ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದು ಯಾವಾಗ?

ಕ್ರಿ.ಶ. 100⁠ರ ನಂತರ ಆರಂಭಗೊಂಡು ಕ್ರಿ.ಶ. 1919⁠ರವರೆಗೆ ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದರು. ನಮ್ಮ ತಿಳಿವಳಿಕೆಯಲ್ಲಿ ಈ ಹೊಂದಾಣಿಕೆಯನ್ನು ಯಾಕೆ ಮಾಡಬೇಕಾಯಿತು?

1919⁠ರಲ್ಲಿ ದೇವಜನರು ಮಹಾ ಬಾಬೆಲಿನಿಂದ ಬಿಡುಗಡೆಯಾಗಿ ಶುದ್ಧ ಸಭೆಯಾದರೆಂದು ಎಲ್ಲ ಆಧಾರಗಳು ತೋರಿಸುತ್ತಿವೆ. ಇದನ್ನು ಪರಿಗಣಿಸಿ: 1914⁠ರಲ್ಲಿ ದೇವರ ರಾಜ್ಯ ಸ್ವರ್ಗದಲ್ಲಿ ಸ್ಥಾಪನೆಯಾದ ಸ್ವಲ್ಪದರಲ್ಲೇ ಭೂಮಿಯಲ್ಲಿದ್ದ ದೇವಜನರನ್ನು ಪರೀಕ್ಷಿಸಲಾಯಿತು ಮತ್ತು ಸುಳ್ಳು ಆರಾಧನೆಯಿಂದ ಅವರನ್ನು ಶುದ್ಧಗೊಳಿಸಲಾಯಿತು. * (ಮಲಾ. 3:1-4) ನಂತರ, 1919⁠ರಲ್ಲಿ ಈ ರೀತಿ ಶುದ್ಧಗೊಳಿಸಲ್ಪಟ್ಟ ತನ್ನ ಜನರಿಗೆ “ತಕ್ಕ ಸಮಯಕ್ಕೆ ಆಹಾರ ಕೊಡಲು” ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಯೇಸು ನೇಮಿಸಿದನು. (ಮತ್ತಾ. 24:45-47) ಆ ವರ್ಷದಲ್ಲಿ ದೇವಜನರು ಸಾಂಕೇತಿಕವಾಗಿ ಮಹಾ ಬಾಬೆಲಿನ ಕಪಿ ಮುಷ್ಟಿಯಿಂದ ಹೊರಬಂದರು. (ಪ್ರಕ. 18:4) ಆದರೆ ದೇವಜನರು ಮಹಾಬಾಬೆಲಿನ ಬಂಧಿವಾಸಿಗಳಾದದ್ದು ಯಾವಾಗ?

1918⁠ರ ಆರಂಭದಲ್ಲಿ ಸ್ವಲ್ಪ ಸಮಯದವರೆಗೆ ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾದರೆಂದು ಈ ಹಿಂದೆ ನಾವು ವಿವರಿಸಿದ್ದೆವು. ಇಸ್ರಾಯೇಲ್ಯರು ಬಾಬೆಲಿನ ಬಂಧಿವಾಸಿಗಳಾದಂತೆ, 1918⁠ರಲ್ಲಿ ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾದರು ಎಂದು ಮಾರ್ಚ್‌ 15, 1992⁠ರ ಕಾವಲಿನಬುರುಜು ತಿಳಿಸಿತ್ತು. ಆದರೆ 1918ಕ್ಕಿಂತ ಎಷ್ಟೋ ವರ್ಷಗಳ ಮುಂಚೆಯೇ ದೇವಜನರು ಬಂಧಿವಾಸಿಗಳಾಗಿದ್ದರೆಂದು ಹೆಚ್ಚಿನ ಸಂಶೋಧನೆಗಳಿಂದ ತಿಳಿದುಬಂದಿದೆ.

