ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಿ

ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಿ

“ಸ್ವಸ್ಥಚಿತ್ತರಾಗಿರಿ ಮತ್ತು ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.”​—1 ಪೇತ್ರ 4:7.

1, 2. (1) ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರುವುದು ಏಕೆ ತುಂಬ ಪ್ರಾಮುಖ್ಯ? (2) ಪ್ರಾರ್ಥನೆಯ ವಿಷಯದಲ್ಲಿ ಸ್ವಪರೀಕ್ಷೆ ಮಾಡಿಕೊಳ್ಳುವ ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು?

“ರಾತ್ರಿಯಲ್ಲಿ ಎಚ್ಚರವಾಗಿರಲು ತುಂಬ ಕಷ್ಟವಾದ ಹೊತ್ತೆಂದರೆ ಮುಂಜಾವಿಗೆ ಮುಂಚೆ” ಎನ್ನುತ್ತಾರೆ ರಾತ್ರಿಪಾಳಿಯಲ್ಲಿದ್ದ ನೌಕರರೊಬ್ಬರು. ಈ ಮಾತನ್ನು ಕಾರಣಾಂತರದಿಂದ ರಾತ್ರಿಯಿಡೀ ಎಚ್ಚರವಾಗಿರಬೇಕಾದವರು ಕೂಡ ಒಪ್ಪುವರು. ತ್ರದೀತಿ ಎಚ್ಚರವಾಗಿರುವ ಸವಾಲು ಇಂದಿನ ಕ್ರೈಸ್ತರಿಗಿದೆ. ಏಕೆಂದರೆ ಸೈತಾನನ ಈ ದುಷ್ಟ ಲೋಕದ ದೀರ್ಘ ರಾತ್ರಿ ಇನ್ನೇನು ಕೊನೆಗೊಳ್ಳಲಿರುವ ಸಮಯದಲ್ಲಿ ನಾವಿದ್ದೇವೆ. (ರೋಮ. 13:12) ಇಂಥ ಸಮಯದಲ್ಲಿ ನಾವು ನಿದ್ರೆ ಹೋಗುವುದು ಅಪಾಯಕಾರಿ! ಆದ್ದರಿಂದಲೇ ನಾವು “ಸ್ವಸ್ಥಚಿತ್ತ”ರಾಗಿರಬೇಕು ಮತ್ತು ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಬೇಕು.​—1 ಪೇತ್ರ 4:7.

2 ಕಾಲಪ್ರವಾಹದಲ್ಲಿ ನಾವು ಅತಿ ಮಹತ್ವಪೂರ್ಣ ಘಟ್ಟದಲ್ಲಿ ಜೀವಿಸುತ್ತಿರುವುದರಿಂದ ಹೀಗೆ ಕೇಳಿಕೊಳ್ಳುವುದು ವಿವೇಕಯುತ: ‘ಪ್ರಾರ್ಥನೆ ಮಾಡುವ ವಿಷಯದಲ್ಲಿ ನಾನೆಷ್ಟು ಎಚ್ಚರದಿಂದಿದ್ದೇನೆ? ಅಂದರೆ ಪ್ರತಿಯೊಂದು ವಿಧದ ಪ್ರಾರ್ಥನೆಯನ್ನೂ ಮಾಡುತ್ತಿದ್ದೇನಾ? ನಿರಂತರ ಪ್ರಾರ್ಥಿಸುತ್ತೇನಾ? ಇನ್ನೊಬ್ಬರಿಗಾಗಿ ಪ್ರಾರ್ಥಿಸುವ ರೂಢಿ ನನಗಿದೆಯಾ? ಅಥವಾ ಬರೀ ನನಗೆ ಬೇಕಾದದ್ದನ್ನು, ನಾನು ಇಷ್ಟಪಡುವಂಥದ್ದನ್ನು ಮಾತ್ರ ಕೇಳಿಕೊಳ್ಳುತ್ತೇನಾ? ನಾನು ರಕ್ಷಣೆ ಪಡೆಯಲಿಕ್ಕಾಗಿ ಪ್ರಾರ್ಥನೆ ಎಷ್ಟು ಮಹತ್ವದ್ದು?’

ಪ್ರತಿಯೊಂದು ವಿಧದ ಪ್ರಾರ್ಥನೆಯನ್ನು ಮಾಡುತ್ತಾ ಇರಿ

3. ಪ್ರಾರ್ಥನೆಯ ಕೆಲವು ವಿಧಗಳು ಯಾವುವು?

3 ಅಪೊಸ್ತಲ ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ‘ಪ್ರಾರ್ಥನೆಯ ಪ್ರತಿಯೊಂದು ರೂಪದ’ ಅಂದರೆ ವಿಧದ ಕುರಿತು ತಿಳಿಸಿದನು. (ಎಫೆ. 6:18) ಪ್ರಾರ್ಥಿಸುವಾಗ ನಾವು ಹೆಚ್ಚಾಗಿ ನಮ್ಮ ಅಗತ್ಯಗಳನ್ನು ನೀಗಿಸಲು, ಎಡರುತೊಡರುಗಳನ್ನು ಜಯಿಸಲು ಸಹಾಯಮಾಡುವಂತೆ ಯೆಹೋವನಿಗೆ ಬಿನ್ನಹ ಮಾಡುತ್ತೇವೆ. ‘ಪ್ರಾರ್ಥನೆಯನ್ನು ಕೇಳುವವನಾದ’ ಆತನು ನಮ್ಮ ಕೋರಿಕೆಗಳನ್ನು ಅಕ್ಕರೆಯಿಂದ ಲಾಲಿಸುತ್ತಾನೆ. (ಕೀರ್ತ. 65:2) ಆದರೆ ನಾವು ಬಿನ್ನಹಗಳನ್ನು ಮಾತ್ರವಲ್ಲ ಇನ್ನಿತರ ವಿಧದ ಪ್ರಾರ್ಥನೆಗಳನ್ನೂ ಮಾಡಬೇಕು. ಅವು ಯಾವುವೆಂದರೆ ಸ್ತುತಿ, ಕೃತಜ್ಞತಾಸ್ತುತಿ, ಯಾಚನೆ.

