‘ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸುತ್ತೀರಾ?’
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” —ಮತ್ತಾ. 22:39.
1, 2. ಪ್ರೀತಿಯ ಮಹತ್ವವನ್ನು ಬೈಬಲ್ ಹೇಗೆ ತೋರಿಸುತ್ತದೆ?
ಯೆಹೋವ ದೇವರ ಮುಖ್ಯ ಗುಣ ಪ್ರೀತಿ. (1 ಯೋಹಾ. 4:16) ಆತನ ಮೊದಲ ಸೃಷ್ಟಿಯಾದ ಯೇಸು ಕ್ರಿಸ್ತನು ಬಿಲಿಯಗಟ್ಟಲೆ ವರ್ಷ ಸ್ವರ್ಗದಲ್ಲಿ ತನ್ನ ತಂದೆ ಜೊತೆ ಇದ್ದನು. ಹೀಗೆ ಯೆಹೋವನು ಎಷ್ಟು ಪ್ರೀತಿಯುಳ್ಳ ದೇವರು ಎಂದು ಕಲಿತನು. (ಕೊಲೊ. 1:15) ಇದೇ ರೀತಿಯ ಪ್ರೀತಿಯನ್ನು ಯೇಸು ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿದ್ದಾಗ ತನ್ನ ಬದುಕಿನುದ್ದಕ್ಕೂ ತೋರಿಸಿದ್ದಾನೆ. ಹಾಗಾಗಿ ಯೆಹೋವ ಮತ್ತು ಯೇಸು ಯಾವಾಗಲೂ ಪ್ರೀತಿಯಿಂದ ಆಳ್ವಿಕೆ ನಡೆಸುವರೆಂಬ ವಿಷಯದಲ್ಲಿ ಸಂಶಯವೇ ಇಲ್ಲ.
2 ಒಬ್ಬ ವ್ಯಕ್ತಿ ಯೇಸುವಿನ ಬಳಿ ಬಂದು ಅತೀ ದೊಡ್ಡ ಆಜ್ಞೆ ಯಾವುದು ಎಂದು ಕೇಳಿದನು. ಅದಕ್ಕೆ ಯೇಸು, “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ. ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’” ಎಂದು ಹೇಳಿದನು.—ಮತ್ತಾ. 22:37-39.
3. ನಮ್ಮ ‘ನೆರೆಯವರು’ ಯಾರು?
3 ಎಲ್ಲಾ ಸಂಬಂಧಗಳಲ್ಲಿ ನಾವು ಪ್ರೀತಿ ತೋರಿಸುವುದು ಮುಖ್ಯ. ನಾವು ಯೆಹೋವನನ್ನು ಮತ್ತು ನಮ್ಮ ನೆರೆಯವರನ್ನು ಪ್ರೀತಿಸಬೇಕೆಂದು ಯೇಸು
ಹೇಳಿದನು. ಆದರೆ ನಮ್ಮ ‘ನೆರೆಯವರು’ ಯಾರು? ಒಂದುವೇಳೆ ನಿಮಗೆ ಮದುವೆಯಾಗಿದ್ದರೆ ನಿಮ್ಮ ಗಂಡ ಅಥವಾ ಹೆಂಡತಿಯೇ ನಿಮಗೆ ಎಲ್ಲಕ್ಕಿಂತ ಹತ್ತಿರದ ನೆರೆಯವರು. ಸಭೆಯಲ್ಲಿರುವ ಸಹೋದರ ಸಹೋದರಿಯರು, ಸೇವೆಯಲ್ಲಿ ನಾವು ಭೇಟಿಯಾಗುವ ಜನರೂ ನಮ್ಮ ನೆರೆಯವರೇ. ನಮ್ಮ ಈ ನೆರೆಯವರಿಗೆ ಹೇಗೆ ಪ್ರೀತಿ ತೋರಿಸಬೇಕೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.ನಿಮ್ಮ ವಿವಾಹ ಸಂಗಾತಿಯನ್ನು ಪ್ರೀತಿಸಿ
4. ಮಾನವ ಅಪರಿಪೂರ್ಣತೆ ಇದ್ದರೂ ವಿವಾಹ ಜೀವನ ಯಶಸ್ವಿಯಾಗಬಹುದು ಹೇಗೆ?
