ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿ

ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿ

“ಬಹು ವರುಷ ಬದುಕುವವನು ಅವುಗಳಲ್ಲೆಲ್ಲಾ ಆನಂದಿಸಲಿ.”—ಪ್ರಸಂ. 11:8.

1. ನಾವು ಸಂತೋಷದಿಂದಿರಲು ಯೆಹೋವನು ಯಾವೆಲ್ಲ ಆಶೀರ್ವಾದಗಳನ್ನು ಸುರಿಸಿದ್ದಾನೆ?

ನಗುನಗುತ್ತಾ ಸಂತೋಷದಿಂದ ನಾವು ಇರಬೇಕು ಎನ್ನುವುದೇ ಯೆಹೋವನ ಬಯಕೆ. ಆದ್ದರಿಂದಲೇ ಆತನು ನಮ್ಮ ಮೇಲೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸುತ್ತಾನೆ. ಅವುಗಳಲ್ಲಿ ಒಂದು ಆತನು ನಮಗೆ ಕೊಟ್ಟಿರುವ ಜೀವ. ಹಾಗಾಗಿಯೇ ನಮ್ಮನ್ನು ಸತ್ಯಾರಾಧನೆಯ ಕಡೆಗೆ ಸೆಳೆದದ್ದಕ್ಕಾಗಿ ಯೆಹೋವನನ್ನು ಸ್ತುತಿಸಲು ನಮ್ಮ ಜೀವನವನ್ನು ನಾವು ಉಪಯೋಗಿಸಲು ಸಾಧ್ಯ. (ಕೀರ್ತ. 144:15; ಯೋಹಾ. 6:44) ಇನ್ನೊಂದು ಆಶೀರ್ವಾದ, ನಮ್ಮನ್ನು ಪ್ರೀತಿಸುತ್ತಾನೆ ಎಂದು ಯೆಹೋವನು ಕೊಟ್ಟಿರುವ ಆಶ್ವಾಸನೆ ಮತ್ತು ಕೊನೇ ವರೆಗೂ ಆತನ ಸೇವೆಯನ್ನು ಮಾಡುತ್ತಾ ಮುಂದುವರಿಯಲು ನಮಗೆ ಆತನು ಕೊಡುವ ಸಹಾಯ. (ಯೆರೆ. 31:3; 2 ಕೊರಿಂ. 4:16) ಮತ್ತೊಂದು ಆಶೀರ್ವಾದ, ನಾವೆಲ್ಲರೂ ಆನಂದಿಸುತ್ತಿರುವ ಆಧ್ಯಾತ್ಮಿಕ ಪರದೈಸ್‌. ಇಲ್ಲಿ ನಾವು ಹೇರಳ ಆಧ್ಯಾತ್ಮಿಕ ಆಹಾರ ಪಡೆಯುತ್ತಿದ್ದೇವೆ ಮತ್ತು ನಮ್ಮನ್ನು ಪ್ರೀತಿಸುವ ಸಹೋದರವೃಂದವಿದೆ. ಅದಕ್ಕೂ ಮಿಗಿಲಾಗಿ ನಮಗೆ ಸುಂದರ ಭವಿಷ್ಯತ್ತಿನ ನಿರೀಕ್ಷೆಯನ್ನು ಯೆಹೋವನು ನೀಡಿದ್ದಾನೆ.

2. ದೇವರ ನಂಬಿಗಸ್ತ ಸೇವಕರಲ್ಲಿ ಕೆಲವರು ಯಾವ ಭಾವನೆಗಳೊಂದಿಗೆ ಹೋರಾಡುತ್ತಿದ್ದಾರೆ?

2 ಸಂತೋಷದಿಂದಿರಲು ಇಷ್ಟೆಲ್ಲಾ ಕಾರಣಗಳು ಇರುವುದಾದರೂ ದೇವರ ನಂಬಿಗಸ್ತ ಸೇವಕರಲ್ಲಿ ಕೆಲವರಿಗೆ ತಮ್ಮ ಬಗ್ಗೆಯೇ ನಕಾರಾತ್ಮಕ ಭಾವನೆಗಳಿವೆ. ತಾವಾಗಲಿ ತಮ್ಮ ಸೇವೆಯಾಗಲಿ ಯೆಹೋವನ ದೃಷ್ಟಿಯಲ್ಲಿ ಗಣನೆಗೆ ಬಾರದ್ದಾಗಿದೆ ಎಂದು ನೆನಸುತ್ತಾ ಕುಗ್ಗಿಹೋಗುತ್ತಾರೆ. ಇಂಥ ನಕಾರಾತ್ಮಕ ಭಾವನೆಗಳು ಬೆಂಬಿಡದೆ ಮತ್ತೆ ಮತ್ತೆ ಮನಸ್ಸಿನ ಮೇಲೆ ಧಾಳಿಮಾಡುವುದರಿಂದ ‘ಬಹು ವರುಷಗಳನ್ನು’ ಆನಂದಿಸುವುದು ಕೇವಲ ಕನಸೆಂದು ಅವರ ಭಾವನೆ. ಪ್ರತಿದಿನ ಸೂರ್ಯನ ಉದಯವು ಕತ್ತಲನ್ನು ಕರಗಿಸಿ ಎಲ್ಲೆಡೆ ಬೆಳಕು ಹರಿಸಿದರೂ ತನ್ನ ಬಾಳಲ್ಲಂತೂ ಆನಂದವೆಂಬ ಬೆಳಕು ಮೂಡಲಾರದೆಂದು ಅವರಿಗೆ ಅನಿಸಬಹುದು.—ಪ್ರಸಂ. 11:8.

3. ನಕಾರಾತ್ಮಕ ಭಾವನೆಗಳಿಗೆ ಕಾರಣ ಏನಾಗಿರಬಹುದು?

3 ಇಂಥ ನಕಾರಾತ್ಮಕ ಭಾವನೆಗಳಿಗೆ ನಿರಾಶೆ, ಅಸ್ವಸ್ಥತೆ ಅಥವಾ ಇಳಿವಯಸ್ಸು ಕಾರಣವಾಗಿರಬಹುದು.  (ಕೀರ್ತ. 71:9; ಜ್ಞಾನೋ. 13:12; ಪ್ರಸಂ. 7:7) ಇನ್ನೊಂದು ಕಾರಣ, ನಮ್ಮನ್ನು ದೇವರು ಮೆಚ್ಚಿದರೂ ನಮ್ಮ ‘ವಂಚಕ ಹೃದಯವು’ ನಮ್ಮನ್ನು ಖಂಡಿಸುತ್ತಿರಬಹುದು. (ಯೆರೆ. 17:9; 1 ಯೋಹಾ. 3:20) ಮಾತ್ರವಲ್ಲ, ಪಿಶಾಚನು ದೇವಸೇವಕರ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ನಿಂದಿಸುತ್ತಾನೆ. ಯಾರು ಸೈತಾನನಂತೆ ಆಲೋಚಿಸುತ್ತಾರೊ ಅವರು ದೇವರ ದೃಷ್ಟಿಯಲ್ಲಿ ನಾವು ಅಯೋಗ್ಯರೆಂಬ ಭಾವನೆಯನ್ನು ನಮ್ಮ ಹೃದಯದಲ್ಲಿ ಬಿತ್ತಲು ಪ್ರಯತ್ನಿಸಬಹುದು. ನಂಬಿಕೆಯಿಲ್ಲದ ಎಲೀಫಜನು ಯೋಬನ ಮನಸ್ಸಿನಲ್ಲಿ ಅದೇ ಯೋಚನೆಯನ್ನೇ ತುಂಬಿಸಲು ಪ್ರಯತ್ನಿಸಿದನು. ಆದರೆ ಆ ಅಭಿಪ್ರಾಯ ಅಂದು ಹೇಗೆ ಸುಳ್ಳಾಗಿತ್ತೋ ಇಂದು ಕೂಡ ಸುಳ್ಳಾಗಿದೆ.—ಯೋಬ 4:18, 19.

