ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮರುಜ್ಞಾಪನಗಳು ವಿಶ್ವಾಸಾರ್ಹ

ಯೆಹೋವನ ಮರುಜ್ಞಾಪನಗಳು ವಿಶ್ವಾಸಾರ್ಹ

ಯೆಹೋವನ ಮರುಜ್ಞಾಪನಗಳು ವಿಶ್ವಾಸಾರ್ಹ

“ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.”—ಕೀರ್ತ. 19:7.

ನಿಮ್ಮ ಉತ್ತರವೇನು?

ಶಾಸ್ತ್ರಗ್ರಂಥದಲ್ಲಿ ಯೆಹೋವನು ಯಾವ ರೀತಿಯ ಮರುಜ್ಞಾಪನಗಳನ್ನು ಒದಗಿಸಿದ್ದಾನೆ?

ಯೆಹೋವನ ಮರುಜ್ಞಾಪನಗಳು ಇಂದು ಕ್ರೈಸ್ತರಿಗೆ ಹೇಗೆ ಸಹಾಯಮಾಡಬಲ್ಲವು?

ಯೆಹೋವನ ಮರುಜ್ಞಾಪನಗಳಲ್ಲಿ ಭರವಸೆಯಿಡಲು ನಮಗೆ ಯಾವ ಕಾರಣಗಳಿವೆ?

1. (1) ದೇವಜನರು ಯಾವ ವಿಷಯಗಳನ್ನು ಕ್ರಮವಾಗಿ ಚರ್ಚಿಸುತ್ತಾರೆ? (2) ಅವನ್ನು ಪುನರವಲೋಕಿಸುವುದರಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

ಕಾವಲಿನಬುರುಜು ಅಧ್ಯಯನಕ್ಕಾಗಿ ತಯಾರಿಸುತ್ತಿದ್ದಾಗ, ‘ಈ ವಿಷಯ ಮುಂಚೆ ಕೂಡ ಬಂದಿತ್ತಲ್ಲಾ!’ ಎಂದು ನೆನಸಿದ್ದೀರಾ? ನೀವು ಕೂಟಗಳಿಗೆ ತುಂಬ ಸಮಯದಿಂದ ಬರುತ್ತಿರುವಲ್ಲಿ ಕೆಲವು ವಿಷಯಗಳನ್ನು ಪದೇಪದೇ ಚರ್ಚಿಸುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ದೇವರ ರಾಜ್ಯ, ವಿಮೋಚನಾ ಮೌಲ್ಯ, ಶಿಷ್ಯರನ್ನಾಗಿ ಮಾಡುವ ಕೆಲಸ, ಪ್ರೀತಿ-ನಂಬಿಕೆಯಂಥ ಗುಣಗಳ ಕುರಿತು ಮತ್ತೆ ಮತ್ತೆ ಪರಿಗಣಿಸಲಾಗುತ್ತದೆ. ಅವು ನಮ್ಮ ಆಧ್ಯಾತ್ಮಿಕ ಆಹಾರದಲ್ಲಿ ಕ್ರಮವಾಗಿ ಸಿಗುವ ವಿಷಯಗಳಾಗಿವೆ. ಈ ವಿಷಯಗಳನ್ನು ಪುನಃ ಪುನಃ ಅವಲೋಕಿಸುವುದರಿಂದ ನಾವು ನಂಬಿಕೆಯಲ್ಲಿ ದೃಢವಾಗಿರುತ್ತೇವೆ ಮತ್ತು ‘ವಾಕ್ಯವನ್ನು ಕೇಳುವವರು ಮಾತ್ರವೇ ಆಗಿರದೆ ಅದರ ಪ್ರಕಾರ ಮಾಡುವವರಾಗಿರುತ್ತೇವೆ.’—ಯಾಕೋ. 1:22.

2. (1) ದೇವರ ಮರುಜ್ಞಾಪನಗಳು ಹೆಚ್ಚಾಗಿ ಯಾವುದಕ್ಕೆ ಸೂಚಿಸುತ್ತವೆ? (2) ದೇವರ ಮರುಜ್ಞಾಪನಗಳು ಮನುಷ್ಯನ ನಿಯಮಗಳಿಗಿಂತ ಹೇಗೆ ಭಿನ್ನವಾಗಿವೆ?

2 “ಮರುಜ್ಞಾಪನ” ಎಂದು ತರ್ಜುಮೆಯಾಗಿರುವ ಹೀಬ್ರು ನಾಮಪದ ಹೆಚ್ಚಾಗಿ, ದೇವರು ತನ್ನ ಜನರಿಗೆ ಕೊಡುವ ನಿಯಮಗಳು, ಆಜ್ಞೆಗಳು ಮತ್ತು ಕಟ್ಟಳೆಗಳನ್ನು ಸೂಚಿಸುತ್ತದೆ. ಯೆಹೋವನ ನಿಯಮಗಳನ್ನು ಮತ್ತು ಕಟ್ಟಳೆಗಳನ್ನು ಮಾನವ ನಿಯಮಗಳಂತೆ ಪ್ರತಿಬಾರಿ ತಿದ್ದುವ ಅಥವಾ ನವೀಕರಿಸುವ ಅವಶ್ಯಕತೆ ಇಲ್ಲ. ಅವು ಸದಾ ವಿಶ್ವಾಸಾರ್ಹ. ಅವುಗಳಲ್ಲಿ ಕೆಲವು ಒಂದು ನಿರ್ದಿಷ್ಟ ಸಮಯ ಅಥವಾ ನಿರ್ದಿಷ್ಟ ಸನ್ನಿವೇಶಕ್ಕೆ ಕೊಡಲ್ಪಟ್ಟಿವೆಯಾದರೂ ಅವು ಯಾವತ್ತೂ ತಪ್ಪಾಗಿ ಅಥವಾ ಕೊರತೆಯುಳ್ಳದ್ದಾಗಿ ಕಂಡುಬರುವುದಿಲ್ಲ. ಹಾಗಾಗಿಯೇ ಕೀರ್ತನೆಗಾರನು ಹೀಗಂದನು: “ನಿನ್ನ ಕಟ್ಟಳೆಗಳು ಸದಾಕಾಲವೂ ನೀತಿಯುಳ್ಳವುಗಳು.”—ಕೀರ್ತ. 119:144.

