರಬೇಕು. (1 ತಿಮೊ. 6:17-19) ಅಗತ್ಯದಲ್ಲಿರುವವರಿಗೆ ಸಹಾಯಮಾಡಲು, ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಕೊಡಲು ನಮ್ಮ ಸಂಪನ್ಮೂಲಗಳನ್ನು ಬಳಸಲು ನಾವು ಸಂತೋಷಿಸುತ್ತೇವೆ. (ಧರ್ಮೋಪದೇಶಕಾಂಡ 15:7 ಓದಿ.) ಹೀಗೆ ಮಾಡುವುದನ್ನು ಮರೆಯದಿರಲು ನಮಗೆ ಯಾವುದು ಸಹಾಯ ಮಾಡುತ್ತೆ? ಕೆಲವು ಕ್ರೈಸ್ತರು ಈ ಪ್ರಾಯೋಗಿಕ ಹೆಜ್ಜೆಯನ್ನು ತೆಗೆದುಕೊಂಡಿದ್ದಾರೆ: ತಾವು ಉಡುಗೊರೆಯನ್ನು ಪಡೆದುಕೊಂಡರೆ, ಇತರರಿಗೆ ಉಡುಗೊರೆ ಕೊಡಲು ಅವಕಾಶ ಮಾಡಿಕೊಳ್ಳುತ್ತಾರೆ. ಕ್ರೈಸ್ತ ಸಭೆಯು ಇಂಥ ಉದಾರಭಾವವನ್ನು ಪ್ರದರ್ಶಿಸುವ ಲಕ್ಷಾಂತರ ಸಹೋದರ ಸಹೋದರಿಯರಿಂದ ತುಂಬಿಕೊಂಡಿದೆ.

10. ಉದಾರತೆಯನ್ನು ತೋರಿಸುವ ಒಂದು ಅತ್ಯುತ್ತಮ ವಿಧ ಯಾವುದು?

10 ನಮ್ಮ ಮಾತು ಮತ್ತು ಕ್ರಿಯೆಗಳಲ್ಲಿ ಉದಾರಭಾವವನ್ನು ಅತ್ಯುತ್ತಮವಾಗಿ ತೋರಿಸಬಹುದು. ಹೇಗೆ? ನಮ್ಮ ಸಮಯ ಮತ್ತು ಶಕ್ತಿಯನ್ನು ಇತರರಿಗೆ ಸಹಾಯ ಮಾಡಲು ಮತ್ತು ಪ್ರೋತ್ಸಾಹಿಸಲು ಉಪಯೋಗಿಸುವ ಮೂಲಕವೇ. (ಗಲಾ. 6:10) ನಾವು ಇದನ್ನು ಮಾಡುತ್ತಿದ್ದೇವಾ ಇಲ್ಲವಾ ಎಂದು ತಿಳಿದುಕೊಳ್ಳಲು ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನಾನು ಇತರರ ಮಾತುಗಳನ್ನು ಆಲಿಸುವವ, ಅವರ ಕಾಳಜಿವಹಿಸುವವ ಎಂದು ಬೇರೆಯವರಿಗೆ ಅನಿಸುತ್ತಾ? ಯಾರಿಗಾದರೂ ನನ್ನ ಸಹಾಯ ಬೇಕಿದ್ದಲ್ಲಿ ಸಾಧ್ಯವಿದ್ದ ಎಲ್ಲಾ ಸಮಯದಲ್ಲೂ ಅದನ್ನು ಮಾಡಲು ಸಿದ್ಧನಿರುತ್ತೇನಾ? ಕುಟುಂಬದವರನ್ನಾಗಲಿ ಸಭೆಯವರನ್ನಾಗಲಿ ಕೊನೆಯ ಬಾರಿ ನಾನು ಶ್ಲಾಘಿಸಿದ್ದು ಯಾವಾಗ?’ ನಾವು ಯಾವಾಗ “ಕೊಡುವುದನ್ನು ರೂಢಿಮಾಡಿ”ಕೊಳ್ಳುತ್ತೇವೊ ಆಗ ಯೆಹೋವನಿಗೆ ಮತ್ತು ನಮ್ಮ ಸ್ನೇಹಿತರಿಗೆ ಹತ್ತಿರವಾಗುತ್ತೇವೆ.—ಲೂಕ 6:38, 39; ಜ್ಞಾನೋ. 19:17, 18.

