ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 1

ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 1

“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” —ಮತ್ತಾ. 6:9.

1. ಮತ್ತಾಯ 6:9-13ರಲ್ಲಿರುವ ಯೇಸುವಿನ ಪ್ರಾರ್ಥನೆಯನ್ನು ಸೇವೆಯಲ್ಲಿ ಹೇಗೆ ಬಳಸಬಹುದು?

ಅನೇಕರಿಗೆ ಮತ್ತಾಯ 6:9-13ರಲ್ಲಿರುವ ಪ್ರಾರ್ಥನೆಯ ಪರಿಚಯವಿದೆ. ನಾವು ಸೇವೆಗೆ ಹೋದಾಗ ಈ ಪ್ರಾರ್ಥನೆಯ ಪದಗಳನ್ನು ಬಳಸಿ ದೇವರ ರಾಜ್ಯವು ಒಂದು ನೈಜ ಸರ್ಕಾರ, ಅದು ಭೂಮಿಯನ್ನು ಪರದೈಸಾಗಿ ಮಾಡಲಿದೆಯೆಂದು ಕಲಿಸುತ್ತೇವೆ. ಆ ಪ್ರಾರ್ಥನೆಯಲ್ಲಿರುವ “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂಬ ಪದಗಳನ್ನು ಬಳಸಿ ದೇವರಿಗೆ ಒಂದು ಹೆಸರಿದೆ, ಅದನ್ನು ನಾವು ಪವಿತ್ರವಾದದ್ದಾಗಿ ವೀಕ್ಷಿಸಬೇಕು ಎಂದು ತಿಳಿಸುತ್ತೇವೆ.—ಮತ್ತಾ. 6:9.

2. ನಮ್ಮ ಪ್ರಾರ್ಥನೆಗಳಲ್ಲಿ ತಾನು ಹೇಳಿಕೊಟ್ಟ ಪದಗಳನ್ನೇ ಬಳಸಬೇಕೆನ್ನುವುದು ಯೇಸುವಿನ ಉದ್ದೇಶ ಆಗಿರಲಿಲ್ಲವೆಂದು ನಮಗೆ ಹೇಗೆ ಗೊತ್ತು?

2 ತುಂಬ ಜನ ಮಾಡುವ ಹಾಗೆ, ಪ್ರಾರ್ಥನೆಯಲ್ಲಿ ತಾನು ಹೇಳಿಕೊಟ್ಟ ಪದಗಳನ್ನೇ ಯಾವಾಗಲೂ ಬಳಸಬೇಕೆನ್ನುವುದು ಯೇಸುವಿನ ಉದ್ದೇಶವಾಗಿತ್ತಾ? ಇಲ್ಲ. “ನೀನು ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ” ಎಂದು ಯೇಸು ಹೇಳಿದನು. (ಮತ್ತಾ. 6:7) ಇನ್ನೊಂದು ಸಂದರ್ಭದಲ್ಲಿ ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದು ಹೇಗೆಂದು ಕಲಿಸುತ್ತಿದ್ದಾಗ ಅದೇ ಪ್ರಾರ್ಥನೆಯನ್ನು ಹೇಳಿದರೂ ಮೊದಲು ಬಳಸಿದ ಪದಗಳನ್ನು ಮಾತ್ರವೇ ಬಳಸಲಿಲ್ಲ. ಸ್ವಲ್ಪ ವ್ಯತ್ಯಾಸ ಇತ್ತು. (ಲೂಕ 11:1-4) ಇದರಿಂದ ಗೊತ್ತಾಗುವುದೇನೆಂದರೆ ಯೇಸು ಮಾದರಿ ಪ್ರಾರ್ಥನೆಯನ್ನು ಹೇಳಿಕೊಟ್ಟದ್ದು ನಮ್ಮ ಪ್ರಾರ್ಥನೆಯಲ್ಲಿ ಯಾವೆಲ್ಲ ವಿಧದ ವಿಷಯಗಳನ್ನು ಸೇರಿಸಬೇಕೆಂದು ಕಲಿಸಲಿಕ್ಕಾಗಿಯೇ.

3. ಮಾದರಿ ಪ್ರಾರ್ಥನೆಯ ಅಧ್ಯಯನ ಮಾಡುತ್ತಿರುವಾಗ ನಿಮ್ಮನ್ನೇ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?

3 ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಮಾದರಿ ಪ್ರಾರ್ಥನೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಿದ್ದೇವೆ. ಹೀಗೆ ಮಾಡುತ್ತಿರುವಾಗ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ಇನ್ನಷ್ಟು ಚೆನ್ನಾಗಿ ಪ್ರಾರ್ಥನೆಗಳನ್ನು ಮಾಡಲು ಈ ಮಾದರಿ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತದೆ? ಅದಕ್ಕಿಂತಲೂ ಮುಖ್ಯವಾಗಿ ನಾನು ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕುತ್ತಿದ್ದೇನಾ?’

