ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ

ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ

“ಒಬ್ಬರೊಡನೊಬ್ಬರು ಶಾಂತಿಯಿಂದಿರಿ.”—ಮಾರ್ಕ 9:50.

ಗೀತೆಗಳು: 39, 77

1, 2. (ಎ) ಆದಿಕಾಂಡದಲ್ಲಿ ಯಾವ ಜಗಳಗಳ ಕುರಿತು ತಿಳಿಸಲಾಗಿದೆ? (ಬಿ) ಇವುಗಳಿಂದ ನಾವೇನು ಕಲಿಯಬಹುದು?

ಬೈಬಲಿನಲ್ಲಿ ತಿಳಿಸಲಾಗಿರುವ ವೈಯಕ್ತಿಕ ಕಲಹ, ಮನಸ್ತಾಪಗಳ ಕುರಿತು ನೀವು ಎಂದಾದರೂ ಯೋಚಿಸಿದ್ದೀರಾ? ಆದಿಕಾಂಡ ಪುಸ್ತಕದ ಆರಂಭದ ಕೆಲವು ಅಧ್ಯಾಯಗಳಲ್ಲೇ ಅನೇಕ ಉದಾಹರಣೆಗಳಿವೆ. ಕಾಯಿನನು ಹೇಬೆಲನನ್ನು ಕೊಂದದ್ದು (ಆದಿ. 4:3-8); ಲೆಮೆಕನು ತನ್ನನ್ನು ಹೊಡೆದ ಯುವಕನನ್ನು ಹತಿಸಿದ್ದು (ಆದಿ. 4:23); ಅಬ್ರಹಾಮನ ದನಕಾಯುವವರು ಲೋಟನ ದನಕಾಯುವವರೊಂದಿಗೆ ಜಗಳ ಮಾಡಿದ್ದು (ಆದಿ. 13:5-7); ಹಾಗರಳು ತಾನು ಸಾರಳಿಗಿಂತ ಶ್ರೇಷ್ಠಳೆಂದು ಭಾವಿಸಿದ್ದು, ಸಾರಳು ಅಬ್ರಹಾಮನ ಮೇಲೆ ಸಿಟ್ಟುಗೊಂಡದ್ದು (ಆದಿ. 16:3-6); ಇಷ್ಮಾಯೇಲನು ಎಲ್ಲರನ್ನೂ ವಿರೋಧಿಸಿದ್ದು ಮತ್ತು ಎಲ್ಲರೂ ಅವನನ್ನು ವಿರೋಧಿಸಿದ್ದು.—ಆದಿ. 16:12.

2 ಬೈಬಲಿನಲ್ಲಿ ಈ ಕಲಹಗಳ ಬಗ್ಗೆ ಯಾಕೆ ತಿಳಿಸಲಾಗಿದೆ? ನಿಜವಾದ ಸಮಸ್ಯೆಗಳಿದ್ದ ಈ ಅಪರಿಪೂರ್ಣ ಜನರಿಂದ ನಾವು ಪಾಠ ಕಲಿಯಬೇಕೆಂದೇ. ನಾವು ಕೂಡ ಅಪರಿಪೂರ್ಣರು ಮತ್ತು ನಮ್ಮ ಜೀವನದಲ್ಲೂ ಇಂಥ ಸಮಸ್ಯೆಗಳು ಏಳುತ್ತವೆ. ಆಗ ಬೈಬಲಿನಲ್ಲಿರುವ ಒಳ್ಳೇ ಮಾದರಿಗಳನ್ನು ಅನುಸರಿಸಿ, ಕೆಟ್ಟ ಮಾದರಿಗಳನ್ನು ಅನುಸರಿಸದೇ ಇರಲು ಆಗುತ್ತದೆ. (ರೋಮ. 15:4) ಇದು ನಾವು ಇತರರೊಂದಿಗೆ ಶಾಂತಿಯಿಂದ ಇರಲು ಸಹಾಯಮಾಡುತ್ತದೆ.

3. ಈ ಲೇಖನದಲ್ಲಿ ಯಾವೆಲ್ಲ ವಿಷಯಗಳನ್ನು ಕಲಿಯಲಿದ್ದೇವೆ?

3 ಮನಸ್ತಾಪ, ಭಿನ್ನಾಭಿಪ್ರಾಯಗಳನ್ನು ಏಕೆ ಮತ್ತು ಹೇಗೆ ಬಗೆಹರಿಸಬೇಕು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಅಲ್ಲದೆ, ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಯೆಹೋವನೊಂದಿಗೆ, ಇತರರೊಂದಿಗೆ ಒಳ್ಳೇ ಸಂಬಂಧ ಇಡಲು ಸಹಾಯಮಾಡುವ ಕೆಲವು ಬೈಬಲ್‌ ತತ್ವಗಳನ್ನೂ ಕಲಿಯುವೆವು.

ದೇವರ ಸೇವಕರು ಮನಸ್ತಾಪಗಳನ್ನು ಏಕೆ ಬಗೆಹರಿಸಬೇಕು?

4. (ಎ) ಯಾವ ಮನೋಭಾವ ಇಡೀ ಲೋಕವನ್ನು ವ್ಯಾಪಿಸಿದೆ? (ಬಿ) ಅದರ ಫಲಿತಾಂಶ ಏನಾಗಿದೆ?

