ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಿ

ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಿ

“ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.”—ಯೆಶಾ. 60:13.

ಗೀತೆಗಳು: 102, 75

1, 2. ಹೀಬ್ರು ಶಾಸ್ತ್ರಗಳಲ್ಲಿ “ಪಾದ ಪೀಠ” ಎಂಬ ಪದ ಯಾವುದನ್ನು ಸಹ ಸೂಚಿಸುತ್ತದೆ?

“ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದ ಪೀಠ” ಎಂದು ಯೆಹೋವ ದೇವರು ಹೇಳಿದ್ದಾನೆ. (ಯೆಶಾ. 66:1) ದೇವರು ತನ್ನ ಈ ‘ಪಾದ ಪೀಠದ’ ಬಗ್ಗೆ ಹೀಗೂ ಹೇಳಿದನು: “ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.” (ಯೆಶಾ. 60:13) ಆತನು ತನ್ನ ಪಾದ ಪೀಠವನ್ನು ಹೇಗೆ ವೈಭವಪಡಿಸುವನು ಅಥವಾ ಅಂದಗೊಳಿಸುವನು? ಆತನ ಪಾದ ಪೀಠವಾಗಿರುವ ಈ ಭೂಮಿಯಲ್ಲಿ ಜೀವಿಸುತ್ತಿರುವವರ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ?

2 ಹೀಬ್ರು ಶಾಸ್ತ್ರಗಳಲ್ಲಿ “ಪಾದ ಪೀಠ” ಎಂಬ ಪದವನ್ನು ಇಸ್ರಾಯೇಲಿನಲ್ಲಿದ್ದ ಪುರಾತನ ಆಲಯವನ್ನು ವರ್ಣಿಸಲು ಸಹ ಬಳಸಲಾಗಿದೆ. (1 ಪೂರ್ವ. 28:2; ಕೀರ್ತ. 132:7) ಆ ಆಲಯವು ಯೆಹೋವನಿಗೆ ತುಂಬ ಸುಂದರವಾಗಿ ಕಾಣುತ್ತಿತ್ತು ಏಕೆಂದರೆ ಅದು ಸತ್ಯಾರಾಧನೆಯ ಕೇಂದ್ರವಾಗಿತ್ತು. ಅಲ್ಲದೆ, ಭೂಮಿ ಮೇಲೆ ಯೆಹೋವನನ್ನು ಮಹಿಮೆಪಡಿಸಲಿಕ್ಕಾಗಿ ಅದನ್ನು ಬಳಸಲಾಗುತ್ತಿತ್ತು.

3. (ಎ) ಇಂದು ಸತ್ಯಾರಾಧನೆಯ ಕೇಂದ್ರ ಯಾವುದು? (ಬಿ) ಅದು ಯಾವಾಗ ಅಸ್ತಿತ್ವಕ್ಕೆ ಬಂತು?

3 ಇಂದು ಸತ್ಯಾರಾಧನೆಯ ಕೇಂದ್ರ ಯಾವುದು? ಆ ಕಾಲದಲ್ಲಿದ್ದ ಆಲಯದಂತೆ ಇದೊಂದು ನಿಜವಾದ ಕಟ್ಟಡವಲ್ಲ. ಇದು, ಯಾವುದೇ ಕಟ್ಟಡಕ್ಕಿಂತಲೂ ಹೆಚ್ಚಾಗಿ ಯೆಹೋವನನ್ನು ಮಹಿಮೆಪಡಿಸುವ ಒಂದು ಆಧ್ಯಾತ್ಮಿಕ ಆಲಯ. ಅಂದರೆ, ಮಾನವರು ದೇವರ ಸ್ನೇಹಿತರಾಗಲು ಮತ್ತು ಆತನನ್ನು ಆರಾಧಿಸಲು ದೇವರು ಮಾಡಿರುವ ಏರ್ಪಾಡೇ ಈ ಆಧ್ಯಾತ್ಮಿಕ ಆಲಯ. ಈ ಏರ್ಪಾಡು ಸಾಧ್ಯವಾಗುವುದು ಯೇಸುವಿನ ವಿಮೋಚನಾ ಮೌಲ್ಯದಿಂದಾಗಿಯೇ. ಇದು ಆರಂಭವಾದದ್ದು ಯೇಸು ದೀಕ್ಷಾಸ್ನಾನ ಹೊಂದಿ ಯೆಹೋವನ ಆಧ್ಯಾತ್ಮಿಕ ಆಲಯದ ಮಹಾ ಯಾಜಕನಾಗಿ ಅಭಿಷೇಕಿಸಲ್ಪಟ್ಟಾಗ ಅಂದರೆ ಕ್ರಿ.ಶ. 29ರಲ್ಲಿ.—ಇಬ್ರಿ. 9:11, 12.

