ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಯನೀಯರ್‌ ಸೇವೆಮಾಡಿ ಯೆಹೋವನಿಗೆ ಆಪ್ತರಾಗಿ

ಪಯನೀಯರ್‌ ಸೇವೆಮಾಡಿ ಯೆಹೋವನಿಗೆ ಆಪ್ತರಾಗಿ

ಪಯನೀಯರ್‌ ಸೇವೆಮಾಡಿ ಯೆಹೋವನಿಗೆ ಆಪ್ತರಾಗಿ

‘ನಮ್ಮ ದೇವರನ್ನು ಸ್ತುತಿಸುವದು ಒಳ್ಳೇದಾಗಿದೆ.’—ಕೀರ್ತ. 147:1.

ಪುನರಾಲೋಚನೆ ಪ್ರಶ್ನೆಗಳು

ಪಯನೀಯರ್‌ ಸೇವೆ ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ಹೇಗೆ ಬಲಪಡಿಸುತ್ತದೆ?

ನೀವೊಬ್ಬ ಪಯನೀಯರ್‌ ಆಗಿರುವಲ್ಲಿ ಆ ಸುಯೋಗದಲ್ಲಿ ಮುಂದುವರಿಯಲು ಯಾವುದು ನೆರವಾಗುತ್ತದೆ?

ಈಗ ನೀವು ಪಯನೀಯರ್‌ ಅಲ್ಲದಿರುವಲ್ಲಿ, ಯಾವ ಹೊಂದಾಣಿಕೆಗಳನ್ನು ಮಾಡಿಕೊಂಡರೆ ನೀವು ಪಯನೀಯರ್‌ ಆಗಬಹುದು?

1, 2. (1) ನಾವು ಪ್ರೀತಿಸುವವರ ಕುರಿತು ಯೋಚಿಸುವುದರಿಂದ, ಮಾತಾಡುವುದರಿಂದ ಏನು ಪ್ರಯೋಜನ? (ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ.) (2) ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಲಿದ್ದೇವೆ?

ನಾವು ಯಾರನ್ನು ಪ್ರೀತಿಸುತ್ತೇವೋ ಅವರ ಬಗ್ಗೆ ಮಾತಾಡುವಾಗ, ಅವರ ಕುರಿತು ಯೋಚಿಸುವಾಗ ನಾವು ಅವರಿಗೆ ಇನ್ನಷ್ಟು ಹತ್ತಿರವಾಗುತ್ತೇವೆ. ಯೆಹೋವನೊಂದಿಗೆ ಇರುವ ನಮ್ಮ ಸಂಬಂಧದ ವಿಷಯದಲ್ಲೂ ಇದು ನಿಜ. ಕುರುಬನಾಗಿದ್ದ ದಾವೀದ ಆಕಾಶದ ನಕ್ಷತ್ರಗಳನ್ನು ನೋಡುತ್ತಾ, ಅದ್ವಿತೀಯ ಸೃಷ್ಟಿಕರ್ತನನ್ನು ಸ್ಮರಿಸುತ್ತಾ ಅನೇಕ ರಾತ್ರಿಗಳನ್ನು ಕಳೆದನು. ಹಾಗಾಗಿ ಅವನು, “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ— ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” ಎಂದು ಬರೆದನು. (ಕೀರ್ತ. 8:3, 4) ಅದೇ ರೀತಿ ಅಪೊಸ್ತಲ ಪೌಲನು ಆಶ್ಚರ್ಯಚಕಿತನಾದನು. ಆಧ್ಯಾತ್ಮಿಕ ಇಸ್ರಾಯೇಲಿನ ವಿಷಯದಲ್ಲಿ ಯೆಹೋವ ದೇವರ ಉದ್ದೇಶ ಅದ್ಭುತಕರವಾಗಿ ನೆರವೇರುತ್ತಿರುವುದರ ಕುರಿತು ಆಲೋಚಿಸುತ್ತಾ ಅವನು ಉದ್ಗರಿಸಿದ್ದು: “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ!”—ರೋಮ. 11:17-26, 33.

2 ನಾವು ಸುವಾರ್ತೆ ಸಾರುವಾಗ ಯೆಹೋವನ ಕುರಿತು ಯೋಚಿಸುತ್ತೇವೆ ಮತ್ತು ಮಾತಾಡುತ್ತೇವೆ. ಇದು ನಮ್ಮ ಮೇಲೆ ಒಳ್ಳೆ ಪರಿಣಾಮ ಬೀರುತ್ತದೆ. ಪೂರ್ಣಸಮಯದ ಸೇವೆಯನ್ನು ಮಾಡುತ್ತಿರುವವರು ತಮ್ಮನ್ನು ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಅನೇಕ ಆಶೀರ್ವಾದಗಳನ್ನು ಅನುಭವಿಸಿ ನೋಡಿದ್ದಾರೆ. ಅದರಲ್ಲೊಂದು, ದೇವರ ಮೇಲೆ ಅವರಿಗಿರುವ ಪ್ರೀತಿ ಇನ್ನೂ ಗಾಢವಾಗಿದೆ. ನೀವು ಪೂರ್ಣಸಮಯದ ಸೇವೆ ಮಾಡುತ್ತಿರಲಿ ಅಥವಾ ಮಾಡುವ ಗುರಿಯಿರಲಿ ಇದರ ಬಗ್ಗೆ ಆಲೋಚಿಸಿ: ಪೂರ್ಣಸಮಯದ ಸೇವೆ ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಬಲಪಡಿಸುತ್ತದೆ? ನೀವೊಬ್ಬ ಪಯನೀಯರ್‌ ಆಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನಾನು ಈ ಸೇವೆಯಲ್ಲಿ ಮುಂದುವರಿಯಲು ನನಗೆ ಯಾವುದು ನೆರವಾಗುತ್ತದೆ?’ ನೀವು ಪಯನೀಯರ್‌ ಅಲ್ಲದಿರುವಲ್ಲಿ, ‘ನಾನು ಪಯನೀಯರ್‌ ಸೇವೆ ಮಾಡಲು ಯಾವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು?’ ಎಂದು ಕೇಳಿಕೊಳ್ಳಿ. ಪೂರ್ಣಸಮಯದ ಸೇವೆ ಮಾಡುವುದರಿಂದ ಯೆಹೋವನ ಮತ್ತು ನಮ್ಮ ಸಂಬಂಧ ಹೇಗೆ ಇನ್ನಷ್ಟು ಗಟ್ಟಿ ಆಗುತ್ತದೆ ಅನ್ನುವುದನ್ನು ಈಗ ನೋಡೋಣ.

ಪೂರ್ಣಸಮಯದ ಸೇವೆ ಮತ್ತು ಯೆಹೋವನೊಂದಿಗಿನ ಸಂಬಂಧ

3. ದೇವರ ರಾಜ್ಯದಲ್ಲಿ ಸಿಗಲಿರುವ ಆಶೀರ್ವಾದಗಳ ಕುರಿತು ಇತರರೊಟ್ಟಿಗೆ ಮಾತಾಡುವುದು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ?

