ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದು ನಮ್ಮ ಆರಾಧನಾ ಸ್ಥಳ

ಇದು ನಮ್ಮ ಆರಾಧನಾ ಸ್ಥಳ

“ನಿನ್ನ ಆಲಯಕ್ಕಾಗಿರುವ ಅಭಿಮಾನವು ನನ್ನನ್ನು ದಹಿಸುವುದು.”—ಯೋಹಾ. 2:17.

ಗೀತೆಗಳು: 127, 118

1, 2. (ಎ) ಹಿಂದಿನ ಕಾಲದಲ್ಲಿ ಯೆಹೋವನ ಸೇವಕರು ಆತನನ್ನು ಎಲ್ಲಿ ಆರಾಧಿಸುತ್ತಿದ್ದರು? (ಬಿ) ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯದ ಬಗ್ಗೆ ಯೇಸುವಿಗೆ ಹೇಗನಿಸಿತು? (ಸಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

ದೇವರನ್ನು ಆರಾಧಿಸಲಿಕ್ಕೆ ಹಿಂದಿನ ಕಾಲದಲ್ಲಿ ಆತನ ಸೇವಕರಿಗೆ ಸ್ಥಳಗಳಿದ್ದವು. ಇಂದಿನ ಸೇವಕರಿಗೂ ಇವೆ. ಉದಾಹರಣೆಗೆ ಹೇಬೆಲನು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ಬಹುಶಃ ಯಜ್ಞವೇದಿಯನ್ನು ಕಟ್ಟಿದನು. (ಆದಿ. 4:3, 4) ನೋಹ, ಅಬ್ರಹಾಮ, ಇಸಾಕ, ಯಾಕೋಬ ಮತ್ತು ಮೋಶೆ ಇವರೆಲ್ಲರೂ ಯಜ್ಞವೇದಿಗಳನ್ನು ಕಟ್ಟಿದರು. (ಆದಿ. 8:20; 12:7; 26:25; 35:1; ವಿಮೋ. 17:15) ಯೆಹೋವನು ಇಸ್ರಾಯೇಲ್ಯರಿಗೆ ದೇವದರ್ಶನದ ಗುಡಾರ ಅಥವಾ “ದೇವಸ್ಥಾನವನ್ನು” ಕಟ್ಟಲು ಹೇಳಿದನು. (ವಿಮೋ. 25:8) ಕಾಲಾನಂತರ ದೇವಾಲಯವನ್ನು ಕಟ್ಟಲು ನಿರ್ದೇಶನ ಕೊಟ್ಟನು. (1 ಅರ. 8:27, 29) ಬಾಬೆಲಿನ ಬಂದಿವಾಸದಿಂದ ದೇವಜನರು ಹಿಂದಿರುಗಿದ ಮೇಲೆ ಆರಾಧನೆಗಾಗಿ ಸಭಾಮಂದಿರಗಳಲ್ಲಿ ಕೂಡಿಬರುತ್ತಿದ್ದರು. (ಮಾರ್ಕ 6:2; ಯೋಹಾ. 18:20; ಅ. ಕಾ. 15:21) ಆರಂಭದ ಕ್ರೈಸ್ತರು ಮನೆಗಳಲ್ಲಿ ಸೇರಿಬರುತ್ತಿದ್ದರು. (ಅ. ಕಾ. 12:12; 1 ಕೊರಿಂ. 16:19) ಇಂದು ಯೆಹೋವನ ಜನರು ಇಡೀ ಭೂಮಿಯಲ್ಲಿ ಸಾವಿರಾರು ರಾಜ್ಯ ಸಭಾಗೃಹಗಳಲ್ಲಿ ಕೂಡಿಬರುತ್ತಾರೆ. ಅಲ್ಲಿ ಅವರು ಯೆಹೋವನ ಬಗ್ಗೆ ಕಲಿತು ಆತನನ್ನು ಆರಾಧಿಸುತ್ತಾರೆ.

2 ಯೆರೂಸಲೇಮಿನಲ್ಲಿದ್ದ ಯೆಹೋವನ ದೇವಾಲಯದ ಕಡೆಗೆ ಯೇಸುವಿಗೆ ಆಳವಾದ ಗೌರವ ಇತ್ತು. ಅವನಿಗೆ ದೇವಾಲಯದ ಮೇಲಿದ್ದ ಪ್ರೀತಿಯನ್ನು ನೋಡಿ ಶಿಷ್ಯರಿಗೆ ಕೀರ್ತನೆಗಾರನ ಈ ಮಾತುಗಳು ನೆನಪಾದವು: “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ.” (ಕೀರ್ತ. 69:9; ಯೋಹಾ. 2:17) ಯೆರೂಸಲೇಮಿನಲ್ಲಿದ್ದ ದೇವಾಲಯವು “ಯೆಹೋವನ ಆಲಯ” ಅಂದರೆ ಮನೆಯಾಗಿದ್ದಂತೆ ನಮ್ಮ ರಾಜ್ಯ ಸಭಾಗೃಹಗಳೂ ಯೆಹೋವನ ಮನೆ ಎಂದು ಹೇಳಲಿಕ್ಕಾಗುವುದಿಲ್ಲ. (2 ಪೂರ್ವ. 5:13; 33:4, 5) ಹಾಗಿದ್ದರೂ ನಮ್ಮ ಆರಾಧನಾ ಸ್ಥಳಗಳಿಗಾಗಿ ನಮ್ಮಲ್ಲಿ ಆಳವಾದ ಗೌರವ ಇರಬೇಕು. ರಾಜ್ಯ ಸಭಾಗೃಹದಲ್ಲಿದ್ದಾಗ ಹೇಗೆ ನಡಕೊಳ್ಳಬೇಕು, ಅದನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಅದಕ್ಕಾಗಿ ಹಣಕಾಸಿನ ನೆರವು ಹೇಗೆ ಕೊಡಬಹುದೆಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. *—ಪಾದಟಿಪ್ಪಣಿ ನೋಡಿ.

