ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೆಹೋವನನ್ನು ಅವಲಂಬಿಸುವುದು ಆಶೀರ್ವಾದಕರ!

ಯೆಹೋವನನ್ನು ಅವಲಂಬಿಸುವುದು ಆಶೀರ್ವಾದಕರ!

ಕೆಲವೊಮ್ಮೆ ಜೀವನ ಯಾವೆಲ್ಲ ರೀತಿಯಲ್ಲಿ ತಿರುವು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗದು. ಅಷ್ಟೇ ಅಲ್ಲ ನಿಭಾಯಿಸಲು ಕಠಿಣವೂ ಆಗಿರುತ್ತದೆ. ಆದರೆ ಸ್ವಂತ ಬುದ್ಧಿಯನ್ನು ಆತುಕೊಳ್ಳುವ ಬದಲಿಗೆ ಯೆಹೋವನ ಮೇಲೆ ಆತುಕೊಳ್ಳುವವರನ್ನು ಆತನು ಆಶೀರ್ವದಿಸುತ್ತಾನೆ. ನನ್ನ ಪತ್ನಿ ಹಾಗೂ ನಾನು ನಮ್ಮ ದೀರ್ಘಕಾಲದ ಫಲಪ್ರದ ಜೀವನದಲ್ಲಿ ಇದನ್ನೇ ಅನುಭವಿಸಿದ್ದೇವೆ. ಆ ನಮ್ಮ ಜೀವನದ ತುಸು ಭಾಗವನ್ನು ನಿಮ್ಮ ಮುಂದಿಡುತ್ತೇವೆ.

ಇಸವಿ 1919. ಅಮೆರಿಕದ ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನ ನಡೆಯಿತು. ಅಲ್ಲಿ ನನ್ನ ತಂದೆತಾಯಿ ಪರಸ್ಪರ ಭೇಟಿಯಾದರು ಮತ್ತು ಅದೇ ವರ್ಷ ವಿವಾಹವಾದರು. 1922ರಲ್ಲಿ ನಾನು ಹುಟ್ಟಿದೆ. ಎರಡು ವರುಷಗಳ ನಂತರ ನನ್ನ ತಮ್ಮ ಪೌಲ್‌ ಹುಟ್ಟಿದ. ನನ್ನ ಪತ್ನಿ ಗ್ರೇಸ್‌ 1930ರಲ್ಲಿ ಜನಿಸಿದಳು. ಆಕೆಯ ಹೆತ್ತವರಾದ ರಾಯ್‌ ಮತ್ತು ರೂತ್‌ ಹಾವೆಲ್‌ ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. ಅವಳ ಅಜ್ಜ ಅಜ್ಜಿ ಸಹ ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. ಸಹೋದರ ಚಾರ್ಲ್ಸ್‌ ಟೇಸ್‌ ರಸಲ್‌ರ ಮಿತ್ರರೂ ಆಗಿದ್ದರು.

ನಾನು 1947ರಲ್ಲಿ ಗ್ರೇಸ್‌ಳನ್ನು ಭೇಟಿಯಾದೆ. 1949ರ ಜುಲೈ 16ರಂದು ನಾವು ಮದುವೆಯಾದೆವು. ಮದುವೆಯಾಗುವ ಮೊದಲೇ ನಾವು ನಮ್ಮ ಮುಂದಿನ ಜೀವನದ ಕುರಿತು ಬಿಚ್ಚುಮನಸ್ಸಿನಿಂದ ಚರ್ಚಿಸಿದ್ದೆವು. ಪೂರ್ಣ ಸಮಯದ ಸೇವೆಯನ್ನು ಮಾಡಬೇಕೆಂದು ನಿರ್ಣಯಿಸಿ ಮಕ್ಕಳು ಬೇಡ ಎಂದು ನಿರ್ಧರಿಸಿದೆವು. ನಮ್ಮಿಬ್ಬರ ಪಯನೀಯರ್‌ ಸೇವೆ 1950, ಅಕ್ಟೋಬರ್‌ 1ರಂದು ಆರಂಭವಾಯಿತು. 1952ರಲ್ಲಿ ಸರ್ಕಿಟ್‌ ಸೇವೆ ಮಾಡುವ ನೇಮಕವನ್ನು ನಮಗೆ ಕೊಡಲಾಯಿತು.