4 ಆದಾಮಹವ್ವರನ್ನು ಸೃಷ್ಟಿಸಿ ಅವರನ್ನು ಒಟ್ಟುಗೂಡಿಸಿದ್ದು ಯೆಹೋವನೇ. ಇದೇ ಮೊದಲ ಮದುವೆ. ಅವರಿಗೆ ಸುಖೀ ಸಂಸಾರ ಇರಬೇಕು, ಅವರ ಸಂತಾನದಿಂದ ಭೂಮಿಯನ್ನು ತುಂಬಿಸಬೇಕು ಎನ್ನುವುದೇ ದೇವರ ಆಸೆಯಾಗಿತ್ತು. (ಆದಿ. 1:27, 28) ಆದರೆ ಯೆಹೋವನಿಗೆ ಅವರು ಅವಿಧೇಯರಾದಾಗ ಅವರ ವಿವಾಹ ಜೀವನಕ್ಕೆ ಪೆಟ್ಟು ಬಿತ್ತು. ಅವರಿಂದ ಪಾಪಮರಣ ನಮ್ಮೆಲ್ಲರಿಗೂ ದಾಟಿತು. (ರೋಮ. 5:12) ಈ ಅಪರಿಪೂರ್ಣತೆ ಇದ್ದರೂ ಇಂದು ವಿವಾಹ ಜೀವನವನ್ನು ಯಶಸ್ವಿಗೊಳಿಸಲು ಸಾಧ್ಯ. ಏಕೆಂದರೆ ವಿವಾಹದ ಏರ್ಪಾಡನ್ನು ಆರಂಭಿಸಿದ ಯೆಹೋವನು ಗಂಡಹೆಂಡತಿಯರಿಗೆ ಬೈಬಲ್ನಲ್ಲಿ ಅತ್ಯುತ್ತಮ ಸಲಹೆ ಬುದ್ಧಿವಾದ ಕೊಟ್ಟಿದ್ದಾನೆ.—2 ತಿಮೊಥೆಯ 3:16, 17 ಓದಿ.
5. ವಿವಾಹ ಜೀವನದಲ್ಲಿ ಪ್ರೀತಿ ಏಕೆ ಮುಖ್ಯ?
5 ಒಂದು ಸಂಬಂಧದಲ್ಲಿ ಸಂತೋಷ ಇರಬೇಕಾದರೆ ಕೋಮಲವಾದ, ಮಮತೆಯಿಂದ ಕೂಡಿದ ಪ್ರೀತಿ ಇರಬೇಕು ಎಂದು ಬೈಬಲ್ ತೋರಿಸುತ್ತದೆ. ಇದು ವಿವಾಹದ ವಿಷಯದಲ್ಲಂತೂ ತುಂಬಾನೇ ನಿಜ. ಅಪ್ಪಟ ಪ್ರೀತಿಯ ಬಗ್ಗೆ ಅಪೊಸ್ತಲ ಪೌಲ ಹೀಗಂದನು: “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅದು ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಅದು ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ, ಆದರೆ ಸತ್ಯದಲ್ಲಿ ಹರ್ಷಿಸುತ್ತದೆ. ಅದು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.” (1 ಕೊರಿಂ. 13:4-8) ಪೌಲನ ಈ ಮಾತುಗಳ ಬಗ್ಗೆ ನಾವು ಯೋಚಿಸಿ ಅನ್ವಯಿಸಿಕೊಂಡರೆ ವಿವಾಹ ಜೀವನದಲ್ಲಿ ಸಂತೋಷ ಇರುತ್ತದೆ.
6, 7. (ಎ) ತಲೆತನದ ಬಗ್ಗೆ ಬೈಬಲ್ ಏನು ಹೇಳುತ್ತದೆ? (ಬಿ) ಒಬ್ಬ ಕ್ರೈಸ್ತ ಗಂಡನು ತನ್ನ ಹೆಂಡತಿ ಜೊತೆ ಹೇಗೆ ನಡಕೊಳ್ಳಬೇಕು?
6 ಕುಟುಂಬದ ತಲೆ ಯಾರಾಗಿರಬೇಕು ಎಂದು ತೀರ್ಮಾನ ಮಾಡಿದ್ದು ಯೆಹೋವನೇ. “ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದೇನೆಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು 1 ಕೊರಿಂ. 11:3) ಗಂಡಂದಿರು ಪ್ರೀತಿಯುಳ್ಳ ತಲೆ ಆಗಿರಬೇಕು, ಯಾವತ್ತೂ ಕ್ರೂರವಾಗಿ, ಒರಟಾಗಿ ನಡಕೊಳ್ಳಬಾರದೆಂದು ಯೆಹೋವನು ಬಯಸುತ್ತಾನೆ. ಯೆಹೋವನು ತಾನೇ ಕರುಣೆಯಿರುವ, ನಿಸ್ವಾರ್ಥ ತಲೆಯಾಗಿದ್ದಾನೆ. ಹಾಗಾಗಿ ದೇವರ ಪ್ರೀತಿಭರಿತ ಅಧಿಕಾರವನ್ನು ಯೇಸು ಗೌರವಿಸುತ್ತಾನೆ. “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಅವನು ಹೇಳಿದನು. (ಯೋಹಾ. 14:31) ಒಂದುವೇಳೆ ಯೇಸುವಿನ ಜೊತೆ ಯೆಹೋವನು ಕಠೋರವಾಗಿ ನಡಕೊಂಡಿದ್ದರೆ ಯೇಸು ಹೀಗೆ ಹೇಳುತ್ತಿರಲಿಲ್ಲ.
