ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರ ಉಚಿತ ವರ” ನಿಮಗೆ ಪ್ರೇರಣೆ ನೀಡಲಿ

“ದೇವರ ಉಚಿತ ವರ” ನಿಮಗೆ ಪ್ರೇರಣೆ ನೀಡಲಿ

“ವರ್ಣಿಸಲಸಾಧ್ಯವಾದ ದೇವರ ಉಚಿತ ವರಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಲಿ.”—2 ಕೊರಿಂ. 9:15.

ಗೀತೆಗಳು: 121, 63

1, 2. (ಎ) ‘ವರ್ಣಿಸಲಸಾಧ್ಯವಾದ ದೇವರ ಉಚಿತ ವರದಲ್ಲಿ’ ಏನೆಲ್ಲ ಸೇರಿದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ನೋಡುವೆವು?

ಯೆಹೋವನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದರೆ ನಮಗಾಗಿ ತನ್ನ ಪ್ರಿಯ ಮಗನಾದ ಯೇಸುವನ್ನು ಈ ಭೂಮಿಗೆ ಕಳುಹಿಸಿಕೊಟ್ಟನು. ಇದು ನಮಗೆ ಆತನು ಕೊಟ್ಟ ಅತಿ ಶ್ರೇಷ್ಠ ಉಡುಗೊರೆ. (ಯೋಹಾ. 3:16; 1 ಯೋಹಾ. 4:9, 10) ಈ ಉಡುಗೊರೆಯನ್ನು ‘ವರ್ಣಿಸಲಸಾಧ್ಯವಾದ ಉಚಿತ ವರ’ ಎಂದು ಅಪೊಸ್ತಲ ಪೌಲ ಕರೆದನು. (2 ಕೊರಿಂ. 9:15) ಏಕೆ?

2 ಯೇಸುವಿನ ಯಜ್ಞವು ದೇವರ ಎಲ್ಲ ಅದ್ಭುತ ವಾಗ್ದಾನಗಳು ಸತ್ಯವಾಗುತ್ತವೆಂಬುದಕ್ಕೆ ಖಾತ್ರಿಯಾಗಿದೆ. (2 ಕೊರಿಂಥ 1:20 ಓದಿ.) ಹಾಗಾಗಿ ‘ವರ್ಣಿಸಲಸಾಧ್ಯವಾದ ದೇವರ ಉಚಿತ ವರದಲ್ಲಿ’ ಯೇಸುವಿನ ಯಜ್ಞ ಹಾಗೂ ಯೇಸುವಿನ ಮೂಲಕ ಯೆಹೋವನು ನಮಗೆ ತೋರಿಸುವ ಎಲ್ಲ ಒಳ್ಳೇತನ ಮತ್ತು ನಿಷ್ಠಾವಂತ ಪ್ರೀತಿ ಒಳಗೂಡಿದೆ. ಆ ವರ ಎಷ್ಟು ಬೆಲೆಯುಳ್ಳದ್ದೆಂದರೆ ಅದನ್ನು ಪೂರ್ತಿಯಾಗಿ ಅರ್ಥವಾಗುವ ರೀತಿಯಲ್ಲಿ ವರ್ಣಿಸಲು ಅಸಾಧ್ಯ. ಈ ವಿಶೇಷ ಉಡುಗೊರೆ ನಮ್ಮಲ್ಲಿ ಯಾವ ಭಾವನೆ ಹುಟ್ಟಿಸಬೇಕು? ಈ ವರ್ಷ ಮಾರ್ಚ್‌ 23ರ ಬುಧವಾರದಂದು ಕ್ರಿಸ್ತನ ಮರಣದ ಸ್ಮರಣೆಗಾಗಿ ಸಿದ್ಧರಾಗುತ್ತಿರುವಾಗ ನಾವೇನು ಮಾಡುವಂತೆ ಅದು ಪ್ರೇರಣೆ ನೀಡಬೇಕು?

ದೇವರ ಉಡುಗೊರೆ ಏಕೆ ವಿಶೇಷ?

3, 4. (ಎ) ಯಾರಾದರೂ ನಿಮಗೆ ಉಡುಗೊರೆ ಕೊಟ್ಟರೆ ನಿಮಗೆ ಹೇಗನಿಸುತ್ತದೆ? (ಬಿ) ಒಂದು ವಿಶೇಷ ಉಡುಗೊರೆ ನಿಮ್ಮ ಬದುಕನ್ನು ಹೇಗೆ ಬದಲಾಯಿಸಬಹುದು?

3 ಯಾರಾದರೂ ನಮಗೆ ಉಡುಗೊರೆ ಕೊಟ್ಟರೆ ನಮಗೆ ತುಂಬ ಖುಷಿಯಾಗುತ್ತದೆ. ಆದರೆ ಕೆಲವು ಉಡುಗೊರೆ ಎಷ್ಟು ವಿಶೇಷವೆಂದರೆ ಅವು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸುತ್ತವೆ. ನೆನಸಿ, ನೀವು ಏನೋ ಒಂದು ಅಪರಾಧ ಮಾಡಿ ಜೈಲಿನಲ್ಲಿದ್ದೀರಿ. ಕೋರ್ಟ್‌ ನಿಮಗೆ ಮರಣದಂಡನೆ ವಿಧಿಸಿದೆ. ನಿಸ್ಸಹಾಯಕ ಸ್ಥಿತಿಯಲ್ಲಿದ್ದೀರಿ. ಆಗ ನಿಮಗೆ ಪರಿಚಯವಿಲ್ಲದ ಯಾರೋ ಒಬ್ಬರು ಇದ್ದಕ್ಕಿದ್ದಂತೆ ಬಂದು, ‘ನೀವು ಸಾಯಬೇಡಿ, ನಿಮಗೆ ಬದಲಾಗಿ ನಾನು ಸಾಯುತ್ತೇನೆ’ ಎಂದು ಹೇಳುತ್ತಾನೆ! ಅವನು ತನ್ನ ಜೀವವನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತಿದ್ದಾನೆ. ಆಗ ನಿಮಗೆ ಹೇಗನಿಸುತ್ತದೆ?