3 ಇತರರೊಂದಿಗೆ ದೇವರ ರಾಜ್ಯದ ಆಶೀರ್ವಾದಗಳ ಕುರಿತು ಮಾತಾಡುವುದು ನಮ್ಮನ್ನು ಯೆಹೋವನಿಗೆ ಆಪ್ತರನ್ನಾಗಿಸುತ್ತದೆ. ಮನೆಮನೆ ಸೇವೆಯಲ್ಲಿ ಯಾವ ವಚನ ಬಳಸುವುದೆಂದರೆ ನಿಮಗೆ ತುಂಬ ಇಷ್ಟ? ನೀವು ಕೀರ್ತನೆ 37:10,11, ದಾನಿಯೇಲ 2:44, ಯೋಹಾನ 5:28, 29 ಅಥವಾ ಪ್ರಕಟನೆ 21:3, 4ನ್ನು ವಚನವನ್ನು ಜಾಸ್ತಿ ಬಳಸುತ್ತಿರಬಹುದು. ಈ ವಚನಗಳನ್ನು ಬಳಸಿದಾಗೆಲ್ಲ, ಯೆಹೋವನು ‘ಪ್ರತಿಯೊಂದು ಒಳ್ಳೆಯ ದಾನವನ್ನೂ ಪ್ರತಿಯೊಂದು ಪರಿಪೂರ್ಣ ವರವನ್ನೂ’ ಕೊಡುವ ಉದಾರಿ ದೇವರಾಗಿದ್ದಾನೆ ಎಂದು ನಮಗೆ ನಾವೇ ನೆನಪಿಸಿಕೊಳ್ಳುತ್ತೇವೆ. ಇದು ನಮ್ಮನ್ನು ಆತನಿಗೆ ಹೆಚ್ಚು ಆಪ್ತರನ್ನಾಗಿಸುತ್ತದೆ.—ಯಾಕೋ. 1:17.

4. ಇತರರ ಆಧ್ಯಾತ್ಮಿಕ ಸ್ಥಿತಿಯನ್ನು ನೋಡುವಾಗ ದೇವರ ಒಳ್ಳೇತನದ ಕಡೆಗಿನ ನಮ್ಮ ಗಣ್ಯತೆ ಹೇಗೆ ಹೆಚ್ಚಾಗುತ್ತದೆ?

4 ನಾವು ಯಾರಿಗೆ ಸಾರುತ್ತೇವೋ ಅವರ ಆಧ್ಯಾತ್ಮಿಕ ದುಃಸ್ಥಿತಿಯನ್ನು ನೋಡಿ, ಸತ್ಯದ ಕಡೆಗೆ ನಮ್ಮ ಗಣ್ಯತೆ ಇನ್ನೂ ಹೆಚ್ಚುತ್ತದೆ. ಲೋಕದ ಜನರಿಗೆ ಯಶಸ್ಸು ಮತ್ತು ಸಂತೋಷ ಗಳಿಸಲು ಏನು ಮಾಡಬೇಕೆಂದು ಸರಿಯಾದ ಮಾರ್ಗದರ್ಶನೆ ಸಿಗುತ್ತಿಲ್ಲ. ಹೆಚ್ಚಿನವರು ತಮ್ಮ ಭವಿಷ್ಯ ಏನಾಗುತ್ತೋ ಅಂತ ಚಿಂತೆ ಮಾಡುತ್ತಾರೆ. ಅವರಿಗೆ ಯಾವುದೇ ನಿರೀಕ್ಷೆ ಇಲ್ಲ. ಜೀವನಕ್ಕೊಂದು ಅರ್ಥ ಪಡೆದುಕೊಳ್ಳಲು ಪರದಾಡುತ್ತಾರೆ. ಇನ್ನು ಕೆಲವರಿಗೆ ದೇವರಲ್ಲಿ ಭಕ್ತಿಯಿದ್ದರೂ ಬೈಬಲಿನ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ಇಂಥವರೆಲ್ಲರೂ ನಿನೆವೆಯ ಜನರಂತಿದ್ದಾರೆ. (ಯೋನ 4:11 ಓದಿ.) ನಾವು ಸೇವೆಯಲ್ಲಿ ಹೆಚ್ಚು ಪಾಲ್ಗೊಳ್ಳುವಾಗ, ನಾವು ಯಾರಿಗೆ ಸಾರುತ್ತೇವೋ ಅವರ ಆಧ್ಯಾತ್ಮಿಕ ಸ್ಥಿತಿಗೂ ಯೆಹೋವನ ಜನರ ಆಧ್ಯಾತ್ಮಿಕ ಸ್ಥಿತಿಗೂ ಇರುವ ವ್ಯತ್ಯಾಸ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. (ಯೆಶಾ. 65:13) ಯೆಹೋವನು ಕೇವಲ ತನ್ನ ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಾ ಇಲ್ಲ. ಬದಲಿಗೆ ಎಲ್ಲ ಜನರನ್ನೂ ಆಧ್ಯಾತ್ಮಿಕ ಚೈತನ್ಯ ಮತ್ತು ನೈಜ ನಿರೀಕ್ಷೆ ಪಡೆಯುವಂತೆ ಆಮಂತ್ರಿಸುತ್ತಾನೆ. ಯೆಹೋವನ ಒಳ್ಳೇತನವನ್ನು ಇದು ನಮಗೆ ನೆನಪಿಸುತ್ತದೆ.—ಪ್ರಕ. 22:17.

5. ಇತರರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡುವಾಗ ನಮಗೆ ನಮ್ಮ ತೊಂದರೆಗಳ ಬಗ್ಗೆ ಹೇಗನಿಸುತ್ತದೆ?

