ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿತ್ಯತೆಯ ಅರಸನಾದ ಯೆಹೋವನನ್ನು ಆರಾಧಿಸಿ

ನಿತ್ಯತೆಯ ಅರಸನಾದ ಯೆಹೋವನನ್ನು ಆರಾಧಿಸಿ

‘ನಿತ್ಯತೆಯ ಅರಸನಿಗೆ ಸದಾಕಾಲಕ್ಕೂ ಗೌರವ ಮತ್ತು ಮಹಿಮೆ ಸಲ್ಲುತ್ತಾ ಇರಲಿ.’1 ತಿಮೊ. 1:17.

1, 2. (1) “ನಿತ್ಯತೆಯ ಅರಸ” ಯಾರು? (2) ಆ ಬಿರುದು ಆತನಿಗೆ ತಕ್ಕದ್ದೇಕೆ? (ಮೇಲಿನ ಚಿತ್ರ ನೋಡಿ.) (3) ಯೆಹೋವನ ಅರಸುತನದ ವಿಷಯದಲ್ಲಿ ನಮ್ಮನ್ನು ಆತನೆಡೆಗೆ ಸೆಳೆಯುವಂಥದ್ದು ಯಾವುದು?

ಸ್ವಾಸೀಲೆಂಡ್‍ನ ಅರಸ ಎರಡನೇ ಸೋಬೂಜ ಸುಮಾರು 61 ವರ್ಷ ಆಳ್ವಿಕೆ ನಡೆಸಿದನು. ಆಧುನಿಕ ಕಾಲದ ದೊರೆಗಳ ಆಡಳಿತದ ಇತಿಹಾಸದಲ್ಲಿ ಇದು ದಾಖಲೆ ನಿರ್ಮಿಸಿದೆ. ಅರಸ ಸೋಬೂಜ ಅಷ್ಟು ವರ್ಷ ಆಳ್ವಿಕೆ ನಡೆಸಿದ್ದು ಆಶ್ಚರ್ಯಕರ ಸಂಗತಿಯಾಗಿರಬಹುದು. ಆದರೆ ಮಾನವನ ಅಲ್ಪಾಯಸ್ಸನ್ನೂ ಮೀರಿ ಎಷ್ಟೋ ಸುದೀರ್ಘ ಕಾಲದಿಂದ ಆಳ್ವಿಕೆ ನಡೆಸುತ್ತಿರುವ ಇನ್ನೊಬ್ಬ ಅರಸನಿದ್ದಾನೆ. ವಾಸ್ತವದಲ್ಲಿ ಬೈಬಲ್‌ ಹೇಳುವಂತೆ ಆತನು “ನಿತ್ಯತೆಯ ಅರಸ.” (1 ತಿಮೊ. 1:17) ಈ ಪರಮಾಧಿಕಾರಿಯನ್ನು ಹೆಸರಿಸುತ್ತಾ ಕೀರ್ತನೆಗಾರನೊಬ್ಬನು ಪ್ರಕಟಿಸಿದ್ದು: “ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು.”—ಕೀರ್ತ. 10:16.

2 ಯೆಹೋವ ದೇವರು ಎಷ್ಟು ದೀರ್ಘ ಕಾಲದಿಂದ ಆಳ್ವಿಕೆ ನಡೆಸುತ್ತಿದ್ದಾನೆಂದರೆ ಅದರ ಮುಂದೆ ಮಾನವನ ಆಳ್ವಿಕೆಯ ಅವಧಿ ಏನೇನೂ ಅಲ್ಲ. ಹಾಗಿದ್ದರೂ ನಮ್ಮನ್ನು ಯೆಹೋವನೆಡೆಗೆ ಸೆಳೆಯುವಂಥದ್ದು ಆತನು ಆಳ್ವಿಕೆ ನಡೆಸುವ ರೀತಿಯಾಗಿದೆ. ಪ್ರಾಚೀನ ಇಸ್ರಾಯೇಲಿನಲ್ಲಿ 40 ವರ್ಷ ಪ್ರಭುತ್ವ ನಡೆಸಿದ ರಾಜನೊಬ್ಬ ಹೀಗನ್ನುತ್ತಾ ದೇವರನ್ನು ಸ್ತುತಿಸಿದನು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು . . . ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.” (ಕೀರ್ತ. 103:8, 19) ಹೌದು, ಯೆಹೋವನು ನಮ್ಮ ರಾಜ. ಅಷ್ಟೇ ಅಲ್ಲ, ನಮ್ಮನ್ನು ತುಂಬ ಪ್ರೀತಿಸುವ ತಂದೆಯೂ ಆಗಿದ್ದಾನೆ. ಇದು ಎರಡು ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಯೆಹೋವನು ಯಾವ ರೀತಿಯಲ್ಲಿ ಒಬ್ಬ ತಂದೆಯಾಗಿ ಕ್ರಿಯೆಗೈದಿದ್ದಾನೆ? ಏದೆನ್‌ ತೋಟದಲ್ಲಿ ದಂಗೆ ಉಂಟಾದ ದಿನದಿಂದ ಯೆಹೋವನು ತನ್ನ ಅರಸುತನವನ್ನು ಯಾವ ವಿಧಗಳಲ್ಲಿ ತೋರಿಸಿದ್ದಾನೆ? ಉತ್ತರ  ನೋಡೋಣ. ಅದು ನಮ್ಮನ್ನು ಯೆಹೋವನಿಗೆ ಇನ್ನಷ್ಟು ಆಪ್ತರಾಗುವಂತೆ, ಪೂರ್ಣ ಹೃದಯದಿಂದ ಆತನನ್ನು ಆರಾಧಿಸುವಂತೆ ಪ್ರೇರಿಸುವುದು.

ನಿತ್ಯತೆಯ ಅರಸನು ವಿಶ್ವವ್ಯಾಪಿ ಕುಟುಂಬದ ಪಿತನಾದನು

3. (1) ಯೆಹೋವನ ವಿಶ್ವವ್ಯಾಪಿ ಕುಟುಂಬದ ಮೊದಲ ಸದಸ್ಯ ಯಾರು? (2) ಬಳಿಕ ದೇವರ ‘ಕುಮಾರರಾಗಿ’ ಯಾರನ್ನು ಕೂಡ ಸೃಷ್ಟಿಸಲಾಯಿತು?

