ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನ ಬೋಧನೆ” ಎಲ್ಲ ಜನರಿಗೆ ತಲಪಿದ್ದು ಹೇಗೆ?

“ಯೆಹೋವನ ಬೋಧನೆ” ಎಲ್ಲ ಜನರಿಗೆ ತಲಪಿದ್ದು ಹೇಗೆ?

“ಪ್ರಾಂತಾಧಿಪತಿಯು . . . ಯೆಹೋವನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ವಿಶ್ವಾಸಿಯಾದನು.”—ಅ. ಕಾ. 13:12.

1-3. “ಎಲ್ಲ ಜನಾಂಗಗಳಿಗೆ” ಸುವಾರ್ತೆಯನ್ನು ಸಾರುವುದು ಯೇಸುವಿನ ಶಿಷ್ಯರಿಗೆ ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ ಯಾಕೆ?

ಯೇಸು ಕ್ರಿಸ್ತ ತನ್ನ ಶಿಷ್ಯರಿಗೆ ಒಂದು ದೊಡ್ಡ ಕೆಲಸ ಕೊಟ್ಟನು. “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ” ಮಾಡುವ ಕೆಲಸ ಅದು. ಇದನ್ನು ಮಾಡಲು ಆ ಶಿಷ್ಯರು ‘ರಾಜ್ಯದ ಸುವಾರ್ತೆಯನ್ನು ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ’ ಸಾರಿ ಹೇಳಬೇಕಿತ್ತು.—ಮತ್ತಾ. 24:14; 28:19.

2 ಯೇಸುವಿನ ಶಿಷ್ಯರಿಗೆ ಯೇಸುವಿನ ಮೇಲೆ ತುಂಬ ಪ್ರೀತಿ, ಸುವಾರ್ತೆಯೆಂದರೂ ತುಂಬ ಇಷ್ಟ. ಆದರೆ ‘ಯೇಸು ಕೊಟ್ಟ ಈ ದೊಡ್ಡ ಕೆಲಸ ತಮ್ಮಿಂದ ಹೇಗೆ ಮಾಡಲು ಆಗುತ್ತದೆ?’ ಎಂದು ಅವರಿಗೆ ಅರ್ಥ ಆಗಲಿಲ್ಲ. ಏಕೆಂದರೆ, ಮೊದಲನೆಯದಾಗಿ ಅವರು ಇದ್ದದ್ದೇ ಸ್ವಲ್ಪ ಜನ. ಅಲ್ಲದೆ ಯಾರನ್ನು ಅವರು ದೇವರ ಮಗ ಎಂದು ಸಾರುತ್ತಿದ್ದರೋ ಆ ಯೇಸುವನ್ನು ಈಗಾಗಲೇ ಕೊಲ್ಲಲಾಗಿದೆ ಎಂದು ಜನರಿಗೆ ಗೊತ್ತಿತ್ತು. ಇನ್ನೊಂದು ಏನೆಂದರೆ ಶಿಷ್ಯರು “ಹೆಚ್ಚು ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳೆಂದು” ಅನೇಕರು ನೆನಸಿದ್ದರು. (ಅ. ಕಾ. 4:13) ಆಗಿನ ಯೆಹೂದಿ ಮುಖಂಡರು ದೊಡ್ಡದೊಡ್ಡ ಧಾರ್ಮಿಕ ಶಾಲೆಗಳಲ್ಲಿ ಓದಿದ್ದರು. ಆದರೆ ಶಿಷ್ಯರು ಅಂಥ ಯಾವುದೇ ಶಿಕ್ಷಣ ಪಡಕೊಂಡಿರಲಿಲ್ಲ. ಅವರು ಸಾರುತ್ತಿದ್ದ ವಿಷಯಕ್ಕೂ ಯೆಹೂದಿಗಳು ನೂರಾರು ವರ್ಷಗಳಿಂದ ಕಲಿಸುತ್ತಿದ್ದ ವಿಷಯಕ್ಕೂ ತುಂಬಾನೇ ವ್ಯತ್ಯಾಸ ಇತ್ತು. ಇಸ್ರಾಯೇಲಿನಲ್ಲಿ ಅವರಿಗೆ ಯಾವುದೇ ಗೌರವ ಇರಲಿಲ್ಲ. ಹೀಗಿರುವಾಗ ದೊಡ್ಡ ರೋಮ್‌ ಸಾಮ್ರಾಜ್ಯದಲ್ಲೆಲ್ಲ ತಮ್ಮ ಮಾತಿಗೆ ಕಿವಿಗೊಡುವವರು ಯಾರಾದರೂ ಸಿಗುತ್ತಾರಾ ಎಂಬ ಚಿಂತೆ ಶಿಷ್ಯರಿಗೆ ಇದ್ದಿರಬೇಕು.

3 ಯೇಸು ಮುಂಚೆನೇ ಎಚ್ಚರಿಸಿದಂತೆ ಅವನ ಶಿಷ್ಯರಿಗೆ ವಿರೋಧ ಹಿಂಸೆ ಬರಲಿತ್ತು, ಕೆಲವರ ಕೊಲೆ ಸಹ ಆಗಲಿತ್ತು. (ಲೂಕ 21:16, 17) ಸ್ನೇಹಿತರಿಂದ, ಕುಟುಂಬದವರಿಂದ ಅವರಿಗೆ ದ್ರೋಹವೂ ಆಗಲಿತ್ತು. ಸುಳ್ಳು ಪ್ರವಾದಿಗಳು ಬರಲಿದ್ದರು. ಅಪರಾಧ ಹಿಂಸಾಚಾರ ಹೆಚ್ಚಾಗಲಿತ್ತು. (ಮತ್ತಾ. 24:10-12) ಇದೆಲ್ಲದರ ಮಧ್ಯೆ ಹೇಗೂ ಅವರು ಸುವಾರ್ತೆ ಸಾರಕ್ಕೆ ಹೊರಟರೂ “ಭೂಮಿಯ ಕಟ್ಟಕಡೆಯ ವರೆಗೂ” ಸಾಕ್ಷಿ ಕೊಡಲು ಅವರಿಂದ ಆಗುತ್ತಾ? (ಅ. ಕಾ. 1:8) ಈ ಎಲ್ಲ ವಿಷಯಗಳು ಶಿಷ್ಯರಲ್ಲಿ ಹೆದರಿಕೆ ಹುಟ್ಟಿಸಿರಬಹುದು.

