ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರಿಕೆಗೆ ಕಿವಿಗೊಡಿ ಜೀವ ಕಾಪಾಡಿಕೊಳ್ಳಿ!

ಎಚ್ಚರಿಕೆಗೆ ಕಿವಿಗೊಡಿ ಜೀವ ಕಾಪಾಡಿಕೊಳ್ಳಿ!

ಡಿಸೆಂಬರ್‌ 26, 2004⁠ರಂದು ಸಂಭವಿಸಿದ 9.1⁠ರಷ್ಟು ತೀವ್ರತೆಯ ಭೂಕಂಪ ಇಂಡೋನೇಶಿಯದಲ್ಲಿರುವ ಸುಮಾತ್ರದ ವಾಯುವ್ಯ ಕರಾವಳಿಯಿಂದಾಚೆ ಇರುವ ಸೀಮಲು ದ್ವೀಪವನ್ನೇ ಅಲುಗಾಡಿಸಿತು. ತಕ್ಷಣ ಎಲ್ಲರೂ ಸಮುದ್ರದ ಕಡೆಗೆ ನೋಡಿದರು. ಆಗ ಸಮುದ್ರದ ನೀರಿನ ಮಟ್ಟ ತುಂಬ ಕಡಿಮೆಯಾಗುತ್ತಾ ಇರುವುದನ್ನು ಕಂಡರು. ಕೂಡಲೇ ಎಲ್ಲರೂ “ಸ್ಮೋನ್‌!, ಸ್ಮೋನ್‌!” ಅಂದರೆ ಸುನಾಮಿ, ಸುನಾಮಿ ಎಂದು ಕೂಗುತ್ತಾ ಬೆಟ್ಟ-ಗುಡ್ಡಗಳಿಗೆ ಓಡಲಾರಂಭಿಸಿದರು. ಸುಮಾರು 30 ನಿಮಿಷಗಳ ನಂತರ, ರಕ್ಕಸ ಅಲೆಗಳು ಬಂದು ಹೆಚ್ಚಿನ ಮನೆಗಳನ್ನು ಮತ್ತು ಊರುಗಳನ್ನು ನಾಶಮಾಡಿದವು.

ದೈತ್ಯಾಕಾರದ ಸುನಾಮಿ ಅಲೆಗಳು ಮೊದಲು ಬಂದು ಬಡಿದದ್ದೇ ಸೀಮಲು ದ್ವೀಪಕ್ಕೆ. ಆದರೆ, ಅಲ್ಲಿದ್ದ 78 ಸಾವಿರ ನಿವಾಸಿಗಳಲ್ಲಿ 7 ಜನ ಮಾತ್ರ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಬೇರೆ ಸ್ಥಳಗಳಿಗೆ ಹೋಲಿಸಿದರೆ ಈ ಸಂಖ್ಯೆ ತುಂಬ ಕಡಿಮೆ. * ಇದಕ್ಕೆ ಕಾರಣವೇನು? ಈ ದ್ವೀಪದ ಜನರಿಗೆ ಒಂದು ಮಾತು ಚಿರಪರಿಚಿತವಾಗಿತ್ತು. ಅದೇನೆಂದರೆ, ‘ಭೂಮಿ ತುಂಬ ಜೋರಾಗಿ ಕಂಪಿಸಿ, ಸಮುದ್ರದ ನೀರು ಕಡಿಮೆಯಾಗುತ್ತಿದ್ದರೆ, ತಕ್ಷಣ ಬೆಟ್ಟ-ಗುಡ್ಡಗಳಿಗೆ ಓಡಿಹೋಗಬೇಕು. ಯಾಕೆಂದರೆ ದೈತ್ಯಾಕಾರದ ಅಲೆಗಳು ಬಂದು ಬಡಿಯುತ್ತವೆ.’ ಸಮುದ್ರದಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಸುನಾಮಿ ಬರುತ್ತದೆಂದು ಅಲ್ಲಿನ ಜನರು ತಮ್ಮ ಅನುಭವದಿಂದ ತಿಳಿದುಕೊಂಡಿದ್ದರು. ಎಚ್ಚರಿಕೆಗೆ ಕಿವಿಗೊಟ್ಟದ್ದರಿಂದ ಅವರು ತಮ್ಮ ಜೀವಗಳನ್ನು ಕಾಪಾಡಿಕೊಂಡರು.

