ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ—ನಮಗೆ ಒದಗಿಸುವಾತ, ನಮ್ಮ ಸಂರಕ್ಷಕ

ಯೆಹೋವ—ನಮಗೆ ಒದಗಿಸುವಾತ, ನಮ್ಮ ಸಂರಕ್ಷಕ

“ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.”—ಕೀರ್ತ. 91:14.

1, 2. ಕೌಟುಂಬಿಕ ಸನ್ನಿವೇಶಗಳು ಮತ್ತು ಆಧ್ಯಾತ್ಮಿಕ ಹಿನ್ನೆಲೆಗಳ ಸಂಬಂಧದಲ್ಲಿ ನಮ್ಮಲ್ಲಿ ಯಾವ ವ್ಯತ್ಯಾಸಗಳಿರಬಹುದು?

ಯೆಹೋವನು ಕುಟುಂಬ ಏರ್ಪಾಡಿನ ಮೂಲಕರ್ತನು. (ಎಫೆ. 3:14, 15) ಒಂದೇ ಕುಟುಂಬಕ್ಕೆ ಸೇರಿರುವವರಲ್ಲಿ ಒಬ್ಬೊಬ್ಬರ ಸ್ವಭಾವ, ಸನ್ನಿವೇಶಗಳು ಬೇರೆ ಬೇರೆಯಾಗಿರುತ್ತವೆ. ಉದಾಹರಣೆಗೆ, ಕೆಲವರು ಹುಟ್ಟಿನಿಂದ ಪ್ರಾಯಕ್ಕೆ ಬರುವವರೆಗೆ ಹೆತ್ತವರ ಜೊತೆ ಜೀವಿಸಿರಬಹುದು. ಆದರೆ ಇತರರು ತಂದೆತಾಯಿ ಇಬ್ಬರನ್ನೂ ಅಸ್ವಸ್ಥತೆ, ಅಪಘಾತ ಇಲ್ಲವೆ ಯಾವುದಾದರೂ ವಿಪತ್ತಿನಲ್ಲಿ ಕಳಕೊಂಡಿರಬಹುದು. ಇನ್ನೂ ಕೆಲವರಿಗೆ ಅಪ್ಪಅಮ್ಮ ಯಾರು ಅಂತ ಕೂಡ ಗೊತ್ತಿರುವುದಿಲ್ಲ.

2 ಯೆಹೋವನ ಆರಾಧಕರು ಒಂದೇ ಕುಟುಂಬವಾಗಿದ್ದರೂ ಆಧ್ಯಾತ್ಮಿಕ ಹಿನ್ನೆಲೆಗಳು ಭಿನ್ನ ಭಿನ್ನವಾಗಿರುತ್ತವೆ. ಉದಾಹರಣೆಗೆ ಹೆತ್ತವರು ನಿಮಗೆ ಚಿಕ್ಕಂದಿನಿಂದಲೇ ಬೈಬಲ್‌ ತತ್ವಗಳನ್ನು ಹೃದಯದಲ್ಲಿ ನಾಟಿಸಿರಬಹುದು. ಕೆಲವರು ಹೇಳುವಂತೆ ‘ಸತ್ಯದಲ್ಲಿ ನೀವು ಬೆಳೆದಿರಬಹುದು.’ (ಧರ್ಮೋ. 6:6, 7) ಅಥವಾ ಯೆಹೋವನ ಸೇವಕರು ಮಾಡುವ ಸಾರುವ ಕೆಲಸದ ಮೂಲಕ ಸತ್ಯವನ್ನು ಸ್ವೀಕರಿಸಿರುವ ಸಾವಿರಾರು ಮಂದಿಯಲ್ಲಿ ನೀವೂ ಒಬ್ಬರಾಗಿರಬಹುದು.—ರೋಮ. 10:13-15; 1 ತಿಮೊ. 2:3, 4.

3. ಯಾವ ವಿಷಯಗಳಲ್ಲಿ ನಮ್ಮಲ್ಲಿ ಸಮಾನತೆಯಿದೆ?

3 ನಮ್ಮ ಕೌಟುಂಬಿಕ, ಆಧ್ಯಾತ್ಮಿಕ ಹಿನ್ನೆಲೆ ಬೇರೆ ಬೇರೆಯಾಗಿದ್ದರೂ ಕೆಲವು ವಿಷಯಗಳಲ್ಲಿ ನಮ್ಮೆಲ್ಲರಲ್ಲಿ ಸಮಾನತೆ ಇದೆ. ಉದಾಹರಣೆಗೆ, ಆದಾಮನು ಅವಿಧೇಯನಾದ ಕಾರಣ ನಾವೆಲ್ಲರೂ ಸಂಕಷ್ಟಗಳನ್ನು ಅನುಭವಿಸುತ್ತೇವೆ ಮತ್ತು ಅಪರಿಪೂರ್ಣತೆ, ಪಾಪ, ಮರಣವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. (ರೋಮ. 5:12) ಹಾಗಿದ್ದರೂ ಸತ್ಯಾರಾಧಕರಾದ ನಾವು ಯೆಹೋವನನ್ನು “ನಮ್ಮ ತಂದೆ” ಎಂದು ಕರೆಯಸಾಧ್ಯ. ಪ್ರಾಚೀನ ಕಾಲದಲ್ಲಿ ದೇವರಿಂದ ಆರಿಸಲ್ಪಟ್ಟ ಜನರು ಯೆಹೋವನನ್ನು “ನೀನು ನಮ್ಮ ತಂದೆಯಾಗಿದ್ದೀ” ಎಂದು ಹೇಳಸಾಧ್ಯವಿತ್ತು. (ಯೆಶಾ. 64:8) ಮಾತ್ರವಲ್ಲ ಯೇಸು ಮಾದರಿ ಪ್ರಾರ್ಥನೆಯ ಆರಂಭದಲ್ಲಿ  “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂದು ಹೇಳಿದನು.—ಮತ್ತಾ. 6:9.

4, 5. ನಮ್ಮ ತಂದೆಯಾದ ಯೆಹೋವನ ಕಡೆಗೆ ಕೃತಜ್ಞತೆಯನ್ನು ಗಾಢಗೊಳಿಸಲಿಕ್ಕಾಗಿ ನಾವೇನನ್ನು ಪರಿಗಣಿಸುವೆವು?