3, 4. (1) ಯೆಹೋವನ ಮರುಜ್ಞಾಪನಗಳಲ್ಲಿ ಏನು ಕೂಡ ಇರಬಹುದು? (2) ಅವುಗಳಿಗೆ ಕಿವಿಗೊಡುವಲ್ಲಿ ಇಸ್ರಾಯೇಲ್ಯರು ಹೇಗೆ ಪ್ರಯೋಜನ ಪಡೆಯಲಿದ್ದರು?

3 ಯೆಹೋವನ ಮರುಜ್ಞಾಪನಗಳಲ್ಲಿ ಕೆಲವೊಮ್ಮೆ ಎಚ್ಚರಿಕೆಗಳಿರುವುದನ್ನು ನೀವು ಗಮನಿಸಿರಬಹುದು. ದೇವರ ಪ್ರವಾದಿಗಳು ಇಸ್ರಾಯೇಲ್‌ ಜನಾಂಗಕ್ಕೆ ಕ್ರಮವಾಗಿ ಎಚ್ಚರಿಕೆಗಳನ್ನು ಕೊಟ್ಟರು. ಉದಾಹರಣೆಗೆ, ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವದಕ್ಕೆ ತುಸು ಮುಂಚೆ ಮೋಶೆ ಎಚ್ಚರಿಸಿದ್ದು: “ನೀವು ಎಚ್ಚರದಿಂದಿರಬೇಕು; ನೀವು ಭ್ರಾಂತಿಗೊಂಡು ಯೆಹೋವನು ಹೇಳಿದ ಮಾರ್ಗವನ್ನು ಬಿಟ್ಟು ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದರೆ ಆತನು ನಿಮ್ಮ ಮೇಲೆ ಸಿಟ್ಟು”ಗೊಳ್ಳುವನು. (ಧರ್ಮೋ. 11:16, 17) ದೇವರು ತನ್ನ ಜನರಿಗೆ ಅನೇಕ ಸಹಾಯಕರ ಮರುಜ್ಞಾಪನಗಳನ್ನು ಕೊಟ್ಟನೆಂದು ಬೈಬಲ್‌ ಹೇಳುತ್ತದೆ.

4 ಬೇರೆ ಅನೇಕ ಸಂದರ್ಭಗಳಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ, ತನಗೆ ಭಯಭಕ್ತಿ ತೋರಿಸಬೇಕೆಂದೂ ತನ್ನ ಮಾತನ್ನು ಆಲಿಸಬೇಕೆಂದೂ ತನ್ನ ಹೆಸರನ್ನು ಪವಿತ್ರೀಕರಿಸಬೇಕೆಂದೂ ಪ್ರೋತ್ಸಾಹಿಸಿದನು. (ಧರ್ಮೋ. 4:29-31; 5:28, 29) ಅವರು ಈ ಮರುಜ್ಞಾಪನಗಳನ್ನು ಆಲಿಸುವಲ್ಲಿ ಅನೇಕ ಆಶೀರ್ವಾದಗಳನ್ನು ಪಡೆಯುತ್ತಿದ್ದರು.—ಯಾಜ. 26:3-6; ಧರ್ಮೋ. 28:1-4.

ಇಸ್ರಾಯೇಲ್ಯರು ಮರುಜ್ಞಾಪನಗಳಿಗೆ ಸ್ಪಂದಿಸಿದರೋ?

5. ಯೆಹೋವನು ರಾಜ ಹಿಜ್ಕೀಯನ ಪರವಾಗಿ ಹೋರಾಡಿದ್ದೇಕೆ?

5 ಇಸ್ರಾಯೇಲಿನ ಕ್ಷೋಭೆಯ ಇತಿಹಾಸದುದ್ದಕ್ಕೂ ದೇವರು ತನ್ನ ಮಾತನ್ನು ಉಳಿಸಿಕೊಂಡನು. ಉದಾಹರಣೆಗೆ ಅಶ್ಶೂರದ ರಾಜ ಸನ್ಹೇರೀಬನು ಯೆಹೂದವನ್ನು ಆಕ್ರಮಿಸಿ ರಾಜ ಹಿಜ್ಕೀಯನನ್ನು ಸಿಂಹಾಸನದಿಂದ ತಳ್ಳುವ ಬೆದರಿಕೆ ಹಾಕಿದಾಗ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದನು. ಆ ದೂತನು ಒಂದೇ ಒಂದು ರಾತ್ರಿಯಲ್ಲಿ ಅಶ್ಶೂರ್ಯ ಸೈನ್ಯದ “ಎಲ್ಲಾ ಶೂರರನ್ನೂ ನಾಯಕರನ್ನೂ” ವಧಿಸಿದನು. ಸನ್ಹೇರೀಬನು ಅಪಮಾನದಿಂದ ಸ್ವದೇಶಕ್ಕೆ ಹಿಂದಿರುಗಬೇಕಾಯಿತು. (2 ಪೂರ್ವ. 32:21; 2 ಅರ. 19:35) ದೇವರು ಹಿಜ್ಕೀಯನ ಪರವಾಗಿ ಹೋರಾಡಿದ್ದೇಕೆ? ಏಕೆಂದರೆ “[ಹಿಜ್ಕೀಯನು] ಯೆಹೋವನನ್ನೇ ಹೊಂದಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ . . . [ಆತನ] ಆಜ್ಞೆಗಳನ್ನು ಕೈಕೊಂಡನು.”—2 ಅರ. 18:1, 5, 6.

6. ರಾಜ ಯೋಷೀಯನು ಯೆಹೋವನ ಮೇಲೆ ಹೇಗೆ ಭರವಸೆಯಿಟ್ಟನು?

