ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಚಿಂತೆಗೆ ಚಿಕಿತ್ಸೆ

‘ಯಾವಾಗ ಏನಾಗುತ್ತೋ!’ ಅನ್ನುವ ಚಿಂತೆ

‘ಯಾವಾಗ ಏನಾಗುತ್ತೋ!’ ಅನ್ನುವ ಚಿಂತೆ

“ಯಾವಾಗೆಲ್ಲ ಯುದ್ಧದ ಸೈರನ್‌ ಶಬ್ದ ಕೇಳಿಸುತ್ತೋ ಆಗೆಲ್ಲ ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ ಮತ್ತು ಸುರಕ್ಷಿತ ಪ್ರದೇಶಕ್ಕೆ (ಬಾಂಬ್ ಶೆಲ್ಟರ್‌) ಓಡುತ್ತೇನೆ. ಆದರೆ ಅಲ್ಲೂ ಭಯದಿಂದ ನಡುಗುತ್ತಾ ಇರುತ್ತೇನೆ. ಹೊರಗೆ ಇದ್ದಾಗಲಂತೂ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳಗಳೇ ಇರುವುದಿಲ್ಲ. ಒಂದು ಸಲ, ಹೀಗೆ ಹೊರಗೆ ಹೋದಾಗ ಸೈರನ್‌ ಶಬ್ದ ಕೇಳಿಸಿತು. ಭಯದಿಂದ ಅಳು ಬಂತು, ಉಸಿರಾಡೋಕೆ ಕಷ್ಟ ಆಯ್ತು. ಸಮಾಧಾನ ಮಾಡಿಕೊಳ್ಳೋಕೆ ಸುಮಾರು ಗಂಟೆಗಳೇ ಹಿಡಿದವು. ಅಷ್ಟರಲ್ಲೇ ಮತ್ತೆ ಸೈರನ್‌ ಶಬ್ದ ಕೇಳಿಸಿತು” ಅಂತ ಹೇಳುತ್ತಾಳೆ ಅಲೋನಾ.

ಅಲೋನಾ

ನಮ್ಮನ್ನು ಭಯಪಡಿಸುವಂಥದ್ದು ಕೇವಲ ಯುದ್ಧ ಮಾತ್ರವಲ್ಲ. ನಮಗೋ ನಮ್ಮ ಪ್ರಿಯರಿಗೋ ಪ್ರಾಣಾಪಾಯ ತರುವಂಥ ಕಾಯಿಲೆಗಳು ಬಂದರೆ ನಾವು ಭಯದಿಂದ ತತ್ತರಿಸಿ ಹೋಗುತ್ತೇವೆ. ತುಂಬ ಚಿಂತೆ ಮಾಡುತ್ತೇವೆ. ಕೆಲವರಿಗೆ ಮುಂದಿನ ಜೀವನ ಹೇಗಿರುತ್ತೋ ಅನ್ನುವ ಭಯ. ‘ಈಗಲೇ ಇಷ್ಟೊಂದು ಯುದ್ಧ, ಅಪರಾಧ, ಪರಿಸರ ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ, ಕಾಯಿಲೆಗಳು ಇವೆ. ಇನ್ನೂ ನಮ್ಮ ಮಕ್ಕಳ, ಮೊಮ್ಮಕ್ಕಳ ಕಾಲಕ್ಕೆ ಈ ಪ್ರಪಂಚ ಹೇಗಿರುತ್ತೋ?’ ಅಂತ ಅವರು ಚಿಂತೆ ಮಾಡುತ್ತಾರೆ. ಇಂಥ ಚಿಂತೆಗಳನ್ನು ಹೇಗೆ ನಿಭಾಯಿಸಬಹುದು?