4 ಜನರಲ್ಲಿ ಭಿನ್ನಾಭಿಪ್ರಾಯ, ಜಗಳ, ಕಲಹಗಳಿರಲು ಸೈತಾನನೇ ಮುಖ್ಯ ಕಾರಣ. ನಾವದನ್ನು ಹೇಳುವುದು ಏಕೆ? ಏದೆನ್‌ ತೋಟದಲ್ಲಿ ಸೈತಾನನು ಹೇಳಿದ್ದೇನೆಂದರೆ ಪ್ರತಿಯೊಬ್ಬನು ತನಗೆ ಯಾವುದು ಒಳ್ಳೇದು, ಯಾವುದು ಕೆಟ್ಟದು ಎಂದು ದೇವರ ಸಹಾಯವಿಲ್ಲದೆ ತಾನಾಗಿಯೇ ನಿರ್ಣಯಿಸಶಕ್ತನು ಮತ್ತು ನಿರ್ಣಯಿಸಬೇಕು. (ಆದಿ. 3:1-5) ಆದರೆ ನಾವೀಗ ಲೋಕದ ಪರಿಸ್ಥಿತಿಯನ್ನು ನೋಡುವಾಗ ಅಂಥ ಮನೋಭಾವವು ತುಂಬ ಸಮಸ್ಯೆಗಳಿಗೆ ಕಾರಣವೆಂದು ಗೊತ್ತಾಗುತ್ತದೆ. ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂದು ತಾವಾಗಿ ನಿರ್ಣಯಿಸುವ ಹಕ್ಕು ತಮಗಿದೆಯೆಂದು ಅನೇಕರು ಭಾವಿಸುತ್ತಾರೆ. ಅವರಲ್ಲಿ ಅಹಂಕಾರ, ಸ್ವಾರ್ಥ, ಪೈಪೋಟಿ ಮನೋಭಾವ ಇದೆ. ತಮ್ಮ ನಿರ್ಣಯಗಳಿಂದ ಇತರರಿಗೆ ಕಷ್ಟನಷ್ಟ, ನೋವಾದರೂ ಅವರಿಗೆ ಒಂಚೂರು ಚಿಂತೆಯೇ ಇಲ್ಲ. ಇಂಥ ಮನೋಭಾವವು ಕಲಹಗಳಿಗೆ ನಡೆಸುತ್ತದೆ. ನಾವು ಮುಂಗೋಪಿಗಳಾಗಿದ್ದರೆ ಇತರರೊಂದಿಗೆ ಭಿನ್ನಾಭಿಪ್ರಾಯ ಜಗಳಗಳಾಗುತ್ತವೆ, ಅನೇಕ ಪಾಪಗಳನ್ನೂ ಮಾಡುತ್ತೇವೆಂದು ಬೈಬಲ್‌ ನೆನಪಿಸುತ್ತದೆ.—ಜ್ಞಾನೋ. 29:22.

5. ಮನಸ್ತಾಪಗಳು ಏಳುವಾಗ ಏನು ಮಾಡಬೇಕೆಂದು ಯೇಸು ಶಿಷ್ಯರಿಗೆ ಕಲಿಸಿದನು?

5 ಮನಸ್ತಾಪಗಳು ಏಳುವಾಗ ಇತರರೊಂದಿಗೆ ಸಮಾಧಾನ ಮಾಡಿಕೊಳ್ಳುವಂತೆ ಯೇಸು ಪರ್ವತ ಪ್ರಸಂಗದಲ್ಲಿ ಶಿಷ್ಯರಿಗೆ ಕಲಿಸಿದನು. ಇದರಿಂದ ತಮಗೇನೂ ಪ್ರಯೋಜನವಿಲ್ಲವೆಂದು ಅನಿಸಿದರೂ ಸಮಾಧಾನವಾಗಲು ಹೇಳಿದನು. ಉದಾಹರಣೆಗೆ ದಯೆ ತೋರಿಸಲು, ಶಾಂತಿಶೀಲರಾಗಿರಲು, ಕೋಪಮುನಿಸು ಬಿಟ್ಟುಬಿಡಲು, ಮನಸ್ತಾಪಗಳನ್ನು ಬೇಗನೆ ಬಗೆಹರಿಸಲು, ಶತ್ರುಗಳನ್ನು ಪ್ರೀತಿಸಲು ಬುದ್ಧಿಹೇಳಿದನು.—ಮತ್ತಾ. 5:5, 9, 22, 25, 44.

6, 7. (ಎ) ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಕೂಡಲೇ ಬಗೆಹರಿಸುವುದು ಯಾಕೆ ಪ್ರಾಮುಖ್ಯ? (ಬಿ) ಯೆಹೋವನ ಜನರೆಲ್ಲರೂ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

6 ಪ್ರಾರ್ಥನೆ ಮಾಡುವುದು, ಸುವಾರ್ತೆ ಸಾರುವುದು, ಕೂಟಗಳಿಗೆ ಹಾಜರಾಗುವುದು ಇವೆಲ್ಲ ನಾವು ಯೆಹೋವನಿಗೆ ಸಲ್ಲಿಸುವ ಆರಾಧನೆಯಲ್ಲಿ ಕೂಡಿವೆ. ಸಹೋದರರೊಂದಿಗೆ ನಾವು ಸಮಾಧಾನದಿಂದ ಇರದಿದ್ದರೆ ಯೆಹೋವನು ನಮ್ಮ ಆರಾಧನೆಯನ್ನು ಸ್ವೀಕರಿಸುವುದಿಲ್ಲ. (ಮಾರ್ಕ 11:25) ಆತನ ಸ್ನೇಹಿತರಾಗಿರಬೇಕಾದರೆ ಇತರರು ಮಾಡುವ ತಪ್ಪುಗಳನ್ನು ನಾವು ಕ್ಷಮಿಸಲೇಬೇಕು.ಲೂಕ 11:4; ಎಫೆಸ 4:32 ಓದಿ.

