ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಪವಿತ್ರೀಕರಿಸಲ್ಪಟ್ಟಿದ್ದೀರಿ

ನೀವು ಪವಿತ್ರೀಕರಿಸಲ್ಪಟ್ಟಿದ್ದೀರಿ

ನೀವು ಪವಿತ್ರೀಕರಿಸಲ್ಪಟ್ಟಿದ್ದೀರಿ

“ನೀವು ತೊಳೆದು ಶುದ್ಧೀಕರಿಸಲ್ಪಟ್ಟಿದ್ದೀರಿ, ಪವಿತ್ರೀಕರಿಸಲ್ಪಟ್ಟಿದ್ದೀರಿ.”—1 ಕೊರಿಂ. 6:11.

ಉತ್ತರ ಕೊಡಬಲ್ಲಿರಾ?

ಕೆಟ್ಟ ಸಹವಾಸದಿಂದ ನಾವೇಕೆ ದೂರವಿರಬೇಕು?

ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನು ನಾವು ಬೆಂಬಲಿಸುವುದು ಹೇಗೆ?

ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಟ್ಟು ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡುವುದು?

1. ನೆಹೆಮೀಯನು ಯೆರೂಸಲೇಮಿಗೆ ಹಿಂದಿರುಗಿದಾಗ ಯಾವ ದುಃಖಕರ ಪರಿಸ್ಥಿತಿಯನ್ನು ಕಂಡನು? (ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ.)

ಯೆರೂಸಲೇಮಿನ ಜನರೆಲ್ಲ ಇದನ್ನೇ ಮಾತಾಡಿಕೊಳ್ಳುತ್ತಿದ್ದಾರೆ. ಏನನ್ನು? ದೇವಜನರ ವಿರೋಧಿಯಾಗಿದ್ದ ವಿದೇಶೀಯನೊಬ್ಬ ದೇವಾಲಯದ ಕೊಠಡಿಯಲ್ಲಿ ಬಿಡಾರ ಹೂಡಿದ್ದಾನೆ. ಲೇವಿಯರು ದೇವಾಲಯದ ಸೇವೆಯನ್ನು ಬಿಟ್ಟುಹೋಗುತ್ತಿದ್ದಾರೆ. ಸಬ್ಬತ್‌ ದಿನಗಳಂದು ಹಿರಿಯರು ಆರಾಧನೆಯಲ್ಲಿ ನೇತೃತ್ವ ವಹಿಸುವುದನ್ನು ಬಿಟ್ಟು ತಮ್ಮ ವ್ಯಾಪಾರಗಳಲ್ಲೇ ಮುಳುಗಿದ್ದಾರೆ. ಅನೇಕ ಇಸ್ರಾಯೇಲ್ಯರು ಅನ್ಯರನ್ನು ಮದುವೆಯಾಗುತ್ತಿದ್ದಾರೆ. ಇದು ಯೆರೂಸಲೇಮಿಗೆ ಬಂದ ನೆಹೆಮೀಯನಿಗೆ ಕಾಣಸಿಕ್ಕಿದ ದುಃಸ್ಥಿತಿಯ ತುಣುಕಷ್ಟೇ.—ನೆಹೆ. 13:6.

2. ಇಸ್ರಾಯೇಲ್‌ ಪವಿತ್ರೀಕರಿಸಿದ ಜನಾಂಗವಾದದ್ದು ಹೇಗೆ?

2 ಇಸ್ರಾಯೇಲ್‌ ಜನಾಂಗ ದೇವರಿಗೆ ಸಮರ್ಪಿತವಾದ ಜನಾಂಗವಾಗಿತ್ತು. ಕ್ರಿ.ಪೂ. 1513ರಲ್ಲಿ ದೇವರ ಚಿತ್ತವನ್ನು ಮಾಡುವ ತುಡಿತ ಅವರಿಗಿತ್ತು. ಹಾಗಾಗಿ “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು” ಎಂದು ಹೇಳಿದ್ದರು. (ವಿಮೋ. 24:3) ಆದ್ದರಿಂದ ದೇವರು ಅವರನ್ನು ತನ್ನ ಜನರಾಗಿ ಆಯ್ದುಕೊಂಡನು ಮತ್ತು ಪವಿತ್ರೀಕರಿಸಿದನು. ಎಂಥ ದೊಡ್ಡ ಸುಯೋಗ ಇಸ್ರಾಯೇಲ್ಯರಿಗೆ! ಇದಾಗಿ ನಲ್ವತ್ತು ವರ್ಷಗಳ ನಂತರ ಮೋಶೆ ಇಸ್ರಾಯೇಲ್ಯರಿಗೆ ಈ ಸುಯೋಗವನ್ನು ನೆನಪಿಸುತ್ತಾ ಹೀಗಂದನು: “ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನವಾಗುವದಕ್ಕೆ ಆದುಕೊಂಡನು.”—ಧರ್ಮೋ. 7:6.

3. ನೆಹೆಮೀಯನು ಎರಡನೇ ಸಾರಿ ಯೆರೂಸಲೇಮಿಗೆ ಬಂದಾಗ ಯೆಹೂದ್ಯರ ಆಧ್ಯಾತ್ಮಿಕ ಸ್ಥಿತಿ ಹೇಗಿತ್ತು?

3 ಆದರೆ ಸಮಯ ಸಂದಂತೆ ಆರಂಭದಲ್ಲಿದ್ದ ಹುರುಪು ಕ್ಷೀಣಿಸುತ್ತಾ ಬಂತು. ದೇವರನ್ನು ನಿಜ ಹೃದಯದಿಂದ ಆರಾಧಿಸುವ ಕೆಲವರು ಇದ್ದರಾದರೂ ಹೆಚ್ಚಿನವರಿಗೆ ದೇವರ ಚಿತ್ತವನ್ನು ಮಾಡುವುದಕ್ಕಿಂತ ತಾವು ಪವಿತ್ರರಂತೆ, ಭಕ್ತಿವಂತರಂತೆ ತೋರಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿಯಿತ್ತು. ನೆಹೆಮೀಯನು ಯೆರೂಸಲೇಮಿಗೆ ಎರಡನೇ ಬಾರಿ ಬರುವಷ್ಟಕ್ಕೆ, ನಂಬಿಗಸ್ತ ಜನಶೇಷ ಬಾಬೆಲಿನಿಂದ ಹಿಂತಿರುಗಿ ಬಂದು ಸತ್ಯಾರಾಧನೆಯನ್ನು ಪುನಸ್ಥಾಪಿಸಿ ಸುಮಾರು ನೂರು ವರ್ಷಗಳು ಆಗಿಹೋಗಿದ್ದವು. ಈಗ ಪುನಃ ಆಧ್ಯಾತ್ಮಿಕ ವಿಷಯಗಳ ಕಡೆಗೆ ಈ ಜನಾಂಗಕ್ಕಿದ್ದ ಹುರುಪು, ಆಸಕ್ತಿ ಅಳಿದುಹೋಗುತ್ತಾ ಇತ್ತು.