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಅಂತ ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 27:12) ನಾವು ನಮ್ಮ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನ ಹಾಕುವಂತೆಯೇ ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಪ್ರಯತ್ನಿಸಬೇಕು. ಹಿಂಸಾತ್ಮಕ ಮನೋರಂಜನೆ, ಭಯಾನಕ ಚಿತ್ರಗಳಿಂದ ಕೂಡಿದ ವಾರ್ತಾ ವರದಿಗಳು ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ಇನ್ನಷ್ಟು ಭಯಪಡಿಸುತ್ತವೆ. ಇಂಥ ವಿಷಯಗಳನ್ನು ನೋಡುವುದರಿಂದ ದೂರವಿದ್ದರೆ ನಮಗೆ ಪ್ರಯೋಜನವಿದೆ. ಚಿಂತೆ, ಭಯ, ಕೆಟ್ಟ ವಿಷಯಗಳನ್ನೇ ಯೋಚಿಸುವಂತೆ ದೇವರು ನಮ್ಮನ್ನು ಸೃಷ್ಟಿ ಮಾಡಲಿಲ್ಲ. ಬದಲಿಗೆ “ಯಾವ ವಿಷಯಗಳು ಸತ್ಯವಾಗಿವೆಯೊ, . . . ನೀತಿಯುತವಾಗಿವೆಯೊ, . . . ನೈತಿಕವಾಗಿ ಶುದ್ಧವಾಗಿವೆಯೊ, . . . ಪ್ರೀತಿಯೋಗ್ಯವಾಗಿವೆಯೊ” ಅಂಥವುಗಳ ಬಗ್ಗೆ ಯೋಚಿಸುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಇಂಥ ವಿಷಯಗಳ ಬಗ್ಗೆಯೇ ಯೋಚಿಸುತ್ತಾ ಇರುವುದಾದರೆ “ಶಾಂತಿಯ ದೇವರು” ನಮ್ಮ ಮನಸ್ಸಿಗೆ ಮತ್ತು ಹೃದಯಕ್ಕೆ ಶಾಂತಿ, ನೆಮ್ಮದಿಯನ್ನು ಕೊಟ್ಟೇ ಕೊಡುತ್ತಾನೆ.—ಫಿಲಿಪ್ಪಿ 4:8,9.

ಪ್ರಾರ್ಥನೆಯಿಂದಾಗುವ ಸಹಾಯ

ದೇವರ ಮೇಲೆ ನಮಗೆ ನಂಬಿಕೆಯಿದ್ದರೆ ನಮ್ಮ ಚಿಂತೆಯನ್ನು ನಿಭಾಯಿಸಬಲ್ಲೆವು. ಹಾಗಾಗಿ ‘ಪ್ರಾರ್ಥನೆ ಮಾಡುತ್ತಾ ಇರುವಂತೆ’ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (1 ಪೇತ್ರ 4:7) ದೇವರ ಹತ್ತಿರ ‘ನಾವು ಏನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ’ ಎಂಬ ಭರವಸೆಯಿಂದ ನಮ್ಮ ಚಿಂತೆಯನ್ನು ನಿಭಾಯಿಸಲು ಬೇಕಾದ ವಿವೇಕ ಮತ್ತು ಧೈರ್ಯಕ್ಕಾಗಿ ಆತನಿಗೆ ಪ್ರಾರ್ಥಿಸೋಣ.—1 ಯೋಹಾನ 5:15.