7 ತನ್ನೆಲ್ಲಾ ಸೇವಕರು ಕ್ಷಮಾಶೀಲರಾಗಿರಬೇಕು ಮತ್ತು ಇತರರೊಂದಿಗೆ ಶಾಂತಿಯಿಂದ ಇರಬೇಕು ಎಂದು ಯೆಹೋವನು ಅಪೇಕ್ಷಿಸುತ್ತಾನೆ. ನಾವು ಹೀಗೆ ಕೇಳಿಕೊಳ್ಳಬೇಕು: ‘ಸಹೋದರರು ತಪ್ಪು ಮಾಡಿದಾಗ ನಾನು ಕೂಡಲೇ ಕ್ಷಮಿಸುತ್ತೇನಾ? ಅವರಿಂದ ನನಗೆ ನೋವಾಗಿದ್ದರೂ ಅವರ ಒಡನಾಟದಲ್ಲಿ ಸಂತೋಷಿಸುತ್ತೇನಾ?’ ನಿಮ್ಮಲ್ಲಿ ಕ್ಷಮಿಸುವ ಗುಣ ಕಡಿಮೆಯಿದೆ ಎಂದು ಗೊತ್ತಾದರೆ ಯೆಹೋವನಿಗೆ ಪ್ರಾರ್ಥಿಸಿ ಸಹಾಯ ಬೇಡಿಕೊಳ್ಳಿರಿ. ಇಂಥ ದೀನ ಪ್ರಾರ್ಥನೆಗಳನ್ನು ನಮ್ಮ ತಂದೆಯಾದ ಆತನು ಆಲಿಸಿ ಉತ್ತರಿಸುತ್ತಾನೆ.—1 ಯೋಹಾ. 5:14, 15.

ತಪ್ಪನ್ನು ಅಲಕ್ಷಿಸಿ ಬಿಡಬಹುದಾ?

8, 9. ಯಾರಾದರೂ ನಮಗೆ ಸಿಟ್ಟುಬರಿಸಿದರೆ ನಾವೇನು ಮಾಡಬೇಕು?

8 ಮಾನವರೆಲ್ಲರೂ ಅಪರಿಪೂರ್ಣರು. ಆದ್ದರಿಂದ ಜನರು ನಮಗೆ ನೋಯಿಸುವ, ಸಿಟ್ಟುಬರಿಸುವ ಮಾತುಗಳನ್ನು ಆಡುವುದು ಅಥವಾ ವಿಷಯಗಳನ್ನು ಮಾಡುವುದು ಸಹಜ. (ಪ್ರಸಂ. 7:20; ಮತ್ತಾ. 18:7) ಆಗ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಈ ಅನುಭವ ಗಮನಿಸಿ: ಒಮ್ಮೆ ಸಹೋದರಿಯೊಬ್ಬಳು ಇಬ್ಬರು ಸಹೋದರರನ್ನು ವಂದಿಸಿದಳು. ಆದರೆ ಅವಳು ವಂದಿಸಿದ ರೀತಿಯಿಂದ ಅವರಲ್ಲೊಬ್ಬನಿಗೆ ಕೋಪ ಬಂತು. ಆ ಸಹೋದರಿ ಹೋದ ಮೇಲೆ ಅವನು ಅವಳನ್ನು ಟೀಕಿಸತೊಡಗಿದನು. ಆದರೆ ಇನ್ನೊಬ್ಬ ಸಹೋದರನು ಅವನಿಗೆ, ಆ ಸಹೋದರಿ ಅನೇಕ ಕಷ್ಟಗಳ ನಡುವೆಯೂ 40 ವರ್ಷಗಳಿಂದ ನಿಷ್ಠೆಯಿಂದ ಯೆಹೋವನ ಸೇವೆ ಮಾಡುತ್ತಿದ್ದಾಳೆ ಮತ್ತು ಅವಳು ಸಿಟ್ಟೆಬ್ಬಿಸಲಿಕ್ಕಾಗಿ ಹಾಗೆ ಮಾಡಲಿಲ್ಲವೆಂದು ಹೇಳಿದನು. ಕೋಪಿಸಿಕೊಂಡಿದ್ದ ಸಹೋದರನ ಪ್ರತಿಕ್ರಿಯೆ ಆಗ ಹೇಗಿತ್ತು? “ನೀವಂದದ್ದು ಸರಿ” ಎಂದು ಹೇಳಿ ಆ ವಿಷಯವನ್ನು ಅಲ್ಲಿಗೆ ಮರೆತುಬಿಟ್ಟನು.

9 ಈ ಅನುಭವದಿಂದ ಏನು ಕಲಿಯುತ್ತೇವೆ? ಯಾರಾದರೂ ನಮಗೆ ಸಿಟ್ಟುಬರಿಸಿದರೆ, ನೋಯಿಸಿದರೆ ಹೇಗೆ ಪ್ರತಿಕ್ರಿಯಿಸುತ್ತೇವೆ ಅನ್ನೋದು ನಮ್ಮ ಕೈಯಲ್ಲಿದೆ. ನಮ್ಮಲ್ಲಿ ಪ್ರೀತಿಯಿದ್ದರೆ ಬೇರೆಯವರನ್ನು ಕ್ಷಮಿಸುತ್ತೇವೆ. (ಜ್ಞಾನೋಕ್ತಿ 10:12; 1 ಪೇತ್ರ 4:8 ಓದಿ.) ಒಂದು ‘ದೋಷವನ್ನು’ ನಾವು ‘ಲಕ್ಷಿಸದೆ ಬಿಡುವಾಗ’ ಯೆಹೋವನು ಅದನ್ನು ಸುಂದರ ‘ಭೂಷಣವಾಗಿ’ ಕಾಣುತ್ತಾನೆ. (ಜ್ಞಾನೋ. 19:11; ಪ್ರಸಂ. 7:9) ಆದ್ದರಿಂದ ಇನ್ನೊಮ್ಮೆ ಯಾರಾದರೂ ನಿಮಗೆ ಸಿಟ್ಟೆಬ್ಬಿಸುವ ವಿಷಯವನ್ನು ಹೇಳಿದಾಗ ಅಥವಾ ಮಾಡಿದಾಗ, ‘ನಾನು ಈ ತಪ್ಪನ್ನು ಲಕ್ಷಿಸದೆ ಬಿಟ್ಟುಬಿಡಬಹುದಾ? ಆ ಬಗ್ಗೆ ನಾನು ಪದೇಪದೇ ಯೋಚಿಸುತ್ತಾ ಇರುವ ಅಗತ್ಯವಿದೆಯಾ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.