ನಮ್ಮ ಕೂಟಗಳನ್ನು ಗೌರವಿಸುತ್ತೇವೆ

3-5. (ಎ) ರಾಜ್ಯ ಸಭಾಗೃಹ ಎಂದರೇನು? (ಬಿ) ನಮ್ಮ ಕೂಟಗಳ ಬಗ್ಗೆ ನಮಗೆ ಯಾವ ಅನಿಸಿಕೆ ಇರಬೇಕು?

3 ಯೆಹೋವನನ್ನು ಆರಾಧಿಸಲು ಜನರು ಕೂಡಿ ಬರುವ ಮುಖ್ಯ ಸ್ಥಳವೇ ರಾಜ್ಯ ಸಭಾಗೃಹ. ಕೂಟಗಳು ದೇವರು ಕೊಟ್ಟ ಉಡುಗೊರೆಯಾಗಿವೆ. ಅವು ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಕೂಟಗಳಲ್ಲಿ ಆತನ ಸಂಘಟನೆ ನಮಗೆ ಬೇಕಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಕೊಡುತ್ತದೆ. ಪ್ರತಿ ವಾರ ‘ಯೆಹೋವನ ಮೇಜಿನಲ್ಲಿ’ ಆಧ್ಯಾತ್ಮಿಕ ಆಹಾರವನ್ನು ಉಣ್ಣುವಂತೆ ಯೆಹೋವ ಮತ್ತು ಯೇಸು ನಮಗೆ ಆಮಂತ್ರಣ ನೀಡಿ ಗೌರವಿಸಿದ್ದಾರೆ. (1 ಕೊರಿಂ. 10:21) ಆದ್ದರಿಂದ ಈ ಆಮಂತ್ರಣವು ಎಷ್ಟು ಶ್ರೇಷ್ಠವೆಂದು ನಾವು ಮರೆಯಬಾರದು.

4 ಆತನನ್ನು ಆರಾಧಿಸಲು ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ನಾವು ಕೂಟಗಳಿಗೆ ಹೋಗಬೇಕೆಂದು ಯೆಹೋವನು ನಮಗೆ ಸ್ಪಷ್ಟವಾಗಿ ಹೇಳಿದ್ದಾನೆ. (ಇಬ್ರಿಯ 10:24, 25 ಓದಿ.) ನಾವು ಆತನನ್ನು ಗೌರವಿಸುತ್ತೇವೆ. ಹಾಗಾಗಿ ನಿಜವಾಗಲೂ ಅಗತ್ಯಬಿದ್ದರೆ ಮಾತ್ರ ಕೂಟಗಳಿಗೆ ಹೋಗದಿರುತ್ತೇವೆ ವಿನಃ ಸುಮ್ಮಸುಮ್ಮನೆ ತಪ್ಪಿಸುವುದಿಲ್ಲ. ಕೂಟಗಳಿಗಾಗಿ ಚೆನ್ನಾಗಿ ತಯಾರಿ ಮಾಡುವ ಮೂಲಕ ಮತ್ತು ಅದರಲ್ಲಿ ಮನಃಪೂರ್ವಕವಾಗಿ ಭಾಗವಹಿಸುವ ಮೂಲಕವೂ ಕೂಟಗಳಿಗಾಗಿ ಕೃತಜ್ಞರೆಂದು ತೋರಿಸುತ್ತೇವೆ.—ಕೀರ್ತ. 22:22.

5 ಯೆಹೋವನ ಮೇಲೆ ನಮಗೆಷ್ಟು ಗೌರವ ಇದೆ ಎಂಬುದನ್ನು ಕೂಟಗಳಲ್ಲಿ ನಾವು ನಡಕೊಳ್ಳುವ ಮತ್ತು ನಮ್ಮ ರಾಜ್ಯ ಸಭಾಗೃಹವನ್ನು ನೋಡಿಕೊಳ್ಳುವ ವಿಧದಿಂದ ತೋರಿಸುತ್ತೇವೆ. ರಾಜ್ಯ ಸಭಾಗೃಹದ ಹೊರಗೆ ಹಾಕಲಾಗುವ ಫಲಕದ ಮೇಲೆ ಸಾಮಾನ್ಯವಾಗಿ ಯೆಹೋವನ ಹೆಸರಿರುತ್ತದೆ. ನಮ್ಮ ನಡತೆಯ ಮೂಲಕ ಆ ಹೆಸರಿಗೆ ನಾವು ಸ್ತುತಿ ತರಬೇಕು.—1 ಅರಸುಗಳು 8:17 ಹೋಲಿಸಿ.

6. ನಮ್ಮ ರಾಜ್ಯ ಸಭಾಗೃಹಗಳನ್ನು ನೋಡಿ ಕೆಲವು ಜನರು ಮತ್ತು ಕೂಟಗಳಿಗೆ ಹಾಜರಾಗುವವರು ಏನಂದಿದ್ದಾರೆ? (ಲೇಖನದ ಆರಂಭದ ಚಿತ್ರ ನೋಡಿ.)