5 ಇತರರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡುವಾಗ ನಾವು ನಮ್ಮ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ರೆಗ್ಯುಲರ್‌ ಪಯನೀಯರ್‌ ಆಗಿರುವ ಟ್ರಿಶಾ ಉದಾಹರಣೆ ಗಮನಿಸಿ. ಅವಳ ತಂದೆತಾಯಿ ವಿಚ್ಛೇದನ ಪಡೆದು ದೂರವಾಗಿದ್ದರು. ಅವಳು ಹೇಳುತ್ತಾಳೆ: “ನನ್ನ ಜೀವನದ ಅತ್ಯಂತ ಕರಾಳ ದಿನಗಳು ಅವಾಗಿದ್ದವು. ಭಾವನಾತ್ಮಕವಾಗಿ ಜರ್ಜರಿತಗೊಂಡಿದ್ದೆ.” ಒಂದು ದಿನ ಅವಳಿಗೆ ತುಂಬ ಬೇಜಾರಾಗಿ ಮನೆಯಲ್ಲೇ ಇರೋಣ ಅಂದುಕೊಂಡಳು. ಆದರೂ ಬೈಬಲ್‌ ಅಧ್ಯಯನಕ್ಕೆ ಹೋದಳು. ಮೂರು ಮಕ್ಕಳಿಗೆ ಆಕೆ ಬೈಬಲ್‌ ಕಲಿಸುತ್ತಿದ್ದಳು. ಆ ಮಕ್ಕಳು ತುಂಬ ಕಷ್ಟದ ಪರಿಸ್ಥಿತಿಯಲ್ಲಿದ್ದರು. ತಂದೆ ಅವರನ್ನು ತೊರೆದು ಹೋಗಿದ್ದನು. ಅವರ ಅಣ್ಣ ಈ ಮೂವರನ್ನು ತುಂಬ ಪೀಡಿಸಿದ್ದನು. ಟ್ರಿಶಾ ಹೇಳುತ್ತಾಳೆ: “ಇವರ ಪರಿಸ್ಥಿತಿ ಮುಂದೆ ನನ್ನ ಕಷ್ಟ ಏನೇನೂ ಅಲ್ಲ ಎಂದನಿಸಿತು. ಅಧ್ಯಯನ ಮಾಡುತ್ತಿರುವಾಗ, ಕಲಿಯುತ್ತಿರುವ ವಿಷಯಗಳನ್ನು ಕೇಳಿ ಆ ಪುಟ್ಟ ಮಕ್ಕಳ ಕಣ್ಣುಗಳು ಆಶ್ಚರ್ಯದಿಂದ ಹೊಳೆಯುತ್ತಿದ್ದವು. ಪುಳಕಿತರಾಗಿ ಆನಂದದಿಂದ ಕಿಲಕಿಲ ನಗುತ್ತಿದ್ದರು. ಆ ದಿನ ಆ ಮಕ್ಕಳು ನಿಜವಾಗಲೂ ನನಗೆ ಯೆಹೋವನಿಂದ ಬಂದ ಕೊಡುಗೆಯಾಗಿದ್ದರು.”

6, 7. (1) ಬೈಬಲ್‌ ಸತ್ಯಗಳನ್ನು ಕಲಿಸುವಾಗ ನಮ್ಮ ನಂಬಿಕೆ ಹೇಗೆ ಬಲವಾಗುತ್ತದೆ? (2) ವಿದ್ಯಾರ್ಥಿಗಳು ಬೈಬಲ್‌ ತತ್ವಗಳನ್ನು ಅನ್ವಯಿಸಿ ಬದಲಾಗುವಾಗ ದೇವರ ವಿವೇಕದ ಬಗ್ಗೆ ನಮಗೆ ಹೇಗನಿಸುತ್ತದೆ?

6 ಬೈಬಲ್‌ ಸತ್ಯಗಳನ್ನು ಇತರರಿಗೆ ಕಲಿಸುವಾಗ ನಮ್ಮ ನಂಬಿಕೆ ಹೆಚ್ಚಾಗುತ್ತದೆ. ಅಪೊಸ್ತಲ ಪೌಲನ ಸಮಯದಲ್ಲಿದ್ದ ಕೆಲವು ಯೆಹೂದ್ಯರು ತಾವೇನು ಕಲಿಸುತ್ತಿದ್ದರೋ ಅದನ್ನು ಅನುಸರಿಸಲು ತಪ್ಪಿಹೋಗುತ್ತಿದ್ದರು. ಹಾಗಾಗಿ ಪೌಲ ಅವರಿಗೆ ‘ಇತರರಿಗೆ ಬೋಧಿಸುವ ನೀವು ನಿಮಗೇ ಬೋಧಿಸಿಕೊಳ್ಳದೆ ಇದ್ದೀರೋ?’ ಎಂದು ಕೇಳಿದನು. (ರೋಮ. 2:21) ಆದರೆ ಇಂದಿರುವ ಪಯನೀಯರರು ಎಷ್ಟೋ ಭಿನ್ನರಾಗಿದ್ದಾರೆ! ಇತರರಿಗೆ ಬೋಧಿಸುವ, ಬೈಬಲ್‌ ಅಧ್ಯಯನ ಮಾಡುವ ಅನೇಕ ಅವಕಾಶಗಳು ಅವರಿಗೆ ಸಿಗುತ್ತವೆ. ಅದಕ್ಕಾಗಿ ಅವರು ಪ್ರತಿಬಾರಿ ತಯಾರಿ ಮಾಡಬೇಕಾಗುತ್ತದೆ. ಪ್ರಶ್ನೆಗಳಿಗೆ ಉತ್ತರಿಸಲು ಸಂಶೋಧನೆ ಮಾಡಬೇಕಾಗುತ್ತದೆ. ಜನೀನ್‌ ಅನ್ನುವ ಪಯನೀಯರ್‌ ಸಹೋದರಿ ವಿವರಿಸುತ್ತಾರೆ: “ಪ್ರತಿಸಲ ಇತರರಿಗೆ ಸತ್ಯ ಕಲಿಸುವಾಗ ಅದು ನನ್ನ ಹೃದಮನದಲ್ಲಿ ಇನ್ನೂ ಹೆಚ್ಚು ಅಚ್ಚೊತ್ತಲ್ಪಡುತ್ತದೆ. ಹಾಗಾಗಿ ನನ್ನ ನಂಬಿಕೆ ಇದ್ದ ಹಾಗೇ ಇರುವುದಿಲ್ಲ. ಬೆಳೆಯುತ್ತಾ ಹೋಗುತ್ತದೆ.”

7 ಬೈಬಲ್‌ ವಿದ್ಯಾರ್ಥಿಗಳು ಬೈಬಲ್‌ ತತ್ವಗಳನ್ನು ಅನ್ವಯಿಸುತ್ತಾ ಜೀವನದಲ್ಲಿ ಬದಲಾವಣೆ ಮಾಡುವಾಗ, ದೇವರ ವಿವೇಕದ ಕಡೆಗಿನ ನಮ್ಮ ಗಣ್ಯತೆ ಹೆಚ್ಚಾಗುತ್ತದೆ. (ಯೆಶಾ. 48:17, 18) ಆಗ ನಾವು ಸಹ ನಮ್ಮ ಜೀವನದಲ್ಲಿ ಆ ತತ್ವಗಳನ್ನು ಪಾಲಿಸಲು ದೃಢಮನಸ್ಸು ಮಾಡುತ್ತೇವೆ. ಪಯನೀಯರ್‌ ಆಗಿರುವ ಏಡ್ರೀಯಾನ ಹೇಳುತ್ತಾರೆ: “ಜನರು ತಮ್ಮ ವಿವೇಕದಂತೆಯೇ ನಡೆಯುವಾಗ ಜೀವನ ಅಸ್ತವ್ಯಸ್ತವಾಗಿರುತ್ತದೆ. ಆದರೆ ಯೆಹೋವನ ವಿವೇಕದ ಮೇಲೆ ಆತುಕೊಳ್ಳಲು ಆರಂಭಿಸಿದ ಕ್ಷಣದಿಂದಲೇ ಅವರ ಜೀವನದಲ್ಲಿ ಸುಧಾರಣೆ ಕಾಣುತ್ತಾರೆ.” ಅದೇ ರೀತಿ ಫಿಲ್‌ ಹೇಳುತ್ತಾರೆ: “ತಮ್ಮನ್ನು ತಾವೇ ಬದಲಾಯಿಸಿಕೊಳ್ಳಲು ಸಾಧ್ಯವಾಗದೆ ಇರುವವರನ್ನು ಯೆಹೋವನು ಹೇಗೆ ಬದಲಾಯಿಸುತ್ತಾನೆಂದು ನಾವು ಕಣ್ಣಾರೆ ಕಾಣುತ್ತೇವೆ.”

