ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 2

ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 2

‘ನಿಮ್ಮ ತಂದೆಗೆ ನಿಮಗೆ ಯಾವುದರ ಆವಶ್ಯಕತೆ ಇದೆಯೆಂಬುದು ತಿಳಿದಿದೆ.’—ಮತ್ತಾ. 6:8.

1-3. ತನಗೇನು ಬೇಕೊ ಅದು ಯೆಹೋವನಿಗೆ ತಿಳಿದಿತ್ತೆಂದು ಒಬ್ಬ ಸಹೋದರಿಗೆ ಏಕೆ ಖಾತ್ರಿಯಿತ್ತು?

ಲ್ಯಾನ ಒಬ್ಬ ರೆಗ್ಯುಲರ್‌ ಪಯನೀಯರ್‌. 2012ರಲ್ಲಿ ಜರ್ಮನಿಗೆ ಹೋಗಿದ್ದಾಗ ಅಲ್ಲಿ ನಡೆದ ಘಟನೆಯೊಂದನ್ನು ಅವಳು ಯಾವತ್ತೂ ಮರೆಯುವುದಿಲ್ಲ. ಅವಳ ಎರಡು ಪ್ರಾರ್ಥನೆಗಳಿಗೆ ಯೆಹೋವನು ಉತ್ತರಿಸಿದನೆಂದು ಅವಳಿಗನಿಸಿತು. ಯಾರಿಗಾದರೂ ಸಾರಲು ಅವಕಾಶ ಕೊಡುವಂತೆ ಅವಳು ವಿಮಾನ ನಿಲ್ದಾಣಕ್ಕೆ ಹೋಗಲು ಟ್ರೇನ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಾರ್ಥಿಸಿದಳು. ಅಲ್ಲಿಗೆ ತಲುಪಿದಾಗ ತಾನು ಹೋಗಬೇಕಿದ್ದ ವಿಮಾನದ ಹಾರಾಟವನ್ನು ಮಾರನೇ ದಿನಕ್ಕೆ ಮುಂದೂಡಲಾಗಿದೆ ಎಂದು ಅವಳಿಗೆ ಗೊತ್ತಾಯಿತು. ಲ್ಯಾನ ಯೆಹೋವನ ಸಹಾಯಕ್ಕಾಗಿ ಕೇಳಿಕೊಂಡಳು. ಆ ರಾತ್ರಿ ಅವಳಿಗೆ ಉಳಿಯಲು ಸ್ಥಳ ಬೇಕಿತ್ತು. ಅವಳ ಹತ್ತಿರ ಇದ್ದ ಹಣ ಈಗಾಗಲೇ ಖರ್ಚಾಗಿ ಸ್ವಲ್ಪವೇ ಉಳಿದಿತ್ತು.

2 ಲ್ಯಾನ ಪ್ರಾರ್ಥನೆ ಮಾಡಿ ಮುಗಿಸಿದ ಮರುಕ್ಷಣವೇ ಒಬ್ಬ ಯುವ ವ್ಯಕ್ತಿ ಬಂದು, “ಹಲೋ ಲ್ಯಾನ, ಇಲ್ಲೇನು ಮಾಡ್ತಿದ್ದೀಯಾ?” ಎಂದು ಕೇಳಿದ. ಇವನು ಮತ್ತು ಲ್ಯಾನ ಒಟ್ಟಿಗೆ ಶಾಲೆಯಲ್ಲಿ ಓದಿದ್ದರು. ದಕ್ಷಿಣ ಆಫ್ರಿಕಕ್ಕೆ ಹೋಗುತ್ತಿದ್ದ ಅವನನ್ನು ಕಳುಹಿಸಿಕೊಡಲು ಅವನ ಅಮ್ಮ ಮತ್ತು ಅಜ್ಜಿ ಬಂದಿದ್ದರು. ತನ್ನ ಸಮಸ್ಯೆ ಬಗ್ಗೆ ಲ್ಯಾನ ಹೇಳಿದಾಗ ಅವನ ಅಮ್ಮ ಮತ್ತು ಅಜ್ಜಿ ತಮ್ಮ ಮನೆಯಲ್ಲಿ ಉಳಿಯಲು ಅವಳನ್ನು ಆಮಂತ್ರಿಸಿದರು. ಅವರ ಮನೆಗೆ ಹೋದ ಮೇಲೆ ಲ್ಯಾನಳ ನಂಬಿಕೆಗಳು ಮತ್ತು ಅವಳು ಪಯನೀಯರ್‌ ಆಗಿರುವುದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು.

3 ಮಾರನೇ ದಿನ ಬೆಳಗ್ಗೆ ತಿಂಡಿ ಆದ ಮೇಲೆ ಅವರು ಬೈಬಲ್‌ ಬಗ್ಗೆ ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ಲ್ಯಾನ ಉತ್ತರ ಕೊಟ್ಟಳು. ಅವರಿಗಿದ್ದ ಇನ್ನೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ನೀಡಲು ಬೇರೆಯವರು ಅಲ್ಲಿಗೆ ಬರುವಂತೆ ಬೇಕಾದ ವಿವರಗಳನ್ನು ಅವರಿಂದ ಪಡೆದಳು. ನಂತರ ಅವಳು ಸುರಕ್ಷಿತವಾಗಿ ಮನೆ ತಲುಪಿದಳು. ಈಗಲೂ ಪಯನೀಯರಳಾಗಿದ್ದಾಳೆ. ತನ್ನ ಪ್ರಾರ್ಥನೆಯನ್ನು ಯೆಹೋವನು ಕೇಳಿದನು, ತನ್ನ ಅಗತ್ಯವೇನೆಂದು ಆತನಿಗೆ ಗೊತ್ತಿತ್ತು ಮತ್ತು ಆತನೇ ಸಹಾಯ ಮಾಡಿದನೆಂದು ಆಕೆಗನಿಸುತ್ತದೆ.—ಕೀರ್ತ. 65:2.

