ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆಮಾಡಲು ನಿಮ್ಮ ಮಕ್ಕಳಿಗೆ ತರಬೇತಿ—ಭಾಗ 1

ಯೆಹೋವನ ಸೇವೆಮಾಡಲು ನಿಮ್ಮ ಮಕ್ಕಳಿಗೆ ತರಬೇತಿ—ಭಾಗ 1

“ನೀನು ಕಳುಹಿಸಿದ ದೇವಪುರುಷನು . . . ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ.”—ನ್ಯಾಯ. 13:8

ಗೀತೆಗಳು: 88, 120

1. ತಂದೆಯಾಗಲಿದ್ದಾನೆಂಬ ಸುದ್ದಿ ಕೇಳಿದಾಗ ಮಾನೋಹ ಏನು ಮಾಡಿದನು?

ಮಾನೋಹ ಮತ್ತು ಅವನ ಹೆಂಡತಿಗೆ ಮಕ್ಕಳಿರಲಿಲ್ಲ. ಮುಂದಕ್ಕೂ ಆಗುವುದಿಲ್ಲವೆಂದು ಅವರಿಗೆ ಖಚಿತವಾಗಿ ಗೊತ್ತಿತ್ತು. ಆದರೆ ಒಂದು ದಿನ ದೇವದೂತನೊಬ್ಬನು ಮಾನೋಹನ ಹೆಂಡತಿ ಹತ್ತಿರ ಬಂದು ಅವಳಿಗೊಬ್ಬ ಮಗ ಹುಟ್ಟುವನೆಂದು ಹೇಳಿದನು. ಎಂಥ ಆಶ್ಚರ್ಯ ಅಲ್ಲವೇ? ಈ ಸುದ್ದಿಯನ್ನು ಅವಳು ಮಾನೋಹನಿಗೆ ಖುಷಿಯಿಂದ ಹೇಳಿದಾಗ ಅವನೂ ಸಂಭ್ರಮಿಸಿದ. ಆದರೆ ಒಬ್ಬ ತಂದೆಯಾಗಿ ತಾನೇನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಎನ್ನುವುದರ ಬಗ್ಗೆಯೂ ಅವನು ಗಂಭೀರವಾಗಿ ಯೋಚಿಸಿದ. ಇಸ್ರಾಯೇಲಿನಲ್ಲಿ ತುಂಬ ಜನರು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದ ಕಾಲವದು. ಹೀಗಿರುವಾಗ ತಮ್ಮ ಮಗ ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನನ್ನು ಆರಾಧಿಸುವಂತೆ ತರಬೇತಿ ಕೊಡುವುದು ಹೇಗೆಂಬ ಚಿಂತೆ ಅವರಿಗಿತ್ತು. ಹಾಗಾಗಿ ಆ ದೇವದೂತನನ್ನು ಮತ್ತೊಮ್ಮೆ ಕಳುಹಿಸುವಂತೆ ಮಾನೋಹ ಕೇಳಿಕೊಳ್ಳುತ್ತಾ “ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ” ಎಂದು ಬೇಡಿಕೊಂಡನು.—ನ್ಯಾಯ. 13:1-8.

2. (ಎ) ನಿಮ್ಮ ಮಕ್ಕಳಿಗೆ ನೀವೇನು ಕಲಿಸುವ ಅಗತ್ಯವಿದೆ? (ಬಿ) ಅದನ್ನು ಮಾಡುವುದು ಹೇಗೆ? (“ ನಿಮಗಿರುವ ಅತೀ ಮುಖ್ಯ ಬೈಬಲ್‌ ವಿದ್ಯಾರ್ಥಿಗಳು” ಚೌಕವನ್ನೂ ನೋಡಿ.)

2 ನೀವು ಹೆತ್ತವರಾಗಿರುವಲ್ಲಿ, ಮಾನೋಹನ ಭಾವನೆಗಳು ನಿಮಗೆ ಅರ್ಥವಾಗಬಹುದು. ನಿಮ್ಮ ಪುಟ್ಟ ಮಕ್ಕಳು ಯೆಹೋವನ ಬಗ್ಗೆ ತಿಳಿದು, ಆತನನ್ನು ಪ್ರೀತಿಸುವಂತೆ ಸಹಾಯಮಾಡುವ ಜವಾಬ್ದಾರಿ ನಿಮಗೂ ಇದೆ. * (ಪಾದಟಿಪ್ಪಣಿ ನೋಡಿ.) (ಜ್ಞಾನೋ. 1:8) ಅವರು ಯೆಹೋವ ಮತ್ತು ಬೈಬಲಿನ ಬಗ್ಗೆ ಕಲಿಯುತ್ತಾ ಇರುವಂತೆ ಬೇಕಾದ ಸಹಾಯವನ್ನು ಕುಟುಂಬ ಆರಾಧನಾ ಸಮಯದಲ್ಲಿ ಕೊಡಬೇಕು. ಆದರೆ ಪ್ರತಿ ವಾರ ನಿಮ್ಮ ಮಕ್ಕಳ ಜೊತೆ ಬೈಬಲಿನ ಅಧ್ಯಯನ ಮಾಡಿದರೆ ಮಾತ್ರ ಸಾಲದು. ಅದಕ್ಕಿಂತ ಹೆಚ್ಚನ್ನು ಮಾಡಬೇಕು. (ಧರ್ಮೋಪದೇಶಕಾಂಡ 6:6-9 ಓದಿ.) ಯೆಹೋವನನ್ನು ಪ್ರೀತಿಸಿ ಆತನ ಸೇವೆಮಾಡಲು ಮಕ್ಕಳಿಗೆ ತರಬೇತಿಕೊಡಲಿಕ್ಕೆ ನಿಮಗೆ ಇನ್ಯಾವ ಸಹಾಯವಿದೆ? ಯೇಸುವಿನ ಮಾದರಿ ಸಹಾಯಮಾಡುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸೋಣ. ಯೇಸು ತಂದೆಯಾಗಿರಲಿಲ್ಲ ನಿಜ. ಆದರೆ ಆತನು ತನ್ನ ಶಿಷ್ಯರಿಗೆ ಬೋಧಿಸಿದ ಮತ್ತು ತರಬೇತಿಕೊಟ್ಟ ವಿಧದಿಂದ ನೀವು ಕಲಿಯಬಹುದು. ಯೇಸು ಅವರನ್ನು ಪ್ರೀತಿಸಿದನು. ಆತನು ದೀನನಾಗಿದ್ದನು. ಆತನಿಗೆ ಒಳನೋಟವಿತ್ತು, ಅಂದರೆ ಅವರ ಮನದಾಳದ ಯೋಚನೆ ಆತನಿಗೆ ಅರ್ಥವಾಗುತ್ತಿತ್ತು, ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿದಿತ್ತು. ಈ ವಿಷಯಗಳಲ್ಲಿ ಯೇಸುವನ್ನು ಹೇಗೆ ಅನುಕರಿಸಬಹುದೆಂದು ನೋಡೋಣ.

