ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ನಿಜ ಸಾಂತ್ವನ ಯಾರಿಂದ ಸಿಗುತ್ತದೆ?

ಸಂಕಷ್ಟದಲ್ಲಿರುವವರಿಗೆ ಸಾಂತ್ವನ

ಸಂಕಷ್ಟದಲ್ಲಿರುವವರಿಗೆ ಸಾಂತ್ವನ

ನಮಗೆ ನೂರಾರು ಸಮಸ್ಯೆಗಳು ಬರುತ್ತವೆ. ಆ ಎಲ್ಲಾ ಸಮಸ್ಯೆಗಳಿಗೆ ಸಾಂತ್ವನ ಪಡೆಯೋದು ಹೇಗಂತ ಇಲ್ಲಿ ತಿಳಿಸಲು ಆಗುವುದಿಲ್ಲ. ಆದ್ದರಿಂದ ಆರಂಭದ ಲೇಖನದಲ್ಲಿ ಹೇಳಿದ ನಾಲ್ಕು ಸಮಸ್ಯೆಗಳ ಬಗ್ಗೆ ನೋಡೋಣ. ಇಂಥ ಕಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿದ್ದವರು ದೇವರಿಂದ ಹೇಗೆ ಸಾಂತ್ವನ ಪಡೆದರು ಎಂದು ತಿಳಿಯೋಣ.

ಕೆಲಸ ಕಳೆದುಕೊಂಡಾಗ

“ಚಿಕ್ಕ ಪುಟ್ಟ ಕೆಲ್ಸ ಅಂತ ನೋಡದೆ ಎಲ್ಲಾ ರೀತಿಯ ಕೆಲಸ ಮಾಡಲು ಕಲಿತೆ. ನಾವು ಅನಾವಶ್ಯಕ ಖರ್ಚು ಮಾಡೋದನ್ನ ನಿಲ್ಲಿಸಿದ್ವಿ.”—ಜೊನಾತಾನ್‌

ಸೆತ್‌ * ಹೀಗನ್ನುತ್ತಾರೆ: “ನಾನೂ ನನ್‌ ಹೆಂಡ್ತಿ, ಇಬ್ರೂ ಒಂದೇ ಸಲ ಕೆಲ್ಸ ಕಳ್ಕೊಂಡ್ವಿ. ಕೆಲ್ಸ ಇಲ್ಲದವರಿಗೆ ಸರಕಾರ ಕೊಡೋ ಸ್ವಲ್ಪ ಹಣದಿಂದ ಮತ್ತು ಚಿಕ್ಕ ಪುಟ್ಟ ಕೂಲಿ ಕೆಲ್ಸ ಮಾಡಿ ಎರಡು ವರ್ಷ ತಳ್ಳಿದ್ವಿ. ಕೆಲ್ಸ ಇಲ್ದೆ ನನ್‌ ಹೆಂಡ್ತಿ ಪ್ರಿಸಿಲ್ಲ ಕುಗ್ಗಿ ಹೋದಳು. ‘ಏನೂ ಪ್ರಯೋಜನಕ್ಕೆ ಬಾರದವನು’ ಅನ್ನೋ ಭಾವನೆ ನನ್ನಲ್ಲಿ ಮನೆ ಮಾಡಿತು.”

