ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೌವನದಲ್ಲಿ ವಿವೇಕದಿಂದ ಆಯ್ಕೆಗಳನ್ನು ಮಾಡಿ

ಯೌವನದಲ್ಲಿ ವಿವೇಕದಿಂದ ಆಯ್ಕೆಗಳನ್ನು ಮಾಡಿ

“ಪ್ರಾಯಸ್ಥರೇ, ಕನ್ಯೆಯರೇ, . . . ಯೆಹೋವನ ಹೆಸರನ್ನು ಸ್ತುತಿಸಿರಿ.”ಕೀರ್ತ. 148:12, 13, ಪವಿತ್ರ ಗ್ರಂಥ ಭಾಷಾಂತರ.

1. ಅನೇಕ ಯುವ ಕ್ರೈಸ್ತರು ಯಾವ ರೀತಿಯ ರೋಮಾಂಚಕ ಅವಕಾಶಗಳಲ್ಲಿ ಆನಂದಿಸುತ್ತಿದ್ದಾರೆ?

ನಾವೀಗ ಜೀವಿಸುತ್ತಿರುವುದು ರೋಮಾಂಚಕ ಸಮಯದಲ್ಲಿ. ಏಕೆಂದರೆ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ನಾನಾ ದೇಶಗಳ ಲಕ್ಷಗಟ್ಟಲೆ ಜನರು ಸತ್ಯಾರಾಧನೆಯನ್ನು ಸ್ವೀಕರಿಸುತ್ತಿದ್ದಾರೆ. (ಪ್ರಕ. 7:9, 10) ಇತರರಿಗೆ ಬೈಬಲಿನ ಜೀವದಾಯಕ ಸತ್ಯವನ್ನು ಕಲಿಸುತ್ತಾ ಮೈನವಿರೇಳಿಸುವ ಅನುಭವಗಳಲ್ಲಿ ಅನೇಕ ಯುವಜನರು ಆನಂದಿಸುತ್ತಿದ್ದಾರೆ. (ಪ್ರಕ. 22:17) ಕೆಲವು ಯೌವನಸ್ಥರು ಜನರೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಾ ಜೀವನವನ್ನು ಉತ್ತಮಗೊಳಿಸಲು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ಭಾಷೆ ಕಲಿತು ವಿದೇಶೀ ಭಾಷಾ ಕ್ಷೇತ್ರಗಳಲ್ಲಿ ಹುರುಪಿನಿಂದ ಸುವಾರ್ತೆ ಸಾರುತ್ತಿದ್ದಾರೆ. (ಕೀರ್ತ. 110:3; ಯೆಶಾ. 52:7) ಯೌವನಸ್ಥರೇ, ನೀವೂ ಅವರಂತೆ ಯೆಹೋವನ ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಆನಂದಿಸಲು ಏನು ಮಾಡಬಲ್ಲಿರಿ?

2. ಯೆಹೋವನು ಯುವಜನರಿಗೆ ಜವಾಬ್ದಾರಿಗಳನ್ನು ವಹಿಸಿಕೊಡಲು ಬಯಸುತ್ತಾನೆಂದು ತಿಮೊಥೆಯನ ಉದಾಹರಣೆ ಹೇಗೆ ತೋರಿಸುತ್ತದೆ? (ಮೇಲಿನ ಚಿತ್ರ ನೋಡಿ.)

2 ದೇವರ ಸೇವೆಯನ್ನು ಮಾಡಲು ಮುಂದೆ ನಿಮಗೆ ಹೆಚ್ಚು ಅವಕಾಶಗಳನ್ನು ಒದಗಿಸುವಂಥ ನಿರ್ಣಯಗಳನ್ನು ನೀವಿಂದೇ ಮಾಡಬಹುದು. ತಿಮೊಥೆಯನ ಉದಾಹರಣೆ ಗಮನಿಸಿ. ಅವನು ವಿವೇಕದಿಂದ ನಿರ್ಣಯಗಳನ್ನು ಮಾಡಿದ ಕಾರಣ ಹದಿವಯಸ್ಸಿನ ಕೊನೆಯಷ್ಟರಲ್ಲಿ ಅಥವಾ 20 ದಾಟಿದ ಸ್ವಲ್ಪದರಲ್ಲಿ ಮಿಷನರಿಯಾಗಿ ನೇಮಕ ಪಡೆದನು. (ಅ. ಕಾ. 16:1-3) ಬಹುಶಃ ಕೆಲವೇ ತಿಂಗಳುಗಳ ಬಳಿಕ ತಿಮೊಥೆಯನಿಗೆ ಒಂದು ದೊಡ್ಡ ನೇಮಕ ಸಿಕ್ಕಿತು. ತೀವ್ರ ವಿರೋಧವಿದ್ದ ಕಾರಣ ಥೆಸಲೊನೀಕವನ್ನು ಬಿಟ್ಟುಹೋಗಿದ್ದ ಪೌಲನು ಅಲ್ಲಿ ಹೊಸದಾಗಿ ರಚಿತವಾಗಿದ್ದ ಸಭೆಯಲ್ಲಿನ ಸಹೋದರರನ್ನು ಬಲಪಡಿಸಲು ಯುವಕ ತಿಮೊಥೆಯನನ್ನು ಕಳುಹಿಸಿದನು. (ಅ. ಕಾ. 17:5-15; 1 ಥೆಸ. 3:1, 2, 6) ಈ ನೇಮಕ ಪಡೆದಾಗ ತಿಮೊಥೆಯನು ಎಷ್ಟು ಪುಳಕಿತನಾಗಿದ್ದಿರಬೇಕು ಎಂದು ಊಹಿಸಿ.

 ನೀವು ಮಾಡಬೇಕಾದ ಅತಿ ಪ್ರಾಮುಖ್ಯ ನಿರ್ಣಯ

3. (1) ಜೀವನದಲ್ಲಿ ನೀವು ಮಾಡಬೇಕಾದ ಅತಿ ಪ್ರಾಮುಖ್ಯ ನಿರ್ಣಯ ಯಾವುದು? (2) ಆ ನಿರ್ಣಯವನ್ನು ನೀವು ಯಾವಾಗ ಮಾಡಬಲ್ಲಿರಿ?

