ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಶಿಸ್ತು ನಮ್ಮನ್ನು ರೂಪಿಸಲಿ

ಯೆಹೋವನ ಶಿಸ್ತು ನಮ್ಮನ್ನು ರೂಪಿಸಲಿ

“ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.”—ಕೀರ್ತ. 73:24.

1, 2. (1) ಯೆಹೋವನ ಜೊತೆಗೆ ಆಪ್ತ ಸಂಬಂಧ ಕಾಪಾಡಿಕೊಳ್ಳಲು ಏನು ಮಾಡಬೇಕು? (2) ಯೆಹೋವನು ಶಿಸ್ತನ್ನು ಕೊಡುವಾಗ ಜನರು ಹೇಗೆ ಪ್ರತಿಕ್ರಿಯಿಸಿದರೆಂಬುದನ್ನು ಓದುವುದರಿಂದ ನಮಗೆ ಏನು ಪ್ರಯೋಜನ?

“ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.” (ಕೀರ್ತ. 73:28) ಈ ಮಾತುಗಳನ್ನು ಹೇಳುವ ಮೂಲಕ ಕೀರ್ತನೆಗಾರ ದೇವರಲ್ಲಿನ ತನ್ನ ಭರವಸೆಯನ್ನು ವ್ಯಕ್ತಪಡಿಸಿದ್ದಾನೆ. ಹೀಗೆ ಹೇಳಲು ಯಾವುದು ಅವನನ್ನು ಪ್ರೇರಿಸಿತು? ಒಂದು ಹಂತದಲ್ಲಿ, ದುಷ್ಟ ಜನರು ಶಾಂತಿಯಿಂದ ಜೀವನ ನಡೆಸುವುದನ್ನು ಅವನು ಕಂಡು ಹೃದಯದಲ್ಲಿ ನೊಂದಿದ್ದನು. ಹಾಗಾಗಿ ಅವನು ದುಃಖಿಸುತ್ತಾ “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ” ಎಂದು ಹೇಳಿದ್ದನು. (ಕೀರ್ತ. 73:2, 3, 13, 21) ಆದರೆ ಯಾವಾಗ ‘ದೇವರ ಆಲಯಕ್ಕೆ’ ಬಂದನೋ ಆಗ ಅವನು ತನ್ನ ಯೋಚನಾಧಾಟಿಯನ್ನು ಸರಿಮಾಡಿಕೊಂಡನು. ಹೀಗೆ ದೇವರ ಜೊತೆಗಿನ ಆಪ್ತತೆಯನ್ನು ಕಾಪಾಡಿಕೊಂಡನು. (ಕೀರ್ತ. 73:16-18) ಈ ಅನುಭವ ದೇವಭೀರು ಕೀರ್ತನೆಗಾರನಿಗೆ ಒಂದು ಪಾಠವನ್ನು ಕಲಿಸಿತು. ಅದೇನೆಂದರೆ ಯೆಹೋವನೊಂದಿಗೆ ಆಪ್ತ ಸಂಬಂಧ ಕಾಪಾಡಿಕೊಳ್ಳಬೇಕಾದರೆ ಆತನು ಕೊಡುವ ಸಲಹೆಯನ್ನು ಕೇಳಿ ಅದರ ಪ್ರಕಾರ ನಡೆಯಬೇಕು.—ಕೀರ್ತ. 73:24.

2 ಜೀವಂತ ಸತ್ಯದೇವರಾಗಿರುವ ಯೆಹೋವನೊಂದಿಗೆ ಆಪ್ತ ಸಂಬಂಧ ಇರಬೇಕೆಂದು ನಾವೂ ಬಯಸುತ್ತೇವೆ. ಆ ಗುರಿಯನ್ನು ತಲುಪಬೇಕಾದರೆ ಮತ್ತು ಆತನು ಮೆಚ್ಚುವ ರೀತಿಯಲ್ಲಿ ಜೀವಿಸಬೇಕಾದರೆ ಆತನ ಸಲಹೆ-ಶಿಸ್ತು ನಮ್ಮನ್ನು ರೂಪಿಸುವಂತೆ ಬಿಟ್ಟುಕೊಡಬೇಕು. ಹಿಂದಿನ ಸಮಯದಲ್ಲಿ ಜನರಿಗೆ ಮತ್ತು ಜನಾಂಗಗಳಿಗೆ ಯೆಹೋವನು ದಯೆಯಿಂದ ಶಿಸ್ತನ್ನು ಕೊಟ್ಟು ತಿದ್ದಿಕೊಳ್ಳಲು ಅವಕಾಶ ಕೊಟ್ಟನು. ಆ ವೃತ್ತಾಂತಗಳು ಬೈಬಲಿನಲ್ಲಿ ನಮ್ಮ ‘ಉಪದೇಶಕ್ಕಾಗಿ’ ಮತ್ತು ‘ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಎಚ್ಚರಿಕೆಯಾಗಿ ಬರೆಯಲ್ಪಟ್ಟವು.’ (ರೋಮ. 15:4; 1 ಕೊರಿಂ. 10:11) ಈ ವೃತ್ತಾಂತಗಳನ್ನು ಜಾಗ್ರತೆಯಿಂದ ಅಧ್ಯಯನ ಮಾಡುವಲ್ಲಿ ಯೆಹೋವನ ವ್ಯಕ್ತಿತ್ವದ ಕುರಿತು ಹೆಚ್ಚನ್ನು ತಿಳಿಯಲು ಆಗುತ್ತೆ. ಆತನು ನಮ್ಮನ್ನು ರೂಪಿಸುವಾಗ ನಮಗೆ ಯಾವ ಪ್ರಯೋಜನ ಇದೆ ಅಂತ ಗೊತ್ತಾಗುತ್ತೆ.

ಯೆಹೋವನು ತನ್ನ ಅಧಿಕಾರವನ್ನು ಕುಂಬಾರನಂತೆ ಬಳಸುತ್ತಾನೆ

3. ಯೆಹೋವನಿಗೆ ಜನರ ಮೇಲಿರುವ ಅಧಿಕಾರವನ್ನು ಯೆಶಾಯ 64:8 ಮತ್ತು ಯೆರೆಮೀಯ 18:1-6 ಹೇಗೆ ವರ್ಣಿಸುತ್ತದೆ? (ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ.)

