ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು

ಸತ್ಯ ನಿಮ್ಮನ್ನು ಬಿಡುಗಡೆ ಮಾಡುತ್ತೆ

ಸತ್ಯ ನಿಮ್ಮನ್ನು ಬಿಡುಗಡೆ ಮಾಡುತ್ತೆ

ಒಂದಿನ ಯೇಸು ಯೆರೂಸಲೇಮ್‌ನಲ್ಲಿ ಅವನ ಅಪ್ಪ ಯೆಹೋವನ ಬಗ್ಗೆ ಮಾತಾಡುತ್ತಾ ಸುಳ್ಳು ಧರ್ಮದ ಗುರುಗಳ ನಿಜ ಬಣ್ಣವನ್ನ ಬಯಲುಪಡಿಸಿದ. (ಯೋಹಾನ 8:12-30) ಯೇಸು ಆ ದಿನ ಏನು ಹೇಳಿದನೊ ಅದರಿಂದ ಇಂದು ನಾವು ದೇವರ ಬಗ್ಗೆ ಸತ್ಯವನ್ನ ತಿಳಿದುಕೊಳ್ಳೋಕೆ ಸಹಾಯ ಆಗುತ್ತೆ. ಯೇಸು ಹೇಳಿದ್ದು: “ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ. ಸತ್ಯ ಏನಂತ ನಿಮಗೆ ಗೊತ್ತಾಗುತ್ತೆ. ಆ ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ.”—ಯೋಹಾನ 8:31, 32.

“ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ” ಅನ್ನೊ ಯೇಸುವಿನ ಮಾತನ್ನ ಪಾಲಿಸಿದಾಗ, ಧಾರ್ಮಿಕ ಬೋಧನೆಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಅಂತ ತಿಳಿದುಕೊಳ್ಳೋಕೆ ಸಹಾಯ ಆಗುತ್ತೆ. ದೇವರ ಬಗ್ಗೆ ನೀವು ಏನಾದ್ರೂ ಕೇಳಿಸಿಕೊಂಡಾಗ, ’ಇದು ಯೇಸು ಹೇಳಿದ ಮಾತಿಗೆ ಮತ್ತು ಪವಿತ್ರ ಬೈಬಲ್‌ಗೆ ಅನುಗುಣವಾಗಿ ಇದೆಯಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಅಪೊಸ್ತಲ ಪೌಲನ ಮಾತುಗಳನ್ನ ಕೇಳಿಸಿಕೊಂಡ ಕೆಲವರು “ತಾವು ಕೇಳ್ತಾ ಇರೋ ವಿಷ್ಯಗಳು ನಿಜಕ್ಕೂ ಪವಿತ್ರಗ್ರಂಥದಲ್ಲಿ ಇದ್ಯಾ ಅಂತ ತಿಳ್ಕೊಳ್ಳೋಕೆ ಪ್ರತಿದಿನ ವಚನಗಳನ್ನ ಚೆನ್ನಾಗಿ ಪರೀಕ್ಷಿಸ್ತಿದ್ರು.”—ಅಪೊಸ್ತಲರ ಕಾರ್ಯ 17:11.

ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಅಧ್ಯಯನ ಮಾಡುವ ಮೂಲಕ ಈ ಲೇಖನ ಸರಣಿಯಲ್ಲಿ ಬಂದ ಮಾರ್ಕೊ, ರೊಸಾ ಮತ್ತು ರೇಮಾಂಡ್‌ ತಾವು ಕಲಿಯುತ್ತಿರೋ ವಿಷಯಗಳನ್ನ ಜಾಗರೂಕತೆಯಿಂದ ಪರೀಕ್ಷಿಸಿ ನೋಡಿದ್ರು. ಆಗ ಅವರಿಗೆ ಏನು ಗೊತ್ತಾಯಿತು?

ಮಾರ್ಕೊ: “ನನಗೆ ಮತ್ತು ನನ್ನ ಹೆಂಡತಿಗೆ ಏನೇ ಪ್ರಶ್ನೆ ಬಂದರೂ ನಮ್ಮ ಬೈಬಲ್‌ ಟೀಚರ್‌ ಅವಕ್ಕೆ ಬೈಬಲ್‌ನಿಂದಲೇ ಉತ್ತರ ಕೊಡುತ್ತಿದ್ದರು. ಹೀಗೆ ಯೆಹೋವ ದೇವರ ಮೇಲೆ ನಮ್ಮ ಪ್ರೀತಿ ಬೆಳೆಯುತ್ತಾ ಹೋಯಿತು, ಗಂಡ-ಹೆಂಡತಿಯಾಗಿ ನಮ್ಮ ಸಂಬಂಧನೂ ಬಲಗೊಳ್ತು.”