3 ಯೌವನವು ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾದ ಸಮಯ. ಆದರೆ ಎಲ್ಲದಕ್ಕಿಂತ ಅತಿ ಪ್ರಾಮುಖ್ಯ ನಿರ್ಣಯ ಯಾವುದು? ಯೆಹೋವನ ಸೇವೆ ಮಾಡಲು ನೀವು ತಕ್ಕೊಳ್ಳುವ ನಿರ್ಣಯವಾಗಿದೆ. ಆ ನಿರ್ಣಯ ಮಾಡಲು ಅತ್ಯುತ್ತಮ ಸಮಯ ಯಾವುದೆಂದು ಯೆಹೋವನೇ ನಿಮಗೆ ಹೇಳುತ್ತಾನೆ: “ಯೌವನದಲ್ಲಿಯೇ ನಿನ್ನ [ಮಹಾನ್‌] ಸೃಷ್ಟಿಕರ್ತನನ್ನು ಸ್ಮರಿಸು.” (ಪ್ರಸಂ. 12:1) ಯೆಹೋವನನ್ನು ‘ಸ್ಮರಿಸುವ’ ಒಂದೇ ವಿಧವು ಆತನ ಸೇವೆಯನ್ನು ಪೂರ್ಣ ಹೃದಯದಿಂದ ಮಾಡುವುದಾಗಿದೆ. (ಧರ್ಮೋ. 10:12) ನಿಜವೇನೆಂದರೆ, ಈ ನಿರ್ಣಯವು ಇಡೀ ಜೀವಮಾನದಲ್ಲೇ ನೀವು ಮಾಡುವ ಅತಿ ಪ್ರಾಮುಖ್ಯ ನಿರ್ಣಯ. ಮಾತ್ರವಲ್ಲ ಇದು ನಿಮ್ಮ ಇಡೀ ಜೀವಿತವನ್ನು ರೂಪಿಸುವುದು.—ಕೀರ್ತ. 71:5.

4. ಯಾವ ನಿರ್ಣಯಗಳು ಕೂಡ ನೀವು ಮಾಡುವ ದೇವರ ಸೇವೆಯನ್ನು ಪ್ರಭಾವಿಸುತ್ತವೆ?

4 ಆದರೆ ಯೆಹೋವನ ಸೇವೆ ಮಾಡಲು ನೀವು ತಕ್ಕೊಳ್ಳುವ ನಿರ್ಣಯವಲ್ಲದೆ ಬೇರೆ ನಿರ್ಣಯಗಳು ಕೂಡ ನಿಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ ಮದುವೆಯಾಗಬೇಕಾ ಬೇಡವಾ, ಯಾರನ್ನು ಮದುವೆಯಾಗಬೇಕು, ಯಾವ ಉದ್ಯೋಗ ಮಾಡಬೇಕು ಎಂಬ ವಿಷಯದಲ್ಲಿ ಕೂಡ ನೀವು ನಿರ್ಣಯಗಳನ್ನು ಮಾಡಬೇಕು. ಇವು ಪ್ರಾಮುಖ್ಯ ನಿರ್ಣಯಗಳಾಗಿವೆ ನಿಜ. ಆದರೆ ಮೊದಲು ನೀವು ಯೆಹೋವನ ಸೇವೆಯನ್ನು ಆದಷ್ಟು ಪೂರ್ಣವಾಗಿ ಮಾಡುವ ವಿಚಾರದಲ್ಲಿ ನಿರ್ಣಯ ಮಾಡಿದರೆ ಜಾಣರು. (ಧರ್ಮೋ. 30:19, 20) ಏಕೆ? ಏಕೆಂದರೆ ಆ ಎಲ್ಲ ನಿರ್ಣಯಗಳಿಗೆ ಒಂದಕ್ಕೊಂದು ನಂಟಿದೆ. ವಿವಾಹ ಮತ್ತು ಉದ್ಯೋಗದ ವಿಷಯದಲ್ಲಿ ನೀವೇನು ನಿರ್ಣಯ ತಕ್ಕೊಳ್ಳುತ್ತೀರೋ ಅದು ನೀವು ಮಾಡುವ ಯೆಹೋವ ಸೇವೆಯನ್ನು ಪ್ರಭಾವಿಸುತ್ತದೆ. (ಲೂಕ 14:16-20 ಹೋಲಿಸಿ.) ಅದೇ ರೀತಿಯಲ್ಲಿ ದೇವರ ಸೇವೆ ಮಾಡಲು ನಿಮಗಿರುವ ಇಚ್ಛೆಯು ನಿಮ್ಮ ವಿವಾಹ ಮತ್ತು ಉದ್ಯೋಗದ ವಿಷಯದಲ್ಲಿ ನೀವು ತಕ್ಕೊಳ್ಳುವ ನಿರ್ಣಯಗಳನ್ನು ಪ್ರಭಾವಿಸುತ್ತದೆ. ಆದ್ದರಿಂದ ಯೌವನಸ್ಥರೇ ನಿಮ್ಮ ಜೀವನದಲ್ಲಿ ಅತಿ ಪ್ರಾಮುಖ್ಯವಾಗಿರುವುದನ್ನು ಮೊದಲು ನಿರ್ಣಯಿಸಿ.—ಫಿಲಿ. 1:10.

ಈ ಯುವ ಪ್ರಾಯದಲ್ಲಿ ನೀವೇನು ಮಾಡುವಿರಿ?

5, 6. ನೀವೀಗ ಸರಿಯಾದ ನಿರ್ಣಯಗಳನ್ನು ಮಾಡುವಲ್ಲಿ, ಮುಂದೆ ದೇವರ ಸೇವೆ ಮಾಡಲು ನಿಮಗೆ ಹೆಚ್ಚು ಅವಕಾಶಗಳು ಸಿಗಬಲ್ಲವು ಎಂಬುದಕ್ಕೆ ಒಂದು ಉದಾಹರಣೆ ಕೊಡಿ. (ಈ ಸಂಚಿಕೆಯಲ್ಲಿರುವ “ಚಿಕ್ಕಂದಿನಲ್ಲೇ ನಾನು ಮಾಡಿದ ಆಯ್ಕೆ” ಎಂಬ ಲೇಖನ ನೋಡಿ.)