4, 5. (ಎ) ಕೀರ್ತನೆ 99ಕ್ಕನುಸಾರ ಯೆಹೋವನ ನಿಜ ಆರಾಧಕರು ಏನು ಮಾಡಲು ಬಯಸುತ್ತಾರೆ? (ಬಿ) ನಾವು ನಮ್ಮನ್ನೇ ಯಾವ ಪ್ರಶ್ನೆ ಕೇಳಬೇಕು?

4 ಸತ್ಯಾರಾಧನೆಗಾಗಿರುವ ಈ ಏರ್ಪಾಡಿಗಾಗಿ ನಾವು ದೇವರಿಗೆ ತುಂಬ ಕೃತಜ್ಞರು. ಈ ಕೃತಜ್ಞತೆಯನ್ನು ನಾವು ಯೆಹೋವನ ಹೆಸರಿನ ಬಗ್ಗೆ ಮತ್ತು ವಿಮೋಚನಾ ಮೌಲ್ಯದ ಅದ್ಭುತ ಉಡುಗೊರೆ ಬಗ್ಗೆ ಬೇರೆಯವರಿಗೆ ಹೇಳುವ ಮೂಲಕ ತೋರಿಸುತ್ತೇವೆ. ಪ್ರತಿ ದಿನ 80 ಲಕ್ಷಕ್ಕಿಂತಲೂ ಹೆಚ್ಚು ಸತ್ಯ ಕ್ರೈಸ್ತರು ಯೆಹೋವನನ್ನು ಸ್ತುತಿಸುತ್ತಾರೆಂಬ ಸಂಗತಿ ನಮಗೆ ಸಂತೋಷ ತರುತ್ತದೆ! ಕೆಲವು ಧರ್ಮಗಳ ಜನರು ತಾವು ಸತ್ತು ಸ್ವರ್ಗಕ್ಕೆ ಹೋದ ಮೇಲೆ ಅಲ್ಲಿ ದೇವರಿಗೆ ಸ್ತುತಿ ಹಾಡುವೆವೆಂದು ತಪ್ಪಾಗಿ ಯೋಚಿಸುತ್ತಾರೆ. ಆದರೆ ಯೆಹೋವನ ಜನರಿಗೆ ಆತನನ್ನು ಇಲ್ಲಿಯೇ ಈಗಲೇ ಸ್ತುತಿಸುವುದು ಎಷ್ಟು ಪ್ರಾಮುಖ್ಯ ಎನ್ನುವುದು ತಿಳಿದಿದೆ.

5 ಕೀರ್ತನೆ 99:1-3, 5-7 ಓದಿ. ಹಿಂದಿನ ಕಾಲದಲ್ಲಿದ್ದ ನಂಬಿಗಸ್ತ ಪುರುಷರಾದ ಮೋಶೆ, ಆರೋನ, ಸಮುವೇಲರು ಸತ್ಯಾರಾಧನೆಗಾಗಿದ್ದ ದೇವರ ಏರ್ಪಾಡಿಗೆ ಪೂರ್ಣ ಬೆಂಬಲ ಕೊಟ್ಟರು. ನಾವು ಯೆಹೋವನನ್ನು ಸ್ತುತಿಸುವಾಗ ದೇವರ ಆ ನಂಬಿಗಸ್ತ ಸೇವಕರು ಮಾಡಿದ್ದನ್ನೇ ಮಾಡುತ್ತೇವೆ. ಭೂಮಿಯಲ್ಲಿರುವ ಅಭಿಷಿಕ್ತರು ಭವಿಷ್ಯತ್ತಿನಲ್ಲಿ ಯೇಸುವಿನೊಟ್ಟಿಗೆ ಸ್ವರ್ಗದಲ್ಲಿ ಯಾಜಕರಾಗಿ ಸೇವೆಸಲ್ಲಿಸಲಿದ್ದಾರೆ. ಅವರು ಸ್ವರ್ಗಕ್ಕೆ ಹೋಗುವ ಮುಂಚೆ ಈಗ ಆಧ್ಯಾತ್ಮಿಕ ಆಲಯದ ಭೂಭಾಗದಲ್ಲಿ ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಾರೆ. ಲಕ್ಷಗಟ್ಟಲೆ ‘ಬೇರೆ ಕುರಿಗಳು’ ನಿಷ್ಠೆಯಿಂದ ಅವರಿಗೆ ನೆರವು ನೀಡುತ್ತಿದ್ದಾರೆ. (ಯೋಹಾ. 10:16) ಎರಡೂ ಗುಂಪುಗಳು ಐಕ್ಯದಿಂದ ಯೆಹೋವನನ್ನು ಆರಾಧಿಸುತ್ತಿವೆ. ಆದರೆ ‘ಸತ್ಯಾರಾಧನೆಗಾಗಿರುವ ಯೆಹೋವನ ಆರಾಧನೆಯನ್ನು ನಾನು ಪೂರ್ಣವಾಗಿ ಬೆಂಬಲಿಸುತ್ತಿದ್ದೇನಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು.

