ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಕಿವಿಗೊಟ್ಟು ಅರ್ಥ ಗ್ರಹಿಸಿ’

‘ಕಿವಿಗೊಟ್ಟು ಅರ್ಥ ಗ್ರಹಿಸಿ’

“ನೀವೆಲ್ಲರೂ ನನಗೆ ಕಿವಿಗೊಡಿರಿ ಮತ್ತು ನನ್ನ ಮಾತುಗಳ ಅರ್ಥವನ್ನು ಗ್ರಹಿಸಿರಿ.” —ಮಾರ್ಕ 7:14.

1, 2. ಯೇಸುವಿನ ಮಾತುಗಳನ್ನು ಕೇಳಿಸಿಕೊಂಡ ಅನೇಕರು ಅವುಗಳ ಅರ್ಥ ಗ್ರಹಿಸಲು ತಪ್ಪಿಹೋದರು ಏಕೆ?

ಒಬ್ಬ ವ್ಯಕ್ತಿ ನಿಮ್ಮ ಬಳಿ ಮಾತಾಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಅವನ ಧ್ವನಿ ನಿಮಗೆ ಕೇಳುತ್ತದೆ. ಸ್ವರವನ್ನು ಸಹ ಗ್ರಹಿಸುತ್ತೀರಿ. ಆದರೆ ಅವನಾಡುತ್ತಿರುವ ಮಾತುಗಳ ಅರ್ಥ ಗೊತ್ತಾಗದಿದ್ದರೆ ಏನು ಪ್ರಯೋಜನ? (1 ಕೊರಿಂ. 14:9) ಹಾಗೇ ಯೇಸು ಮಾತಾಡುವುದನ್ನು ಸಾವಿರಾರು ಜನ ಕೇಳಿಸಿಕೊಂಡರು. ಅವರಿಗೆ ಅರ್ಥವಾಗುವಂಥ ಭಾಷೆಯಲ್ಲಿ ಅವನು ಮಾತಾಡಿದನು. ಆದರೆ ಅವನ ಮಾತುಗಳ ಅರ್ಥವನ್ನು ಗ್ರಹಿಸಿದವರು ಸ್ವಲ್ಪ ಜನ ಮಾತ್ರ. ಆದ್ದರಿಂದ ಯೇಸು ತನ್ನ ಮಾತು ಆಲಿಸುತ್ತಿದ್ದವರಿಗೆ “ನೀವೆಲ್ಲರೂ ನನಗೆ ಕಿವಿಗೊಡಿರಿ ಮತ್ತು ನನ್ನ ಮಾತುಗಳ ಅರ್ಥವನ್ನು ಗ್ರಹಿಸಿರಿ” ಎಂದನು.—ಮಾರ್ಕ 7:14.

2 ಯೇಸು ಹೇಳಿದ್ದು ಅನೇಕರಿಗೆ ಏಕೆ ಅರ್ಥವಾಗಲಿಲ್ಲ? ಏಕೆಂದರೆ ಅವರಿಗೆ ತಮ್ಮದೇ ಆದ ಪೂರ್ವಾಭಿಪ್ರಾಯ ಮತ್ತು ತಪ್ಪು ಹೇತುಗಳಿದ್ದವು. ಅವರ ಬಗ್ಗೆ ಯೇಸು ಹೇಳಿದ್ದು: “ನೀವು ನಿಮ್ಮ ಸಂಪ್ರದಾಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಬಹು ಚಾತುರ್ಯದಿಂದ ದೇವರ ಆಜ್ಞೆಯನ್ನು ಬದಿಗೊತ್ತುತ್ತೀರಿ.” (ಮಾರ್ಕ 7:9) ಯೇಸುವಿನ ಮಾತುಗಳ ಅರ್ಥ ಗ್ರಹಿಸಲು ಈ ಜನರು ಯಾವುದೇ ಪ್ರಯತ್ನ ಮಾಡಲಿಲ್ಲ. ಜೊತೆಗೆ ತಮ್ಮ ನಡವಳಿಕೆ ಮತ್ತು ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಮನಸ್ಸೂ ಅವರಿಗಿರಲಿಲ್ಲ. ಅವರ ಕಿವಿಗಳೇನೊ ತೆರೆದಿದ್ದವು ನಿಜ ಆದರೆ ಹೃದಯ ಬಿಗಿಯಾಗಿ ಮುಚ್ಚಿ ಹೋಗಿತ್ತು! (ಮತ್ತಾಯ 13:13-15 ಓದಿ.) ಯೇಸುವಿನ ಬೋಧನೆಗಳಿಂದ ನಮಗೆ ಪ್ರಯೋಜನವಾಗಬೇಕಾದರೆ ನಮ್ಮ ಹೃದಯ ತೆರೆದಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

ಯೇಸುವಿನ ಬೋಧನೆಗಳಿಂದ ಪ್ರಯೋಜನ ಪಡೆಯುವುದು ಹೇಗೆ?

3. ಶಿಷ್ಯರಿಗೆ ಯೇಸುವಿನ ಮಾತುಗಳು ಅರ್ಥವಾಯಿತು ಏಕೆ?