3 ಯೆಹೋವನಿಗೆ ಜನರ ಮೇಲೆ ಹಾಗೂ ಜನಾಂಗಗಳ ಮೇಲಿರುವ ಅಧಿಕಾರವನ್ನು ವಿವರಿಸಲು ಯೆಶಾಯ 64:8ರಲ್ಲಿ ಈ ದೃಷ್ಟಾಂತ ಕೊಡಲಾಗಿದೆ: “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.” ಕುಂಬಾರನಿಗೆ ಮಣ್ಣಿನ ಮೇಲೆ ಸಂಪೂರ್ಣ ಅಧಿಕಾರವಿದೆ. ತನಗೆ ಇಷ್ಟಬಂದ ರೀತಿಯ ಪಾತ್ರೆಯನ್ನಾಗಿ ಆ ಮಣ್ಣನ್ನು ಅವನು ರೂಪಿಸಬಲ್ಲನು. ತನ್ನನ್ನು ಯಾವ ರೀತಿ ರೂಪಿಸಬೇಕೆಂದು ಮಣ್ಣು ಕುಂಬಾರನಿಗೆ ಹೇಳುವಂತಿಲ್ಲ. ಹಾಗೆಯೇ ಮನುಷ್ಯರಿಗೆ ಸಹ ತಮ್ಮ ಕುಂಬಾರನಾಗಿರುವ ಯೆಹೋವನೊಂದಿಗೆ ವಾಗ್ವಾದ ಮಾಡುವ ಹಕ್ಕಿಲ್ಲ. ಏಕೆಂದರೆ ಆತನ ಕೈಗಳೇ ಅವರಿಗೊಂದು ರೂಪ ಕೊಡುತ್ತವೆ.ಯೆರೆಮೀಯ 18:1-6 ಓದಿ.

4. ದೇವರು ಜನರನ್ನು ಅಥವಾ ಜನಾಂಗಗಳನ್ನು ಮನಸೋಇಚ್ಛೆಯಂತೆ ರೂಪಿಸುತ್ತಾನೋ? ವಿವರಿಸಿ.

4 ಕುಂಬಾರನು ಮಣ್ಣಿಗೆ ರೂಪ ಕೊಡುವಂತೆಯೇ ಯೆಹೋವ ದೇವರು ಪ್ರಾಚೀನ ಇಸ್ರಾಯೇಲ್‌ ಜನಾಂಗವನ್ನು ರೂಪಿಸಿದನು. ಆದರೆ ಕುಂಬಾರನು ರೂಪಿಸುವ ವಿಧಕ್ಕೂ ಯೆಹೋವನ ವಿಧಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಕುಂಬಾರನು ಮಣ್ಣಿನ ಮುದ್ದೆಯನ್ನು ತಕ್ಕೊಂಡು ತನಗೆ ಸಾಧ್ಯವಿರುವ ರೀತಿಯ ಪಾತ್ರೆಯನ್ನು ಮಾಡುತ್ತಾನೆ. ಹಾಗಾದರೆ ಯೆಹೋವನು ಸಹ ಮನಸೋಇಚ್ಛೆಯಂತೆ ಕೆಲವು ಜನಾಂಗಗಳನ್ನು ಅಥವಾ ಜನರನ್ನು ಒಳ್ಳೆಯವರನ್ನಾಗಿ, ಇತರರನ್ನು ಕೆಟ್ಟವರನ್ನಾಗಿ ರೂಪಿಸುತ್ತಾನೋ? ‘ಇಲ್ಲ’ ಎನ್ನುತ್ತದೆ ಬೈಬಲ್‌. ಯೆಹೋವನು ಮಾನವರಿಗೆ ಒಂದು ಅಮೂಲ್ಯ ಉಡುಗೊರೆ ಕೊಟ್ಟಿದ್ದಾನೆ. ಅದೇ ಇಚ್ಛಾಸ್ವಾತಂತ್ರ್ಯ. ಅಂದಮೇಲೆ ಮನುಷ್ಯರ ಇಚ್ಛಾಸ್ವಾತಂತ್ರ್ಯಕ್ಕೆ ತಡೆಯಾಗುವ ರೀತಿಯಲ್ಲಿ ಯೆಹೋವನು ಅಧಿಕಾರವನ್ನು ಬಳಸುವುದಿಲ್ಲ. ಯೆಹೋವನಿಂದ ರೂಪಿಸಲ್ಪಡಲು ಬಿಟ್ಟುಕೊಡುವ ಅಥವಾ ಬಿಡದಿರುವ ಆಯ್ಕೆಯನ್ನು ಮನುಷ್ಯರೇ ಮಾಡಬೇಕು.ಯೆರೆಮೀಯ 18:7-10 ಓದಿ.

5. ತನ್ನಿಂದ ರೂಪಿಸಲ್ಪಡಲು ಮನುಷ್ಯರು ನಿರಾಕರಿಸುವಾಗ ಯೆಹೋವನು ಹೇಗೆ ದೈವಿಕ ಅಧಿಕಾರವನ್ನು ಬಳಸುತ್ತಾನೆ?