ದೇವರ ಆಧ್ಯಾತ್ಮಿಕ ಆಲಯದಲ್ಲಿ ಸೇವೆಮಾಡುತ್ತಿರುವವರು ಯಾರೆಂದು ಗುರುತು ಹಿಡಿಯುವುದು

6, 7. (ಎ) ಆರಂಭದ ಕ್ರೈಸ್ತ ಸಭೆಯಲ್ಲಿ ಯಾವ ಸಮಸ್ಯೆ ಶುರುವಾಯಿತು? (ಬಿ) 1919ರಷ್ಟಕ್ಕೆ ಏನಾಯಿತು?

6 ಮುಂತಿಳಿಸಲಾದಂಥ ಧರ್ಮಭ್ರಷ್ಟತೆಯು ಕ್ರೈಸ್ತ ಸಭೆ ರಚನೆಯಾಗಿ 100 ವರ್ಷ ಮುಗಿಯುವ ಮುಂಚೆಯೇ ಶುರುವಾಯಿತು. (ಅ.ಕಾ.20:28-30; 2 ಥೆಸ. 2:3, 4) ಆ ಸಮಯದ ನಂತರ ದೇವರ ನಿಜ ಆರಾಧಕರು ಯಾರೆಂದು ಗುರುತು ಹಿಡಿಯುವುದು ಹೆಚ್ಚೆಚ್ಚು ಕಷ್ಟವಾಗುತ್ತಾ ಹೋಯಿತು. ಹಾಗಾಗಿ ದೇವರ ಆಧ್ಯಾತ್ಮಿಕ ಆಲಯದಲ್ಲಿ ಆತನನ್ನು ನಿಜವಾಗಿ ಸೇವಿಸುವವರು ಯಾರೆಂದು ಗುರುತಿಸಲು ಯೆಹೋವನು ನೂರಾರು ವರ್ಷಗಳ ಬಳಿಕ ಯೇಸುವನ್ನು ಬಳಸಿದನು.

7 ದೇವರ ಮೆಚ್ಚುಗೆ ಪಡೆದವರು ಮತ್ತು ಆತನ ಆಧ್ಯಾತ್ಮಿಕ ಆಲಯದಲ್ಲಿ ಸೇವಿಸುತ್ತಿರುವವರು ಯಾರೆಂದು 1919ರಷ್ಟಕ್ಕೆ ಸ್ಪಷ್ಟವಾಗಿ ಗುರುತು ಹಿಡಿಯಲಾಯಿತು. ಏಕೆಂದರೆ ಯೆಹೋವನಿಗೆ ತಮ್ಮ ಆರಾಧನೆ ಇನ್ನೂ ಹೆಚ್ಚು ಮೆಚ್ಚಿಕೆಯಾಗಲು ಅದರಲ್ಲಿ ಬೇಕಾದ ಹೊಂದಾಣಿಕೆಗಳನ್ನು ಇವರು ಮಾಡಿದ್ದರು. (ಯೆಶಾ. 4:2, 3; ಮಲಾ. 3:1-4) ಹೀಗೆ ಅಪೊಸ್ತಲ ಪೌಲನು ನೂರಾರು ವರ್ಷಗಳ ಹಿಂದೆ ನೋಡಿದ ಒಂದು ದರ್ಶನದ ನೆರವೇರಿಕೆ ಆರಂಭವಾಯಿತು.

8, 9. ಪೌಲನು ದರ್ಶನದಲ್ಲಿ ನೋಡಿದ ‘ಪರದೈಸ್‌’ ಏನಾಗಿದೆ?

8 ಪೌಲನ ದರ್ಶನವನ್ನು 2 ಕೊರಿಂಥ 12:1-4ರಲ್ಲಿ (ಓದಿ.) ವರ್ಣಿಸಲಾಗಿದೆ. ಭವಿಷ್ಯದಲ್ಲಿ ಅಸ್ತಿತ್ವಕ್ಕೆ ಬರಲಿದ್ದ ವಿಷಯವೊಂದನ್ನು ಯೆಹೋವನು ಆ ದರ್ಶನದಲ್ಲಿ ಪೌಲನಿಗೆ ತೋರಿಸಿದನು. ಪೌಲನು ನೋಡಿದ ಆ ‘ಪರದೈಸ್‌’ ಏನಾಗಿದೆ? ಮೊದಲಾಗಿ ಅದು ಭೂಮಿ ಮೇಲೆ ಬೇಗನೆ ಬರಲಿರುವ ಪರದೈಸಿಗೆ ಸೂಚಿಸುತ್ತದೆ. (ಲೂಕ 23:43) ಎರಡನೇದಾಗಿ, ಅದು ಹೊಸ ಲೋಕದಲ್ಲಿರುವ ಪರಿಪೂರ್ಣ ಆಧ್ಯಾತ್ಮಿಕ ಪರದೈಸಿಗೆ ಸೂಚಿಸುತ್ತದೆ. ಮೂರನೇದಾಗಿ ಅದು ‘ದೇವರ ಪರದೈಸ್‌’ ಅಂದರೆ ಸ್ವರ್ಗದಲ್ಲಿ ಯೆಹೋವನ ಸಾನ್ನಿಧ್ಯಕ್ಕೆ ಸೂಚಿಸುತ್ತದೆ.—ಪ್ರಕ. 2:7.