4. ಸುವಾರ್ತೆ ಸಾರಿದ್ದರಿಂದ ಯಾವ ಫಲಿತಾಂಶ ಸಿಕ್ಕಿತು?

4 ಇದು ಸುಲಭದ ಕೆಲಸ ಅಲ್ಲ ಅಂತ ಗೊತ್ತಿದ್ದರೂ ಆ ಶಿಷ್ಯರು ಯೇಸುವಿನ ಆಜ್ಞೆಗೆ ವಿಧೇಯರಾಗಿ ಸಾರುವುದನ್ನು ಮುಂದುವರಿಸಿದರು. ಯೆರೂಸಲೇಮ್‌, ಸಮಾರ್ಯ ಮತ್ತು ಇತರ ದೇಶಗಳಲ್ಲೂ ಸಾರಿದರು. 30 ವರ್ಷಗಳಲ್ಲಿ ಎಷ್ಟೆಲ್ಲ ಸ್ಥಳಗಳಿಗೆ ಹೋಗಿ ಸಾರಿದರೆಂದರೆ “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ” ಸಾರಲಾಗಿದೆ ಎಂದು ಪೌಲ ಹೇಳಿದನು. ಹೀಗೆ ಬೇರೆಬೇರೆ ದೇಶಗಳ ಜನರೆಲ್ಲರೂ ಯೇಸುವಿನ ಶಿಷ್ಯರಾದರು. (ಕೊಲೊ. 1:6, 23) ಉದಾಹರಣೆಗೆ, ಪೌಲನು ಸೈಪ್ರಸ್‌ ಎಂಬ ದ್ವೀಪದಲ್ಲಿ ಸಾರಿದಾಗ ಅಲ್ಲಿನ ರೋಮನ್‌ ಪ್ರಾಂತಾಧಿಪತಿಯು “ಯೆಹೋವನ ಬೋಧನೆಗೆ ಅತ್ಯಾಶ್ಚರ್ಯಪಟ್ಟು” ಶಿಷ್ಯನಾದನು.ಅಪೊಸ್ತಲರ ಕಾರ್ಯಗಳು 13:6-12 ಓದಿ.

5. (ಎ) ಯೇಸು ತನ್ನ ಶಿಷ್ಯರಿಗೆ ಏನೆಂದು ಮಾತುಕೊಟ್ಟನು? (ಬಿ) ಒಂದನೇ ಶತಮಾನದ ಸನ್ನಿವೇಶದ ಬಗ್ಗೆ ಒಂದು ಇತಿಹಾಸ ಪುಸ್ತಕ ಏನು ಹೇಳುತ್ತದೆ?

5 ಭೂಮಿಯ ಕಟ್ಟಕಡೆಯ ವರೆಗೆ ಸಾರಲು ತಮ್ಮ ಸ್ವಂತ ಶಕ್ತಿಯಿಂದ ಆಗುವುದಿಲ್ಲ ಎಂದು ಶಿಷ್ಯರಿಗೆ ಗೊತ್ತಿತ್ತು. ಹಾಗಿದ್ದರೂ ಯೇಸು ಮಾತುಕೊಟ್ಟಂತೆ ಯಾವಾಗಲೂ ತಮ್ಮೊಂದಿಗೆ ಇರುತ್ತಾನೆ ಮತ್ತು ಪವಿತ್ರಾತ್ಮವು ತಮಗೆ ಸಹಾಯ ಮಾಡುತ್ತದೆ ಎಂಬ ಭರವಸೆ ಅವರಿಗಿತ್ತು. (ಮತ್ತಾ. 28:20) ಆಗಿನ ಸನ್ನಿವೇಶಗಳು ಸಹ ಸುವಾರ್ತೆಯನ್ನು ಎಲ್ಲ ಕಡೆಗಳಲ್ಲಿ ಸಾರಲು ಶಿಷ್ಯರಿಗೆ ಸುಲಭ ಮಾಡಿರಬೇಕು. ಒಂದು ಇತಿಹಾಸ ಪುಸ್ತಕ ಹೇಳುತ್ತದೆ ಏನಂದರೆ, ‘ಕ್ರೈಸ್ತರಿಗೆ ಸುವಾರ್ತೆ ಸಾರಲು ಒಂದನೇ ಶತಮಾನದಷ್ಟು ಅನುಕೂಲವಾದ ಸಮಯ ಬೇರೆ ಯಾವುದೂ ಇರಲಿಲ್ಲ. ಸುವಾರ್ತೆ ಸಾರಲು ದೇವರೇ ದಾರಿಯನ್ನು ಸುಲಭಮಾಡಿದನು ಎಂದು ತದನಂತರ ಅನೇಕ ಕ್ರೈಸ್ತರಿಗೆ ಅನಿಸಿತು.’

6. (ಎ) ಈ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ? (ಬಿ) ಮುಂದಿನ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

6 ಒಂದನೇ ಶತಮಾನದಲ್ಲಿ ಸುವಾರ್ತೆ ಸಾರಲು ಕ್ರೈಸ್ತರಿಗೆ ಸುಲಭವಾಗುವಂತೆ ಯೆಹೋವ ದೇವರು ಆಗಿನ ಲೋಕದ ಪರಿಸ್ಥಿತಿಗಳನ್ನು ಬದಲಿಸಿದನಾ? ಬೈಬಲಿನಲ್ಲಿ ಅದರ ಬಗ್ಗೆ ಏನೂ ತಿಳಿಸಿಲ್ಲ. ಆದರೆ ಒಂದು ಮಾತ್ರ ನಿಜ, ಸುವಾರ್ತೆ ಎಲ್ಲ ಜನರಿಗೆ ತಿಳಿಯಬೇಕು ಎನ್ನುವುದು ಯೆಹೋವನ ಬಯಕೆಯಾಗಿತ್ತು ಮತ್ತು ಸೈತಾನನು ಏನೇ ಮಾಡಿದರೂ ಆ ಕೆಲಸವನ್ನು ನಿಲ್ಲಿಸಲು ಆಗಲಿಲ್ಲ. ಆ ಸಮಯದಲ್ಲಿ ಎಲ್ಲ ಕಡೆ ಸುವಾರ್ತೆ ಸಾರಲು ಯಾವೆಲ್ಲ ವಿಷಯಗಳು ನೆರವಾದವು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. ಮುಂದಿನ ಲೇಖನದಲ್ಲಿ, ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಇಂದು ಯಾವ ವಿಷಯಗಳು ನೆರವಾಗುತ್ತಿವೆ ಎನ್ನುವುದನ್ನು ನೋಡೋಣ.

