ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಯೋಚನೆ, ನಡತೆಯನ್ನು ಶುದ್ಧವಾಗಿಡಲು ಸಾಧ್ಯ!

ನಮ್ಮ ಯೋಚನೆ, ನಡತೆಯನ್ನು ಶುದ್ಧವಾಗಿಡಲು ಸಾಧ್ಯ!

“ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; . . . ನಿಮ್ಮ ಹೃದಯಗಳನ್ನು ಶುದ್ಧಮಾಡಿಕೊಳ್ಳಿರಿ.”—ಯಾಕೋ. 4:8.

1. ಅನೇಕ ಜನರು ಯಾವ ವಿಷಯಗಳನ್ನು ಮಾಮೂಲೆಂದು ನೆನಸುತ್ತಾರೆ?

ನಾವಿಂದು ಜೀವಿಸುತ್ತಿರುವ ಲೋಕವು ಅನೈತಿಕತೆಯಿಂದ ತುಂಬಿಕೊಂಡಿದೆ. ಉದಾಹರಣೆಗೆ, ಸಲಿಂಗಕಾಮ, ಬಾಳಸಂಗಾತಿ ಅಲ್ಲದ ವ್ಯಕ್ತಿಯೊಟ್ಟಿಗೆ ಲೈಂಗಿಕ ಸಂಬಂಧ ಇವೆಲ್ಲ ತಪ್ಪಲ್ಲ, ಮಾಮೂಲು ಎಂದು ಅನೇಕರು ನೆನಸುತ್ತಾರೆ. ಸಿನೆಮಾಗಳು, ಪುಸ್ತಕಗಳು, ಹಾಡುಗಳು, ಜಾಹೀರಾತುಗಳು ಇವೆಲ್ಲದ್ದರಲ್ಲಿ ಲೈಂಗಿಕ ಅನೈತಿಕತೆ ತುಂಬಿ ತುಳುಕುತ್ತಿದೆ. (ಕೀರ್ತ. 12:7) ಆದರೆ ಯೆಹೋವನು ಮೆಚ್ಚುವ ರೀತಿಯಲ್ಲಿ ನಡೆಯಲು ಆತನೇ ನಮಗೆ ನೆರವು ಕೊಡಬಲ್ಲನು. ಹಾಗಾಗಿ ಈ ಅನೈತಿಕ ಲೋಕದಲ್ಲೂ ನಮ್ಮ ಯೋಚನೆಗಳನ್ನು, ನಡತೆಯನ್ನು ಶುದ್ಧವಾಗಿಡಲು ಸಾಧ್ಯವಿದೆ.1 ಥೆಸಲೊನೀಕ 4:3-5 ಓದಿ.

2, 3. (ಎ) ತಪ್ಪಾದ ಆಸೆಗಳನ್ನು ನಾವೇಕೆ ತಿರಸ್ಕರಿಸಬೇಕು? (ಬಿ) ಈ ಲೇಖನದಲ್ಲಿ ಏನು ಚರ್ಚಿಸುವೆವು?

2 ಯೆಹೋವನನ್ನು ಮೆಚ್ಚಿಸಬೇಕಾದರೆ ಆತನು ದ್ವೇಷಿಸುವ ಪ್ರತಿಯೊಂದನ್ನೂ ನಾವು ದ್ವೇಷಿಸಲೇಬೇಕು. ಆದರೆ ನಾವು ಅಪರಿಪೂರ್ಣರು ಆಗಿರುವುದರಿಂದ ಅನೈತಿಕತೆಯ ಕಡೆಗೆ ಆಕರ್ಷಿತರಾಗುವ ಸಾಧ್ಯತೆಯಿದೆ. ಗಾಳದಲ್ಲಿರುವ ಆಹಾರದ ಕಡೆಗೆ ಮೀನು ಹೇಗೆ ಆಕರ್ಷಿತವಾಗುತ್ತದೊ ಹಾಗೆ. ಅನೈತಿಕ ಯೋಚನೆಗಳು ನಮ್ಮ ಮನಸ್ಸಲ್ಲಿ ಚಿಗುರಿದ ಕೂಡಲೇ ಅವುಗಳನ್ನು ಕಿತ್ತುಹಾಕಬೇಕು. ಇಲ್ಲದಿದ್ದರೆ ಆ ಅನೈತಿಕ ಆಸೆ ಎಷ್ಟು ಬಲವಾಗುತ್ತದೆಂದರೆ ಪಾಪ ಮಾಡುವ ಅವಕಾಶ ಬಂದಾಗ ಅದನ್ನು ಮಾಡಿಯೇ ಬಿಡುತ್ತೇವೆ. ಬೈಬಲ್‌ ಹೇಳುವುದು ಅದನ್ನೇ: “ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.”ಯಾಕೋಬ 1:14, 15 ಓದಿ.