5 ಆದರೆ ಮನುಷ್ಯರು ಮಹಾ ಕುಂಬಾರನಾದ ಯೆಹೋವನಿಂದ ರೂಪಿಸಲ್ಪಡಲು ಹಟಮಾರಿತನದಿಂದ ನಿರಾಕರಿಸುವುದಾದರೆ? ಯೆಹೋವನು ತನ್ನ ದೈವಿಕ ಅಧಿಕಾರವನ್ನು ಹೇಗೆ ಬಳಸುತ್ತಾನೆ? ಕುಂಬಾರನ ಕೈಯಲ್ಲಿರುವ ಮಣ್ಣಿನ ಬಗ್ಗೆ ಯೋಚಿಸಿ. ಆ ಮಣ್ಣು ಕುಂಬಾರನು ನೆನಸಿದ್ದ ಪಾತ್ರೆಯನ್ನು ಮಾಡಲು ಯೋಗ್ಯವಾಗಿಲ್ಲವಾದರೆ ಅದರಿಂದ ಬೇರೆ ರೀತಿಯ ಪಾತ್ರೆ ಮಾಡುತ್ತಾನೆ ಅಥವಾ ಮಣ್ಣನ್ನು ಬಿಸಾಡುತ್ತಾನೆ. ಹಾಗಿದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ಮಣ್ಣು ಯೋಗ್ಯವಾಗಿಲ್ಲವೆಂದರೆ ಕುಂಬಾರನದ್ದೇ ತಪ್ಪಿರುತ್ತದೆ. ಆದರೆ ನಮ್ಮ ಕುಂಬಾರನಾದ ಯೆಹೋವನ ಕುರಿತು ಹಾಗಲ್ಲ. (ಧರ್ಮೋ. 32:4) ಒಬ್ಬ ವ್ಯಕ್ತಿ ಯೆಹೋವನಿಂದ ರೂಪಿಸಲ್ಪಡಲು ನಿರಾಕರಿಸುವಲ್ಲಿ ತಪ್ಪು ಆ ವ್ಯಕ್ತಿಯದ್ದೇ. ಯೆಹೋವನು, ತಾನು ರೂಪಿಸುವಾಗ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಹೊಂದಿಕೊಂಡು ಅವನೊಂದಿಗೆ ವ್ಯವಹರಿಸುತ್ತಾನೆ. ಹೀಗೆ ಕುಂಬಾರನಂಥ ಅಧಿಕಾರವನ್ನು ಆತನು ಪ್ರಯೋಗಿಸುತ್ತಾನೆ. ಯಾರು ಒಳ್ಳೇದಾಗಿ ಪ್ರತಿಕ್ರಿಯಿಸುತ್ತಾರೋ ಅವರನ್ನು ಯೆಹೋವನು ಉತ್ತಮವಾಗಿ ರೂಪಿಸುತ್ತಾನೆ. ಉದಾಹರಣೆಗೆ, ಅಭಿಷಿಕ್ತ ಕ್ರೈಸ್ತರು “ಗೌರವಾರ್ಹವಾದ ಬಳಕೆಗಾಗಿ” ರೂಪಿಸಲ್ಪಟ್ಟಿರುವ ‘ಕರುಣೆಯ ಪಾತ್ರೆಗಳಾಗಿದ್ದಾರೆ.’ ಆದರೆ ಯಾರು ಹಟಹಿಡಿದು ದೇವರನ್ನು ವಿರೋಧಿಸುತ್ತಾರೋ ಅವರು ‘ನಾಶನಕ್ಕೆ ಯೋಗ್ಯವಾದ ಕ್ರೋಧದ ಪಾತ್ರೆಗಳಾಗುತ್ತಾರೆ.’—ರೋಮ. 9:19-23.

6, 7. ರಾಜ ದಾವೀದ ಹಾಗೂ ರಾಜ ಸೌಲ ಯೆಹೋವನ ಸಲಹೆಗೆ ಹೇಗೆ ಪ್ರತಿಕ್ರಿಯಿಸಿದರು?

 6 ಯೆಹೋವನು ಜನರನ್ನು ರೂಪಿಸುವ ಒಂದು ವಿಧ ಸಲಹೆ ಮತ್ತು ಶಿಸ್ತನ್ನು ಕೊಡುವ ಮೂಲಕ. ಇದನ್ನು ನಾವು ಇಸ್ರಾಯೇಲಿನ ಮೊದಲ ಇಬ್ಬರು ರಾಜರಾದ ಸೌಲ ಹಾಗೂ ದಾವೀದನೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯಿಂದ ತಿಳಿಯಬಹುದು. ರಾಜ ದಾವೀದ ಬತ್ಷೆಬೆಯೊಂದಿಗೆ ವ್ಯಭಿಚಾರಮಾಡಿದಾಗ ಅವನೂ ಇತರರೂ ಕೆಟ್ಟ ಪರಿಣಾಮಗಳನ್ನು ಅನುಭವಿಸಿದರು. ದಾವೀದನು ರಾಜನಾಗಿದ್ದರೂ ಅವನಿಗೆ ಯೆಹೋವನು ಶಿಸ್ತು ಕೊಡದೇ ಬಿಡಲಿಲ್ಲ. ಪ್ರವಾದಿ ನಾತಾನನನ್ನು ಕಳುಹಿಸಿ ಗಂಭೀರ ಶಿಸ್ತು ಕೊಟ್ಟನು. (2 ಸಮು. 12:1-12) ಅದಕ್ಕೆ ದಾವೀದ ಹೇಗೆ ಪ್ರತಿಕ್ರಿಯಿಸಿದನು? ಅವನು ಬಹಳ ನೊಂದುಕೊಂಡು ಪಶ್ಚಾತ್ತಾಪಪಟ್ಟನು. ಹಾಗಾಗಿ ಯೆಹೋವನು ಅವನಿಗೆ ಕರುಣೆ ತೋರಿಸಿದನು.2 ಸಮುವೇಲ 12:13 ಓದಿ.