4. ಯಾವ ಅವಶ್ಯಕ ವಿಷಯಗಳ ಬಗ್ಗೆ ನಾವು ಚರ್ಚಿಸಲಿದ್ದೇವೆ?

4 ದಿಢೀರೆಂದು ಸಮಸ್ಯೆ ಬಂದಾಗ ಸಹಾಯಕ್ಕಾಗಿ ತಕ್ಷಣ ಯೆಹೋವನಿಗೆ ಪ್ರಾರ್ಥಿಸುತ್ತೇವೆ. ಆತನಿಗೂ ನಮ್ಮ ಪ್ರಾರ್ಥನೆಗೆ ಕಿವಿಗೊಡಲು ಸಂತೋಷವಾಗುತ್ತದೆ. (ಕೀರ್ತ. 34:15; ಜ್ಞಾನೋ. 15:8) ಆದರೆ ಯೇಸುವಿನ ಮಾದರಿ ಕಲಿಸುವುದೇನೆಂದರೆ ನಾವು ಪ್ರಾರ್ಥಿಸಬೇಕಾದ ಇನ್ನಿತರ ಅವಶ್ಯಕ ವಿಷಯಗಳಿವೆ. ಮಾದರಿ ಪ್ರಾರ್ಥನೆಯ ಕೊನೇ ನಾಲ್ಕು ಬಿನ್ನಹಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಈ ಬಿನ್ನಹಗಳು ಯೆಹೋವನಿಗೆ ನಿಷ್ಠರಾಗಿರಲು ನಮಗೆ ಸಹಾಯಮಾಡುತ್ತವೆ.ಮತ್ತಾಯ 6:11-13 ಓದಿ.

“ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು”

5, 6. ನಮಗೆ ಆಹಾರಕ್ಕೇನು ಕೊರತೆ ಇಲ್ಲದಿದ್ದರೂ ‘ನಮ್ಮ ಆಹಾರ’ಕ್ಕಾಗಿ ಬೇಡುವಂತೆ ಯೇಸು ಹೇಳಿಕೊಟ್ಟಿದ್ದೇಕೆ?

5 ಯೇಸು ‘ನಮ್ಮ ಆಹಾರಕ್ಕಾಗಿ’ ಬೇಡುವಂತೆ ಹೇಳಿಕೊಟ್ಟನೇ ವಿನಃ “ನನ್ನ ಆಹಾರ” ಎಂದಲ್ಲ. ಆಫ್ರಿಕದಲ್ಲಿ ಸರ್ಕಿಟ್‌ ಮೇಲ್ವಿಚಾರಕರಾಗಿರುವ ವಿಕ್ಟರ್‌ ಹೀಗೆ ವಿವರಿಸುತ್ತಾರೆ: “ನಾನು ಯೆಹೋವನಿಗೆ ಆಗಿಂದಾಗ್ಗೆ ಮನದಾಳದಿಂದ ಕೃತಜ್ಞತೆ ಹೇಳುತ್ತೇನೆ. ಏಕೆಂದರೆ ನನಗೆ ನನ್ನ ಹೆಂಡತಿಗೆ ಮುಂದಿನ ಹೊತ್ತಿನ ಊಟ ಎಲ್ಲಿಂದ ಬರುತ್ತದೆ, ಮನೆ ಬಾಡಿಗೆ ಯಾರು ಕಟ್ಟುತ್ತಾರೆ ಎಂಬ ವಿಷಯದ ಬಗ್ಗೆ ಅತಿಯಾಗಿ ಚಿಂತಿಸಬೇಕಾಗಿಲ್ಲ. ನಮ್ಮ ಸಹೋದರರು ನಮ್ಮನ್ನು ದಯೆಯಿಂದ ಪ್ರತಿದಿನ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಾಗಿದ್ದರೂ ನಮಗೆ ಸಹಾಯ ಮಾಡುವವರಿಗೆ ಎದುರಾಗುವ ಹಣಕಾಸಿನ ಒತ್ತಡಗಳನ್ನು ನಿಭಾಯಿಸಲು ನಾನು ಅವರಿಗಾಗಿ ಪ್ರಾರ್ಥನೆ ಮಾಡುತ್ತೇನೆ.”

6 ನಮಗೆ ಆಹಾರಕ್ಕೇನು ಕೊರತೆ ಇರಲಿಕ್ಕಿಲ್ಲ. ಆದರೆ ನಮ್ಮ ಸಹೋದರರಲ್ಲಿ ಅನೇಕರು ಬಡವರು. ಕೆಲವರು ವಿಪತ್ತುಗಳಿಗೆ ಒಳಗಾಗಿದ್ದಾರೆ. ಅವರಿಗಾಗಿ ನಾವು ಪ್ರಾರ್ಥನೆ ಮಾಡುವುದಷ್ಟೇ ಅಲ್ಲ ಅವರಿಗೇನಾದರು ಸಹಾಯ ಮಾಡುವುದೂ ಒಳ್ಳೇದು. ಉದಾಹರಣೆಗೆ ನಮ್ಮ ಬಳಿ ಏನಿದೆಯೊ ಅದನ್ನು ಅವರೊಟ್ಟಿಗೆ ಹಂಚಿಕೊಳ್ಳಬಹುದು. ಯೆಹೋವನ ಜನರ ಲೋಕವ್ಯಾಪಕ ಕೆಲಸಕ್ಕಾಗಿ ನಾವು ತಪ್ಪದೆ ಕಾಣಿಕೆ ನೀಡಬಹುದು. ಈ ಕಾಣಿಕೆಗಳಿಂದಾಗಿ ಸಹಾಯದ ಅಗತ್ಯದಲ್ಲಿರುವ ನಮ್ಮ ಸಹೋದರರಿಗೆ ನೆರವು ಸಿಗುತ್ತದೆ.—1 ಯೋಹಾ. 3:17.