4. ಆಗಾಗ್ಗೆ ನಾವು ಪ್ರಾರ್ಥನೆ ಮೂಲಕ ಯೆಹೋವನನ್ನು ಸ್ತುತಿಸಬೇಕು ಏಕೆ?

4 ಪ್ರಾರ್ಥನೆಗಳಲ್ಲಿ ಯೆಹೋವನನ್ನು ಸ್ತುತಿಸಲು ನಮಗೆ ಅನೇಕ ಕಾರಣಗಳಿವೆ. ಆತನನ್ನು ಸ್ತುತಿಸಲು ನಮ್ಮನ್ನು ಪ್ರಚೋದಿಸುವ ಒಂದು ವಿಷಯ ಆತನು ಮಾಡಿರುವ ‘ಮಹತ್ಕಾರ್ಯಗಳು’ ಮತ್ತು ‘ಆತನ ಮಹಾಪ್ರಭಾವ.’ (ಕೀರ್ತನೆ 150:1-6 ಓದಿ.) ಗಮನಿಸಿ, ಈ 150ನೇ ಕೀರ್ತನೆಯಲ್ಲಿ ಬರೀ ಆರು ವಚನಗಳಿದ್ದರೂ ಯೆಹೋವನನ್ನು ಸ್ತುತಿಸುವಂತೆ ಅಥವಾ ಸ್ತೋತ್ರ ಸಲ್ಲಿಸುವಂತೆ 13 ಬಾರಿ ಹೇಳಲಾಗಿದೆ! “ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ” ಎಂದು ಪೂಜ್ಯಭಾವದಿಂದ ಇನ್ನೊಬ್ಬ ಕೀರ್ತನೆಗಾರ ಹಾಡಿದನು. (ಕೀರ್ತ. 119:164) ಯೆಹೋವನು ಖಂಡಿತ ಸ್ತುತಿಗೆ ಅರ್ಹನು. ಆದ್ದರಿಂದ “ದಿನಕ್ಕೆ ಏಳು ಸಾರಿ” ಅಂದರೆ ಆಗಾಗ್ಗೆ ನಮ್ಮ ಪ್ರಾರ್ಥನೆ ಮೂಲಕ ಯೆಹೋವನನ್ನು ಸ್ತುತಿಸಬೇಕಲ್ಲವೇ?

5. ಪ್ರಾರ್ಥನೆಯಲ್ಲಿ ಕೃತಜ್ಞತೆಯನ್ನು ಸಲ್ಲಿಸುವುದು ಹೇಗೆ ಸಂರಕ್ಷಣೆಯಾಗಿದೆ?

5 ಪ್ರಾರ್ಥನೆಯ ಇನ್ನೊಂದು ಮುಖ್ಯ ವಿಧ ಕೃತಜ್ಞತಾಸ್ತುತಿ. ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಪೌಲ ಹೀಗೆ ಉತ್ತೇಜಿಸಿದನು: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” (ಫಿಲಿ. 4:6) ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೃತ್ಪೂರ್ವಕವಾಗಿ ಕೃತಜ್ಞತೆ ಹೇಳುವುದು ನಮಗೆ ಸಂರಕ್ಷಣೆಯಾಗಿದೆ. ಹೇಗೆ? ‘ಕೃತಜ್ಞತೆಯಿಲ್ಲದ’ ಜನರೇ ಎಲ್ಲೆಡೆಯಿರುವ ಕಡೇ ದಿವಸಗಳಲ್ಲಿ ನಾವು ಜೀವಿಸುತ್ತಿದ್ದೇವೆ. (2 ತಿಮೊ. 3:1, 2) ಕೃತಘ್ನ ಮನೋಭಾವ ಇಡೀ ಜಗತ್ತಿನಲ್ಲಿ ಮೆರೆಯುತ್ತಿದೆ. ನಾವು ಜಾಗ್ರತೆ ವಹಿಸದಿದ್ದರೆ ಅಂಥ ಮನೋಭಾವ ನಮಗೂ ಸುಲಭವಾಗಿ ಸೋಂಕಬಹುದು. ಪ್ರಾರ್ಥನೆಯಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸುವುದು ನಾವು ಇದ್ದದರಲ್ಲೇ ಸಂತೃಪ್ತರಾಗಿರುವಂತೆ ಮಾಡುತ್ತದೆ. ‘ಗುಣುಗುಟ್ಟುವವರೂ ನಮ್ಮ ಜೀವನದ ಗತಿಯ ಕುರಿತು ದೂರುವವರೂ’ ಆಗದಂತೆ ತಡೆಯುತ್ತದೆ. (ಯೂದ 16) ಮಾತ್ರವಲ್ಲ ಕುಟುಂಬದ ತಲೆಯು ಪ್ರಾರ್ಥನೆಯಲ್ಲಿ ಕೃತಜ್ಞತಾಸ್ತುತಿ ಸಲ್ಲಿಸುವಾಗ ಹೆಂಡತಿ ಮಕ್ಕಳು ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಲು ಅವನು ನೆರವಾಗುತ್ತಾನೆ.