 7 ಆದರೆ ದಾವೀದನ ಮುಂಚೆ ರಾಜನಾಗಿದ್ದ ಸೌಲನ ಮನೋಭಾವವೇ ಬೇರೆಯಾಗಿತ್ತು. ಯೆಹೋವನು ಕೊಟ್ಟ ಸಲಹೆಗೆ ಅವನು ಕಿವಿಗೊಡಲಿಲ್ಲ. ಎಲ್ಲ ಅಮಾಲೇಕ್ಯರನ್ನು ಮತ್ತು ಅವರ ಎಲ್ಲ ಪಶುಗಳನ್ನು ನಾಶಮಾಡಬೇಕೆಂದು ದೇವರು ಅವನಿಗೆ ಪ್ರವಾದಿ ಸಮುವೇಲನ ಮೂಲಕ ಸ್ಪಷ್ಟ ನಿರ್ದೇಶನ ಕೊಟ್ಟಿದ್ದನು. ಆದರೆ ದೇವರ ಈ ಆಜ್ಞೆಗೆ ಸೌಲ ವಿಧೇಯನಾಗಲಿಲ್ಲ. ರಾಜನಾದ ಅಗಾಗನನ್ನೂ ಉತ್ತಮ ಪಶುಗಳನ್ನೂ ಜೀವಂತ ಉಳಿಸಿದನು. ಏಕೆ? ಅದಕ್ಕೆ ಒಂದು ಕಾರಣ ತನಗೆ ಘನತೆ ಸಿಗಬೇಕೆಂಬುದೇ. (1 ಸಮು. 15:1-3, 7-9, 12) ಈ ತಪ್ಪಿನ ಕುರಿತು ದೇವರು ಸಲಹೆ ಕೊಟ್ಟಾಗ ಸೌಲ ತನ್ನ ಮನೋಭಾವವನ್ನು ಸರಿಪಡಿಸಿಕೊಂಡು ಮಹಾ ಕುಂಬಾರನಾದ ಯೆಹೋವನು ತನ್ನನ್ನು ರೂಪಿಸುವಂತೆ ಬಿಟ್ಟುಕೊಡಬೇಕಿತ್ತು. ಆದರೆ ಹಾಗೆ ಮಾಡದೆ ತಾನು ಮಾಡಿದ್ದನ್ನು ಸಮರ್ಥಿಸಲು ಪ್ರಯತ್ನಿಸಿದನು. ‘ಯೆಹೋವನಿಗೆ ಯಜ್ಞವನ್ನರ್ಪಿಸುವ ಉದ್ದೇಶದಿಂದ ಪಶುಗಳನ್ನು ತಂದಿದ್ದೇನೆ, ಹಾಗಾಗಿ ತಾನು ಮಾಡಿದ್ದೇನೂ ತಪ್ಪಲ್ಲ’ ಎಂದು ವಾದಿಸಿದನು. ಸಮುವೇಲನ ಬುದ್ಧಿವಾದವನ್ನು ಅಲ್ಲಗಳೆದನು. ಪರಿಣಾಮ? ಯೆಹೋವನು ಸೌಲನನ್ನು ರಾಜನ ಸ್ಥಾನದಿಂದ ತಳ್ಳಿದನು. ದೇವರೊಂದಿಗೆ ಅವನಿಗೆ ಮುಂದೆಂದೂ ಸುಸಂಬಂಧವಿರಲಿಲ್ಲ.1 ಸಮುವೇಲ 15:13-15, 20-23 ಓದಿ.

ದೇವರು ಪಕ್ಷಪಾತಿಯಲ್ಲ

8. ಯೆಹೋವನು ರೂಪಿಸುವಾಗ ಇಸ್ರಾಯೇಲ್‌ ಜನಾಂಗ ಪ್ರತಿಕ್ರಿಯಿಸಿದ ವಿಧದಿಂದ ನಮಗೆ ಯಾವ ಪಾಠವಿದೆ?

8 ಯೆಹೋವನು ಒಬ್ಬೊಬ್ಬ ವ್ಯಕ್ತಿಯನ್ನು ಮಾತ್ರವಲ್ಲ ಜನಾಂಗಗಳನ್ನೇ ರೂಪಿಸಲು ಬಯಸುತ್ತಾನೆ. ಉದಾಹರಣೆಗೆ, ಕ್ರಿ.ಪೂ. 1513ರಲ್ಲಿ ಇಸ್ರಾಯೇಲ್‌ ಜನಾಂಗ ಈಜಿಪ್ಟ್‌ನ ಬಂಧಿವಾಸದಿಂದ ಬಿಡುಗಡೆ ಹೊಂದಿತು. ದೇವರು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಇಸ್ರಾಯೇಲ್‌ ಯೆಹೋವನ ಸ್ವಕೀಯ ಜನಾಂಗವಾಯಿತು. ಆದ್ದರಿಂದ ಕುಂಬಾರನ ಚಕ್ರದಲ್ಲಿ ಮಣ್ಣು ರೂಪ ಪಡೆಯುವಂತೆಯೇ ಆ ಜನಾಂಗಕ್ಕೆ ಮಹಾ ಕುಂಬಾರನಿಂದ ರೂಪುಗೊಳ್ಳುವ ಒಳ್ಳೇ ಅವಕಾಶವಿತ್ತು. ಆದರೆ ಅವರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡತೊಡಗಿದರು. ನೆರೆಹೊರೆಯ ಜನಾಂಗಗಳು ಪೂಜಿಸುತ್ತಿದ್ದ ದೇವರುಗಳನ್ನು ಆರಾಧಿಸತೊಡಗಿದರು. ದೇವರು ಪ್ರವಾದಿಗಳನ್ನು ಕಳುಹಿಸುತ್ತಾ ಪದೇಪದೇ ಅವರ ತಪ್ಪನ್ನು ಮನಗಾಣಿಸಲು ಪ್ರಯತ್ನಿಸಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. (ಯೆರೆ. 35:12-15) ಅವರು ಹೀಗೆ ಹಟಮಾರಿಗಳಾಗಿ ವರ್ತಿಸಿದ್ದರಿಂದ ದೇವರು ಅವರಿಗೆ ಕಠಿಣವಾದ ಶಿಸ್ತನ್ನು ಕೊಟ್ಟನು. ಆ ಜನಾಂಗ ನಾಶನಕ್ಕೆ ಯೋಗ್ಯವಾದ ಪಾತ್ರೆಯಾಯಿತು. ಆ ಜನಾಂಗದ ಉತ್ತರದ ಹತ್ತು ಕುಲಗಳನ್ನು ಅಶ್ಶೂರ್ಯರು, ದಕ್ಷಿಣದ ಇನ್ನೆರಡು ಕುಲಗಳನ್ನು ಬಾಬೆಲಿನವರು ವಶಪಡಿಸಿಕೊಂಡರು. ಇದು ನಮಗೆಲ್ಲರಿಗೂ ಒಂದು ಪಾಠವಾಗಿದೆ. ಯೆಹೋವನು ನಮ್ಮನ್ನು ರೂಪಿಸುವಾಗ ಅದನ್ನು ಸ್ವೀಕರಿಸಿದರೆ ಮಾತ್ರ ನಾವು ಪ್ರಯೋಜನ ಪಡೆಯುತ್ತೇವೆ.