7. ನಾವು “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡ”ಬಾರದೆಂದು ಯೇಸು ಹೇಗೆ ಕಲಿಸಿದನು?

7 ಯೇಸು ಮಾದರಿ ಪ್ರಾರ್ಥನೆಯನ್ನು ಹೇಳಿಕೊಟ್ಟ ನಂತರ ಪ್ರಾಪಂಚಿಕ ವಿಷಯಗಳ ಬಗ್ಗೆ ನಾವು ಚಿಂತಿಸಬಾರದೆಂದು ಕಲಿಸಿದನು. ಕಾಡಿನಲ್ಲಿರುವ ಹೂವುಗಳನ್ನು ಯೆಹೋವನು ನೋಡಿಕೊಳ್ಳಬಹುದಾದರೆ “ಎಲೈ ಅಲ್ಪವಿಶ್ವಾಸಿಗಳೇ, . . . ನಿಮಗೆ ಇನ್ನೂ ಹೆಚ್ಚು ಉಡಿಸಿತೊಡಿಸುವನಲ್ಲವೆ? ಆದುದರಿಂದ ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ” ಎಂದನು ಯೇಸು. ಅವನು ಮತ್ತೆ ಹೇಳಿದ್ದು: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ.” (ಮತ್ತಾ. 6:30-34) ಭವಿಷ್ಯದ ಅಗತ್ಯಗಳ ಬಗ್ಗೆ ನಾವು ಅತಿಯಾಗಿ ಚಿಂತಿಸಬೇಕಾಗಿಲ್ಲ. ಅದರ ಬದಲು ಪ್ರತಿ ದಿನಕ್ಕೆ ಬೇಕೇಬೇಕಾದ ವಿಷಯಗಳಲ್ಲೇ ತೃಪ್ತರಾಗಿರಬೇಕು. ಉದಾಹರಣೆಗೆ ಇರುವುದಕ್ಕೊಂದು ಸ್ಥಳ, ಕುಟುಂಬ ನೋಡಿಕೊಳ್ಳಲು ಒಂದು ಕೆಲಸ ಮತ್ತು ನಮ್ಮ ಆರೋಗ್ಯದ ಬಗ್ಗೆ ಸರಿಯಾದ ನಿರ್ಣಯ ಮಾಡಲು ಬೇಕಾದ ವಿವೇಕಕ್ಕಾಗಿ ಪ್ರಾರ್ಥಿಸಬೇಕು. ಆದರೆ ಇದೆಲ್ಲಕ್ಕಿಂತ ಮುಖ್ಯವಾದ ಒಂದು ವಿಷಯಕ್ಕಾಗಿ ನಾವು ಪ್ರಾರ್ಥಿಸಬೇಕು.

8. ಅನುದಿನದ ಆಹಾರದ ಬಗ್ಗೆ ಯೇಸು ಹೇಳಿದ ಮಾತುಗಳು ನಮಗೆ ಏನನ್ನು ನೆನಪಿಗೆ ತರುತ್ತವೆ? (ಲೇಖನದ ಆರಂಭದ ಚಿತ್ರ ನೋಡಿ.)

8 ಅನುದಿನದ ಆಹಾರದ ಬಗ್ಗೆ ಯೇಸು ಹೇಳಿದ ಮಾತುಗಳು ನಮಗೆ ಇನ್ನೊಂದು ವಿಷಯವನ್ನು ನೆನಪಿಗೆ ತರುತ್ತದೆ: “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು.” (ಮತ್ತಾ. 4:4) ಆದ್ದರಿಂದ ಯೆಹೋವನು ನಮಗೆ ಕಲಿಸುತ್ತಾ ಇದ್ದು, ಆತನಿಗೆ ಆಪ್ತರಾಗಿ ಉಳಿಯಲಿಕ್ಕಾಗಿ ನಮಗೇನು ಬೇಕೊ ಅದನ್ನು ಕೊಡಲಿಯೆಂದು ನಾವು ಪ್ರಾರ್ಥಿಸುತ್ತಾ ಇರಬೇಕು.

‘ನಮ್ಮ ಪಾಪಗಳನ್ನು ಕ್ಷಮಿಸು’

9. ನಮ್ಮ ಪಾಪಗಳು ಯಾಕೆ ಸಾಲದಂತಿವೆ?

9 ‘ನಮ್ಮ ಪಾಪಗಳನ್ನು [ಸಾಲಗಳನ್ನು, ಪಾದಟಿಪ್ಪಣಿ] ಕ್ಷಮಿಸು’ ಎಂದು ಯೇಸು ಆ ಪ್ರಾರ್ಥನೆಯಲ್ಲಿ ಕಲಿಸಿದನು. (ಮತ್ತಾ. 6:12; ಲೂಕ 11:4) ನಮ್ಮ ಪಾಪಗಳನ್ನು ಸಾಲಗಳಿಗೆ ಹೋಲಿಸಲಾಗಿದೆ. ಯಾಕೆ? 1951ರ ಕಾವಲಿನಬುರುಜು ಹೀಗಂದಿತು: “ನಾವು ಪಾಪ ಮಾಡಿದಾಗ ಯೆಹೋವನ ಹತ್ತಿರ ಸಾಲ ಮಾಡಿದ ಹಾಗಿರುತ್ತದೆ. ಯೆಹೋವನಿಗೆ ಪ್ರೀತಿ ಮತ್ತು ವಿಧೇಯತೆಯನ್ನು ಸಲ್ಲಿಸುವ ಋಣ ನಮಗಿದೆ. ಆದರೆ ದೇವರ ವಿರುದ್ಧ ನಾವು ಪಾಪ ಮಾಡುವಾಗ ಆತನಿಗೆ ನಾವೇನನ್ನು ತೋರಿಸಬೇಕೊ, ಸಲ್ಲಿಸಬೇಕೊ ಅದನ್ನು ಸಲ್ಲಿಸುವುದಿಲ್ಲ. ಯೆಹೋವನು ಮನಸ್ಸು ಮಾಡಿದರೆ ನಮ್ಮ ಜೊತೆಗಿನ ತನ್ನ ಸ್ನೇಹವನ್ನು ಕಡಿದುಹಾಕಬಹುದು.” ಕಾವಲಿನಬುರುಜು ಮುಂದುವರಿಸಿ ಹೇಳಿದ್ದು: “ಪಾಪ ಮಾಡಿದರೆ ಅದು ನಮಗೆ ದೇವರ ಮೇಲೆ ಪ್ರೀತಿ ಇಲ್ಲ ಎಂದು ತೋರಿಸುತ್ತದೆ.”—1 ಯೋಹಾ. 5:3.