6 ಯೆಹೋವನ ಆಜ್ಞೆಗಳಿಗೆ ವಿಧೇಯನಾದ ಇನ್ನೊಬ್ಬ ರಾಜನ ಉದಾಹರಣೆ ನೋಡೋಣ. ಅವನು ಯೋಷೀಯ. ಎಂಟನೆಯ ವಯಸ್ಸಿನಿಂದಲೇ ಅವನು ‘ಯೆಹೋವನ ಚಿತ್ತಾನುಸಾರವಾಗಿ ನಡೆದನು. ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳಲಿಲ್ಲ.’ (2 ಪೂರ್ವ. 34:1, 2) ಯೋಷೀಯನು ಯೆಹೋವನ ಮೇಲೆ ತನಗಿದ್ದ ಭರವಸೆಯನ್ನು ದೇಶದಿಂದ ವಿಗ್ರಹಗಳನ್ನು ತೊಲಗಿಸಿ ಸತ್ಯಾರಾಧನೆಯನ್ನು ಪುನಃಸ್ಥಾಪಿಸುವ ಮೂಲಕ ತೋರಿಸಿದನು. ಹೀಗೆ ಮಾಡಿದ್ದರ ಫಲವಾಗಿ ಅವನು ತನಗೆ ಮಾತ್ರವಲ್ಲ ಇಡೀ ಜನಾಂಗಕ್ಕೆ ಆಶೀರ್ವಾದಗಳನ್ನು ತಂದನು.2 ಪೂರ್ವಕಾಲವೃತ್ತಾಂತ 34:31-33 ಓದಿ.

7. ಯೆಹೋವನ ಮರುಜ್ಞಾಪನಗಳನ್ನು ಇಸ್ರಾಯೇಲ್ಯರು ಅಲಕ್ಷಿಸಿದ ಪರಿಣಾಮವೇನಾಯಿತು?

7 ಆದರೂ ವಿಷಾದಕರವಾಗಿ ದೇವಜನರು ಯಾವಾಗಲೂ ಯೆಹೋವನ ಮರುಜ್ಞಾಪನಗಳ ಮೇಲೆ ಪೂರ್ಣ ಭರವಸೆಯನ್ನಿಡಲಿಲ್ಲ. ಸ್ವಲ್ಪ ಸಮಯ ವಿಧೇಯರಾಗಿದ್ದರೆ ಇನ್ನು ಸ್ವಲ್ಪ ಸಮಯ ಅವಿಧೇಯತೆ. ಹೀಗೆ ಅನೇಕ ಶತಮಾನಗಳ ವರೆಗೆ ಅವರು ಬಣ್ಣ ಬದಲಾಯಿಸುತ್ತಾ ಇದ್ದರು. ಅವರ ನಂಬಿಕೆ ಕ್ಷೀಣಿಸಿದಾಗ ಅವರು ಅಪೊಸ್ತಲ ಪೌಲನ ಮಾತುಗಳಂತೆ “ಬೋಧನೆಯ ಪ್ರತಿಯೊಂದು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋದರು. (ಎಫೆ. 4:13, 14) ದೇವರ ಮರುಜ್ಞಾಪನಗಳ ಮೇಲೆ ಭರವಸೆ ಇಡದ ಕಾರಣ ಮುಂತಿಳಿಸಲ್ಪಟ್ಟಂತೆ ಅವರು ಕಹಿಯಾದ ಫಲವನ್ನು ಕೊಯ್ದರು.—ಯಾಜ. 26:23-25; ಯೆರೆ. 5:23-25

8. ಇಸ್ರಾಯೇಲ್ಯರಿಂದ ನಾವು ಪಾಠ ಕಲಿಯಬಹುದು ಏಕೆ?

8 ಇಸ್ರಾಯೇಲ್ಯರ ಮಾದರಿಯಿಂದ ನಾವು ಯಾವ ವಿಧದಲ್ಲಿ ಪ್ರಯೋಜನ ಹೊಂದಬಲ್ಲೆವು? ಅವರಂತೆಯೇ ಇಂದಿನ ದೇವಸೇವಕರು ಸಲಹೆ ಮತ್ತು ಶಿಸ್ತನ್ನು ಪಡೆಯುತ್ತಾರೆ. (2 ಪೇತ್ರ 1:12) ದೇವರ ಪ್ರೇರಿತ ವಾಕ್ಯವನ್ನು ನಾವು ಪ್ರತಿಬಾರಿ ಓದುವಾಗ ನಮಗದು ಮರುಜ್ಞಾಪನವಾಗಿ ಇರುತ್ತದೆ. ನೈತಿಕ ಸ್ವಾತಂತ್ರ್ಯ ನಮಗಿರುವುದರಿಂದ, ಯೆಹೋವನ ಮಾರ್ಗದರ್ಶನಗಳಿಗೆ ವಿಧೇಯರಾಗಬಹುದು ಇಲ್ಲವೆ ನಮ್ಮ ದೃಷ್ಟಿಗೆ ಸರಿಯಾಗಿ ಕಾಣುವುದನ್ನು ಅನುಸರಿಸಬಹುದು. ಆಯ್ಕೆ ನಮ್ಮದೇ. (ಜ್ಞಾನೋ. 14:12) ನಾವೀಗ, ಯೆಹೋವನ ಮರುಜ್ಞಾಪನಗಳಲ್ಲಿ ಭರವಸೆ ಇಡಲು ಯಾವ ಕಾರಣಗಳಿವೆ ಮತ್ತು ಅವುಗಳಿಗೆ ಕಿವಿಗೊಡುವುದರಿಂದ ನಮಗೆ ಏನು ಪ್ರಯೋಜನ ಎಂದು ಪರಿಶೀಲಿಸೋಣ.

ದೇವರಿಗೆ ಅಧೀನರಾಗಿ, ಸದಾ ಜೀವಿಸಿ

9. ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ, ತಾನು ಅವರನ್ನು ಬೆಂಬಲಿಸುತ್ತಿದ್ದೇನೆಂದು ಯೆಹೋವನು ಹೇಗೆ ತೋರಿಸಿಕೊಟ್ಟನು?