9, 10. ದೇವರು ಕೊಟ್ಟ ಎಚ್ಚರಿಕೆಗೆ ನಿನೆವೆಯ ಜನರು ಹೇಗೆ ಪ್ರತಿಕ್ರಿಯಿಸಿದರು?

9 ತನ್ನಿಂದ ರೂಪಿಸಲ್ಪಡುವ ಅವಕಾಶವನ್ನು ಯೆಹೋವನು ಅಶ್ಶೂರದ ರಾಜಧಾನಿಯಾದ ನಿನೆವೆಯ ಜನರಿಗೆ ಸಹ ಕೊಟ್ಟನು. ಅವರ ಕೆಟ್ಟ ನಡತೆಯ ಪರಿಣಾಮದ ಬಗ್ಗೆ ಎಚ್ಚರಿಸಿದನು. ಯೆಹೋವನು ಯೋನನಿಗೆ “ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸು; ಅದರ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ” ಎಂದು ಹೇಳಿದನು. ನಿನೆವೆ ನಾಶನಕ್ಕೆ ಅರ್ಹ ಎಂದು ಯೆಹೋವನು ನಿರ್ಧರಿಸಿದನು.—ಯೋನ 1:1, 2; 3:1-4.

10 ನಿನೆವೆಯ ನಾಶನದ ಕುರಿತು ಸಂದೇಶವನ್ನು ಯೋನ ಪ್ರಕಟಿಸಿದಾಗ “ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಗೊತ್ತುಮಾಡಿ ಸಾರಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.” ನಿನೆವೆಯ ಅರಸನು “ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತನು.” ಯೆಹೋವನು ನಿನೆವೆಯ ಜನರನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾಗ ಅದನ್ನವರು ಸ್ವೀಕರಿಸಿದರು. ಹಾಗಾಗಿ ಯೆಹೋವನು ಆ ಪಟ್ಟಣವನ್ನು ನಾಶಮಾಡದೆ ಉಳಿಸಿದನು.—ಯೋನ 3:5-10.

11. ಯೆಹೋವನು ಇಸ್ರಾಯೇಲ್ಯರೊಂದಿಗೆ ಹಾಗೂ ನಿನೆವೆಯ ಜನರೊಂದಿಗೆ ವ್ಯವಹರಿಸುವಾಗ ಆತನ ಯಾವ ಗುಣ ತೋರಿಬಂತು?

11 ಇಸ್ರಾಯೇಲ್ಯರು ತನ್ನ ಸ್ವಕೀಯ ಜನರೆಂಬ ಕಾರಣಕ್ಕೆ ಯೆಹೋವನು ಅವರಿಗೆ ಶಿಸ್ತು ಕೊಡದೇ ಇರಲಿಲ್ಲ. ಅದೇ ನಿನೆವೆಯವರ ಕುರಿತು ಯೋಚಿಸಿ. ದೇವರು ಅವರೊಂದಿಗೆ ಯಾವುದೇ ಒಡಂಬಡಿಕೆ ಮಾಡಿರಲಿಲ್ಲವಾದರೂ ಅವರು ಕೆಟ್ಟದ್ದನ್ನು ಮಾಡಿದಾಗ ತೀರ್ಪನ್ನು ಪ್ರಕಟಿಸಿದನು. ಆದರೆ ಅವರು ಹದವಾದ ಮಣ್ಣಿನಂತೆ ದೇವರ ಕೈಯಲ್ಲಿ ರೂಪುಗೊಳ್ಳಲು ತಮ್ಮನ್ನು ಬಿಟ್ಟುಕೊಟ್ಟಾಗ ಆತನು ಕರುಣೆ ತೋರಿಸಿದನು. ಈ ವೃತ್ತಾಂತಗಳು ದೇವರು “ದಾಕ್ಷಿಣ್ಯ” ಅಥವಾ ಭೇದಭಾವ ತೋರಿಸುವವನಲ್ಲ ಎನ್ನುವುದಕ್ಕೆ ಎಂಥ ಒಳ್ಳೇ ನಿದರ್ಶನಗಳಲ್ಲವೆ!—ಧರ್ಮೋ. 10:17.

ನ್ಯಾಯಸಮ್ಮತನು, ಹೊಂದಿಸಿಕೊಳ್ಳುವವನು

12, 13. (1) ತನ್ನ ರೂಪಿಸುವಿಕೆಗೆ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದಾಗ ಯೆಹೋವನು ತನ್ನ ನಿರ್ಣಯವನ್ನು ಬದಲಾಯಿಸುತ್ತಾನೆ ಏಕೆ? (2) ಸೌಲ ಮತ್ತು ನಿನೆವೆಯ ವಿಷಯದಲ್ಲಿ ಯೆಹೋವನು ‘ಪಶ್ಚಾತ್ತಾಪಪಟ್ಟದ್ದು’ ಅಥವಾ ‘ಮನಮರುಗಿದ್ದು’ ಯಾವ ಅರ್ಥದಲ್ಲಿ?

12 ನಮ್ಮನ್ನು ರೂಪಿಸಲು ಯೆಹೋವನಲ್ಲಿರುವ ಬಯಕೆಯೇ ಆತನ ನ್ಯಾಯಸಮ್ಮತತೆಯನ್ನು, ಹೊಂದಿಸಿಕೊಳ್ಳುವ ಗುಣವನ್ನು ಎತ್ತಿತೋರಿಸುತ್ತದೆ. ಜನರ ಮೇಲೆ ನ್ಯಾಯತೀರ್ಪನ್ನು ಪ್ರಕಟಿಸಿ ನಂತರ ಅವರ ಪ್ರತಿಕ್ರಿಯೆ ನೋಡಿ ಯೆಹೋವನು ಮನಸ್ಸು ಬದಲಾಯಿಸಿಕೊಂಡ ಸನ್ನಿವೇಶಗಳಿಂದ ಇದು ಇನ್ನೂ ಸ್ಪಷ್ಟವಾಗುತ್ತದೆ. ಇಸ್ರಾಯೇಲಿನ ರಾಜ ಸೌಲನ ಬಗ್ಗೆ ಹೇಳುವಾಗ ಯೆಹೋವನು ‘ಅವನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟನು’ ಎನ್ನುತ್ತದೆ ಬೈಬಲ್‌. (1 ಸಮು. 15:10) ನಿನೆವೆಯ ಜನರು ಪಶ್ಚಾತ್ತಾಪಪಟ್ಟು ಕೆಟ್ಟ ನಡತೆಯನ್ನು ಬಿಟ್ಟುಬಿಟ್ಟಾಗ ‘ದೇವರು ಮನಮರುಗಿ ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.’—ಯೋನ 3:10.

