ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನಿಗೆ ಸೇರಿರುವ ಪ್ರೌಢತೆಯನ್ನು ಮುಟ್ಟುತ್ತಿದ್ದೀರಾ?

ಕ್ರಿಸ್ತನಿಗೆ ಸೇರಿರುವ ಪ್ರೌಢತೆಯನ್ನು ಮುಟ್ಟುತ್ತಿದ್ದೀರಾ?

‘ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು ಮುಟ್ಟಿರಿ.’—ಎಫೆ. 4:13.

ಗೀತೆಗಳು: 69, 70

1, 2. ಪ್ರತಿಯೊಬ್ಬ ಕ್ರೈಸ್ತನಿಗೂ ಯಾವ ಗುರಿ ಇರಬೇಕು? ಉದಾಹರಣೆ ಕೊಡಿ.

ಗೃಹಿಣಿಯರು ಮಾರ್ಕೆಟ್‍ನಲ್ಲಿ ತಾಜಾ ಹಣ್ಣುಗಳನ್ನು ತೆಗೆದುಕೊಳ್ಳುವಾಗ ಯಾವುದಕ್ಕೆ ಗಮನ ಕೊಡುತ್ತಾರೆ? ಹಣ್ಣುಗಳು ದೊಡ್ಡದಾಗಿರಬೇಕು, ಬೆಲೆ ಕಡಿಮೆಯಿರಬೇಕು ಅನ್ನುವುದಕ್ಕೆ ಮಾತ್ರ ಅಲ್ಲ. ಒಂದುವೇಳೆ ಅದಕ್ಕೆ ಗಮನ ಕೊಟ್ಟರೂ ಹಣ್ಣು ತಾಜಾ ಇದೆಯಾ, ಪರಿಮಳ ಚೆನ್ನಾಗಿದೆಯಾ, ತಿನ್ನಲು ಸಿದ್ಧವಾಗಿದೆಯಾ ಅಂತ ನೋಡುತ್ತಾರೆ. ಹಣ್ಣಾಗಿದೆಯಾ, ಪಕ್ವವಾಗಿದೆಯಾ ಎಂದು ನೋಡಿ ತೆಗೆದುಕೊಳ್ಳುತ್ತಾರೆ.

2 ಒಬ್ಬ ವ್ಯಕ್ತಿ ಯೆಹೋವನ ಬಗ್ಗೆ ಕಲಿತು ದೀಕ್ಷಾಸ್ನಾನ ಪಡೆದ ನಂತರ ದೇವರೊಟ್ಟಿಗಿನ ಅವನ ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಅವನ ಗುರಿ ಒಬ್ಬ ಪರಿಪಕ್ವ ಅಂದರೆ ಪ್ರೌಢ ಕ್ರೈಸ್ತನಾಗುವುದೇ ಆಗಿರುತ್ತದೆ. ಇದು ವಯಸ್ಸಲ್ಲಿ ದೊಡ್ಡವರಾಗುವುದಕ್ಕೆ ಸೂಚಿಸುವುದಿಲ್ಲ. ಬದಲಿಗೆ ಆಧ್ಯಾತ್ಮಿಕ ಬೆಳವಣಿಗೆಗೆ ಅಂದರೆ ಯೆಹೋವನೊಟ್ಟಿಗೆ ನಮಗಿರುವ ಸಂಬಂಧ ಇನ್ನಷ್ಟು ಹತ್ತಿರವಾಗುತ್ತಾ ಇರುವುದಕ್ಕೆ ಸೂಚಿಸುತ್ತದೆ. ಎಫೆಸದಲ್ಲಿನ ಕ್ರೈಸ್ತರು ಪ್ರೌಢರಾಗಬೇಕೆಂದು ಅಪೊಸ್ತಲ ಪೌಲನು ಬಯಸಿದನು. ಹಾಗಾಗಿ ನಂಬಿಕೆಯಲ್ಲಿ ಐಕ್ಯರಾಗಿದ್ದು ಯೇಸುವಿನ ಬಗ್ಗೆ ಕಲಿಯುತ್ತಾ ಇರಲು ಪ್ರೋತ್ಸಾಹಿಸಿದನು. ಹೀಗೆ ಮಾಡಿದರೆ ಅವರು ‘ಪೂರ್ಣವಾಗಿ ಬೆಳೆದ ಮನುಷ್ಯರಾಗಿ ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು’ ಮುಟ್ಟಬಹುದಿತ್ತು.—ಎಫೆ. 4:13.

3. ಎಫೆಸದಲ್ಲಿನ ಸಭೆಗೂ ಇಂದಿನ ಯೆಹೋವನ ಜನರಿಗೂ ಯಾವ ಹೋಲಿಕೆ ಇದೆ?

