ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನಲ್ಲಿದ್ದ ಧೈರ್ಯ ವಿವೇಚನೆ ನಿಮ್ಮಲ್ಲೂ ಇರಲಿ

ಯೇಸುವಿನಲ್ಲಿದ್ದ ಧೈರ್ಯ ವಿವೇಚನೆ ನಿಮ್ಮಲ್ಲೂ ಇರಲಿ

“ನೀವು ಎಂದೂ ಅವನನ್ನು ನೋಡಲಿಲ್ಲವಾದರೂ ಅವನನ್ನು ಪ್ರೀತಿಸುತ್ತೀರಿ; ಈಗ ನೀವು ಅವನನ್ನು ಕಾಣದಿರುವುದಾದರೂ ಅವನಲ್ಲಿ ನಂಬಿಕೆಯನ್ನು ಇಟ್ಟಿದ್ದೀರಿ.”—1 ಪೇತ್ರ 1:8.

1, 2. (ಎ) ನಿತ್ಯಜೀವ ಪಡೆಯಬೇಕಾದರೆ ನಾವೇನು ಮಾಡಬೇಕು? (ಬಿ) ನಮ್ಮ ಗಮನವು ದಾರಿ ಬಿಟ್ಟು ಬೇರೆ ಕಡೆ ಹೋಗದಿರಲು ನಾವೇನು ಮಾಡಬೇಕು?

ನಾವು ಕ್ರೈಸ್ತ ಜೀವನವನ್ನು ಆರಂಭಿಸಿದ್ದು ಒಂದು ಪ್ರಯಾಣವನ್ನು ಆರಂಭಿಸಿದಂತೆ. ನಿತ್ಯಜೀವ ಅನ್ನೋದು ನಾವು ಹೋಗಬೇಕಾದ ಸ್ಥಳ. ಅಲ್ಲಿಗೆ ಹೋಗಬೇಕಾದರೆ ನಾವು ದೇವರಿಗೆ ಯಾವಾಗಲೂ ನಂಬಿಗಸ್ತರಾಗಿರಬೇಕು. ಯೇಸು ಹೇಳಿದಂತೆ “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.” (ಮತ್ತಾ. 24:13) ನಾವು “ಕಡೇ ವರೆಗೆ” ಅಂದರೆ ಸಾಯುವ ತನಕ ಅಥವಾ ಈ ದುಷ್ಟ ಲೋಕ ನಾಶವಾಗುವ ವರೆಗೆ ನಂಬಿಗಸ್ತರಾಗಿ ಉಳಿದರೆ ನಮ್ಮ ಪ್ರಯಾಣ ಮುಗಿಯುತ್ತದೆ. ಆದರೆ ಲೋಕದ ವಿಷಯಗಳು ನಮ್ಮನ್ನು ದಾರಿತಪ್ಪಿಸಬಹುದು. ಆದ್ದರಿಂದ ಹುಷಾರಾಗಿರಬೇಕು. (1 ಯೋಹಾ. 2:15-17) ನಮ್ಮ ಗಮನವು ದಾರಿ ಬಿಟ್ಟು ಬೇರೆ ಕಡೆ ಹೋಗದಿರಲು ನಾವೇನು ಮಾಡಬೇಕು?

2 ಯೇಸುವಿನ ಅತ್ಯುತ್ತಮ ಮಾದರಿಯನ್ನು ಅನುಸರಿಸಬೇಕು. ಯೇಸು ಯಾವ ರೀತಿ ಜೀವಿಸಿದನೆಂದು ಬೈಬಲಿನಿಂದ ಓದಿ ಅಧ್ಯಯನ ಮಾಡಿದರೆ ಅವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಆಗ ಅವನ ಮೇಲೆ ನಮಗೆ ಪ್ರೀತಿ, ನಂಬಿಕೆ ಸಹ ಹೆಚ್ಚುತ್ತದೆ. (1 ಪೇತ್ರ 1:8, 9 ಓದಿ.) ನಾವು ಅವನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಬೇಕೆಂದೇ ಯೇಸು ನಮಗೋಸ್ಕರ ಮಾದರಿ ಇಟ್ಟಿದ್ದಾನೆ. (1 ಪೇತ್ರ 2:21) ಹಾಗಾಗಿ ಪ್ರತಿಯೊಂದು ವಿಷಯದಲ್ಲೂ ಅವನ ಮಾದರಿಯನ್ನು ಅನುಸರಿಸಿದರೆ ನಾವು ಕಡೇ ವರೆಗೆ ನಂಬಿಗಸ್ತರಾಗಿರಲು ಸಾಧ್ಯ. * ಹಿಂದಿನ ಲೇಖನದಲ್ಲಿ ನಾವು ಯೇಸುವಿನಂತೆ ದೀನತೆ, ಕೋಮಲತೆ ತೋರಿಸುವುದು ಹೇಗೆಂದು ಕಲಿತೆವು. ಅವನಂತೆ ಧೈರ್ಯ, ವಿವೇಚನೆ ತೋರಿಸುವುದು ಹೇಗೆಂದು ಈ ಲೇಖನದಲ್ಲಿ ಕಲಿಯೋಣ.

ಯೇಸು ಧೈರ್ಯ ತೋರಿಸಿದ ವಿಧ

3. (ಎ) ಧೈರ್ಯ ಅಂದರೇನು? (ಬಿ) ನಮ್ಮಲ್ಲಿ ಧೈರ್ಯ ಇರಬೇಕಾದರೆ ಏನು ಮಾಡಬೇಕು?

