ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು

ದೇವರು ಒಂದು ರಹಸ್ಯ ಅನ್ನೋ ಸುಳ್ಳು

ದೇವರು ಒಂದು ರಹಸ್ಯ ಅನ್ನೋ ಸುಳ್ಳು

ಅನೇಕರು ಏನು ನಂಬುತ್ತಾರೆ

“ರೋಮನ್‌ ಕ್ಯಾಥೋಲಿಕ್‌, ಈಸ್ಟರ್ನ್‌ ಆರ್ತೊಡಾಕ್ಸ್‌ ಮತ್ತು ಪ್ರೊಟೆಸ್ಟೆಂಟ್‌ ಧರ್ಮಗಳು ತಂದೆ, ಮಗ ಮತ್ತು ಪವಿತ್ರಾತ್ಮ ಒಂದೇ ಅಂತ ನಂಬುತ್ತಾರೆ. ಕ್ರೈಸ್ತ ಧರ್ಮಶಾಸ್ತ್ರದ ಪ್ರಕಾರ, ಈ ಮೂವರು ದೇವರುಗಳು ಅಂತ ಹೇಳದೆ ಈ ಮೂರು ಸೇರಿ ಒಂದೇ ದೇವರು ಅಂತ ಹೇಳುತ್ತಾರೆ.”—ದಿ ನ್ಯೂ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.

ಬೈಬಲ್‌ನಲ್ಲಿರುವ ಸತ್ಯ

ದೇವರ ಮಗನಾದ ಯೇಸು ‘ನಾನು ತಂದೆ ಸಮಾನ’ ಅಂತ ಯಾವತ್ತೂ ಹೇಳಲಿಲ್ಲ. ಬದಲಿಗೆ ‘ನಾನು ಅಪ್ಪನ ಹತ್ರ ಹೋಗ್ತಾ ಇದ್ದೀನಿ ಯಾಕಂದ್ರೆ ಅಪ್ಪ ನನಗಿಂತ ದೊಡ್ಡವನು’ ಅಂತ ಯೇಸು ಹೇಳಿದನು. (ಯೋಹಾನ 14:28) ತನ್ನ ಹಿಂಬಾಲಕರಲ್ಲಿ ಯೇಸು ಒಬ್ಬನಿಗೆ ಹೀಗೆ ಹೇಳಿದನು: “ನನ್ನ ತಂದೆ ನಿಮ್ಮ ತಂದೆ, ನನ್ನ ದೇವರು ನಿಮ್ಮ ದೇವರು ಆಗಿರುವವನ ಹತ್ರ ಹೋಗ್ತಾ ಇದ್ದೀನಿ.”—ಯೋಹಾನ 20:17.

ಪವಿತ್ರಶಕ್ತಿ ಒಂದು ವ್ಯಕ್ತಿಯಲ್ಲ. ಆರಂಭದ ಕ್ರೈಸ್ತರಿಗೆ ‘ಪವಿತ್ರಶಕ್ತಿ ಸಿಕ್ತು.’ ಯೆಹೋವನು ಹೀಗೆ ಹೇಳಿದನು: “ನಾನು ಎಲ್ಲ ತರದ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ.” (ಅಪೊಸ್ತಲರ ಕಾರ್ಯ 2:1-4, 17) ಪವಿತ್ರಶಕ್ತಿ ತ್ರಯೈಕ್ಯದ ಭಾಗ ಅಲ್ಲ. ದೇವರ ಶಕ್ತಿಯಾಗಿದೆ.