9 ಆದರೆ ‘ಒಬ್ಬ ಮನುಷ್ಯನು ಮಾತಾಡಲು ನಿಷಿದ್ಧವಾದ ಮತ್ತು ನುಡಿಯಲಾಗದ ಮಾತುಗಳನ್ನು ಪರದೈಸಿನಲ್ಲಿದ್ದಾಗ’ ಕೇಳಿಸಿಕೊಂಡೆ ಎಂದು ಪೌಲನು ಹೇಳಿದ್ದೇಕೆ? ಏಕೆಂದರೆ ಅವನು ದರ್ಶನದಲ್ಲಿ ನೋಡಿದ್ದ ಅದ್ಭುತ ಸಂಗತಿಗಳನ್ನು ವಿವರವಾಗಿ ತಿಳಿಸುವ ಸಮಯ ಇನ್ನೂ ಬಂದಿರಲಿಲ್ಲ. ಆದರೆ ಇಂದು ತನ್ನ ಜನರು ಈಗಾಗಲೇ ಆನಂದಿಸುತ್ತಿರುವ ಆಶೀರ್ವಾದಗಳ ಬಗ್ಗೆ ಇತರರಿಗೆ ಹೇಳುವಂತೆ ಯೆಹೋವನು ಅವರನ್ನು ಅನುಮತಿಸುತ್ತಾನೆ.

10. ಆಧ್ಯಾತ್ಮಿಕ ಪರದೈಸ್‌ ಮತ್ತು ಆಧ್ಯಾತ್ಮಿಕ ಆಲಯ ಇವೆರಡೂ ಒಂದೇ ಅಲ್ಲ ಯಾಕೆ?

10 ನಾವು ಎಷ್ಟೋ ಸಲ ಆಧ್ಯಾತ್ಮಿಕ ಪರದೈಸಿನ ಬಗ್ಗೆ ಮಾತಾಡುತ್ತಿರುತ್ತೇವೆ. ಆದರೆ ಹಾಗೆಂದರೇನು? ದೇವರು ತನ್ನ ಜನರಿಗೆ ಕೊಡುವಂಥ ವಿಶೇಷವಾದ ಶಾಂತಿಭರಿತ ವಾತಾವರಣವೇ. ಆದ್ದರಿಂದಲೇ ಆಧ್ಯಾತ್ಮಿಕ ಪರದೈಸ್‌ ಮತ್ತು ಆಧ್ಯಾತ್ಮಿಕ ಆಲಯ ಒಂದೇ ಅಲ್ಲ. ಬೇರೆಬೇರೆ ವಿಷಯಗಳಾಗಿವೆ. ಆಧ್ಯಾತ್ಮಿಕ ಆಲಯವು ಸತ್ಯಾರಾಧನೆಯ ಏರ್ಪಾಡಾಗಿದೆ. ದೇವರು ಕೊಡುವ ವಿಶೇಷ ಶಾಂತಿಭರಿತ ವಾತಾವರಣ ಅಂದರೆ ಆಧ್ಯಾತ್ಮಿಕ ಪರದೈಸ್‌ ಯಾರ ಮಧ್ಯೆ ಇದೆಯೊ ಅವರೇ ದೇವರ ಮೆಚ್ಚುಗೆ ಪಡೆದವರು, ಆತನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸುವವರು ಎಂದು ಸ್ಪಷ್ಟವಾಗಿ ಗುರುತು ಹಿಡಿಯಬಹುದು.—ಮಲಾ. 3:18.

11. ಇಂದು ನಮಗೆ ಯಾವ ಸದವಕಾಶವಿದೆ?