4. ಈ ಲೇಖನದಲ್ಲಿ ನಾವೇನನ್ನು ತಿಳಿಯಲಿದ್ದೇವೆ?

4 ನಾವು “ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗ” ಯೆಹೋವನು ನಮ್ಮೊಂದಿಗೆ ಇರುವೆನೆಂದು ಬೈಬಲಿನಲ್ಲಿ ಆಶ್ವಾಸನೆ ಕೊಟ್ಟಿದ್ದಾನೆ. (ಕೀರ್ತ. 23:4) ಆತನು ನಮ್ಮೊಂದಿಗಿರುವ ಒಂದು ವಿಧ ಆತನ ವಾಕ್ಯವಾದ ಬೈಬಲಿನ ಮೂಲಕ. ಇದು, ತಪ್ಪಭಿಪ್ರಾಯ ಮತ್ತು ನಕಾರಾತ್ಮಕ ಯೋಚನೆಗಳನ್ನೂ ಸೇರಿಸಿ ‘ಬಲವಾಗಿ ಬೇರೂರಿರುವ ವಿಷಯಗಳನ್ನು ಕೆಡವಿಹಾಕಲು ದೇವರಿಂದ ಶಕ್ತಿಯನ್ನು ಹೊಂದಿದೆ.’ (2 ಕೊರಿಂ. 10:4, 5) ಆದ್ದರಿಂದ ನಾವು ಸಕಾರಾತ್ಮಕ ನೋಟವನ್ನು ಬೆಳೆಸಿಕೊಳ್ಳಲು ಮತ್ತು ಕಾಪಾಡಿಕೊಳ್ಳಲು ಬೈಬಲಿನ ಮೂಲಕ ನೆರವು ಪಡೆಯುವುದು ಹೇಗೆಂದು ನೋಡೋಣ. ಇದರಿಂದ ವೈಯಕ್ತಿಕವಾಗಿ ನೀವು ಪ್ರಯೋಜನ ಪಡೆಯುವಿರಿ ಮಾತ್ರವಲ್ಲ ಇತರರನ್ನು ಪ್ರೋತ್ಸಾಹಿಸುವ ವಿಧಗಳನ್ನು ತಿಳಿದುಕೊಳ್ಳುವಿರಿ.

ಸಕಾರಾತ್ಮಕ ನೋಟವನ್ನು ಬೆಳೆಸಿಕೊಳ್ಳಲು ಬೈಬಲ್‌ ನೆರವು

5. ಯಾವ ಪರೀಕ್ಷೆ ಸಕಾರಾತ್ಮಕ ನೋಟವನ್ನಿಟ್ಟುಕೊಳ್ಳಲು ನಮಗೆ ನೆರವಾಗಬಲ್ಲದು?

5 “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ” ಎಂದು ಅಪೊಸ್ತಲ ಪೌಲ ಕೊರಿಂಥ ಸಭೆಯವರಿಗೆ ಹೇಳಿದನು. (2 ಕೊರಿಂ. 13:5) ಈ ವಚನದಲ್ಲಿ ಹೇಳಲಾದ ‘ನಂಬಿಕೆಯು’ ಬೈಬಲಿನಲ್ಲಿರುವ ಎಲ್ಲ ಕ್ರೈಸ್ತ ಬೋಧನೆಗಳನ್ನು ಸೂಚಿಸುತ್ತದೆ. ಹಾಗಾಗಿ ನಮ್ಮ ಮಾತುಗಳು ಮತ್ತು ಕ್ರಿಯೆಗಳು ಈ ಬೋಧನೆಗಳೊಂದಿಗೆ ಸರಿಹೊಂದುತ್ತವೊ ಎಂದು ನೋಡುವುದೇ ಈ ಪರೀಕ್ಷೆಯಾಗಿದೆ. ಈ ಪರೀಕ್ಷೆಯು ನಮ್ಮ ಬಗ್ಗೆ ನಾವು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ನೆರವಾಗಬಲ್ಲದು. ನಮ್ಮ ಮಾತು-ಕ್ರಿಯೆ ಬೈಬಲ್‌ ಬೋಧನೆಗಳೊಂದಿಗೆ ಸರಿಹೊಂದಿದರೆ ನಾವು ಆ ಪರೀಕ್ಷೆಯಲ್ಲಿ ಪಾಸಾಗಿದ್ದೇವೆ ಮತ್ತು “ನಂಬಿಕೆಯಲ್ಲಿ” ಇದ್ದೇವೆ ಎಂದರ್ಥ. ನಮಗಿಷ್ಟವಾದ ಬೋಧನೆಗಳನ್ನು ಹೆಕ್ಕಿ ತೆಗೆದು ಅವುಗಳನ್ನು ಮಾತ್ರ ಪಾಲಿಸುತ್ತೇವೆಂದು ನಾವು ಹೇಳಸಾಧ್ಯವಿಲ್ಲ. ನಮ್ಮ ಜೀವನ ಬೈಬಲಿನಲ್ಲಿರುವ ಎಲ್ಲ ಬೋಧನೆಗಳಿಗೆ ಅನುಸಾರವಾಗಿ ಇರಬೇಕು.—ಯಾಕೋ. 2:10, 11.

6. ‘ನಾವು ನಂಬಿಕೆಯಲ್ಲಿ ಇದ್ದೇವೋ’ ಎಂದು ನಮ್ಮನ್ನೇ ಪರೀಕ್ಷಿಸಿಕೊಳ್ಳಬೇಕು ಏಕೆ? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)