ಸಂಚರಣ ಸೇವೆ ಮತ್ತು ಗಿಲ್ಯಡ್‌ ತರಬೇತಿ

ಈ ಹೊಸ ನೇಮಕದಲ್ಲಿ ಮುಂದುವರಿಯಲು ನಮಗೆ ತುಂಬ ಸಹಾಯ ಬೇಕೆಂದು ಅನಿಸಿತು. ನಾನು ಅನುಭವೀ ಸಹೋದರರಿಂದ ಕಲಿತುಕೊಂಡೆ. ಗ್ರೇಸ್‌ಗೂ ಸಹಾಯ ಸಿಗುವಂತೆ ನೋಡಿಕೊಂಡೆ. ಸಹೋದರ ಮಾರ್ವನ್‌ ಹೋಲೀನ್‌ ನಮ್ಮ ದೀರ್ಘಕಾಲದ ಕುಟುಂಬ ಸ್ನೇಹಿತರು. ಅವರಿಗೆ ಸಂಚರಣ ಸೇವೆಯಲ್ಲಿ ಅನುಭವವಿತ್ತು. ಅವರ ಹತ್ತಿರ, “ಗ್ರೇಸ್‌ಗೆ ಚಿಕ್ಕ ಪ್ರಾಯ, ಹೆಚ್ಚು ಅನುಭವ ಇಲ್ಲ. ಅವಳಿಗೆ ಸ್ವಲ್ಪ ತರಬೇತಿ ದೊರೆಯುವಂತೆ ಸಹಾಯ ಮಾಡುವವರು ಯಾರಾದರೂ ಇದ್ದಾರಾ?” ಎಂದು ಕೇಳಿದೆ. “ಖಂಡಿತ. ಎಡ್ನ ವಿಂಕಲ್‌ ತುಂಬ ವರ್ಷಗಳಿಂದ ಪಯನೀಯರಳು. ಅವರಿಂದ ಗ್ರೇಸ್‌ಗೆ ತುಂಬ ಸಹಾಯ ಸಿಗುತ್ತದೆ” ಎಂದರವರು. ಸಮಯಾನಂತರ ಗ್ರೇಸ್‌, ಎಡ್ನ ಬಗ್ಗೆ ಹೀಗನ್ನುತ್ತಿದ್ದಳು: “ನಾನು ಮನೆ-ಮನೆ ಸೇವೆಯಲ್ಲಿ ಧೈರ್ಯದಿಂದ ಮಾತಾಡುವಂತೆ ಅವರು ಸಹಾಯ ಮಾಡಿದರು. ತಡೆಗಳನ್ನು ಒಳ್ಳೇದಾಗಿ ನಿಭಾಯಿಸುವುದು ಹೇಗೆಂದು ಅವರಿಗೆ ತಿಳಿದಿತ್ತು. ತಕ್ಕ ಉತ್ತರ ಕೊಡಲು ಸಾಧ್ಯವಾಗುವಂತೆ, ಮನೆಯವರು ಮಾತಾಡುವಾಗ ಕಿವಿಗೊಟ್ಟು ಕೇಳಲು ಸಹ ಕಲಿಸಿದರು. ಅದೇ ನನಗೆ ಬೇಕಾಗಿತ್ತು!”

ಎಡದಿಂದ: ನೇತನ್‌ ನಾರ್‌, ಮ್ಯಾಲ್ಕಮ್‌ ಆ್ಯಲನ್‌, ಫ್ರೆಡ್‌ ರಸ್ಕ್‌, ಲೈಲ್‌ ರೂಷ್‌, ಆ್ಯಂಡ್ರೂ ವ್ಯಾಗ್ನರ್‌

ಗ್ರೇಸ್‌ ಮತ್ತು ನಾನು ಐಅವ ರಾಜ್ಯದ ಎರಡು ಸರ್ಕಿಟ್‌ಗಳಲ್ಲಿ ಸೇವೆಮಾಡಿದೆವು. ಇದರಲ್ಲಿ ಮಿನಸೋಟ ಮತ್ತು ದಕ್ಷಿಣ ಡಕೋಟದ ಭಾಗಗಳೂ ಸೇರಿದ್ದವು. ಬಳಿಕ ನಮ್ಮನ್ನು ನ್ಯೂಯಾರ್ಕ್‌ನ 1ನೆಯ ಸರ್ಕಿಟ್‌ಗೆ ಸ್ಥಳಾಂತರಿಸಲಾಯಿತು. ಇದರಲ್ಲಿ ಬ್ರೂಕ್ಲಿನ್‌ ಮತ್ತು ಕ್ವೀನ್ಸ್‌ನ ನಗರಗಳು ಸಹ ಸೇರಿದ್ದವು. ಆ ನೇಮಕದಲ್ಲಿ ನಾವೆಷ್ಟು ಅನನುಭವಿಗಳಾಗಿದ್ದೆವು ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಆ ಸರ್ಕಿಟ್‌ನಲ್ಲಿ ಬ್ರೂಕ್ಲಿನ್‌ ಹೈಟ್ಸ್‌ ಸಭೆಯೂ ಇತ್ತು. ಆ ಸಭೆಯವರು ಬೆತೆಲ್‌ ರಾಜ್ಯ ಸಭಾಗೃಹದಲ್ಲಿ ಕೂಡಿಬರುತ್ತಿದ್ದರು. ಬೆತೆಲ್‌ ಕುಟುಂಬದ ಅನೇಕ ಅನುಭವೀ ಸಹೋದರರೂ ಆ ಸಭೆಯಲ್ಲಿದ್ದರು. ಅಲ್ಲಿ ನಾನು ಮೊದಲ ಸೇವಾ ಭಾಷಣ ಕೊಟ್ಟ ಮೇಲೆ ಸಹೋದರ ನೇತನ್‌ ನಾರ್‌ ನನ್ನ ಹತ್ತಿರ ಬಂದು: “ಮ್ಯಾಲ್ಕಮ್‌, ನಾವು ಅಭಿವೃದ್ಧಿ ಹೊಂದುವಂತೆ ನೀವು ಕೆಲವು ಸಲಹೆಗಳನ್ನು ಕೊಟ್ಟಿರಿ, ಅದು ತಕ್ಕದಾಗಿತ್ತು. ನೀವು ನಮಗೆ ದಯಾಪರ ಸಲಹೆಯನ್ನು ಕೊಟ್ಟು ಸಹಾಯಮಾಡದಿದ್ದರೆ ನಿಮ್ಮಿಂದ ಸಂಘಟನೆಗೆ ಹೆಚ್ಚು ಸಹಾಯವಾಗದು ಎನ್ನುವುದನ್ನು ಮರೆಯಬೇಡಿ. ಹೀಗೆಯೇ ಮುಂದುವರಿಸಿಕೊಂಡು ಹೋಗಿ.” ಕೂಟ ಮುಗಿದ ನಂತರ ನಾನು ನಡೆದದ್ದನ್ನು ಗ್ರೇಸ್‌ಗೆ ಹೇಳಿದೆ. ಆ ದಿನ ನಮಗೆಷ್ಟು ಚಿಂತೆ ಕಳವಳವಾಗಿತ್ತೆಂದರೆ ನಾವು ಉಳಿದುಕೊಂಡಿದ್ದ ಬೆತೆಲ್‌ ಕೋಣೆಗೆ ಬಂದಮೇಲೆ ಅತ್ತೇಬಿಟ್ಟೆವು.

