ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ

ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ

“ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.”​—1 ಪೇತ್ರ 2:21.

1, 2. (1) ಕುರುಬನು ಕುರಿಗಳ ವಿಷಯದಲ್ಲಿ ಚಿಂತೆ, ಕಾಳಜಿ ವಹಿಸಿದರೆ ಮಂದೆ ಹೇಗಿರುತ್ತದೆ? (2) ಯೇಸುವಿನ ದಿನಗಳಲ್ಲಿ ಅನೇಕ ಜನರು ಏಕೆ ಕುರುಬನಿಲ್ಲದ ಕುರಿಗಳಂತಿದ್ದರು?

ಒಬ್ಬ ಕುರುಬನು ತನ್ನ ಮಂದೆಯ ಕ್ಷೇಮದ ಬಗ್ಗೆ ತುಂಬ ಕಾಳಜಿ ವಹಿಸಿದಾಗ ಕುರಿಗಳು ದಷ್ಟಪುಷ್ಟವಾಗಿ ಬೆಳೆದು ಆರೋಗ್ಯದಿಂದಿರುತ್ತವೆ. ಕುರಿಪಾಲನೆಯ ಕುರಿತ ಒಂದು ಕೈಪಿಡಿ ಹೇಳುವುದು: “ಒಬ್ಬ ಕುರುಬ ಮಂದೆಯನ್ನು ಹುಲ್ಲುಗಾವಲಿಗೆ ಕರಕೊಂಡು ಹೋಗಿ ಸುಮ್ಮನೆ ಹಾಗೇ ಬಿಟ್ಟುಬಿಟ್ಟು ಅದಕ್ಕೇನೂ ಗಮನ, ಕಾಳಜಿ ತೋರಿಸದಿದ್ದರೆ ಅವನ ಮಂದೆಯಲ್ಲಿರುವ ಅನೇಕಾನೇಕ ಕುರಿಗಳು ಕೆಲವೇ ವರ್ಷಗಳಲ್ಲಿ ರೋಗಗ್ರಸ್ತ ಹಾಗೂ ದುರ್ಬಲ ಆಗುವ ಸಾಧ್ಯತೆ ಹೆಚ್ಚು.” ಆದರೆ ಕುರುಬನು ಕುರಿಗಳ ವಿಷಯದಲ್ಲಿ ಚಿಂತೆ, ಕಾಳಜಿ ವಹಿಸಿದರೆ ಅವುಗಳು ಬಲಿಷ್ಠವಾಗಿ ಚೆನ್ನಾಗಿರುತ್ತವೆ.

2 ಅದೇ ರೀತಿ ದೇವರ ಮಂದೆಯ ಕುರುಬರು ತಮ್ಮ ವಶಕ್ಕೆ ಕೊಡಲಾಗಿರುವ ಕುರಿಗಳಲ್ಲಿ ಒಂದೊಂದಕ್ಕೂ ಎಷ್ಟು ಒಳ್ಳೆಯ ಕಾಳಜಿ ತೋರಿಸಿ ಗಮನಕೊಡುತ್ತಾರೋ ಇಡೀ ಸಭೆ ಕೂಡ ಆಧ್ಯಾತ್ಮಿಕವಾಗಿ ಅಷ್ಟೇ ಆರೋಗ್ಯದಿಂದ ಇರುತ್ತದೆ. ಯೇಸು ಜನರನ್ನು ನೋಡಿ ಕನಿಕರಪಡಲು ಕಾರಣವೇನೆಂದು ಜ್ಞಾಪಿಸಿಕೊಳ್ಳಿ. ಅವರು ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದೇ.’ (ಮತ್ತಾ. 9:36) ಜನರು ಏಕೆ ಅಂಥ ದುಃಸ್ಥಿತಿಯಲ್ಲಿದ್ದರು? ಏಕೆಂದರೆ ಧರ್ಮಶಾಸ್ತ್ರವನ್ನು ಜನರಿಗೆ ಕಲಿಸುವಂಥ ಜವಾಬ್ದಾರಿಯಿದ್ದವರೇ ಕಠೋರರೂ ಕಪಟಿಗಳೂ ಜನರಿಂದ ಶಕ್ತಿಗೆ ಮೀರಿದ್ದನ್ನು ಕೇಳಿಕೊಳ್ಳುವವರೂ ಆಗಿದ್ದರು. ಇಸ್ರಾಯೇಲಿನ ಈ ಆಧ್ಯಾತ್ಮಿಕ ಮುಖಂಡರು ತಮ್ಮ ಮಂದೆಯ ಸದಸ್ಯರಿಗೆ ಸಹಾಯಮಾಡಿ, ಅವರನ್ನು ಪೋಷಿಸುವ ಬದಲಿಗೆ ಅವರ ಹೆಗಲ ಮೇಲೆ “ಭಾರವಾದ ಹೊರೆಗಳನ್ನು” ಹೊರಿಸುತ್ತಿದ್ದರು.​—ಮತ್ತಾ. 23:4.

3. ಸಭಾ ಹಿರಿಯರು ಆಧ್ಯಾತ್ಮಿಕ ಕುರುಬರಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವಾಗ ಏನನ್ನು ಮನಸ್ಸಿನಲ್ಲಿಡಬೇಕು?