3 ತಪ್ಪು ಆಸೆ ನಮ್ಮ ಹೃದಯದೊಳಗೆ ಬೆಳೆಯುವ ಸಾಧ್ಯತೆ ಇದೆ. ಆದ್ದರಿಂದ ಎಂಥ ವಿಷಯಕ್ಕಾಗಿ ನಮ್ಮೊಳಗೆ ಆಸೆ ಚಿಗುರಿದೆ ಎನ್ನುವುದರ ಬಗ್ಗೆ ನಾವು ತುಂಬ ಜಾಗ್ರತೆ ವಹಿಸಬೇಕು. ತಪ್ಪು ಆಸೆಗಳನ್ನು ನಾವು ತಿರಸ್ಕರಿಸಬೇಕು. ಹೀಗೆ ಲೈಂಗಿಕ ಅನೈತಿಕತೆ ಮತ್ತು ಅದರ ಕಹಿ ಫಲಿತಾಂಶಗಳಿಂದ ದೂರವಿರಬಲ್ಲೆವು. (ಗಲಾ. 5:16) ತಪ್ಪು ಆಸೆಗಳನ್ನು ಎದುರಿಸಲು ಸಹಾಯಮಾಡುವ ಮೂರು ವಿಷಯಗಳನ್ನು ಈ ಲೇಖನದಲ್ಲಿ ನೋಡಲಿದ್ದೇವೆ. ಅವು ಯಾವುವೆಂದರೆ, ಯೆಹೋವನ ಜೊತೆಗಿನ ನಮ್ಮ ಸ್ನೇಹಬಂಧ, ಆತನ ವಾಕ್ಯ ಕೊಡುವ ಬುದ್ಧಿವಾದ, ಪ್ರೌಢ ಕ್ರೈಸ್ತರಿಂದ ನೆರವು.

“ದೇವರ ಸಮೀಪಕ್ಕೆ ಬನ್ನಿರಿ”

4. ಯೆಹೋವನ ಸಮೀಪಕ್ಕೆ ಬರುವುದು ಏಕೆ ಪ್ರಾಮುಖ್ಯ?

4 ‘ದೇವರ ಸಮೀಪಕ್ಕೆ ಬರಲು’ ಇಷ್ಟಪಡುವವರಿಗೆ ಬೈಬಲ್‌ ಹೀಗನ್ನುತ್ತದೆ: “ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ” ಮತ್ತು “ನಿಮ್ಮ ಹೃದಯಗಳನ್ನು ಶುದ್ಧಮಾಡಿಕೊಳ್ಳಿರಿ.” (ಯಾಕೋ. 4:8) ಯೆಹೋವನು ನಮ್ಮ ಅತ್ಯಾಪ್ತ ಮಿತ್ರನಾಗಿರುವಾಗ ನಮ್ಮ ಕ್ರಿಯೆಗಳು ಮಾತ್ರವಲ್ಲ ನಮ್ಮ ಯೋಚನೆಗಳೂ ಆತನು ಮೆಚ್ಚುವಂತಿರಬೇಕು ಎಂದು ಆಶಿಸುತ್ತೇವೆ. ನಮ್ಮ ಯೋಚನೆಗಳನ್ನು ಶುದ್ಧವಾಗಿಟ್ಟರೆ ನಮ್ಮ ಹೃದಯವನ್ನು ಶುದ್ಧ, ನಿರ್ಮಲವಾಗಿಟ್ಟಿದ್ದೇವೆ ಎಂದರ್ಥ. (ಕೀರ್ತ. 24:3, 4; 51:6; ಫಿಲಿ. 4:8) ನಾವು ಅಪರಿಪೂರ್ಣರಾಗಿರುವ ಕಾರಣ ಅನೈತಿಕ ವಿಷಯಗಳನ್ನು ಯೋಚಿಸಲು ಶುರುಮಾಡಬಹುದೆಂದು ಯೆಹೋವನಿಗೆ ಅರ್ಥವಾಗುತ್ತದೆ ನಿಜ. ಆದರೂ ನಾವಾತನ ಮನನೋಯಿಸಲು ಇಷ್ಟಪಡುವುದಿಲ್ಲ. ಹಾಗಾಗಿ ತಪ್ಪಾದ ಯೋಚನೆಗಳನ್ನು ತಿರಸ್ಕರಿಸಲು ನಮ್ಮಿಂದಾದ ಎಲ್ಲವನ್ನೂ ಮಾಡುತ್ತೇವೆ. (ಆದಿ. 6:5, 6) ನಮ್ಮ ಯೋಚನೆಗಳನ್ನು ಶುದ್ಧವಾಗಿಡಲು ಶತಪ್ರಯತ್ನ ಮಾಡುತ್ತೇವೆ.

5, 6. ಅನೈತಿಕ ಆಸೆಗಳ ವಿರುದ್ಧ ಹೋರಾಡಲು ಪ್ರಾರ್ಥನೆ ಹೇಗೆ ಸಹಾಯ ಮಾಡಬಲ್ಲದು?

5 ಸಹಾಯಕ್ಕಾಗಿ ನಾವು ಯೆಹೋವನ ಹತ್ತಿರ ಬೇಡಿಕೊಳ್ಳುತ್ತಾ ಇದ್ದರೆ ಅನೈತಿಕ ಯೋಚನೆಗಳ ವಿರುದ್ಧ ಹೋರಾಡಲು ಖಂಡಿತ ಸಹಾಯ ಕೊಡುವನು. ನಮ್ಮ ಯೋಚನೆ ಹಾಗೂ ನಡತೆಯನ್ನು ಶುದ್ಧವಾಗಿಡಲು ಬೇಕಾದ ಬಲವನ್ನು ಆತನು ಪವಿತ್ರಾತ್ಮದ ಮೂಲಕ ಕೊಡುತ್ತಾನೆ. ಆತನು ಮೆಚ್ಚುವಂಥ ಯೋಚನೆಗಳು ನಮಗಿರುವಂತೆ ಬಯಸುತ್ತೇವೆಂದು ಪ್ರಾರ್ಥನೆ ಮಾಡುವಾಗೆಲ್ಲ ಯೆಹೋವನಿಗೆ ಹೇಳಬಹುದು. (ಕೀರ್ತ. 19:14) ಪಾಪಕ್ಕೆ ನಡೆಸಬಹುದಾದ ಯಾವುದೇ ಹಾನಿಕರ ಆಸೆಗಳು ನಮ್ಮ ಹೃದಯದಲ್ಲಿವೆಯಾ ಎಂದು ಪರೀಕ್ಷಿಸಿನೋಡಲು ನಾವು ದೀನತೆಯಿಂದ ಆತನಿಗೆ ಕೇಳಿಕೊಳ್ಳಬೇಕು. (ಕೀರ್ತ. 139:23, 24) ಅನೈತಿಕತೆಯನ್ನು ತಳ್ಳಿಹಾಕಲು ಮತ್ತು ಕಷ್ಟವಾದರೂ ಸರಿಯಾದದ್ದನ್ನೇ ಮಾಡಲು ಸಹಾಯ ಕೊಡುವಂತೆ ಯೆಹೋವನ ಬಳಿ ಬೇಡಿಕೊಳ್ಳುತ್ತಾ ಇರಬೇಕು.—ಮತ್ತಾ. 6:13.