ಪತಿ ಅವಿಯೊಂದಿಗೆ

ಇಷ್ಟೆಲ್ಲ ಅನಾಹುತಗಳು ಆಗುತ್ತಿರುವುದಕ್ಕೆ ಕಾರಣ ಬೈಬಲಿನಲ್ಲಿ ಯಾರನ್ನು “ಈ ಲೋಕದ ಅಧಿಪತಿ” ಎಂದು ಕರೆಯಲಾಗಿದೆಯೋ ಆ ಸೈತಾನನೇ ಆಗಿದ್ದಾನೆ. ಜೊತೆಗೆ, ಇಡೀ ಲೋಕವು ಅವನ ವಶದಲ್ಲಿ ಬಿದ್ದಿದೆ. (ಯೋಹಾನ 12:31; 1 ಯೋಹಾನ 5:19) ಆದ್ದರಿಂದಲೇ “ಕೆಡುಕನಿಂದ ನಮ್ಮನ್ನು ತಪ್ಪಿಸು” ಅಂತ ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ನಮಗೆ ಕಲಿಸಿದನು. (ಮತ್ತಾಯ 6:13) “ನಾನೊಬ್ಬಳೇ ಇದ್ದಾಗ ಸೈರನ್‌ ಶಬ್ದ ಕೇಳಿಸಿದರೆ ಭಯ ಕಡಿಮೆಯಾಗಲು ಯೆಹೋವ ದೇವರಿಗೆ ಪ್ರಾರ್ಥಿಸುತ್ತೇನೆ. ನನ್ನ ಗಂಡ ಸಹ ಫೋನ್‌ ಮಾಡಿ ನನ್ನ ಜೊತೆ ಪ್ರಾರ್ಥನೆ ಮಾಡುತ್ತಾರೆ. ಪ್ರಾರ್ಥನೆ ನನಗೆ ತುಂಬನೇ ಸಹಾಯ ಮಾಡಿದೆ” ಅಂತ ಅಲೋನಾ ಹೇಳುತ್ತಾಳೆ. “ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ” ಅಂತ ಅದಕ್ಕೆ ಬೈಬಲ್‌ ಹೇಳಿರುವುದು.—ಕೀರ್ತನೆ 145:18.

ಭವಿಷ್ಯದ ಬಗ್ಗೆ ಒಳ್ಳೇ ನಿರೀಕ್ಷೆಯಿಡಿ

ಯೇಸು ಪರ್ವತ ಪ್ರಸಂಗದಲ್ಲಿ ತನ್ನ ಹಿಂಬಾಲಕರಿಗೆ “ನಿನ್ನ [ದೇವರ] ರಾಜ್ಯವು ಬರಲಿ” ಎಂದು ಪ್ರಾರ್ಥಿಸುವಂತೆ ಹೇಳಿಕೊಟ್ಟನು. (ಮತ್ತಾಯ 6:10) ದೇವರ ರಾಜ್ಯ ನಮ್ಮ ಚಿಂತೆಯನ್ನೆಲ್ಲ ಬುಡಸಮೇತ ಕಿತ್ತುಹಾಕುತ್ತದೆ. ‘ಸಮಾಧಾನದ ಪ್ರಭುವಾಗಿರುವ’ ಯೇಸು ಕ್ರಿಸ್ತನ ಮೂಲಕ ಯೆಹೋವ ದೇವರು ‘ಲೋಕದ ಎಲ್ಲ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’ (ಯೆಶಾಯ 9:6; ಕೀರ್ತನೆ 46:9) “ಆತನು [ದೇವರು] ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, . . . ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ. . . . ಅವರನ್ನು ಯಾರೂ ಹೆದರಿಸರು.” (ಮಿಾಕ 4:3,4) ಕುಟುಂಬಗಳು “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.” (ಯೆಶಾಯ 65:21) “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

ಯಾವಾಗ, ಎಲ್ಲಿ, ಏನಾಗುತ್ತೆ ಅನ್ನೋದನ್ನು ಯಾರಿಗೂ ತಿಳಿದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ನಾವೆಷ್ಟೇ ಜಾಗರೂಕರಾಗಿದ್ದರೂ ಕೆಲವೊಮ್ಮೆ ನಮಗೆ ಅಪಾಯಗಳು ಬರಬಹುದು. (ಪ್ರಸಂಗಿ 9:11) ಸಾವಿರಾರು ವರ್ಷಗಳಲ್ಲಿ ಯುದ್ಧ, ಹಿಂಸೆ ಮತ್ತು ಕಾಯಿಲೆಗಳು ಅದೆಷ್ಟೋ ಅಮಾಯಕರ ಜೀವ ತೆಗೆದುಕೊಂಡಿವೆ, ಇನ್ನೂ ತೆಗೆದುಕೊಳ್ಳುತ್ತಾ ಇವೆ. ಹಾಗಾದರೆ ಅವರಿಗೆ ಏನಾದರೂ ನಿರೀಕ್ಷೆಯಿದೆಯಾ?

