ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ತಿಳಿದಿರಬೇಕಾದ ಪ್ರಾಮುಖ್ಯ ಕಥೆ
ಬೈಬಲ್ ತರ ಬೇರೆ ಯಾವ ಧಾರ್ಮಿಕ ಪುಸ್ತಕನೂ ಇಲ್ಲ. ಎಷ್ಟೋ ಸಮಯದಿಂದ ಅನೇಕರ ನಂಬಿಕೆಯನ್ನ ಬದಲಾಯಿಸಿದ್ದು ಇದೇ ಬೈಬಲ್. ಎಷ್ಟೋ ಪರೀಕ್ಷೆ ಮತ್ತು ಟೀಕೆಗಳನ್ನ ಸಹಿಸಿಕೊಂಡ ಒಂದೇ ಒಂದು ಪುಸ್ತಕ ಬೈಬಲ್ ಆಗಿದೆ.
ಉದಾಹರಣೆಗೆ, ಕೆಲವು ವಿದ್ವಾಂಸರು ಮೂಲ ಬರಹದಲ್ಲಿರುವ ವಿಷಯಗಳೇ ಈಗಿನ ಬೈಬಲಲ್ಲಿ ಇದೆಯಾ ಇಲ್ವಾ ಅಂಥ ಸಂಶಯ ಪಡ್ತಾರೆ. ಧಾರ್ಮಿಕ ಅಧ್ಯಯನ ಮಾಡಿದ ಒಬ್ಬ ಪ್ರೋಫೆಸರ್ ಹೇಳಿದ್ದು: “ಮೂಲ ಬರಹದಲ್ಲಿ ಇರುವ ನಿಖರ ಮಾಹಿತಿ ಆಧುನಿಕ ಬೈಬಲಲ್ಲೂ ಇದೆಯಾ ಅನ್ನೋ ವಿಷಯದಲ್ಲಿ ಯಾವ ಗ್ಯಾರಂಟಿನೂ ಇಲ್ಲ. ನಮ್ಮ ಹತ್ರ ಇರೋದು ಬರಿ ತಪ್ಪುಗಳಿರೋ ಪ್ರತಿಗಳೇ. ಮೂಲ ಪ್ರತಿಗಳು ಬರೆದು ಎಷ್ಟೋ ಶತಮಾನಗಳಾದ ಮೇಲೆ ಈ ಪ್ರತಿಗಳನ್ನು ಮಾಡಿರೋದು. ಹಾಗಾಗಿ ಈ ಪ್ರತಿಗಳು ಮೂಲ ಪ್ರತಿಗಳಿಗಿಂತ ಎಷ್ಟೋ ಭಿನ್ನವಾಗಿವೆ.”
ಕೆಲವರ ಧರ್ಮ ಬೇರೆ ಆಗಿರೋದರಿಂದ ನಾವು ಬೈಬಲನ್ನ ನಂಬಬಹುದಾ ಅಂತ ಯೋಚಿಸುತ್ತಾರೆ. ಫೈಜ಼ಲ್ ಅವರ ಉದಾಹರಣೆ ನೋಡಿ. ಬೈಬಲ್ ಒಂದು ಪವಿತ್ರ ಪುಸ್ತಕ, ಆದ್ರೆ ಅದರಲ್ಲಿರುವ ವಿಷಯಗಳು ಬದಲಾಗಿವೆ ಅಂತ ಅವರ ಮನೆಯವರು ಹೇಳಿಕೊಟ್ಟಿದ್ರು. ಫೈಜ಼ಲ್ ಹೇಳಿದ್ದು: “ಹಾಗಾಗಿ ಯಾರಾದ್ರು ನನ್ನ ಹತ್ರ ಬೈಬಲ್ ಬಗ್ಗೆ ಹೇಳೋಕೆ ಬಂದಾಗ, ಅದನ್ನ ನಂಬಬೇಕಾ ಬೇಡ್ವಾ ಅಂತ ಸಂಶಯ ಆಗ್ತಿತ್ತು. ಎಷ್ಟೆಂದ್ರೂ ಅವರ ಹತ್ತಿರ ಬದಲಾಗಿರೋ ಬೈಬಲ್ ಬಿಟ್ರೆ ಮೂಲ ಬರಹ ಅಂತೂ ಇಲ್ಲ.”
ಬೈಬಲ್ ಬದಲಾಗಿದೆಯಾ ಇಲ್ವಾ ಅನ್ನೋ ವಿಷಯದ ಬಗ್ಗೆ ತಿಳಿದುಕೊಳ್ಳೋದು ಪ್ರಾಮುಖ್ಯನಾ? ಈ ಪ್ರಶ್ನೆಗಳ ಬಗ್ಗೆ ಸ್ವಲ್ಪ ಯೋಚಿಸಿ: ಭವಿಷ್ಯದ ಬಗ್ಗೆ ಹೇಳಿರೋ ಮಾತುಗಳು ಮೂಲ ಬರಹದಲ್ಲಿ ಇದೆಯಾ ಅಂತ ಗೊತ್ತಿಲ್ದೆ ಇದ್ರೂ ಅದನ್ನ ನಂಬಬಹುದಾ? (ರೋಮನ್ನರಿಗೆ 15:4) ಒಂದುವೇಳೆ ಆಧುನಿಕ ಬೈಬಲಲ್ಲಿ ತಪ್ಪಾಗಿದ್ರೆ, ಕೆಲಸ, ಕುಟುಂಬ ಮತ್ತು ಆರಾಧನೆಗೆ ಸಂಬಂಧಿಸಿದ ಪ್ರಾಮುಖ್ಯ ನಿರ್ಧಾರಗಳನ್ನ ಮಾಡೋಕೆ ಅದರಲ್ಲಿರೋ ತತ್ವಗಳನ್ನ ನೀವು ಬಳಸ್ತೀರಾ?
ಮೂಲ ಬರಹ ಈಗ ಕಣ್ಮರೆಯಾಗಿದ್ರೂ ಬೈಬಲಿನ ಸಾವಿರಾರು ಹಸ್ತಪ್ರತಿಗಳು ಉಳಿದುಕೊಂಡಿವೆ. ಹಾಳಾಗೋ ಸಾಧ್ಯತೆ ಇದ್ರೂ, ವಿರೋಧ ಇದ್ರೂ, ವಿಷಯಗಳನ್ನ ತಿರುಚೋಕೆ ಪ್ರಯತ್ನ ನಡೆದ್ರೂ ಈ ಹಸ್ತಪ್ರತಿಗಳು ಹೇಗೆ ಉಳಿದುಕೊಳ್ತು? ಆಧುನಿಕ ಬೈಬಲ್ ಸತ್ಯವಾಗಿದೆ ಅಂತ ನಂಬೋಕೆ ಈಗ ಉಳಿದುಕೊಂಡಿರೋ ಹಸ್ತಪ್ರತಿಗಳು ಹೇಗೆ ಸಹಾಯ ಮಾಡುತ್ತೆ? ಈ ಪ್ರಶ್ನೆಗಳಿಗೆ ಉತ್ತರ ಮುಂದಿನ ಕಥೆ ಹೇಳುತ್ತೆ.