4 ನಂಬಿಕೆಯಿಂದ ಯೆಹೋವನ ಹೆಸರೆತ್ತಿ ಕರೆಯುವ ನಮಗೆ ತಂದೆಯಾಗಿ ಆತನು ಬೇಕಾದ ಆರೈಕೆ ಮತ್ತು ಸಂರಕ್ಷಣೆಯನ್ನು ಕೊಡುತ್ತಾನೆ. ಯೆಹೋವನು ಹೀಗಂದನೆಂದು ಕೀರ್ತನೆಗಾರನು ಹೇಳಿದನು: “ಅವನು [ಒಬ್ಬ ಸತ್ಯಾರಾಧಕನು] ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.” (ಕೀರ್ತ. 91:14) ಹೌದು, ಯೆಹೋವ ದೇವರು ಪ್ರೀತಿಯಿಂದ ತನ್ನ ಜನರಾದ ನಮ್ಮನ್ನು ವೈರಿಗಳಿಂದ ತಪ್ಪಿಸಿ ಕಾಪಾಡುತ್ತಾನೆ. ಅವರ ಕೈಯಿಂದ ನಾಶವಾಗದಂತೆ ಸಂರಕ್ಷಿಸುತ್ತಾನೆ.

5 ಹಾಗಾಗಿ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಆತನ ಕಡೆಗೆ ಕೃತಜ್ಞತೆಯನ್ನು ಇನ್ನೂ ಗಾಢಗೊಳಿಸಲಿಕ್ಕಾಗಿ ನಾವೀಗ (1) ನಮ್ಮ ತಂದೆಯಾದ ಯೆಹೋವನು ನಮಗೆ ಹೇಗೆ ಒದಗಿಸುತ್ತಾನೆ (2) ಹೇಗೆ ನಮ್ಮ ಸಂರಕ್ಷಕನಾಗಿದ್ದಾನೆ (3) ಹೇಗೆ ನಮ್ಮ ಅತ್ಯಾಪ್ತ ಸ್ನೇಹಿತನಾಗಿದ್ದಾನೆ ಎಂದು ಚರ್ಚಿಸೋಣ. ಈ ಅಂಶಗಳನ್ನು ಪರಿಗಣಿಸುವಾಗ ದೇವರೊಂದಿಗೆ ನಮಗಿರುವ ಸಂಬಂಧದ ಕುರಿತು ಧ್ಯಾನಿಸೋಣ. ನಮ್ಮ ತಂದೆಯಾದ ಆತನನ್ನು ಹೇಗೆ ಘನಪಡಿಸುವುದೆಂದೂ ತಿಳಿಯೋಣ. ಜೊತೆಗೆ ತನಗೆ ಆಪ್ತರಾಗುವವರಿಗೆ ಯೆಹೋವನು ಕೊಡುವ ಆಶೀರ್ವಾದಗಳ ಕುರಿತೂ ಯೋಚಿಸೋಣ.—ಯಾಕೋ. 4:8.

ಯೆಹೋವನು ನಮ್ಮ ಮಹಾನ್‌ ಒದಗಿಸುವಾತ

6. ಯೆಹೋವನು ‘ಪ್ರತಿಯೊಂದು ಒಳ್ಳೆಯ ದಾನವನ್ನು’ ನೀಡುವಾತನಾಗಿದ್ದಾನೆ ಎಂಬುದನ್ನು ರುಜುಪಡಿಸುವ ಒಂದು ವಿಧ ಯಾವುದು?

6 ‘ಪ್ರತಿಯೊಂದು ಒಳ್ಳೆಯ ದಾನವೂ ಪ್ರತಿಯೊಂದು ಪರಿಪೂರ್ಣ ವರವೂ ಮೇಲಣಿಂದ ಬರುತ್ತದೆ; ಅದು ದಿವ್ಯ ಬೆಳಕುಗಳ ತಂದೆಯಾಗಿರುವಾತನಿಂದ ಇಳಿದುಬರುತ್ತದೆ’ ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋ. 1:17) ಯೆಹೋವನು ನಮಗೆ ಕೊಟ್ಟಿರುವ ಒಂದು ಅದ್ಭುತ ದಾನ ಅಥವಾ ಉಡುಗೊರೆ ಜೀವವಾಗಿದೆ. (ಕೀರ್ತ. 36:9) ನಾವು ಆತನ ಚಿತ್ತವನ್ನು ಮಾಡಲಿಕ್ಕಾಗಿ ಈ ಉಡುಗೊರೆಯನ್ನು ಉಪಯೋಗಿಸಿದರೆ ಈಗ ಅನೇಕಾನೇಕ ಆಶೀರ್ವಾದಗಳನ್ನು ಪಡೆಯುವೆವು, ಮಾತ್ರವಲ್ಲ ಹೊಸ ಲೋಕದಲ್ಲಿ ಶಾಶ್ವತ ಜೀವನ ನಮ್ಮದಾಗುವುದು. (ಜ್ಞಾನೋ. 10:22; 2 ಪೇತ್ರ 3:13) ಆದರೆ ಆದಾಮನ ಅವಿಧೇಯತೆಯ ಮಾರಕ ಪರಿಣಾಮಗಳನ್ನು ನಾವು ಅನುಭವಿಸುತ್ತಿರುವಾಗ ಶಾಶ್ವತವಾಗಿ ಜೀವಿಸಲು ಹೇಗೆ ಸಾಧ್ಯ?

7. ನಾವು ದೇವರೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳಲು ಸಾಧ್ಯವಾಗುವಂತೆ ಆತನೇ ಹೇಗೆ ದಾರಿ ಮಾಡಿದ್ದಾನೆ?

7 ಯೆಹೋವನು ಎಷ್ಟೆಲ್ಲ ವಿಧಗಳಲ್ಲಿ ನಮ್ಮ ಮಹಾನ್‌ ಒದಗಿಸುವಾತನಾಗಿದ್ದಾನೆ ಎಂದರೆ ಅದನ್ನು ಲೆಕ್ಕಿಸಲು ಆಗುವುದೇ ಇಲ್ಲ. ಉದಾಹರಣೆಗೆ ಆತನು ಅಪಾತ್ರ ದಯೆ ತೋರಿಸಿದ್ದರಿಂದ ಹೇಗೆ ನಮ್ಮ ಜೀವ ಉಳಿದಿದೆ ಎಂದು ಗಮನಿಸಿ. ನಾವೆಲ್ಲರೂ ಪಾಪಪೂರ್ಣರಾಗಿದ್ದೇವೆ. ನಮ್ಮ ಮೂಲತಂದೆಯಾದ ಆದಾಮನಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. (ರೋಮ. 3:23) ಹಾಗಿದ್ದರೂ ನಮ್ಮ ಮೇಲಿರುವ ಪ್ರೀತಿಯಿಂದಾಗಿ ಯೆಹೋವನೇ ಪ್ರಥಮ ಹೆಜ್ಜೆ ತಕ್ಕೊಂಡು ನಾವು ಆತನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳಲು ಸಾಧ್ಯವಾಗುವಂತೆ ದಾರಿಮಾಡಿದನು. ಈ ಬಗ್ಗೆ ಅಪೊಸ್ತಲ ಯೋಹಾನನು ಹೀಗೆ ಬರೆದನು: “ನಾವು ದೇವರ ಏಕೈಕಜಾತ ಪುತ್ರನ ಮೂಲಕ ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಆತನು ಅವನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಿಂದ ದೇವರ ಪ್ರೀತಿಯು ನಮ್ಮ ವಿಷಯದಲ್ಲಿ ಪ್ರಕಟವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಆತನು ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ನಮ್ಮ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವಾಗಿ ಕಳುಹಿಸಿಕೊಟ್ಟದ್ದರಲ್ಲಿ ಪ್ರೀತಿ ಏನೆಂಬುದು ತೋರಿಬಂತು.”—1 ಯೋಹಾ. 4:9, 10.