“ಸ್ವರ್ಗದಲ್ಲಿರುವ ನಮ್ಮ ತಂದೆಯೇ”

4. (ಎ) “ನಮ್ಮ ತಂದೆಯೇ” ಎಂಬ ಪದಗಳು ನಮಗೆ ಏನನ್ನು ನೆನಪಿಗೆ ತರುತ್ತದೆ? (ಬಿ) ಯೆಹೋವನು ಹೇಗೆ ನಮ್ಮ ತಂದೆಯಾಗಿದ್ದಾನೆ?

4 ಯೇಸು ಪ್ರಾರ್ಥನೆಯ ಆರಂಭದಲ್ಲಿ “ನಮ್ಮ ತಂದೆಯೇ” ಎಂಬ ಪದಗಳನ್ನು ಬಳಸಿದನು. ಇದು ಯೆಹೋವನು ನಮ್ಮ ಮತ್ತು ಇಡೀ ಲೋಕದಲ್ಲಿರುವ ನಮ್ಮೆಲ್ಲಾ ಸಹೋದರ ಸಹೋದರಿಯರ ತಂದೆ ಎಂದು ನೆನಪು ಹುಟ್ಟಿಸುತ್ತದೆ. (1 ಪೇತ್ರ 2:17) ಸ್ವರ್ಗದಲ್ಲಿ ಜೀವಿಸಲು ಯೆಹೋವನು ಯಾರನ್ನು ಆರಿಸಿದ್ದಾನೊ ಅವರನ್ನು ಆತನು ತನ್ನ ಪುತ್ರರನ್ನಾಗಿ ದತ್ತು ತೆಗೆದುಕೊಂಡಿದ್ದಾನೆ. ಹಾಗಾಗಿ ಇವರಿಗೆ ಯೆಹೋವನು ಒಂದು ವಿಶೇಷ ರೀತಿಯಲ್ಲಿ ತಂದೆಯಾಗಿದ್ದಾನೆ. (ರೋಮ. 8:15-17) ಭೂಮಿ ಮೇಲೆ ಅನಂತಕ್ಕೂ ಜೀವಿಸುವವರು ಸಹ ಆತನನ್ನು “ತಂದೆ” ಎಂದು ಕರೆಯಬಹುದು. ಯೆಹೋವನು ಅವರ ಜೀವದಾತನು ಮತ್ತು ಪ್ರೀತಿಯಿಂದ ಅವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾನೆ. ಪರಿಪೂರ್ಣರಾದ ನಂತರ ಕೊನೇ ಪರೀಕ್ಷೆಯಲ್ಲಿ ಯೆಹೋವನಿಗೆ ನಿಷ್ಠಾವಂತರಾಗಿ ಉಳಿದರೆ ಅವರನ್ನು ‘ದೇವರ ಮಕ್ಕಳು’ ಎಂದು ಕರೆಯಲಾಗುವುದು.—ರೋಮ. 8:21; ಪ್ರಕ. 20:7, 8.

5, 6. (ಎ) ಹೆತ್ತವರು ಮಕ್ಕಳಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಯಾವುದು? (ಬಿ) ಪ್ರತಿಯೊಂದು ಮಗು ಈ ಉಡುಗೊರೆಯನ್ನು ಏನು ಮಾಡಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