3 ಇಂದಿನ ಕ್ರೈಸ್ತ ಕುರುಬರಾದ ನೇಮಿತ ಹಿರಿಯರಿಗಿರುವ ಜವಾಬ್ದಾರಿ ತುಂಬ ಗಂಭೀರವಾದದ್ದು. ಏಕೆಂದರೆ ಅವರು ಪಾಲನೆಮಾಡುತ್ತಿರುವ ಮಂದೆಯ ಕುರಿಗಳು ಯೆಹೋವನಿಗೂ, ‘ಒಳ್ಳೆಯ ಕುರುಬನಾದ’ ಯೇಸುವಿಗೂ ಸೇರಿದ್ದಾಗಿವೆ. (ಯೋಹಾ. 10:11) ಯೇಸುವಿನ ‘ಅಮೂಲ್ಯ ರಕ್ತವನ್ನು’ ಕೊಟ್ಟು ಈ ಕುರಿಗಳನ್ನು ‘ಕ್ರಯಕ್ಕೆ ಕೊಂಡುಕೊಳ್ಳಲಾಗಿದೆ.’ (1 ಕೊರಿಂ. 6:20; 1 ಪೇತ್ರ 1:18, 19) ಆ ಕುರಿಗಳ ಮೇಲೆ ಯೇಸುವಿಗೆ ಎಷ್ಟೊಂದು ಪ್ರೀತಿಯಿದೆಯೆಂದರೆ ಅವುಗಳಿಗಾಗಿ ಸಿದ್ಧಮನಸ್ಸಿನಿಂದ ತನ್ನ ಜೀವವನ್ನೇ ಅರ್ಪಿಸಿದನು. ಹಾಗಾಗಿ ಹಿರಿಯರು ಯಾವಾಗಲೂ ಈ ವಿಷಯವನ್ನು ನೆನಪಿನಲ್ಲಿಡಬೇಕು. ಏನೆಂದರೆ ಅವರು ಉಪಕುರುಬರಾಗಿದ್ದಾರೆ ಮತ್ತು “ಕುರಿಗಳ ಮಹಾ ಕುರುಬನಾಗಿರುವ” ದೇವರ ಪ್ರಿಯ ಪುತ್ರ ಯೇಸು ಕ್ರಿಸ್ತನ ಮೇಲ್ವಿಚಾರಣೆಯ ಅಡಿಯಲ್ಲಿದ್ದಾರೆ.​—ಇಬ್ರಿ. 13:20.

4. ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

4 ಹಾಗಾದರೆ ಕ್ರೈಸ್ತ ಕುರುಬರು ಕುರಿಗಳನ್ನು ಹೇಗೆ ಉಪಚರಿಸಬೇಕು? “ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿ” ಎಂದು ಸಭೆಯ ಸದಸ್ಯರನ್ನು ಪ್ರೋತ್ಸಾಹಿಸಲಾಗಿದೆ. ಹಾಗಿದ್ದರೂ ‘ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರಬಾರದು’ ಎಂದು ಮುಂದಾಳತ್ವ ವಹಿಸುವ ಹಿರಿಯರಿಗೂ ಬುದ್ಧಿಹೇಳಲಾಗಿದೆ. (ಇಬ್ರಿ. 13:17; 1 ಪೇತ್ರ 5:2, 3 ಓದಿ.) ಹಾಗಾದರೆ ನೇಮಿತ ಹಿರಿಯರು ಮಂದೆಯ ಮೇಲೆ ದೊರೆತನ ಮಾಡದೆ ಮುಂದಾಳತ್ವ ವಹಿಸುವುದು ಹೇಗೆ? ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ದೇವರು ತಮಗೆ ಕೊಟ್ಟಿರುವ ಅಧಿಕಾರದ ಚೌಕಟ್ಟನ್ನು ಮೀರದೆ ಮೇಲ್ವಿಚಾರಕರು ಕುರಿಗಳ ಅಗತ್ಯಗಳನ್ನು ಹೇಗೆ ಪೂರೈಸಬಲ್ಲರು?

ಅವುಗಳನ್ನು “ಎದೆಗೆತ್ತಿಕೊಳ್ಳುವನು”

5. ಯೆಶಾಯ 40:11ರಲ್ಲಿರುವ ಶಬ್ದಚಿತ್ರಣವು ಯೆಹೋವನ ಬಗ್ಗೆ ನಮಗೇನನ್ನು ತೋರಿಸಿಕೊಡುತ್ತದೆ?

5 ಯೆಹೋವನ ಬಗ್ಗೆ ಪ್ರವಾದಿ ಯೆಶಾಯ ಹೀಗಂದನು: “ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲುಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು.” (ಯೆಶಾ. 40:11) ಈ ಶಬ್ದಚಿತ್ರಣವು ಯೆಹೋವನು ಸಭೆಯಲ್ಲಿರುವ ದುರ್ಬಲ, ನಿಸ್ಸಹಾಯಕ ಸದಸ್ಯರ ಅಗತ್ಯಗಳ ಬಗ್ಗೆ ಚಿಂತಿಸುತ್ತಾನೆಂದು ತೋರಿಸುತ್ತದೆ. ಕುರುಬನು ತನ್ನ ಮಂದೆಯಲ್ಲಿರುವ ಒಂದೊಂದು ಕುರಿಯ ನಿರ್ದಿಷ್ಟ ಅಗತ್ಯಗಳನ್ನೂ ತಿಳಿದಿರುತ್ತಾನೆ ಮತ್ತು ತಡಮಾಡದೆ ಅವನ್ನು ಪೂರೈಸಲು ಸಿದ್ಧನಾಗಿರುತ್ತಾನೆ. ಹಾಗೆಯೇ ಯೆಹೋವನು ಸಭೆಯಲ್ಲಿರುವವರ ಅಗತ್ಯಗಳೇನೆಂದು ತಿಳಿದಿದ್ದಾನೆ ಮತ್ತು ಅವರವರಿಗೆ ಬೇಕಾದ ಆರೈಕೆ ಕೊಡಲು ಸಂತೋಷಿಸುತ್ತಾನೆ. ಕುರುಬನು ನವಜಾತ ಕುರಿಯನ್ನು ಕೆಲವೊಮ್ಮೆ ತನ್ನ ಉಡುಪಿನ ಮಡಿಕೆಗಳಲ್ಲಿ ಎತ್ತಿಕೊಳ್ಳುವಂತೆಯೇ ‘ಕೋಮಲ ಕರುಣೆಯ ತಂದೆಯಾದ’ ಯೆಹೋವನು, ನಾವು ನಂಬಿಕೆಯ ದೊಡ್ಡ ಪರೀಕ್ಷೆಯನ್ನು ಎದುರಿಸುತ್ತಿರುವಾಗ ಇಲ್ಲವೆ ಕಷ್ಟಗಳಲ್ಲಿರುವಾಗ ನಮ್ಮನ್ನು ಎತ್ತಿಕೊಳ್ಳುತ್ತಾನೆ. ಅಂದರೆ ಸಾಂತ್ವನ ಮತ್ತು ವಿಶೇಷ ಆರೈಕೆಯನ್ನು ನೀಡುತ್ತಾನೆ.​—2 ಕೊರಿಂ. 1:3, 4.