11 ಇಸವಿ 1919ರಿಂದ ಯೆಹೋವನು ಅಪರಿಪೂರ್ಣ ಮಾನವರಿಗೆ ಆಧ್ಯಾತ್ಮಿಕ ಪರದೈಸನ್ನು ಬೆಳೆಸಲು, ಬಲಪಡಿಸಲು ಮತ್ತು ಹೆಚ್ಚಿಸಲು ಅನುಮತಿಸಿದ್ದಾನೆ ಎನ್ನುವ ಸಂಗತಿ ರೋಮಾಂಚಕಾರಿ. ಈ ಅದ್ಭುತ ಕೆಲಸದಲ್ಲಿ ನೀವು ಕೈಜೋಡಿಸಬಲ್ಲಿರಿ. ಅದನ್ನು ಮಾಡುತ್ತಿದ್ದೀರಾ? ಭೂಮಿಯಲ್ಲಿ ಯೆಹೋವನಿಗೆ ಮಹಿಮೆ ತರಲು ಆತನೊಂದಿಗೆ ಕೆಲಸಮಾಡುವ ಈ ಸದವಕಾಶ ನಿಮಗಿದೆ. ಅದಕ್ಕಾಗಿ ಕೃತಜ್ಞರಾಗಿದ್ದೀರಾ?

ಯೆಹೋವನು ತನ್ನ ಸಂಘಟನೆಯ ಅಂದವನ್ನು ಹೆಚ್ಚಿಸುತ್ತಿದ್ದಾನೆ

12. ಯೆಶಾಯ 60:17 ನೆರವೇರಿದೆಯೆಂದು ನಮಗೆ ಹೇಗೆ ಗೊತ್ತಾಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

12 ದೇವರ ಸಂಘಟನೆಯ ಭೂಭಾಗದಲ್ಲಿ ಅನೇಕ ಅದ್ಭುತಕರ ಬದಲಾವಣೆಗಳು, ಹೊಂದಾಣಿಕೆಗಳು ಆಗುವವೆಂದು ಪ್ರವಾದಿ ಯೆಶಾಯನು ಮುಂತಿಳಿಸಿದ್ದನು. (ಯೆಶಾಯ 60:17 ಓದಿ.) ಯುವ ಪ್ರಾಯದ ಕ್ರೈಸ್ತರು ಇಲ್ಲವೆ ಹೊಸದಾಗಿ ಸತ್ಯಕ್ಕೆ ಬಂದವರು ಇಂಥ ಬದಲಾವಣೆಗಳ ಬಗ್ಗೆ ಬರೀ ಓದಿದ್ದಾರೆ ಇಲ್ಲವೇ ಕೇಳಿದ್ದಾರೆ. ಆದರೆ ಈ ಅದ್ಭುತಕರ ಹೊಂದಾಣಿಕೆಗಳನ್ನು ಕಣ್ಣಾರೆ ನೋಡಿ ಅನುಭವಿಸಿರುವ ಅನೇಕ ಮಂದಿ ಸಹೋದರ ಸಹೋದರಿಯರು ಇದ್ದಾರೆ! ದೇವರು ನಮ್ಮ ರಾಜನಾದ ಯೇಸುವಿನ ಮುಖಾಂತರ ತನ್ನ ಸಂಘಟನೆಯನ್ನು ನಿರ್ದೇಶಿಸುತ್ತಿದ್ದಾನೆ ಎಂಬ ಖಾತ್ರಿ ಈ ನಂಬಿಗಸ್ತ ಸೇವಕರಿಗಿದೆ! ಈ ಪ್ರಿಯ ಕ್ರೈಸ್ತರ ಅನುಭವಗಳಿಗೆ ಕಿವಿಗೊಡುವಾಗ ಯೆಹೋವನಲ್ಲಿ ನಮ್ಮ ನಂಬಿಕೆ, ಭರವಸೆ ಬಲಗೊಳ್ಳುತ್ತದೆ.

13. ಕೀರ್ತನೆ 48:12-14 ಕ್ಕನುಸಾರ ನಾವೇನು ಮಾಡಬೇಕು?

13 ನಾವು ಹೊಸಬರಾಗಿರಲಿ, ಹಳಬರಾಗಿರಲಿ ಯೆಹೋವನ ಸಂಘಟನೆಯ ಬಗ್ಗೆ ಇತರರಿಗೆ ಹೇಳಲೇಬೇಕು. ಸೈತಾನನ ದುಷ್ಟ ಲೋಕದಲ್ಲಿ ಜೀವಿಸುತ್ತಿದ್ದೇವಾದರೂ, ನಮಗೊಂದು ಶಾಂತಿಭರಿತ, ಐಕ್ಯ ಸಹೋದರತ್ವ ಇದೆ. ಯೆಹೋವನ ಸಂಘಟನೆ ಮತ್ತು ಆಧ್ಯಾತ್ಮಿಕ ಪರದೈಸಿನ ಬಗ್ಗೆ “ಮುಂದಣ ಸಂತತಿಯವರಿಗೆ” ನಾವು ಆನಂದದಿಂದ ಹೇಳಲೇಬೇಕು.—ಕೀರ್ತನೆ 48:12-14 ಓದಿ.

