ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯದಲ್ಲಿ ಅಚಲ ನಂಬಿಕೆಯನ್ನಿಡಿ

ದೇವರ ರಾಜ್ಯದಲ್ಲಿ ಅಚಲ ನಂಬಿಕೆಯನ್ನಿಡಿ

‘ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯಾಗಿದೆ.’—ಇಬ್ರಿ. 11:1.

1, 2. (ಎ) ದೇವರ ರಾಜ್ಯದಲ್ಲಿ ಪೂರ್ಣ ಭರವಸೆಯಿಡಲು ಯಾವುದು ಸಹಾಯಮಾಡುತ್ತದೆ? (ಬಿ) ಎಫೆಸ 2:12ಕ್ಕನುಸಾರ ಒಡಂಬಡಿಕೆಗಳು ನಮ್ಮನ್ನು ಹೇಗೆ ಬಲಪಡಿಸುತ್ತವೆ? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)

ನಮಗಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ದೇವರ ರಾಜ್ಯವೊಂದೇ ಎಂದು ಯೆಹೋವನ ಸಾಕ್ಷಿಗಳಾದ ನಾವು ಹುಮ್ಮಸ್ಸಿನಿಂದ ಸಾರುತ್ತೇವೆ. ಆದರೆ ದೇವರ ರಾಜ್ಯ ನಿಜವಾಗಿಯೂ ಒಂದು ಸರ್ಕಾರವಾಗಿದೆ ಮತ್ತು ಅದರ ಮೂಲಕ ದೇವರು ತನ್ನ ಉದ್ದೇಶವನ್ನು ನೆರವೇರಿಸುತ್ತಾನೆ ಎಂಬುದು ವೈಯಕ್ತಿಕವಾಗಿ ನಮಗೆ ಖಚಿತವಾಗಿದೆಯಾ? ಅಥವಾ ದೇವರ ರಾಜ್ಯ ಬರುತ್ತದೆಂಬ ವಿಷಯದಲ್ಲಿ ಸಂದೇಹವಿದೆಯಾ? ನಮ್ಮ ನಂಬಿಕೆಯನ್ನು ಹೆಚ್ಚಿಸಲು ದೇವರು ನಮಗೆ ಯಾವ ಸಹಾಯ ಕೊಟ್ಟಿದ್ದಾನೆ?—ಇಬ್ರಿ. 11:1.

2 ಮನುಷ್ಯರನ್ನು ದೇವರು ಯಾವ ಉದ್ದೇಶದಿಂದ ಸೃಷ್ಟಿಸಿದ್ದನೋ ಅದನ್ನು ಆತನ ರಾಜ್ಯವು ನಿಜವಾಗಿಸುತ್ತದೆ. ವಿಶ್ವವನ್ನು ಆಳಲು ಯೆಹೋವನಿಗೆ ಹಕ್ಕಿರುವುದರಿಂದಲೇ ಆತನು ಆ ರಾಜ್ಯವನ್ನು ಸ್ಥಾಪಿಸಿದ್ದಾನೆ. ದೇವರ ರಾಜ್ಯದ ರಾಜ ಯಾರು? ರಾಜನೊಟ್ಟಿಗೆ ಬೇರೆ ಯಾರೆಲ್ಲ ಆಳುತ್ತಾರೆ? ಅವರ ಅಧಿಕಾರದ ಕೆಳಗೆ ಏನೆಲ್ಲ ಇರುತ್ತದೆ? ಯಾರು ಇರುತ್ತಾರೆ? ಈ ಎಲ್ಲ ಪ್ರಮುಖ ಅಂಶಗಳನ್ನು ಯೆಹೋವ ದೇವರು ಒಡಂಬಡಿಕೆಗಳನ್ನು ಮಾಡುವ ಮೂಲಕ ನಮಗೆ ಖಚಿತಪಡಿಸಿದ್ದಾನೆ. ಒಡಂಬಡಿಕೆ ಅಂದರೆ ಒಪ್ಪಂದ ಅಥವಾ ಕರಾರು ಆಗಿದೆ. ಯೆಹೋವನು ಅಥವಾ ಯೇಸು ಕ್ರಿಸ್ತನು ಮಾಡಿರುವ ಒಡಂಬಡಿಕೆಗಳನ್ನು ನಾವೀಗ ನೋಡೋಣ. ಇವುಗಳನ್ನು ತಿಳಿದುಕೊಳ್ಳುವುದರಿಂದ ನಮಗೆ ಎರಡು ಪ್ರಯೋಜನಗಳಿವೆ. ಒಂದು, ಯೆಹೋವನ ಉದ್ದೇಶಗಳು ಹೇಗೆ ಖಂಡಿತವಾಗಿ ನೆರವೇರುತ್ತವೆ ಎಂದು ತಿಳಿಯುತ್ತೇವೆ. ಎರಡನೇದಾಗಿ, ದೇವರ ರಾಜ್ಯ ಯಾವತ್ತೂ ಬಿದ್ದುಹೋಗುವುದಿಲ್ಲ ಎಂದು ಭರವಸೆಯಿಡಲು ನೆರವಾಗುತ್ತದೆ.—ಎಫೆಸ 2:12 ಓದಿ.

3. ನಾವು ಯಾವುದರ ಬಗ್ಗೆ ತಿಳಿಯಲಿದ್ದೇವೆ?