ಯೆಹೆಜ್ಕೇಲ 37:1-14⁠ರ ಪ್ರವಾದನೆಯಲ್ಲಿ ದೇವಜನರು ಬಂಧಿವಾಸಿಗಳಾಗಿ ನಂತರ ಬಿಡುಗಡೆಯಾಗುತ್ತಾರೆ ಎಂದು ತಿಳಿಸಲಾಗಿತ್ತು. ಆ ಪ್ರವಾದನೆಯಲ್ಲಿ ಯೆಹೆಜ್ಕೇಲ ಎಲುಬುಗಳು ತುಂಬಿದ್ದ ಒಂದು ತಗ್ಗನ್ನು ನೋಡುತ್ತಾನೆ. ಆ “ಎಲುಬುಗಳು ಇಸ್ರಾಯೇಲಿನ ಪೂರ್ಣವಂಶ” ಎಂದು ಯೆಹೋವನು ಹೇಳಿದನು. (ವಚನ 11) ಈ ಪ್ರವಾದನೆ ಮೊದಲಾಗಿ ಇಸ್ರಾಯೇಲ್‌ ಜನಾಂಗಕ್ಕೆ, ನಂತರ ‘ದೇವರ ಇಸ್ರಾಯೇಲ್‌’ ಆದ ಅಭಿಷಿಕ್ತರಿಗೆ ಅನ್ವಯಿಸುತ್ತದೆ. (ಗಲಾ. 6:16; ಅ. ಕಾ. 3:21) ಆ ದರ್ಶನದಲ್ಲಿ ಎಲುಬುಗಳಿಗೆ ಜೀವ ಬಂದು ಒಂದು ದೊಡ್ಡ ಸೈನ್ಯವಾದದ್ದನ್ನು ಯೆಹೆಜ್ಕೇಲ ನೋಡಿದನು. ಇದು 1919⁠ರಲ್ಲಿ ದೇವಜನರು ಮಹಾ ಬಾಬೆಲಿನಿಂದ ಬಿಡುಗಡೆಯಾದ ವಿಧವನ್ನು ವರ್ಣಿಸುತ್ತದೆ. ಆದರೆ ದೇವಜನರು ಬಹಳ ವರ್ಷಗಳ ಕಾಲ ಬಂಧಿವಾಸಿಗಳಾಗಿದ್ದರೆಂದು ಈ ಪ್ರವಾದನೆ ಹೇಗೆ ತೋರಿಸುತ್ತದೆ?

ಮೊದಲನೆಯದಾಗಿ, ಸತ್ತ ಮನುಷ್ಯರ ಎಲುಬುಗಳು ‘ತೀರಾ ಒಣಗಿ’ ಹೋದದ್ದನ್ನು ಯೆಹೆಜ್ಕೇಲ ನೋಡಿದನು. (ಯೆಹೆ. 37:2, 11) ಇದರಿಂದ ಆ ಮನುಷ್ಯರು ಸತ್ತು ತುಂಬ ಸಮಯವಾಗಿತ್ತು ಎಂದು ನಮಗೆ ಗೊತ್ತಾಗುತ್ತದೆ. ಎರಡನೆಯದಾಗಿ, ಆ ಎಲುಬುಗಳಿಗೆ ತಕ್ಷಣ ಜೀವ ಬರಲಿಲ್ಲ, ಬದಲಿಗೆ ಹಂತ ಹಂತವಾಗಿ ಜೀವ ಬಂದದ್ದನ್ನು ಯೆಹೆಜ್ಕೇಲ ನೋಡಿದನು. ‘ಎಲುಬುಗಳು ಟಕಟಕ ಎನ್ನುವ ಶಬ್ದದೊಂದಿಗೆ ಜೋಡನೆಯಾದವು.’ ಆಮೇಲೆ “ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು ಮತ್ತು ಚರ್ಮವು ಮೇಲ್ಹೊದಿಕೆಯಾಯಿತು.” ನಂತರ, ‘ಶ್ವಾಸವು ಅವುಗಳಲ್ಲಿ ಹೊಕ್ಕಿತು, ಅವು ಬದುಕಿದವು.’ ಕೊನೆಗೆ ಅವರಿಗೆ ಅವರ ಸ್ವಾಸ್ತ್ಯವನ್ನು ಕೊಡಲಾಯಿತು. ಹೀಗೆ ಈ ಎಲ್ಲ ವಿಷಯಗಳು ನಡೆಯಲು ಸಮಯ ತಗಲುತ್ತದೆ.—ಯೆಹೆ. 37:7-10, 14.

ಪ್ರವಾದನೆ ಮುಂತಿಳಿಸಿದಂತೆ ಇಸ್ರಾಯೇಲ್ಯರು ಅನೇಕ ವರ್ಷಗಳವರೆಗೆ ಬಂಧಿವಾಸಿಗಳಾಗಿದ್ದರು. ಕ್ರಿ.ಪೂ. 740⁠ರಲ್ಲಿ ಇಸ್ರಾಯೇಲಿನ ಉತ್ತರದ ಹತ್ತು ಕುಲಗಳವರನ್ನು ತಮ್ಮ ಸ್ಥಳವನ್ನು ಬಿಟ್ಟು ಹೋಗುವಂತೆ ಒತ್ತಾಯಿಸಿದಾಗ ಅವರ ಬಂಧಿವಾಸ ಆರಂಭವಾಯಿತು. ನಂತರ ಕ್ರಿ.ಪೂ. 607⁠ರಲ್ಲಿ ಯೆರೂಸಲೇಮನ್ನು ನಾಶಮಾಡುವ ಮೂಲಕ ಬಾಬೆಲ್‌ ಸಾಮ್ರಾಜ್ಯ ಯೆಹೂದದ ಎರಡು ಕುಲಗಳು ತಮ್ಮ ಸ್ಥಳವನ್ನು ಬಿಟ್ಟು ಹೋಗುವಂತೆ ಒತ್ತಾಯಿಸಿತು. ಕ್ರಿ.ಪೂ. 537⁠ರಲ್ಲಿ ಕೆಲವು ಯೆಹೂದ್ಯರು ದೇವಾಲಯವನ್ನು ಪುನಃ ಕಟ್ಟಲು ಮತ್ತು ಯೆಹೋವನನ್ನು ಆರಾಧಿಸಲು ಯೆರೂಸಲೇಮಿಗೆ ಹಿಂದಿರುಗಿದರು. ಹೀಗೆ ಈ ವರ್ಷದಲ್ಲಿ ಇಸ್ರಾಯೇಲ್ಯರ ಬಂಧಿವಾಸ ಮುಗಿಯಿತು.