9 ಇಸ್ರಾಯೇಲ್ಯರು ನಲ್ವತ್ತು ವರ್ಷ “ಘೋರವಾದ ಮಹಾರಣ್ಯದ”ಲ್ಲಿ ಅಲೆದಾಡಲಿದ್ದರು. ಅವರನ್ನು ಹೇಗೆ ನಡೆಸಿ ಕಾಪಾಡಿ ಪರಾಮರಿಸಲಿದ್ದಾನೆಂದು ಯೆಹೋವನು ಮೊದಲೇ ಅವರಿಗೆ ನಿರ್ದಿಷ್ಟ ವಿವರಣೆ ಕೊಡಲಿಲ್ಲ. ಆದರೂ ಅವರು ತನ್ನಲ್ಲಿ ಮತ್ತು ತನ್ನ ನಿರ್ದೇಶನಗಳಲ್ಲಿ ಭರವಸೆ ಇಡಬಹುದೆಂದು ಪದೇಪದೇ ತೋರಿಸಿದನು. ಹಗಲಲ್ಲಿ ಮೇಘಸ್ತಂಭ ಮತ್ತು ರಾತ್ರಿಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸುವ ಮೂಲಕ ಯೆಹೋವನು ಇಸ್ರಾಯೇಲ್ಯರನ್ನು ನಡೆಸಿದನು. ಹೀಗೆ ವಾಸಿಸಲು ಯೋಗ್ಯವಲ್ಲದ ಪ್ರದೇಶದುದ್ದಕ್ಕೂ ತಾನು ಅವರಿಗೆ ಬೆಂಬಲವಾಗಿದ್ದೇನೆಂದು ತೋರಿಸಿದನು. (ಧರ್ಮೋ. 1:19; ವಿಮೋ. 40:36-38) ಅವರ ಮೂಲಭೂತ ಅವಶ್ಯಕತೆಗಳನ್ನೂ ಒದಗಿಸಿದನು. “ಅವರ ಬಟ್ಟೆಗಳು ಜೀರ್ಣವಾಗಲಿಲ್ಲ, ಕಾಲುಗಳು ಬಾತುಹೋಗಲಿಲ್ಲ.” “ಅವರಿಗೆ ಯಾವ ಕೊರತೆಯೂ ಇರಲಿಲ್ಲ.”—ನೆಹೆ. 9:19-21.

10. ಯೆಹೋವನು ಇಂದು ತನ್ನ ಜನರನ್ನು ಹೇಗೆ ಮಾರ್ಗದರ್ಶಿಸುತ್ತಿದ್ದಾನೆ?

10 ಇಂದು ದೇವಸೇವಕರು ನೀತಿಯ ನೂತನ ಲೋಕದ ಬಾಗಲಲ್ಲಿ ನಿಂತಿದ್ದಾರೆ. ಹಾಗಾದರೆ, ಬರಲಿರುವ “ಮಹಾಸಂಕಟ”ವನ್ನು ಪಾರಾಗಲಿಕ್ಕಾಗಿ ಬೇಕಾಗಿರುವುದನ್ನೆಲ್ಲ ಯೆಹೋವನು ಒದಗಿಸುತ್ತಾನೆಂಬ ಭರವಸೆ ನಮಗಿದೆಯೆ? (ಮತ್ತಾ. 24:21, 22; ಕೀರ್ತ. 119:40, 41) ನಮ್ಮನ್ನು ನೂತನಲೋಕಕ್ಕೆ ನಡೆಸಲು ಮೇಘಸ್ತಂಭವನ್ನಾಗಲಿ ಅಗ್ನಿಸ್ತಂಭವನ್ನಾಗಲಿ ಆತನು ಒದಗಿಸಿಲ್ಲ ನಿಜ. ಆದರೆ ನಾವು ಎಚ್ಚರದಿಂದಿರುವಂತೆ ಆತನು ತನ್ನ ಸಂಘಟನೆಯನ್ನು ಉಪಯೋಗಿಸುತ್ತಿದ್ದಾನೆ. ಉದಾಹರಣೆಗೆ, ನಮ್ಮ ಆಧ್ಯಾತ್ಮಿಕತೆಯನ್ನು ವರ್ಧಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅದಕ್ಕಾಗಿ ವೈಯಕ್ತಿಕ ಬೈಬಲ್‌ ವಾಚನ, ಕುಟುಂಬ ಆರಾಧನಾ ಸಂಜೆ, ಕ್ರಮವಾಗಿ ಕೂಟಗಳಿಗೆ ಹಾಜರಾಗುವಂತೆ ಮತ್ತು ಸೇವೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಲಾಗಿದೆ. ಈ ಸಲಹೆಗಳನ್ನು ಅನುಸರಿಸಲು ನಾವು ನಮ್ಮ ಸಮಯವನ್ನು ಹೊಂದಿಸಿಕೊಂಡಿದ್ದೇವೊ? ಹೊಂದಿಸಿಕೊಂಡರೆ ನೂತನ ಲೋಕಕ್ಕೆ ಹೆಜ್ಜೆಯಿಡಲು ಬೇಕಾಗಿರುವ ನಂಬಿಕೆಯನ್ನು ಬೆಳೆಸಿಕೊಳ್ಳಲು ಆಗುತ್ತದೆ.

11. ದೇವರು ನಮ್ಮನ್ನು ಯಾವ ವಿಧಗಳಲ್ಲಿ ಪರಾಮರಿಸುತ್ತಾನೆ?

11 ನಮಗೆ ದೊರೆತಿರುವ ನಿರ್ದೇಶನಗಳು ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿರುವಂತೆ ಸಹಾಯ ಮಾಡುವುದಷ್ಟೇ ಅಲ್ಲ, ದಿನನಿತ್ಯದ ಜೀವನದ ವಿಷಯಗಳನ್ನು ನಿಭಾಯಿಸಲೂ ಸಹಾಯಮಾಡುತ್ತವೆ. ಉದಾಹರಣೆಗೆ, ಪ್ರಾಪಂಚಿಕ ವಸ್ತುಗಳನ್ನು ಕೂಡಿಸುವ ವಿಷಯದಲ್ಲಿ ಸರಿಯಾದ ನೋಟ, ಸರಳ ಜೀವನ ನಡೆಸುವ ಮೂಲಕ ಚಿಂತೆಯನ್ನು ಕಡಿಮೆಗೊಳಿಸುವುದು, ಉಡುಪು ಮತ್ತು ಕೇಶಾಲಂಕಾರ, ಹಿತಕರವಾದ ಮನರಂಜನೆಯನ್ನು ಆರಿಸಿಕೊಳ್ಳುವುದು, ಎಷ್ಟು ವಿದ್ಯಾಭ್ಯಾಸ ಮಾಡುವುದು ಸೂಕ್ತ, ಈ ಎಲ್ಲ ವಿಷಯಗಳ ಬಗ್ಗೆ ಕೊಡಲಾಗಿರುವ ನಿರ್ದೇಶನದಿಂದ ನಾವು ಪ್ರಯೋಜನಪಡೆದಿದ್ದೇವೆ. ತುರ್ತುಪರಿಸ್ಥಿತಿಗಳಿಗೆ ಸಿದ್ಧರಾಗಿರುವುದರ ಬಗ್ಗೆ, ಮನೆ, ವಾಹನ, ರಾಜ್ಯ ಸಭಾಗೃಹಗಳ ಬಗ್ಗೆ ಕೊಡಲಾಗಿರುವ ಸುರಕ್ಷಾ ಮರುಜ್ಞಾಪನಗಳನ್ನು ನೆನಪಿಸಿಕೊಳ್ಳಿ. ಆ ಸಲಹೆಗಳೇ ತೋರಿಸುತ್ತವೆ ದೇವರು ನಮ್ಮ ಬಗ್ಗೆ ಚಿಂತಿಸುತ್ತಾನೆಂದು.