4 ಪ್ರೀತಿಯಿಂದ ಕೊಟ್ಟ ಆ ವಿಶೇಷ ಉಡುಗೊರೆಗೆ ಪ್ರತಿಯಾಗಿ ನೀವು ಏನು ಮಾಡಲಿಕ್ಕೂ ಸಿದ್ಧರಿರುತ್ತೀರಿ. ನಿಮ್ಮನ್ನು ನೀವು ತಿದ್ದಿಕೊಂಡು ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೀರಿ. ಹೆಚ್ಚು ಧಾರಾಳವಾಗಿ ಕೊಡುತ್ತೀರಿ, ಹೆಚ್ಚು ಪ್ರೀತಿ ತೋರಿಸುತ್ತೀರಿ, ನಿಮ್ಮ ಜೊತೆ ಕೆಟ್ಟದ್ದಾಗಿ ನಡೆದುಕೊಂಡವರನ್ನೂ ಕ್ಷಮಿಸುತ್ತೀರಿ. ನಿಮಗೋಸ್ಕರ ಜೀವ ಕೊಟ್ಟ ಆ ವ್ಯಕ್ತಿಗೆ ಋಣಿಯಾಗಿದ್ದೀರೆಂದು ಜೀವನಪೂರ್ತಿ ತೋರಿಸಿಕೊಡುತ್ತೀರಿ.

5. ಯೆಹೋವನು ನಮಗಾಗಿ ಯೇಸುವನ್ನು ಕೊಟ್ಟದ್ದು ಬೇರೆಲ್ಲ ಉಡುಗೊರೆಗಳಿಗಿಂತ ಶ್ರೇಷ್ಠವೇಕೆ?

5 ಈ ಉದಾಹರಣೆಯಲ್ಲಿರುವ ಉಡುಗೊರೆಗಿಂತಲೂ ಯೆಹೋವನು ಕೊಟ್ಟ ಉಡುಗೊರೆಯು ಶ್ರೇಷ್ಠವಾಗಿದೆ. (1 ಪೇತ್ರ 3:18) ಏಕೆಂದು ಗಮನಿಸಿ. ನಾವೆಲ್ಲರೂ ಆದಾಮನಿಂದ ಪಾಪವನ್ನು ಪಡೆದಿರುವ ಕಾರಣ ನಮಗೆ ಮರಣದಂಡನೆ ಸಿಕ್ಕಿದೆ. (ರೋಮ. 5:12) ಆದರೆ ಯೆಹೋವನು ನಮ್ಮನ್ನು ತುಂಬ ಪ್ರೀತಿಸುವುದರಿಂದ ಯೇಸುವನ್ನು ಕಳುಹಿಸಿ ನಮ್ಮೆಲ್ಲರಿಗೋಸ್ಕರ ‘ಮರಣವನ್ನು ಅನುಭವಿಸುವಂತೆ’ ಮಾಡಿದನು. (ಇಬ್ರಿ. 2:9) ಆ ಉದಾಹರಣೆಯಲ್ಲಿನ ವ್ಯಕ್ತಿಯಂತೆ ಬರೀ ನಮ್ಮ ಸದ್ಯದ ಜೀವವನ್ನು ಉಳಿಸಿ ಬಿಟ್ಟುಬಿಡುವ ಬದಲು ನಾವು ಯಾವತ್ತೂ ಸಾಯದೆ ಇರಲಿಕ್ಕಾಗಿ ಯೆಹೋವನು ಮರಣವನ್ನೇ ನಾಶಮಾಡುವನು. (ಯೆಶಾ. 25:7, 8; 1 ಕೊರಿಂ. 15:22, 26) ಯೇಸುವಿನಲ್ಲಿ ನಂಬಿಕೆ ಇಡುವವರೆಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಎಂದೆಂದಿಗೂ ಜೀವಿಸುವರು. ಕೆಲವರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ರಾಜರಾಗಿ, ಇನ್ನಿತರರು ಈ ಭೂಮಿಯ ಮೇಲೆ ದೇವರ ರಾಜ್ಯದ ಪ್ರಜೆಗಳಾಗಿ ಇರುವರು. (ರೋಮ. 6:23; ಪ್ರಕ. 5:9, 10) ಯೆಹೋವನು ಕೊಟ್ಟ ಉಡುಗೊರೆಯಿಂದ ಬೇರೆ ಯಾವ ಆಶೀರ್ವಾದಗಳು ಸಿಗಲಿವೆ?

6. (ಎ) ಯೆಹೋವನ ಉಡುಗೊರೆಯಿಂದ ಸಿಗಲಿರುವ ಆಶೀರ್ವಾದಗಳಲ್ಲಿ ನಿಮಗೆ ಯಾವುದು ಇಷ್ಟ? (ಬಿ) ಆ ಉಡುಗೊರೆ ನಾವು ಯಾವ ಮೂರು ವಿಷಯಗಳನ್ನು ಮಾಡುವಂತೆ ಪ್ರೇರಣೆ ನೀಡಬೇಕು?