ಈ ಎಲ್ಲಾ ವಿಷಯಗಳಿಂದ ಏನು ಗೊತ್ತಾಗುತ್ತದೆ? ಅಭಿಷಿಕ್ತ ಕ್ರೈಸ್ತರು ಮಹಾ ಬಾಬೆಲಿನ ಬಂಧಿವಾಸದಲ್ಲಿದ್ದದ್ದು 1918⁠ರಿಂದ 1919⁠ರವರೆಗೆ ಅಲ್ಲ, ತುಂಬಾ ದೀರ್ಘ ಸಮಯದಿಂದ ಬಂಧಿವಾಸಿಗಳಾಗಿದ್ದರು. ಯೇಸು ಕೂಡ ಈ ದೀರ್ಘ ಸಮಯದ ಬಗ್ಗೆ ತಿಳಿಸುತ್ತಾ, ಕಳೆಗಳಂತಿರುವ ಸುಳ್ಳು ಕ್ರೈಸ್ತರು, ಗೋಧಿಯಂತಿರುವ ‘ರಾಜ್ಯದ ಪುತ್ರರು’ ಒಟ್ಟಿಗೆ ಬೆಳೆಯುವರು ಎಂದು ಹೇಳಿದ್ದನು. (ಮತ್ತಾ. 13:36-43) ಮೊದಲನೇ ಶತಮಾನದ ನಂತರ, ಸತ್ಯ ಕ್ರೈಸ್ತರು ಕೆಲವೇ ಮಂದಿ ಇದ್ದರು. ಯಾಕೆಂದರೆ ಕ್ರೈಸ್ತರು ಎಂದು ಹೇಳಿಕೊಂಡವರಲ್ಲಿ ಹೆಚ್ಚಿನವರು ಸುಳ್ಳು ಬೋಧನೆಗಳನ್ನು ಸ್ವೀಕರಿಸಿ ಧರ್ಮಭ್ರಷ್ಟರಾದರು. ಹೀಗೆ ಕ್ರೈಸ್ತ ಸಭೆಯು ಮಹಾ ಬಾಬೆಲಿನ ಬಂಧಿವಾಸಕ್ಕೆ ಒಳಗಾಯಿತೆಂದು ಹೇಳಬಹುದು. ಈ ಬಂಧಿವಾಸವು ಕ್ರಿ.ಶ. 100⁠ರ ನಂತರ ಆರಂಭವಾಗಿ ಅಂತ್ಯಕಾಲದಲ್ಲಿ ದೇವರ ಆಧ್ಯಾತ್ಮಿಕ ಆಲಯ ಶುದ್ಧೀಕರಿಸಲ್ಪಟ್ಟ ಸಮಯದವರೆಗೂ ಮುಂದುವರಿಯಿತು.—ಅ. ಕಾ. 20:29, 30; 2 ಥೆಸ. 2:3, 6; 1 ಯೋಹಾ. 2:18, 19.

ಆ ನೂರಾರು ವರ್ಷಗಳವರೆಗೂ ಚರ್ಚಿನ ಪಾದ್ರಿಗಳು ಮತ್ತು ರಾಜಕೀಯ ಮುಖಂಡರು ಎಲ್ಲಾ ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಬಯಸಿದ್ದರು. ಉದಾಹರಣೆಗೆ, ಜನರು ಬೈಬಲನ್ನು ತಮ್ಮ ಬಳಿ ಇಟ್ಟುಕೊಳ್ಳಲು ಮತ್ತು ತಮ್ಮ ಸ್ವಂತ ಭಾಷೆಯಲ್ಲಿ ಓದಲು ಪಾದ್ರಿವರ್ಗದವರು ಬಿಡುತ್ತಿರಲಿಲ್ಲ. ಬೈಬಲನ್ನು ಓದಿದ ಕೆಲವರನ್ನು ಕಂಬಕ್ಕೆ ಕಟ್ಟಿ ಸುಟ್ಟುಬಿಟ್ಟರು. ಚರ್ಚಿನ ಬೋಧನೆಗಳ ವಿರುದ್ಧ ಮಾತಾಡಿದವರನ್ನು ಕ್ರೂರವಾಗಿ ಹಿಂಸಿಸಿದರು. ಹಾಗಾಗಿ ಆ ಸಮಯದಲ್ಲಿ ಸತ್ಯ ಕಲಿಯುವುದು ಅಥವಾ ಇತರರಿಗೆ ಕಲಿಸುವುದು ತುಂಬಾ ಕಷ್ಟವಾಗಿತ್ತು.