ಆದಿಕ್ರೈಸ್ತರು ನಂಬಿಗಸ್ತರಾಗಿರಲು ಮರುಜ್ಞಾಪನಗಳು ನೆರವಾದವು

12. (1) ಯೇಸು ತನ್ನ ಶಿಷ್ಯರಿಗೆ ಪದೇಪದೇ ತಿಳಿಸಿದ ಒಂದು ವಿಷಯ ಯಾವುದು? (2) ದೀನತೆಯ ಯಾವ ಕ್ರಿಯೆಯು ಪೇತ್ರನ ಮೇಲೆ ಅಳಿಯದ ಅಚ್ಚನ್ನೊತ್ತಿತು? (3) ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು?

12 ಒಂದನೆಯ ಶತಮಾನದಲ್ಲಿ ಆದಿಕ್ರೈಸ್ತರಿಗೆ ಮರುಜ್ಞಾಪನಗಳು ಕ್ರಮವಾಗಿ ದೊರೆತವು. ಯೇಸು ತನ್ನ ಶಿಷ್ಯರಿಗೆ ದೀನಭಾವದ ಅಗತ್ಯದ ಕುರಿತು ಪದೇಪದೇ ತಿಳಿಸಿದನು. ತಿಳಿಸಿದ್ದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸಿದನು. ತನ್ನ ಭೂಜೀವಿತದ ಕೊನೆಯ ದಿನದಂದು ಅವನು ಅಪೊಸ್ತಲರನ್ನು ಪಸ್ಕ ಆಚರಿಸಲು ಒಟ್ಟುಸೇರಿಸಿದನು. ಅಪೊಸ್ತಲರು ಊಟ ಮಾಡುತ್ತಿದ್ದಾಗ ಯೇಸು ಎದ್ದು ಅವರ ಪಾದಗಳನ್ನು ತೊಳೆದನು. ಇದು ಸಾಮಾನ್ಯವಾಗಿ ಸೇವಕನು ಮಾಡುತ್ತಿದ್ದ ಕೆಲಸವಾಗಿತ್ತು. (ಯೋಹಾ. 13:1-17) ದೀನತೆಯ ಈ ಕ್ರಿಯೆ ಅವರ ಮೇಲೆ ಅಳಿಯದ ಅಚ್ಚನ್ನೊತ್ತಿತು. ಆ ಊಟದ ಸಮಯದಲ್ಲಿ ಉಪಸ್ಥಿತನಾಗಿದ್ದ ಅಪೊಸ್ತಲ ಪೇತ್ರನು ಸುಮಾರು ಮೂವತ್ತು ವರ್ಷಗಳ ನಂತರ ಜೊತೆವಿಶ್ವಾಸಿಗಳಿಗೆ ದೀನತೆಯ ವಿಷಯದಲ್ಲಿ ಬುದ್ಧಿ ಹೇಳಿದನು. (1 ಪೇತ್ರ 5:5) ನಾವು ಇನ್ನೊಬ್ಬರೊಂದಿಗೆ ದೀನತೆಯಿಂದ ವ್ಯವಹರಿಸಲು ಯೇಸುವಿನ ಈ ಮಾದರಿ ನಮ್ಮನ್ನು ಪ್ರೇರಿಸಬೇಕು.—ಫಿಲಿ. 2:5-8.

13. ಯಾವ ಆವಶ್ಯಕ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಯೇಸು ಶಿಷ್ಯರಿಗೆ ಜ್ಞಾಪಕ ಹುಟ್ಟಿಸಿದನು?

13 ಯೇಸು ತನ್ನ ಶಿಷ್ಯರೊಂದಿಗೆ ಅನೇಕ ಬಾರಿ ಚರ್ಚಿಸಿದ ಇನ್ನೊಂದು ವಿಷಯ ಬಲವಾದ ನಂಬಿಕೆಯ ಕುರಿತು. ಒಮ್ಮೆ ಹುಡುಗನೊಬ್ಬನಿಂದ ದೆವ್ವವನ್ನು ಬಿಡಿಸಲು ತಮ್ಮಿಂದ ಆಗದಿದ್ದಾಗ ಶಿಷ್ಯರು ಯೇಸುವಿಗೆ “ನಮ್ಮಿಂದ ಯಾಕೆ ಅದನ್ನು ಬಿಡಿಸಲು ಆಗಲಿಲ್ಲ?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, “ನಿಮ್ಮ ನಂಬಿಕೆಯ ಕೊರತೆಯಿಂದಲೇ. ನಿಮಗೆ ಸಾಸಿವೆ ಕಾಳಿನ ಗಾತ್ರದಷ್ಟು ನಂಬಿಕೆಯಿರುವುದಾದರೆ . . . ಯಾವುದೂ ನಿಮಗೆ ಅಸಾಧ್ಯವಾದದ್ದಾಗಿರುವುದಿಲ್ಲ” ಎಂದನು. (ಮತ್ತಾ. 17:14-20) ಯೇಸು ತನ್ನ ಶಿಷ್ಯರಿಗೆ ನಂಬಿಕೆಯು ಆವಶ್ಯಕ ಗುಣವೆಂದು ಶುಶ್ರೂಷೆಯಾದ್ಯಂತ ಕಲಿಸಿದನು. (ಮತ್ತಾಯ 21:18-22 ಓದಿ.) ನಮ್ಮ ನಂಬಿಕೆಯನ್ನು ಬಲಪಡಿಸುವಂಥ ಭಕ್ತಿವರ್ಧಕ ಸಲಹೆಗಳು ಅಧಿವೇಶನ, ಸಮ್ಮೇಳನ ಮತ್ತು ಕ್ರೈಸ್ತ ಕೂಟಗಳಲ್ಲಿ ನಮಗೆ ಸಿಗುತ್ತವೆ. ಈ ಅವಕಾಶಗಳನ್ನು ನಾವು ಸದುಪಯೋಗಿಸಿಕೊಳ್ಳುತ್ತಿದ್ದೇವಾ? ಇವು ಸಂತೋಷ ತರುವ ಕೂಟಗಳಷ್ಟೇ ಅಲ್ಲ, ಯೆಹೋವನಲ್ಲಿ ಭರವಸೆಯನ್ನು ಪ್ರದರ್ಶಿಸುವ ಸಂದರ್ಭಗಳಾಗಿವೆ.