3 ಮೆಸ್ಸೀಯ ರಾಜ್ಯಕ್ಕೆ ಸಂಬಂಧಿಸಿದ ಆರು ಪ್ರಮುಖ ಒಡಂಬಡಿಕೆಗಳ ಕುರಿತು ಬೈಬಲ್‌ ತಿಳಿಸುತ್ತದೆ. ಅವು: (1) ಅಬ್ರಹಾಮನೊಂದಿಗಿನ ಒಡಂಬಡಿಕೆ (2) ಧರ್ಮಶಾಸ್ತ್ರದ ಒಡಂಬಡಿಕೆ (3) ದಾವೀದನೊಂದಿಗಿನ ಒಡಂಬಡಿಕೆ (4) ಮೆಲ್ಕಿಜೆದೇಕನಂಥ ಯಾಜಕನಾಗುವ ಒಡಂಬಡಿಕೆ (5) ಹೊಸ ಒಡಂಬಡಿಕೆ (6) ರಾಜ್ಯದ ಒಡಂಬಡಿಕೆ. ಇದರಲ್ಲಿ ಪ್ರತಿಯೊಂದು ಒಡಂಬಡಿಕೆಗೂ ದೇವರ ರಾಜ್ಯಕ್ಕೂ ಏನು ಸಂಬಂಧವಿದೆ ಎಂದು ನಾವು ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನೋಡೋಣ. ಮಾತ್ರವಲ್ಲ ಆ ಒಡಂಬಡಿಕೆಗಳು ಭೂಮಿ ಹಾಗೂ ಮಾನವರ ವಿಷಯದಲ್ಲಿ ದೇವರಿಗಿರುವ ಉದ್ದೇಶವನ್ನು ಹೇಗೆ ನೆರವೇರಿಸುತ್ತವೆ ಎಂದು ತಿಳಿಯೋಣ.—“ ದೇವರು ತನ್ನ ಉದ್ದೇಶವನ್ನು ನೆರವೇರಿಸುವ ವಿಧ” ಎಂಬ ಶೀರ್ಷಿಕೆಯ ಚಾರ್ಟ್ ನೋಡಿ.

ದೇವರ ಉದ್ದೇಶ ಹೇಗೆ ನೆರವೇರುವುದೆಂದು ತೋರಿಸುವ ವಾಗ್ದಾನ

4. ಆದಿಕಾಂಡ ಪುಸ್ತಕ ತಿಳಿಸುವಂತೆ ಮನುಷ್ಯರ ವಿಷಯದಲ್ಲಿ ದೇವರು ಯಾವ ಹೇಳಿಕೆಗಳನ್ನು ನುಡಿದನು?

4 ಯೆಹೋವನು ಈ ಸುಂದರ ಭೂಮಿಯನ್ನು ಸೃಷ್ಟಿಸಿದ ನಂತರ ಮೂರು ಹೇಳಿಕೆಗಳನ್ನು ನುಡಿದನು: (1) ತನ್ನ ಸ್ವರೂಪದಲ್ಲಿ ಮನುಷ್ಯರನ್ನು ಸೃಷ್ಟಿಸಬೇಕು. (2) ಆ ಮನುಷ್ಯರು ಇಡೀ ಭೂಮಿಯನ್ನು ಸುಂದರ ಪರದೈಸಾಗಿ ಮಾಡಿ ತಮ್ಮ ನೀತಿವಂತ ಮಕ್ಕಳಿಂದ ಭೂಮಿಯನ್ನು ತುಂಬಿಸಬೇಕು. (3) ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಅವರು ತಿನ್ನಬಾರದು. (ಆದಿ. 1:26, 28; 2:16, 17) ಈ ಮೂರು ಅಂಶಗಳೇ ದೇವರು ಮನುಷ್ಯರನ್ನು ಹಾಗೂ ಭೂಮಿಯನ್ನು ಯಾವ ಉದ್ದೇಶದಿಂದ ಸೃಷ್ಟಿಸಿದನೆಂದು ಸ್ಪಷ್ಟವಾಗಿ ತೋರಿಸಿಕೊಡುತ್ತವೆ. ಹೀಗಿರುವಾಗ ದೇವರು ಒಡಂಬಡಿಕೆಗಳನ್ನು ಮಾಡಿದ್ದಾದರೂ ಏಕೆ?

5, 6. (ಎ) ದೇವರ ಉದ್ದೇಶ ನೆರವೇರದಂತೆ ತಡೆಯಲು ಸೈತಾನನು ಏನೆಲ್ಲ ಮಾಡಿದನು? (ಬಿ) ಆ ದಂಗೆಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

5 ದೇವರ ವಿರುದ್ಧ ಹಾಗೂ ಆತನ ಉದ್ದೇಶಗಳ ವಿರುದ್ಧ ಸೈತಾನನು ದಂಗೆಯನ್ನು ಚಿತಾಯಿಸಿದನು. ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನಬಾರದೆಂದು ದೇವರು ಕೊಟ್ಟ ಆಜ್ಞೆಗೆ ಪ್ರಥಮ ಮಾನವರು ವಿಧೇಯರಾಗಬೇಕಿತ್ತು. ಆದರೆ ಆ ಹಣ್ಣನ್ನು ತಿನ್ನುವಂತೆ ಸೈತಾನನು ಹವ್ವಳನ್ನು ಪ್ರಚೋದಿಸುವ ಮೂಲಕ, ಮನುಷ್ಯರು ದೇವರಿಗೆ ತೋರಿಸಬೇಕಾದ ವಿಧೇಯತೆಯನ್ನು ಮುರಿಯಲು ಪಣತೊಟ್ಟನು. (ಆದಿ. 3:1-5; ಪ್ರಕ. 12:9) ಈ ಮೂಲಕ ದೇವರಿಗೆ ತನ್ನ ಸೃಷ್ಟಿಜೀವಿಗಳ ಮೇಲೆ ಆಳ್ವಿಕೆ ನಡೆಸಲು ಇರುವ ಹಕ್ಕನ್ನು ಸೈತಾನನು ಪ್ರಶ್ನಿಸಿದನು. ಸಮಯಾನಂತರ ಮನುಷ್ಯರ ಮೇಲೆಯೂ ಆರೋಪ ಹೊರಿಸುತ್ತಾ ಅವರು ತಮ್ಮ ಸ್ವಾರ್ಥಕ್ಕಾಗಿಯೇ ದೇವರನ್ನು ಆರಾಧಿಸುತ್ತಾರೆಂದು ಸೈತಾನ ವಾದಿಸಿದನು.—ಯೋಬ 1:9-11; 2:4, 5.

