ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೋಹಾನ 11:35ರಲ್ಲಿ ಹೇಳಿದಂತೆ ಯೇಸು ಲಾಜರನನ್ನು ಪುನರುತ್ಥಾನ ಮಾಡುವ ಮೊದಲು ಕಣ್ಣೀರಿಟ್ಟದ್ದೇಕೆ?

▪ ನಾವು ಪ್ರೀತಿಸುವ ಯಾರಾದರೊಬ್ಬರು ನಮ್ಮನ್ನು ಅಗಲಿದಾಗ ನಾವು ಕಣ್ಣೀರಿಡುತ್ತೇವೆ. ಯಾಕೆಂದರೆ ಇನ್ನುಮುಂದೆ ಅವರು ನಮ್ಮೊಂದಿಗೆ ಇರುವುದಿಲ್ಲ. ಲಾಜರನು ಸತ್ತಾಗ ಯೇಸು ಕೂಡ ಅತ್ತನು. ಯೇಸು ಅವನಿಗೆ ಆಪ್ತನಾಗಿದ್ದರೂ ಅವನು ಸತ್ತದ್ದಕ್ಕಾಗಿ ಯೇಸು ಕಣ್ಣೀರಿಡಲಿಲ್ಲ. ಯೋಹಾನ ದಾಖಲಿಸಿರುವಂತೆ ಲಾಜರನ ಮರಣದಿಂದ ದುಃಖಿತರಾದ ಅವನ ಕುಟುಂಬದವರ ಮತ್ತು ಸ್ನೇಹಿತರ ಕಡೆಗೆ ಅನುಕಂಪವಿದ್ದ ಕಾರಣ ಯೇಸು ಕಣ್ಣೀರಿಟ್ಟನು.—ಯೋಹಾ. 11:36.

ಲಾಜರನು ಅಸ್ವಸ್ಥನಾಗಿದ್ದಾನೆ ಎಂದು ತಿಳಿದುಬಂದಾಗ ಅವನನ್ನು ಗುಣಪಡಿಸಲು ಯೇಸು ಅವಸರದಿಂದ ಲಾಜರನ ಮನೆಗೆ ಓಡಲಿಲ್ಲ. ಬೈಬಲ್‌ ಹೇಳುತ್ತದೆ: “[ಲಾಜರನು] ಅಸ್ವಸ್ಥನಾಗಿದ್ದಾನೆ ಎಂದು ಕೇಳಿಸಿಕೊಂಡ ಮೇಲೆ ಯೇಸು ತಾನಿದ್ದ ಸ್ಥಳದಲ್ಲೇ ಎರಡು ದಿನ ಉಳಿದನು.” (ಯೋಹಾ. 11:6) ಯೇಸು ಯಾಕೆ ತಡಮಾಡಿದನು? ಹಾಗೆ ಮಾಡುವುದರ ಹಿಂದೆ ಒಂದು ಉದ್ದೇಶವಿತ್ತು. ಅವನು ಹೇಳಿದ್ದು: “ಈ ಕಾಯಿಲೆಯು ಮರಣದ ಉದ್ದೇಶದಿಂದ ಬಂದಿಲ್ಲ, ಇದರಿಂದ ದೇವರ ಮಗನು ಮಹಿಮೆಗೊಳಿಸಲ್ಪಡುವಂತೆ ದೇವರ ಮಹಿಮೆಗಾಗಿ ಬಂದಿದೆ.” (ಯೋಹಾ. 11:4) ಲಾಜರನು ಅಸ್ವಸ್ಥತೆಯಿಂದ “ಮರಣ” ಹೊಂದಿದ್ದು ಅವನ ಅಂತ್ಯವಾಗಿರಲಿಲ್ಲ. ಅದರ “ಉದ್ದೇಶ” ಬೇರೆಯೇ ಆಗಿತ್ತು. ಯೇಸು ಲಾಜರನ ಮರಣವನ್ನು “ದೇವರ ಮಹಿಮೆಗಾಗಿ” ಉಪಯೋಗಿಸಲಿದ್ದನು. ಹೇಗೆ? ಯೇಸು ವಿಸ್ಮಯಕರ ಅದ್ಭುತ ಮಾಡಿ ತನ್ನ ಪ್ರಿಯ ಸ್ನೇಹಿತನನ್ನು ಸಮಾಧಿಯಿಂದ ಎಬ್ಬಿಸಲಿದ್ದನು.

ಈ ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರೊಂದಿಗೆ ಮಾತಾಡುತ್ತಾ ಮರಣವನ್ನು ನಿದ್ರೆಗೆ ಹೋಲಿಸಿದನು. ಹಾಗಾಗಿ ಶಿಷ್ಯರಿಗೆ “[ಲಾಜರನನ್ನು] ನಿದ್ರೆಯಿಂದ ಎಬ್ಬಿಸಲಿಕ್ಕಾಗಿ ನಾನು ಅಲ್ಲಿಗೆ ಪ್ರಯಾಣಿಸುತ್ತಿದ್ದೇನೆ” ಎಂದು ಹೇಳಿದ್ದನು. (ಯೋಹಾ. 11:11) ಯೇಸುವಿಗೆ ಲಾಜರನನ್ನು ಮರಣದಿಂದ ಎಬ್ಬಿಸುವುದು ಒಬ್ಬ ತಂದೆ ತನ್ನ ಮಗುವನ್ನು ನಸುನಿದ್ರೆಯಿಂದ ಎಬ್ಬಿಸುವುದಕ್ಕೆ ಸಮವಾಗಿತ್ತು. ಹಾಗಾಗಿ ಲಾಜರ ಮರಣಪಟ್ಟದ್ದಕ್ಕೆ ದುಃಖಿಸಲು ಯೇಸುವಿಗೆ ಯಾವುದೇ ಕಾರಣವಿರಲಿಲ್ಲ.