6 ಈ ಭೂಮಿಯು ಪರದೈಸ್‌ ಆಗಲಿದೆ. ಜನರ ಕಾಯಿಲೆಗಳು ವಾಸಿಯಾಗಲಿವೆ. ಸತ್ತವರ ಪುನರುತ್ಥಾನ ಆಗಲಿದೆ. (ಯೆಶಾ. 33:24; 35:5, 6; ಯೋಹಾ. 5:28, 29) ನಿಜಕ್ಕೂ ಯೆಹೋವನು ಕೊಟ್ಟದ್ದು ‘ವರ್ಣಿಸಲಸಾಧ್ಯವಾದ ಉಚಿತ’ ಉಡುಗೊರೆಯೇ. ಇದಕ್ಕಾಗಿ ನಾವು ಆತನನ್ನು ಮತ್ತು ಆತನ ಪ್ರಿಯ ಮಗನನ್ನು ತುಂಬ ಪ್ರೀತಿಸುತ್ತೇವೆ. ಈಗ ಪ್ರಶ್ನೆಯೇನೆಂದರೆ ಆ ಉಡುಗೊರೆಯು ನಾವೇನು ಮಾಡುವಂತೆ ಪ್ರೇರಣೆ ನೀಡಬೇಕು? (1) ಯೇಸು ಕ್ರಿಸ್ತನನ್ನು ನಿಕಟವಾಗಿ ಅನುಕರಿಸಲು, (2) ನಮ್ಮ ಸಹೋದರರನ್ನು ಪ್ರೀತಿಸಲು, (3) ಮನದಾಳದಿಂದ ಇತರರನ್ನು ಕ್ಷಮಿಸಲು ಪ್ರೇರಣೆ ನೀಡಬೇಕು. ಹೇಗೆಂದು ನೋಡೋಣ.

“ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ”

7, 8. (ಎ) ಕ್ರಿಸ್ತನ ಪ್ರೀತಿಯ ಬಗ್ಗೆ ನಮ್ಮಲ್ಲಿ ಯಾವ ಭಾವನೆ ಇರಬೇಕು? (ಬಿ) ನಾವೇನು ಮಾಡುವಂತೆ ಆ ಪ್ರೀತಿ ಪ್ರೇರಿಸಬೇಕು?

7 ಮೊದಲನೇದಾಗಿ ಯೆಹೋವನ ಪ್ರೀತಿಯು ನಾವು ಕ್ರಿಸ್ತನಿಗೆ ಗೌರವ ತರುವ ಹಾಗೆ ಜೀವಿಸುವಂತೆ ಪ್ರೇರಿಸಬೇಕು. “ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ” ಎಂದು ಅಪೊಸ್ತಲ ಪೌಲ ಹೇಳಿದನು. (2 ಕೊರಿಂಥ 5:14, 15 ಓದಿ.) ಯೇಸು ತೋರಿಸಿದ ಪ್ರೀತಿಯು, ನಾವು ಆತನನ್ನು ಪ್ರೀತಿಸುವಂತೆ ಮತ್ತು ಗೌರವಿಸುವಂತೆ ಒತ್ತಾಯಮಾಡುತ್ತದೆ ಅಂದರೆ ಪ್ರೇರಣೆ ನೀಡುತ್ತದೆಂದು ಪೌಲ ಹೇಳಿದನು. ಯೆಹೋವನು ನಮಗಾಗಿ ಎಂಥ ತ್ಯಾಗವನ್ನು ಮಾಡಿದ್ದಾನೆ, ಎಷ್ಟು ಪ್ರೀತಿ ತೋರಿಸಿದ್ದಾನೆ ಎಂದು ನಾವು ಪೂರ್ಣವಾಗಿ ಅರ್ಥಮಾಡಿಕೊಂಡರೆ ಯೇಸುವನ್ನು ಗೌರವಿಸುತ್ತೇವೆಂದು ತೋರಿಸುವ ರೀತಿಯಲ್ಲಿ ಜೀವಿಸಲು ನಮಗೆ ಪ್ರೇರಣೆ ಸಿಗುತ್ತದೆ. ಆ ರೀತಿ ಜೀವಿಸುವುದು ಹೇಗೆ?

8 ಯೇಸುವಿನ ಆತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವ ಅಂದರೆ ಆತನ ಮಾದರಿಯನ್ನು ಅನುಕರಿಸುವ ಮೂಲಕ. (1 ಪೇತ್ರ 2:21; 1 ಯೋಹಾ. 2:6) ನಾವು ದೇವರಿಗೂ ಕ್ರಿಸ್ತನಿಗೂ ವಿಧೇಯರಾಗುವಾಗ ಅವರನ್ನು ಪ್ರೀತಿಸುತ್ತೇವೆಂದು ತೋರಿಸುತ್ತೇವೆ. ಯೇಸು ಇದನ್ನೇ ಹೇಳಿದನು: “ನನ್ನ ಆಜ್ಞೆಗಳನ್ನು ಹೊಂದಿದ್ದು ಅವುಗಳನ್ನು ಕೈಕೊಳ್ಳುವವನೇ ನನ್ನನ್ನು ಪ್ರೀತಿಸುವವನಾಗಿದ್ದಾನೆ. ನನ್ನನ್ನು ಪ್ರೀತಿಸುವವನು ತಂದೆಯಿಂದ ಪ್ರೀತಿಸಲ್ಪಡುವನು ಮತ್ತು ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಸ್ಪಷ್ಟವಾಗಿ ತೋರಿಸಿಕೊಳ್ಳುವೆನು.”—ಯೋಹಾ. 14:21; 1 ಯೋಹಾ. 5:3.

9. ನಮಗೆ ಯಾವ ಒತ್ತಡಗಳು ಇವೆ?