ನಿಮ್ಮ ಮಕ್ಕಳನ್ನು ಪ್ರೀತಿಸಿ

3. ಯೇಸು ತಮ್ಮನ್ನು ಪ್ರೀತಿಸುತ್ತಾನೆಂದು ಆತನ ಶಿಷ್ಯರಿಗೆ ಹೇಗೆ ಗೊತ್ತಿತ್ತು?

3 ಯೇಸು ಅನೇಕ ಸಲ ತನ್ನ ಶಿಷ್ಯರಿಗೆ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಿದೆ. (ಯೋಹಾನ 15:9 ಓದಿ.) ಅವರ ಜೊತೆ ತುಂಬ ಸಮಯವನ್ನೂ ಕಳೆದನು. (ಮಾರ್ಕ 6:31, 32; ಯೋಹಾ. 2:2; 21:12, 13) ಯೇಸು ಬರೀ ಅವರ ಬೋಧಕನಾಗಿರಲಿಲ್ಲ. ಗೆಳೆಯನೂ ಆಗಿದ್ದ. ಹಾಗಾಗಿ ‘ಆತನಿಗೆ ನಮ್ಮ ಮೇಲೆ ಪ್ರೀತಿಯಿದೆಯಾ’ ಅಂತ ಅವರಿಗೆ ಯಾವತ್ತೂ ಸಂಶಯ ಬಂದದ್ದೇ ಇಲ್ಲ. ನೀವು ಯೇಸುವಿನಿಂದ ಏನು ಕಲಿಯಬಲ್ಲಿರಿ?

4. ನಿಮ್ಮ ಮಕ್ಕಳಿಗೆ ನೀವು ಅವರನ್ನು ಪ್ರೀತಿಸುತ್ತೀರೆಂದು ಹೇಗೆ ತೋರಿಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

4 ನಿಮ್ಮ ಮಕ್ಕಳಿಗೆ ನೀವು ಅವರನ್ನು ಪ್ರೀತಿಸುತ್ತೀರೆಂದು ಹೇಳಿ. ನಿಮ್ಮ ಬದುಕಲ್ಲಿ ಅವರಿಗೆಷ್ಟು ಮಹತ್ವದ ಪಾತ್ರವಿದೆಯೆಂದು ಅವರಿಗೆ ತಿಳಿಸಿ. (ಜ್ಞಾನೋ. 4:3; ತೀತ 2:4) ಆಸ್ಟ್ರೇಲಿಯದಲ್ಲಿ ವಾಸಿಸುತ್ತಿರುವ ಸ್ಯಾಮ್ಯುಲ್‌ ಹೀಗನ್ನುತ್ತಾರೆ: “ನಾನು ತುಂಬ ಚಿಕ್ಕವನಾಗಿದ್ದಾಗ ಪ್ರತಿದಿನ ಸಾಯಂಕಾಲ ಅಪ್ಪ ನನ್ನ ಜೊತೆ ಕೂತು ಬೈಬಲ್‌ ಕಥೆಗಳ ನನ್ನ ಪುಸ್ತಕದಿಂದ ಕಥೆಗಳನ್ನು ಓದಿಹೇಳುತ್ತಿದ್ದರು. ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲ ಉತ್ತರಕೊಡುತ್ತಿದ್ದರು, ಅಪ್ಪಿಕೊಳ್ಳುತ್ತಿದ್ದರು, ‘ಗುಡ್ನೈಟ್‌’ ಹೇಳಿ ಮುತ್ತು ಕೊಡುತ್ತಿದ್ದರು. ಕಾಲಾನಂತರ ನನಗೊಂದು ಆಶ್ಚರ್ಯದ ವಿಷಯ ತಿಳಿದುಬಂತು. ಅಪ್ಪ ಬೆಳೆದು ಬಂದ ರೀತಿ ಹೇಗಿತ್ತೆಂದರೆ ಅವರ ಕುಟುಂಬದಲ್ಲಿ ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಇವೆಲ್ಲ ಇರಲೇ ಇಲ್ಲವಂತೆ! ಹಾಗಿದ್ದರೂ ನನ್ನ ಮೇಲಿನ ಪ್ರೀತಿ ತೋರಿಸಲು ಅವರು ವಿಶೇಷ ಪ್ರಯತ್ನ ಮಾಡಿದ್ದರು. ಫಲಿತಾಂಶವಾಗಿ, ನನಗೆ ಅವರ ಜೊತೆ ಬಲವಾದ ಬಂಧ ಬೆಳೆಯಿತು. ನನಗೆ ಸಂತೃಪ್ತಿ ಇತ್ತು. ಸುರಕ್ಷಿತ ಭಾವನೆ ಇತ್ತು.” ನಿಮ್ಮ ಮಕ್ಕಳಿಗೂ ಅದೇ ರೀತಿಯ ಭಾವನೆ ಬರುವಂತೆ ಅವರಿಗೆ ಆಗಾಗ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳಿ. ಅವರನ್ನು ತಬ್ಬಿಕೊಳ್ಳಿ. ಮುತ್ತು ಕೊಡಿ. ಅವರ ಜೊತೆ ಮಾತಾಡಲು, ಊಟಮಾಡಲು, ಆಡಲು ಸಮಯ ಮಾಡಿಕೊಳ್ಳಿ.