ಶಾಂತಿಯುತ ಪರಿಸ್ಥಿತಿ

7. (ಎ) ಒಂದನೇ ಶತಮಾನದಲ್ಲಿ ರೋಮ್‍ನ ಪರಿಸ್ಥಿತಿ ಹೇಗಿತ್ತು? (ಬಿ) ಆ ಸಮಯದ ವಿಶೇಷತೆ ಏನು?

7 ಒಂದನೇ ಶತಮಾನದಲ್ಲಿ ರೋಮ್‌ ಸಾಮ್ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಶಾಂತಿಯ ವಾತಾವರಣ ಇತ್ತು. ಆ ಸಮಯದಲ್ಲಿ ಯಾರಾದರೂ ದಂಗೆಯೆದ್ದರೆ ರೋಮ್‌ ಸರಕಾರವು ಕೂಡಲೆ ಅದನ್ನು ತಡೆಯುತ್ತಿತ್ತು. ಇದು ಯೇಸುವಿನ ಶಿಷ್ಯರಿಗೆ ಸುವಾರ್ತೆ ಸಾರಲು ಸುಲಭಮಾಡಿತು. ಆಗ ಯುದ್ಧಗಳೇ ನಡೆಯಲಿಲ್ಲ ಎಂದಲ್ಲ. ಯೇಸು ಮುಂಚೆನೇ ತಿಳಿಸಿದಂತೆ ಯುದ್ಧಗಳು ನಡೆದವು. (ಮತ್ತಾ. 24:6) ಉದಾಹರಣೆಗೆ, ರೋಮನ್ನರು ಯೆರೂಸಲೇಮನ್ನು ಕ್ರಿಸ್ತ ಶಕ 70ರಲ್ಲಿ ನಾಶಮಾಡಿದರು. ಸಾಮ್ರಾಜ್ಯದ ಗಡಿಗಳಲ್ಲಿ ಚಿಕ್ಕಪುಟ್ಟ ಯುದ್ಧಗಳು ಆದವು. ಆದರೆ ಸಾಮ್ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಶಾಂತಿಯಿತ್ತು. ಇದರಿಂದ ಶಿಷ್ಯರು ಬೇರೆಬೇರೆ ಸ್ಥಳಗಳಿಗೆ ಪ್ರಯಾಣ ಮಾಡಿ ಸಾರಲು ಸಾಧ್ಯವಾಯಿತು. ರೋಮ್‍ನಲ್ಲಿ ಸುಮಾರು 200 ವರ್ಷಗಳ ವರೆಗೆ ಶಾಂತಿಯ ವಾತಾವರಣ ಇತ್ತು. ಈ ಸಮಯವನ್ನು ‘ರೋಮ್‍ನ ಶಾಂತಿಯ ಯುಗ’ ಎಂದು ಕರೆಯಲಾಯಿತು. ಮಾನವ ಇತಿಹಾಸದಲ್ಲೇ ಇಷ್ಟು ದೀರ್ಘಕಾಲದ ವರೆಗೆ ಶಾಂತಿ ಇದ್ದದ್ದು ಆಗ ಮಾತ್ರ ಎಂದು ಒಂದು ಪುಸ್ತಕ ಹೇಳುತ್ತದೆ.

8. ರೋಮ್‍ನ ಶಾಂತಿಯ ವಾತಾವರಣದಿಂದ ಶಿಷ್ಯರಿಗೆ ಹೇಗೆ ಪ್ರಯೋಜನ ಆಯಿತು?

8 ಮೂರನೇ ಶತಮಾನದಲ್ಲಿ ಇದ್ದ ವಿದ್ವಾಂಸ ಆರಿಜನ್‌ ಸಹ ಆ ಶಾಂತಿಯ ಯುಗದ ಕುರಿತು ಬರೆದಿದ್ದಾನೆ. ರೋಮನ್ನರು ಅನೇಕ ದೇಶಗಳ ಮೇಲೆ ಆಳ್ವಿಕೆ ನಡೆಸುತ್ತಿದ್ದರು, ಇದರಿಂದ ಆ ಎಲ್ಲ ದೇಶಗಳಿಗೆ ಹೋಗಲು ಮತ್ತು ಸುವಾರ್ತೆ ಸಾರಲು ಶಿಷ್ಯರಿಗೆ ಸುಲಭವಾಯಿತು. ಜನರಲ್ಲಿ ‘ಇದು ನಮ್ಮ ದೇಶ ಅದು ನಿಮ್ಮ ದೇಶ’ ಎಂಬ ಹೋರಾಟ ಜಗಳಗಳು ಇರಲಿಲ್ಲ. ಅವರು ತಮ್ಮತಮ್ಮ ಹಳ್ಳಿಗಳಲ್ಲಿ ನೆಮ್ಮದಿಯಿಂದ ಜೀವಿಸುತ್ತಿದ್ದರು. ಹಾಗಾಗಿ ಶಿಷ್ಯರು ಪ್ರೀತಿ ಮತ್ತು ಶಾಂತಿ ಬಗ್ಗೆ ಹೆಚ್ಚಿನ ಜನರಿಗೆ ಸಾರಲು ಅವಕಾಶ ಸಿಕ್ಕಿತು ಎಂದು ವಿದ್ವಾಂಸ ಆರಿಜನ್‌ ಹೇಳಿದನು. ಶಿಷ್ಯರಿಗೆ ಹಿಂಸೆ ವಿರೋಧಗಳು ಬಂದವಾದರೂ ಆಗ ಇದ್ದ ಶಾಂತಿಯ ಸಮಯವನ್ನು ಒಳ್ಳೆಯದಾಗಿ ಉಪಯೋಗಿಸಿದರು. ದೇವರ ರಾಜ್ಯದ ಕುರಿತು ಎಲ್ಲ ಕಡೆಗಳಲ್ಲಿ ಸಾರಿದರು.ರೋಮನ್ನರಿಗೆ 12:18-21 ಓದಿ.