14. ಕ್ರಿಸ್ತಸದೃಶ ಪ್ರೀತಿ ನಮ್ಮಲ್ಲಿರುವುದು ಪ್ರಾಮುಖ್ಯವೇಕೆ?

14 ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ, ನಾವು ಪರಸ್ಪರ ಪ್ರೀತಿ ತೋರಿಸಬೇಕೆಂಬ ಮರುಜ್ಞಾಪನಗಳು ತುಂಬಾ ಇವೆ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬುದು ಅತಿ ದೊಡ್ಡ ಆಜ್ಞೆಗಳಲ್ಲಿ ಎರಡನೆಯದು ಎಂದು ಯೇಸು ಹೇಳಿದನು. (ಮತ್ತಾ. 22:39) ತದ್ರೀತಿ, ಯೇಸುವಿನ ಮಲ-ಸಹೋದರ ಯಾಕೋಬನು ಪ್ರೀತಿಯನ್ನು “ರಾಜಯೋಗ್ಯ ಆಜ್ಞೆ” ಎಂದು ಕರೆದನು. (ಯಾಕೋ. 2:8) ಅಪೊಸ್ತಲ ಯೋಹಾನನು ಬರೆದದ್ದು: “ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಒಂದು ಹೊಸ ಆಜ್ಞೆಯಲ್ಲ, ಆರಂಭದಿಂದಲೇ ನೀವು ಹೊಂದಿದ್ದ ಅದೇ ಹಳೆಯ ಆಜ್ಞೆಯಾಗಿದೆ. . . . ಆದರೂ ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಬರೆಯುತ್ತಿದ್ದೇನೆ.” (1 ಯೋಹಾ. 2:7, 8) ಇಲ್ಲಿ ಯೋಹಾನನು “ಹಳೆಯ ಆಜ್ಞೆ” ಎಂದು ಹೇಳಿದ್ದು ಯಾವುದರ ಕುರಿತಾಗಿತ್ತು? ಪ್ರೀತಿಸುವ ಆಜ್ಞೆಯ ಕುರಿತಾಗಿಯೇ. ‘ಆರಂಭದಲ್ಲಿಯೇ’ ಯೇಸು ಈ ಆಜ್ಞೆ ಕೊಟ್ಟದ್ದರಿಂದ ಅದು “ಹಳೆಯ” ಆಜ್ಞೆಯಾಗಿತ್ತು. ಆದರೆ ಅದು “ಹೊಸ” ಆಜ್ಞೆ ಸಹ ಆಗಿದೆ. ಏಕೆಂದರೆ ಅದು ಸ್ವತ್ಯಾಗದ ಪ್ರೀತಿಯನ್ನು ಕೇಳಿಕೊಳ್ಳುತ್ತದೆ. ಶಿಷ್ಯರು ಹೊಸ ವಿಧದ ಪರಿಸ್ಥಿತಿಗಳನ್ನು ಎದುರಿಸಿದಾಗ ಈ ಗುಣವನ್ನು ತೋರಿಸಬೇಕಾಗಬಹುದು. ಕ್ರಿಸ್ತನ ಶಿಷ್ಯರಾದ ನಾವು ಸ್ವಾರ್ಥ ಮನೋಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೊಡಲಾಗುವ ಇಂಥ ಎಚ್ಚರಿಕೆಗಳನ್ನು ಮಾನ್ಯಮಾಡುವುದಿಲ್ಲವೆ? ಸ್ವಾರ್ಥ ಮನೋಭಾವ ಈ ಲೋಕದಲ್ಲಿ ಎದ್ದುಕಾಣುತ್ತದೆ. ಅದು ನೆರೆಯವರ ಕಡೆಗೆ ನಮಗಿರುವ ಪ್ರೀತಿಯನ್ನು ಕಡಿಮೆಗೊಳಿಸಬಲ್ಲದು.

15. ಭೂಮಿಯಲ್ಲಿದ್ದಾಗ ಯೇಸುವಿನ ಪ್ರಧಾನ ಉದ್ದೇಶ ಯಾವುದಾಗಿತ್ತು?

15 ಜನರಲ್ಲಿ ಯೇಸು ವ್ಯಕ್ತಿಪರ ಕಾಳಜಿ ತೋರಿಸಿದನು. ರೋಗಗಳನ್ನು ಮತ್ತು ದುರ್ಬಲತೆಗಳಿಂದ ಬಳಲುತ್ತಿದ್ದವರನ್ನು ಗುಣಮಾಡುವ ಮೂಲಕ, ಮೃತರನ್ನು ಎಬ್ಬಿಸುವ ಮೂಲಕ ಆ ಗುಣವನ್ನು ತೋರಿಸಿದನು. ಹಾಗಿದ್ದರೂ ಯೇಸುವಿನ ಪ್ರಧಾನ ಉದ್ದೇಶ ಶಾರೀರಿಕವಾಗಿ ಗುಣಮಾಡುವುದಾಗಿರಲಿಲ್ಲ. ಸುವಾರ್ತೆ ಸಾರುವುದು ಮತ್ತು ಬೋಧಿಸುವುದಾಗಿತ್ತು. ಇದು ಜನರ ಜೀವನದ ಮೇಲೆ ಬಾಳುವ ಪ್ರಭಾವವನ್ನು ಬೀರಿತು. ಹೇಗೆ? ಯೇಸು ಸ್ವಸ್ಥಮಾಡಿದ ಮತ್ತು ಪುನರುತ್ಥಾನಗೊಳಿಸಿದ ಒಂದನೆಯ ಶತಮಾನದ ಜನರು ಕ್ರಮೇಣ ಮುದುಕರಾಗಿ ಸತ್ತರೆಂದು ನಮಗೆ ಗೊತ್ತು. ಆದರೆ ಅವನು ಸಾರಿದ ಸಂದೇಶಕ್ಕೆ ಕಿವಿಗೊಟ್ಟವರು ನಿತ್ಯಜೀವದ ಪ್ರತೀಕ್ಷೆ ಪಡೆದರು.—ಯೋಹಾ. 11:25, 26.