5, 6. (ಎ) ಯೇಸು ತನ್ನ ಶಿಷ್ಯರನ್ನು ಪ್ರೀತಿಸಿದ್ದರಿಂದ ಏನು ಮಾಡಿದನು? (ಬಿ) ಮಕ್ಕಳಿಗೆ ಹೇಗೆ ಶಿಸ್ತು ಕೊಡಬೇಕು?

5 ಯೇಸು ಹೀಗಂದನು: “ಯಾರ ಬಗ್ಗೆ ನನಗೆ ಮಮತೆಯಿದೆಯೋ ಅವರೆಲ್ಲರನ್ನು ನಾನು ಗದರಿಸುತ್ತೇನೆ ಮತ್ತು ಶಿಸ್ತುಗೊಳಿಸುತ್ತೇನೆ.” * (ಪಾದಟಿಪ್ಪಣಿ ನೋಡಿ.) (ಪ್ರಕ. 3:19) ಉದಾಹರಣೆಗೆ, ಅವನ ಶಿಷ್ಯರು ತಮ್ಮಲ್ಲಿ ಯಾರು ದೊಡ್ಡವರು ಎಂದು ಎಷ್ಟೋ ಸಲ ಜಗಳ ಮಾಡಿಕೊಂಡರು. ಈ ಸಮಸ್ಯೆಯನ್ನು ಯೇಸು ಅಲಕ್ಷಿಸಲಿಲ್ಲ. ಬದಲಾಗಿ ಅವರಿಗೆ ತಾಳ್ಮೆಯಿಂದ ಪದೇಪದೇ ಬುದ್ಧಿವಾದ ಕೊಟ್ಟನು. ಆದರೆ ಅದನ್ನು ಯಾವಾಗಲೂ ದಯೆಯಿಂದ ಕೊಡುತ್ತಿದ್ದನು. ಮಾತ್ರವಲ್ಲ ಸರಿಯಾದ ಸಮಯಕ್ಕಾಗಿ, ಸರಿಯಾದ ಜಾಗದಲ್ಲಿರುವ ತನಕ ಕಾಯುತ್ತಿದ್ದನು.—ಮಾರ್ಕ 9:33-37.

6 ನಿಮ್ಮ ಮಕ್ಕಳನ್ನು ನೀವು ಪ್ರೀತಿಸುವುದರಿಂದ ಅವರಿಗೆ ಶಿಸ್ತು ಕೊಡಬೇಕು. ಕೆಲವೊಂದು ಸಲ ಅವರಿಗೆ ಸರಿ ಯಾವುದು, ತಪ್ಪು ಯಾವುದೆಂದು ಬರೀ ವಿವರಿಸಿದರೆ ಸಾಕು. ಹಾಗೆ ಮಾಡಿದ ಮೇಲೂ ಅವರು ನಿಮ್ಮ ಮಾತು ಕೇಳದಿದ್ದರೆ ಆಗೇನು ಮಾಡುತ್ತೀರಾ? (ಜ್ಞಾನೋ. 22:15) ಯೇಸುವನ್ನು ಅನುಕರಿಸಿ. ತಾಳ್ಮೆಯಿಂದ ಮಕ್ಕಳಿಗೆ ಮಾರ್ಗದರ್ಶನ, ತರಬೇತಿ, ತಿದ್ದುಪಾಟನ್ನು ಕೊಡುವ ಮೂಲಕ ಶಿಸ್ತು ಕೊಡುತ್ತಾ ಇರಿ. ಇದನ್ನು ದಯೆಯಿಂದ, ಸರಿಯಾದ ಸಮಯ ಮತ್ತು ಜಾಗದಲ್ಲಿ ಮಾಡಿ. ದಕ್ಷಿಣ ಆಫ್ರಿಕದಲ್ಲಿನ ಈಲೇನ್‌ ಎಂಬ ಸಹೋದರಿ ತನ್ನ ಹೆತ್ತವರು ಹೇಗೆ ಶಿಸ್ತು ಕೊಡುತ್ತಿದ್ದರೆಂದು ನೆನಪಿಸಿಕೊಳ್ಳುತ್ತಾಳೆ. ಅವಳು ಹೇಗಿರಬೇಕು, ಏನು ಮಾಡಬೇಕು ಎನ್ನುವುದನ್ನು ಹೆತ್ತವರು ಯಾವಾಗಲೂ ವಿವರಿಸುತ್ತಿದ್ದರು. ಅವರ ಮಾತು ಮೀರಿದರೆ ಶಿಕ್ಷೆ ಕೊಡುವರೆಂದು ಮುಂಚೆನೇ ಹೇಳುತ್ತಿದ್ದರು. ಅವಳು ಆ ತಪ್ಪು ಮಾಡಿದರೆ ಅವರು ಹೇಳಿದ ಹಾಗೆ ಆ ಶಿಕ್ಷೆ ಕೊಟ್ಟೇ ಕೊಡುತ್ತಿದ್ದರು. ಆದರೆ “ಅವರು ಯಾವತ್ತೂ ಸಿಟ್ಟಿನಿಂದ ನನಗೆ ಶಿಸ್ತು ಕೊಟ್ಟವರಲ್ಲ. ಶಿಸ್ತು ಕೊಡುವ ಮುಂಚೆ ಯಾಕೆ ಅದನ್ನು ಕೊಡುತ್ತಿದ್ದಾರೆಂದು ವಿವರಿಸುತ್ತಿದ್ದರು” ಎನ್ನುತ್ತಾಳೆ ಈಲೇನ್‌. ಆದ್ದರಿಂದ ಹೆತ್ತವರು ತನ್ನನ್ನು ಪ್ರೀತಿಸುತ್ತಾರೆಂಬ ಭಾವನೆ ಅವಳಿಗೆ ಯಾವಾಗಲೂ ಇರುತ್ತಿತ್ತು.