10. (ಎ) ಯೆಹೋವನು ನಮ್ಮ ಪಾಪಗಳನ್ನು ಏಕೆ ಕ್ಷಮಿಸುತ್ತಾನೆ? (ಬಿ) ಇದರ ಬಗ್ಗೆ ನಮಗೆ ಹೇಗನಿಸಬೇಕು?

10 ನಮ್ಮ ಪಾಪಗಳನ್ನು ಕ್ಷಮಿಸಲು ಯೆಹೋವನು ಯೇಸುವಿನ ವಿಮೋಚನಾ ಮೌಲ್ಯವನ್ನು ಕೊಟ್ಟಿರುವುದಕ್ಕೆ ನಾವೆಷ್ಟು ಕೃತಜ್ಞರಾಗಿರಬೇಕಲ್ಲವೇ? ನಮಗೆ ಪ್ರತಿ ದಿನ ಯೆಹೋವನ ಕ್ಷಮೆ ಬೇಕು. ಯೇಸು ಸತ್ತು ಸುಮಾರು 2,000 ವರ್ಷ ಕಳೆದರೂ ಈಗಲೂ ಅದರಿಂದ ಪ್ರಯೋಜನ ಪಡೆಯುತ್ತಿದ್ದೇವೆ. ಈ ಅಮೂಲ್ಯ ಉಡುಗೊರೆಗಾಗಿ ನಾವು ಯಾವಾಗಲೂ ಯೆಹೋವನಿಗೆ ಧನ್ಯವಾದ ಹೇಳಬೇಕು. ಏಕೆಂದರೆ ಪಾಪಮರಣಗಳಿಂದ ನಮ್ಮನ್ನು ಬಿಡಿಸಲು ಯಾರಿಂದಲೂ ಅಷ್ಟು ಬೆಲೆಬಾಳುವ ಮೌಲ್ಯವನ್ನು ಕೊಡಲಾಗುತ್ತಿರಲಿಲ್ಲ. (ಕೀರ್ತನೆ 49:7-9; 1 ಪೇತ್ರ 1:18, 19 ಓದಿ.) ‘ನಮ್ಮ ಪಾಪಗಳನ್ನು ಕ್ಷಮಿಸು’ ಎಂಬ ಪದಗಳು ನೆನಪಿಗೆ ತರುವ ಸಂಗತಿಯೇನೆಂದರೆ ನಮಗೆ ವಿಮೋಚನಾ ಮೌಲ್ಯದ ಅಗತ್ಯ ಇರುವಂತೆಯೇ ನಮ್ಮ ಸಹೋದರ ಸಹೋದರಿಯರಿಗೂ ಅದರ ಅಗತ್ಯವಿದೆ. ಅವರ ಬಗ್ಗೆ ಮತ್ತು ಯೆಹೋವನ ಜೊತೆ ಅವರಿಗಿರುವ ಸಂಬಂಧದ ಬಗ್ಗೆ ನಾವು ಯೋಚಿಸಬೇಕೆಂದು ಆತನು ಬಯಸುತ್ತಾನೆ. ಅವರು ನಮ್ಮ ವಿರುದ್ಧ ಪಾಪ ಮಾಡಿದರೆ ಬೇಗ ಕ್ಷಮಿಸಬೇಕೆಂದು ಇದು ನಮಗೆ ನೆನಪಿಸುತ್ತದೆ. ಸಾಮಾನ್ಯವಾಗಿ ಅವು ಚಿಕ್ಕಪುಟ್ಟ ತಪ್ಪುಗಳಾಗಿರುತ್ತವೆ. ನಮ್ಮ ಸಹೋದರರನ್ನು ಕ್ಷಮಿಸುವಾಗ ಅವರನ್ನು ಪ್ರೀತಿಸುತ್ತೇವೆಂದು ತೋರಿಸುತ್ತೇವೆ. ಅಷ್ಟೇ ಅಲ್ಲ ನಮ್ಮ ತಪ್ಪುಗಳನ್ನು ಯೆಹೋವನು ಕ್ಷಮಿಸುವುದಕ್ಕೆ ಆತನಿಗೆ ಕೃತಜ್ಞರೆಂದೂ ತೋರಿಸುತ್ತೇವೆ.—ಕೊಲೊ. 3:13.

ದೇವರು ನಿಮ್ಮನ್ನು ಕ್ಷಮಿಸಬೇಕಾದರೆ ನೀವು ಬೇರೆಯವರನ್ನು ಕ್ಷಮಿಸಬೇಕು (ಪ್ಯಾರ 11 ನೋಡಿ)

11. ಇತರರನ್ನು ಕ್ಷಮಿಸುವುದು ಏಕೆ ಪ್ರಾಮುಖ್ಯ?

