ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ನಿಜ ಸಾಂತ್ವನ ಯಾರಿಂದ ಸಿಗುತ್ತದೆ?

ದೇವರು ಸಂತೈಸುವ ವಿಧಗಳು

ದೇವರು ಸಂತೈಸುವ ವಿಧಗಳು

‘ಯೆಹೋವನು * ಸಕಲ ಸಾಂತ್ವನದ ದೇವರೂ ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುವವನೂ ಆಗಿದ್ದಾನೆ’ ಎಂದು ಅಪೊಸ್ತಲ ಪೌಲನು ವರ್ಣಿಸಿದ್ದಾನೆ. (2 ಕೊರಿಂಥ 1:3, 4) ಯಾವುದೇ ವ್ಯಕ್ತಿಗೆ, ಅದೆಷ್ಟೇ ದೊಡ್ಡ ಸಮಸ್ಯೆ ಇದ್ದರೂ ಯೆಹೋವನು ಸಂತೈಸಬಲ್ಲನು ಎಂದು ಬೈಬಲ್‌ ಭರವಸೆ ಕೊಡುತ್ತದೆ.

ನಾವು ಕಾಯಿಲೆಬಿದ್ದಾಗ ವೈದ್ಯರ ಸಹಾಯ ಪಡೆಯಬೇಕೆಂದರೆ ಮೊದಲು ವೈದ್ಯರ ಹತ್ತಿರ ಹೋಗಬೇಕು. ಅದೇ ರೀತಿ, ದೇವರಿಂದ ಸಾಂತ್ವನ ಪಡೆಯಬೇಕೆಂದರೆ ನಾವೂ ಒಂದು ಕೆಲಸ ಮಾಡಬೇಕು. ಅದೇನೆಂದರೆ, ನಾವು ದೇವರಿಗೆ ಹತ್ತಿರ ಆಗಬೇಕು. ಆದ್ದರಿಂದ, “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲ್‌ ಹೇಳುತ್ತದೆ.—ಯಾಕೋಬ 4:8.

ದೇವರು ನಿಜವಾಗಿಯೂ ನಮಗೆ ಹತ್ತಿರ ಆಗುತ್ತಾನಾ? ಆಗ್ತಾನೆ ಅಂತ ನಂಬೋದಕ್ಕೆ ಕಾರಣಗಳಿವೆ. ಮೊದಲನೇ ಕಾರಣ, ನಮಗೆ ಸಹಾಯ ಮಾಡಲು ಇಷ್ಟ ಇದೆ ಅಂತ ಸ್ವತಃ ದೇವರೇ ತುಂಬ ಸಾರಿ ಹೇಳಿದ್ದಾನೆ. (ಇದರ ಜೊತೆಯಲ್ಲಿರುವ  ಚೌಕವನ್ನು ನೋಡಿ.) ಎರಡನೇ ಕಾರಣ, ಹಿಂದಿನ ಕಾಲದಲ್ಲೂ ನಮ್ಮ ಕಾಲದಲ್ಲೂ ದೇವರಿಂದ ಸಾಂತ್ವನ ಪಡೆದುಕೊಂಡವರ ಅನೇಕ ಉದಾಹರಣೆಗಳಿವೆ.

ದೇವರಿಂದ ಸಹಾಯ ಪಡೆದ ಕೆಲವರಲ್ಲಿ ದಾವೀದನೂ ಒಬ್ಬನು. ಅವನು ಅನೇಕ ಕಷ್ಟಗಳನ್ನು ಅನುಭವಿಸಿದನು. ಆಗ “ನನ್ನ ವಿಜ್ಞಾಪನೆಯನ್ನು ಲಾಲಿಸು” ಎಂದು ಪ್ರಾರ್ಥಿಸಿದನು. ಇದಕ್ಕೆ ದೇವರು ಉತ್ತರ ಕೊಟ್ಟನಾ? ಹೌದು, ಕೊಟ್ಟನು. “ನನಗೆ ಸಹಾಯವು ಉಂಟಾಯಿತು. ಆದಕಾರಣ ನನ್ನ ಹೃದಯವು ಹರ್ಷಿಸುವದು” ಎಂದು ದಾವೀದನೇ ಹೇಳಿದ್ದಾನೆ.—ಕೀರ್ತನೆ 28:2, 7.

ದುಃಖದಲ್ಲಿದ್ದವರನ್ನು ಯೇಸು ಸಂತೈಸಿದ ವಿಧ

ಸಂತೈಸುವುದರಲ್ಲಿ ಯೇಸುವಿಗೆ ಪ್ರಮುಖ ಪಾತ್ರ ಇರಬೇಕೆನ್ನುವುದು ದೇವರ ಉದ್ದೇಶ. ಆದ್ದರಿಂದ ಆತನು ಯೇಸುವಿಗೆ ಬೇರೆಲ್ಲಾ ಕೆಲಸಗಳ ಜೊತೆಯಲ್ಲಿ “ಮನಮುರಿದವರನ್ನು ಕಟ್ಟಿ ವಾಸಿಮಾಡುವ” ಮತ್ತು “ದುಃಖಿತರೆಲ್ಲರನ್ನು ಸಂತೈಸುವ” ಕೆಲಸವನ್ನೂ ಕೊಟ್ಟನು. (ಯೆಶಾಯ 61:1, 2) ಹೀಗೆ, ಯೇಸು ‘ಕಷ್ಟದಲ್ಲಿರುವವರಿಗೆ’ ಹೆಚ್ಚಿನ ಕಾಳಜಿ ತೋರಿಸಿದನು.—ಮತ್ತಾಯ 11:28-30.