3 ಯೇಸುವಿನ ದೀನ ಶಿಷ್ಯರ ಮಾದರಿಯನ್ನು ನಾವು ಅನುಸರಿಸಬೇಕು. ಅವರ ಬಗ್ಗೆ ಯೇಸು ಹೇಳಿದ್ದು: “ನಿಮ್ಮ ಕಣ್ಣುಗಳು ನೋಡುವುದರಿಂದಲೂ ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಸಂತೋಷಿತರು.” (ಮತ್ತಾ. 13:16) ಎಷ್ಟೋ ಜನರಿಗೆ ಅರ್ಥವಾಗದೇ ಹೋದ ವಿಷಯಗಳು ಶಿಷ್ಯರಿಗೆ ಅರ್ಥವಾಯಿತು. ಏಕೆ? ಈ ಮೂರು ಕಾರಣಗಳಿಂದಾಗಿ: ಮೊದಲನೇದಾಗಿ ಯೇಸುವಿನ ಮಾತುಗಳ ಹಿಂದಿರುವ ನಿಜ ಅರ್ಥವನ್ನು ಗ್ರಹಿಸಲು ಅವರು ಪ್ರಶ್ನೆಗಳನ್ನು ಕೇಳಲು ಸಿದ್ಧರಿದ್ದರು. (ಮತ್ತಾ. 13:36; ಮಾರ್ಕ 7:17) ಎರಡನೇದಾಗಿ ಅವರು ತಮ್ಮ ಹೃದಯಗಳಲ್ಲಿ ಈಗಾಗಲೇ ಒಪ್ಪಿಕೊಂಡಿದ್ದ ವಿಷಯಗಳಿಗೆ ಮತ್ತಷ್ಟು ಹೊಸ ಸಂಗತಿಗಳನ್ನು ಸೇರಿಸಲು ಸಿದ್ಧರಿದ್ದರು. (ಮತ್ತಾಯ 13:11, 12 ಓದಿ.) ಮೂರನೇದಾಗಿ ತಾವು ಈಗಾಗಲೇ ಕೇಳಿ ಅರ್ಥಮಾಡಿಕೊಂಡಂಥ ವಿಷಯಗಳನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅನ್ವಯಿಸಿಕೊಳ್ಳಲು ಮಾತ್ರವಲ್ಲ ಹಾಗೆ ಮಾಡಲು ಇತರರಿಗೂ ನೆರವು ನೀಡಲು ಸಿದ್ಧರಿದ್ದರು.—ಮತ್ತಾ. 13:51, 52.

4. ಯೇಸುವಿನ ದೃಷ್ಟಾಂತಗಳನ್ನು ಅರ್ಥಮಾಡಿಕೊಳ್ಳಲು ಯಾವ ಮೂರು ಹೆಜ್ಜೆಗಳು ಸಹಾಯ ಮಾಡುತ್ತವೆ?

4 ಯೇಸುವಿನ ದೃಷ್ಟಾಂತಗಳು ನಮಗೆ ಅರ್ಥವಾಗಬೇಕಾದರೆ ಅವನ ನಂಬಿಗಸ್ತ ಶಿಷ್ಯರ ಮಾದರಿಯನ್ನು ನಾವು ಅನುಸರಿಸಬೇಕು. ಇದರಲ್ಲೂ ಮೂರು ಹೆಜ್ಜೆ ಇದೆ: ಮೊದಲನೇ ಹೆಜ್ಜೆ, ಯೇಸು ಹೇಳಿದ ಮಾತುಗಳನ್ನು ಅಧ್ಯಯನ ಮಾಡಿ ಧ್ಯಾನಿಸಲು ಸಮಯ ಮಾಡಿಕೊಳ್ಳಬೇಕು, ಸಂಶೋಧನೆ ಮಾಡಬೇಕು, ಸೂಕ್ತ ಪ್ರಶ್ನೆಗಳನ್ನು ಕೇಳಬೇಕು. ಇದರಿಂದ ಜ್ಞಾನ ಪಡೆಯುತ್ತೇವೆ. ಎರಡನೇ ಹೆಜ್ಜೆ, ಈ ಜ್ಞಾನ ನಮಗೆ ಈಗಾಗಲೇ ಏನು ತಿಳಿದಿದೆಯೋ ಅದಕ್ಕೆ ಹೇಗೆ ಸಂಬಂಧಿಸಿದೆ ಮತ್ತು ಅದರಿಂದ ನಮಗೇನು ಪ್ರಯೋಜನ ಎಂದು ನಾವು ಗ್ರಹಿಸಬೇಕು. ಇದೇ ತಿಳುವಳಿಕೆ. ಮೂರನೇ ಹೆಜ್ಜೆ, ನಾವು ಕಲಿತಂಥ ವಿಷಯವನ್ನು ನಮ್ಮ ಬದುಕಲ್ಲಿ ಪ್ರಾಯೋಗಿಕವಾಗಿ ಅನ್ವಯಿಸಬೇಕು. ಇದೇ ವಿವೇಕ.ಜ್ಞಾನೋ. 2:2-7.

5. ಜ್ಞಾನ, ತಿಳುವಳಿಕೆ ಮತ್ತು ವಿವೇಕದ ನಡುವಿನ ವ್ಯತ್ಯಾಸವನ್ನು ದೃಷ್ಟಾಂತಿಸಿ.

5 ಜ್ಞಾನ, ತಿಳುವಳಿಕೆ ಮತ್ತು ವಿವೇಕ. ಇವುಗಳ ನಡುವಿನ ವ್ಯತ್ಯಾಸವೇನು? ಅದನ್ನು ಹೀಗೆ ದೃಷ್ಟಾಂತಿಸೋಣ: ನೀವು ರಸ್ತೆ ಮಧ್ಯದಲ್ಲಿ ನಿಂತಿದ್ದೀರೆಂದು ನೆನಸಿ. ನಿಮ್ಮ ಕಡೆಗೆ ಒಂದು ವಾಹನ ಬರುತ್ತಿದೆ. ಅದು ಬಸ್‌ ಎಂದು ಗುರುತಿಸುತ್ತೀರಿ. ಇದು ಜ್ಞಾನ. ಅಲ್ಲೇ ನಿಂತರೆ ಬಸ್‌ ನಿಮ್ಮನ್ನು ಹೊಡೆದುಕೊಂಡು ಹೋಗುತ್ತದೆ ಎಂದು ಗ್ರಹಿಸುತ್ತೀರಿ. ಇದು ತಿಳುವಳಿಕೆ. ಆದ್ದರಿಂದ ನೀವು ತಕ್ಷಣ ರಸ್ತೆ ಬದಿಗೆ ಓಡುತ್ತೀರಿ. ಇದು ವಿವೇಕ. “ಪ್ರಾಯೋಗಿಕ ವಿವೇಕವನ್ನು ಭದ್ರವಾಗಿಟ್ಟುಕೋ” ಎಂದು ಬೈಬಲ್‍ನಲ್ಲಿ ಹೇಳಲಾಗಿದೆ. ಅದು ನಮ್ಮ ಜೀವವನ್ನು ರಕ್ಷಿಸಬಲ್ಲದು.—ಜ್ಞಾನೋ. 3:21, 22, ನೂತನ ಲೋಕ ಭಾಷಾಂತರ; 1 ತಿಮೊ. 4:16.