5 ಯೆಹೋವನು ಸ್ವರ್ಗದಲ್ಲಿರುವ ತಂದೆ ಮತ್ತು ಆತನಿಗೆ ಪ್ರಾರ್ಥಿಸುವುದು ಹೇಗೆಂದು ಕಲಿಸುವ ಮೂಲಕ ಹೆತ್ತವರು ಮಕ್ಕಳಿಗೆ ಉಡುಗೊರೆಯನ್ನು ಕೊಡಬಹುದು. ದಕ್ಷಿಣ ಆಫ್ರಿಕಾದಲ್ಲಿ ಈಗ ಸರ್ಕಿಟ್‌ ಮೇಲ್ವಿಚಾರಕನಾಗಿರುವ ಸಹೋದರನು ಏನನ್ನುತ್ತಾನೆಂದು ಕೇಳಿ: “ನಮ್ಮ ಇಬ್ಬರು ಹೆಣ್ಮಕ್ಕಳು ಹುಟ್ಟಿದಂದಿನಿಂದ ಪ್ರತಿ ರಾತ್ರಿ ಅವರ ಜೊತೆ ಪ್ರಾರ್ಥಿಸುತ್ತಿದ್ದೆ. ನಾನು ಮನೆಯಲ್ಲಿ ಇಲ್ಲದಿದ್ದಾಗ ಮಾತ್ರ ಇದನ್ನು ಮಾಡಲಾಗುತ್ತಿರಲಿಲ್ಲ. ಹೀಗೆ ನಾನು ಮಾಡುತ್ತಿದ್ದ ಪ್ರಾರ್ಥನೆಗಳಲ್ಲಿ ಹೇಳುತ್ತಿದ್ದ ಪದಗಳು ಅವರಿಗೆ ಅಷ್ಟೊಂದು ನೆನಪಿಲ್ಲವಾದರೂ ನಮ್ಮ ತಂದೆಯಾದ ಯೆಹೋವನ ಜೊತೆ ಮಾತಾಡುವಾಗ ಇರುತ್ತಿದ್ದ ಪವಿತ್ರ ಭಾವನೆ, ಪ್ರಶಾಂತತೆ ಮತ್ತು ಸುರಕ್ಷಾ ಭಾವನೆಯನ್ನು ನನ್ನ ಮಕ್ಕಳು ಈಗಲೂ ಆಗಾಗ ನೆನಪಿಸಿಕೊಳ್ಳುತ್ತಾರೆ. ಸ್ವಂತ ಪ್ರಾರ್ಥನೆ ಮಾಡುವಷ್ಟು ದೊಡ್ಡವರಾದ ಕೂಡಲೆ ಜೋರಾಗಿ ಪ್ರಾರ್ಥನೆ ಮಾಡುವಂತೆ ಅವರನ್ನು ಉತ್ತೇಜಿಸಿದೆ. ಏಕೆಂದರೆ ಯೆಹೋವನಿಗೆ ತಮ್ಮ ಯೋಚನೆ, ಭಾವನೆಗಳನ್ನು ಅವರು ಹೇಗೆ ವ್ಯಕ್ತಪಡಿಸುತ್ತಾರೆಂದು ನನಗೆ ತಿಳಿಯಬೇಕಿತ್ತು. ಅವರ ಹೃದಯದಲ್ಲೇನಿದೆ ಎಂದು ತಿಳಿಯಲು ಇದೊಂದು ಒಳ್ಳೇ ಅವಕಾಶವಾಗಿತ್ತು. ಮಾದರಿ ಪ್ರಾರ್ಥನೆಯಲ್ಲಿನ ಮುಖ್ಯ ಅಂಶಗಳನ್ನು ತಮ್ಮ ಪ್ರಾರ್ಥನೆಯಲ್ಲಿ ಹೇಗೆ ಸೇರಿಸಬಹುದೆಂದು ಅವರಿಗೆ ನಯವಾಗಿ ಹೇಳಿಕೊಡಲು ಇದರಿಂದ ಸಾಧ್ಯವಾಯಿತು. ಹೀಗೆ ಅವರ ಪ್ರಾರ್ಥನೆಗಳಿಗೆ ಒಂದೊಳ್ಳೇ ಅರ್ಥಭರಿತ ತಳಪಾಯ ಹಾಕಲು ಸಹಾಯವಾಯಿತು.”

6 ಈ ಸಹೋದರನ ಮಕ್ಕಳು ಬೆಳೆಯುತ್ತಾ ಹೋದಂತೆ ಯೆಹೋವನ ಸಮೀಪಕ್ಕೆ ಬರುವುದನ್ನು ಮುಂದುವರಿಸಿದರು. ಈಗ ಅವರ ಮದುವೆಯಾಗಿದೆ. ಗಂಡಂದಿರೊಂದಿಗೆ ಪೂರ್ಣ ಸಮಯದ ಸೇವೆ ಮಾಡುತ್ತಿದ್ದಾರೆ. ಯೆಹೋವನು ಒಬ್ಬ ನೈಜ ವ್ಯಕ್ತಿ ಮತ್ತು ಮಕ್ಕಳು ಆತನ ಸ್ನೇಹಿತರಾಗಬಹುದು ಎಂದು ಹೇಳಿಕೊಡುವುದೇ ಹೆತ್ತವರು ತಮ್ಮ ಮಕ್ಕಳಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆ. ಆದರೆ ಪ್ರತಿಯೊಂದು ಮಗು ಯೆಹೋವನ ಜೊತೆ ಆಪ್ತ ಸ್ನೇಹವನ್ನು ಉಳಿಸಿಕೊಳ್ಳಬೇಕು.—ಕೀರ್ತ. 5:11, 12; 91:14.

“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”

7. (ಎ) ನಮಗೆ ಯಾವ ಸುಯೋಗವಿದೆ? (ಬಿ) ನಾವೇನು ಮಾಡಬೇಕು?

7 ದೇವರ ಹೆಸರನ್ನು ತಿಳಿದುಕೊಳ್ಳುವ ಮತ್ತು ‘ಆತನ ಹೆಸರಿಗಾಗಿರುವ ಪ್ರಜೆ’ಗಳಾಗುವ ಸುಯೋಗ ನಮಗಿದೆ. (ಅ. ಕಾ. 15:14; ಯೆಶಾ. 43:10) “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಅಂದರೆ ಪರಿಶುದ್ಧವಾಗಲಿ ಎಂದು ಪ್ರಾರ್ಥಿಸುತ್ತೇವೆ. ಯೆಹೋವನಿಗೆ ಅಗೌರವ ತರುವ ಯಾವುದನ್ನೂ ಹೇಳದಂತೆ, ಮಾಡದಂತೆ ಸಹಾಯಕ್ಕಾಗಿ ಆತನಲ್ಲಿ ಕೇಳಿಕೊಳ್ಳುತ್ತೇವೆ. ನಾವು ಮೊದಲನೇ ಶತಮಾನದ ಕೆಲವು ಕ್ರೈಸ್ತರಂತೆ ಇರಬಾರದು. ಅವರು ಬೇರೆಯವರಿಗೆ ಕಲಿಸುತ್ತಿದ್ದದ್ದೇ ಒಂದು, ಮಾಡುತ್ತಿದ್ದದ್ದೇ ಇನ್ನೊಂದು. ಅದಕ್ಕಾಗಿಯೇ ಪೌಲನು ಅವರಿಗೆ “ನಿಮ್ಮ ಕಾರಣದಿಂದ ಜನಾಂಗಗಳ ಮಧ್ಯೆ ದೇವರ ಹೆಸರು ದೂಷಣೆಗೆ ಗುರಿಯಾಗುತ್ತಿದೆ” ಎಂದು ಬರೆದನು.—ರೋಮ. 2:21-24.