8. ಜೊತೆವಿಶ್ವಾಸಿಗಳೊಂದಿಗೆ ಸೇವೆ ಮಾಡುವುದರಿಂದ ನಮಗೆ ಏನು ಪ್ರಯೋಜನ?

8 ಸಹೋದರ-ಸಹೋದರಿಯರೊಂದಿಗೆ ಸೇವೆಯಲ್ಲಿ ಭಾಗವಹಿಸುವುದು ನಮ್ಮ ಆಧ್ಯಾತ್ಮಿಕತೆಯನ್ನು ಕಟ್ಟುತ್ತದೆ. (ಜ್ಞಾನೋ. 13:20) ಹೆಚ್ಚಿನ ಪಯನೀಯರರು ತುಂಬ ಸಮಯವನ್ನು ಸಹೋದರ ಸಹೋದರಿಯರೊಂದಿಗೆ ಸೇವೆಯಲ್ಲಿ ಕಳೆಯುತ್ತಾರೆ. ಇದು “ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು” ಅವರಿಗೆ ಒಳ್ಳೆ ಅವಕಾಶ ಒದಗಿಸುತ್ತದೆ. (ರೋಮ. 1:12; ಜ್ಞಾನೋಕ್ತಿ 27:17 ಓದಿ.) ಪಯನೀಯರ್‌ ಸಹೋದರಿ ಲೀಸಾ ಹೇಳುತ್ತಾರೆ: “ಕೆಲಸದ ಸ್ಥಳದಲ್ಲಿ ಎಲ್ಲರಲ್ಲೂ ಹೊಟ್ಟೆಕಿಚ್ಚು, ನಾನು ಮುಂದು ಅನ್ನುವ ಮನೋಭಾವ. ಯಾವಾಗಲೂ ಗಾಳಿಮಾತು, ಹೊಲಸುಮಾತೇ. ಏನೇ ಆಗಲಿ ಇನ್ನೊಬ್ಬರಿಗಿಂತ ಮುಂದೆ ಇರಬೇಕು ಅನ್ನುವ ಜಾಯಮಾನ. ಕೆಲವೊಮ್ಮೆ ಕ್ರೈಸ್ತ ನಡತೆಯ ಕಾರಣ ನಮ್ಮನ್ನು ಗೇಲಿ ಮಾಡುತ್ತಾರೆ. ಆದರೆ ಜೊತೆಕ್ರೈಸ್ತರೊಂದಿಗೆ ಸೇವೆಮಾಡಿದ ಮೇಲೆ ನಿಜವಾದ ಸಂತೋಷ, ಉತ್ತೇಜನ ಸಿಗುತ್ತದೆ. ಎಷ್ಟೇ ಸುಸ್ತಾಗಿದ್ದರೂ ಆ ದಿನದ ಕೊನೆಯಲ್ಲಿ ಚೈತನ್ಯದಿಂದ ಮನೆಸೇರುತ್ತೇನೆ.”

9. ನಮ್ಮ ಸಂಗಾತಿಯೊಂದಿಗೆ ಪಯನೀಯರ್‌ ಸೇವೆ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ?

9 ಬಾಳಸಂಗಾತಿಯೊಂದಿಗೆ ಪಯನೀಯರ್‌ ಸೇವೆಮಾಡುವುದು ವಿವಾಹಬಂಧವನ್ನು ಇನ್ನಷ್ಟು ಬಲವಾಗಿಸುತ್ತದೆ. (ಪ್ರಸಂ. 4:12) ಸಹೋದರಿ ಮ್ಯಾಡಲನ್‌ ಹಾಗೂ ಆಕೆಯ ಪತಿ, ಇಬ್ಬರೂ ಪಯನೀಯರರು. ಸಹೋದರಿ ವಿವರಿಸುವುದು: “ನಾನೂ ನನ್ನ ಯಜಮಾನರೂ ಆ ದಿನದ ಸೇವೆ ಹೇಗಿತ್ತು ಎಂದು ಮಾತಾಡಲು ಸಮಯ ಮಾಡಿಕೊಳ್ಳುತ್ತೇವೆ. ಜೊತೆಯಾಗಿ ಬೈಬಲ್‌ ಓದುವಾಗ ಸೇವೆಗೆ ಅನ್ವಯಿಸುವ ಅಂಶಗಳನ್ನು ಹಂಚಿಕೊಳ್ಳುತ್ತೇವೆ. ನಾವು ಒಟ್ಟಿಗೆ ಪಯನೀಯರ್‌ ಸೇವೆ ಮಾಡುತ್ತಾ ಹೋದಂತೆ ಇನ್ನೂ ಹೆಚ್ಚು ಆಪ್ತರಾಗುತ್ತಾ ಇದ್ದೇವೆ.” ಟ್ರಿಶಾ ಹೇಳುತ್ತಾರೆ: “ಸಾಲ ಮಾಡಬಾರದು ಅಂತ ನಾವಿಬ್ಬರೂ ತೀರ್ಮಾನ ಮಾಡಿದ್ದೇವೆ. ಹಾಗಾಗಿ ನಮ್ಮಲ್ಲಿ ಹಣದ ಬಗ್ಗೆ ಜಗಳ ಆಗಲ್ಲ. ನಮ್ಮಿಬ್ಬರಿಗೆ ಒಂದೇ ಶೆಡ್ಯೂಲ್‌ ಇದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಪುನರ್ಭೇಟಿಗಳಿಗೆ ಬೈಬಲ್‌ ಅಧ್ಯಯನಗಳಿಗೆ ಹೋಗ್ತೇವೆ. ಇದರಿಂದಾಗಿ ನಾವಿಬ್ಬರು ಪರಸ್ಪರ ಮತ್ತು ಯೆಹೋವನಿಗೆ ಆಪ್ತರಾಗಿದ್ದೇವೆ.”