6. ಯೇಸುವಿನ ಏಳು ದೃಷ್ಟಾಂತಗಳನ್ನು ನಾವು ಪರಿಗಣಿಸುವಾಗ ಯಾವ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? ( ಪಕ್ಕದ ಪುಟದ ಚೌಕ ನೋಡಿ.)

6 ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ಯೇಸುವಿನ 7 ದೃಷ್ಟಾಂತಗಳನ್ನು ಪರಿಗಣಿಸಲಿದ್ದೇವೆ. ಹೀಗೆ ಮಾಡುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳುವೆವು: ಈ ದೃಷ್ಟಾಂತದ ಅರ್ಥವೇನು? (ಇದು ಜ್ಞಾನ ಪಡೆಯಲು ಸಹಾಯಮಾಡುತ್ತದೆ.) ಯೇಸು ಈ ದೃಷ್ಟಾಂತವನ್ನು ಏಕೆ ಕೊಟ್ಟನು? (ಇದು ತಿಳುವಳಿಕೆಗೆ ನಡೆಸುತ್ತದೆ.) ಈ ಮಾಹಿತಿಯನ್ನು ನಮಗೂ ಇತರರಿಗೂ ಪ್ರಯೋಜನವಾಗುವಂಥ ರೀತಿಯಲ್ಲಿ ಹೇಗೆ ಬಳಸಬಹುದು? (ಇದು ವಿವೇಕ.) ಕೊನೇದಾಗಿ, ಈ ದೃಷ್ಟಾಂತ ಯೆಹೋವ ಮತ್ತು ಯೇಸುವಿನ ಬಗ್ಗೆ ಏನನ್ನು ಕಲಿಸುತ್ತದೆ?

ಸಾಸಿವೆ ಕಾಳು

7. ಸಾಸಿವೆ ಕಾಳಿನ ದೃಷ್ಟಾಂತದ ಅರ್ಥವೇನು?

7 ಮತ್ತಾಯ 13:31, 32 ಓದಿ. ಯೇಸು ಹೇಳಿದ ಸಾಸಿವೆ ಕಾಳಿನ ದೃಷ್ಟಾಂತದ ಅರ್ಥವೇನು? ಸಾಸಿವೆ ಕಾಳು ರಾಜ್ಯ ಸಂದೇಶವನ್ನು ಮತ್ತು ಈ ಸಂದೇಶ ಸಾರುವುದರಿಂದ ಏನು ಫಲಿಸುತ್ತದೊ ಅದನ್ನು ಅಂದರೆ ಕ್ರೈಸ್ತ ಸಭೆಯನ್ನು ಸೂಚಿಸುತ್ತದೆ. ಸಾಸಿವೆ ಕಾಳು ಹೇಗೆ “ಎಲ್ಲ ಬೀಜಗಳಿಗಿಂತ ಅತಿ ಚಿಕ್ಕ”ದ್ದಾಗಿದೆಯೋ ಹಾಗೇ ಕ್ರೈಸ್ತ ಸಭೆ ಕ್ರಿ.ಶ. 33ರಲ್ಲಿ ತುಂಬ ಚಿಕ್ಕದ್ದಾಗಿತ್ತು. ಆದರೆ ಕೆಲವೇ ದಶಕಗಳಲ್ಲಿ ಅದು ತುಂಬ ಬಿರುಸಾಗಿ ಬೆಳೆಯಿತು. ಯಾರೂ ಯಾವತ್ತೂ ನೆನಸಿರದಷ್ಟು ಬೆಳವಣಿಗೆ ಹೊಂದಿತು. (ಕೊಲೊ. 1:23) ಇಂಥ ಬೆಳವಣಿಗೆಯಿಂದ ತುಂಬ ಒಳಿತಾಯಿತು. ಯಾಕೆಂದರೆ ಯೇಸು ಹೇಳಿದಂತೆ “ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಿ”ಸಿದವು. ಈ ಸಾಂಕೇತಿಕ ಪಕ್ಷಿಗಳು ಯಾರೆಂದರೆ ಸಹೃದಯದ ಜನರು. ಇವರು ಕ್ರೈಸ್ತ ಸಭೆಯಲ್ಲಿ ಆಧ್ಯಾತ್ಮಿಕ ಆಹಾರ, ಚೈತನ್ಯ ಮತ್ತು ಆಶ್ರಯವನ್ನು ಪಡೆಯುತ್ತಾರೆ.—ಯೆಹೆಜ್ಕೇಲ 17:23 ಹೋಲಿಸಿ.

8. ಯೇಸು ಸಾಸಿವೆ ಕಾಳಿನ ದೃಷ್ಟಾಂತ ಕೊಟ್ಟದ್ದೇಕೆ?

8 ಯೇಸು ಈ ದೃಷ್ಟಾಂತವನ್ನು ಏಕೆ ಕೊಟ್ಟನು? ಎಲ್ಲಾ ಅಡ್ಡಿತಡೆಗಳನ್ನು ಜಯಿಸಿ ಬೆಳೆಯುವ ಹಾಗೂ ಸಂರಕ್ಷಿಸುವ ಸಾಮರ್ಥ್ಯ ದೇವರ ರಾಜ್ಯಕ್ಕಿದೆ ಎಂಬುದನ್ನು ದೃಷ್ಟಾಂತಿಸಲು ಯೇಸು ಸಾಸಿವೆ ಕಾಳಿನ ವಿಸ್ಮಯಕಾರಿ ಬೆಳವಣಿಗೆಯ ಬಗ್ಗೆ ಹೇಳಿದನು. 1914ರಿಂದ ಹಿಡಿದು ದೇವರ ದೃಶ್ಯ ಸಂಘಟನೆಯಲ್ಲಾಗುತ್ತಿರುವ ಬೆಳವಣಿಗೆ ಅಸಾಧಾರಣ! (ಯೆಶಾ. 60:22) ಈ ಸಂಘಟನೆಯೊಂದಿಗೆ ಸಹವಾಸ ಮಾಡುವವರಿಗೆ ಆಧ್ಯಾತ್ಮಿಕ ಸಂರಕ್ಷಣೆ ಇದೆ. (ಜ್ಞಾನೋ. 2:7; ಯೆಶಾ. 32:1, 2) ಜೊತೆಗೆ ರಾಜ್ಯಕ್ಕೆ ಸಂಬಂಧಪಟ್ಟ ಕೆಲಸಗಳು ಯಾರಿಂದಲೂ ತಡೆಯಲಾರದ ರೀತಿಯಲ್ಲಿ ಹೆಚ್ಚುತ್ತಾ ಇವೆ. ಯಾವ ವಿರೋಧವೂ ಇದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.—ಯೆಶಾ. 54:17.