6. ಆಧ್ಯಾತ್ಮಿಕ ಕುರುಬನಾಗಿರುವ ಹಿರಿಯನು ಯೆಹೋವನ ಮಾದರಿಯನ್ನು ಹೇಗೆ ಅನುಸರಿಸಬಲ್ಲನು?

6 ನಮ್ಮ ತಂದೆಯಾದ ಯೆಹೋವನಿಂದ ಆಧ್ಯಾತ್ಮಿಕ ಕುರುಬನಾಗಿರುವ ಹಿರಿಯನೊಬ್ಬನು ಎಂಥ ಮಹತ್ವಪೂರ್ಣ ಪಾಠ ಕಲಿಯಬಲ್ಲನು! ಅವನೂ ಯೆಹೋವನಂತೆಯೇ ಕುರಿಗಳ ಅಗತ್ಯಗಳೇನೆಂದು ಯಾವಾಗಲೂ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಅವರು ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಯಾವ ನಿರ್ದಿಷ್ಟ ಅಗತ್ಯಗಳಿಗೆ ತುರ್ತಾಗಿ ಗಮನಕೊಡಬೇಕು ಎಂಬದನ್ನು ಹಿರಿಯನು ತಿಳಿದುಕೊಂಡಿದ್ದರೆ ಬೇಕಾದ ಪ್ರೋತ್ಸಾಹ, ಬೆಂಬಲ ಕೊಡಲು ಶಕ್ತನಾಗಿರುವನು. (ಜ್ಞಾನೋ. 27:23) ಇದನ್ನೆಲ್ಲ ಮಾಡಬೇಕಾದರೆ ಹಿರಿಯನು ಜೊತೆ ವಿಶ್ವಾಸಿಗಳೊಂದಿಗೆ ಒಳ್ಳೇ ಸಂವಾದ ಮಾಡಬೇಕು. ಅವರ ಖಾಸಗಿ ವಿಚಾರಗಳಲ್ಲಿ ತಲೆಹಾಕದೆ ಸಭೆಯಲ್ಲಿ ಅವನೇನು ನೋಡುತ್ತಾನೊ, ಕೇಳುತ್ತಾನೊ ಅದರ ಕಡೆಗೆ ಗಮನಕೊಡಬೇಕು. ಬಳಿಕ ‘ಬಲಹೀನರಿಗೆ ನೆರವು ನೀಡಲು’ ಪ್ರೀತಿಯಿಂದ ಸಮಯ ಮಾಡಿಕೊಳ್ಳಬೇಕು.​—ಅ.ಕಾ. 20:35; 1 ಥೆಸ. 4:11.

7. (1) ಯೆಹೆಜ್ಕೇಲ ಹಾಗೂ ಯೆರೆಮೀಯನ ದಿನಗಳಲ್ಲಿ ದೇವರ ಕುರಿಗಳನ್ನು ಯಾವ ರೀತಿಯಲ್ಲಿ ಉಪಚರಿಸಲಾಗುತ್ತಿತ್ತು? (2) ಆ ಅಪನಂಬಿಗಸ್ತ ಆಧ್ಯಾತ್ಮಿಕ ಕುರುಬರನ್ನು ಖಂಡಿಸಿ ಯೆಹೋವನು ಹೇಳಿದ ಮಾತುಗಳಿಂದ ನಾವೇನು ಕಲಿಯುತ್ತೇವೆ?

7 ಯೆಹೆಜ್ಕೇಲ ಮತ್ತು ಯೆರೆಮೀಯನ ದಿನಗಳಲ್ಲಿ ತನ್ನ ಜನರ ಕುರುಬರಾಗಿದ್ದವರನ್ನು ಯೆಹೋವನು ಖಂಡಿಸಿದನು. ಏಕೆಂದರೆ ಕುರಿಗಳ ಆರೈಕೆಮಾಡುವ ತಮ್ಮ ಕೆಲಸವನ್ನು ಅವರು ಸರಿಯಾಗಿ ಮಾಡುತ್ತಿರಲಿಲ್ಲ. ಕುರಿಗಳ ಮೇಲೆ ಯಾರೂ ನಿಗಾ ಇಡದಿದ್ದ ಕಾರಣ ಕುರಿಗಳು ಮೃಗಗಳಿಗೆ ಆಹಾರವಾಗುತ್ತಿದ್ದವು ಹಾಗೂ ಚದರಿಹೋಗುತ್ತಿದ್ದವು. ಕುರುಬರು ಕುರಿಗಳಿಗೆ ಉಣಿಸುವ ಬದಲಿಗೆ ಅವುಗಳ ಶೋಷಣೆಮಾಡುತ್ತಾ ತಮ್ಮ ‘ಸ್ವಂತ ಹೊಟ್ಟೆಯನ್ನು ನೋಡಿಕೊಳ್ಳುತ್ತಿದ್ದರು.’ (ಯೆಹೆ. 34:7-10; ಯೆರೆ. 23:1) ದೇವರು ಆ ಕುರುಬರನ್ನು ಖಂಡಿಸುತ್ತಾ ಹೇಳಿದ ಮಾತುಗಳು ಕ್ರೈಸ್ತಪ್ರಪಂಚದ ಮುಖಂಡರಿಗೆ ಸರಿಯಾಗಿ ಅನ್ವಯಿಸುತ್ತವೆ. ಆದರೆ ಅವು, ಕ್ರೈಸ್ತ ಹಿರಿಯರು ಯೆಹೋವನ ಹಿಂಡಿಗೆ ಸರಿಯಾದ ಮತ್ತು ಪ್ರೀತಿಪರ ಗಮನಕೊಡುವುದು ಎಷ್ಟು ಪ್ರಾಮುಖ್ಯ ಎಂಬದನ್ನೂ ಒತ್ತಿಹೇಳುತ್ತವೆ.

“ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”

8. ತಪ್ಪಾದ ಮನೋಭಾವವನ್ನು ತಿದ್ದುವ ವಿಷಯದಲ್ಲಿ ಯೇಸು ಹೇಗೆ ಉತ್ಕೃಷ್ಟ ಮಾದರಿಯನ್ನಿಟ್ಟನು?

8 ಮಾನವಸಹಜ ಅಪರಿಪೂರ್ಣತೆಯಿಂದಾಗಿ ಸಭೆಯಲ್ಲಿ ಕೆಲವರು ಯೆಹೋವನು ಅವರಿಂದ ಏನು ಅಪೇಕ್ಷಿಸುತ್ತಾನೆಂದು ಅರ್ಥಮಾಡಿಕೊಳ್ಳುವುದರಲ್ಲಿ ಸ್ವಲ್ಪ ನಿಧಾನಿಗಳಾಗಿರಬಹುದು. ಬೈಬಲಾಧರಿತ ಸಲಹೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ತಪ್ಪಬಹುದು ಇಲ್ಲವೆ ಆಧ್ಯಾತ್ಮಿಕವಾಗಿ ಪ್ರೌಢ ರೀತಿಯಲ್ಲಿ ವರ್ತಿಸದಿರಬಹುದು. ಇಂಥ ಸಂದರ್ಭಗಳಲ್ಲಿ ಹಿರಿಯರು ಹೇಗೆ ಪ್ರತಿಕ್ರಿಯಿಸಬೇಕು? ಯೇಸು ತನ್ನ ಶಿಷ್ಯರ ಕಡೆಗೆ ತೋರಿಸಿದ ತಾಳ್ಮೆಯನ್ನು ಅವರು ಅನುಕರಿಸಬೇಕು. ಆ ಶಿಷ್ಯರು ತಮ್ಮ ಪೈಕಿ ಯಾರು ರಾಜ್ಯದಲ್ಲಿ ಅತಿ ಶ್ರೇಷ್ಠರಾಗುವರು ಎಂದು ತುಂಬ ವಾಗ್ವಾದ ಮಾಡುತ್ತಿದ್ದರು. ಆದರೆ ಯೇಸು ತಾಳ್ಮೆ ಕಳೆದುಕೊಳ್ಳದೆ ಅವರಿಗೆ ಕಲಿಸುವುದನ್ನು ಮತ್ತು ದೀನತೆ ತೋರಿಸುವ ವಿಷಯದಲ್ಲಿ ಪ್ರೀತಿಯಿಂದ ಸಲಹೆಕೊಡುವುದನ್ನು ಮುಂದುವರಿಸಿದನು. (ಲೂಕ 9:46-48; 22:24-27) ಅವರ ಪಾದಗಳನ್ನು ತೊಳೆಯುವ ಮೂಲಕ ಆ ಗುಣವನ್ನು ತೋರಿಸುವ ವಿಧವನ್ನೂ ಕಲಿಸಿಕೊಟ್ಟನು. ಕ್ರೈಸ್ತ ಮೇಲ್ವಿಚಾರಕರು ಅವಶ್ಯವಾಗಿ ತೋರಿಸಬೇಕಾದ ಒಂದು ಗುಣ ದೀನತೆಯಾಗಿದೆ.​—ಯೋಹಾನ 13:12-15 ಓದಿ; 1 ಪೇತ್ರ 2:21.

9. ಯೇಸು ತನ್ನ ಶಿಷ್ಯರಲ್ಲಿ ಯಾವ ಮನೋಭಾವ ಇರಬೇಕೆಂದು ಹೇಳಿದನು?

9 ಆಧ್ಯಾತ್ಮಿಕ ಕುರುಬನೊಬ್ಬನು ದೀನನಾಗಿರಬೇಕು ಎಂಬುದು ಯೇಸುವಿನ ನೋಟವಾಗಿತ್ತು. ಆದರೆ ಯಾಕೋಬ ಯೋಹಾನರು ನೆನಸಿದ್ದೇ ಬೇರೆ. ಆ ಇಬ್ಬರು ಅಪೊಸ್ತಲರು ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಯೇಸು ಅವರ ಮನೋಭಾವವನ್ನು ತಿದ್ದುತ್ತಾ ಹೇಳಿದ್ದು: “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಛಿಸುವವನು ಸೇವಕನಂತೆ ಸೇವೆಮಾಡಬೇಕು.” (ಮತ್ತಾ. 20:25, 26, ಪರಿಶುದ್ಧ ಬೈಬಲ್‌ *) ಅಪೊಸ್ತಲರು ತಮ್ಮ ಸಂಗಡಿಗರ ಮೇಲೆ ‘ದಬ್ಬಾಳಿಕೆ ನಡೆಸುವ’ ಇಲ್ಲವೆ ‘ಅಧಿಕಾರ ತೋರಿಸುವ’ ಪ್ರವೃತಿಯನ್ನು ಕಿತ್ತೊಗೆಯಬೇಕಿತ್ತು.

10. (1) ಹಿರಿಯರು ಮಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂದು ಯೇಸು ಬಯಸುತ್ತಾನೆ? (2) ಈ ವಿಷಯದಲ್ಲಿ ಪೌಲ ಯಾವ ಮಾದರಿಯಿಟ್ಟನು?