ಬಲುಬೇಗನೆ ಬರಲಿರುವ ಒಂದು ನಾಶನದ ಬಗ್ಗೆ ಬೈಬಲ್‌ ಹೇಳುತ್ತದೆ. ಅದೇ “ಮಹಾ ಸಂಕಟ . . . ಲೋಕದ ಆರಂಭದಿಂದ ಇಂದಿನ ವರೆಗೆ ಅಂಥ ಸಂಕಟವು ಸಂಭವಿಸಿಲ್ಲ.” ಇದಾದ ನಂತರ ಮತ್ತೆಂದೂ ಸಂಭವಿಸುವುದಿಲ್ಲ. (ಮತ್ತಾಯ 24:21) ಇದರರ್ಥ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಮನುಷ್ಯರಿಂದನೋ ಅಥವಾ ನೈಸರ್ಗಿಕ ವಿಪತ್ತುಗಳಿಂದನೋ ಭೂಮಿ ಅಂತ್ಯವಾಗುತ್ತದೆ ಅಂತಲ್ಲ. ಯಾಕೆಂದರೆ ದೇವರು ಭೂಮಿಯನ್ನು ಶಾಶ್ವತವಾಗಿ ಇರಬೇಕೆಂದು ಸೃಷ್ಟಿಸಿದ್ದಾನೆ. (ಪ್ರಸಂಗಿ 1:4) ಇದು ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸಲಿಕ್ಕಾಗಿ’ ದೇವರು ಮಾಡುವಂಥ ಕಾರ್ಯ. ಆಗ ದುಷ್ಟತನ ಮತ್ತು ಕಷ್ಟಗಳು ಕೊನೆಯಾಗಲಿವೆ. (ಪ್ರಕಟನೆ 11:18; ಜ್ಞಾನೋಕ್ತಿ 2:22) ನಿಜವಾಗಿಯೂ ಎಂಥಾ ಅದ್ಭುತ ಜೀವನ!

ಸುನಾಮಿ, ಭೂಕಂಪ ಅಥವಾ ಜ್ವಾಲಾಮುಖಿಗಳಲ್ಲಿ ಮುಗ್ಧ ಜನರು ನಾಶವಾಗುತ್ತಾರೆ. ಆದರೆ ಮುಂದೆ ಬರಲಿರುವ ನಾಶನದಲ್ಲಿ ಹಾಗಾಗುವುದಿಲ್ಲ. ಯಾಕೆಂದರೆ, ಯೆಹೋವ “ದೇವರು ಪ್ರೀತಿಯಾಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಆತನು ಮಾತುಕೊಟ್ಟಿದ್ದಾನೆ. (1 ಯೋಹಾನ 4:8; ಕೀರ್ತನೆ 37:29) ಹಾಗಾದರೆ, ಆ ಮಹಾ ಸಂಕಟವನ್ನು ಪಾರಾಗಿ ದೇವರ ಆಶೀರ್ವಾದ ಪಡೆಯಲು ನಾವೇನು ಮಾಡಬೇಕು? ಇದಕ್ಕಿರುವ ಒಂದೇ ಒಂದು ಮಾರ್ಗ ಎಚ್ಚರಿಕೆಗೆ ಕಿವಿಗೊಡುವುದೇ!