6, 7. (1) ಯಾಚನೆ ಅಂದರೇನು? (2) ಯಾವ ವಿಷಯಗಳ ಬಗ್ಗೆ ನಾವು ಯೆಹೋವನಿಗೆ ಯಾಚನೆ ಮಾಡಬಹುದು?

6 ಯಾಚನೆ ಅಂದರೆ ಅಂತರಂಗದ ಭಾವನೆಗಳಿಂದ ಕೂಡಿದ ಶ್ರದ್ಧಾಪೂರ್ವಕ ಪ್ರಾರ್ಥನೆಯಾಗಿದೆ. ಯಾವುದರ ಬಗ್ಗೆ ನಾವು ಯೆಹೋವನಿಗೆ ಯಾಚನೆ ಮಾಡಬಹುದು? ಹಿಂಸೆ ಅನುಭವಿಸುತ್ತಿರುವಾಗ ಅಥವಾ ಜೀವಕಂಟಕ ಕಾಯಿಲೆಗೆ ತುತ್ತಾದಾಗ ನಾವು ಹಾಗೆ ಪ್ರಾರ್ಥಿಸಬಹುದು. ಅಂಥ ಸಮಯಗಳಲ್ಲಿ ನಾವು ಮಾಡುವ ಪ್ರಾರ್ಥನೆಗಳು ಸಹಜವಾಗಿಯೇ ಯಾಚನೆಗಳಾಗಿರುತ್ತವೆ ಅಂದರೆ ಉತ್ಕಟ ಭಾವನೆಗಳಿಂದ ಕೂಡಿರುತ್ತವೆ. ಆದರೆ ಆಗ ಮಾತ್ರ ಯಾಚನೆ ಮಾಡಬೇಕೊ?

7 ಯೇಸುವಿನ ಮಾದರಿ ಪ್ರಾರ್ಥನೆಯನ್ನು ತಕ್ಕೊಳ್ಳಿ. ದೇವರ ನಾಮ, ಆತನ ರಾಜ್ಯ, ಆತನ ಚಿತ್ತದ ಕುರಿತು ಯೇಸು ಏನು ಹೇಳಿದನೆಂದು ಗಮನಿಸಿ. (ಮತ್ತಾಯ 6:9, 10 ಓದಿ.) ಈ ಲೋಕವು ದುಷ್ಟತನದಲ್ಲಿ ಪೂರ್ತಿ ಮುಳುಗಿದೆ. ಮಾನವ ಸರ್ಕಾರಗಳು ಪ್ರಜೆಗಳ ಮೂಲಭೂತ ಅಗತ್ಯಗಳನ್ನು ಪೂರೈಸುವುದರಲ್ಲೂ ಸೋತಿವೆ. ಆದ್ದರಿಂದ ನಮ್ಮ ತಂದೆಯಾದ ಯೆಹೋವನ ನಾಮ ಪವಿತ್ರವಾಗುವಂತೆ ಮತ್ತು ಆತನ ರಾಜ್ಯವು ಈ ಭೂಮಿಯಿಂದ ಸೈತಾನನ ಆಳ್ವಿಕೆಯನ್ನು ತೊಲಗಿಸುವಂತೆ ನಾವು ಪ್ರಾರ್ಥಿಸಬೇಕು. ಸ್ವರ್ಗದಲ್ಲಿ ಆತನ ಚಿತ್ತ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರುವಂತೆ ಯಾಚನೆ ಮಾಡಬೇಕಾದ ಸಮಯವೂ ಇದಾಗಿದೆ. ಆದ್ದರಿಂದ ನಾವು ಸದಾ ಪ್ರತಿಯೊಂದು ವಿಧದ ಪ್ರಾರ್ಥನೆಯನ್ನು ಮಾಡುವ ವಿಷಯದಲ್ಲಿ ಎಚ್ಚರವಾಗಿರೋಣ.

“ಪ್ರಾರ್ಥಿಸುತ್ತಾ ಇರಿ”

8, 9. ಗೆತ್ಸೇಮನೆ ತೋಟದಲ್ಲಿ ಪೇತ್ರ ಮತ್ತು ಇನ್ನಿತರ ಅಪೊಸ್ತಲರು ನಿದ್ರೆಹೋದದ್ದನ್ನು ನಾವೇಕೆ ಕಟುವಾಗಿ ಟೀಕಿಸಬಾರದು?

8 ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರುವಂತೆ ಕ್ರೈಸ್ತರನ್ನು ಉತ್ತೇಜಿಸಿದ ಅಪೊಸ್ತಲ ಪೇತ್ರನೇ ಹಿಂದೆ ಕಡಿಮೆಪಕ್ಷ ಒಂದು ಸಂದರ್ಭದಲ್ಲಿ ಹಾಗೆ ಮಾಡಲು ತಪ್ಪಿಹೋದ. ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸುತ್ತಿದ್ದಾಗ ನಿದ್ದೆಹೋದ ಶಿಷ್ಯರಲ್ಲಿ ಪೇತ್ರನೂ ಒಬ್ಬ. “ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ” ಎಂದು ಯೇಸು ಹೇಳಿದ ಮೇಲೂ ಆ ಶಿಷ್ಯರು ನಿದ್ರೆ ಹೋದರು.​—ಮತ್ತಾಯ 26:40-45 ಓದಿ.