9. (ಎ) ಸಾಸಿವೆ ಕಾಳಿನ ದೃಷ್ಟಾಂತದಿಂದ ನಾವೇನು ಕಲಿಯಬಹುದು? (ಬಿ) ಇದು ಯೆಹೋವ ಮತ್ತು ಯೇಸುವಿನ ಬಗ್ಗೆ ಏನು ಕಲಿಸುತ್ತದೆ?

9 ಸಾಸಿವೆ ಕಾಳಿನ ದೃಷ್ಟಾಂತದಿಂದ ನಾವೇನು ಕಲಿಯಬಹುದು? ಕೆಲವೇ ಸಾಕ್ಷಿಗಳಿರುವ ಅಥವಾ ಸೇವೆಯ ಫಲಿತಾಂಶ ಕೂಡಲೆ ಸಿಗದಿರುವ ಕ್ಷೇತ್ರದಲ್ಲಿ ನೀವು ಜೀವಿಸುತ್ತಿರಬಹುದು. ಆದರೆ ರಾಜ್ಯಕ್ಕೆ ಸಂಬಂಧಪಟ್ಟ ಏರ್ಪಾಡುಗಳು ಎಲ್ಲಾ ಅಡ್ಡಿತಡೆಗಳನ್ನು ಜಯಿಸುತ್ತದೆ ಎಂಬುದನ್ನು ನೆನಪಿಡುವುದು ನಮಗೆ ಸಾಕ್ಷಿಕಾರ್ಯದಲ್ಲಿ ತಾಳಿಕೊಳ್ಳಲು ಬಲ ನೀಡುತ್ತದೆ. ಉದಾಹರಣೆಗೆ ಸಹೋದರ ಎಡ್ವಿನ್‌ ಸ್ಕಿನ್ನರ್‌ 1926ರಲ್ಲಿ ಭಾರತಕ್ಕೆ ಬಂದಾಗ ಕೇವಲ ಬೆರಳೆಣಿಕೆಯಷ್ಟು ಸಾಕ್ಷಿಗಳಿದ್ದರು. ಆರಂಭದಲ್ಲಿ ಅಷ್ಟೇನೂ ಪ್ರಗತಿಯಿರಲಿಲ್ಲ. ಸುವಾರ್ತೆ ಸಾರುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಸಹೋದರ ಸ್ಕಿನ್ನರ್‌ ಪಟ್ಟುಬಿಡದೆ ಸುವಾರ್ತೆ ಸಾರಿದರು ಮತ್ತು ರಾಜ್ಯ ಸಂದೇಶ ದೊಡ್ಡದೊಡ್ಡ ಅಡ್ಡಿತಡೆಗಳನ್ನು ಜಯಿಸುವುದನ್ನು ನೋಡಿದರು. ಈಗ ಭಾರತದಲ್ಲಿ 37,000ಕ್ಕಿಂತ ಹೆಚ್ಚು ಕ್ರಿಯಾಶೀಲ ಪ್ರಚಾರಕರಿದ್ದಾರೆ. ಕಳೆದ ವರ್ಷ 1,08,000 ಮಂದಿ ಸ್ಮರಣೆಗೆ ಹಾಜರಾಗಿದ್ದರು. ರಾಜ್ಯಕ್ಕೆ ಸಂಬಂಧಪಟ್ಟ ಏರ್ಪಾಡು ಹೇಗೆ ವಿಸ್ತರಿಸಿದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಗಮನಿಸಿ. ಸಹೋದರ ಸ್ಕಿನ್ನರ್‌ ಭಾರತಕ್ಕೆ ಬಂದ ವರ್ಷದಲ್ಲಿ ಜಾಂಬಿಯ ದೇಶದಲ್ಲಿ ಸಾರುವ ಕೆಲಸ ಶುರುವಾಗಿತ್ತಷ್ಟೆ. ಈಗ ಅಲ್ಲಿ 1,70,000ಕ್ಕಿಂತ ಹೆಚ್ಚು ಪ್ರಚಾರಕರು ಸುವಾರ್ತೆ ಸಾರುತ್ತಿದ್ದಾರೆ. 2013ರಲ್ಲಿ 7,63,915 ಮಂದಿ ಸ್ಮರಣೆಗೆ ಹಾಜರಾದರು. ಅಂದರೆ ಜಾಂಬಿಯದ ಒಟ್ಟು ಜನಸಂಖ್ಯೆಯಲ್ಲಿ 18.8% ಮಂದಿ ಹಾಜರಿದ್ದರು. ಎಂಥ ಆಶ್ಚರ್ಯಕರ ಬೆಳವಣಿಗೆ ಅಲ್ಲವೇ!

ಹುಳಿಹಿಟ್ಟು

10. ಹುಳಿಹಿಟ್ಟಿನ ದೃಷ್ಟಾಂತದ ಅರ್ಥವೇನು?