10. (ಎ) ಒಬ್ಬ ಸಹೋದರಿ ಇತರರ ಟೀಕೆಗೆ ಆರಂಭದಲ್ಲಿ ಹೇಗೆ ಪ್ರತಿಕ್ರಿಯಿಸಿದಳು? (ಬಿ) ಬೈಬಲಿನ ಯಾವ ವಚನವು ಈ ಸಹೋದರಿಗೆ ಮನಶ್ಶಾಂತಿಯನ್ನು ಕಾಪಾಡಿಕೊಳ್ಳಲು ನೆರವಾಯಿತು?

10 ಬೇರೆಯವರು ನಮ್ಮ ಕುರಿತು ತಪ್ಪಾಗಿ ಮಾತಾಡುವಾಗ ಅವರ ಮಾತುಗಳನ್ನು ಅಲಕ್ಷಿಸುವುದು ಸುಲಭವಲ್ಲ. ಒಬ್ಬ ಪಯನೀಯರ್‌ ಸಹೋದರಿಗೆ ಏನಾಯಿತೆಂದು ಗಮನಿಸಿ. ಅವಳನ್ನು ಲೂಸಿ ಎಂದು ಕರೆಯೋಣ. ಅವಳ ಸೇವೆ ಅಷ್ಟು ಚೆನ್ನಾಗಿಲ್ಲ, ಸಮಯವನ್ನು ಸರಿಯಾಗಿ ಬಳಸುವುದಿಲ್ಲ ಎಂದು ಸಭೆಯಲ್ಲಿ ಕೆಲವರು ಅವಳನ್ನು ದೂರಿದರು. ಇದರಿಂದ ಲೂಸಿಗೆ ತುಂಬ ನೋವಾಯಿತು. ಸಭೆಯ ಕೆಲವು ಪ್ರೌಢ ಸಹೋದರರ ಸಲಹೆ ಕೇಳಿದಳು. ಮುಂದೇನಾಯಿತು? ಬೇರೆಯವರ ನಿರುತ್ತೇಜಕ ಮಾತುಗಳ ಬಗ್ಗೆ ಅತಿಯಾಗಿ ಯೋಚಿಸದಂತೆ ಮತ್ತು ಯೆಹೋವನ ಬಗ್ಗೆ ಹೆಚ್ಚಾಗಿ ಯೋಚಿಸುವಂತೆ ಆ ಸಹೋದರರು ಬೈಬಲಿನಿಂದ ಅವಳಿಗೆ ಹೇಳಿದರು. ಮತ್ತಾಯ 6:1-4 ನ್ನು (ಓದಿ) ಅವಳು ಓದಿ ತುಂಬ ಪ್ರೋತ್ಸಾಹ ಪಡೆದುಕೊಂಡಳು. ಆ ವಚನಗಳು ಅವಳಿಗೆ ಯೆಹೋವನನ್ನು ಸಂತೋಷಪಡಿಸುವುದೇ ಅತಿ ಮುಖ್ಯವೆಂದು ನೆನಪಿಸಿದವು. ಹಾಗಾಗಿ ಆ ಟೀಕೆಯನ್ನು ಅಲಕ್ಷಿಸಿಬಿಡಲು ನಿರ್ಣಯಿಸಿದಳು. ಈಗ ತನ್ನ ಸೇವೆಯ ಕುರಿತು ಇತರರು ಟೀಕೆ ಮಾಡಿದರೂ ಅವಳು ಬೇಸರ ಮಾಡಿಕೊಳ್ಳುವುದಿಲ್ಲ. ಯೆಹೋವನನ್ನು ಸಂತೋಷಪಡಿಸಲು ತಾನು ಆದಷ್ಟು ಪ್ರಯತ್ನಿಸುತ್ತಿದ್ದೇನೆಂದು ಅವಳಿಗೆ ಗೊತ್ತಿದೆ. ಹಾಗಾಗಿ ತುಂಬ ಖುಷಿಯಿಂದಿದ್ದಾಳೆ.

ತಪ್ಪನ್ನು ಅಲಕ್ಷಿಸಲು ಆಗದಿರುವಾಗ

11, 12. (ಎ) ಸಹೋದರನಿಗೆ ‘ತನ್ನ ವಿರುದ್ಧ ಏನೋ ಅಸಮಾಧಾನವಿದೆ’ ಎಂದು ಒಬ್ಬ ಕ್ರೈಸ್ತನಿಗೆ ಗೊತ್ತಾದರೆ ಅವನು ಏನು ಮಾಡಬೇಕು? (ಬಿ) ಅಬ್ರಹಾಮನು ಜಗಳವನ್ನು ಬಗೆಹರಿಸಿದ ರೀತಿಯಿಂದ ನಾವೇನು ಕಲಿಯುತ್ತೇವೆ? (ಲೇಖನದ ಆರಂಭದ ಚಿತ್ರ ನೋಡಿ.)

