ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಸಂಗ್ರಹಾಲಯ

“ತುಂಬ ಅಮೂಲ್ಯವಾದ ಸಮಯ”

“ತುಂಬ ಅಮೂಲ್ಯವಾದ ಸಮಯ”

ನಾವೀಗ ಇಸವಿ 1870ಕ್ಕೆ ಹೋಗೋಣ. ಅಮೆರಿಕದ ಪೆನ್ಸಿಲ್ವೇನಿಯ ರಾಜ್ಯದ ಪಿಟ್ಸ್‌ಬರ್ಗ್‌ ನಗರದಲ್ಲಿ ಕೆಲವು ಮಂದಿ ಒಟ್ಟಾಗಿ ಸೇರಿ, ಬೈಬಲಿನಲ್ಲಿ ಏನಿದೆಯೆಂದು ಸಂಶೋಧನೆ ಮಾಡಲು ಆರಂಭಿಸಿದರು. ಇದರ ಮೇಲ್ವಿಚಾರಣೆ ಮಾಡಿದವರು ಚಾರ್ಲ್ಸ್‌ ಟೇಸ್‌ ರಸಲ್‌. ಒಮ್ಮೆ ಅವರೆಲ್ಲರೂ ಕ್ರಿಸ್ತನ ಮರಣದ ಬಗ್ಗೆ ಬೈಬಲಿನಲ್ಲಿ ಎಲ್ಲೆಲ್ಲಿ ಏನು ತಿಳಿಸಲಾಗಿದೆ ಎಂದು ಪರೀಕ್ಷಿಸಿದರು. ಆಗ ಅವರಿಗೆ, ಯೆಹೋವನ ಉದ್ದೇಶ ನೆರವೇರಬೇಕಾದರೆ ಕ್ರಿಸ್ತನು ಜೀವವನ್ನು ಅರ್ಪಿಸುವುದು ತುಂಬ ಪ್ರಾಮುಖ್ಯವಾಗಿತ್ತೆಂದು ತಿಳಿದುಬಂತು. ಕ್ರಿಸ್ತನು ಜೀವ ಕೊಟ್ಟದ್ದರಿಂದ ಜನರು ರಕ್ಷಣೆ ಪಡೆಯಲು ಸಾಧ್ಯವಾಯಿತು ಮತ್ತು ಈ ಅವಕಾಶ ಯೇಸುವಿನ ಬಗ್ಗೆ ಈ ವರೆಗೆ ಗೊತ್ತಿಲ್ಲದವರಿಗೂ ಇದೆಯೆಂದು ತಿಳಿದಾಗ ಅವರಿಗೆ ಆನಂದ ಆಶ್ಚರ್ಯವಾಯಿತು. ಇದಕ್ಕಾಗಿ ಕೃತಜ್ಞತೆ ತುಂಬಿದ ಹೃದಯದಿಂದ ಯೇಸುವಿನ ಮರಣವನ್ನು ಪ್ರತಿವರ್ಷ ಜ್ಞಾಪಿಸಿಕೊಳ್ಳಲು ಆಚರಣೆಯನ್ನು ಆರಂಭಿಸಿದರು.—1 ಕೊರಿಂ. 11:23-26.