6 ನಮ್ಮ ರಾಜ್ಯ ಸಭಾಗೃಹಗಳ ಕಡೆಗೆ ನಮಗಿರುವ ಗೌರವವನ್ನು ಇತರರು ಗಮನಿಸುತ್ತಾರೆ. ಟರ್ಕಿ ದೇಶದ ಒಬ್ಬ ವ್ಯಕ್ತಿಯ ಉದಾಹರಣೆ ನೋಡಿ. ಅವನು ಹೀಗೆ ಹೇಳಿದ: “ರಾಜ್ಯ ಸಭಾಗೃಹದಲ್ಲಿನ ಸ್ವಚ್ಛತೆಯನ್ನು, ಎಲ್ಲವೂ ವ್ಯವಸ್ಥಿತವಾಗಿರುವುದನ್ನು ಗಮನಿಸಿದೆ. ಇವನ್ನೆಲ್ಲ ತುಂಬ ಇಷ್ಟಪಟ್ಟೆ. ಅಲ್ಲಿದ್ದ ಜನರು ಸಭ್ಯ ಬಟ್ಟೆ ಹಾಕಿದ್ದರು, ಮುಖದಲ್ಲಿ ನಗು ಇತ್ತು, ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರು. ಇದನ್ನು ನೋಡಿ ನನಗೆ ತುಂಬ ಆಶ್ಚರ್ಯ ಆಯ್ತು.” ಈ ವ್ಯಕ್ತಿ ಪ್ರತಿ ವಾರ ತಪ್ಪದೆ ಕೂಟಗಳಿಗೆ ಹಾಜರಾಗಲು ಆರಂಭಿಸಿದನು. ಸ್ವಲ್ಪ ಸಮಯದಲ್ಲೇ ದೀಕ್ಷಾಸ್ನಾನ ಪಡೆದನು. ಇಂಡೋನೇಶಿಯದ ಒಂದು ನಗರದಲ್ಲಿನ ಸಹೋದರರು ತಮ್ಮ ಹೊಸ ರಾಜ್ಯ ಸಭಾಗೃಹವನ್ನು ನೋಡಲು ನೆರೆಹೊರೆಯವರನ್ನು, ಅಲ್ಲಿನ ಮೇಯರ್‌ ಮತ್ತು ಇತರ ಅಧಿಕಾರಿಗಳನ್ನು ಆಮಂತ್ರಿಸಿದರು. ಕಟ್ಟಡದ ಗುಣಮಟ್ಟ, ರಚನೆ ಮತ್ತು ಸುಂದರ ತೋಟವನ್ನು ನೋಡಿ ಮೇಯರ್‌ ಹೀಗಂದನು: “ಈ ಸಭಾಗೃಹದ ಸ್ವಚ್ಛತೆಯೇ ನಿಮ್ಮ ನಿಜ ನಂಬಿಕೆಯನ್ನು ತೋರಿಸುತ್ತದೆ.”

ಸಭಾಗೃಹದಲ್ಲಿ ನಾವು ನಡಕೊಳ್ಳುವ ರೀತಿ ದೇವರಿಗೆ ಅಗೌರವ ತೋರಿಸಬಹುದು (ಪ್ಯಾರ 7, 8 ನೋಡಿ)

7, 8. ಯೆಹೋವನ ಕಡೆಗಿನ ಗೌರವವನ್ನು ರಾಜ್ಯ ಸಭಾಗೃಹದಲ್ಲಿರುವಾಗ ಹೇಗೆ ತೋರಿಸುತ್ತೇವೆ?

7 ನಮ್ಮನ್ನು ಕೂಟಗಳಿಗೆ ಆಮಂತ್ರಿಸುವುದು ಯೆಹೋವನು. ಅಲ್ಲಿ ನಾವು ಹೇಗೆ ನಡಕೊಳ್ಳುತ್ತೇವೆ, ನಮ್ಮ ಉಡುಗೆ-ತೊಡುಗೆ ಹೇಗಿದೆ ಎನ್ನುವುದಕ್ಕೆ ಗಮನ ಕೊಡುತ್ತಾನೆ. ಆದ್ದರಿಂದ ನಾವು ಯಾವುದನ್ನೂ ವಿಪರೀತವಾಗಿ ಮಾಡುವುದಿಲ್ಲ. ಅಂದರೆ ಕೂಟಗಳಲ್ಲಿ ಅತಿ ಕಟ್ಟುನಿಟ್ಟಾಗಿ, ಬಿಗಿಯಾಗಿ ನಡಕೊಳ್ಳುವುದಿಲ್ಲ. ಹಾಗಂತ ತೀರ ಆರಾಮವಾಗಿದ್ದು, ಯಾವುದರಲ್ಲೂ ಆಸಕ್ತಿ ಇಲ್ಲದವರಂತೆಯೂ ನಡಕೊಳ್ಳುವುದಿಲ್ಲ. ನಾವು ಮತ್ತು ರಾಜ್ಯ ಸಭಾಗೃಹಕ್ಕೆ ಬರುವಂತೆ ನಾವು ಆಮಂತ್ರಿಸಿದವರು ಅಲ್ಲಿ ಹಾಯಾಗಿರಬೇಕೆಂದು ಯೆಹೋವನು ಬಯಸುತ್ತಾನೆ ನಿಜ. ಆದರೆ ನಾವು ಯಾವ ವಿಧದಲ್ಲೂ ಕೂಟಗಳಿಗೆ ಅಗೌರವ ತೋರಿಸಬಾರದು. ಆದ್ದರಿಂದಲೇ ನಾವು ಮನೆಯಲ್ಲಿ ಹಾಕುವಂಥ ರೀತಿಯ ಬಟ್ಟೆಯನ್ನೊ, ಕೊಳಕಾದ ಬಟ್ಟೆಯನ್ನೊ ಹಾಕಿಕೊಂಡು ಕೂಟಗಳಿಗೆ ಹೋಗುವುದಿಲ್ಲ. ಕೂಟಗಳು ನಡೆಯುವಾಗ ಮಾತಾಡುತ್ತಾ ಕೂರುವುದಿಲ್ಲ, ಮೊಬೈಲ್‍ನಿಂದ ಮೆಸೆಜ್‌ ಕಳುಹಿಸುವುದಿಲ್ಲ, ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅಲ್ಲದೆ ಹೆತ್ತವರು ತಮ್ಮ ಮಕ್ಕಳಿಗೆ ರಾಜ್ಯ ಸಭಾಗೃಹದಲ್ಲಿ ಓಡಬಾರದು ಆಡಬಾರದೆಂದು ಕಲಿಸಬೇಕು.—ಪ್ರಸಂ. 3:1.