4. ಪವಿತ್ರ ಜನರಾಗಿ ಉಳಿಯಲು ನೆರವಾಗುವ ಯಾವ ಅಂಶಗಳನ್ನು ನಾವೀಗ ಪರಿಗಣಿಸಲಿದ್ದೇವೆ?

4 ಇಸ್ರಾಯೇಲ್ಯರಂತೆ ಇಂದಿರುವ ಯೆಹೋವನ ಸಾಕ್ಷಿಗಳು ಒಂದರ್ಥದಲ್ಲಿ ದೇವರಿಂದ ಪವಿತ್ರೀಕರಿಸಲ್ಪಟ್ಟಿದ್ದಾರೆ. ಅಭಿಷಿಕ್ತರನ್ನೂ ‘ಮಹಾ ಸಮೂಹದವರನ್ನೂ’ ದೇವರು ಪವಿತ್ರ ಸೇವೆಗಾಗಿ ಆಯ್ದುಕೊಂಡಿದ್ದಾನೆ. (ಪ್ರಕ. 7:9, 14, 15; 1 ಕೊರಿಂ. 6:11) ಆದರೆ ನಾವ್ಯಾರೂ ಇಸ್ರಾಯೇಲ್ಯರಂತೆ ದೇವರ ಮುಂದೆ ನಮಗಿರುವ ಪವಿತ್ರ ನಿಲುವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಅಲ್ವೆ? ಹಾಗಾಗದಿರಲು ಮತ್ತು ಪವಿತ್ರರೂ ದೇವರ ಸೇವೆಯಲ್ಲಿ ಉಪಯುಕ್ತರೂ ಆಗಿ ಉಳಿಯಲು ನಾವೇನು ಮಾಡಬೇಕು? ಅದಕ್ಕಾಗಿ ನೆಹೆಮೀಯ ಪುಸ್ತಕದ 13ನೇ ಅಧ್ಯಾಯದಲ್ಲಿರುವ ನಾಲ್ಕು ಅಂಶಗಳನ್ನು ಪರಿಗಣಿಸೋಣ. (1) ಕೆಟ್ಟ ಸಹವಾಸದಿಂದ ದೂರವಿರಿ. (2) ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನು ಬೆಂಬಲಿಸಿ. (3) ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡಿ. (4) ನಿಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳಿ. ಈಗ ಈ ಅಂಶಗಳನ್ನು ಒಂದೊಂದಾಗಿ ನೋಡೋಣ.

ಕೆಟ್ಟ ಸಹವಾಸದಿಂದ ದೂರವಿರಿ

5, 6. (1) ಎಲ್ಯಾಷೀಬ ಮತ್ತು ಟೋಬೀಯ ಯಾರು? (2) ಎಲ್ಯಾಷೀಬನು ಟೋಬೀಯನಿಗೆ ನಿಕಟವಾಗಲು ಕಾರಣವೇನಾಗಿರಬಹುದು?

5 ನೆಹೆಮೀಯ 13:4-9 ಓದಿ. ಸುತ್ತಲಿರುವ ಅಶುದ್ಧ ವಿಷಯಗಳು ನಮ್ಮನ್ನು ಪ್ರಭಾವಿಸುವುದರಿಂದ ಪವಿತ್ರರಾಗಿ ಉಳಿಯುವುದು ಅಷ್ಟೇನು ಸುಲಭವಲ್ಲ. ಉದಾಹರಣೆಗೆ ಎಲ್ಯಾಷೀಬ ಹಾಗೂ ಟೋಬೀಯನನ್ನು ತಕ್ಕೊಳ್ಳಿ. ಎಲ್ಯಾಷೀಬ ಮಹಾ ಯಾಜಕ. ಟೋಬೀಯ ಅಮ್ಮೋನಿಯ. ಪ್ರಾಯಶಃ ಅವನಿಗೆ ಪಾರಸೀಯ ರಾಜನ ಕೆಳಗೆ ಚಿಕ್ಕ ಹುದ್ದೆಯಿತ್ತು. ಈ ಮುಂಚೆ ನೆಹೆಮೀಯನು ಯೆರೂಸಲೇಮಿನ ಗೋಡೆಗಳ ಪುನರ್‌ನಿರ್ಮಾಣದ ಕೆಲಸ ಕೈಗೊಂಡಾಗ ಟೋಬೀಯ ಮತ್ತವನ ಸಹಚರರು ವಿರೋಧಿಸಿದ್ದರು. (ನೆಹೆ. 2:10) ಅಮ್ಮೋನಿಯರು ದೇವಾಲಯದ ಅಂಗಣದಲ್ಲಿ ಬರುವಂತಿರಲಿಲ್ಲ. (ಧರ್ಮೋ. 23:3) ಹಾಗೆಂದ ಮೇಲೆ ಮಹಾ ಯಾಜಕ ಎಲ್ಯಾಷೀಬನು ಟೋಬೀಯನಿಗೆ ದೇವಾಲಯದ ಕೊಠಡಿಯೊಂದರಲ್ಲಿ ಜಾಗ ಕೊಟ್ಟದ್ದಾದರೂ ಏಕೆ?