3 ಧೈರ್ಯ ಅಂದರೇನು? ಕಷ್ಟಗಳನ್ನು ಸಹಿಸಿಕೊಳ್ಳಲು ಸಹಾಯ ಮಾಡುವ ಮತ್ತು ಬಲಕೊಡುವ ಭಾವನೆಯೇ ಧೈರ್ಯ. ಯಾವುದು ಸರಿಯೋ ಅದನ್ನು ಹೇಳಲು ಮತ್ತು ಮಾಡಲು ಹೆದರದಿರುವುದು ಧೈರ್ಯ. ಕಷ್ಟದಲ್ಲಿರುವಾಗಲೂ ಕಳವಳಗೊಳ್ಳದೆ ಪ್ರಶಾಂತವಾಗಿದ್ದು ದೇವರಿಗೆ ನಂಬಿಗಸ್ತರಾಗಿ ಉಳಿಯುವುದೇ ಧೈರ್ಯವಾಗಿದೆ. ಧೈರ್ಯ ಇರಬೇಕಾದರೆ ಭಯ, ನಿರೀಕ್ಷೆ, ಪ್ರೀತಿ ನಮ್ಮಲ್ಲಿರಬೇಕು. ಏಕೆ? ‘ಭಯ’ ಅಂದರೆ ‘ಎಲ್ಲಿ ದೇವರ ಮನಸ್ಸನ್ನು ನೋಯಿಸಿಬಿಡುತ್ತೇವೋ’ ಎಂಬ ಹೆದರಿಕೆ. ಅದಿದ್ದರೆ ಯಾರು ಏನೇ ಹೇಳಲಿ ಮಾಡಲಿ ಅದಕ್ಕೆ ಹೆದರದೆ ದೇವರು ಮೆಚ್ಚುವುದನ್ನೇ ಮಾಡುತ್ತೇವೆ. (1 ಸಮು. 11:7; ಜ್ಞಾನೋ. 29:25) ‘ನಿರೀಕ್ಷೆಯು’ ನಮ್ಮ ಗಮನವನ್ನು ಕಷ್ಟಗಳ ಮೇಲಲ್ಲ ಭವಿಷ್ಯತ್ತಿನ ಮೇಲೆ ನೆಡಲು ಸಹಾಯ ಮಾಡುತ್ತದೆ. (ಕೀರ್ತ. 27:14) ನಿಸ್ವಾರ್ಥ ‘ಪ್ರೀತಿಯು’ ನಾವು ಕಷ್ಟಹಿಂಸೆಗಳನ್ನು ಅನುಭವಿಸುತ್ತಿರುವಾಗಲೂ ಧೈರ್ಯವನ್ನು ತೋರಿಸುವಂತೆ ಪ್ರೇರಣೆ ನೀಡುತ್ತದೆ. (ಯೋಹಾ. 15:13) ಅಷ್ಟಲ್ಲದೆ, ದೇವರಲ್ಲಿ ಭರವಸೆ ಇಡುವಲ್ಲಿ ಮತ್ತು ಆತನ ಮಗನನ್ನು ಅನುಸರಿಸುವಲ್ಲಿ ನಮಗೆ ಧೈರ್ಯ ಬರುತ್ತದೆ.—ಕೀರ್ತ. 28:7.

4. ಯೇಸು ಚಿಕ್ಕವಯಸ್ಸಿನಲ್ಲಿ ಹೇಗೆ ಧೈರ್ಯ ತೋರಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)

4 ಹನ್ನೆರಡು ವಯಸ್ಸಿನಲ್ಲಿ ಯೇಸು ಎಷ್ಟು ಧೈರ್ಯ ತೋರಿಸಿದನೆಂದು ನೋಡಿ. ಅವನು “ದೇವಾಲಯದಲ್ಲಿ . . . ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ ಇದ್ದನು.” (ಲೂಕ 2:41-47 ಓದಿ.) ಆ ಯೆಹೂದಿ ಧರ್ಮಗುರುಗಳು ಮೋಶೆಯ ಧರ್ಮಶಾಸ್ತ್ರವನ್ನು ಅರೆದು ಕುಡಿದಿದ್ದರು. ಅವರೇ ಮಾಡಿಕೊಂಡಿದ್ದ ಸಂಪ್ರದಾಯಗಳು ಅವರ ನಾಲಿಗೆ ತುದಿಯಲ್ಲೇ ಇದ್ದವು. ಆದರೆ ಯೇಸು, ‘ಅವರಿಗೆ ತುಂಬ ಗೊತ್ತಿದೆ, ಅವರ ಹತ್ತಿರ ಹೇಗಪ್ಪಾ ಮಾತಾಡೋದು’ ಎಂದು ನೆನಸಿ ಸುಮ್ಮನಿರಲಿಲ್ಲ. ಹೆದರಲೂ ಇಲ್ಲ. ಆ ಬೋಧಕರಿಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದನು. ಅವೇನೂ ಚಿಕ್ಕ ಮಕ್ಕಳು ಕೇಳುವ ಪ್ರಶ್ನೆಗಳಾಗಿರಲಿಲ್ಲ. ಆ ಪ್ರಶ್ನೆಗಳು ಅವರನ್ನು ಯೋಚಿಸುವಂತೆ ಮಾಡಿದವು. ಎಷ್ಟೆಂದರೆ ಯೇಸುವಿನ ಮಾತುಗಳನ್ನು ಅವರಿಗೆ ತಳ್ಳಿಹಾಕಲು ಆಗಲಿಲ್ಲ, ಗಮನಕೊಟ್ಟು ಕೇಳಲೇಬೇಕಾಯಿತು. ಆ ಬೋಧಕರು ಪ್ರಶ್ನೆಗಳನ್ನು ಹಾಕಿ ಯೇಸುವನ್ನು ಮಾತಿನಲ್ಲಿ ಸೋಲಿಸಲು ಪ್ರಯತ್ನಿಸಿದರೂ ಅವರೇ ಸೋತಿರಬೇಕು. ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲ ಅವನ “ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.” ದೇವರ ವಾಕ್ಯದಲ್ಲಿರುವ ಸತ್ಯವನ್ನು ತಿಳಿಸಲು ಯೇಸು ಸ್ವಲ್ಪವೂ ಹೆದರಲಿಲ್ಲ.

5. ಯೇಸು ಯಾವೆಲ್ಲ ವಿಧಗಳಲ್ಲಿ ಧೈರ್ಯ ತೋರಿಸಿದನು?

5 ಯೇಸು ದೊಡ್ಡವನಾದ ಮೇಲೆ ಸಹ ಬೇರೆ ವಿಧಗಳಲ್ಲಿ ಧೈರ್ಯ ತೋರಿಸಿದನು. ಉದಾಹರಣೆಗೆ, ಧರ್ಮಗುರುಗಳು ಸುಳ್ಳುಬೋಧನೆಗಳಿಂದ ಜನರ ದಾರಿತಪ್ಪಿಸುತ್ತಿದ್ದಾರೆಂದು ಧೈರ್ಯದಿಂದ ಹೇಳಿ ಯೇಸು ಅವರ ಬಣ್ಣ ಬಯಲುಮಾಡಿದನು. (ಮತ್ತಾ. 23:13-36) ಲೋಕದ ಕೆಟ್ಟ ಪ್ರಭಾವವನ್ನು ದೃಢವಾಗಿ ಎದುರಿಸಿದನು. (ಯೋಹಾ. 16:33) ವಿರೋಧಗಳಿದ್ದಾಗ ಹೆದರಿ ಸಾರುವುದನ್ನು ನಿಲ್ಲಿಸಿಬಿಡಲಿಲ್ಲ. (ಯೋಹಾ. 5:15-18; 7:14) ದೇವಾರಾಧನೆ ಮಾಡಬೇಕಾದ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿದ್ದ ಜನರನ್ನು ಧೈರ್ಯದಿಂದ ಓಡಿಸಿಬಿಟ್ಟನು. ಅದೂ ಎರಡು ಬಾರಿ!—ಮತ್ತಾ. 21:12, 13; ಯೋಹಾ. 2:14-17.