ಸುಲಭ ಪ್ರಯಾಣ

9, 10. ಶಿಷ್ಯರು ಅನೇಕ ಸ್ಥಳಗಳಿಗೆ ಪ್ರಯಾಣ ಮಾಡಲು ಏಕೆ ಸಾಧ್ಯವಾಯಿತು?

9 ರೋಮನ್ನರು ತಮ್ಮ ಸಾಮ್ರಾಜ್ಯದಲ್ಲಿ ಅನೇಕ ರಸ್ತೆಗಳನ್ನು ನಿರ್ಮಿಸಿದರು. ಅವುಗಳ ಒಟ್ಟು ಉದ್ದ 80,000 ಕಿಲೋಮೀಟರ್‌ಗಿಂತಲೂ ಹೆಚ್ಚಾಗಿತ್ತು. ಇದರಿಂದ ರೋಮ್‌ ಸಾಮ್ರಾಜ್ಯದ ಹೆಚ್ಚಿನ ಸ್ಥಳಗಳಿಗೆ ಪ್ರಯಾಣ ಮಾಡಲು ಸುಲಭವಾಯಿತು. ಶತ್ರುಗಳು ಯಾವುದೇ ಪ್ರದೇಶವನ್ನು ಆಕ್ರಮಿಸುವುದಾದರೆ ರೋಮನ್‌ ಸೈನಿಕರು ಈ ರಸ್ತೆಗಳಲ್ಲಿ ಪ್ರಯಾಣಿಸಿ ಬೇಗನೆ ಅಲ್ಲಿಗೆ ಹೋಗಿ ಆ ಪ್ರದೇಶವನ್ನು ಸಂರಕ್ಷಿಸಲು ಮತ್ತು ಜನರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿತ್ತು. ಈ ರಸ್ತೆಗಳಿಂದಾಗಿ ಕ್ರೈಸ್ತರಿಗೆ ಅರಣ್ಯ, ಮರುಭೂಮಿ, ಪರ್ವತಗಳನ್ನು ದಾಟಿ ಅನೇಕ ಸ್ಥಳಗಳಿಗೆ ಹೋಗಿ ಸುವಾರ್ತೆ ಸಾರಲು ಆಯಿತು.

10 ರೋಮ್‌ ಸಾಮ್ರಾಜ್ಯದಲ್ಲಿ ಜಲಮಾರ್ಗದ ವ್ಯವಸ್ಥೆ ಸಹ ತುಂಬ ಚೆನ್ನಾಗಿತ್ತು. ಕಾಲುವೆ, ನದಿ ಮತ್ತು ಸಮುದ್ರ ಮಾರ್ಗಗಳ ಮೂಲಕ ಸಾಮ್ರಾಜ್ಯದಲ್ಲಿದ್ದ ನೂರಾರು ಬಂದರುಗಳಿಗೆ ಹೋಗಿ ಬರಲು ಆಗುತ್ತಿತ್ತು. 900ಕ್ಕಿಂತ ಹೆಚ್ಚು ಸಮುದ್ರ ಮಾರ್ಗಗಳು ಇದ್ದವು. ಹಾಗಾಗಿ ಕ್ರೈಸ್ತರಿಗೆ ಹಡಗಿನ ಮೂಲಕ ತುಂಬ ಸ್ಥಳಗಳಿಗೆ ಹೋಗಲು ಸುಲಭವಾಯಿತು. ಪಾಸ್‌ಪೋರ್ಟ್, ವೀಸಾ ಯಾವುದೂ ಬೇಕಿರಲಿಲ್ಲ. ದಾರಿಗಳಲ್ಲಿ ದರೋಡೆಕೋರರು ತುಂಬ ಕಡಿಮೆಯಿದ್ದರು ಯಾಕೆಂದರೆ ಸಿಕ್ಕಿಬಿದ್ದರೆ ರೋಮನ್ನರಿಂದ ಕ್ರೂರ ಶಿಕ್ಷೆ ಸಿಗುತ್ತಿತ್ತು. ಅಷ್ಟೇ ಅಲ್ಲದೆ ಸೇನಾ ಹಡಗುಗಳು ಸಮುದ್ರದಲ್ಲಿ ಸಂಚರಿಸುತ್ತಿದ್ದರಿಂದ ಜನರಿಗೆ ಕಡಲುಗಳ್ಳರ ಭಯವಿರಲಿಲ್ಲ. ಪೌಲ ಸಹ ಸಮುದ್ರ ಪ್ರಯಾಣ ಮಾಡಿದ್ದರ ಕುರಿತು ಬೈಬಲಿನಲ್ಲಿದೆ. ಕೆಲವು ಸಾರಿ ಅವನು ಪ್ರಯಾಣಿಸುತ್ತಿದ್ದ ಹಡಗು ಒಡೆದುಹೋಯಿತು ಎಂದು ಬೈಬಲಿನಲ್ಲಿ ಹೇಳಿದೆ ಹೊರತು ಅವನಿದ್ದ ಹಡಗನ್ನು ಕಳ್ಳರು ಆಕ್ರಮಣಮಾಡಿದರು ಅಂತ ಹೇಳಿಲ್ಲ. ಹೀಗೆ ರೋಮ್‍ನ ರಸ್ತೆಗಳಲ್ಲೂ ಸಮುದ್ರ ಮಾರ್ಗಗಳಲ್ಲೂ ಪ್ರಯಾಣಿಸುವುದು ಸುರಕ್ಷಿತವಾಗಿತ್ತು.—2 ಕೊರಿಂ. 11:25, 26.

ಗ್ರೀಕ್‌ ಭಾಷೆ

ಕೋಡೆಕ್ಸ್‌ನಲ್ಲಿ ವಚನಗಳನ್ನು ಹುಡುಕುವುದು ಸುಲಭ (ಪ್ಯಾರ 12 ನೋಡಿ)

11. ಶಿಷ್ಯರು ಗ್ರೀಕ್‌ ಭಾಷೆಯನ್ನು ಯಾಕೆ ಬಳಸುತ್ತಿದ್ದರು?

