ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಕೊಡುವ ಉತ್ತರ

ಬೈಬಲ್‌ ಕೊಡುವ ಉತ್ತರ

ಯೇಸುವಿನ ಮರಣವನ್ನು ನಾವೇಕೆ ನೆನಪಿಸಿಕೊಳ್ಳಬೇಕು?

ಯೇಸುವಿನ ತ್ಯಾಗದಿಂದ ನಮಗೆ ಎಂಥ ಜೀವನ ಸಿಗಲಿದೆ?—ಯೆಶಾಯ 25:8; 33:24.

ಇತಿಹಾಸದಲ್ಲೇ ಅತಿ ಪ್ರಾಮುಖ್ಯವಾದ ಘಟನೆ ಯೇಸುವಿನ ಮರಣ. ಕಾರಣ ಆತನ ಮರಣದಿಂದ ಮನುಷ್ಯರಿಗಾಗಿರುವ ದೇವರ ಉದ್ದೇಶ ನೆರವೇರುತ್ತದೆ. ದೇವರು ಮನುಷ್ಯರನ್ನು ಸೃಷ್ಟಿ ಮಾಡಿದಾಗ ಕೆಟ್ಟದ್ದನ್ನು ಮಾಡುವ ಸ್ವಭಾವ ಅವರಲ್ಲಿ ಇರಲಿಲ್ಲ. ಅವರು ಸಾವು-ನೋವು, ಕಾಯಿಲೆಗಳು ಯಾವುದೂ ಇಲ್ಲದೆ ನೆಮ್ಮದಿಯ ಜೀವನ ಸಾಗಿಸಬೇಕೆನ್ನುವುದು ದೇವರ ಉದ್ದೇಶವಾಗಿತ್ತು. (ಆದಿಕಾಂಡ 1:31) ಆದರೆ ಮೊದಲ ಮನುಷ್ಯನಾದ ಆದಾಮನ ಪಾಪದಿಂದ ನಾವೆಲ್ಲರೂ ಪಾಪಿಗಳಾಗಿದ್ದೇವೆ ಮತ್ತು ಸಾಯುತ್ತಿದ್ದೇವೆ. ಆ ಪಾಪ ಮತ್ತು ಮರಣದಿಂದ ನಮ್ಮನ್ನು ರಕ್ಷಿಸಲು ಯೇಸು ತನ್ನ ಪ್ರಾಣವನ್ನೇ ತ್ಯಾಗ ಮಾಡಿದನು.—ಮತ್ತಾಯ 20:28; ರೋಮನ್ನರಿಗೆ 6:23 ಓದಿ.

ದೇವರಿಗೆ ನಮ್ಮ ಮೇಲೆ ತುಂಬ ಪ್ರೀತಿ. ಹಾಗಾಗಿ ತನ್ನ ಮಗನಾದ ಯೇಸುವನ್ನು ಭೂಮಿಗೆ ಕಳುಹಿಸಿದನು. ನಮಗೋಸ್ಕರ ಯೇಸು ತನ್ನ ಪ್ರಾಣವನ್ನು ಕೊಡುವಂತೆ ಕೂಡ ಅನುಮತಿಸಿದನು. (1 ಯೋಹಾನ 4:9, 10) ತನ್ನನ್ನು ನೆನಪಿಸಿಕೊಳ್ಳಲು ಶಿಷ್ಯರು ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನು ಉಪಯೋಗಿಸಿ ಒಂದು ಸರಳ ಆಚರಣೆಯನ್ನು ಮಾಡಬೇಕೆಂದು ಯೇಸು ಹೇಳಿದನು. ಪ್ರತಿ ವರ್ಷ ಈ ಆಚರಣೆ ಮಾಡುವ ಮೂಲಕ ದೇವರು ಮತ್ತು ಆತನ ಮಗನಾದ ಕ್ರಿಸ್ತನು ತೋರಿಸಿದ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ.—ಲೂಕ 22:19, 20 ಓದಿ.

ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನು ಯಾರು ಸೇವಿಸಬೇಕು?

ಎಲ್ಲರೂ ಅಲ್ಲ. ಕಾರಣ, ಯೇಸು ಈ ಆಚರಣೆ ಆರಂಭಿಸಿದಾಗ ತನ್ನ ಶಿಷ್ಯರೊಂದಿಗೆ ಒಂದು ಒಪ್ಪಂದ ಅಥವಾ ಒಡಂಬಡಿಕೆಯನ್ನು ಮಾಡಿಕೊಂಡನು. (ಮತ್ತಾಯ 26:26-28) ಈ ಒಡಂಬಡಿಕೆಯಿಂದಾಗಿ ಆತನ ಶಿಷ್ಯರಿಗೆ ಮತ್ತು ಇತರ ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ಸ್ವರ್ಗದಲ್ಲಿ ರಾಜರು ಮತ್ತು ಯಾಜಕರಾಗಿ ಸೇವೆ ಮಾಡುವ ನಿರೀಕ್ಷೆ ಸಿಕ್ಕಿತು. ಲಕ್ಷಾಂತರ ಜನ ಈ ಆಚರಣೆಗೆ ಹಾಜರಾಗುತ್ತಾರಾದರೂ ಕೇವಲ ಸ್ವಲ್ಪ ಜನ ಅಂದರೆ ಯೇಸು ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೋ ಅವರು ಮಾತ್ರ ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನು ಸೇವಿಸುತ್ತಾರೆ.—ಪ್ರಕಟನೆ 5:10 ಓದಿ.

ಕಳೆದ 2,000 ವರ್ಷಗಳಿಂದ ಯೆಹೋವ ದೇವರು, ರಾಜರಾಗಿ ಸೇವೆ ಮಾಡಲು ಅರ್ಹರಾಗಿರುವವರನ್ನು ಆಯ್ಕೆ ಮಾಡುತ್ತಿದ್ದಾನೆ. (ಲೂಕ 12:32) ಆದರೆ ಇವರ ಸಂಖ್ಯೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವವರ ಸಂಖ್ಯೆಗೆ ಹೋಲಿಸುವಾಗ ತುಂಬ ಚಿಕ್ಕದು.—ಪ್ರಕಟನೆ 7:4, 9, 17 ಓದಿ. (w15-E 03/01)