5 ದೇವರ ಸೇವೆಯನ್ನು ಮಾಡಲು ನಿರ್ಣಯಿಸಿದ ನಂತರ ನೀವು ಏನು ಮಾಡಬೇಕೆಂದು ದೇವರು ಬಯಸುತ್ತಾನೆಂದು ಯೋಚಿಸಿರಿ. ಬಳಿಕ ಯಾವ ವಿಧದಲ್ಲಿ ಆತನ ಸೇವೆ ಮಾಡುವಿರೆಂದು ನಿರ್ಣಯಿಸಿ. ಜಪಾನಿನ ಸಹೋದರನೊಬ್ಬನು ಬರೆದ ಈ ವಿಷಯ ನಿಮಗೆ ಸಹಾಯ ಮಾಡಬಹುದು: “14ನೇ ವಯಸ್ಸಿನಲ್ಲಿದ್ದಾಗ ಒಮ್ಮೆ ನಾನು ಸಭೆಯ ಒಬ್ಬ ಹಿರಿಯರೊಂದಿಗೆ ಸೇವೆಗೆ ಹೋಗಿದ್ದೆ. ಸೇವೆಯಲ್ಲಿ ನನಗೆ ಆಸಕ್ತಿ, ಖುಷಿ ಇಲ್ಲದಿರುವುದನ್ನು ಅವರು ಗಮನಿಸಿದರು. ಆಗ ನನಗೆ ಮೃದುವಾಗಿ ‘ಯೂಚಿರೋ ನೀನು ಮನೆಗೆ ಹೋಗಪ್ಪ. ಯೆಹೋವನು ನಿನಗಾಗಿ ಏನೆಲ್ಲಾ ಮಾಡಿದ್ದಾನೆಂದು ಸ್ವಲ್ಪ ಕೂತು ಜಾಗ್ರತೆಯಿಂದ ಯೋಚಿಸು’ ಎಂದರು. ಅವರು ಹೇಳಿದ ಹಾಗೆ ಮಾಡಿದೆ. ಆವತ್ತು ಮಾತ್ರವಲ್ಲ ಕೆಲವು ದಿನಗಳ ವರೆಗೆ ಹಾಗೆ ಯೋಚಿಸುತ್ತಾ ಪ್ರಾರ್ಥನೆ ಕೂಡ ಮಾಡಿದೆ. ಕ್ರಮೇಣ ನನ್ನ ಮನೋಭಾವ ಬದಲಾಯಿತು. ಯೆಹೋವನ ಸೇವೆ ಮಾಡುವಾಗ ನನಗೆ ಖುಷಿ ಸಿಕ್ಕಿತು. ಮಿಷನರಿಗಳ ಅನುಭವಗಳನ್ನೂ ಓದಿದೆ. ಬಳಿಕ ದೇವರ ಸೇವೆಯನ್ನು ಹೆಚ್ಚು ಪೂರ್ಣವಾಗಿ ಮಾಡಬೇಕೆಂಬ ಆಸೆ ನನ್ನಲ್ಲಿ ಬಂತು.”

6 ಯೂಚಿರೋ ಮುಂದುವರಿಸಿ ಹೇಳಿದ್ದೇನೆಂದರೆ, “ವಿದೇಶಕ್ಕೆ ಹೋಗಿ ಸೇವೆ ಮಾಡಲು ನನಗೆ ಮನಸ್ಸಾಯಿತು. ಹಾಗಾಗಿ ಅದಕ್ಕೆ ನೆರವಾಗುವಂಥ ನಿರ್ಣಯಗಳನ್ನು ಮಾಡತೊಡಗಿದೆ. ಉದಾಹರಣೆಗೆ, ಇಂಗ್ಲಿಷ್‌ ಭಾಷಾ ಕೋರ್ಸನ್ನು ಆರಿಸಿಕೊಂಡೆ. ಹೈಸ್ಕೂಲ್‌ ಮುಗಿಸಿದ ನಂತರ ಪಯನೀಯರ್‌ ಸೇವೆ ಶುರುಮಾಡಿದೆ. ನನ್ನ ಖರ್ಚನ್ನು ನೋಡಿಕೊಳ್ಳಲು ಇಂಗ್ಲಿಷ್‌ ಕಲಿಸುವ ಪಾರ್ಟ್ಟೈಮ್‌ ಕೆಲಸ ಮಾಡಿದೆ. 20ನೇ ವಯಸ್ಸಿನಲ್ಲಿ ನಾನು ಮಂಗೋಲಿಯನ್‌ ಭಾಷೆ ಕಲಿಯಲಾರಂಭಿಸಿದೆ ಮಾತ್ರವಲ್ಲ ಮಂಗೋಲಿಯನ್‌ ಪ್ರಚಾರಕರಿರುವ ಗುಂಪನ್ನು ಭೇಟಿಮಾಡುವ ಅವಕಾಶವೂ ಸಿಕ್ಕಿತು. ಎರಡು ವರ್ಷಗಳ ನಂತರ 2007ರಲ್ಲಿ ನಾನು ಮಂಗೋಲಿಯ ದೇಶಕ್ಕೆ ಭೇಟಿಕೊಟ್ಟೆ. ಅಲ್ಲಿ ಕೆಲವು ಪಯನೀಯರರೊಂದಿಗೆ ಸೇವೆಗೆ ಹೋದಾಗ ಎಷ್ಟೋ ಜನರು ಸತ್ಯಕ್ಕಾಗಿ ಹುಡುಕುತ್ತಿದ್ದಾರೆಂದು ಗೊತ್ತಾಯಿತು. ಅಲ್ಲೇ ಇದ್ದು ನೆರವು ನೀಡಬೇಕೆಂದು ಇಷ್ಟಪಟ್ಟೆ. ಮತ್ತೆ ಜಪಾನಿಗೆ ಬಂದು ಮಂಗೋಲಿಯಕ್ಕೆ ಸ್ಥಳಾಂತರಿಸಲು ಯೋಜನೆ ಮಾಡಿದೆ. 2008ರ ಏಪ್ರಿಲ್‍ನಿಂದ ನಾನು ಮಂಗೋಲಿಯದಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದೇನೆ. ಇಲ್ಲಿ ಜೀವನ ಅಷ್ಟು ಸುಲಭವಲ್ಲ. ಆದರೆ ಜನರು ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ತೋರಿಸುತ್ತಾರೆ ಮತ್ತು ಯೆಹೋವನ ಸಮೀಪಕ್ಕೆ ಬರುವಂತೆ ಅವರಿಗೆ ಸಹಾಯಮಾಡಲು ನನ್ನಿಂದ ಸಾಧ್ಯವಾಗಿರುವುದರಿಂದ ಖುಷಿಯಾಗುತ್ತದೆ. ನಾನು ಆಯ್ಕೆ ಮಾಡಿರುವುದು ಅತ್ಯುತ್ತಮ ಜೀವನ ಎನ್ನುವುದರಲ್ಲಿ ಸಂಶಯವಿಲ್ಲ.”

7. (1) ನಾವು ಯಾವ ನಿರ್ಣಯಗಳನ್ನು ಮಾಡಲೇಬೇಕಿದೆ? (2) ಮೋಶೆ ಹೇಗೆ ನಮಗೆ ಮಾದರಿಯಾಗಿದ್ದಾನೆ?