13 “ಪಶ್ಚಾತ್ತಾಪಪಟ್ಟನು” ಮತ್ತು “ಮನಮರುಗಿ”ದನು ಎಂದು ಅನುವಾದಿಸಲಾಗಿರುವ ಹೀಬ್ರು ಪದದ ಅರ್ಥ ಮನೋಭಾವ ಅಥವಾ ನಿರ್ಣಯವನ್ನು ಬದಲಾಯಿಸಿಕೊಳ್ಳುವುದು ಎಂದಾಗಿದೆ. ಸೌಲನನ್ನು ರಾಜನಾಗಿ ಆಯ್ಕೆಮಾಡಿದ ಯೆಹೋವನು ತನ್ನ ಮನೋಭಾವವನ್ನು ಬದಲಾಯಿಸಿ ಅವನನ್ನು ರಾಜನ ಸ್ಥಾನದಿಂದ ತಳ್ಳಿಹಾಕಿದನು. ಇದರರ್ಥ ಯೆಹೋವನು ಮಾಡಿದ ಆಯ್ಕೆ ತಪ್ಪಾಗಿತ್ತು ಎಂದಲ್ಲ, ಬದಲಿಗೆ ಸೌಲನು ಯೆಹೋವನಲ್ಲಿ ನಂಬಿಕೆಯಿಡದೆ ಅವಿಧೇಯನಾದ್ದರಿಂದ ಯೆಹೋವನು ಅವನನ್ನು ತಿರಸ್ಕರಿಸಿದನು. ನಿನೆವೆಯ ಜನರ ಬಗ್ಗೆ ದೇವರು ಮನಮರುಗಿದನು, ಅಂದರೆ ಅವರ ಕುರಿತು ಮಾಡಿದ ಯೋಚನೆಯನ್ನು ಬದಲಾಯಿಸಿದನು. ಹೌದು, ನಮ್ಮ ಕುಂಬಾರನಾದ ಯೆಹೋವನು ನ್ಯಾಯಸಮ್ಮತ, ಹೊಂದಿಸಿಕೊಳ್ಳುವವನು, ಸೌಹಾರ್ದ, ಕರುಣಾಭರಿತನು. ತಪ್ಪುಮಾಡಿದವರು ಕೆಟ್ಟ ಮಾರ್ಗದಿಂದ ತಿರುಗಿದಾಗ ಅವರಿಗಾಗಿ ತನ್ನ ಯೋಜನೆಯನ್ನು ಬದಲಾಯಿಸಲೂ ಸಿದ್ಧನು. ಇಂಥ ಕುಂಬಾರನ ಕೈಯಲ್ಲಿ ರೂಪ ಪಡೆಯುವುದು ನಮಗಿರುವ ದೊಡ್ಡ ಸುಯೋಗ!

ಯೆಹೋವನ ಶಿಸ್ತನ್ನು ತಿರಸ್ಕರಿಸದಿರೋಣ

14. (1) ಯೆಹೋವನು ಇಂದು ನಮ್ಮನ್ನು ಹೇಗೆ ರೂಪುಗೊಳಿಸುತ್ತಾನೆ? (2) ದೇವರು ನಮ್ಮನ್ನು ರೂಪಿಸುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು?

14 ಇಂದು ಯೆಹೋವನು ಮುಖ್ಯವಾಗಿ ತನ್ನ ವಾಕ್ಯವಾದ ಬೈಬಲ್‌ ಹಾಗೂ ತನ್ನ ಸಂಘಟನೆಯ ಮೂಲಕ ನಮ್ಮನ್ನು ರೂಪಿಸುತ್ತಿದ್ದಾನೆ. (2 ತಿಮೊ. 3:16, 17) ಹಾಗಾಗಿ ಈ ಮೂಲಗಳಿಂದ ಯಾವುದೇ ಸಲಹೆ-ಶಿಸ್ತು ದೊರೆತಲ್ಲಿ ಅದನ್ನು ನಾವು ಸ್ವೀಕರಿಸಬೇಕಲ್ಲವೇ? ನಾವು ಎಷ್ಟೇ ವರ್ಷಗಳಿಂದ ಸತ್ಯದಲ್ಲಿರಲಿ, ಎಷ್ಟೇ ಸೇವಾ ಸುಯೋಗಗಳು ನಮಗಿರಲಿ ಯೆಹೋವನು ಶಿಸ್ತು ಕೊಡುವಾಗ ಸ್ವೀಕರಿಸಬೇಕು. ಹೀಗೆ ನಮ್ಮನ್ನು ಆತನು ಗೌರವಾರ್ಹವಾದ ಬಳಕೆಗಾಗಿರುವ ಪಾತ್ರೆಯನ್ನಾಗಿ ರೂಪಿಸುವಂತೆ ಬಿಟ್ಟುಕೊಡಬೇಕು.

15, 16. (1) ಸೇವಾಸುಯೋಗಗಳನ್ನು ಕಳೆದುಕೊಳ್ಳುವಲ್ಲಿ ಯಾವ ನಕಾರಾತ್ಮಕ ಭಾವನೆಗಳು ಬರಬಹುದು? ಉದಾಹರಣೆ ಕೊಡಿ. (2) ಶಿಸ್ತು ಸಿಕ್ಕಾಗ ಬರುವ ನಕಾರಾತ್ಮಕ ಭಾವನೆಗಳನ್ನು ಜಯಿಸಲು ಯಾವುದು ಸಹಾಯಮಾಡುವುದು?