6. ಸಾಯುವ ದಿನ ಸಹ ಯೇಸು ಹೇಗೆ ಧೈರ್ಯ ತೋರಿಸಿದನು?

6 ಸಾಯುವ ದಿನ ಸಹ ಯೇಸು ಧೈರ್ಯ ತೋರಿಸಿದನು. ತನ್ನನ್ನು ಇಸ್ಕರಿಯೋತ ಯೂದನು ಹಿಡಿದುಕೊಟ್ಟ ಮೇಲೆ ತನಗೇನು ಆಗುತ್ತದೆಂದು ಯೇಸುವಿಗೆ ಗೊತ್ತಿತ್ತು. ಹಾಗಿದ್ದರೂ ಪಸ್ಕದ ಊಟ ಮಾಡುತ್ತಿದ್ದಾಗ ಅವನು ಯೂದನಿಗೆ, “ನೀನು ಏನು ಮಾಡಲಿದ್ದೀಯೋ ಅದನ್ನು ಬೇಗ ಮಾಡಿಮುಗಿಸು” ಎಂದು ಹೇಳಿದನು. (ಯೋಹಾ. 13:21-27) ಅನಂತರ ಯೇಸು ಗೆತ್ಸೇಮನೆ ತೋಟದಲ್ಲಿ ಇದ್ದಾಗ ತನ್ನನ್ನು ಹಿಡಿಯಲು ಬಂದಿದ್ದ ಸೈನಿಕರ ಬಳಿ ‘ನೀವು ಹುಡುಕುತ್ತಿರುವ ವ್ಯಕ್ತಿ ನಾನೇ’ ಎಂದು ಧೈರ್ಯದಿಂದ ಹೇಳಿದನು. ಮಾತ್ರವಲ್ಲ ಶಿಷ್ಯರನ್ನು ಬಿಟ್ಟುಬಿಡುವಂತೆ ಸೈನಿಕರಿಗೆ ಹೇಳಿದನು. ಹೀಗೆ ತನ್ನ ಜೀವ ಅಪಾಯದಲ್ಲಿದ್ದಾಗಲೂ ಶಿಷ್ಯರನ್ನು ಕಾಪಾಡಿದನು. (ಯೋಹಾ. 18:1-8) ಮುಖ್ಯ ನ್ಯಾಯಸಭೆಯಲ್ಲಿ ಯೇಸುವಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ವಿಚಾರಣೆ ಮಾಡಲಾಯಿತು. ಮಹಾ ಯಾಜಕನು ಅವನನ್ನು ಕೊಲ್ಲಲು ನೆವ ಹುಡುಕುತ್ತಿದ್ದನು. ಇದು ಗೊತ್ತಿದ್ದರೂ ತಾನೇ ಕ್ರಿಸ್ತನು, ದೇವರ ಮಗನು ಎಂದು ಯೇಸು ಧೈರ್ಯವಾಗಿ ಹೇಳಿದನು. (ಮಾರ್ಕ 14:60-65) ಸಾಯುವ ವರೆಗೂ ಯೇಸು ದೇವರಿಗೆ ನಂಬಿಗಸ್ತನಾಗಿದ್ದನು. ಯಾತನಾ ಕಂಬದ ಮೇಲೆ ನೋವಿನಿಂದ ಕೊನೇ ಉಸಿರು ಎಳೆಯುವಾಗಲೂ “ನೆರವೇರಿತು” ಎಂದು ಹೇಳಿದನು.—ಯೋಹಾ. 19:28-30.

ಯೇಸುವಿನಂತೆ ಧೈರ್ಯ ತೋರಿಸಿ

7. (ಎ) ಮಕ್ಕಳೇ, ನೀವು ಯೆಹೋವನ ಸಾಕ್ಷಿಯಾಗಿರುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ? (ಬಿ) ನಿಮ್ಮಲ್ಲಿ ಧೈರ್ಯ ಇದೆಯೆಂದು ಹೇಗೆ ತೋರಿಸಬಹುದು?

7 ಯೇಸುವಿನಂತೆ ನಾವು ಹೇಗೆ ಧೈರ್ಯ ತೋರಿಸಬೇಕು? ಶಾಲೆಯಲ್ಲಿ. ಮಕ್ಕಳೇ, ನೀವು “ಯೆಹೋವನ ಸಾಕ್ಷಿ” ಎಂದು ನಿಮ್ಮ ಸಹಪಾಠಿಗಳಿಗೆ, ಇತರರಿಗೆ ಹೇಳುವುದಾದರೆ ನಿಮ್ಮಲ್ಲಿ ಧೈರ್ಯ ಇದೆ ಎಂದರ್ಥ. ಕೆಲವೊಮ್ಮೆ ಅದಕ್ಕಾಗಿ ನಿಮ್ಮನ್ನು ತಮಾಷೆ ಮಾಡಬಹುದು. ಆದರೂ ನೀವು ಹೆದರದಿದ್ದರೆ ಯೆಹೋವನ ಹೆಸರಿನಿಂದ ಕರೆಸಿಕೊಳ್ಳಲು ಹೆಮ್ಮೆಪಡುತ್ತೀರಿ ಎಂದು ಗೊತ್ತಾಗುತ್ತದೆ. (ವಿಮೋ. 3:15; ಕೀರ್ತನೆ 86:12 ಓದಿ.) ಬೇರೆ ರೀತಿಯ ಒತ್ತಡವೂ ಬರಬಹುದು. ಉದಾಹರಣೆಗೆ, ವಿಕಾಸವಾದ ಸತ್ಯ ಎಂದು ನಂಬುವಂತೆ ಯಾರಾದರೂ ಹೇಳಬಹುದು. ಆಗ ನೀವು ಹೇಗೆ ಧೈರ್ಯ ತೋರಿಸಬಹುದು? ದೇವರು ಎಲ್ಲವನ್ನೂ ಸೃಷ್ಟಿಸಿದ್ದಾನೆ ಎನ್ನುವುದಕ್ಕೆ ಬೈಬಲಿನಲ್ಲಿ ಅನೇಕ ಆಧಾರಗಳಿವೆ. ಅಂಥ ಕೆಲವು ವಿಷಯಗಳನ್ನು “ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು” (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯಲ್ಲಿ ಕೊಡಲಾಗಿದೆ. ಇದನ್ನು ಅವರಿಗೆ ತೋರಿಸಿ ಚರ್ಚಿಸಿ. ಈ ರೀತಿ ನೀವು ಯೇಸುವಿನಂತೆ ಬೈಬಲಿನಲ್ಲಿರುವ ಸತ್ಯವನ್ನು ಧೈರ್ಯವಾಗಿ ಹೇಳಿ. ಆಗ, ‘ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು’ ತಿಳಿಸಿದ್ದೀರಿ ಎಂಬ ತೃಪ್ತಿ ನಿಮಗಿರುತ್ತದೆ.—1 ಪೇತ್ರ 3:15.