11 ನಮ್ಮ ಮನನೋಯಿಸಿದವರನ್ನು ಕ್ಷಮಿಸುವುದು ಕೆಲವೊಮ್ಮೆ ಕಷ್ಟವಾಗಬಹುದು ಏಕೆಂದರೆ ನಾವು ಅಪರಿಪೂರ್ಣರು. (ಯಾಜ. 19:18) ಅವರು ನಮಗೇನು ಮಾಡಿದ್ದಾರೊ ಅದರ ಬಗ್ಗೆ ಬೇರೆಯವರಿಗೆಲ್ಲ ಹೇಳಿಕೊಂಡು ಬಂದರೆ ಇತರರು ನಮ್ಮ ಪಕ್ಷವಹಿಸಿ ಕಡೆಗೆ ಸಭೆಯಲ್ಲಿ ಒಡಕು ಉಂಟಾಗುತ್ತದೆ. ಕ್ಷಮಿಸದೇ ಇರುವಾಗ ಯೆಹೋವನು ನಮಗಾಗಿ ಕೊಟ್ಟ ವಿಮೋಚನಾ ಮೌಲ್ಯದ ಉಡುಗೊರೆಗೆ ನಾವು ಬೆಲೆಕೊಡುತ್ತಿಲ್ಲ ಎಂದರ್ಥ. ಅದರಿಂದ ಸಿಗುವ ಪ್ರಯೋಜನಗಳು ಲಭಿಸುವುದಿಲ್ಲ. (ಮತ್ತಾ. 18:35) ನಾವು ಇತರರನ್ನು ಕ್ಷಮಿಸದಿದ್ದರೆ ಯೆಹೋವನು ನಮ್ಮನ್ನು ಕ್ಷಮಿಸುವುದಿಲ್ಲ. (ಮತ್ತಾಯ 6:14, 15 ಓದಿ.) ಅಷ್ಟುಮಾತ್ರವಲ್ಲ, ಆತನು ನಮ್ಮ ಪಾಪಗಳನ್ನು ಕ್ಷಮಿಸಬೇಕಾದರೆ ಆತನು ದ್ವೇಷಿಸುವಂಥ ಯಾವುದೇ ವಿಷಯವನ್ನು ಮಾಡುತ್ತಾ ಇರಬಾರದು.—1 ಯೋಹಾ. 3:4, 6.

‘ಪ್ರಲೋಭನೆಯೊಳಗೆ ಸೇರಿಸದೆ ನಮ್ಮನ್ನು ತಪ್ಪಿಸು’

12, 13. (ಎ) ಯೇಸುವಿನ ದೀಕ್ಷಾಸ್ನಾನದ ನಂತರ ಏನಾಯಿತು? (ಬಿ) ನಾವು ಪ್ರಲೋಭನೆಗೆ ಮಣಿದರೆ ನಾವೇ ಅದಕ್ಕೆ ಜವಾಬ್ದಾರರು ಏಕೆ? (ಸಿ) ಸಾಯುವ ತನಕ ನಂಬಿಗಸ್ತನಾಗಿ ಉಳಿಯುವ ಮೂಲಕ ಯೇಸು ಏನನ್ನು ಸಾಬೀತುಪಡಿಸಿದನು?

12 ‘ಪ್ರಲೋಭನೆಯೊಳಗೆ ಸೇರಿಸದೆ ನಮ್ಮನ್ನು ತಪ್ಪಿಸು’ ಎಂಬ ಮಾದರಿ ಪ್ರಾರ್ಥನೆಯ ಪದಗಳು ಯೇಸುವಿನ ದೀಕ್ಷಾಸ್ನಾನವಾದ ಸ್ವಲ್ಪದರಲ್ಲೇ ನಡೆದ ಒಂದು ಘಟನೆಯನ್ನು ನೆನಪಿಗೆ ತರುತ್ತದೆ. “ಪಿಶಾಚನಿಂದ ಪ್ರಲೋಭಿಸಲ್ಪಡಲಿಕ್ಕಾಗಿ” ಪವಿತ್ರಾತ್ಮವು ಯೇಸುವನ್ನು ಅರಣ್ಯಕ್ಕೆ ನಡೆಸಿತು. (ಮತ್ತಾ. 4:1; 6:13) ಯೆಹೋವನು ಇದನ್ನು ಅನುಮತಿಸಿದ್ದೇಕೆ? ಆದಾಮಹವ್ವರು ಯೆಹೋವನ ಆಳ್ವಿಕೆಯನ್ನು ತಿರಸ್ಕರಿಸಿದಾಗ ಎದ್ದ ವಿವಾದವನ್ನು ಇತ್ಯರ್ಥಮಾಡಲು ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿದನು. ಅವರ ದಂಗೆ ಎಬ್ಬಿಸಿದ ಈ ಪ್ರಶ್ನೆಗಳಿಗೆ ಉತ್ತರ ನೀಡಲು ಸಮಯ ಬೇಕಿತ್ತು: ಯೆಹೋವನು ಮನುಷ್ಯರನ್ನು ಸೃಷ್ಟಿಸಿದ ವಿಧದಲ್ಲೇ ಏನಾದರೂ ತಪ್ಪಿತ್ತಾ? “ಕೆಡುಕನಿಂದ” ಪ್ರಲೋಭನೆಗೆ ಅಥವಾ ತಪ್ಪು ಮಾಡುವ ಒತ್ತಡಕ್ಕೆ ಒಳಗಾದಾಗ ಪರಿಪೂರ್ಣ ಮನುಷ್ಯರು ಯೆಹೋವನಿಗೆ ನಿಷ್ಠರಾಗಿ ಉಳಿಯಬಹುದಾ? ದೇವರು ಆಳುವುದಕ್ಕಿಂತ ಮನುಷ್ಯರು ತಮ್ಮನ್ನು ತಾವೇ ಆಳಿಕೊಂಡರೆ ಹೆಚ್ಚು ಒಳ್ಳೇದಾ? (ಆದಿ. 3:4, 5) ಈ ಎಲ್ಲಾ ಪ್ರಶ್ನೆಗಳಿಗೆ ಯೆಹೋವನಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಭವಿಷ್ಯದಲ್ಲಿ ಉತ್ತರ ಸಿಕ್ಕಿದಾಗ ಸ್ವರ್ಗದಲ್ಲಿ, ಭೂಮಿಯಲ್ಲಿರುವ ಎಲ್ಲರಿಗೂ ಈ ವಿಷಯ ಸ್ಪಷ್ಟವಾಗುತ್ತದೆ: ಯೆಹೋವನ ಆಳ್ವಿಕೆಯೇ ಉತ್ತಮವಾದದ್ದು.