6 ಏದೆನಿನಲ್ಲಾದ ದಂಗೆಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಆತನು ಆ ದಂಗೆಕೋರರನ್ನು ಅಲ್ಲೇ ಆ ಕ್ಷಣದಲ್ಲಿ ನಾಶಮಾಡಿಬಿಡಬಹುದಿತ್ತು. ಆದರೆ ಆದಾಮಹವ್ವರ ಸಂತತಿ ಈ ಭೂಮಿಯನ್ನು ತುಂಬಿಕೊಳ್ಳುವ ತನ್ನ ಉದ್ದೇಶ ಈಡೇರಬೇಕೆಂಬ ಕಾರಣಕ್ಕಾಗಿ ದೇವರು ಅವರನ್ನು ನಾಶಮಾಡಲಿಲ್ಲ. ಬದಲಿಗೆ ಭೂಮಿಗಾಗಿ ಮತ್ತು ಮನುಷ್ಯರಿಗಾಗಿ ತಾನಿಟ್ಟಿದ್ದ ಉದ್ದೇಶ ಪೂರ್ತಿಯಾಗಿ ಖಂಡಿತ ನೆರವೇರಲಿದೆ ಎಂಬ ಖಾತ್ರಿ ಕೊಡಲಿಕ್ಕಾಗಿ ಒಂದು ಅತಿ ಪ್ರಮುಖ ಪ್ರವಾದನೆಯನ್ನು ನುಡಿದನು. ಅದೇ ಏದೆನಿನ ವಾಗ್ದಾನ.ಆದಿಕಾಂಡ 3:15 ಓದಿ.

7. ಏದೆನಿನ ವಾಗ್ದಾನವು ಸರ್ಪ ಮತ್ತು ಅದರ ಸಂತತಿಯ ಬಗ್ಗೆ ಏನನ್ನು ತಿಳಿಯಪಡಿಸಿತು?

7 ಈ ವಾಗ್ದಾನದ ಮೂಲಕ ದೇವರು ಸರ್ಪಕ್ಕೆ ಮತ್ತು ಅದರ ಸಂತತಿಗೆ ಮರಣದಂಡನೆ ವಿಧಿಸಿದನು. ಸರ್ಪ ಅಂದರೆ ಪಿಶಾಚನಾದ ಸೈತಾನ; ಅವನ ಪಕ್ಷ ವಹಿಸುತ್ತ ದೇವರ ಆಳ್ವಿಕೆಯನ್ನು ವಿರೋಧಿಸುವವರೆಲ್ಲರು ಸರ್ಪದ ಸಂತತಿಯಾಗಿದ್ದಾರೆ. ಇವರೆಲ್ಲರನ್ನು ನಾಶಮಾಡುವ ಅಧಿಕಾರವನ್ನು ದೇವರು ಸ್ತ್ರೀಯ ಸಂತತಿಗೆ ಕೊಟ್ಟನು. ಹೀಗೆ ಏದೆನಿನಲ್ಲಿ ದೇವರು ಮಾಡಿದ ವಾಗ್ದಾನವು, ಸೈತಾನನಿಗೂ ಅವನ ದಂಗೆಯಿಂದಾದ ಪರಿಣಾಮಗಳಿಗೂ ಒಂದು ಕೊನೆಯಿದೆ ಎನ್ನುವುದನ್ನು ತಿಳಿಯಪಡಿಸಿತು. ಅದು ಹೇಗೆ ಆಗುವುದೆಂದೂ ಆ ಪ್ರವಾದನೆ ತೋರಿಸಿಕೊಟ್ಟಿತು.

8. ಸ್ತ್ರೀ ಮತ್ತು ಆಕೆಯ ಸಂತತಿಯನ್ನು ಗುರುತಿಸಲು ನೆರವಾಗುವ ಯಾವ ವಿಷಯ ನಮಗೆ ತಿಳಿದಿದೆ?

8 ಸ್ತ್ರೀಯ ಸಂತತಿಯು ಸೈತಾನನನ್ನು ‘ಇಲ್ಲದಂತೆ ಮಾಡಲಿದ್ದಾನೆ’ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 2:14) ಹಾಗಾದರೆ ಸ್ತ್ರೀಯ ಸಂತತಿ ಯಾರು? ಸೈತಾನನು ಒಬ್ಬ ಅದೃಶ್ಯ ಆತ್ಮಜೀವಿಯಾಗಿರುವಾಗ ಅವನನ್ನು ನಾಶಮಾಡಲಿರುವವನು ಸಹ ಆತ್ಮಿಕ ವ್ಯಕ್ತಿಯಾಗಿರಬೇಕು. ಮಾತ್ರವಲ್ಲ ಆ ಸಂತತಿಗೆ ಜನ್ಮಕೊಡಲಿರುವವಳು ಸಹ ಅದೃಶ್ಯ ಸ್ತ್ರೀ ಆಗಿರಲೇಬೇಕು. ದೇವರು ಏದೆನಿನಲ್ಲಿ ವಾಗ್ದಾನ ಮಾಡಿದ ನಂತರ ಸೈತಾನನ ಸಂತತಿ ಹೆಚ್ಚೆಚ್ಚಾಗುತ್ತಾ ಹೋಯಿತು. ಆದರೆ ಅಲ್ಲಿಂದ ಸುಮಾರು 4,000 ವರ್ಷಗಳ ವರೆಗೆ ಈ ಸ್ತ್ರೀ ಯಾರು, ಆಕೆಯ ಸಂತತಿ ಯಾರು ಎನ್ನುವುದು ನಿಗೂಢವಾಗಿಯೇ ಇತ್ತು. ಈ ಸಮಯಾವಧಿಯಲ್ಲಿ ದೇವರು ಅನೇಕ ಒಡಂಬಡಿಕೆಗಳನ್ನು ಮಾಡಿದನು. ಅವು, ಸ್ತ್ರೀಯ ಸಂತತಿ ಯಾರು ಹಾಗೂ ಸೈತಾನನ ದಂಗೆಯಿಂದಾದ ಹಾನಿಯನ್ನು ದೇವರು ಹೇಗೆ ಸರಿಪಡಿಸುವನು ಎಂಬುದನ್ನು ತೋರಿಸಿಕೊಟ್ಟವು.