ಯೇಸು ವಿವೇಕಯುತ ಸಲಹೆ ಕೊಡುವ ಮೂಲಕ, ಜನರನ್ನು ದಯೆಯಿಂದ ಉಪಚರಿಸುವ ಮೂಲಕ ಮತ್ತು ಅವರ ಕಾಯಿಲೆಗಳನ್ನು ಗುಣಪಡಿಸುವ ಮೂಲಕ ಸಂತೈಸಿದನು. ಒಂದು ಸಲ ಒಬ್ಬ ಕುಷ್ಠರೋಗಿ ಯೇಸುವಿಗೆ, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. ಆಗ ಯೇಸು ಕನಿಕರಪಟ್ಟು, “ನನಗೆ ಮನಸ್ಸುಂಟು. ಶುದ್ಧನಾಗು” ಅಂದನು. (ಮಾರ್ಕ 1:40, 41) ಕೂಡಲೇ, ಅವನ ಕುಷ್ಠ ವಾಸಿವಾಯಿತು.

ನಮ್ಮನ್ನು ಸಂತೈಸಲು ಈಗ ಯೇಸು ಭೂಮಿಯಲ್ಲಿಲ್ಲ. ಆದರೆ ಅವನ ತಂದೆಯಾದ ಯೆಹೋವನು ‘ಸಕಲ ಸಾಂತ್ವನದ ದೇವರಾಗಿದ್ದಾನೆ.’ ಸಹಾಯದ ಅಗತ್ಯ ಇರುವವರಿಗೆ ಆತನು ಯಾವಾಗಲೂ ಸಹಾಯ ಮಾಡುತ್ತಾನೆ. (2 ಕೊರಿಂಥ 1:3) ಆತನು ಜನರನ್ನು ಸಂತೈಸುವ ನಾಲ್ಕು ವಿಧಗಳನ್ನು ನೋಡಿ:

  • ಬೈಬಲ್‌. “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.”—ರೋಮನ್ನರಿಗೆ 15:4.

  • ದೇವರ ಪವಿತ್ರಾತ್ಮ. ಯೇಸು ಸತ್ತ ಸ್ವಲ್ಪ ಸಮಯದ ನಂತರ ಕ್ರೈಸ್ತ ಸಭೆಯು ‘ಯೆಹೋವನ ಪವಿತ್ರಾತ್ಮದಿಂದ ಸಾಂತ್ವನವನ್ನು’ ಪಡೆಯಿತು. (ಅಪೊಸ್ತಲರ ಕಾರ್ಯಗಳು 9:31) ಇದರಿಂದಾಗಿ ಸಭೆಯಲ್ಲಿ ಶಾಂತಿ ನೆಲೆಸಿತು. ದೇವರ ಶಕ್ತಿಯಾದ ಪವಿತ್ರಾತ್ಮವು ತುಂಬ ಪ್ರಭಾವಶಾಲಿಯಾಗಿದೆ. ದೇವರು ಇದನ್ನು ಉಪಯೋಗಿಸಿ ಯಾರನ್ನು ಬೇಕಾದರೂ, ಅವರು ಎಂಥದ್ದೇ ಕಷ್ಟದಲ್ಲಿದ್ದರೂ ಸಂತೈಸಬಲ್ಲನು.

  • ಪ್ರಾರ್ಥನೆ. “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ.” ಬದಲಿಗೆ “ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ . . . ಕಾಯುವುದು” ಎಂದು ಉತ್ತೇಜಿಸುತ್ತದೆ ಬೈಬಲ್‌.—ಫಿಲಿಪ್ಪಿ 4:6, 7.

  • ಜೊತೆ ಕ್ರೈಸ್ತರು. ಅವರು ನಮಗೆ ಕಷ್ಟದಲ್ಲಿರುವಾಗ ಸಾಂತ್ವನದ ಆಸರೆ ನೀಡುತ್ತಾರೆ. ‘ಕೊರತೆಯಲ್ಲಿ, ಸಂಕಟದಲ್ಲಿದ್ದಾಗ’ ತನ್ನ ಜೊತೆಯಲ್ಲಿರುವವರು ‘ಬಲವರ್ಧಕ ಸಹಾಯ ಕೊಟ್ಟರು’ ಎಂದು ಅಪೊಸ್ತಲ ಪೌಲ ಹೇಳಿದನು.—ಕೊಲೊಸ್ಸೆ 4:11; 1 ಥೆಸಲೊನೀಕ 3:7.

ಇದರಿಂದ ನಿಜವಾಗಿಯೂ ಸಾಂತ್ವನ ಸಿಗುತ್ತಾ ಅಂತ ನೀವು ಯೋಚಿಸಬಹುದು. ಈಗ ನಾವು ಮೊದಲನೇ ಲೇಖನದಲ್ಲಿ ತಿಳಿಸಲಾದ ವ್ಯಕ್ತಿಗಳ ಬಗ್ಗೆ ಇನ್ನೂ ಸ್ವಲ್ಪ ತಿಳಿದುಕೊಳ್ಳೋಣ. ದೇವರು ಈಗಲೂ ತನ್ನ ಮಾತಿನಂತೆಯೇ ನಡೆದುಕೊಳ್ಳುತ್ತಾನೆ ಎಂದು ಇದರಿಂದ ನಿಮಗೆ ಗೊತ್ತಾಗುತ್ತದೆ. ಆತನು ಹೀಗೆ ಮಾತು ಕೊಟ್ಟಿದ್ದಾನೆ: “ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು.”—ಯೆಶಾಯ 66:13. (wp16-E No. 5)

^ ಪ್ಯಾರ. 3 ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.