ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯಿರಿ

ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯಿರಿ

‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು [“ಪ್ರಯೋಜನ ಆಗುವಂತೆ,” ನೂತನ ಲೋಕ ಭಾಷಾಂತರ] ಬೋಧಿಸುತ್ತೇನೆ.’—ಯೆಶಾ. 48:17.

ಗೀತೆಗಳು: 117, 114

1, 2. (ಎ) ಬೈಬಲಿನ ಬಗ್ಗೆ ಯೆಹೋವನ ಸಾಕ್ಷಿಗಳ ಅನಿಸಿಕೆ ಏನು? (ಬಿ) ಬೈಬಲಿನಲ್ಲಿ ನಿಮ್ಮ ಅಚ್ಚುಮೆಚ್ಚಿನ ಪುಸ್ತಕ ಯಾವುದು?

ಯೆಹೋವನ ಸಾಕ್ಷಿಗಳಾದ ನಮಗೆ ಬೈಬಲ್‌ ಅಂದರೆ ತುಂಬ ಇಷ್ಟ. ಅದು ಸಾಂತ್ವನ, ನಿರೀಕ್ಷೆ, ಭರವಸಾರ್ಹ ಉಪದೇಶವನ್ನು ನಮಗೆ ಕೊಡುತ್ತದೆ. (ರೋಮ. 15:4) ಮನುಷ್ಯನ ವಿಚಾರಗಳಾಗಲಿ ಯೋಚನೆಗಳಾಗಲಿ ಇರುವ ಪುಸ್ತಕ ಅದಲ್ಲ. ಅದು ‘ದೇವರ ವಾಕ್ಯವಾಗಿದೆ.’—1 ಥೆಸ. 2:13.

2 ನಮಗೆಲ್ಲರಿಗೂ ಬೈಬಲಿನಲ್ಲಿ ಕೆಲವು ಅಚ್ಚುಮೆಚ್ಚಿನ ಭಾಗಗಳಿರುತ್ತವೆ. ಕೆಲವರಿಗೆ ಸುವಾರ್ತಾ ಪುಸ್ತಕಗಳೆಂದರೆ ತುಂಬ ಇಷ್ಟ. ಏಕೆಂದರೆ ಅವು ಯೆಹೋವನ ಸುಂದರ ಗುಣಗಳನ್ನು ಯೇಸುವಿನ ಮೂಲಕ ತಿಳಿಯಪಡಿಸುತ್ತವೆ. (ಯೋಹಾ. 14:9) ಇನ್ನೂ ಕೆಲವರು ಪ್ರವಾದನಾ ಪುಸ್ತಕಗಳನ್ನು ಇಷ್ಟಪಡುತ್ತಾರೆ. ಉದಾಹರಣೆಗೆ ಪ್ರಕಟನೆ ಪುಸ್ತಕ. ಏಕೆಂದರೆ ಅದು “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ತಿಳಿಸುತ್ತದೆ. (ಪ್ರಕ. 1:1) ಇತರರು ಕೀರ್ತನೆಗಳನ್ನು ಓದಿ ಸಾಂತ್ವನ ಪಡೆಯುತ್ತಾರೆ. ಇನ್ನೂ ಕೆಲವರು ಜ್ಞಾನೋಕ್ತಿ ಪುಸ್ತಕದಲ್ಲಿರುವ ಉತ್ತಮ ಸಲಹೆಗಳನ್ನು ಓದಿ ಸಂತೋಷ ಪಡೆಯುತ್ತಾರೆ. ನಿಜಕ್ಕೂ ಬೈಬಲ್‌ ಎಲ್ಲರಿಗೆ ಪ್ರಯೋಜನ ತರುವ ಪುಸ್ತಕ.

3, 4. (ಎ) ನಮ್ಮ ಪ್ರಕಾಶನಗಳ ಕುರಿತು ನಮ್ಮ ಅನಿಸಿಕೆ ಏನು? (ಬಿ) ನಿರ್ದಿಷ್ಟವಾಗಿ ಯಾರ್ಯಾರಿಗೆಲ್ಲ ಪ್ರಕಾಶನಗಳನ್ನು ತಯಾರಿಸಲಾಗಿದೆ?