“ಅಂಥ ಸಮಯದಲ್ಲೂ ನಮ್ಗೆ ಸಾಂತ್ವನ ಸಿಕ್ತು. ಮತ್ತಾಯ 6:34⁠ರಲ್ಲಿರುವ ಯೇಸುವಿನ ಮಾತನ್ನ ಪ್ರಿಸಿಲ್ಲ ಯಾವಾಗ್ಲೂ ನೆನಪಿಸಿಕೊಳ್ತಿದ್ದಳು. ಪ್ರತಿ ದಿನ ಆಯಾ ದಿನದ ಚಿಂತೆ ಇರೋದ್ರಿಂದ ನಾವು ನಾಳೆ ಬಗ್ಗೆ ಚಿಂತೆ ಮಾಡಬಾರದು ಅಂತ ಯೇಸು ಅಲ್ಲಿ ಹೇಳಿದ್ದಾರೆ. ಅವಳು ಮನಸ್ಸುಬಿಚ್ಚಿ ಪ್ರಾರ್ಥನೆ ಮಾಡುತ್ತಾ ಇದ್ದದರಿಂದ ಈ ಸಮಸ್ಯೆಯನ್ನು ಎದುರಿಸಲಿಕ್ಕೆ ಅವಳಿಗೆ ಬಲ ಸಿಕ್ತು. ನನಗೆ, ಕೀರ್ತನೆ 55:22⁠ನೇ ವಚನದಿಂದ ಸಾಂತ್ವನ ಸಿಕ್ತು. ಕೀರ್ತನೆಗಾರನ ಹಾಗೆ ನಾನೂ ನನ್‌ ಚಿಂತೆನೆಲ್ಲಾ ಯೆಹೋವನ ಮೇಲೆ ಹಾಕಿದೆ. ಆಗ ಯೆಹೋವನೇ ನನ್ನ ಕೈ ಹಿಡಿದು ನಡೆಸಿದ್ರು. ನನಗೀಗ ಕೆಲ್ಸ ಸಿಕ್ಕಿದೆ. ಆದ್ರೂ ನಾವು ಮತ್ತಾಯ 6:20-22⁠ರಲ್ಲಿ ಕೊಟ್ಟಿರೋ ಸಲಹೆ ಪ್ರಕಾರ ಸರಳ ಜೀವನ ಮಾಡ್ತಿದ್ದೀವಿ. ಇದ್ರಿಂದ ಒಬ್ಬರಿಗೊಬ್ಬರು ಹತ್ರ ಆಗಿದ್ದೀವಿ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನಿಗೆ ಆಪ್ತರಾಗಿದ್ದೀವಿ.”

ಜೊನಾತಾನ್‌ ಹೀಗನ್ನುತ್ತಾರೆ: “ನಾವು ಚಿಕ್ಕದೊಂದು ವ್ಯಾಪಾರ ಮಾಡ್ತಿದ್ವಿ. ಅದು ನಷ್ಟದಲ್ಲಿ ಮುಳ್ಗೋದಾಗ ‘ಮುಂದೇನಪ್ಪಾ ಮಾಡೋದು’ ಅಂತ ತುಂಬ ಭಯ ಆಯ್ತು. ಆರ್ಥಿಕ ಮುಗ್ಗಟ್ಟಿಂದಾಗಿ ನಾವು 20 ವರ್ಷ ಕಷ್ಟಪಟ್ಟು ಮಾಡಿದ ಕೆಲ್ಸ ಎಲ್ಲಾ ವ್ಯರ್ಥ ಆಗೋಯ್ತು. ನನಗೂ ನನ್‌ ಹೆಂಡ್ತಿಗೂ ಹಣದ್‌ ವಿಷ್ಯದಲ್ಲಿ ಜಗಳ ಆಗೋಕೆ ಶುರು ಆಯ್ತು. ನಷ್ಟ ಆಗಿದ್ರಿಂದ ಕ್ರೆಡಿಟ್‌ ಕಾರ್ಡಿಂದನೂ ಏನೂ ತೆಗೆದುಕೊಳ್ಳೋಕೆ ಆಗ್ಲಿಲ್ಲ.”