8 ದೇವಾಲಯದಲ್ಲಿ ಜನರು ವ್ಯಾಪಾರ ಮಾಡುತ್ತಿರುವುದನ್ನು ಯೇಸು ನೋಡಿದಾಗ ಅವನಿಗೆ ತುಂಬ ಕೋಪ ಬಂತು. ಅವರನ್ನೆಲ್ಲ ಅಲ್ಲಿಂದ ಹೊರಗಟ್ಟಿದನು. (ಯೋಹಾ. 2:13-17) ನಮ್ಮ ರಾಜ್ಯ ಸಭಾಗೃಹಗಳಲ್ಲಿ ನಾವು ಯೆಹೋವನನ್ನು ಆರಾಧಿಸುತ್ತೇವೆ ಮತ್ತು ಆತನ ಬಗ್ಗೆ ಕಲಿಯುತ್ತೇವೆ. ಆದ್ದರಿಂದ ಅಲ್ಲಿರುವಾಗ ನಮ್ಮ ವ್ಯಾಪಾರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದಾಗಲಿ ಅದರ ಬಗ್ಗೆ ಮಾತಾಡುವುದಾಗಲಿ ಸರಿಯಲ್ಲ.—ನೆಹೆಮಿಾಯ 13:7, 8 ಹೋಲಿಸಿ.

ರಾಜ್ಯ ಸಭಾಗೃಹಗಳನ್ನು ಕಟ್ಟಲು ನೆರವು ನೀಡುತ್ತೇವೆ

9, 10. (ಎ) ಯೆಹೋವನ ಜನರು ರಾಜ್ಯ ಸಭಾಗೃಹಗಳನ್ನು ಕಟ್ಟಲು ಸಾಧ್ಯವಾಗುತ್ತಿರುವುದು ಹೇಗೆ? (ಬಿ) ಇದರ ಫಲಿತಾಂಶವೇನು? (ಸಿ) ಸ್ವಂತ ಸಭಾಗೃಹ ಕಟ್ಟುವಷ್ಟು ಹಣ ಇಲ್ಲದ ಸಭೆಗಳಿಗೆ ಯೆಹೋವನ ಸಂಘಟನೆ ಹೇಗೆ ನೆರವಾಗುತ್ತದೆ?

9 ಇಡೀ ಲೋಕದಲ್ಲಿ ಯೆಹೋವನ ಸಾಕ್ಷಿಗಳು ರಾಜ್ಯ ಸಭಾಗೃಹಗಳನ್ನು ಕಟ್ಟಲು ತುಂಬ ಶ್ರಮಪಡುತ್ತಾರೆ. ಸಂಬಳ ಪಡೆಯದೆ ಸ್ವಯಂಸೇವಕರು ಹೊಸ ಸಭಾಗೃಹಗಳನ್ನು ವಿನ್ಯಾಸಿಸುತ್ತಾರೆ, ಕಟ್ಟುತ್ತಾರೆ ಅಥವಾ ಹಳೇ ಸಭಾಗೃಹಗಳನ್ನು ನವೀಕರಿಸುತ್ತಾರೆ. ಇದರ ಫಲಿತಾಂಶವಾಗಿ ಇಡೀ ಲೋಕದಲ್ಲಿ ಕಳೆದ 15 ವರ್ಷಗಳಲ್ಲಿ 28,000ಕ್ಕಿಂತ ಹೆಚ್ಚು ಸುಂದರ ರಾಜ್ಯ ಸಭಾಗೃಹಗಳನ್ನು ಕಟ್ಟಿದ್ದೇವೆ. ಅಂದರೆ ಪ್ರತಿ ದಿನ ಸರಾಸರಿ 5 ರಾಜ್ಯ ಸಭಾಗೃಹಗಳನ್ನು ಕಟ್ಟಿದ್ದೇವೆ.

10 ಎಲ್ಲೆಲ್ಲಿ ರಾಜ್ಯ ಸಭಾಗೃಹದ ಅಗತ್ಯವಿದೆಯೊ ಅಲ್ಲೆಲ್ಲ ಅದನ್ನು ಕಟ್ಟಲು ಯೆಹೋವನ ಸಂಘಟನೆ ಸ್ವಯಂ ಸೇವಕರನ್ನು ನೇಮಿಸುತ್ತದೆ ಮತ್ತು ಕಾಣಿಕೆಗಳನ್ನು ಬಳಸುತ್ತದೆ. ಯಾರಲ್ಲಿ ಹೆಚ್ಚು ಇದೆಯೊ ಅವರು ಇಲ್ಲದವರಿಗೆ ಸಹಾಯ ಮಾಡಬೇಕೆಂಬ ಬೈಬಲ್‌ ತತ್ವವನ್ನು ಪಾಲಿಸುತ್ತೇವೆ. (2 ಕೊರಿಂಥ 8:13-15 ಓದಿ.) ಫಲಿತಾಂಶ? ಸ್ವಂತ ಸಭಾಗೃಹ ಕಟ್ಟುವಷ್ಟು ಹಣ ಇಲ್ಲದ ಹಲವಾರು ಸಭೆಗಳಿಗೆ ರಾಜ್ಯ ಸಭಾಗೃಹಗಳನ್ನು ಕಟ್ಟಿಕೊಡಲಾಗಿದೆ.