3 ಯೆಹೋವನು ತನ್ನ ಏಕೈಕಜಾತ ಪುತ್ರನನ್ನು ಸೃಷ್ಟಿಸಿದಾಗ ಆತನಿಗೆ ಎಷ್ಟೊಂದು ಮಹದಾನಂದ ಆಗಿರಬೇಕಲ್ಲವೇ? ತಾನು ಮೊತ್ತಮೊದಲು ಸೃಷ್ಟಿಸಿದ ಈತನನ್ನು ಒಬ್ಬ ಅಪ್ರಾಮುಖ್ಯ ಪ್ರಜೆಯಾಗಿ ಯೆಹೋವನು ಕಾಣಲಿಲ್ಲ. ಮಗನಂತೆ ಪ್ರೀತಿಸಿದನು. ಇತರ ಪರಿಪೂರ್ಣ ಪ್ರಜೆಗಳನ್ನು ಸೃಷ್ಟಿಸುವುದರಲ್ಲಿ ತನ್ನನ್ನು ಜೊತೆಗೂಡುವಂತೆ, ಹರ್ಷಿಸುವಂತೆ ಅವಕಾಶ ಕೊಟ್ಟನು. (ಕೊಲೊ. 1:15-17) ಆ ಪರಿಪೂರ್ಣ ಪ್ರಜೆಗಳು ಯಾರು? ಅವರಲ್ಲಿ ಕೋಟ್ಯನುಕೋಟಿ ದೇವದೂತರು ಸೇರಿದ್ದಾರೆ. ‘ದೇವರ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರಾಗಿರುವ’ ಅವರು ಹರ್ಷಾನಂದದಿಂದ ಆತನ ಸೇವೆ ಮಾಡುತ್ತಾರೆ. ಯೆಹೋವನು ಅವರನ್ನು ತನ್ನ ‘ಕುಮಾರರು’ ಎಂದು ಕರೆಯುತ್ತಾನೆ. ಈ ಮೂಲಕ ಅವರಿಗೆ ಘನತೆ ಕೊಡುತ್ತಾನೆ. ಅವರು ಯೆಹೋವನ ವಿಶ್ವವ್ಯಾಪಿ ಕುಟುಂಬದ ಭಾಗವಾಗಿದ್ದಾರೆ.—ಕೀರ್ತ. 103:20-22; ಯೋಬ 38:6.

4. ಮಾನವರು ಹೇಗೆ ದೇವರ ವಿಶ್ವವ್ಯಾಪಿ ಕುಟುಂಬದ ಭಾಗವಾದರು?

4 ಯೆಹೋವನು ಆಕಾಶ ಭೂಮಿಯನ್ನು ಸೃಷ್ಟಿಸಿದ ಬಳಿಕ ತನ್ನ ವಿಶ್ವವ್ಯಾಪಿ ಕುಟುಂಬವನ್ನು ದೊಡ್ಡದು ಮಾಡಿದನು. ಸ್ವಪೋಷಣೆ ಮಾಡಿಕೊಳ್ಳಲು ಶಕ್ತವಾದ ಸುಂದರ ಭೂಮಿಯನ್ನು ಸಿದ್ಧಗೊಳಿಸಿದ ನಂತರ ದೇವರು ಭೂಸೃಷ್ಟಿಗೆ ಕಿರೀಟವಾಗಿ ಮಾನವನನ್ನು ಸೃಷ್ಟಿಸಿದನು. ಮೊತ್ತಮೊದಲ ಮಾನವನಾದ ಆದಾಮನನ್ನು ದೇವರು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. (ಆದಿ. 1:26-28) ಯೆಹೋವನು ಸೃಷ್ಟಿಕರ್ತನಾಗಿದ್ದ ಕಾರಣ ತನಗೆ ಆದಾಮನು ವಿಧೇಯನಾಗಿರಬೇಕೆಂದು ಕೇಳಿಕೊಳ್ಳುವ ಹಕ್ಕು ಆತನಿಗಿತ್ತು. ಒಬ್ಬ ತಂದೆಯಾಗಿ ಆತನು ಪ್ರೀತಿಯಿಂದಲೂ ದಯೆಯಿಂದಲೂ ಆದೇಶಗಳನ್ನು ನೀಡಿದನು. ಅವು ಮಾನವನ ಸ್ವಾತಂತ್ರ್ಯವನ್ನು ಯಾವುದೇ ರೀತಿಯಲ್ಲಿ ಅನುಚಿತವಾಗಿ ನಿರ್ಬಂಧಿಸಲಿಲ್ಲ.—ಆದಿಕಾಂಡ 2:15-17 ಓದಿ.

5. ಭೂಮಿಯಲ್ಲಿ ತನ್ನ ಮಾನವ ಮಕ್ಕಳು ತುಂಬಿಕೊಳ್ಳಲಿಕ್ಕಾಗಿ ಯೆಹೋವನು ಯಾವ ಏರ್ಪಾಡು ಮಾಡಿದನು?

5 ಯೆಹೋವನು ಮಾನವ ರಾಜರಂತಿರದೆ ತನ್ನ ಮಾನವ ಪ್ರಜೆಗಳಿಗೆ ಜವಾಬ್ದಾರಿಗಳನ್ನು ಸಂತೋಷದಿಂದ ವಹಿಸಿಕೊಡುತ್ತಾನೆ. ಹೀಗೆ ಅವರನ್ನು ತನ್ನ ಕುಟುಂಬದ ಭರವಸಯೋಗ್ಯ ಸದಸ್ಯರನ್ನಾಗಿ ಕಾಣುತ್ತಾನೆ. ಉದಾಹರಣೆಗೆ, ಆತನು ಆದಾಮನಿಗೆ ಇತರ ಜೀವಿಗಳ ಮೇಲೆ ಅಧಿಕಾರವನ್ನು ವಹಿಸಿಕೊಟ್ಟನು. ಮಾತ್ರವಲ್ಲ ಪ್ರಾಣಿಗಳಿಗೆ ಹೆಸರಿಡುವ ಸ್ವಾರಸ್ಯಕರವಾದ ಸಂತೋಷದಾಯಕ ಕೆಲಸವನ್ನು ನೇಮಿಸಿದನು. (ಆದಿ. 1:26; 2:19, 20) ಇಡೀ ಭೂಮಿಯನ್ನು ತುಂಬಿಕೊಳ್ಳುವಷ್ಟು ಮಿಲ್ಯಾಂತರ ಪರಿಪೂರ್ಣ ಮನುಷ್ಯರನ್ನು ದೇವರು ಸೃಷ್ಟಿಸಲಿಲ್ಲ. ಬದಲಿಗೆ ಆದಾಮನಿಗೆ ಪೂರಕವಾಗಿ ಅವನಿಗೆ ಸರಿಬೀಳುವ ಒಬ್ಬ ಪರಿಪೂರ್ಣ ಸ್ತ್ರೀಯನ್ನು ಅಂದರೆ ಹವ್ವಳನ್ನು ಸೃಷ್ಟಿಸಿದನು. (ಆದಿ. 2:21, 22) ಬಳಿಕ ಆ ದಂಪತಿಗೆ ಮಕ್ಕಳನ್ನು ಪಡೆದು ಇಡೀ ಭೂಮಿಯನ್ನು ಜನರಿಂದ ತುಂಬಿಸುವ ಸದವಕಾಶವನ್ನು ಕೊಟ್ಟನು. ಯಾವುದೇ ಕುಂದುಕೊರತೆಗಳಿಲ್ಲದ ಸುತ್ತುಗಟ್ಟಿನಲ್ಲಿ ಮಾನವರು ತೋಟದ ಮೇರೆಯನ್ನು ಸ್ವಲ್ಪ ಸ್ವಲ್ಪವಾಗಿ ವಿಸ್ತರಿಸುತ್ತಾ ಇಡೀ ಭೂಮಿಯನ್ನು ಸುಂದರ ಪರದೈಸಾಗಿ ಮಾಡಬೇಕಿತ್ತು. ಯೆಹೋವನ ವಿಶ್ವವ್ಯಾಪಿ ಕುಟುಂಬದ ಭಾಗವಾಗಿ ಅವರು ಸ್ವರ್ಗೀಯ ದೇವದೂತರೊಂದಿಗೆ ಏಕತೆಯಲ್ಲಿ ಆತನನ್ನು ಸದಾಸರ್ವದಾ ಆರಾಧಿಸಸಾಧ್ಯವಿತ್ತು. ಎಂಥ ಅದ್ಭುತ ಪ್ರತೀಕ್ಷೆ! ಹೀಗೆ ಯೆಹೋವನು ಭೂಮಿಯಲ್ಲಿದ್ದ ತನ್ನ ಮಾನವ ಮಕ್ಕಳ ಮೇಲೆ ಪಿತೃವಾತ್ಸಲ್ಯವನ್ನು ಹರಿಸಿದನು!