8. ನಾವು ಯಾಕೆ ಧೈರ್ಯದಿಂದ ಸಾರುತ್ತೇವೆ?

8 ಸೇವೆಯಲ್ಲಿ. ಸತ್ಯ ಕ್ರೈಸ್ತರಾದ ನಾವು “ಯೆಹೋವನಿಂದ ಅಧಿಕಾರಹೊಂದಿದವರಾಗಿ ಧೈರ್ಯದಿಂದ ಮಾತಾಡುತ್ತಾ” ಇರಬೇಕು. (ಅ. ಕಾ. 14:3) ನಾವು ಯಾಕೆ ಧೈರ್ಯದಿಂದ ಸಾರುತ್ತೇವೆ? ಒಂದನೇ ಕಾರಣ, ನಾವು ಸಾರುವುದು ಬೈಬಲಿನಲ್ಲಿರುವ ಸತ್ಯವನ್ನು. (ಯೋಹಾ. 17:17) ಎರಡನೇದಾಗಿ, ‘ನಾವು ದೇವರ ಜೊತೆಯಲ್ಲಿ ಕೆಲಸಮಾಡುತ್ತೇವೆ’ ಮತ್ತು ಆತನು ನಮ್ಮ ಸಹಾಯಕ್ಕಾಗಿ ಪವಿತ್ರಾತ್ಮವನ್ನು ಕೊಟ್ಟಿದ್ದಾನೆ. (1 ಕೊರಿಂ. 3:9; ಅ. ಕಾ. 4:31) ಮೂರನೇದಾಗಿ, ನಾವು ಯೆಹೋವನನ್ನು ಮತ್ತು ಜನರನ್ನು ಪ್ರೀತಿಸುತ್ತೇವೆ. ಆದ್ದರಿಂದ ಸುವಾರ್ತೆಯನ್ನು ಎಲ್ಲರಿಗೆ ತಿಳಿಸಲು ನಮ್ಮಿಂದ ಆಗುವುದನ್ನೆಲ್ಲ ಮಾಡುತ್ತೇವೆ. (ಮತ್ತಾ. 22:37-39) ನಾವು ಯೇಸುವಿನಂತೆ ಧೈರ್ಯ ತೋರಿಸುವುದರಿಂದ ಏನೇ ಆದರೂ ಸಾರುವುದನ್ನು ನಿಲ್ಲಿಸುವುದಿಲ್ಲ. ಧರ್ಮಗುರುಗಳ ಸುಳ್ಳು ಬೋಧನೆಯಿಂದ ಮೋಸಹೋದವರಿಗೆ ಸತ್ಯವನ್ನು ಕಲಿಸುವ ದೃಢಸಂಕಲ್ಪ ಮಾಡಿದ್ದೇವೆ. (2 ಕೊರಿಂ. 4:4) ನಮ್ಮ ಸಂದೇಶವನ್ನು ಜನರು ಕೇಳದಿದ್ದರೂ, ನಮ್ಮನ್ನು ಹಿಂಸಿಸಿದರೂ ನಾವಂತೂ ಸಾರುತ್ತಾ ಇರುತ್ತೇವೆ.—1 ಥೆಸ. 2:1, 2.

9. ಕಷ್ಟದ ಪರಿಸ್ಥಿತಿಗಳಲ್ಲೂ ನಾವು ಹೇಗೆ ಧೈರ್ಯ ತೋರಿಸಬಹುದು?

9 ಕಷ್ಟದ ಪರಿಸ್ಥಿತಿಗಳಲ್ಲಿ. ನಮಗೆ ಕಷ್ಟಗಳು ಬರುವುದು ಸಹಜ. ಆದರೆ ಅಂಥ ಸಮಯಗಳಲ್ಲೂ ನಾವು ಧೈರ್ಯ ತೋರಿಸಬೇಕು. ಹೇಗೆ? ದೇವರಲ್ಲಿ ಭರವಸೆಯಿಡುವ ಮೂಲಕ. ಆಗ ಆತನು ನಮಗೆ ಸಹಿಸಿಕೊಳ್ಳಲು ಬೇಕಾದ ನಂಬಿಕೆ ಮತ್ತು ಧೈರ್ಯವನ್ನು ಖಂಡಿತ ಕೊಡುತ್ತಾನೆ. ಉದಾಹರಣೆಗೆ, ನಾವು ತುಂಬ ಪ್ರೀತಿಸುವವರೊಬ್ಬರು ತೀರಿಹೋಗಿರಬಹುದು. ಆಗ ದುಃಖ ಆಗುತ್ತದೆ, ಆದರೆ ಆ ವ್ಯಕ್ತಿಯನ್ನು ಮತ್ತೆ ನೋಡುತ್ತೇವೆಂಬ ನಿರೀಕ್ಷೆಯನ್ನು ಕಳಕೊಳ್ಳುವುದಿಲ್ಲ. ‘ಸಕಲ ಸಾಂತ್ವನದ ದೇವರಾದ’ ಯೆಹೋವನು ನಮಗೆ ನೋವನ್ನು ಸಹಿಸಿಕೊಳ್ಳಲು ಬಲಕೊಡುತ್ತಾನೆ ಎಂದು ಭರವಸೆಯಿಂದ ಇರುತ್ತೇವೆ. (2 ಕೊರಿಂ. 1:3, 4; 1 ಥೆಸ. 4:13) ಅಥವಾ ನಮಗೆ ಆರೋಗ್ಯ ಸಮಸ್ಯೆ ಇರಬಹುದು ಇಲ್ಲವೆ ಅಪಘಾತ ಆಗಿರಬಹುದು. ಆ ಪರಿಸ್ಥಿತಿಯಲ್ಲಿ ತುಂಬ ನೋವಿರುತ್ತದೆ. ಹಾಗಿದ್ದರೂ ದೇವರಿಗೆ ಮೆಚ್ಚಿಗೆಯಾಗದ ಚಿಕಿತ್ಸೆಯನ್ನು ತೆಗೆದುಕೊಳ್ಳದಿರುವ ಮೂಲಕ ನಾವು ಧೈರ್ಯ ತೋರಿಸುತ್ತೇವೆ. (ಅ. ಕಾ. 15:28, 29) ಅಥವಾ ನಮಗೆ ಖಿನ್ನತೆ ಇರಬಹುದು. ಆಗ ನಮ್ಮ ಹೃದಯ ನಮ್ಮನ್ನೇ ಖಂಡಿಸುತ್ತದೆ. ಅಂಥ ಸಮಯದಲ್ಲಿ ಸೋತುಹೋಗದೆ ‘ಮುರಿದ ಮನಸ್ಸುಳ್ಳವರಿಗೆ ನೆರವಾಗುವ ಯೆಹೋವನಲ್ಲಿ’ ಭರವಸೆಯಿಡುವ ಮೂಲಕ ಧೈರ್ಯ ತೋರಿಸುತ್ತೇವೆ. *1 ಯೋಹಾ. 3:19, 20; ಕೀರ್ತ. 34:18.