ಯೆಹೆಜ್ಕೇಲನ ದರ್ಶನದಲ್ಲಿ ತಿಳಿಸಿದಂತೆ ದೇವಜನರು ಮತ್ತೆ ಜೀವಂತರಾಗಿ ಸುಳ್ಳು ಧರ್ಮದಿಂದ ಹಂತ ಹಂತವಾಗಿ ಬಿಡುಗಡೆ ಆಗಲಿದ್ದರು. ಇದು ಯಾವಾಗ ಮತ್ತು ಹೇಗೆ ಆರಂಭವಾಯಿತು? ಯೆಹೆಜ್ಕೇಲನ ದರ್ಶನದಲ್ಲಿ “ಟಕಟಕ” ಎನ್ನುವ ಸದ್ದಿನ ಬಗ್ಗೆ ತಿಳಿಸಲಾಗಿದೆ. ಈ ಕ್ರಿಯೆ ಅಂತ್ಯಕಾಲದ ಸಮಯಕ್ಕಿಂತ ನೂರಾರು ವರ್ಷಗಳ ಮುಂಚೆ ಆರಂಭವಾಯಿತು. ಆ ಸಮಯದಲ್ಲಿ ಸುಳ್ಳು ಬೋಧನೆಗಳೇ ತುಂಬಿಕೊಂಡಿದ್ದರೂ ಸತ್ಯವನ್ನು ತಿಳಿದುಕೊಳ್ಳಲು ಮತ್ತು ದೇವರನ್ನು ಆರಾಧಿಸಲು ಕೆಲವು ನಂಬಿಗಸ್ತ ವ್ಯಕ್ತಿಗಳು ಪ್ರಯತ್ನಿಸಿದರು. ಅವರು ಬೈಬಲನ್ನು ಅಧ್ಯಯನ ಮಾಡಿ, ತಾವು ಕಲಿತ ವಿಷಯಗಳನ್ನು ಜನರಿಗೆ ತಿಳಿಸಲು ತಮ್ಮಿಂದಾದೆಲ್ಲವನ್ನು ಮಾಡಿದರು. ಇನ್ನೂ ಕೆಲವರು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸಲು ತುಂಬಾ ಕಷ್ಟಪಟ್ಟರು.

19⁠ನೇ ಶತಮಾನದ ಕೊನೆಯಷ್ಟಕ್ಕೆ ಎಲುಬುಗಳ ಮೇಲೆ ಮಾಂಸ ಮತ್ತು ಚರ್ಮ ಹರಡಿಕೊಳ್ಳುವ ಕ್ರಿಯೆ ಆರಂಭವಾಯಿತು. ಚಾರ್ಲ್ಸ್‌ ಟೇಸ್‌ ರಸಲ್‌ ಮತ್ತು ಅವರ ಸ್ನೇಹಿತರು ಬೈಬಲ್‌ ಸತ್ಯವನ್ನು ತಿಳಿಯಲು ಮತ್ತು ಯೆಹೋವನನ್ನು ಆರಾಧಿಸಲು ತುಂಬಾ ಶ್ರಮಿಸಿದರು. ಅವರು ಝಯನ್ಸ್‌ ವಾಚ್‌ ಟವರ್‌ ಮತ್ತು ಇತರ ಪ್ರಕಾಶನಗಳ ಮೂಲಕ ಸತ್ಯವನ್ನು ತಿಳಿದುಕೊಳ್ಳಲು ಬೇರೆಯವರಿಗೆ ಸಹಾಯ ಮಾಡಿದರು. 1914⁠ರಲ್ಲಿ “ಫೋಟೋ ಡ್ರಾಮ ಆಫ್‌ ಕ್ರಿಯೇಷನ್‌” ಮತ್ತು 1917⁠ರಲ್ಲಿ ದ ಫಿನಿಷ್ಡ್‌ ಮಿಸ್ಟರಿ ಪುಸ್ತಕ ಯೆಹೋವನ ಜನರು ತಮ್ಮ ನಂಬಿಕೆಯನ್ನು ಬಲಪಡಿಸಲು ಸಹಾಯಮಾಡಿತು. ಕೊನೆಯದಾಗಿ, 1919⁠ರಲ್ಲಿ ದೇವಜನರಿಗೆ ಜೀವ ಮತ್ತು ಹೊಸ ಸ್ವಾಸ್ತ್ಯ ಸಿಕ್ಕಿದಂತಿತ್ತು. ಆ ಸಮಯದಿಂದ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳವರು ಅಭಿಷಿಕ್ತರೊಂದಿಗೆ ಜೊತೆಗೂಡಿದ್ದಾರೆ. ಹೀಗೆ ಒಟ್ಟಾಗಿ ಎಲ್ಲರೂ ಯೆಹೋವ ದೇವರನ್ನು ಆರಾಧಿಸುತ್ತಾ ‘ಅತ್ಯಂತ ದೊಡ್ಡ ಸೈನ್ಯವಾಗಿದ್ದಾರೆ.’—ಯೆಹೆ. 37:10; ಜೆಕ. 8:20-23. *