3 ಪೌಲನು ಈ ಪತ್ರವನ್ನು ಬರೆದಾಗ ಎಫೆಸದಲ್ಲಿದ್ದ ಸಭೆಯು ಸ್ಥಾಪನೆಯಾಗಿ ಅನೇಕ ವರ್ಷಗಳಾಗಿತ್ತು. ಅಲ್ಲಿದ್ದ ಅನೇಕರು ಈಗಾಗಲೇ ಅನುಭವಿ ಪ್ರೌಢ ಕ್ರೈಸ್ತರಾಗಿದ್ದರು. ಹಾಗಿದ್ದರೂ ಆ ಸಭೆಯಲ್ಲಿ ಕೆಲವರಿಗೆ ಯೆಹೋವನೊಟ್ಟಿಗಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿತ್ತು. ಅದೇ ರೀತಿ ಇಂದು ಸಹ ಅನೇಕ ಸಹೋದರ ಸಹೋದರಿಯರು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಯನ್ನು ತುಂಬ ವರ್ಷಗಳಿಂದ ಮಾಡಿದ್ದಾರೆ, ಪ್ರೌಢ ಕ್ರೈಸ್ತರಾಗಿದ್ದಾರೆ. ಆದರೆ ಇನ್ನು ಕೆಲವರು ಆ ಹಂತ ತಲುಪಿಲ್ಲ. ಉದಾಹರಣೆಗೆ ಪ್ರತಿ ವರ್ಷ ಸಾವಿರಾರು ಮಂದಿ ದೀಕ್ಷಾಸ್ನಾನ ಹೊಂದುತ್ತಾರೆ. ಹಾಗಾಗಿ ಅವರಲ್ಲಿ ಕೆಲವರು ಇನ್ನೂ ಪ್ರೌಢತೆಗೆ ಬೆಳೆಯಬೇಕಾಗಿದೆ. ನಿಮ್ಮ ಕುರಿತೇನು?—ಕೊಲೊ. 2:6, 7.

ಕ್ರೈಸ್ತ ಪ್ರೌಢತೆ ಹೇಗೆ ಬೆಳೆಸಿಕೊಳ್ಳಬಹುದು?

4, 5. (ಎ) ಪ್ರೌಢ ಕ್ರೈಸ್ತರು ಒಬ್ಬರಿಗಿಂತ ಇನ್ನೊಬ್ಬರು ಹೇಗೆ ಭಿನ್ನರಾಗಿದ್ದಾರೆ? (ಬಿ) ಆದರೆ ಅವರೆಲ್ಲರಲ್ಲಿಯೂ ಯಾವ ಸಮಾನ ಅಂಶಗಳಿವೆ? (ಲೇಖನದ ಆರಂಭದ ಚಿತ್ರ ನೋಡಿ.)

4 ಮಾರ್ಕೆಟ್‍ನಲ್ಲಿರುವ ಎಲ್ಲಾ ಮಾಗಿದ ಹಣ್ಣುಗಳು ಒಂದೇ ರೀತಿ ಇರುವುದಿಲ್ಲ. ಆದರೆ ಎಲ್ಲಾ ಮಾಗಿದ ಹಣ್ಣುಗಳಲ್ಲಿ ಕೆಲವು ಸಮಾನ ಅಂಶಗಳು ಇದ್ದೇ ಇರುತ್ತವೆ. ಇದರಿಂದ ಹಣ್ಣು ಮಾಗಿದೆ ಎಂದು ಗುರುತಿಸಬಹುದು. ಪ್ರೌಢ ಕ್ರೈಸ್ತರ ವಿಷಯದಲ್ಲೂ ಇದು ನಿಜ. ಅವರೆಲ್ಲರೂ ಒಂದೇ ರೀತಿ ಇರುವುದಿಲ್ಲ. ಬೇರೆಬೇರೆ ದೇಶದವರು, ಹಿನ್ನೆಲೆಯವರು, ವಯಸ್ಸಿನವರು ಆಗಿರುತ್ತಾರೆ. ಅವರು ಇಷ್ಟಪಡುವ ಮತ್ತು ಇಷ್ಟಪಡದಿರುವ ವಿಷಯಗಳಲ್ಲೂ ವ್ಯತ್ಯಾಸ ಇರುತ್ತದೆ. ಹಾಗಿದ್ದರೂ ಎಲ್ಲಾ ಪ್ರೌಢ ಕ್ರೈಸ್ತರಿಗೂ ಕೆಲವೊಂದು ಸಮಾನ ಗುಣಗಳಿವೆ. ಈ ಗುಣಗಳಿಂದ ಅವರನ್ನು ಪ್ರೌಢರು ಎಂದು ಗುರುತಿಸಬಹುದು. ಆ ಗುಣಗಳಲ್ಲಿ ಕೆಲವು ಯಾವುವು?

5 ಒಬ್ಬ ಪ್ರೌಢ ಕ್ರೈಸ್ತನು ತನ್ನ ಜೀವನದಲ್ಲಿ ಯೇಸುವನ್ನು ಅನುಕರಿಸುತ್ತಾನೆ. ಹೀಗೆ ಅವನ “ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸು”ತ್ತಾನೆ. (1 ಪೇತ್ರ 2:21) ಯೆಹೋವನನ್ನು ಪೂರ್ಣ ಹೃದಯ, ಪ್ರಾಣ, ಮನಸ್ಸಿನಿಂದ ಪ್ರೀತಿಸುವುದು ಮತ್ತು ನೆರೆಯವರನ್ನು ನಮ್ಮಂತೆಯೇ ಪ್ರೀತಿಸುವುದು ತುಂಬ ಪ್ರಾಮುಖ್ಯ ಎಂದು ಯೇಸು ಹೇಳಿದನು. (ಮತ್ತಾ. 22:37-39) ಈ ಮಾತನ್ನು ಪಾಲಿಸಲು ಒಬ್ಬ ಕ್ರೈಸ್ತನು ತುಂಬ ಪ್ರಯತ್ನ ಹಾಕುತ್ತಾನೆ. ಯೆಹೋವನೊಟ್ಟಿಗೆ ತನಗಿರುವ ಸಂಬಂಧ ಮತ್ತು ಇತರರ ಕಡೆಗಿನ ಆಳವಾದ ಪ್ರೀತಿಯೇ ತನಗೆ ತುಂಬ ಮುಖ್ಯವೆಂದು ತನ್ನ ಜೀವನ ರೀತಿಯಿಂದ ಸಾಬೀತುಪಡಿಸುತ್ತಾನೆ.