13 ಯೆಹೋವನು ಪರಿಶುದ್ಧನು. ಆದ್ದರಿಂದ ಕೆಟ್ಟ ವಿಷಯಗಳಿಂದ ಯೆಹೋವನು ನಮ್ಮನ್ನು ಪ್ರಲೋಭಿಸುವುದಿಲ್ಲ. ಸೈತಾನನೇ “ಪ್ರಲೋಭಕ.” (ಮತ್ತಾ. 4:3) ಅನೇಕ ವಿಧಗಳಲ್ಲಿ ನಮ್ಮನ್ನು ಪ್ರಲೋಭಿಸಲು ಪ್ರಯತ್ನಿಸುವವನು ಇವನೇ. ಆದರೆ ನಮ್ಮ ಮುಂದೆ ಆಯ್ಕೆ ಇದೆ. ಪ್ರಲೋಭನೆಯನ್ನು ಎದುರಿಸಿ ನಿಲ್ಲಬಹುದು ಇಲ್ಲವೆ ಅದಕ್ಕೆ ಮಣಿಯಬಹುದು. ಆ ನಿರ್ಣಯ ನಾವೇ ಮಾಡಬೇಕು. (ಯಾಕೋಬ 1:13-15 ಓದಿ.) ಸೈತಾನನು ಯೇಸುವನ್ನು ಪ್ರಲೋಭಿಸಿದಾಗ ದೇವರ ವಾಕ್ಯವನ್ನು ಉಲ್ಲೇಖಿಸುತ್ತಾ ಯೇಸು ತಕ್ಷಣ ಪ್ರಲೋಭನೆಯನ್ನು ತಳ್ಳಿಹಾಕಿದನು. ಅವನು ದೇವರಿಗೆ ನಿಷ್ಠನಾಗಿದ್ದನು. ಸೈತಾನನು ಅಲ್ಲಿಗೇ ಸುಮ್ಮನಾದನಾ? ಇಲ್ಲ. ಯೇಸುವನ್ನು ಪ್ರಲೋಭಿಸಲು ‘ಅನುಕೂಲವಾದ ಇನ್ನೊಂದು ಸಂದರ್ಭ ಸಿಗುವ ತನಕ’ ಕಾಯುತ್ತಾ ಇದ್ದ. (ಲೂಕ 4:13) ಸೈತಾನ ಏನೇ ಮಾಡಿದರೂ ದೇವರೇ ತನ್ನ ಅಧಿಪತಿಯೆಂದು ಯೇಸು ಒಪ್ಪಿಕೊಂಡು ಆತನಿಗೆ ಮಾತ್ರ ವಿಧೇಯನಾದನು. ತುಂಬ ಕಷ್ಟಕರ ಪರಿಸ್ಥಿತಿ ಬಂದರೂ ಒಬ್ಬ ಪರಿಪೂರ್ಣ ಮಾನವ ಯೆಹೋವನಿಗೆ ನಿಷ್ಠನಾಗಿರಬಹುದೆಂದು ಯೇಸು ಸಾಬೀತುಪಡಿಸಿದನು. ಹಾಗಿದ್ದರೂ ಸೈತಾನನು ಸುಮ್ಮನಾಗಲಿಲ್ಲ. ದೇವರಿಗೆ ಅವಿಧೇಯರಾಗುವಂತೆ ಯೇಸುವಿನ ಹಿಂಬಾಲಕರೆಲ್ಲರನ್ನು ಸೈತಾನನು ಪ್ರಲೋಭಿಸಲು ಪ್ರಯತ್ನಿಸುತ್ತಾನೆ. ನೀವೂ ಅವರಲ್ಲಿ ಒಬ್ಬರು.

14. ಪ್ರಲೋಭನೆಯನ್ನು ಎದುರಿಸಿ ನಿಲ್ಲಬೇಕಾದರೆ ನಾವೇನು ಮಾಡಬೇಕು?