6 ಯೆಹೋವನ ಬಗ್ಗೆ ತಿಳಿದುಕೊಳ್ಳುವ ಮುಂಚೆ ಬಹುಶಃ ಆತನಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದೆವು. ಆ ತಪ್ಪು ಆಸೆಗಳ ವಿರುದ್ಧ ನಾವೀಗಲೂ ಹೋರಾಡುತ್ತಾ ಇರಬಹುದು. ಆದರೆ ನಾವು ಬದಲಾಗುವಂತೆ ಮತ್ತು ಆತನಿಗೆ ಮೆಚ್ಚಿಕೆಯಾದದ್ದನ್ನು ಮಾಡುವಂತೆ ಬೇಕಾದ ಸಹಾಯವನ್ನು ಯೆಹೋವನು ಕೊಡಬಲ್ಲನು. ರಾಜ ದಾವೀದನ ಉದಾಹರಣೆ ತೆಗೆದುಕೊಳ್ಳಿ. ಅವನು ಬತ್ಷೆಬೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡ ನಂತರ ಪಶ್ಚಾತ್ತಾಪಪಟ್ಟನು. ಯೆಹೋವನ ಬಳಿ “ಶುದ್ಧಹೃದಯ”ಕ್ಕಾಗಿ ಮತ್ತು ಆತನಿಗೆ ವಿಧೇಯನಾಗಲು ಸಹಾಯಕ್ಕಾಗಿ ಅಂಗಲಾಚಿದನು. (ಕೀರ್ತ. 51:10, 12) ಹಾಗಾಗಿ ಒಂದುವೇಳೆ ಹಿಂದೆ ನಮಗೆ ತುಂಬ ಬಲವಾದ ಅನೈತಿಕ ಆಸೆಗಳಿದ್ದು, ಈಗಲೂ ಅವುಗಳ ವಿರುದ್ಧ ಹೋರಾಡುತ್ತಾ ಇದ್ದರೆ ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ಆತನಿಗೆ ವಿಧೇಯರಾಗಿ ಸರಿಯಾದದ್ದನ್ನೇ ಮಾಡಲು ಅನೈತಿಕ ಆಸೆಗಳಿಗಿಂತಲೂ ಹೆಚ್ಚು ಬಲವಾದ ಆಸೆ ಹೊಂದಲು ಸಹಾಯ ಮಾಡುತ್ತಾನೆ. ನಮ್ಮ ಅಪರಿಪೂರ್ಣ ಯೋಚನೆಗಳನ್ನು ನಿಯಂತ್ರಿಸಲು ನಮಗೆ ನೆರವು ಕೊಡುತ್ತಾನೆ.—ಕೀರ್ತ. 119:133.

ತಪ್ಪಾದ ಆಸೆ ನಮ್ಮಲ್ಲಿ ಬೆಳೆದು ಬೇರು ಬಿಡಲು ಆರಂಭಿಸುವಲ್ಲಿ ನಾವು ದೃಢವಾದ ಕ್ರಮ ತೆಗೆದುಕೊಂಡು ಅದನ್ನು ಬೇರುಸಮೇತ ಕಿತ್ತೆಸೆಯಬೇಕು (ಪ್ಯಾರ 6 ನೋಡಿ)

“ವಾಕ್ಯದ ಪ್ರಕಾರ ಮಾಡುವವರಾಗಿರಿ”

7. ಅನೈತಿಕ ಯೋಚನೆಗಳನ್ನು ನಮ್ಮಿಂದ ತೆಗೆದುಹಾಕಲು ದೇವರ ವಾಕ್ಯ ಹೇಗೆ ಸಹಾಯಮಾಡುತ್ತದೆ?

7 ನಮ್ಮ ಪ್ರಾರ್ಥನೆಗಳಿಗೆ ಯೆಹೋವನು ತನ್ನ ವಾಕ್ಯವಾದ ಬೈಬಲಿನ ಮೂಲಕ ಉತ್ತರ ಕೊಡುವನು. ಅದರಲ್ಲಿರುವ ಆತನ ವಿವೇಕ ಶುದ್ಧವಾದದ್ದು. (ಯಾಕೋ. 3:17) ಹಾಗಾಗಿ ನಾವು ಪ್ರತಿದಿನ ಬೈಬಲನ್ನು ಓದುವಾಗ ನಮ್ಮ ಮನಸ್ಸಲ್ಲಿ ಶುದ್ಧವಾದ ವಿಚಾರಗಳನ್ನು ತುಂಬಿಸುತ್ತೇವೆ. (ಕೀರ್ತ. 19:7, 11; 119:9, 11) ಅಷ್ಟುಮಾತ್ರವಲ್ಲ ಅನೈತಿಕ ಯೋಚನೆ, ಆಸೆಗಳನ್ನು ನಮ್ಮಿಂದ ತೆಗೆದುಹಾಕಲು ನೆರವಾಗುವ ಮಾದರಿಗಳು, ಎಚ್ಚರಿಕೆಗಳು ಬೈಬಲಿನಲ್ಲಿವೆ.