10 ಮಂದೆಯನ್ನು ತಾನು ನೋಡಿಕೊಂಡಂತೆಯೇ ಕ್ರೈಸ್ತ ಹಿರಿಯರೂ ನೋಡಿಕೊಳ್ಳಬೇಕೆಂದು ಯೇಸು ಅಪೇಕ್ಷಿಸುತ್ತಾನೆ. ಅವರು ತಮ್ಮ ಜೊತೆ ವಿಶ್ವಾಸಿಗಳ ಸೇವಕರಂತೆ ಇರಲು ಸಿದ್ಧರಿರಬೇಕು, ಅವರ ಒಡೆಯರಂತಲ್ಲ. ಅಪೊಸ್ತಲ ಪೌಲನಿಗೆ ಆ ದೀನ ಮನೋಭಾವವಿತ್ತು. ಆದ್ದರಿಂದ ಎಫೆಸ ಸಭೆಯಲ್ಲಿನ ಹಿರೀಪುರುಷರಿಗೆ ಹೀಗಂದನು: ‘ನಾನು ಏಷ್ಯಾ ಪ್ರಾಂತದಲ್ಲಿ ಕಾಲಿಟ್ಟ ಮೊದಲ ದಿವಸದಿಂದ ಯಾವಾಗಲೂ ನಿಮ್ಮೊಂದಿಗಿದ್ದು ಅತಿ ದೀನಮನಸ್ಸಿನಿಂದ ಕರ್ತನಿಗೆ ಸೇವೆಮಾಡುತ್ತಾ ಇದ್ದೆನು.’ ಅಲ್ಲಿನ ಹಿರಿಯರು ದೀನಭಾವದಿಂದಿದ್ದು ಇತರರಿಗೆ ಸಹಾಯಮಾಡಲು ಶ್ರಮ ಹಾಕಬೇಕೆಂದು ಪೌಲ ಬಯಸಿದನು. ಅವನು ಹೇಳಿದ್ದು: “ಕಷ್ಟಪಟ್ಟು ದುಡಿಯುವ ಮೂಲಕ ನೀವು ಬಲಹೀನರಿಗೆ ನೆರವು ನೀಡಬೇಕೆಂಬುದನ್ನು ನಾನು ಎಲ್ಲ ವಿಷಯಗಳಲ್ಲಿ ನಿಮಗೆ ತೋರಿಸಿಕೊಟ್ಟಿದ್ದೇನೆ.” (ಅ.ಕಾ. 20:18, 19, 35) ತಾನು ಅವರ ನಂಬಿಕೆಯ ಒಡೆಯನಲ್ಲ, ಬದಲಾಗಿ ಅವರ ಸಂತೋಷಕ್ಕಾಗಿರುವ ದೀನ ಜೊತೆ ಕೆಲಸಗಾರನು ಎಂದು ಪೌಲ ಕೊರಿಂಥದವರಿಗೆ ಹೇಳಿದನು. (2 ಕೊರಿಂ. 1:24) ದೀನತೆ ಮತ್ತು ಶ್ರಮಶೀಲತೆಯ ವಿಷಯದಲ್ಲಿ ಪೌಲ ಹಿರಿಯರಿಗೆ ಉತ್ತಮ ಮಾದರಿಯಾಗಿದ್ದಾನೆ.

‘ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡಿರಿ’

11, 12. ಜೊತೆ ವಿಶ್ವಾಸಿಯೊಬ್ಬನು ನಿರ್ಣಯ ಮಾಡಲಿಕ್ಕಿರುವಾಗ ಹಿರಿಯನೊಬ್ಬನು ಹೇಗೆ ಸಹಾಯ ಮಾಡಬಲ್ಲನು?

11 ಸಭಾ ಹಿರಿಯನೊಬ್ಬನು ‘ತನ್ನ ಬೋಧನಾ ಕಲೆಯ ವಿಷಯದಲ್ಲಿ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.’ (ತೀತ 1:9) ಆದರೆ ಇದನ್ನು ಅವನು “ಸೌಮ್ಯಭಾವದಿಂದ” ಮಾಡಬೇಕು. (ಗಲಾ. 6:1) ಒಬ್ಬ ಒಳ್ಳೇ ಆಧ್ಯಾತ್ಮಿಕ ಕುರುಬನು ‘ಹೀಗೇ ಮಾಡಬೇಕು, ಇದೇ ರೀತಿ ನಡೆದುಕೊಳ್ಳಬೇಕು’ ಎಂದು ತನ್ನ ಸಹೋದರರನ್ನು ಒತ್ತಾಯಿಸುವುದಿಲ್ಲ. ಬದಲಿಗೆ ಅವರ ಹೃದಯವನ್ನು ಪ್ರೇರಿಸುವುದು ಹೇಗೆಂದು ಯೋಚಿಸುತ್ತಾನೆ. ಉದಾಹರಣೆಗೆ, ಸಹೋದರನೊಬ್ಬನು ಒಂದು ಮುಖ್ಯ ನಿರ್ಣಯ ಮಾಡಲಿಕ್ಕಿದೆ ಎಂದು ನೆನಸಿ. ಆಗ ಆ ಸಹೋದರನು ಗಣನೆಗೆ ತೆಗೆದುಕೊಳ್ಳಬೇಕಾದ ಕೆಲವು ಬೈಬಲಾಧರಿತ ತತ್ವಗಳನ್ನು ಹಿರಿಯನು ಹೇಳಬಹುದು. ಆ ವಿಷಯದ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಬಂದಿರುವ ವಿಷಯವನ್ನೂ ಅವನೊಂದಿಗೆ ಚರ್ಚಿಸಬಹುದು. ಸಹೋದರನ ಮುಂದಿರುವ ಬೇರೆ ಬೇರೆ ಆಯ್ಕೆಗಳು ಯೆಹೋವನೊಂದಿಗಿನ ಅವನ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರಬಲ್ಲವೆಂದು ಯೋಚಿಸುವಂತೆ ಸಹ ಉತ್ತೇಜಿಸಬಹುದು. ನಿರ್ಣಯ ತಕ್ಕೊಳ್ಳುವ ಮುಂಚೆ ಪ್ರಾರ್ಥನೆ ಮೂಲಕ ದೇವರ ಮಾರ್ಗದರ್ಶನ ಕೋರುವುದರ ಮಹತ್ವವನ್ನೂ ಹಿರಿಯನು ಒತ್ತಿಹೇಳಬಹುದು. (ಜ್ಞಾನೋ. 3:5, 6) ಬಳಿಕ ಆ ಸಹೋದರನೇ ನಿರ್ಣಯ ಮಾಡುವಂತೆ ಹಿರಿಯನು ಬಿಡುವನು.​—ರೋಮ. 14:1-4.