ಸಂತತಿಯನ್ನು ಗುರುತಿಸಿದ ಒಡಂಬಡಿಕೆ

9. (ಎ) ಅಬ್ರಹಾಮನೊಂದಿಗಿನ ಒಡಂಬಡಿಕೆ ಯಾವುದು? (ಬಿ) ಅದು ಯಾವಾಗ ಜಾರಿಗೆ ಬಂತು?

9 ಏದೆನಿನಲ್ಲಿ ವಾಗ್ದಾನ ಮಾಡಿ ಸುಮಾರು 2,000 ವರ್ಷಗಳ ನಂತರ ಯೆಹೋವನು ಅಬ್ರಹಾಮನಿಗೆ ಊರ್‌ ಪಟ್ಟಣದಲ್ಲಿ ಅವನಿಗಿದ್ದ ಮನೆಯನ್ನು ಬಿಟ್ಟು ಕಾನಾನಿಗೆ ಹೋಗುವಂತೆ ಹೇಳಿದನು. (ಅ. ಕಾ. 7:2, 3) “ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು” ಎಂದು ದೇವರು ಹೇಳಿದನು. (ಆದಿ. 12:1-3) ದೇವರು ಅಬ್ರಹಾಮನಿಗೆ ಕೊಟ್ಟ ಈ ಮಾತು ಅಬ್ರಹಾಮನೊಂದಿಗಿನ ಒಡಂಬಡಿಕೆ ಆಗಿದೆ. ಈ ಒಡಂಬಡಿಕೆಯನ್ನು ದೇವರು ಅವನೊಂದಿಗೆ ಮೊತ್ತಮೊದಲು ಯಾವಾಗ ಮಾಡಿದನೆಂದು ನಮಗೆ ತಿಳಿದಿಲ್ಲ. ಆದರೆ ಕ್ರಿ.ಪೂ. 1943ರಲ್ಲಿ 75ರ ಪ್ರಾಯದಲ್ಲಿದ್ದ ಅಬ್ರಹಾಮನು ಖಾರಾನಿನಿಂದ ಹೊರಟು ಯೂಫ್ರೆಟೀಸ್‌ ನದಿಯನ್ನು ದಾಟಿದಾಗ ಈ ಒಡಂಬಡಿಕೆ ಜಾರಿಗೆ ಬಂತು ಅಂದರೆ ಯೆಹೋವನು ಅಬ್ರಹಾಮನಿಗೆ ಕೊಟ್ಟ ಮಾತಿನಂತೆ ಕ್ರಿಯೆಗೈಯಲು ಆರಂಭಿಸಿದನು.

10. (ಎ) ದೇವರ ವಾಗ್ದಾನಗಳಲ್ಲಿ ಅಬ್ರಹಾಮನಿಗೆ ಪೂರ್ಣ ನಂಬಿಕೆ ಇತ್ತೆಂದು ಹೇಗೆ ಗೊತ್ತಾಗುತ್ತದೆ? (ಬಿ) ಸ್ತ್ರೀಯ ಸಂತತಿಯ ಕುರಿತು ಯಾವ ವಿವರವನ್ನು ಯೆಹೋವನು ಒಂದೊಂದಾಗಿ ಬಹಿರಂಗಪಡಿಸಿದನು?

10 ಯೆಹೋವನು ಅಬ್ರಹಾಮನಿಗೆ ಕೊಟ್ಟಿದ್ದ ಮಾತನ್ನು ಅನೇಕ ಸಂದರ್ಭಗಳಲ್ಲಿ ಅವನಿಗೆ ಪುನಃ ಪುನಃ ಹೇಳಿದನು. ಪ್ರತಿ ಬಾರಿ ಹೇಳುವಾಗಲೂ ಅದಕ್ಕೆ ಸ್ವಲ್ಪ ಸ್ವಲ್ಪ ವಿವರವನ್ನು ಕೂಡಿಸಿದನು. (ಆದಿ. 13:15-17; 17:1-8, 16) ದೇವರು ಮಾಡಿದ ಈ ವಾಗ್ದಾನಗಳಲ್ಲಿ ಅಬ್ರಹಾಮನಿಗೆ ಬಲವಾದ ನಂಬಿಕೆಯಿತ್ತು. ಎಷ್ಟೆಂದರೆ ದೇವರಿಗಾಗಿ ತನ್ನ ಮುದ್ದಿನ ಒಬ್ಬನೇ ಮಗನನ್ನು ಯಜ್ಞವಾಗಿ ಅರ್ಪಿಸಲಿಕ್ಕೂ ಸಿದ್ಧನಿದ್ದನು. ಹಾಗಾಗಿ ಯೆಹೋವನು ಅಬ್ರಹಾಮನನ್ನು ಮೆಚ್ಚಿದನು. ತಾನು ಕೊಟ್ಟ ಮಾತು ಖಂಡಿತ ನೆರವೇರುವುದೆಂದು ಅಬ್ರಹಾಮನಿಗೆ ಖಾತ್ರಿಪಡಿಸಿ ಒಡಂಬಡಿಕೆಯನ್ನು ದೃಢಪಡಿಸಿದನು. (ಆದಿಕಾಂಡ 22:15-18; ಇಬ್ರಿಯ 11:17, 18 ಓದಿ.) ಅಬ್ರಹಾಮನೊಂದಿಗಿನ ಒಡಂಬಡಿಕೆ ಜಾರಿಗೆ ಬಂದ ನಂತರ ಯೆಹೋವನು ಸ್ತ್ರೀಯ ಸಂತತಿಯ ಕುರಿತಾದ ವಿವರವನ್ನು ಒಂದೊಂದಾಗಿ ತಿಳಿಯಪಡಿಸಿದನು. ಆ ಸಂತತಿಯು ಅಬ್ರಹಾಮನ ವಂಶದಲ್ಲೇ ಬರುವುದು, ಸಂತತಿಯಲ್ಲಿ ಅನೇಕರು ಸೇರಿರುವರು, ಅವರು ರಾಜರಾಗಿ ಆಳುವರು, ದೇವರ ವೈರಿಗಳನ್ನೆಲ್ಲ ನಿರ್ನಾಮ ಮಾಡುವರು, ಅನೇಕ ಜನರಿಗೆ ಆಶೀರ್ವಾದ ತರುವರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದನು.