ತಮಗಿಂತ ವಯಸ್ಸಲ್ಲಿ ಚಿಕ್ಕವರಾದವರು ಮುಂದಾಳತ್ವ ವಹಿಸುವಾಗ ವಯಸ್ಸಾದ ಸಹೋದರರು ಅವರನ್ನು ಬೆಂಬಲಿಸುವ ಮೂಲಕ ಯೇಸುವಿನ ದೀನತೆಯನ್ನು ಅನುಕರಿಸಬಹುದು (ಪ್ಯಾರ 6 ನೋಡಿ)

6, 7. (ಎ) ಪ್ರೌಢ ಕ್ರೈಸ್ತನನ್ನು ಯಾವ ಕೆಲವು ಗುಣಗಳಿಂದ ಗುರುತಿಸಬಹುದು? (ಬಿ) ನಾವು ನಮ್ಮನ್ನೇ ಏನು ಕೇಳಿಕೊಳ್ಳಬೇಕು?

6 ಒಬ್ಬ ಪ್ರೌಢ ಕ್ರೈಸ್ತನು ತೋರಿಸುವ ಅನೇಕ ಗುಣಗಳಲ್ಲಿ ಪ್ರೀತಿ ಒಂದಾಗಿದೆ. (ಗಲಾ. 5:22, 23) ಅವನು ಸೌಮ್ಯಭಾವ, ಸ್ವನಿಯಂತ್ರಣ, ಸಹನೆಯನ್ನು ತೋರಿಸುತ್ತಾನೆ. ಈ ಎಲ್ಲಾ ಗುಣಗಳು ಅವನಿಗೆ ಕಿರಿಕಿರಿಗೊಳಿಸುವ ಸನ್ನಿವೇಶಗಳಲ್ಲೂ ಕೋಪ ಮಾಡಿಕೊಳ್ಳದೆ ತಾಳಿಕೊಳ್ಳಲು ಮತ್ತು ನಿರಾಶೆ ಆಗುವ ಸನ್ನಿವೇಶಗಳಲ್ಲಿ ಧೈರ್ಯ ಕಳಕೊಳ್ಳದಿರಲು ನೆರವಾಗುತ್ತದೆ. ಒಬ್ಬ ಪ್ರೌಢ ಕ್ರೈಸ್ತನು ಯಾವುದು ತಪ್ಪು ಯಾವುದು ಸರಿಯೆಂದು ತಿಳಿಯಲು ನೆರವಾಗುವ ಬೈಬಲ್‌ ತತ್ವಗಳನ್ನು ವೈಯಕ್ತಿಕ ಅಧ್ಯಯನದಲ್ಲಿ ಹುಡುಕುತ್ತಾನೆ. ಹೀಗೆ ಪಡೆದ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ನೆರವಿನಿಂದ ವಿವೇಕಯುತ ನಿರ್ಣಯಗಳನ್ನು ಮಾಡುತ್ತಾನೆ. ಒಬ್ಬ ಪ್ರೌಢ ಕ್ರೈಸ್ತನು ದೀನ ವ್ಯಕ್ತಿ ಆಗಿರುತ್ತಾನೆ. ಹಾಗಾಗಿ ಯೆಹೋವನ ಮಾರ್ಗದರ್ಶನ ಮತ್ತು ಮಟ್ಟಗಳು ಯಾವಾಗಲೂ ತನ್ನ ಯೋಚನೆಗಿಂತ ಉತ್ತಮವಾದದ್ದೆಂದು ಎಣಿಸುತ್ತಾನೆ. * (ಪಾದಟಿಪ್ಪಣಿ ನೋಡಿ.) ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಾನೆ. ಸಭೆಯ ಐಕ್ಯವನ್ನು ಕಾಪಾಡಲು ತನ್ನಿಂದಾದ ಎಲ್ಲವನ್ನು ಮಾಡುತ್ತಾನೆ.

7 ಯೆಹೋವನ ಸೇವೆಯನ್ನು ಎಷ್ಟೇ ವರ್ಷಗಳಿಂದ ಮಾಡುತ್ತಿದ್ದರೂ ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಬೇಕು: ‘ಯೇಸುವನ್ನು ನಿಕಟವಾಗಿ ಅನುಕರಿಸಲು ನಾನು ಇನ್ನೇನಾದರೂ ಬದಲಾವಣೆಗಳನ್ನು ಮಾಡಬಹುದಾ? ನಾನಿನ್ನು ಯಾವುದಾದರೂ ವಿಷಯಗಳಲ್ಲಿ ಪ್ರಗತಿ ಮಾಡಬೇಕಾ?’

“ಗಟ್ಟಿಯಾದ ಆಹಾರವು ಪ್ರೌಢರಿಗೆ”

8. ಯೇಸು ಶಾಸ್ತ್ರಗ್ರಂಥವನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡು ಅರ್ಥಮಾಡಿಕೊಂಡಿದ್ದನು?