6 ಈ ಪರೀಕ್ಷೆಯನ್ನು ಮಾಡಿಕೊಳ್ಳಲು ನಿಮಗೆ ಹಿಂಜರಿಕೆಯಾಗಬಹುದು. ಏಕೆಂದರೆ ‘ನಾನೆಲ್ಲಿ ಅದರಲ್ಲಿ ಸೋತುಹೋಗುತ್ತೇನೋ’ ಎಂಬ ಭಯ ಇರಬಹುದು. ಆದರೆ ನೆನಪಿಡಿ, ನಮ್ಮ ಬಗ್ಗೆ ನಮಗೆ ಯಾವ ಅಭಿಪ್ರಾಯ ಇದೆ ಅನ್ನುವುದಕ್ಕಿಂತ ಯೆಹೋವನಿಗೆ ನಮ್ಮ ಬಗ್ಗೆ ಯಾವ ಅಭಿಪ್ರಾಯವಿದೆ ಎನ್ನುವುದೇ ಹೆಚ್ಚು ಪ್ರಾಮುಖ್ಯ. ಆತನ ಆಲೋಚನೆ ನಮ್ಮ ಆಲೋಚನೆಗಳಿಗಿಂತ ಎಷ್ಟೋ ಉನ್ನತ. (ಯೆಶಾ. 55:8, 9) ಆತನು ತನ್ನ ಆರಾಧಕರನ್ನು ಗಮನಿಸುವುದು ಅವರಲ್ಲಿ ಒಳ್ಳೇ ಗುಣಗಳನ್ನು ಹುಡುಕಲಿಕ್ಕಾಗಿ ಮತ್ತು ಸಹಾಯಹಸ್ತ ಚಾಚಲಿಕ್ಕಾಗಿ, ತಪ್ಪು ಕಂಡುಹಿಡಿದು ಖಂಡಿಸಲಿಕ್ಕಲ್ಲ. “ನೀವು ನಂಬಿಕೆಯಲ್ಲಿ ಇದ್ದೀರೋ” ಎಂದು ಬೈಬಲನ್ನು ಉಪಯೋಗಿಸುತ್ತಾ ಪರೀಕ್ಷಿಸುವಾಗ ಯೆಹೋವನು ನಿಮ್ಮನ್ನು ನೋಡುವ ದೃಷ್ಟಿಕೋನದಿಂದಲೇ ನೀವು ನಿಮ್ಮನ್ನು ನೋಡುವಿರಿ. ಆಗ ದೇವರ ದೃಷ್ಟಿಯಲ್ಲಿ ನೀವು ನಗಣ್ಯರು ಎಂದನಿಸುವಂತೆ ಮಾಡುವ ಯಾವುದೇ ಭಾವನೆಯು ಹೋಗಿ ಬೈಬಲ್‌ ಆಶ್ವಾಸನೆ ಕೊಡುವಂತೆ, ನೀವು ಯೆಹೋವನಿಗೆ ತುಂಬ ಅಮೂಲ್ಯರು ಎಂಬ ಭಾವನೆ ನೆಲೆಸುವುದು. ಫಲಿತಾಂಶವು, ಪರದೆಯನ್ನು ಸರಿಸಿದಾಗ ಕತ್ತಲೆಯ ಕೋಣೆಯನ್ನು ಸೂರ್ಯನ ಪ್ರಜ್ವಲ ಬೆಳಕು ಬೆಳಗಿದಂತೆ ಇರುವುದು.

7. ಬೈಬಲಿನಲ್ಲಿರುವ ನಂಬಿಗಸ್ತ ವ್ಯಕ್ತಿಗಳ ಉದಾಹರಣೆಯಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

7 ಈ ಸ್ವಪರೀಕ್ಷೆ ಮಾಡಿಕೊಳ್ಳುವ ಒಂದು ಉತ್ತಮ ವಿಧ, ಬೈಬಲಿನಲ್ಲಿ ಹೇಳಲಾಗಿರುವ ನಂಬಿಗಸ್ತ ಜನರ ಕುರಿತು ಧ್ಯಾನಿಸುವುದು. ಅವರ ಸನ್ನಿವೇಶಗಳನ್ನು, ಭಾವನೆಗಳನ್ನು ನಿಮ್ಮ ಸನ್ನಿವೇಶ, ಭಾವನೆಗಳೊಂದಿಗೆ ಹೋಲಿಸಿನೋಡಿ. ಅವರ ಪರಿಸ್ಥಿತಿಯಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಆಲೋಚಿಸಿ. ನಾವೀಗ ಬೈಬಲಿನಲ್ಲಿರುವ ಮೂವರು ವ್ಯಕ್ತಿಗಳ ಉದಾಹರಣೆಯನ್ನು ಪರಿಶೀಲಿಸೋಣ. ಅದು, ನೀವು “ನಂಬಿಕೆಯಲ್ಲಿ” ಇದ್ದೀರಿ ಎಂಬುದನ್ನು ಬೈಬಲನ್ನು ಉಪಯೋಗಿಸಿ ಹೇಗೆ ಖಾತ್ರಿಪಡಿಸಿಕೊಳ್ಳಬಹುದು ಎಂದು ತೋರಿಸಿಕೊಡುತ್ತದೆ. ಇದು ನಿಮ್ಮ ಬಗ್ಗೆ ನೀವು ಸಕಾರಾತ್ಮಕ ನೋಟವನ್ನು ಬೆಳೆಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಒಬ್ಬ ಬಡ ವಿಧವೆ

8, 9. (ಎ) ಬಡ ವಿಧವೆಯ ಸನ್ನಿವೇಶ ಹೇಗಿತ್ತು? (ಬಿ) ಯಾವ ನಕಾರಾತ್ಮಕ ಯೋಚನೆಗಳು ಆ ವಿಧವೆಯ ಮನಸ್ಸಿಗೆ ಬಂದಿದ್ದಿರಬಹುದು?

8 ಯೇಸು ಯೆರೂಸಲೇಮಿನ ದೇವಾಲಯದಲ್ಲಿ ಒಬ್ಬಾಕೆ ಬಡ ವಿಧವೆಯನ್ನು ಗಮನಿಸಿದನು. ಆಕೆಯ ಉದಾಹರಣೆಯು, ನಮ್ಮ ಸನ್ನಿವೇಶದಿಂದಾಗಿ ಬಯಸಿದ್ದೆಲ್ಲವನ್ನು ಮಾಡಲು ನಮ್ಮಿಂದ ಆಗದಿದ್ದಾಗಲೂ ನಮ್ಮ ಬಗ್ಗೆ ಸಕಾರಾತ್ಮಕ ನೋಟವನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. (ಲೂಕ 21:1-4 ಓದಿ.) ಆ ವಿಧವೆ ಎಂಥ ಸನ್ನಿವೇಶದಲ್ಲಿ ಇದ್ದಳೆಂದು ಊಹಿಸಿಕೊಳ್ಳಿ. ಒಂದು ಕಡೆ ಆಕೆ ಗಂಡನನ್ನು ಕಳೆದುಕೊಂಡ  ದುಃಖವನ್ನು ಸಹಿಸಿಕೊಳ್ಳುತ್ತಿದ್ದಳು. ಇನ್ನೊಂದು ಕಡೆ ಇಂಥ ವಿಧವೆಯರಿಗೆ ಸಹಾಯಹಸ್ತ ಚಾಚಬೇಕಾಗಿದ್ದ ಧಾರ್ಮಿಕ ಮುಖಂಡರೇ ‘ಅವರ ಮನೆಗಳನ್ನು ನುಂಗುತ್ತಿದ್ದ’ ಸನ್ನಿವೇಶದಲ್ಲಿ ಆಕೆಯಿದ್ದಳು. (ಲೂಕ 20:47) ಆಕೆ ಎಷ್ಟು ಬಡವಳಾಗಿದ್ದಳೆಂದರೆ ದೇವಾಲಯದಲ್ಲಿ ಕಾಣಿಕೆ ಕೊಡಲು ಆಕೆಯಿಂದಾದದ್ದು ಎರಡು ಚಿಕ್ಕ ನಾಣ್ಯ ಮಾತ್ರ. ಅದನ್ನು ಒಬ್ಬ ಕೆಲಸಗಾರನು ಕೆಲವೇ ನಿಮಿಷ ಕೆಲಸಮಾಡಿ ಗಳಿಸಬಹುದಿತ್ತು.