“ಇಂಥ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಣಯಗಳನ್ನು ಮಾಡಲು ದೇವರ ವಾಕ್ಯ ಮತ್ತು ಪವಿತ್ರಾತ್ಮ ಸಹಾಯ ಮಾಡಿತು. ಚಿಕ್ಕ ಪುಟ್ಟ ಕೆಲ್ಸ ಅಂತ ನೋಡದೆ ಎಲ್ಲಾ ರೀತಿಯ ಕೆಲಸ ಮಾಡಲು ಕಲಿತೆ. ನಾವು ಅನಾವಶ್ಯಕ ಖರ್ಚು ಮಾಡೋದನ್ನ ನಿಲ್ಲಿಸಿದ್ವಿ. ನಮ್ಮ ಜೊತೆ ಸಾಕ್ಷಿಗಳು ಸಹ ಸಹಾಯ ಮಾಡಿದ್ರು. ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿದ್ರು. ಕಷ್ಟದಲ್ಲಿದ್ದಾಗ ಕೈ ಹಿಡಿದ್ರು.”

ಮದುವೆ ಮುರಿದುಬಿದ್ದಾಗ

ರಾಕೆಲ್‌ ಹೀಗನ್ನುತ್ತಾರೆ: “ಇದ್ದಕ್ಕಿಂದ್ದಂತೆ ನನ್‌ ಗಂಡ ನನ್ನ ಬಿಟ್ಟುಹೋದಾಗ ನನಗೆ ತುಂಬ ನೋವಾಯ್ತು. ಜೊತೆಗೆ ಕೋಪಾನೂ ಬಂತು. ಆದ್ರೆ ದೇವರಿಗೆ ಆಪ್ತಳಾಗಲು ಪ್ರಯತ್ನಿಸಿದಾಗ ನನಗೆ ಸಾಂತ್ವನ ಸಿಕ್ತು. ಪ್ರತಿದಿನ ದೇವ್ರಿಗೆ ಪ್ರಾರ್ಥನೆ ಮಾಡಿದಾಗ ನೆಮ್ಮದಿ ಸಿಗ್ತಿತ್ತು. ಒಡೆದು ನುಚ್ಚುನೂರಾದ ನನ್ನ ಹೃದಯಾನ ದೇವ್ರೇ ಸರಿ ಮಾಡಿದ್ರು.”

“ಬೈಬಲನ್ನು ಕೊಟ್ಟಿದ್ದಕ್ಕೆ ದೇವ್ರಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ. ಅದ್ರಿಂದ ನನ್ನ ಕೋಪಾನ ಕಡಿಮೆ ಮಾಡೋಕಾಯ್ತು. ಅಪೊಸ್ತಲ ಪೌಲ ರೋಮನ್ನರಿಗೆ 12:21⁠ರಲ್ಲಿ ಹೇಳಿದ ಈ ಮಾತನ್ನ ನಾನು ನೆನಪಿನಲ್ಲಿಟ್ಕೊಂಡೆ: ‘ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.’”

“ಆಗಿ ಹೋಗಿರುವುದರ ಬಗ್ಗೆ ಚಿಂತೆ ಮಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ . . . ಈಗ ನಾನು ನೋವನ್ನು ಮರೆತು ಸಂತೋಷ ಕೊಡೋ ವಿಷಯಗಳನ್ನು ಮಾಡ್ತೀನಿ.”—ರಾಕೆಲ್‌

“ನಡೆದದ್ದನ್ನೆಲ್ಲಾ ಮರೆತು ಮುಂದೆ ಹೋಗೋಕೆ ಒಬ್ಬ ಒಳ್ಳೇ ಫ್ರೆಂಡ್‌ ನನ್ಗೆ ಸಹಾಯ ಮಾಡಿದ್ರು. ಅವ್ರು ನನಗೆ ಪ್ರಸಂಗಿ 3:6⁠ನ್ನು ತೋರಿಸುತ್ತಾ, ಆಗಿ ಹೋಗಿರುವುದರ ಬಗ್ಗೆ ಚಿಂತೆ ಮಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ ಅಂತ ಹೇಳಿದ್ರು. ಇದನ್ನ ಮಾಡೋದು ಅಷ್ಟೇನೂ ಸುಲಭ ಆಗಿರಲ್ಲಿಲ್ಲ. ಈಗ ನಾನು ನೋವನ್ನು ಮರೆತು ಸಂತೋಷ ಕೊಡೋ ವಿಷಯಗಳನ್ನು ಮಾಡ್ತೀನಿ.”