7 ಯುವಜನರೇ ನಿಮ್ಮ ಕುರಿತೇನು? ಒಬ್ಬ ಯೆಹೋವನ ಸಾಕ್ಷಿಯಾಗಿ ನಿಮ್ಮ ಜೀವನವನ್ನು ಹೇಗೆ ಉಪಯೋಗಿಸಬೇಕೆಂಬ ನಿರ್ಣಯವನ್ನು ನೀವೇ ಮಾಡಬೇಕು. (ಯೆಹೋ.  24:15) ನೀವು ಮದುವೆಯಾಗಬೇಕೊ, ಬಾರದೊ, ಯಾರನ್ನು ಮದುವೆಯಾಗಬೇಕು ಅಥವಾ ಯಾವ ನೌಕರಿ ಮಾಡಬೇಕು ಎಂದು ನಾವು ಹೇಳಲು ಆಗದು. ಆದರೆ ತರಬೇತಿಗಾಗಿ ಹೆಚ್ಚು ಸಮಯ ಹಿಡಿಯದಿರುವಂಥ ಕೆಲಸವನ್ನು ನೀವು ಆರಿಸಿಕೊಳ್ಳಲು ಸಾಧ್ಯವೇ ಎಂದು ನೋಡಬಹುದು. ಯುವಜನರಾದ ನಿಮ್ಮಲ್ಲಿ ಕೆಲವರು ಬಡ ಹಳ್ಳಿಗಳಲ್ಲಿ, ಇನ್ನೂ ಕೆಲವರು ಶ್ರೀಮಂತ ನಗರಗಳಲ್ಲಿ ವಾಸಿಸುತ್ತಿರಬಹುದು. ಅಲ್ಲದೆ ಲೋಕವ್ಯಾಪಕವಾಗಿ ಇರುವ ನಿಮ್ಮೆಲ್ಲರ ವ್ಯಕ್ತಿತ್ವ, ಸಾಮರ್ಥ್ಯ, ಅನುಭವ, ಆಸಕ್ತಿ, ಆಧ್ಯಾತ್ಮಿಕ ಗುರಿಗಳು ಒಬ್ಬರಿಂದೊಬ್ಬರಿಗೆ ಎಷ್ಟೋ ಭಿನ್ನವಾಗಿರುತ್ತವೆ. ಪ್ರಾಚೀನ ಐಗುಪ್ತದಲ್ಲಿದ್ದ ಹೀಬ್ರು ಯೌವನಸ್ಥರಿಗೂ ಯುವ ಮೋಶೆಗೂ ಇದ್ದಷ್ಟು ಭಿನ್ನತೆ ನಿಮ್ಮ ಮಧ್ಯೆಯೂ ಇರಬಹುದು. ಮೋಶೆಗೆ ರಾಜನ ಆಸ್ಥಾನದಲ್ಲಿ ಸಕಲ ಸವಲತ್ತುಗಳಿದ್ದವು. ಆದರೆ ಇತರ ಯುವಜನರು ಅಡಿಯಾಳುಗಳಾಗಿ ಕೆಲಸಮಾಡುತ್ತಿದ್ದರು. (ವಿಮೋ. 1:13, 14; ಅ. ಕಾ. 7:21, 22) ಅಲ್ಲದೆ, ಅವರು ಕೂಡ ನಿಮ್ಮ ಹಾಗೆಯೇ ಮಹತ್ವಪೂರ್ಣ ಸಮಯದಲ್ಲಿ ಜೀವಿಸುತ್ತಿದ್ದರು. (ವಿಮೋ. 19:4-6) ಅವರಲ್ಲಿ ಪ್ರತಿಯೊಬ್ಬನು ಯೆಹೋವನನ್ನು ಪೂರ್ಣಹೃದಯದಿಂದ ಆರಾಧಿಸುವ ವಿಷಯದಲ್ಲಿ ತಾನೇ ನಿರ್ಣಯ ಮಾಡಬೇಕಿತ್ತು. ಮೋಶೆ ಸರಿಯಾದ ನಿರ್ಣಯ ಮಾಡಿದನು.—ಇಬ್ರಿಯ 11:24-27 ಓದಿ.

8. ಸರಿಯಾದ ನಿರ್ಣಯಗಳನ್ನು ಮಾಡಲಿಕ್ಕಾಗಿ ಯುವಜನರಿಗೆ ಯಾವ ಸಹಾಯವಿದೆ?

8 ವಿವೇಕದಿಂದ ನಿರ್ಣಯಗಳನ್ನು ಮಾಡಲು ನಿಮಗೆ ಯೆಹೋವನು ಸಹಾಯ ನೀಡುತ್ತಾನೆ. ಹೇಗೆ? ನೀವು ಎಂಥದ್ದೇ ಸನ್ನಿವೇಶದಲ್ಲಿದ್ದರೂ ಅನ್ವಯಿಸಲು ಸಾಧ್ಯವಾಗುವ ತತ್ವಗಳನ್ನು ಕೊಟ್ಟು ಆಲೋಚನೆ ಹೇಳುವ ಮೂಲಕವೇ. (ಕೀರ್ತ. 32:8) ಅವುಗಳನ್ನು ಅನ್ವಯಿಸುವುದು ಹೇಗೆಂಬ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ನಿಮ್ಮ ಸಾಕ್ಷಿ ಹೆತ್ತವರ ಮತ್ತು ಸಭಾ ಹಿರಿಯರ ಸಹಾಯವನ್ನು ನೀವು ಕೋರಬಹುದು. (ಜ್ಞಾನೋ. 1:8, 9) ಭವಿಷ್ಯದಲ್ಲಿ ಪ್ರಯೋಜನ ತರುವಂಥ ನಿರ್ಣಯಗಳನ್ನು ನೀವು ಈಗ ಮಾಡಲು ಬೈಬಲಿನ ಈ ಕೆಳಗಿನ ಮೂರು ಮೂಲತತ್ವಗಳು ಸಹಾಯ ಮಾಡುತ್ತವೆ.

ನಿಮ್ಮನ್ನು ಮಾರ್ಗದರ್ಶಿಸುವ ಬೈಬಲಿನ ಮೂರು ತತ್ವಗಳು

9. (1) ನಿರ್ಣಯಗಳನ್ನು ಮಾಡುವ ಸ್ವಾತಂತ್ರ್ಯ ಕೊಡುವ ಮೂಲಕ ಯೆಹೋವನು ಹೇಗೆ ನಮಗೆ ಘನತೆ ಕೊಡುತ್ತಾನೆ? (2) ‘ಮೊದಲು ದೇವರ ರಾಜ್ಯವನ್ನು ಹುಡುಕುವಲ್ಲಿ’ ಯಾವ ಅವಕಾಶಗಳು ಸಿಗುತ್ತವೆ?