9 ಆ ವಿಧವೆ ತನ್ನ ಕೈಯಲ್ಲಿ ಆ ಎರಡು ಚಿಕ್ಕ ನಾಣ್ಯಗಳನ್ನು ಹಿಡಿದು ದೇವಾಲಯದ ಅಂಗಣಕ್ಕೆ ಕಾಲಿಡುತ್ತಿದ್ದಂತೆ ಆಕೆಗೆ ಹೇಗನಿಸಿರಬೇಕೆಂದು ಊಹಿಸಿ. ಒಂದುವೇಳೆ ತನ್ನ ಗಂಡನು ಜೀವದಿಂದಿದ್ದರೆ ತಾನು ಎಷ್ಟು ಕಾಣಿಕೆ ಕೊಡುತ್ತಿದ್ದೆನೋ ಅದರ ಮುಂದೆ ಇದು ತೀರಾ ಅಲ್ಪವೆಂದು ಆಕೆ ಯೋಚಿಸಿದ್ದಿರಬಹುದೋ? ಅಥವಾ ಸಾಲಿನಲ್ಲಿ ತನ್ನ ಮುಂದಿದ್ದವರು ಚೀಲದಿಂದ ಬೊಗಸೆ ತುಂಬ ನಾಣ್ಯಗಳನ್ನು ತೆಗೆದು ಪೆಟ್ಟಿಗೆಯಲ್ಲಿ ಸುರಿಯುತ್ತಿದ್ದಾಗ ತನ್ನ ಕೈಯಲ್ಲಿದ್ದ ಎರಡು ನಾಣ್ಯಗಳನ್ನು ನೋಡಿ ಆಕೆಗೆ ಮುಜುಗರವಾಯಿತೇ? ತನ್ನ ಕಾಣಿಕೆಗೆ ಬೆಲೆಯೇ ಇಲ್ಲವೇನೋ ಎಂದನಿಸಿತೇ? ಒಂದುವೇಳೆ ಹೀಗೆಲ್ಲ ಅನಿಸಿದ್ದರೂ ಸತ್ಯಾರಾಧನೆಗಾಗಿ ತನ್ನಿಂದ ಏನನ್ನು ಮಾಡಲು ಸಾಧ್ಯವಿತ್ತೋ ಅದನ್ನಾಕೆ ಮಾಡಿದಳು.

10. ಬಡ ವಿಧವೆಯು ಯೆಹೋವನಿಗೆ ಅಮೂಲ್ಯಳು ಎಂದು ಯೇಸು ಹೇಗೆ ತೋರಿಸಿಕೊಟ್ಟನು?

10 ಆ ವಿಧವೆ ಮತ್ತು ಆಕೆ ಕೊಟ್ಟ ಕಾಣಿಕೆ ಯೆಹೋವನಿಗೆ ಅತ್ಯಮೂಲ್ಯವಾಗಿದೆ ಎಂದು ಯೇಸು ತೋರಿಸಿಕೊಟ್ಟನು. ಹೇಗೆ? ಆ ಬಡ ವಿಧವೆಯು “[ಶ್ರೀಮಂತರೆಲ್ಲರು] ಹಾಕಿದ್ದಕ್ಕಿಂತ ಹೆಚ್ಚನ್ನು ಹಾಕಿದ್ದಾಳೆ” ಎಂದು ಆತನು ಹೇಳಿದನು. ಕಾಣಿಕೆ ಪೆಟ್ಟಿಗೆಯಲ್ಲಿ ಆಕೆ ಹಾಕಿದ ನಾಣ್ಯಗಳು ಬೇರೆಯವರು ಹಾಕಿದ ನಾಣ್ಯಗಳೊಂದಿಗೆ ಸೇರಿಕೊಂಡವಾದರೂ ಯೇಸು ಆಕೆಯನ್ನು ಗುರುತಿಸಿ ಪ್ರಶಂಸಿಸಿದನು. ಕಾಣಿಕೆಯ ಹಣವನ್ನು ಲೆಕ್ಕಿಸಿದವರಿಗೆ ಆ ಎರಡು ನಾಣ್ಯಗಳು ಕೈಗೆ ಸಿಕ್ಕಿದಾಗ ಅವುಗಳೂ ಅವನ್ನು ಕೊಟ್ಟಾಕೆಯೂ ಯೆಹೋವನಿಗೆ ಎಷ್ಟು ಅಮೂಲ್ಯ ಎಂದು ಗೊತ್ತಿರಲಿಕ್ಕಿಲ್ಲ. ಹಾಗಿದ್ದರೂ ಜನರಿಗೆ ಏನನಿಸಿತು ಅಥವಾ ಸ್ವತಃ ಆ ವಿಧವೆಗೆ ತನ್ನ ಬಗ್ಗೆ ಹೇಗನಿಸಿತು ಎಂಬುದಲ್ಲ, ಯೆಹೋವನಿಗೆ ಹೇಗನಿಸಿತು ಎಂಬುದೇ ಮುಖ್ಯವಾಗಿತ್ತು. ಈ ವೃತ್ತಾಂತವನ್ನು ಉಪಯೋಗಿಸಿ “ನೀವು ನಂಬಿಕೆಯಲ್ಲಿ ಇದ್ದೀರೋ” ಎಂದು ಪರೀಕ್ಷಿಸುವಿರಾ?

ಬಡ ವಿಧವೆಯಿಂದ ನೀವು ಯಾವ ಪಾಠ ಕಲಿಯತ್ತೀರಿ? (ಪ್ಯಾರ 8-10 ನೋಡಿ)

11. ಬಡ ವಿಧವೆಯ ವೃತ್ತಾಂತದಿಂದ ನೀವೇನು ಕಲಿಯಸಾಧ್ಯವಿದೆ?