11. ಯೆಹೋವನಿಗೆ ಉದಾರತೆ ತೋರಿಸುವ ಕೆಲವು ವಿಧಗಳು ಯಾವುದು?

 11 ನಾವು ಯೆಹೋವನ ಕಡೆಗೂ ಉದಾರಭಾವವನ್ನು ತೋರಿಸಬಲ್ಲೆವು. ಇದರ ಬಗ್ಗೆ ಬೈಬಲ್‌ ಪ್ರೋತ್ಸಾಹಿಸುವುದು: “ನಿನ್ನ ಆದಾಯದಿಂದ . . . ಯೆಹೋವನನ್ನು ಸನ್ಮಾನಿಸು.” (ಜ್ಞಾನೋ. 3:9) ಈ “ಆದಾಯ”ದಲ್ಲಿ ನಮ್ಮ ಸಮಯ ಶಕ್ತಿ ಸಂಪನ್ಮೂಲ ಸೇರಿದೆ. ಇವುಗಳನ್ನು ದೇವರ ಸೇವೆಗಾಗಿ ಬಳಸುತ್ತೇವೆ. ಚಿಕ್ಕ ಮಕ್ಕಳು ಸಹ ಯೆಹೋವನಿಗೆ ಉದಾರಭಾವವನ್ನು ತೋರಿಸಬಹುದು. ಜೇಸನ್‌ ಎಂಬವರು ಹೇಳುವುದು “ನಾವು ರಾಜ್ಯ ಸಭಾಗೃಹದಲ್ಲಿ ನಮ್ಮ ಮಕ್ಕಳ ಕೈಯಲ್ಲಿ ಹಣಕೊಟ್ಟು ಕಾಣಿಕೆ ಪೆಟ್ಟಿಗೆಗೆ ಹಾಕುವಂತೆ ಹೇಳುತ್ತೇವೆ. ಅವರಿಗದು ತುಂಬ ಇಷ್ಟ ಏಕೆಂದ್ರೆ ‘ಅವರು ಕೊಡುತ್ತಿರೋದು ಯೆಹೋವನಿಗೆ ಅಂತ ಅವರಿಗೆ ಗೊತ್ತು.’” ಚಿಕ್ಕ ವಯಸ್ಸಿನಿಂದಲೇ ಯೆಹೋವ ದೇವರಿಗೆ ಕೊಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುವ ಮಕ್ಕಳು ದೊಡ್ಡವರಾದ ಮೇಲೂ ಉದಾರಭಾವ ತೋರಿಸುವುದನ್ನು ಮುಂದುವರಿಸುತ್ತಾರೆ.—ಜ್ಞಾನೋ. 22:6.

ಯೆಹೋವನು ನ್ಯಾಯಸಮ್ಮತನು

12. ನ್ಯಾಯಸಮ್ಮತತೆ ತೋರಿಸುವುದು ಅಂದರೇನು?