8, 9. (ಎ) ಒಬ್ಬ ಯುವಕನು ಅನೈತಿಕ ನಡತೆಯ ಸ್ತ್ರೀಯೊಂದಿಗೆ ಲೈಂಗಿಕ ಸಂಬಂಧವಿಟ್ಟದ್ದು ಏಕೆ? (ಬಿ) ಯಾವ ಸನ್ನಿವೇಶಗಳಿಂದ ದೂರವಿರಲು ಜ್ಞಾನೋಕ್ತಿ ಅಧ್ಯಾಯ 7ರಲ್ಲಿನ ಉದಾಹರಣೆಯು ನಮಗೆ ಸಹಾಯ ಮಾಡುತ್ತದೆ?

8 ಅನೈತಿಕತೆಯಿಂದ ದೂರವಿರುವಂತೆ ದೇವರ ವಾಕ್ಯವು ಜ್ಞಾನೋಕ್ತಿ 5:8ರಲ್ಲಿ ನಮ್ಮನ್ನು ಎಚ್ಚರಿಸುತ್ತದೆ. ಜ್ಞಾನೋಕ್ತಿ ಅಧ್ಯಾಯ 7ರಲ್ಲಿ ಒಬ್ಬ ಯುವಕನು ಅನೈತಿಕ ನಡತೆಯ ಸ್ತ್ರೀಯೊಬ್ಬಳ ಮನೆ ಹತ್ತಿರ ರಾತ್ರಿ ಸಮಯ ನಡೆಯಲು ಹೋದದ್ದರ ಬಗ್ಗೆ ತಿಳಿಸಲಾಗಿದೆ. ಬೀದಿಯ ಮೂಲೆಯಲ್ಲಿ ನಿಂತಿದ್ದ ಆ ಹೆಂಗಸು “ವೇಶ್ಯಾವೇಷವನ್ನು ಧರಿಸಿ”ಕೊಂಡಿದ್ದಳು. ಅವಳು ಅವನ ಬಳಿ ಹೋಗಿ, ಅವನನ್ನು ಹಿಡಿದು, ಮುದ್ದಿಟ್ಟು, ಅವನಲ್ಲಿ ಕೆಟ್ಟ ಆಸೆಗಳನ್ನು ಹುಟ್ಟಿಸುವಂಥ ಮಾತುಗಳನ್ನಾಡಿದಳು. ಅವನು ಆ ಆಸೆಗಳನ್ನು ತೆಗೆದುಹಾಕಲಿಲ್ಲ. ಹಾಗಾಗಿ ಅವಳ ಜೊತೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡ. ಅವನು ಪಾಪಮಾಡಬೇಕಂತ ಯೋಜನೆ ಮಾಡಿ ಅಲ್ಲಿಗೆ ಹೋಗಲಿಲ್ಲ, ಆದರೂ ಪಾಪಮಾಡಿಯೇ ಬಿಟ್ಟ. ನಂತರ ಜೀವನಪೂರ್ತಿ ಘೋರ ಪರಿಣಾಮಗಳನ್ನು ಅನುಭವಿಸಬೇಕಾಯಿತು. ಅಪಾಯವನ್ನು ಅವನು ಮುಂಚೆಯೇ ಗ್ರಹಿಸಿರುತ್ತಿದ್ದರೆ ಅವಳಿಂದ ಮಾರು ದೂರ ಇರುತ್ತಿದ್ದ!—ಜ್ಞಾನೋ. 7:6-27.

9 ಅಪಾಯವಿದೆಯೆಂದು ಆ ಯುವಕನಂತೆ ನಮಗೂ ಅರ್ಥವಾಗದ ಕಾರಣ ತಪ್ಪಾದ ನಿರ್ಣಯಗಳನ್ನು ಮಾಡುವ ಸಾಧ್ಯತೆ ಇದೆ. ಉದಾಹರಣೆಗೆ, ಕೆಲವು ಟಿವಿ ಚ್ಯಾನೆಲ್‌ಗಳು ರಾತ್ರಿ ಸಮಯದಲ್ಲಿ ಅನೈತಿಕ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತವೆ. ಹೀಗಿರುವಾಗ, ‘ಟಿವಿಯಲ್ಲಿ ಏನು ಬರುತ್ತಿದೆ ನೋಡೋಣ’ ಅಂತ ಚ್ಯಾನೆಲ್‌ಗಳನ್ನು ಬದಲಾಯಿಸುತ್ತಾ ಹೋದರೆ ಅಪಾಯ ತಪ್ಪಿದ್ದಲ್ಲ. ಇಂಟರ್‌ನೆಟ್‌ ಲಿಂಕ್ಸ್‌ ಎಲ್ಲಿಗೆ ಹೋಗುತ್ತವೆಂದು ತಿಳಿಯದೆ ಅವುಗಳನ್ನು ಕ್ಲಿಕ್ಕಿಸುವುದು ಸಹ ಅಪಾಯಕಾರಿ. ಅನೈತಿಕವಾದ ಜಾಹೀರಾತುಗಳು ಹಾಗೂ ಅಶ್ಲೀಲ ಚಿತ್ರಗಳ ಲಿಂಕ್ಸ್‌ಗಳಿರುವ ಚ್ಯಾಟ್‌ ರೂಮ್‌ಗಳಿಗೆ ಅಥವಾ ವೆಬ್‌ಸೈಟ್‌ಗಳಿಗೆ ಹೋಗುವುದೂ ತುಂಬ ಅಪಾಯಕಾರಿ. ಇಂಥ ಸನ್ನಿವೇಶಗಳಲ್ಲಿ ನಾವೇನು ನೋಡುತ್ತೇವೊ ಅವು ನಮ್ಮಲ್ಲಿ ಅನೈತಿಕ ಆಸೆಗಳನ್ನು ಹುಟ್ಟಿಸಿ, ಯೆಹೋವನಿಗೆ ಅವಿಧೇಯರಾಗುವಂತೆ ನಡೆಸಬಲ್ಲವು.