ಬದಲಾವಣೆಗಳಿಗೆ ಗಮನಕೊಡಿ

ದುಷ್ಟತನ ಮತ್ತು ಕಷ್ಟಗಳು ಯಾವಾಗ ಅಂತ್ಯ ಆಗುತ್ತದೆ ಎಂದು ನಿರ್ದಿಷ್ಟವಾಗಿ ಗೊತ್ತಿಲ್ಲ. ಯೇಸು ಹೇಳಿದ್ದು: “ಆ ದಿನ ಮತ್ತು ಗಳಿಗೆಯ ವಿಷಯವಾಗಿ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ.” ಆದ್ದರಿಂದ ‘ಸದಾ ಎಚ್ಚರವಾಗಿರುವಂತೆ’ ಆತನು ನಮ್ಮನ್ನು ಪ್ರೋತ್ಸಾಹಿಸಿದ್ದಾನೆ. (ಮತ್ತಾಯ 24:36; 25:13) ನಾವೇಕೆ ಎಚ್ಚರವಾಗಿರಬೇಕು? ದೇವರು ಅಂತ್ಯ ತರುವ ಸ್ವಲ್ಪ ಮುಂಚೆ ಲೋಕದ ಪರಿಸ್ಥಿತಿ ಹೇಗಿರುತ್ತದೆ ಎಂದು ಬೈಬಲ್‌ ವಿವರಿಸುತ್ತದೆ. ಸಮುದ್ರದ ನೀರಿನಲ್ಲಾದ ಬದಲಾವಣೆಯನ್ನು ಗಮನಿಸಿದಾಗ ಸೀಮಲು ದ್ವೀಪದ ಜನರಿಗೆ ಸುನಾಮಿ ಬರುತ್ತದೆಂದು ಗೊತ್ತಾಯಿತು. ಅದೇ ರೀತಿ ಲೋಕದ ಪರಿಸ್ಥಿತಿಯಲ್ಲಾಗುವ ಕೆಲವು ಬದಲಾವಣೆಗಳನ್ನು ಗಮನಿಸಿದರೆ ಅಂತ್ಯ ಹತ್ತಿರವಿದೆ ಎಂದು ನಮಗೂ ಗೊತ್ತಾಗುತ್ತದೆ. ಬೈಬಲಿನಲ್ಲಿ ತಿಳಿಸಲಾಗಿರುವ ಕೆಲವು ಬದಲಾವಣೆಗಳ ಬಗ್ಗೆ ಚೌಕದಲ್ಲಿ ತಿಳಿಸಲಾಗಿದೆ.

ಚೌಕದಲ್ಲಿ ತಿಳಿಸಲಾಗಿರುವ ಕೆಲವು ಘಟನೆಗಳು ಸ್ವಲ್ಪ ಮಟ್ಟಿಗೆ ಈ ಹಿಂದೆಯೇ ನಡೆದಿವೆ. ಆದರೆ ಯೇಸು, “ಈ ಎಲ್ಲ ಸಂಗತಿಗಳನ್ನು” ನೋಡುವಾಗ ಅಂತ್ಯ ಹತ್ತಿರದಲ್ಲಿದೆ ಎಂದು ತಿಳಿದುಕೊಳ್ಳುವಂತೆ ಹೇಳಿದನು. (ಮತ್ತಾಯ 24:33) ಆದ್ದರಿಂದ ಹೀಗೆ ಕೇಳಿಕೊಳ್ಳಿ: ‘ಬೈಬಲಿನಲ್ಲಿ ತಿಳಿಸಲಾಗಿರುವ ಈ ಎಲ್ಲಾ ಘಟನೆಗಳು (1) ಇಡೀ ಭೂಮಿಯಲ್ಲಿ (2) ಒಂದೇ ಸಮಯದಲ್ಲಿ (3) ಹಿಂದೆಂದಿಗಿಂತಲೂ ಹೆಚ್ಚಾಗಿರುವುದು ಯಾವಾಗ?’ ಈಗ ನಾವು ಜೀವಿಸುತ್ತಿರುವ ಸಮಯದಲ್ಲಿ ಅಲ್ಲವೇ?

ದೇವರ ಪ್ರೀತಿ ಕಂಡುಬಂದ ರೀತಿ

‘ಮುನ್ನೆಚ್ಚರಿಕೆ ಪ್ರಾಣಗಳನ್ನು ರಕ್ಷಿಸುತ್ತದೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹೇಳಿದನು. 2004⁠ರಲ್ಲಾದ ಸುನಾಮಿಯ ನಂತರ, ಬಾಧಿತ ಪ್ರದೇಶಗಳಲ್ಲಿ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು. ಮುಂದೆ ಈ ರೀತಿ ಪ್ರಾಣನಷ್ಟವಾಗದಂತೆ ತಡೆಯುವುದೇ ಇದರ ಉದ್ದೇಶ. ದೇವರು ಸಹ ಅಂತ್ಯ ತರುವುದಕ್ಕೂ ಮುಂಚೆ ಅದರ ಬಗ್ಗೆ ಮುನ್ನೆಚ್ಚರಿಕೆ ಕೊಡಲು ಒಂದು ವ್ಯವಸ್ಥೆ ಮಾಡಿದ್ದಾನೆ. “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಎನ್ನುತ್ತದೆ ಬೈಬಲ್‌.—ಮತ್ತಾಯ 24:14.