“ಮದುವೆ ಮುರಿದಾಗ ಸಹಾಯದ ಅವಶ್ಯಕತೆ ತುಂಬ ಇರುತ್ತೆ. ಇಂಥ ಪರಿಸ್ಥಿತಿಯಲ್ಲಿದ್ದ ನನಗೆ ನನ್ನ ಫ್ರೆಂಡ್‌ ಪ್ರತಿದಿನ ಸಹಾಯ ಮಾಡಿದಳು. ನಾನ್‌ ಅಳುವಾಗ ಅವಳೂ ಅಳುತ್ತಿದ್ದಳು, ನನ್ನನ್ನ ಸಂತೈಸಿದಳು, ನನ್ನ ಮೇಲೆ ತುಂಬ ಪ್ರೀತಿ ಇದೆ ಅಂತ ತೋರಿಸಿಕೊಟ್ಲು. ನನ್ನ ಮನಸ್ಸಿಗಾದ ಗಾಯವನ್ನ ಗುಣಮಾಡೋಕೆ ಯೆಹೋವ ದೇವ್ರು ಅವಳನ್ನ ಉಪಯೋಗಿಸಿದ್ರು.”

ಕಾಯಿಲೆಬಿದ್ದಾಗ ಅಥವಾ ವೃದ್ಧಾಪ್ಯದಲ್ಲಿದ್ದಾಗ

“ಪ್ರಾರ್ಥಿಸಿದ ನಂತರ, ಆತನು ತನ್ನ ಪವಿತ್ರಾತ್ಮದಿಂದ ಬಲಪಡಿಸ್ತಾನೆ.”—ಲೂಯೀಸ್‌

ಮೊದಲನೇ ಲೇಖನದಲ್ಲಿ ತಿಳಿಸಲಾದ ಲೂಯೀಸ್‌ರಿಗೆ ತುಂಬ ಗಂಭೀರವಾದ ಹೃದಯದ ಸಮಸ್ಯೆ ಇದೆ. ಅವರು ಎರಡು ಸಾರಿ ಸಾವಿನಂಚಿಗೆ ಬಂದಿದ್ದರು. ಈಗ ಅವರಿಗೆ ದಿನಕ್ಕೆ 16 ತಾಸು ಆಮ್ಲಜನಕವನ್ನು ಕೃತಕವಾಗಿ ಪೂರೈಸಬೇಕಾಗುತ್ತದೆ. ಅವರು ಹೇಳುವುದು: “ನಾನು ಯೆಹೋವನಿಗೆ ಯಾವಾಗ್ಲೂ ಪ್ರಾರ್ಥಿಸ್ತೇನೆ. ಪ್ರಾರ್ಥಿಸಿದ ನಂತರ, ಆತನು ತನ್ನ ಪವಿತ್ರಾತ್ಮದಿಂದ ಬಲಪಡಿಸ್ತಾನೆ. ದೇವ್ರಿಗೆ ನನ್ನ ಬಗ್ಗೆ ಕಾಳಜಿ ಇದೆ ಅಂತ ನನಗೆ ನಂಬಿಕೆ ಇದೆ. ಆದ್ದರಿಂದ ಸಮಸ್ಯೆ ಇದ್ದರೂ ಮುಂದೆ ಹೋಗುತ್ತಿರಲು ಪ್ರಾರ್ಥನೆ ನನಗೆ ಧೈರ್ಯ ಕೊಡುತ್ತೆ.”