10 ಮತ್ತಾಯ 13:33 ಓದಿ. ಹುಳಿಹಿಟ್ಟಿನ ದೃಷ್ಟಾಂತದ ಅರ್ಥವೇನು? ಈ ದೃಷ್ಟಾಂತ ಸಹ ರಾಜ್ಯ ಸಂದೇಶವನ್ನು ಮತ್ತು ಅದು ಏನನ್ನು ಫಲಿಸುತ್ತದೊ ಅದನ್ನು ಸೂಚಿಸುತ್ತದೆ. “ಹಿಟ್ಟೆಲ್ಲಾ” ಎನ್ನುವುದು ದೇಶಗಳನ್ನು ಸೂಚಿಸುತ್ತದೆ. ಹುಳಿಯಾಗುವ ಪ್ರಕ್ರಿಯೆಯು ಸಾರುವ ಕೆಲಸದ ಮೂಲಕ ರಾಜ್ಯ ಸಂದೇಶದ ಹರಡುವಿಕೆಗೆ ಸೂಚಿಸುತ್ತದೆ. ಸಾಸಿವೆ ಕಾಳಿನ ಬೆಳವಣಿಗೆಯನ್ನು ನೋಡಬಹುದು ಆದರೆ ಹಿಟ್ಟಿನಲ್ಲಿ ಹುಳಿ ಹರಡುವುದು ಕಣ್ಣಿಗೆ ಕಾಣಿಸುವುದಿಲ್ಲ. ಅದರ ಪರಿಣಾಮ ಕಣ್ಣಿಗೆ ಬೀಳುವುದು ಸ್ವಲ್ಪ ಸಮಯದ ನಂತರವೇ.

11. ಯೇಸು ಹುಳಿಹಿಟ್ಟಿನ ದೃಷ್ಟಾಂತ ಕೊಟ್ಟದ್ದೇಕೆ?

11 ಯೇಸು ಈ ದೃಷ್ಟಾಂತವನ್ನು ಏಕೆ ಕೊಟ್ಟನು? ರಾಜ್ಯ ಸಂದೇಶಕ್ಕೆ ವ್ಯಾಪಕವಾಗಿ ಬೆಳೆಯುವ ಮತ್ತು ಜನರಲ್ಲಿ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯ ಇದೆ ಎಂದು ತೋರಿಸಲು ಯೇಸು ಈ ದೃಷ್ಟಾಂತ ಕೊಟ್ಟನು. “ಭೂಮಿಯ ಕಟ್ಟಕಡೆಯ ವರೆಗೂ” ರಾಜ್ಯ ಸಂದೇಶ ತಲುಪಿದೆ. (ಅ. ಕಾ. 1:8) ಆದರೆ ಆ ಸಂದೇಶದಿಂದಾದ ಬದಲಾವಣೆಗಳು ಕಣ್ಣಿಗೆ ಬೀಳದೇ ಇರಬಹುದು. ಕೆಲವು ಪರಿಣಾಮಗಳು ಮೊದಮೊದಲು ಗಮನಕ್ಕೆ ಬರದಿದ್ದರೂ ಬದಲಾವಣೆಗಳು ಖಂಡಿತ ಆಗಿರುತ್ತವೆ. ಕೇವಲ ಸಂಖ್ಯೆಯಲ್ಲಿ ಬೆಳವಣಿಗೆ ಅಲ್ಲ ಬದಲಿಗೆ ಯಾರೆಲ್ಲ ಈ ಶಕ್ತಿಯುತ ಸಂದೇಶವನ್ನು ಸ್ವೀಕರಿಸುತ್ತಾರೊ ಅವರ ವ್ಯಕ್ತಿತ್ವದಲ್ಲೂ ಬದಲಾವಣೆಯಾಗಿರುತ್ತದೆ.—ರೋಮ. 12:2; ಎಫೆ. 4:22, 23.

12, 13. ಹುಳಿಹಿಟ್ಟಿನ ದೃಷ್ಟಾಂತದಲ್ಲಿ ವರ್ಣಿಸಲಾದಂತೆ ರಾಜ್ಯ ಸುವಾರ್ತೆ ಸಾರುವ ಕೆಲಸ ಹೇಗೆ ಹಬ್ಬಿದೆ ಎಂದು ತೋರಿಸುವ ಉದಾಹರಣೆಗಳನ್ನು ಕೊಡಿ.

12 ಸುವಾರ್ತೆ ಸಾರುವ ಕೆಲಸದ ಪರಿಣಾಮ ಕೆಲವೊಮ್ಮೆ ತುಂಬಾ ವರ್ಷಗಳ ನಂತರ ಗೊತ್ತಾಗುತ್ತದೆ. ಈ ಉದಾಹರಣೆ ನೋಡಿ. 1982ರಲ್ಲಿ ಬ್ರಸಿಲ್‌ ಬ್ರಾಂಚ್‌ ಆಫೀಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ (ಈಗ ಇನ್ನೊಂದು ಬ್ರಾಂಚ್‌ನಲ್ಲಿ ಕೆಲಸಮಾಡುತ್ತಿದ್ದಾರೆ) ಫ್ರಾಂಟ್ಸ್‌ ಮತ್ತು ಮಾರ್ಗಿಟ್‌ ದಂಪತಿ ಒಂದು ಚಿಕ್ಕ ಪಟ್ಟಣದಲ್ಲಿ ಸುವಾರ್ತೆ ಸಾರಿದರು. ಅವರಿಗೆ ಸಿಕ್ಕಿದ ಬೈಬಲ್‌ ಅಧ್ಯಯನಗಳಲ್ಲಿ ಒಂದು ಕುಟುಂಬದಲ್ಲಿ ತಾಯಿ ಮತ್ತು 4 ಮಂದಿ ಮಕ್ಕಳಿದ್ದರು. ದೊಡ್ಡ ಮಗನಿಗೆ 12 ವರ್ಷ. ತುಂಬ ನಾಚಿಕೆ ಸ್ವಭಾವದವ. ಬೈಬಲ್‌ ಅಧ್ಯಯನ ಶುರುವಾಗುವ ಮುಂಚೆ ಅಡಗಿಕೊಳ್ಳಲು ಎಷ್ಟೋ ಸಲ ಪ್ರಯತ್ನಿಸುತ್ತಿದ್ದ! ಆದರೆ ಈ ದಂಪತಿಯ ನೇಮಕ ಬದಲಾದ ಕಾರಣ ಅಧ್ಯಯನ ಮುಂದುವರಿಸಲು ಆಗಲಿಲ್ಲ. 25 ವರ್ಷಗಳ ನಂತರ ಈ ದಂಪತಿಗೆ ಅದೇ ಹಳ್ಳಿಯನ್ನು ಪುನಃ ಭೇಟಿ ಮಾಡುವ ಅವಕಾಶ ಸಿಕ್ಕಿತು. ಆಗ ಅಲ್ಲಿ 69 ಪ್ರಚಾರಕರ ಒಂದು ಸಭೆ ಇತ್ತು. ಅವರಲ್ಲಿ 13 ಮಂದಿ ರೆಗ್ಯುಲರ್‌ ಪಯನೀಯರರು. ಅವರಿಗೆ ಒಂದು ಹೊಸ ರಾಜ್ಯ ಸಭಾಗೃಹವೂ ಇತ್ತು! ಆ ನಾಚಿಕೆ ಸ್ವಭಾವದ ಹುಡುಗ ಏನಾದ? ಅವನೀಗ ಹಿರಿಯ ಮಂಡಲಿಯ ಸಂಯೋಜಕ! ಯೇಸು ಹೇಳಿದ ದೃಷ್ಟಾಂತದಲ್ಲಿನ ಹುಳಿಹಿಟ್ಟಿನಂತೆ ರಾಜ್ಯ ಸಂದೇಶ ಹಬ್ಬಿ ಅನೇಕರ ಬದುಕನ್ನು ಬದಲಾಯಿಸಿತ್ತು. ಆ ದಂಪತಿಗಾದ ಆನಂದ ಸ್ವಲ್ಪ ಊಹಿಸಿ!

