ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಯೇಸು ಕುಷ್ಠರೋಗಿಗಳ ಜೊತೆ ಬೇರೆ ಜನರಿಗಿಂತ ಹೇಗೆ ಭಿನ್ನವಾಗಿ ನಡೆದುಕೊಳ್ಳುತ್ತಿದ್ದ?

ಆ ಕಾಲದಲ್ಲಿ ಕುಷ್ಠವು ಒಂದು ಮಾರಣಾಂತಿಕ ಕಾಯಿಲೆಯಾಗಿತ್ತು. ಇದು ರೋಗಿಯ ನರಗಳನ್ನು ಬಾಧಿಸಿ ಶಾಶ್ವತ ಹಾನಿ ಮಾಡುತ್ತಿತ್ತು, ಕುರೂಪ ಮಾಡುತ್ತಿತ್ತು. ಆಗ ಅದಕ್ಕಿನ್ನೂ ಔಷಧಿ ಕಂಡುಹಿಡಿದಿರಲಿಲ್ಲ. ಹಾಗಾಗಿ ಯೆಹೂದ್ಯರಿಗೆ ಎಷ್ಟು ಭಯವಿತ್ತೆಂದರೆ ಕುಷ್ಠರೋಗಿಗಳನ್ನು ದೂರ ಇಡುತ್ತಿದ್ದರು. ಅಷ್ಟೇ ಅಲ್ಲ, ಕುಷ್ಠರೋಗಿಗಳು ಸಹ ತಮ್ಮ ಸ್ಥಿತಿಯ ಬಗ್ಗೆ ಇತರರನ್ನು ಎಚ್ಚರಿಸಬೇಕೆಂಬ ಧರ್ಮಶಾಸ್ತ್ರದ ನಿಯಮವಿತ್ತು.—ಯಾಜಕಕಾಂಡ 13:45, 46.

ಧರ್ಮಶಾಸ್ತ್ರದ ನಿಯಮಗಳಲ್ಲದೆ ಯೆಹೂದಿ ಧರ್ಮಗುರುಗಳು ಕುಷ್ಠರೋಗದ ಬಗ್ಗೆ ಅನೇಕ ನಿಯಮಗಳನ್ನು ಮಾಡಿದ್ದರು. ಇದರಿಂದ ಕುಷ್ಠರೋಗಿಗಳಿಗೆ ಬದುಕುವುದೇ ಕಷ್ಟವಾಗಿತ್ತು. ಉದಾಹರಣೆಗೆ, ಕುಷ್ಠರೋಗಿಯ ಹತ್ತಿರ ನಾಲ್ಕು ಕ್ಯೂಬಿಟ್‌ಗಳ ಅಥವಾ ಸುಮಾರು ಆರು ಅಡಿ (2 ಮೀಟರ್‌) ಅಂತರದೊಳಗೆ ಯಾರೂ ಬರಬಾರದೆಂದು ಯೆಹೂದಿ ರಬ್ಬಿಗಳು ನಿಯಮ ಮಾಡಿದ್ದರು. ಒಂದುವೇಳೆ ಗಾಳಿ ಜೋರಾಗಿ ಬೀಸುತ್ತಿದ್ದರೆ, ಕುಷ್ಠರೋಗಿಯಿಂದ ಕಡಿಮೆಪಕ್ಷ 100 ಕ್ಯೂಬಿಟ್‌ಗಳು ಅಥವಾ ಸುಮಾರು 150 ಅಡಿ (45 ಮೀಟರ್‌) ದೂರವಿರಬೇಕಿತ್ತು. ಕುಷ್ಠರೋಗಿಗಳು “ಪಾಳೆಯದ ಹೊರಗೆ” ಜೀವಿಸಬೇಕು ಎನ್ನುವ ನಿಯಮ ಧರ್ಮಶಾಸ್ತ್ರದಲ್ಲಿತ್ತು. ಆದರೆ ಈ ಧರ್ಮಗುರುಗಳು ಇದನ್ನು ತಿರುಚಿ ರೋಗಿಗಳು ಪಟ್ಟಣದ ಗೋಡೆಗಳ ಹೊರಗೆ ಜೀವಿಸಬೇಕು ಎನ್ನುವ ನಿಯಮ ಮಾಡಿದ್ದರು. ಒಂದುವೇಳೆ, ಒಬ್ಬ ಕುಷ್ಠರೋಗಿ ಪಟ್ಟಣದ ಒಳಗಿರುವುದನ್ನು ರಬ್ಬಿಗಳು ನೋಡಿದರೆ “ಬೇರೆಯವರನ್ನು ಅಶುದ್ಧಮಾಡಬೇಡ, ಹೋಗಾಚೆ” ಎಂದು ಕಲ್ಲೆಸೆದು ಹೊರಗಟ್ಟುತ್ತಿದ್ದರು.