ಮೃತರಾದ ಕೋಟಿಗಟ್ಟಲೆ ಜನರು ಪುನಃ ಜೀವಿಸುತ್ತಾರೆ. ಈಗ ಅವರು ಸತ್ತಿರುವುದಾದರೂ ದೇವರ ನೆನಪಿನಲ್ಲಿ ಇದ್ದಾರೆ, ಮುಂದೊಂದು ದಿನ ಮತ್ತೆ ಜೀವ ಪಡೆದುಕೊಳ್ಳುತ್ತಾರೆ. (ಯೋಹಾನ 5:28, 29) ಪುನರುತ್ಥಾನದ ಬಗ್ಗೆ ಬೈಬಲ್‌ ಹೀಗೆ ಆಶ್ವಾಸನೆ ಕೊಡುತ್ತದೆ: “ಈ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದಂತಿದ್ದು ನಿಶ್ಚಯವಾದದ್ದೂ ದೃಢವಾದದ್ದೂ ಆಗಿದೆ.” (ಇಬ್ರಿಯ 6:19) ಜೊತೆಗೆ, ‘ಯೇಸುವನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸುವ ಮೂಲಕ ಇದನ್ನು ನಂಬುವುದಕ್ಕೆ ದೇವರು ಎಲ್ಲರಿಗೂ ಖಾತ್ರಿಯನ್ನು ಒದಗಿಸಿದ್ದಾನೆ.’—ಅಪೊಸ್ತಲರ ಕಾರ್ಯಗಳು 17:31.

ಈಗ ದೇವರು ಹೇಳಿದ್ದನ್ನು ಮಾಡಲು ಯಾರು ಪ್ರಯತ್ನಿಸುತ್ತಿದ್ದಾರೋ ಅವರಿಗೂ ಕೆಲವೊಂದು ಚಿಂತೆಗಳಿವೆ. ಪೌಲ್‌, ಜಾನೆಟ್‌ ಮತ್ತು ಅಲೋನಾರು ವಿವೇಚನೆಯಿಂದ ನಡೆದುಕೊಂಡಿದ್ದಕ್ಕೆ, ಪ್ರಾರ್ಥನೆ ಮೂಲಕ ದೇವರಿಗೆ ಆಪ್ತರಾಗಿದ್ದಕ್ಕೆ, ಭವಿಷ್ಯದ ಬಗ್ಗೆ ಒಳ್ಳೇ ನಿರೀಕ್ಷೆಯಿಟ್ಟಿದ್ದಕ್ಕೆ ತಮಗಿದ್ದ ಚಿಂತೆಯನ್ನೆಲ್ಲ ನಿಭಾಯಿಸಲು ಸಾಧ್ಯವಾಯಿತು. ಅವರಿಗೆ ಸಹಾಯ ಮಾಡಿದ ‘ದೇವರು, ನೀವು ಸಹ ನಿರೀಕ್ಷೆಯಲ್ಲಿ ಸಮೃದ್ಧಿ ಹೊಂದುವಂತೆ ನಿಮ್ಮ ನಂಬಿಕೆಯ ಮೂಲಕ ನಿಮ್ಮಲ್ಲಿ ಎಲ್ಲ ರೀತಿಯ ಆನಂದವನ್ನೂ ಶಾಂತಿಯನ್ನೂ ತುಂಬಿಸಲಿ.’—ರೋಮನ್ನರಿಗೆ 15:13. ▪ (w15-E 07/01)