11 “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.” (ಯಾಕೋ. 3:2) ನೀವು ಹೇಳಿದ ಅಥವಾ ಮಾಡಿದ ವಿಷಯದಿಂದ ಒಬ್ಬ ಸಹೋದರನಿಗೆ ನೋವಾಗಿದೆಯೆಂದು ಗೊತ್ತಾದರೆ ನೀವೇನು ಮಾಡಬೇಕು? ಯೇಸು ಹೀಗಂದನು: “ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು.” (ಮತ್ತಾ. 5:23, 24) ಆದ್ದರಿಂದ ನಿಮ್ಮ ಸಹೋದರನ ಜೊತೆ ಸಮಸ್ಯೆಯ ಕುರಿತು ಮಾತಾಡಿ ನೋಡಿ. ಹಾಗೆ ಮಾತಾಡುವಾಗ ನಿಮ್ಮ ಗುರಿ ಏನಾಗಿರಬೇಕು? ಅವನೊಂದಿಗೆ ಸಮಾಧಾನ ಮಾಡಿಕೊಳ್ಳುವುದೇ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಅವನ ಮೇಲೆ ತಪ್ಪು ಹೊರಿಸಲು ಹೋಗಬೇಡಿ. ಸಹೋದರರೊಂದಿಗೆ ಸಮಾಧಾನ ಮಾಡಿಕೊಳ್ಳುವುದೇ ಅತಿ ಪ್ರಾಮುಖ್ಯ.

12 ಭಿನ್ನಾಭಿಪ್ರಾಯಗಳು ಇರುವಾಗ ದೇವರ ಸೇವಕರು ಹೇಗೆ ಶಾಂತಿ ಕಾಪಾಡಿಕೊಳ್ಳಬೇಕೆಂದು ಬೈಬಲ್‌ ತೋರಿಸುತ್ತದೆ. ಅಬ್ರಹಾಮನ ಉದಾಹರಣೆ ಗಮನಿಸಿ. ಅವನ ಮತ್ತು ಅವನ ಸಹೋದರನ ಮಗ ಲೋಟನ ಬಳಿ ಅನೇಕ ದನಕುರಿಗಳಿದ್ದವು. ತಮ್ಮ ದನಕುರಿಗಳಿಗೆ ಮೇಯಲು ಸಾಕಷ್ಟು ಸ್ಥಳವಿಲ್ಲವೆಂದು ಕಂಡಾಗ ಅವರ ದನಗಾಹಿಗಳಲ್ಲಿ ಜಗಳವಾಯಿತು. ಅಬ್ರಹಾಮನು ಶಾಂತಿಯಿಂದ ಇರಲು ಬಯಸಿದ್ದರಿಂದ ಲೋಟನು ತನಗೆ ಬೇಕಾದ ಉತ್ತಮ ಪ್ರದೇಶವನ್ನು ಆದುಕೊಳ್ಳುವಂತೆ ಬಿಟ್ಟುಕೊಟ್ಟನು. (ಆದಿ. 13:1, 2, 5-9) ಇದು ನಮಗೆ ಒಳ್ಳೇ ಮಾದರಿ. ಅಬ್ರಹಾಮ ಉದಾರಭಾವ ತೋರಿಸಿದ್ದರಿಂದ ಅವನಿಗೆ ಖಾಯಂ ನಷ್ಟ ಆಯಿತಾ? ಇಲ್ಲ. ಇದಾದ ನಂತರ ಕೂಡಲೇ ಯೆಹೋವನು ಅಬ್ರಹಾಮನಿಗೆ ಅವನಿಗಾದ ನಷ್ಟಕ್ಕಿಂತಲೂ ಹೆಚ್ಚನ್ನು ಕೊಟ್ಟು ಆಶೀರ್ವದಿಸುವೆನೆಂದು ಮಾತುಕೊಟ್ಟನು. (ಆದಿ. 13:14-17) ಇದರಿಂದ ಏನು ಕಲಿಯುತ್ತೇವೆ? ನಮಗೆ ಕಷ್ಟನಷ್ಟವಾದರೂ ಭಿನ್ನಾಭಿಪ್ರಾಯಗಳನ್ನು ಪ್ರೀತಿಯಿಂದ ಬಗೆಹರಿಸುವಲ್ಲಿ ಯೆಹೋವನು ನಮ್ಮನ್ನು ಆಶೀರ್ವದಿಸುವನು. [1]

13. (ಎ) ಕಠೋರ ಮಾತುಗಳಿಗೆ ಒಬ್ಬ ಮೇಲ್ವಿಚಾರಕನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಅವನ ಮಾದರಿಯಿಂದ ನಾವೇನು ಕಲಿಯುತ್ತೇವೆ?