10. ಚೆಲ್ಲಾಟವಾಡುವುದು ಏಕೆ ಅಪಾಯಕಾರಿ? (ಲೇಖನದ ಆರಂಭದ ಚಿತ್ರ ನೋಡಿ.)

10 ಗಂಡು-ಹೆಣ್ಣು ಒಬ್ಬರಿನ್ನೊಬ್ಬರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನೂ ಬೈಬಲ್‌ ಹೇಳುತ್ತದೆ. (1 ತಿಮೊಥೆಯ 5:2 ಓದಿ.) ಕ್ರೈಸ್ತರು ಪ್ರಣಯಾತ್ಮಕ ಪ್ರೀತಿಯನ್ನು ಬರೀ ತಮ್ಮ ವಿವಾಹ ಸಂಗಾತಿಗೆ ಇಲ್ಲವೇ ಅವರು ವಿವಾಹವಾಗಲು ಇಚ್ಛಿಸುವವರಿಗೆ ಮಾತ್ರ ತೋರಿಸುತ್ತಾರೆ. ಅವರು ಚೆಲ್ಲಾಟವಾಡುವುದಿಲ್ಲ. ಕೆಲವರು ತಮ್ಮ ದೇಹ ಭಾಷೆಯಿಂದ, ಹಾವಭಾವಗಳಿಂದ ಇಲ್ಲವೇ ಕಣ್ಣೋಟದಲ್ಲೇ ವಿರುದ್ಧ ಲಿಂಗದವರೊಟ್ಟಿಗೆ ಪ್ರಣಯಾತ್ಮಕ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಇದೆಲ್ಲದ್ದರಲ್ಲಿ ತಪ್ಪೇನಿಲ್ಲ ಏಕೆಂದರೆ ‘ನಾವೇನೂ ಮೈಮುಟ್ಟುತ್ತಿಲ್ಲವಲ್ಲ’ ಎಂದವರು ನೆನಸಬಹುದು. ಆದರೆ ಒಂದು ಗಂಡು ಮತ್ತು ಹೆಣ್ಣು ಚೆಲ್ಲಾಟವಾಡಿದರೆ ಅವರ ಮನಸ್ಸಲ್ಲಿ ಅನೈತಿಕ ಯೋಚನೆಗಳು ಚಿಗುರಿ, ಲೈಂಗಿಕ ಅನೈತಿಕತೆಗೆ ನಡೆಸಬಲ್ಲದು. ಇದು ಹಿಂದೆಯೂ ಆಗಿದೆ, ಮುಂದೆಯೂ ಆಗಬಹುದು.

11. ಯೋಸೇಫನ ಮಾದರಿಯಿಂದ ನಾವು ಯಾವ ಪಾಠ ಕಲಿಯಬಹುದು?

11 ಯೋಸೇಫನು ನಮಗೊಂದು ಒಳ್ಳೇ ಮಾದರಿ. ಫೋಟೀಫರನ ಹೆಂಡತಿ ಯೋಸೇಫನು ತನ್ನ ಜತೆ ಸಂಗಮಿಸುವಂತೆ ಮಾಡಲು ಮೋಹದ ಬಲೆ ಬೀಸಿದಳು. ಅವನು ತಿರಸ್ಕರಿಸಿದರೂ ಅವಳು ಅವನ ಬೆನ್ನುಬಿಡಲಿಲ್ಲ. ಪ್ರತಿದಿನ ಅವನಿಗೆ “ಆಕೆಯ ಬಳಿಯಲ್ಲಿರುವದ”ಕ್ಕೆ ಹೇಳಿದಳು. (ಆದಿ. 39:7, 8, 10) ತಾವಿಬ್ಬರೂ ಒಂಟಿಯಾಗಿದ್ದರೆ ಯೋಸೇಫನಿಗೆ ತನ್ನ ಮೇಲೆ ಆಸೆ ಹುಟ್ಟಬಹುದೆಂದು ಫೋಟೀಫರನ ಹೆಂಡತಿ ನೆನಸಿರಬೇಕೆಂದು ಒಬ್ಬ ಬೈಬಲ್‌ ವಿದ್ವಾಂಸ ವಿವರಿಸುತ್ತಾನೆ. ಆದರೆ ಆಕೆಯ ಚೆಲ್ಲಾಟಕ್ಕೆ ಪ್ರತಿಕ್ರಿಯೆ ತೋರಿಸದಿರಲು ಯೋಸೇಫ ದೃಢನಿರ್ಣಯ ಮಾಡಿದ. ಅವನು ಚೆಲ್ಲಾಟವಾಡಲಿಲ್ಲ. ಹೀಗೆ ತನ್ನ ಹೃದಯದಲ್ಲಿ ಕೆಟ್ಟ ಆಸೆಗಳು ಬೆಳೆಯುವಂತೆ ಬಿಡಲಿಲ್ಲ. ಒಮ್ಮೆ ಫೋಟೀಫರನ ಹೆಂಡತಿ ಅವನ ಬಟ್ಟೆಯನ್ನು ಹಿಡಿದು, ಆಕೆಯೊಟ್ಟಿಗೆ ಸಂಗಮಿಸುವಂತೆ ಒತ್ತಾಯಿಸಿದಾಗ ಅವನು ತಕ್ಷಣ “ತನ್ನ ಬಟ್ಟೆಯನ್ನು ಆಕೆಯ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದನು.”—ಆದಿ. 39:12.