11. (ಎ) ತಮ್ಮ ಹೊಸ ರಾಜ್ಯ ಸಭಾಗೃಹದ ಬಗ್ಗೆ ಕೆಲವು ಸಹೋದರರು ಏನು ಹೇಳುತ್ತಾರೆ? (ಬಿ) ಇದು ನಿಮ್ಮಲ್ಲಿ ಯಾವ ಭಾವನೆ ಮೂಡಿಸುತ್ತದೆ?

11 ಕೋಸ್ಟಾರಿಕ ದೇಶದಲ್ಲಿರುವ ಒಂದು ಸಭೆಯ ಸಹೋದರರು ಹೀಗೆ ಬರೆದರು: “ರಾಜ್ಯ ಸಭಾಗೃಹದ ಮುಂದೆ ನಿಂತಾಗ ನಾವು ಕನಸು ಕಾಣುತ್ತಿದ್ದೇವೇನೊ ಎಂದು ಅನಿಸುತ್ತದೆ. ನಮಗೆ ನಂಬಲಿಕ್ಕೇ ಆಗುವುದಿಲ್ಲ. ನಮ್ಮ ಸುಂದರ ಸಭಾಗೃಹವನ್ನು ಅಚ್ಚುಕಟ್ಟಾಗಿ ಒಂದು ಚಿಕ್ಕ ಅಂಶವನ್ನೂ ಬಿಡದೆ ಬರೀ 8 ದಿನಗಳಲ್ಲಿ ನಿರ್ಮಿಸಲಾಯಿತು. ಯೆಹೋವನ ಆಶೀರ್ವಾದ, ಆತನ ಸಂಘಟನೆ ಮಾಡಿದ ಏರ್ಪಾಡು ಹಾಗೂ ಪ್ರೀತಿಯ ಸಹೋದರ ಸಹೋದರಿಯರ ನೆರವಿನಿಂದ ಇದು ಸಾಧ್ಯವಾಯಿತು. ಈ ಆರಾಧನಾ ಸ್ಥಳ ಯೆಹೋವನು ನಮಗೆ ಕೊಟ್ಟಿರುವ ವಿಶೇಷ ಉಡುಗೊರೆ, ಒಂದು ಅಮೂಲ್ಯ ರತ್ನ. ಇದಕ್ಕಾಗಿ ನಾವು ತುಂಬ ಕೃತಜ್ಞರು.” ಯೆಹೋವನು ಅವರಿಗೋಸ್ಕರ ಮಾಡಿರುವ ವಿಷಯಗಳಿಗಾಗಿ ಸಹೋದರ ಸಹೋದರಿಯರು ಆತನಿಗೆ ಕೃತಜ್ಞತೆ ಹೇಳುವಾಗ ನಮಗೆ ನಿಜವಾಗಲೂ ಖುಷಿಯಾಗುತ್ತದೆ. ಇಡೀ ಲೋಕದಲ್ಲಿರುವ ಸಾವಿರಾರು ಸಹೋದರರಿಗೆ ಸ್ವಂತ ರಾಜ್ಯ ಸಭಾಗೃಹ ಇರುವುದು ಸಂತೋಷದ ಸಂಗತಿ. ರಾಜ್ಯ ಸಭಾಗೃಹಗಳನ್ನು ಕಟ್ಟಿದ ಸ್ವಲ್ಪದರಲ್ಲೇ ಯೆಹೋವನ ಬಗ್ಗೆ ಕಲಿಯಲು ಕೂಟಗಳಿಗೆ ಹಾಜರಾಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ರಾಜ್ಯ ಸಭಾಗೃಹದ ನಿರ್ಮಾಣ ಕೆಲಸವನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.—ಕೀರ್ತ. 127:1.

12. ರಾಜ್ಯ ಸಭಾಗೃಹಗಳನ್ನು ಕಟ್ಟಲು ನೀವು ಹೇಗೆ ನೆರವಾಗಬಹುದು?

12 ರಾಜ್ಯ ಸಭಾಗೃಹಗಳನ್ನು ಕಟ್ಟಲು ನೀವು ಹೇಗೆ ನೆರವಾಗಬಹುದು? ಆ ಕೆಲಸ ಮಾಡಲು ನೀವು ಸ್ವಯಂ ಸೇವಕರಾಗಿ ಮುಂದೆ ಬರಬಹುದು. ನಿರ್ಮಾಣ ಕೆಲಸಕ್ಕಾಗಿ ನಾವೆಲ್ಲರೂ ಹಣವನ್ನು ಕಾಣಿಕೆಯಾಗಿ ಕೊಡಬಹುದು. ಈ ಕೆಲಸವನ್ನು ಬೆಂಬಲಿಸಲು ನಮ್ಮಿಂದ ಏನು ಆಗುತ್ತದೊ ಅದೆಲ್ಲವನ್ನು ಮಾಡಿದಾಗ ಕೊಡುವುದರಿಂದ ಸಿಗುವ ಸಂತೋಷ ನಮ್ಮದಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಯೆಹೋವನಿಗೆ ಸ್ತುತಿ ತರುತ್ತೇವೆ. ಅಲ್ಲದೆ ಬೈಬಲ್‌ ಸಮಯದಲ್ಲಿ ಆರಾಧನಾ ಸ್ಥಳದ ನಿರ್ಮಾಣ ಕಾರ್ಯಕ್ಕೆ ಕಾಣಿಕೆ ನೀಡಲು ತುದಿಗಾಲಲ್ಲಿ ನಿಂತಿದ್ದ ದೇವಜನರ ಮಾದರಿಯನ್ನು ಅನುಕರಿಸುತ್ತೇವೆ.—ವಿಮೋ. 25:2; 2 ಕೊರಿಂ. 9:7.