6 ಎಲ್ಯಾಷೀಬನಿಗೂ ಟೋಬೀಯನಿಗೂ ಆಪ್ತ ನಂಟಿತ್ತು. ಹೇಗೆಂದರೆ, ಟೋಬೀಯ ಯೆಹೂದಿ ಸ್ತ್ರೀಯನ್ನು ಮದುವೆಯಾಗಿದ್ದ. ನಂತರ ಅವನ ಮಗ ಯೆಹೋಹಾನಾನ ಕೂಡ ಯೆಹೂದಿ ಸ್ತ್ರೀಯನ್ನು ಮದುವೆಯಾದ. ಅನೇಕ ಯೆಹೂದ್ಯರು ಟೋಬೀಯನನ್ನು ಹಾಡಿಹೊಗಳುತ್ತಿದ್ದರು. (ನೆಹೆ. 6:17-19) ಎಲ್ಯಾಷೀಬನ ಮೊಮ್ಮಗನೊಬ್ಬನು ಸಮಾರ್ಯದ ದೇಶಾಧಿಪತಿಯಾಗಿದ್ದ ಸನ್ಬಲ್ಲಟನ ಮಗಳನ್ನು ಮದುವೆಯಾಗಿದ್ದ. ಸಮಾರ್ಯದವನಾಗಿದ್ದ ಈ ಸನ್ಬಲ್ಲಟ ಟೋಬೀಯನಿಗೆ ತುಂಬ ಆಪ್ತ. (ನೆಹೆ. 13:28) ಹಾಗಾಗಿ ಒಬ್ಬ ಅನ್ಯಜನಾಂಗದವನೂ ದೇವಜನರ ವಿರೋಧಿಯೂ ಆದ ಟೋಬೀಯನು ಮಹಾ ಯಾಜಕ ಎಲ್ಯಾಷೀಬನ ಮೇಲೆ ಅಷ್ಟೊಂದು ಪ್ರಭಾವಬೀರಲು ಸಾಧ್ಯವಾಗಿರಬೇಕು. ಆದರೆ ನೆಹೆಮೀಯನು ಟೋಬೀಯನ ಎಲ್ಲ ವಸ್ತುಗಳನ್ನು ದೇವಾಲಯದ ಕೊಠಡಿಯಿಂದ ಹೊರಗೆಸೆಯುವ ಮೂಲಕ ಯೆಹೋವನಿಗೆ ನಿಷ್ಠೆ ತೋರಿಸಿದನು.

7. ಹಿರಿಯರು ಹಾಗೂ ಇತರರು ಯೆಹೋವನ ಮುಂದಿರುವ ಪವಿತ್ರ ನಿಲುವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ?

7 ನಾವು ಯೆಹೋವನಿಗೆ ಸಮರ್ಪಿಸಿಕೊಂಡಿರುವ ಜನರಾಗಿರುವುದರಿಂದ ನಮ್ಮ ನಿಷ್ಠೆ ಮೊದಲು ಆತನಿಗೇ. ಆತನ ನೀತಿಯುತ ಮಟ್ಟಗಳನ್ನು ಪಾಲಿಸದಿದ್ದರೆ ಆತನ ಮುಂದೆ ಪವಿತ್ರ ನಿಲುವು ನಮಗಿರುವುದಿಲ್ಲ. ಹಾಗಾಗಿ ಕುಟುಂಬದೊಂದಿಗಿನ ನಂಟು ಸಹ ಬೈಬಲ್‌ ತತ್ವಗಳನ್ನು ಪಾಲಿಸುವುದಕ್ಕಿಂತ ಹೆಚ್ಚು ಪ್ರಾಮುಖ್ಯವಾಗಬಾರದು. ಕ್ರೈಸ್ತ ಹಿರಿಯರ ಕುರಿತೇನು? ಅವರು ತಮ್ಮ ಸ್ವಂತ ಅಭಿಪ್ರಾಯ, ಅನಿಸಿಕೆಗಳ ಪ್ರಕಾರವಲ್ಲ, ಯೆಹೋವನ ಆಲೋಚನೆಗಳಿಗೆ ಅನುಗುಣವಾಗಿ ಕಾರ್ಯನಡಿಸುತ್ತಾರೆ. (1 ತಿಮೊ. 5:21) ಯೆಹೋವನೊಂದಿಗಿನ ತಮ್ಮ ನಿಲುವನ್ನು ಹಾಳುಮಾಡುವ ಯಾವುದನ್ನೂ ಮಾಡದಂತೆ ತುಂಬ ಜಾಗ್ರತೆವಹಿಸುತ್ತಾರೆ.—1 ತಿಮೊ. 2:8.

8. ಯೆಹೋವನ ಸಮರ್ಪಿತ ಜನರೆಲ್ಲರು ಸಹವಾಸದ ಕುರಿತು ಏನನ್ನು ನೆನಪಿನಲ್ಲಿಡಬೇಕು?

8 “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ” ಎನ್ನುವುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡಬೇಕು. (1 ಕೊರಿಂ. 15:33) ನಮ್ಮ ಸಂಬಂಧಿಕರಲ್ಲೇ ಕೆಲವರು ನಮ್ಮನ್ನು ಆಧ್ಯಾತ್ಮಿಕವಾಗಿ ಉತ್ತೇಜಿಸಲಿಕ್ಕಿಲ್ಲ. ಎಲ್ಯಾಷೀಬನ ಕುರಿತೇ ನೋಡಿ. ಯೆರೂಸಲೇಮಿನ ಗೋಡೆಗಳನ್ನು ಕಟ್ಟುವ ಕೆಲಸದಲ್ಲಿ ಅವನು ನೆಹೆಮೀಯನಿಗೆ ಉತ್ತಮ ಸಹಕಾರ ಕೊಟ್ಟು ಜನರಿಗೆ ಒಳ್ಳೇ ಮಾದರಿ ಇಟ್ಟಿದ್ದನು. (ನೆಹೆ. 3:1) ಆದರೆ ನಂತರ, ಟೋಬೀಯ ಮತ್ತು ಇತರರ ಕೆಟ್ಟ ಪ್ರಭಾವದಿಂದಾಗಿ ತಪ್ಪಾದ ಕೆಲಸಗಳನ್ನು ಮಾಡಿದನು. ಹೀಗೆ, ಯೆಹೋವನ ಮುಂದೆ ತನ್ನನ್ನು ಅಪವಿತ್ರಗೊಳಿಸಿಕೊಂಡನು. ಇದರಿಂದ ಏನು ತಿಳಿಯುತ್ತದೆ? ಯಾರು ಕ್ರೈಸ್ತ ಚಟುವಟಿಕೆಗಳನ್ನು ಮಾಡಲು ಅಂದರೆ ಬೈಬಲ್‌ ಓದಲು, ಕೂಟಗಳಿಗೆ ಹಾಜರಾಗಲು, ಕ್ಷೇತ್ರ ಸೇವೆಗೆ ಹೋಗಲು ನಮ್ಮನ್ನು ಉತ್ತೇಜಿಸುತ್ತಾರೋ ಅವರೇ ಒಳ್ಳೇ ಒಡನಾಡಿಗಳು. ಹಾಗಾಗಿ ಒಳ್ಳೇದನ್ನು ಮಾಡಲು ನಮ್ಮನ್ನು ಉತ್ತೇಜಿಸುವ ಕುಟುಂಬ ಸದಸ್ಯರು ನಮ್ಮ ಪ್ರೀತಿ, ಗಣ್ಯತೆಗೆ ಅರ್ಹರು.

ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನು ಬೆಂಬಲಿಸಿ

9. (1) ದೇವಾಲಯದಲ್ಲಿದ್ದ ಏರ್ಪಾಡುಗಳು ಏಕೆ ಅಸ್ತವ್ಯಸ್ತವಾಗಿದ್ದವು? (2) ಅದಕ್ಕೆ ಕಾರಣ ಯಾರೆಂದು ನೆಹೆಮೀಯನು ಹೇಳಿದನು?

9 ನೆಹೆಮೀಯ 13:10-13 ಓದಿ. ನೆಹೆಮೀಯನು ಯೆರೂಸಲೇಮಿಗೆ ಹಿಂದಿರುಗಿದ ಸಮಯದಲ್ಲಿ ದೇವಾಲಯಕ್ಕೆ ಕಾಣಿಕೆ ಬರುವುದು ಬಹುಮಟ್ಟಿಗೆ ನಿಂತುಹೋಗಿತ್ತು. ಹಾಗಾಗಿ ಲೇವಿಯರು ದೇವಾಲಯದ ಕೆಲಸ ಬಿಟ್ಟು ತಮ್ಮ ಜೀವನೋಪಾಯಕ್ಕಾಗಿ ಹೊಲಗಳಲ್ಲಿ ಕೆಲಸಮಾಡುತ್ತಿದ್ದರು. ಹೀಗೆಲ್ಲ ಆಗಲು ಅಲ್ಲಿನ ಅಧಿಕಾರಿಗಳೇ ಕಾರಣ ಎಂದು ನೆಹೆಮೀಯ ಹೇಳಿದನು. ಆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಾ ಇದ್ದಿರಲಿಕ್ಕಿಲ್ಲ. ಒಂದೇ, ಅವರು ಜನರಿಂದ ದಶಮಾಂಶವನ್ನು ಸಂಗ್ರಹಿಸುತ್ತಿರಲಿಲ್ಲ ಅಥವಾ ಸಂಗ್ರಹಿಸಿದ್ದನ್ನು ದೇವಾಲಯಕ್ಕೆ ಕಳುಹಿಸುತ್ತಿರಲಿಲ್ಲ. (ನೆಹೆ. 12:44) ಹಾಗಾಗಿ ಜನರಿಂದ ದಶಮಾಂಶ ಸಂಗ್ರಹಿಸುವ ಏರ್ಪಾಡನ್ನು ನೆಹೆಮೀಯ ಮಾಡಿದನು. ದೇವಾಲಯದ ಭಂಡಾರವನ್ನು ಮತ್ತು ಅದರ ವಿತರಣೆಯನ್ನು ನೋಡಿಕೊಳ್ಳಲು ಭರವಸಾರ್ಹ ಪುರುಷರನ್ನು ನೇಮಿಸಿದನು.

10, 11. ಸತ್ಯಾರಾಧನೆಯನ್ನು ಬೆಂಬಲಿಸಲು ಏನೆಲ್ಲ ಮಾಡುವ ಸುಯೋಗ ದೇವಜನರಿಗಿದೆ?

10 ಇದರಿಂದ ನಮಗೇನು ತಿಳಿಯುತ್ತದೆ? ನಮ್ಮ ಆದಾಯದಿಂದ ಅಥವಾ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸುವ ಸುಯೋಗ ನಮಗಿದೆ. (ಜ್ಞಾನೋ. 3:9) ಆತನ ಕೆಲಸಕ್ಕಾಗಿ ನಾವು ಕೊಡುವ ಕಾಣಿಕೆ ನಮ್ಮ ಸ್ವಂತದ್ದೇನಲ್ಲ. ಆತನದ್ದನ್ನು ಆತನಿಗೇ ಕೊಡುತ್ತಿದ್ದೇವೆ ಅಷ್ಟೆ. (1 ಪೂರ್ವ. 29:14-16) ನಮ್ಮ ಹತ್ತಿರ ಕೊಡಲು ತುಂಬ ಇರಲಿಕ್ಕಿಲ್ಲ. ಆದರೆ ಕೊಡುವ ಮನಸ್ಸು ಇದ್ದರೆ, ನಮ್ಮಲ್ಲಿ ಇದ್ದದ್ದನ್ನು ಕೊಡುವ ಮೂಲಕ ಯೆಹೋವನನ್ನು ಸನ್ಮಾನಿಸಬಲ್ಲೆವು.—2 ಕೊರಿಂ. 8:12.

11 ಒಂದು ಕುಟುಂಬ ಅನೇಕ ವರ್ಷಗಳಿಂದ ಒಬ್ಬ ವಿಶೇಷ ಪಯನೀಯರ್‌ ದಂಪತಿಯನ್ನು ವಾರಕ್ಕೊಮ್ಮೆ ಊಟಕ್ಕೆ ಕರೆಯುತ್ತಿದ್ದರು. ಎಂಟು ಮಂದಿ ಮಕ್ಕಳಿರುವ ದೊಡ್ಡ ಕುಟುಂಬ ಅದು. ಆದರೂ ತಾಯಿ ಹೇಳುತ್ತಿದ್ದರು: “ಹತ್ತು ಜನಕ್ಕೆ ಅಡುಗೆ ಮಾಡ್ತೇವಂತೆ. ಅದರೊಟ್ಟಿಗೆ ಇನ್ನಿಬ್ಬರು ಅಷ್ಟೆ.” ವಾರಕ್ಕೊಮ್ಮೆ ಇಬ್ಬರಿಗೆ ಊಟ ಕೊಡುವುದು ದೊಡ್ಡ ವಿಷಯವೆಂಬಂತೆ ಕಾಣಲಿಕ್ಕಿಲ್ಲ. ಆದರೆ ಆ ಪಯನೀಯರ್‌ ದಂಪತಿ ಈ ಕುಟುಂಬ ತೋರಿಸುವ ಅತಿಥಿ ಸತ್ಕಾರಕ್ಕೆ ತುಂಬ ಕೃತಜ್ಞರಾಗಿದ್ದರು. ಈ ದಂಪತಿಯೊಂದಿಗಿನ ಸಹವಾಸ ಕುಟುಂಬಕ್ಕೆ ಆಶೀರ್ವಾದ ತಂದಿತು. ಹೇಗಂತೀರಾ? ಅವರ ಮಾತುಗಳಿಂದ, ಅನುಭವಗಳಿಂದ ಕುಟುಂಬದಲ್ಲಿನ ಮಕ್ಕಳು ಪ್ರೋತ್ಸಾಹ ಪಡೆದು ಆಧ್ಯಾತ್ಮಿಕ ಪ್ರಗತಿ ಮಾಡಿದರು. ಅನಂತರ ಆ ಎಂಟೂ ಮಕ್ಕಳು ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದರು.