13 ನಮ್ಮೀ ಸಮಯದ ಒಂದು ಉದಾಹರಣೆ ಗಮನಿಸಿ. ಒಂದು ಅಧಿವೇಶನ ಇಲಾಖೆಯ ಹೊಸ ಮೇಲ್ವಿಚಾರಕನು ಒಬ್ಬ ಸಹೋದರನಿಗೆ ಫೋನ್‌ ಮಾಡಿ ತನ್ನ ಇಲಾಖೆಯಲ್ಲಿ ಕೆಲಸಮಾಡಬಹುದಾ ಎಂದು ಕೇಳಿದನು. ಅದಕ್ಕೆ ಆ ಸಹೋದರನು ಥಟ್ಟನೆ ಕಟುವಾದ ಮಾತುಗಳನ್ನಾಡಿ ಫೋನನ್ನು ಕಟ್‌ ಮಾಡಿಬಿಟ್ಟನು. ಏಕೆಂದರೆ ಆ ಇಲಾಖೆಯ ಹಿಂದಿನ ಮೇಲ್ವಿಚಾರಕನ ಮೇಲೆ ಅವನಿಗೆ ತುಂಬ ಕೋಪವಿತ್ತು. ಆದರೆ ಈ ಹೊಸ ಮೇಲ್ವಿಚಾರಕನು ಸಿಟ್ಟು ಮಾಡಿಕೊಳ್ಳಲಿಲ್ಲ. ನಡೆದಿದ್ದ ಸಂಗತಿಯನ್ನು ಅಲಕ್ಷಿಸುವಂತೆಯೂ ಇರಲಿಲ್ಲ. ಒಂದು ತಾಸಿನ ನಂತರ ಅವನು ಆ ಸಹೋದರನಿಗೆ ಪುನಃ ಫೋನ್‌ ಮಾಡಿ, ತಾವು ಭೇಟಿಯಾಗಿ ಮಾತಾಡೋಣ ಎಂದು ಹೇಳಿದನು. ಮುಂದಿನ ವಾರ ಅವರಿಬ್ಬರು ರಾಜ್ಯ ಸಭಾಗೃಹದಲ್ಲಿ ಭೇಟಿಯಾದರು. ಯೆಹೋವನಿಗೆ ಪ್ರಾರ್ಥಿಸಿ ನಂತರ ಒಂದು ತಾಸಿನ ತನಕ ಮಾತಾಡಿದರು. ಹಿಂದಿನ ಮೇಲ್ವಿಚಾರಕನೊಂದಿಗೆ ಆಗಿದ್ದ ಮನಸ್ತಾಪದ ಕುರಿತು ಆ ಸಹೋದರ ವಿವರಿಸಿದನು. ಹೊಸ ಮೇಲ್ವಿಚಾರಕನು ಸಮಾಧಾನದಿಂದ ಕಿವಿಗೊಟ್ಟು ಕೆಲವು ಬೈಬಲ್‌ ವಚನಗಳನ್ನು ಚರ್ಚಿಸಿದನು. ಇದರಿಂದ ಸಹೋದರರು ಸಮಾಧಾನ ಮಾಡಿಕೊಂಡು ಅಧಿವೇಶನದಲ್ಲಿ ಜೊತೆಯಾಗಿ ಕೆಲಸಮಾಡಿದರು. ಹೊಸ ಮೇಲ್ವಿಚಾರಕನು ತನ್ನೊಂದಿಗೆ ದಯೆಯಿಂದ ಸೌಮ್ಯವಾಗಿ ಮಾತಾಡಿದ್ದಕ್ಕಾಗಿ ಆ ಸಹೋದರನು ಆಭಾರಿಯಾಗಿದ್ದಾನೆ.

ಹಿರಿಯರನ್ನು ಒಳಗೂಡಿಸಬೇಕಾ?

14, 15. (ಎ) ಮತ್ತಾಯ 18:15-17 ರ ಸಲಹೆಯನ್ನು ನಾವು ಯಾವ ಸನ್ನಿವೇಶದಲ್ಲಿ ಅನ್ವಯಿಸಬೇಕು? (ಬಿ) ಯಾವ ಮೂರು ಹೆಜ್ಜೆಗಳನ್ನು ಯೇಸು ತಿಳಿಸಿದನು? (ಸಿ) ಅವುಗಳನ್ನು ಅನ್ವಯಿಸುವಾಗ ನಮ್ಮ ಗುರಿ ಏನಾಗಿರಬೇಕು?

14 ಇಬ್ಬರು ಕ್ರೈಸ್ತರು ತಮ್ಮ ಮಧ್ಯೆ ಬರುವ ಹೆಚ್ಚಿನ ಸಮಸ್ಯೆಗಳನ್ನು ತಾವಾಗಿಯೇ ಬಗೆಹರಿಸಿಕೊಳ್ಳಸಾಧ್ಯವಿದೆ ಮತ್ತು ಬಗೆಹರಿಸಬೇಕು. ಆದರೆ ಕೆಲವೊಮ್ಮೆ ಇದು ಸಾಧ್ಯವಿಲ್ಲ. ಕೆಲವು ಸನ್ನಿವೇಶಗಳಲ್ಲಿ ಮತ್ತಾಯ 18:15-17 (ಓದಿ) ತಿಳಿಸುವಂತೆ ಬೇರೆಯವರ ಸಹಾಯ ಬೇಕಾಗುತ್ತದೆ. ಈ ವಚನಗಳಲ್ಲಿ ಯೇಸು ತಿಳಿಸಿದ ‘ಪಾಪವು’ ಕ್ರೈಸ್ತರ ನಡುವಿನ ಒಂದು ಚಿಕ್ಕ ಮನಸ್ತಾಪ ಅಥವಾ ಭಿನ್ನಾಭಿಪ್ರಾಯವಲ್ಲ. ಇದು ನಮಗೆ ಹೇಗೆ ಗೊತ್ತು? ತಪ್ಪಿತಸ್ಥನೊಂದಿಗೆ ಒಬ್ಬ ಸಹೋದರ, ನಂತರ ಸಾಕ್ಷಿಗಳು, ಬಳಿಕ ಜವಾಬ್ದಾರಿಯುತ ಸಹೋದರರು ಮಾತಾಡಿದ ನಂತರವೂ ಅವನು ಪಶ್ಚಾತ್ತಾಪಪಡದಿದ್ದರೆ ಆಗ ಅವನನ್ನು “ಅನ್ಯಜನಾಂಗದವನಂತೆಯೂ ತೆರಿಗೆ ವಸೂಲಿಮಾಡುವವನಂತೆಯೂ” ಕಾಣಬೇಕೆಂದು ಯೇಸು ಹೇಳಿದನು. ಇಂದು ಅದರರ್ಥ ಅವನನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂದೇ. ಹಾಗಾದರೆ ಆ ‘ಪಾಪದಲ್ಲಿ’ ವಂಚನೆ, ಸುಳ್ಳು ಅಪವಾದ ಹೊರಿಸುವುದು ಮುಂತಾದವು ಸೇರಿರಸಾಧ್ಯವಿದೆ. ಆದರೆ ವ್ಯಭಿಚಾರ, ಸಲಿಂಗಕಾಮ, ಧರ್ಮಭ್ರಷ್ಟತೆ, ವಿಗ್ರಹಾರಾಧನೆಯಂಥ ಪಾಪಗಳು ಅದರಲ್ಲಿ ಸೇರಿಲ್ಲ. ಈ ಗಂಭೀರ ಪಾಪಗಳ ಪ್ರಕರಣವನ್ನು ಖಂಡಿತವಾಗಿ ಸಭಾ ಹಿರಿಯರೇ ನಿರ್ವಹಿಸಬೇಕು.