8, 9. ತನ್ನ ಹೆಸರನ್ನು ಪವಿತ್ರೀಕರಿಸುವ ಆಸೆ ಇರುವವರಿಗೆ ಯೆಹೋವನು ಸಹಾಯ ಮಾಡುತ್ತಾನೆಂಬುದಕ್ಕೆ ಉದಾಹರಣೆ ಕೊಡಿ.

8 ಯೆಹೋವನ ಹೆಸರನ್ನು ಘನಪಡಿಸಲು ನಮ್ಮಿಂದಾದ ಎಲ್ಲವನ್ನೂ ಮಾಡುತ್ತೇವೆ. ನಾರ್ವೆ ದೇಶದ ಒಬ್ಬ ಸಹೋದರಿಯ ಗಂಡ ತೀರಿಕೊಂಡಾಗ ಅವರ ಮಗನಿಗೆ ಬರೀ 2 ವರ್ಷ ಅಷ್ಟೇ. ಸಹೋದರಿ ಹೇಳುವುದು: “ನನ್ನ ಬದುಕಿನ ಆ ಘಟ್ಟದಲ್ಲಿ ನಾನು ತುಂಬ ಕಷ್ಟಪಟ್ಟೆ. ಪ್ರತೀ ದಿನ, ಹೆಚ್ಚುಕಡಿಮೆ ಗಂಟೆಗೊಮ್ಮೆ ಪ್ರಾರ್ಥಿಸಿದೆ. ಭಾವನೆಗಳನ್ನು ಹತೋಟಿಯಲ್ಲಿಡಲಿಕ್ಕೆ ಬೇಡಿಕೊಂಡೆ. ಏಕೆಂದರೆ ನನ್ನ ಅವಿವೇಕದ ತೀರ್ಮಾನದಿಂದಾಗಲಿ, ಅಪನಂಬಿಗಸ್ತಿಕೆಯಿಂದಾಗಲಿ ಯೆಹೋವನನ್ನು ಹಂಗಿಸಲು ಸೈತಾನನಿಗೆ ಅವಕಾಶ ಕೊಡಲು ನನಗೆ ಇಷ್ಟವಿರಲಿಲ್ಲ. ಯೆಹೋವನ ಹೆಸರನ್ನು ಪವಿತ್ರೀಕರಿಸುವ ಆಸೆ ನನಗಿತ್ತು. ನನ್ನ ಮಗ ಅವನ ಅಪ್ಪನನ್ನು ಪರದೈಸಲ್ಲಿ ನೋಡಬೇಕೆಂಬ ಬಯಕೆ ನನಗಿತ್ತು.”—ಜ್ಞಾನೋ. 27:11.

9 ಯೆಹೋವನು ಈ ಸಹೋದರಿಯ ಪ್ರಾರ್ಥನೆಗೆ ಉತ್ತರ ಕೊಟ್ಟನಾ? ಹೌದು. ಸಹೋದರ ಸಹೋದರಿಯರ ಜೊತೆ ತಪ್ಪದೆ ಸಹವಾಸ ಮಾಡುತ್ತಿದ್ದದರಿಂದ ಈಕೆಗೆ ಪ್ರೋತ್ಸಾಹ ಸಿಕ್ಕಿತು. 5 ವರ್ಷಗಳ ನಂತರ ಈಕೆ ಹಿರಿಯನೊಬ್ಬನನ್ನು ಮದುವೆಯಾದಳು. ಈಗ ಅವಳ ಮಗನಿಗೆ 20 ವರ್ಷ, ದೀಕ್ಷಾಸ್ನಾನವೂ ಆಗಿದೆ. “ನನ್ನ ಮಗನನ್ನು ಬೆಳೆಸಲು ನನ್ನ ಗಂಡ ಸಹಾಯ ಮಾಡಿದಕ್ಕೆ ನನಗೆ ತುಂಬ ಸಂತೋಷವಿದೆ” ಎಂದು ಆಕೆ ಹೇಳುತ್ತಾಳೆ.

10. ದೇವರು ತನ್ನ ನಾಮವನ್ನು ಹೇಗೆ ಪೂರ್ಣ ರೀತಿಯಲ್ಲಿ ಪವಿತ್ರೀಕರಿಸುವನು?