14, 15. (ಎ) ಇಸವಿ 1970ರ ಬಳಿಕ ಯಾವ ಹೊಂದಾಣಿಕೆಗಳನ್ನು ಮಾಡಲಾಯಿತು? (ಬಿ) ಇದರಿಂದ ಸಂಘಟನೆಗೆ ಹೇಗೆ ಪ್ರಯೋಜನವಾಗಿದೆ?

14 ಯೆಹೋವನ ಸಂಘಟನೆಯ ಅಂದವನ್ನು ಹೆಚ್ಚಿಸಿದ ಹೊಂದಾಣಿಕೆಗಳನ್ನು ನಮ್ಮ ಸಭೆಗಳಲ್ಲಿರುವ ಅನೇಕ ವೃದ್ಧರು ಕಣ್ಣಾರೆ ನೋಡಿದ್ದಾರೆ, ಅನುಭವಿಸಿದ್ದಾರೆ. ಈಗಲೂ ಇವೆಲ್ಲ ಅವರಿಗೆ ನೆನಪಿದೆ. ಒಂದು ಕಾಲದಲ್ಲಿ ಸಭೆಗಳಲ್ಲಿ ಹಿರಿಯರ ಮಂಡಲಿಯ ಬದಲಿಗೆ ಒಬ್ಬ ಸಭಾ ಸೇವಕನಿರುತ್ತಿದ್ದ. ಬ್ರಾಂಚ್‌ ಕಮಿಟಿಯ ಬದಲು ಒಬ್ಬ ಬ್ರಾಂಚ್‌ ಸೇವಕನಿರುತ್ತಿದ್ದ. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಬದಲು ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರು ನಿರ್ದೇಶನ ಕೊಡುತ್ತಿದ್ದರು. ಈ ಸ್ಥಾನಗಳಲ್ಲಿರುತ್ತಿದ್ದ ಸಹೋದರರಿಗೆ ನಂಬಿಗಸ್ತ ಸಹಾಯಕರು ಇರುತ್ತಿದ್ದರೂ ಸಭೆಗಳಲ್ಲಾಗಲಿ, ಬ್ರಾಂಚ್‌ ಆಫೀಸುಗಳಲ್ಲಾಗಲಿ, ಜಾಗತಿಕ ಮುಖ್ಯ ಕಾರ್ಯಾಲಯದಲ್ಲಾಗಲಿ ಪ್ರಮುಖವಾಗಿ ಇವರೊಬ್ಬರಿಗೆ ಮಾತ್ರ ನಿರ್ಣಯಗಳನ್ನು ಮಾಡುವ ಜವಾಬ್ದಾರಿ ಇರುತ್ತಿತ್ತು. ಆದರೆ 1970ರ ಬಳಿಕ ಹೊಂದಾಣಿಕೆಗಳನ್ನು ಮಾಡಲಾಯಿತು. ಅದೇನೆಂದರೆ ಬರೀ ಒಬ್ಬ ಹಿರಿಯನ ಬದಲಿಗೆ ಹಿರಿಯರ ಮಂಡಲಿಗೆ ನಿರ್ಣಯಗಳನ್ನು ಮಾಡುವ ಜವಾಬ್ದಾರಿ ಕೊಡಲಾಯಿತು.

15 ಈ ಹೊಂದಾಣಿಕೆಗಳಿಂದ ಸಂಘಟನೆಗೆ ಸಹಾಯವಾಗಿದೆ. ಯಾಕೆಂದರೆ ಅವುಗಳನ್ನು ಬೈಬಲಿನ ಹೆಚ್ಚು ಉತ್ತಮವಾದ ತಿಳುವಳಿಕೆಯ ಆಧಾರದ ಮೇಲೆ ಮಾಡಲಾಗಿತ್ತು. ಒಬ್ಬ ವ್ಯಕ್ತಿ ಮಾತ್ರ ಎಲ್ಲ ನಿರ್ಣಯಗಳನ್ನು ಮಾಡುವ ಬದಲು ಹಿರಿಯರು ಒಂದು ಗುಂಪಾಗಿ ನಿರ್ಣಯಗಳನ್ನು ಮಾಡುತ್ತಾರೆ. ಹೀಗೆ ಯೆಹೋವನು ಕೊಟ್ಟಿರುವ “ಮನುಷ್ಯರಲ್ಲಿ ದಾನಗ”ಳಾಗಿರುವ ಎಲ್ಲ ಹಿರಿಯರಲ್ಲಿರುವ ಒಳ್ಳೇ ಗುಣಗಳಿಂದಾಗಿ ಸಂಘಟನೆಗೆ ಪ್ರಯೋಜನವಾಗುತ್ತದೆ.—ಎಫೆ. 4:8; ಜ್ಞಾನೋ. 24:6.