ತಲೆ” ಎಂದು ಪೌಲನು ವಿವರಿಸಿದನು. (7 ಗಂಡನು ತನ್ನ ಹೆಂಡತಿಗೆ ತಲೆಯಾಗಿದ್ದರೂ ಅವನು ಆಕೆಗೆ ಗೌರವ ತೋರಿಸಬೇಕೆಂದು ಬೈಬಲ್ ಹೇಳುತ್ತದೆ. (1 ಪೇತ್ರ 3:7) ಒಬ್ಬ ಗಂಡನು ಇದನ್ನು ಹೇಗೆ ಮಾಡಬಹುದು? ಅವಳ ಅಗತ್ಯಗಳನ್ನು ಮನಸ್ಸಲ್ಲಿಟ್ಟು ಅದರ ಪ್ರಕಾರ ನಡಕೊಳ್ಳುವ ಮೂಲಕ ಮತ್ತು ಕೆಲವು ವಿಷಯಗಳಲ್ಲಿ ಅವಳು ಹೇಳಿದ್ದಕ್ಕೆ ಪ್ರಾಧಾನ್ಯತೆ ಕೊಡುವ ಮೂಲಕ. “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ” ಎನ್ನುತ್ತದೆ ಬೈಬಲ್. (ಎಫೆ. 5:25) ಯೇಸು ತನ್ನ ಹಿಂಬಾಲಕರಿಗಾಗಿ ತನ್ನ ಪ್ರಾಣವನ್ನೇ ಕೊಟ್ಟನು. ಒಬ್ಬ ಗಂಡನು ಸಹ ಯೇಸುವಿನಂತೆ ಪ್ರೀತಿಯುಳ್ಳ ತಲೆಯಾಗಿದ್ದರೆ ಹೆಂಡತಿಗೆ ಗಂಡನನ್ನು ಪ್ರೀತಿಸಲು, ಗೌರವಿಸಲು, ಅಧೀನಳಾಗಿರಲು ಹೆಚ್ಚು ಸುಲಭವಾಗುತ್ತದೆ.—ತೀತ 2:3-5 ಓದಿ.
ನಿಮ್ಮ ಸಹೋದರ ಸಹೋದರಿಯರನ್ನು ಪ್ರೀತಿಸಿ
8. ನಮ್ಮ ಸಹೋದರ ಸಹೋದರಿಯರ ಬಗ್ಗೆ ನಮಗೆ ಹೇಗನಿಸಬೇಕು?
8 ಇಂದು ಭೂಮಿಯಲ್ಲಿ ಲಕ್ಷಗಟ್ಟಲೆ ಜನರು ಯೆಹೋವನನ್ನು ಆರಾಧಿಸುತ್ತಿದ್ದಾರೆ. ಇವರು ನಮ್ಮ ಸಹೋದರ ಸಹೋದರಿಯರು. ಇವರ ಬಗ್ಗೆ ನಮಗೆ ಹೇಗನಿಸಬೇಕು? ಬೈಬಲ್ ಹೀಗನ್ನುತ್ತದೆ: “ಎಲ್ಲರಿಗೂ ಒಳ್ಳೇದನ್ನು ಮಾಡೋಣ, ಅದರಲ್ಲೂ ವಿಶೇಷವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ ಮಾಡೋಣ.” (ಗಲಾ. 6:10; ರೋಮನ್ನರಿಗೆ 12:10 ಓದಿ.) ‘ಸತ್ಯಕ್ಕಾಗಿ ವಿಧೇಯತೆ’ ಇದ್ದರೆ ಅದು “ನಿಷ್ಕಪಟವಾದ ಸಹೋದರ ಮಮತೆ”ಯಲ್ಲಿ ತೋರಿಬರಬೇಕು ಎಂದು ಅಪೊಸ್ತಲ ಪೇತ್ರನು ಬರೆದನು. ತನ್ನ ಜೊತೆ ಕ್ರೈಸ್ತರಿಗೆ ಹೀಗೂ ಅಂದನು: “ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ.”—1 ಪೇತ್ರ 1:22; 4:8.