9 ‘ಅವರಿಗೆ ಇಂಥ ಸಮಯದಲ್ಲೂ ಎಚ್ಚರವಾಗಿರಲಿಕ್ಕೆ ಆಗಲಿಲ್ಲವಾ?’ ಎಂದು ಕಟುವಾಗಿ ಟೀಕಿಸದಿರೋಣ. ಆ ದಿನ ಅವರು ಏನೆಲ್ಲ ಮಾಡಿದ್ದರೆಂದು ನೆನಪಿಸಿಕೊಂಡರೆ ಅವರು ಎಷ್ಟು ದಣಿದಿದ್ದರೆಂದು ಗೊತ್ತಾಗುತ್ತದೆ. ಪಸ್ಕಹಬ್ಬಕ್ಕಾಗಿ ಸಿದ್ಧತೆಗಳನ್ನು ಮಾಡಿದ್ದರು. ಸಂಜೆ ಪಸ್ಕ ಆಚರಿಸಿದ್ದರು. ಆಮೇಲೆ ಯೇಸು ಕರ್ತನ ಸಂಧ್ಯಾ ಭೋಜನವನ್ನು ಆಚರಿಸಿ, ಮುಂದಕ್ಕೆ ತನ್ನ ಮರಣದ ಸ್ಮರಣೆಯನ್ನು ಆಚರಿಸುವುದರ ಕುರಿತು ಅವರಿಗೆ ನಿರ್ದೇಶನಗಳನ್ನು ಕೊಟ್ಟನು. (1 ಕೊರಿಂ. 11:23-25) “ಬಳಿಕ ಅವರು ಸ್ತುತಿಗೀತೆಗಳನ್ನು ಹಾಡಿ ಆಲೀವ್‌ ಮರಗಳ ಗುಡ್ಡಕ್ಕೆ ಹೋದರು.” ಯೆರೂಸಲೇಮಿನ ಕಿರಿದಾದ ಬೀದಿಗಳ ಮುಖಾಂತರ ಅವರು ನಡೆದುಕೊಂಡೇ ಆ ಗುಡ್ಡಕ್ಕೆ ಬಂದಿದ್ದರು. (ಮತ್ತಾ. 26:30, 36) ಅಷ್ಟರಲ್ಲಿ ಮಧ್ಯ ರಾತ್ರಿ ಕಳೆದಿರಬಹುದು. ಒಂದುವೇಳೆ ನಾವು ಆ ರಾತ್ರಿ ಗೆತ್ಸೇಮನೆ ತೋಟದಲ್ಲಿರುತ್ತಿದ್ದರೆ ನಾವೂ ನಿದ್ರೆಗೆ ಜಾರುತ್ತಿದ್ದೆವು. ಯೇಸುವಾದರೊ ದಣಿದಿದ್ದ ಆ ಅಪೊಸ್ತಲರನ್ನು ಟೀಕಿಸಲಿಲ್ಲ. ಬದಲಿಗೆ ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾ “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಪ್ರೀತಿಯಿಂದ ಹೇಳಿದನು.

10, 11. (1) ಗೆತ್ಸೇಮನೆ ತೋಟದಲ್ಲಿ ತಾನು ಎಚ್ಚರವಾಗಿರಲು ತಪ್ಪಿದ ಸಂಗತಿಯಿಂದ ಪೇತ್ರ ಯಾವ ಪಾಠ ಕಲಿತನು? (2) ಪೇತ್ರನ ಅನುಭವದಿಂದ ನೀವೇನು ಕಲಿತಿರಿ?

10 ಗೆತ್ಸೇಮನೆ ತೋಟದಲ್ಲಿ ತಾನು ಎಚ್ಚರವಾಗಿರಲು ತಪ್ಪಿದ್ದ ಆ ಘಟನೆಯಿಂದ ಪೇತ್ರ ಬಹು ಪ್ರಾಮುಖ್ಯ ಪಾಠವೊಂದನ್ನು ದುಃಖಕರ ವಿಧದಲ್ಲಿ ಕಲಿತನು. ಇದಕ್ಕಿಂತಲೂ ಮುಂಚೆ ಯೇಸು “ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಎಡವಲ್ಪಡುವಿರಿ” ಎಂದು ಹೇಳಿದ್ದನು. ಅದಕ್ಕೆ ಪೇತ್ರನು “ನಿನ್ನ ವಿಷಯದಲ್ಲಿ ಬೇರೆಲ್ಲರೂ ಎಡವಿದರೂ ನಾನು ಎಂದಿಗೂ ಎಡವುವುದಿಲ್ಲ” ಎಂದು ಉದ್ಗರಿಸಿದ್ದನು. ಆಗ ಯೇಸು, ತನ್ನನ್ನು ಪೇತ್ರನು ಮೂರು ಸಲ ಅಲ್ಲಗಳೆಯುವನೆಂದು ಹೇಳಿದನು. ಪೇತ್ರ ಇದನ್ನು ಒಪ್ಪಲು ಸಿದ್ಧನಿರಲಿಲ್ಲ. “ನಾನು ನಿನ್ನೊಂದಿಗೆ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವುದಿಲ್ಲ” ಎಂದು ಘಂಟಾಘೋಷವಾಗಿ ಹೇಳಿದನು. (ಮತ್ತಾ. 26:31-35) ಆದರೂ ಯೇಸು ಮುಂತಿಳಿಸಿದಂತೆಯೇ ಆಯಿತು. ಪೇತ್ರ ಎಡವಿದನು. ಮೂರನೇ ಬಾರಿ ಯೇಸುವನ್ನು ಅಲ್ಲಗಳೆದಾಗ ತನ್ನ ತಪ್ಪಿನ ಅರಿವಾಗಿ “ಬಹಳವಾಗಿ ಅತ್ತನು.”​—ಲೂಕ 22:60-62.