14 ಯೆಹೋವನ ಆಳ್ವಿಕೆ ಬಗ್ಗೆ ಎಬ್ಬಿಸಲಾಗಿರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ. ಆದ್ದರಿಂದ ಇಲ್ಲಿ ವರೆಗೆ ಸೈತಾನನು ನಮ್ಮನ್ನು ಪ್ರಲೋಭಿಸುವಂತೆ ಯೆಹೋವನು ಬಿಟ್ಟಿದ್ದಾನೆ. ಆದರೆ ಸ್ವತಃ ಆತನೇ ನಮ್ಮನ್ನು ‘ಪ್ರಲೋಭನೆಯೊಳಗೆ ಸೇರಿಸುವುದಿಲ್ಲ.’ ನಾವು ನಿಷ್ಠರಾಗಿರುತ್ತೇವೆ ಎಂಬ ದೃಢಭರವಸೆ ಯೆಹೋವನಿಗಿದೆ. ನಮಗೆ ಸಹಾಯ ಕೊಡಲು ಆತನು ಬಯಸುತ್ತಾನೆ. ಆದರೆ ನಾವು ಸರಿಯಾದದ್ದನ್ನೇ ಮಾಡಬೇಕೆಂದು ಯೆಹೋವನು ಯಾವತ್ತೂ ಒತ್ತಾಯ ಮಾಡುವುದಿಲ್ಲ. ನಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಆತನು ಗೌರವಿಸುತ್ತಾನೆ. ಆದ್ದರಿಂದ ನಾವಾತನಿಗೆ ನಿಷ್ಠರಾಗಿರುತ್ತೇವಾ ಇಲ್ಲವಾ ಎಂಬ ತೀರ್ಮಾನವನ್ನು ನಮ್ಮ ಕೈಯಲ್ಲೇ ಬಿಟ್ಟಿದ್ದಾನೆ. ಪ್ರಲೋಭನೆಯನ್ನು ಎದುರಿಸಿ ನಿಲ್ಲಬೇಕಾದರೆ ನಾವು ಎರಡು ವಿಷಯಗಳನ್ನು ಮಾಡಬೇಕು: ಯೆಹೋವನಿಗೆ ಹತ್ತಿರವಾಗಿರಬೇಕು ಮತ್ತು ಆತನ ಸಹಾಯಕ್ಕಾಗಿ ಯಾವಾಗಲೂ ಪ್ರಾರ್ಥಿಸಬೇಕು. ಪ್ರಲೋಭನೆಯನ್ನು ಎದುರಿಸಿ ನಿಲ್ಲಲು ನಾವು ಮಾಡುವ ಪ್ರಾರ್ಥನೆಗಳನ್ನು ಯೆಹೋವನು ಹೇಗೆ ಉತ್ತರಿಸುತ್ತಾನೆ?

ಯೆಹೋವನಿಗೆ ಹತ್ತಿರವಾಗಿರಿ ಮತ್ತು ಸೇವೆಯಲ್ಲಿ ಹುರುಪುಳ್ಳವರಾಗಿರಿ (ಪ್ಯಾರ 15 ನೋಡಿ)

15, 16. (ಎ) ನಾವು ಎದುರಿಸಿ ನಿಲ್ಲಬೇಕಾದ ಕೆಲವು ಪ್ರಲೋಭನೆಗಳು ಯಾವುವು? (ಬಿ) ಪ್ರಲೋಭನೆಗೆ ಮಣಿದರೆ ಅದಕ್ಕೆ ಯಾರು ಜವಾಬ್ದಾರರು?

15 ಸೈತಾನನ ಪ್ರಲೋಭನೆಗಳ ವಿರುದ್ಧ ಹೋರಾಡಲು ಯೆಹೋವನು ನಮಗೆ ತನ್ನ ಶಕ್ತಿಶಾಲಿ ಪವಿತ್ರಾತ್ಮವನ್ನು ಕೊಡುತ್ತಾನೆ. ಅಪಾಯಗಳ ಬಗ್ಗೆ ಎಚ್ಚರಿಸಲು ಬೈಬಲ್‌ ಮತ್ತು ಸಭೆಯನ್ನೂ ಕೊಟ್ಟಿದ್ದಾನೆ. ಉದಾಹರಣೆಗೆ ನಮ್ಮ ಸಮಯ, ಹಣ ಮತ್ತು ಶಕ್ತಿಯ ಹೆಚ್ಚಿನ ಪಾಲನ್ನು ನಿಜವಾಗಿ ಅಗತ್ಯವಿಲ್ಲದ ವಿಷಯಗಳಿಗಾಗಿ ಬಳಸಬಾರದೆಂದು ಎಚ್ಚರಿಕೆ ಕೊಡುತ್ತಾನೆ. ಇಸ್ಪೆನ್‌ ಮತ್ತು ಯಾನ ಯುರೋಪಿನ ಶ್ರೀಮಂತ ದೇಶವೊಂದರಲ್ಲಿದ್ದಾರೆ. ಅವರು ಅದೇ ದೇಶದಲ್ಲಿ ಪ್ರಚಾರಕರ ಅಗತ್ಯವಿದ್ದ ಸ್ಥಳದಲ್ಲಿ ತುಂಬ ವರ್ಷಗಳ ತನಕ ರೆಗ್ಯುಲರ್‌ ಪಯನೀಯರರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಮಗು ಹುಟ್ಟಿದ ಕಾರಣ ಪಯನೀಯರ್‌ ಸೇವೆ ನಿಲ್ಲಿಸಬೇಕಾಯಿತು. ಈಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಸ್ಪೆನ್‌ ಹೀಗನ್ನುತ್ತಾರೆ: “ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಮುಂಚಿನಷ್ಟು ಸಮಯ ಕಳೆಯಲು ಆಗುತ್ತಿಲ್ಲ. ಆದ್ದರಿಂದ ನಾವು ಪ್ರಲೋಭನೆಗಳಿಗೆ ಮಣಿಯದಿರಲು ಯೆಹೋವನಿಗೆ ಆಗಿಂದಾಗ್ಗೆ ಪ್ರಾರ್ಥಿಸುತ್ತೇವೆ. ನಮ್ಮ ಆಧ್ಯಾತ್ಮಿಕತೆ ಮತ್ತು ಸೇವೆಗಾಗಿ ಹುರುಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವಂತೆ ಯೆಹೋವನನ್ನು ಕೇಳಿಕೊಳ್ಳುತ್ತೇವೆ.”

