ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಧೂಮಪಾನದ ಬಗ್ಗೆ ದೇವರ ನೋಟ

ಜಾಗತಿಕ ಪಿಡುಗು

ಜಾಗತಿಕ ಪಿಡುಗು

ವಿನಾಶಕಾರಿ ಧೂಮಪಾನ, ನೀವಿರಿ ಜೋಪಾನ!

  • ಕಳೆದ ಒಂದೇ ಶತಮಾನದಲ್ಲಿ ಧೂಮಪಾನ ಸರಿಸುಮಾರು 10,00,00,000 ಜನರ ಪ್ರಾಣಗಳನ್ನು ಬಲಿತೆಗೆದುಕೊಂಡಿತು.

  • ಪ್ರತಿ ವರ್ಷ ಸುಮಾರು 60,00,000 ಜನರು ಈ ಧೂಮಪಾನದಿಂದಾಗಿ ಸಾಯುತ್ತಿದ್ದಾರೆ.

  • ಇದು ಪ್ರತಿ 6 ಸೆಕೆಂಡಿಗೆ ಸರಾಸರಿ ಒಬ್ಬನನ್ನು ಕೊಲ್ಲುತ್ತಿದೆ.

ಆದರೂ ಈ ದುಶ್ಚಟದಿಂದಾಗುತ್ತಿರುವ ಸಾವುಗಳು ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ.

ಪರಿಣಿತರ ಅಂಕಿ ಅಂಶಗಳಿಗನುಸಾರ ಒಂದುವೇಳೆ ಈ ದುಶ್ಚಟ ಜನರಲ್ಲಿ ಹೀಗೇ ಮುಂದುವರಿದರೆ, 2030ರಷ್ಟಕ್ಕೆ ಪ್ರತಿ ವರ್ಷ ಇದರಿಂದಾಗಿ ಸಾಯುವವರ ಸಂಖ್ಯೆ 80,00,000ಕ್ಕೆ ಏರುತ್ತದೆ. 21ನೇ ಶತಮಾನ ಮುಗಿಯುವಷ್ಟರಲ್ಲಿ ಈ ಧೂಮಪಾನ 100,00,00,000 ಜನರನ್ನು ಬಲಿತೆಗೆದುಕೊಳ್ಳುತ್ತದೆ ಎನ್ನುವುದು ಅವರ ಎಣಿಕೆ.

ತಂಬಾಕಿನಿಂದ ಹಾನಿಗೊಳಗಾಗುತ್ತಿರುವವರು ಧೂಮಪಾನಿಗಳಷ್ಟೇ ಅಲ್ಲ. ಧೂಮಪಾನದ ಚಟವಿರುವವರು ಸತ್ತಾಗ ಅವರ ಕುಟುಂಬದವರು ಭಾವನಾತ್ಮಕ ನೋವನ್ನು, ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಅಷ್ಟೇ ಅಲ್ಲದೆ, ಧೂಮಪಾನ ಕಲುಷಿತ ಗಾಳಿ ಸೇವಿಸಿಯೇ ಸುಮಾರು 6,00,000 ಜನರು ಪ್ರತಿ ವರ್ಷ ಸಾಯುತ್ತಿದ್ದಾರೆ. ಇದೆಲ್ಲದರ ಫಲಿತಾಂಶ, ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿ ಅದರ ಬಿಸಿ ನಮ್ಮೆಲ್ಲರಿಗೂ ತಟ್ಟುತ್ತಿದೆ.