8, 9. ಯೆಹೋವನು ಮಹಾನ್‌ ಒದಗಿಸುವಾತನು ಎಂದು ಅಬ್ರಹಾಮ ಮತ್ತು ಇಸಾಕನ ದಿನಗಳಲ್ಲಿ ಹೇಗೆ ಸಾಬೀತಾಯಿತು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)

8 ಕ್ರಿ.ಪೂ. 19ನೇ ಶತಮಾನದಲ್ಲಿ ನಡೆದ ಒಂದು ಘಟನೆಯು ವಿಧೇಯ ಮಾನವರು ಶಾಶ್ವತ ಜೀವನ ಪಡೆಯುವಂತೆ ಯೆಹೋವನು ಪ್ರೀತಿಯಿಂದ ಯಾವ ಏರ್ಪಾಡು ಮಾಡಿದ್ದಾನೆಂದು ತೋರಿಸಿಕೊಡುತ್ತದೆ. ಇದನ್ನು ಇಬ್ರಿಯ 11:17-19 ಹೀಗೆ ವಿವರಿಸುತ್ತದೆ: “ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ಅರ್ಪಿಸುವಷ್ಟರ ಮಟ್ಟಿಗೆ ತನ್ನ ನಂಬಿಕೆಯನ್ನು ತೋರ್ಪಡಿಸಿದನು. ‘ಇಸಾಕನ ಮೂಲಕ ಹುಟ್ಟುವವರೇ “ನಿನ್ನ ಸಂತತಿ” ಎಂದು ಕರೆಯಲ್ಪಡುವರು’ ಎಂದು ಅವನಿಗೆ ಹೇಳಲಾಗಿದ್ದರೂ ವಾಗ್ದಾನಗಳನ್ನು ಸಂತೋಷದಿಂದ ಪಡೆದುಕೊಂಡಿದ್ದ ಆ ಮನುಷ್ಯನು ತನ್ನ ಏಕೈಕಜಾತ ಪುತ್ರನನ್ನು ಅರ್ಪಿಸಲು ಮುಂದಾದನು. ಆದರೆ ದೇವರು ಅವನನ್ನು ಸತ್ತವರೊಳಗಿಂದಲೂ ಎಬ್ಬಿಸಲು ಶಕ್ತನಾಗಿದ್ದಾನೆ ಎಂದು ನಂಬಿದ್ದನು; ಮತ್ತು ಅವನನ್ನು ಅಲ್ಲಿಂದ ದೃಷ್ಟಾಂತರೂಪದಲ್ಲಿ ನಿಶ್ಚಯವಾಗಿ ಪಡೆದನು.” ಇದರ ಹೋಲಿಕೆಯನ್ನು ನಾವು ಸುಲಭವಾಗಿ ಗ್ರಹಿಸಬಹುದು. ಅಬ್ರಹಾಮನು ತನ್ನ ಮಗನನ್ನು ಅರ್ಪಿಸಲು ಸಿದ್ಧನಿದ್ದಂತೆ ಯೆಹೋವನು ಮಾನವಕುಲವನ್ನು ರಕ್ಷಿಸಲಿಕ್ಕಾಗಿ ತನ್ನ ಮಗನಾದ ಯೇಸು ಕ್ರಿಸ್ತನನ್ನು ಸಿದ್ಧಮನಸ್ಸಿನಿಂದ ಅರ್ಪಿಸಿದನು.—ಯೋಹಾನ 3:16, 36 ಓದಿ.

9 ಇಸಾಕನ ಕುರಿತು ಯೋಚಿಸಿ. ಯಜ್ಞಕ್ಕಾಗಿ ತಾನು ಸಾಯಬೇಕಾಗಿಲ್ಲ ಎಂದು ತಿಳಿದಾಗ ಅವನಿಗೆಷ್ಟು  ನಿರಾಳವೆನಿಸಿರಬೇಕು! ತನಗೆ ಬದಲಾಗಿ ಪಕ್ಕದ ಪೊದೆಯಲ್ಲಿ ಒಂದು ಟಗರನ್ನು ಒದಗಿಸಿದ್ದಕ್ಕಾಗಿ ಇಸಾಕನು ದೇವರಿಗೆ ಖಂಡಿತ ಕೃತಜ್ಞನಾಗಿದ್ದಿರಬೇಕು. (ಆದಿ. 22:10-13) ಅಬ್ರಹಾಮನು ಆ ಸ್ಥಳಕ್ಕೆ “ಯೆಹೋವ ಯಿಾರೆ” ಎಂದು ಹೆಸರಿಟ್ಟದ್ದು ತಕ್ಕದ್ದಾಗಿತ್ತು. ಅದರರ್ಥ “ಯೆಹೋವನು ಒದಗಿಸುವನು” ಎಂದಾಗಿದೆ.—ಆದಿ. 22:14, ಪಾದಟಿಪ್ಪಣಿ.

ದೇವರೊಂದಿಗೆ ಸಮಾಧಾನ ಸಂಬಂಧ ಹೊಂದಲು ಏರ್ಪಾಡು

10, 11. (ಎ) ‘ಸಮಾಧಾನ ಸಂಬಂಧದ ಶುಶ್ರೂಷೆಯಲ್ಲಿ’ ಯಾರು ಮುಂದಾಳತ್ವ ವಹಿಸಿದ್ದಾರೆ? (ಬಿ) ಅವರದನ್ನು ಹೇಗೆ ಮಾಡಿದ್ದಾರೆ?