ದಂಗೆಕೋರ ಮಕ್ಕಳು ದೇವರ ಆಳ್ವಿಕೆಯನ್ನು ಧಿಕ್ಕರಿಸಿದರು

6. (1) ದೇವರ ಕುಟುಂಬದಲ್ಲಿ ದಂಗೆ ಶುರುವಾದದ್ದು ಹೇಗೆ? (2) ಆ ದಂಗೆಯು ಯೆಹೋವನು ತನ್ನ ಅಧಿಕಾರ ಕಳಕೊಂಡನೆಂದು ಸೂಚಿಸುವುದಿಲ್ಲ ಏಕೆ?

6 ದುಃಖದ ವಿಷಯವೇನೆಂದರೆ, ಯೆಹೋವನು ತಮ್ಮ ರಾಜನಾಗಿರುವುದರಲ್ಲಿ ಆದಾಮಹವ್ವರು ತೃಪ್ತಿ ಕಂಡುಕೊಳ್ಳಲಿಲ್ಲ. ದೇವರ ವಿರುದ್ಧ ದಂಗೆಯೆದ್ದಿದ್ದ ಆತ್ಮಪುತ್ರನಾದ ಸೈತಾನನ ಹಿಂಬಾಲಕರಾಗಿರಲು ಅವರಿಬ್ಬರು ಆರಿಸಿಕೊಂಡರು. (ಆದಿ. 3:1-6) ದೇವರ ಆಳ್ವಿಕೆಯಡಿ ಇರದೆ ಹೋದದ್ದು ಅವರಿಗೂ ಅವರ ಸಂತತಿಯವರಿಗೂ ನೋವು, ಸಂಕಷ್ಟ, ಮರಣವನ್ನು ತಂದಿತು. (ಆದಿ. 3:16-19; ರೋಮ. 5:12) ಆಗ ದೇವರಿಗೆ ಭೂಮಿಯ ಮೇಲೆ ವಿಧೇಯ ಪ್ರಜೆಗಳು ಇಲ್ಲದೆ ಹೋದರು. ಇದರರ್ಥ ಯೆಹೋವನು ಇನ್ನು ಮುಂದೆ ಭೂಮಿ ಮತ್ತು ಅದರ ನಿವಾಸಿಗಳ ಮೇಲಿನ ನಿಯಂತ್ರಣ ಕಳೆದುಕೊಂಡನೆಂದೊ? ತನ್ನ ಪರಮಾಧಿಕಾರವನ್ನು ಕೈಬಿಟ್ಟನೆಂದೊ? ಖಂಡಿತ ಇಲ್ಲ! ಪಾಪಮಾಡಿದ ಪುರುಷ ಮತ್ತು ಸ್ತ್ರೀಯನ್ನು ಆತನು ಏದೆನ್‌ ತೋಟದಿಂದ ಹೊರಗಟ್ಟುವ ಮೂಲಕ ಹಾಗೂ ಅವರು ಇನ್ನೆಂದೂ ಅದರೊಳಗೆ ಬಾರದಂತೆ ಪ್ರವೇಶದ್ವಾರದಲ್ಲಿ ಕೆರೂಬಿಯರನ್ನು ಕಾವಲಿಡುವ ಮೂಲಕ ತನಗಿರುವ ಅಧಿಕಾರವನ್ನು ತೋರ್ಪಡಿಸಿದನು. (ಆದಿ. 3:23, 24) ಅದೇ ಸಮಯದಲ್ಲಿ ತಂದೆಯಾಗಿ ಆತನು ಪ್ರೀತಿಯನ್ನೂ ತೋರಿಸಿದನು. ಯಾವ ರೀತಿಯಲ್ಲಿ? ನಂಬಿಗಸ್ತ ಆತ್ಮಪುತ್ರರು ಮತ್ತು ಮಾನವ ಮಕ್ಕಳುಳ್ಳ ಒಂದು ವಿಶ್ವವ್ಯಾಪಿ ಕುಟುಂಬವನ್ನು  ಹೊಂದಿರಬೇಕೆಂಬ ತನ್ನ ಉದ್ದೇಶವು ನೆರವೇರಿಯೇ ತೀರುವುದೆಂದು ಆತನು ದೃಢೀಕರಿಸಿದನು. ಹೇಗೆಂದರೆ, ಸೈತಾನನನ್ನು ನಾಶಮಾಡಿ ಆದಾಮನ ಪಾಪದ ಪರಿಣಾಮಗಳನ್ನು ಅಳಿಸಿಹಾಕುವ ‘ಸಂತತಿಯೊಂದರ’ ಕುರಿತು ವಾಗ್ದಾನಿಸುವ ಮೂಲಕವೇ.—ಆದಿಕಾಂಡ 3:15 ಓದಿ.

7, 8. (1) ನೋಹನ ಸಮಯದಷ್ಟಕ್ಕೆ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು? (2) ಭೂಮಿಯನ್ನು ಶುದ್ಧಮಾಡಲು ಮತ್ತು ಮಾನವ ಕುಟುಂಬವನ್ನು ರಕ್ಷಿಸಲು ಯೆಹೋವನು ಯಾವ ಏರ್ಪಾಡುಗಳನ್ನು ಮಾಡಿದನು?