9 ಕ್ರಿಸ್ತನ ಮರಣದ ಸ್ಮರಣೆಯ ಈ ಸಮಯಾವಧಿಯಲ್ಲಿ ನಮ್ಮ ಜೀವನರೀತಿಯ ಬಗ್ಗೆ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ನಾನು ಯಾವೆಲ್ಲ ವಿಷಯಗಳಲ್ಲಿ ಈಗಾಗಲೇ ಯೇಸುವನ್ನು ಅನುಕರಿಸುತ್ತಿದ್ದೇನೆ? ಯಾವ ವಿಷಯಗಳಲ್ಲಿ ಇನ್ನೂ ಪ್ರಗತಿ ಮಾಡಬೇಕಿದೆ?’ ಹೀಗೆ ಸ್ವಪರೀಕ್ಷೆ ಮಾಡುವುದು ಪ್ರಾಮುಖ್ಯ ಏಕೆಂದರೆ ಈ ಲೋಕವು ನಾವು ಅದರಂತೆ ಜೀವಿಸಬೇಕೆಂದು ಬಯಸುತ್ತದೆ. (ರೋಮ. 12:2) ನಾವು ಒಂದುವೇಳೆ ಜಾಗ್ರತೆ ವಹಿಸದಿದ್ದರೆ ಈ ಲೋಕದ ತತ್ವಜ್ಞಾನಿಗಳು, ಹೆಸರಾಂತ ವ್ಯಕ್ತಿಗಳು ಮತ್ತು ಕ್ರೀಡಾ ಜಗತ್ತಿನ ಹೀರೋಗಳನ್ನು ಅನುಕರಿಸುವ ಒತ್ತಡಕ್ಕೆ ಮಣಿದು ಬಿಡುವೆವು. (ಕೊಲೊ. 2:8; 1 ಯೋಹಾ. 2:15-17) ಅವರನ್ನು ಅನುಕರಿಸದೆ ಇರಲು ನಾವೇನು ಮಾಡಬಹುದು?

10. (ಎ) ಕ್ರಿಸ್ತನ ಮರಣದ ಈ ಸಮಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? (ಬಿ) ಈ ಪ್ರಶ್ನೆಗಳು ಏನು ಮಾಡುವಂತೆ ನಮ್ಮನ್ನು ಪ್ರೇರಿಸಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

10 ನಾವು ಧರಿಸುವ ಬಟ್ಟೆ, ನೋಡುವ ಸಿನೆಮಾ, ಕೇಳುವ ಹಾಡುಗಳ ಬಗ್ಗೆ ಮತ್ತು ನಮ್ಮ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ಗಳಲ್ಲಿ ಏನಿದೆ ಎಂಬ ಬಗ್ಗೆ ಸ್ಮರಣೆಯ ಸಮಯಾವಧಿಯಲ್ಲಿ ಪರೀಕ್ಷಿಸಿಕೊಳ್ಳುವುದು ಒಳ್ಳೇದು. ಹೀಗೆ ಕೇಳಿಕೊಳ್ಳಿ: ‘ಯೇಸು ಒಂದುವೇಳೆ ಇಲ್ಲಿ ಬಂದ್ರೆ ನಾನು ಹಾಕಿರುವ ಬಟ್ಟೆಯಿಂದಾಗಿ ನನಗೆ ಅವನ ಮುಂದೆ ನಿಲ್ಲಲು ಮುಜುಗರ ಆಗಬಹುದಾ? ನಾನು ಧರಿಸಿರುವ ಬಟ್ಟೆ ನಾನು ಯೇಸುವಿನ ಶಿಷ್ಯನೆಂದು ತೋರಿಸುತ್ತದಾ?’ (1 ತಿಮೊಥೆಯ 2:9, 10 ಓದಿ.) ‘ನಾನು ನೋಡುವ ಸಿನೆಮಾಗಳನ್ನು ನೋಡಲು, ಕೇಳಿಸಿಕೊಳ್ಳುವ ಹಾಡುಗಳನ್ನು ಕೇಳಲು ಯೇಸು ಇಷ್ಟಪಡುವನಾ? ಯೇಸು ನನ್ನ ಮೊಬೈಲ್‌ ಅಥವಾ ಟ್ಯಾಬ್‌ನಲ್ಲಿ ಇರೋದನ್ನು ನೋಡಿದರೆ ನನಗೆ ನಾಚಿಕೆಯಾಗಬಹುದಾ? ನಾನು ಆಡುತ್ತಿರುವ ವಿಡಿಯೋ ಗೇಮ್‌ಗಳು ನನಗೇಕೆ ಇಷ್ಟವೆಂದು ಯೇಸುವಿಗೆ ತಿಳಿಸಲು ನನಗೆ ಕಷ್ಟವಾಗಬಹುದಾ?’ ಕ್ರೈಸ್ತನಿಗೆ ಯೋಗ್ಯವಲ್ಲದ ಯಾವುದನ್ನೇ ಆಗಲಿ ಅದಕ್ಕೆಷ್ಟೇ ಬೆಲೆಯಿರಲಿ ಅದನ್ನು ಎಸೆದುಬಿಡಲು ಯೆಹೋವನ ಮೇಲೆ ನಮಗಿರುವ ಪ್ರೀತಿಯು ಪ್ರೇರಣೆ ನೀಡಬೇಕು. (ಅ. ಕಾ. 19:19, 20) ನಾವು ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡಾಗ ಕ್ರಿಸ್ತನಿಗೆ ಗೌರವ ತರುವ ರೀತಿಯಲ್ಲಿ ಜೀವಿಸುತ್ತೇವೆಂದು ಮಾತುಕೊಟ್ಟೆವು. ಆದ್ದರಿಂದ ಯೇಸುವನ್ನು ಅನುಕರಿಸಲು ನಮಗೆ ಕಷ್ಟವನ್ನಾಗಿ ಮಾಡುವ ಯಾವುದನ್ನೂ ನಾವು ಇಟ್ಟುಕೊಳ್ಳಬಾರದು.—ಮತ್ತಾ. 5:29, 30; ಫಿಲಿ. 4:8.