16. ಇಂದು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸ ಎಷ್ಟು ವ್ಯಾಪಕವಾಗಿ ನಡೆಯುತ್ತಿದೆ?

16 ಯೇಸು ಒಂದನೆಯ ಶತಮಾನದಲ್ಲಿ ಆರಂಭಿಸಿದ ಸಾರುವ ಕೆಲಸ ಅಂದಿಗಿಂತ ಇಂದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಹೌದು, ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ್ದು: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾ. 28:19) ಆ ಆಜ್ಞೆ ಪ್ರಕಾರ ಅವರು ಮಾಡಿದರು. ನಾವು ಸಹ ಅದನ್ನೇ ಮಾಡಿದ್ದೇವೆ ಎಂದು ಹೇಳಬಹುದು. ಏಕೆಂದರೆ 70 ಲಕ್ಷಕ್ಕಿಂತ ಹೆಚ್ಚು ಕ್ರಿಯಾಶೀಲ ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಕುರಿತು 230ಕ್ಕೂ ಹೆಚ್ಚು ದೇಶ-ದ್ವೀಪಗಳಲ್ಲಿ ಹುಮ್ಮಸ್ಸಿನಿಂದ ಸಾರುತ್ತಿದ್ದಾರೆ. ಲಕ್ಷಗಟ್ಟಲೆ ಜನರೊಂದಿಗೆ ಸಾಕ್ಷಿಗಳು ಕ್ರಮವಾಗಿ ಬೈಬಲ್‌ ಅಧ್ಯಯನ ನಡೆಸುತ್ತಿದ್ದಾರೆ. ಈ ಸಾರುವ ಕೆಲಸ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದಕ್ಕೆ ಪುರಾವೆ.

ಯೆಹೋವನಲ್ಲಿ ಭರವಸೆಯಿಡುವ ಸಮಯ ಇದೇ

17. ಪೌಲ ಮತ್ತು ಪೇತ್ರ ಯಾವ ಸಲಹೆಯನ್ನು ಕೊಟ್ಟರು?

17 ಆದಿಕ್ರೈಸ್ತರು ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು ಮರುಜ್ಞಾಪನಗಳು ಸಹಾಯನೀಡಿದವು. ಅಪೊಸ್ತಲ ಪೌಲ ರೋಮ್‌ನಲ್ಲಿ ಕೈದಿಯಾಗಿದ್ದಾಗ ತಿಮೊಥೆಯನಿಗೆ “ನೀನು ನನ್ನಿಂದ ಕೇಳಿಸಿಕೊಂಡ ಸ್ವಸ್ಥಕರವಾದ ಮಾತುಗಳ ನಮೂನೆಯನ್ನು ಭದ್ರವಾಗಿ ಹಿಡಿದುಕೊಂಡಿರು” ಎಂದು ಹೇಳಿದನು. (2 ತಿಮೊ. 1:13) ಆಗ ತಿಮೊಥೆಯನಿಗೆ ಎಷ್ಟು ಉತ್ತೇಜನ ಸಿಕ್ಕಿರಬೇಕೆಂದು ಸ್ವಲ್ಪ ಊಹಿಸಿಕೊಳ್ಳಿ. ತಾಳ್ಮೆ, ಸಹೋದರ ವಾತ್ಸಲ್ಯ ಮತ್ತು ಸ್ವನಿಯಂತ್ರಣಗಳಂಥ ಗುಣಗಳನ್ನು ಬೆಳೆಸಿಕೊಳ್ಳುವಂತೆ ಜೊತೆಕ್ರೈಸ್ತರಿಗೆ ಪ್ರೋತ್ಸಾಹಿಸಿದ ಮೇಲೆ ಅಪೊಸ್ತಲ ಪೇತ್ರನು ಹೇಳಿದ್ದು: “ನೀವು ಈ ವಿಷಯಗಳನ್ನು ತಿಳಿದವರಾಗಿದ್ದು ನಿಮ್ಮಲ್ಲಿರುವ ಸತ್ಯದಲ್ಲಿ ಸ್ಥಿರವಾಗಿರುವುದಾದರೂ ಇವುಗಳ ಕುರಿತು ನಿಮಗೆ ಜ್ಞಾಪಕಹುಟ್ಟಿಸಲು ನಾನು ಯಾವಾಗಲೂ ಸಿದ್ಧನಾಗಿರುವೆನು.”—2 ಪೇತ್ರ 1:5-8, 12.

18. ಮರುಜ್ಞಾಪನಗಳ ಕುರಿತು ಒಂದನೇ ಶತಮಾನದ ಕ್ರೈಸ್ತರ ನೋಟವೇನಾಗಿತ್ತು?

18 “ಈ ಮುಂಚೆ ಪವಿತ್ರ ಪ್ರವಾದಿಗಳಿಂದ ತಿಳಿಸಲ್ಪಟ್ಟ ಮಾತುಗಳನ್ನು” ಪೌಲ ಮತ್ತು ಪೇತ್ರ ತಮ್ಮ ಪತ್ರಗಳಲ್ಲಿ ಬರೆದರು. (2 ಪೇತ್ರ 3:2) ಇಂಥ ಮಾರ್ಗದರ್ಶನಕ್ಕೆ ಒಂದನೇ ಶತಮಾನದ ನಮ್ಮ ಸಹೋದರರು ಅಸಮಾಧಾನಗೊಂಡರೋ? ಇಲ್ಲ. ಏಕೆಂದರೆ ಅದು ದೇವರ ಪ್ರೀತಿಯ ಅಭಿವ್ಯಕ್ತಿಯಾಗಿತ್ತು. ಇದು, “ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಅಪಾತ್ರ ದಯೆ ಮತ್ತು ಜ್ಞಾನದಲ್ಲಿ ಅಭಿವೃದ್ಧಿಯನ್ನು” ಹೊಂದಲು ಅವರಿಗೆ ಸಹಾಯಮಾಡಿತು.—2 ಪೇತ್ರ 3:18.