8 ಯೇಸು ಕ್ರಿಸ್ತನು ಶಾಸ್ತ್ರಗ್ರಂಥವನ್ನು ಚೆನ್ನಾಗಿ ತಿಳಿದುಕೊಂಡು ಅರ್ಥಮಾಡಿಕೊಂಡಿದ್ದನು. ಅವನಿಗಿನ್ನೂ 12 ವರ್ಷವಿದ್ದಾಗಲೇ ದೇವಾಲಯದಲ್ಲಿದ್ದ ಬೋಧಕರ ಜೊತೆ ಶಾಸ್ತ್ರಾಧಾರಿತ ವಿಷಯಗಳನ್ನು ಚರ್ಚಿಸಿದನು. “ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲರೂ ಅವನ ತಿಳಿವಳಿಕೆಗೂ ಉತ್ತರಗಳಿಗೂ ಆಶ್ಚರ್ಯಪಡುತ್ತಾ ಇದ್ದರು.” (ಲೂಕ 2:46, 47) ಸಮಯಾನಂತರ, ಅವನು ಸಾರುವ ಕೆಲಸದಲ್ಲೂ ದೇವರ ವಾಕ್ಯವನ್ನು ಕೌಶಲದಿಂದ ಬಳಸಿ ತನ್ನ ವೈರಿಗಳ ಬಾಯಿಮುಚ್ಚಿಸಿದನು.—ಮತ್ತಾ. 22:41-46.

9. (ಎ) ಅಧ್ಯಯನಕ್ಕಾಗಿ ಒಬ್ಬ ಪ್ರೌಢ ಕ್ರೈಸ್ತನು ಯಾವ ಏರ್ಪಾಡನ್ನು ಮಾಡಬೇಕು? (ಬಿ) ನಾವು ಯಾಕೆ ಬೈಬಲಿನ ಅಧ್ಯಯನ ಮಾಡಬೇಕು?

9 ಪ್ರೌಢ ಕ್ರೈಸ್ತನಾಗಲು ಬಯಸುವ ಒಬ್ಬ ವ್ಯಕ್ತಿ ಯೇಸುವಿನ ಆ ಮಾದರಿಯನ್ನು ಅನುಕರಿಸುತ್ತಾ ತನ್ನಿಂದಾಗುವಷ್ಟರ ಮಟ್ಟಿಗೆ ಬೈಬಲನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. “ಗಟ್ಟಿಯಾದ ಆಹಾರವು ಪ್ರೌಢರಿಗೆ” ಸೇರಿದ್ದೆಂದು ಅವನಿಗೆ ಚೆನ್ನಾಗಿ ತಿಳಿದಿರುವುದರಿಂದ ಆಳವಾದ ಸತ್ಯಗಳಿಗಾಗಿ ಬೈಬಲಿನಿಂದ ನಿಯಮಿತವಾಗಿ ಹುಡುಕುತ್ತಾನೆ. (ಇಬ್ರಿ. 5:14) ಒಬ್ಬ ಪ್ರೌಢ ಕ್ರೈಸ್ತನಿಗೆ ಬೈಬಲಿನ “ನಿಷ್ಕೃಷ್ಟ ಜ್ಞಾನ” ಪಡೆಯುವ ಬಯಕೆ ಇರುತ್ತದೆ. (ಎಫೆ. 4:13) ಹಾಗಾಗಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ಬೈಬಲನ್ನು ದಿನಾಲೂ ಓದುತ್ತೇನಾ? ವೈಯಕ್ತಿಕ ಅಧ್ಯಯನಕ್ಕಾಗಿ ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿದ್ದೇನಾ? ಪ್ರತಿ ವಾರ ಕುಟುಂಬ ಆರಾಧನೆ ಮಾಡುತ್ತಿದ್ದೇನಾ?’ ಬೈಬಲಿನ ಅಧ್ಯಯನ ಮಾಡುವಾಗ, ಒಂದು ವಿಷಯದ ಬಗ್ಗೆ ಯೆಹೋವನ ಯೋಚನೆ, ಅನಿಸಿಕೆ ಏನೆಂದು ತಿಳಿಯಲು ನೆರವಾಗುವ ತತ್ವಗಳಿಗಾಗಿ ಹುಡುಕಿರಿ. ನಿರ್ಣಯಗಳನ್ನು ಮಾಡುವಾಗ ಈ ತತ್ವಗಳನ್ನು ಬಳಸಿ. ಅದು ನೀವು ಯೆಹೋವನಿಗೆ ಇನ್ನಷ್ಟು ಹತ್ತಿರವಾಗಲು ನೆರವಾಗುತ್ತದೆ.

10. ದೇವರ ಸಲಹೆ ಮತ್ತು ತತ್ವಗಳ ಬಗ್ಗೆ ಒಬ್ಬ ಪ್ರೌಢ ಕ್ರೈಸ್ತನಿಗೆ ಹೇಗೆ ಅನಿಸಬೇಕು?