12 ಯೆಹೋವನ ಮನಮುಟ್ಟುವ ಗುಣಗಳಲ್ಲಿ ಇನ್ನೊಂದು ನ್ಯಾಯಸಮ್ಮತತೆ. ಹಾಗೆಂದರೇನು? (ತೀತ 3:1, 2) ನ್ಯಾಯಸಮ್ಮತತೆ ಇರುವ ವ್ಯಕ್ತಿಯಲ್ಲಿ ಮಣಿಯುವ ಗುಣ ಇರುತ್ತೆ. ಯಾವಾಗಲೂ ತಾನು ಹೇಳಿದ್ದೇ ಸರಿ ಎಂದು ಹಟ ಹಿಡಿಯುವುದಿಲ್ಲ. ಕಟುವಾದ ಅಥವಾ ಕಡು ಶಿಸ್ತಿನ ವ್ಯಕ್ತಿ ಅವನಾಗಿರುವುದಿಲ್ಲ. ಬದಲಾಗಿ ಇತರರೊಂದಿಗೆ ವ್ಯವಹರಿಸುವಾಗ ಸೌಮ್ಯಭಾವದಿಂದ ಮತ್ತು ಅವರ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡು ವ್ಯವಹರಿಸುತ್ತಾನೆ. ಬೇರೆಯವರ ಮಾತನ್ನು ಆಲಿಸುತ್ತಾನೆ, ಅವಶ್ಯಕತೆ ಇದ್ದಾಗ ಅವರ ಇಚ್ಛೆಗಳಿಗಾಗಿ ಕೆಲವು ಬದಲಾವಣೆಗಳನ್ನು ಸಹ ಮಾಡಿಕೊಳ್ಳುತ್ತಾನೆ.

13, 14. (1) ಯೆಹೋವನು ಹೇಗೆ ನ್ಯಾಯಸಮ್ಮತತೆ ತೋರಿಸುತ್ತಾನೆ? (2) ಲೋಟನೊಂದಿಗೆ ವ್ಯವಹರಿಸಿದ ರೀತಿಯಿಂದ ನಾವೇನು ಕಲಿಯಬಹುದು?

13 ಯೆಹೋವನು ಹೇಗೆ ನ್ಯಾಯಸಮ್ಮತತೆಯನ್ನು ತೋರಿಸುತ್ತಾನೆ? ತನ್ನ ಸೇವಕರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಅನೇಕವೇಳೆ ಅವರ ಬೇಡಿಕೆಗಳನ್ನು ಪೂರೈಸುವ ಮೂಲಕ. ಉದಾಹರಣೆಗೆ ನೀತಿವಂತನಾಗಿದ್ದ ಲೋಟನ ಜತೆ ಯೆಹೋವನು ನಡಕೊಂಡ ರೀತಿಯನ್ನು ಗಮನಿಸಿ. ಯೆಹೋವನು ಸೊದೋಮ್‌ ಗೊಮೋರ ಪಟ್ಟಣಗಳನ್ನು ನಾಶ ಮಾಡಲು ನಿರ್ಣಯಿಸಿದನು ಮತ್ತು ಲೋಟನಿಗೆ ಪಾರಾಗಲು ಬೆಟ್ಟದ ಸೀಮೆಗೆ ಓಡಿ ಹೋಗಬೇಕೆಂದು ಸ್ಪಷ್ಟ ನಿರ್ದೇಶನ ಕೊಟ್ಟನು. ಆದರೆ ಯಾವುದೋ ಕಾರಣದಿಂದ ತಾನು ಇನ್ನೊಂದು ಜಾಗಕ್ಕೆ ಹೋಗಲು ಅನುಮತಿಸುವಂತೆ ಲೋಟ ಕೇಳಿಕೊಂಡನು. ಸ್ವಲ್ಪ ಯೋಚಿಸಿ: ಬೇರೆ ಜಾಗಕ್ಕೆ ಹೋಗುತ್ತೇನೆಂದು ವಿನಂತಿಸಿಕೊಳ್ಳುವ ಮೂಲಕ ಲೋಟ, ಯೆಹೋವನು ತನ್ನ ನಿರ್ದೇಶನವನ್ನೇ ಬದಲಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದನು!ಆದಿಕಾಂಡ 19:17-20 ಓದಿ.