13 ಜನರನ್ನು ಬದಲಾಯಿಸಲು ರಾಜ್ಯದ ಸಂದೇಶಕ್ಕಿರುವ ಶಕ್ತಿ ಹೆಚ್ಚು ತೋರಿಬಂದಿರುವುದು, ರಾಜ್ಯದ ಕೆಲಸದ ಮೇಲೆ ಕಾನೂನಿನ ನಿರ್ಬಂಧವಿರುವ ದೇಶಗಳಲ್ಲಿ. ಅಂಥ ದೇಶಗಳಲ್ಲಿ ಎಷ್ಟರ ಮಟ್ಟಿಗೆ ಸುವಾರ್ತೆ ಹಬ್ಬಿದೆ ಎಂದು ತಿಳಿಯುವುದು ಕಷ್ಟವಾದರೂ ಫಲಿತಾಂಶ ನೋಡಿದಾಗ ನಾವು ಬೆರಗಾಗುವುದರಲ್ಲಿ ಸಂಶಯವಿಲ್ಲ. ಕ್ಯುಬ ದೇಶದ ಉದಾಹರಣೆ ನೋಡಿ. 1910ರಲ್ಲಿ ರಾಜ್ಯ ಸಂದೇಶ ಆ ದೇಶಕ್ಕೆ ಮುಟ್ಟಿತು. ಸಹೋದರ ರಸಲ್‌ 1913ರಲ್ಲಿ ಕ್ಯುಬ ದೇಶಕ್ಕೆ ಭೇಟಿ ನೀಡಿದರು. ಮೊದಮೊದಲು ಪ್ರಗತಿ ನಿಧಾನವಾಗಿತ್ತು. ಈಗ? 96,000ಕ್ಕಿಂತ ಹೆಚ್ಚು ಪ್ರಚಾರಕರು ಅಲ್ಲಿದ್ದಾರೆ. 2013ರಲ್ಲಿ 2,29,726 ಮಂದಿ ಸ್ಮರಣೆಗೆ ಹಾಜರಾಗಿದ್ದರು. ಅಂದರೆ ಕ್ಯುಬದ ಒಟ್ಟು ಜನಸಂಖ್ಯೆಯಲ್ಲಿ 48.5% ಮಂದಿ ಹಾಜರಿದ್ದರು. ನಿಷೇಧವಿಲ್ಲದಿರುವ ದೇಶಗಳಲ್ಲೂ ಎಲ್ಲಿ ಸಾಕ್ಷಿಕಾರ್ಯ ನಡೆಸಲು ಸಾಧ್ಯವೇ ಇಲ್ಲ ಎಂದು ಸ್ಥಳೀಯ ಸಹೋದರರು ನೆನಸಿದ್ದರೊ ಆ ಕ್ಷೇತ್ರಗಳಲ್ಲಿ ರಾಜ್ಯ ಸಂದೇಶ ತಲುಪಿದೆ. *ಪ್ರಸಂ. 8:7; 11:5.

14, 15. (ಎ) ಹುಳಿಹಿಟ್ಟಿನ ದೃಷ್ಟಾಂತದ ಪಾಠದಿಂದ ವೈಯಕ್ತಿಕವಾಗಿ ನಮಗೇನು ಪ್ರಯೋಜನ? (ಬಿ) ಇದು ಯೆಹೋವ ಮತ್ತು ಯೇಸುವಿನ ಬಗ್ಗೆ ಏನು ಕಲಿಸುತ್ತದೆ?