ಯೆಹೋವನು ತನ್ನ ಮಗನನ್ನು ಕೊಟ್ಟದ್ದು ನಮ್ಮ ಮೇಲೆ ಆತನಿಗಿರುವ ಪ್ರೀತಿಯ ಗಾಢತೆಯನ್ನು ತೋರಿಸುತ್ತದೆ ಎಂದು ಸಹೋದರ ರಸಲ್‌ ಪ್ರಕಟಿಸುತ್ತಿದ್ದ ಝಯನ್ಸ್‌ ವಾಚ್‌ ಟವರ್‌ ಪತ್ರಿಕೆ ಒತ್ತಿಹೇಳಿತು. ಮಾತ್ರವಲ್ಲ, ಕ್ರಿಸ್ತನ ಮರಣದ ಸ್ಮರಣೆಯ ಸಮಯವು “ಅತಿ ಅಮೂಲ್ಯ ಸಮಯ” ಎಂದು ಆ ಪತ್ರಿಕೆ ಹೇಳಿತು. ಹಾಗಾಗಿ ಸ್ಮರಣೆಯ ಆಚರಣೆಗೆ ಪಿಟ್ಸ್‌ಬರ್ಗ್‌ನಲ್ಲಿ ಹಾಜರಾಗುವಂತೆ ಅಥವಾ ಬೇರೆ ಸ್ಥಳಗಳಲ್ಲಿ ಆಚರಿಸುವಂತೆ ಪ್ರೋತ್ಸಾಹಿಸಲಾಯಿತು. “ಈ ಅಮೂಲ್ಯ ನಂಬಿಕೆಯುಳ್ಳವರು ಇಬ್ಬರಿದ್ದರೂ, ಮೂವರಿದ್ದರೂ” ಅಥವಾ ಒಬ್ಬರೇ ಇದ್ದರೂ ಇದನ್ನು ಆಚರಿಸಿ. “ಕರ್ತನು ಅವರ ಹೃದಯದೊಂದಿಗೆ ಐಕ್ಯತೆಯಲ್ಲಿರುತ್ತಾನೆ” ಎಂದು ಪತ್ರಿಕೆ ಹೇಳಿತು.

ಪಿಟ್ಸ್‌ಬರ್ಗ್‌ನಲ್ಲಿ ಕ್ರಿಸ್ತನ ಮರಣದ ಸ್ಮರಣೆಯ ಹಾಜರಿ ವರ್ಷ ವರ್ಷಕ್ಕೂ ಜಾಸ್ತಿ ಆಯಿತು. ಸ್ಮರಣೆಯ ಆಮಂತ್ರಣ ಪತ್ರದಲ್ಲಿ, “ನಿಮ್ಮನ್ನು ಪ್ರೀತಿ-ಆದರದಿಂದ ಬರಮಾಡಿಕೊಳ್ಳಲು ಇಷ್ಟಪಡುತ್ತೇವೆ” ಎಂಬ ವಾಕ್ಯವಿತ್ತು. ಅದರಂತೆಯೇ ‘ಬೈಬಲ್‌ ವಿದ್ಯಾರ್ಥಿಗಳು’ ಪ್ರೀತಿ ತೋರಿದರು. ಆಚರಣೆಗೆ ಬಂದವರಿಗೆಲ್ಲ ತಂಗಲು ತಮ್ಮ ಮನೆಗಳಲ್ಲಿ ಜಾಗ ಕೊಟ್ಟು ಊಟದ ವ್ಯವಸ್ಥೆ ಮಾಡಿದರು. 1886ರಲ್ಲಿ ಸ್ಮರಣೆಯ ನಂತರ ಕೆಲವು ದಿನಗಳ ಒಂದು ಅಧಿವೇಶನವನ್ನು ಏರ್ಪಡಿಸಲಾಯಿತು. ಅದರ ಬಗ್ಗೆ ವಾಚ್‌ ಟವರ್‌ ಪತ್ರಿಕೆ ಹೀಗೆ ಹೇಳಿತು: “ಯಜಮಾನನ ಮೇಲೆ, ಆತನ ಸಹೋದರರ ಮೇಲೆ, ಆತನ ಸತ್ಯದ ಮೇಲೆ ತುಂಬ ಪ್ರೀತಿಯಿರುವವರೆಲ್ಲರೂ ಬನ್ನಿ.”

ಲಂಡನಿನ ಒಂದು ಸಭಾಗೃಹದಲ್ಲಿ ರೊಟ್ಟಿ ದ್ರಾಕ್ಷಾಮದ್ಯವನ್ನು ಹೇಗೆ ದಾಟಿಸಬೇಕೆಂದು ತೋರಿಸುವ ಚಾರ್ಟ್

ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಟ್ಟು ಸ್ಮರಣೆಗೆ ಹಾಜರಾಗಲು ಬಂದವರಿಗಾಗಿ ಅನೇಕ ವರ್ಷಗಳ ವರೆಗೆ ಪಿಟ್ಸ್‌ಬರ್ಗ್‌ನಲ್ಲಿ ಅಧಿವೇಶನಗಳನ್ನು ಏರ್ಪಾಡು ಮಾಡಲಾಯಿತು. ಲೋಕವ್ಯಾಪಕವಾಗಿ ‘ಬೈಬಲ್‌ ವಿದ್ಯಾರ್ಥಿಗಳ’ ಸಂಖ್ಯೆ ಹೆಚ್ಚೆಚ್ಚಾದಂತೆ ಸ್ಮರಣೆಗೆ ಹಾಜರಿಯೂ ಹೆಚ್ಚಾಯಿತು. ಹಾಗಾಗಿ ಅನೇಕ ಕಡೆಗಳಲ್ಲಿ ಸ್ಮರಣೆಯ ಆಚರಣೆಯನ್ನು ಏರ್ಪಡಿಸಲಾಯಿತು. ಚಿಕಾಗೋ ಇಕ್ಲೀಸಿಯಾದ (ಸಭೆಯ) ಸಹೋದರ ರೇ ಬಾಪ್‌ ಹೇಳಿದ್ದೇನೆಂದರೆ, 1910ರ ನಂತರ ನಡೆದ ಸ್ಮರಣೆಗಳಲ್ಲಿ ರೊಟ್ಟಿ, ದ್ರಾಕ್ಷಾರಸ ದಾಟಿಸಲು ಎಷ್ಟೋ ತಾಸು ಹಿಡಿಯುತ್ತಿತ್ತು. ಏಕೆಂದರೆ ಹೆಚ್ಚಿನವರು ರೊಟ್ಟಿ ದ್ರಾಕ್ಷಾರಸವನ್ನು ಸೇವಿಸುವವರೇ ಆಗಿದ್ದರು.

ಆಗೆಲ್ಲ ಸ್ಮರಣೆಯಲ್ಲಿ ದ್ರಾಕ್ಷಾಮದ್ಯಕ್ಕೆ ಬದಲಾಗಿ ದ್ರಾಕ್ಷಾರಸವನ್ನು ಉಪಯೋಗಿಸುತ್ತಿದ್ದರು. ಕರ್ತನ ಸಂಧ್ಯಾ ಭೋಜನವನ್ನು ಆರಂಭಿಸಿದಾಗ ಯೇಸು ದ್ರಾಕ್ಷಾಮದ್ಯವನ್ನು ಉಪಯೋಗಿಸಿದನೆಂದು ಗೊತ್ತಿದ್ದರೂ ದ್ರಾಕ್ಷಾರಸವನ್ನು ಬಳಸುವಂತೆ ವಾಚ್‌ ಟವರ್‌ ಪತ್ರಿಕೆ ಹೇಳಿತು. ತಾಜಾ ದ್ರಾಕ್ಷಿಯ ರಸವನ್ನು ಅಥವಾ ಒಣದ್ರಾಕ್ಷಿಯನ್ನು ಬೇಯಿಸಿ ತೆಗೆದ ರಸವನ್ನು ಬಳಸುವಂತೆ ಹೇಳಿತು. ಏಕೆ? ಮದ್ಯಪಾನಕ್ಕೆ ಬೇಗನೆ ಬಲಿಯಾಗುವವರನ್ನು ಪ್ರೋತ್ಸಾಹಿಸಬಾರದು ಎಂಬ ಉದ್ದೇಶದಿಂದ. ‘ಹುಳಿಬರಿಸಿದ ದ್ರಾಕ್ಷಾಮದ್ಯವನ್ನು ಬಿಟ್ಟು ಬೇರೆಯದನ್ನು ಬಳಸುವುದು ಯಾರಿಗೆ ಸರಿ ಎನಿಸಲಿಲ್ಲವೋ’ ಅವರಿಗೆ ದ್ರಾಕ್ಷಾಮದ್ಯವನ್ನೇ ಕೊಡಲಾಯಿತು. ಆದರೆ ಅನಂತರ ದ್ರಾಕ್ಷಾರಸ ಕೊಡುವುದನ್ನು ನಿಲ್ಲಿಸಲಾಯಿತು. ಏಕೆಂದರೆ ಏನನ್ನೂ ಬೆರೆಸದ ಕೆಂಪು ದ್ರಾಕ್ಷಾಮದ್ಯವೇ ಯೇಸುವಿನ ರಕ್ತವನ್ನು ಸೂಚಿಸಲು ಸೂಕ್ತ ಎಂದು ಬೈಬಲ್‌ ವಿದ್ಯಾರ್ಥಿಗಳಿಗೆ ಅರ್ಥವಾಯಿತು.