ರೋಗರುಜಿನಗಳಿಗೆ ಔಷಧಿ ಕಂಡುಹಿಡಿಯಲು ವೈದ್ಯರು ಪರದಾಡುವಂತೆ ಈ ಪಿಡುಗನ್ನು ನಿಯಂತ್ರಿಸಲು ಪರದಾಡಬೇಕೆಂದೇನಿಲ್ಲ. ಇದನ್ನು ಬುಡಸಮೇತ ಕಿತ್ತೆಸೆಯಲು ಸಾಧ್ಯ, ಇದರ ಪರಿಹಾರ ಎಲ್ಲರಿಗೂ ತಿಳಿದಿದೆ ಸಹ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ನಿರ್ದೇಶಕಿಯಾದ ಡಾ. ಮಾರ್ಗರೆಟ್‌ ಚಾನ್‍ರು ಹೇಳಿದ್ದು: “ತಂಬಾಕಿನ ದುಶ್ಚಟವನ್ನು ಮನುಷ್ಯನೇ ಆರಂಭಿಸಿದ್ದು, ಸರ್ಕಾರ ಮತ್ತು ಸಮಾಜದ ಜಂಟಿ ಪ್ರಯತ್ನದಿಂದ ಇದನ್ನು ನಿಯಂತ್ರಿಸಲು ಸಾಧ್ಯವಿದೆ.”

ಧೂಮಪಾನವೆಂಬ ಈ ಪಿಡುಗನ್ನು ನಿಯಂತ್ರಿಸಲು ದೇಶಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಶತಪ್ರಯತ್ನಮಾಡುತ್ತಿವೆ. ಆಗಸ್ಟ್‌ 2012ರಲ್ಲಿ ಸುಮಾರು 175 ದೇಶಗಳು ತಂಬಾಕಿನ ಉಪಯೋಗವನ್ನು ನಿಲ್ಲಿಸಲು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡವು. * ಆದರೂ ತಂಬಾಕಿನ ಕಾರ್ಖಾನೆಗಳು ಮತ್ತು ಜನರಲ್ಲಿನ ಚಟ ಇದರ ಉಪಯೋಗವನ್ನು ಇನ್ನೂ ಜನಪ್ರಿಯಗೊಳಿಸುತ್ತಿವೆ. ಪ್ರತಿ ವರ್ಷ ಈ ಕಾರ್ಖಾನೆಗಳು ಜನರನ್ನು ಅದರಲ್ಲೂ ಮುಖ್ಯವಾಗಿ ಪ್ರಗತಿಪರ ದೇಶದ ಮಹಿಳೆಯರನ್ನು ಮತ್ತು ಯುವಕರನ್ನು ಜಾಹೀರಾತಿನ ಮೂಲಕ ಆಕರ್ಷಿಸಲು ಕೋಟಿಗಟ್ಟಲೆ ಹಣವನ್ನು ಸುರಿಸುತ್ತಿವೆ. ಜೊತೆಗೆ ಈ ತಂಬಾಕು ಸಹ ಜನರನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿದೆ. ಆದ್ದರಿಂದ ಈಗಾಗಲೇ ತಂಬಾಕಿನ ವ್ಯಸನಿಗಳಾಗಿರುವ 100 ಕೋಟಿ ಜನರಿಗೆ ಭಯಂಕರ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಧೂಮಪಾನಕ್ಕೆ ದಾಸರಾಗಿರುವವರು ಈ ದುಶ್ಚಟವನ್ನು ಹೀಗೇ ಮುಂದುವರಿಸಿದರೆ ಸಾಯುವವರ ಸಂಖ್ಯೆ ಮುಂದಿನ ನಾಲ್ಕು ದಶಕಗಳಲ್ಲಿ ಶರವೇಗದಲ್ಲಿ ಹೆಚ್ಚುತ್ತದೆ.