“ನೀವು ನಮಗೆ ದಯಾಪರ ಸಲಹೆಯನ್ನು ಕೊಟ್ಟು ಸಹಾಯಮಾಡದಿದ್ದರೆ ನಿಮ್ಮಿಂದ ಸಂಘಟನೆಗೆ ಹೆಚ್ಚು ಸಹಾಯವಾಗದು ಎನ್ನುವುದನ್ನು ಮರೆಯಬೇಡಿ. ಹೀಗೆಯೇ ಮುಂದುವರಿಸಿಕೊಂಡು ಹೋಗಿ”

ಕೆಲವು ತಿಂಗಳುಗಳ ಬಳಿಕ, ನಮ್ಮನ್ನು ಗಿಲ್ಯಡ್‌ ಶಾಲೆಯ 24ನೆಯ ತರಗತಿಗೆ ಹಾಜರಾಗುವಂತೆ ಆಮಂತ್ರಿಸಲಾಯಿತು. ಆ ತರಗತಿ 1955ರ ಫೆಬ್ರವರಿಯಲ್ಲಿ ಮುಗಿಯಲಿತ್ತು. ನಾವು ಆ ಶಾಲೆಗೆ ಹೋಗುವ ಮೊದಲೇ, ಈ ತರಬೇತಿಗೆ ಆಮಂತ್ರಿಸಿರುವುದರ ಅರ್ಥ ನಾವು ಮಿಷನರಿಗಳಾಗಿ ಹೋಗುತ್ತೇವೆಂದಲ್ಲ ಎಂದು ನಮಗೆ ತಿಳಿಸಲಾಯಿತು. ನಾವು ಸಂಚರಣ ಸೇವೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಲು ಈ ಶಾಲೆ ನಮ್ಮನ್ನು ಸನ್ನದ್ಧಗೊಳಿಸಲಿತ್ತು. ಈ ಶಾಲೆಗೆ ಹಾಜರಾಗಿದ್ದು ಒಂದು ಅದ್ಭುತಕರ ಅನುಭವವಾಗಿತ್ತು. ಹಾಗಿದ್ದರೂ ಅದು ನಮ್ಮನ್ನು ನಮ್ರರನ್ನಾಗಿಸಿತು.

ಮೇಲೆ: ಫರ್ನ್‌ ಮತ್ತು ಜಾರ್ಜ್‌ ಕೌಚ್‌ ಜೊತೆ ಗ್ರೇಸ್‌ ಮತ್ತು ನಾನು —ಗಿಲ್ಯಡ್‌ನಲ್ಲಿ (1954)

ಗಿಲ್ಯಡ್‌ ತರಬೇತಿ ಮುಗಿದಾಗ ನಮ್ಮನ್ನು ಡಿಸ್ಟ್ರಿಕ್ಟ್‌ ಸೇವೆಗೆ ನೇಮಿಸಲಾಯಿತು. ಇಂಡಿಯಾನ, ಮಿಶಿಗನ್‌ ಮತ್ತು ಒಹಾಯೋ ರಾಜ್ಯಗಳು ನಮ್ಮ ಡಿಸ್ಟ್ರಿಕ್ಟ್‌ನಲ್ಲಿದ್ದವು. ಬಳಿಕ 1955ರ ಡಿಸೆಂಬರ್‌ನಲ್ಲಿ ಒಂದು ಪತ್ರ ನಮಗೆ ಬಂತು. ಅದನ್ನು ಓದಿ ನಾವು ತುಂಬ ಆಶ್ಚರ್ಯಗೊಂಡೆವು. ಸಹೋದರ ನಾರ್‌ರವರು ಬರೆದಿದ್ದ ಆ ಪತ್ರದಲ್ಲಿ ಹೀಗಿತ್ತು: “ನಿಮ್ಮ ಮಾತುಗಳು ಬಿಚ್ಚುಮನಸ್ಸಿನ ಮಾತುಗಳಾಗಿರಲಿ. ನನ್ನೊಂದಿಗೆ ಪ್ರಾಮಾಣಿಕವಾಗಿ ಹೇಳಿ. ಬೆತೆಲಿಗೆ ಬಂದು ಇಲ್ಲಿಯೇ ಉಳಿಯುವ ಮನಸ್ಸು ನಿಮಗಿದೆಯೇ . . . ಇಲ್ಲವೆ ಬೆತೆಲ್‌ನಲ್ಲಿ ಸ್ವಲ್ಪ ಕಾಲವಿದ್ದು ಆ ಬಳಿಕ ವಿದೇಶೀ ನೇಮಕವನ್ನು ಪಡೆಯುವ ಬಯಕೆ ನಿಮಗಿದೆಯೇ? ಡಿಸ್ಟ್ರಿಕ್ಟ್‌ ಇಲ್ಲವೆ ಸರ್ಕಿಟ್‌ ಕೆಲಸವನ್ನು ನೀವು ಇಷ್ಟಪಡುವಲ್ಲಿ ಅದನ್ನೂ ನನಗೆ ತಿಳಿಸಿ.” ನಮಗೆ ಯಾವುದೇ ನೇಮಕ ಸಿಕ್ಕಿದರೂ ಅದನ್ನು ಮಾಡಲು ಇಷ್ಟಪಡುವೆವು ಎಂದು ನಾವು ಉತ್ತರ ಬರೆದಾಗ ಒಡನೆ ಬೆತೆಲ್‌ಗೆ ಬರುವಂತೆ ಹೇಳಲಾಯಿತು!