14 ‘ಲೋಟನಲ್ಲಿ ನಂಬಿಕೆ ಕೊರತೆಯಿತ್ತು, ಅವಿಧೇಯತೆ ತೋರಿಸಿದನು’ ಅಂತ ಕೆಲವರು ನೆನೆಸಬಹುದು. ಯಾಕೆಂದರೆ ಹೇಗಿದ್ದರೂ ಯೆಹೋವನು ಲೋಟನನ್ನು ಕಾಪಾಡುತ್ತಿದ್ದನು. ಅವನಿಗೆ ಹೆದರಿಕೊಳ್ಳಲು ಯಾವ ಕಾರಣವೂ ಇರಲಿಲ್ಲ. ಆದರೂ ಅವನನ್ನು ಭಯ ಆವರಿಸಿತು ಮತ್ತು ಯೆಹೋವನು ಅವನ ಭಾವನೆಗಳನ್ನು ಅರ್ಥಮಾಡಿಕೊಂಡನು. ಯೆಹೋವನು ಮಣಿದನು. ಲೋಟನು ಹೋಗುತ್ತೇನೆಂದು ಕೇಳಿಕೊಂಡ ಆ ಪಟ್ಟಣವನ್ನು ಯೆಹೋವನು ನಾಶ ಮಾಡಬೇಕೆಂದಿದ್ದನು, ಆದರೂ ತನ್ನ ನಿರ್ಣಯವನ್ನು ಬದಲಿಸಿಕೊಂಡನು. (ಆದಿಕಾಂಡ 19:21, 22 ಓದಿ.) ಇದರಿಂದ ಸ್ಪಷ್ಟವಾಗುವ ಒಂದು ವಿಷಯ, ಯೆಹೋವನು ಕಠೋರ ಸ್ವಭಾವದವನಲ್ಲ. ಅವನಲ್ಲಿ ನ್ಯಾಯಸಮ್ಮತತೆ ಮತ್ತು ಮಣಿಯುವ ಗುಣವಿದೆ.

15, 16. ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೋವನ ನ್ಯಾಯಸಮ್ಮತತೆಯ ಗುಣ ಹೇಗೆ ತೋರಿಬಂದಿದೆ? (ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ)

15 ಯೆಹೋವನ ನ್ಯಾಯಸಮ್ಮತತೆಯ ಬಗ್ಗೆ ಇರುವ ಇನ್ನೊಂದು ಉದಾಹರಣೆ ಗಮನಿಸಿ. ಅದು ಮೋಶೆಯ ಧರ್ಮಶಾಸ್ತ್ರದಲ್ಲಿದೆ: ಒಬ್ಬ ಇಸ್ರಾಯೇಲ್ಯನು ಕುರಿಯನ್ನು ಯಜ್ಞವಾಗಿ ಅರ್ಪಿಸಲಾಗದಷ್ಟು ಬಡವನಾಗಿದ್ದರೆ ಎರಡು ಬೆಳವಕ್ಕಿ ಅಥವಾ ಪಾರಿವಾಳಗಳನ್ನು ಅರ್ಪಿಸಬಹುದಿತ್ತು. ಅದನ್ನೂ ಕೊಡಲಾಗದಷ್ಟು ಬಡವನಾಗಿದ್ದರೆ? ಯೆಹೋವನು ಅಂಥ ಇಸ್ರಾಯೇಲ್ಯರಿಗೆ ಸ್ವಲ್ಪ ಹಿಟ್ಟನ್ನು ಅರ್ಪಿಸುವಂತೆ ಅನುಮತಿಸಿದನು. ಈ ಪ್ರಾಮುಖ್ಯ ವಿಷಯವನ್ನು ಸಹ ಗಮನಿಸಿ: ಮೂಲ ಹೀಬ್ರು ಗ್ರಂಥದಲ್ಲಿ ತಿಳಿಸಿದಂತೆ ಅದು ಮಾಮೂಲಿ ಹಿಟ್ಟಾಗಿರಬಾರದಿತ್ತು ಬದಲಿಗೆ ಅತಿಥಿಗಳಿಗಾಗಿ ಉಪಯೋಗಿಸುವಂಥ “ಹಸನಾದ ಹಿಟ್ಟನ್ನು” ಅರ್ಪಿಸಬೇಕಿತ್ತು. (ಆದಿ. 18:6) ಅದರ ಮಹತ್ವವೇನಾಗಿತ್ತು?—ಯಾಜ. 5:7, 11, NW.