10 ಯೆಹೋವ ದೇವರು ನಮಗೆ ಒದಗಿಸಿರುವ ಎಲ್ಲ ವಿಷಯಗಳ ಬಗ್ಗೆ ನಾವು ಧ್ಯಾನಿಸುವಾಗ ಯೇಸುವಿನ ಯಜ್ಞವಿಲ್ಲದಿದ್ದರೆ ದೇವರ ಸ್ನೇಹಿತರಾಗಲು ಸಾಧ್ಯವಿರಲಿಲ್ಲವೆಂದು ಗ್ರಹಿಸುವೆವು. ಇದನ್ನು ಪೌಲನು ಸಹ ಗ್ರಹಿಸಿದನು. ಅವನು ಬರೆದದ್ದು: “ಒಬ್ಬ ಮನುಷ್ಯನು ಎಲ್ಲರಿಗೋಸ್ಕರ ಸತ್ತನೆಂದು ನಾವು ತೀರ್ಮಾನಿಸಿದ್ದೇವೆ; ಹೀಗೆ ಎಲ್ಲರೂ ಸತ್ತವರಾದರು. ಜೀವಿಸುವವರು ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ ಅವನು ಎಲ್ಲರಿಗೋಸ್ಕರ ಸತ್ತನು.”—2 ಕೊರಿಂ. 5:14, 15.

11 ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ದೇವರ ಮೇಲೆ ತಮಗಿದ್ದ ಪ್ರೀತಿಯನ್ನು ತೋರಿಸಲು ಮತ್ತು ಆತನ ಸೇವೆ ಮಾಡುವ ಬೆಲೆಕಟ್ಟಲಾಗದ ಸುಯೋಗಕ್ಕಾಗಿ ಕೃತಜ್ಞತೆಯನ್ನು ತೋರಿಸಲು “ಸಮಾಧಾನ ಸಂಬಂಧದ ಶುಶ್ರೂಷೆಯನ್ನು” ಸಂತೋಷದಿಂದ ಮಾಡಿದರು. ಈ ಶುಶ್ರೂಷೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವಾಗಿದೆ. ಇದು, ಸಹೃದಯದ ಜನರು ದೇವರೊಂದಿಗೆ ಶಾಂತಿಯ ಸಂಬಂಧಕ್ಕೆ ಬಂದು ಆತನ ಸ್ನೇಹಿತರಾಗಲು ಮತ್ತು ಸಮಯಾನಂತರ ಸ್ವರ್ಗದಲ್ಲಿ ಆತನ ಪುತ್ರರಾಗಲು ದಾರಿ ತೆರೆಯಿತು. ಇಂದಿರುವ ಅಭಿಷಿಕ್ತ ಕ್ರೈಸ್ತರು ಸಹ ಅದೇ ಶುಶ್ರೂಷೆಯನ್ನು ಮಾಡುತ್ತಿದ್ದಾರೆ. ದೇವರ ಮತ್ತು ಕ್ರಿಸ್ತನ ರಾಯಭಾರಿಗಳಾಗಿ ಅವರು ಮಾಡುತ್ತಿರುವ ಕೆಲಸವು ಪ್ರಾಮಾಣಿಕ ಹೃದಯದ ಜನರು ಯೆಹೋವನ ಕಡೆಗೆ ಸೆಳೆಯಲ್ಪಡುವುದನ್ನು ಮತ್ತು ವಿಶ್ವಾಸಿಗಳಾಗುವುದನ್ನು ಸಾಧ್ಯಮಾಡುತ್ತಿದೆ.—2 ಕೊರಿಂಥ 5:18-20 ಓದಿ; ಯೋಹಾ. 6:44; ಅ. ಕಾ. 13:48.

12, 13. ಯೆಹೋವನು ಒದಗಿಸಿರುವ ಎಲ್ಲವುಗಳಿಗಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಲ್ಲೆವು?

12 ತಮ್ಮ ಮಹಾನ್‌ ಒದಗಿಸುವಾತನಾದ ಯೆಹೋವನಿಗೆ ಕೃತಜ್ಞತೆ ತೋರಿಸಲು ಭೂನಿರೀಕ್ಷೆಯಿರುವ ಎಲ್ಲ ಕ್ರೈಸ್ತರು ಇಂದು ಅಭಿಷಿಕ್ತರೊಂದಿಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಾರುವ ಕೆಲಸದಲ್ಲಿ ನಾವು ಯೆಹೋವನ ಇನ್ನೊಂದು ಅದ್ಭುತಕರ ಒದಗಿಸುವಿಕೆಯಾದ ಬೈಬಲನ್ನು ಬಳಸುತ್ತೇವೆ. (2 ತಿಮೊ. 3:16, 17) ದೇವಪ್ರೇರಿತ ವಾಕ್ಯವಾದ ಬೈಬಲನ್ನು ಕೌಶಲದಿಂದ ಬಳಸುವಾಗ ನಾವು ಜನರಿಗೆ ನಿತ್ಯಜೀವವನ್ನು ಪಡೆಯುವ ಸದವಕಾಶವನ್ನು ಕೊಡುತ್ತೇವೆ. ಸಾರುವ ಕೆಲಸ ಮಾಡುವಾಗ ಸಹಾಯಕ್ಕಾಗಿ ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನ ಮತ್ತೊಂದು ಒದಗಿಸುವಿಕೆಯಾದ ಪವಿತ್ರಾತ್ಮದ ಮೇಲೆ ಹೊಂದಿಕೊಳ್ಳುತ್ತೇವೆ. (ಜೆಕ. 4:6; ಲೂಕ 11:13) ಈ ಸಾರುವ ಕೆಲಸದ ಫಲಿತಾಂಶಗಳನ್ನು ಪ್ರತಿ ವರ್ಷ ನಮ್ಮ ರಾಜ್ಯ ಸೇವೆ ಯಲ್ಲಿ ಬರುವ ಸೇವಾ ವರದಿಯಲ್ಲಿ ನೋಡುವಾಗ ನಿಬ್ಬೆರಗಾಗುತ್ತೇವೆ. ನಮ್ಮ ತಂದೆಯೂ ಒದಗಿಸುವಾತನೂ ಆದ ಯೆಹೋವನಿಗೆ ಸ್ತುತಿ ತರಲಿಕ್ಕಾಗಿ ಈ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಒಂದು ದೊಡ್ಡ ಸುಯೋಗವೇ ಸರಿ!