ಬೆತೆಲ್‌ನಲ್ಲಿ ಕಳೆದ ರೋಮಾಂಚಕ ವರುಷಗಳು

ನಾನು ಬೆತೆಲ್‌ನಲ್ಲಿ ಕಳೆದ ವರುಷಗಳು ರೋಮಾಂಚಕವಾಗಿದ್ದವು. ಅಮೆರಿಕದ ಅನೇಕ ಕಡೆಗಳಲ್ಲಿ ಭಾಷಣ ಕೊಡುವ ಮತ್ತು ಬೋಧಿಸುವ ನೇಮಕಗಳು ಅದರಲ್ಲಿ ಸೇರಿದ್ದವು. ಅನೇಕ ಮಂದಿ ಯುವಕರಿಗೆ ತರಬೇತಿ ಮತ್ತು ಸಹಾಯ ನೀಡುವುದರಲ್ಲಿ ನಾನು ಪಾಲ್ಗೊಂಡೆ. ಈ ಯುವಕರು ಬಳಿಕ ಯೆಹೋವನ ಸಂಘಟನೆಯಲ್ಲಿ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಂಡರು. ಕ್ರಮೇಣ ಲೋಕವ್ಯಾಪಕ ಸಾರುವ ಕೆಲಸವನ್ನು ಸಂಘಟಿಸುತ್ತಿದ್ದ ಆಫೀಸಿನಲ್ಲಿ ಸಹೋದರ ನಾರ್‌ರವರ ಕಾರ್ಯದರ್ಶಿಯಾಗಿ ಕೆಲಸಮಾಡಿದೆ.

ಕೆಳಗೆ: ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವುದು (1956)

ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಸೇವೆಮಾಡಿದ ವರುಷಗಳು ತುಂಬ ಆನಂದಕರವಾಗಿದ್ದವು. ಅಲ್ಲಿ ನಾನು ಟಿ.ಜೆ. (ಬಡ್‌) ಸಲಿವನ್‌ರೊಂದಿಗೆ ಕೆಲಸಮಾಡಿದೆ. ಅವರು ಅನೇಕ ವರ್ಷ ಆ ಡಿಪಾರ್ಟ್‌ಮೆಂಟ್‌ನ ಮೇಲ್ವಿಚಾರಕಾಗಿದ್ದರು. ಬೇರೆಯವರಿಂದಲೂ ನಾನು ಅನೇಕ ವಿಷಯಗಳನ್ನು ಕಲಿತುಕೊಂಡೆ. ಅವರಲ್ಲಿ ಒಬ್ಬರು, ನನಗೆ ತರಬೇತಿ ನೀಡಲು ನೇಮಿಸಲ್ಪಟ್ಟಿದ್ದ ಸಹೋದರ ಫ್ರೆಡ್‌ ರಸ್ಕ್‌. ನಾನು ಅವರ ಹತ್ತಿರ ಒಮ್ಮೆ ಹೀಗೆ ಕೇಳಿದ್ದೆ: “ಸಹೋದರ ಫ್ರೆಡ್‌, ನಾನು ಬರೆದಿರುವ ಕೆಲವು ಪತ್ರಗಳನ್ನು ನೀವೇಕೆ ಅಷ್ಟೊಂದು ತಿದ್ದಿ ಸರಿಪಡಿಸುತ್ತೀರಿ?” ಅವರು ನಕ್ಕು ಹೇಳಿದರು: “ಮ್ಯಾಲ್ಕಮ್‌, ನಾವು ಬಾಯಿಮಾತಿನಲ್ಲಿ ಏನಾದರೂ ಹೇಳಿದರೆ, ನಂತರ ಅದನ್ನು ಇನ್ನು ಕೆಲವು ಪದಗಳನ್ನು ಉಪಯೋಗಿಸಿ ವಿವರಿಸಬಹುದು. ಆದರೆ ಬರೆಯುವ ವಿಷಯಕ್ಕೆ ಬರುವಾಗ, ವಿಶೇಷವಾಗಿ ಅದು ಇಲ್ಲಿಂದ ಹೋಗುವುದರಿಂದ, ಅದು ಸಾಧ್ಯವಿರುವಷ್ಟು ಸುಸ್ಥಿತಿಯಲ್ಲಿ ಮತ್ತು ನಿಷ್ಕೃಷ್ಟವಾಗಿರಬೇಕು.” ಬಳಿಕ ಅವರು ದಯಾಪರತೆಯಿಂದ ಹೇಳಿದ್ದು: “ಧೈರ್ಯವಾಗಿರು. ನೀನು ಚೆನ್ನಾಗಿ ಕೆಲಸ ಮಾಡುತ್ತಿರುವೆ ಮತ್ತು ತಕ್ಕ ಸಮಯದಲ್ಲಿ ನಿನ್ನ ಕೆಲಸ ಹೆಚ್ಚು ಉತ್ತಮವಾಗುವುದು.”