11 ನಿಮ್ಮ ಸನ್ನಿವೇಶಗಳು ನೀವು ಯೆಹೋವನಿಗಾಗಿ ಏನನ್ನು ಕೊಡಲು ಸಾಧ್ಯ ಎಂಬುದರ ಮೇಲೆ ಪ್ರಭಾವ ಬೀರುತ್ತವೆ. ಕೆಲವರಿಗೆ ವಯಸ್ಸಾಗಿರುವ ಕಾರಣ ಅಥವಾ ದೇಹದೌರ್ಬಲ್ಯದ ಕಾರಣ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಲು ಆಗುವುದಿಲ್ಲ. ಹಾಗೆಂದು ಅವರು, ‘ನಾನು ಮಾಡಿರುವ ಸೇವೆ ತೀರಾ ಕಡಿಮೆ. ವರದಿ ಮಾಡಲು ಯೋಗ್ಯವಲ್ಲ’ ಎಂದು ನೆನಸಬಹುದಾ? ಒಂದುವೇಳೆ ನಿಮ್ಮ ಸನ್ನಿವೇಶ ಒಳ್ಳೇದಿದ್ದರೂ ನೀವು ಮಾಡುವ ಸೇವೆಯನ್ನು ದೇವಜನರೆಲ್ಲರು ಪ್ರತಿವರ್ಷ ಆರಾಧನೆಗಾಗಿ ವ್ಯಯಿಸುವ ತಾಸುಗಳಿಗೆ ಹೋಲಿಸಿ ‘ನನ್ನ ಸೇವೆ ಏನೇನೂ ಇಲ್ಲ’ ಎಂದು ನೆನಸಬಹುದು. ಆದರೆ ಬಡ ವಿಧವೆಯ ವೃತ್ತಾಂತವು, ನಾವು ಯೆಹೋವನಿಗಾಗಿ ಮಾಡುವ ಒಂದೊಂದು ಕ್ರಿಯೆಯನ್ನೂ ಆತನು ಗಮನಿಸುತ್ತಾನೆ ಹಾಗೂ ಅದನ್ನು ಅಮೂಲ್ಯವಾಗಿ ಕಾಣುತ್ತಾನೆ ಎಂದು ತೋರಿಸುತ್ತದೆ. ಸಂಕಷ್ಟಗಳ ನಡುವೆ  ಮಾಡಲಾದ ಸೇವೆಯಂತೂ ಆತನಿಗೆ ಬಹುಮೂಲ್ಯ. ನೀವು ಹಿಂದಿನ ವರ್ಷ ಯೆಹೋವನಿಗೆ ಸಲ್ಲಿಸಿದ ಆರಾಧನೆಯನ್ನು ನೆನಪಿಸಿಕೊಳ್ಳಿ. ನೀವು ಆರಾಧನೆಗಾಗಿ ತುಂಬ ಸಮಯ ಕೊಟ್ಟಿರಬಹುದು. ಅದರಲ್ಲಿ ಯಾವುದೋ ಒಂದು ನಿರ್ದಿಷ್ಟ ತಾಸನ್ನು ಯೆಹೋವನಿಗಾಗಿ ಕೊಡಲು ವಿಶೇಷ ತ್ಯಾಗವನ್ನು ಮಾಡಿದ್ದುಂಟಾ? ಹಾಗಿದ್ದಲ್ಲಿ ಆ ತಾಸಿನಲ್ಲಿ ಯೆಹೋವನಿಗಾಗಿ ನೀವೇನು ಮಾಡಿದಿರೋ ಅದು ಆತನಿಗೆ ಬಹು ಅಮೂಲ್ಯವಾಗಿದೆ ಎಂಬ ಖಾತ್ರಿ ನಿಮಗಿರಲಿ. ಯೆಹೋವನ ಸೇವೆಯನ್ನು ಮಾಡಲು ಆ ಬಡ ವಿಧವೆಯಂತೆ ನಿಮ್ಮಿಂದಾದುದೆಲ್ಲವನ್ನು ಮಾಡುತ್ತಿರುವುದೇ ನೀವು “ನಂಬಿಕೆಯಲ್ಲಿ” ಇದ್ದೀರಿ ಎಂಬುದನ್ನು ತೋರಿಸಿಕೊಡುತ್ತದೆ.

“ನನ್ನ ಪ್ರಾಣವನ್ನು ತೆಗೆದುಬಿಡು”

12-14. (ಎ) ನಕಾರಾತ್ಮಕ ಭಾವನೆಗಳು ಎಲೀಯನ ಮೇಲೆ ಯಾವ ಪ್ರಭಾವಬೀರಿದವು? (ಬಿ) ತಾನು ನಿಷ್ಪ್ರಯೋಜಕನೆಂದು ಅವನಿಗೆ ಅನಿಸಿದ್ದು ಯಾಕಿರಬಹುದು?

12 ಪ್ರವಾದಿ ಎಲೀಯ ಯೆಹೋವನ ನಿಷ್ಠಾವಂತ ಸೇವಕ. ಯೆಹೋವನ ಮೇಲೆ ಬಲವಾದ ನಂಬಿಕೆ ಅವನಿಗಿತ್ತು. ಆದರೂ ಒಂದು ಸಂದರ್ಭದಲ್ಲಿ ಅವನೆಷ್ಟು ಕುಗ್ಗಿ ಹೋದನೆಂದರೆ ಸಾವನ್ನು ಬೇಡಿಕೊಂಡನು. “ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು” ಎಂದು ಗೋಗರೆದನು. (1 ಅರ. 19:4) ಇಂಥ ಹತಾಶೆಯನ್ನು ಅನುಭವಿಸದವರಿಗೆ ಎಲೀಯನು “ಆತುರದಿಂದ” ಅಥವಾ ಯೋಚಿಸದೆ ಮಾತಾಡಿದನು ಎಂದನಿಸಬಹುದು. (ಯೋಬ 6:3) ಆದರೆ ಎಲೀಯನಿಗೆ ನಿಜವಾಗಿಯೂ ಹಾಗನಿಸಿತು. ಯೆಹೋವನು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದನು? ಸಾಯಲು ಬಯಸಿದ್ದಕ್ಕಾಗಿ ಎಲೀಯನನ್ನು ಆತನು ಗದರಿಸಲಿಲ್ಲ. ಬದಲಾಗಿ ಅವನಿಗೆ ಸಹಾಯ ನೀಡಿದನು.

13 ಎಲೀಯನಿಗೆ ಏಕೆ ಹಾಗನಿಸಿತು? ಇದಕ್ಕೆ ಸ್ವಲ್ಪ ಸಮಯ ಮುಂಚೆಯಷ್ಟೇ ಎಲೀಯನು ಇಸ್ರಾಯೇಲಿನಲ್ಲಿ ಒಂದು ನಿರ್ಣಾಯಕ ಪರೀಕ್ಷೆಯನ್ನು ಕೈಗೊಂಡು ಯೆಹೋವನೇ ಸತ್ಯ ದೇವರೆಂದು ರುಜುಪಡಿಸಿದ್ದನು. ಅನಂತರ ಬಾಳನ 450 ಪ್ರವಾದಿಗಳನ್ನು ಕೊಲ್ಲಿಸಿದ್ದನು. (1 ಅರ. 18:37-40) ಈಗಲಾದರೂ ದೇವಜನರು ಯೆಹೋವನನ್ನು ಆರಾಧಿಸಲು ತೊಡಗುವರೆಂದು ಎಲೀಯನು ನೆನಸಿದ್ದನು. ಆದರೆ ಆ ಆಸೆ ಹುಸಿಯಾಯಿತು. ಅದೂ ಅಲ್ಲದೆ ದುಷ್ಟ ರಾಣಿ ಈಜೆಬೆಲಳು ಎಲೀಯನನ್ನು ಕೊಂದೇ ತೀರುವೆನೆಂದು ಸುದ್ದಿ ಮುಟ್ಟಿಸಿದ್ದಳು. ಪ್ರಾಣ ಭಯದಿಂದ ಎಲೀಯನು ಇಸ್ರಾಯೇಲನ್ನು ಬಿಟ್ಟು ಓಡುತ್ತಾ ದಕ್ಷಿಣದ ಯೆಹೂದ ಮಾರ್ಗವಾಗಿ ಬಂದು ಅಲ್ಲಿಂದ ಅರಣ್ಯಕ್ಕೆ ಹೋದನು. ಅದು ಪಾಳು ಬಂಜರು ಪ್ರದೇಶವಾಗಿತ್ತು.—1 ಅರ. 19:2-4.