ಇದು ಯಾಕೆ ಮುಖ್ಯ

ಕ್ಯಾಥೊಲಿಕ್‌ ವಿದ್ವಾಂಸರಾದ ಕಾರ್ಲ್‌ ರಾಹನರ್‌ ಮತ್ತು ಹರ್ಬರ್ಟ್‌ ವಾರ್‌ಗ್ರಿಮ್ಲರ್‌ ತ್ರಯೈಕ್ಯದ ಬಗ್ಗೆ ಹೀಗೆ ಹೇಳ್ತಾರೆ, “ಈ ವಿಷಯವನ್ನ ವಿವರಿಸದೆ ಇದ್ರೆ ಯಾರಿಗೂ ಗೊತ್ತಾಗಲ್ಲ, ಒಂದುವೇಳೆ ವಿವರಿಸಿದರೂ ಅದು ಸಂಪೂರ್ಣವಾಗಿ ಅರ್ಥ ಆಗಲ್ಲ.” ಅರ್ಥ ಮಾಡಿಕೊಳ್ಳೋಕೆ ಅಸಾಧ್ಯವಾಗಿರೋ ಒಬ್ಬ ವ್ಯಕ್ತಿಯನ್ನ ನೀವು ಪ್ರೀತಿಸೋಕೆ ಆಗುತ್ತಾ? ಹಾಗಾಗಿ ತ್ರಯೈಕ್ಯ ಸಿದ್ಧಾಂತ, ದೇವರ ಬಗ್ಗೆ ತಿಳಿದುಕೊಳ್ಳೋಕೆ ಮತ್ತು ಪ್ರೀತಿಸೋಕೆ ಅಡ್ಡ ಗೋಡೆಯಾಗಿದೆ.

ಈ ಮುಂಚೆ ಹೇಳಿದ ಮಾರ್ಕೊ, ತ್ರಯೈಕ್ಯವನ್ನು ಒಂದು ಅಡ್ಡ ಗೋಡೆಯಾಗಿ ನೋಡಿದನು. ಅವನು ಹೇಳಿದ್ದು, “ದೇವರು ತನ್ನ ಗುರುತನ್ನ ನನ್ನಿಂದ ಮರೆಮಾಚಿದ್ದಾನೆ, ಆತನು ಒಬ್ಬ ರಹಸ್ಯ, ಆತನನ್ನ ಅರ್ಥಮಾಡಿಕೊಳ್ಳೋಕೆ ಆಗಲ್ಲ.” ಆದರೆ ದೇವರು ‘ಗಲಿಬಿಲಿಯ ದೇವರಲ್ಲ’ ಅಂತ ನಮಗೆ ಬೈಬಲ್‌ ಹೇಳುತ್ತೆ. (1 ಕೊರಿಂಥ 14:33, ಅಮೇರಿಕನ್‌ ಸ್ಟಾಂಡರ್ಡ್‌ ವರ್ಷನ್‌) ದೇವರು ತನ್ನ ಗುರುತನ್ನ ನಮ್ಮಿಂದ ಮರೆಮಾಚಿಲ್ಲ. ನಾವು ಆತನ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋದು ದೇವರ ಆಸೆಯಾಗಿದೆ. ಯೇಸು ಹೇಳಿದ್ದು: “ನಾವು ಯಾರಿಗೆ ಆರಾಧನೆ ಮಾಡ್ತಾ ಇದ್ದೀವಿ ಅಂತ ನಮಗೆ ಗೊತ್ತು.”—ಯೋಹಾನ 4:22.

“ದೇವರು ತ್ರಯೈಕ್ಯದ ಭಾಗ ಅಲ್ಲ ಅಂತ ನನಗೆ ಗೊತ್ತಾದಾಗ, ನಾನು ಆತನ ಜೊತೆ ವೈಯಕ್ತಿಕ ಸಂಬಂಧವನ್ನ ಬೆಳೆಸಿಕೊಳ್ಳೋಕೆ ಆಯ್ತು” ಅಂತ ಮಾರ್ಕೊ ಹೇಳ್ತಾನೆ. ನಾವು ಯೆಹೋವ ದೇವರನ್ನ ರಹಸ್ಯ ವ್ಯಕ್ತಿ ತರ ನೋಡದೆ ಒಬ್ಬ ನೈಜ್ಯ ವ್ಯಕ್ತಿ ತರ ನೋಡಿದ್ರೆ ಆತನನ್ನ ಪ್ರೀತಿಸೋಕೆ ತುಂಬ ಸುಲಭ ಆಗುತ್ತೆ. “ಬೇರೆಯವ್ರನ್ನ ಪ್ರೀತಿ ಮಾಡ್ದೇ ಇರುವವ್ರಿಗೆ ನಿಜವಾಗ್ಲೂ ದೇವರ ಬಗ್ಗೆ ಗೊತ್ತಿಲ್ಲ. ಯಾಕಂದ್ರೆ ದೇವರು ಪ್ರೀತಿಯಾಗಿದ್ದಾನೆ” ಅಂತ ಬೈಬಲ್‌ ಹೇಳುತ್ತೆ.—1 ಯೋಹಾನ 4:8.