12. ಸಭೆಯಲ್ಲಿರುವ ನೇಮಿತ ಪುರುಷರು ಯಾವ ಒಳ್ಳೇ ಮಾದರಿ ಇಡುತ್ತಾರೆ?

12 ನೆಹೆಮೀಯನ ಸಮಯದಲ್ಲಿ ಆದ ಘಟನೆಯಿಂದ ಇನ್ನೊಂದು ವಿಷಯವನ್ನೂ ಕಲಿಯಬಹುದು. ನೆಹೆಮೀಯನಂತೆ ಇಂದಿರುವ ಹಿರಿಯರು, ಶುಶ್ರೂಷಾ ಸೇವಕರು ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನು ಬೆಂಬಲಿಸುವುದರಲ್ಲಿ ಮುಂದಾಳತ್ವ ವಹಿಸುತ್ತಾರೆ. ಅವರ ಈ ಮಾದರಿಯಿಂದ ಸಭೆಯಲ್ಲಿರುವ ಇತರರು ಕಲಿಯುತ್ತಾರೆ. ಹಿರಿಯರು ಈ ವಿಷಯದಲ್ಲಿ ಅಪೊಸ್ತಲ ಪೌಲನನ್ನು ಅನುಕರಿಸುತ್ತಾರೆ. ಪೌಲನು ಸತ್ಯಾರಾಧನೆಯನ್ನು ಬೆಂಬಲಿಸಿದನು ಹಾಗೂ ಸಭೆಯವರಿಗೆ ಬೇಕಾದ ಮಾರ್ಗದರ್ಶನ ಕೊಟ್ಟನು. ಉದಾಹರಣೆಗೆ, ಕಾಣಿಕೆ ಕೊಡುವುದರ ಕುರಿತು ಅನೇಕ ಪ್ರಾಯೋಗಿಕ ಸಲಹೆಗಳನ್ನು ಕೊಟ್ಟನು.—1 ಕೊರಿಂ. 16:1-3; 2 ಕೊರಿಂ. 9:5-7.

ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡಿ

13. ಕೆಲವು ಯೆಹೂದ್ಯರು ಹೇಗೆ ಸಬ್ಬತ್ತಿನ ಏರ್ಪಾಡಿಗೆ ಅಗೌರವ ತೋರಿಸುತ್ತಿದ್ದರು?

13 ನೆಹೆಮೀಯ 13:15-21 ಓದಿ. ನಾವು ಪ್ರಾಪಂಚಿಕ ವಿಷಯಗಳಲ್ಲೇ ಮುಳುಗಿರುವುದಾದರೆ ನಮ್ಮ ಆಧ್ಯಾತ್ಮಿಕತೆ ಮೆಲ್ಲಮೆಲ್ಲನೆ ಕ್ಷೀಣಿಸುತ್ತದೆ. ವಿಮೋಚನಕಾಂಡ 31:12ರ ಪ್ರಕಾರ ವಾರಕ್ಕೊಮ್ಮೆ ಬರುವ ಸಬ್ಬತ್‌ ದಿನ ಇಸ್ರಾಯೇಲ್ಯರಿಗೆ ತಾವು ಪವಿತ್ರೀಕರಿಸಲ್ಪಟ್ಟ ಜನರು ಎಂದು ಜ್ಞಾಪಿಸುತ್ತಿತ್ತು. ಕುಟುಂಬ ಆರಾಧನೆ, ಪ್ರಾರ್ಥನೆ, ಧರ್ಮಶಾಸ್ತ್ರದ ಕುರಿತು ಧ್ಯಾನ ಮಾಡಲು ಆ ದಿನವನ್ನು ಮೀಸಲಾಗಿಡಬೇಕಿತ್ತು. ಆದರೆ ನೆಹೆಮೀಯನ ಕಾಲದ ಕೆಲವರು ಆ ದಿನವನ್ನು ಬೇರೆ ದಿನಗಳಂತೆಯೇ ಪರಿಗಣಿಸುತ್ತಾ ಮಾಮೂಲಿಯಾಗಿ ತಮ್ಮ ವ್ಯಾಪಾರ ವಹಿವಾಟಿನಲ್ಲೇ ಮುಳುಗಿರುತ್ತಿದ್ದರು. ಆರಾಧನೆಯನ್ನು ಬದಿಗೊತ್ತಿದ್ದರು. ಇದನ್ನು ಗಮನಿಸಿದ ನೆಹೆಮೀಯನು ಆರನೆಯ ದಿನದ ಸಂಜೆ ಪರದೇಶದ ವ್ಯಾಪಾರಸ್ಥರನ್ನೆಲ್ಲ ಊರಿಂದಾಚೆಗೆ ಅಟ್ಟಿ ಯೆರೂಸಲೇಮಿನ ದ್ವಾರಗಳನ್ನು ಮುಚ್ಚಿಸಿಬಿಡುತ್ತಿದ್ದನು.

14, 15. (1) ವ್ಯಾಪಾರದ ಕಡೆಗೆ ಇರುವ ಆಸಕ್ತಿಯನ್ನು ಮಿತಿಯಲ್ಲಿಡದಿದ್ದರೆ ಏನಾಗಬಹುದು? (2) ನಾವು ದೇವರ ವಿಶ್ರಾಂತಿಯಲ್ಲಿ ಹೇಗೆ ಸೇರಬಹುದು?