10 ಯಾರೆಲ್ಲ ಯೆಹೋವನಿಗೆ ಗೌರವ ಸಲ್ಲಿಸುವುದಿಲ್ಲವೊ, ಆತನನ್ನು ಅಧಿಪತಿಯಾಗಿ ಒಪ್ಪುವುದಿಲ್ಲವೊ ಅಂಥವರನ್ನು ನಾಶ ಮಾಡುವ ಮೂಲಕ ಯೆಹೋವನು ಪೂರ್ಣ ರೀತಿಯಲ್ಲಿ ತನ್ನ ನಾಮವನ್ನು ಪವಿತ್ರೀಕರಿಸುವನು. (ಯೆಹೆಜ್ಕೇಲ 38:22, 23 ಓದಿ.) ನಂತರ ಮನುಷ್ಯರು ಪರಿಪೂರ್ಣರಾಗುವರು ಮತ್ತು ಸ್ವರ್ಗದಲ್ಲಿ, ಭೂಮಿಯಲ್ಲಿ ಇರುವವರೆಲ್ಲರೂ ಯೆಹೋವನನ್ನು ಆರಾಧಿಸುವರು ಹಾಗೂ ಆತನ ಪವಿತ್ರ ಹೆಸರಿಗೆ ಘನತೆ ತರುವರು. ಕೊನೆಗೆ ನಮ್ಮ ಪ್ರೀತಿಯ ತಂದೆ “ಎಲ್ಲರಿಗೂ ಎಲ್ಲವೂ ಆಗುವನು.”—1 ಕೊರಿಂ. 15:28.

“ನಿನ್ನ ರಾಜ್ಯವು ಬರಲಿ”

11, 12. ಇಸವಿ 1876ರಲ್ಲಿ ಯೆಹೋವನು ತನ್ನ ಜನರಿಗೆ ಏನನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದನು?

11 ಯೇಸು ಸ್ವರ್ಗಕ್ಕೆ ಹಿಂದಿರುಗುವ ಮುಂಚೆ ಅವನ ಶಿಷ್ಯರು “ಕರ್ತನೇ, ನೀನು ಈ ಕಾಲದಲ್ಲೇ ಇಸ್ರಾಯೇಲ್ಯರಿಗೆ ರಾಜ್ಯವನ್ನು ಪುನಸ್ಸ್ಥಾಪಿಸುತ್ತಿದ್ದೀಯೊ?” ಎಂದು ಕೇಳಿದರು. ಆಗ ಯೇಸು ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಗುತ್ತದೆಂದು ನೀವು ತಿಳಿಯುವ ಸಮಯ ಇನ್ನೂ ಬಂದಿಲ್ಲ ಎಂದನು. ಪ್ರಾಮುಖ್ಯವಾದ ಸಾರುವ ಕೆಲಸಕ್ಕೆ ಗಮನ ಕೊಡುವಂತೆ ತನ್ನ ಶಿಷ್ಯರಿಗೆ ಹೇಳಿದನು. (ಅಪೊಸ್ತಲರ ಕಾರ್ಯಗಳು 1:6-8 ಓದಿ.) ಆದರೆ ದೇವರ ರಾಜ್ಯ ಬರಲಿ ಎಂದು ಪ್ರಾರ್ಥಿಸುವಂತೆ, ಆ ಸಮಯಕ್ಕಾಗಿ ಮುನ್ನೋಡುವಂತೆಯೂ ಯೇಸು ಹೇಳಿಕೊಟ್ಟನು. ಆದ್ದರಿಂದಲೇ ರಾಜ್ಯವು ಬರಲಿ ಎಂದು ನಾವು ಈಗಲೂ ಪ್ರಾರ್ಥಿಸುತ್ತೇವೆ.

12 ಯೇಸು ಸ್ವರ್ಗದಲ್ಲಿ ತನ್ನ ಆಳ್ವಿಕೆ ಆರಂಭಿಸುವ ಸಮಯ ಹತ್ತಿರ ಬರುತ್ತಿದ್ದಂತೆ ಅದು ಯಾವ ವರ್ಷದಲ್ಲಿ ಆರಂಭವಾಗುವುದೆಂದು ಅರ್ಥ ಮಾಡಿಕೊಳ್ಳಲು ಯೆಹೋವನು ತನ್ನ ಜನರಿಗೆ ಸಹಾಯ ಮಾಡಿದನು. 1876ರಲ್ಲಿ ಚಾರ್ಲ್ಸ್‌ ಟೇಜ್‌ ರಸಲ್‌ರವರು “ಅನ್ಯಜನಾಂಗಗಳ ಕಾಲ: ಯಾವಾಗ ಮುಗಿಯುವುದು?” ಎಂಬ ಲೇಖನ ಬರೆದರು. ಅದರಲ್ಲಿ ದಾನಿಯೇಲನ ಪ್ರವಾದನೆಯಲ್ಲಿರುವ “ಏಳು ಕಾಲ” ಮತ್ತು ಯೇಸುವಿನ ಪ್ರವಾದನೆಯಲ್ಲಿರುವ “ಅನ್ಯಜನಾಂಗಗಳ ನೇಮಿತ ಕಾಲ” ಎರಡೂ ಒಂದೇ ಎಂದೂ ವಿವರಿಸಿದರು. ಆ ಕಾಲ ಮುಗಿಯುವುದು 1914ರಲ್ಲಿ ಎಂದು ಆ ಲೇಖನ ವಿವರಿಸಿತು. * (ಪಾದಟಿಪ್ಪಣಿ ನೋಡಿ)—ದಾನಿ. 4:16, ಪಾದಟಿಪ್ಪಣಿ; ಲೂಕ 21:24.