13 ಯೆಹೋವನು ನಮಗೆ ಬೇಕಾಗಿರುವ ಎಲ್ಲವನ್ನು ಒದಗಿಸಿರುವ ಕಾರಣ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಯೆಹೋವನ ಒದಗಿಸುವಿಕೆಗಳಿಗಾಗಿ ನಾನೆಷ್ಟು ಕೃತಜ್ಞನಾಗಿದ್ದೇನೆಂದು ಸೇವೆಯಲ್ಲಿ ನನ್ನಿಂದ ಆಗುವುದೆಲ್ಲವನ್ನೂ ಮಾಡುವ ಮೂಲಕ ತೋರಿಸುತ್ತಿದ್ದೇನಾ? ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಲಿಕ್ಕಾಗಿ ನಾನು ಯಾವೆಲ್ಲ ವಿಷಯಗಳಲ್ಲಿ ಪ್ರಗತಿ ಮಾಡಬೇಕು?’ ದೇವರು ನಮಗಾಗಿ ಒದಗಿಸಿರುವ ಎಲ್ಲ ಒಳ್ಳೇ ವಿಷಯಗಳಿಗಾಗಿ ನಾವು ನಿಜವಾಗಿಯೂ ಕೃತಜ್ಞರಾಗಿರುವುದಾದರೆ ಆತನ ರಾಜ್ಯವನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿಡುತ್ತೇವೆ. ಹಾಗೆ ಮಾಡುವಲ್ಲಿ ನಮ್ಮ ಅಗತ್ಯಗಳು ಪೂರೈಸಲ್ಪಡುವಂತೆ ನೋಡಿಕೊಳ್ಳುವನು. (ಮತ್ತಾ. 6:25-33) ಯೆಹೋವನ ಈ ಪ್ರೀತಿಗಾಗಿ ನಾವು ಆತನನ್ನು ಮೆಚ್ಚಿಸಲು ಮತ್ತು ಆತನ ಹೃದಯವನ್ನು ಸಂತೋಷಪಡಿಸಲು ಕೈಲಾದದ್ದೆಲ್ಲವನ್ನು ಮಾಡಬೇಕು.—ಜ್ಞಾನೋ. 27:11.

14. ಯೆಹೋವನು ಹೇಗೆ ತನ್ನ ಜನರ ಸಂರಕ್ಷಕನಾಗಿದ್ದಾನೆ?

14 ಕೀರ್ತನೆಗಾರ ದಾವೀದನು ಹೀಗೆ ಹಾಡಿದನು: “ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ; [ಯೆಹೋವನೇ] ನನ್ನ ಹಿತಚಿಂತಕನು. ನನ್ನ ದೇವರೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ.” (ಕೀರ್ತ. 40:17) ಯೆಹೋವನು ತನ್ನ ಜನರನ್ನು ಒಂದು ಗುಂಪಾಗಿ ಪದೇ ಪದೇ ರಕ್ಷಿಸಿದ್ದಾನೆ. ವಿಶೇಷವಾಗಿ ವಿರೋಧಿಗಳು ಅವರನ್ನು ತೀವ್ರವಾಗಿ ಹಿಂಸೆಪಡಿಸಿದಾಗ ಮತ್ತು ಪಟ್ಟುಹಿಡಿದು ಪೀಡಿಸಿದಾಗ. ಅಂಥ ಸಂಕಷ್ಟದ ಸಮಯಗಳಲ್ಲಿ ಯೆಹೋವನು ನಮಗೆ ನೀಡುವ ಸಹಾಯಕ್ಕಾಗಿ ಮತ್ತು ನಂಬಿಗಸ್ತರಾಗಿ ಉಳಿಯಲು ನಮಗಾಗಿ ಸದಾ ಮಾಡುವ ಅನೇಕ ಒದಗಿಸುವಿಕೆಗಳಿಗಾಗಿ ನಾವು ಹೃದಯದಾಳದಿಂದ ಕೃತಜ್ಞರಾಗಿದ್ದೇವೆ.

ಯೆಹೋವನು ಸಂರಕ್ಷಕ

15. ಪ್ರೀತಿಯುಳ್ಳ ಒಬ್ಬ ತಂದೆ ತನ್ನ ಮಗುವನ್ನು ಹೇಗೆ ಸಂರಕ್ಷಿಸುತ್ತಾನೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

15 ಒಬ್ಬ ಪ್ರೀತಿಯ ತಂದೆಯು ತನ್ನ ಮಕ್ಕಳಿಗೆ ಬೇಕಾಗಿರುವುದನ್ನು ಒದಗಿಸುತ್ತಾನೆ ಮಾತ್ರವಲ್ಲ ಅವರನ್ನು ಸಂರಕ್ಷಿಸುತ್ತಾನೆ  ಕೂಡ. ಮಕ್ಕಳೇನಾದರೂ ಅಪಾಯದಲ್ಲಿದ್ದರೆ ಅವರನ್ನು ರಕ್ಷಿಸಲು ಕೂಡಲೆ ಮುಂದಾಗುತ್ತಾನೆ. ಒಬ್ಬ ಸಹೋದರನು ತಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆಯನ್ನು ಹಂಚಿಕೊಳ್ಳುತ್ತಾನೆ. ಒಂದು ದಿನ ಅವನು ಮತ್ತು ಅವನ ತಂದೆ ಕ್ಷೇತ್ರ ಸೇವೆ ಮುಗಿಸಿ ಮನೆಗೆ ಹಿಂತೆರಳುತ್ತಿದ್ದರು. ದಾರಿಯಲ್ಲಿ ಅವರು ಒಂದು ತೊರೆಯನ್ನು ದಾಟಬೇಕಿತ್ತು. ಆವತ್ತು ಬೆಳಿಗ್ಗೆ ಜೋರು ಮಳೆಯಾಗಿದ್ದ ಕಾರಣ ತೊರೆಯ ನೀರು ಉಕ್ಕಿ ಹರಿಯುತ್ತಿತ್ತು. ತೊರೆಯಲ್ಲಿದ್ದ ದೊಡ್ಡ ಕಲ್ಲುಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಹಾರಿ ತೊರೆಯನ್ನು ದಾಟಬೇಕಿತ್ತೇ ಹೊರತು ಬೇರೆ ದಾರಿಯಿರಲಿಲ್ಲ. ಹುಡುಗನು ತಂದೆಯ ಮುಂದಾಗಿ ಕಲ್ಲುಗಳ ಮೇಲೆ ಹಾರತೊಡಗಿದ. ಆದರೆ ಒಂದು ಕಲ್ಲಿನ ಮೇಲೆ ಹಾರುವಾಗ ಆಯತಪ್ಪಿ ನೀರಿಗೆ ಬಿದ್ದು ಬಿಟ್ಟ. ಎರಡು ಸಲ ನೀರಿನಲ್ಲಿ ಮುಳುಗಿ ಮೇಲೆ ಬಂದ. ತಂದೆ ಕೂಡಲೆ ಕೈಚಾಚಿ ಅವನ ಭುಜವನ್ನು ಗಟ್ಟಿಯಾಗಿ ಹಿಡಿದು ಅವನನ್ನು ಮೇಲಕ್ಕೆಳೆದರು. ಮುಳುಗುತ್ತಿದ್ದ ತನ್ನನ್ನು ಅಪ್ಪ ಕಾಪಾಡಿದ್ದಕ್ಕಾಗಿ ಆ ಹುಡುಗ ತುಂಬ ಕೃತಜ್ಞನಾಗಿದ್ದ. ನಮ್ಮ ತಂದೆಯಾದ ಯೆಹೋವನು ಕೂಡ ನಮ್ಮನ್ನು ಈ ದುಷ್ಟ ಲೋಕದ ರೌದ್ರಾವೇಶವುಳ್ಳ ಪ್ರವಾಹದಂತಿರುವ ಅಪಾಯಗಳಿಂದ ಮತ್ತು ಲೋಕದ ಅಧಿಪತಿಯಾದ ಸೈತಾನನಿಂದ ತಪ್ಪಿಸಿ ಕಾಪಾಡುತ್ತಾನೆ. ಯೆಹೋವನು ನಮಗೆ ಅತ್ಯುತ್ತಮ ಸಂರಕ್ಷಕ. ಬೇರೆ ಯಾರೂ ಆತನಿಗೆ ಸಾಟಿಯಾಗಲಾರರು.—ಮತ್ತಾ. 6:13; 1 ಯೋಹಾ. 5:19.