14 ಹುಳಿಹಿಟ್ಟಿನ ದೃಷ್ಟಾಂತದಲ್ಲಿ ಯೇಸು ಏನನ್ನು ಕಲಿಸಿದನೊ ಅದರಿಂದ ನಮಗೇನು ಪ್ರಯೋಜನ? ಯೇಸು ಹೇಳಿದ ದೃಷ್ಟಾಂತದ ಅರ್ಥದ ಕುರಿತು ಧ್ಯಾನಿಸುವಾಗ ತಿಳಿಯುವುದೇನೆಂದರೆ ರಾಜ್ಯ ಸಂದೇಶದ ಬಗ್ಗೆ ಏನೂ ಗೊತ್ತಿರದ ಮಿಲ್ಯಾಂತರ ಜನರಿಗೆ ಅದು ಹೇಗೆ ತಲುಪುವುದು ಎಂದು ಅನಾವಶ್ಯಕವಾಗಿ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ. ಎಲ್ಲವೂ ಯೆಹೋವನ ನಿಯಂತ್ರಣದಲ್ಲಿದೆ. ನಮ್ಮ ಕೆಲಸ ಏನು? ದೇವರ ವಾಕ್ಯ ಕೊಡುವ ಉತ್ತರ: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂ. 11:6) ಅದೇ ಸಮಯದಲ್ಲಿ ನಾವು ಸಾರುವ ಕೆಲಸದ ಯಶಸ್ಸಿಗಾಗಿ ಪ್ರಾರ್ಥಿಸಲು ಎಂದೂ ಮರೆಯಬಾರದು. ಅದರಲ್ಲೂ ನಿರ್ಬಂಧ ಇರುವ ದೇಶಗಳಲ್ಲಿನ ಸಾರುವ ಕೆಲಸದ ಯಶಸ್ಸಿಗಾಗಿ ಹೆಚ್ಚು ಪ್ರಾರ್ಥನೆ ಮಾಡಬೇಕು.—ಎಫೆ. 6:18-20.

15 ಅಷ್ಟುಮಾತ್ರವಲ್ಲ ನಮ್ಮ ಕೆಲಸಕ್ಕೆ ಮೊದಮೊದಲು ಫಲಿತಾಂಶ ದೊರೆಯದಿದ್ದಾಗ ನಾವು ನಿರುತ್ಸಾಹಗೊಳ್ಳಬಾರದು. “ಅಲ್ಪಕಾರ್ಯಗಳ ದಿನವನ್ನು” ತುಚ್ಛವಾಗಿ ಕಾಣಬಾರದು. (ಜೆಕ. 4:10) ಕ್ರಮೇಣ ಸಿಗುವಂಥ ಫಲಿತಾಂಶಗಳು ನಾವು ಯೋಚಿಸಿದ್ದಕ್ಕಿಂತ ಎಷ್ಟೋ ಹೆಚ್ಚಾದದ್ದು ಮತ್ತು ಅದ್ಭುತವಾದದ್ದು ಆಗಿರುವವು.—ಕೀರ್ತ. 40:5; ಜೆಕ. 4:7.

ವ್ಯಾಪಾರಿ ಮತ್ತು ಹೂಳಿಟ್ಟ ನಿಕ್ಷೇಪ

16. ವ್ಯಾಪಾರಿ ಹಾಗೂ ಹೂಳಿಟ್ಟ ನಿಕ್ಷೇಪದ ಕುರಿತ ದೃಷ್ಟಾಂತಗಳ ಅರ್ಥವೇನು?

16 ಮತ್ತಾಯ 13:44-46 ಓದಿ. ವ್ಯಾಪಾರಿ ಹಾಗೂ ಹೂಳಿಟ್ಟ ನಿಕ್ಷೇಪದ ದೃಷ್ಟಾಂತಗಳ ಅರ್ಥವೇನು? ಯೇಸುವಿನ ಸಮಯದಲ್ಲಿ ಅತ್ಯುತ್ತಮ ಮುತ್ತುಗಳನ್ನು ಪಡೆಯಲು ವ್ಯಾಪಾರಿಗಳು ಕೆಲವೊಮ್ಮೆ ಹಿಂದೂ ಮಹಾಸಾಗರದಷ್ಟು ದೂರಕ್ಕೆ ಪ್ರಯಾಣಿಸುತ್ತಿದ್ದರು. ಈ ದೃಷ್ಟಾಂತದಲ್ಲಿ ತಿಳಿಸಲಾದ ವ್ಯಾಪಾರಿ ರಾಜ್ಯ ಸತ್ಯವನ್ನು ಕಂಡುಕೊಳ್ಳಲು ತುಂಬ ಶ್ರಮಪಡುವ ಒಳ್ಳೇ ಮನಸ್ಸಿನ ಜನರನ್ನು ಸೂಚಿಸುತ್ತಾನೆ. “ಬಹು ಬೆಲೆಯುಳ್ಳ ಒಂದು ಮುತ್ತು” ರಾಜ್ಯದ ಕುರಿತ ಅಮೂಲ್ಯ ಸತ್ಯವನ್ನು ಚಿತ್ರಿಸುತ್ತದೆ. ವ್ಯಾಪಾರಿಗೆ ಮುತ್ತಿನ ಮೌಲ್ಯ ಗೊತ್ತಿದ್ದರಿಂದ ಅದನ್ನು ಖರೀದಿಸಲು ತನ್ನ ಬಳಿ ಇದ್ದ ಎಲ್ಲ ವಸ್ತುಗಳನ್ನು “ಒಡನೆಯೇ” ಮಾರಿದನು. ಹೊಲದಲ್ಲಿ “ಹೂಳಿಟ್ಟ” ನಿಕ್ಷೇಪ ಕಂಡುಕೊಂಡ ಮನುಷ್ಯನ ಬಗ್ಗೆಯೂ ಯೇಸು ಮಾತಾಡಿದನು. ವ್ಯಾಪಾರಿಯಂತೆ ಇವನು ನಿಕ್ಷೇಪಕ್ಕಾಗಿ ಹುಡುಕಿಕೊಂಡು ಹೋಗಲಿಲ್ಲ. ಆದರೆ ಅವನಂತೆಯೇ ನಿಕ್ಷೇಪಕ್ಕಾಗಿ ತನ್ನ “ಬಳಿಯಿರುವುದನ್ನೆಲ್ಲ” ಮಾರಿದನು.

17. ವ್ಯಾಪಾರಿ ಮತ್ತು ಹೂಳಿಟ್ಟ ನಿಕ್ಷೇಪದ ಕುರಿತ ದೃಷ್ಟಾಂತಗಳನ್ನು ಯೇಸು ಏಕೆ ಕೊಟ್ಟನು?