9, 10. ದೇವರ ಜನರು ಐಕ್ಯದಿಂದಿರಲು ಕಾರಣವೇನು?
9 ನಮ್ಮ ಲೋಕವ್ಯಾಪಕ ಸಂಘಟನೆಯಂತೆ ಬೇರೊಂದಿಲ್ಲ. ಏಕೆ? ಏಕೆಂದರೆ ಸಹೋದರ ಸಹೋದರಿಯರಿಗಾಗಿ ನಮಗಿರುವ ಪ್ರೀತಿ ಆಳವಾದದ್ದು, ಅಪ್ಪಟವಾದದ್ದು. ಅಲ್ಲದೆ ನಾವು ಯೆಹೋವನನ್ನು ಆತನ ಆಜ್ಞೆಗಳನ್ನು ಪ್ರೀತಿಸುವುದರಿಂದ ಆತನು ಜಗತ್ತಲ್ಲೇ ಅತ್ಯಂತ ಬಲವಾದ ಶಕ್ತಿಯಾಗಿರುವ ಪವಿತ್ರಾತ್ಮ ಕೊಟ್ಟು ನಮ್ಮನ್ನು ಬೆಂಬಲಿಸುತ್ತಾನೆ. ಪವಿತ್ರಾತ್ಮದ ಈ ಸಹಾಯದಿಂದ ನಾವು ನಿಜವಾಗಿಯೂ ಐಕ್ಯದಿಂದಿರುವ ಅಂತಾರಾಷ್ಟ್ರೀಯ ಸಹೋದರರ ಬಳಗ ಆಗಿದ್ದೇವೆ.—1 ಯೋಹಾನ 4:20, 21 ಓದಿ.
10 ಕ್ರೈಸ್ತರ ಮಧ್ಯೆ ಪ್ರೀತಿ ಇರಬೇಕು ಎಂಬದನ್ನು ಒತ್ತಿ ಹೇಳುತ್ತಾ ಪೌಲನು ಹೀಗೆ ಬರೆದನು: “ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ. ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.” (ಕೊಲೊ. 3:12-14) ನಾವು ಯಾವುದೇ ದೇಶ, ಊರು, ಹಿನ್ನೆಲೆಯಿಂದ ಬಂದವರಾಗಿದ್ದರೂ, ನಮ್ಮಲ್ಲಿ ಪ್ರೀತಿ ಇದೆ. ಏಕೆಂದರೆ ಅದು “ಐಕ್ಯದ ಪರಿಪೂರ್ಣ ಬಂಧ.” ಇದಕ್ಕೆ ನಾವೆಷ್ಟು ಕೃತಜ್ಞರಲ್ಲವೇ!
11. ದೇವರ ಜನರು ಯಾರೆಂದು ಗುರುತಿಸುವುದು ಹೇಗೆ?
11 ಯೆಹೋವನ ಸೇವಕರ ಮಧ್ಯೆ ಇರುವ ಅಪ್ಪಟ ಪ್ರೀತಿ ಮತ್ತು ಐಕ್ಯ, ಅವರು ನಿಜ ಧರ್ಮವನ್ನು ಪಾಲಿಸುವವರು ಎಂದು ಗುರುತಿಸುತ್ತದೆ. “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದನು ಯೇಸು. (ಯೋಹಾ. 13:34, 35) ಅಪೊಸ್ತಲ ಯೋಹಾನ ಹೀಗೆ ಬರೆದನು: “ಯಾರು ದೇವರ ಮಕ್ಕಳು ಮತ್ತು ಯಾರು ಪಿಶಾಚನ ಮಕ್ಕಳು ಎಂಬುದು ಈ ವಾಸ್ತವಾಂಶದಿಂದ ವ್ಯಕ್ತವಾಗುತ್ತದೆ: ನೀತಿಯನ್ನು ನಡಿಸುತ್ತಾ ಮುಂದುವರಿಯದವನಾಗಲಿ ತನ್ನ ಸಹೋದರನನ್ನು ಪ್ರೀತಿಸದವನಾಗಲಿ ದೇವರಿಂದ ಹುಟ್ಟಿದವನಲ್ಲ. ನಮ್ಮಲ್ಲಿ ಒಬ್ಬರಮೇಲೊಬ್ಬರಿಗೆ ಪ್ರೀತಿ ಇರಬೇಕೆಂಬ ಸಂದೇಶವನ್ನು ನೀವು ಆರಂಭದಿಂದಲೂ ಕೇಳಿಸಿಕೊಂಡಿದ್ದೀರಿ.” (1 ಯೋಹಾ. 3:10, 11) ಯೆಹೋವನ ಸಾಕ್ಷಿಗಳ ಮಧ್ಯೆ ಇರುವ ಪ್ರೀತಿ ಐಕ್ಯವು ಅವರನ್ನು ಕ್ರಿಸ್ತನ ನಿಜ ಹಿಂಬಾಲಕರೆಂದು ಗುರುತಿಸುತ್ತದೆ. ರಾಜ್ಯದ ಸುವಾರ್ತೆಯನ್ನು ಇಡೀ ಭೂಮಿಯಲ್ಲಿ ಸಾರಲಿಕ್ಕಾಗಿ ದೇವರು ಅವರನ್ನೇ ಉಪಯೋಗಿಸುತ್ತಿದ್ದಾನೆ.—ಮತ್ತಾ. 24:14.