ಅಬ್ರಹಾಮನು ದೇವರ ವಾಗ್ದಾನದಲ್ಲಿ ಬಲವಾದ ನಂಬಿಕೆ ಇಟ್ಟನು (ಪ್ಯಾರ 10 ನೋಡಿ)

11, 12. (ಎ) ಅಬ್ರಹಾಮನೊಂದಿಗಿನ ಒಡಂಬಡಿಕೆಯಲ್ಲಿನ ವಾಗ್ದಾನಗಳು ಮಹತ್ತರ ರೀತಿಯಲ್ಲಿ ಎರಡನೇ ನೆರವೇರಿಕೆ ಪಡೆಯುತ್ತವೆ ಎಂದು ಬೈಬಲ್ ಹೇಗೆ ತೋರಿಸುತ್ತದೆ? (ಬಿ) ಆ ನೆರವೇರಿಕೆಯಿಂದ ನಾವು ಹೇಗೆ ಪ್ರಯೋಜನ ಹೊಂದುತ್ತೇವೆ?

11 ದೇವರು ಒಡಂಬಡಿಕೆಯ ಮೂಲಕ ಅಬ್ರಹಾಮನಿಗೆ ಮಾಡಿದ ವಾಗ್ದಾನಗಳು ಪ್ರಥಮವಾಗಿ ನೆರವೇರಿದ್ದು ಅವನ ವಂಶಜರು ವಾಗ್ದತ್ತ ದೇಶವನ್ನು ವಶಪಡಿಸಿಕೊಂಡಾಗ. ಆದರೂ ಈ ಒಡಂಬಡಿಕೆಯಿಂದ ಇನ್ನೂ ಮಹತ್ತರ ಪ್ರಯೋಜನಗಳಿವೆ ಎಂದು ಬೈಬಲ್‌ ತಿಳಿಸುತ್ತದೆ. (ಗಲಾ. 4:22-25) ಅಪೊಸ್ತಲ ಪೌಲನು ವಿವರಿಸಿದ ಪ್ರಕಾರ, ಅಬ್ರಹಾಮನ ಸಂತತಿಯ ಪ್ರಮುಖ ಭಾಗ ಯೇಸು ಕ್ರಿಸ್ತನಾಗಿದ್ದಾನೆ. ಪೌಲನು ಮುಂದುವರಿಸಿ “ನೀವು ಕ್ರಿಸ್ತನಿಗೆ ಸೇರಿದವರಾಗಿರುವಲ್ಲಿ, ನೀವು ನಿಜವಾಗಿಯೂ ಅಬ್ರಹಾಮನ ಸಂತತಿಯವರೂ ವಾಗ್ದಾನದ ಸಂಬಂಧದಲ್ಲಿ ಬಾಧ್ಯರೂ ಆಗಿದ್ದೀರಿ” ಎಂದು ಹೇಳಿದನು. ಆದುದರಿಂದ, ಕ್ರಿಸ್ತನಿಗೆ ಸೇರಿರುವ 1,44,000 ಅಭಿಷಿಕ್ತ ಕ್ರೈಸ್ತರು ಸಹ ಸಂತತಿಯ ಭಾಗವಾಗಿದ್ದಾರೆ. (ಗಲಾ. 3:16, 29; ಪ್ರಕ. 5:9, 10; 14:1, 4) ಏದೆನಿನ ವಾಗ್ದಾನದಲ್ಲಿ ಹೇಳಲಾದ ಸ್ತ್ರೀಯು ದೇವರ ಸಂಘಟನೆಯ ಸ್ವರ್ಗೀಯ ಭಾಗವಾಗಿದೆ. ಅದಕ್ಕೆ “ಮೇಲಣ ಯೆರೂಸಲೇಮ್‌” ಎಂದು ಹೆಸರು ಮತ್ತು ಅದು ನಿಷ್ಠಾವಂತ ಆತ್ಮ ಜೀವಿಗಳಿಂದ ರಚಿತವಾಗಿದೆ. (ಗಲಾ. 4:26, 31) ಅಬ್ರಹಾಮನೊಂದಿಗಿನ ಒಡಂಬಡಿಕೆಯಲ್ಲಿ ಹೇಳಲಾದಂತೆ ಆ ಸ್ತ್ರೀಯ ಸಂತತಿಯು ಮಾನವರಿಗೆ ಶಾಶ್ವತ ಪ್ರಯೋಜನಗಳನ್ನು ತರಲಿದೆ.