13. (ಎ) 1914ರಲ್ಲಿ ಏನಾಯಿತು? (ಬಿ) 1914ರಿಂದ ಲೋಕದ ಘಟನೆಗಳು ಏನನ್ನು ಸಾಬೀತುಪಡಿಸುತ್ತಿವೆ?

13 ಯುರೋಪ್‍ನಲ್ಲಿ 1914ರಲ್ಲಿ ಯುದ್ಧ ಶುರುವಾಯಿತು ಮತ್ತು ಅದು ಇಡೀ ಲೋಕಕ್ಕೆ ವ್ಯಾಪಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಯುದ್ಧದ ಕಾರಣ ಎಲ್ಲೆಲ್ಲೂ ಭಯಂಕರ ಕ್ಷಾಮವಿತ್ತು. 1918ರಲ್ಲಿ ಯುದ್ಧ ಕೊನೆಯಾಗುವ ಮುಂಚೆ ಒಂದು ಮಾರಣಾಂತಿಕ ಜ್ವರ ಶುರುವಾಯಿತು. ಇಡೀ ಲೋಕದಲ್ಲಿ ಅದಕ್ಕೆ ಬಲಿಯಾದವರು ಆ ಯುದ್ಧದಲ್ಲಿ ಸತ್ತವರಿಗಿಂತ ಹೆಚ್ಚಿದ್ದರು. ಈ ಎಲ್ಲಾ ಸಂಗತಿಗಳು ಯೇಸು ಕೊಟ್ಟ “ಸೂಚನೆಯ” ಭಾಗವಾಗಿದ್ದವು. ಯೇಸು 1914ರಲ್ಲಿ ಸ್ವರ್ಗದಲ್ಲಿ ರಾಜನಾದನೆಂದು ಈ ಸೂಚನೆ ಸಾಬೀತುಪಡಿಸಿತು. (ಮತ್ತಾ. 24:3-8; ಲೂಕ 21:10, 11) ಆ ವರ್ಷದಲ್ಲಿ “ಅವನು ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು” ಹೊರಟನು. (ಪ್ರಕ. 6:2) ಸೈತಾನನನ್ನು, ಅವನ ದೆವ್ವಗಳನ್ನು ಸ್ವರ್ಗದಿಂದ ಭೂಮಿಗೆ ಎಸೆದನು. ನಂತರ ಈ ಪ್ರವಾದನೆಯ ನೆರವೇರಿಕೆ ಶುರುವಾಯಿತು: “ಭೂಮಿಗೂ ಸಮುದ್ರಕ್ಕೂ ಅಯ್ಯೋ, ಏಕೆಂದರೆ ಪಿಶಾಚನು ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು ಮಹಾ ಕೋಪದಿಂದ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”—ಪ್ರಕ. 12:7-12.

14. (ಎ) ದೇವರ ರಾಜ್ಯ ಬರಬೇಕೆಂದು ನಾವೀಗಲೂ ಪ್ರಾರ್ಥಿಸುವುದೇಕೆ? (ಬಿ) ಮುಖ್ಯವಾದ ಯಾವ ಕೆಲಸವನ್ನು ನಾವೀಗ ಮಾಡಬೇಕು?

14 ಪ್ರಕಟನೆ 12ನೇ ಅಧ್ಯಾಯದಲ್ಲಿರುವ ಆ ಪ್ರವಾದನೆಯು ಯೇಸು ದೇವರ ರಾಜ್ಯದ ಅರಸನಾಗುವ ಸಮಯದಷ್ಟಕ್ಕೆ ಭೂಮಿಯ ಮೇಲೆ ಭಯಾನಕ ವಿಷಯಗಳು ಏಕೆ ಆರಂಭವಾದವು ಎಂದು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಯೇಸು ಸ್ವರ್ಗದಲ್ಲಿ ಆಳುತ್ತಿದ್ದಾನೆ ನಿಜ. ಹಾಗಿದ್ದರೂ ಭೂಮಿಯನ್ನು ಇನ್ನೂ ಆಳುತ್ತಿರುವುದು ಸೈತಾನನೇ. ಆದರೆ ಆದಷ್ಟೂ ಬೇಗ ಯೇಸು ಭೂಮಿಯಲ್ಲಿರುವ ಎಲ್ಲಾ ಕೆಟ್ಟತನವನ್ನು ತೆಗೆದುಹಾಕಿ ‘ತನ್ನ ವಿಜಯವನ್ನು ಪೂರ್ಣಗೊಳಿಸಲಿದ್ದಾನೆ.’ ಅಲ್ಲಿ ವರೆಗೆ ನಾವು ದೇವರ ರಾಜ್ಯ ಬರುವಂತೆ ಪ್ರಾರ್ಥಿಸುತ್ತಾ, ರಾಜ್ಯದ ಬಗ್ಗೆ ಸಾರುತ್ತಾ ಇರುವೆವು. ಹೀಗೆ ನಮ್ಮ ಈ ಕೆಲಸ ಯೇಸು ಹೇಳಿದ ಈ ಪ್ರವಾದನೆಯನ್ನು ನೆರವೇರಿಸುತ್ತದೆ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾ. 24:14.