ದೀನರಾಗಿರಿ

7, 8. (ಎ) ಯೇಸುವಿನ ಶಿಷ್ಯರು ಆತನ ಪ್ರಾರ್ಥನೆಗಳಿಂದ ಏನು ಕಲಿತರು? (ಬಿ) ನಿಮ್ಮ ಪ್ರಾರ್ಥನೆಗಳಿಂದ ನಿಮ್ಮ ಪುಟ್ಟ ಮಕ್ಕಳು ದೇವರ ಮೇಲೆ ಹೊಂದಿಕೊಳ್ಳಲು ಹೇಗೆ ಕಲಿಯುತ್ತಾರೆ?

7 ಯೇಸುವಿನ ದಸ್ತಗಿರಿ ಮತ್ತು ಸಾವು ಹತ್ತಿರವಿದ್ದಾಗ ಆತನು ತನ್ನ ತಂದೆಗೆ ಹೀಗೆ ಬೇಡಿಕೊಂಡನು: “ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ; ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೂ ನನ್ನ ಅಪೇಕ್ಷೆಯಂತಲ್ಲ ನಿನ್ನ ಅಪೇಕ್ಷೆಯಂತೆಯೇ ಆಗಲಿ.” * (ಪಾದಟಿಪ್ಪಣಿ ನೋಡಿ.) (ಮಾರ್ಕ 14:36) ಈ ಪ್ರಾರ್ಥನೆ ಕೇಳಿದಾಗ ಅಥವಾ ಮುಂದಕ್ಕೆ ಅದರ ಬಗ್ಗೆ ಗೊತ್ತಾದಾಗ ಆತನ ಶಿಷ್ಯರಿಗೆ ಹೇಗನಿಸಿರಬೇಕೆಂದು ಸ್ವಲ್ಪ ಯೋಚಿಸಿ. ಆತನು ಪರಿಪೂರ್ಣನಾಗಿದ್ದರೂ ತನ್ನ ತಂದೆಯ ಸಹಾಯ ಕೇಳಿದ್ದನ್ನು ಅವರು ಗಮನಿಸಿದರು. ಆದ್ದರಿಂದ ಅವರು ಸಹ ದೀನರಾಗಿದ್ದು, ಸಹಾಯಕ್ಕಾಗಿ ಯೆಹೋವನ ಮೇಲೆ ಹೊಂದಿಕೊಳ್ಳಬೇಕೆಂದು ಕಲಿತರು.

8 ನೀವು ಮಾಡುವ ಪ್ರಾರ್ಥನೆಗಳಿಂದ ನಿಮ್ಮ ಮಕ್ಕಳು ಬಹಳಷ್ಟನ್ನು ಕಲಿಯುತ್ತಾರೆ. ಅವರಿಗೆ ಕಲಿಸಬೇಕೆಂಬ ಒಂದೇ ಒಂದು ಕಾರಣಕ್ಕೆ ನೀವು ಪ್ರಾರ್ಥನೆ ಮಾಡುವುದಿಲ್ಲ ನಿಜ. ಆದರೆ ನಿಮ್ಮ ಪ್ರಾರ್ಥನೆಯನ್ನು ಅವರು ಕೇಳುವಾಗ, ಯೆಹೋವನ ಮೇಲೆ ಹೊಂದಿಕೊಳ್ಳುವುದನ್ನು ಕಲಿಯುತ್ತಾರೆ. ನಿಮ್ಮ ಮಕ್ಕಳಿಗೆ ಮಾತ್ರವಲ್ಲ ನಿಮಗೂ ಸಹಾಯಮಾಡುವಂತೆ ಯೆಹೋವನ ಹತ್ತಿರ ಬೇಡಿಕೊಳ್ಳಿ. ಬ್ರೆಜಿಲ್‍ನಲ್ಲಿರುವ ಆ್ಯನಾ ಎಂಬವರು ಹೀಗನ್ನುತ್ತಾರೆ: “ಏನೇ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಬಲ ಕೊಡುವಂತೆ, ಒಳ್ಳೇ ನಿರ್ಣಯಗಳನ್ನು ಮಾಡಲು ಬೇಕಾದ ವಿವೇಕ ಕೊಡುವಂತೆ ಅಪ್ಪಅಮ್ಮ ಯೆಹೋವನನ್ನು ಬೇಡಿಕೊಳ್ಳುತ್ತಿದ್ದರು. ಉದಾಹರಣೆಗೆ ನನ್ನ ಅಜ್ಜಅಜ್ಜಿ ಕಾಯಿಲೆಬಿದ್ದಾಗಲೂ ಹೀಗೆ ಮಾಡಿದರು. ಅತಿಯಾದ ಒತ್ತಡದ ಸಮಯದಲ್ಲೂ ತಮ್ಮ ಸಮಸ್ಯೆಗಳನ್ನು ಯೆಹೋವನ ಹಸ್ತಕ್ಕೆ ಒಪ್ಪಿಸುತ್ತಿದ್ದರು. ಇದನ್ನೆಲ್ಲ ನೋಡಿ ನಾನು ಯೆಹೋವನ ಮೇಲೆ ಹೊಂದಿಕೊಳ್ಳಲು ಕಲಿತೆ.” ನೆರೆಯವರೊಬ್ಬರಿಗೆ ಸಾಕ್ಷಿಕೊಡಲು ಅಥವಾ ಅಧಿವೇಶನಕ್ಕಾಗಿ ಧಣಿ ಹತ್ತಿರ ರಜಾ ಕೇಳಲು ಬೇಕಾದ ಧೈರ್ಯ ಕೊಡುವಂತೆ ನೀವು ಯೆಹೋವನನ್ನು ಬೇಡಿಕೊಳ್ಳುವುದನ್ನು ನಿಮ್ಮ ಪುಟ್ಟ ಮಕ್ಕಳು ಕೇಳಿಸಿಕೊಳ್ಳುತ್ತಾರೆ. ಹೀಗೆ ನೀವು ಯೆಹೋವನ ಮೇಲೆ ಹೊಂದಿಕೊಳ್ಳುವುದನ್ನು ನೋಡಿದಾಗ ಅವರೂ ಅದನ್ನೇ ಕಲಿಯುತ್ತಾರೆ.