12 ಅಬ್ರಹಾಮನೊಂದಿಗಿನ ಒಡಂಬಡಿಕೆಯು ದೇವರ ಸ್ವರ್ಗೀಯ ರಾಜ್ಯ ಖಂಡಿತ ಬರುತ್ತದೆ ಎಂದು ಖಾತ್ರಿಕೊಡುತ್ತದೆ. ರಾಜನಾದ ಕ್ರಿಸ್ತನು ಹಾಗೂ ಅವನ ಸಹರಾಜರು ರಾಜ್ಯಾಡಳಿತವನ್ನು ಪಡೆದುಕೊಳ್ಳಲು ಈ ಒಡಂಬಡಿಕೆ ದಾರಿಮಾಡಿಕೊಡುತ್ತದೆ. (ಇಬ್ರಿ. 6:13-18) ಈ ಒಡಂಬಡಿಕೆ ಎಷ್ಟು ಸಮಯದ ವರೆಗೆ ಜಾರಿಯಲ್ಲಿರುತ್ತದೆ? ಆದಿಕಾಂಡ 17:7ರಲ್ಲಿ ಇದನ್ನು ‘ತಲಾಂತರಗಳಿಗೋಸ್ಕರವೂ ಮಾಡಿಕೊಂಡ ಒಡಂಬಡಿಕೆ’ ಎಂದು ಹೇಳಲಾಗಿದೆ. ಅಂದರೆ ದೇವರ ರಾಜ್ಯವು ದೇವರ ವೈರಿಗಳನ್ನು ನಾಶಮಾಡಿ ಭೂಮಿಯಲ್ಲಿರುವ ಎಲ್ಲ ಕುಟುಂಬಗಳು ಆಶೀರ್ವಾದ ಪಡೆದುಕೊಳ್ಳುವ ವರೆಗೆ ಅದು ಜಾರಿಯಲ್ಲಿರುವುದು. (1 ಕೊರಿಂ. 15:23-26) ಆದರೆ ಈ ಒಡಂಬಡಿಕೆಯಿಂದ ಸಿಗುವ ಪ್ರಯೋಜನಗಳು ಶಾಶ್ವತವಾಗಿರುತ್ತವೆ. ನೀತಿವಂತ ಮಾನವರು ಈ ಭೂಮಿಯಲ್ಲಿ ತುಂಬಿಕೊಳ್ಳಬೇಕೆಂಬ ಯೆಹೋವನ ಉದ್ದೇಶ ಖಂಡಿತ ನಿಜವಾಗುತ್ತದೆ ಎಂಬುದನ್ನು ಆತನು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯು ರುಜುಪಡಿಸುತ್ತದೆ.—ಆದಿ. 1:28.

ದೇವರ ರಾಜ್ಯ ಶಾಶ್ವತ ಎಂಬ ಖಾತ್ರಿಕೊಡುವ ಒಡಂಬಡಿಕೆ

13, 14. ದಾವೀದನೊಂದಿಗಿನ ಒಡಂಬಡಿಕೆ ನಮಗೆ ಯಾವ ಭರವಸೆ ಕೊಡುತ್ತದೆ?

13 ಏದೆನಿನ ವಾಗ್ದಾನ ಹಾಗೂ ಅಬ್ರಹಾಮನೊಂದಿಗಿನ ಒಡಂಬಡಿಕೆಯು ನಮಗೇನು ಕಲಿಸುತ್ತದೆ? ಯೆಹೋವನ ಆಳ್ವಿಕೆಯು ಯಾವಾಗಲೂ ಆತನ ನೀತಿಯ ಮಟ್ಟಗಳ ಮೇಲೆ ಆಧರಿತವಾಗಿದೆ ಎಂದೇ. ಹಾಗಾಗಿ ಯೆಹೋವನು ಸ್ಥಾಪಿಸಿರುವ ಮೆಸ್ಸೀಯ ರಾಜ್ಯವು ಸಹ ಅದೇ ನೀತಿಯ ಮಟ್ಟಗಳ ಮೇಲೆ ಆಧರಿತವಾಗಿರುತ್ತದೆ. (ಕೀರ್ತ. 89:14) ಆದರೆ ಯಾವತ್ತಾದರೂ ಈ ಮೆಸ್ಸೀಯ ಸರ್ಕಾರ ಭ್ರಷ್ಟಗೊಳ್ಳುವ ಸಾಧ್ಯತೆ ಇದೆಯಾ? ಅದಕ್ಕೆ ಬದಲಿಯಾಗಿ ಬೇರೆ ಸರ್ಕಾರ ಬರಬೇಕಾಗಬಹುದಾ? ಇಲ್ಲ. ಹಾಗೆ ಖಂಡಿತ ಆಗುವುದಿಲ್ಲ. ಇದನ್ನು ಇನ್ನೊಂದು ಒಡಂಬಡಿಕೆಯು ಖಾತ್ರಿಪಡಿಸುತ್ತದೆ.

14 ಪ್ರಾಚೀನ ಇಸ್ರಾಯೇಲಿನ ಅರಸನಾದ ದಾವೀದನಿಗೆ ಯೆಹೋವನು ಒಂದು ವಾಗ್ದಾನ ಮಾಡಿದನು. ಈ ವಾಗ್ದಾನವೇ ದಾವೀದನೊಂದಿಗಿನ ಒಡಂಬಡಿಕೆ. (2 ಸಮುವೇಲ 7:12, 16 ಓದಿ.) ಮೆಸ್ಸೀಯನು ದಾವೀದನ ವಂಶದಲ್ಲಿ ಬರುವನೆಂದು ಯೆಹೋವನು ಆ ವಾಗ್ದಾನದಲ್ಲಿ ಹೇಳಿದನು. (ಲೂಕ 1:30-33) ಹೀಗೆ ಮೆಸ್ಸೀಯನು ಯಾವ ಕುಟುಂಬದಲ್ಲಿ ಬರಲಿದ್ದಾನೆಂಬ ನಿರ್ದಿಷ್ಟ ಮಾಹಿತಿಯನ್ನು ಯೆಹೋವನು ಕೊಟ್ಟನು. ದಾವೀದನ ವಂಶದಿಂದ ಬರುವ ಈತನೇ ಮೆಸ್ಸೀಯ ರಾಜ್ಯದ ರಾಜನಾಗಲು “ಬಾಧ್ಯನು” ಅಂದರೆ ಹಕ್ಕುದಾರನು ಎಂದೂ ಯೆಹೋವನು ಹೇಳಿದನು. (ಯೆಹೆ. 21:25-27) ದಾವೀದನ ರಾಜ್ಯಾಡಳಿತ ಸದಾಕಾಲಕ್ಕೂ ಇರಲಿತ್ತು. ಏಕೆಂದರೆ ದಾವೀದನ ವಂಶದವನಾದ ಯೇಸು ‘ಶಾಶ್ವತವಾಗಿ ಇರುವನು, ಮತ್ತು ಅವನ ಸಿಂಹಾಸನವು ಸೂರ್ಯನಂತೆ ನಿತ್ಯಕ್ಕೂ ಸ್ಥಿರವಾಗಿರುವುದು.’ (ಕೀರ್ತ. 89:34-37) ಹಾಗಾಗಿ ಮೆಸ್ಸೀಯ ರಾಜ್ಯವು ಎಂದಿಗೂ ಭ್ರಷ್ಟಗೊಳ್ಳದು ಮತ್ತು ಅದರ ಕೆಳಗಿರುವ ಎಲ್ಲರಿಗೆ ಸಿಗುವ ಆಶೀರ್ವಾದಗಳಿಗೆ ಕೊನೆಯೇ ಇಲ್ಲ ಎನ್ನುವುದು ನಿಶ್ಚಯ!