ನಮ್ಮ ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿಡುತ್ತೇವೆ

13, 14. ನಮ್ಮ ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಡುವುದರ ಬಗ್ಗೆ ಬೈಬಲ್‍ನಿಂದ ಏನು ಕಲಿಯುತ್ತೇವೆ?

13 ಯೆಹೋವನು ಪವಿತ್ರನೂ ಶುದ್ಧನೂ ಆದ ದೇವರು. ಏನೇ ಮಾಡಿದರೂ ಕ್ರಮಬದ್ಧವಾಗಿ ಮಾಡುವ ದೇವರು. ಆದ್ದರಿಂದಲೇ ನಮ್ಮ ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿಡಬೇಕು, ಅಚ್ಚುಕಟ್ಟಾಗಿಡಬೇಕು. (1 ಕೊರಿಂಥ 14:33, 40 ಓದಿ.) ಯೆಹೋವನಂತೆ ನಾವು ಕೂಡ ಸ್ವಚ್ಛ ಹಾಗೂ ಪರಿಶುದ್ಧರಾಗಿರಲು ನಮ್ಮ ಆರಾಧನೆ, ಯೋಚನೆ, ಕ್ರಿಯೆಗಳನ್ನು ಮಾತ್ರವಲ್ಲ ದೇಹವನ್ನೂ ಶುದ್ಧವಾಗಿಡುತ್ತೇವೆ.—ಪ್ರಕ. 19:8.

14 ನಮ್ಮ ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿ, ಅಚ್ಚುಕಟ್ಟಾಗಿ ಇಟ್ಟಾಗ ಬೇರೆಯವರನ್ನು ಕೂಟಗಳಿಗೆ ಕರೆಯಲು ಹೆಮ್ಮೆಯನಿಸುತ್ತದೆ. ಹೀಗೆ ಸ್ವಚ್ಛತೆಯನ್ನು ಕಾಪಾಡುವಾಗ ಶುದ್ಧವಾದ ಹೊಸ ಲೋಕದ ಬಗ್ಗೆ ನಾವು ಸಾರುವ ವಿಷಯಕ್ಕೆ ತಕ್ಕಂತೆ ನಡೆಯುತ್ತಿದ್ದೇವೆಂದು ತೋರಿಸುತ್ತೇವೆ. ಭೂಮಿಯನ್ನು ಸುಂದರ ಪರದೈಸನ್ನಾಗಿ ಮಾಡಲಿರುವ ಪವಿತ್ರನು, ಶುದ್ಧನು ಆದ ದೇವರನ್ನು ನಾವು ಆರಾಧಿಸುತ್ತೇವೆಂದು ಅವರು ಗ್ರಹಿಸುತ್ತಾರೆ.—ಯೆಶಾ. 6:1-3; ಪ್ರಕ. 11:18.

15, 16. (ಎ) ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿಡಲು ಕಷ್ಟವಾಗಬಹುದು ಏಕೆ? (ಬಿ) ಆದರೂ ನಾವ್ಯಾಕೆ ಅದನ್ನು ಸ್ವಚ್ಛವಾಗಿಡಬೇಕು? (ಸಿ) ನಿಮ್ಮ ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸಲು ಯಾವ ಏರ್ಪಾಡುಗಳನ್ನು ಮಾಡಲಾಗಿದೆ? (ಡಿ) ನಮ್ಮೆಲ್ಲರಿಗೂ ಯಾವ ಗೌರವ ಇದೆ?

15 ಕೆಲವರು ಸ್ವಚ್ಛತೆಗೆ ತುಂಬ ಮಹತ್ವ ಕೊಡುತ್ತಾರೆ, ಇನ್ನೂ ಕೆಲವರು ಅಷ್ಟೇನೂ ಗಮನಕೊಡುವುದಿಲ್ಲ. ಏಕೆಂದರೆ ಅವರು ಬೆಳೆದು ಬಂದಿರುವ ರೀತಿ ಬೇರೆಬೇರೆ ಇರುತ್ತದೆ. ಇನ್ನೂ ಕೆಲವರು ಇರುವಂಥ ಸ್ಥಳಗಳಲ್ಲಿ ತುಂಬ ಧೂಳು ಬರುತ್ತಾ ಇರುತ್ತದೆ ಅಥವಾ ಮಣ್ಣಿನ ರಸ್ತೆಗಳಿದ್ದು ಗಲೀಜಾಗಿರುತ್ತದೆ. ಇನ್ನು ಕೆಲವರಿಗೆ ಸ್ವಚ್ಛವಾಗಿಡಲು ಬೇಕಾದಷ್ಟು ನೀರು, ಇತರ ವಸ್ತುಗಳು ಇಲ್ಲದಿರಬಹುದು. ಆದರೆ ನಾವೆಲ್ಲೇ ವಾಸಿಸುತ್ತಿರಲಿ, ನಮ್ಮ ಸುತ್ತಮುತ್ತಲಿನ ಜನರಿಗೆ ಸ್ವಚ್ಛತೆಯ ಬಗ್ಗೆ ಯಾವುದೇ ಅಭಿಪ್ರಾಯವಿರಲಿ ನಾವು ಮಾತ್ರ ನಮ್ಮ ರಾಜ್ಯ ಸಭಾಗೃಹವನ್ನು ಶುದ್ಧವಾಗಿ, ಅಚ್ಚುಕಟ್ಟಾಗಿ ಇಡಬೇಕು. ಏಕೆಂದರೆ ಅದು ಯೆಹೋವನನ್ನು ಆರಾಧಿಸುವ ಸ್ಥಳವಾಗಿದೆ.—ಧರ್ಮೋ. 23:14.