14 ನೆಹೆಮೀಯನ ಈ ಉದಾಹರಣೆಯಿಂದ ನಾವೇನು ಕಲಿಯಬಹುದು? ವ್ಯಾಪಾರದ ಕಡೆಗಿರುವ ನಮ್ಮ ಆಸಕ್ತಿಗೆ ಮಿತಿ ಇರಬೇಕು. ಇಲ್ಲದಿದ್ದರೆ ನಮ್ಮ ಗಮನ ಆಧ್ಯಾತ್ಮಿಕ ವಿಷಯಗಳಿಗಿಂತ ಹೆಚ್ಚು ಅದರೆಡೆಗೆ ಹೋಗಬಹುದು. ನಾವು ನಮ್ಮ ಕೆಲಸವನ್ನು ಇಷ್ಟಪಡುತ್ತೇವಾದರಂತೂ ಅದನ್ನೇ ಹೆಚ್ಚು ಪ್ರೀತಿಸತೊಡಗುತ್ತೇವೆ. “ಇಬ್ಬರು ಯಜಮಾನರಿಗೆ ಸೇವೆ” ಮಾಡುವುದರ ಬಗ್ಗೆ ಯೇಸು ಕೊಟ್ಟ ಎಚ್ಚರಿಕೆಯನ್ನು ಜ್ಞಾಪಿಸಿಕೊಳ್ಳಿ. (ಮತ್ತಾಯ 6:24 ಓದಿ.) ನೆಹೆಮೀಯನು ಕೂಡ ಹೆಚ್ಚು ಗಳಿಸುವುದರ ಕಡೆಗೆ ಗಮನ ಕೊಡಬಹುದಿತ್ತು. ಆದರೆ ಅವನು ಏನು ಮಾಡಿದನು? (ನೆಹೆ. 5:14-18) ತೂರ್ಯರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವ ಬದಲು ತನ್ನ ಸಹೋದರರಿಗೆ ಸಹಾಯಮಾಡಲು ಹಾಗೂ ಯೆಹೋವನ ನಾಮವನ್ನು ಪವಿತ್ರೀಕರಿಸುವಂಥ ಕೆಲಸಗಳನ್ನು ಮಾಡಲು ಸಮಯವನ್ನು ಬಳಸಿದನು. ಅವನಂತೆಯೇ ಇಂದಿರುವ ಹಿರಿಯರು, ಶುಶ್ರೂಷಾ ಸೇವಕರು ಸಭೆಗೆ ಪ್ರಯೋಜನವಾಗುವಂಥ ಕೆಲಸಗಳನ್ನು ಮಾಡುವುದಕ್ಕೆ ಗಮನ ಕೊಡುತ್ತಾರೆ. ಅವರು ಹೀಗೆ ಮಾಡುವುದನ್ನು ಸಹೋದರ ಸಹೋದರಿಯರು ಇಷ್ಟಪಡುತ್ತಾರೆ ಸಹ. ಇದರಿಂದಾಗಿ ದೇವಜನರ ಮಧ್ಯೆ ಪ್ರೀತಿ, ಶಾಂತಿ, ಭದ್ರತೆ ನೆಲೆಯೂರುತ್ತದೆ.—ಯೆಹೆ. 34:25, 28.

15 ಕ್ರೈಸ್ತರು ವಾರಕ್ಕೊಮ್ಮೆ ಸಬ್ಬತ್‌ ಆಚರಿಸಬೇಕಾಗಿಲ್ಲವಾದರೂ ಪೌಲನು ಹೇಳಿದಂತೆ “ದೇವರ ಜನರಿಗೆ ಒಂದು ಸಬ್ಬತ್‌ ವಿಶ್ರಾಂತಿಯು ಇನ್ನೂ ಇದೆ.” ಮುಂದಕ್ಕೆ ಅವನು ಹೇಳುತ್ತಾನೆ: “ದೇವರು ತನ್ನ ಸ್ವಂತ ಕಾರ್ಯಗಳನ್ನು ಮುಗಿಸಿ ವಿಶ್ರಮಿಸಿಕೊಂಡಂತೆಯೇ, ದೇವರ ವಿಶ್ರಾಂತಿಯಲ್ಲಿ ಸೇರಿದವನು ಸಹ ತನ್ನ ಸ್ವಂತ ಕಾರ್ಯಗಳಿಂದ ವಿಶ್ರಮಿಸಿಕೊಂಡಿದ್ದಾನೆ.” (ಇಬ್ರಿ. 4:9, 10) ಕ್ರೈಸ್ತರಾಗಿರುವ ನಾವು ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಮೂಲಕ ದೇವರ ವಿಶ್ರಾಂತಿಯಲ್ಲಿ ಸೇರಬಲ್ಲೆವು. ನಿಮ್ಮ ಬಗ್ಗೆ ಏನು? ನೀವೂ ನಿಮ್ಮ ಪ್ರೀತಿಪಾತ್ರರೂ ಕುಟುಂಬ ಆರಾಧನೆಗೆ, ಕೂಟಗಳಿಗೆ, ಕ್ಷೇತ್ರ ಸೇವೆಗೆ ಮೊದಲ ಸ್ಥಾನ ಕೊಡುತ್ತಿದ್ದೀರಾ? ನಾವು ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡುವುದನ್ನು ಕೆಲವೊಮ್ಮೆ ನಮ್ಮ ಧಣಿ ಅಥವಾ ವ್ಯಾಪಾರ ಪಾಲುದಾರರು ಮಾನ್ಯ ಮಾಡಲಿಕ್ಕಿಲ್ಲ. ಆಗ ನಾವು ನಮ್ಮ ದೃಢನಿಲುವನ್ನು ಬಿಟ್ಟುಕೊಡುವುದಿಲ್ಲ ಎಂದು ತೋರಿಸಬೇಕಾಗಬಹುದು. ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಹಾಗೂ ಸೂಕ್ತ ಗಮನ ಕೊಡಸಾಧ್ಯವಾಗುವಂತೆ, ಒಂದರ್ಥದಲ್ಲಿ ನಾವು ‘ಬಾಗಲುಗಳನ್ನು ಮುಚ್ಚಿ ತೂರ್ಯರನ್ನು ಹೊರಗಟ್ಟಬೇಕು.’ ನಾವು ದೇವರಿಂದ ಪವಿತ್ರೀಕರಿಸಲ್ಪಟ್ಟಿರುವುದರಿಂದ ಹೀಗೆ ಕೇಳಿಕೊಳ್ಳಬೇಕು: ‘ದೇವರ ಸೇವೆಗಾಗಿ ನನ್ನ ಜೀವನ ಮೀಸಲಾಗಿದೆಯೆಂದು ನಾನು ಬದುಕುವ ರೀತಿ ತೋರಿಸಿಕೊಡುತ್ತಾ?’—ಮತ್ತಾ. 6:33.

ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳಿ

16. ನೆಹೆಮೀಯನ ದಿನಗಳಲ್ಲಿ ಇಸ್ರಾಯೇಲ್ಯರಿಗೆ, ‘ಪವಿತ್ರ ಜನರೆಂಬ’ ತಮ್ಮ ಗುರುತನ್ನು ಕಳೆದುಕೊಳ್ಳುವ ಅಪಾಯವಿತ್ತೇಕೆ?