7 ಶತಮಾನಗಳು ಸಂದಂತೆ ಕೆಲವು ಮಂದಿ ಯೆಹೋವನಿಗೆ ನಿಷ್ಠೆಯಿಂದಿರುವ ಆಯ್ಕೆಮಾಡಿದರು. ಅವರಲ್ಲಿ ಇಬ್ಬರು ಹೇಬೆಲ ಮತ್ತು ಹನೋಕ. ಆದರೆ ಹೆಚ್ಚಿನ ಮಂದಿ ಯೆಹೋವನನ್ನು ತಮ್ಮ ತಂದೆಯಾಗಿಯೂ ಅರಸನಾಗಿಯೂ ಅಂಗೀಕರಿಸಲಿಲ್ಲ. ನೋಹನ ಸಮಯದಷ್ಟಕ್ಕೆ ಭೂಮಿಯಲ್ಲಿ “ಅನ್ಯಾಯವು . . . ತುಂಬಿಕೊಂಡಿತ್ತು.” (ಆದಿ. 6:11) ಹಾಗಾದರೆ ಭೂಮಿಯಲ್ಲಿ ನಡೆಯುತ್ತಿದ್ದ ವಿಷಯಗಳ ಮೇಲೆ ಯೆಹೋವನಿಗೆ ನಿಯಂತ್ರಣ ಇರಲಿಲ್ಲವೇ? ಐತಿಹಾಸಿಕ ದಾಖಲೆ ಈ ಬಗ್ಗೆ ಏನನ್ನುತ್ತದೆ?

8 ನೋಹನ ವೃತ್ತಾಂತ ಗಮನಿಸಿ. ನೋಹ ಮತ್ತು ಅವನ ಕುಟುಂಬದ ಸಂರಕ್ಷಣೆಗಾಗಿ ಬೃಹದಾಕಾರದ ನಾವೆ ಕಟ್ಟಲು ಬೇಕಾದ ಸವಿವರ ನಿರ್ದೇಶನಗಳನ್ನು ಯೆಹೋವನು ನೋಹನಿಗೆ ಕೊಟ್ಟನು. ಮಾತ್ರವಲ್ಲ ‘ನೀತಿಯನ್ನು ಸಾರುವಂತೆ’ ನೋಹನಿಗೆ ಅಪ್ಪಣೆ ಕೊಡುವ ಮೂಲಕ ಇಡೀ ಮಾನವ ಕುಟುಂಬದ ಮೇಲೆ ತನಗಿದ್ದ ಗಾಢ ಪ್ರೀತಿಯನ್ನು ವ್ಯಕ್ತಪಡಿಸಿದನು. (2 ಪೇತ್ರ 2:5) ನೋಹನು ಜನರಿಗೆ ಪಶ್ಚಾತ್ತಾಪಪಡುವಂತೆ ಕರೆಕೊಟ್ಟಿರಬೇಕು. ಬರಲಿರುವ ನಾಶನದ ಬಗ್ಗೆಯೂ ಎಚ್ಚರಿಸಿರಬೇಕು. ಆದರೆ ಜನರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನೋಹ ಮತ್ತು ಅವನ ಕುಟುಂಬ ಎಷ್ಟೋ ದಶಕಗಳ ವರೆಗೆ ಹಿಂಸಾಚಾರ, ಕೀಳ್ಮಟ್ಟದ ಅನೈತಿಕತೆಯಿಂದ ತುಂಬಿದ್ದ ಲೋಕದಲ್ಲಿ ಜೀವಿಸಿದರು. ಅಕ್ಕರೆಯುಳ್ಳ ತಂದೆಯಾದ ಯೆಹೋವನು ನಿಷ್ಠಾವಂತರಾಗಿದ್ದ ಆ ಎಂಟು ಮಂದಿಯನ್ನು ರಕ್ಷಿಸಿ, ಆಶೀರ್ವದಿಸಿದನು. ಆತನು ಭೌಗೋಳಿಕ ಜಲಪ್ರಳಯವನ್ನು ತರುವ ಮೂಲಕ ದಂಗೆಕೋರ ಮಾನವರ ಮತ್ತು ದುಷ್ಟ ದೇವದೂತರ ಮೇಲೆ ತನ್ನ ಪ್ರಭುತ್ವವನ್ನು ತೋರ್ಪಡಿಸಿದನು. ಹೌದು, ಯೆಹೋವನಿಗೆ ಭೂಮಿ ಮತ್ತು ಅದರ ನಿವಾಸಿಗಳ ಮೇಲೆ ನಿಶ್ಚಯವಾಗಿಯೂ ನಿಯಂತ್ರಣವಿತ್ತು.—ಆದಿ. 7:17-24.

ಯೆಹೋವನು ನಿರಂತರ ತನ್ನ ರಾಜತ್ವವನ್ನು ತೋರಿಸಿದ್ದಾನೆ (ಪ್ಯಾರ 6, 8, 10, 12, 17 ನೋಡಿ)

ಜಲಪ್ರಳಯದ ನಂತರ ಯೆಹೋವನ ರಾಜತ್ವ

9. ಜಲಪ್ರಳಯದ ನಂತರ ಯೆಹೋವನು ಮಾನವಕುಲಕ್ಕೆ ಯಾವ ಅವಕಾಶ ಕೊಟ್ಟನು?

9 ನೋಹ ಮತ್ತು ಅವನ ಕುಟುಂಬ ನಾವೆಯಿಂದ ಹೊರಬಂದು ಶುದ್ಧೀಕರಿಸಲ್ಪಟ್ಟ ಭೂಮಿಯ ಮೇಲೆ ಕಾಲಿಟ್ಟಾಗ, ಶುದ್ಧ ಗಾಳಿಯನ್ನು ಸೇವಿಸಿದಾಗ ಅವರ ಹೃದಯದಲ್ಲಿ ಕೃತಜ್ಞತೆ ಉಕ್ಕೇರಿತು. ಯೆಹೋವನ ಆರೈಕೆ, ಸಂರಕ್ಷಣೆಗಾಗಿ ಅವರು ಆಭಾರಿಗಳಾಗಿದ್ದರು. ಹಾಗಾಗಿ ಕೂಡಲೆ ನೋಹ ಯೆಹೋವನನ್ನು ಆರಾಧಿಸಲಿಕ್ಕಾಗಿ ಒಂದು ವೇದಿಯನ್ನು ಕಟ್ಟಿ ಯಜ್ಞಗಳನ್ನು ಅರ್ಪಿಸಿದನು. ಯೆಹೋವನು ಅವರೆಲ್ಲರನ್ನು ಆಶೀರ್ವದಿಸಿ, “ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ” ಎಂದು ಹೇಳಿದನು. (ಆದಿ. 8:20–9:1) ಈಗ ಮತ್ತೊಮ್ಮೆ, ಆರಾಧನೆಯಲ್ಲಿ ಐಕ್ಯವಾಗಿರುವ ಮತ್ತು ಇಡೀ ಭೂಮಿಯಲ್ಲಿ ತುಂಬಿಕೊಳ್ಳುವ ಅವಕಾಶ ಮಾನವಕುಲದ ಮುಂದಿತ್ತು.