12. ನಾವೇನು ನೋಡುತ್ತೇವೊ ಅದು ನಮ್ಮ ಹೃದಯದ ಮೇಲೆ ಪರಿಣಾಮ ಬೀರಬಲ್ಲದೆಂದು ನಮಗೆ ಹೇಗೆ ಗೊತ್ತು?

12 ನಾವೇನನ್ನು ನೋಡುತ್ತೇವೊ ಅದು ನಮ್ಮ ಹೃದಯದ ಮೇಲೆ ಪರಿಣಾಮ ಬೀರಿ, ತಪ್ಪಾದ ಲೈಂಗಿಕ ಆಸೆಗಳನ್ನು ಹುಟ್ಟಿಸಬಲ್ಲದೆಂದು ಯೇಸು ಎಚ್ಚರಿಸಿದನು. ಅವನಂದದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾ. 5:28) ರಾಜ ದಾವೀದನ ವಿಷಯದಲ್ಲಿ ಇದೇ ನಡೆದಿತ್ತು. ‘ಅರಮನೆಯ ಮಾಳಿಗೆಯಿಂದ ಒಬ್ಬ ಸ್ತ್ರೀ ಸ್ನಾನಮಾಡುವದನ್ನು ಕಂಡನು.’ (2 ಸಮು. 11:2) ಆದರೆ ಅವಳನ್ನು ನೋಡುವುದನ್ನಾಗಲಿ ಅವಳ ಬಗ್ಗೆ ಯೋಚಿಸುವುದನ್ನಾಗಲಿ ಅವನು ನಿಲ್ಲಿಸಲಿಲ್ಲ. ಇನ್ನೊಬ್ಬನ ಹೆಂಡತಿಯಾಗಿದ್ದ ಅವಳನ್ನು ಆಶಿಸಿದನು. ಕೊನೆಗೆ ಅವಳೊಟ್ಟಿಗೆ ಲೈಂಗಿಕ ಸಂಬಂಧವಿಟ್ಟನು.

13. ನಮ್ಮ ಕಣ್ಣುಗಳೊಂದಿಗೆ ನಾವೇಕೆ “ನಿಬಂಧನೆಯನ್ನು ಮಾಡಿ”ಕೊಳ್ಳಬೇಕು?

13 ಅನೈತಿಕ ಯೋಚನೆಗಳನ್ನು ತಿರಸ್ಕರಿಸಬೇಕಾದರೆ ನಾವು ಯೋಬನ ಮಾದರಿಯನ್ನು ಅನುಸರಿಸಬೇಕು. “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ” ಎಂದನವನು. (ಯೋಬ 31:1, 7, 9) ನಾವು ನೋಡಿದ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಅನೈತಿಕ ಯೋಚನೆ ಬರಬಾರದೆಂದು ಯೋಬನಂತೆ ನಾವು ಸಹ ತೀರ್ಮಾನ ಮಾಡಬೇಕು. ಕಂಪ್ಯೂಟರ್‌ ಪರದೆ ಮೇಲೆ, ಜಾಹೀರಾತಿನಲ್ಲಿ, ಪತ್ರಿಕೆಯಲ್ಲಿ ಅಥವಾ ಬೇರೆಲ್ಲಾದರೂ ಯಾವುದೇ ಲೈಂಗಿಕ ಚಿತ್ರ ಕಣ್ಣಿಗೆ ಬಿದ್ದರೆ ಆ ಕ್ಷಣವೇ ನಮ್ಮ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಬೇಕು.

14. ನಮ್ಮ ಯೋಚನೆ ಹಾಗೂ ನಡತೆಯನ್ನು ಶುದ್ಧವಾಗಿಡಲು ನಾವೇನು ಮಾಡಬೇಕು?

14 ಇಲ್ಲಿ ವರೆಗೆ ಚರ್ಚಿಸಿದ ಸಂಗತಿಗಳ ಬಗ್ಗೆ ಯೋಚಿಸುವಾಗ, ಅನೈತಿಕ ಆಸೆಗಳ ವಿರುದ್ಧ ಹೋರಾಡಲು ನೀವು ಇನ್ನಷ್ಟು ಹೆಚ್ಚು ಪ್ರಯತ್ನಗಳನ್ನು ಮಾಡಬೇಕೆಂದು ನಿಮಗೆ ಗೊತ್ತಾಗಿರಬೇಕು. ಬದಲಾವಣೆಗಳನ್ನು ಮಾಡಲಿಕ್ಕಿದ್ದರೆ ಕೂಡಲೇ ಮಾಡಿ! ಯೆಹೋವನ ಮಾತಿಗೆ ವಿಧೇಯರಾದರೆ ಲೈಂಗಿಕ ಅನೈತಿಕತೆಯಿಂದ ದೂರವಿದ್ದು, ನಿಮ್ಮ ಯೋಚನೆ ಹಾಗೂ ನಡತೆಯನ್ನು ಶುದ್ಧವಾಗಿಡಬಲ್ಲಿರಿ.ಯಾಕೋಬ 1:21-25 ಓದಿ.

‘ಹಿರೀಪುರುಷರನ್ನು ಕರೆಸಿ’

15. ತಪ್ಪಾದ ಆಸೆಗಳ ವಿರುದ್ಧ ಹೋರಾಡುವುದು ಕಷ್ಟವಾಗಿದ್ದರೆ ಬೇರೆಯವರ ಸಹಾಯ ಕೇಳುವುದು ಯಾಕೆ ಪ್ರಾಮುಖ್ಯ?