10. ರಾಜ್ಯಾಭಿರುಚಿಗಳಿಗೆ ಪ್ರಥಮಸ್ಥಾನ ಕೊಡುತ್ತಾ ಯೆಹೋವನ ಬೆಂಬಲ ಅನುಭವಿಸುವಾಗ ನಮಗೆ ಹೇಗನಿಸುತ್ತದೆ?

10 ರಾಜ್ಯಾಭಿರುಚಿಗಳಿಗೆ ಪ್ರಥಮಸ್ಥಾನ ಕೊಡುವಾಗ, ಯೆಹೋವನ ಬೆಂಬಲ ಅನುಭವಿಸುವಾಗ, ಪ್ರಾರ್ಥನೆಗಳಿಗೆ ಉತ್ತರ ಸಿಗುವಾಗ ಆತನಲ್ಲಿ ನಮ್ಮ ಭರವಸೆ ಹೆಚ್ಚುತ್ತದೆ. ಒಂದರ್ಥದಲ್ಲಿ ಎಲ್ಲ ನಿಷ್ಠಾವಂತ ಕ್ರೈಸ್ತರು ಇದನ್ನು ಅನುಭವಿಸುತ್ತಾರೆ. ಆದರೆ ಪೂರ್ಣಸಮಯದ ಸೇವೆಯಲ್ಲಿರುವವರು ತಾವು ಪಯನೀಯರರಾಗಿ ಮುಂದುವರಿಯಬೇಕಾದರೆ ಯೆಹೋವನ ಮೇಲೆ ಆತುಕೊಳ್ಳಬೇಕು ಎಂದು ಮನಗಂಡಿದ್ದಾರೆ. (ಮತ್ತಾಯ 6:30-34 ಓದಿ.) ಸಹೋದರ ಕರ್ಟ್‌ರವರ ಅನುಭವ ಗಮನಿಸಿ. ಅವರೂ ಅವರ ಪತ್ನಿ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಕರ್ಟ್‌ ಬದಲಿ ಸಂಚರಣ ಮೇಲ್ವಿಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಮನೆಯಿಂದ ಎರಡೂವರೆ ತಾಸು ಪ್ರಯಾಣದಷ್ಟು ದೂರದಲ್ಲಿರುವ ಸಭೆಗೆ ಭೇಟಿನೀಡಲು ಅವರು ಒಪ್ಪಿಕೊಂಡರು. ಆದರೆ ಅವರ ಕಾರಿನಲ್ಲಿ ಪೆಟ್ರೋಲ್‌ ಹೋಗಲಿಕ್ಕಷ್ಟೇ ಇತ್ತು. ವಾಪಸ್ಸು ಬರಲಿಕ್ಕೆ ಇರಲಿಲ್ಲ. ಅದೂ ಅಲ್ಲದೆ ಸಂಬಳ ಸಿಗಲು ಇನ್ನೂ ಒಂದು ವಾರ ಇತ್ತು. ಕರ್ಟ್‌ ಹೇಳುತ್ತಾರೆ: “ನಾನು ಈ ನೇಮಕಕ್ಕೆ ಒಪ್ಪಿಕೊಂಡು ತಪ್ಪು ಮಾಡಿದೆನಾ ಅಂತ ಒಂದು ಕ್ಷಣ ನನಗನಿಸಿತು.” ಆದರೆ ಅವರು ಪ್ರಾರ್ಥಿಸಿದ ನಂತರ, ದೇವರು ತಮ್ಮ ಅಗತ್ಯಗಳನ್ನು ಪೂರೈಸುತ್ತಾನೆಂದು ಭರವಸೆಯಿಟ್ಟು ಆ ನೇಮಕವನ್ನು ಪೂರೈಸಲು ಮುಂದಾದರು. ಅವರು ಇನ್ನೇನು ಮನೆ ಬಿಡಬೇಕು ಅನ್ನುವಷ್ಟರಲ್ಲಿ ಒಬ್ಬ ಸಹೋದರಿ ಫೋನ್‌ ಮಾಡಿ ಅವರಿಗೆ ಒಂದು ಉಡುಗೊರೆ ಕೊಡಲು ಬಯಸುತ್ತೇನೆ ಎಂದು ಹೇಳಿದರು. ಆ ಇಡೀ ಪ್ರಯಾಣಕ್ಕಾಗಿ ಬೇಕಾಗಿದ್ದಷ್ಟೇ ಹಣ ಅವರು ಕೊಟ್ಟ ಉಡುಗೊರೆಯಲ್ಲಿತ್ತು. ಕರ್ಟ್‌ ಹೇಳುತ್ತಾರೆ: “ಈ ರೀತಿ ಮತ್ತೆ ಮತ್ತೆ ಆಗುವಾಗ ಯೆಹೋವನ ಸಹಾಯಹಸ್ತ ನಮ್ಮೊಂದಿಗೆ ಯಾವಾಗಲೂ ಇರುತ್ತದೆಂಬ ಭರವಸೆ ಹೆಚ್ಚುತ್ತದೆ.”

11. ಪಯನೀಯರರು ಅನುಭವಿಸುವ ಕೆಲವು ಆಶೀರ್ವಾದಗಳಾವುವು?

11 ಹೌದು, ಪಯನೀಯರರು ಯೆಹೋವನ ಸೇವೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವಾಗ, ಯೆಹೋವನೊಂದಿಗೆ ಹೆಚ್ಚು ಆಪ್ತರಾಗುವಾಗ ದೇವರು ಅವರ ಮೇಲೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸುತ್ತಾನೆ. (ಧರ್ಮೋ. 28:2) ಹಾಗಂತ ಪಯನೀಯರ್‌ ಸೇವೆಯಲ್ಲಿ ಯಾವುದೇ ಸವಾಲುಗಳಿಲ್ಲ ಅಂತಲ್ಲ. ಆದಾಮನ ದಂಗೆಯಿಂದ ಆದ ದುಷ್ಪರಿಣಾಮಗಳಿಂದ ದೇವರ ಸೇವಕರಲ್ಲಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಪಯನೀಯರರು ತಮಗಿರುವ ಸಮಸ್ಯೆಗಳ ಕಾರಣ ತಮ್ಮ ಪಯನೀಯರ್‌ ಸೇವೆಯನ್ನು ಸ್ಪಲ್ಪ ಸಮಯಕ್ಕೆ ನಿಲ್ಲಿಸಬೇಕಾಗಿ ಬಂದಿದೆ. ಆದರೂ ಹೆಚ್ಚಾಗಿ ಈ ಸವಾಲುಗಳನ್ನು ನಿಭಾಯಿಸಲು ಆಗುತ್ತದೆ ಅಥವಾ ಅವು ಬಾರದಂತೆ ತಡೆಯಲೂ ಆಗುತ್ತದೆ. ಹಾಗಾದರೆ ಪಯನೀಯರರಿಗೆ ತಮ್ಮ ಸುಯೋಗದಲ್ಲಿ ಮುಂದುವರಿಯಲು ಯಾವುದು ಸಹಾಯಮಾಡುತ್ತದೆ?