9 ಮೊದಲು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. (ಮತ್ತಾಯ 6:19-21, 24-26, 31-34 ಓದಿ.) ಯೆಹೋವನು ನಿಮಗೆ ನಿರ್ಣಯ ಮಾಡುವ ಸ್ವಾತಂತ್ರ್ಯವನ್ನು ನೀಡುವ ಮೂಲಕ ಘನತೆ ಕೊಡುತ್ತಾನೆ. ಈ ಯೌವನ ಪ್ರಾಯದಲ್ಲಿ ನೀವೆಷ್ಟು ಸಮಯವನ್ನು ಆತನ ರಾಜ್ಯದ ಕುರಿತು ಸಾರಲು ಕೊಡಬೇಕೆಂದು ಆತನು ಹೇಳುವುದಿಲ್ಲ. ಆದರೆ ಮೊದಲು ದೇವರ ರಾಜ್ಯವನ್ನು ಹುಡುಕಿ ಎಂಬ ತತ್ವವನ್ನು ಯೇಸು ಹೇಳಿದ್ದಾನೆ. ಈ ತತ್ವವನ್ನು ನೀವು ಎಷ್ಟರ ಮಟ್ಟಿಗೆ ಅನ್ವಯಿಸುತ್ತೀರೊ ಅದರ ಮೇಲೆ ಹೊಂದಿಕೊಂಡು ನಿಮಗೆ ಸೇವಾ ಸದವಕಾಶಗಳು ಸಿಗುವವು. ದೇವರ ಮೇಲಿನ ನಿಮ್ಮ ಪ್ರೀತಿ, ನೆರೆಹೊರೆಯವರ ಮೇಲಿನ ನಿಮ್ಮ ಕಾಳಜಿ, ನಿತ್ಯಜೀವದ ನಿರೀಕ್ಷೆಗಾಗಿ ನಿಮಗಿರುವ ಕೃತಜ್ಞತೆ ಇವೆಲ್ಲವನ್ನು ವ್ಯಕ್ತಪಡಿಸಲು ಅನೇಕ ಅವಕಾಶಗಳು ನಿಮಗೆ ಸಿಗುವವು. ವಿವಾಹ ಮತ್ತು ಉದ್ಯೋಗದ ಬಗ್ಗೆ ಪರಿಗಣಿಸುವಾಗ ಈ ಬಗ್ಗೆ ಆಲೋಚಿಸಿ ನೋಡಿ: ನೀವು ಮಾಡುವ ಆಯ್ಕೆಗಳು ಭೌತಿಕ ವಿಷಯಗಳ ಬಗ್ಗೆ ನೀವು ಹೆಚ್ಚು ಚಿಂತಿತರಾಗಿದ್ದೀರಿ ಎಂದು ತೋರಿಸುತ್ತವೊ ಇಲ್ಲವೆ ದೇವರ ರಾಜ್ಯಕ್ಕಾಗಿ, ಆತನ ನೀತಿಗಾಗಿ ನಿಮಗೆ ಹುರುಪಿದೆ ಎಂದು ತೋರಿಸುತ್ತವೊ?

10. (1) ಯೇಸುವಿಗೆ ಯಾವುದು ಸಂತೋಷ ತಂದಿತು? (2) ಯಾವ ರೀತಿಯ ನಿರ್ಣಯಗಳು ನಿಮಗೆ ಸಂತೋಷ ತರುತ್ತವೆ?

10 ಇತರರ ಸೇವೆ ಮಾಡುವುದರಲ್ಲಿ ಸಂತೋಷ ಕಂಡುಕೊಳ್ಳಿರಿ. (ಅಪೊಸ್ತಲರ ಕಾರ್ಯಗಳು 20:20, 21, 24, 35 ಓದಿ.) ಇದು ಜೀವನದ ಒಂದು ಮೂಲಸೂತ್ರ. ಇದನ್ನು ಕಲಿಸಿದ ಯೇಸು ಸಂತೋಷದ ವ್ಯಕ್ತಿಯಾಗಿದ್ದನು. ಏಕೆಂದರೆ ಅವನು ತನ್ನ ಸ್ವಂತ ಇಚ್ಛೆಯಂತೆ ಮಾಡದೆ ತಂದೆಯ ಚಿತ್ತವನ್ನು ಮಾಡಿದನು. ಸುವಾರ್ತೆಗೆ ದೀನ ಜನರು ಒಳ್ಳೇ ಪ್ರತಿಕ್ರಿಯೆ ತೋರಿಸುವುದನ್ನು ನೋಡುವುದು ಯೇಸುವಿಗೆ ಸಂತೋಷ ಕೊಟ್ಟಿತು. (ಲೂಕ 10:21; ಯೋಹಾ. 4:34) ಪರರಿಗೆ ಸಹಾಯ ಮಾಡುವಾಗ ಸಿಗುವ ಸಂತೋಷವನ್ನು ನೀವು ಈಗಾಗಲೇ ಸವಿದಿರಬಹುದು. ಹಾಗಾಗಿ ನೀವು ಜೀವನದ ಅತಿ ಪ್ರಮುಖ ನಿರ್ಣಯಗಳನ್ನು ಯೇಸು ಕಲಿಸಿದ ತತ್ವಗಳಿಗೆ ಹೊಂದಿಕೆಯಲ್ಲಿ ಮಾಡುವುದಾದರೆ ಅದು ನಿಮಗೂ ಯೆಹೋವನಿಗೂ ಸಂತೋಷ ತರುವುದು ಖಚಿತ.—ಜ್ಞಾನೋ. 27:11.

11. (1) ಬಾರೂಕನು ಏಕೆ ಸಂತೋಷವನ್ನು ಕಳೆದುಕೊಂಡನು? (2) ಯೆಹೋವನು ಅವನಿಗೆ ಏನೆಂದು ಬುದ್ಧಿ ಹೇಳಿದನು?

11 ಯೆಹೋವನ ಸೇವೆ ಮಾಡುವುದರಿಂದ ನಮಗೆ ಅತ್ಯಧಿಕ ಸಂತೋಷ ಸಿಗುತ್ತದೆ. (ಜ್ಞಾನೋ. 16:20) ಇದನ್ನು ಯೆರೆಮೀಯನ ಕಾರ್ಯದರ್ಶಿಯಾದ ಬಾರೂಕನು ಮರೆತಿದ್ದನೆಂದು ತೋರುತ್ತದೆ. ಒಂದು ಸಮಯದಲ್ಲಿ ಅವನು ಯೆಹೋವನ ಸೇವೆ ಮಾಡುವುದರಲ್ಲಿ ಆನಂದಿಸಲಿಲ್ಲ. ಆಗ ಯೆಹೋವನು ಅವನಿಗೆ, “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡುಹೋಗುವದಕ್ಕೆ ನಿನಗೆ ಅವಕಾಶ ಕೊಡುವೆನು” ಎಂದು ಹೇಳಿದನು. (ಯೆರೆ. 45:3, 5) ಬಾರೂಕನಿಗೆ ಯಾವುದರಿಂದ ಸಂತೋಷ ಸಿಗುತ್ತಿತ್ತೆಂದು ನೀವು ನೆನಸುತ್ತೀರಿ? ತಾನು ಇಚ್ಛಿಸಿದಂತೆ ಮಹಾಪದವಿಯ ಬೆನ್ನು ಹತ್ತುವುದರಿಂದಲೊ? ಅಥವಾ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿ ಯೆರೂಸಲೇಮಿನ ನಾಶನವನ್ನು ಪಾರಾಗುವುದರಿಂದಲೊ?—ಯಾಕೋ. 1:12.

12. ರಾಮೀರೋ ಮಾಡಿದ ಯಾವ ಆಯ್ಕೆಯು ಅವನ ಜೀವನದಲ್ಲಿ ಸಂತೋಷ ಕೊಟ್ಟಿತು?