12 ಮಾರ್ಗದರ್ಶನ ನೀಡಲು ಕ್ರೈಸ್ತ ಮೇಲ್ವಿಚಾರಕರಿಗೆ ಅಧಿಕಾರ ಕೊಟ್ಟಿರುವುದು ಬೈಬಲ್‌ ಆಗಿದೆ. ಆದ್ದರಿಂದ ಅವರು ಬೈಬಲನ್ನು ಕುಶಲತೆಯಿಂದ ಬಳಸಿ, ಅದು ಹೇಳುವ ವಿಷಯಗಳಿಗೆ ಅಂಟಿಕೊಳ್ಳುವುದು ಪ್ರಾಮುಖ್ಯ. ಇದು, ತಮ್ಮ ಅಧಿಕಾರವನ್ನು ದುರುಪಯೋಗಿಸದಂತೆ ಹಿರಿಯರನ್ನು ತಡೆಯುವುದು. ಎಷ್ಟೆಂದರೂ ಅವರು ಉಪಕುರುಬರು. ಅಲ್ಲದೆ, ಸಭೆಯ ಪ್ರತಿಯೊಬ್ಬ ಸದಸ್ಯನು ತಾನು ಮಾಡುವ ನಿರ್ಣಯಗಳಿಗೆ ತಾನೇ ಯೆಹೋವನಿಗೆ ಹಾಗೂ ಯೇಸುವಿಗೆ ಉತ್ತರಕೊಡಬೇಕು.​—ಗಲಾ. 6:5, 7, 8.

“ಮಂದೆಗೆ ಮಾದರಿಗಳಾಗಿರಿ”

13, 14. ಹಿರಿಯರು ಯಾವ ಕ್ಷೇತ್ರಗಳಲ್ಲಿ ಮಂದೆಗೆ ಮಾದರಿಯಾಗಿರಬೇಕು?

13 ಸಭಾ ಹಿರಿಯರು ತಮ್ಮ ವಶಕ್ಕೆ ಕೊಡಲಾಗಿರುವವರ ಮೇಲೆ ದೊರೆತನ ಮಾಡಬಾರದೆಂದು ಅಪೊಸ್ತಲ ಪೇತ್ರನು ಬುದ್ಧಿವಾದ ಕೊಟ್ಟ ಬಳಿಕ “ಮಂದೆಗೆ ಮಾದರಿಗಳಾಗಿರಿ” ಎಂದು ಅವರನ್ನು ಪ್ರೋತ್ಸಾಹಿಸಿದನು. (1 ಪೇತ್ರ 5:3) ಒಬ್ಬ ಹಿರಿಯನು ಮಂದೆಗೆ ಹೇಗೆ ಮಾದರಿಯಾಗಿರಬಲ್ಲನು? ಇದಕ್ಕಾಗಿ ನಾವು ‘ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವವನಲ್ಲಿ’ ಇರಬೇಕಾದ ಅರ್ಹತೆಗಳಲ್ಲಿ ಎರಡನ್ನು ಪರಿಗಣಿಸೋಣ. ಒಂದನೇದಾಗಿ ಅವನು ‘ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆಮಾಡುವವನು’ ಆಗಿರಬೇಕು. ಹಿರಿಯನು ಕುಟುಂಬಸ್ಥನಾಗಿರುವಲ್ಲಿ ಅವನು ಆದರ್ಶಪ್ರಾಯ ವಿಧದಲ್ಲಿ ತನ್ನ ಕುಟುಂಬದ ಮೇಲೆ ಮೇಲ್ವಿಚಾರಣೆ ಮಾಡತಕ್ಕದ್ದು. ಏಕೆಂದರೆ “ತನ್ನ ಸ್ವಂತ ಮನೆವಾರ್ತೆಯನ್ನು ಹೇಗೆ ಮೇಲ್ವಿಚಾರಣೆಮಾಡಬೇಕೆಂದು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ನೋಡಿಕೊಳ್ಳುವನು?” (1 ತಿಮೊ. 3:1, 2, 4, 5) ಎರಡನೇದಾಗಿ ಮೇಲ್ವಿಚಾರಕನ ಸ್ಥಾನಕ್ಕೆ ಅರ್ಹನಾಗಲು ಪ್ರಯತ್ನಿಸುವವನು ‘ಸ್ವಸ್ಥಬುದ್ಧಿಯುಳ್ಳವನಾಗಿರಬೇಕು.’ ಅಂದರೆ ಬೈಬಲ್‌ ತತ್ವಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು, ಅವುಗಳನ್ನು ತನ್ನ ಸ್ವಂತ ಜೀವನದಲ್ಲಿ ಅನ್ವಯಿಸುವುದು ಹೇಗೆಂದು ತಿಳಿದವನಾಗಿರಬೇಕು. ಅವನು ದುಡುಕಿ ನಿರ್ಣಯ ಮಾಡದವನೂ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಶಾಂತಚಿತ್ತನೂ ಆಗಿರುತ್ತಾನೆ. ಹಿರಿಯರಲ್ಲಿ ಈ ಗುಣಗಳಿರುವುದನ್ನು ನೋಡುವಾಗ ಸಭಾ ಸದಸ್ಯರಿಗೆ ಅವರ ಮೇಲೆ ಭರವಸೆ ಮೂಡುತ್ತದೆ.