11 ಅತಿಯಾದ ಆತ್ಮವಿಶ್ವಾಸ ಅನುಚಿತ ಎಂಬ ಪಾಠವನ್ನು ಪೇತ್ರ ಈ ಅನುಭವದಿಂದ ಕಲಿತನು. ಆ ಬಲಹೀನತೆಯನ್ನು ಜಯಿಸಲು ಅವನಿಗೆ ಸಹಾಯಮಾಡಿದ್ದು ಪ್ರಾರ್ಥನೆಯೇ. ನಮಗದು ಹೇಗೆ ಗೊತ್ತಾಗುತ್ತದೆ? ಹೇಗೆಂದರೆ “ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ” ಎಂಬ ಸಲಹೆ ಕೊಟ್ಟದ್ದು ಅವನೇ. ಆ ದೇವಪ್ರೇರಿತ ಸಲಹೆಯನ್ನು ನಾವು ಪಾಲಿಸುತ್ತಿದ್ದೇವೊ? ‘ಪ್ರಾರ್ಥಿಸುತ್ತಾ ಇರುವ’ ಮೂಲಕ ನಾವು ಸ್ವತಃ ನಮ್ಮ ಮೇಲಲ್ಲ ಯೆಹೋವನ ಮೇಲೆ ಅವಲಂಬಿಸಿದ್ದೇವೆಂದು ತೋರಿಸುತ್ತಿದ್ದೇವೊ? ಅಪೊಸ್ತಲ ಪೌಲ ಕೊಟ್ಟ ಈ ಎಚ್ಚರಿಕೆಯನ್ನು ಸಹ ನಾವೆಂದೂ ಮರೆಯದಿರೋಣ: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ.”​—1 ಕೊರಿಂ. 10:12.

ನೆಹೆಮೀಯನ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿತು

12. ನೆಹೆಮೀಯನು ನಮಗೇಕೆ ಉತ್ತಮ ಮಾದರಿಯಾಗಿದ್ದಾನೆ?

12 ಕ್ರಿ.ಪೂ. 5ನೇ ಶತಮಾನದಲ್ಲಿ ಪಾರಸಿಯ ರಾಜ ಅರ್ತಷಸ್ತನ ಪಾನದಾಯಕನಾಗಿದ್ದ ನೆಹೆಮೀಯನನ್ನು ಪರಿಗಣಿಸಿ. ಕಟ್ಟಾಸಕ್ತಿಯಿಂದ ಪ್ರಾರ್ಥಿಸುವ ವಿಷಯದಲ್ಲಿ ಅವನು ಒಳ್ಳೇ ಮಾದರಿ. ಯೆರೂಸಲೇಮಿನಲ್ಲಿ ಯೆಹೂದ್ಯರಿಗಿದ್ದ ಕಷ್ಟವನ್ನು ನೆನೆದು ಅವನು ಕೆಲವು ದಿನಗಳ ವರೆಗೆ ಉಪವಾಸವಿದ್ದು ನಿರಂತರ ಪ್ರಾರ್ಥಿಸುತ್ತಾ ಇದ್ದ. (ನೆಹೆ. 1:4) ಒಮ್ಮೆ ಅರ್ತಷಸ್ತನು ನೆಹೆಮೀಯನ ಮುಖ ಬಾಡಿರುವುದನ್ನು ಕಂಡು ವಿಚಾರಿಸಿದಾಗ ಅವನು ಕೂಡಲೆ ‘ಪರಲೋಕದ ದೇವರನ್ನು ಪ್ರಾರ್ಥಿಸಿದನು.’ (ನೆಹೆ. 2:2-4) ಮುಂದೇನಾಯಿತು? ಯೆಹೋವನು ಮುಂದಿನ ಎಲ್ಲ ವಿಷಯಗಳನ್ನು ತನ್ನ ಜನರಿಗೆ ಪ್ರಯೋಜನವಾಗುವಂಥ ರೀತಿಯಲ್ಲಿ ನಡೆಸಿದನು. ಹೀಗೆ ನೆಹೆಮೀಯನ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟನು. (ನೆಹೆ. 2:5, 6) ಇದರಿಂದ ನೆಹೆಮೀಯನ ನಂಬಿಕೆ ಖಂಡಿತ ಬಲಗೊಂಡಿರಬೇಕು!

13, 14. ನಾವು ನಂಬಿಕೆಯನ್ನು ಬಲವಾಗಿ ಇರಿಸಿಕೊಳ್ಳಲಿಕ್ಕಾಗಿ ಮತ್ತು ಸೈತಾನನು ನಮ್ಮನ್ನು ನಿರುತ್ಸಾಹಗೊಳಿಸಲು ಮಾಡುವ ಪ್ರಯತ್ನಗಳನ್ನು ಪ್ರತಿರೋಧಿಸಲಿಕ್ಕಾಗಿ ಏನು ಮಾಡಬೇಕು?