ಪೂರ್ಣಸಮಯದ ಸೇವೆ ಬಿಡಬೇಡಿ

12, 13. (1) ಒಬ್ಬ ಪಯನೀಯರನಿಗೆ ತಾಸುಗಳನ್ನು ಮುಟ್ಟಲು ಆಗುತ್ತಿಲ್ಲವಾದರೆ ಏನು ಮಾಡಬೇಕು? (2) ದೈನಂದಿನ ಬೈಬಲ್‌ ವಾಚನ, ವೈಯಕ್ತಿಕ ಅಧ್ಯಯನ ಮತ್ತು ಮನನಕ್ಕಾಗಿ ಶೆಡ್ಯೂಲ್‌ ಮಾಡುವುದು ಯಾಕೆ ತುಂಬ ಪ್ರಾಮುಖ್ಯ?

12 ಹೆಚ್ಚಿನ ಪಯನೀಯರರು ಸೇವೆ, ಕೆಲಸ ಎಂದು ಕಾರ್ಯಮಗ್ನರಾಗಿರುತ್ತಾರೆ. ಹಾಗಾಗಿ ಎಲ್ಲವನ್ನು ಮಾಡಿಮುಗಿಸುವುದು ಸುಲಭವಲ್ಲ. ಆದ್ದರಿಂದ ಅವರು ತಮ್ಮೆಲ್ಲ ಕೆಲಸಗಳನ್ನು ಸಂಘಟಿಸಿಕೊಳ್ಳುವುದು ಪ್ರಾಮುಖ್ಯ. (1 ಕೊರಿಂ. 14:33, 40) ಒಬ್ಬ ಪಯನೀಯರನಿಗೆ ತಾಸುಗಳನ್ನು ಮುಟ್ಟಲು ಆಗುತ್ತಿಲ್ಲವಾದರೆ ತಾನು ಸಮಯವನ್ನು ಹೇಗೆ ಬಳಸುತ್ತಿದ್ದೇನೆಂದು ಮರುಪರಿಶೀಲಿಸಬೇಕು. (ಎಫೆ. 5:15, 16) ಹೀಗೆ ಕೇಳಿಕೊಳ್ಳಬಹುದು: ‘ನಾನು ಮನರಂಜನೆಯಲ್ಲಿ, ವಿನೋದ-ವಿಹಾರಗಳಲ್ಲಿ ಎಷ್ಟು ಸಮಯ ಕಳೆಯುತ್ತಿದ್ದೇನೆ? ನನ್ನಲ್ಲಿ ಸ್ವಶಿಸ್ತಿನ ಕೊರತೆ ಇದೆಯಾ? ನನ್ನ ಕೆಲಸದ ಸಮಯವನ್ನು ಹೊಂದಾಣಿಕೆ ಮಾಡಲು ಆಗುತ್ತದಾ?’ ಹೊಸ ವಿಷಯಗಳು ನಮ್ಮ ಶೆಡ್ಯೂಲಿನಲ್ಲಿ ಸುಲಭವಾಗಿ ಸೇರಿಕೊಳ್ಳಬಹುದು. ಹಾಗಾಗಿ ಪೂರ್ಣಸಮಯದ ಸೇವೆಯಲ್ಲಿರುವವರು ತಮ್ಮ ಶೆಡ್ಯೂಲನ್ನು ಆಗಾಗ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು.

13 ದೈನಂದಿನ ಬೈಬಲ್‌ ವಾಚನ, ವೈಯಕ್ತಿಕ ಅಧ್ಯಯನ ಮತ್ತು ಮನನ ಪಯನೀಯರರ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಹಾಗೆಯೇ ಪಯನೀಯರರಿಗೆ ಸ್ವಶಿಸ್ತು ಬೇಕು. ಆಗ ಅಷ್ಟೇನು ಪ್ರಮುಖವಲ್ಲದ ವಿಷಯಗಳು ಅತಿ ಪ್ರಮುಖ ವಿಷಯಗಳಿಗೆ ಕೊಡುವ ಸಮಯವನ್ನು ಕಬಳಿಸದಂತೆ ಜಾಗ್ರತೆವಹಿಸಲು ಆಗುತ್ತದೆ. (ಫಿಲಿ. 1:10) ಈ ಸನ್ನಿವೇಶವನ್ನು ಊಹಿಸಿಕೊಳ್ಳಿ. ಒಬ್ಬ ಸಹೋದರನು ಇಡೀ ದಿನ ಸೇವೆಯಲ್ಲಿ ಕಳೆದು ಸಾಯಂಕಾಲ ಮನೆಗೆ ಬಂದಿದ್ದಾನೆ. ಆ ಸಂಜೆ ಅವನು ಕೂಟಗಳಿಗಾಗಿ ತಯಾರಿ ಮಾಡಬೇಕೆಂದು ಅಂದುಕೊಳ್ಳುತ್ತಾನೆ. ಹಾಗಿದ್ದರೂ ಮೊದಲು ಅವನು ತನಗೆ ಬಂದಿರುವ ಮೆಸೆಜ್‌ಗಳನ್ನು ಓದುತ್ತಾನೆ. ನಂತರ ಕಂಪ್ಯೂಟರ್‌ ಆನ್‌ ಮಾಡಿ ಬಂದಿರುವ ಇ-ಮೇಲ್‌ಗಳನ್ನು ಓದಿ ಅವುಗಳಿಗೆ ಉತ್ತರ ಕಳುಹಿಸುತ್ತಾನೆ. ನಂತರ ಅವನು ಒಂದು ವೆಬ್‌ಸೈಟಿಗೆ ಹೋಗಿ ತಾನು ಖರೀದಿಸಬೇಕೆಂದಿರುವ ವಸ್ತುವಿನ ದರ ಕಮ್ಮಿಯಾಗಿದೆಯಾ ನೋಡುತ್ತಾನೆ. ಹೀಗೆ ಅವನಿಗೆ ಗೊತ್ತಾಗದೆ ಎರಡು ತಾಸು ಕಳೆದುಹೋಗುತ್ತದೆ. ಆ ಸಂಜೆ ಮಾಡಬೇಕು ಅಂದುಕೊಂಡಿದ್ದ ತಯಾರಿ ಇನ್ನೂ ಶುರು ಕೂಡ ಆಗಿಲ್ಲ. ಅವನು ಮಾಡಿದ್ದರಲ್ಲಿ ಏನು ತಪ್ಪಿತ್ತು? ಒಬ್ಬ ನುರಿತ ಕ್ರೀಡಾಪಟು ಹೆಚ್ಚು ಸಮಯ ಆ ಕ್ಷೇತ್ರದಲ್ಲೇ ಉಳಿಯಬೇಕಾದರೆ ತನ್ನ ಶರೀರದ ಕಾಳಜಿ ತೆಗೆದುಕೊಳ್ಳಬೇಕು. ಹಾಗೆಯೇ ಪಯನೀಯರರು ಪೂರ್ಣಸಮಯದ ಸೇವೆಯಲ್ಲಿ ಮುಂದುವರಿಯಬೇಕಾದರೆ ವೈಯಕ್ತಿಕ ಅಧ್ಯಯನದ ರೂಢಿಯನ್ನು ಬಿಟ್ಟುಕೊಡಬಾರದು.—1 ತಿಮೊ. 4:16.