‘ನಿನ್ನ ಚಿತ್ತವು ಭೂಮಿಯಲ್ಲಿ ನೆರವೇರಲಿ’

15, 16. ದೇವರ ಚಿತ್ತ ಭೂಮಿಯಲ್ಲಿ ನೆರವೇರಲಿ ಎಂದು ಪ್ರಾರ್ಥನೆ ಮಾಡಿದರೆ ಮಾತ್ರ ಸಾಕಾ? ವಿವರಿಸಿ.

15 ಸುಮಾರು 6,000 ವರ್ಷಗಳ ಹಿಂದೆ ದೇವರ ಚಿತ್ತ ಭೂಮಿಯಲ್ಲಿ ನೆರವೇರುತ್ತಿತ್ತು. ಅದಕ್ಕೇ ಯೆಹೋವನು ಎಲ್ಲವೂ ‘ಬಹು ಒಳ್ಳೇದಾಗಿದೆ’ ಎಂದು ಹೇಳಿದನು. (ಆದಿ. 1:31) ಆದರೆ ಸೈತಾನ ದಂಗೆಯೆದ್ದ. ಅಂದಿನಿಂದ ಅನೇಕರು ದೇವರ ಚಿತ್ತವನ್ನು ಮಾಡುತ್ತಿಲ್ಲ. ಆದರೆ ಇಂದು 80 ಲಕ್ಷಕ್ಕಿಂತ ಹೆಚ್ಚು ಜನ ಯೆಹೋವನ ಸೇವೆ ಮಾಡುತ್ತಿದ್ದಾರೆ. ದೇವರ ಚಿತ್ತ ಭೂಮಿಯಲ್ಲಿ ನೆರವೇರಬೇಕೆಂದು ಅವರು ಪ್ರಾರ್ಥಿಸುತ್ತಾರೆ. ಜೊತೆಗೆ ದೇವರ ಚಿತ್ತವನ್ನು ಮಾಡುತ್ತಾರೆ ಸಹ. ಹೇಗೆ? ದೇವರು ಮೆಚ್ಚುವಂಥ ರೀತಿಯಲ್ಲಿ ಬದುಕುತ್ತಾರೆ, ಹುರುಪಿನಿಂದ ಆತನ ರಾಜ್ಯದ ಬಗ್ಗೆ ಇತರರಿಗೆ ಕಲಿಸುತ್ತಾರೆ.

ನಿಮ್ಮ ಮಕ್ಕಳಿಗೆ ದೇವರ ಚಿತ್ತ ಮಾಡುವಂತೆ ಕಲಿಸುತ್ತಿದ್ದೀರಾ? (ಪ್ಯಾರ 16 ನೋಡಿ)

16 ಆಫ್ರಿಕದಲ್ಲಿರುವ 80 ವರ್ಷ ಪ್ರಾಯದ ಒಬ್ಬ ಮಿಷನರಿಯ ಉದಾಹರಣೆ ನೋಡಿ. ಇವರಿಗೆ 1948ರಲ್ಲಿ ದೀಕ್ಷಾಸ್ನಾನವಾಯಿತು. “ಕಾಲ ಮಿಂಚಿ ಹೋಗುವ ಮುಂಚೆಯೇ ಕುರಿಗಳಂಥ ಜನರನ್ನು ಕಂಡುಕೊಂಡು ಅವರು ಯೆಹೋವನ ಬಗ್ಗೆ ತಿಳಿದುಕೊಳ್ಳಲು ಸಹಾಯ ಸಿಗಬೇಕೆಂದು ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ಜೊತೆಗೆ ನಾನು ಯಾರಿಗಾದರೂ ಸಾಕ್ಷಿ ಕೊಡಬೇಕೆಂದಿರುವಾಗ ಆ ವ್ಯಕ್ತಿಯ ಹೃದಯ ಮುಟ್ಟುವ ರೀತಿಯಲ್ಲಿ ಮಾತಾಡಲು ವಿವೇಕಕ್ಕಾಗಿ ಪ್ರಾರ್ಥಿಸುತ್ತೇನೆ. ಈಗಾಗಲೇ ಸತ್ಯ ಸಿಕ್ಕಿರುವ ಕುರಿಗಳಂಥ ಜನರನ್ನು ನೋಡಿಕೊಳ್ಳಲು ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಬೇಕೆಂದೂ ಪ್ರಾರ್ಥಿಸುತ್ತೇನೆ” ಎಂದವರು ಹೇಳುತ್ತಾರೆ. ಈ ವಯಸ್ಸಾದ ಸಹೋದರಿ ತುಂಬ ಜನರಿಗೆ ಯೆಹೋವನ ಬಗ್ಗೆ ಕಲಿಯಲು ಸಹಾಯ ಮಾಡಿದ್ದಾರೆ. ಯೆಹೋವನ ಚಿತ್ತವನ್ನು ಹುರುಪಿನಿಂದ ಮಾಡುತ್ತಿರುವ ಇತರ ವಯಸ್ಸಾದ ಸಹೋದರ ಸಹೋದರಿಯರು ನಿಮ್ಮ ನೆನಪಿಗೆ ಬರುತ್ತಾರಾ?—ಫಿಲಿಪ್ಪಿ 2:17 ಓದಿ.