ನಿಕರಾಗುವದ ಸೆರೆಮನೆಯಲ್ಲಿ ಸ್ಮರಣೆಗೆ ಹಾಜರಾದವರ ಸಂಖ್ಯೆಯನ್ನು ಬರೆದಿಡಲು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ದಾಟಿಸಲಾದ ಕಾಗದ ಮತ್ತು ಪೆನ್ಸಿಲ್‌

ಯೇಸು ಜೀವ ಕೊಟ್ಟದ್ದರ ಬಗ್ಗೆ ಗಂಭೀರವಾಗಿ ಯೋಚಿಸಲು ಈ ಸ್ಮರಣೆಯು ಸಹಾಯಮಾಡಿತು. ಆದರೆ ಕೆಲವು ಸಭೆಗಳಲ್ಲಿ ಈ ಆಚರಣೆಯ ಸಮಯದಲ್ಲಿ ದುಃಖದ ವಾತಾವರಣ ಇರುತ್ತಿತ್ತು. ಎಷ್ಟೆಂದರೆ ಕಾರ್ಯಕ್ರಮದ ನಂತರ ಎಲ್ಲರೂ ಏನೂ ಮಾತಾಡದೆ ಮನೆಗಳಿಗೆ ಹೋಗುತ್ತಿದ್ದರು. ಹಾಗಾಗಿ 1934ರಲ್ಲಿ ಜೆಹೋವ ಎಂಬ ಪುಸ್ತಕವು ಈ ಮಾರ್ಗದರ್ಶನ ಕೊಟ್ಟಿತು: ಸ್ಮರಣೆಯ ಸಂದರ್ಭದಲ್ಲಿ ಯೇಸುವಿನ ಯಾತನೆಯ ಮರಣವನ್ನು ನೆನಸಿ ದುಃಖಪಡಬಾರದು, ಬದಲಿಗೆ 1914ರಿಂದ ಯೇಸು ರಾಜನಾಗಿದ್ದಾನೆ ಎಂದು ನೆನಸಿ ಸಂತೋಷಪಡಬೇಕು.

ರಷ್ಯದ ಮಾರ್‌ಡ್ವಾನ್ಯದಲ್ಲಿ ಖೈದಿಗಳನ್ನು ದುಡಿಸಿಕೊಳ್ಳುವ ಶಿಬಿರದಲ್ಲಿ ಸ್ಮರಣೆಯನ್ನು ಆಚರಿಸಲು ಕೂಡಿಬಂದ ಸಹೋದರರು (ಇಸವಿ 1957)