14, 15. (1) ಪಯನೀಯರರು ತಮ್ಮ ಜೀವನವನ್ನು ಸರಳವಾಗಿ ಯಾಕೆ ಇಡಬೇಕು? (2) ಕಷ್ಟಸಮಸ್ಯೆ ಬಂದಾಗ ಪಯನೀಯರರು ಏನು ಮಾಡಬೇಕು?

14 ಯಶಸ್ವೀ ಪಯನೀಯರರು ಸರಳ ಜೀವನ ನಡೆಸಲು ಪ್ರಯತ್ನಿಸುತ್ತಾರೆ. ಯೇಸು ತನ್ನ ಶಿಷ್ಯರಿಗೆ ಇದನ್ನೇ ಮಾಡುವಂತೆ ಉತ್ತೇಜಿಸಿದನು. (ಮತ್ತಾ. 6:22) ಸ್ವತಃ ಯೇಸು ತನ್ನ ಸೇವೆಗೆ ಯಾವ ವಿಷಯಗಳೂ ಅಡ್ಡಬರಬಾರದೆಂದು ಸರಳ ಜೀವನ ನಡೆಸಿದನು. ಹಾಗಾಗಿಯೇ ಅವನು ಹೇಳಿದನು: “ನರಿಗಳಿಗೆ ಗುಹೆಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ.” (ಮತ್ತಾ. 8:20) ಯೇಸುವಿನ ಮಾದರಿಯಿಂದ ಕಲಿಯಲು ಬಯಸುವ ಪಯನೀಯರರು ಈ ವಿಷಯವನ್ನು ಯಾವಾಗಲೂ ನೆನಪಿಡಬೇಕು. ನಮ್ಮಲ್ಲಿ ಎಷ್ಟು ಹೆಚ್ಚು ಭೌತಿಕ ವಸ್ತುಗಳು ಇರುತ್ತವೋ ಅಷ್ಟೇ ಹೆಚ್ಚು ಸಮಯ ಅವುಗಳನ್ನು ಕಾಪಾಡುವುದರಲ್ಲಿ, ದುರಸ್ತಿ ಮಾಡುವುದರಲ್ಲಿ, ಬದಲಾಯಿಸುವುದರಲ್ಲಿ ಹೋಗುತ್ತದೆ.

15 ತಮ್ಮಲ್ಲಿ ಯಾವುದೋ ವಿಶೇಷತೆ ಅಥವಾ ನೈಪುಣ್ಯತೆ ಇರುವುದರಿಂದ ಪಯನೀಯರ್‌ ಆಗಿದ್ದೇವೆ ಎಂದು ಪಯನೀಯರರು ನೆನಸುವುದಿಲ್ಲ. ನಮಗೆ ಯಾವುದೇ ಸುಯೋಗ ಸಿಕ್ಕಿರಲಿ ಅದು ಯೆಹೋವ ದೇವರ ಅಪಾತ್ರ ದಯೆಯಿಂದಲೇ. ಹಾಗಾಗಿ ಪಯನೀಯರ್‌ ಸೇವೆಯಲ್ಲಿ ಮುಂದುವರಿಯಬೇಕಾದರೆ ಯೆಹೋವನಲ್ಲಿ ಆತುಕೊಳ್ಳಲೇಬೇಕು. (ಫಿಲಿ. 4:13) ಆಗಾಗ ಸವಾಲುಗಳು ಮತ್ತು ತೊಂದರೆಗಳು ಎದುರಾಗುತ್ತವೆ. (ಕೀರ್ತ. 34:19) ಆಗ ಪಯನೀಯರರು ಯೆಹೋವನ ನಿರ್ದೇಶನಕ್ಕಾಗಿ ಎದುರುನೋಡಬೇಕು. ನಮಗೆ ಸಹಾಯಮಾಡಲು ಆತನಿಗೆ ಅವಕಾಶ ಕೊಡಬೇಕು. ಸೇವಾಸುಯೋಗವನ್ನು ಬಿಟ್ಟುಬಿಡುವ ಹಠಾತ್‌ ನಿರ್ಣಯ ತೆಗೆದುಕೊಳ್ಳಬಾರದು. (ಕೀರ್ತನೆ 37:5 ಓದಿ.) ದೇವರ ಪ್ರೀತಿಯ ನೆರವನ್ನು ಪಯನೀಯರರು ಅನುಭವಿಸಿ ನೋಡುವಾಗ ಕಾಳಜಿವಹಿಸುವ ತಮ್ಮ ಸ್ವರ್ಗೀಯ ತಂದೆಗೆ ಇನ್ನಷ್ಟು ಆಪ್ತರಾಗುವರು.—ಯೆಶಾ. 41:10.

ನೀವೂ ಪಯನೀಯರ್‌ ಆಗುವಿರಾ?

16. ನಿಮಗೆ ಪಯನೀಯರ್‌ ಆಗಬೇಕೆಂದು ಮನಸ್ಸಿದ್ದರೆ ಏನು ಮಾಡಬೇಕು?