ರೊಸಾ: “ದೇವರ ವ್ಯಕ್ತಿತ್ವ ಹೀಗಿರಬಹುದು ಅನ್ನುವ ಮನುಷ್ಯರ ಅಭಿಪ್ರಾಯಗಳೇ ಬೈಬಲ್‌ನಲ್ಲಿ ಇದೆ ಅಂತ ನಾನು ಮೊದಲು ಅಂದುಕೊಂಡಿದ್ದೆ. ಆದರೆ ಕ್ರಮೇಣ ಬೈಬಲ್‌ನಿಂದನೇ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿತು. ಈಗ ನನಗೆ ಯೆಹೋವನು ನೈಜನಾಗಿದ್ದಾನೆ ಮತ್ತು ನಾನು ಆತನ ಮೇಲೆ ಭರವಸೆ ಇಡ್ತೀನಿ.”

ರೇಮಾಂಡ್‌: “ನಾನು ದೇವರ ಬಗ್ಗೆ ಕಲಿಬೇಕು ಅಂತ ಪ್ರಾರ್ಥನೆ ಮಾಡಿದೆ. ಸ್ವಲ್ಪ ಸಮಯ ಕಳೆದ ಮೇಲೆ ನಾನು ನನ್ನ ಗಂಡ ಬೈಬಲ್‌ ಅಧ್ಯಯನ ತಗೊಳೋಕೆ ಶುರು ಮಾಡಿದ್ವಿ. ಕೊನೆಗೂ ಯೆಹೋವ ದೇವರ ಬಗ್ಗೆ ಸತ್ಯ ನಮಗೆ ಗೊತ್ತಾಯಿತು. ಆತನು ಎಷ್ಟು ಒಳ್ಳೇ ದೇವರು ಅಂತ ತಿಳಿದು ನಾವು ತುಂಬ ಖುಷಿ ಪಟ್ಟಿದ್ದೀವಿ.”

ದೇವರ ಬಗ್ಗೆ ಜನ ಹೇಳುವ ಸುಳ್ಳನ್ನು ಬಯಲು ಪಡಿಸುವುದರ ಜೊತೆಗೆ ಆತನಲ್ಲಿ ಇರುವ ಅದ್ಭುತ ಗುಣಗಳ ಬಗ್ಗೆನೂ ಬೈಬಲ್‌ ತಿಳಿಸುತ್ತೆ. ಆತನ ಪ್ರೇರಿತ ವಾಕ್ಯವಾದ ಬೈಬಲ್‌, ’ನಮಗೆ ದೇವರು ದಯೆಯಿಂದ ಹೇಳಿದ ವಿಷಯಗಳನ್ನ ಅರ್ಥ ಮಾಡಿಕೊಳ್ಳೋಕೆ’ ಸಹಾಯ ಮಾಡುತ್ತೆ. (1ಕೊರಿಂಥ 2:12) ದೇವರ ಬಗ್ಗೆ, ಆತನ ಉದ್ದೇಶದ ಬಗ್ಗೆ ಮತ್ತು ನಮ್ಮ ಭವಿಷ್ಯದ ಬಗ್ಗೆ ಇರುವಂಥ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನ ಬೈಬಲ್‌ನಿಂದ ನೀವೇ ಪಡೆದುಕೊಳ್ಳಬಹುದು. ಈ ಕೆಲವು ಪ್ರಶ್ನೆಗಳಿಗೆ ಉತ್ತರ www.pr418.comನಲ್ಲಿ ನಿಮಗೆ ಸಿಗುತ್ತೆ. ಅಲ್ಲಿ “ಬೈಬಲ್‌ ಬೋಧನೆಗಳು >ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ” ಅನ್ನೊ ಕಡೆ ನೋಡಿ. ಅದೇ ವೆಬ್‌ಸೈಟ್‌ನಲ್ಲಿ ನೀವು ಬೈಬಲ್‌ ಅಧ್ಯಯನಕ್ಕೂ ವಿನಂತಿಸಬಹುದು ಅಥವಾ ಒಬ್ಬ ಯೆಹೋವನ ಸಾಕ್ಷಿ ಹತ್ತಿರನೂ ಕೇಳಬಹುದು. ಬೈಬಲ್‌ ಅಧ್ಯಯನ ಮಾಡುವುದರಿಂದ ದೇವರನ್ನು ಪ್ರೀತಿಸುವುದು ಎಷ್ಟು ಸುಲಭ ಅಂತ ನೀವು ತಿಳಿದುಕೊಳ್ತಿರಾ ಅನ್ನೊ ನಂಬಿಕೆ ನಮಗಿದೆ.