ಕ್ರಿ.ಶ. 100⁠ರ ನಂತರ ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾದರು ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಸಮಯಾವಧಿಯಲ್ಲೇ ಬಹಳಷ್ಟು ಜನರು ಸುಳ್ಳು ಬೋಧನೆಗಳನ್ನು ಅಂಗೀಕರಿಸಿ ಸತ್ಯವನ್ನು ತಿರಸ್ಕರಿಸುವ ಮೂಲಕ ಧರ್ಮಭ್ರಷ್ಟರಾದರು. ಹಿಂದೆ ಬಾಬೆಲಿನ ಬಂಧಿವಾಸದಲ್ಲಿದ್ದ ಇಸ್ರಾಯೇಲ್ಯರಿಗೆ ಯೆಹೋವನನ್ನು ಆರಾಧಿಸಲು ಕಷ್ಟವಾದಂತೆಯೇ ಈ ಸಮಯದಲ್ಲೂ ಅನೇಕ ವರ್ಷಗಳವರೆಗೆ ಯೆಹೋವನನ್ನು ಆರಾಧಿಸಲು ಕಷ್ಟವಾಗಿತ್ತು. ಆದರೆ ಇಂದು ಎಲ್ಲರಿಗೂ ಸುವಾರ್ತೆ ಸಾರಲ್ಪಡುತ್ತಿದೆ. “ಜ್ಞಾನಿಗಳು ತೇಜೋಮಯವಾಗಿ . . . ಪ್ರಕಾಶಿಸುವ” ಸಮಯದಲ್ಲಿ ನಾವು ಜೀವಿಸುತ್ತಿರುವುದು ನಿಜವಾಗಿಯೂ ಸಂತೋಷದ ಸಂಗತಿ. ಅನೇಕರು “ತಮ್ಮನ್ನು ಶುದ್ಧೀಕರಿಸಿ” “ಶೋಧಿತರಾಗಿ” ಸತ್ಯಾರಾಧನೆಯನ್ನು ಅಂಗೀಕರಿಸುತ್ತಿದ್ದಾರೆ!—ದಾನಿ. 12:3, 10.

ಸೈತಾನನು ಯೇಸುವನ್ನು ಪ್ರಲೋಭಿಸುವಾಗ, ನಿಜವಾಗಿಯೂ ಅವನನ್ನು ದೇವಾಲಯಕ್ಕೆ ಕರೆದುಕೊಂಡು ಹೋದನಾ ಅಥವಾ ದೇವಾಲಯವನ್ನು ದರ್ಶನದ ಮೂಲಕ ತೋರಿಸಿದನಾ?

ಸೈತಾನನು ಯೇಸುವಿಗೆ ದೇವಾಲಯವನ್ನು ಹೇಗೆ ತೋರಿಸಿದ ಅಂತ ನಮಗೆ ಸರಿಯಾಗಿ ಗೊತ್ತಿಲ್ಲ.

ಈ ಘಟನೆಯ ಬಗ್ಗೆ ಬೈಬಲಿನ ಬರಹಗಾರರಾದ ಮತ್ತಾಯ ಮತ್ತು ಲೂಕ ಇಬ್ಬರೂ ಬರೆದಿದ್ದಾರೆ. “ಪಿಶಾಚನು” ಯೇಸುವನ್ನು ಯೆರೂಸಲೇಮಿಗೆ “ಕರೆದುಕೊಂಡು ಹೋಗಿ” ದೇವಾಲಯದ ಕೈಪಿಡಿ ಗೋಡೆಯ ಮೇಲೆ ಅಂದರೆ ಅತೀ ಎತ್ತರದ ಸ್ಥಳದಲ್ಲಿ ನಿಲ್ಲಿಸಿದನು ಎಂದು ಮತ್ತಾಯನು ತಿಳಿಸಿದ್ದಾನೆ. (ಮತ್ತಾ. 4:5) ಲೂಕನು ಸಹ, ‘ಪಿಶಾಚನು ಯೇಸುವನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗಿ ದೇವಾಲಯದ ಕೈಪಿಡಿ ಗೋಡೆಯ ಮೇಲೆ ನಿಲ್ಲಿಸಿದನು’ ಎಂದು ತಿಳಿಸಿದ್ದಾನೆ.—ಲೂಕ 4:9.