16 ನಮ್ಮ ಸಭಾಗೃಹಗಳು ಆದಷ್ಟು ಸ್ವಚ್ಛವಾಗಿರಬೇಕಾದರೆ ಅದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಬೇಕು. ಯಾವಾಗೆಲ್ಲ ಸಭಾಗೃಹವನ್ನು ಶುಚಿ ಮಾಡಬೇಕೆಂದು ಹಿರಿಯರು ಒಂದು ಪಟ್ಟಿ ಮಾಡುತ್ತಾರೆ. ಶುಚಿಯಾಗಿಡಲು ಬೇಕಾದ ಸಾಮಗ್ರಿಗಳು, ಸಲಕರಣೆಗಳು ಯಾವಾಗಲೂ ಸಾಕಷ್ಟು ಪ್ರಮಾಣದಲ್ಲಿರುವಂತೆ ಅವರು ನೋಡಿಕೊಳ್ಳಬೇಕು. ಈ ಶುಚಿಕಾರ್ಯ ಸರಿಯಾಗಿ ನಡೆಯುವಂತೆ ಯಾರು ಏನು ಮಾಡಬೇಕೆಂದು ಹಿರಿಯರು ಯೋಜನೆ ಮಾಡುತ್ತಾರೆ. ಕೆಲವೊಂದನ್ನು ಪ್ರತಿ ವಾರ ಕೂಟಗಳು ಮುಗಿದ ನಂತರ ಶುಚಿಗೊಳಿಸಬೇಕಾಗುತ್ತದೆ. ಇನ್ನು ಕೆಲವನ್ನು ಪ್ರತಿ ವಾರ ಶುಚಿ ಮಾಡಬೇಕಾಗಿಲ್ಲ. ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುವ ಕೆಲಸ ನಮ್ಮೆಲ್ಲರಿಗಿರುವ ಗೌರವ. ಹಾಗಾಗಿ ಅದರಲ್ಲಿ ನಾವೆಲ್ಲರೂ ಭಾಗವಹಿಸಬೇಕು.

ನಮ್ಮ ರಾಜ್ಯ ಸಭಾಗೃಹವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ

17, 18. (ಎ) ಹಿಂದಿನ ಕಾಲದ ಯೆಹೋವನ ಜನರು ತಮ್ಮ ದೇವಾಲಯವನ್ನು ನೋಡಿಕೊಂಡ ವಿಧದಿಂದ ನಾವೇನು ಕಲಿಯಬಹುದು? (ಬಿ) ನಮ್ಮ ರಾಜ್ಯ ಸಭಾಗೃಹವನ್ನು ನಾವೇಕೆ ನೋಡಿಕೊಳ್ಳಲೇಬೇಕು?

17 ಅಗತ್ಯವಿರುವ ರಿಪೇರಿ ಕೆಲಸಗಳನ್ನು ಮಾಡುವ ಮೂಲಕ ನಮ್ಮ ರಾಜ್ಯ ಸಭಾಗೃಹವನ್ನು ಒಳ್ಳೇ ಸ್ಥಿತಿಯಲ್ಲಿಡುತ್ತೇವೆ. ಯೆಹೋವನ ಸೇವಕರು ಹಿಂದಿನ ಕಾಲದಲ್ಲಿ ಹೀಗೇ ಮಾಡುತ್ತಿದ್ದರು. ಉದಾಹರಣೆಗೆ ಯೂದಾಯದ ರಾಜನಾದ ಯೆಹೋವಾಷನ ಸಮಯದಲ್ಲಿ ಜನರು ದೇವಾಲಯಕ್ಕಾಗಿ ಕಾಣಿಕೆಗಳನ್ನು ಕೊಟ್ಟರು. ಆ ಹಣವನ್ನು ದೇವಾಲಯದಲ್ಲಿ ರಿಪೇರಿಯ ಅಗತ್ಯ ಎಲ್ಲೆಲ್ಲಿದೆಯೊ ಅದಕ್ಕಾಗಿ ಬಳಸಬೇಕೆಂದು ಯಾಜಕರಿಗೆ ಯೆಹೋವಾಷನು ಹೇಳಿದನು. (2 ಅರ. 12:4, 5) ಸುಮಾರು 200 ವರ್ಷಗಳ ನಂತರ ರಾಜ ಯೋಷೀಯನು ದೇವಾಲಯಕ್ಕಾಗಿ ಬಂದಿದ್ದ ಕಾಣಿಕೆಗಳನ್ನು ಅದರ ರಿಪೇರಿ ಕೆಲಸಕ್ಕಾಗಿ ಬಳಸಿದನು.—2 ಪೂರ್ವಕಾಲವೃತ್ತಾಂತ 34:9-11 ಓದಿ.