ಯಾಜಕ ಸೇವೆಗಾಗಿ ಒಂದು ಒಡಂಬಡಿಕೆ

15-17. (ಎ) ಮೆಲ್ಕಿಜೆದೇಕನಂಥ ಯಾಜಕನಾಗುವ ಒಡಂಬಡಿಕೆಯಿಂದ ಸ್ತ್ರೀಯ ಸಂತತಿಯ ಕುರಿತು ಬೇರೆ ಯಾವ ಅಂಶ ತಿಳಿದುಬರುತ್ತದೆ? (ಬಿ) ರಾಜನು ಆ ಪಾತ್ರ ವಹಿಸುವ ಅಗತ್ಯ ಏಕಿದೆ?

15 ಅಬ್ರಹಾಮನೊಂದಿಗಿನ ಮತ್ತು ದಾವೀದನೊಂದಿಗಿನ ಒಡಂಬಡಿಕೆಗಳು ಬರಲಿರುವ ಆ ಸಂತತಿ ರಾಜನಾಗಿ ಆಳುವನು ಎನ್ನುವುದನ್ನು ಖಚಿತಪಡಿಸಿದವು. ಆದರೆ ಮಾನವಕುಲ ಪೂರ್ಣ ಪ್ರಯೋಜನ ಪಡೆಯಲು ಆ ಸಂತತಿ ಕೇವಲ ರಾಜನಾಗಿದ್ದರೆ ಸಾಕಾಗಲ್ಲ. ಯಾಜಕನಾಗಿಯೂ ಇರಬೇಕು. ಏಕೆಂದರೆ ಮನುಷ್ಯರು ಪಾಪದಿಂದ ಮುಕ್ತರಾಗಿ ಯೆಹೋವನ ವಿಶ್ವ ಕುಟುಂಬದ ಭಾಗವಾಗಲು ಬೇಕಾದ ಯಜ್ಞವನ್ನು ಒಬ್ಬ ಯಾಜಕನು ಮಾತ್ರ ಅರ್ಪಿಸಸಾಧ್ಯ. ಸ್ತ್ರೀಯ ಸಂತತಿ ಯಾಜಕನಾಗಿಯೂ ಕಾರ್ಯನಿರ್ವಹಿಸುವನು ಎನ್ನುವುದನ್ನು ದೃಢಪಡಿಸಲು ಯೆಹೋವನು ಇನ್ನೊಂದು ಕರಾರನ್ನು ಮಾಡಿದನು. ಅದೇ ಮೆಲ್ಕಿಜೆದೇಕನಂಥ ಯಾಜಕನಾಗುವ ಒಡಂಬಡಿಕೆ.

16 ದೇವರು ತಾನು ಯೇಸುವಿನೊಂದಿಗೆ ಒಡಂಬಡಿಕೆ ಮಾಡುವೆನೆಂದು ರಾಜ ದಾವೀದನ ಮೂಲಕ ತಿಳಿಯಪಡಿಸಿದನು. ಆ ಒಡಂಬಡಿಕೆಯಲ್ಲಿ ಎರಡು ಅಂಶಗಳು ಒಳಗೂಡಿದ್ದವು. ಒಂದು, ಯೇಸು “[ದೇವರ] ಬಲಗಡೆಯಲ್ಲಿ” ಕೂತುಕೊಳ್ಳುವನು ಮತ್ತು ತನ್ನ ಎಲ್ಲ ವೈರಿಗಳ ಮೇಲೆ ಜಯಸಾಧಿಸಲು ಅಧಿಕಾರವನ್ನು ಪಡೆದುಕೊಳ್ಳುವನು. ಎರಡು, ಯೇಸು “ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು” ಆಗಿರುವನು. (ಕೀರ್ತನೆ 110:1, 2, 4 ಓದಿ.) ಯೇಸು “ಮೆಲ್ಕಿಜೆದೇಕನ ತರಹದ ಯಾಜಕ” ಆಗಿರುವನು ಎಂದು ಏಕೆ ಹೇಳಲಾಗಿದೆ? ಅಬ್ರಹಾಮನ ಸಂತತಿಯವರು ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮುಂಚೆ ಮೆಲ್ಕಿಜೆದೇಕನು ಸಾಲೇಮಿನ ಅರಸನಾಗಿದ್ದನು, ಮಾತ್ರವಲ್ಲ “ಮಹೋನ್ನತ ದೇವರ ಯಾಜಕನೂ” ಆಗಿದ್ದನು. (ಇಬ್ರಿ. 7:1-3) ಯೆಹೋವನೇ ಮೆಲ್ಕಿಜೆದೇಕನನ್ನು ರಾಜನಾಗಿಯೂ ಯಾಜಕನನ್ನಾಗಿಯೂ ನೇಮಿಸಿದನು. ಯೇಸುವನ್ನು ಬಿಟ್ಟರೆ ಈ ಎರಡೂ ಸ್ಥಾನಗಳಲ್ಲಿದ್ದ ಒಬ್ಬನೇ ವ್ಯಕ್ತಿ ಮೆಲ್ಕಿಜೆದೇಕ. ಅವನಿಗಿಂತ ಮುಂಚೆ ಮತ್ತು ನಂತರ ಬೇರೆ ಯಾರೂ ಈ ಎರಡೂ ಸ್ಥಾನಗಳಲ್ಲಿ ಇದ್ದಿದ್ದರ ದಾಖಲೆಯಿಲ್ಲ. ಹಾಗಾಗಿ ಮೆಲ್ಕಿಜೆದೇಕನು ಒಂದರರ್ಥದಲ್ಲಿ ‘ನಿರಂತರಕ್ಕೂ ಯಾಜಕನು.’