ಬೆತೆಲ್‌ನಲ್ಲಿದ್ದ ಅನೇಕ ವರ್ಷಗಳಲ್ಲಿ ಗ್ರೇಸ್‌ ವಿಧವಿಧದ ನೇಮಕಗಳನ್ನು ಪಡೆದಳು. ಅವುಗಳಲ್ಲಿ ಗೃಹಕೃತ್ಯ ನಿರ್ವಹಣೆ (ಹೌಸ್‌ಕೀಪಿಂಗ್‌), ವಾಸದ ಕೋಣೆಗಳ ಉಸ್ತುವಾರಿ ಸೇರಿತ್ತು. ಅವಳು ಆ ಸೇವೆಯಲ್ಲಿ ಸಂತೋಷಪಟ್ಟಳು. ಆ ವರ್ಷಗಳಲ್ಲಿ ಬೆತೆಲ್‌ನಲ್ಲಿ ಸೇವೆಮಾಡುತ್ತಿದ್ದ ಯುವ ಸಹೋದರರನ್ನು ನಾವು ಈಗ ಕೆಲವೊಮ್ಮೆ ಭೇಟಿಯಾಗುತ್ತೇವೆ. ಅವರು ನಸುನಗುತ್ತ ಗ್ರೇಸ್‌ಗೆ ಹೀಗೆ ಹೇಳುತ್ತಾರೆ: “ಬೆಡ್‌ ಅನ್ನು ಹೇಗೆ ಸಿದ್ಧಪಡಿಸಬೇಕೆಂದು ನೀವು ಚೆನ್ನಾಗಿ ಕಲಿಸಿಕೊಟ್ಟಿರಿ. ನೀವು ಕೊಟ್ಟ ತರಬೇತಿಯನ್ನು ನನ್ನ ತಾಯಿ ತುಂಬ ಮೆಚ್ಚುತ್ತಾರೆ.” ಮ್ಯಾಗಜಿನ್‌, ಪತ್ರ ವ್ಯವಹಾರ ಮತ್ತು ಟೇಪ್‌ ಡುಪ್ಲಿಕೇಟಿಂಗ್‌ ಇಲಾಖೆಗಳಲ್ಲಿಯೂ ಗ್ರೇಸ್‌ ಸೇವೆಮಾಡಿ ಸಂತೋಷಪಟ್ಟಿದ್ದಾಳೆ. ಈ ಬೇರೆಬೇರೆ ನೇಮಕಗಳನ್ನು ನಿರ್ವಹಿಸುವುದು, ನಾವು ಯೆಹೋವನ ಸಂಘಟನೆಯಲ್ಲಿ ಯಾವುದೇ ಸೇವೆ ಮಾಡಿದರೂ ಎಲ್ಲಿ ಸೇವೆ ಮಾಡಿದರೂ ಅದೊಂದು ಸುಯೋಗ ಮತ್ತು ಆಶೀರ್ವಾದ ಎಂದು ಮನಗಾಣುವಂತೆ ಅವಳಿಗೆ ಸಹಾಯಮಾಡಿತು. ಇಂದಿಗೂ ಅದೇ ಅನಿಸಿಕೆ ಅವಳಿಗಿದೆ.

ಹೊಂದಾಣಿಕೆಗಳು

1970ನೆಯ ದಶಕದ ನಡುವಲ್ಲಿ ನಮ್ಮ ವೃದ್ಧ ಹೆತ್ತವರಿಗೆ ಹೆಚ್ಚು ಗಮನಕೊಡುವ ಅಗತ್ಯ ಬಂತು. ಹಾಗಾಗಿ ಒಂದು ಕಷ್ಟಕರ ನಿರ್ಣಯವನ್ನು ನಾವು ಮಾಡಬೇಕಾಯಿತು. ಬೆತೆಲನ್ನು ಮತ್ತು ನಮಗೆ ಅತಿಪ್ರಿಯರಾಗಿದ್ದ ಯೆಹೋವನ ಜೊತೆ ಸೇವಕರನ್ನು ಅಗಲಿ ಹೋಗಲು ನಮಗೆ ಮನಸ್ಸಿರಲಿಲ್ಲ. ಹಾಗಿದ್ದರೂ ನಮ್ಮ ಹೆತ್ತವರನ್ನು ಪರಾಮರಿಸುವುದು ನನ್ನ ಕರ್ತವ್ಯವೆಂದು ನನಗನಿಸಿತು. ಆದ್ದರಿಂದ ಸಮಯಾನಂತರ ನಾವು ಬೆತೆಲನ್ನು ಬಿಟ್ಟುಹೋದೆವು. ಪರಿಸ್ಥಿತಿ ಸುಧಾರಿಸಿದರೆ ಪುನಃ ಬರೋಣ ಅಂದುಕೊಂಡೆವು.