80⁠ರ ಪ್ರಾಯದಲ್ಲಿರುವ ಪೇಟ್ರ ಎಂಬಾಕೆ ಹೇಳುವುದು: “ನನಗೆ ತುಂಬ ವಿಷಯಗಳನ್ನ ಮಾಡ್ಬೇಕಂತ ಅನ್ಸುತ್ತೆ. ಆದ್ರೆ ಅದು ನನ್‌ ಕೈಲಾಗಲ್ಲ. ದಿನದಿಂದ ದಿನಕ್ಕೆ ನನ್ನ ಶಕ್ತಿ ಕುಂದೋದನ್ನು ನೋಡುವಾಗ ತುಂಬ ಬೇಜಾರಾಗುತ್ತೆ. ಔಷಧಿ ಮೇಲೆನೇ ಅವಲಂಭಿಸಬೇಕಾಗಿದೆ. ಯೇಸು ತನಗೆ ಬಂದ ಕಷ್ಟದ ಬಗ್ಗೆ ತನ್ನ ತಂದೆ ಹತ್ರ, ‘ಸಾಧ್ಯವಾದರೆ ಇದನ್ನ ತೆಗೆದುಹಾಕು’ ಅಂತ ಕೇಳಿದ್ದರ ಬಗ್ಗೆ ನಾನು ಆಗಾಗ ಯೋಚಿಸ್ತೀನಿ. ಆ ಸಮಯದಲ್ಲಿ, ಯೆಹೋವ ದೇವ್ರು ಯೇಸುವಿಗೆ ಬಲ ಕೊಟ್ಟರು, ನನಗೂ ಅದೇ ರೀತಿ ಬಲ ಕೊಡ್ತಾರೆ. ಪ್ರತಿದಿನ ಪ್ರಾರ್ಥನೆ ಮಾಡೋದೇ ನನ್ನ ಔಷಧಿ. ದೇವ್ರ ಹತ್ರ ಮಾತಾಡಿದ ನಂತರ ನನಗೆ ತುಂಬ ಬಲ ಸಿಗುತ್ತೆ.”—ಮತ್ತಾಯ 26:39.

30 ವರ್ಷಗಳಿಂದ ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಹೂಲ್ಯಾನ್‌ಗೂ ಅದೇ ರೀತಿ ಅನಿಸುತ್ತದೆ. “ನನಗಿದ್ದ ಒಳ್ಳೇ ಕೆಲ್ಸ ಕಳ್ಕೊಂಡು ನಾನೀಗ ಗಾಲಿ ಕುರ್ಚಿಯಲ್ಲಿದ್ದೀನಿ. ಆದ್ರೂ ನನ್‌ ಜೀವನ ವ್ಯರ್ಥ ಅಂತ ನನಗನಿಸಲ್ಲ, ಯಾಕೆಂದ್ರೆ ನಾನ್‌ ಬೇರೆಯವ್ರಿಗೆ ಸಹಾಯ ಮಾಡ್ತಾ ಇರ್ತೀನಿ. ಇದ್ರಿಂದ ನನ್‌ ಕಷ್ಟಾನ ಮರೀತೀನಿ. ತುಂಬ ಕಷ್ಟ ಅನಿಸಿದಾಗ ಯೆಹೋವನು ಬಲ ಕೊಡ್ತಾನೆ. ಅಪೊಸ್ತಲ ಪೌಲನು ಹೇಳಿದಂತೆ, ‘ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ’ ಅಂತ ನಾನೂ ಹೇಳಬಲ್ಲೆ.”—ಫಿಲಿಪ್ಪಿ 4:13.