14 ಅರಣ್ಯದಲ್ಲಿ ಒಬ್ಬನೇ ಇದ್ದ ಎಲೀಯನು ಪ್ರವಾದಿಯಾಗಿ ತಾನು ಇಷ್ಟರವರೆಗೆ ಮಾಡಿದ ಸೇವೆಯಿಂದ ಏನೂ ಪ್ರಯೋಜನವಾಗಲಿಲ್ಲ ಎಂದು ಯೋಚಿಸತೊಡಗಿದನು. ಆದ್ದರಿಂದ ಯೆಹೋವನ ಬಳಿ “ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ” ಎಂದು ಹೇಳಿದನು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ತನ್ನ ಪಿತೃಗಳ ದೇಹ ಹೇಗೆ ಮಣ್ಣಿಗೆ ಮಣ್ಣಾಗಿ ಹೋಗಿ ಎಲುಬುಗಳು ಮಾತ್ರ ಉಳಿದು ಅದು ಪ್ರಯೋಜನಕ್ಕೆ ಬಾರದೇ ಇದೆಯೋ ಅದೇ ರೀತಿ ತಾನು ಕೂಡ ನಿಷ್ಪ್ರಯೋಜಕ ಎಂದು ಅವನಿಗನಿಸಿತು. ಅವನು ತನ್ನದೇ ಸ್ವಂತ ಮಟ್ಟಗಳಿಂದ ತನ್ನನ್ನು ಅಳೆದದ್ದರಿಂದ ತನ್ನ ಜೀವನ ವಿಫಲ, ಯೆಹೋವನಿಗೂ ಬೇರೆ ಯಾರಿಗೂ ನನ್ನಿಂದ ಏನೂ ಪ್ರಯೋಜನವಿಲ್ಲ ಎಂದವನಿಗೆ ಅನಿಸಿತು.

15. ತನಗಿನ್ನೂ ಎಲೀಯನು ಅಮೂಲ್ಯನೆಂಬ ಆಶ್ವಾಸನೆಯನ್ನು ಯೆಹೋವನು ಹೇಗೆ ಕೊಟ್ಟನು?

15 ಆದರೆ ಸರ್ವಶಕ್ತನಾದ ಯೆಹೋವನಿಗೆ ಎಲೀಯನ ಕುರಿತು ಇದ್ದ ದೃಷ್ಟಿಕೋನ ಬೇರೆಯೇ ಆಗಿತ್ತು. ಆತನಿಗೆ ಎಲೀಯ ತುಂಬ ಅಮೂಲ್ಯನಾಗಿದ್ದನು. ಅವನಿಗೆ ಆ ಆಶ್ವಾಸನೆ ಕೊಡಲು ಯೆಹೋವನು ಹೆಜ್ಜೆ ತಕ್ಕೊಂಡನು ಸಹ. ತನ್ನ ದೂತನನ್ನು ಕಳುಹಿಸಿ ಎಲೀಯನನ್ನು ಬಲಪಡಿಸಿದನು. ಮಾತ್ರವಲ್ಲ ಯೆಹೋವನು ಅವನಿಗೆ ಆಹಾರ ಮತ್ತು ನೀರನ್ನು ಕೊಟ್ಟನು. ಅದು ಅವನು ದಕ್ಷಿಣದ ಕಡೆಗೆ 40 ದಿನ ಪ್ರಯಾಣ ಮಾಡಿ ಹೋರೇಬ್ ಬೆಟ್ಟಕ್ಕೆ ಹೋಗಲು ಶಕ್ತಿ ಕೊಟ್ಟಿತು. ಅಷ್ಟೇ ಅಲ್ಲದೆ, ತನ್ನೊಬ್ಬನನ್ನು ಬಿಟ್ಟು ಬೇರೆ ಯಾವ ಇಸ್ರಾಯೇಲ್ಯನೂ ದೇವರಿಗೆ ನಂಬಿಗಸ್ತನಾಗಿ ಉಳಿದಿಲ್ಲ ಎಂಬ ಎಲೀಯನ ತಪ್ಪು ಕಲ್ಪನೆಯನ್ನು ಯೆಹೋವನು ದಯಾಪೂರ್ವಕವಾಗಿ ತಿದ್ದಿದನು. ತದನಂತರ ಅವನಿಗೆ ಹೊಸ ನೇಮಕಗಳನ್ನು ಕೊಟ್ಟನು. ಎಲೀಯನು ಅದನ್ನು ಸ್ವೀಕರಿಸಿದನು. ಯೆಹೋವನ ಸಹಾಯದಿಂದ ಎಲೀಯನು ಪ್ರಯೋಜನ ಪಡೆದನು. ಹೊಸಬಲದೊಂದಿಗೆ ಪುನಃ ಪ್ರವಾದಿಯ ಕೆಲಸಕ್ಕೆ ಹಿಂದಿರುಗಿದನು.—1 ಅರ. 19:5-8, 15-19.

16. ಯೆಹೋವನು ಯಾವೆಲ್ಲ ವಿಧದಲ್ಲಿ ನಿಮ್ಮನ್ನು ಬಲಗೊಳಿಸಿದ್ದಾನೆ?

16 ಎಲೀಯನ ಉದಾಹರಣೆಯು ‘ನೀವು ನಂಬಿಕೆಯಲ್ಲಿ ಇದ್ದೀರಿ’ ಎನ್ನುವುದನ್ನು ಖಾತ್ರಿಪಡಿಸಲು ಹಾಗೂ ಸಕಾರಾತ್ಮಕ ನೋಟದೊಂದಿಗೆ ಮುನ್ನಡೆಯಲು ನಿಮಗೆ ಸಹಾಯ ಮಾಡುವುದು. ಮೊದಲನೇದಾಗಿ, ಯೆಹೋವನು ನಿಮ್ಮನ್ನು ಯಾವೆಲ್ಲ ವಿಧದಲ್ಲಿ ಪರಾಮರಿಸಿದ್ದಾನೆಂದು ಯೋಚಿಸಿ. ಆತನ ಸೇವಕರಲ್ಲಿ ಒಬ್ಬರು ಅಂದರೆ ಹಿರಿಯರೋ, ಒಬ್ಬ ಪ್ರೌಢ ಕ್ರೈಸ್ತನೋ ನಿಮಗೆ ತಕ್ಕ ಸಮಯದಲ್ಲಿ ಸಹಾಯಹಸ್ತ ಚಾಚಿದ್ದುಂಟೋ? (ಗಲಾ. 6:2) ನೀವು ಬೈಬಲ್‌ ಮತ್ತು ಕ್ರೈಸ್ತ ಪ್ರಕಾಶನಗಳನ್ನು ಓದುವಾಗ, ಕೂಟಗಳಿಗೆ ಹಾಜರಾದಾಗ ‘ಯೆಹೋವನು ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ವಹಿಸುತ್ತಿದ್ದಾನೆ’ ಎಂಬ ಸಾಕ್ಷಾತ್‌ ಅನುಭವ ನಿಮಗಾಗಿದೆಯೋ? ಮುಂದಿನ ಬಾರಿ ಇಂಥ ಯಾವುದೇ ವಿಧದಲ್ಲಿ ನಿಮಗೆ ನೆರವು ದೊರೆತಾಗ ಅದು ನಿಜವಾಗಿಯೂ ಯಾರಿಂದ ಬರುತ್ತಿದೆ ಎನ್ನುವುದನ್ನು ಯೋಚಿಸಿ. ಆ ಸಹಾಯದ ಮೂಲನಾದ ಯೆಹೋವನಿಗೆ ಧನ್ಯವಾದ ಹೇಳಲು ಮರೆಯದಿರಿ.—ಕೀರ್ತ. 121:1, 2.

17. ಯೆಹೋವನು ತನ್ನ ಸೇವಕರಲ್ಲಿ ಯಾವುದನ್ನು ಅಮೂಲ್ಯವಾಗಿ ಕಾಣುತ್ತಾನೆ?