16 ನೀವೊಬ್ಬ ಬಡ ಇಸ್ರಾಯೇಲ್ಯ ಎಂದು ನೆನಸಿ. ಯಜ್ಞವಾಗಿ ಅರ್ಪಿಸಲು ಹಸನಾದ ಹಿಟ್ಟನ್ನು ತಕ್ಕೊಂಡು ಮಂಜೂಷದ ಹತ್ತಿರ ಹೋಗಿದ್ದೀರಿ. ಅಲ್ಲಿ ಶ್ರೀಮಂತರೆಲ್ಲಾ ಪ್ರಾಣಿಗಳನ್ನು ತರುತ್ತಿರುವುದನ್ನು ನೀವು ನೋಡುತ್ತೀರಿ. ನಿಮಗಾಗ ತುಂಬ ಮುಜುಗರವಾಗಬಹುದು. ನಿಮ್ಮ ಯಜ್ಞ ಯಾವುದಕ್ಕೂ ಅಲ್ಲದ್ದು ಎಂದು ಕೀಳರಿಮೆಯಾಗಬಹುದು. ಥಟ್ಟನೆ ನಿಮಗೆ ‘ಯೆಹೋವನ ದೃಷ್ಟಿಯಲ್ಲಿ ನನ್ನ ಕಾಣಿಕೆ ತುಂಬ ಅಮೂಲ್ಯ’ ಎಂದು ನೆನಪಾಗುತ್ತೆ. ಯಾಕೆ? ಯಾಕೆಂದರೆ ಹಿಟ್ಟು ಹಸನಾದದ್ದು, ಉತ್ತಮ ಗುಣಮಟ್ಟದ್ದು ಆಗಿರಬೇಕೆಂದು ಯೆಹೋವನು ಈಗಾಗಲೇ ಹೇಳಿದ್ದಾನೆ. ಈ ಏರ್ಪಾಡಿನ ಮೂಲಕ ಯೆಹೋವನು ಬಡ ಇಸ್ರಾಯೇಲ್ಯನಿಗೆ ಹೀಗೆ ಹೇಳಿದಂತಿತ್ತು: ‘ಬೇರೆಯವರು ಕೊಡುತ್ತಿರುವಷ್ಟು ನಿನಗೆ ಕೊಡಲಾಗುತ್ತಿಲ್ಲ ಅಂತ ನನಗೆ ಗೊತ್ತು. ನಿನ್ನ ಹತ್ತಿರ ಇದ್ದದ್ದರಲ್ಲೇ ಅತ್ಯುತ್ತಮವಾದದ್ದನ್ನ ನೀನು ಕೊಟ್ಟಿದ್ದೀಯ ಎಂದೂ ಗೊತ್ತು.’ ಇದರಿಂದ ನಮಗೆ ತಿಳಿಯುತ್ತೆ, ಯೆಹೋವನು ತನ್ನ ಸೇವಕರ ಇತಿಮಿತಿ ಮತ್ತು ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ನ್ಯಾಯಸಮ್ಮತತೆಯನ್ನು ತೋರಿಸುತ್ತಾನೆ.—ಕೀರ್ತ. 103:14.

17. ಯಾವ ತರದ ಸೇವೆಯನ್ನು ಯೆಹೋವನು ಸ್ವೀಕರಿಸುತ್ತಾನೆ?