ಪ್ರಿಯರು ಸಾವನ್ನಪ್ಪಿದಾಗ

ಆಂಟೋನ್ಯೋ ಹೇಳುವುದು: “ನಮ್‌ ಅಪ್ಪ ರಸ್ತೆ ಅಪಘಾತದಲ್ಲಿ ತೀರಿಕೊಂಡಾಗ ನನಗದನ್ನು ನಂಬಲಿಕ್ಕೇ ಆಗಲಿಲ್ಲ. ಇದು ತುಂಬ ಅನ್ಯಾಯ ಅಂತ ನನಗನಿಸಿತು. ಯಾಕೆಂದರೆ ಅವರದ್ದೇನೂ ತಪ್ಪಿರಲಿಲ್ಲ. ಅವ್ರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು ಅಷ್ಟೇ. ಅವರು ಐದು ದಿನ ಕೋಮಾದಲ್ಲಿದ್ದು ನಂತರ ತೀರಿಕೊಂಡರು. ಆ ಸಮಯದಲ್ಲಿ ಏನ್‌ ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ. ಅಮ್ಮನ ಮುಂದೆ ಅಳಬಾರದು ಅಂತ ನನ್ನ ದುಃಖನ ನುಂಗಿಕೊಂಡಿದ್ದೆ, ಆದ್ರೆ ಒಬ್ಬನೇ ಇದ್ದಾಗ ತಡೆಯೋಕಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ‘ಯಾಕೆ ಹೀಗಾಯ್ತು’ ಅಂತ ನನಗೆ ನಾನೇ ಕೇಳ್ಕೊಳ್ತಿದ್ದೆ.”

“ಆ ನೋವಿನ ದಿನಗಳಲ್ಲಿ ನನ್ನ ಭಾವನೆಗಳನ್ನು ಹಿಡಿತದಲ್ಲಿ ಇಡಲಿಕ್ಕೆ ಸಹಾಯ ಮಾಡುವಂತೆ ಮತ್ತು ಮನಸ್ಸಿಗೆ ಸಮಾಧಾನ ಕೊಡುವಂತೆ ಯೆಹೋವನಿಗೆ ಪ್ರಾರ್ಥಿಸ್ತಿದ್ದೆ. ನಿಧಾನಕ್ಕೆ ನನ್‌ ಮನಸ್ಸು ಹಗುರ ಆಯ್ತು. ಇಂಥ ವಿಷಯಗಳು ಅನಿರೀಕ್ಷಿತ, ಯಾರಿಗೆ ಬೇಕಾದ್ರೂ ಸಂಭವಿಸಬಹುದು ಎಂಬ ಬೈಬಲಿನಲ್ಲಿರುವ ಮಾತು ನನಗೆ ನೆನಪಾಯಿತು. ದೇವರು ಸುಳ್ಳಾಡುವುದಿಲ್ಲ, ಆದ್ದರಿಂದ ದೇವ್ರು ನಮ್ಮ ಅಪ್ಪನ್ನ ಜೀವಂತವಾಗಿ ಎಬ್ಬಿಸುವಾಗ ನಾನವರನ್ನ ಪುನಃ ನೋಡ್ತೀನಿ ಅನ್ನೋ ಭರವಸೆ ನನಗಿದೆ.”—ಪ್ರಸಂಗಿ 9:11; ಯೋಹಾನ 11:25; ತೀತ 1:2.

“ವಿಮಾನ ಅಪಘಾತದಲ್ಲಿ ನಮ್ಮ ಮಗ ತೀರಿಕೊಂಡರೂ ಅವನ ಜೊತೆ ಸಂತೋಷದಿಂದ ಕಳೆದ ಕ್ಷಣಗಳ ಸವಿನೆನಪು ನಮಗಿದೆ.”—ರಾಬರ್ಟ್‌

ಮೊದಲನೇ ಲೇಖನದಲ್ಲಿ ತಿಳಿಸಲಾದ ರಾಬರ್ಟ್‌ಗೂ ಇದೇ ರೀತಿ ಅನಿಸಿತು. ಅವರು ಹೇಳಿದ್ದು, “ನನಗೂ ನನ್‌ ಹೆಂಡ್ತಿಗೂ ಫಿಲಿಪ್ಪಿ 4:6, 7⁠ರಲ್ಲಿ ತಿಳಿಸಲಾಗಿರುವ ದೇವಶಾಂತಿ ಸಿಕ್ಕಿತು. ನಾವು ಯೆಹೋವನಿಗೆ ಪ್ರಾರ್ಥಿಸಿದಾಗ ಈ ಶಾಂತಿ ಸಿಕ್ಕಿತು. ಇದರಿಂದಾಗಿ ವಾರ್ತಾ ವರದಿಗಾರರಿಗೆ ಪುನರುತ್ಥಾನದ ನಿರೀಕ್ಷೆಯ ಬಗ್ಗೆ ತಿಳಿಸಲು ಸಾಧ್ಯವಾಯಿತು. ವಿಮಾನ ಅಪಘಾತದಲ್ಲಿ ನಮ್ಮ ಮಗ ತೀರಿಕೊಂಡರೂ ಅವನ ಜೊತೆ ಸಂತೋಷದಿಂದ ಕಳೆದ ಕ್ಷಣಗಳ ಸವಿನೆನಪು ನಮಗಿದೆ. ನಾವು ಅದನ್ನು ನೆನಪಿಸಿಕೊಳ್ತಾ ಇರ್ತೀವಿ.”