 12 ಇತರರ ಸೇವೆ ಮಾಡುವುದರಿಂದ ಸಂತೋಷ ಕಂಡುಕೊಂಡವರಲ್ಲಿ ಒಬ್ಬನು ರಾಮೀರೋ. ಅವನು ಹೀಗನ್ನುತ್ತಾನೆ: “ನನ್ನೂರು ಆ್ಯಂಡಿಸ್‌ಪರ್ವತದಲ್ಲಿನ ಒಂದು ಹಳ್ಳಿ. ನನ್ನ ಅಣ್ಣ ನನಗೆ ಯೂನಿವರ್ಸಿಟಿ ಶಿಕ್ಷಣಕ್ಕೆ ಬೇಕಾದ ಹಣವನ್ನು ಕೊಡುತ್ತೇನೆಂದು ಹೇಳಿದ. ನನ್ನದು ಬಡಕುಟುಂಬವಾದ ಕಾರಣ ಅದೊಂದು ಸುವರ್ಣಾವಕಾಶವಾಗಿತ್ತು. ಅದೇ ಸಮಯದಲ್ಲಿ ಇನ್ನೊಂದು ಅವಕಾಶವೂ ನನಗೆ ಒದಗಿಬಂದಿತ್ತು. ನಾನು ಆಗ ತಾನೇ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾಗಿದ್ದೆ. ಒಬ್ಬ ಪಯನೀಯರನು ಚಿಕ್ಕ ಪಟ್ಟಣವೊಂದರಲ್ಲಿ ಸಾರಲು ತನ್ನನ್ನು ಜೊತೆಗೂಡುವಂತೆ ಆಮಂತ್ರಿಸಿದ್ದನು. ನಾನಿದನ್ನೇ ಆರಿಸಿಕೊಂಡೆ. ಅವನ ಜೊತೆ ಆ ಪಟ್ಟಣಕ್ಕೆ ಹೋದೆ. ನನ್ನ ಖರ್ಚಿಗಾಗಿ ನಾನಲ್ಲಿ ಕೂದಲು ಕತ್ತರಿಸುವ ಕೆಲಸ ಕಲಿತು ಕ್ಷೌರದಂಗಡಿ ತೆರೆದೆ. ಬೈಬಲಿನ ಬಗ್ಗೆ ಕಲಿಸುತ್ತೇವೆಂದು ಜನರಿಗೆ ಹೇಳಿದಾಗ ಅನೇಕರು ಸಂತೋಷದಿಂದ ಒಪ್ಪಿಕೊಂಡರು. ನಂತರ ನಾನು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಹೊಸದಾಗಿ ಆರಂಭಗೊಂಡಿದ್ದ ಸಭೆಯ ಜೊತೆಸೇರಿದೆ. ನಾನೀಗ ಅಲ್ಲಿ ಕಳೆದ ಹತ್ತು ವರ್ಷಗಳಿಂದ ಪೂರ್ಣ ಸಮಯದ ಸೇವೆ ಮಾಡುತ್ತಿದ್ದೇನೆ. ಜನರು ತಮ್ಮ ಸ್ವಂತ ಭಾಷೆಯಲ್ಲಿ ಸುವಾರ್ತೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುವುದರಿಂದ ನನಗೆ ಸಿಗುತ್ತಿರುವ ಸಂತೋಷವನ್ನು ಬೇರೆ ಯಾವ ಉದ್ಯೋಗವೂ ಕೊಡಸಾಧ್ಯವಿಲ್ಲ.”

ರಾಮೀರೋ ಯೌವನದಿಂದಲೂ ಯೆಹೋವನ ಸೇವೆ ಮಾಡುತ್ತಾ ಆನಂದಿಸುತ್ತಿದ್ದಾನೆ (ಪ್ಯಾರ 12 ನೋಡಿ)

13. ಯೆಹೋವನ ಸೇವೆಯನ್ನು ಪೂರ್ಣವಾಗಿ ಮಾಡಲು ಯೌವನವು ಒಳ್ಳೇ ಸಮಯವೇಕೆ?

13 ಯೌವನದಲ್ಲಿ ಯೆಹೋವನ ಸೇವೆ ಮಾಡುವುದರಲ್ಲಿ ಆನಂದಿಸಿರಿ. (ಪ್ರಸಂಗಿ 12:1 ಓದಿ.) ‘ಮೊದಲು ನನಗೊಂದು ಒಳ್ಳೇ ಕೆಲಸ ಸಿಕ್ಕಿದರೆ ಮಾತ್ರ ನಂತರ ಪಯನೀಯರ್‌ ಸೇವೆ ಮಾಡಲಿಕ್ಕೆ ಆಗುತ್ತದೆ’ ಎಂದು ನೆನಸಬೇಡಿ. ಯೌವನವು ಯೆಹೋವನ ಸೇವೆಯನ್ನು ಪೂರ್ಣವಾಗಿ ಮಾಡಲು ಅತ್ಯುತ್ತಮ ಸಮಯ. ಏಕೆಂದರೆ ಅನೇಕ ಯುವಜನರಿಗೆ ಆಗ ಕುಟುಂಬ ಜವಾಬ್ದಾರಿಗಳು ಕಡಿಮೆಯಿರುತ್ತವೆ. ಜೊತೆಗೆ ಸವಾಲೊಡ್ಡುವ ನೇಮಕಗಳನ್ನು ಕೈಗೆತ್ತಿಕೊಳ್ಳಲು ಉತ್ತಮ ಆರೋಗ್ಯ ಮತ್ತು ಶಕ್ತಿಸಾಮರ್ಥ್ಯ ಇರುತ್ತದೆ. ನಿಮ್ಮ ಯೌವನದಲ್ಲಿ ಯೆಹೋವನಿಗಾಗಿ ನೀವೇನು ಮಾಡಲು ಇಷ್ಟಪಡುತ್ತೀರಿ? ಬಹುಶಃ ಪಯನೀಯರ್‌ ಸೇವೆ ಮಾಡುವ ಇಲ್ಲವೆ ಪರಭಾಷಾ ಕ್ಷೇತ್ರದಲ್ಲಿ ಸೇವೆ ಮಾಡುವ ಅಥವಾ ನೀವಿರುವ ಸಭೆಯಲ್ಲೇ ಹೆಚ್ಚು ಸೇವೆ ಮಾಡುವ ಗುರಿಯನ್ನು ನೀವಿಟ್ಟಿರಬಹುದು. ದೇವರ ಸೇವೆಯಲ್ಲಿ ನೀವು ಯಾವುದೇ ಗುರಿ ಇಟ್ಟಿರಲಿ ಜೀವನ ನಡೆಸಲಿಕ್ಕಾಗಿ ಯಾವುದಾದರೊಂದು ಉದ್ಯೋಗ ಮಾಡಬೇಕಾಗುತ್ತದೆ. ನೀವು ಯಾವ ಕೆಲಸವನ್ನು ಆರಿಸಿಕೊಳ್ಳುವಿರಿ? ಆ ಕೆಲಸಕ್ಕಾಗಿ ನಿಮಗೆ ಎಷ್ಟು ತರಬೇತಿ ಬೇಕಾಗುತ್ತದೆ?