17 ಯೆಹೋವನು ಯೇಸುವಿನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸ್ವತಃ ಆತನೇ ಯೇಸುವನ್ನು ಯಾಜಕನನ್ನಾಗಿ ನೇಮಿಸಿದ್ದಾನೆ. ಯೇಸು “ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿ” ಇರುವನು. (ಇಬ್ರಿ. 5:4-6) ಹೀಗೆ ಯೆಹೋವನು ಮನುಷ್ಯರಿಗಾಗಿ ಮತ್ತು ಭೂಮಿಗಾಗಿ ಇರುವ ತನ್ನ ಉದ್ದೇಶವನ್ನು ಮೆಸ್ಸೀಯ ರಾಜ್ಯದ ಮೂಲಕ ಖಂಡಿತ ನೆರವೇರಿಸುತ್ತೇನೆಂದು ಮತ್ತೆ ಖಾತ್ರಿಪಡಿಸಿದನು.

ದೇವರ ರಾಜ್ಯಕ್ಕೆ ದೃಢವಾದ ಆಧಾರ ನೀಡಿದ ಒಡಂಬಡಿಕೆಗಳು

18, 19. (ಎ) ನಾವು ಈ ವರೆಗೆ ಚರ್ಚಿಸಿದ ಒಡಂಬಡಿಕೆಗಳು ದೇವರ ರಾಜ್ಯಕ್ಕೆ ಹೇಗೆ ಸಂಬಂಧಿಸಿವೆ? (ಬಿ) ಮುಂದಿನ ಲೇಖನದಲ್ಲಿ ನಾವು ಏನು ಕಲಿಯುತ್ತೇವೆ?

18 ಇಲ್ಲಿಯವರೆಗೆ ನಾವು ಪ್ರತಿ ಒಡಂಬಡಿಕೆ ಮೆಸ್ಸೀಯನ ರಾಜ್ಯಕ್ಕೆ ಸಂಬಂಧಿಸಿರುವ ವಿಧವನ್ನು ಮತ್ತು ಆ ರಾಜ್ಯದಲ್ಲಿ ನಂಬಿಕೆಯಿಡಲು ನಮಗೆ ಬಲವಾದ ಆಧಾರ ಇದೆ ಎಂಬುದನ್ನು ಕಲಿತೆವು. ದೇವರು ಮನುಷ್ಯರ ಮತ್ತು ಭೂಮಿಯ ವಿಷಯದಲ್ಲಿ ತನಗಿದ್ದ ಉದ್ದೇಶವನ್ನು ನೆರವೇರಿಸಲು ಸ್ತ್ರೀಯ ಸಂತತಿಯನ್ನು ಬಳಸುವನೆಂದು ಏದೆನಿನ ವಾಗ್ದಾನ ನಮಗೆ ಕಲಿಸಿತು. ಅಬ್ರಹಾಮನೊಂದಿಗಿನ ಒಡಂಬಡಿಕೆ ಆ ಸಂತತಿ ಯಾರು ಮತ್ತು ಅದರ ನೇಮಕ ಏನಾಗಿರುತ್ತದೆ ಎನ್ನುವುದನ್ನು ತಿಳಿಸಿತು.

19 ದಾವೀದನೊಂದಿಗಿನ ಒಡಂಬಡಿಕೆಯು ಯಾರ ವಂಶದಲ್ಲಿ ಮೆಸ್ಸೀಯನು ಬರಲಿದ್ದನು ಎನ್ನುವುದನ್ನು ಸ್ಪಷ್ಟಪಡಿಸಿತು. ಆ ಒಡಂಬಡಿಕೆಯಿಂದ ಯೇಸುವಿಗೆ ಈ ಭೂಮಿಯನ್ನು ಶಾಶ್ವತಕ್ಕೂ ಆಳುವ ಹಕ್ಕು ಸಿಕ್ಕಿತು. ಮೆಲ್ಕಿಜೆದೇಕನಂಥ ಯಾಜಕನಾಗುವ ಒಡಂಬಡಿಕೆಯು ಆ ಸಂತತಿ ಯಾಜಕನಾಗಿಯೂ ಸೇವೆ ಸಲ್ಲಿಸುವನು ಎನ್ನುವುದನ್ನು ಖಚಿತಪಡಿಸಿತು. ಆದರೆ ಮನುಷ್ಯರು ಪರಿಪೂರ್ಣತೆಗೆ ತಲಪಲು ಅವರಿಗೆ ಯೇಸು ಒಬ್ಬನೇ ನೆರವಾಗುತ್ತಾನಾ? ಇಲ್ಲ. ಅವನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಸೇವೆಮಾಡಲಿಕ್ಕಾಗಿ ಇತರರನ್ನು ಕೂಡ ದೇವರು ನೇಮಿಸಿದ್ದಾನೆ. ಅವರು ಯಾರು ಎನ್ನುವುದನ್ನು ಮುಂದಿನ ಲೇಖನದಲ್ಲಿ ನೋಡೋಣ.