‘ಮಹಾ ಸಮೂಹದ’ ಒಟ್ಟುಗೂಡಿಸುವಿಕೆ
12, 13. (ಎ) ಇಂದು “ಮಹಾ ಸಮೂಹ”ದವರು ಏನು ಮಾಡುತ್ತಿದ್ದಾರೆ? (ಬಿ) ಬಲು ಬೇಗನೆ ಅವರು ಏನನ್ನು ಅನುಭವಿಸಲಿದ್ದಾರೆ?
12 ಯೆಹೋವನ ಸೇವಕರಲ್ಲಿ ಹೆಚ್ಚಿನವರು “ಮಹಾ ಸಮೂಹ”ಕ್ಕೆ ಸೇರಿದವರು. ಇವರು ಲೋಕದ ಬೇರೆಬೇರೆ ಭಾಗದವರು. ರಾಜ್ಯಕ್ಕೆ ಬೆಂಬಲ ಕೊಡುತ್ತಾರೆ. ಇವರು ‘ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದು ಅವುಗಳನ್ನು ಬೆಳ್ಳಗೆ ಮಾಡಿಕೊಂಡವರು.’ ಅಂದರೆ ಯೇಸುವಿನ ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಟ್ಟಿದ್ದಾರೆ. ಇವರು “ಮಹಾ ಸಂಕಟವನ್ನು ಪಾರಾಗಿ ಬರುವವರು.” ಈ “ಮಹಾ ಸಮೂಹ”ದವರು ಯೆಹೋವ ಮತ್ತು ಆತನ ಮಗನನ್ನು ಪ್ರೀತಿಸುತ್ತಾರೆ ಮತ್ತು “ಹಗಲೂರಾತ್ರಿ” ಯೆಹೋವನನ್ನು ಆರಾಧಿಸುತ್ತಾರೆ.—ಪ್ರಕ. 7:9, 14, 15.
13 ಬಲು ಬೇಗನೆ “ಮಹಾ ಸಂಕಟ”ದಲ್ಲಿ ದೇವರು ಈ ದುಷ್ಟ ಲೋಕವನ್ನು ನಾಶ ಮಾಡಲಿದ್ದಾನೆ. (ಮತ್ತಾ. 24:21; ಯೆರೆಮಿಾಯ 25:32, 33 ಓದಿ.) ಆದರೆ ಯೆಹೋವನು ತನ್ನ ಸೇವಕರನ್ನು ಪ್ರೀತಿಸುವುದರಿಂದ ಅವರನ್ನು ಕಾಪಾಡಿ ನೂತನ ಲೋಕಕ್ಕೆ ನಡೆಸುತ್ತಾನೆ. ಹತ್ತಿರತ್ತಿರ 2,000 ವರ್ಷಗಳ ಹಿಂದೆಯೇ ಆತನು ಈ ಮಾತು ಕೊಟ್ಟನು: “ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.” ದುಷ್ಟತನ, ನೋವು-ನರಳಾಟ, ಸಾವು ಇಲ್ಲದಿರುವ ಆ ಪರದೈಸಿನಲ್ಲಿ ಬದುಕಲು ನೀವು ಕಾಯುತ್ತಾ ಇದ್ದೀರಾ?—ಪ್ರಕ. 21:4.
14. ಮಹಾ ಸಮೂಹ ಈಗ ಎಷ್ಟು ದೊಡ್ಡದಾಗಿದೆ?