10. (1) ಜಲಪ್ರಳಯದ ನಂತರ ಜನರು ಎಲ್ಲಿ ಮತ್ತು ಹೇಗೆ ಯೆಹೋವನ ವಿರುದ್ಧ ದಂಗೆ ಎದ್ದರು? (2) ಯೆಹೋವನು ತನ್ನ ಚಿತ್ತ ನೆರವೇರುವಂತೆ ಹೇಗೆ ನೋಡಿಕೊಂಡನು?

10 ಜಲಪ್ರಳಯ ದುಷ್ಟತನವನ್ನು ತೊಡೆದುಹಾಕಿತ್ತು ಆದರೆ ಅಪರಿಪೂರ್ಣತೆಯನ್ನು ಅಲ್ಲ. ಅದೂ ಅಲ್ಲದೆ ಸೈತಾನ ಮತ್ತು ದಂಗೆಕೋರ ದೇವದೂತರ ಅದೃಶ್ಯ ಪ್ರಭಾವವನ್ನು ಮಾನವರು ಇನ್ನೂ ಎದುರಿಸಬೇಕಿತ್ತು. ಸ್ವಲ್ಪದರಲ್ಲೇ ಪುನಃ ಜನರು ಯೆಹೋವನ ಪ್ರೀತಿಭರಿತ ಆಳ್ವಿಕೆಯ ವಿರುದ್ಧ ದಂಗೆಯೆದ್ದರು. ಅವರಲ್ಲೊಬ್ಬ ನೋಹನ ಮರಿಮಗ ನಿಮ್ರೋದ. ಅವನು ಯೆಹೋವನ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸಿದನು. “ಅವನು [ಯೆಹೋವನಿಗೆ ವಿರುದ್ಧ ಎದ್ದ, NW] ಅತಿಸಾಹಸಿಯಾದ ಬೇಟೆಗಾರ” ಆಗಿದ್ದನು. ಬಾಬೆಲ್‍ನಂಥ ದೊಡ್ಡ ದೊಡ್ಡ ಪಟ್ಟಣಗಳನ್ನು ಕಟ್ಟಿಸಿದನು. “ಶಿನಾರ್‌ ದೇಶದಲ್ಲಿ” ತನ್ನನ್ನೇ ಒಬ್ಬ ರಾಜನಾಗಿ ಘನತೆಗೇರಿಸಿಕೊಂಡನು. (ಆದಿ. 10:8-12) ನಿತ್ಯತೆಯ ಅರಸನಾದ ಯೆಹೋವನು ಆ ಪ್ರತಿಭಟಕ ರಾಜನ ವಿರುದ್ಧ ಯಾವ ಕ್ರಮ ತಕ್ಕೊಂಡನು? ಮಾನವರು ‘ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಬೇಕೆಂಬುದು’ ಯೆಹೋವನ ಉದ್ದೇಶವಾಗಿತ್ತು. ಈ ಉದ್ದೇಶವನ್ನು ಭಂಗಗೊಳಿಸಲು ನಿಮ್ರೋದ ಪ್ರಯತ್ನಿಸಿದಾಗ ಯೆಹೋವನು ಏನು ಮಾಡಿದನು? ಜನರ ಭಾಷೆಗಳನ್ನು ತಾರುಮಾರು ಮಾಡಿದನು. ಇದರಿಂದ ನಿಮ್ರೋದನ ಪ್ರಜೆಗಳು ಬೇಸತ್ತು ಕಂಗಾಲಾಗಿ “ಭೂಲೋಕದಲ್ಲೆಲ್ಲಾ” ಚೆದರಿಹೋದರು. ಹೋಗುವಾಗ ತಮ್ಮ ತಮ್ಮ ಸುಳ್ಳು ಆರಾಧನೆಯನ್ನೂ ಕೊಂಡೊಯ್ದರು. ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡುವ ಸ್ವಭಾವವೂ ಅದರೊಂದಿಗೆ ಎಲ್ಲೆಡೆ ಹರಡಿತು.—ಆದಿ. 11:1-9.

11. ಯೆಹೋವನು ತನ್ನ ಸ್ನೇಹಿತ ಅಬ್ರಹಾಮನಿಗೆ ಹೇಗೆ ನಿಷ್ಠೆ ತೋರಿಸಿದನು?

11 ಜಲಪ್ರಳಯದ ನಂತರ ಅನೇಕರು ಸುಳ್ಳು ದೇವರುಗಳನ್ನು ಪೂಜಿಸಿದರಾದರೂ ಯೆಹೋವನನ್ನು ಆರಾಧಿಸುತ್ತಿದ್ದ ಕೆಲವು ನಂಬಿಗಸ್ತ ಜನರೂ ಇದ್ದರು. ಉದಾಹರಣೆಗೆ, ಅಬ್ರಹಾಮನು ಯೆಹೋವನ ಮಾತಿಗೆ ವಿಧೇಯನಾಗಿ ತನ್ನೂರಾದ ಊರ್‌ ಪಟ್ಟಣದ ಸುಖಸೌಕರ್ಯಗಳನ್ನು ಬಿಟ್ಟುಬಂದು ಎಷ್ಟೋ ವರ್ಷಗಳ ವರೆಗೆ ಡೇರೆಗಳಲ್ಲಿ ವಾಸಿಸಿದನು. (ಆದಿ. 11:31; ಇಬ್ರಿ. 11:8, 9) ಅಬ್ರಹಾಮ ಪ್ರಯಾಣ ಬೆಳೆಸುತ್ತಾ ಹೋಗುತ್ತಿದ್ದಾಗ  ಅವನು ಉಳಿದುಕೊಂಡ ಎಷ್ಟೋ ಸ್ಥಳಗಳಲ್ಲಿ ಮಾನವ ಅರಸರಿದ್ದರು. ಅವರಲ್ಲಿ ಅನೇಕರು ಭದ್ರಗೋಡೆಗಳಿದ್ದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಆದರೆ ಅಂಥ ರಕ್ಷಣೆಯಲ್ಲಿ ಅಬ್ರಹಾಮನು ಭರವಸೆಯಿಡಲಿಲ್ಲ. ಅವನನ್ನೂ ಅವನ ಪರಿವಾರವನ್ನೂ ಕಾಪಾಡಿದ್ದು ಯೆಹೋವನು. ತಂದೆಯಾಗಿ ಆತನು ಕೊಟ್ಟ ಸಂರಕ್ಷಣೆಯ ಬಗ್ಗೆ ಕೀರ್ತನೆಗಾರನೊಬ್ಬನು ಹೀಗಂದನು: ‘ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ದೇವರು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿದನು.’ (ಕೀರ್ತ. 105:13, 14) ಯೆಹೋವನು ತನ್ನ ಸ್ನೇಹಿತ ಅಬ್ರಹಾಮನಿಗೆ ನಿಷ್ಠೆಯಿಂದಿದ್ದು, “ನಿನ್ನಿಂದ . . . ಅರಸರೂ ಹುಟ್ಟುವರು” ಎಂದು ವಚನವಿತ್ತನು.—ಆದಿ. 17:6; ಯಾಕೋ. 2:23.