13 ನೆಹೆಮೀಯನಂತೆ ನಾವೂ ನಿರಂತರ ಪ್ರಾರ್ಥಿಸುತ್ತಾ ಇದ್ದರೆ ನಮ್ಮ ನಂಬಿಕೆಯನ್ನು ಬಲವಾಗಿ ಇರಿಸಿಕೊಳ್ಳಬಲ್ಲೆವು. ಸೈತಾನನು ಹೆಚ್ಚಾಗಿ ನಮ್ಮ ಮೇಲೆ ಆಕ್ರಮಣಮಾಡುವುದು ನಾವು ಬಲಹೀನರಾಗಿರುವಾಗಲೇ. ಅಷ್ಟು ಕ್ರೂರಿ ಅವನು! ಉದಾಹರಣೆಗೆ, ನಾವು ಕಾಯಿಲೆ ಅಥವಾ ಖಿನ್ನತೆಯಿಂದ ಬಳಲುತ್ತಿರಬಹುದು. ಅಂಥ ಸಮಯದಲ್ಲಿ ದೇವರ ಸೇವೆಯಲ್ಲಿ ಪ್ರತಿ ತಿಂಗಳು ನಾವೇನು ಮಾಡುತ್ತೇವೊ ಅದು ದೇವರ ಎಣಿಕೆಯಲ್ಲಿ ನಗಣ್ಯ ಎಂದನಿಸಬಹುದು. ನಮ್ಮಲ್ಲಿ ಇನ್ನು ಕೆಲವರು ಜೀವನದಲ್ಲಿ ಹಿಂದೆ ನಡೆದ ಕಹಿ ಘಟನೆಗಳು ಮತ್ತೆ ಮತ್ತೆ ನೆನಪಾಗುವುದರಿಂದ ಎದೆಗುಂದಿ ಹೋಗುತ್ತಿರಬಹುದು. ಆಗ ನಾವು ಅಯೋಗ್ಯರು, ಲೆಕ್ಕಕ್ಕೆ ಬಾರದವರೆಂದು ನೆನಸುವಂತೆ ಸೈತಾನನು ಮಾಡುತ್ತಾನೆ. ಅವನು ಹೆಚ್ಚಾಗಿ ಗುರಿಯಿಡುವುದು ನಮ್ಮ ಭಾವನೆಗಳಿಗೆ. ಆ ಮೂಲಕ ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುತ್ತಾನೆ. ಆದರೆ ನಾವು ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿದ್ದರೆ ನಮ್ಮ ನಂಬಿಕೆಯನ್ನು ಬಲಗೊಳಿಸಲು ಶಕ್ತರಾಗುವೆವು. ‘ನಂಬಿಕೆಯೆಂಬ ದೊಡ್ಡ ಗುರಾಣಿಯು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು ನಮ್ಮನ್ನು ಶಕ್ತಗೊಳಿಸುವುದು.’​—ಎಫೆ. 6:16.

14 ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿದ್ದರೆ ಅನಿರೀಕ್ಷಿತವಾಗಿ ನಂಬಿಕೆಯ ಪರೀಕ್ಷೆಗಳು ಬಂದೆರಗುವಾಗ ನಾವು ಕಕ್ಕಾಬಿಕ್ಕಿಯಾಗಿ ರಾಜಿಮಾಡಿಕೊಳ್ಳುವುದಿಲ್ಲ. ಕಷ್ಟಪರೀಕ್ಷೆಗಳನ್ನು ಎದುರಿಸುವಾಗ ನಾವು ನೆಹೆಮೀಯನ ಮಾದರಿಯನ್ನು ನೆನಪು ಮಾಡಿಕೊಂಡು ಕೂಡಲೆ ದೇವರಿಗೆ ಪ್ರಾರ್ಥಿಸೋಣ. ಯೆಹೋವನ ಸಹಾಯವಿದ್ದರೆ ಮಾತ್ರ ನಾವು ಪ್ರಲೋಭನೆಗಳನ್ನು ಎದುರಿಸಬಲ್ಲೆವು ಮತ್ತು ನಂಬಿಕೆಯ ಪರೀಕ್ಷೆಗಳನ್ನು ಸಹಿಸಿಕೊಳ್ಳಲು ಶಕ್ತರಾಗುವೆವು.

ಇತರರಿಗೋಸ್ಕರ ಪ್ರಾರ್ಥಿಸಿರಿ

15. ಇತರರಿಗೋಸ್ಕರ ಪ್ರಾರ್ಥಿಸುವ ವಿಷಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

15 ಪೇತ್ರನ ನಂಬಿಕೆ ಮುರಿದುಬೀಳದಿರಲಿಕ್ಕಾಗಿ ಅವನಿಗೋಸ್ಕರ ಯೇಸು ಯಾಚನೆ ಮಾಡಿದನು. (ಲೂಕ 22:32) ಒಂದನೇ ಶತಮಾನದಲ್ಲಿದ್ದ ನಂಬಿಗಸ್ತ ಕ್ರೈಸ್ತನಾದ ಎಪಫ್ರನು ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ಕೊಲೊಸ್ಸೆಯಲ್ಲಿದ್ದ ತನ್ನ ಸಹೋದರರಿಗಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದನು. “ನೀವು ಪರಿಪೂರ್ಣರಾಗಿ ನಿಂತು ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿರಬೇಕೆಂದು ಇವನು [ಎಪಫ್ರನು] ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆಗಳಲ್ಲಿ ಯಾವಾಗಲೂ ಹೋರಾಡುತ್ತಾನೆ” ಎಂದು ಪೌಲನು ಬರೆದನು. (ಕೊಲೊ. 4:12, ಪವಿತ್ರ ಗ್ರಂಥ ಭಾಷಾಂತರ) ನಾವು ಹೀಗೆ ಕೇಳಿಕೊಳ್ಳೋಣ: ‘ನಾನು ಲೋಕದಲ್ಲೆಲ್ಲಾ ಇರುವ ನನ್ನ ಸಹೋದರರಿಗಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತೇನೊ? ನೈಸರ್ಗಿಕ ವಿಪತ್ತಿನಿಂದಾಗಿ ಕಷ್ಟದಲ್ಲಿರುವ ಜೊತೆ ವಿಶ್ವಾಸಿಗಳಿಗೋಸ್ಕರ ಬೇಡುತ್ತೇನೊ? ಯೆಹೋವನ ಸಂಘಟನೆಯಲ್ಲಿ ಭಾರೀ ಜವಾಬ್ದಾರಿಗಳನ್ನು ಹೊತ್ತಿರುವ ಸಹೋದರರಿಗೋಸ್ಕರ ನಾನು ಪ್ರಾರ್ಥಿಸಿ ಎಷ್ಟು ಸಮಯವಾಯಿತು? ನನ್ನ ಸಭೆಯಲ್ಲಿ ಕಷ್ಟದಲ್ಲಿರುವ ಸಹೋದರ ಅಥವಾ ಸಹೋದರಿಗಾಗಿ ಇತ್ತೀಚಿಗೆ ಪ್ರಾರ್ಥಿಸಿದ್ದೇನೊ?’