17. ಮನುಷ್ಯರಿಗಾಗಿ ಮತ್ತು ಭೂಮಿಗಾಗಿ ಯೆಹೋವನು ಭವಿಷ್ಯದಲ್ಲಿ ಮಾಡಲಿರುವ ವಿಷಯಗಳ ಬಗ್ಗೆ ನಿಮಗೆ ಹೇಗನಿಸುತ್ತದೆ?

17 ಯೆಹೋವನು ಭೂಮಿಯಿಂದ ತನ್ನೆಲ್ಲಾ ವೈರಿಗಳನ್ನು ನಾಶ ಮಾಡುವ ತನಕ ಆತನ ಚಿತ್ತ ನೆರವೇರಬೇಕೆಂದು ಪ್ರಾರ್ಥಿಸುತ್ತಿರುವೆವು. ನಂತರ ಭೂಮಿ ಪರದೈಸಾಗುವುದು, ಕೋಟಿಗಟ್ಟಲೆ ಜನರ ಪುನರುತ್ಥಾನವಾಗುವುದು. “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ” ಎಂದು ಯೇಸು ಹೇಳಿದನು. (ಯೋಹಾ. 5:28, 29) ನಮ್ಮ ಪ್ರಿಯರನ್ನು ಸ್ವಾಗತಿಸುವಾಗ ನಮಗಾಗುವ ಆನಂದವನ್ನು ಊಹಿಸಬಲ್ಲಿರಾ? ದೇವರು ನಮ್ಮ ದುಃಖದ “ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕ. 21:4) ಪುನರುತ್ಥಾನವಾಗುವವರಲ್ಲಿ ಅನೇಕ ‘ಅನೀತಿವಂತರು’ ಇರುತ್ತಾರೆ. ಇವರಿಗೆ ಯಾವತ್ತೂ ಯೆಹೋವ ಮತ್ತು ಯೇಸುವಿನ ಬಗ್ಗೆ ಸತ್ಯವನ್ನು ಕಲಿಯುವ ಅವಕಾಶವೇ ಸಿಕ್ಕಿರಲಿಲ್ಲ. ಇವರೂ “ನಿತ್ಯಜೀವ” ಪಡೆಯಬೇಕೆಂದು ನಾವು ದೇವರ ಚಿತ್ತದ ಬಗ್ಗೆ ಇವರಿಗೆ ಕಲಿಸುವುದು ನಮಗೊಂದು ಸುಯೋಗವಾಗಿರುತ್ತದೆ.—ಅ. ಕಾ. 24:15; ಯೋಹಾ. 17:3.

18. ಮಾನವಕುಲಕ್ಕೆ ತುಂಬ ಅಗತ್ಯವಿರುವ ವಿಷಯಗಳು ಯಾವುವು?

18 ದೇವರ ರಾಜ್ಯ ಬಂದಾಗ ಅದು ಯೆಹೋವನ ನಾಮವನ್ನು ಪವಿತ್ರೀಕರಿಸಲಿದೆ ಮತ್ತು ವಿಶ್ವದಲ್ಲಿರುವ ಎಲ್ಲರೂ ಆಗ ಯೆಹೋವನನ್ನು ಐಕ್ಯವಾಗಿ ಆರಾಧಿಸಲಿದ್ದಾರೆ. ಮಾದರಿ ಪ್ರಾರ್ಥನೆಯ ಮೊದಲ ಮೂರು ಬಿನ್ನಹಗಳನ್ನು ಯೆಹೋವನು ಪೂರೈಸುವಾಗ ಮಾನವಕುಲಕ್ಕೆ ತುಂಬ ಅಗತ್ಯವಿರುವ ವಿಷಯಗಳನ್ನು ಕೊಡಲಿದ್ದಾನೆ. ಇತರ ಪ್ರಾಮುಖ್ಯ ಅಗತ್ಯಗಳ ಬಗ್ಗೆ ಪ್ರಾರ್ಥಿಸುವಂತೆ ಯೇಸು ಹೇಳಿಕೊಟ್ಟದ್ದನ್ನು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 12 1914ರಲ್ಲಿ ಹೇಗೆ ಆ ಪ್ರವಾದನೆ ನೆರವೇರಿತು ಎಂದು ತಿಳಿಯಲು “ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?” ಪುಸ್ತಕದ ಪುಟ 215-218 ನೋಡಿ.