 17 ಯೆಹೋವನಲ್ಲಿ ನ್ಯಾಯಸಮ್ಮತತೆ ಇರುವುದರಿಂದ ನಮ್ಮ ಪೂರ್ಣಪ್ರಾಣದ ಸೇವೆಯನ್ನು ಸ್ವೀಕರಿಸುತ್ತಾನೆ. ಇದನ್ನು ತಿಳಿದಿರುವುದು ನಮಗೆ ಸಾಂತ್ವನ ಕೊಡುತ್ತದೆ. (ಕೊಲೊ. 3:23) ಇಟಲಿಯ ವೃದ್ಧ ಸಹೋದರಿ ಕಾನ್ಸ್‌ಟನ್ಸ್‌ರವರು ಹೇಳುವುದು: “ನಮ್ಮ ಸೃಷ್ಟಿಕರ್ತನ ಬಗ್ಗೆ ಮಾತಾಡುವುದೆಂದರೆ ನನಗೆ ತುಂಬ ಇಷ್ಟ. ಆದ್ದರಿಂದ ಸೇವೆಗೆ, ಬೈಬಲ್‌ ಅಧ್ಯಯನಕ್ಕೆ ಹೋಗೋದನ್ನ ನಿಲ್ಲಿಸಿಲ್ಲ. ಅಸ್ವಸ್ಥತೆಯಿಂದಾಗಿ ನನಗೆ ಜಾಸ್ತಿ ಮಾಡಕ್ಕಾಗಲ್ಲ. ಹಾಗಾಗಿ ಕೆಲವೊಮ್ಮೆ ತುಂಬ ಬೇಜಾರಾಗುತ್ತೆ. ಆದರೆ ಯೆಹೋವನಿಗೆ ನನ್ನ ಇತಿಮಿತಿ ಗೊತ್ತು. ಆತನು ನನ್ನನ್ನು ಪ್ರೀತಿಸುತ್ತಾನೆ ಮತ್ತು ನನ್ನಿಂದಾದಷ್ಟು ಸೇವೆ ಮಾಡುವಾಗ ಅದನ್ನ ಮಾನ್ಯಮಾಡ್ತಾನೆ.”

ಯೆಹೋವನ ನ್ಯಾಯಸಮ್ಮತತೆಯನ್ನು ಅನುಕರಿಸಿ

18. ಹೆತ್ತವರು ಯೆಹೋವನನ್ನು ಅನುಕರಿಸಬಹುದಾದ ಒಂದು ವಿಧ ಯಾವುದು?