ನಿಮ್ಮ ಸಹೋದರನೊಂದಿಗೆ ಸಮಾಧಾನವಾಗಲಿಕ್ಕಾಗಿ ನೀವು ಅವನೊಂದಿಗೆ ಒಂದಕ್ಕಿಂತ ಹೆಚ್ಚು ಬಾರಿ ಮಾತಾಡಬೇಕಾಗಬಹುದು (ಪ್ಯಾರ 15 ನೋಡಿ)

15 ಯೇಸು ಈ ಸಲಹೆಯನ್ನು ಕೊಟ್ಟ ಉದ್ದೇಶವು ತಪ್ಪುಮಾಡಿದ ಸಹೋದರನಿಗೆ ನಾವು ಹೇಗೆ ಪ್ರೀತಿಯಿಂದ ಸಹಾಯ ಮಾಡಬೇಕು ಎಂದು ತೋರಿಸಲಿಕ್ಕಾಗಿ. (ಮತ್ತಾ. 18:12-14) ಈ ಸಲಹೆಯನ್ನು ಹೇಗೆ ಪಾಲಿಸಬೇಕು? (1) ನಮ್ಮ ಸಹೋದರನೊಂದಿಗೆ ಸಮಾಧಾನವಾಗಲು ನಾವು ನಾವೇ ಪ್ರಯತ್ನಿಸಬೇಕು. ಬೇರೆಯವರನ್ನು ಒಳಗೂಡಿಸಬಾರದು. ಇದಕ್ಕಾಗಿ ಅವನೊಂದಿಗೆ ಹಲವಾರು ಬಾರಿ ಮಾತಾಡಬೇಕಾಗಬಹುದು. ಅಷ್ಟು ಮಾಡಿದರೂ ಅವನು ಸಮಾಧಾನವಾಗದಿದ್ದರೆ ನಾವೇನು ಮಾಡಬೇಕು? (2) ಈ ಸನ್ನಿವೇಶದ ಬಗ್ಗೆ ಗೊತ್ತಿರುವ ಅಥವಾ ನಿಜವಾಗಿ ತಪ್ಪು ಆಗಿದೆಯಾ ಇಲ್ಲವಾ ಎಂದು ಅರ್ಥಮಾಡಿಕೊಳ್ಳಬಲ್ಲ ಇನ್ನೊಬ್ಬ ಸಹೋದರನನ್ನು ಕರೆದುಕೊಂಡು ಹೋಗಿ ಆ ತಪ್ಪಿತಸ್ಥ ಸಹೋದರನೊಟ್ಟಿಗೆ ಮಾತಾಡಬೇಕು. ಸಮಸ್ಯೆ ಬಗೆಹರಿದರೆ ನಾವು ನಮ್ಮ ‘ಸಹೋದರನನ್ನು ಸಂಪಾದಿಸಿಕೊಂಡಿರುತ್ತೇವೆ.’ ಆ ಸಹೋದರನೊಂದಿಗೆ ಅನೇಕ ಬಾರಿ ಮಾತಾಡಿದ ಮೇಲೂ ಅವನೊಟ್ಟಿಗೆ ಸಮಾಧಾನವಾಗಲು ಆಗದಿದ್ದರೆ? (3) ಆಗ ಮಾತ್ರ ಅದನ್ನು ಹಿರಿಯರಿಗೆ ತಿಳಿಸಬೇಕು.

16. ಯೇಸುವಿನ ಸಲಹೆಯನ್ನು ಪಾಲಿಸುವುದು ಪರಿಣಾಮಕಾರಿ ಮತ್ತು ಪ್ರೀತಿಯ ವಿಧಾನ ಏಕೆ?