ಯೆಹೋವನು ಎಲ್ಲೆಡೆಯೂ ಇರುವ ಜನರಿಗೆ ಅಗತ್ಯವಿರುವ ಮಾರ್ಗದರ್ಶನ ಕೊಡುತ್ತಿದ್ದಾನೆ (ಪ್ಯಾರ 16, 17 ನೋಡಿ)

16, 17. ಇತ್ತೀಚೆಗೆ ಮಾಡಲಾಗಿರುವ ಹೊಂದಾಣಿಕೆಗಳಲ್ಲಿ ನಿಮಗೆ ಯಾವುದು ತುಂಬ ಇಷ್ಟವಾಗಿದೆ ಮತ್ತು ಯಾಕೆ?

16 ನಮ್ಮ ಸಾಹಿತ್ಯದಲ್ಲೂ ಇತ್ತೀಚೆಗೆ ಮಾಡಲಾಗಿರುವ ಹೊಂದಾಣಿಕೆಗಳ ಬಗ್ಗೆ ಯೋಚಿಸಿ. ನಾವಿಂದು ಸೇವೆಯಲ್ಲಿ ನೀಡುವಂಥ ಸಾಹಿತ್ಯದಲ್ಲಿ ಜನರಿಗೆ ನೆರವಾಗುವಂಥ, ಆಕರ್ಷಕ ವಿಷಯಗಳಿರುತ್ತವೆ. ಅದನ್ನು ನೀಡಲು ನಮಗೆ ಖುಷಿಯಾಗುತ್ತದೆ. ನಾವು ಹೊಸ ತಂತ್ರಜ್ಞಾನವನ್ನು ಬಳಸಿ ಹೇಗೆ ಸುವಾರ್ತೆ ಸಾರುತ್ತಿದ್ದೇವೆ ಎಂಬದರ ಬಗ್ಗೆಯೂ ಯೋಚಿಸಿ. ಉದಾಹರಣೆಗೆ, ನಮ್ಮ ವೆಬ್‌ಸೈಟ್‌ (jw.org)ನಿಂದಾಗಿ ಇನ್ನಷ್ಟು ಹೆಚ್ಚು ಜನರನ್ನು ತಲಪಲು ಸಾಧ್ಯವಾಗುತ್ತಿದೆ. ಹೀಗೆ ಅವರಿಗೆ ನಿಜವಾಗಿಯೂ ಬೇಕಾಗಿರುವ ಸಹಾಯ ಸಿಗುತ್ತಿದೆ. ಈ ಎಲ್ಲ ಹೊಂದಾಣಿಕೆಗಳಿಂದ ಗೊತ್ತಾಗುವುದೇನೆಂದರೆ, ಯೆಹೋವನಿಗೆ ಜನರ ಬಗ್ಗೆ ತುಂಬ ಕಾಳಜಿ ಮತ್ತು ಪ್ರೀತಿಯಿದೆ.

17 ನಮ್ಮ ಕೂಟಗಳಲ್ಲಿ ಮಾಡಲಾದ ಹೊಂದಾಣಿಕೆಗೂ ಕೃತಜ್ಞರಾಗಿದ್ದೇವೆ. ಇದರಿಂದಾಗಿ ನಮಗೆ ಕುಟುಂಬ ಆರಾಧನೆ ಇಲ್ಲವೆ ವೈಯಕ್ತಿಕ ಅಧ್ಯಯನಕ್ಕಾಗಿ ಹೆಚ್ಚು ಸಮಯ ಸಿಗುತ್ತಿದೆ. ನಮ್ಮ ಸಮ್ಮೇಳನ ಹಾಗೂ ಅಧಿವೇಶನ ಕಾರ್ಯಕ್ರಮಗಳಲ್ಲಿ ಆಗಿರುವ ಬದಲಾವಣೆಗಳಿಗೆ ಸಹ ನಾವು ಕೃತಜ್ಞರು. ಪ್ರತಿ ವರ್ಷ ಕಾರ್ಯಕ್ರಮಗಳು ಹೆಚ್ಚೆಚ್ಚು ಉತ್ತಮ ಆಗುತ್ತಿರುತ್ತವೆ ಅಲ್ಲವೇ? ನಮ್ಮ ಅನೇಕ ಬೈಬಲ್‌ ಶಾಲೆಗಳಿಂದ ಸಿಗುತ್ತಿರುವ ತರಬೇತಿಗಾಗಿಯೂ ನಾವು ಆಭಾರಿಗಳು. ಈ ಎಲ್ಲಾ ಹೊಂದಾಣಿಕೆಗಳನ್ನು ನೋಡುವಾಗ, ಯೆಹೋವನೇ ತನ್ನ ಸಂಘಟನೆಯನ್ನು ನಿರ್ದೇಶಿಸುತ್ತಿದ್ದಾನೆ ಮತ್ತು ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸುತ್ತಾ ಇದ್ದಾನೆ ಎಂಬುದು ಸ್ಪಷ್ಟವಾಗಿ ತೋರಿಬರುತ್ತದೆ.

ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಲು ನಾವು ಹೇಗೆ ನೆರವಾಗಬಹುದು

18, 19. ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಲು ನಾವು ಹೇಗೆ ನೆರವಾಗಬಲ್ಲೆವು?

18 ನಮ್ಮ ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಲು ನೆರವಾಗುವ ಗೌರವವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ನಾವು ಹೇಗೆ ನೆರವಾಗಬಲ್ಲೆವು? ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಾ, ಹೆಚ್ಚು ಶಿಷ್ಯರನ್ನು ಮಾಡುವ ಮೂಲಕ. ವ್ಯಕ್ತಿಯೊಬ್ಬನು ಕ್ರೈಸ್ತ ಸಮರ್ಪಣೆಯ ತನಕ ಪ್ರಗತಿ ಮಾಡಲು ನಾವು ಸಹಾಯಮಾಡುವಾಗ ಆಧ್ಯಾತ್ಮಿಕ ಪರದೈಸ್‌ ಬೆಳೆಯಲು ನೆರವಾಗುತ್ತೇವೆ.—ಯೆಶಾ. 26:15; 54:2.

19 ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಲು ನೆರವಾಗುವ ಇನ್ನೊಂದು ವಿಧ, ನಮ್ಮ ಕ್ರೈಸ್ತ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ಶ್ರಮಪಟ್ಟು ಪ್ರಯತ್ನಿಸುವುದೇ. ಇದರಿಂದಾಗಿ ನಮ್ಮ ಆಧ್ಯಾತ್ಮಿಕ ಪರದೈಸ್‌ ಇತರರಿಗೆ ಇನ್ನಷ್ಟು ಆಕರ್ಷಕವಾಗುತ್ತದೆ. ಸಾಮಾನ್ಯವಾಗಿ ಜನರನ್ನು ಮೊದಲಾಗಿ ಸಂಘಟನೆಯ ಕಡೆಗೆ ಮತ್ತು ಯೆಹೋವ ಹಾಗೂ ಯೇಸುವಿನ ಕಡೆಗೆ ಆಕರ್ಷಿಸುವಂಥ ವಿಷಯ ಬರೀ ನಮ್ಮ ಬೈಬಲ್‌ ಜ್ಞಾನವಲ್ಲ ಬದಲಾಗಿ ನಮ್ಮ ಶುದ್ಧ, ಶಾಂತಿಭರಿತ ನಡತೆಯೇ.

ಆಧ್ಯಾತ್ಮಿಕ ಪರದೈಸ್‌ ಬೆಳೆಯುವಂತೆ ನೀವು ನೆರವಾಗಬಲ್ಲಿರಿ (ಪ್ಯಾರ 18, 19 ನೋಡಿ)

20. ಜ್ಞಾನೋಕ್ತಿ 14:35 ಕ್ಕನುಸಾರ ನಮ್ಮ ಆಸೆ ಏನಾಗಿರಬೇಕು?

20 ನಮ್ಮ ಸುಂದರವಾದ ಆಧ್ಯಾತ್ಮಿಕ ಪರದೈಸನ್ನು ನೋಡುವಾಗ ಯೆಹೋವ ಹಾಗೂ ಯೇಸುವಿಗೆ ತುಂಬ ಸಂತೋಷ ಆಗುತ್ತಿರಬೇಕು. ಅದರ ಅಂದವನ್ನು ಹೆಚ್ಚಿಸುವುದರಿಂದ ಈಗ ನಮಗೆ ಸಿಗುತ್ತಿರುವ ಆನಂದವು, ಮುಂದೆ ನಾವು ಇಡೀ ಭೂಮಿಯನ್ನು ನಿಜವಾದ ಪರದೈಸಾಗಿ ಮಾಡುವಾಗ ಸಿಗುವ ಆನಂದದ ಚಿಕ್ಕ ತುಣುಕು ಅಷ್ಟೇ! “ಜಾಣನಾದ ಸೇವಕನಿಗೆ ರಾಜನ ಕೃಪೆ” ಎಂದು ಜ್ಞಾನೋಕ್ತಿ 14:35ರಲ್ಲಿರುವ ಮಾತನ್ನು ನಾವು ಯಾವಾಗಲೂ ನೆನಪಿಡಬೇಕು. ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಲು ಶ್ರಮಿಸುವ ಮೂಲಕ ಜಾಣರಾಗಿರೋಣ!