9. (ಎ) ದೀನರಾಗಿರಲು, ನಿಸ್ವಾರ್ಥತೆ ತೋರಿಸಲು ಯೇಸು ತನ್ನ ಶಿಷ್ಯರಿಗೆ ಕಲಿಸಿದ್ದು ಹೇಗೆ? (ಬಿ) ನೀವು ದೀನರೂ, ನಿಸ್ವಾರ್ಥಿಗಳೂ ಆಗಿದ್ದರೆ ನಿಮ್ಮ ಮಕ್ಕಳು ಏನು ಕಲಿಯುವರು?

9 ಯೇಸು ತನ್ನ ಶಿಷ್ಯರಿಗೆ ದೀನರಾಗಿರಲು, ನಿಸ್ವಾರ್ಥತೆ ತೋರಿಸಲು ಹೇಳಿದನು. ಮಾದರಿಯನ್ನೂ ಇಟ್ಟನು. (ಲೂಕ 22:27 ಓದಿ.) ಯೆಹೋವನ ಸೇವೆಗಾಗಿ ಮತ್ತು ಇತರರಿಗೆ ಸಹಾಯ ಮಾಡಲಿಕ್ಕಾಗಿ ಯೇಸು ತ್ಯಾಗಗಳನ್ನು ಮಾಡಿದ್ದನ್ನು ಅಪೊಸ್ತಲರು ನೋಡಿದರು. ಅವರೂ ಅದನ್ನೇ ಮಾಡಲು ಕಲಿತರು. ಹೀಗೆ ನಿಮ್ಮ ಮಾದರಿಯ ಮೂಲಕ ನೀವೂ ನಿಮ್ಮ ಮಕ್ಕಳಿಗೆ ಕಲಿಸಬಹುದು. ಇಬ್ಬರು ಮಕ್ಕಳ ತಾಯಿ ಡೆಬಿ ಹೀಗನ್ನುತ್ತಾರೆ: “ನನ್ನ ಗಂಡ ಹಿರಿಯನಾಗಿರುವುದರಿಂದ ಅವರು ಬೇರೆಯವರಿಗೆ ಸಮಯ ಕೊಡಬೇಕಾಗುತ್ತದೆ. ಇದರ ಬಗ್ಗೆ ನನಗೆ ಯಾವತ್ತೂ ಹೊಟ್ಟೆಕಿಚ್ಚಾಗಿಲ್ಲ. ನನಗೆ ಮತ್ತು ನಮ್ಮ ಮಕ್ಕಳಿಗೆ ಸಮಯ, ಗಮನ ಬೇಕಾದಾಗೆಲ್ಲ ಅದನ್ನು ಕೊಡುತ್ತಾರೆಂದು ನನಗೆ ಗೊತ್ತು.” (1 ತಿಮೊ. 3:4, 5) ಡೆಬಿ ಮತ್ತು ಅವರ ಗಂಡ ಪ್ರನಾಸ್‌ ಇಟ್ಟ ಮಾದರಿಯು ಅವರ ಮಕ್ಕಳ ಮೇಲೆ ಯಾವ ಪರಿಣಾಮ ಬೀರಿತು? ಸಮ್ಮೇಳನಗಳಿಗೆ ಹೋದಾಗ ಅಲ್ಲಿ ಕೆಲಸಮಾಡಲು ಮಕ್ಕಳು ಯಾವಾಗಲೂ ಮುಂದಿರುತ್ತಿದ್ದರು, ಅಲ್ಲಿ ಒಳ್ಳೇ ಸ್ನೇಹಿತರನ್ನು ಮಾಡಿಕೊಂಡರು, ಸಹೋದರ ಸಹೋದರಿಯರೊಟ್ಟಿಗೆ ಇರಲು ಇಷ್ಟಪಡುತ್ತಿದ್ದರು, ಸಂತೋಷವಾಗಿರುತ್ತಿದ್ದರು ಎನ್ನುತ್ತಾರವರು. ಈಗ ಆ ಕುಟುಂಬದಲ್ಲಿ ಎಲ್ಲರೂ ಪೂರ್ಣ ಸಮಯ ಸೇವೆಯಲ್ಲಿದ್ದಾರೆ. ನೀವು ದೀನರೂ, ನಿಸ್ವಾರ್ಥಿಗಳೂ ಆಗಿದ್ದರೆ, ಇತರರಿಗೆ ಸಹಾಯಮಾಡಲು ಸಿದ್ಧರಾಗಿರಬೇಕೆಂದು ನಿಮ್ಮ ಮಕ್ಕಳೂ ಕಲಿಯುತ್ತಾರೆ.

ಒಳನೋಟ ಬಳಸಿ

10. ಗಲಿಲಾಯದ ಕೆಲವು ಜನರು ಯೇಸುವಿಗಾಗಿ ಹುಡುಕಿಕೊಂಡು ಬಂದಾಗ ಅವನು ಹೇಗೆ ಒಳನೋಟ ಬಳಸಿದನು?