1935ರಲ್ಲಿ ಸ್ಮರಣೆಯ ಆಚರಣೆಗಳಲ್ಲಿ ಒಂದು ದೊಡ್ಡ ಬದಲಾವಣೆಯಾಯಿತು. ಏಕೆಂದರೆ ಪ್ರಕಟನೆ 7:9ರಲ್ಲಿ ಹೇಳಿರುವ “ಮಹಾ ಸಮೂಹ” ಯಾರೆಂಬ ಬಗ್ಗೆ ಸರಿಯಾದ ತಿಳಿವಳಿಕೆ ಸಿಕ್ಕಿತು. ಅಲ್ಲಿವರೆಗೆ ಮಹಾ ಸಮೂಹದ ಕ್ರೈಸ್ತರನ್ನು ಸಮರ್ಪಿತರಾದರೂ ಅಷ್ಟೇನೂ ಹುರುಪಿಲ್ಲದವರು ಎಂದು ನೆನಸಲಾಗುತ್ತಿತ್ತು. ಆದರೆ 1935ರಲ್ಲಿ ಆ ಮಹಾ ಸಮೂಹವು, ಪರದೈಸ್‌ ಭೂಮಿಯಲ್ಲೇ ಜೀವಿಸುವ ನಿರೀಕ್ಷೆಯಿರುವ ನಂಬಿಗಸ್ತ ಕ್ರೈಸ್ತರೆಂದು ತಿಳಿದುಬಂತು. ಸಹೋದರ ರಸಲ್‌ ಪಾಗನ್ಸೀ ಈ ವಿವರಣೆಯನ್ನು ಅರ್ಥಮಾಡಿಕೊಂಡು ತಮ್ಮನ್ನೇ ಸ್ವಪರೀಕ್ಷೆ ಮಾಡಿ ಹೀಗಂದರು: “ಸ್ವರ್ಗಕ್ಕೆ ಹೋಗುವ ನಿರೀಕ್ಷೆ ನನಗಿದೆ ಎಂಬ ಭಾವನೆಯನ್ನು ಯೆಹೋವನು ಪವಿತ್ರಾತ್ಮದ ಮೂಲಕ ನನ್ನಲ್ಲಿ ಹುಟ್ಟಿಸಿಲ್ಲ.” ಈ ಸಹೋದರ ಮತ್ತು ಭೂನಿರೀಕ್ಷೆಯಿದ್ದ ಅನೇಕ ನಂಬಿಗಸ್ತ ಕ್ರೈಸ್ತರು ಆ ಸಮಯದಿಂದ ಸ್ಮರಣೆಯಲ್ಲಿ ರೊಟ್ಟಿ ದ್ರಾಕ್ಷಾಮದ್ಯ ಸೇವಿಸುವುದನ್ನು ನಿಲ್ಲಿಸಿಬಿಟ್ಟರು, ಆದರೆ ಸ್ಮರಣೆಗೆ ಹಾಜರಾಗುವುದನ್ನು ನಿಲ್ಲಿಸಲಿಲ್ಲ.

“ತುಂಬ ಅಮೂಲ್ಯವಾದ” ಈ ಸ್ಮರಣೆಯ ಸಮಯದಲ್ಲಿ ಸುವಾರ್ತೆ ಸಾರಲು ವಿಶೇಷ ಅಭಿಯಾನಗಳನ್ನು ಏರ್ಪಡಿಸಲಾಗುತ್ತಿತ್ತು. ಇದರಲ್ಲಿ ಭಾಗವಹಿಸುವ ಮೂಲಕ ಯೆಹೋವನಿಗೂ ಯೇಸುವಿಗೂ ಕೃತಜ್ಞತೆ ತೋರಿಸಲು ಅವಕಾಶ ಸಿಗುತ್ತಿತ್ತು. 1932ರ ಒಂದು ಬುಲೆಟಿನ್‌ ಏನೆಂದು ಪ್ರೋತ್ಸಾಹಿಸಿತೆಂದರೆ, ಕ್ರೈಸ್ತರು ‘ಸ್ಮರಣೆಯ ಸಂತರಾಗಿ’ ಇರಬಾರದು. ‘ನಿಜವಾದ ಕೆಲಸಗಾರರು’ ಆಗಿರಬೇಕು. ಅಂದರೆ ರೊಟ್ಟಿ ದ್ರಾಕ್ಷಾಮದ್ಯವನ್ನು ಸೇವಿಸುವುದಷ್ಟೇ ಅಲ್ಲ, ಸುವಾರ್ತೆ ಸಾರಲೂ ಮುಂದಿರಬೇಕು. 1934ರ ಬುಲೆಟಿನ್‌ನಲ್ಲಿ ಹೆಚ್ಚೆಚ್ಚು ಮಂದಿ “ಆಕ್ಸಿಲಿಯರಿಗಳು” ಆಗುವಂತೆ ಪ್ರೋತ್ಸಾಹಿಸಲಾಯಿತು. “ಸ್ಮರಣೆಯ ಸಮಯ ಬರುವುದರೊಳಗೆ ಆಕ್ಸಿಲಿಯರಿಗಳ ಸಂಖ್ಯೆ 1,000 ಮುಟ್ಟಬಹುದೇ?” ಎಂಬ ಪ್ರಶ್ನೆ ಇತ್ತು. 1939ರಲ್ಲಿ ಇನ್‌ಫಾರ್ಮ೦ಟ್‌ ಅಭಿಷಿಕ್ತ ಕ್ರೈಸ್ತರಿಗೆ, “ರಾಜ್ಯದ ಕುರಿತು ಸಾರಿದರೆ ಮಾತ್ರ ನಿಮ್ಮ ಸಂತೋಷ ಸಂಪೂರ್ಣವಾಗುವುದು” ಎಂದು ಹೇಳಿತು. ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿದ್ದವರ ಬಗ್ಗೆಯೂ ಈ ವಿಷಯ ಸತ್ಯವಾಗಲಿತ್ತು. *