15 ತಪ್ಪಾದ ಆಸೆಗಳ ವಿರುದ್ಧ ಹೋರಾಡಲು ನಿಮಗೆ ಕಷ್ಟವಾಗುತ್ತಿರುವಲ್ಲಿ ಸಭೆಯಲ್ಲಿ ಒಬ್ಬರೊಟ್ಟಿಗೆ ಮಾತಾಡಿ. ಇವರು ತುಂಬ ಸಮಯದಿಂದ ಯೆಹೋವನ ಸೇವೆ ಮಾಡುತ್ತಿದ್ದು, ದೇವರ ವಾಕ್ಯದಿಂದ ಒಳ್ಳೇ ಸಲಹೆ ಕೊಡಲು ಸಾಧ್ಯವಿರುವ ವ್ಯಕ್ತಿಯಾಗಿರಬೇಕು. ಹೀಗೆ ಬೇರೆಯವರೊಟ್ಟಿಗೆ ನಿಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತಾಡುವುದು ಸುಲಭವಲ್ಲ. ಆದರೆ ಸಹಾಯಕ್ಕಾಗಿ ಕೇಳುವುದು ಪ್ರಾಮುಖ್ಯ. (ಜ್ಞಾನೋ. 18:1; ಇಬ್ರಿ. 3:12, 13) ನೀವು ಯಾವ ಬದಲಾವಣೆಗಳನ್ನು ಮಾಡಬೇಕೆಂದು ಗ್ರಹಿಸಲು ಪ್ರೌಢ ಕ್ರೈಸ್ತರು ಸಹಾಯ ಮಾಡಬಲ್ಲರು. ನಂತರ ಅವರು ಹೇಳಿದಂಥ ಬದಲಾವಣೆಗಳನ್ನು ಮಾಡಿ. ಹೀಗೆ ಯೆಹೋವನೊಟ್ಟಿಗಿನ ನಿಮ್ಮ ಸ್ನೇಹವನ್ನು ಕಾಪಾಡಿಕೊಳ್ಳಬಲ್ಲಿರಿ.

16, 17. (ಎ) ಅನೈತಿಕ ಆಸೆಗಳ ವಿರುದ್ಧ ಹೋರಾಡಲು ಕಷ್ಟವಾಗುವವರಿಗೆ ಹಿರಿಯರು ಹೇಗೆ ಸಹಾಯ ಕೊಡಬಲ್ಲರು? ಉದಾಹರಣೆ ಕೊಡಿ. (ಬಿ) ಅಶ್ಲೀಲ ಚಿತ್ರಗಳನ್ನು ನೋಡುವವರು ಈಗಿಂದೀಗಲೇ ಸಹಾಯ ಕೇಳುವುದು ಯಾಕೆ ಪ್ರಾಮುಖ್ಯ?

16 ನಮಗೆ ನೆರವು ನೀಡಲು ವಿಶೇಷ ಅರ್ಹತೆ ಸಭೆಯ ಹಿರಿಯರಿಗಿದೆ. (ಯಾಕೋಬ 5:13-15 ಓದಿ.) ಬ್ರಸಿಲ್‌ ದೇಶದ ಒಬ್ಬ ಯುವ ವ್ಯಕ್ತಿ ತುಂಬ ವರ್ಷಗಳಿಂದ ಕೆಟ್ಟ ಆಸೆಗಳ ವಿರುದ್ಧ ಹೋರಾಡಲು ಕಷ್ಟಪಡುತ್ತಿದ್ದ. ಅವನನ್ನುವುದು: “ಯೆಹೋವನು ಇಷ್ಟಪಡದಂಥ ಯೋಚನೆಗಳು ನನಗಿವೆಯೆಂದು ನನಗೆ ಗೊತ್ತಿತ್ತು. ಆದರೆ ಅದರ ಬಗ್ಗೆ ಇತರರಿಗೆ ಹೇಳಲು ನನಗೆ ತುಂಬ ನಾಚಿಕೆಯಾಗುತ್ತಿತ್ತು.” ಈ ಯುವ ವ್ಯಕ್ತಿಗೆ ಸಹಾಯದ ಅಗತ್ಯವಿದೆಯೆಂದು ಒಬ್ಬ ಹಿರಿಯನಿಗೆ ಗೊತ್ತಾಯಿತು. ಹಿರಿಯರು ಸಹಾಯ ಮಾಡಲು ಬಿಟ್ಟುಕೊಡು ಎಂದು ಆ ಹಿರಿಯನು ಅವನಿಗೆ ಹೇಳಿದನು. ಆ ಯುವ ವ್ಯಕ್ತಿ ಹೇಳುವುದು: “ಹಿರಿಯರು ನನ್ನೊಟ್ಟಿಗೆ ಎಷ್ಟು ದಯೆಯಿಂದ ನಡೆದುಕೊಂಡರು! ನನಗೆ ಆಶ್ಚರ್ಯವಾಯಿತು. ಅವರು ನನ್ನ ಜೊತೆ ನಡೆದುಕೊಂಡ ರೀತಿಗೆ ನಾನು ಅರ್ಹನಲ್ಲವೆಂದು ನನಗೆ ಅನಿಸಿತು. ಅಷ್ಟೊಂದು ದಯೆಯಿಂದ ಮತ್ತು ಸಹಾನುಭೂತಿಯಿಂದ ನನ್ನೊಟ್ಟಿಗೆ ನಡೆದುಕೊಂಡರು. ನನ್ನ ಸಮಸ್ಯೆಗಳ ಬಗ್ಗೆ ಹೇಳಿದಾಗ ಕಿವಿಗೊಟ್ಟು ಕೇಳಿದರು. ಯೆಹೋವನಿಗೆ ನನ್ನ ಮೇಲೆ ಪ್ರೀತಿಯಿದೆಯೆಂದು ಆಶ್ವಾಸನೆ ಕೊಡಲು ಬೈಬಲನ್ನು ಬಳಸಿದರು. ನನ್ನ ಜೊತೆ ಪ್ರಾರ್ಥನೆ ಮಾಡಿದರು. ಅವರು ನನಗೆ ಬೈಬಲಿನಿಂದ ಕೊಟ್ಟ ಸಲಹೆಯನ್ನು ಸ್ವೀಕರಿಸಲು ತುಂಬ ಸುಲಭ ಮಾಡಿಕೊಟ್ಟರು.” ಯೆಹೋವನೊಟ್ಟಿಗಿನ ತನ್ನ ಸಂಬಂಧವನ್ನು ಬಲಪಡಿಸಿದ ನಂತರ ಅವನು ಹೇಳಿದ್ದು: “ನಮ್ಮ ಹೊರೆಗಳನ್ನು ನಾವೇ ಒಂಟಿಯಾಗಿ ಹೊರುವ ಬದಲು ಬೇರೆಯವರ ಸಹಾಯ ಕೇಳಿ ಪಡೆಯುವುದು ಎಷ್ಟು ಮುಖ್ಯವೆಂದು ನನಗೀಗ ಚೆನ್ನಾಗಿ ಅರ್ಥವಾಗುತ್ತದೆ.”