ಆರ್ಥಿಕ ಬೆಂಬಲಕ್ಕಾಗಿ ನಾನು ವಿಮೆ ಕಂಪೆನಿಯಲ್ಲಿ ಕೆಲಸ ಮಾಡತೊಡಗಿದೆ. ನಾನು ತರಬೇತಿಯಲ್ಲಿದ್ದಾಗ ಒಬ್ಬ ಮ್ಯಾನೇಜರ್‌ ಹೇಳಿದ್ದು ಈಗಲೂ ನೆನಪಿದೆ: “ಈ ವ್ಯಾಪಾರ ಚೆನ್ನಾಗಿ ಆಗಬೇಕಾದರೆ ಜನರನ್ನು ಸಂಜೆ ಭೇಟಿಯಾಗಬೇಕು. ಏಕೆಂದರೆ ಜನರು ಸಿಗುವುದೇ ಆ ಸಮಯದಲ್ಲಿ. ಆದ್ದರಿಂದ ಪ್ರತಿ ಸಂಜೆ ಜನರನ್ನು ಭೇಟಿಮಾಡುವುದೇ ಮುಖ್ಯವಾಗಿರಬೇಕು. ಅದಕ್ಕಿಂತ ಮುಖ್ಯವಾದದ್ದು ಇನ್ಯಾವುದೂ ಇಲ್ಲ.” ಆಗ ನಾನಂದೆ: “ನೀವು ಅನುಭವದಿಂದ ಹೇಳುತ್ತಿದ್ದೀರಿ. ಅದನ್ನು ನಾನು ಗೌರವಿಸುತ್ತೇನೆ. ಆದರೆ ಕೆಲವು ಆಧ್ಯಾತ್ಮಿಕ ಜವಾಬ್ದಾರಿಗಳು ನನಗಿವೆ. ಅವುಗಳನ್ನು ನಾನೆಂದೂ ಅಸಡ್ಡೆ ಮಾಡಿಲ್ಲ. ಈಗಲೂ ಅಸಡ್ಡೆ ಮಾಡಲು ಬಯಸುವುದಿಲ್ಲ. ನಾನು ಸಂಜೆ ಹೊತ್ತಿನಲ್ಲಿ ಜನರನ್ನು ಭೇಟಿಮಾಡುವೆ. ಆದರೆ ಮಂಗಳವಾರ ಮತ್ತು ಗುರುವಾರದಂದು ನನಗೆ ಅತಿ ಪ್ರಾಮುಖ್ಯ ಕೂಟಗಳಿವೆ.” ಐಹಿಕ ಕೆಲಸದ ಸಲುವಾಗಿ ಕೂಟಗಳನ್ನು ತಪ್ಪಿಸದೆ ಇದ್ದದ್ದಕ್ಕಾಗಿ ಯೆಹೋವನು ನಿಜವಾಗಿಯೂ ನನ್ನನ್ನು ಆಶೀರ್ವದಿಸಿದ್ದಾನೆ.

ನನ್ನ ತಾಯಿ 1987ರ ಜುಲೈಯಲ್ಲಿ ಆಸ್ಪತ್ರೆಯಲ್ಲಿ ತೀರಿಕೊಂಡಾಗ ನಾವು ಅವರ ಪಕ್ಕದಲ್ಲೇ ಇದ್ದೆವು. ಅಲ್ಲಿದ್ದ ಹೆಡ್‌ ನರ್ಸ್‌ ಗ್ರೇಸ್‌ಗೆ ಹೀಗೆ ಹೇಳಿದರು: “ಮಿಸೆಸ್‌ ಆ್ಯಲನ್‌, ನೀವು ನಿಮ್ಮ ಅತ್ತೆಯನ್ನು ನೋಡಿಕೊಳ್ಳಲಿಕ್ಕಾಗಿ ಸದಾ ಇಲ್ಲಿದ್ದಿರೆಂದು ಎಲ್ಲರಿಗೂ ತಿಳಿದಿದೆ. ಈಗ ಮನೆಗೆ ಹೋಗಿ ಸ್ಪಲ್ಪ ವಿಶ್ರಾಂತಿ ತಕ್ಕೊಳ್ಳಿ. ಮನಶ್ಶಾಂತಿ ಮತ್ತು ಆತ್ಮಗೌರವ ನಿಮಗಿರಲಿ.”