18 ನಾವು ಹೇಗೆ ಯೆಹೋವನ ನ್ಯಾಯಸಮ್ಮತತೆಯನ್ನು ಅನುಕರಿಸಬಹುದು? ಯೆಹೋವನು ಲೋಟನ ಜತೆ ವ್ಯವಹರಿಸಿದ ರೀತಿಯನ್ನು ಮತ್ತೆ ನೆನಪಿಸಿಕೊಳ್ಳಿ. ಅಧಿಕಾರದ ಸ್ಥಾನದಲ್ಲಿ ಇದ್ದದ್ದು ಯೆಹೋವನು. ಆದರೂ ಆತನು ದೀನಭಾವದಿಂದ ಲೋಟನ ಭಾವನೆಗಳನ್ನು ಗಣನೆಗೆ ತೆಗೆದುಕೊಂಡನು. ಮತ್ತು ಲೋಟನ ಬೇಡಿಕೆಯಂತೆ ಅವನಿಗೆ ಎಲ್ಲಿ ಹೋಗಬೇಕೋ ಅಲ್ಲಿಗೆ ಹೋಗುವಂತೆ ಅನುಮತಿಸಿದನು. ನೀವೊಬ್ಬ ಹೆತ್ತವರಾಗಿರುವಲ್ಲಿ ಯೆಹೋವನ ಮಾದರಿಯನ್ನು ಹೇಗೆ ಅನುಕರಿಸಬಹುದು? ನಿಮ್ಮ ಮಕ್ಕಳ ಬೇಡಿಕೆಗಳಿಗೆ ಕಿವಿಗೊಟ್ಟು, ಎಲ್ಲಿ ತಕ್ಕದ್ದಾಗಿದೆಯೋ ಅಲ್ಲಿ ಅವರಿಗೆ ಇಷ್ಟವಾಗುವಂಥ ಕೆಲವು ಬದಲಾವಣೆಗಳನ್ನು ಮಾಡಲು ತಯಾರಿದ್ದೀರಾ? ಇದರ ಜತೆಗೆ, 2007, ಸೆಪ್ಟೆಂಬರ್‌ 1ರ ಕಾವಲಿನಬುರುಜು ತಿಳಿಸಿರುವಂತೆ, ಮನೆಯ ನಿಯಮಗಳ ಬಗ್ಗೆ ಮಾತಾಡುವಾಗ ಮಕ್ಕಳನ್ನು ಸಹ ಒಳಗೂಡಿಸಬಹುದು. ಉದಾಹರಣೆಗೆ, ಮಕ್ಕಳು ಮನೆಗೆ ಎಷ್ಟು ಗಂಟೆಗೆ ಬರಬೇಕು ಎಂದು ಸಮಯವನ್ನು ನಿಗದಿಪಡಿಸುವ ಅಧಿಕಾರ ಹೆತ್ತವರಿಗಿದೆ. ಆದರೂ ಕ್ರೈಸ್ತ ಹೆತ್ತವರು ಇದರ ಬಗ್ಗೆ ತಮ್ಮ ಮಕ್ಕಳ ಅಭಿಪ್ರಾಯವನ್ನು ಸಹ ತಿಳಿದುಕೊಳ್ಳಬಹುದು. ಸಮಯವನ್ನು ನಿಗದಿಪಡಿಸುವುದರಲ್ಲಿ ಕೆಲವು ಹೊಂದಾಣಿಕೆ ಮಾಡಬಹುದು. ಆದರೆ ಬೈಬಲ್‌ ತತ್ವಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕು. ಇಂಥ ವಿಷಯದಲ್ಲಿ ಮಕ್ಕಳ ಭಾವನೆ, ಅಭಿಪ್ರಾಯವನ್ನು ಪರಿಗಣಿಸುವಾಗ ಅವರು ಮನೆಯ ನಿಯಮಗಳನ್ನು ಅರ್ಥಮಾಡಿಕೊಂಡು ಅದಕ್ಕೆ ವಿಧೇಯರಾಗುತ್ತಾರೆ.

19. ಯೆಹೋವನಂತೆ ನ್ಯಾಯಸಮ್ಮತತೆಯನ್ನು ಹಿರಿಯರು ಹೇಗೆ ತೋರಿಸಬಲ್ಲರು?

19 ತಮ್ಮ ಜತೆ ಆರಾಧಕರ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತಾ ಕ್ರೈಸ್ತ ಹಿರಿಯರು ಯೆಹೋವನ ನ್ಯಾಯಸಮ್ಮತತೆಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಬಡ ಇಸ್ರಾಯೇಲ್ಯರು ಸಮರ್ಪಿಸಿದ ಕಾಣಿಕೆಯನ್ನು ಸಹ ಯೆಹೋವನು ಸ್ವೀಕರಿಸಿ ಅಮೂಲ್ಯವಾದದ್ದಾಗಿ ಪರಿಗಣಿಸಿದನು. ಅದೇರೀತಿ, ಕೆಲವು ಸಹೋದರ ಸಹೋದರಿಯರು ಆರೋಗ್ಯ ಸಮಸ್ಯೆಯಿಂದ ಮತ್ತು ಇಳಿವಯಸ್ಸಿನಿಂದ ಕ್ಷೇತ್ರ ಸೇವೆಯಲ್ಲಿ ಹೆಚ್ಚು ಭಾಗವಹಿಸಲು ಆಗದಿರಬಹುದು. ಇಂಥವರು ತಮ್ಮ ಇತಿಮಿತಿಗಳಿಂದಾಗಿ ಮನನೊಂದರೆ ಹಿರಿಯರು ಹೇಗೆ ಸಹಾಯ ಮಾಡಬಹುದು? ಅವರು ದೀನ ಹೃದಯದಿಂದ ನೆರವಾಗಬಹುದು. ‘ನಿಮ್ಮಿಂದಾಗುವುದರಲ್ಲೇ ಉತ್ತಮವಾದದ್ದನ್ನು ಕೊಡುತ್ತಿದ್ದೀರಿ ಅಂತ ಯೆಹೋವನಿಗೆ ಗೊತ್ತಿದೆ’ ಎಂದು ಹೇಳಿ ಅವರಲ್ಲಿ ಭರವಸೆ ಮೂಡಿಸಬಹುದು.—ಮಾರ್ಕ 12:41-44.