3 ನಮಗೆ ಬೈಬಲ್‌ ತುಂಬ ಇಷ್ಟವಾದ್ದರಿಂದ ಬೈಬಲ್‌ ಆಧರಿತವಾದ ನಮ್ಮ ಪ್ರಕಾಶನಗಳು ಕೂಡ ತುಂಬ ಇಷ್ಟ. ನಮಗೆ ಸಿಗುವ ಪುಸ್ತಕ, ಕಿರುಹೊತ್ತಗೆ, ಪತ್ರಿಕೆ ಹಾಗೂ ಇತರ ಎಲ್ಲ ಸಾಹಿತ್ಯ ಯೆಹೋವನು ಕೊಟ್ಟದ್ದಾಗಿದೆ. ಅವೆಲ್ಲವೂ ಆತನಿಗೆ ನಾವು ಆಪ್ತರಾಗಿರಲು ಮತ್ತು ನಮ್ಮ ನಂಬಿಕೆಯನ್ನು ದೃಢವಾಗಿರಿಸಲು ಸಹಾಯಮಾಡುತ್ತವೆ.—ತೀತ 2:2.

4 ನಮ್ಮ ಪ್ರಕಾಶನಗಳಲ್ಲಿ ಹೆಚ್ಚಿನವು ಯೆಹೋವನ ಸಾಕ್ಷಿಗಳಾದ ನಮ್ಮೆಲ್ಲರಿಗೆ ಬರೆಯಲಾಗಿರುತ್ತದೆ. ಆದರೆ ಕೆಲವು ಪ್ರಕಾಶನಗಳು ನಿರ್ದಿಷ್ಟ ಗುಂಪಿಗಾಗಿ ಅಂದರೆ ಯುವಜನರಿಗಾಗಿ ಅಥವಾ ಹೆತ್ತವರಿಗಾಗಿ ಇವೆ. ನಮ್ಮ ವೆಬ್‌ಸೈಟ್‌ನಲ್ಲಿರುವ ಹೆಚ್ಚಿನ ಲೇಖನ ಮತ್ತು ವಿಡಿಯೋಗಳನ್ನು ವಿಶೇಷವಾಗಿ ಯೆಹೋವನ ಸಾಕ್ಷಿಗಳಲ್ಲದ ಜನರಿಗಾಗಿ ತಯಾರಿಸಲಾಗಿದೆ. ಯೆಹೋವನು ಸಕಲ ಜನರಿಗೆ ಧಾರಾಳ ಆಧ್ಯಾತ್ಮಿಕ ಆಹಾರವನ್ನು ಒದಗಿಸುವನೆಂದು ಮಾತು ಕೊಟ್ಟಿದ್ದಾನೆ. ವಿವಿಧ ರೀತಿಯ ಇಂಥ ಮಾಹಿತಿಯು ಆತನು ಆ ಮಾತನ್ನು ಪೂರೈಸುತ್ತಿದ್ದಾನೆಂದು ತೋರಿಸುತ್ತದೆ.—ಯೆಶಾ. 25:6.

5. ಯೆಹೋವನು ಏನನ್ನು ಮೆಚ್ಚುತ್ತಾನೆ?

5 ಬೈಬಲನ್ನು ಮತ್ತು ನಮ್ಮ ಪ್ರಕಾಶನಗಳನ್ನು ಓದಲು ನಮ್ಮಲ್ಲಿ ಹೆಚ್ಚಿನವರಿಗೆ ಸಮಯ ಸಾಕಾಗುತ್ತಿಲ್ಲ. ಆದ್ದರಿಂದ ಪ್ರತಿಯೊಂದು ಪ್ರಕಾಶನದ ಅಧ್ಯಯನಕ್ಕೆ ಒಂದೇ ರೀತಿಯ ಸಮಯ ಕೊಡಲು ನಮಗೆ ಆಗಲಿಕ್ಕಿಲ್ಲ. ಹಾಗಿದ್ದರೂ ಬೈಬಲನ್ನು ಮತ್ತು ನಮ್ಮ ಪ್ರಕಾಶನಗಳನ್ನು ಓದಲು, ಅಧ್ಯಯನ ಮಾಡಲು ಸಮಯವನ್ನು ವಿವೇಕದಿಂದ ಉಪಯೋಗಿಸುವಾಗ ಯೆಹೋವನು ಖಂಡಿತ ಮೆಚ್ಚುತ್ತಾನೆ. (ಎಫೆ. 5:15, 16) ಆದರೆ ಒಂದು ಅಪಾಯದ ಬಗ್ಗೆ ನಾವು ಎಚ್ಚರವಿರಬೇಕು. ಅದು ಯಾವುದು?

6. ಯಾವ ಯೋಚನೆಯು ನಾವು ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯದಂತೆ ಮಾಡಬಹುದು?