 17 ಎರಡನೇದಾಗಿ, ನಕಾರಾತ್ಮಕ ದೃಷ್ಟಿಕೋನವು ಮೋಸಕರವಾದದ್ದು ಎಂಬುದನ್ನು ನೆನಪಿಡಿ. ಯೆಹೋವನಿಗೆ ನಮ್ಮ ಬಗ್ಗೆ ಯಾವ ನೋಟವಿದೆ ಎನ್ನುವುದೇ ಯಾವಾಗಲೂ ಮುಖ್ಯ. (ರೋಮನ್ನರಿಗೆ 14:4 ಓದಿ.) ನಾವು ತೋರಿಸುವ ಭಕ್ತಿ, ನಂಬಿಗಸ್ತಿಕೆಯನ್ನು ಯೆಹೋವನು ತುಂಬ ಅಮೂಲ್ಯವೆಂದೆಣಿಸುತ್ತಾನೆ. ನಾವೆಷ್ಟು ಸಾಧನೆ ಮಾಡಿದ್ದೇವೆ ಎನ್ನುವುದರಿಂದ ಆತನು ನಮ್ಮನ್ನು ಅಳೆಯುವುದಿಲ್ಲ. ಎಲೀಯನಂತೆ ನೀವು ಸಹ ಯೆಹೋವನಿಗಾಗಿ ಮಾಡಿರುವ ವಿಷಯಗಳು ನೀವು ನೆನಸುವುದಕ್ಕಿಂತ ಹೆಚ್ಚಿರಬಹುದು. ನಿಮ್ಮಿಂದ ಸಹಾಯ, ಉತ್ತೇಜನ ಪಡೆದುಕೊಂಡ ಕೆಲವರು ಸಭೆಯಲ್ಲಿರಬಹುದು, ಆದರೆ ಅದು ನಿಮಗೆ ಗೊತ್ತಿರಲಿಕ್ಕಿಲ್ಲ ಅಥವಾ ಸೇವೆಯಲ್ಲಿ ನೀವು ಹಾಕಿದ ಪರಿಶ್ರಮದಿಂದಾಗಿ ಟೆರಿಟೊರಿಯಲ್ಲಿರುವ ಜನರಿಗೆ ಸತ್ಯದ ಪರಿಚಯವಾಗಿರಬಹುದು.

18. ಯೆಹೋವನು ನಿಮಗೆ ಕೊಡುವ ನೇಮಕ ಯಾವುದರ ಪುರಾವೆಯಾಗಿದೆ?

18 ಕೊನೆಯದಾಗಿ, ಯೆಹೋವನು ಕೊಡುವ ಒಂದೊಂದು ನೇಮಕವನ್ನೂ ಆತನು ನಿಮ್ಮೊಂದಿಗಿದ್ದಾನೆ ಎಂಬುದರ ರುಜುವಾತಾಗಿ ವೀಕ್ಷಿಸಿ. (ಯೆರೆ. 20:11) ಎಲೀಯನಂತೆ ನಿಮಗೂ ಕೆಲವೊಮ್ಮೆ ‘ನನ್ನ ಸೇವೆಗೆ ಏನೂ ಫಲ ಸಿಗುತ್ತಿಲ್ಲ’ ಎಂದನಿಸಬಹುದು. ನೀವಿಟ್ಟಿರುವ ಕೆಲವು ಆಧ್ಯಾತ್ಮಿಕ ಗುರಿಗಳನ್ನು ತಲಪಲು ಆಗುತ್ತಿಲ್ಲ ಎಂಬಂತೆ ಕಾಣಬಹುದು. ಆಗ ನೀವು ಎಲೀಯನಂತೆ ಕುಗ್ಗಿಹೋಗಬಹುದು. ಹಾಗಿದ್ದರೂ ನಮಗೆಲ್ಲರಿಗೂ ಇರುವ ಒಂದು ಮಹಾನ್‌ ಸದವಕಾಶದಲ್ಲಿ ಪಾಲ್ಗೊಳ್ಳುವ ಸುಯೋಗ ನಿಮಗಿದೆ ಎನ್ನುವುದನ್ನು ಮನಸ್ಸಿನಲ್ಲಿಡಿ. ಅದುವೇ ಸುವಾರ್ತೆಯನ್ನು ಸಾರುವ ಕೆಲಸ ಹಾಗೂ ದೇವರ ನಾಮಧಾರಿಯಾಗಿರುವ ಸುಯೋಗ! ಹಾಗಾಗಿ ಯೆಹೋವನಿಗೆ ನಂಬಿಗಸ್ತರಾಗಿರ್ರಿ. ಆಗ ಯೇಸು ಹೇಳಿದ ಒಂದು ಸಾಮ್ಯದಲ್ಲಿನ ಈ ಮಾತುಗಳನ್ನು ಒಂದರ್ಥದಲ್ಲಿ ನಿಮಗೂ ಹೇಳಲಾಗುವುದು: “ನಿನ್ನ ಯಜಮಾನನ ಸಂತೋಷದಲ್ಲಿ ಸೇರು.”—ಮತ್ತಾ. 25:23.

‘ದುಃಖಿತನ ಪ್ರಾರ್ಥನೆ’

19. ಕೀರ್ತನೆ 102ರ ಲೇಖಕ ಎಂಥ ಪರಿಸ್ಥಿತಿಯಲ್ಲಿದ್ದನು?

19 ಕೀರ್ತನೆ 102ರ ಲೇಖಕನು ಹತಾಶೆಯಲ್ಲಿ ಮುಳುಗಿಹೋಗಿದ್ದನು. ಅವನು ಶಾರೀರಿಕವಾಗಿಯೋ ಭಾವನಾತ್ಮಕವಾಗಿಯೋ ಅತೀವ ನೋವಿನಿಂದಾಗಿ ‘ದುಃಖಿತನಾಗಿದ್ದನು.’ ತನ್ನ ಸಮಸ್ಯೆಗಳನ್ನು ತಾಳಿಕೊಳ್ಳಲು ಅವನಲ್ಲಿ ತ್ರಾಣವಿರಲಿಲ್ಲ. (ಕೀರ್ತ. 102, ಮೇಲ್ಬರಹ) ಅವನ ಬರಹದಿಂದ ತಿಳಿಯುತ್ತದೇನೆಂದರೆ ದಿನವಿಡೀ ಅವನು ನೋವು, ಒಂಟಿತನ ಮತ್ತು ತನ್ನ ಭಾವನೆಗಳೊಂದಿಗೆ ತೊಳಲಾಡುತ್ತಿದ್ದನು. (ಕೀರ್ತ. 102:3, 4, 6, 11) ಯೆಹೋವನಿಗೆ ತಾನು ಇಷ್ಟವಿಲ್ಲ, ಆತನು ತನ್ನನ್ನು ಎತ್ತಿ ಒಗೆದುಬಿಡುತ್ತಾನೆ ಎಂದೇ ಅವನು ಭಾವಿಸಿದನು.—ಕೀರ್ತ. 102:10.

20. ನಕಾರಾತ್ಮಕ ಭಾವನೆಗಳೊಂದಿಗೆ ಹೋರಾಡುತ್ತಿರುವವರಿಗೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತದೆ?