11 ರೋಮನ್ನರು ಆಳುತ್ತಿದ್ದ ಹೆಚ್ಚಿನ ಪ್ರದೇಶಗಳು ಹಿಂದೆ ಗ್ರೀಸ್‍ನ ಚಕ್ರವರ್ತಿ ಮಹಾ ಅಲೆಗ್ಸಾಂಡರನ ಆಳ್ವಿಕೆಯ ಕೆಳಗಿದ್ದವು. ಹಾಗಾಗಿ ರೋಮ್‍ನ ಹೆಚ್ಚಿನ ಪ್ರದೇಶಗಳಲ್ಲಿ ಕೊಯಿನೆ ಗ್ರೀಕ್‌ ಭಾಷೆಯಲ್ಲಿ ಮಾತಾಡುವುದು ಸಾಮಾನ್ಯವಾಗಿತ್ತು. ಶಿಷ್ಯರಿಗೆ ಸಹ ಈ ಭಾಷೆ ಗೊತ್ತಿದ್ದರಿಂದ ಆದಷ್ಟು ಹೆಚ್ಚು ಜನರಿಗೆ ಸುವಾರ್ತೆ ಸಾರಲು ಅವರಿಗಾಯಿತು. ಅಷ್ಟೇ ಅಲ್ಲದೆ ಸೆಪ್ಟೂಅಜಂಟ್‌ ಬೈಬಲ್‌ ಸಹ ಲಭ್ಯವಿತ್ತು. ಇದು ಈಜಿಪ್ಟಿನಲ್ಲಿದ್ದ ಯೆಹೂದಿಗಳು ಗ್ರೀಕ್‌ ಭಾಷೆಗೆ ಭಾಷಾಂತರಿಸಿದ ಹೀಬ್ರು ಶಾಸ್ತ್ರಗ್ರಂಥವಾಗಿತ್ತು. ಶಿಷ್ಯರು ಸುವಾರ್ತೆ ಸಾರುವಾಗ ಈ ಭಾಷಾಂತರದಿಂದಲೇ ಜನರಿಗೆ ಓದಿ ಹೇಳಿದರು. ಬೈಬಲಿನ ಇತರ ಪುಸ್ತಕಗಳನ್ನು ಬರೆಯಲು ಸಹ ಗ್ರೀಕ್‌ ಭಾಷೆಯನ್ನೇ ಬರಹಗಾರರು ಬಳಸಿದರು. ಗ್ರೀಕ್‌ ಭಾಷೆಯಲ್ಲಿ ತುಂಬ ಪದಗಳಿದ್ದವು. ಹಾಗಾಗಿ ಬೈಬಲಿನಲ್ಲಿದ್ದ ಸತ್ಯಗಳನ್ನು ವಿವರಿಸಲು ಇದೊಂದು ಒಳ್ಳೇ ಭಾಷೆಯಾಗಿತ್ತು. ಮಾತ್ರವಲ್ಲ ಸಭೆಗಳಲ್ಲಿ ಎಲ್ಲರೂ ಒಬ್ಬರೊಂದಿಗೊಬ್ಬರು ಚೆನ್ನಾಗಿ ಮಾತಾಡಲು ಮತ್ತು ಐಕ್ಯದಿಂದಿರಲು ಕೂಡ ಗ್ರೀಕ್‌ ಭಾಷೆ ನೆರವಾಯಿತು.

12. (ಎ) ಕೋಡೆಕ್ಸ್‌ ಅಂದರೇನು? (ಬಿ) ಕೋಡೆಕ್ಸ್‌ ಮತ್ತು ಸುರುಳಿಗಳಲ್ಲಿ ಯಾವುದನ್ನು ಬಳಸುವುದು ಸುಲಭ? ವಿವರಿಸಿ. (ಸಿ) ಕ್ರೈಸ್ತರು ಪುಸ್ತಕಗಳನ್ನು ಬಳಸಲು ಯಾವಾಗ ಶುರುಮಾಡಿದರು?

12 ಒಂದನೇ ಶತಮಾನದಲ್ಲಿ ಬೈಬಲನ್ನು ಕಲಿಸುವುದು ತುಂಬ ಸುಲಭ ಆಗಿತ್ತಾ? ಇಲ್ಲ. ಬೈಬಲ್‌ ಮೊದಲು ಸುರುಳಿಗಳ ರೂಪದಲ್ಲಿತ್ತು. ಅವನ್ನು ತೆಗೆದುಕೊಂಡು ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಉಪಯೋಗಿಸುವುದೂ ಕಷ್ಟ. ಒಂದು ವಚನವನ್ನು ಮನೆಯವರಿಗೆ ಓದಿ ಹೇಳಬೇಕಾದರೆ ಸುರುಳಿಯನ್ನು ಪೂರ್ತಿ ಬಿಚ್ಚಬೇಕಿತ್ತು, ಮತ್ತೆ ಅದನ್ನು ಸುತ್ತಿಡಬೇಕಿತ್ತು. ಸಾಮಾನ್ಯವಾಗಿ ಸುರುಳಿಯ ಒಂದು ಬದಿ ಮಾತ್ರ ಬರಹ ಇರುತ್ತಿತ್ತು. ಒಂದು ಇಡೀ ಸುರುಳಿಯಲ್ಲಿ ಕೇವಲ ಮತ್ತಾಯ ಸುವಾರ್ತೆಯೊಂದೇ ಇತ್ತು. ಅನಂತರ ಕೋಡೆಕ್ಸ್‌ ಬಳಕೆಗೆ ಬಂತು. ಮೊತ್ತಮೊದಲು ತಯಾರಿಸಲಾದ ಪುಸ್ತಕಗಳನ್ನು ಕೋಡೆಕ್ಸ್‌ ಎನ್ನುತ್ತಾರೆ. ಇವು ಬಂದ ಮೇಲೆ ಪುಟಗಳನ್ನು ತಿರುಗಿಸಿ ವಚನಗಳನ್ನು ಹುಡುಕಲು ಸುಲಭವಾಯಿತು. ಕ್ರೈಸ್ತರು ಬೇಗನೆ ಪುಸ್ತಕಗಳನ್ನು ಬಳಸಲು ಶುರುಮಾಡಿದರು ಮತ್ತು ಕ್ರಿಸ್ತ ಶಕ 100ರಷ್ಟಕ್ಕೆ ಕ್ರೈಸ್ತರಲ್ಲಿ ಹೆಚ್ಚಿನವರು ಪುಸ್ತಕಗಳನ್ನು ಉಪಯೋಗಿಸುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.