ಕಳೆದ ವರ್ಷವೊಂದರಲ್ಲೇ ಯೆಹೋವನ ಸಾಕ್ಷಿಗಳು 190 ಕೋಟಿ ತಾಸುಗಳನ್ನು ಸುವಾರ್ತೆ ಸಾರುವುದರಲ್ಲಿ ಕಳೆದಿದ್ದಾರೆ. ಹೀಗೆ ಅವರು 700ಕ್ಕೂ ಹೆಚ್ಚು ಭಾಷೆಗಳಲ್ಲಿ 240 ದೇಶ-ದ್ವೀಪಗಳಲ್ಲಿ ಸಾರಿದ್ದಾರೆ. ನಮ್ಮ ಈ ದಿನಗಳಲ್ಲಿ ಆಗುತ್ತಿರುವ ಈ ಬದಲಾವಣೆ ಅಂತ್ಯ ಹತ್ತಿರದಲ್ಲಿದೆ ಎನ್ನಲು ಬಲವಾದ ಆಧಾರ ಕೊಡುತ್ತದೆ. ಯೆಹೋವನ ನ್ಯಾಯತೀರ್ಪಿನ ದಿನ ಬೇಗನೆ ಬರಲಿದೆ. ಆದ್ದರಿಂದ, ನೆರೆಯವರ ಮೇಲಿರುವ ಪ್ರೀತಿಯಿಂದಾಗಿ ಯೆಹೋವನ ಸಾಕ್ಷಿಗಳು ತಮ್ಮಿಂದಾದಷ್ಟು ಪ್ರಯಾಸಪಟ್ಟು ಜನರನ್ನು ಎಚ್ಚರಿಸುತ್ತಿದ್ದಾರೆ. (ಮತ್ತಾಯ 22:39) ಈ ಮಾಹಿತಿಯನ್ನು ತಿಳಿದುಕೊಂಡು ಪ್ರಯೋಜನ ಪಡೆಯುವ ಅವಕಾಶವನ್ನು ದೇವರು ನಮಗೆಲ್ಲರಿಗೆ ಕೊಟ್ಟಿದ್ದಾನೆ. ಇದು ತಾನೇ ಆತನು ನಮ್ಮನ್ನು ಪ್ರೀತಿಸುತ್ತಾನೆ ಎನ್ನುವುದಕ್ಕಿರುವ ಪುರಾವೆ. ದೇವರು, ‘ಯಾರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಬಯಸುತ್ತಾನೆ.’ (2 ಪೇತ್ರ 3:9) ಆದರೆ, ದೇವರು ತೋರಿಸಿದ ಪ್ರೀತಿಗೆ ನಾವು ಸರಿಯಾಗಿ ಪ್ರತಿಕ್ರಿಯಿಸುತ್ತಾ ಆತನು ಕೊಟ್ಟ ಎಚ್ಚರಿಕೆಗೆ ಕಿವಿಗೊಡುತ್ತೇವಾ?

ಸುರಕ್ಷಿತ ಸ್ಥಳಕ್ಕೆ ಓಡಿಹೋಗಿರಿ

ಸೀಮಲು ದ್ವೀಪದ ತೀರದಲ್ಲಿದ್ದ ಹಳ್ಳಿಗಳ ಜನರು ಸಮುದ್ರದ ನೀರು ಕಡಿಮೆಯಾಗುತ್ತಿರುವುದನ್ನು ನೋಡಿದ ತಕ್ಷಣ ಬೆಟ್ಟ-ಗುಡ್ಡಗಳಿಗೆ ಓಡಿಹೋದರು. ಅವರು ನೀರು ಮೇಲೆ ಬರುವವರೆಗೆ ಕಾಯಲಿಲ್ಲ, ಸರಿಯಾದ ಹೆಜ್ಜೆ ತೆಗೆದುಕೊಂಡದ್ದರಿಂದ ತಮ್ಮ ಪ್ರಾಣ ಉಳಿಸಿಕೊಂಡರು. ಮುಂದೆ ಬರಲಿರುವ ಮಹಾ ಸಂಕಟದಿಂದ ಪಾರಾಗಬೇಕಾದರೆ ತಡಮಾಡದೆ ನಾವೂ ಒಂದು ರೀತಿಯ ಬೆಟ್ಟಕ್ಕೆ ಓಡಿಹೋಗಬೇಕು. ಯಾವ ಬೆಟ್ಟ? ಪ್ರವಾದಿ ಯೆಶಾಯನು ದೇವರ ಸಹಾಯದಿಂದ, “ಅಂತ್ಯಕಾಲದಲ್ಲಿ” ಅಂದರೆ ನಮ್ಮ ದಿನಗಳಲ್ಲಿ ಜನರಿಗೆ ಕೊಡಲಾಗುವ ಒಂದು ಆಹ್ವಾನದ ಬಗ್ಗೆ ಬರೆದಿದ್ದಾನೆ. ಅದು ಹೀಗಿದೆ: “ಬನ್ನಿರಿ, ಯೆಹೋವನ ಪರ್ವತಕ್ಕೆ . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.”—ಯೆಶಾಯ 2:2, 3.