12. (1) ಯೆಹೋವನು ತನ್ನ ಪರಮಾಧಿಕಾರವನ್ನು ಐಗುಪ್ತದ ಮೇಲೆ ಹೇಗೆ ತೋರ್ಪಡಿಸಿದನು? (2) ಇದರಿಂದ ಆತನ ಸ್ವಜನರು ಹೇಗೆ ಪ್ರಯೋಜನ ಪಡಕೊಂಡರು?

12 ಯೆಹೋವನು ಅಬ್ರಹಾಮನ ಮಗ ಇಸಾಕನಿಗೂ ಮೊಮ್ಮಗ ಯಾಕೋಬನಿಗೂ ಅದೇ ಆಶೀರ್ವಾದ ಕೊಟ್ಟನು. ಅದರಲ್ಲಿ ಅವರ ಸಂತತಿಯವರು ರಾಜರಾಗುವರೆಂಬ ವಾಗ್ದಾನವೂ ಸೇರಿತ್ತು. (ಆದಿ. 26:3-5; 35:11) ಆದರೆ ತಮ್ಮಿಂದ ಅರಸರು ಬರುವುದಕ್ಕೆ ಮುಂಚೆ ಯಾಕೋಬನ ಸಂತತಿಯವರು ಐಗುಪ್ತದಲ್ಲಿ ದಾಸರಾದರು. ಹಾಗಾದರೆ ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸುವುದಿಲ್ಲವೆಂದೊ? ಅಥವಾ ಭೂಮಿಯ ಮೇಲಿನ ತನ್ನ ಪರಮಾಧಿಕಾರ ಕೈಬಿಟ್ಟನೆಂದೊ? ಖಂಡಿತ ಹಾಗಲ್ಲ! ತಕ್ಕ ಸಮಯದಲ್ಲಿ ಯೆಹೋವನು ತನ್ನ ಶಕ್ತಿಯನ್ನು, ಪರಮಾಧಿಕಾರವನ್ನು ಹಠಮಾರಿ ಫರೋಹನಿಗೆ ತೋರಿಸಿದನು. ದಾಸರಾಗಿದ್ದ ಇಸ್ರಾಯೇಲ್ಯರು ಯೆಹೋವನಲ್ಲಿ ನಂಬಿಕೆ ಇಟ್ಟರು. ಆತನು ಅವರನ್ನು ಕೆಂಪು ಸಮುದ್ರದಿಂದ ಅದ್ಭುತ ವಿಧದಲ್ಲಿ ಪಾರು ಮಾಡಿದನು. ಯೆಹೋವನು ಆಗ ಕೂಡ ವಿಶ್ವ ಪರಮಾಧಿಕಾರಿಯಾಗಿದ್ದನು ಎಂಬುದು ಸ್ಫಟಿಕ ಸ್ಪಷ್ಟ. ಪ್ರೀತಿಯುಳ್ಳ ತಂದೆಯಾಗಿ ಆತನು ತನ್ನ ಮಹಾಶಕ್ತಿಯನ್ನು ಪ್ರಯೋಗಿಸಿ ತನ್ನ ಜನರನ್ನು ಸಂರಕ್ಷಿಸಿದನು.—ವಿಮೋಚನಕಾಂಡ 14:13, 14 ಓದಿ.

ಯೆಹೋವನು ಇಸ್ರಾಯೇಲಿನಲ್ಲಿ ರಾಜ್ಯಾಧಿಕಾರ ವಹಿಸಿಕೊಂಡನು

13, 14. (1) ಇಸ್ರಾಯೇಲ್ಯರು ಯೆಹೋವನ ರಾಜತ್ವದ ಕುರಿತು ಏನೆಂದು ಹಾಡಿದರು? (2) ರಾಜತ್ವದ ಕುರಿತು ದೇವರು ದಾವೀದನಿಗೆ ಯಾವ ವಾಗ್ದಾನ ಮಾಡಿದನು?

13 ಐಗುಪ್ತದಿಂದ ಅದ್ಭುತ ರೀತಿಯಲ್ಲಿ ಬಿಡುಗಡೆ ಹೊಂದಿದ ಕೂಡಲೆ ಇಸ್ರಾಯೇಲ್ಯರು ಯೆಹೋವನನ್ನು ಸ್ತುತಿಸಲು ಒಂದು ವಿಜಯ ಗೀತೆಯನ್ನು ಹಾಡಿದರು. ಆ ಗೀತೆ ವಿಮೋಚನಕಾಂಡ ಅಧ್ಯಾಯ 15ರಲ್ಲಿ ದಾಖಲಾಗಿದೆ. ವಚನ 18 ಹೀಗನ್ನುತ್ತದೆ: “ಯೆಹೋವನೇ ಯುಗಯುಗಾಂತರಗಳಲ್ಲಿಯೂ ಆಳುವನು.” ಹೌದು, ಆ ಹೊಸ ಜನಾಂಗಕ್ಕೆ ಯೆಹೋವನೇ ಅರಸನಾದನು. (ಧರ್ಮೋ. 33:5) ಆದರೆ ಅದೃಶ್ಯ ಅಧಿಪತಿಯಾಗಿ ಯೆಹೋವನು ತಮ್ಮನ್ನು ಆಳುವುದು ಆ ಜನರಿಗೆ ಸಾಕಾಗಲಿಲ್ಲ. ಐಗುಪ್ತವನ್ನು ಬಿಟ್ಟು ಸುಮಾರು 400 ವರ್ಷಗಳಾದ ಮೇಲೆ ಅವರು ಸುತ್ತಲಿನ ಅನ್ಯ ಜನಾಂಗಗಳಿಗೆ ಇರುವಂತೆ ತಮಗೂ ಒಬ್ಬ ಮಾನವ ಅರಸನನ್ನು ನೇಮಿಸೆಂದು ದೇವರನ್ನು ಕೇಳಿದರು. (1 ಸಮು. 8:5) ಹಾಗಿದ್ದರೂ ಯೆಹೋವನು ಇನ್ನೂ ಅರಸನಾಗಿಯೇ ಇದ್ದನು. ಇಸ್ರಾಯೇಲ್ಯರ ಎರಡನೇ ರಾಜನಾದ ದಾವೀದನ ಆಳ್ವಿಕೆಯ ಸಮಯದಲ್ಲಿ ಈ ಸತ್ಯಾಂಶ ಸುವ್ಯಕ್ತವಾಯಿತು.