ಯೇಸು ವಿವೇಚನೆ ತೋರಿಸಿದ ವಿಧ

10. (ಎ) ವಿವೇಚನೆ ಅಂದರೇನು? (ಬಿ) ವಿವೇಚನೆಯಿರುವ ಕ್ರೈಸ್ತನ ನಡೆ ನುಡಿ ಹೇಗಿರುತ್ತದೆ?

10 ವಿವೇಚನೆ ಅಂದರೇನು? ಸರಿ-ತಪ್ಪಿನ ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಂಡು ಸರಿಯಾದದ್ದನ್ನು ಮಾಡುವುದೇ ವಿವೇಚನೆ. (ಇಬ್ರಿ. 5:14) ವಿವೇಚನೆಯುಳ್ಳ ವ್ಯಕ್ತಿಯ ನಡೆ ನುಡಿ ಹೇಗಿರುತ್ತದೆ? ಅವನು ಯೆಹೋವನನ್ನು ಮೆಚ್ಚಿಸಲು ಬಯಸುವುದರಿಂದ ಆತನಿಗೆ ಹೆಚ್ಚು ಆಪ್ತನಾಗಲಿಕ್ಕಾಗಿ ಸರಿಯಾದ ನಿರ್ಣಯಗಳನ್ನೇ ಮಾಡುತ್ತಾನೆ. ಬೇರೆಯವರ ಮನಸ್ಸನ್ನು ನೋಯಿಸುವಂಥ ಮಾತುಗಳನ್ನು ಆಡುವುದಿಲ್ಲ. ನಂಬಿಕೆಯನ್ನು ಹೆಚ್ಚಿಸುವಂಥ ಮಾತುಗಳನ್ನು ಆಡುತ್ತಾನೆ. (ಜ್ಞಾನೋ. 11:12, 13) ಥಟ್ಟನೆ ಕೋಪ ಮಾಡಿಕೊಳ್ಳುವುದಿಲ್ಲ. (ಜ್ಞಾನೋ. 14:29) ಬೈಬಲ್‌ ಹೇಳುವಂತೆ ಅವನು “ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು” ಅಂದರೆ ಜೀವನಪೂರ್ತಿ ಸರಿಯಾದ ನಿರ್ಣಯಗಳನ್ನು ಮಾಡುತ್ತಾ ನಿತ್ಯಜೀವದ ದಾರಿಯ ಮೇಲೆ ಗಮನ ನೆಡುತ್ತಾನೆ. (ಜ್ಞಾನೋ. 15:21) ನಮ್ಮಲ್ಲಿ ವಿವೇಚನೆ ಇರಬೇಕಾದರೆ ಏನು ಮಾಡಬೇಕು? ಬೈಬಲನ್ನು ಓದಿ ಅಧ್ಯಯನ ಮಾಡಬೇಕು ಮತ್ತು ಕಲಿತ ವಿಷಯಗಳ ಪ್ರಕಾರ ನಡೆಯಬೇಕು. (ಜ್ಞಾನೋ. 2:1-5, 10, 11) ಜೊತೆಗೆ ನಡೆಯಲ್ಲೂ ನುಡಿಯಲ್ಲೂ ವಿವೇಚನೆ ತೋರಿಸಿದ ಯೇಸುವಿನ ಮಾದರಿಯನ್ನು ಅನುಸರಿಸಬೇಕು.

11. ಯೇಸು ಹೇಗೆ ವಿವೇಚನೆಯಿಂದ ಮಾತಾಡಿದನು?

11 ಯೇಸುವಿನ ಮಾತು. ಸುವಾರ್ತೆ ಸಾರುವಾಗ ಯೇಸುವಿನ ಮಾತಿನಲ್ಲಿ ದಯೆ ಕರುಣೆ ತುಂಬಿತ್ತು. ಅದನ್ನು ಕೇಳಿಸಿಕೊಂಡವರೆಲ್ಲರು ಆಶ್ಚರ್ಯಪಟ್ಟರು. (ಲೂಕ 4:22; ಮತ್ತಾ. 7:28) ಅಲ್ಲದೆ ಶಾಸ್ತ್ರಗ್ರಂಥದಲ್ಲಿ ‘ಹೀಗೆ ಬರೆದದೆ’ ಎಂದು ಯೇಸು ಪದೇ ಪದೇ ಹೇಳಿದನು, ಗ್ರಂಥದಿಂದ ಓದಿ ತೋರಿಸಿದನು. ಸನ್ನಿವೇಶಕ್ಕೆ ಸರಿಯಾದ ವಚನಗಳನ್ನು ಉಪಯೋಗಿಸಿದನು. (ಮತ್ತಾ. 4:4, 7, 10; 12:1-5; ಲೂಕ 4:16-21) ಮಾತ್ರವಲ್ಲ ಅವನು ವಚನಗಳನ್ನು ವಿವರಿಸುತ್ತಿದ್ದ ವಿಧವು ಕೇಳುಗರ ಹೃದಯವನ್ನು ಮುಟ್ಟುತ್ತಿತ್ತು. ಒಂದು ಉದಾಹರಣೆ ಗಮನಿಸಿ. ಇದು ಯೇಸು ಪುನರುತ್ಥಾನವಾದ ಮೇಲೆ ನಡೆದ ಘಟನೆ. ಅವನ ಇಬ್ಬರು ಶಿಷ್ಯರು ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದರು. ಆಗ ಯೇಸು ಅವರೊಂದಿಗೆ ಮಾತಾಡಿ ತನ್ನ ಕುರಿತು ಗ್ರಂಥದಲ್ಲಿ ಬರೆದಿರುವ ವಿಷಯಗಳು ಹೇಗೆ ನೆರವೇರಿದವು ಎಂದು ವಿವರಿಸಿದನು. ಆಗ ಆ ಶಿಷ್ಯರಿಗೆ ಹೇಗನಿಸಿತು? “ಅವನು ದಾರಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದಾಗಲೂ ನಮಗೆ ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತಿದ್ದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” ಎಂದರು ಅವರು.—ಲೂಕ 24:27, 32.