16 ಹೆಚ್ಚಿನ ಸಂದರ್ಭಗಳಲ್ಲಿ ಮತ್ತಾಯ 18:15-17 ರಲ್ಲಿರುವ ಎಲ್ಲ ಮೂರು ಹೆಜ್ಜೆಗಳನ್ನು ತಕ್ಕೊಳ್ಳುವ ಅಗತ್ಯವಿರುವುದಿಲ್ಲ. ಇದು ಒಳ್ಳೆಯದೇ. ಯಾಕೆಂದರೆ ಅನೇಕವೇಳೆ ತಪ್ಪಿತಸ್ಥನು ತನ್ನ ತಪ್ಪನ್ನು ಅರಿತುಕೊಂಡು ಸಮಸ್ಯೆಯನ್ನು ಬಗೆಹರಿಸಲು ಹೆಜ್ಜೆ ತಕ್ಕೊಳ್ಳುತ್ತಾನೆ. ಹಾಗಾಗಿ ಅವನನ್ನು ಬಹಿಷ್ಕರಿಸುವ ಅಗತ್ಯವಿಲ್ಲ. ಮನನೊಂದಿರುವ ಸಹೋದರನು ತಪ್ಪಿತಸ್ಥ ಸಹೋದರನೊಂದಿಗೆ ಸಮಾಧಾನವಾಗಲಿಕ್ಕಾಗಿ ಅವನನ್ನು ಕ್ಷಮಿಸಿಬಿಡಬೇಕು. ಯೇಸುವಿನ ಸಲಹೆಯಿಂದ ಏನು ಸ್ಪಷ್ಟವಾಗುತ್ತದೆಂದರೆ ಯಾರಾದರೂ ತಪ್ಪುಮಾಡಿದ ಕೂಡಲೆ ನಾವು ಹಿರಿಯರ ಬಳಿ ಓಡುವ ಅಗತ್ಯವಿಲ್ಲ. ಯೇಸು ತಿಳಿಸಿದ ಆ ಮೊದಲಿನ ಎರಡು ಹೆಜ್ಜೆಗಳನ್ನು ತಕ್ಕೊಂಡ ಬಳಿಕ ಮಾತ್ರ ಮತ್ತು ತಪ್ಪು ಮಾಡಲಾಗಿದೆ ಎಂಬುದಕ್ಕೆ ಬಲವಾದ ಪುರಾವೆ ಇದ್ದರೆ ಮಾತ್ರ ಸಮಸ್ಯೆಯನ್ನು ಹಿರಿಯರಿಗೆ ತಿಳಿಸಬೇಕು.

17. ಒಬ್ಬರೊಂದಿಗೆ ಒಬ್ಬರು ಸಮಾಧಾನದಿಂದ ಇರಲು ಪ್ರಯತ್ನಿಸುವಾಗ ನಮಗೆ ಯಾವ ಆಶೀರ್ವಾದಗಳು ಸಿಗುತ್ತವೆ?

17 ನಾವು ಎಷ್ಟರ ತನಕ ಅಪರಿಪೂರ್ಣರಾಗಿರುತ್ತೇವೊ ಅಷ್ಟರ ತನಕ ಬೇರೆಯವರ ವಿರುದ್ಧ ತಪ್ಪು ಮಾಡುತ್ತಾ ಇರುತ್ತೇವೆ. ಶಿಷ್ಯ ಯಾಕೋಬನು ಹೀಗೆ ಬರೆದನು: “ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣನೂ ತನ್ನ ಇಡೀ ದೇಹಕ್ಕೆ ಕಡಿವಾಣ ಹಾಕಲು ಶಕ್ತನೂ ಆಗಿದ್ದಾನೆ.” (ಯಾಕೋ. 3:2) ಮನಸ್ತಾಪಗಳನ್ನು ಬಗೆಹರಿಸಲು ನಾವು ‘ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನ ಪಡಲು’ ನಮ್ಮಿಂದ ಆಗುವುದೆಲ್ಲವನ್ನು ಮಾಡಬೇಕು. (ಕೀರ್ತ. 34:14) ಸಹೋದರ ಸಹೋದರಿಯರೊಂದಿಗೆ ನಾವು ಶಾಂತಿಯಿಂದ ಇರುವಾಗ ಅವರ ಸ್ನೇಹವನ್ನು ಗಳಿಸುತ್ತೇವೆ ಮತ್ತು ಒಗ್ಗಟ್ಟಿನಿಂದ ಇರುತ್ತೇವೆ. (ಕೀರ್ತ. 133:1-3) ಎಲ್ಲಕ್ಕಿಂತ ಮುಖ್ಯವಾಗಿ ನಾವು ‘ಶಾಂತಿಯನ್ನು ದಯಪಾಲಿಸುವ ದೇವರಾದ’ ಯೆಹೋವನೊಂದಿಗೆ ಆಪ್ತ ಸ್ನೇಹವನ್ನು ಗಳಿಸುತ್ತೇವೆ. (ರೋಮ. 15:33) ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸುವವರಿಗೆ ಈ ಎಲ್ಲ ಆಶೀರ್ವಾದಗಳು ಸಿಗುವವು!

^ [1] (ಪ್ಯಾರ 12) ಸಮಸ್ಯೆಗಳನ್ನು ಸಮಾಧಾನದಿಂದ ಬಗೆಹರಿಸಿದ ಇತರರ ಉದಾಹರಣೆಗಳು: ಯಾಕೋಬ ಏಸಾವನೊಂದಿಗೆ (ಆದಿ. 27:41-45; 33:1-11); ಯೋಸೇಫನು ತನ್ನ ಅಣ್ಣಂದಿರೊಂದಿಗೆ (ಆದಿ. 45:1-15); ಗಿದ್ಯೋನನು ಎಪ್ರಾಯೀಮ್ಯರೊಂದಿಗೆ (ನ್ಯಾಯ. 8:1-3). ಇನ್ನೂ ಕೆಲವು ಬೈಬಲ್‌ ಉದಾಹರಣೆಗಳ ಕುರಿತು ಯೋಚಿಸಿ.