10 ಯೇಸುವಿಗೆ ಪರಿಪೂರ್ಣ ಮಟ್ಟದ ಒಳನೋಟವಿತ್ತು. ಜನರು ಏನು ಮಾಡುತ್ತಿದ್ದಾರೊ ಬರೀ ಅದಕ್ಕೆ ಗಮನಕೊಡದೇ ಅದನ್ನು ಯಾಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಗಮನಕೊಡುತ್ತಿದ್ದನು. ಅವರ ಮನಸ್ಸಲ್ಲಿ ಏನಿದೆಯೆಂದು ತಿಳಿಯಲು ಅವನು ಶಕ್ತನಾಗಿದ್ದನು. ಉದಾಹರಣೆಗೆ ಒಮ್ಮೆ ಗಲಿಲಾಯದಲ್ಲಿ ಕೆಲವು ಜನರು ಅವನನ್ನು ಹುಡುಕಿಕೊಂಡು ಬಂದರು. (ಯೋಹಾ. 6:22-24) ಅವರು ಬಂದದ್ದು, ಆತನೇನು ಕಲಿಸುತ್ತಾನೊ ಅದನ್ನು ಕೇಳಲು ಅಲ್ಲ ಬದಲಾಗಿ ಅವರಿಗೆ ಊಟ ಬೇಕಿತ್ತು. ಇದನ್ನು ಯೇಸು ಗ್ರಹಿಸಿದನು. (ಯೋಹಾ. 2:25) ಅವರ ಮನಸ್ಸಲ್ಲಿ ಏನಿದೆಯೆಂದು ಯೇಸುವಿಗೆ ಗೊತ್ತಿತ್ತು. ತಾಳ್ಮೆಯಿಂದ ಅವರನ್ನು ತಿದ್ದಿ, ಅವರು ಯಾವೆಲ್ಲ ಬದಲಾವಣೆ ಮಾಡಬೇಕೆಂದು ವಿವರಿಸಿದನು.—ಯೋಹಾನ 6:25-27 ಓದಿ.

ಸೇವೆಯನ್ನು ಆನಂದಿಸಲು ನಿಮ್ಮ ಪುಟ್ಟ ಮಕ್ಕಳಿಗೆ ಸಹಾಯಮಾಡಿ (ಪ್ಯಾರ 11 ನೋಡಿ)

11. (ಎ) ಸಾರುವ ಕೆಲಸದ ಬಗ್ಗೆ ನಿಮ್ಮ ಮಕ್ಕಳ ಅನಿಸಿಕೆಯೇನು ಎಂದು ಹೇಗೆ ತಿಳಿದುಕೊಳ್ಳಲು ಪ್ರಯತ್ನಿಸಬಲ್ಲಿರಿ? (ಬಿ) ನಿಮ್ಮ ಮಕ್ಕಳು ಸೇವೆಯನ್ನು ಆನಂದಿಸುವಂತೆ ಹೇಗೆ ಸಹಾಯ ಮಾಡಬಲ್ಲಿರಿ?

11 ನಿಮ್ಮ ಮಕ್ಕಳ ಮನಸ್ಸಲ್ಲಿ ಏನಿದೆಯೆಂದು ತಿಳಿಯುವ ಸಾಮರ್ಥ್ಯ ನಿಮಗಿಲ್ಲ. ಹಾಗಿದ್ದರೂ ನೀವು ಒಳನೋಟ ಬಳಸಬಹುದು. ಉದಾಹರಣೆಗೆ, ನಿಮ್ಮ ಮಕ್ಕಳಿಗೆ ಸೇವೆ ಬಗ್ಗೆ ಹೇಗನಿಸುತ್ತದೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಸೇವೆಗೆ ಹೋದಾಗ ಮಧ್ಯದಲ್ಲಿ ವಿರಾಮ ಪಡೆದು ಏನಾದರೂ ತಿನ್ನುವ, ಕುಡಿಯುವ ಸಮಯಕ್ಕಾಗಿ ಮಾತ್ರ ನನ್ನ ಮಕ್ಕಳು ಕಾಯುತ್ತಾ ಇರುತ್ತಾರಾ?’ ನಿಮ್ಮ ಮಕ್ಕಳಿಗೆ ಸೇವೆಗೆ ಹೋಗಲು ಅಷ್ಟೇನೂ ಇಷ್ಟವಿಲ್ಲ ಎಂದು ನಿಮಗೆ ಗೊತ್ತಾದರೆ, ಸೇವೆಯನ್ನು ಇನ್ನಷ್ಟು ಆಸಕ್ತಿಕರವನ್ನಾಗಿ ಮಾಡಿ. ಸೇವೆಯಲ್ಲಿರುವಾಗ ಅವರಿಗೂ ಚಿಕ್ಕಪುಟ್ಟ ಕೆಲಸಗಳನ್ನು ಕೊಡಿ. ಆಗ ‘ನಾನೂ ಒಂದು ಮುಖ್ಯ ಕೆಲಸ ಮಾಡಿದ್ದೇನೆ’ ಎಂಬ ಅನಿಸಿಕೆ ಅವರಿಗೆ ಬರುತ್ತದೆ.

12. (ಎ) ಯೇಸು ತನ್ನ ಶಿಷ್ಯರಿಗೆ ಯಾವುದರ ಬಗ್ಗೆ ಎಚ್ಚರಿಸಿದನು? (ಬಿ) ಆತನ ಶಿಷ್ಯರಿಗೆ ಈ ಎಚ್ಚರಿಕೆ ಅಗತ್ಯವಿತ್ತೇಕೆ?