16, 17. ಇಸ್ರಾಯೇಲ್ಯರು ಅಮಾಲೇಕ್ಯರೊಂದಿಗೆ ಹೋರಾಡುತ್ತಿದ್ದಾಗ ಯೆಹೋವನು ಹೇಗೆ ಸಹಾಯ ಮತ್ತು ಸಂರಕ್ಷಣೆ ನೀಡಿದನು?

16 ಯೆಹೋವನು ಇಸ್ರಾಯೇಲ್ಯರನ್ನು ರಕ್ಷಿಸಿದ ವಿಧವು ಆತನು ಪ್ರೀತಿಯಿಂದ ಒದಗಿಸುವ ಸಂರಕ್ಷಣೆಗೆ ಒಂದು ಉತ್ತಮ ಉದಾಹರಣೆ. ಕ್ರಿ.ಪೂ. 1513ರಲ್ಲಿ ಯೆಹೋವನು ಅವರನ್ನು ಐಗುಪ್ತದ ದಾಸತ್ವದಿಂದ ಬಿಡುಗಡೆ ಮಾಡಿದ್ದನು. ಮಾತ್ರವಲ್ಲ ಅದ್ಭುತವಾಗಿ ಅವರು ಕೆಂಪು ಸಮುದ್ರವನ್ನು ದಾಟುವಂತೆಯೂ ಮಾಡಿದ್ದನು. ತದನಂತರ ಅರಣ್ಯದಲ್ಲಿ ನಡೆದು ಸೀನಾಯಿ ಬೆಟ್ಟದೆಡೆಗೆ ಹೋಗುತ್ತಿದ್ದ ಇಸ್ರಾಯೇಲ್‌ ಜನಾಂಗವು ರೆಫಿದೀಮ್ ಎಂಬಲ್ಲಿಗೆ ಬಂತು. ಆಗ ಯೆಹೋವನು ಅವರಿಗೆ ಹೇಗೆ ಸಂರಕ್ಷಣೆ ಒದಗಿಸಿದನೆಂದು ಗಮನಿಸಿ.

17 ಅಸುರಕ್ಷಿತರೆಂಬಂತೆ ಕಂಡ ಇಸ್ರಾಯೇಲ್ಯರ ಮೇಲೆ ಸೈತಾನನು ಆಕ್ರಮಣ ಮಾಡಲು ಪ್ರಯತ್ನಿಸುವ ಮೂಲಕ ಆದಿಕಾಂಡ 3:15ರಲ್ಲಿರುವ ದೈವಿಕ ಪ್ರವಾದನೆ ನೆರವೇರದಂತೆ ತಡೆಯಲು ತವಕಿಸಿದ್ದಿರಬೇಕು. ಹಾಗಾಗಿ ದೇವಜನರ ವಿರೋಧಿಗಳಾದ ಅಮಾಲೇಕ್ಯರನ್ನು ಅಸ್ತ್ರವನ್ನಾಗಿ ಬಳಸಿದನು. (ಅರ. 24:20) ಆ ಸಮಯದಲ್ಲಿ ಯೆಹೋವನು ನಾಲ್ವರು ನಂಬಿಗಸ್ತ ಪುರುಷರ ಮೂಲಕ ಅಂದರೆ ಯೆಹೋಶುವ, ಮೋಶೆ, ಆರೋನ, ಹೂರನ ಮೂಲಕ ತನ್ನ ಜನರನ್ನು ಕಾಪಾಡಿದನು. ಹೇಗೆ? ಯೆಹೋಶುವನು  ಅಮಾಲೇಕ್ಯರೊಂದಿಗೆ ಯುದ್ಧ ಮಾಡುತ್ತಿದ್ದಾಗ ಸಮೀಪದ ಗುಡ್ಡದ ಮೇಲೆ ಮೋಶೆ, ಆರೋನ ಮತ್ತು ಹೂರ ನಿಂತಿದ್ದರು. ಮೋಶೆ ತನ್ನ ಕೈಗಳನ್ನು ಮೇಲೆ ಎತ್ತಿರುವಾಗ ಯುದ್ಧದಲ್ಲಿ ಇಸ್ರಾಯೇಲ್ಯರು ವೈರಿಗಳಿಗಿಂತ ಬಲಗೊಳ್ಳುತ್ತಿದ್ದರು. ಆದ್ದರಿಂದ ಮೋಶೆಯ ಕೈಗಳು ಭಾರವಾದಾಗ ಆರೋನ ಮತ್ತು ಹೂರನು ಮೋಶೆಯ ಕೈಗಳಿಗೆ ಆಧಾರಕೊಟ್ಟು ನಿಂತರು. ಹೀಗೆ ಯೆಹೋಶುವನು ಅಮಾಲೇಕ್ಯರನ್ನೂ ಅವರ ಭಟರನ್ನೂ ಸೋಲಿಸಿದ್ದು ಯೆಹೋವನ ಸಹಾಯ ಮತ್ತು ಸಂರಕ್ಷಣೆಯಿಂದಲೇ. (ವಿಮೋ. 17:8-13) ಬಳಿಕ ಅಲ್ಲಿ ಮೋಶೆ ಒಂದು ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ “ಯೆಹೋವ ನಿಸ್ಸಿ” ಎಂದು ಹೆಸರಿಟ್ಟನು. ಅದರರ್ಥ “ಯೆಹೋವನೇ ನಮ್ಮ ಜಯಧ್ವಜ.”—ವಿಮೋಚನಕಾಂಡ 17:14, 15 ಓದಿ; ಪಾದಟಿಪ್ಪಣಿ.