16. ನಾವು ಜೊತೆ ಕ್ರೈಸ್ತರಿಗೋಸ್ಕರ ಪ್ರಾರ್ಥಿಸುವುದು ನಿಜಕ್ಕೂ ಪ್ರಾಮುಖ್ಯವೇ? ವಿವರಿಸಿ.

16 ಇತರರಿಗಾಗಿ ನಾವು ಮಾಡುವ ಪ್ರಾರ್ಥನೆಗಳಿಂದ ಖಂಡಿತ ಅವರಿಗೆ ಸಹಾಯವಾಗುತ್ತದೆ. (2 ಕೊರಿಂಥ 1:11 ಓದಿ.) ತನ್ನ ಆರಾಧಕರಲ್ಲಿ ಬಹುಮಂದಿ ಒಂದು ವಿಷಯದ ಬಗ್ಗೆಯೇ ಪದೇ ಪದೇ ಪ್ರಾರ್ಥಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅದನ್ನು ನಡೆಸಿಕೊಡಲು ಯೆಹೋವನಿಗೆ ಯಾವ ಹಂಗೂ ಇಲ್ಲ. ಹಾಗಿದ್ದರೂ ತನ್ನ ಆರಾಧಕರಿಗೆ ಪರಸ್ಪರರ ಬಗ್ಗೆಯಿರುವ ಆಳವಾದ, ನಿಜವಾದ ಚಿಂತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾ ಅವರ ಒಮ್ಮನಸ್ಸಿನ ಪ್ರಾರ್ಥನೆಗಳಿಗೆ ಆತನು ಉತ್ತರ ಕೊಡುತ್ತಾನೆ. ಆದ್ದರಿಂದ ಇತರರಿಗೋಸ್ಕರ ಪ್ರಾರ್ಥಿಸುವ ಸುಯೋಗವನ್ನು ಮತ್ತು ಜವಾಬ್ದಾರಿಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಪಫ್ರನಂತೆ ನಾವು ನಮ್ಮ ಕ್ರೈಸ್ತ ಸಹೋದರ ಸಹೋದರಿಯರಿಗಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುವ ಮೂಲಕ ಅವರ ಮೇಲೆ ನಮಗಿರುವ ಹೃತ್ಪೂರ್ವಕ ಪ್ರೀತಿ, ಕಳಕಳಿಯನ್ನು ತೋರಿಸಬೇಕು. ಇದು ನಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಏಕೆಂದರೆ “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”​—ಅ. ಕಾ. 20:35.

‘ನಮ್ಮ ರಕ್ಷಣೆಯು ಹತ್ತಿರವಾಗಿದೆ’

17, 18. ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರದಿಂದ ಉಳಿಯುವುದು ನಮಗೆ ಹೇಗೆ ಸಹಾಯ ಮಾಡುತ್ತದೆ?