11. (ಎ) ಯೆಹೋವನ ಮತ್ತು ಯೇಸುವಿನ ಮೇಲೆ ನಮಗಿರುವ ಪ್ರೀತಿಯು ಸೇವೆಯಲ್ಲಿ ಏನು ಮಾಡುವಂತೆ ಪ್ರೇರಣೆ ನೀಡಬೇಕು? (ಬಿ) ಸಭೆಯಲ್ಲಿ ಇತರರಿಗೆ ಸಹಾಯ ಮಾಡುವಂತೆ ಪ್ರೀತಿಯು ನಮ್ಮನ್ನು ಹೇಗೆ ಪ್ರೇರಿಸಬೇಕು?

11 ಯೇಸುವಿನ ಮೇಲೆ ನಮಗಿರುವ ಪ್ರೀತಿಯು ಹುರುಪಿನಿಂದ ಸಾರುವಂತೆ ಮತ್ತು ಬೋಧಿಸುವಂತೆ ಸಹ ಪ್ರೇರಣೆ ನೀಡಬೇಕು. (ಮತ್ತಾ. 28:19, 20; ಲೂಕ 4:43) ಸ್ಮರಣೆಯ ಸಮಯದಲ್ಲಿ ಸಹಾಯಕ ಪಯನೀಯರರಾಗಿ 30 ಅಥವಾ 50 ತಾಸು ಸೇವೆ ಮಾಡಲು ನಿಮ್ಮ ಕೆಲಸಕಾರ್ಯಗಳನ್ನು ಹೊಂದಿಸಿಕೊಳ್ಳಬಹುದಾ? 84 ವರ್ಷ ಪ್ರಾಯದ ಒಬ್ಬ ವಿಧುರ ಸಹೋದರ ತನ್ನ ವಯಸ್ಸು ಮತ್ತು ಅನಾರೋಗ್ಯದ ಕಾರಣ ಪಯನೀಯರ್‌ ಸೇವೆ ಮಾಡಲು ಆಗುವುದಿಲ್ಲವೆಂದು ನೆನಸಿದರು. ಆದರೆ ಅವರ ಮನೆಯ ಹತ್ತಿರದಲ್ಲಿದ್ದ ಪಯನೀಯರರು ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ಆ ವೃದ್ಧ ಸಹೋದರರಿಗೆ ಅನುಕೂಲವಾಗುವ ಸೇವಾ ಕ್ಷೇತ್ರವನ್ನು ಆರಿಸಿಕೊಂಡು ಅವರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಸೇವೆ ಮಾಡಿದರು. ಇದರಿಂದಾಗಿ ಅವರಿಗೆ 30 ತಾಸು ಸೇವೆ ಮಾಡಲು ಆಯಿತು. ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ಪಯನೀಯರ್‌ ಸೇವೆ ಮಾಡಲು ನೀವು ಕೂಡ ನಿಮ್ಮ ಸಭೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಬಹುದಾ? ಪಯನೀಯರ್‌ ಸೇವೆ ಮಾಡಲು ಪ್ರತಿಯೊಬ್ಬರಿಂದಲೂ ಸಾಧ್ಯವಿಲ್ಲ ನಿಜ. ನಿಮಗೆ ಆಗದಿದ್ದರೆ ನಿಮ್ಮ ಸಮಯ, ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಸೇವೆಯನ್ನು ಹೆಚ್ಚಿಸಿ. ಆಗ ಪೌಲನಂತೆ ನಮಗೂ ಕ್ರಿಸ್ತನ ಪ್ರೀತಿಯು ಒತ್ತಾಯ ಮಾಡುತ್ತದೆಂದು ತೋರಿಸಬಹುದು. ದೇವರ ಪ್ರೀತಿಯು ಇನ್ನೇನು ಮಾಡುವಂತೆ ನಮಗೆ ಪ್ರೇರಣೆ ನೀಡಬೇಕು?

ಒಬ್ಬರನ್ನೊಬ್ಬರು ಪ್ರೀತಿಸುವ ಹಂಗು ನಮಗಿದೆ

12. ದೇವರು ತೋರಿಸಿದ ಪ್ರೀತಿಯು ನಾವು ಏನು ಮಾಡುವಂತೆ ಪ್ರೇರಣೆ ನೀಡಬೇಕು?

12 ಎರಡನೇದಾಗಿ, ದೇವರು ತೋರಿಸಿರುವ ಪ್ರೀತಿಯು ನಾವು ಸಹೋದರರನ್ನು ಪ್ರೀತಿಸುವಂತೆ ಪ್ರೇರಣೆ ನೀಡಬೇಕು. ಅಪೊಸ್ತಲ ಯೋಹಾನನು ಹೀಗೆ ಬರೆದನು: “ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿರುವಲ್ಲಿ, ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.” (1 ಯೋಹಾ. 4:7-11) ಹಾಗಾದರೆ ನಾವು ದೇವರನ್ನು ಪ್ರೀತಿಸುತ್ತೇವಾದರೆ ನಮ್ಮ ಸಹೋದರರನ್ನು ಸಹ ಪ್ರೀತಿಸಬೇಕು. (1 ಯೋಹಾ. 3:16) ಅವರನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸಬಹುದು?

13. ಜನರನ್ನು ಪ್ರೀತಿಸುವ ವಿಷಯದಲ್ಲಿ ಯೇಸು ಯಾವ ಮಾದರಿಯನ್ನು ಇಟ್ಟಿದ್ದಾನೆ?