ಈ ಹಿಂದೆ ನಮ್ಮ ಪತ್ರಿಕೆಗಳಲ್ಲಿ ಸೈತಾನನು ಯೇಸುವನ್ನು ಪ್ರಲೋಭಿಸಲು ಶಾರೀರಿಕವಾಗಿ ಆತನನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿರಲಿಕ್ಕಿಲ್ಲ ಎಂದು ತಿಳಿಸಲಾಗಿತ್ತು. ಉದಾಹರಣೆಗೆ 1961 ಮಾರ್ಚ್‌ 1⁠ರ ಕಾವಲಿನಬುರುಜು ಪತ್ರಿಕೆಯಲ್ಲಿ, ಸೈತಾನನು ಯೇಸುವಿಗೆ ಅತೀ ಎತ್ತರವಾದ ಬೆಟ್ಟದ ಮೇಲಿಂದ ಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿದ್ದರ ಕುರಿತು ತಿಳಿಸಲಾಗಿದೆ. ಲೋಕದ ಎಲ್ಲಾ ರಾಜ್ಯಗಳನ್ನು ನೋಡಲು ಸಾಧ್ಯವಾಗುವಷ್ಟು ದೊಡ್ಡ ಬೆಟ್ಟ ಭೂಮಿಯಲ್ಲಿ ಎಲ್ಲೂ ಇಲ್ಲ. ಆದ್ದರಿಂದ ಆ ಬೆಟ್ಟ ಅಕ್ಷರಾರ್ಥಕವಲ್ಲ. ಅದೇರೀತಿ, ಯೇಸುವನ್ನು ಯೆರೂಸಲೇಮಿನ ದೇವಾಲಯಕ್ಕೆ ಕರೆದುಕೊಂಡು ಹೋಗಿರುವುದು ಕೂಡ ಅಕ್ಷರಾರ್ಥಕವಲ್ಲ ಎಂದು ಆ ಪತ್ರಿಕೆ ತಿಳಿಸಿತು. ಆದರೆ ನಂತರ ಬಂದ ಸಂಚಿಕೆಗಳಲ್ಲಿ, ಯೇಸು ಆ ದೇವಾಲಯದಿಂದ ಧುಮುಕಿದ್ದರೆ ಆತನ ಜೀವವೇ ಹೋಗುತ್ತಿತ್ತು ಎಂದು ತಿಳಿಸಲಾಗಿತ್ತು.

ಯೇಸು ಲೇವಿ ಕುಲದವನಲ್ಲದ ಕಾರಣ ದೇವಾಲಯದ ಕೈಪಿಡಿ ಗೋಡೆಯ ಮೇಲೆ ನಿಂತುಕೊಳ್ಳಲು ಅನುಮತಿ ಇರಲಿಲ್ಲ. ಆದ್ದರಿಂದ ಸೈತಾನನು ಯೇಸುವನ್ನು ಒಂದು ದರ್ಶನದ ಮೂಲಕ ದೇವಾಲಯಕ್ಕೆ ಕರೆದುಕೊಂಡು ಹೋಗಿರಬಹುದು ಎಂದು ಕೆಲವರು ನೆನಸುತ್ತಾರೆ. ಪ್ರವಾದಿ ಯೆಹೆಜ್ಕೇಲನನ್ನು ದರ್ಶನದಲ್ಲಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದ ದಾಖಲೆ ಸಹ ಬೈಬಲಿನಲ್ಲಿದೆ.—ಯೆಹೆ. 8:3, 7-10; 11:1, 24; 37:1, 2.

ಈ ಪ್ರಲೋಭನೆ ಒಂದು ದರ್ಶನವಾಗಿದ್ದರೆ ಈ ಮುಂದಿನ ಪ್ರಶ್ನೆಗಳು ಬರುತ್ತವೆ:

  • ಅದೊಂದು ದರ್ಶನವಾಗಿದ್ದರೆ ಯೇಸುವಿಗೆ ದೇವಾಲಯದಿಂದ ಧುಮುಕುವುದು ನಿಜವಾಗಿಯೂ ಒಂದು ಪ್ರಲೋಭನೆ ಆಗುತ್ತಿತ್ತಾ?

  • ಕಲ್ಲುಗಳನ್ನು ರೊಟ್ಟಿಗಳನ್ನಾಗಿ ಮಾಡುವಂತೆ ಮತ್ತು ತನ್ನನ್ನು ಆರಾಧಿಸಲು ಒಂದು ಕ್ರಿಯೆ ಮಾಡುವಂತೆ ಸೈತಾನನು ಯೇಸುವನ್ನು ನಿಜವಾಗಿ ಪ್ರೇರೇಪಿಸಿದನು. ಅಂದಮೇಲೆ ಯೇಸು ದೇವಾಲಯದ ಮೇಲಿಂದ ಧುಮುಕುವಂತೆ ಸೈತಾನ ನಿರೀಕ್ಷಿಸಿದ್ದೂ ನಿಜವಾಗಿರಬೇಕಲ್ವಾ?

ಒಂದುವೇಳೆ ಸೈತಾನ ದರ್ಶನವನ್ನು ಉಪಯೋಗಿಸದೆ ನಿಜವಾಗಿಯೂ ಯೇಸುವನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರೆ ಈ ಮುಂದಿನ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುತ್ತವೆ:

  • ದೇವಾಲಯದ ಕೈಪಿಡಿ ಗೋಡೆಯ ಮೇಲೆ ನಿಲ್ಲುವ ಮೂಲಕ ಯೇಸು ಧರ್ಮಶಾಸ್ತ್ರದ ನಿಯಮವನ್ನು ಮೀರಿದನಾ?