19, 20. (1) ಯೆಹೋವನ ಮರುಜ್ಞಾಪನಗಳಲ್ಲಿ ನಾವು ಏಕೆ ಭರವಸೆ ಇಡಬೇಕು? (2) ಹಾಗೆ ಮಾಡುವುದರಿಂದ ಯಾವ ಪ್ರಯೋಜನ ಹೊಂದುತ್ತೇವೆ?

19 ಯೆಹೋವನ ದೋಷರಹಿತ ವಾಕ್ಯವಾದ ಬೈಬಲಿನಲ್ಲಿರುವ ಮರುಜ್ಞಾಪನಗಳಲ್ಲಿ ಭರವಸೆಯಿಡಲು ನಮಗಿಂದು ಹೇರಳ ಕಾರಣಗಳಿವೆ. (ಯೆಹೋಶುವ 23:14 ಓದಿ.) ಅದರ ಪುಟಗಳಲ್ಲಿ ಸಾವಿರಾರು ವರ್ಷಗಳಿಂದ ದೇವರು ಅಪರಿಪೂರ್ಣ ಮಾನವರೊಂದಿಗೆ ವ್ಯವಹರಿಸಿದ ರೀತಿಯನ್ನು ಕಂಡುಕೊಳ್ಳುತ್ತೇವೆ. ಈ ಐತಿಹಾಸಿಕ ನಿರೂಪಣೆಯನ್ನು ನಮ್ಮ ಪ್ರಯೋಜನಕ್ಕಾಗಿ ದಾಖಲಿಸಲಾಗಿದೆ. (ರೋಮ. 15:4; 1 ಕೊರಿಂ. 10:11) ಬೈಬಲಿನಲ್ಲಿರುವ ಪ್ರವಾದನೆಗಳ ನೆರವೇರಿಕೆಯನ್ನು ಸಹ ನಾವು ನೋಡಿದ್ದೇವೆ. ಪ್ರವಾದನೆಗಳನ್ನು ಮುಂಚಿತವಾಗಿಯೇ ಹೇಳಿರುವ ಮರುಜ್ಞಾಪನಗಳೆಂದು ಹೇಳಬಹುದು. ಉದಾಹರಣೆಗೆ ಪ್ರವಾದಿಸಲಾದಂತೆ ಈ “ಅಂತ್ಯಕಾಲದಲ್ಲಿ” ಲಕ್ಷಾಂತರ ಜನರು ಯೆಹೋವನ ಶುದ್ಧಾರಾಧನೆಗಾಗಿ ಕೂಡಿಬಂದಿದ್ದಾರೆ. (ಯೆಶಾ. 2:2, 3) ಲೋಕ ಪರಿಸ್ಥಿತಿ ಕೆಡುತ್ತಾ ಹೋಗುತ್ತಿರುವುದು ಸಹ ಬೈಬಲ್‌ ಪ್ರವಾದನೆಯ ನೆರವೇರಿಕೆಯಾಗಿದೆ. ಅಷ್ಟೇ ಅಲ್ಲ, ಈಗಾಗಲೇ ಹೇಳಿದಂತೆ ಈಗ ನಡೆಯುತ್ತಿರುವ ಲೋಕವ್ಯಾಪಕ ಸಾರುವ ಕೆಲಸ ಯೇಸುವಿನ ಮಾತುಗಳ ನೇರವಾದ ನೆರವೇರಿಕೆಯಾಗಿದೆ.—ಮತ್ತಾ. 24:14.

20 ತಾನು ಭರವಸೆಗೆ ಯೋಗ್ಯನು ಎನ್ನುವುದನ್ನು ನಮ್ಮ ಸೃಷ್ಟಿಕರ್ತನು ಶತಮಾನಗಳಿಂದಲೂ ತೋರಿಸುತ್ತಾ ಬಂದಿದ್ದಾನೆ. ಹಾಗಾದರೆ ನಾವು ಆತನ ಮರುಜ್ಞಾಪನಗಳಿಂದ ಭರವಸೆಯಿಟ್ಟು ಪ್ರಯೋಜನ ಪಡೆಯುತ್ತಿದ್ದೇವಾ? ರೋಸ್‌ಲೆನ್‌ ಎಂಬ ಸಹೋದರಿ ಹೀಗೆಯೇ ಮಾಡಿದರು. ಅವರು ಅನ್ನುವುದು: “ನಾನು ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡಲು ಆರಂಭಿಸಿದಾಗ, ಆತನ ಪ್ರೀತಿಯ ಹಸ್ತ ನನ್ನನ್ನು ಪರಾಮರಿಸುವುದನ್ನು, ಬಲಗೊಳಿಸುವುದನ್ನು ಹೆಚ್ಚು ಸ್ಪಷ್ಟವಾಗಿ ನೋಡಿದೆ.” ನಾವು ಸಹ ಯೆಹೋವನ ಮರುಜ್ಞಾಪನಗಳನ್ನು ಕೈಗೊಂಡು ನಡೆಯುತ್ತಾ ಪ್ರಯೋಜನ ಪಡೆಯುವಂತಾಗಲಿ.

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರ]

[ಪುಟ 8ರಲ್ಲಿರುವ ಚಿತ್ರ]

ಯೆಹೋವನ ಮರುಜ್ಞಾಪನಗಳು ಯೋಷೀಯನನ್ನು ಸತ್ಯಾರಾಧನೆಯ ಪರವಾಗಿ ಕ್ರಿಯೆಗೈಯುವಂತೆ ಪ್ರೇರಿಸಿದವು (ಪ್ಯಾರ 6)

[ಪುಟ 10ರಲ್ಲಿರುವ ಚಿತ್ರ]

ಯೆಹೋವನ ಸುರಕ್ಷಾ ಮರುಜ್ಞಾಪನಗಳನ್ನು ಅನ್ವಯಿಸುವಾಗ ರಾಜ್ಯ ಸಭಾಗೃಹಕ್ಕೆ ಬರುವವರು ಸುರಕ್ಷಿತರಾಗಿರುತ್ತಾರೆ (ಪ್ಯಾರ 11)