ಸೈತಾನನ ಬಿಗಿಮುಷ್ಠಿಗೆ ಸಿಲುಕದಂತೆ ನಮಗೆ ಸುರಕ್ಷೆ

18, 19. ನಮ್ಮೀ ದಿನಗಳಲ್ಲಿ ಯೆಹೋವನು ತನ್ನ ಸೇವಕರಿಗೆ ಯಾವ ಸಂರಕ್ಷಣೆ ನೀಡಿದ್ದಾನೆ?

18 ಯೆಹೋವನು ತನ್ನನ್ನು ಪ್ರೀತಿಸುವವರನ್ನು ಮತ್ತು ತನಗೆ ವಿಧೇಯರಾಗುವವರನ್ನು ಸಂರಕ್ಷಿಸುತ್ತಾನೆ. ರೆಫಿದೀಮ್‍ನಲ್ಲಿ ಇಸ್ರಾಯೇಲ್ಯರು ಹೇಗೋ ಹಾಗೆ ನಾವು ಕೂಡ ವೈರಿಗಳಿಂದ ಹಾನಿಗೊಳಗಾಗದೆ ಸುರಕ್ಷಿತರಾಗಿರಲು ದೇವರ ಮೇಲೆ ಅವಲಂಬಿಸುತ್ತೇವೆ. ಯೆಹೋವನು ನಮ್ಮನ್ನು ಒಂದು ಗುಂಪಾಗಿ ಅನೇಕಬಾರಿ ಕಾಪಾಡಿದ್ದಾನೆ. ಮಾತ್ರವಲ್ಲ ಪಿಶಾಚನ ಬಿಗಿಮುಷ್ಠಿಗೆ ನಾವು ಸಿಲುಕದಂತೆ ನೋಡಿಕೊಳ್ಳುತ್ತಾನೆ. ಉದಾಹರಣೆಗೆ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಂಡ ಕಾರಣ ಹಿಂಸೆಗೊಳಗಾದ ಸಹೋದರರನ್ನು ಯೆಹೋವನು ಎಷ್ಟೋ ಬಾರಿ ಕಾಪಾಡಿದ್ದಾನೆ. 1930ರ ದಶಕದಲ್ಲಿ ಮತ್ತು 1940ರ ದಶಕದ ಆರಂಭಭಾಗದಲ್ಲಿ ಜರ್ಮನಿ ಮತ್ತಿತರ ದೇಶಗಳಲ್ಲಿ ನಾಜಿ ಆಳ್ವಿಕೆಯಿದ್ದಾಗ ಯೆಹೋವನು ಅನೇಕರನ್ನು ಕಾಪಾಡಿದನು. ಅಂಥ ಹಿಂಸಾತ್ಮಕ ಸಮಯಗಳಲ್ಲಿ ದೇವರಿಂದ ಸಂರಕ್ಷಣೆಯನ್ನು ಅನುಭವಿಸಿದವರ ಕುರಿತು ನಮ್ಮ ಪ್ರಕಾಶನಗಳಲ್ಲಿ ಬರುವ ಜೀವನಕಥೆಗಳನ್ನು ಮತ್ತು ಅನುಭವಗಳನ್ನು ಓದಿ ಮನನ ಮಾಡುವಾಗ ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ ಎಂಬ ನಮ್ಮ ಭರವಸೆ ಬಲಗೊಳ್ಳುವುದು.—ಕೀರ್ತ. 91:2.

ಸಂಕಷ್ಟಕರ ಸಮಯಗಳಲ್ಲಿ ನಂಬಿಗಸ್ತರಾಗಿ ಉಳಿಯಲು ನಮಗೆ ಬೇಕಾದ ಸಹಾಯವನ್ನು ಯೆಹೋವನು ನಮ್ಮ ಜೊತೆ ವಿಶ್ವಾಸಿಗಳ ಮೂಲಕ ಕೊಡಬಲ್ಲನು (ಪ್ಯಾರ 18-20 ನೋಡಿ)

19 ಯೆಹೋವನು ತನ್ನ ಸಂಘಟನೆ ಮತ್ತು ಪ್ರಕಾಶನಗಳ ಮೂಲಕ ನಮಗೆ ಪ್ರೀತಿಯಿಂದ ಮರುಜ್ಞಾಪನಗಳನ್ನು ನೀಡುವ ಮುಖಾಂತರವೂ ಸಂರಕ್ಷಣೆ ಕೊಡುತ್ತಾನೆ. ಇತ್ತೀಚಿನ ವರ್ಷಗಳಲ್ಲಿ ಆ ಮರುಜ್ಞಾಪನಗಳು ನಮ್ಮನ್ನು ಹೇಗೆ ಸಂರಕ್ಷಿಸಿವೆ ಎಂದು ಯೋಚಿಸಿ. ಈ ಲೋಕವು ಲೈಂಗಿಕ ಅನೈತಿಕತೆ, ಮದ್ಯಪಾನ, ಅಶ್ಲೀಲ ಸಾಹಿತ್ಯದ ಕೆಸರಿನಲ್ಲಿ ಹೂತುಹೋಗುತ್ತಿದೆ. ಆದರೆ ಯೆಹೋವನು ಈ ಅಪಾಯಗಳ ಕುರಿತು ನಮಗೆ ತುರ್ತಾಗಿ ಎಚ್ಚರಿಕೆಗಳನ್ನೂ ಪ್ರಾಯೋಗಿಕ ಸಹಾಯವನ್ನೂ ಕೊಟ್ಟಿದ್ದಾನೆ. ಉದಾಹರಣೆಗೆ ‘ಸೋಶಿಯಲ್‌ ನೆಟ್‌ವರ್ಕಿಂಗ್‍ನಲ್ಲಿ’ ದುಸ್ಸಹವಾಸದ ಜಾಲಕ್ಕೆ ಬೀಳದಂತೆ ತಂದೆಯಾದ ಯೆಹೋವನಿಂದ ನಾವು ಬುದ್ಧಿವಾದಗಳನ್ನು ಪಡೆದುಕೊಳ್ಳುತ್ತೇವೆ. *1 ಕೊರಿಂ. 15:33.