12, 13. ಯೇಸು ಥಟ್ಟನೆ ಕೋಪಿಸಿಕೊಳ್ಳುತ್ತಿರಲಿಲ್ಲ, ಬೇರೆಯವರ ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತಿದ್ದನು ಎನ್ನುವುದಕ್ಕೆ ಉದಾಹರಣೆಗಳನ್ನು ಕೊಡಿ.

12 ಯೇಸುವಿನ ಭಾವನೆಗಳು ಮತ್ತು ಮನೋಭಾವ. ವಿವೇಚನೆಯಿದ್ದ ಕಾರಣ ಯೇಸು ‘ದೀರ್ಘಶಾಂತನಾಗಿದ್ದನು’ ಅಂದರೆ ಥಟ್ಟನೆ ಕೋಪಿಸಿಕೊಳ್ಳುತ್ತಿರಲಿಲ್ಲ. (ಜ್ಞಾನೋ. 16:32) ತನ್ನ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಿದ್ದನು. “ಸೌಮ್ಯಭಾವ” ಅವನಲ್ಲಿತ್ತು. (ಮತ್ತಾ. 11:29) ತಾನು ಹೇಳಿದ್ದನ್ನು ಶಿಷ್ಯರು ಮಾಡದಿದ್ದಾಗಲೂ ತಾಳ್ಮೆ ತೋರಿಸಿದನು. (ಮಾರ್ಕ 14:34-38; ಲೂಕ 22:24-27) ಬೇರೆಯವರು ತನ್ನೊಟ್ಟಿಗೆ ಕೆಟ್ಟದಾಗಿ ವರ್ತಿಸಿದಾಗ ಸಹ ಬೈಯದೆ ಶಾಂತನಾಗಿದ್ದನು.—1 ಪೇತ್ರ 2:23.

13 ವಿವೇಚನೆಯಿದ್ದ ಕಾರಣ ಯೇಸು ಬೇರೆಯವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದಯೆಯಿಂದ ನಡೆದುಕೊಂಡನು. ಇದಕ್ಕೊಂದು ಉದಾಹರಣೆ ಗಮನಿಸಿ. ರಕ್ತಸ್ರಾವ ರೋಗವಿದ್ದ ಸ್ತ್ರೀಯೊಬ್ಬಳು ಒಮ್ಮೆ ಯೇಸುವಿನ ಬಗ್ಗೆ ಕೇಳಿಸಿಕೊಂಡಾಗ ಅವನನ್ನು ನೋಡಬೇಕೆಂದು ಹೋದಳು. ಅವನ ಸುತ್ತ ತುಂಬ ಜನರು ನೆರೆದಿದ್ದರು. (ಮಾರ್ಕ 5:25-34 ಓದಿ.) ಆ ಸ್ತ್ರೀ ಅಲ್ಲಿಗೆ ಬರಬಾರದಿತ್ತು, ಯಾರನ್ನೂ ಮುಟ್ಟಬಾರದಿತ್ತು. ಏಕೆಂದರೆ ಸ್ತ್ರೀಯರಿಗೆ ರಕ್ತಸ್ರಾವ ಆಗುವಾಗ ಅಶುದ್ಧರು ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿತ್ತು. (ಯಾಜ. 15:25-27) ಹಾಗಿದ್ದರೂ ಆಕೆ ಗುಣವಾಗಬೇಕೆಂಬ ಆಸೆಯಿಂದ ಜನರ ಗುಂಪಿನಲ್ಲಿ ಹೇಗೋ ಜಾಗ ಮಾಡಿಕೊಂಡು ಬಂದು ಯೇಸುವಿನ ಬಟ್ಟೆಯನ್ನು ಮುಟ್ಟಿದಳು. ಅದು ಯೇಸುವಿಗೆ ತಿಳಿದಾಗ ಏನು ಮಾಡಿದನು? ಅವನು ಸಿಟ್ಟಿನಿಂದ ಅವಳನ್ನು ಗದರಿಸಲಿಲ್ಲ. ದಯೆಯಿಂದ ಮಾತಾಡಿದನು. ಏಕೆಂದರೆ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಿಂತ “ಕರುಣೆ ಮತ್ತು ನಂಬಿಗಸ್ತಿಕೆಯಂಥ” ಗುಣಗಳನ್ನು ತೋರಿಸುವುದೇ ಮುಖ್ಯ ಎಂದು ಯೇಸು ತಿಳಿದಿದ್ದನು. ಆದುದರಿಂದ ಆ ಸ್ತ್ರೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದಯೆಯಿಂದ ನಡೆದುಕೊಂಡನು. (ಮತ್ತಾ. 23:23) ಮೃದುಸ್ವರದಿಂದ ಅವನು ಆಕೆಗೆ, “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು” ಎಂದು ಹೇಳಿದನು.

14. (ಎ) ಜೀವನದಲ್ಲಿ ಏನು ಮಾಡಲು ಯೇಸು ನಿರ್ಣಯಿಸಿದನು? (ಬಿ) ಸಾರುವ ಕೆಲಸಕ್ಕೆ ಪೂರ್ಣ ಗಮನ ಕೊಡಲು ಅವನು ಏನು ಮಾಡಿದನು?