ರೋಮನ್‌ ನಿಯಮಗಳು

13, 14. (ಎ) ರೋಮ್‍ನ ಪ್ರಜೆಯಾಗಿದ್ದರಿಂದ ಪೌಲನು ಯಾವ ಪ್ರಯೋಜನ ಪಡೆದನು? (ಬಿ) ರೋಮನ್‌ ನಿಯಮಗಳಿಂದ ಕ್ರೈಸ್ತರು ಹೇಗೆ ಪ್ರಯೋಜನ ಪಡಕೊಂಡರು?

13 ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ರೋಮನ್‌ ನಿಯಮಗಳಿಂದ ಪ್ರಯೋಜನ ಪಡೆದರು. ಅವರಲ್ಲಿ ಪೌಲ ಒಬ್ಬ. ರೋಮ್‍ನ ಪ್ರಜೆ ಆಗಿದ್ದರಿಂದ ಅವನಿಗೆ ಅನೇಕ ಬಾರಿ ರೋಮ್‍ನ ನಿಯಮಗಳಿಂದಾಗಿ ಸಂರಕ್ಷಣೆ ಸಿಕ್ಕಿತು. ಉದಾಹರಣೆಗೆ, ಯೆರೂಸಲೇಮಿನಲ್ಲಿ ಪೌಲನನ್ನು ಬಂಧಿಸಿದ್ದ ರೋಮನ್‌ ಸೈನಿಕರು ಅವನನ್ನು ಕೊರಡೆಗಳಿಂದ ಹೊಡೆಯಲಿಕ್ಕಿದ್ದಾಗ ಅವನು ತಾನೊಬ್ಬ ರೋಮನ್‌ ಪ್ರಜೆ ಎಂದು ಹೇಳಿದನು. ಅಲ್ಲದೆ ರೋಮನ್‌ ಪ್ರಜೆಯನ್ನು ವಿಚಾರಣೆ ಮಾಡದೆ ಶಿಕ್ಷಿಸುವುದು ಕಾನೂನುಬದ್ಧವಲ್ಲ ಎಂದು ಶತಾಧಿಪತಿಗೆ ನೆನಪುಹುಟ್ಟಿಸಿದನು. ಆಗ “[ಪೌಲನನ್ನು] ಹಿಂಸಿಸಿ ವಿಚಾರಿಸಲಿಕ್ಕಿದ್ದ ಪುರುಷರು ತಕ್ಷಣವೇ ಅವನನ್ನು ಬಿಟ್ಟರು; ಅವನು ರೋಮ್‌ ರಾಜ್ಯದ ಪ್ರಜೆಯಾಗಿದ್ದಾನೆ ಮತ್ತು ತಾನು ಅವನನ್ನು ಬಂಧಿಸಿದ್ದೇನೆ ಎಂಬುದನ್ನು ಖಾತ್ರಿಪಡಿಸಿಕೊಂಡ ಸಹಸ್ರಾಧಿಪತಿಯು ಭಯಗೊಂಡನು.”—ಅ. ಕಾ. 22:25-29.

14 ಪೌಲನು ಫಿಲಿಪ್ಪಿಯ ಸೆರೆಯಲ್ಲಿದ್ದಾಗ ಅಲ್ಲಿನ ಅಧಿಕಾರಿಗಳಿಗೆ ಅವನು ರೋಮನ್‌ ಪ್ರಜೆ ಎಂದು ಗೊತ್ತಾದ ತಕ್ಷಣ ಅವರು ಅವನೊಂದಿಗೆ ಒಳ್ಳೇದಾಗಿ ವರ್ತಿಸಿದರು. (ಅ. ಕಾ. 16:35-40) ಕ್ರೈಸ್ತರನ್ನು ಎಫೆಸದಲ್ಲಿ ಒಂದು ವಿರೋಧಿ ಗುಂಪು ಹೊಡೆಯಲು ಬಂದಾಗ ಒಬ್ಬ ರೋಮನ್‌ ಅಧಿಕಾರಿಯು ವಿರೋಧಿಗಳನ್ನು ತಡೆದು ನಿಯಮವನ್ನು ಮುರಿಯದಂತೆ ಎಚ್ಚರಿಸಿದನು. (ಅ. ಕಾ. 19:35-41) ಅನಂತರ ಪೌಲನು ಕೈಸರೈಯದಲ್ಲಿದ್ದಾಗ ರೋಮನ್‌ ಪ್ರಜೆಯಾಗಿ ತನಗಿದ್ದ ಹಕ್ಕನ್ನು ಬಳಸಿಕೊಂಡನು. ರೋಮ್‍ನ ಸಾಮ್ರಾಟನ ಮುಂದೆ ತನ್ನನ್ನು ಹಾಜರುಪಡಿಸುವಂತೆ ವಿನಂತಿಸಿದನು. ಅಲ್ಲಿ ಅವನು ಸುವಾರ್ತೆಯ ಕುರಿತು ತನಗಿದ್ದ ನಂಬಿಕೆಯನ್ನು ಧೈರ್ಯದಿಂದ ಹೇಳಲು ಆಯಿತು. (ಅ. ಕಾ. 25:8-12) ಹೀಗೆ ಕ್ರೈಸ್ತರು ಸಾರಲು ತಮಗಿರುವ ಹಕ್ಕನ್ನು “ಸಮರ್ಥಿಸಿ ಅದನ್ನು ಕಾನೂನುಬದ್ಧವಾಗಿ” ಧೃಢಪಡಿಸಲು ಸಾಧ್ಯವಾಯಿತು.—ಫಿಲಿ. 1:7.

ಬೇರೆ ಬೇರೆ ಕಡೆ ಹರಡಿದ್ದ ಯೆಹೂದ್ಯರು

15. ಒಂದನೇ ಶತಮಾನದಲ್ಲಿ ಯೆಹೂದ್ಯರು ಎಲ್ಲೆಲ್ಲ ಜೀವಿಸುತ್ತಿದ್ದರು?