18 ಕೆಲವು ದೇಶಗಳಲ್ಲಿ ಕಟ್ಟಡಗಳನ್ನು ಅಥವಾ ಸಲಕರಣೆಗಳನ್ನು ಒಳ್ಳೇ ಸ್ಥಿತಿಯಲ್ಲಿ ಇಡುವ ಅಭ್ಯಾಸವೇ ಜನರಿಗಿಲ್ಲ ಎಂದು ಕೆಲವು ಬ್ರಾಂಚ್‌ ಕಮಿಟಿಗಳು ಗಮನಿಸಿವೆ. ಅದನ್ನು ಮಾಡುವುದು ಹೇಗೆಂದು ಕೆಲವೇ ಮಂದಿಗೆ ಗೊತ್ತಿರುವುದರಿಂದ ಹೀಗಾಗುತ್ತಿರಬಹುದು. ಅಥವಾ ರಿಪೇರಿ ಮಾಡಲು ಬೇಕಾಗುವಷ್ಟು ಹಣ ಅವರ ಬಳಿ ಇಲ್ಲದಿರಬಹುದು. ಇದನ್ನೇ ನಮ್ಮ ರಾಜ್ಯ ಸಭಾಗೃಹದ ವಿಷಯದಲ್ಲೂ ಮಾಡುವ ಸಾಧ್ಯತೆ ಇದೆ. ಅಗತ್ಯವಿದ್ದಾಗ ರಿಪೇರಿ ಕೆಲಸ ಮಾಡದಿದ್ದರೆ ಅದು ಗಲೀಜಾಗಿ ಕಾಣುತ್ತದೆ. ಜನರ ಗಮನ ಅದರ ಮೇಲೆ ಹೋಗುತ್ತದೆ. ಇದರಿಂದ ಜನರಿಗೆ ಒಳ್ಳೇ ಸಾಕ್ಷಿ ಸಿಗುವುದಿಲ್ಲ. ಅದರ ಬದಲು ನಮ್ಮ ರಾಜ್ಯ ಸಭಾಗೃಹವನ್ನು ಚೆನ್ನಾಗಿ ನೋಡಿಕೊಳ್ಳಲು ಕೈಲಾದದ್ದೆಲ್ಲ ಮಾಡುವಾಗ ಯೆಹೋವನಿಗೆ ಸ್ತುತಿ ತರುತ್ತೇವೆ. ಜೊತೆಗೆ ನಮ್ಮ ಸಹೋದರರು ಕೊಟ್ಟ ಕಾಣಿಕೆಯನ್ನು ನಾವು ಹಾಳುಮಾಡುವುದಿಲ್ಲ.

ನಮ್ಮ ರಾಜ್ಯ ಸಭಾಗೃಹವನ್ನು ಸ್ವಚ್ಛ ಹಾಗೂ ಒಳ್ಳೇ ಸ್ಥಿತಿಯಲ್ಲಿಡಬೇಕು (ಪ್ಯಾರ 16, 18 ನೋಡಿ)

19. ಯೆಹೋವನನ್ನು ಆರಾಧಿಸುವ ಸ್ಥಳಕ್ಕಾಗಿ ಗೌರವ ತೋರಿಸಲು ನೀವೇನು ಮಾಡುವಿರಿ?

19 ರಾಜ್ಯ ಸಭಾಗೃಹ ಯೆಹೋವನಿಗೆ ಸಮರ್ಪಿತವಾದ ಕಟ್ಟಡ. ಅದು ಒಬ್ಬ ವ್ಯಕ್ತಿಗಾಗಲಿ ಒಂದು ಸಭೆಗಾಗಲಿ ಸೇರಿದ್ದಲ್ಲ. ಈಗಾಗಲೇ ಲೇಖನದಲ್ಲಿ ಚರ್ಚಿಸಿದಂತೆ ದೇವರನ್ನು ಆರಾಧಿಸುವ ಸ್ಥಳದ ಕಡೆಗೆ ಸರಿಯಾದ ಮನೋಭಾವ ಇಟ್ಟುಕೊಳ್ಳಲು ನಮಗೆ ಬೈಬಲ್‌ ತತ್ವಗಳು ಸಹಾಯ ಮಾಡುತ್ತವೆ. ನಮಗೆ ಯೆಹೋವನ ಕಡೆಗೆ ಗೌರವ ಇರುವುದರಿಂದಲೇ ನಮ್ಮ ಕೂಟಗಳನ್ನು ಮತ್ತು ರಾಜ್ಯ ಸಭಾಗೃಹವನ್ನು ಗೌರವಿಸುತ್ತೇವೆ. ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ನಾವು ಸಂತೋಷದಿಂದ ಹಣವನ್ನು ಕಾಣಿಕೆಯಾಗಿ ಕೊಡುತ್ತೇವೆ. ಅದನ್ನು ನೋಡಿಕೊಳ್ಳಲು ಮತ್ತು ಸ್ವಚ್ಛವಾಗಿಡಲು ಶ್ರಮಪಟ್ಟು ಕೆಲಸಮಾಡುತ್ತೇವೆ. ಯೇಸುವಿನಂತೆ ಯೆಹೋವನನ್ನು ಆರಾಧಿಸುವ ಸ್ಥಳಕ್ಕಾಗಿ ಹುರುಪನ್ನು ಮತ್ತು ಗೌರವವನ್ನು ತೋರಿಸುತ್ತೇವೆ.—ಯೋಹಾನ 2:17.

^ ಪ್ಯಾರ. 2 ಈ ಲೇಖನ ರಾಜ್ಯ ಸಭಾಗೃಹಗಳಿಗೆ ಸೂಚಿಸಿ ಮಾತಾಡುತ್ತದೆ. ಆದರೂ ಯೆಹೋವನನ್ನು ಆರಾಧಿಸಲು ಬಳಸಲಾಗುವ ಸಮ್ಮೇಳನ ಹಾಲ್‌ಗಳು ಮತ್ತು ಇತರ ಸ್ಥಳಗಳೂ ಇದರಲ್ಲಿ ಸೇರುತ್ತವೆ.