ಬೆಟ್ಟದ ತುದಿಗೆ ಹೋಗುವುದರಿಂದ ದೂರದ ವಿಷಯಗಳನ್ನು ನೋಡಲು ಸಾಧ್ಯ ಮಾತ್ರವಲ್ಲ ಸಂರಕ್ಷಣೆ ಕೂಡ ಸಿಗುತ್ತದೆ. ಬೈಬಲಿನಿಂದ ದೇವರ ಮಾರ್ಗಗಳನ್ನು ತಿಳಿದುಕೊಳ್ಳುವುದು ಲಕ್ಷಾಂತರ ಜನರಿಗೆ ತಮ್ಮ ಜೀವನದಲ್ಲಿ ಒಳ್ಳೇ ಬದಲಾವಣೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡಿದೆ. (2 ತಿಮೊಥೆಯ 3:16, 17) ಹೀಗೆ, ಅವರು ‘ದೇವರ ದಾರಿಯಲ್ಲಿ ನಡೆಯಲು’ ಆರಂಭಿಸಿದ್ದಾರೆ ಮತ್ತು ಆತನ ಅನುಗ್ರಹವನ್ನೂ ಸಂರಕ್ಷಣೆಯನ್ನೂ ಪಡೆಯುತ್ತಿದ್ದಾರೆ.

ನೀವು ಸಹ ಈ ಆಮಂತ್ರಣಕ್ಕೆ ಕಿವಿಗೊಟ್ಟು ಈ ಕಷ್ಟಕರ ದಿನಗಳಲ್ಲಿ ದೇವರ ಪ್ರೀತಿಯ ಸಂರಕ್ಷಣೆಯನ್ನು ಪಡೆಯಲು ಬಯಸುತ್ತೀರಾ? ಹಾಗಾದರೆ, ಈ ಲೇಖನದ ಜೊತೆಯಲ್ಲಿರುವ ಚೌಕವನ್ನು ಓದಿ ‘ಕಡೇ ದಿವಸಗಳ’ ಬಗ್ಗೆ ಬೈಬಲಿನಲ್ಲಿರುವ ಆಧಾರಗಳನ್ನು ಪರೀಕ್ಷಿಸುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಬೈಬಲ್‌ ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಅವುಗಳಲ್ಲಿರುವ ವಿಷಯವನ್ನು ಅನ್ವಯಿಸಿಕೊಳ್ಳಲು ಸಹಾಯ ಬೇಕಾದಲ್ಲಿ ನಿಮಗೆ ಹತ್ತಿರದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷದಿಂದ ನೆರವಾಗುತ್ತಾರೆ. ನೀವು www.pr418.com ಎಂಬ ವೆಬ್‌ಸೈಟ್‌ನಲ್ಲೂ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು. ▪ (w16-E No.2)

^ ಪ್ಯಾರ. 3 2004⁠ರಲ್ಲಾದ ಈ ಸುನಾಮಿ ಒಟ್ಟು 2 ಲಕ್ಷ 20 ಸಾವಿರ ಜನರ ಜೀವಗಳನ್ನು ಬಲಿತೆಗೆದುಕೊಂಡಿತ್ತು. ಇತಿಹಾಸದಲ್ಲಿ ಅತೀ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಸುನಾಮಿಗಳಲ್ಲಿ ಇದು ಒಂದು.