12 ಯೇಸು ಬೇರಾವ ರೀತಿಯಲ್ಲಿ ಒಳನೋಟ ಬಳಸಿದನು? ಒಂದು ತಪ್ಪು ಇನ್ನೊಂದು ತಪ್ಪಿಗೆ ನಡೆಸುತ್ತದೆ, ಬಹುಶಃ ಗಂಭೀರ ತಪ್ಪಿಗೂ ನಡೆಸುತ್ತದೆಂದು ಆತನಿಗೆ ಗೊತ್ತಿತ್ತು. ಇದರ ಬಗ್ಗೆ ಶಿಷ್ಯರನ್ನು ಎಚ್ಚರಿಸಿದನು. ಉದಾಹರಣೆಗೆ, ಲೈಂಗಿಕ ಅನೈತಿಕತೆ ತಪ್ಪೆಂದು ಶಿಷ್ಯರಿಗೆ ಗೊತ್ತಿತ್ತು. ಆದರೆ ಯಾವುದು ಅದಕ್ಕೆ ನಡೆಸುತ್ತದೆಂದು ಎಚ್ಚರಿಸುತ್ತಾ ಆತನಂದದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ. ಆದುದರಿಂದ ನಿನ್ನ ಬಲಗಣ್ಣು ನಿನ್ನನ್ನು ಎಡವಿಸುತ್ತಿರುವುದಾದರೆ ಅದನ್ನು ಕಿತ್ತು ಬಿಸಾಡು.” (ಮತ್ತಾ. 5:27-29) ಯೇಸುವಿನ ಶಿಷ್ಯರು ಜೀವಿಸುತ್ತಿದ್ದದ್ದು ರೋಮನ್‌ ಆಳ್ವಿಕೆಯ ಸಮಯದಲ್ಲಿ. ಅವರ ಸುತ್ತಲಿದ್ದ ರೋಮನ್ನರು ಅನೈತಿಕ ಜನರಾಗಿದ್ದರು. ಲೈಂಗಿಕ ದೃಶ್ಯಗಳು ಹಾಗೂ ಹೊಲಸು ಮಾತುಗಳಿಂದ ತುಂಬಿದ್ದ ನಾಟಕಗಳನ್ನು ನೋಡುವುದನ್ನು ಅವರು ಇಷ್ಟಪಡುತ್ತಿದ್ದರು. ಆದ್ದರಿಂದ ಯೇಸು ತನ್ನ ಶಿಷ್ಯರಿಗೆ ಸರಿಯಾದದ್ದನ್ನು ಮಾಡಲು ಕಷ್ಟವನ್ನಾಗಿಸುವ ಯಾವುದರಿಂದಲೂ ದೂರವಿರುವಂತೆ ಪ್ರೀತಿಯಿಂದ ಎಚ್ಚರಿಸಿದನು.

13, 14. ಅನೈತಿಕ ಮನರಂಜನೆಯಿಂದ ದೂರವಿರಲು ನಿಮ್ಮ ಪುಟ್ಟ ಮಕ್ಕಳಿಗೆ ಹೇಗೆ ಸಹಾಯ ಮಾಡಬಲ್ಲಿರಿ?

13 ಯೆಹೋವನು ಮೆಚ್ಚದಂಥ ಯಾವುದೇ ಕೆಲಸ ಮಾಡುವುದರಿಂದ ನಿಮ್ಮ ಮಕ್ಕಳನ್ನು ಕಾಪಾಡಲು ಹೆತ್ತವರಾದ ನೀವು ಒಳನೋಟ ಬಳಸಬಹುದು. ಈಗಿನ ಕಾಲದಲ್ಲಿ ಅಶ್ಲೀಲ ಚಿತ್ರಗಳು, ಅನೈತಿಕ ಮಾಹಿತಿ ಪುಟ್ಟ ಮಕ್ಕಳ ಕಣ್ಣಿಗೂ ಬೀಳುವ ಅಪಾಯವಿದೆ ಎನ್ನುವುದು ಬೇಜಾರಿನ ವಿಷಯ. ಇವೆಲ್ಲವನ್ನು ನೋಡುವುದು ತಪ್ಪೆಂದು ನಿಮ್ಮ ಮಕ್ಕಳಿಗೆ ಹೇಳಬೇಕು ನಿಜ. ಆದರೆ ಅವರನ್ನು ಕಾಪಾಡಬೇಕಾದರೆ ಇನ್ನೂ ಹೆಚ್ಚನ್ನು ಮಾಡಬೇಕು. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಅಶ್ಲೀಲ ಚಿತ್ರಗಳು ಯಾಕೆ ತುಂಬ ಅಪಾಯಕಾರಿ ಎನ್ನುವುದು ನನ್ನ ಮಕ್ಕಳಿಗೆ ಗೊತ್ತಿದೆಯಾ? ಅವರು ಅಂಥ ಚಿತ್ರಗಳನ್ನು ನೋಡಲು ಬಯಸುವಂತೆ ಮಾಡಬಹುದಾದ ವಿಷಯಗಳೇನು? ಅಶ್ಲೀಲ ಚಿತ್ರಗಳನ್ನು ನೋಡಲು ಅವರಿಗೆ ಮನಸ್ಸಾದಾಗ ಅದನ್ನು ನೋಡದಂತೆ ಸಹಾಯಕ್ಕಾಗಿ ನನ್ನ ಹತ್ತಿರ ಬರುವಷ್ಟು ಸ್ನೇಹದಿಂದ ಇದ್ದೇನಾ?’ ಮಕ್ಕಳು ಚಿಕ್ಕವರಿದ್ದರೂ ಅವರಿಗೆ ಹೀಗನ್ನಬಹುದು: “ಇಂಟರ್‌ನೆಟ್‌, ಪುಸ್ತಕಗಳು, ವಾರ್ತಾಪತ್ರಿಕೆಗಳು, ಟಿವಿ ಕಾರ್ಯಕ್ರಮಗಳಲ್ಲಿ ಸೆಕ್ಸ್‌ ಬಗ್ಗೆ ಕುತೂಹಲ ಎಬ್ಬಿಸುವ ಒಂದು ವಿಷಯ ಕಣ್ಣಿಗೆ ಬಿದ್ದು ಅದನ್ನು ನೋಡಬೇಕು ಅಂತ ನಿನಗನಿಸಿದರೆ ದಯವಿಟ್ಟು ನನ್ನ ಹತ್ತಿರ ಬಂದು ಮಾತಾಡು. ನನ್ನ ಸಹಾಯ ಕೇಳು. ಹೆದರಬೇಡ. ನಾಚಿಕೊಬೇಡ. ನಿನಗೆ ಸಹಾಯ ಮಾಡುತ್ತೇನೆ.”