17 ಯೇಸು ಆ ಎರಡು ದೃಷ್ಟಾಂತಗಳನ್ನು ಏಕೆ ಕೊಟ್ಟನು? ಸತ್ಯವನ್ನು ಅನೇಕ ವಿಧಗಳಲ್ಲಿ ಕಂಡುಕೊಳ್ಳಬಹುದು ಎಂದು ತೋರಿಸಲಿಕ್ಕಾಗಿ. ಕೆಲವರು ಅದಕ್ಕಾಗಿ ಹುಡುಕಿಕೊಂಡು ಹೋಗುತ್ತಾರೆ. ಅದನ್ನು ಕಂಡುಕೊಳ್ಳಲಿಕ್ಕಾಗಿ ತುಂಬ ಶ್ರಮಪಟ್ಟಿದ್ದಾರೆ. ಇತರರು ಅದಕ್ಕಾಗಿ ಹುಡುಕಿಕೊಂಡು ಹೋಗದಿದ್ದರೂ ಅದನ್ನು ಕಂಡುಕೊಂಡಿದ್ದಾರೆ. ಬಹುಶಃ ಅದನ್ನು ಯಾರೊ ಅವರಿಗೆ ತಂದುಕೊಟ್ಟಿದ್ದಾರೆ. ವಿಷಯ ಏನೇ ಇರಲಿ, ಆ ಎರಡು ದೃಷ್ಟಾಂತಗಳಲ್ಲಿ ತಿಳಿಸಲಾದ ಮನುಷ್ಯರು ಏನನ್ನು ಕಂಡುಕೊಂಡರೋ ಅದೆಷ್ಟು ಅಮೂಲ್ಯವೆಂದು ಗ್ರಹಿಸಿ, ಅದನ್ನು ತಮ್ಮದಾಗಿಸಿಕೊಳ್ಳಲು ದೊಡ್ಡ ತ್ಯಾಗಗಳನ್ನು ಮಾಡಲು ಸಿದ್ಧರಿದ್ದರು.

18. (ಎ) ಈ ಎರಡು ದೃಷ್ಟಾಂತಗಳಿಂದ ಹೇಗೆ ಪ್ರಯೋಜನ ಪಡೆಯಬಲ್ಲೆವು? (ಬಿ) ಇದು ನಮಗೆ ಯೆಹೋವ ಹಾಗೂ ಯೇಸುವಿನ ಬಗ್ಗೆ ಏನು ಕಲಿಸುತ್ತದೆ?

18 ಈ ಎರಡು ದೃಷ್ಟಾಂತಗಳಿಂದ ನಮಗೇನು ಪ್ರಯೋಜನ? (ಮತ್ತಾ. 6:19-21) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ದೃಷ್ಟಾಂತದಲ್ಲಿನ ವ್ಯಕ್ತಿಗಳಿಗಿದ್ದ ಮನೋಭಾವವೇ ನನಗಿದೆಯಾ? ಸತ್ಯವನ್ನು ಅವರಂತೆಯೇ ತುಂಬ ಅಮೂಲ್ಯವೆಂದು ಎಣಿಸುತ್ತೇನಾ? ಅದನ್ನು ನನ್ನದಾಗಿಸಲು ತ್ಯಾಗಗಳನ್ನು ಮಾಡಲು ಸಿದ್ಧನಿದ್ದೇನಾ ಅಥವಾ ಬೇರೆ ಸಂಗತಿಗಳು ಉದಾಹರಣೆಗೆ ದೈನಂದಿನ ಬದುಕಿನ ಚಿಂತೆಗಳಿಂದ ನಾನು ಅಪಕರ್ಷಿತನಾಗುತ್ತೇನಾ?’ (ಮತ್ತಾ. 6:22-24, 33; ಲೂಕ 5:27, 28; ಫಿಲಿ. 3:8) ಸತ್ಯವನ್ನು ಕಂಡುಕೊಂಡಿದ್ದೇವೆಂಬ ನಮ್ಮ ಆನಂದ ಗಾಢವಾಗಿದ್ದರೆ, ಅದನ್ನು ನಮ್ಮ ಬದುಕಲ್ಲಿ ಪ್ರಥಮವಾಗಿಡುವ ದೃಢಸಂಕಲ್ಪ ಬಲವಾಗಿರುತ್ತದೆ.

19. ಮುಂದಿನ ಲೇಖನದಲ್ಲಿ ನಾವೇನು ಚರ್ಚಿಸುವೆವು?

19 ನಾವು ರಾಜ್ಯದ ಕುರಿತ ಈ ದೃಷ್ಟಾಂತಗಳಿಗೆ ಕಿವಿಗೊಟ್ಟು ಅವುಗಳ ಅರ್ಥವನ್ನು ನಿಜವಾಗಿ ಗ್ರಹಿಸಿದ್ದೇವೆಂದು ತೋರಿಸೋಣ. ನೆನಪಿಡಿ, ಬರೀ ಅವುಗಳ ಅರ್ಥವನ್ನು ತಿಳಿದುಕೊಳ್ಳುವುದರಿಂದ ಅಲ್ಲ ಬದಲಾಗಿ ಅವುಗಳಿಂದ ಕಲಿತಿರುವ ಪಾಠಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನಾವಿದನ್ನು ತೋರಿಸಬೇಕು. ಮುಂದಿನ ಲೇಖನದಲ್ಲಿ ನಾವು ಇನ್ನೂ ಮೂರು ದೃಷ್ಟಾಂತಗಳನ್ನು ಮತ್ತು ಅವುಗಳಿಂದ ಯಾವ ಪಾಠಗಳನ್ನು ಕಲಿಯಬಹುದೆಂದು ಚರ್ಚಿಸುವೆವು.

^ ಪ್ಯಾರ. 13 ಅರ್ಜೆಂಟೀನ (2001 ಯಿಯರ್‌ ಬುಕ್‌ ಪುಟ 186); ಪೂರ್ವ ಜರ್ಮನಿ (1999 ಯಿಯರ್‌ ಬುಕ್‌ ಪುಟ 83); ಪ್ಯಾಪುವ ನ್ಯೂ ಗಿನೀ (2005 ಯಿಯರ್‌ ಬುಕ್‌ ಪುಟ 63); ಮತ್ತು ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲೂ (ಕಾವಲಿನಬುರುಜು ಜೂನ್‌ 15, 2000, ಪುಟ 9) ಹೀಗೆಯೇ ನಡೆದಿದೆ.