14 ಜೀವನ ರೀತಿ. ಯೇಸು ಜೀವಿಸಿದ ವಿಧದಿಂದಲೂ ಅವನೆಷ್ಟು ವಿವೇಚನೆಯುಳ್ಳವನು ಎಂದು ಗೊತ್ತಾಗುತ್ತದೆ. ಸುವಾರ್ತೆ ಸಾರುವುದೇ ಅವನ ಜೀವನವಾಗಿತ್ತು. (ಲೂಕ 4:43) ಅವನು ತಕ್ಕೊಂಡ ಎಲ್ಲಾ ನಿರ್ಣಯಗಳು ಸಾರುವ ಕೆಲಸಕ್ಕೆ ಪೂರ್ಣ ಗಮನಕೊಡಲು ಮತ್ತು ಅದನ್ನು ಮಾಡಿಮುಗಿಸಲು ನೆರವಾದವು. ಉದಾಹರಣೆಗೆ, ಅವನು ಸರಳ ಜೀವನ ನಡೆಸುವ ನಿರ್ಧಾರ ಮಾಡಿದನು. ಇದರಿಂದ ತನಗಿದ್ದ ಸಮಯ, ಸಾಮರ್ಥ್ಯ ಎಲ್ಲವನ್ನು ಸಾರುವ ಕೆಲಸದಲ್ಲಿ ಉಪಯೋಗಿಸಲು ಅವನಿಂದಾಯಿತು. (ಲೂಕ 9:58) ತನ್ನ ಮರಣದ ನಂತರವೂ ಸಾರುವ ಕೆಲಸ ಮುಂದುವರಿಯಬೇಕೆಂಬ ಉದ್ದೇಶದಿಂದ ತನ್ನ ಶಿಷ್ಯರಿಗೆ ತರಬೇತಿ ನೀಡಿದನು. (ಲೂಕ 10:1-12; ಯೋಹಾ. 14:12) ಮಾತ್ರವಲ್ಲ ಈ “ವ್ಯವಸ್ಥೆಯ ಸಮಾಪ್ತಿಯ ವರೆಗೂ” ಅವರಿಗೆ ಸಹಾಯ ಮಾಡುವೆನೆಂದು ಮಾತುಕೊಟ್ಟನು.—ಮತ್ತಾ. 28:19, 20.

ಯೇಸುವಿನಂತೆ ನಿಮ್ಮಲ್ಲೂ ವಿವೇಚನೆ ಇರಲಿ

ಜನರ ಸನ್ನಿವೇಶ, ಆಸಕ್ತಿ ಏನೆಂದು ತಿಳಿದು ಅದಕ್ಕೆ ತಕ್ಕ ಹಾಗೆ ಮಾತಾಡಿ (ಪ್ಯಾರ 15 ನೋಡಿ)

15. ನಮ್ಮ ಮಾತಿನಲ್ಲಿ ವಿವೇಚನೆ ತೋರಿಸುವುದು ಹೇಗೆ?

15 ಯೇಸುವಿನಂತೆ ನಾವು ಹೇಗೆ ವಿವೇಚನೆ ತೋರಿಸಬಹುದು? ನಮ್ಮ ಮಾತು. ಸಹೋದರ ಸಹೋದರಿಯರೊಂದಿಗೆ ನಾವು ಮಾತಾಡುವಾಗ ಅದು ಅವರನ್ನು ಪ್ರೋತ್ಸಾಹಿಸಬೇಕು. ನಿರುತ್ಸಾಹಗೊಳಿಸಬಾರದು. (ಎಫೆ. 4:29) ದೇವರ ರಾಜ್ಯದ ಕುರಿತು ಇತರರಿಗೆ ತಿಳಿಸುವಾಗ ನಮ್ಮ ಮಾತು “ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿ” ಇರಬೇಕು ಅಂದರೆ ಜಾಗ್ರತೆಯಿಂದ ಯೋಚಿಸಿ ಮಾತಾಡಬೇಕು. (ಕೊಲೊ. 4:6) ಜನರ ಸನ್ನಿವೇಶಕ್ಕೆ ತಕ್ಕಂತೆ ಏನು ಹೇಳಬೇಕು, ಯಾವ ವಿಷಯದಲ್ಲಿ ಅವರಿಗೆ ಆಸಕ್ತಿಯಿದೆ ಎಂದು ಮೊದಲು ತಿಳಿದುಕೊಂಡು ಸರಿಯಾದ ಪದಗಳನ್ನು ಬಳಸಬೇಕು. ನಾವು ದಯೆಯಿಂದ ಮಾತಾಡಿದರೆ ಜನರು ನಾವು ಹೇಳುವುದನ್ನು ಕೇಳುತ್ತಾರೆ ಮತ್ತು ನಮ್ಮ ಮಾತು ಅವರ ಹೃದಯವನ್ನು ಮುಟ್ಟುತ್ತದೆ. ನಮ್ಮ ನಂಬಿಕೆಯನ್ನು ವಿವರಿಸುವಾಗ ಬೈಬಲನ್ನು ಉಪಯೋಗಿಸಬೇಕು. ಏಕೆಂದರೆ ನಮ್ಮ ಮಾತಿಗಿಂತ ದೇವರ ಮಾತಿಗೆ ಹೆಚ್ಚು ಶಕ್ತಿಯಿದೆ.—ಇಬ್ರಿ. 4:12.

16, 17. (ಎ) ನಾವು ಥಟ್ಟನೆ ಕೋಪ ಮಾಡಿಕೊಳ್ಳುವುದಿಲ್ಲ ಮತ್ತು ಇತರರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಗೆ ತೋರಿಸಬಹುದು? (ಬಿ) ಸಾರುವ ಕೆಲಸಕ್ಕೆ ಪೂರ್ಣ ಗಮನ ಕೊಡಲು ನಾವು ಏನು ಮಾಡಬೇಕು?