14 ನಿಮಗಾಗಿ ಮನರಂಜನೆಯನ್ನು ಆಯ್ಕೆ ಮಾಡುವಾಗಲೂ ಜಾಗ್ರತೆ ವಹಿಸಿ. ಈ ವಿಷಯದಲ್ಲೂ ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೇ ಮಾದರಿ ಆಗಿರಬಲ್ಲಿರೆಂದು ಯೋಚಿಸಿ. ಈ ಮುಂಚೆ ತಿಳಿಸಲಾದ ಪ್ರನಾಸ್‌ ಹೇಳಿದ್ದು: “ಮಕ್ಕಳಿಗೆ ನೀವು ತುಂಬ ವಿಷಯಗಳ ಬಗ್ಗೆ ತುಂಬ ಎಲ್ಲ ಹೇಳಬಹುದು. ಆದರೆ ಅವರು ಗಮನಿಸುವುದು ನೀವೇನು ಮಾಡುತ್ತೀರೊ ಅದನ್ನೇ. ಅದನ್ನೇ ಮಾಡುತ್ತಾರೆ ಸಹ.” ಒಳ್ಳೇ ಸಂಗೀತ, ಸಿನೆಮಾ, ಪುಸ್ತಕಗಳನ್ನು ಆಯ್ಕೆಮಾಡುವ ವಿಷಯದಲ್ಲಿ ನೀವು ಯಾವಾಗಲೂ ಜಾಗ್ರತೆ ವಹಿಸಿದರೆ, ನಿಮ್ಮ ಮಕ್ಕಳೂ ಅದನ್ನೇ ಮಾಡುವರು.—ರೋಮ. 2:21-24.

ಯೆಹೋವನು ನಿಮಗೆ ಸಹಾಯ ಮಾಡುವನು

15, 16. (ಎ) ನಿಮ್ಮ ಮಕ್ಕಳಿಗೆ ತರಬೇತಿಯನ್ನು ಕೊಡಲು ಯೆಹೋವನು ನೆರವಾಗುತ್ತಾನೆಂದು ಖಂಡಿತವಾಗಿ ಹೇಳಬಹುದು ಏಕೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

15 ಮಾನೋಹನು ಒಳ್ಳೇ ತಂದೆಯಾಗಿರಲು ಯೆಹೋವನ ಸಹಾಯ ಕೇಳಿದಾಗ ಏನಾಯಿತು? “ದೇವರು ಅವನ ಮೊರೆಯನ್ನು ಕೇಳಿದನು.” (ನ್ಯಾಯ. 13:8, 9) ಹೆತ್ತವರೇ, ನಿಮ್ಮ ಪ್ರಾರ್ಥನೆಗಳಿಗೂ ಯೆಹೋವನು ಖಂಡಿತ ಕಿವಿಗೊಡುವನು. ನಿಮ್ಮ ಮಕ್ಕಳಿಗೆ ತರಬೇತಿ ಕೊಡಲು ಸಹಾಯ ಮಾಡುವನು. ಪ್ರೀತಿ ತೋರಿಸಲು, ದೀನರಾಗಿರಲು, ಒಳನೋಟ ಬಳಸಲು ನಿಮಗೆ ನೆರವಾಗುವನು.

16 ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ತರಬೇತಿ ಕೊಡಲು ಯೆಹೋವನು ಸಹಾಯ ಮಾಡುತ್ತಾನೆ. ಅವರು ಹದಿಪ್ರಾಯಕ್ಕೆ ಬಂದಾಗಲೂ ಹಾಗೆಯೇ ಮಾಡುತ್ತಾನೆ. ನಿಮ್ಮ ಹದಿಪ್ರಾಯದ ಮಗ/ಮಗಳಿಗೆ ತರಬೇತಿ ಕೊಡಲು ಪ್ರೀತಿ, ದೀನತೆ, ಒಳನೋಟದ ವಿಷಯದಲ್ಲಿ ಯೇಸುವಿನ ಮಾದರಿ ಹೇಗೆ ನೆರವಾಗುತ್ತದೆಂದು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 2 ಈ ಲೇಖನ ಶಿಶುಪ್ರಾಯದಿಂದ 12 ವರ್ಷದ ಮಕ್ಕಳಿರುವ ಹೆತ್ತವರಿಗೆ ಸಹಾಯಮಾಡುತ್ತದೆ.

^ ಪ್ಯಾರ. 5 ಶಿಸ್ತು ಅಂದರೆ ಅದರಲ್ಲಿ ಮಾರ್ಗದರ್ಶನ, ತರಬೇತಿ, ತಿದ್ದುಪಾಟು ಮತ್ತು ಒಮ್ಮೊಮ್ಮೆ ಶಿಕ್ಷೆ ಕೊಡುವುದೂ ಸೇರಿದೆ ಎಂದು ಬೈಬಲ್‌ ಕಲಿಸುತ್ತದೆ. ಹೆತ್ತವರು ದಯೆಯಿಂದ ಶಿಸ್ತು ಕೊಡಬೇಕು. ಸಿಟ್ಟಿನಲ್ಲಿರುವಾಗ ಯಾವತ್ತೂ ಕೊಡಬಾರದು.

^ ಪ್ಯಾರ. 7 “ಅಪ್ಪಾ” ಎಂಬ ಪದದ ಮೂಲ ಗ್ರೀಕ್‌ ಪದ ಅಬ್ಬಾ ಎಂದಾಗಿದೆ. ಯೇಸುವಿನ ಕಾಲದಲ್ಲಿ ಹೆಚ್ಚಾಗಿ ಮಕ್ಕಳು ತಮ್ಮ ಅಪ್ಪಂದಿರ ಜೊತೆ ಮಾತಾಡುವಾಗ ಪ್ರೀತಿ, ಗೌರವದಿಂದ ಅಬ್ಬಾ ಎಂಬ ಪದ ಬಳಸುತ್ತಿದ್ದರು.