10 ಒಬ್ಬ ಪ್ರೌಢ ಕ್ರೈಸ್ತನಿಗೆ ಬೈಬಲ್‌ ಜ್ಞಾನ ಇರಬೇಕು ನಿಜ. ಆದರೆ ಅಷ್ಟೇ ಸಾಕಾಗಲ್ಲ. ಅವನು ದೇವರ ಸಲಹೆ ಮತ್ತು ತತ್ವಗಳನ್ನು ಪ್ರೀತಿಸಬೇಕು. ತನ್ನ ಸ್ವಂತ ಆಸೆಗಳಿಗಿಂತ ಯೆಹೋವನ ಕೆಲಸಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಡುವ ಮೂಲಕ ಈ ಪ್ರೀತಿಯನ್ನು ತೋರಿಸುತ್ತಾನೆ. ತನ್ನ ಜೀವನ ರೀತಿ, ಯೋಚನಾ ರೀತಿ ಮತ್ತು ನಡತೆಯನ್ನು ಬದಲಾಯಿಸುತ್ತಾನೆ. ಉದಾಹರಣೆಗೆ ಅವನು ಯೇಸುವನ್ನು ಅನುಕರಿಸಿ “ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ” ಹೊಸ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. (ಎಫೆಸ 4:22-24 ಓದಿ.) ನೆನಪಿಡಿ, ದೇವರ ಪವಿತ್ರಾತ್ಮದ ಮಾರ್ಗದರ್ಶನೆಯಿಂದ ಬೈಬಲನ್ನು ಬರೆಯಲಾಗಿತ್ತು. ಹಾಗಾಗಿ ಒಬ್ಬ ಕ್ರೈಸ್ತನು ಬೈಬಲಿನ ಅಧ್ಯಯನ ಮಾಡಿದಾಗ ದೇವರ ಪವಿತ್ರಾತ್ಮವು ಅವನಿಗೆ ಜ್ಞಾನದಲ್ಲಿ, ಪ್ರೀತಿಯಲ್ಲಿ ಮತ್ತು ಯೆಹೋವನೊಟ್ಟಿಗಿರುವ ಸಂಬಂಧದಲ್ಲಿ ಬೆಳೆಯಲು ನೆರವಾಗುತ್ತದೆ.

ಐಕ್ಯವನ್ನು ಹೆಚ್ಚಿಸಿ

11. ಯೇಸು ತನ್ನ ಕುಟುಂಬ ಮತ್ತು ಶಿಷ್ಯರಿಂದ ಏನು ತಿಳಿದುಕೊಂಡನು?

11 ಯೇಸು ಒಬ್ಬ ಪರಿಪೂರ್ಣ ವ್ಯಕ್ತಿ. ಅವನು ಭೂಮಿಯಲ್ಲಿದ್ದಾಗ ಅವನ ಸುತ್ತಮುತ್ತ ಅಪರಿಪೂರ್ಣ ಜನರಿದ್ದರು. ಅವನ ಹೆತ್ತವರು, ತಮ್ಮಂದಿರು, ತಂಗಿಯರೆಲ್ಲ ಅಪರಿಪೂರ್ಣರಾಗಿದ್ದರು. ಯೇಸುವಿನ ಆಪ್ತ ಹಿಂಬಾಲಕರು ಸಹ ಅಪರಿಪೂರ್ಣರಾಗಿದ್ದರು. ಅಹಂಕಾರ ಮತ್ತು ಸ್ವಾರ್ಥವನ್ನು ತೋರಿಸಿದರು. ಉದಾಹರಣೆಗೆ, ಅವನ ಸಾವಿನ ಹಿಂದಿನ ರಾತ್ರಿಯಲ್ಲಿ ಶಿಷ್ಯರು “ತಮ್ಮೊಳಗೆ ಯಾರು ಅತಿ ದೊಡ್ಡವನು” ಎಂದು ವಾದಿಸಿದರು. (ಲೂಕ 22:24) ಇಂಥ ಯೋಚನೆಗಳಿದ್ದರೂ ಅವರು ಬೇಗನೆ ಪ್ರೌಢ ಕ್ರೈಸ್ತರಾಗಲಿದ್ದಾರೆ ಮತ್ತು ಐಕ್ಯ ಸಭೆಯನ್ನು ರೂಪಿಸುತ್ತಾರೆ ಎಂಬ ನಂಬಿಕೆ ಯೇಸುವಿಗಿತ್ತು. ಅವರು ಐಕ್ಯರಾಗಿರಬೇಕೆಂದು ಯೇಸು ಅದೇ ರಾತ್ರಿ ಪ್ರಾರ್ಥನೆ ಮಾಡಿದನು. ಸ್ವರ್ಗದಲ್ಲಿರುವ ತನ್ನ ತಂದೆಗೆ, “ನೀನು ನನ್ನೊಂದಿಗೆ ಮತ್ತು ನಾನು ನಿನ್ನೊಂದಿಗೆ ಐಕ್ಯವಾಗಿರುವಂತೆ” ಮತ್ತು ‘ನಾವು ಒಂದಾಗಿರುವಂತೆ ಇವರೂ ಒಂದಾಗಿರಲಿ’ ಎಂದು ಪ್ರಾರ್ಥಿಸಿದನು.—ಯೋಹಾ. 17:21, 22.

12, 13. (ಎ) ಕ್ರೈಸ್ತರಾಗಿ ನಮ್ಮ ಗುರಿ ಏನಾಗಿದೆ? (ಬಿ) ಐಕ್ಯವನ್ನು ಕಾಪಾಡಲು ಒಬ್ಬ ಸಹೋದರನು ಹೇಗೆ ಕಲಿತನು?