16 ನಮ್ಮ ಭಾವನೆಗಳು ಮತ್ತು ಮನೋಭಾವ. ವಿವೇಚನೆ ನಮ್ಮಲ್ಲಿದ್ದರೆ ಒತ್ತಡದ ಪರಿಸ್ಥಿತಿಯಲ್ಲೂ ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತೇವೆ. ಥಟ್ಟನೆ ಕೋಪ ಮಾಡಿಕೊಳ್ಳುವುದಿಲ್ಲ. (ಯಾಕೋ. 1:19) ಯಾರಾದರೂ ಸಿಟ್ಟಿನಿಂದ ಮಾತಾಡುವಲ್ಲಿ ಅವರು ಏಕೆ ಹಾಗೆ ಮಾತಾಡುತ್ತಾರೆ ಎಂದು ಅರ್ಥಮಾಡಿಕೊಳ್ಳುತ್ತೇವೆ. ಇದರಿಂದ ಕ್ಷಮಿಸಲು ಮತ್ತು ಕೋಪ ಮಾಡಿಕೊಳ್ಳದಿರಲು ಆಗುತ್ತದೆ. (ಜ್ಞಾನೋ. 19:11) ಅಲ್ಲದೆ ವಿವೇಚನೆ ಇದ್ದರೆ ನಾವು ಇತರರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದಯೆಯಿಂದ ನಡೆದುಕೊಳ್ಳುತ್ತೇವೆ. ಸಹೋದರ ಸಹೋದರಿಯರು ತಪ್ಪನ್ನೇ ಮಾಡಬಾರದೆಂದು ನಿರೀಕ್ಷಿಸುವುದಿಲ್ಲ. ಅವರಿಗೂ ಕಷ್ಟಸಮಸ್ಯೆಗಳು ಇರುತ್ತವೆ, ಅವರಿಗಿರುವ ಎಷ್ಟೋ ಕಷ್ಟಗಳು ನಮಗೆ ಗೊತ್ತೇ ಇರುವುದಿಲ್ಲ ಎಂದು ನೆನಪಿನಲ್ಲಿಡುತ್ತೇವೆ. ಬೇರೆಯವರು ಅಭಿಪ್ರಾಯಗಳನ್ನು ತಿಳಿಸುವಾಗ ಕೇಳುತ್ತೇವೆ. ‘ನಾನು ಹೇಳಿದ್ದೇ ನಡೆಯಬೇಕು’ ಎಂದು ಒತ್ತಾಯ ಮಾಡುವುದಿಲ್ಲ, ಬಿಟ್ಟುಕೊಡುತ್ತೇವೆ.—ಫಿಲಿ. 4:5.

17 ನಮ್ಮ ಜೀವನ ರೀತಿ. ನಾವು ಜೀವನದಲ್ಲಿ ಮಾಡಬೇಕಾದ ಅತಿ ದೊಡ್ಡ ಕೆಲಸವೆಂದರೆ ಸುವಾರ್ತೆ ಸಾರುವುದು. ಆದ್ದರಿಂದ ನಾವು ತಕ್ಕೊಳ್ಳುವ ನಿರ್ಣಯಗಳು ಸಾರುವ ಕೆಲಸಕ್ಕೆ ಪೂರ್ಣ ಗಮನ ಕೊಡಲು ಸಹಾಯ ಮಾಡುವಂತಿರಬೇಕು. ಉದಾಹರಣೆಗೆ, ನಾವು ಸರಳ ಜೀವನ ನಡೆಸಲು ನಿರ್ಣಯಿಸುತ್ತೇವೆ. ಇದರಿಂದ ನಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಲು ಆಗುತ್ತದೆ. ಅಂತ್ಯ ಬರುವ ಮುಂಚೆ ನಮ್ಮ ಸಮಯ, ಸಾಮರ್ಥ್ಯವನ್ನೆಲ್ಲ ಸಾರುವ ಕೆಲಸದಲ್ಲಿ ಉಪಯೋಗಿಸಲು ಆಗುತ್ತದೆ.—ಮತ್ತಾ. 6:33; 24:14.

18. (ಎ) ನಿತ್ಯಜೀವದ ಮಾರ್ಗದಲ್ಲಿ ನಾವು ಮುಂದೆ ಹೋಗುತ್ತಾ ಇರಲು ಏನು ಮಾಡಬೇಕು? (ಬಿ) ನೀವು ಏನು ಮಾಡಬೇಕೆಂದು ದೃಢಮನಸ್ಸು ಮಾಡಿದ್ದೀರಿ?

18 ಯೇಸುವಿನಲ್ಲಿದ್ದ ಅತಿ ಒಳ್ಳೇ ಗುಣಗಳಲ್ಲಿ ಕೆಲವನ್ನು ಕಲಿತದ್ದು ನಿಜಕ್ಕೂ ಸಂತೋಷ ತಂದಿತು. ಅವನ ಇನ್ನಿತರ ಗುಣಗಳ ಬಗ್ಗೆ ಕಲಿಯುವುದರಿಂದ ಮತ್ತು ಅವನಂತೆ ಇರಲು ಇನ್ನೂ ಹೆಚ್ಚೆಚ್ಚು ಪ್ರಯತ್ನಿಸುವುದರಿಂದ ತುಂಬ ಪ್ರಯೋಜನ ಪಡೆಯುವೆವು. ಹಾಗಾಗಿ ನಾವು ಯೇಸುವನ್ನು ಅನುಸರಿಸಲು ದೃಢಮನಸ್ಸು ಮಾಡೋಣ. ಆಗ ನಾವು ನಿತ್ಯಜೀವದ ಮಾರ್ಗದಿಂದ ದಾರಿತಪ್ಪಿ ಹೋಗುವುದಿಲ್ಲ ಮತ್ತು ಯೆಹೋವನಿಗೆ ಇನ್ನೂ ಹೆಚ್ಚು ಆಪ್ತರಾಗುತ್ತೇವೆ.

^ ಪ್ಯಾರ. 2 1 ಪೇತ್ರ 1:8, 9ರಲ್ಲಿರುವ ಮಾತುಗಳನ್ನು ಪೇತ್ರನು ಸ್ವರ್ಗಕ್ಕೆ ಹೋಗುವ ನಿರೀಕ್ಷೆಯಿರುವ ಕ್ರೈಸ್ತರಿಗೆ ಬರೆದನು. ಹಾಗಿದ್ದರೂ ಆ ಮಾತುಗಳು ಭೂಮಿಯಲ್ಲಿ ನಿತ್ಯಜೀವ ಪಡೆಯುವ ನಿರೀಕ್ಷೆಯಿರುವ ಕ್ರೈಸ್ತರಿಗೂ ಅನ್ವಯಿಸುತ್ತವೆ.

^ ಪ್ಯಾರ. 9 ಕಷ್ಟದಲ್ಲಿದ್ದಾಗಲೂ ಧೈರ್ಯ ತೋರಿಸಿದವರ ಉದಾಹರಣೆಗಳಿಗಾಗಿ 2000, ಡಿಸೆಂಬರ್‌ 1ರ ಕಾವಲಿನಬುರುಜು ಪುಟ 24-28 ಮತ್ತು 2003, ಜುಲೈ 8ರ ಎಚ್ಚರ! ಪುಟ 20-23 ಹಾಗೂ 1995, ಜನವರಿ 22ರ ಎಚ್ಚರ! (ಇಂಗ್ಲಿಷ್‌) ಪುಟ 11-15 ನೋಡಿ.