  • ಅರಣ್ಯದಲ್ಲಿದ್ದ ಯೇಸು ಯೆರೂಸಲೇಮಿನ ದೇವಾಲಯಕ್ಕೆ ಹೋದದ್ದಾದರೂ ಹೇಗೆ?

ಈ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿಯಲು ಇನ್ನಷ್ಟು ಮಾಹಿತಿಯನ್ನು ಪರಿಶೀಲಿಸೋಣ.

ಮತ್ತಾಯ ಮತ್ತು ಲೂಕನ ಸುವಾರ್ತೆಯಲ್ಲಿ “ಆಲಯ” ಎಂದು ಭಾಷಾಂತರ ಆಗಿರುವ ಗ್ರೀಕ್‌ ಪದ ಕೇವಲ ಲೇವಿಯರಿಗೆ ಮಾತ್ರ ಅನುಮತಿಯಿದ್ದ ದೇವಾಲಯದ ಪವಿತ್ರ ಸ್ಥಳವನ್ನು ಮಾತ್ರ ಸೂಚಿಸುತ್ತಿರಲಿಲ್ಲ. ಬದಲಿಗೆ ಇಡೀ ದೇವಾಲಯವನ್ನು ಸೂಚಿಸುತ್ತಿದ್ದಿರಬಹುದು ಎಂದು ಪ್ರೊಫೆಸರ್‌ ಡಿ. ಎ. ಕಾರ್ಸನ್‌ ತಿಳಿಸಿದ್ದಾರೆ. ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಒಂದು ಅತೀ ಎತ್ತರದ ಸ್ಥಳವಿತ್ತು. ಆ ಸ್ಥಳದಿಂದ ಕಿದ್ರೋನ್‌ ಕಣಿವೆಯು ಸುಮಾರು 450 ಅಡಿ ಕೆಳಗಿತ್ತು. ಬಹುಶಃ ಯೇಸು ಆ ಸ್ಥಳದಲ್ಲಿ ನಿಂತಿದ್ದಿರಬಹುದು. ಇತಿಹಾಸಕಾರನಾದ ಜೋಸೀಫಸ್‌, ಈ ಸ್ಥಳ ಎಷ್ಟು ಎತ್ತರದಲ್ಲಿತ್ತು ಅಂದರೆ ಒಂದುವೇಳೆ ಯಾರಾದರೂ ಈ ಸ್ಥಳದಿಂದ ಕೆಳಗೆ ನೋಡುವುದಾದರೆ “ಅವರಿಗೆ ತಲೆಸುತ್ತು ಬರುವುದು ಖಂಡಿತ” ಎಂದು ಹೇಳಿದ್ದಾನೆ. ಲೇವಿ ಕುಲದವನಲ್ಲದ ಯೇಸು ಈ ಸ್ಥಳದಲ್ಲಿ ನಿಲ್ಲಬಹುದಿತ್ತು. ಅದು ಧರ್ಮಶಾಸ್ತ್ರದ ಉಲ್ಲಂಘನೆಯಾಗುತ್ತಿರಲಿಲ್ಲ.

ಅರಣ್ಯದಲ್ಲಿದ್ದ ಯೇಸು ದೇವಾಲಯಕ್ಕೆ ಹೋದದ್ದಾದರೂ ಹೇಗೆ? ‘ಹೀಗೇ ಹೋದನು’ ಎಂದು ಹೇಳುವುದಕ್ಕೆ ಆಗುವುದಿಲ್ಲ. ಯೇಸು ಯೆರೂಸಲೇಮಿನಿಂದ ಎಷ್ಟು ದೂರದಲ್ಲಿದ್ದ ಮತ್ತು ಸೈತಾನ ಅವನನ್ನು ಎಷ್ಟು ಸಮಯದವರೆಗೆ ಪ್ರಲೋಭಿಸಿದ ಅಂತ ಬೈಬಲ್‌ ತಿಳಿಸುವುದಿಲ್ಲ. ಯೇಸುವನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗಲಾಯಿತು ಎಂದಷ್ಟೇ ಅದು ತಿಳಿಸುತ್ತದೆ. ಬಹುಶಃ ಯೇಸು ಯೆರೂಸಲೇಮಿಗೆ ನಡೆದುಕೊಂಡು ಹೋಗಿದ್ದಿರಬಹುದು. ಇದಕ್ಕೆ ಸಾಕಷ್ಟು ಸಮಯ ಹಿಡಿದಿರಬಹುದು.