14 ಇಸವಿ 1914ರಲ್ಲಿ ಕಡೇ ದಿವಸಗಳು ಆರಂಭವಾದಾಗ ಕೆಲವೇ ಸಾವಿರ ಮಂದಿ ದೇವರ ಸೇವಕರಿದ್ದರು. ಅಭಿಷಿಕ್ತ ಸಹೋದರ ಸಹೋದರಿಯರ ಈ ಚಿಕ್ಕ ಗುಂಪು ನೆರೆಯವರ ಮೇಲಿನ ಪ್ರೀತಿಯಿಂದ ಮತ್ತು ಪವಿತ್ರಾತ್ಮದ ಸಹಾಯದಿಂದ ರಾಜ್ಯದ ಸುವಾರ್ತೆಯನ್ನು ಸಾರಿತು. ಕಷ್ಟ ತೊಂದರೆಗಳಿದ್ದರೂ ಇದನ್ನು ಮಾಡಿತು. ಇದರ ಫಲಿತಾಂಶ? ಭೂಮಿಯಲ್ಲಿ ಅನಂತಕ್ಕೂ ಬದುಕುವ ನಿರೀಕ್ಷೆ ಇರುವ ಮಹಾ ಸಮೂಹದವರನ್ನು ಇಂದು ಒಟ್ಟುಗೂಡಿಸಲಾಗುತ್ತಿದೆ. ಇವರ ಸಂಖ್ಯೆ ಸುಮಾರು 80 ಲಕ್ಷದಷ್ಟಿದ್ದು ಇವರು ಭೂಮಿಯಾದ್ಯಂತ 1,15,400ಕ್ಕೂ ಹೆಚ್ಚಿನ ಸಭೆಗಳಲ್ಲಿದ್ದಾರೆ. ಇವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಉದಾಹರಣೆಗೆ 2014ರ ಸೇವಾ ವರ್ಷದಲ್ಲಿ 2,75,500 ಮಂದಿ ದೀಕ್ಷಾಸ್ನಾನ ಪಡೆದು ಸಾಕ್ಷಿಗಳಾದರು. ಇದು, ಪ್ರತಿ ವಾರ 5,300 ಮಂದಿ ದೀಕ್ಷಾಸ್ನಾನ ಪಡೆಯುವುದಕ್ಕೆ ಸಮ.
15. ಸುವಾರ್ತೆ ಇಂದು ಹೇಗೆ ಅನೇಕರ ಕಿವಿಗೆ ಬೀಳುತ್ತಿದೆ?
15 ರಾಜ್ಯದ ಸುವಾರ್ತೆ ಎಷ್ಟೊಂದು ಜನರ ಕಿವಿಗೆ ಬೀಳುತ್ತಿದೆ ಎಂದು ನೋಡುವಾಗ ತುಂಬ ಆಶ್ಚರ್ಯವಾಗುತ್ತದೆ. ಇಂದು ನಮ್ಮ ಪ್ರಕಾಶನಗಳು 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯ. ಭೂಮಿಯಲ್ಲಿ ಹೆಚ್ಚು ವಿತರಣೆಯಾಗುತ್ತಿರುವ ಪತ್ರಿಕೆ ಕಾವಲಿನಬುರುಜು. ಪ್ರತಿ ತಿಂಗಳು 5 ಕೋಟಿ 20 ಲಕ್ಷಕ್ಕಿಂತ ಹೆಚ್ಚು ಪ್ರತಿಗಳನ್ನು ಮುದ್ರಿಸಲಾಗುತ್ತಿದೆ. ಈ ಪತ್ರಿಕೆಯನ್ನು 247 ಭಾಷೆಗಳಲ್ಲಿ ಮುದ್ರಿಸಲಾಗುತ್ತಿದೆ. ನಾವು ಬೈಬಲ್ ಅಧ್ಯಯನ ನಡೆಸಲು ಬಳಸುವ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕ 250ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರವಾಗಿದೆ. ಇಲ್ಲಿವರೆಗೆ 20 ಕೋಟಿಗಿಂತ ಹೆಚ್ಚು ಪುಸ್ತಕಗಳನ್ನು ಮುದ್ರಿಸಲಾಗಿದೆ.
16. ಯೆಹೋವನ ಸಂಘಟನೆ ಬೆಳೆಯುತ್ತಾ ಇರಲು ಕಾರಣವೇನು?