16 ನಾವು ಎದುರಿಸಬೇಕಾದ ಇನ್ನೊಂದು ಪ್ರಲೋಭನೆ, ಅಶ್ಲೀಲ ಚಿತ್ರಗಳನ್ನು ನೋಡುವುದೇ ಆಗಿದೆ. ಈ ಪ್ರಲೋಭನೆಗೆ ನಾವು ಮಣಿದರೆ ಸೈತಾನನ ಮೇಲೆ ತಪ್ಪು ಹೊರಿಸಲು ಆಗುವುದಿಲ್ಲ. ಏಕೆ? ಏಕೆಂದರೆ ನಮಗೊಂದು ವಿಷಯ ಮಾಡಲು ಮನಸ್ಸಿಲ್ಲ ಅಂದಮೇಲೆ ಅದನ್ನು ಮಾಡುವಂತೆ ಒತ್ತಾಯಿಸಲು ಸೈತಾನನಿಗಾಗಲಿ ಅವನ ಲೋಕಕ್ಕಾಗಲಿ ಸಾಧ್ಯವಿಲ್ಲ. ಕೆಲವರು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ ಏಕೆಂದರೆ ಕೆಟ್ಟ ಯೋಚನೆಗಳನ್ನು ಅವರು ಮನಸ್ಸಿನಿಂದ ತೆಗೆದು ಹಾಕಿರುವುದಿಲ್ಲ. ಆದರೆ ನಮ್ಮ ಅನೇಕ ಸಹೋದರ ಸಹೋದರಿಯರು ಈ ಪ್ರಲೋಭನೆ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ನಾವು ಸಹ ಗೆಲ್ಲಬಹುದು.—1 ಕೊರಿಂ. 10:12, 13.

“ಕೆಡುಕನಿಂದ ನಮ್ಮನ್ನು ತಪ್ಪಿಸು”

17. (ಎ) ಯೆಹೋವನು ನಮ್ಮನ್ನು ‘ಕೆಡುಕನಿಂದ ತಪ್ಪಿಸಬೇಕೆಂದು’ ನಿಜವಾಗಲೂ ಬಯಸುತ್ತೇವೆಂದು ಹೇಗೆ ತೋರಿಸಬಹುದು? (ಬಿ) ಅತೀ ಬೇಗನೆ ನಮಗೆ ಎಂಥ ನೆಮ್ಮದಿ ಸಿಗಲಿದೆ?

17 ಯೆಹೋವನು ನಮ್ಮನ್ನು ‘ಕೆಡುಕನಿಂದ ತಪ್ಪಿಸಬೇಕೆಂದು’ ನಿಜವಾಗಲೂ ಬಯಸುತ್ತೇವೆಂದು ಹೇಗೆ ತೋರಿಸಬಹುದು? ನಾವು ‘ಲೋಕದ ಭಾಗವಾಗಿರಬಾರದು’ ಮತ್ತು ‘ಲೋಕವನ್ನಾಗಲಿ ಲೋಕದಲ್ಲಿ ಇರುವವುಗಳನ್ನಾಗಲಿ ಪ್ರೀತಿಸಬಾರದು.’ (ಯೋಹಾ. 15:19; 1 ಯೋಹಾ. 2:15-17) ಯೆಹೋವನು ಭವಿಷ್ಯದಲ್ಲಿ ಸೈತಾನನನ್ನು ತೆಗೆದುಹಾಕಿ, ಅವನ ದುಷ್ಟ ಲೋಕವನ್ನು ನಾಶಮಾಡಿದಾಗ ನಮಗೆಷ್ಟು ನೆಮ್ಮದಿ ಸಿಗುವುದಲ್ಲವೇ! ಅಲ್ಲಿವರೆಗೆ ಈ ವಿಷಯ ನೆನಪಿಡೋಣ: ಸೈತಾನನು “ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು ಮಹಾ ಕೋಪದಿಂದ” ಇದ್ದಾನೆ. ನಾವು ಯೆಹೋವನನ್ನು ಆರಾಧಿಸುವುದನ್ನು ನಿಲ್ಲಿಸಲು ಸೈತಾನನು ಏನು ಮಾಡುವುದಕ್ಕೂ ಹೇಸುವುದಿಲ್ಲ. ಆದ್ದರಿಂದ ಸೈತಾನನಿಂದ ನಮ್ಮನ್ನು ಕಾಪಾಡುವಂತೆ ಯೆಹೋವನಿಗೆ ನಾವು ಪ್ರಾರ್ಥಿಸುತ್ತಾ ಇರಬೇಕು.—ಪ್ರಕ. 12:12, 17.

18. ಸೈತಾನನ ಲೋಕದ ನಾಶನದಿಂದ ನಾವು ಬಚಾವಾಗಬೇಕಾದರೆ ಏನು ಮಾಡಬೇಕು?

18 ಸೈತಾನನಿಲ್ಲದ ಲೋಕದಲ್ಲಿ ಬದುಕಬೇಕೆಂಬ ಆಸೆ ನಿಮಗಿದೆಯಾ? ಹಾಗಾದರೆ ದೇವರ ರಾಜ್ಯ ಬರಲಿ, ಆತನ ನಾಮ ಪವಿತ್ರೀಕರಿಸಲ್ಪಡಲಿ, ಆತನ ಚಿತ್ತ ಭೂಮಿಯಲ್ಲಿ ನೆರವೇರಲಿ ಎಂದು ಪ್ರಾರ್ಥಿಸುತ್ತಾ ಇರಿ. ನಿಮ್ಮ ಬಗ್ಗೆ ಕಾಳಜಿ ವಹಿಸಲು ಮತ್ತು ಯೆಹೋವನಿಗೆ ನಿಷ್ಠರಾಗಿರಲು ನಿಮಗೇನು ಬೇಕೊ ಅದನ್ನು ಕೊಡಲು ಯಾವಾಗಲೂ ಆತನ ಮೇಲೆ ಆತುಕೊಳ್ಳಿ. ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಲು ನಿಮ್ಮಿಂದ ಆದದ್ದೆಲ್ಲವನ್ನೂ ಮಾಡಿ!