20 ಹಾಗಿದ್ದರೂ ಕೀರ್ತನೆಗಾರನು ತನ್ನ ಜೀವನವನ್ನು ಯೆಹೋವನನ್ನು ಸ್ತುತಿಸಲಿಕ್ಕಾಗಿ ಉಪಯೋಗಿಸಲು ಶಕ್ತನಾದನು. (ಕೀರ್ತನೆ 102:19-21 ಓದಿ.) 102ನೇ ಕೀರ್ತನೆಯಿಂದ ನಮಗೆ ತಿಳಿಯುತ್ತದೇನೆಂದರೆ “ನಂಬಿಕೆಯಲ್ಲಿ” ಇದ್ದವರು ಕೂಡ ನೋವಲ್ಲಿ ಮುಳುಗಿಹೋಗಲು ಸಾಧ್ಯವಿದೆ. ಅದೇ ನೋವಿನ ಬಗ್ಗೆ ಯೋಚಿಸುತ್ತಾ ಯಾವುದರ ಮೇಲೆಯೂ ಗಮನ ನೆಡಲು ಸಾಧ್ಯವಾಗದೆ ಹೋಗಬಹುದು. ಕೀರ್ತನೆಗಾರನಿಗೂ ಹೀಗೆ ಆಯಿತು. ಸಮಸ್ಯೆಗಳೇ ನನ್ನ ಸ್ನೇಹಿತರು ಎಂದವನಿಗೆ ಅನಿಸಿತು. ಆದ್ದರಿಂದ, “ಮನೆಮಾಳಿಗೆ ಮೇಲಿರುವ ಒಂಟಿಯಾದ ಪಕ್ಷಿಯಂತಿರುತ್ತೇನೆ” ಎಂದು ಅವನು ಬರೆದನು. (ಕೀರ್ತ. 102:7) ನಿಮಗೆ ಈ ರೀತಿ ಅನಿಸುವಲ್ಲಿ, ಕೀರ್ತನೆಗಾರನಂತೆಯೇ ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಯೆಹೋವನ ಹತ್ತಿರ ಹೇಳಿಕೊಳ್ಳಿ. ಕುಗ್ಗಿಹೋಗಿರುವಾಗ ನೀವು ಮಾಡುವ ಪ್ರಾರ್ಥನೆಗಳು, ನಕಾರಾತ್ಮಕ ಭಾವನೆಗಳೊಂದಿಗೆ ಹೋರಾಡಲು ನಿಮಗೆ ತುಂಬ ಸಹಾಯಮಾಡಬಲ್ಲವು. ‘ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸುತ್ತೇನೆ’ ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. (ಕೀರ್ತ. 102:15) ಆತನ ಮಾತಿನಲ್ಲಿ ಭರವಸೆಯಿಡಿ.

21. ನಕಾರಾತ್ಮಕ ಭಾವನೆಗಳೊಂದಿಗೆ ಹೋರಾಡುತ್ತಿರುವ ವ್ಯಕ್ತಿ ಸಕಾರಾತ್ಮಕವಾಗಿ ಯೋಚಿಸಲು ಯಾವುದು ನೆರವಾಗುವುದು?

21 ಸಕಾರಾತ್ಮಕ ನೋಟವನ್ನು ಬೆಳೆಸಿಕೊಳ್ಳುವುದು ಹೇಗೆಂದು ಸಹ 102ನೇ ಕೀರ್ತನೆ ನಿಮಗೆ ತಿಳಿಸುತ್ತದೆ. ಕೀರ್ತನೆಗಾರನು ಏನು ಮಾಡಿದನು ಗಮನಿಸಿ. ಅವನು ಯೆಹೋವನೊಂದಿಗೆ ತನಗಿರುವ ಸಂಬಂಧದ ಮೇಲೆ ತನ್ನ ಗಮನವನ್ನು ತಿರುಗಿಸಿದನು. (ಕೀರ್ತ. 102:12, 27) ತನ್ನ ಜನರು ಕಷ್ಟವನ್ನು ಅನುಭವಿಸುವಾಗ ಯೆಹೋವನು ಯಾವಾಗಲೂ ಅವರ ಪಕ್ಕದಲ್ಲೇ ಇದ್ದು ಅವರನ್ನು ಬಲಪಡಿಸುತ್ತಾನೆ ಎಂದು ತಿಳಿದು ಕೀರ್ತನೆಗಾರನಿಗೆ ಸಾಂತ್ವನ ಸಿಕ್ಕಿತು. ಹಾಗಾಗಿ ನಕಾರಾತ್ಮಕ ಭಾವನೆಗಳಿಂದಾಗಿ ನಿಮಗೆ ಸ್ವಲ್ಪ ಸಮಯದ ವರೆಗೆ ಬಯಸಿದಷ್ಟು ಸೇವೆ ಮಾಡಲು ಆಗುತ್ತಿಲ್ಲವಾದರೆ ಆ ಕುರಿತು ಯೆಹೋವನಿಗೆ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯನ್ನು ಲಾಲಿಸುವಂತೆ ಕೇಳಿಕೊಳ್ಳಿ. ಕೇವಲ ನಿಮಗೆ ಸಮಾಧಾನ, ನೆಮ್ಮದಿ ತರಲಿಕ್ಕೋಸ್ಕರವಲ್ಲ, ‘ಯೆಹೋವನಾಮವು ವರ್ಣಿಸಲ್ಪಡುವದಕ್ಕೋಸ್ಕರ’ ಅಂದರೆ ಎಲ್ಲೆಡೆ ಪ್ರಕಟಿಸಲ್ಪಡುವುದಕ್ಕೋಸ್ಕರ ನಿಮ್ಮ ಮೊರೆಗೆ ಉತ್ತರ ಕೊಡುವಂತೆ ಬೇಡಿಕೊಳ್ಳಿ.—ಕೀರ್ತ. 102:20, 21.

22.  ನಮ್ಮಲ್ಲಿ ಪ್ರತಿಯೊಬ್ಬರೂ ಹೇಗೆ ಯೆಹೋವನನ್ನು ಮೆಚ್ಚಿಸಸಾಧ್ಯ?

22 ಹೌದು, ನಾವು “ನಂಬಿಕೆಯಲ್ಲಿ” ಇದ್ದೇವೆಂದು ಹಾಗೂ ಯೆಹೋವನಿಗೆ ಅಮೂಲ್ಯರೆಂದು ಬೈಬಲಿನ ಸಹಾಯದಿಂದ ಖಾತ್ರಿ ಮಾಡಿಕೊಳ್ಳಬಲ್ಲೆವು. ಈ ದುಷ್ಟ ಲೋಕದಲ್ಲಿ ನಾವು ಬದುಕುತ್ತಿರುವುದರಿಂದ ನಕಾರಾತ್ಮಕ ಭಾವನೆಗಳನ್ನು ಮತ್ತು ನಿರಾಶೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಆದರೂ ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನು ಮೆಚ್ಚುವಂಥ ರೀತಿಯಲ್ಲಿ ಜೀವಿಸಲು ಸಾಧ್ಯ ಹಾಗೂ ಕಷ್ಟಗಳ ಮಧ್ಯೆಯೂ ಆತನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಮುಂದುವರಿಯುವ ಮೂಲಕ ರಕ್ಷಣೆ ಪಡೆಯಲು ಸಾಧ್ಯ!—ಮತ್ತಾ. 24:13.