12 ಒಬ್ಬ ಪ್ರೌಢ ಕ್ರೈಸ್ತನು ಸಭೆಯ ಐಕ್ಯವನ್ನು ಕಾಪಾಡಲು ನೆರವಾಗುತ್ತಾನೆ. (ಎಫೆಸ 4:1-6, 15, 16 ಓದಿ.) ಕ್ರೈಸ್ತರಾಗಿರುವುದರಿಂದ ನಮ್ಮ ಗುರಿ “ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪ”ಟ್ಟಿರುವುದು ಅಂದರೆ ಐಕ್ಯವಾಗಿ ಒಟ್ಟಿಗೆ ಕೆಲಸಮಾಡುವುದು ಆಗಿದೆ. ಈ ರೀತಿಯ ಐಕ್ಯ ಇರಬೇಕಾದರೆ ಒಬ್ಬ ಕ್ರೈಸ್ತನಲ್ಲಿ ದೀನತೆ ಇರಬೇಕು. ಹಾಗಾಗಿ ಬೇರೆಯವರ ಕುಂದುಕೊರತೆಗಳಿಂದಾಗಿ ತನಗೆ ಕಷ್ಟವಾದರೂ ಒಬ್ಬ ಪ್ರೌಢ ಕ್ರೈಸ್ತನು ಸಭೆಯ ಐಕ್ಯವನ್ನು ಬಲವಾಗಿರಿಸಲು ತುಂಬ ಶ್ರಮಪಡುತ್ತಾನೆ. ಹಾಗಾಗಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಒಬ್ಬ ಕ್ರೈಸ್ತ ಸಹೋದರ ಅಥವಾ ಸಹೋದರಿ ತಪ್ಪು ಮಾಡಿದಾಗ ಅವರೊಟ್ಟಿಗೆ ಹೇಗೆ ನಡೆದುಕೊಳ್ಳುತ್ತೇನೆ? ಯಾರಾದರೂ ನನ್ನ ಮನನೋಯಿಸಿದಾಗ ನಾನೇನು ಮಾಡುತ್ತೇನೆ? ಆ ವ್ಯಕ್ತಿ ಹತ್ತಿರ ಮಾತು ಬಿಡುತ್ತೇನಾ? ಅಥವಾ ಆ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುತ್ತೇನಾ?’ ಒಬ್ಬ ಪ್ರೌಢ ಕ್ರೈಸ್ತನು ಸಮಸ್ಯೆಯನ್ನು ಬಗೆಹರಿಸಲು ಬಯಸುತ್ತಾನೆ.

13 ಯೋಹಾನ್‌ * ಎಂಬ ಸಹೋದರನ ಉದಾಹರಣೆ ನೋಡಿ. ಮುಂಚೆಯೆಲ್ಲಾ ಇವರಿಗೆ ಸಹೋದರ ಸಹೋದರಿಯರ ಕುಂದುಕೊರತೆಗಳನ್ನು ನೋಡಿ ತುಂಬ ಬೇಜಾರಾಗುತ್ತಿತ್ತು. ಅದಕ್ಕೆ ಅವರು ದಾವೀದನ ಜೀವನದ ಬಗ್ಗೆ ಅಧ್ಯಯನ ಮಾಡಲು ಬೈಬಲ್‌ ಮತ್ತು ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಅನ್ನು ಬಳಸಿದರು. ಆದರೆ ದಾವೀದನ ಕಥೆಯೇ ಯಾಕೆ? ಏಕೆಂದರೆ ದೇವರ ಸೇವಕರಲ್ಲಿ ಕೆಲವರಿಂದ ದಾವೀದನು ಸಹ ಸಮಸ್ಯೆಗಳನ್ನು ಅನುಭವಿಸಿದನು. ಉದಾಹರಣೆಗೆ, ರಾಜ ಸೌಲ ದಾವೀದನನ್ನು ಕೊಲ್ಲಲು ಪ್ರಯತ್ನಿಸಿದನು, ಜನರಲ್ಲಿ ಕೆಲವರು ಅವನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು, ಅವನ ಸ್ವಂತ ಹೆಂಡತಿಯೇ ಅವನನ್ನು ಒಮ್ಮೆ ನೋಡಿ ತಿರಸ್ಕಾರದಿಂದ ನಕ್ಕಿದ್ದೂ ಇದೆ. (1 ಸಮು. 19:9-11; 30:1-7; 2 ಸಮು. 6:14-22) ಆದರೆ ಬೇರೆಯವರು ತನಗೆ ಏನೇ ಮಾಡಿದರೂ ದಾವೀದನು ಯೆಹೋವನನ್ನು ಪ್ರೀತಿಸಿದನು ಮತ್ತು ಆತನಲ್ಲಿ ಭರವಸೆಯಿಟ್ಟನು. ದಾವೀದನು ಕರುಣೆಯನ್ನೂ ತೋರಿಸಿದನು. ಯೋಹಾನ್‌ ಕೂಡ ಹಾಗೇ ಮಾಡಬೇಕೆಂದು ಅರಿತುಕೊಂಡನು. ತಾನು ಸಹೋದರರ ಕುಂದುಕೊರತೆಗಳನ್ನು ಹೇಗೆ ವೀಕ್ಷಿಸಬೇಕೆಂದು ತನ್ನ ಬೈಬಲ್‌ ಅಧ್ಯಯನದಿಂದ ಕಲಿತನು. ಅವರ ತಪ್ಪುಗಳ ಲೆಕ್ಕ ಇಟ್ಟುಕೊಳ್ಳುವುದನ್ನು ಅವನು ನಿಲ್ಲಿಸಬೇಕಿತ್ತು. ಹೀಗೆ ಸಭೆಯ ಐಕ್ಯವನ್ನು ಕಾಪಾಡಬೇಕಿತ್ತು. ನಿಮ್ಮ ಗುರಿಯೂ ಸಭೆಯ ಐಕ್ಯವನ್ನು ಕಾಪಾಡುವುದೇ ಆಗಿದೆಯಾ?

ದೇವರ ಚಿತ್ತ ಮಾಡುವವರನ್ನು ಸ್ನೇಹಿತರಾಗಿ ಮಾಡಿ

14. ಯೇಸು ಸ್ನೇಹಿತರನ್ನು ಹೇಗೆ ಆರಿಸಿದನು?