17 “ರಾತ್ರಿಯು ಬಹಳ ಮಟ್ಟಿಗೆ ಕಳೆದಿದೆ, ಹಗಲು ಹತ್ತಿರವಾಗಿದೆ” ಎಂದು ಹೇಳುವುದಕ್ಕೆ ತುಸು ಮುಂಚೆ ಪೌಲನು “ನೀವು ಜೀವಿಸುತ್ತಿರುವ ಕಾಲದ ಕುರಿತು ನಿಮಗೆ ತಿಳಿದಿರುವುದರಿಂದಲೂ ಇದನ್ನು ಮಾಡಿರಿ; ನಿದ್ರೆಯಿಂದ ಎಚ್ಚತ್ತುಕೊಳ್ಳುವ ಗಳಿಗೆಯು ಈಗಲೇ ಬಂದಿರುತ್ತದೆ. ಏಕೆಂದರೆ ನಮ್ಮ ರಕ್ಷಣೆಯು ನಾವು ವಿಶ್ವಾಸಿಗಳಾದಾಗಿನ ಸಮಯಕ್ಕಿಂತ ಈಗ ಹೆಚ್ಚು ಹತ್ತಿರವಾಗಿದೆ” ಎಂದು ಬರೆದನು. (ರೋಮ. 13:11, 12) ದೇವರು ವಾಗ್ದಾನಿಸಿರುವ ಹೊಸ ಲೋಕ ಸಮೀಪವಿದೆ. ನಮ್ಮ ರಕ್ಷಣೆಯು ನಾವೆಣಿಸುವುದಕ್ಕಿಂತ ಹೆಚ್ಚು ಹತ್ತಿರದಲ್ಲಿದೆ. ಆದ್ದರಿಂದ ನಾವು ಆಧ್ಯಾತ್ಮಿಕವಾಗಿ ನಿದ್ರೆ ಹೋಗಬಾರದು. ನಾವು ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಏಕಾಂತವಾಗಿ ಕಳೆಯಬೇಕಾದ ಸಮಯವನ್ನು ಈ ಲೋಕದ ಅಪಕರ್ಷಣೆಗಳು ಕಸಿದುಕೊಳ್ಳುವಂತೆ ಎಂದಿಗೂ ಬಿಡಬಾರದು. ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರೋಣ. ಇದು, ಯೆಹೋವನ ದಿನಕ್ಕಾಗಿ ನಾವು ಕಾಯುತ್ತಾ ಇರುವಾಗ ‘ಪವಿತ್ರ ನಡತೆಯುಳ್ಳವರಾಗಿರಲು, ದೇವಭಕ್ತಿಯ ಕ್ರಿಯೆಗಳನ್ನು’ ಮಾಡುತ್ತಿರಲು ಸಹಾಯ ಮಾಡುವುದು. (2 ಪೇತ್ರ 3:11, 12) ಹೀಗೆ ನಮ್ಮ ಜೀವನರೀತಿಯು ಆಧ್ಯಾತ್ಮಿಕವಾಗಿ ನಾವು ಎಚ್ಚರವಾಗಿದ್ದೇವೆ ಮತ್ತು ಈ ದುಷ್ಟ ವ್ಯವಸ್ಥೆಯ ಅಂತ್ಯವು ತುಂಬ ಹತ್ತಿರವಿದೆ ಎಂಬುದನ್ನು ನಿಜವಾಗಿಯೂ ನಂಬುತ್ತೇವೆ ಎಂದು ತೋರಿಸಿಕೊಡುವುದು. ಆದ್ದರಿಂದ ನಾವು “ಎಡೆಬಿಡದೆ ಪ್ರಾರ್ಥನೆ” ಮಾಡುತ್ತಿರೋಣ. (1 ಥೆಸ. 5:17) ಯೇಸುವಿನಂತೆ ನಾವು ಕೂಡ ವೈಯಕ್ತಿಕ ಪ್ರಾರ್ಥನೆಗಾಗಿ ಏಕಾಂತತೆಯನ್ನು ಹುಡುಕೋಣ. ಪ್ರಾರ್ಥನೆಯನ್ನು ಅವಸರ ಅವಸರವಾಗಿ ಮಾಡಿ ಮುಗಿಸದೆ ಸಾವಧಾನದಿಂದ ಮಾಡಿದರೆ ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗುವೆವು. (ಯಾಕೋ. 4:7, 8) ಯೆಹೋವನಿಗೆ ಆಪ್ತರಾಗುವುದು ಎಂಥ ಒಂದು ದೊಡ್ಡ ಆಶೀರ್ವಾದ!

18 “ಕ್ರಿಸ್ತನು ಮನುಷ್ಯನಾಗಿದ್ದ ದಿನಗಳಲ್ಲಿ ತನ್ನನ್ನು ಮರಣದಿಂದ ಕಾಪಾಡಲು ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಯಾಚನೆಗಳನ್ನೂ ಬಿನ್ನಹಗಳನ್ನೂ ಸಲ್ಲಿಸಿದನು ಮತ್ತು ಅವನ ದೇವಭಯದ ನಿಮಿತ್ತ ಅನುಗ್ರಹಪೂರ್ವಕವಾಗಿ ಕೇಳಲ್ಪಟ್ಟನು” ಎನ್ನುತ್ತದೆ ಬೈಬಲ್‌. (ಇಬ್ರಿ. 5:7) ಯೇಸು ಯಾಚನೆಗಳನ್ನೂ ಬಿನ್ನಹಗಳನ್ನೂ ಮಾಡಿದನು ಮತ್ತು ತನ್ನ ಭೂಜೀವನದ ಕೊನೇ ಗಳಿಗೆಯ ವರೆಗೂ ನಂಬಿಗಸ್ತನಾಗಿ ಉಳಿದನು. ಪರಿಣಾಮವಾಗಿ ಯೆಹೋವನು ತನ್ನ ಪ್ರಿಯ ಕುಮಾರನನ್ನು ಮರಣದ ಮುಷ್ಟಿಯಿಂದ ಬಿಡಿಸಿ ಸ್ವರ್ಗದಲ್ಲಿ ಅಮರ ಜೀವನವನ್ನು ಬಹುಮಾನವಾಗಿ ಕೊಟ್ಟನು. ನಾವು ಸಹ ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರದಿಂದ ಉಳಿದರೆ ಬಾಳಹಾದಿಯಲ್ಲಿ ಮುಂದೆ ಯಾವುದೇ ಪ್ರಲೋಭನೆ, ಕಷ್ಟಪರೀಕ್ಷೆಗಳು ಬಂದರೂ ನಮ್ಮ ತಂದೆಯಾದ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವೆವು. ಮಾತ್ರವಲ್ಲ ಮುಂದೆ ಶಾಶ್ವತವಾಗಿ ಜೀವಿಸುವ ಬಹುಮಾನವನ್ನು ಪಡೆಯುವೆವು.