15 ಬುದ್ಧಿವಾದ ಅಥವಾ ತಿದ್ದುಪಾಟಿನ ರೂಪದಲ್ಲೂ ನಮಗೆ ಶಿಸ್ತು ಸಿಗಬಹುದು. ಕೆಲವೊಮ್ಮೆ ಯಾವುದೋ ತಪ್ಪು ಮಾಡಿದ್ದಕ್ಕಾಗಿ ನಮಗೆ ಶಿಸ್ತು ಸಿಗಬಹುದು. ಇದರಿಂದಾಗಿ ನಮಗಿರುವ ಸೇವಾಸುಯೋಗಗಳನ್ನೂ ಕಳೆದುಕೊಳ್ಳಬೇಕಾಗಬಹುದು. ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದ ಡೆನಿಸ್‌ * ಎಂಬ ಸಹೋದರನ ಉದಾಹರಣೆ ಗಮನಿಸಿ. ವ್ಯಾಪಾರ ವಹಿವಾಟಿನಲ್ಲಿ ತಪ್ಪು ನಿರ್ಣಯ ಮಾಡಿದ್ದರಿಂದ ಅವರಿಗೆ ಖಾಸಗಿಯಾಗಿ ತಪ್ಪನ್ನು ಮನಗಾಣಿಸಲಾಯಿತು. ಅವರು ಹಿರಿಯರಾಗಿ ಸೇವೆಸಲ್ಲಿಸುವುದಿಲ್ಲ ಎಂದು ಸಭೆಯಲ್ಲಿ ಪ್ರಕಟಿಸಿದಾಗ ಅವರಿಗಾದ ಅನಿಸಿಕೆಯನ್ನು ಅವರ ಮಾತಲ್ಲೇ ಕೇಳಿ: “ನಾನು ಪೂರ್ಣವಾಗಿ ಸೋತುಹೋದೆ ಎಂಬ ಭಾವನೆ ನನ್ನನ್ನಾವರಿಸಿತು. ಮೂವತ್ತು ವರ್ಷಗಳಲ್ಲಿ ಎಷ್ಟೋ ಸೇವಾಸುಯೋಗಗಳು ನನಗೆ ದೊರಕಿದ್ದವು. ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುತ್ತಿದ್ದೆ. ಬೆತೆಲ್‌ನಲ್ಲಿ ಸೇವೆ ಸಲ್ಲಿಸಿದ್ದೆ. ಶುಶ್ರೂಷಾ ಸೇವಕನಾಗಿದ್ದೆ, ನಂತರ ಹಿರಿಯನನ್ನಾಗಿ ನೇಮಿಸಲಾಯಿತು. ಇತ್ತೀಚೆಗಷ್ಟೇ ಮೊದಲ ಬಾರಿ ಅಧಿವೇಶನದಲ್ಲಿ ಭಾಷಣ ಕೊಡುವ ಸುಯೋಗ ಸಿಕ್ಕಿತ್ತು. ಅಷ್ಟರಲ್ಲೇ ಎಲ್ಲ ಕಳೆದುಕೊಂಡುಬಿಟ್ಟೆ. ನಾಚಿಕೆ, ಮುಜುಗುರವಾಗುತ್ತಿತ್ತು. ನನಗೆ ಸಂಘಟನೆಯಲ್ಲಿ ಜಾಗವೇ ಇಲ್ಲ ಎಂದನಿಸುತ್ತಿತ್ತು.”

16 ಈ ಸಹೋದರ ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳಬೇಕಿತ್ತು. ಆದರೆ ಅವರಲ್ಲಿದ್ದ ನಕಾರಾತ್ಮಕ ಭಾವನೆಗಳನ್ನು ಕಿತ್ತೊಗೆಯಲು ಯಾವುದು ಸಹಾಯಮಾಡಿತು? ಅವರು ಹೀಗನ್ನುತ್ತಾರೆ: “ನನಗಿದ್ದ ಒಳ್ಳೇ ಆಧ್ಯಾತ್ಮಿಕ ರೂಢಿಯನ್ನು ಮುಂದುವರಿಸಲು ನಿರ್ಧರಿಸಿದೆ. ಸಹೋದರರು ತುಂಬ ಸಹಾಯಮಾಡಿದರು. ಪ್ರಕಾಶನಗಳಿಂದ ತುಂಬ ಉತ್ತೇಜನ ಸಿಕ್ಕಿತು. ಮುಖ್ಯವಾಗಿ 2009, ಆಗಸ್ಟ್‌ 15ರ ಕಾವಲಿನಬುರುಜುವಿನಲ್ಲಿರುವ ‘ನೀವು ಹಿಂದೊಮ್ಮೆ ಸೇವೆ ಮಾಡಿದ್ದೀರೋ? ಅದನ್ನು ಪುನಃ ಮಾಡಬಲ್ಲಿರೋ?’ ಎಂಬ ಲೇಖನ ನನ್ನ ಪ್ರಾರ್ಥನೆಗಳಿಗೆ ಉತ್ತರದಂತಿತ್ತು. ಅದರಲ್ಲಿರುವ ಸಲಹೆಗಳಲ್ಲಿ ನನಗೆ ಹೆಚ್ಚು ಇಷ್ಟವಾದ ಸಲಹೆಯಿದು: ‘ಸಭೆಯಲ್ಲಿ ನಿಮಗೆ ಈಗ ಹೆಚ್ಚಿನ ಜವಾಬ್ದಾರಿಗಳಿಲ್ಲದಿರುವುದರಿಂದ ನಿಮ್ಮ ಆಧ್ಯಾತ್ಮಿಕತೆಯನ್ನು ಬಲಗೊಳಿಸುವುದರತ್ತ ಹೆಚ್ಚು ಗಮನಹರಿಸಿ.’” ಈ ಸಹೋದರ ತನಗೆ ಸಿಕ್ಕಿದ ಶಿಸ್ತಿನಿಂದ ಪ್ರಯೋಜನ ಪಡೆದರೋ? ಹೌದು. ಕೆಲವು ವರ್ಷಗಳ ನಂತರ ಅವರು ಹೇಳಿದ ಮಾತುಗಳಿವು: “ಶುಶ್ರೂಷಾ ಸೇವಕನಾಗಿ ಸೇವೆ ಸಲ್ಲಿಸುವ ಸುಯೋಗವನ್ನು ಕೊಟ್ಟು ಯೆಹೋವನು ನನ್ನನ್ನು ಪುನಃ ಒಮ್ಮೆ ಆಶೀರ್ವದಿಸಿದ್ದಾನೆ.”