20. ನ್ಯಾಯಸಮ್ಮತರಾಗಿರುವುದು ಎಂದರೆ ನಮ್ಮಿಂದಾಗುವುದನ್ನೂ ಮಾಡದೇ ಇರುವುದು ಎಂದರ್ಥವೇ? ವಿವರಿಸಿ.

20 ನ್ಯಾಯಸಮ್ಮತರಾಗಿರುವುದು ಅಂದರೆ ನಮಗೆ ನಾವೇ ದಯೆ ತೋರಿಸಿಕೊಳ್ಳುವುದು ಎಂದಲ್ಲ. ಇನ್ನೂ ಸುಲಭವಾಗಿ ಹೇಳಬೇಕಂದರೆ ನೆಪಕೊಟ್ಟು ದೇವರ ಸೇವೆಯಲ್ಲಿ ಹಿಂದೆ ಬೀಳುವುದಲ್ಲ. (ಮತ್ತಾ. 16:22) ನಮಗೆ ಸಾಮರ್ಥ್ಯ ಇರುವುದಾದರೂ, ದೇವರ ಸೇವೆಯನ್ನು ಅಲ್ಪಸ್ವಲ್ಪ ಮಾಡಿ, ‘ನಾನು ನ್ಯಾಯಸಮ್ಮತತೆಯಿಂದ ವರ್ತಿಸುತ್ತಿದ್ದೀನಿ’ ಅಂತ ಹೇಳುವುದು ತಪ್ಪು. ಇದರ ಬದಲು ನಾವೆಲ್ಲರೂ ದೇವರ ಸೇವೆಯಲ್ಲಿ “ಶಕ್ತಿಯುತವಾಗಿ ಪ್ರಯಾಸ”ಪಡಬೇಕು. (ಲೂಕ 13:24) ದೇವರ ಸೇವೆ ಮಾಡುವಾಗ ನಮ್ಮಲ್ಲಿ ಎರಡು ವಿಷಯಗಳ ಕಡೆಗೆ ಸಮತೂಕ ನೋಟವಿರಬೇಕು. ಒಂದು, ಸೋಮಾರಿಗಳಾಗಿರದೆ ಶ್ರಮಪಟ್ಟು ದೇವರ ಸೇವೆ ಮಾಡಬೇಕು. ಇನ್ನೊಂದು, ನಮ್ಮಿಂದ ಮಾಡಲಾಗದ್ದನ್ನು ದೇವರು ಕೇಳಿಕೊಳ್ಳುವುದಿಲ್ಲ ಎನ್ನುವುದನ್ನು ನೆನಪಿಡಬೇಕು. ನಮ್ಮಿಂದಾಗುವುದರಲ್ಲೇ ಉತ್ತಮವಾದದ್ದನ್ನು ಕೊಡುವಾಗ ದೇವರು ಅದನ್ನು ಮೆಚ್ಚುತ್ತಾನೆ. ಇಷ್ಟೊಂದು ಗಣ್ಯತಾಭಾವವಿರುವ, ನ್ಯಾಯಸಮ್ಮತ ಯಜಮಾನನ ಸೇವೆಮಾಡಲು ನಮಗೆ ಖಂಡಿತ ಖುಷಿಯಾಗುತ್ತದೆ! ಯೆಹೋವನ ಮನಮುಟ್ಟುವ ಗುಣಗಳಲ್ಲಿ ಇನ್ನೆರಡನ್ನು ಮುಂದಿನ ಲೇಖನದಲ್ಲಿ ನೋಡೋಣ.—ಕೀರ್ತ. 73:28.