ತಂಬಾಕು ಸೇವನೆಯನ್ನು ಬಿಟ್ಟುಬಿಡಬೇಕೆಂದು ಜನ ನಿರ್ಧರಿಸುವುದಾದರೂ ಜಾಹೀರಾತುಗಳು ಮತ್ತು ಅವರಲ್ಲಿನ ಚಟ ಇದನ್ನು ಮಾಡಲು ಬಿಡುತ್ತಿಲ್ಲ. ನಾವೊಕೋ ಎಂಬಾಕೆಗೂ ಹೀಗೇ ಆಯಿತು. ಆಕೆ ತನ್ನ ಹದಿಪ್ರಾಯದಲ್ಲೇ ತಂಬಾಕು ಸೇವನೆ ಆರಂಭಿಸಿದಳು. ಜಾಹೀರಾತಿನಲ್ಲಿ ಧೂಮಪಾನವನ್ನು ಚಿತ್ರಿಸಲಾಗುತ್ತಿದ್ದ ರೀತಿಯನ್ನು ಅನುಕರಿಸಿದರೆ, ಸಮಾಜದಲ್ಲಿ ತಾನು ಸಹ ಎಲ್ಲ ತಿಳಿದವಳಾಗುತ್ತೇನೆ ಎಂಬ ಭಾವನೆ ಆಕೆಯಲ್ಲಿ ಮೂಡಿತು. ತನ್ನ ಹೆತ್ತವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ತೀರಿಕೊಂಡರೂ ಆಕೆ ಧೂಮಪಾನ ಬಿಡಲಿಲ್ಲ. ತನ್ನ ಇಬ್ಬರು ಮಕ್ಕಳನ್ನು ಬೆಳೆಸುವಾಗಲೂ ಆಕೆ ಧೂಮಪಾನ ಮಾಡುತ್ತಲೇ ಇದ್ದಳು. ಆಕೆ ಹೇಳಿದ್ದು: “ನನಗೂ ಶ್ವಾಸಕೋಶದ ಕ್ಯಾನ್ಸರ್‌ ಬರುತ್ತದೇನೋ ಅಂತ ಭಯ ಆಗ್ತಿತ್ತು, ನನ್ನ ಮಕ್ಕಳ ಆರೋಗ್ಯದ ಬಗ್ಗೇನೂ ಚಿಂತೆ ಆಗ್ತಿತ್ತು. ಆದರೂ ನನಗೆ ಧೂಮಪಾನ ಬಿಡಲಿಕ್ಕೇ ಆಗ್ಲಿಲ್ಲ, ನನಗ್ಯಾವತ್ತೂ ಇದನ್ನು ಬಿಡಲಿಕ್ಕೆ ಆಗೋದೇ ಇಲ್ಲ ಅನ್ಕೊ೦ಡಿದ್ದೆ.”

ಕೊನೆಗೂ ನಾವೊಕೋ ಅದನ್ನು ನಿಲ್ಲಿಸಶಕ್ತಳಾದಳು. ಲಕ್ಷಾಂತರ ಜನರಿಗೆ ತಂಬಾಕು ಸೇವನೆಯಿಂದ ಹೊರಬರಲು ಸಹಾಯ ಮಾಡಿದ ಅದೇ ವಿಷಯ ಈಕೆಗೂ ಈ ದುಶ್ಟವನ್ನು ಬಿಟ್ಟುಬಿಡಲು ಪ್ರೇರೇಪಣೆ ನೀಡಿತು. ಆ ವಿಷಯ ಯಾವುದೆಂದು ತಿಳಿದುಕೊಳ್ಳಲು ನೀವು ಬಯಸುತ್ತೀರಾ? ದಯವಿಟ್ಟು ಮುಂದಿನ ಲೇಖನ ಓದಿ. (w14-E 06/01)

^ ಪ್ಯಾರ. 11 ಈ ಹೆಜ್ಜೆಗಳಲ್ಲಿ ಜನರಿಗೆ ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವುದು, ತಂಬಾಕಿನ ಕಾರ್ಖಾನೆಗಳ ಜಾಹೀರಾತುಗಳನ್ನು ನಿಷೇಧಿಸುವುದು, ಅದರ ತೆರಿಗೆಗಳನ್ನು ಹೆಚ್ಚಿಸುವುದು ಮತ್ತು ಅದರ ಚಟದಿಂದ ಜನರು ಹೊರಬರುವಂತೆ ಸಹಾಯಮಾಡುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಒಳಗೊಂಡಿದ್ದವು.