17. ತಪ್ಪಿತಸ್ಥನು ಪಶ್ಚಾತ್ತಾಪ ಪಡುವಂತೆ ಬಹಿಷ್ಕಾರ ಹೇಗೆ ನೆರವಾಗಬಲ್ಲದು? ಉದಾಹರಣೆ ಕೊಡಿ.

17 ಬಹಿಷ್ಕಾರ ಸಹ ಯೆಹೋವನು ಕೊಡುವ ಶಿಸ್ತಿನ ಒಂದು ವಿಧ. ಇದು ಸಭೆಯನ್ನು ಸಂರಕ್ಷಿಸುತ್ತದೆ ಹಾಗೂ ತಪ್ಪಿತಸ್ಥನು ಪಶ್ಚಾತ್ತಾಪಪಡುವಂತೆ ಸಹಾಯಮಾಡುತ್ತದೆ. (1 ಕೊರಿಂ. 5:6, 7, 11) ಈ ಉದಾಹರಣೆ ಗಮನಿಸಿ. ರಾಬರ್ಟ್‌ ಎಂಬವರನ್ನು ಬಹಿಷ್ಕರಿಸಲಾಗಿತ್ತು. ಅವರು ಬಹಿಷ್ಕೃತರಾಗಿದ್ದ 16 ವರ್ಷಗಳ ಕಾಲ ಅವನ ಹೆತ್ತವರು, ಒಡಹುಟ್ಟಿದ ಸಹೋದರರು ಅವನೊಂದಿಗೆ ಸಹವಾಸ ಮಾಡಲಿಲ್ಲ. ಬಹಿಷ್ಕೃತರೊಂದಿಗೆ ಸಹವಾಸವನ್ನು ಬಿಟ್ಟುಬಿಡಬೇಕು ಹಾಗೂ ಅವರನ್ನು ವಂದಿಸಲೂಬಾರದು ಎಂಬ ಬೈಬಲ್‌ ಸಲಹೆಯನ್ನು ದೃಢವಾಗಿ ಹಾಗೂ ನಿಷ್ಠೆಯಿಂದ ಪಾಲಿಸಿದರು. ಕೆಲವು ವರ್ಷಗಳ ಹಿಂದೆ ರಾಬರ್ಟ್‌ರನ್ನು ಸಭೆಗೆ ಪುನಃಸ್ಥಾಪಿಸಲಾಯಿತು. ಅವರೀಗ ಆಧ್ಯಾತ್ಮಿಕವಾಗಿ ಒಳ್ಳೇ ಪ್ರಗತಿ ಮಾಡುತ್ತಿದ್ದಾರೆ. ಅಷ್ಟು ವರ್ಷಗಳ ನಂತರ ಯೆಹೋವನ ಹತ್ತಿರ ಹಾಗೂ ಆತನ ಜನರ ಹತ್ತಿರ ಹಿಂದಿರುಗಲು ಯಾವುದು ಸಹಾಯಮಾಡಿತು ಎಂದು ಕೇಳಿದಾಗ ರಾಬರ್ಟ್‌ ಹೇಳಿದ್ದು: “ನನ್ನ ಕುಟುಂಬದವರು ನನ್ನೊಂದಿಗೆ ಸ್ವಲ್ಪವೂ ಸಹವಾಸ ಮಾಡಲಿಲ್ಲ. ನಾನು ಹೇಗಿದ್ದೇನೆ ಎಂದು ಕೇಳಲಿಕ್ಕಷ್ಟೇ ನನ್ನೊಂದಿಗೆ ಮಾತಾಡಿದ್ದರೂ ಸಾಕು, ನಾನು ಅದರಿಂದ ತೃಪ್ತನಾಗುತ್ತಿದ್ದೆ. ಆದರೆ ಅವರು ಹಾಗೆ ಮಾಡದೆ ಇದ್ದದರಿಂದ ಸಹವಾಸಕ್ಕಾಗಿ ನನ್ನಲ್ಲಿದ್ದ ತುಡಿತ ಯೆಹೋವನ ಕಡೆಗೆ ಹಿಂದಿರುಗುವಂತೆ ಮಾಡಿತು.”

18. ಮಹಾ ಕುಂಬಾರನ ಕೈಯಲ್ಲಿ ಯಾವ ವಿಧದ ಮಣ್ಣು ನಾವಾಗಿರಬೇಕು?

18 ನಮಗೆ ಇಂಥದ್ದೇ ಶಿಸ್ತು ಬೇಕಾಗಲಿಕ್ಕಿಲ್ಲ. ಆದರೆ ಮಹಾ ಕುಂಬಾರನಾದ ಯೆಹೋವನ ಕೈಯಲ್ಲಿ ಯಾವ ವಿಧದ ಮಣ್ಣು ನಾವಾಗಿದ್ದೇವೆ? ಶಿಸ್ತು ಸಿಕ್ಕಾಗ ಹೇಗೆ ಪ್ರತಿಕ್ರಿಯಿಸುತ್ತೇವೆ? ದಾವೀದನಂತೆಯಾ ಅಥವಾ ಸೌಲನಂತೆ? ಮಹಾ ಕುಂಬಾರನು ನಮ್ಮ ತಂದೆಯಾಗಿದ್ದಾನೆ. ನೆನಪಿಡಿ, “ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” ಆದ್ದರಿಂದ ‘ಯೆಹೋವನ ಶಿಕ್ಷೆಯನ್ನು ತಾತ್ಸಾರಮಾಡಬೇಡಿ. ಆತನು ಗದರಿಸುವಾಗ ಬೇಸರಗೊಳ್ಳಬೇಡಿ.’—ಜ್ಞಾನೋ. 3:11, 12.

^ ಪ್ಯಾರ. 15 ಹೆಸರುಗಳನ್ನು ಬದಲಾಯಿಸಲಾಗಿದೆ.