ಹಾಗಾದರೆ ‘ಲೋಕದ ಎಲ್ಲಾ ರಾಜ್ಯಗಳನ್ನು’ ಯೇಸುವಿಗೆ ತೋರಿಸಿದ್ದರ ಕುರಿತೇನು? ಸೈತಾನ ಒಂದು ದರ್ಶನದ ಮೂಲಕ ಯೇಸುವಿಗೆ ಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿರಬಹುದು. ಕಾರಣ, ಲೋಕದ ಎಲ್ಲಾ ರಾಜ್ಯಗಳನ್ನು ನೋಡಲು ಸಾಧ್ಯವಾಗುವಷ್ಟು ದೊಡ್ಡ ಬೆಟ್ಟ ಭೂಮಿಯಲ್ಲಿ ಎಲ್ಲೂ ಇಲ್ಲ. ಪರದೆಯ ಮೂಲಕ ಹೇಗೆ ಬೇರೆ ಸ್ಥಳಗಳ ಚಿತ್ರಗಳನ್ನು ಇತರರಿಗೆ ತೋರಿಸಬಹುದೋ ಹಾಗೆಯೇ ಸೈತಾನ ಒಂದು ದರ್ಶನದ ಮೂಲಕ ಯೇಸುವಿಗೆ ಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿರಬಹುದು. ಆದರೆ, ಯೇಸು ಅಕ್ಷರಾರ್ಥಕವಾಗಿ ಅಡ್ಡಬಿದ್ದು ತನ್ನನ್ನು ಆರಾಧಿಸುವಂತೆ ಸೈತಾನನು ಬಯಸಿದನು. (ಮತ್ತಾ. 4:8, 9) ಯೇಸು ದೇವಾಲಯದಿಂದ ಧುಮುಕಿ ತನ್ನ ಜೀವಕ್ಕೆ ಅಪಾಯ ತಂದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸೈತಾನ ಅವನನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಿರಬೇಕು. ಆದರೆ ಯೇಸು ಅದನ್ನು ತಿರಸ್ಕರಿಸಿದನು. ಒಂದುವೇಳೆ ಅವನನ್ನು ಧುಮುಕು ಅಂತ ದರ್ಶನದಲ್ಲಿ ಹೇಳಿದ್ದರೆ ಅದು ಪ್ರಲೋಭನೆ ಆಗುತ್ತಿರಲಿಲ್ಲ.

ಹಾಗಾಗಿ ಯೇಸು ಯೆರೂಸಲೇಮಿಗೆ ಹೋಗಿ ದೇವಾಲಯದ ಅತೀ ಎತ್ತರದ ಸ್ಥಳದಲ್ಲಿ ನಿಂತಿರುವ ಸಾಧ್ಯತೆ ಇದೆ. ಆದರೂ ಈ ಲೇಖನದ ಆರಂಭದಲ್ಲಿ ತಿಳಿಸಿದಂತೆ ಸೈತಾನ ಯೇಸುವಿಗೆ ದೇವಾಲಯವನ್ನು ಹೇಗೆ ತೋರಿಸಿದ ಅಂತ ನಮಗೆ ಗೊತ್ತಿಲ್ಲ. ಆದರೆ ಒಂದಂತೂ ನಿಜ, ಯೇಸುವನ್ನು ತಪ್ಪು ಮಾಡುವಂತೆ ಸೈತಾನ ಪ್ರಲೋಭಿಸುತ್ತಲೇ ಇದ್ದನು. ಪ್ರತಿಬಾರಿ ಅದನ್ನು ಯೇಸು ದೃಢವಾಗಿ ತಿರಸ್ಕರಿಸಿದನು.

^ ಪ್ಯಾರ. 1 ಯೆಹೆಜ್ಕೇಲ 37:1-14 ಮತ್ತು ಪ್ರಕಟನೆ 11:7-12⁠ರಲ್ಲಿ ತಿಳಿಸಿರುವ ಎರಡೂ ವೃತ್ತಾಂತಗಳು 1919⁠ರಲ್ಲಿ ನಡೆದ ಘಟನೆಗಳ ಬಗ್ಗೆ ಮುಂತಿಳಿಸುತ್ತವೆ. ಯೆಹೆಜ್ಕೇಲ 37:1-14⁠ರಲ್ಲಿರುವ ಪ್ರವಾದನೆ ಎಲ್ಲಾ ದೇವಜನರು 1919⁠ರಲ್ಲಿ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆಯಾಗಿ ಶುದ್ಧ ಆರಾಧನೆಗೆ ಹಿಂತಿರುಗಿದ್ದನ್ನು ಸೂಚಿಸುತ್ತದೆ. ಆದರೆ ಪ್ರಕಟಣೆ 11:7-12, ದೇವಜನರನ್ನು ಮುನ್ನಡೆಸುತ್ತಿದ್ದ ಅಭಿಷಿಕ್ತ ಸಹೋದರರ ಒಂದು ಚಿಕ್ಕ ಗುಂಪು 1919⁠ರಲ್ಲಿ ಪುನಸ್ಥಾಪನೆಯಾದದ್ದನ್ನು ಸೂಚಿಸುತ್ತದೆ. ಅಲ್ಲಿಯವರೆಗೆ ಆ ಸಹೋದರರು ನಿಷ್ಕ್ರಿಯರಾಗಿದ್ದರು.