13 ಈ ವಿಷಯದಲ್ಲೂ ಯೇಸು ನಮಗೆ ಒಳ್ಳೇ ಮಾದರಿ. ಆತನು ಭೂಮಿಯ ಮೇಲಿದ್ದಾಗ ಜನರಿಗೆ ಅದರಲ್ಲೂ ದೀನದಲಿತರಿಗೆ ಸಹಾಯ ಮಾಡಿದನು. ರೋಗಿಗಳನ್ನು, ಕುಂಟರನ್ನು, ಕುರುಡರನ್ನು, ಕಿವುಡರನ್ನು, ಮೂಕರನ್ನು ಗುಣಪಡಿಸಿದನು. (ಮತ್ತಾ. 11:4, 5) ದೇವರ ಬಗ್ಗೆ ಕಲಿಯಲು ಮನಸ್ಸಿದ್ದ ಜನರಿಗೆ ಯೇಸು ಸಂತೋಷದಿಂದ ಬೋಧಿಸಿದನು. ಆ ದಿನದಲ್ಲಿದ್ದ ಧರ್ಮಗುರುಗಳಂತೆ ಆ ಜನರನ್ನು ‘ಶಾಪಗ್ರಸ್ತರೆಂದು’ ಆತನು ನೆನಸಲಿಲ್ಲ. (ಯೋಹಾ. 7:49) ಆ ದೀನ ಜನರನ್ನು ಪ್ರೀತಿಸಿದನು. ಅವರಿಗೆ ಸಹಾಯ ಮಾಡಲು ತನ್ನೆಲ್ಲ ಸಮಯ, ಶಕ್ತಿಯನ್ನು ಕೊಟ್ಟನು.—ಮತ್ತಾ. 20:28.

ಒಬ್ಬ ವೃದ್ಧ ಸಹೋದರ ಅಥವಾ ಸಹೋದರಿಗೆ ಸೇವೆ ಮಾಡಲು ನೀವು ಸಹಾಯ ಮಾಡುವಿರಾ? (ಪ್ಯಾರ 14 ನೋಡಿ)

14. ಸಹೋದರರಿಗೆ ಪ್ರೀತಿ ತೋರಿಸಲು ನೀವೇನು ಮಾಡಬಹುದು?

14 ಈ ವಿಷಯದಲ್ಲೂ ಯೇಸುವನ್ನು ಅನುಕರಿಸಲು ನಿಮ್ಮ ಸಭೆಯಲ್ಲಿರುವವರಿಗೆ ಹೇಗೆ ಸಹಾಯ ಮಾಡಬಹುದೆಂದು ಸ್ಮರಣೆಯ ಸಮಯಾವಧಿಯಲ್ಲಿ ಯೋಚಿಸಿ. ಉದಾಹರಣೆಗೆ, ವೃದ್ಧ ಸಹೋದರ ಸಹೋದರಿಯರ ಬಗ್ಗೆ ಯೋಚಿಸಿ. ನೀವು ಅವರ ಮನೆಗೆ ಹೋಗಿ ಅವರನ್ನು ಭೇಟಿಮಾಡಬಹುದು. ಏನಾದರೂ ಅಡುಗೆ ಮಾಡಿ ಕೊಡಬಹುದು, ಅವರ ಮನೆಕೆಲಸಗಳನ್ನು ಮಾಡಿಕೊಡಬಹುದು, ನಿಮ್ಮ ವಾಹನದಲ್ಲಿ ಕೂಟಗಳಿಗೆ ಕರೆದುಕೊಂಡು ಹೋಗಬಹುದು. ನಿಮ್ಮ ಜೊತೆ ಸೇವೆಗೆ ಕರೆದುಕೊಂಡು ಹೋಗಬಹುದು. (ಲೂಕ 14:12-14 ಓದಿ.) ದೇವರು ತೋರಿಸಿರುವ ಪ್ರೀತಿಯು ನಾವು ಸಹೋದರರಿಗೆ ಪ್ರೀತಿ ತೋರಿಸುವಂತೆ ಪ್ರೇರಣೆ ನೀಡಲಿ!

ನಮ್ಮ ಸಹೋದರ ಸಹೋದರಿಯರಿಗೆ ಕರುಣೆ ತೋರಿಸೋಣ

15. ಏನನ್ನು ನಾವು ಯಾವತ್ತೂ ಮರೆಯಬಾರದು?

15 ಮೂರನೇದಾಗಿ, ಯೆಹೋವನ ಪ್ರೀತಿಯು ಸಹೋದರ ಸಹೋದರಿಯರನ್ನು ಕ್ಷಮಿಸುವಂತೆ ನಮಗೆ ಪ್ರೇರಣೆ ನೀಡಬೇಕು. ಆದಾಮನಿಂದ ನಮಗೆಲ್ಲರಿಗೂ ಪಾಪಮರಣ ಬಂದಿದೆ. ಹಾಗಾಗಿ ಯಾರೂ “ನನಗೆ ಯೇಸುವಿನ ಯಜ್ಞ ಬೇಕಾಗಿಲ್ಲ” ಎಂದು ಹೇಳಸಾಧ್ಯವಿಲ್ಲ. ತುಂಬ ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡುವವರಿಗೆ ಸಹ ಯೇಸುವಿನ ಯಜ್ಞ ಬೇಕಿದೆ. ನಮ್ಮಲ್ಲಿ ಪ್ರತಿಯೊಬ್ಬರ ಪಾಪವೆಂಬ ದೊಡ್ಡ ಸಾಲವನ್ನು ದೇವರು ಮನ್ನ ಮಾಡಿದ್ದಾನೆಂದು ನಾವು ಯಾವತ್ತೂ ಮರೆಯಬಾರದು. ಏಕೆ? ಉತ್ತರ ಯೇಸು ತಿಳಿಸಿದ ಒಂದು ದೃಷ್ಟಾಂತದಲ್ಲಿದೆ.