20. ಕ್ರೈಸ್ತ ಸಭೆಯ ಮೂಲಕ ನಮಗೆ ಯಾವ ಸಂರಕ್ಷಣೆ ಮತ್ತು ಮಾರ್ಗದರ್ಶನೆ ಸಿಗುತ್ತದೆ?

20 ಯೆಹೋವನು ಕೊಡುವ ಮರುಜ್ಞಾಪನಗಳಿಗೆ ಕಿವಿಗೊಡುತ್ತಿದ್ದೇವೆ ಮತ್ತು ಆತನಿಂದ ‘ಶಿಕ್ಷಿತರಾಗುತ್ತಿದ್ದೇವೆ’ ಎಂದು ನಾವು ಹೇಗೆ ತೋರಿಸಬಲ್ಲೆವು? ಆತನ ಆಜ್ಞೆಗಳಿಗೆ ಗಮನಕೊಟ್ಟು ವಿಧೇಯರಾಗುವ ಮೂಲಕವೇ. (ಯೆಶಾ. 54:13) ನಮಗೆ ಮಾರ್ಗದರ್ಶನೆ ಮತ್ತು ಸಂರಕ್ಷಣೆ ಕ್ರೈಸ್ತ ಸಭೆಯಲ್ಲಿ ಸಿಗುತ್ತದೆ. ಏಕೆಂದರೆ ಅಲ್ಲಿರುವ ನಂಬಿಗಸ್ತ ಪುರುಷರಾದ ಹಿರಿಯರು ಬೈಬಲ್‌ ಆಧರಿತ ಸಹಾಯ ಮತ್ತು ಸಲಹೆಯನ್ನು ನಮಗೆ ಕೊಡುತ್ತಾರೆ. (ಗಲಾ. 6:1) ನಮಗೆ ಯೆಹೋವನ ಕೋಮಲ ಆರೈಕೆಯಲ್ಲಿ ಹೆಚ್ಚಿನಾಂಶವು ‘ಮನುಷ್ಯರಲ್ಲಿ ದಾನಗಳಾಗಿರುವ’ ಈ ಹಿರಿಯರ ಮೂಲಕವೇ ಸಿಗುತ್ತದೆ. (ಎಫೆ. 4:7, 8) ಹಾಗಾಗಿ ಸಭಾ ಹಿರಿಯರು ನಮಗೆ ಸಲಹೆ ಕೊಡುವಾಗ ಏನು ಮಾಡಬೇಕು? ಸಿದ್ಧಮನಸ್ಸಿನಿಂದ ಅಧೀನರಾಗಬೇಕು, ವಿಧೇಯರಾಗಬೇಕು. ಆಗ ದೇವರ ಆಶೀರ್ವಾದ ಪಡೆಯುವೆವು.—ಇಬ್ರಿ. 13:17.

21. (ಎ) ನಾವು ಯಾವ ದೃಢಸಂಕಲ್ಪ ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುವೆವು?

21 ಆದುದರಿಂದ ನಾವು ಪವಿತ್ರಾತ್ಮದ ಮೂಲಕ ನಡೆಸಲ್ಪಡಲು ಮತ್ತು ನಮ್ಮ ತಂದೆಯಾದ ಯೆಹೋವನ ಮಾರ್ಗದರ್ಶನೆಗನುಸಾರ ನಡೆಯಲು ದೃಢಸಂಕಲ್ಪ ಮಾಡೋಣ. ಆತನ ಮಗನಾದ ಯೇಸು ಕ್ರಿಸ್ತನ ಜೀವನಕ್ರಮದ ಬಗ್ಗೆ ಧ್ಯಾನಿಸಿ ಅವನ ಅಪ್ರತಿಮ ಮಾದರಿಯನ್ನು ಅನುಸರಿಸಲು ಸರ್ವಪ್ರಯತ್ನ ಮಾಡೋಣ. ಯೇಸು ಮರಣದ ವರೆಗೂ ವಿಧೇಯನಾಗಿದ್ದ ಕಾರಣ ದೊಡ್ಡ ಬಹುಮಾನವನ್ನು ಪಡೆದನು. (ಫಿಲಿ. 2:5-11) ನಾವು ಸಹ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸೆಯಿಟ್ಟರೆ ಆಶೀರ್ವಾದ ಪಡೆಯುವೆವು. (ಜ್ಞಾನೋ. 3:5, 6) ಬೇರೆ ಯಾರಿಗಿಂತಲೂ ಹೆಚ್ಚಾಗಿ ನಮಗೆ ಒದಗಿಸುವಾತನಾದ ಮತ್ತು ನಮ್ಮ ಸಂರಕ್ಷಕನಾದ ಯೆಹೋವನ ಮೇಲೆ ಸದಾ ಆತುಕೊಳ್ಳೋಣ. ಆತನ ಸೇವೆ ಮಾಡುವುದು ನಿಜಕ್ಕೂ ದೊಡ್ಡ ಸುಯೋಗ. ಅದು ನಮಗೆ ಮಹದಾನಂದ ತರುತ್ತದೆ. ಮುಂದಿನ ಲೇಖನದಲ್ಲಿ ನಾವು ಮೂರನೇ ಅಂಶವನ್ನು ಅಂದರೆ ನಮ್ಮ ತಂದೆಯಾದ ಯೆಹೋವನು ಹೇಗೆ ನಮ್ಮ ಅತ್ಯಾಪ್ತ ಸ್ನೇಹಿತನಾಗಿದ್ದಾನೆ ಎಂದು ನೋಡೋಣ. ಇದು ಆತನ ಮೇಲಿನ ನಮ್ಮ ಪ್ರೀತಿಯನ್ನು ಇನ್ನೂ ಗಾಢಗೊಳಿಸುವುದು.

^ ಪ್ಯಾರ. 19 ಇಂಥ ಮರುಜ್ಞಾಪನಗಳಿರುವ ಕೆಲವು ಲೇಖನಗಳೆಂದರೆ, “ಇಂಟರ್‌ನೆಟ್‌—ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!” (2011, ಆಗಸ್ಟ್‌ 15ರ ಕಾವಲಿನಬುರುಜು ಪುಟ 3-5.) “ಸೈತಾನನ ಪಾಶಗಳಿವೆ ಎಚ್ಚರ!” ಮತ್ತು “ದೃಢರಾಗಿ ನಿಂತು ಸೈತಾನನ ಪಾಶಗಳಿಂದ ತಪ್ಪಿಸಿಕೊಳ್ಳಿ!” (2012, ಆಗಸ್ಟ್‌ 15ರ ಕಾವಲಿನಬುರುಜು ಪುಟ 20-29.)