14 ಹಿರಿಯನು ಒಳ್ಳೇ ಮಾದರಿಯನ್ನಿಡಬೇಕಾದ ಇನ್ನೊಂದು ಕ್ಷೇತ್ರವು ಸೇವೆಯಲ್ಲಿ ಮುಂದಾಳತ್ವ ವಹಿಸುವುದಾಗಿದೆ. ಈ ವಿಷಯದಲ್ಲಿ ಯೇಸು ಮೇಲ್ವಿಚಾರಕರಿಗಾಗಿ ಮಾದರಿಯನ್ನಿಟ್ಟನು. ದೇವರ ರಾಜ್ಯದ ಸುವಾರ್ತೆ ಸಾರುವುದು ಯೇಸುವಿನ ಭೂಜೀವನದ ಮುಖ್ಯ ಭಾಗವಾಗಿತ್ತು. ಈ ಕೆಲಸವನ್ನು ಹೇಗೆ ಮಾಡಬೇಕೆಂದು ಆತನು ತನ್ನ ಶಿಷ್ಯರಿಗೆ ತೋರಿಸಿದನು. (ಮಾರ್ಕ 1:38; ಲೂಕ 8:1) ಇಂದು ಪ್ರಚಾರಕರು ಹಿರಿಯರ ಜೊತೆ ಸುವಾರ್ತೆ ಸಾರುವಾಗ ತುಂಬ ಪ್ರೋತ್ಸಾಹ ಪಡೆದುಕೊಳ್ಳುತ್ತಾರೆ. ಇದರಿಂದ ಈ ಜೀವರಕ್ಷಕ ಕೆಲಸದಲ್ಲಿ ಹಿರಿಯರಿಗಿರುವ ಹುರುಪನ್ನು ಪ್ರಚಾರಕರು ನೋಡಲು ಸಾಧ್ಯವಾಗುತ್ತದೆ. ಹಿರಿಯರು ಬಳಸುವ ಬೋಧನಾ ವಿಧಾನಗಳಿಂದ ಕಲಿಯಲಿಕ್ಕಾಗುತ್ತದೆ. ಹಿರಿಯರು ಕಾರ್ಯಮಗ್ನರಾಗಿರುವುದಾದರೂ ಸುವಾರ್ತೆ ಸಾರಲು ತಮ್ಮ ಸಮಯ, ಶಕ್ತಿ ವ್ಯಯಿಸಲು ದೃಢಮನಸ್ಸುಳ್ಳವರಾಗಿ ಇರುವಾಗ ಅದೇ ರೀತಿಯ ಹುರುಪನ್ನು ತೋರಿಸಲು ಇಡೀ ಸಭೆಗೆ ಪ್ರೋತ್ಸಾಹ ಸಿಗುತ್ತದೆ. ಹಿರಿಯರು ಕೂಟಗಳಿಗಾಗಿ ತಯಾರಿ ಮಾಡಿ, ಭಾಗವಹಿಸುವ ಮೂಲಕ ಮತ್ತು ರಾಜ್ಯ ಸಭಾಗೃಹದ ಶುಚಿಕಾರ್ಯ, ದುರಸ್ತಿಕಾರ್ಯ ಇನ್ನಿತರ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಹ ಸಹೋದರರಿಗೆ ಒಳ್ಳೇ ಮಾದರಿಯನ್ನಿಡಬಲ್ಲರು.​—ಎಫೆ. 5:15, 16; ಇಬ್ರಿಯ 13:7 ಓದಿ.

“ಬಲಹೀನರಿಗೆ ಆಧಾರವಾಗಿರಿ”

15. ಪರಿಪಾಲನಾ ಭೇಟಿಗಳನ್ನು ಮಾಡಲು ಇರುವ ಕೆಲವು ಕಾರಣಗಳು ಯಾವುವು?

15 ಒಂದು ಕುರಿ ಗಾಯಗೊಂಡಾಗ ಇಲ್ಲವೆ ಅಸ್ವಸ್ಥಗೊಂಡಾಗ ಒಳ್ಳೆಯ ಕುರುಬನೊಬ್ಬನು ತಕ್ಷಣ ಅದರ ಸಹಾಯಕ್ಕೆ ಬರುತ್ತಾನೆ. ಅದೇ ರೀತಿ ಸಭೆಯಲ್ಲಿ ಯಾರೇ ಆಗಲಿ ಕಷ್ಟದಲ್ಲಿದ್ದರೆ ಇಲ್ಲವೆ ಆಧ್ಯಾತ್ಮಿಕ ನೆರವಿನ ಅಗತ್ಯದಲ್ಲಿದ್ದರೆ ಹಿರಿಯರು ಕೂಡಲೆ ಅವರಿಗೆ ಗಮನಕೊಡಬೇಕು. ವೃದ್ಧರಿಗೆ, ಅಸ್ವಸ್ಥರಿಗೆ ಶಾರೀರಿಕ ಅಗತ್ಯಗಳ ಸಂಬಂಧದಲ್ಲಿ ನೆರವು ಬೇಕಾಗಿರಬಹುದು. ಆದರೆ ಅವರಿಗೆ ವಿಶೇಷವಾಗಿ ಬೇಕಾಗಿರುವುದು ಆಧ್ಯಾತ್ಮಿಕ ನೆರವು ಮತ್ತು ಪ್ರೋತ್ಸಾಹ. (1 ಥೆಸ. 5:14) ಸಭೆಯಲ್ಲಿರುವ ಯುವಜನರು, “ಯೌವನ ಸಹಜವಾದ ಇಚ್ಛೆಗಳನ್ನು” ಪ್ರತಿರೋಧಿಸುವ ಅಥವಾ ಬೇರೆ ಸವಾಲುಗಳನ್ನು ಎದುರಿಸುತ್ತಿರಬಹುದು. (2 ತಿಮೊ. 2:22) ಹಾಗಾಗಿ ಸಭಾ ಸದಸ್ಯರು ಎದುರಿಸುತ್ತಿರುವ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೂಕ್ತವಾದ ಬೈಬಲಾಧರಿತ ಸಲಹೆ ಕೊಟ್ಟು ಪ್ರೋತ್ಸಾಹಿಸಲು ಹಿರಿಯರು ಆಗಾಗ್ಗೆ ಪರಿಪಾಲನಾ ಭೇಟಿಗಳನ್ನು ಮಾಡಬೇಕಿದೆ. ಹೀಗೆ ಹಿರಿಯರು ಸಹೋದರರಿಗೆ ಸೂಕ್ತ ಸಮಯದಲ್ಲಿ ಗಮನಕೊಟ್ಟರೆ ಸಮಸ್ಯೆಗಳು ಇನ್ನಷ್ಟು ದೊಡ್ಡದಾಗುವ ಮುಂಚೆಯೇ ಅವುಗಳನ್ನು ಬಗೆಹರಿಸಬಹುದು.