ಹಾಗಾದರೆ ಯೇಸು ಕಣ್ಣೀರಿಡಲು ಇನ್ಯಾವ ಕಾರಣಗಳಿದ್ದವು? ಪುನಃ ಆ ವೃತ್ತಾಂತವೇ ಉತ್ತರ ಕೊಡುತ್ತದೆ. ಯೇಸು ಲಾಜರನ ಸಹೋದರಿ ಮರಿಯಳನ್ನು ಭೇಟಿಯಾದಾಗ ಅವಳು ಮತ್ತು ಇತರರು ಅಳುವುದನ್ನು ನೋಡಿ “ತನ್ನ ಆಂತರ್ಯದಲ್ಲಿ ನೊಂದುಕೊಂಡು ಕಳವಳಪಟ್ಟನು.” ಅವರ ದುಃಖವನ್ನು ನೋಡಿ ಯೇಸುವಿಗೆ ಎಷ್ಟು ನೋವಾಯಿತೆಂದರೆ ಅವನು ‘ಆಂತರ್ಯದಲ್ಲಿ ನೊಂದುಕೊಂಡನು.’ ಹಾಗಾಗಿ “ಯೇಸು ಕಣ್ಣೀರು ಸುರಿಸಿದನು.” ತನ್ನ ಆಪ್ತ ಸ್ನೇಹಿತರ ರೋದನೆಯನ್ನು ನೋಡಿ ಯೇಸುವಿಗೆ ಬಹಳ ನೋವಾಯಿತು.—ಯೋಹಾ. 11:33, 35.

ಈ ವೃತ್ತಾಂತವು, ತೀರಿಹೋದ ನಮ್ಮ ಪ್ರಿಯರನ್ನು ಹೊಸ ಲೋಕದಲ್ಲಿ ಎಬ್ಬಿಸಿ ಒಳ್ಳೆ ಆರೋಗ್ಯ ಕೊಡುವ ಶಕ್ತಿ ಮತ್ತು ಸಾಮರ್ಥ್ಯ ಯೇಸುವಿಗಿದೆ ಎನ್ನುವುದನ್ನು ರುಜುಪಡಿಸುತ್ತದೆ. ಅಷ್ಟೆ ಅಲ್ಲ ಆದಾಮನಿಂದ ಬಂದ ಮರಣದಲ್ಲಿ ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ನಮ್ಮಂತೆಯೇ ಯೇಸುವಿಗೂ ನೋವಾಗುತ್ತದೆ ಅನ್ನುವುದನ್ನು ಕಲಿಸುತ್ತದೆ. ಇದರಿಂದ ಕಲಿಯುವ ಇನ್ನೊಂದು ಪಾಠ ಏನೆಂದರೆ, ಯಾರಾದರೂ ತಮ್ಮ ಪ್ರಿಯರಿಗೋಸ್ಕರ ರೋದಿಸುವಾಗ ನಾವು ಅವರ ಕಡೆಗೆ ಅನುಕಂಪ ತೋರಿಸಬೇಕು.

ಲಾಜರನನ್ನು ಎಬ್ಬಿಸಲಿದ್ದೇನೆಂದು ಯೇಸುವಿಗೆ ಗೊತ್ತಿತ್ತು. ಹಾಗಿದ್ದರೂ ಸ್ನೇಹಿತರ ಕಡೆಗಿದ್ದ ಗಾಢ ಪ್ರೀತಿ ಮತ್ತು ಅನುಕಂಪದಿಂದಾಗಿ ಅವನು ಕಣ್ಣೀರಿಟ್ಟನು. ಹಾಗೆಯೇ ನಮ್ಮಲ್ಲಿರುವ ಸಹಾನುಭೂತಿ ನಾವು ‘ಅಳುವವರೊಂದಿಗೆ ಅಳುವಂತೆ’ ಮಾಡಬಹುದು. (ರೋಮ. 12:15) ಒಬ್ಬನು ದುಃಖವನ್ನು ವ್ಯಕ್ತಪಡಿಸುವುದಾದರೆ ಅವನಿಗೆ ಪುನರುತ್ಥಾನದ ನಿರೀಕ್ಷೆಯಲ್ಲಿ ನಂಬಿಕೆಯಿಲ್ಲ ಎಂದು ಅದರ ಅರ್ಥವಲ್ಲ. ಅಂದಮೇಲೆ ಲಾಜರನನ್ನು ತಾನು ಪುನರುತ್ಥಾನ ಮಾಡಲಿದ್ದೇನೆಂದು ತಿಳಿದೂ ಯೇಸು ಅವನ ಸ್ನೇಹಿತರ ಕಡೆಗಿನ ಅನುಕಂಪದಿಂದಾಗಿ ಕಣ್ಣೀರು ಸುರಿಸಿದ್ದು ನಮ್ಮೆಲ್ಲರಿಗೆ ಮಾದರಿಯಾಗಿದೆ.

[ಪುಟ 32ರಲ್ಲಿರುವ ಚಿತ್ರ]