ಡಿಸೆಂಬರ್‌ 1987ರಲ್ಲಿ ಪುನಃ ನಾವು ನಮ್ಮ ಅಚ್ಚುಮೆಚ್ಚಿನ ಸ್ಥಳವಾಗಿದ್ದ ಬೆತೆಲ್‌ನಲ್ಲಿ ಸೇವೆ ಮಾಡುವುದಕ್ಕಾಗಿ ಅರ್ಜಿಹಾಕಿದೆವು. ಆದರೆ ಕೆಲವೇ ದಿನಗಳ ನಂತರ ಗ್ರೇಸ್‌ಗೆ ದೊಡ್ಡ ಕರುಳಿನ ಕ್ಯಾನ್ಸರ್‌ ಇದೆಯೆಂದು ಗೊತ್ತಾಯಿತು. ಶಸ್ತ್ರಚಿಕಿತ್ಸೆಯಾಗಿ, ಯಶಸ್ವಿಯಾಗಿ ಗುಣಹೊಂದಿದ ಬಳಿಕ ಅವಳು ಕ್ಯಾನ್ಸರ್‌ನಿಂದ ಮುಕ್ತಳೆಂದು ಹೇಳಲಾಯಿತು. ಆದರೆ ಈಮಧ್ಯೆ ನಮಗೆ ಬೆತೆಲ್‌ನಿಂದ ಒಂದು ಪತ್ರ ಬಂತು. ನಾವು ನಮ್ಮ ಸ್ಥಳಿಕ ಸಭೆಯೊಂದಿಗೆ ಸೇವೆ ಮುಂದುವರಿಸುವಂತೆ ಹೇಳಲಾಗಿತ್ತು. ನಾವು ನಮ್ಮ ಸೇವೆಯಲ್ಲಿ ಮುಂದುವರಿಯಲು ದೃಢ ಮನಸ್ಸು ಮಾಡಿದ್ದೆವು.

ಸಕಾಲದಲ್ಲಿ ನಮಗೆ ಟೆಕ್ಸಸ್‌ನಲ್ಲಿ ಕೆಲಸ ಸಿಕ್ಕಿತು. ಅಲ್ಲಿಯ ಉಷ್ಣ ಹವೆ ನಮಗೆ ಒಳ್ಳೆಯದೆಂದು ಅನಿಸಿತು. ಟೆಕ್ಸಸ್‌ನಲ್ಲಿ ಈಗ ನಾವು ಸುಮಾರು 25 ವರ್ಷ ಕಳೆದಿದ್ದೇವೆ. ಇಲ್ಲಿಯ ವರೆಗೂ ಸಹೋದರ ಸಹೋದರಿಯರು ನಮ್ಮನ್ನು ಪ್ರೀತಿಯಿಂದ ಪರಾಮರಿಸುತ್ತಾ ಬಂದಿದ್ದಾರೆ ಮತ್ತು ಅವರು ನಮಗೆ ತುಂಬ ಆಪ್ತರಾಗಿದ್ದಾರೆ.

ನಾವು ಕಲಿತಿರುವ ಪಾಠಗಳು

ಗ್ರೇಸ್‌ಗೆ ದೊಡ್ಡ ಕರುಳಿನ ಕ್ಯಾನ್ಸರ್‌ ಮತ್ತು ಥೈರಾಯ್ಡ್‌ ಗ್ರಂಥಿಯ ಕ್ಯಾನ್ಸರ್‌ ಮಾತ್ರವಲ್ಲ ಇತ್ತೀಚಿಗೆ ಸ್ತನದ ಕ್ಯಾನ್ಸರ್‌ ಕೂಡ ಬಂತು. ಆದರೂ ಆಕೆ ತನ್ನ ಜೀವನದ ಈ ಪಾಡಿನ ಬಗ್ಗೆ ಗುಣುಗುಟ್ಟಿದ್ದಿಲ್ಲ. ಯಾವಾಗಲೂ ನನಗೆ ಸಹಕಾರ ಕೊಡುತ್ತಾ ನನ್ನ ತಲೆತನಕ್ಕೆ ಗೌರವ ಕೊಡುತ್ತಾ ಬಂದಿದ್ದಾಳೆ. “ದಂಪತಿಗಳಾಗಿ ನಿಮ್ಮ ಯಶಸ್ಸಿನ ಮತ್ತು ನಿಮ್ಮ ಸಂತೋಷದ ರಹಸ್ಯವೇನು?” ಎಂದು ಗ್ರೇಸ್‌ ಹತ್ತಿರ ಅನೇಕರು ಕೇಳುತ್ತಾರೆ. ಆಗ ಅವಳು ನಾಲ್ಕು ಕಾರಣಗಳನ್ನು ಕೊಡುತ್ತಾಳೆ: “ನಾವು ಆಪ್ತ ಸ್ನೇಹಿತರು. ಪ್ರತಿದಿನ ಪರಸ್ಪರ ಮಾತಾಡಲು ಸಮಯಮಾಡಿಕೊಳ್ಳುತ್ತೇವೆ. ಪ್ರತಿದಿನ ಒಟ್ಟಿಗೆ ಸಮಯ ಕಳೆಯುವುದನ್ನು ತುಂಬ ಇಷ್ಟಪಡುತ್ತೇವೆ. ಸಿಟ್ಟು ಇಟ್ಟುಕೊಂಡು ನಿದ್ದೆಹೋಗುವುದಿಲ್ಲ.” ಒಮ್ಮೊಮ್ಮೆ ಒಬ್ಬರಿಗೊಬ್ಬರು ನೋವು ಮಾಡಿದರೂ ಕ್ಷಮಿಸಿ ಅದನ್ನು ಮರೆತುಬಿಡುತ್ತೇವೆ. ಇದು ನಿಜಕ್ಕೂ ಸಮಸ್ಯೆಯನ್ನು ಬಗೆಹರಿಸುತ್ತದೆ.