14 ಯೇಸು ಕ್ರಿಸ್ತನು ಜನರೊಟ್ಟಿಗೆ ತುಂಬ ಸ್ನೇಹದಿಂದ ಇದ್ದನು. ಗಂಡಸರು, ಹೆಂಗಸರು, ಎಳೆಯರು, ವೃದ್ಧರು, ಮಕ್ಕಳೂ ಸಹ ಅವನೊಟ್ಟಿಗೆ ಆರಾಮವಾಗಿದ್ದರು. ಆದರೆ ಅವನು ಆಪ್ತ ಸ್ನೇಹಿತರನ್ನು ಆರಿಸಿದಾಗ ಜಾಗ್ರತೆ ವಹಿಸಿದನು. ತನ್ನ ಅಪೊಸ್ತಲರಿಗೆ ಹೀಗಂದನು: “ನಾನು ಆಜ್ಞಾಪಿಸುತ್ತಿರುವುದನ್ನು ನೀವು ಮಾಡುವುದಾದರೆ ನೀವು ನನ್ನ ಸ್ನೇಹಿತರು.” (ಯೋಹಾ. 15:14) ತನ್ನನ್ನು ನಿಷ್ಠೆಯಿಂದ ಹಿಂಬಾಲಿಸಿದ ಮತ್ತು ಯೆಹೋವನನ್ನು ಪ್ರೀತಿಸಿ ಆತನ ಸೇವೆ ಮಾಡುವವರನ್ನು ಮಾತ್ರ ಆಪ್ತ ಸ್ನೇಹಿತರನ್ನಾಗಿ ಆರಿಸಿಕೊಂಡನು. ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವವರನ್ನು ನೀವು ಸ್ನೇಹಿತರನ್ನಾಗಿ ಆರಿಸಿಕೊಳ್ಳುತ್ತೀರಾ? ಇದು ಯಾಕೆ ಪ್ರಾಮುಖ್ಯ?

15. ಪ್ರೌಢ ಕ್ರೈಸ್ತರ ಜೊತೆ ಸ್ನೇಹ ಮಾಡುವುದರಿಂದ ಯುವ ಜನರಿಗೆ ಯಾವ ಪ್ರಯೋಜನವಾಗಲಿದೆ?

15 ಅನೇಕ ಜಾತಿಯ ಹಣ್ಣುಗಳು ಸೂರ್ಯನ ಬೆಳಕಿನ ಶಾಖದಿಂದ ಹಣ್ಣಾಗುತ್ತವೆ. ನಮ್ಮ ಸಹೋದರ ಸಹೋದರಿಯರು ತೋರಿಸುವ ಪ್ರೀತಿ ಆ ಶಾಖದಂತೆ ಇದೆ. ಇದು ನೀವು ಪ್ರೌಢ ಕ್ರೈಸ್ತರಾಗುವಂತೆ ಸಹಾಯಮಾಡುತ್ತದೆ. ಜೀವನದಲ್ಲಿ ಏನು ಮಾಡಬೇಕೆಂಬ ತೀರ್ಮಾನ ಮಾಡುವ ಹಂತದಲ್ಲಿರುವ ಯುವ ವ್ಯಕ್ತಿ ನೀವಾಗಿದ್ದೀರಾ? ಹಾಗಿರುವಲ್ಲಿ ತುಂಬ ಸಮಯದಿಂದ ಯೆಹೋವನ ಸೇವೆ ಮಾಡಿರುವವರನ್ನು ಮತ್ತು ಸಭೆಯ ಐಕ್ಯವನ್ನು ಕಾಪಾಡುವವರನ್ನು ನಿಮ್ಮ ಸ್ನೇಹಿತರನ್ನಾಗಿ ಆರಿಸುವುದು ವಿವೇಕಯುತ. ಏಕೆಂದರೆ ಅವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿರಬಹುದು. ಯೆಹೋವನ ಸೇವೆ ಮಾಡುವಾಗ ಕಷ್ಟಗಳನ್ನು ತಾಳಿಕೊಂಡಿರಬಹುದು. ಉತ್ತಮವಾದ ಜೀವನ ರೀತಿಯನ್ನು ಆರಿಸಿಕೊಳ್ಳಲು ಅವರಿಂದ ನಿಮಗೆ ಸಹಾಯ ಸಿಗುವುದು. ನೀವು ಅವರ ಜೊತೆ ಸಮಯ ಕಳೆಯುವಾಗ ವಿವೇಕಯುತ ತೀರ್ಮಾನಗಳನ್ನು ಮಾಡಲು ಮತ್ತು ಒಬ್ಬ ಪ್ರೌಢ ಕ್ರೈಸ್ತನಾಗಿ ಬೆಳೆಯಲು ನೆರವಾಗುತ್ತಾರೆ.—ಇಬ್ರಿಯ 5:14 ಓದಿ.

16. ಒಬ್ಬ ಯುವ ಸಹೋದರಿಗೆ ಅವಳಿಗಿಂತ ವಯಸ್ಸಲ್ಲಿ ದೊಡ್ಡವರಾಗಿದ್ದವರು ಹೇಗೆ ಸಹಾಯಮಾಡಿದರು?