ಸಹೋದರ ಹ್ಯಾರಲ್ಡ್‌ ಕಿಂಗ್‌ ಮತ್ತು ಅವರು ಏಕಾಂತ ಸೆರೆವಾಸದಲ್ಲಿದ್ದಾಗ ಸ್ಮರಣೆಯ ಬಗ್ಗೆ ಬರೆದ ಕವನಗಳು ಹಾಗೂ ಗೀತೆಗಳು

ಯೆಹೋವನ ಜನರೆಲ್ಲರಿಗೂ ಸ್ಮರಣೆಯ ರಾತ್ರಿಯು ಇಡೀ ವರ್ಷದಲ್ಲೇ ಪವಿತ್ರ ರಾತ್ರಿಯಾಗಿದೆ. ಹಾಗಾಗಿ ಎಂಥ ಕಷ್ಟದ ಸನ್ನಿವೇಶದಲ್ಲೂ ಅವರದನ್ನು ಆಚರಿಸುತ್ತಾರೆ. 1930ರಲ್ಲಿ ಪರ್ಲ್ ಇಂಗ್ಲಿಷ್‌ ಎಂಬಾಕೆ ಮತ್ತು ಅವಳ ಅಕ್ಕ ಓರಾ ಸ್ಮರಣೆಗೆ ಹಾಜರಾಗಲಿಕ್ಕಾಗಿ ಸುಮಾರು 80 ಕಿ.ಮೀ.ನಷ್ಟು ದೂರ ನಡೆದರು. ಹ್ಯಾರಲ್ಡ್‌ ಕಿಂಗ್‌ ಎಂಬ ಮಿಷನರಿ ಸಹೋದರ ಚೀನಾದಲ್ಲಿ ಏಕಾಂತ ಸೆರೆವಾಸದಲ್ಲಿದ್ದಾಗ ಸ್ಮರಣೆಯನ್ನು ಆಚರಿಸಲಿಕ್ಕಾಗಿ ಕಪ್ಪು ಒಣದ್ರಾಕ್ಷಿಯಿಂದ ದ್ರಾಕ್ಷಾಮದ್ಯವನ್ನು ಮತ್ತು ಅನ್ನದಿಂದ ರೊಟ್ಟಿಯನ್ನು ತಯಾರಿಸಿದರು. ಸ್ಮರಣೆಯ ಬಗ್ಗೆ ಕವನಗಳನ್ನೂ ಗೀತೆಗಳನ್ನೂ ಬರೆದರು. ಪೂರ್ವ ಯೂರೋಪ್‌, ಮಧ್ಯ ಅಮೆರಿಕ, ಆಫ್ರಿಕದಲ್ಲಿರುವ ಕ್ರೈಸ್ತರು ಯುದ್ಧದ ಸಮಯಗಳಲ್ಲೂ, ನಿಷೇಧವಿದ್ದಾಗಲೂ ಧೈರ್ಯದಿಂದ ಸ್ಮರಣೆಯನ್ನು ಆಚರಿಸಿದ್ದಾರೆ. ಇದೇನು ತೋರಿಸುತ್ತದೆ? ನಾವೆಲ್ಲೇ ಇರಲಿ, ಎಂಥದ್ದೇ ಸನ್ನಿವೇಶದಲ್ಲಿರಲಿ ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ಘನಮಾನ ಸಲ್ಲಿಸಲು ಸ್ಮರಣೆಗೆ ಕೂಡಿಬರುತ್ತೇವೆ.

^ ಪ್ಯಾರ. 10 ನಮ್ಮ ರಾಜ್ಯ ಸೇವೆಗೆ ಮೊದಲು ಬುಲೆಟಿನ್‌ ಎಂದೂ ನಂತರ ಇನ್‌ಫಾರ್ಮ೦ಟ್‌ ಎಂದೂ ಕರೆಯುತ್ತಿದ್ದರು.