16. ಸಭಾ ಸದಸ್ಯನೊಬ್ಬನಿಗೆ ಆಧ್ಯಾತ್ಮಿಕ ಸಹಾಯ ಅಗತ್ಯವಿರುವಾಗ ಹಿರಿಯರು ಯಾವ ರೀತಿ ನೆರವಾಗಬಲ್ಲರು?

16 ಸಹೋದರನೊಬ್ಬನ ಸಮಸ್ಯೆಗಳು ಹೆಚ್ಚಿ, ಅವನ ಆಧ್ಯಾತ್ಮಿಕ ಆರೋಗ್ಯವೇ ಅಪಾಯಕ್ಕೊಳಗಾಗುವ ಹಂತ ತಲಪಿರುವಲ್ಲಿ ಆಗೇನು? “ನಿಮ್ಮಲ್ಲಿ ಅಸ್ವಸ್ಥನು ಯಾವನಾದರೂ ಇದ್ದಾನೊ?” ಎಂದು ಕೇಳಿದನು ಬೈಬಲ್‌ ಲೇಖಕರಲ್ಲಿ ಒಬ್ಬನಾದ ಯಾಕೋಬ. ಬಳಿಕ ಅವನಂದದ್ದು: “ಅವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಳ್ಳಲಿ ಮತ್ತು ಅವರು ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪಡುವವು.” (ಯಾಕೋ. 5:14, 15) ಆಧ್ಯಾತ್ಮಿಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿ ‘ಸಭೆಯ ಹಿರೀಪುರುಷರನ್ನು ಕರೆಸಿಕೊಳ್ಳಲಿಲ್ಲವಾದರೂ’ ಆ ವ್ಯಕ್ತಿಯ ಸನ್ನಿವೇಶದ ಬಗ್ಗೆ ತಿಳಿದೊಡನೆ ಹಿರಿಯರು ಅವನ ನೆರವಿಗೆ ಓಡಬೇಕು. ಹಿರಿಯರು ತಮ್ಮ ಆರೈಕೆಯಡಿ ಇರುವ ಸಹೋದರರ ಕಷ್ಟಕಾಲದಲ್ಲಿ ಅವರೊಂದಿಗೆ, ಅವರಿಗಾಗಿ ಪ್ರಾರ್ಥಿಸುವಾಗ ಮತ್ತು ಬೇಕಾದ ಬೆಂಬಲ ಕೊಡುವಾಗ ಅವರಿಗೆ ಆಧ್ಯಾತ್ಮಿಕ ಚೈತನ್ಯವನ್ನೂ ಪ್ರೋತ್ಸಾಹವನ್ನೂ ತರುವರು.​—ಯೆಶಾಯ 32:1, 2 ಓದಿ.

17. ಹಿರಿಯರು ‘ಮಹಾ ಕುರುಬನನ್ನು’ ಅನುಕರಿಸುವಾಗ ಮಂದೆಗೆ ಯಾವ ಪ್ರಯೋಜನ ಸಿಗುತ್ತದೆ?

17 ಕ್ರೈಸ್ತ ಕುರುಬರು ಯೆಹೋವನ ಸಂಘಟನೆಯಲ್ಲಿ ತಾವು ಮಾಡುವ ಪ್ರತಿಯೊಂದು ವಿಷಯದಲ್ಲೂ “ಮಹಾ ಕುರುಬನಾಗಿರುವ” ಯೇಸು ಕ್ರಿಸ್ತನನ್ನು ಅನುಕರಿಸಲು ಶ್ರಮಿಸುತ್ತಾರೆ. ಇಂಥ ಜವಾಬ್ದಾರಿಯುತ ಪುರುಷರ ಆಧ್ಯಾತ್ಮಿಕ ನೆರವಿನಿಂದಾಗಿ ಮಂದೆಯು ತುಂಬ ಪ್ರಯೋಜನ ಪಡೆದು, ಸುದೃಢವಾಗಿ ಬೆಳೆಯುತ್ತದೆ. ಇವೆಲ್ಲವುಗಳಿಗಾಗಿ ನಾವು ಅಪ್ರತಿಮ ಕುರುಬನಾದ ಯೆಹೋವನಿಗೆ ಕೃತಜ್ಞರಾಗಿದ್ದೇವೆ. ಇದು ಆತನನ್ನು ಸ್ತುತಿಸಲು ನಮ್ಮನ್ನು ಪ್ರಚೋದಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 9 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.