16, 17. (ಎ) ಅರಸ ಮತ್ತು ಸೇವಕರ ದೃಷ್ಟಾಂತದಿಂದ ನಾವೇನು ಕಲಿಯಬೇಕು? (ಬಿ) ಈ ದೃಷ್ಟಾಂತದ ಕುರಿತು ಧ್ಯಾನಿಸಿದ ನಂತರ ನೀವೇನು ಮಾಡಲು ನಿರ್ಣಯಿಸಿದ್ದೀರಿ?

16 ಆ ದೃಷ್ಟಾಂತ ಹೀಗಿತ್ತು: ಒಬ್ಬ ಅರಸನು ತನ್ನ ಸೇವಕನು ಕೊಡಬೇಕಿದ್ದ 6 ಕೋಟಿ ದಿನಾರುಗಳ ದೊಡ್ಡ ಸಾಲವನ್ನು ಮನ್ನಾ ಮಾಡಿ ಅವನಿಗೆ ಕರುಣೆ ತೋರಿಸಿದನು. ಆದರೆ ಆ ಸೇವಕನು ತನಗೆ ಬರೀ 100 ದಿನಾರು ಸಾಲ ತೀರಿಸಬೇಕಿದ್ದ ಸೇವಕನಿಗೆ ಕರುಣೆ ತೋರಿಸಲಿಲ್ಲ. ಅರಸನು ಅವನನ್ನು ಕ್ಷಮಿಸಿದ್ದರೂ ಅವನು ತನ್ನ ಜೊತೆ ಸೇವಕನನ್ನು ಕ್ಷಮಿಸಲಿಲ್ಲ. ಇದನ್ನು ಕೇಳಿಸಿಕೊಂಡಾಗ ಅರಸನಿಗೆ ತುಂಬ ಕೋಪಬಂದು ಹೀಗಂದನು: “ದುಷ್ಟ ಆಳೇ, ನೀನು ಬೇಡಿಕೊಂಡಾಗ ನಾನು ನಿನ್ನ ಸಾಲವನ್ನೆಲ್ಲ ರದ್ದುಮಾಡಿದೆ. ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಆಳಿನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೆ?” (ಮತ್ತಾ. 18:23-35) ಆ ಅರಸನಂತೆ ಯೆಹೋವನು ನಮ್ಮ ದೊಡ್ಡ ಸಾಲವನ್ನು ರದ್ದುಮಾಡಿ ನಮಗೆ ಪ್ರೀತಿ, ಕರುಣೆ ತೋರಿಸಿದ್ದಾನೆ. ಇದು ಏನು ಮಾಡುವಂತೆ ನಮಗೆ ಪ್ರೇರಣೆ ನೀಡಬೇಕು?

17 ಕ್ರಿಸ್ತನ ಸ್ಮರಣೆಗೆ ನಾವು ಸಿದ್ಧರಾಗುತ್ತಿರುವಾಗ ಹೀಗೆ ಕೇಳಿಕೊಳ್ಳುವುದು ಸೂಕ್ತ: ‘ಸಭೆಯಲ್ಲಿ ಯಾರಾದರೊಬ್ಬರು ನನ್ನ ಮನನೋಯಿಸಿದ್ದಾರಾ? ಅವರನ್ನು ಕ್ಷಮಿಸಲು ನನಗೆ ಕಷ್ಟ ಆಗುತ್ತಿದೆಯಾ?’ ಹಾಗಿದ್ದರೆ, ಕ್ಷಮಿಸಲು ಸಿದ್ಧನಾಗಿರುವ ಯೆಹೋವನನ್ನು ಅನುಕರಿಸಲು ಇದು ಒಳ್ಳೇ ಸಮಯ. (ನೆಹೆ. 9:17; ಕೀರ್ತ. 86:5) ಯೆಹೋವನ ಮಹಾ ಕರುಣೆಗೆ ನಾವು ಬೆಲೆ ಕೊಡುತ್ತೇವಾದರೆ ಖಂಡಿತವಾಗಿಯೂ ಬೇರೆಯವರಿಗೆ ಕರುಣೆ ತೋರಿಸಿ ಹೃದಯದಾಳದಿಂದ ಅವರನ್ನು ಕ್ಷಮಿಸುತ್ತೇವೆ. ನಾವು ನಮ್ಮ ಸಹೋದರರನ್ನು ಪ್ರೀತಿಸದಿದ್ದರೆ, ಕ್ಷಮಿಸದಿದ್ದರೆ ಯೆಹೋವನ ಪ್ರೀತಿ ಮತ್ತು ಕ್ಷಮೆ ನಮಗೆ ಸಿಗುವುದಿಲ್ಲ. (ಮತ್ತಾ. 6:14, 15) ಆಗಿ ಹೋದದ್ದನ್ನು ನಾವು ಹಿಂದಕ್ಕೆ ಹೋಗಿ ಸರಿಮಾಡಲು ಆಗುವುದಿಲ್ಲ ನಿಜ, ಆದರೆ ಕ್ಷಮಿಸೋದರಿಂದ ನಾವು ಮುಂದಕ್ಕೆ ಸಂತೋಷವಾಗಿ ಇರಬಹುದು.

18. ಒಬ್ಬ ಸಹೋದರಿಗೆ ಇನ್ನೊಬ್ಬ ಸಹೋದರಿಯ ಕುಂದುಕೊರತೆಗಳನ್ನು ಸಹಿಸಿಕೊಳ್ಳುವಂತೆ ದೇವರ ಪ್ರೀತಿಯು ಹೇಗೆ ಸಹಾಯ ಮಾಡಿತು?