 ವಿವೇಕದಿಂದ ನಿರ್ಣಯಗಳನ್ನು ಮಾಡಲು ಬೈಬಲ್‌ ತತ್ವಗಳನ್ನು ಅನ್ವಯಿಸಿ

14. ಉದ್ಯೋಗಕ್ಕಾಗಿ ಹುಡುಕುವಾಗ ಯಾವುದರ ಕುರಿತು ಎಚ್ಚರ ವಹಿಸಬೇಕು?

14 ಈಗ ಚರ್ಚಿಸಿದ ಬೈಬಲಿನ ಮೂರು ತತ್ವಗಳು ಉದ್ಯೋಗದ ವಿಷಯದಲ್ಲಿ ವಿವೇಕದಿಂದ ನಿರ್ಣಯ ಮಾಡಲು ನಿಮಗೆ ಸಹಾಯ ಮಾಡುತ್ತವೆ. ನೀವಿರುವ ಪ್ರದೇಶದಲ್ಲಿ ಇಲ್ಲವೆ ನೀವು ಸೇವೆ ಮಾಡಲಿಚ್ಛಿಸುವ ಸ್ಥಳದಲ್ಲಿ ಯಾವ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ನಿಮ್ಮ ಶಾಲೆಯಲ್ಲಿರುವ ಕೌನ್ಸಲರ್‌ಗಳು ಅಥವಾ ಸರಕಾರಿ ಏಜೆನ್ಸಿಗಳಿಗೆ ತಿಳಿದಿರುತ್ತದೆ. ಅಂಥ ಮಾಹಿತಿ ಸಹಾಯಕಾರಿ ನಿಜ. ಆದರೆ ಜಾಗ್ರತೆ! ಯೆಹೋವನನ್ನು ಪ್ರೀತಿಸದಿರುವ ಜನರು ನಿಮ್ಮ ಹೃದಯದಲ್ಲಿ ಲೋಕದ ಮೇಲೆ ಪ್ರೀತಿಯನ್ನು ನೆಡಲು ಪ್ರಯತ್ನಿಸಬಹುದು. (1 ಯೋಹಾ. 2:15-17) ಲೋಕವು ಕೊಡುವ ಅವಕಾಶಗಳ ಮೇಲೆ ಕಣ್ಣಾಡಿಸುವಾಗ ನಿಮ್ಮ ಹೃದಯವು ನಿಮ್ಮನ್ನು ಸುಲಭವಾಗಿ ವಂಚಿಸಬಲ್ಲದೆಂದು ಮರೆಯದಿರಿ.—ಜ್ಞಾನೋಕ್ತಿ 14:15 ಓದಿ; ಯೆರೆ. 17:9.

15, 16. ಉದ್ಯೋಗದ ವಿಷಯದಲ್ಲಿ ನಿಮಗೆ ಉತ್ತಮ ಮಾರ್ಗದರ್ಶನೆ ಯಾರು ನೀಡಬಲ್ಲರು?

15 ಯಾವ ಉದ್ಯೋಗಾವಕಾಶಗಳು ಇವೆ ಎಂದು ಗೊತ್ತಾದ ಬಳಿಕ ನಿಮಗೆ ವಿವೇಕಯುತ ಸಲಹೆ ಬೇಕಾಗುತ್ತದೆ. (ಜ್ಞಾನೋ. 1:5) ಬೈಬಲ್‌ ತತ್ವಗಳಿಗೆ ಹೊಂದಿಕೆಯಲ್ಲಿ ಯಾವ ಉದ್ಯೋಗವನ್ನು ಆಯ್ಕೆಮಾಡಬಹುದೆಂದು ತಿಳಿದುಕೊಳ್ಳಲು ನಿಮಗೆ ಯಾರು ಸಹಾಯ ಮಾಡಬಲ್ಲರು? ನಿಮ್ಮನ್ನು ಮತ್ತು ಯೆಹೋವನನ್ನು ಪ್ರೀತಿಸುವವರ, ನಿಮ್ಮ ಬಗ್ಗೆ, ನಿಮ್ಮ ಸನ್ನಿವೇಶದ ಬಗ್ಗೆ ಚೆನ್ನಾಗಿ ತಿಳಿದಿರುವವರ ಮಾತಿಗೆ ಕಿವಿಗೊಡಿ. ನೀವು ಏನು ಮಾಡಲಿಚ್ಛಿಸುತ್ತೀರಿ ಮತ್ತು ನಿಮ್ಮಿಂದ ನಿಜವಾಗಿಯೂ ಏನು ಮಾಡಲು ಆಗುತ್ತದೆ ಎನ್ನುವುದನ್ನು ಪ್ರಾಮಾಣಿಕವಾಗಿ ಯೋಚಿಸಿನೋಡುವಂತೆ ಅವರು ನಿಮಗೆ ಸಹಾಯ ಮಾಡುವರು. ಅವರು ಹೇಳುವ ಮಾತು ನೀವು ನಿಮ್ಮ ಗುರಿಗಳನ್ನು ಮರುಪರಿಶೀಲಿಸಲು ನೆರವಾಗಬಹುದು. ಯೆಹೋವನನ್ನು ಪ್ರೀತಿಸುವ ಹೆತ್ತವರು ನಿಮಗಿದ್ದರೆ ಅದೊಂದು ದೊಡ್ಡ ಆಶೀರ್ವಾದ! ಅವರು ನಿಮಗೆ ನೆರವಾಗಬಲ್ಲರು. ಆಧ್ಯಾತ್ಮಿಕವಾಗಿ ಅರ್ಹ ಪುರುಷರಾದ ಸಭಾ ಹಿರಿಯರು ಸಹ ನಿಮ್ಮನ್ನು ಸರಿಯಾಗಿ ಮಾರ್ಗದರ್ಶಿಸಬಲ್ಲರು. ಪಯನೀಯರರು ಮತ್ತು ಸಂಚರಣ ಮೇಲ್ವಿಚಾರಕರ ಬಳಿ ಕೂಡ ಮಾತಾಡಿ. ಅವರು ಪೂರ್ಣ ಸಮಯದ ಸೇವೆ ಮಾಡಲುನಿರ್ಣಯಿಸಿದ್ದೇಕೆ? ಪಯನೀಯರ್‌ ಸೇವೆಯನ್ನು ಅವರು ಶುರುಮಾಡಿದ್ದು ಹೇಗೆ? ಜೀವನಾವಶ್ಯಕತೆಯನ್ನು ಅವರು ಹೇಗೆ ನೋಡಿಕೊಳ್ಳುತ್ತಿದ್ದಾರೆ? ಸೇವೆಯಿಂದ ಅವರು ಯಾವ ಆಶೀರ್ವಾದಗಳನ್ನು ಪಡೆದಿದ್ದಾರೆ? ಎಂದು ಕೇಳಿ.—ಜ್ಞಾನೋ. 15:22.