16 ನಮಗೆ ದೇವರಲ್ಲಿ ನಂಬಿಕೆ ಇರುವುದರಿಂದ ಮತ್ತು ಬೈಬಲ್ ಆತನ ಪ್ರೇರಿತ ವಾಕ್ಯ ಎಂದು ನಂಬುವುದರಿಂದ ನಮ್ಮ ಸಂಘಟನೆ ಬೆಳೆಯುತ್ತಾ ಇದೆ. (1 ಥೆಸ. 2:13) ಸೈತಾನ ಎಷ್ಟೇ ದ್ವೇಷ, ವಿರೋಧ ತಂದರೂ ನಮಗೆ ಯೆಹೋವನ ಆಶೀರ್ವಾದಗಳು ಸಿಗುತ್ತಾ ಇವೆ.—2 ಕೊರಿಂ. 4:4.
ಯಾವಾಗಲೂ ಇತರರನ್ನು ಪ್ರೀತಿಸಿ
17, 18. ತನ್ನ ಆರಾಧಕರಲ್ಲದ ಜನರ ಬಗ್ಗೆ ನಮಗೆ ಯಾವ ಭಾವನೆ ಇರಬೇಕೆಂದು ಯೆಹೋವನು ಬಯಸುತ್ತಾನೆ?
17 ನಾವು ಸಾರುವಾಗ ಜನರು ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ನಾವು ಹೇಳುವ ಸಂದೇಶವನ್ನು ಕೆಲವರು ಕೇಳುತ್ತಾರೆ, ಇನ್ನು ಕೆಲವರು ದ್ವೇಷಿಸುತ್ತಾರೆ. ಆತನ ಆರಾಧಕರಲ್ಲದ ಜನರ ಬಗ್ಗೆ ನಮಗೆ ಯಾವ ಭಾವನೆ ಇರಬೇಕೆಂದು ಯೆಹೋವನು ಬಯಸುತ್ತಾನೆ? ನಾವು ಸಾರುವ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯೆ ನೀಡಿದರೂ ಬೈಬಲ್ನಲ್ಲಿರುವ ಈ ಸಲಹೆಯನ್ನು ಪಾಲಿಸುತ್ತೇವೆ: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.” (ಕೊಲೊ. 4:6) ನಮ್ಮ ನಂಬಿಕೆಗಳನ್ನು ನಾವು ಸಮರ್ಥಿಸುವಾಗ ಅದನ್ನು ‘ಸೌಮ್ಯಭಾವದಿಂದ, ಆಳವಾದ ಗೌರವದಿಂದ’ ಮಾಡಬೇಕು. ಏಕೆಂದರೆ ನಾವು ನಮ್ಮ ನೆರೆಯವರನ್ನು ಪ್ರೀತಿಸುತ್ತೇವೆ.—1 ಪೇತ್ರ 3:15.
18 ಜನರಿಗೆ ಕೋಪಬಂದು ನಮ್ಮ ಸಂದೇಶವನ್ನು ತಿರಸ್ಕರಿಸಿದರೂ ನಮ್ಮ ನೆರೆಯವರಾಗಿರುವ ಅವರನ್ನು ಪ್ರೀತಿಸುತ್ತೇವೆ ಮತ್ತು ಯೇಸುವನ್ನು ಅನುಕರಿಸುತ್ತೇವೆ. ಯೇಸುವನ್ನು ಜನರು ‘ದೂಷಿಸುತ್ತಿದ್ದಾಗ ಅವನು ಪ್ರತಿಯಾಗಿ ದೂಷಿಸುತ್ತಿರಲಿಲ್ಲ. ಅವನು ಕಷ್ಟವನ್ನು ಅನುಭವಿಸುತ್ತಿದ್ದಾಗ ಯಾರನ್ನೂ ಬೆದರಿಸಲಿಲ್ಲ.’ ಬದಲಿಗೆ ಅವನು ಯೆಹೋವನಲ್ಲಿ ಭರವಸೆಯಿಟ್ಟನು. (1 ಪೇತ್ರ 2:23) ನಾವು ಸಹ ದೀನತೆಯಿಂದ ಈ ಸಲಹೆಯನ್ನು ಅನ್ವಯಿಸಿಕೊಳ್ಳುತ್ತೇವೆ: “ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದೆ ದೂಷಿಸುವವರನ್ನು ಪ್ರತಿಯಾಗಿ ದೂಷಿಸದೆ ಆಶೀರ್ವದಿಸುತ್ತಾ ಇರಿ.”—1 ಪೇತ್ರ 3:8, 9.
19. ನಮ್ಮ ವೈರಿಗಳೊಂದಿಗೆ ನಾವು ಹೇಗೆ ನಡಕೊಳ್ಳಬೇಕು?