18 ನಮ್ಮ ಸಹೋದರ ಸಹೋದರಿಯರ ಕುಂದುಕೊರತೆಗಳನ್ನು ಸಹಿಸಿಕೊಳ್ಳುವುದು ಕೆಲವೊಮ್ಮೆ ಕಷ್ಟ ಆಗಬಹುದು. (ಕೊಲೊಸ್ಸೆ 3:13, 14; ಎಫೆಸ 4:32 ಓದಿ.) ಲಿಲ್ಲಿ ಎಂಬ ಸಹೋದರಿಯ ಉದಾಹರಣೆ ಗಮನಿಸಿ. [1] (ಕೊನೆ ಟಿಪ್ಪಣಿ ನೋಡಿ.) ಕ್ಯಾರಲ್‌ ಎಂಬ ವಿಧವೆ ಸಹೋದರಿಗೆ ಆಕೆ ಸಹಾಯ ಮಾಡುತ್ತಿದ್ದಳು. ಕ್ಯಾರಲ್‌ಗೆ ಎಲ್ಲಾದರೂ ಹೋಗಬೇಕಿದ್ದರೆ ತನ್ನ ವಾಹನದಲ್ಲಿ ಕರಕೊಂಡು ಹೋಗುತ್ತಿದ್ದಳು, ಏನಾದರು ಬೇಕಿದ್ದರೆ ತಂದುಕೊಡುತ್ತಿದ್ದಳು. ಹೀಗೆ ಬೇರೆಬೇರೆ ಕೆಲಸಗಳನ್ನು ಮಾಡಿಕೊಡುತ್ತಿದ್ದಳು. ಇಷ್ಟೆಲ್ಲಾ ಮಾಡಿದರೂ ಕ್ಯಾರಲ್‌ ಏನಾದರೂ ತಪ್ಪು ಹುಡುಕುತ್ತಿದ್ದರು. ಅವರಿಗೆ ಸಹಾಯ ಮಾಡುವುದು ಕಷ್ಟವಾಗುತ್ತಿತ್ತು. ಆದರೂ ಅವರಲ್ಲಿದ್ದ ಒಳ್ಳೇ ಗುಣಗಳಿಗೆ ಲಿಲ್ಲಿ ಗಮನಕೊಟ್ಟಳು. ಕ್ಯಾರಲ್‌ ತುಂಬ ಕಾಯಿಲೆ ಬಿದ್ದು ಸಾಯುವ ವರೆಗೂ ಎಷ್ಟೋ ವರ್ಷ ಅವರ ಸೇವೆ ಮಾಡಿದಳು. ಲಿಲ್ಲಿ ಹೇಳುತ್ತಾಳೆ: “ಕ್ಯಾರಲ್‌ ಪುನರುತ್ಥಾನ ಆಗಿ ಬರುವಾಗ ನನಗೆ ಅವರನ್ನು ನೋಡಬೇಕಂತ ಆಸೆ. ಅವರು ಪರಿಪೂರ್ಣರಾದಾಗ ಅವರನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಅಂತ ತುಂಬ ಮನಸ್ಸಿದೆ.” ಲಿಲ್ಲಿಗೆ ಆದಂತೆ ನಮಗೂ ಜೊತೆ ಕ್ರೈಸ್ತರ ಬಲಹೀನತೆಗಳನ್ನು ಸಹಿಸಿಕೊಳ್ಳಲು ಮತ್ತು ಅಪರಿಪೂರ್ಣತೆಯೇ ಇಲ್ಲದಿರುವ ಸಮಯಕ್ಕಾಗಿ ಎದುರುನೋಡಲು ದೇವರ ಪ್ರೀತಿಯು ಪ್ರೇರಣೆ ನೀಡುತ್ತದೆ.

19. ವರ್ಣಿಸಲು ಅಸಾಧ್ಯವಾದ ದೇವರ ಉಡುಗೊರೆಯು ಏನು ಮಾಡುವಂತೆ ನಿಮಗೆ ಪ್ರೇರಣೆ ನೀಡುತ್ತದೆ?

19 ಯೆಹೋವನು ನಮಗೆ ಕೊಟ್ಟಿರುವ ಉಡುಗೊರೆಯು ನಿಜಕ್ಕೂ ವರ್ಣಿಸಲು ಅಸಾಧ್ಯ. ನಾವು ಯಾವಾಗಲೂ ಅದಕ್ಕೆ ಕೃತಜ್ಞತೆ ತೋರಿಸುತ್ತಿರೋಣ. ಯೆಹೋವ ಮತ್ತು ಯೇಸು ನಮಗಾಗಿ ಏನೆಲ್ಲಾ ಮಾಡಿದ್ದಾರೆಂದು ಧ್ಯಾನಿಸಲು ಸ್ಮರಣೆಯ ಸಮಯಾವಧಿಯು (ಮಾರ್ಚ್‌-ಮೇ) ಉತ್ತಮ ಸಮಯ. ಅವರಿಬ್ಬರೂ ನಮಗೆ ತೋರಿಸಿರುವ ಪ್ರೀತಿಯು ಯೇಸುವನ್ನು ನಿಕಟವಾಗಿ ಅನುಕರಿಸಲು, ಸಹೋದರರಿಗೆ ಪ್ರೀತಿ ತೋರಿಸಲು, ಅವರನ್ನು ಕ್ಷಮಿಸಲು ನಮಗೆ ಪ್ರೇರಣೆ ನೀಡಲಿ.

^ [1] (ಪ್ಯಾರ 18) ಹೆಸರುಗಳನ್ನು ಬದಲಾಯಿಸಲಾಗಿದೆ.