16 ನಿಮ್ಮನ್ನು ಚೆನ್ನಾಗಿ ತಿಳಿದಿರುವವರು ವಿವೇಚನೆಯಿಂದ ನಿಮಗೆ ಸಲಹೆ ನೀಡಬಲ್ಲರು. ಒಂದುವೇಳೆ ನೀವು ಶಾಲೆಯಲ್ಲಿ ತುಂಬ ಕಷ್ಟಪಟ್ಟು ಓದಬೇಕಾಗುತ್ತದೆಂಬ ಕಾರಣಕ್ಕಾಗಿ ಹೈಸ್ಕೂಲ್‌ ಬಿಟ್ಟು ಪಯನೀಯರ್‌ ಸೇವೆ ಶುರುಮಾಡುವ ಯೋಚನೆಯಲ್ಲಿದ್ದರೆ ನಿಮ್ಮ ಮೇಲೆ ಪ್ರೀತಿಯಿರುವ ವ್ಯಕ್ತಿ ನಿಮ್ಮ ಉದ್ದೇಶವನ್ನು ಅರಿತುಕೊಂಡು ನೀವು ಓದು ಮುಂದುವರಿಸುವಂತೆ ಬುದ್ಧಿಹೇಳಬಹುದು. ಸುಲಭವಾಗಿ ಬಿಟ್ಟುಕೊಡದಿರುವ ಗುಣವನ್ನು ಶಾಲೆಗೆ ಹೋಗುವುದರಿಂದ ಕಲಿಯಲು ಸಾಧ್ಯ ಎಂದವರು ನಿಮಗೆ ಮನಗಾಣಿಸಬಹುದು. ಯೆಹೋವನ ಸೇವೆಯಲ್ಲಿ ನಿರಂತರ ಮುಂದುವರಿಯಬೇಕಾದರೆ ಪಟ್ಟುಹಿಡಿಯುವ ಗುಣ ತುಂಬ ಅಗತ್ಯ.—ಕೀರ್ತ. 141:5; ಜ್ಞಾನೋ. 6:6-10.

17. ಯಾವ ರೀತಿಯ ಉದ್ಯೋಗವನ್ನು ನಾವು ಸ್ವೀಕರಿಸಬಾರದು?

17 ದೇವರ ಸೇವಕರೆಲ್ಲರಿಗೂ ಆಧ್ಯಾತ್ಮಿಕ ಅಪಾಯಗಳು ಅಂದರೆ ಯೆಹೋವನಿಂದ ದೂರಮಾಡುವ ಪ್ರಭಾವಗಳು ಎದುರಾಗುತ್ತವೆ. (1 ಕೊರಿಂ. 15:33; ಕೊಲೊ. 2:8) ಕೆಲವು ರೀತಿಯ ಉದ್ಯೋಗಗಳು ಆಧ್ಯಾತ್ಮಿಕವಾಗಿ ಹೆಚ್ಚು ಅಪಾಯಕರವಾಗಿರಬಹುದು. ಒಂದು ನಿರ್ದಿಷ್ಟ ಉದ್ಯೋಗವನ್ನು ಆರಿಸಿಕೊಂಡ ಬಳಿಕ ‘ತಮ್ಮ ನಂಬಿಕೆಯ ವಿಷಯದಲ್ಲಿ ಹಡಗೊಡೆತವನ್ನು ಅನುಭವಿಸಿದವರ’ ಕುರಿತು ನಿಮಗೆ ಗೊತ್ತಿರಬಹುದು. (1 ತಿಮೊ. 1:19) ಹಾಗಾಗಿ ಯೆಹೋವನೊಂದಿಗಿನ ನಿಮ್ಮ ಸಂಬಂಧಕ್ಕೆ ಹಾನಿ ತರುವಂಥ ನೌಕರಿಯನ್ನು ಆರಿಸಿಕೊಳ್ಳದಿರುವುದು ಜಾಣತನ.—ಜ್ಞಾನೋ. 22:3.

ಯುವ ಕ್ರೈಸ್ತರೇ ಆನಂದಿಸಿರಿ

18, 19. ಯಾರಿಗಾದರೂ ಯೆಹೋವನ ಸೇವೆ ಮಾಡುವ ಇಚ್ಛೆ ಇಲ್ಲದಿದ್ದರೆ ಅವರೇನು ಮಾಡಬೇಕು?

18 ಯೆಹೋವನ ಸೇವೆ ಮಾಡುವ ಯಥಾರ್ಥ ಬಯಕೆ ನಿಮಗಿದ್ದರೆ ಯುವ ಕ್ರೈಸ್ತರಿಗಾಗಿರುವ ಸೇವಾ ಸದವಕಾಶಗಳಲ್ಲಿ ಆನಂದಿಸಿರಿ. ನಾವೀಗ ಜೀವಿಸುತ್ತಿರುವ ಈ ರೋಮಾಂಚಕ ಸಮಯದಲ್ಲಿ ಯೆಹೋವನ ಸೇವೆಯಲ್ಲಿ ಆನಂದಿಸಲು ಸಾಧ್ಯಮಾಡುವಂಥ ಆಯ್ಕೆಗಳನ್ನು ಮಾಡಿ.—ಕೀರ್ತ. 148:12, 13.

19 ಆದರೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ನಿಮಗೆ ಮನಸ್ಸಾಗುತ್ತಿಲ್ಲವಾದರೆ ಏನು ಮಾಡಬೇಕು? ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಿ. ಬಿಟ್ಟುಬಿಡಬೇಡಿ. ದೇವರು ಆಶೀರ್ವದಿಸುವಂಥ ಜೀವನ ಮಾರ್ಗವನ್ನು ಬೆನ್ನಟ್ಟಲು ತಾನು ಹಾಕಿದ ಶ್ರಮದ ಕುರಿತು ಅಪೊಸ್ತಲ ಪೌಲನು ತಿಳಿಸಿದ ಬಳಿಕ ಹೀಗೆ ಬರೆದನು: “ಯಾವುದೇ ವಿಷಯದಲ್ಲಿ ನೀವು ಬೇರೆ ಮನೋಭಾವವನ್ನು ಹೊಂದಿರುವುದಾದರೆ ದೇವರು ಯೋಗ್ಯವಾದ ಮನೋಭಾವವನ್ನು ನಿಮಗೆ ತೋರಿಸಿಕೊಡುವನು. ಏನೇ ಆಗಲಿ, ನಾವು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದೇವೋ ಅದೇ ನಿಯತಕ್ರಮದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಾ ಇರೋಣ.” (ಫಿಲಿ. 3:15, 16) ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆಂದು ಮರೆಯದಿರಿ. ಆತನು ಕೊಡುವ ಸಲಹೆ ಮಾತ್ರ ವಿವೇಕಯುತ. ಯೌವನದಲ್ಲಿ ವಿವೇಕದಿಂದ ನಿರ್ಣಯಗಳನ್ನು ಮಾಡಲು ನಿಮಗೆ ಬೇರೆಲ್ಲರಿಗಿಂತ ಯೆಹೋವನೇ ಉತ್ತಮ ಸಹಾಯ ನೀಡುವನು.