17 ಅಶ್ಲೀಲ ಚಿತ್ರಗಳನ್ನು ನೋಡುವ ಚಟ ನಿಮಗಿದ್ದರೆ ಈಗಿಂದೀಗಲೇ ಸಹಾಯಕ್ಕಾಗಿ ಕೇಳಬೇಕು. ಸಹಾಯ ಕೇಳಲು ನೀವೆಷ್ಟು ಹೆಚ್ಚು ತಡಮಾಡುತ್ತೀರೊ ಲೈಂಗಿಕ ಅನೈತಿಕತೆಯನ್ನು ನಡೆಸುವ ಅಪಾಯ ಅಷ್ಟೇ ಹೆಚ್ಚಾಗುತ್ತದೆ. ಈ ತಪ್ಪನ್ನು ಮಾಡುವುದರಿಂದ ನೀವು ಬೇರೆಯವರ ಮನನೋಯಿಸುತ್ತೀರಿ ಮತ್ತು ಜನರು ಯೆಹೋವನ ಬಗ್ಗೆ ಕೆಟ್ಟದ್ದಾಗಿ ಮಾತಾಡಲು ಕಾರಣರಾಗುತ್ತೀರಿ. ಅನೇಕರು ಹಿರಿಯರಿಂದ ಸಹಾಯ ಕೇಳಿ, ಅವರು ಕೊಟ್ಟ ಬುದ್ಧಿವಾದವನ್ನು ಸ್ವೀಕರಿಸಿದ್ದಾರೆ. ಯಾಕೆಂದರೆ ಅವರು ಯೆಹೋವನನ್ನು ಮೆಚ್ಚಿಸಲು ಮತ್ತು ಕ್ರೈಸ್ತ ಸಭೆಯಲ್ಲೇ ಉಳಿಯಲು ಬಯಸುತ್ತಾರೆ.—ಯಾಕೋ. 1:15; ಕೀರ್ತ. 141:5; ಇಬ್ರಿ. 12:5, 6.

ಯೋಚನೆ, ನಡತೆಯನ್ನು ಶುದ್ಧವಾಗಿಡುವ ನಿಮ್ಮ ತೀರ್ಮಾನ ದೃಢವಾಗಿರಲಿ!

18. ನಿಮ್ಮ ದೃಢ ತೀರ್ಮಾನ ಏನು?

18 ಸೈತಾನನ ಲೋಕದಲ್ಲಿ ಅನೈತಿಕತೆ ಹೆಚ್ಚೆಚ್ಚಾಗುತ್ತಾ ಇದೆ. ಆದರೆ ಯೆಹೋವನ ಸೇವಕರು ತಮ್ಮ ಯೋಚನೆಗಳನ್ನು ಶುದ್ಧವಾಗಿಡಲು ತುಂಬ ಶ್ರಮಿಸುತ್ತಾರೆ. ಈ ಕ್ರೈಸ್ತರ ಬಗ್ಗೆ ಯೆಹೋವನಿಗೆ ತುಂಬ ಹೆಮ್ಮೆಯಿದೆ. ನಾವು ಯೆಹೋವನಿಗೆ ಸಮೀಪವಾಗಿಯೇ ಇರೋಣ. ಆತನ ವಾಕ್ಯ ಹಾಗೂ ಕ್ರೈಸ್ತ ಸಭೆಯಿಂದ ಸಿಗುವ ಬುದ್ಧಿವಾದ ಸಲಹೆಗಳನ್ನು ಪಾಲಿಸೋಣ. ಹೀಗೆ ಮಾಡಿದರೆ ಸಂತೋಷದಿಂದಿರುವೆವು. ನಮ್ಮ ಮನಸ್ಸಾಕ್ಷಿಯೂ ಶುದ್ಧವಾಗಿರುತ್ತದೆ. (ಕೀರ್ತ. 119:5, 6) ಅಲ್ಲದೆ, ಭವಿಷ್ಯದಲ್ಲಿ ಸೈತಾನನು ಇಲ್ಲವಾದ ನಂತರ ನಾವು ದೇವರ ನೂತನ, ಶುದ್ಧ ಲೋಕದಲ್ಲಿ ಸದಾಕಾಲ ಜೀವಿಸುವೆವು.