16 ಪೂರ್ಣಸಮಯದ ಸೇವೆ ಮಾಡುವವರು ಅನುಭವಿಸುತ್ತಿರುವ ಆಶೀರ್ವಾದಗಳನ್ನು ನೀವೂ ಸವಿದು ನೋಡಲು ಬಯಸುವಲ್ಲಿ ಆ ಬಯಕೆಯನ್ನು ಯೆಹೋವನ ಮುಂದೆ ಮನಸ್ಸುಬಿಚ್ಚಿ ಹೇಳಿ. (1 ಯೋಹಾ. 5:14, 15) ಪಯನೀಯರರೊಂದಿಗೆ ಈ ಬಗ್ಗೆ ಮಾತಾಡಿ. ಪಯನೀಯರ್‌ ಗುರಿಯನ್ನು ತಲಪಲು ನೆರವಾಗುವಂಥ ಚಿಕ್ಕ ಪುಟ್ಟ ಗುರಿಗಳನ್ನಿಡಿ. ಅದನ್ನೇ ಕೀತ್‌ ಮತ್ತು ಎರಿಕಾ ಮಾಡಿದರು. ಅವರು ಪೂರ್ಣಸಮಯದ ಕೆಲಸ ಮಾಡುತ್ತಿದ್ದರು. ಅವರ ಪ್ರದೇಶದಲ್ಲಿದ್ದ ಎಲ್ಲರೂ ಮಾಡುವಂತೆ ಅವರು ಸಹ ಮದುವೆಯಾದ ಹೊಸದರಲ್ಲೇ ಮನೆಮಾಡಿ ಹೊಸ ಕಾರು ಖರೀದಿಸಿದರು. ಅವರು ಹೇಳುತ್ತಾರೆ: “ಇವುಗಳಿಂದ ನಮಗೆ ಸಂತೃಪ್ತಿ ಸಿಗುತ್ತದೆ ಅಂತ ಅಂದುಕೊಂಡೆವು. ಆದರೆ ಹಾಗೆ ಆಗಲಿಲ್ಲ.” ಕೀತ್‌ ಕೆಲಸ ಕಳಕೊಂಡಾಗ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಿದರು. ಅವರು ನೆನಪಿಸಿಕೊಳ್ಳುವುದು: “ಸುವಾರ್ತೆಯಲ್ಲಿ ಸಮಯ ಕಳೆಯುವುದರಿಂದ ಎಷ್ಟು ಖುಷಿ ಸಿಗುತ್ತದೆ ಎಂದು ಆ ಪಯನೀಯರ್‌ ಸೇವೆ ನನಗೆ ಮನಗಾಣಿಸಿತು.” ಅವರು ಪಯನೀಯರ್‌ ದಂಪತಿಯೊಂದಿಗೆ ಸ್ನೇಹ ಬೆಳೆಸಿದರು. ಸರಳ ಜೀವನ ಮಾಡುತ್ತಾ ಪಯನೀಯರ್‌ ಸೇವೆ ಮಾಡುವುದರಲ್ಲಿರುವ ಸಂತೋಷವನ್ನು ಪಡೆದುಕೊಳ್ಳುವಂತೆ ಆ ದಂಪತಿ ಇವರಿಗೆ ನೆರವಾದರು. ಕೀತ್‌ ಮತ್ತು ಎರಿಕಾ ಏನು ಮಾಡಿದರು? “ನಾವು ಆಧ್ಯಾತ್ಮಿಕ ಗುರಿಗಳ ಪಟ್ಟಿಮಾಡಿದೆವು. ಅದನ್ನು ಫ್ರಿಡ್ಜ್‌ ಮೇಲೆ ಅಂಟಿಸಿದೆವು. ಒಂದೊಂದು ಗುರಿಯನ್ನು ಮುಟ್ಟುತ್ತಾ ಹೋದಂತೆ ಅದಕ್ಕೆ ಗುರುತು ಹಾಕಿದೆವು.” ಹೀಗೆ ಸ್ವಲ್ಪ ಸಮಯದ ನಂತರ ಅವರು ಪಯನೀಯರರಾದರು.

17. ಪಯನೀಯರ್‌ ಸೇವೆಮಾಡಲಿಕ್ಕಾಗಿ ನಿಮ್ಮ ಜೀವನಶೈಲಿ ಅಥವಾ ಶೆಡ್ಯೂಲಿನಲ್ಲಿ ಹೊಂದಾಣಿಕೆ ಮಾಡುವ ಬಗ್ಗೆ ಯೋಚಿಸುವುದು ಯಾಕೆ ವಿವೇಕಪ್ರದ?

17 ನಿಮ್ಮಿಂದ ಪಯನೀಯರ್‌ ಸೇವೆ ಮಾಡಲು ಆಗುತ್ತಾ? ಒಂದುವೇಳೆ ಸದ್ಯಕ್ಕೆ ಆಗಲ್ಲ ಎಂದು ಅನಿಸಿದರೆ, ಸೇವೆಯನ್ನು ಹೆಚ್ಚು ಮಾಡುವ ಮೂಲಕ ಯೆಹೋವನೊಂದಿಗಿನ ಆಪ್ತತೆ ಹೆಚ್ಚಿಸಲು ನಿಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಿ. ಪ್ರಾರ್ಥನಾಪೂರ್ವಕವಾಗಿ ಪರಿಶೀಲನೆ ಮಾಡಿಕೊಂಡ ನಂತರ, ಜೀವನಶೈಲಿಯನ್ನು ಅಥವಾ ಶೆಡ್ಯೂಲನ್ನು ಸ್ವಲ್ಪ ಬದಲಾಯಿಸಿಕೊಂಡರೆ ಪಯನೀಯರ್‌ ಸೇವೆ ಮಾಡಬಹುದು ಎಂದು ನಿಮಗೆ ಅನಿಸಬಹುದು. ಪಯನೀಯರ್‌ ಸೇವೆಯಲ್ಲಿ ಸಿಗುವ ಆನಂದದ ಮುಂದೆ ನೀವು ಮಾಡಿದ ತ್ಯಾಗಗಳು ಏನೇನೂ ಅಲ್ಲ ಎಂದು ನಿಮಗನಿಸುವುದು. ನಿಮ್ಮ ಸ್ವಂತ ಅಭಿರುಚಿಗಳಿಗಿಂತ ರಾಜ್ಯಾಭಿರುಚಿಗಳಿಗೆ ಆದ್ಯತೆ ಕೊಡುವಾಗ ನಿಜ ಸಂತೃಪ್ತಿ ನಿಮ್ಮದಾಗುತ್ತದೆ. (ಮತ್ತಾ. 6:33) ಕೊಡುವುದರಿಂದ ಸಿಗುವ ಹೆಚ್ಚು ಸಂತೋಷವನ್ನು ಸ್ವತಃ ಅನುಭವಿಸಿ ನೋಡುವಿರಿ. ಎಲ್ಲಕ್ಕಿಂತ ಮಿಗಿಲಾಗಿ ಯೆಹೋವನ ಕುರಿತು ಯೋಚಿಸಲು ಮತ್ತು ಮಾತಾಡಲು ಹೆಚ್ಚಿನ ಅವಕಾಶಗಳು ನಿಮಗೆ ಸಿಗುತ್ತವೆ. ಆಗ ಆತನ ಕಡೆಗಿನ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಆತನಿಗೂ ಖುಷಿಯಾಗುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚಿತ್ರ]

[ಪುಟ 29ರಲ್ಲಿರುವ ಚಿತ್ರ]

ಪೂರ್ಣಸಮಯದ ಸೇವೆಯಲ್ಲಿ ಕಾರ್ಯಮಗ್ನರಾಗಿರುವಾಗ ಸಂತೃಪ್ತಿಕರ ಜೀವನ ನಿಮ್ಮದಾಗುತ್ತದೆ (ಪ್ಯಾರ 9)