16 ಹೆಲೆನ್‌ * ಎಂಬವಳಿಗೆ ತನ್ನ ಶಾಲೆಯ ಕೊನೆಯ ವರ್ಷದಲ್ಲಿ ನಡೆದ ಒಂದು ವಿಷಯ ಇನ್ನೂ ನೆನಪಿದೆ. ಅವಳ ಸಹಪಾಠಿಗಳು ತಮ್ಮತಮ್ಮ ಗುರಿಗಳ ಕುರಿತು ಮಾತಾಡುತ್ತಿದ್ದರು. ತಮ್ಮ ಜೀವನವನ್ನು ಯಶಸ್ವಿಗೊಳಿಸಲು ಅನೇಕರು ವಿಶ್ವವಿದ್ಯಾನಿಲಯ ಶಿಕ್ಷಣ ಪಡೆಯಬೇಕೆಂದಿದ್ದರು. ಆದರೆ ಹೆಲೆನ್‌ ತನ್ನ ಸಭೆಯಲ್ಲಿದ್ದ ಪ್ರೌಢ ಕ್ರೈಸ್ತರೊಟ್ಟಿಗೆ ಮಾತಾಡಿದಳು. “ಅವರಲ್ಲಿ ಅನೇಕರು ನನಗಿಂತ ವಯಸ್ಸಲ್ಲಿ ದೊಡ್ಡವರಾಗಿದ್ದರು. ನನಗೆ ತುಂಬ ಸಹಾಯ ಮಾಡಿದರು. ಪೂರ್ಣ ಸಮಯ ಸೇವೆಯನ್ನು ಆರಂಭಿಸಲು ಪ್ರೋತ್ಸಾಹಿಸಿದರು. ನಂತರ 5 ವರ್ಷ ಪಯನೀಯರ್‌ ಸೇವೆ ಮಾಡಿದೆ. ಈಗ ವರ್ಷಗಳು ದಾಟಿರುವುದಾದರೂ ನನ್ನ ಯೌವನವನ್ನು ಯೆಹೋವನ ಸೇವೆ ಮಾಡುವುದರಲ್ಲಿ ಕೇಂದ್ರೀಕರಿಸಿದ್ದರ ಬಗ್ಗೆ ನಾನು ಯೋಚಿಸುವಾಗೆಲ್ಲಾ ನನಗೆ ತುಂಬ ಖುಷಿಯಾಗುತ್ತದೆ. ಈ ಆಯ್ಕೆಯಿಂದ ನನಗೆ ಕಿಂಚಿತ್ತು ಬೇಜಾರಿಲ್ಲ” ಎನ್ನುತ್ತಾಳೆ ಹೆಲೆನ್‌.

17, 18. ಯೆಹೋವನಿಗೆ ನಾವು ಹೇಗೆ ಅತ್ಯುತ್ತಮ ಸೇವೆ ಸಲ್ಲಿಸಬಹುದು?

17 ಯೇಸುವನ್ನು ಅನುಕರಿಸುವಾಗ ನಾವು ಬೆಳೆದು ಪ್ರೌಢ ಕ್ರೈಸ್ತರಾಗುತ್ತೇವೆ. ನಾವು ಯೆಹೋವನಿಗೆ ಇನ್ನಷ್ಟು ಹತ್ತಿರವಾಗುತ್ತೇವೆ. ಆತನ ಸೇವೆ ಮಾಡುವ ನಮ್ಮ ಆಸೆ ಬೆಳೆಯುತ್ತದೆ. ಒಬ್ಬ ಕ್ರೈಸ್ತನು ಪ್ರೌಢನಾದಾಗಲೇ ಯೆಹೋವನಿಗೆ ಅತ್ಯುತ್ತಮ ಸೇವೆ ಸಲ್ಲಿಸಬಹುದು. ಯೇಸು ತನ್ನ ಶಿಷ್ಯರಿಗೆ, “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು” ಎಂದು ಹೇಳಿ ಪ್ರೋತ್ಸಾಹಿಸಿದನು.—ಮತ್ತಾ. 5:16.

18 ಒಬ್ಬ ಪ್ರೌಢ ಕ್ರೈಸ್ತನು ಸಭೆಯನ್ನು ಹೇಗೆ ಬೆಂಬಲಿಸಬಹುದು ಎಂದು ನಾವು ಕಲಿತೆವು. ಆದರೆ ತನ್ನ ಮನಸ್ಸಾಕ್ಷಿಯನ್ನು ಬಳಸುವ ವಿಧದಿಂದಲೂ ಒಬ್ಬ ಕ್ರೈಸ್ತನು ತನ್ನ ಪ್ರೌಢತೆ ತೋರಿಸುತ್ತಾನೆ. ವಿವೇಕಯುತ ತೀರ್ಮಾನಗಳನ್ನು ಮಾಡಲು ನಮ್ಮ ಮನಸ್ಸಾಕ್ಷಿ ಹೇಗೆ ಸಹಾಯಮಾಡುತ್ತದೆ? ಬೇರೆಯವರ ಮನಸ್ಸಾಕ್ಷಿಯನ್ನು ನಾವು ಹೇಗೆ ಗೌರವಿಸಬಹುದು? ಈ ಪ್ರಶ್ನೆಗಳಿಗೆ ಉತ್ತರವನ್ನು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 6 ಉದಾಹರಣೆಗೆ, ವಯಸ್ಸಾದ ಅನುಭವಿ ಸಹೋದರರಿಗೆ ತಮಗಿರುವ ಜವಾಬ್ದಾರಿಗಳನ್ನು ಯುವ ಸಹೋದರರಿಗೆ ಬಿಟ್ಟುಕೊಟ್ಟು ಅವರನ್ನು ಬೆಂಬಲಿಸಲು ಹೇಳಲಾಗಬಹುದು.

^ ಪ್ಯಾರ. 13 ಹೆಸರನ್ನು ಬದಲಾಯಿಸಲಾಗಿದೆ.

^ ಪ್ಯಾರ. 16 ಹೆಸರನ್ನು ಬದಲಾಯಿಸಲಾಗಿದೆ.