14 ದಾವೀದನು ಪವಿತ್ರವಾದ ಒಡಂಬಡಿಕೆಯ  ಮಂಜೂಷವನ್ನು ಯೆರೂಸಲೇಮಿಗೆ ತಂದ ಸಂತೋಷ ಸಡಗರದ ಸಂದರ್ಭದಲ್ಲಿ ಲೇವಿಯರು ಹಾಡಿದ ಸ್ತುತಿಗೀತೆಯಲ್ಲಿ ಗಮನಾರ್ಹ ಹೇಳಿಕೆಯೊಂದಿದೆ. ಆ ಮಾತು 1 ಪೂರ್ವಕಾಲವೃತ್ತಾಂತ 16:31ರಲ್ಲಿದೆ: “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.” ಆದರೆ ನೀವು ಕೇಳಬಹುದು, ‘ಯೆಹೋವನು ನಿತ್ಯತೆಯ ಅರಸನು ಅಲ್ಲವೇ? ಹೀಗಿರುವಾಗ ಆ ಸಮಯದಲ್ಲಿ ಆತನು ರಾಜ್ಯಾಧಿಕಾರ ವಹಿಸಿದ್ದಾನೆ ಎಂದು ಹೇಳುವುದು ಹೇಗೆ?’ ಅದು ಹೇಗೆಂದರೆ, ಒಂದು ನಿರ್ದಿಷ್ಟ ಸಮಯದಲ್ಲಿ ಇಲ್ಲವೆ ಒಂದು ಸನ್ನಿವೇಶವನ್ನು ನಿಭಾಯಿಸಲಿಕ್ಕಾಗಿ ಯೆಹೋವನು ತನ್ನ ರಾಜತ್ವವನ್ನು ತೋರ್ಪಡಿಸಿದರೆ ಅಥವಾ ತನ್ನ ಪ್ರತಿನಿಧಿಯಾಗಿ ಒಬ್ಬನನ್ನು ನೇಮಿಸಿದರೆ ಆತನು ರಾಜ್ಯಾಧಿಕಾರವನ್ನು ವಹಿಸಿಕೊಂಡನು ಎಂದರ್ಥ. ಯೆಹೋವನು ಈ ರೀತಿ ರಾಜತ್ವ ನಡೆಸುವುದು ದೂರದ ಭವಿಷ್ಯತ್ತಿನ ವರೆಗೂ ಮಹತ್ವಾರ್ಥವನ್ನು ಹೊಂದಿದೆ. ದಾವೀದನು ಸಾಯುವುದಕ್ಕೆ ಮುಂಚೆ ಯೆಹೋವನು ಅವನಿಗೆ ಅವನ ರಾಜತ್ವವು ನಿತ್ಯನಿರಂತಕ್ಕೂ ಮುಂದುವರಿಯುವುದೆಂದು ಮಾತುಕೊಟ್ಟನು. “ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು” ಎಂದು ಹೇಳಿದನು. (2 ಸಮು. 7:12, 13) ಈ ವಾಗ್ದಾನಕ್ಕನುಸಾರ ದಾವೀದನಿಂದ ‘ಹುಟ್ಟುವವನು’ 1,000ಕ್ಕೂ ಹೆಚ್ಚು ವರ್ಷಗಳ ಬಳಿಕ ಬಂದನು. ಅವನು ಯಾರು? ಅವನು ಯಾವಾಗ ರಾಜನಾದನು?

ಯೆಹೋವನು ಹೊಸ ರಾಜನನ್ನು ನೇಮಿಸಿದನು

15, 16. (1) ಯೇಸುವನ್ನು ಭಾವೀ ರಾಜನಾಗಿ ಯಾವಾಗ ಅಭಿಷೇಕಿಸಲಾಯಿತು? (2) ಯೇಸು ತನ್ನ ಆಳ್ವಿಕೆಗಾಗಿ ಯಾವ ಏರ್ಪಾಡುಗಳನ್ನು ಮಾಡಿದನು?

15 ಕ್ರಿ.ಶ. 29ರಲ್ಲಿ ಸ್ನಾನಿಕನಾದ ಯೋಹಾನನು “ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂದು ಸಾರಿಹೇಳಲು ತೊಡಗಿದನು. (ಮತ್ತಾ. 3:2) ಯೋಹಾನನಿಂದ ಯೇಸು ದೀಕ್ಷಾಸ್ನಾನ ಪಡೆದುಕೊಂಡಾಗ ಯೆಹೋವನು ಅವನನ್ನು ವಾಗ್ದತ್ತ ಮೆಸ್ಸೀಯನಾಗಿ ಮತ್ತು ದೇವರ ರಾಜ್ಯದ ಭಾವೀ ಅರಸನಾಗಿ ಅಭಿಷೇಕಿಸಿದನು. “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎನ್ನುತ್ತ ಪಿತೃವಾತ್ಸಲ್ಯವನ್ನು ವ್ಯಕ್ತಪಡಿಸಿದನು.—ಮತ್ತಾ. 3:17.

16 ಯೇಸು ತನ್ನ ಸೇವೆಯಾದ್ಯಂತ ತಂದೆಯನ್ನು ಮಹಿಮೆಪಡಿಸಿದನು. (ಯೋಹಾ. 17:4) ಹೇಗೆ? ದೇವರ ರಾಜ್ಯದ ಕುರಿತು ಸಾರುವ ಮೂಲಕವೇ. (ಲೂಕ 4:43) ಆ ರಾಜ್ಯ ಬರಲಿ ಎಂದು ಪ್ರಾರ್ಥಿಸುವಂತೆ ಕೂಡ ಅವನು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾ. 6:10) ಯೇಸು ನೇಮಿತ ರಾಜನಾಗಿದ್ದ ಕಾರಣವೇ ತನ್ನ ವಿರೋಧಿಗಳಿಗೆ “ದೇವರ ರಾಜ್ಯವು ನಿಮ್ಮ ಮಧ್ಯದಲ್ಲಿಯೇ ಇದೆ” ಎಂದು ಹೇಳಲಿಕ್ಕಾಯಿತು. (ಲೂಕ 17:21) ತಾನು ಸಾಯುವುದಕ್ಕೆ ಹಿಂದಿನ ರಾತ್ರಿ ಅವನು ತನ್ನ ಅಪೊಸ್ತಲರೊಂದಿಗೆ ‘ಒಂದು ರಾಜ್ಯಕ್ಕಾಗಿ ಒಡಂಬಡಿಕೆಯನ್ನು’ ಮಾಡಿಕೊಂಡನು. ಹೀಗೆ ತನ್ನ ನಂಬಿಗಸ್ತ ಶಿಷ್ಯರಲ್ಲಿ ಕೆಲವರಿಗೆ ದೇವರ ರಾಜ್ಯದಲ್ಲಿ ತನ್ನೊಂದಿಗೆ ರಾಜರಾಗಿ ಆಳುವ ಪ್ರತೀಕ್ಷೆಯನ್ನು ಕೊಟ್ಟನು.—ಲೂಕ 22:28-30 ಓದಿ.