16 ನೆಹೆಮೀಯ 13:23-27 ಓದಿ. ನೆಹೆಮೀಯನ ದಿನಗಳಲ್ಲಿದ್ದ ಇಸ್ರಾಯೇಲ್ಯರು ಅನ್ಯ ಸ್ತ್ರೀಯರನ್ನು ಮದುವೆಯಾಗುತ್ತಿದ್ದರು. ನೆಹೆಮೀಯನು ಯೆರೂಸಲೇಮಿಗೆ ಮೊದಲ ಸಾರಿ ಬಂದಾಗ ಎಲ್ಲ ಹಿರೀಪುರುಷರಿಂದ ‘ವಿಧರ್ಮಿಗಳನ್ನು ಮದುವೆಯಾಗುವುದಿಲ್ಲ’ ಎಂದು ಪ್ರಮಾಣ ಮಾಡಿಸಿ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿಸಿದ್ದನು. (ನೆಹೆ. 9:38; 10:30) ಕೆಲವು ವರ್ಷಗಳಾದ ಮೇಲೆ ಯೆಹೂದಿ ಪುರುಷರು ಅನ್ಯ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಮಾಡಿಕೊಂಡಿದ್ದಷ್ಟೆ ಅಲ್ಲ, ದೇವರ ಪವಿತ್ರ ಜನರು ಅನ್ನುವ ತಮ್ಮ ಗುರುತನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲಪಿದ್ದರು! ಏಕೆಂದರೆ, ಪರದೇಶದ ಸ್ತ್ರೀಯರಿಗೆ ಹುಟ್ಟಿದ ಮಕ್ಕಳಿಗೆ ಹೀಬ್ರು ಭಾಷೆ ಓದಲು ಅಥವಾ ಮಾತಾಡಲು ಬರುತ್ತಿರಲಿಲ್ಲ. ಹಾಗಂದ ಮೇಲೆ ಅವರು ದೊಡ್ಡವರಾದ ಮೇಲೆ ತಾವು ಇಸ್ರಾಯೇಲ್ಯರು ಎಂದು ಹೇಳಿಕೊಳ್ಳುತ್ತಾರಾ? ಅಥವಾ ತಮ್ಮನ್ನು ಅಷ್ಡೋದಿನವರು, ಅಮ್ಮೋನಿಯರು, ಮೋವಾಬ್ಯರು ಎಂದು ಗುರುತಿಸಿಕೊಳ್ಳುತ್ತಾರಾ? ಹೀಬ್ರು ಭಾಷೆ ಬಾರದ ಅವರು ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ಅವರ ಅಮ್ಮಂದಿರು ಆರಾಧಿಸುವ ಸುಳ್ಳು ದೇವರುಗಳನ್ನು ಬಿಟ್ಟು ಯೆಹೋವನನ್ನು ತಿಳಿದು ಆರಾಧಿಸುವುದು ಹೇಗೆ ಸಾಧ್ಯವಾಗುತ್ತಿತ್ತು? ಆದ್ದರಿಂದ ಸೂಕ್ತ ಕ್ರಮವನ್ನು ತಕ್ಷಣ ಕೈಗೊಳ್ಳುವ ಅಗತ್ಯವಿತ್ತು. ನೆಹೆಮೀಯ ಇದನ್ನು ಮಾಡಿದನು.—ನೆಹೆ. 13:28.

17. ಮಕ್ಕಳು ಯೆಹೋವನೊಂದಿಗೆ ಆಪ್ತವಾಗಿರಲು ಹೆತ್ತವರು ಹೇಗೆ ಸಹಾಯಮಾಡಬಹುದು?

17 ಸಕಾರಾತ್ಮಕ ಹೆಜ್ಜೆ ತಕ್ಕೊಳ್ಳುವ ಮೂಲಕ ತಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವಂತೆ ಮಕ್ಕಳಿಗೆ ಸಹಾಯಮಾಡಬೇಕು. ಹೆತ್ತವರೇ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಮಕ್ಕಳು “ಶುದ್ಧಭಾಷೆಯನ್ನು” ಎಷ್ಟು ಚೆನ್ನಾಗಿ ಮಾತಾಡುತ್ತಾರೆ? ಅಂದರೆ, ಬೈಬಲ್‌ ಸತ್ಯವನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಅದರ ಬಗ್ಗೆ ಎಷ್ಟು ಮಾತಾಡುತ್ತಾರೆ?’ (ಚೆಫನ್ಯ 3:9, NW) ಅವರ ಮಾತುಕತೆ ಏನನ್ನು ತೋರಿಸಿಕೊಡ್ತದೆ? ಪವಿತ್ರಾತ್ಮದ ಪ್ರಭಾವವನ್ನಾ? ಈ ಲೋಕದ ಪ್ರಭಾವವನ್ನಾ? ಈ ವಿಷಯಗಳಲ್ಲಿ ನಿಮ್ಮ ಮಕ್ಕಳು ಇನ್ನೂ ಪ್ರಗತಿ ಮಾಡಲಿಕ್ಕಿದೆ ಎಂದನಿಸುವಲ್ಲಿ ನಿರಾಶರಾಗಬೇಡಿ. ಸುತ್ತಮುತ್ತಲು ಗಮನಭಂಗ ಮಾಡುವ ವಿಷಯಗಳಿರುವಾಗ ಒಂದು ಭಾಷೆಯನ್ನು ಕಲಿಯಲು ತುಂಬ ಸಮಯ ಬೇಕಾಗುತ್ತದೆ. ನಿಮ್ಮ ಮಕ್ಕಳ ಸ್ಥಿತಿ ಕೂಡ ಹಾಗೆಯೇ. ನಂಬಿಕೆಯನ್ನು ಬಿಟ್ಟುಬಿಡುವಂತೆ ಅವರಿಗೆ ಒತ್ತಡಗಳು ಬರುತ್ತಲೇ ಇರುತ್ತವೆ. ಹಾಗಾಗಿ, ತಾಳ್ಮೆವಹಿಸಿ ಕುಟುಂಬ ಆರಾಧನೆ ಹಾಗೂ ಇತರ ಸಂದರ್ಭಗಳನ್ನು ಉಪಯೋಗಿಸುತ್ತಾ ಮಕ್ಕಳಿಗೆ ಯೆಹೋವ ದೇವರೊಟ್ಟಿಗೆ ಆಪ್ತ ಸಂಬಂಧ ಬೆಳೆಸಲು ಸಹಾಯಮಾಡಿ. (ಧರ್ಮೋ. 6:6-9) ಸೈತಾನನ ಲೋಕದಿಂದ ಪ್ರತ್ಯೇಕವಾಗಿರುವುದರಿಂದ ಸಿಗುವ ಪ್ರತಿಫಲಗಳನ್ನು ತಿಳಿಹೇಳಿ. (ಯೋಹಾ. 17:15-17) ಅವರ ಹೃದಯ ಮುಟ್ಟಲು ಪ್ರಯತ್ನಿಸಿ.

18. ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳಲು ಮಕ್ಕಳಿಗೆ ಹೆತ್ತವರೇ ಅತ್ಯುತ್ತಮ ಸಹಾಯ ನೀಡಬಲ್ಲರು ಏಕೆ?

18 ಕೊನೆಗೆ, ಯೆಹೋವನ ಸೇವೆ ಮಾಡುವ ಕುರಿತು ಮಕ್ಕಳೇ ಸ್ವಂತ ನಿರ್ಣಯ ಮಾಡಬೇಕು. ಆದರೂ ಹೆತ್ತವರಾದ ನೀವು ಅವರಿಗೆ ತುಂಬ ಸಹಾಯ ಮಾಡಬಲ್ಲಿರಿ. ನಿಮ್ಮ ಮಾದರಿಯ ಮೂಲಕ ಕಲಿಸಿರಿ. ಯಾವುದು ಸರಿ ಯಾವುದು ತಪ್ಪು ಎಂದು ಸ್ಪಷ್ಟವಾಗಿ ತಿಳಿಸಿ. ಪ್ರತಿಯೊಂದು ರೀತಿಯ ನಿರ್ಣಯದ ಫಲಿತಾಂಶವನ್ನು ಮಕ್ಕಳೊಂದಿಗೆ ಚರ್ಚಿಸಿ. ಹೆತ್ತವರೇ, ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳಲು ನಿಮ್ಮ ಮಕ್ಕಳಿಗೆ ನಿಮ್ಮಷ್ಟು ಉತ್ತಮವಾಗಿ ಇನ್ಯಾರೂ ಸಹಾಯಮಾಡಲಾರರು. ಕ್ರೈಸ್ತ ಗುರುತನ್ನು ಪಡೆದುಕೊಂಡು ಅದನ್ನು ಕಾಪಾಡಿಕೊಳ್ಳಲು ಅವರಿಗೆ ನಿಮ್ಮ ಸಹಾಯ ಬೇಕು. ಹೀಗೆ ಮಕ್ಕಳು ಹಾಗೂ ನಾವೆಲ್ಲರೂ ನಮ್ಮ ಸಾಂಕೇತಿಕ ‘ಮೇಲಂಗಿಗಳನ್ನು’ ಅಂದರೆ ನಮ್ಮನ್ನು ಕ್ರಿಸ್ತನ ಹಿಂಬಾಲಕರೆಂದು ಗುರುತಿಸುವ ಗುಣಗಳು ಹಾಗೂ ಮಟ್ಟಗಳನ್ನು ಕಾಪಾಡಿಕೊಳ್ಳಲು ಎಚ್ಚರವಹಿಸಬೇಕು.—ಪ್ರಕ. 3:4, 5; 16:15.

ನಮ್ಮ ಹಿತಕ್ಕಾಗಿ ನಮ್ಮನ್ನು ನೆನಪುಮಾಡಿಕೊಳ್ಳುತ್ತಾನೆ

19, 20. ನಮ್ಮ “ಹಿತಕ್ಕಾಗಿ” ಯೆಹೋವನು ನಮ್ಮನ್ನು ನೆನಪುಮಾಡಿಕೊಳ್ಳಬೇಕಾದರೆ ನಾವೇನು ಮಾಡಬೇಕು?

19 ನೆಹೆಮೀಯನ ಕಾಲದಲ್ಲೇ ಜೀವಿಸಿದ ಪ್ರವಾದಿ ಮಲಾಕಿಯನು ಹೀಗೆ ಹೇಳಿದ್ದಾನೆ: “ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು . . . [ಯೆಹೋವನು] ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾ. 3:16, 17) ಹೌದು, ತನಗೆ ಭಯಭಕ್ತಿ ತೋರಿಸುವವರನ್ನು, ತನ್ನ ನಾಮವನ್ನು ಪ್ರೀತಿಸುವವರನ್ನು ಯೆಹೋವನು ಎಂದೂ ಮರೆಯನು.—ಇಬ್ರಿ. 6:10.

20 “ನನ್ನ ದೇವರೇ, ನನ್ನ ಹಿತಕ್ಕಾಗಿ [ನನ್ನನ್ನು] ನೆನಪುಮಾಡಿಕೋ” ಎಂದು ನೆಹೆಮೀಯ ಪ್ರಾರ್ಥಿಸಿದನು. (ನೆಹೆ. 13:31) ನೆಹೆಮೀಯನಂತೆ ನಾವು ಸಹ ಕೆಟ್ಟ ಸಹವಾಸದಿಂದ ದೂರವಿದ್ದು, ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನು ಬೆಂಬಲಿಸುತ್ತಾ, ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡುವಲ್ಲಿ ಹಾಗೂ ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಹೆಸರುಗಳು ದೇವರ ಸ್ಮರಣೆಯ ಪುಸ್ತಕದಲ್ಲಿ ಬರೆಯಲ್ಪಡುವವು. ಹಾಗಾಗಿ ‘ನಾವು ನಂಬಿಕೆಯಲ್ಲಿ ಇದ್ದೇವೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರೋಣ.’ (2 ಕೊರಿಂ. 13:5) ಯೆಹೋವನ ಮುಂದೆ ಪವಿತ್ರ ನಿಲುವನ್ನು ಕಾಪಾಡಿಕೊಳ್ಳುವಲ್ಲಿ ಆತನು ನಮ್ಮನ್ನು ನಮ್ಮ “ಹಿತಕ್ಕಾಗಿ” ನೆನಪುಮಾಡಿಕೊಳ್ಳುವನು.

[ಅಧ್ಯಯನ ಪ್ರಶ್ನೆಗಳು]

[ಪುಟ 3ರಲ್ಲಿರುವ ಚಿತ್ರ]

[ಪುಟ 5ರಲ್ಲಿರುವ ಚಿತ್ರ]

ನೆಹೆಮೀಯನು ಯೆಹೋವನಿಗೆ ಹೇಗೆ ನಿಷ್ಠೆ ತೋರಿಸಿದನು? (ಪ್ಯಾರ 5, 6)

[ಪುಟ 7ರಲ್ಲಿರುವ ಚಿತ್ರ]

ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ (ಪ್ಯಾರ 17, 18)