15 ಕ್ರೈಸ್ತರು ಭೂಮಿಯಲ್ಲೆಲ್ಲ ಸುವಾರ್ತೆ ಸಾರಲು ಸಹಾಯಮಾಡಿದ ಇನ್ನೊಂದು ವಿಷಯ ಯೆಹೂದ್ಯರು ಬೇರೆ ಬೇರೆ ದೇಶಗಳಿಗೆ ಚದರಿಹೋದದ್ದು. ಹೀಗೆ ಚದರಿಹೋಗಲು ಕಾರಣವೇನು? ನೂರಾರು ವರ್ಷಗಳ ಹಿಂದೆ ಅಶ್ಶೂರ್ಯರು, ನಂತರ ಬಾಬೆಲಿನವರು ಯೆಹೂದ್ಯರನ್ನು ಸೆರೆವಾಸಿಗಳಾಗಿ ತೆಗೆದುಕೊಂಡು ಹೋಗಿದ್ದರು. ಹೀಗೆ ಯೆಹೂದ್ಯರು ಆ ದೇಶಗಳಲ್ಲಿ ವಾಸಿಸತೊಡಗಿದರು. ಅನಂತರ ಪಾರಸಿಯರು ಬಾಬೆಲನ್ನು ಆಳುತ್ತಿದ್ದಾಗ ಪಾರಸಿಯ ಸಾಮ್ರಾಜ್ಯದಲ್ಲೆಲ್ಲ ಯೆಹೂದ್ಯರು ಹರಡಿದರು. (ಎಸ್ತೇ. 9:30) ಒಂದನೇ ಶತಮಾನದಷ್ಟಕ್ಕೆ ಅಂದರೆ ಯೇಸು ಭೂಮಿಯಲ್ಲಿದ್ದ ಸಮಯದಲ್ಲಿ ಯೆಹೂದ್ಯರು ರೋಮನ್‌ ಸಾಮ್ರಾಜ್ಯದಲ್ಲೆಲ್ಲ ಇದ್ದರು. ಅವರು ಈಜಿಪ್ಟ್‌, ಉತ್ತರ ಆಫ್ರಿಕದ ಇತರ ಭಾಗಗಳಲ್ಲಿ, ಗ್ರೀಸ್‌, ಏಷ್ಯಾ ಮೈನರ್‌ (ಟರ್ಕಿ), ಮೆಸಪಟೇಮ್ಯದಲ್ಲಿ (ಇರಾಕ್‌) ಜೀವಿಸುತ್ತಿದ್ದರು. ರೋಮನ್‌ ಸಾಮ್ರಾಜ್ಯದಲ್ಲಿದ್ದ 6 ಕೋಟಿ ಜನರಲ್ಲಿ 40 ಲಕ್ಷಕ್ಕಿಂತ ಹೆಚ್ಚು ಯೆಹೂದ್ಯರಿದ್ದರು. ಅವರ ವಿಶೇಷತೆ ಏನೆಂದರೆ ಅವರು ಎಲ್ಲೇ ಜೀವಿಸುತ್ತಿದ್ದರೂ ತಮ್ಮ ಧರ್ಮವನ್ನು ನಿಷ್ಠೆಯಿಂದ ಪಾಲಿಸುತ್ತಿದ್ದರು.—ಮತ್ತಾ. 23:15.

16, 17. (ಎ) ಯೆಹೂದ್ಯರು ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದರಿಂದ ಯೆಹೂದ್ಯರಲ್ಲದವರಿಗೆ ಯಾವ ಪ್ರಯೋಜನವಾಯಿತು? (ಬಿ) ಯಾವ ವಿಷಯಗಳಲ್ಲಿ ಕ್ರೈಸ್ತರು ಯೆಹೂದ್ಯರಂತೆಯೇ ಮಾಡಿದರು?

16 ಯೆಹೂದ್ಯರು ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದರಿಂದ ಅಲ್ಲಿನ ಹೆಚ್ಚಿನ ಜನರಿಗೆ ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ವಿಷಯ ಮತ್ತು ಯೆಹೂದ್ಯರ ನಂಬಿಕೆಗಳ ಪರಿಚಯವಿತ್ತು. ಸತ್ಯದೇವರು ಒಬ್ಬನೇ, ಆ ದೇವರನ್ನು ಆರಾಧಿಸುವವರು ಆತನ ನಿಯಮಗಳಂತೆ ನಡೆದುಕೊಳ್ಳಬೇಕು, ಹೀಬ್ರು ಶಾಸ್ತ್ರಗ್ರಂಥ ದೇವರು ಕೊಟ್ಟದ್ದಾಗಿದೆ, ಅದರಲ್ಲಿ ಮೆಸ್ಸೀಯನ ಬಗ್ಗೆ ತುಂಬ ಪ್ರವಾದನೆಗಳಿವೆ ಎಂಬೆಲ್ಲ ವಿಷಯಗಳು ಜನರಿಗೆ ಗೊತ್ತಿದ್ದವು. (ಲೂಕ 24:44) ಹಾಗಾಗಿ ಕ್ರೈಸ್ತರು ಸುವಾರ್ತೆ ಸಾರಿದಾಗ ಅವರು ಸಾರುತ್ತಿದ್ದ ವಿಷಯಗಳಲ್ಲಿ ಕೆಲವು ವಿಷಯಗಳು ಯೆಹೂದ್ಯರಿಗೂ ಯೆಹೂದ್ಯರಲ್ಲದ ಜನರಿಗೂ ಈಗಾಗಲೇ ತಿಳಿದಿದ್ದವು. ಇದರಿಂದ ಕ್ರೈಸ್ತರಿಗೆ ಸುವಾರ್ತೆ ಸಾರಲು ಸುಲಭವಾಯಿತು. ಪೌಲನು ಸುವಾರ್ತೆಯಲ್ಲಿ ಆಸಕ್ತಿಯಿರುವ ಜನರಿಗಾಗಿ ಹುಡುಕಿದನು. ಹಾಗಾಗಿ ಅವನು ಬೇರೆ ಬೇರೆ ಸ್ಥಳಗಳಿಗೆ ಹೋದಾಗ ಅಲ್ಲಿನ ಯೆಹೂದಿ ಸಭಾಮಂದಿರಗಳಿಗೆ ಹೋಗಿ ಅಲ್ಲಿದ್ದ ಜನರೊಂದಿಗೆ ಶಾಸ್ತ್ರಗ್ರಂಥದಿಂದ ಚರ್ಚೆ ಮಾಡುತ್ತಿದ್ದನು.—ಅಪೊಸ್ತಲರ ಕಾರ್ಯಗಳು 17:1, 2 ಓದಿ.