“ಯೆಹೋವನನ್ನು ಸದಾ ಅವಲಂಬಿಸಿಕೊಂಡು ಆತನು ಅನುಮತಿಸುವುದನ್ನು ಅಂಗೀಕರಿಸಿ”

ನಾವು ಎದುರಿಸಿದ ಎಲ್ಲ ಪರೀಕ್ಷೆಗಳಿಂದ ಕಲಿತ ಅನೇಕ ಒಳ್ಳೆಯ ಪಾಠಗಳು:

  1.  ಯೆಹೋವನನ್ನು ಸದಾ ಅವಲಂಬಿಸಿಕೊಂಡು ಆತನು ಅನುಮತಿಸುವುದನ್ನು ಅಂಗೀಕರಿಸಿರಿ. ಸ್ವಂತ ಬುದ್ಧಿಯ ಮೇಲೆ ಆತುಕೊಳ್ಳಬೇಡಿ.—ಜ್ಞಾನೋ. 3:5, 6; ಯೆರೆ. 17:7.

  2.  ಯಾವುದೇ ವಿಷಯ ಇರಲಿ ಮಾರ್ಗದರ್ಶನೆಗಾಗಿ ಯೆಹೋವನ ವಾಕ್ಯವನ್ನು ಆಶ್ರಯಿಸಿ. ಯೆಹೋವನಿಗೆ ಮತ್ತು ಆತನ ನಿಯಮಗಳಿಗೆ ವಿಧೇಯತೆ ಅತಿ ಪ್ರಾಮುಖ್ಯ. ನಮ್ಮ ಕ್ರಿಯೆಗಳು ಯೆಹೋವನಿಗೆ ವಿಧೇಯತೆ ತೋರಿಸುತ್ತವೆ, ಇಲ್ಲವೆ ಅವಿಧೇಯತೆ. ಎರಡನ್ನೂ ಮಾಡುತ್ತೇವೆಂದು ಹೇಳಲು ಸಾಧ್ಯವಿಲ್ಲ.—ರೋಮ. 6:16; ಇಬ್ರಿ. 4:12.

  3.  ಯೆಹೋವನಿಂದ ಒಳ್ಳೆಯ ಹೆಸರನ್ನು ಪಡೆದುಕೊಳ್ಳುವುದೇ ಜೀವನದಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದೆ. ಪ್ರಾಪಂಚಿಕ ಐಶ್ವರ್ಯಕ್ಕಲ್ಲ, ಯೆಹೋವನ ಅಭಿರುಚಿಗಳಿಗೆ ನಿಮ್ಮ ಜೀವನದಲ್ಲಿ ಆದ್ಯತೆಕೊಡಿ.—ಜ್ಞಾನೋ. 28:20; ಪ್ರಸಂ. 7:1; ಮತ್ತಾ. 6:33, 34.

  4.  ಯೆಹೋವನ ಸೇವೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಫಲದಾಯಕರೂ ಕ್ರಿಯಾಶೀಲರೂ ಆಗಿರಿ. ನಿಮಗೆ ಮಾಡಲು ಅಸಾಧ್ಯವಾದದ್ದರ ಮೇಲಲ್ಲ, ಮಾಡಲು ಸಾಧ್ಯವಿರುವುದರ ಮೇಲೆ ಗಮನವಿಡಿ.—ಮತ್ತಾ. 22:37; 2 ತಿಮೊ. 4:2.

  5.  ಯೆಹೋವನ ಆಶೀರ್ವಾದ ಮತ್ತು ಅನುಗ್ರಹವಿರುವ ಬೇರೆ ಯಾವ ಸಂಘಟನೆಯೂ ಇಲ್ಲವೆಂಬುದನ್ನು ತಿಳಿದಿರಿ.—ಯೋಹಾ. 6:68.

ಗ್ರೇಸ್‌ ಮತ್ತು ನಾನು ಒಬ್ಬೊಬ್ಬರಾಗಿ 75ಕ್ಕೂ ಹೆಚ್ಚು ವರ್ಷ ಯೆಹೋವನ ಸೇವೆ ಮಾಡಿದ್ದೇವೆ. ವಿವಾಹಿತ ದಂಪತಿಗಳಾಗಿ ಸುಮಾರು 65 ವರ್ಷಕಾಲ ಆತನ ಸೇವೆಮಾಡಿದ್ದೇವೆ. ಈ ಎಲ್ಲ ವರ್ಷಗಳನ್ನು ಜೊತೆಯಾಗಿ ಯೆಹೋವನ ಸೇವೆಯಲ್ಲಿ ಕಳೆದಿದ್ದು ಸೊಗಸಾದ ಅನುಭವ. ಯೆಹೋವನನ್ನು ಅವಲಂಬಿಸುವುದರಿಂದ ಜೀವನವು ಎಷ್ಟು ಪ್ರತಿಫಲದಾಯಕ ಆಗಿರುತ್ತದೆ ಎಂಬುದನ್ನು ನಮ್ಮ ಸಹೋದರ ಸಹೋದರಿಯರೂ ಅನುಭವಿಸಿ ನೋಡಬೇಕೆಂಬುದು ನಮ್ಮ ಆಶಯ. ಅದಕ್ಕಾಗಿ ನಾವು ಪ್ರಾರ್ಥಿಸುತ್ತೇವೆ.