ಆದರೆ ಯೇಸು ಹೇಗೆ ನಡೆದುಕೊಂಡ? ರಬ್ಬಿಗಳಂತೆ ಕುಷ್ಠರೋಗಿಗಳನ್ನು ಹೊರಗೆ ಓಡಿಸಲಿಲ್ಲ. ಬದಲಿಗೆ ಅವರನ್ನು ಮುಟ್ಟಿ ಕಾಯಿಲೆ ವಾಸಿಮಾಡಿದ.—ಮತ್ತಾಯ 8:3. ▪ (w16-E No. 4)

ಯೆಹೂದಿ ಧರ್ಮಗುರುಗಳು ಯಾವ್ಯಾವ ಕಾರಣಗಳಿಗಾಗಿ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ ಕೊಡುತ್ತಿದ್ದರು?

ಕ್ರಿಸ್ತ ಶಕ 71/72 ರ ವಿವಾಹ ವಿಚ್ಛೇದನ ಪತ್ರ

ಒಂದನೇ ಶತಮಾನದಲ್ಲಿ ಯೆಹೂದಿ ಧರ್ಮಗುರುಗಳ ಮಧ್ಯೆ ವಿವಾಹ ವಿಚ್ಛೇದನದ ಬಗ್ಗೆ ತುಂಬ ಭಿನ್ನಾಭಿಪ್ರಾಯವಿತ್ತು. ಒಮ್ಮೆ, ಕೆಲವು ಫರಿಸಾಯರು ಯೇಸುವಿನ ಹತ್ತಿರ ಬಂದು “ಒಬ್ಬನು ಯಾವುದೇ ಕಾರಣಕ್ಕಾಗಿ ತನ್ನ ಹೆಂಡತಿಗೆ ವಿಚ್ಛೇದನ ನೀಡುವುದು ಧರ್ಮಸಮ್ಮತವೊ?” ಎಂದು ಪ್ರಶ್ನೆ ಕೇಳಿದ್ದರು.—ಮತ್ತಾಯ 19:3.

ಮೋಶೆಯ ಧರ್ಮಶಾಸ್ತ್ರದ ಪ್ರಕಾರ “ಮದುವೆಮಾಡಿಕೊಂಡ ಸ್ತ್ರೀಯಲ್ಲಿ ಏನೋ ಅವಲಕ್ಷಣವನ್ನು” ಕಂಡರೆ ಗಂಡ ವಿಚ್ಛೇದನ ಕೊಡಬಹುದಿತ್ತು. (ಧರ್ಮೋಪದೇಶಕಾಂಡ 24:1) ಯೇಸುವಿನ ಕಾಲದಲ್ಲಿ ಶಾಮೈ ಮತ್ತು ಹಿಲೆಲ್‌ ಎನ್ನುವ ಎರಡು ಗುಂಪುಗಳಿದ್ದವು. ಈ ಎರಡು ಗುಂಪುಗಳು ಈ ನಿಯಮಕ್ಕೆ ಬೇರೆ ಬೇರೆ ಅರ್ಥ ಕೊಡುತ್ತಿದ್ದವು. ಹಾದರದ ಕಾರಣವಿದ್ದರೆ ಮಾತ್ರ ವಿಚ್ಛೇದನ ನೀಡಬಹುದು ಎಂದು ಶಾಮೈ ಗುಂಪು ಹೇಳುತ್ತಿತ್ತು. ಆದರೆ ಹಿಲೆಲ್‌ ಗುಂಪಿನ ಪ್ರಕಾರ, ಚಿಕ್ಕಪುಟ್ಟ ಕಾರಣಗಳಿದ್ದರೂ ಗಂಡ ವಿಚ್ಛೇದನ ಕೊಡಬಹುದೆಂದು ಹೇಳುತ್ತಿತ್ತು. ಉದಾಹರಣೆಗೆ, ಹೆಂಡತಿ ಚೆನ್ನಾಗಿ ಅಡುಗೆ ಮಾಡಿರದಿದ್ದರೆ ಅಥವಾ ಹೆಂಡತಿಗಿಂತ ಸುಂದರವಾದವಳು ಸಿಕ್ಕಿದರೆ ವಿಚ್ಛೇದನ ಕೊಡಬಹುದು ಅಂತ ಹೇಳುತ್ತಿತ್ತು.

ಯೇಸು ಆ ಫರಿಸಾಯರ ಪ್ರಶ್ನೆಗೆ ಯಾವ ಉತ್ತರ ಕೊಟ್ಟ? “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ” ಎಂದು ಸ್ಪಷ್ಟವಾಗಿ ಯೇಸು ಉತ್ತರ ಕೊಟ್ಟನು.—ಮತ್ತಾಯ 19:6, 9. ▪ (w16-E No. 4)