17 ಯೆಹೂದ್ಯರು ದೇವರನ್ನು ಆರಾಧಿಸಲಿಕ್ಕಾಗಿ ಸಭಾಮಂದಿರಗಳಲ್ಲಿ ಅಥವಾ ಹೊರಗೆ ಯಾವುದಾದರೂ ಜಾಗದಲ್ಲಿ ಒಟ್ಟಾಗಿ ಕೂಡಿಬರುತ್ತಿದ್ದರು. ಅಲ್ಲಿ ಗೀತೆಗಳನ್ನು ಹಾಡಿ, ಪ್ರಾರ್ಥನೆ ಮಾಡಿ ಶಾಸ್ತ್ರಗ್ರಂಥದಲ್ಲಿದ್ದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅದೇ ರೀತಿ ಕ್ರೈಸ್ತರೂ ಮಾಡಿದರು. ಇಂದಿರುವ ಕ್ರೈಸ್ತ ಸಭೆಗಳಲ್ಲಿ ಸಹ ಹೀಗೆಯೇ ನಡೆಯುತ್ತದೆ.

ಯೆಹೋವನ ಸಹಾಯ

18, 19. (ಎ) ಒಂದನೇ ಶತಮಾನದಲ್ಲಿದ್ದ ಪರಿಸ್ಥಿತಿಯು ಕ್ರೈಸ್ತರಿಗೆ ಏನು ಮಾಡಲು ನೆರವಾಯಿತು? (ಬಿ) ಈ ಲೇಖನವನ್ನು ಅಧ್ಯಯನ ಮಾಡಿದ ನಂತರ ಯೆಹೋವ ದೇವರ ಬಗ್ಗೆ ನಿಮಗೆ ಹೇಗನಿಸುತ್ತಿದೆ?

18 ಒಂದನೇ ಶತಮಾನವು ಇತಿಹಾಸದಲ್ಲೇ ಒಂದು ವಿಶೇಷ ಸಮಯವಾಗಿತ್ತು. ಆ ಸಮಯದಲ್ಲಿ ರೋಮನ್‌ ಸಾಮ್ರಾಜ್ಯದಲ್ಲೆಲ್ಲ ಶಾಂತಿಯಿತ್ತು. ಹೆಚ್ಚಿನವರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಆಗಿದ್ದ ಕಾನೂನಿನ ಕೆಳಗೆ ಜನರು ಸುರಕ್ಷಿತರಾಗಿದ್ದರು. ಯಾವುದೇ ತೊಂದರೆಗಳಿಲ್ಲದೆ ಪ್ರಯಾಣ ಮಾಡಬಹುದಿತ್ತು. ಯೆಹೂದ್ಯರು ಎಲ್ಲ ಕಡೆ ಚದರಿದ್ದರಿಂದ ಬೇರೆ ದೇಶಗಳ ಜನರಿಗೆ ಯೆಹೂದ್ಯರ ಬಗ್ಗೆ, ಹೀಬ್ರು ಶಾಸ್ತ್ರಗ್ರಂಥದಲ್ಲಿದ್ದ ವಿಷಯಗಳ ಬಗ್ಗೆ ಗೊತ್ತಿತ್ತು. ಈ ಎಲ್ಲ ಸಂಗತಿಗಳಿಂದಾಗಿ ದೇವರು ಕೊಟ್ಟ ಕೆಲಸವನ್ನು ಮಾಡುತ್ತಾ ಇರಲು ಕ್ರೈಸ್ತರಿಗೆ ಸುಲಭವಾಯಿತು.

19 ಯೇಸು ಭೂಮಿಗೆ ಬರುವುದಕ್ಕಿಂತ ಸುಮಾರು 400 ವರ್ಷಗಳ ಮೊದಲು ಗ್ರೀಕ್‌ ತತ್ವಜ್ಞಾನಿ ಪ್ಲೇಟೋ ಹೀಗೆ ಹೇಳಿದ್ದನು: ‘ಸೃಷ್ಟಿಕರ್ತನ ಕುರಿತು ತಿಳಿದುಕೊಳ್ಳುವುದು ತುಂಬ ಕಷ್ಟ. ಒಂದುವೇಳೆ ತಿಳಿದುಕೊಂಡರೂ ಅದನ್ನು ಪ್ರಪಂಚದಲ್ಲಿರುವ ಎಲ್ಲರಿಗೆ ತಿಳಿಸುವುದು ಅಸಾಧ್ಯವಾದ ವಿಷಯ.’ ಆದರೆ ಯೇಸು ಹೇಳಿದನು: “ಮನುಷ್ಯರಿಗೆ ಅಸಾಧ್ಯವಾಗಿರುವ ವಿಷಯಗಳು ದೇವರಿಗೆ ಸಾಧ್ಯ.” (ಲೂಕ 18:27) ನಿಜ, ಸುವಾರ್ತೆ ಸಾರುವ ಕೆಲಸ ನಡೆಯುತ್ತಿರುವುದೇ ದೇವರ ಸಹಾಯದಿಂದ. ‘ಎಲ್ಲ ಜನಾಂಗಗಳ ಜನರು’ ಸುವಾರ್ತೆಯನ್ನು ಕೇಳಿಸಿಕೊಂಡು ತನ್ನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದು ಆತನ ಇಚ್ಛೆ. (ಮತ್ತಾ. 28:19) ಒಂದನೇ ಶತಮಾನದಲ್ಲಿ ಮಾತ್ರವಲ್ಲ, ಇಂದು ಸಹ ಸುವಾರ್ತೆ ಸಾರುವ ಕೆಲಸ ನಡೆಯುತ್ತಿದೆ. ಆ ಕೆಲಸ ಮುಂದೆ ಸಾಗಲು ಇಂದು ಯಾವ ವಿಷಯಗಳು ನೆರವಾಗುತ್ತಿವೆ ಎಂದು ಮುಂದಿನ ಲೇಖನದಲ್ಲಿ ನೋಡೋಣ.