“ನಮ್ಮ ಜೊತೆ ಸಾಕ್ಷಿಗಳು ನಮಗೆ, ‘ನೀವು ಸಮಾಧಾನದಿಂದ ನಂಬಿಕೆ ಬಗ್ಗೆ ಮಾತಾಡಿದ್ದನ್ನ ಟಿ.ವಿ.ಯಲ್ಲಿ ನೋಡಿದ್ವಿ’ ಅಂತ ಹೇಳಿದ್ರು. ಆಗ ನಾವು, ‘ನಮಗೋಸ್ಕರ ಪ್ರಾರ್ಥಿಸಿದ್ದಕ್ಕಾಗಿ ಥ್ಯಾಂಕ್ಸ್‌, ಅದ್ರಿಂದನೇ ಆ ರೀತಿ ಮಾತಾಡಲು ಸಾಧ್ಯ ಆಯ್ತು’ ಅಂತ ಹೇಳಿದ್ವಿ. ಅವರು ಕಳಿಸಿದ ಸಂತೈಸುವ ಪತ್ರ ಮತ್ತು ಮೆಸೇಜ್‌ಗಳ ಮೂಲಕ ಯೆಹೋವನು ನಮಗೆ ಬೆಂಬಲ ಕೊಡುತ್ತಿದ್ದಾನೆ ಅಂತ ನಮಗನಿಸಿತು.”

ಮೇಲೆ ತಿಳಿಸಲಾಗಿರುವ ಉದಾಹರಣೆಗಳಲ್ಲಿ ನೋಡಿದ ಪ್ರಕಾರ, ಯಾವುದೇ ಸಮಸ್ಯೆ ಅಥವಾ ಕಷ್ಟಗಳನ್ನು ಎದುರಿಸುತ್ತಿದ್ದರೂ ಯೆಹೋವನು ಸಾಂತ್ವನ ಕೊಡಬಲ್ಲನು. ನಿಮಗೂ ಕೊಡುತ್ತಾನಾ? ಖಂಡಿತ ಕೊಡುತ್ತಾನೆ. * ಆದ್ದರಿಂದ ಸಹಾಯಕ್ಕಾಗಿ ಯೆಹೋವನ ಹತ್ರ ಕೇಳಿ. ಆತನು ‘ಸಕಲ ಸಾಂತ್ವನದ ದೇವರು’ ಆಗಿದ್ದಾನೆ.—2 ಕೊರಿಂಥ 1:3. ▪ (wp16-E No. 5)

^ ಪ್ಯಾರ. 5 ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

^ ಪ್ಯಾರ. 23 ದೇವರಿಗೆ ಆಪ್ತರಾಗಿ ಆತನಿಂದ ಸಾಂತ್ವನ ಪಡೆಯಬೇಕೆಂದು ಬಯಸುತ್ತೀರಾ? ಹಾಗಾದರೆ, ನಿಮಗೆ ಹತ್ತಿರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ ನಿಮಗೆ ಹತ್ತಿರದಲ್ಲಿರುವ ನಮ್ಮ ಶಾಖಾ ವಿಳಾಸಕ್ಕೆ ಬರೆದು ಕಳುಹಿಸಿ.