19 ಯೇಸು ಕೊಟ್ಟ ಮುಖ್ಯವಾದ ಒಂದು ತತ್ವಕ್ಕೆ ವಿಧೇಯರಾಗಲು ದೀನತೆ ನಮಗೆ ಸಹಾಯ ಮಾಡುತ್ತದೆ. ಅವನು ವಿವರಿಸಿದ್ದು: “‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ; ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:43-45) ವೈರಿಗಳು ನಮ್ಮೊಂದಿಗೆ ಹೇಗೆಯೇ ನಡಕೊಳ್ಳಲಿ, ದೇವರ ಸೇವಕರಾಗಿರುವ ನಾವು ಅವರನ್ನು ಪ್ರೀತಿಸಬೇಕು.
20. ಇಡೀ ಭೂಮಿಯಲ್ಲಿ ದೇವರ ಮತ್ತು ನೆರೆಯವರ ಪ್ರೀತಿ ತುಂಬಿಕೊಳ್ಳಲಿದೆ ಎಂದು ನಮಗೆ ಹೇಗೆ ಗೊತ್ತು? (ಲೇಖನದ ಆರಂಭದ ಚಿತ್ರ ನೋಡಿ.)
20 ನಾವು ಯೆಹೋವನನ್ನು, ನಮ್ಮ ನೆರೆಯವರನ್ನು ಪ್ರೀತಿಸುತ್ತೇವೆಂದು ಎಲ್ಲಾ ಸಮಯಗಳಲ್ಲಿ ತೋರಿಸಬೇಕು. ಜನರು ನಮ್ಮನ್ನು, ನಾವು ಹೇಳುವ ಸಂದೇಶವನ್ನು ವಿರೋಧಿಸಿದರೂ ಅವರಿಗೆ ಸಹಾಯದ ಅಗತ್ಯವಿದ್ದಾಗ ನಾವದನ್ನು ಮಾಡಬೇಕು. ಅಪೊಸ್ತಲ ಪೌಲನು ಹೀಗೆ ಬರೆದನು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು; ತನ್ನ ಜೊತೆಮಾನವನನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ನೆರವೇರಿಸಿದ್ದಾನೆ. ಧರ್ಮಶಾಸ್ತ್ರದಲ್ಲಿ ತಿಳಿಸಿರುವ ‘ನೀನು ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ದುರಾಶೆಪಡಬಾರದು’ ಎಂಬ ಆಜ್ಞೆಗಳು ಮತ್ತು ಇತರ ಯಾವುದೇ ಆಜ್ಞೆಯು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. ಪ್ರೀತಿಯು ಒಬ್ಬನ ನೆರೆಯವನಿಗೆ ಕೆಡುಕನ್ನು ಮಾಡುವುದಿಲ್ಲ, ಆದುದರಿಂದ ಪ್ರೀತಿಯು ಧರ್ಮಶಾಸ್ತ್ರದ ನೆರವೇರಿಕೆಯಾಗಿದೆ.” (ರೋಮ. 13:8-10) ಸೈತಾನನ ಆಳ್ವಿಕೆ ಕೆಳಗಿರುವ ಈ ವಿಭಜಿತ, ಕ್ರೂರ, ದುಷ್ಟ ಲೋಕದಲ್ಲೂ ದೇವರ ಸೇವಕರು ತಮ್ಮ ನೆರೆಯವರಿಗೆ ನಿಜ ಪ್ರೀತಿ ತೋರಿಸುತ್ತಾರೆ. (1 ಯೋಹಾ. 5:19) ಸೈತಾನನನ್ನು, ಅವನ ದೆವ್ವಗಳನ್ನು ಮತ್ತು ದುಷ್ಟ ಲೋಕವನ್ನು ಯೆಹೋವನು ನಾಶಮಾಡಿದ ಮೇಲೆ ಭೂಮಿಯಲ್ಲಿ ಎಲ್ಲೆಲ್ಲೂ ಪ್ರೀತಿ ತುಂಬಿರಲಿದೆ! ಭೂಮಿಯಲ್ಲಿರುವ ಎಲ್ಲರೂ ಯೆಹೋವನನ್ನು, ತಮ್ಮ ನೆರೆಯವರನ್ನು ಪ್ರೀತಿಸುತ್ತಿರುವ ಆ ಸಮಯ ಎಷ್ಟು ಚೆನ್ನಾಗಿರುತ್ತದಲ್ಲವಾ? ಅದು ಎಂಥ ಆಶೀರ್ವಾದ!