17. (1) ಒಂದನೇ ಶತಮಾನದಲ್ಲಿ ಯೇಸು ಸೀಮಿತ ವಿಧದಲ್ಲಿ ರಾಜ್ಯಾಧಿಕಾರವನ್ನು ನಡೆಸಲು ಆರಂಭಿಸಿದ್ದು ಹೇಗೆ? (2) ಆದರೆ ಆತನು ಯಾವುದಕ್ಕಾಗಿ ಕಾಯಬೇಕಿತ್ತು?

17 ದೇವರ ರಾಜ್ಯದ ಅರಸನಾಗಿ ಯೇಸು ಯಾವಾಗ ಆಳ್ವಿಕೆ ಮಾಡಲು ಆರಂಭಿಸಿದನು? ಆ ಒಡಂಬಡಿಕೆ ಮಾಡಿದ ಕೂಡಲೇ ಅಲ್ಲ. ಏಕೆಂದರೆ ಮರುದಿನ ಮಧ್ಯಾಹ್ನ ಅವನನ್ನು ಸಾಯಿಸಲಾಯಿತು ಮತ್ತು ಅವನ ಹಿಂಬಾಲಕರು ಚೆದರಿಹೋದರು. (ಯೋಹಾ. 16:32) ಆದರೂ ಈ ಮುಂಚಿನಂತೆ ಎಲ್ಲವೂ ಯೆಹೋವನ ನಿಯಂತ್ರಣದಲ್ಲಿತ್ತು. ಮೂರನೇ ದಿನ ಆತನು ತನ್ನ ಪುತ್ರನನ್ನು ಪುನರುತ್ಥಾನಗೊಳಿಸಿದನು. ಅಲ್ಲದೆ ಕ್ರಿ.ಶ. 33ರ ಪಂಚಾಶತ್ತಮದಂದು ಯೇಸು ತನ್ನ ಅಭಿಷಿಕ್ತ ಸಹೋದರರಿರುವ ಕ್ರೈಸ್ತ ಸಭೆಯ ಮೇಲೆ ಆಳ್ವಿಕೆ ನಡೆಸಲು ಆರಂಭಿಸಿದನು. (ಕೊಲೊ. 1:13) ಹಾಗಿದ್ದರೂ ವಾಗ್ದತ್ತ ‘ಸಂತತಿಯಾದ’ ಯೇಸು ಭೂಮಿಯ ಮೇಲೆ ಪೂರ್ಣ ರಾಜ್ಯಾಧಿಕಾರವನ್ನು ಪಡೆಯಲು ಕಾಯಬೇಕಿತ್ತು. ಯೆಹೋವನು ತನ್ನ ಮಗನಿಗೆ, “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು” ಎಂದು ನುಡಿದನು.—ಕೀರ್ತ. 110:1.

ನಿತ್ಯತೆಯ ಅರಸನನ್ನು ಆರಾಧಿಸಿರಿ

18, 19. (1) ಏನು ಮಾಡಲು ನಾವು ಪ್ರಚೋದಿಸಲ್ಪಟ್ಟಿದ್ದೇವೆ? (2) ಮುಂದಿನ ಲೇಖನದಲ್ಲಿ ಏನು ಕಲಿಯಲಿದ್ದೇವೆ?

18 ಸಾವಿರಾರು ವರ್ಷಗಳಿಂದ ದೇವದೂತರು ಮತ್ತು ಮಾನವರು ಯೆಹೋವನ ರಾಜತ್ವದ ವಿರುದ್ಧ ದಂಗೆ ಎದ್ದಿದ್ದಾರೆ. ಆದರೆ ಯೆಹೋವನು ವಿಷಯಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾನೆ. ತನ್ನ ಪರಮಾಧಿಕಾರವನ್ನು ಎಂದೂ ಬಿಟ್ಟುಬಿಟ್ಟಿಲ್ಲ. ಒಬ್ಬ ಪ್ರೀತಿಯ ತಂದೆಯಾಗಿ ಆತನು ನೋಹ, ಅಬ್ರಹಾಮ, ದಾವೀದ ಹಾಗೂ ತನ್ನೆಲ್ಲ ನಿಷ್ಠಾವಂತ ಪ್ರಜೆಗಳ ಕಾಳಜಿವಹಿಸಿದನು, ಸಂರಕ್ಷಿಸಿದನು. ಇದು ನಮ್ಮ ರಾಜನಾದ ಯೆಹೋವನಿಗೆ ವಿಧೇಯರಾಗಲು ಮತ್ತು ಇನ್ನಷ್ಟು ಆಪ್ತರಾಗಲು ನಮ್ಮನ್ನು ಪ್ರಚೋದಿಸುತ್ತದಲ್ಲವೇ?

19 ಆದರೆ ಈ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರಬಹುದು: ಯೆಹೋವನು ನಮ್ಮೀ ದಿನಗಳಲ್ಲೂ ರಾಜನಾಗಿರುವುದು ಹೇಗೆ? ನಾವು ಯೆಹೋವನ ರಾಜ್ಯದ ನಿಷ್ಠಾವಂತ ಪ್ರಜೆಗಳೆಂದು ರುಜುಪಡಿಸುವುದು ಮತ್ತು ಆತನ ವಿಶ್ವವ್ಯಾಪಿ ಕುಟುಂಬದಲ್ಲಿ ಪರಿಪೂರ್ಣ ಮಕ್ಕಳಾಗುವುದು ಹೇಗೆ? ದೇವರ ರಾಜ್ಯ ಬರಲಿ ಎಂದು ನಾವು ಪ್ರಾರ್ಥಿಸುವುದರ ಅರ್ಥವೇನು? ಇವುಗಳಿಗೆ ಉತ್ತರವನ್ನು ಮುಂದಿನ ಲೇಖನದಲ್ಲಿ ನೋಡುವೆವು.