6 ಬೈಬಲಿನ ಕೆಲವು ಭಾಗಗಳು ಅಥವಾ ಕೆಲವು ಪ್ರಕಾಶನಗಳು ನಮಗೆ ಅನ್ವಯಿಸುವುದಿಲ್ಲ ಎಂಬ ಯೋಚನೆ ನಮ್ಮಲ್ಲಿ ಬರುವ ಅಪಾಯವಿದೆ. ಉದಾಹರಣೆಗೆ ಬೈಬಲಿನ ಒಂದು ಭಾಗವು ನಮ್ಮ ಸನ್ನಿವೇಶಕ್ಕೆ ಉಪಯುಕ್ತವಲ್ಲ ಎಂದು ಕಂಡರೆ ಏನು ಮಾಡುತ್ತೇವೆ? ಅಥವಾ ಒಂದು ಪ್ರಕಾಶನವು ಮುಖ್ಯವಾಗಿ ನಮಗಾಗಿ ಬರೆದಿಲ್ಲವೆಂದು ತಿಳಿದುಬಂದಾಗ ಏನು ಮಾಡುತ್ತೇವೆ? ಅದನ್ನು ಬೇಗಬೇಗ ಓದಿ ಮುಗಿಸಿಬಿಡುತ್ತೇವಾ ಅಥವಾ ಓದದೇ ಬಿಟ್ಟುಬಿಡುತ್ತೇವಾ? ಹಾಗೆ ಮಾಡಿದರೆ ನಮಗೆ ಪ್ರಯೋಜನವಾಗುವ ಅಮೂಲ್ಯ ಮಾಹಿತಿಯನ್ನು ನಾವು ಕಳಕೊಳ್ಳಬಹುದು. ಈ ಅಪಾಯವನ್ನು ಹೇಗೆ ತಪ್ಪಿಸಬಹುದು? ನಮಗೆ ಸಿಗುತ್ತಿರುವ ಎಲ್ಲ ಮಾಹಿತಿಯನ್ನು ಕೊಡುತ್ತಿರುವುದು ಯೆಹೋವನೆಂದು ನಾವು ನೆನಪಿನಲ್ಲಿಡಬೇಕು. ಆತನು ಹೇಳಿದ್ದು: ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು [“ಪ್ರಯೋಜನ ಆಗುವಂತೆ,” ನೂತನ ಲೋಕ ಭಾಷಾಂತರ] ಬೋಧಿಸುತ್ತೇನೆ.’ (ಯೆಶಾ. 48:17) ಯೆಹೋವನು ಕೊಡುವ ಎಲ್ಲ ಆಧ್ಯಾತ್ಮಿಕ ಆಹಾರದಿಂದ ನಾವು ಪ್ರಯೋಜನ ಪಡೆಯಲು ನೆರವಾಗುವ ಮೂರು ಸಲಹೆಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಬೈಬಲ್‌ ಓದುವಿಕೆಯಿಂದ ಪ್ರಯೋಜನ ಪಡೆಯಲು ಸಲಹೆಗಳು

7. ನಾವು ಬೈಬಲನ್ನು ತೆರೆದ ಮನಸ್ಸಿನಿಂದ ಯಾಕೆ ಓದಬೇಕು?

7 ತೆರೆದ ಮನಸ್ಸಿನಿಂದ ಓದಿ. ಬೈಬಲಿನ ಕೆಲವು ಭಾಗಗಳನ್ನು ಕೆಲವು ನಿರ್ದಿಷ್ಟ ವ್ಯಕ್ತಿಗಳಿಗಾಗಿ ಅಥವಾ ನಿರ್ದಿಷ್ಟ ಗುಂಪಿಗಾಗಿ ಬರೆಯಲಾಗಿದೆ ನಿಜ. ಆದರೂ ಬೈಬಲ್‌ ಸ್ಪಷ್ಟವಾಗಿ ತಿಳಿಸುವಂತೆ “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು . . . ಉಪಯುಕ್ತವಾಗಿದೆ.” (2 ತಿಮೊ. 3:16) ಆದ್ದರಿಂದ ನಾವು ಬೈಬಲನ್ನು ತೆರೆದ ಮನಸ್ಸಿನಿಂದ ಓದಬೇಕು. ಉದಾಹರಣೆಗೆ, ಒಬ್ಬ ಸಹೋದರನು ಬೈಬಲ್‌ ಓದುವಾಗ ಒಂದೇ ವೃತ್ತಾಂತದಿಂದ ಅನೇಕ ಪಾಠಗಳನ್ನು ಕಲಿಯಸಾಧ್ಯವಿದೆ ಎಂದು ನೆನಪಿನಲ್ಲಿಡುತ್ತಾನೆ. ಇದು ಅವನಿಗೆ, ಓದಿದ ಕೂಡಲೇ ಗಮನಕ್ಕೆ ಬಾರದಂಥ ಪಾಠಗಳು ಯಾವುದಾದರೂ ಇದೆಯಾ ಎಂದು ಹುಡುಕುವಂತೆ ಮಾಡಿದೆ. ಆದ್ದರಿಂದ ನಾವು ಬೈಬಲನ್ನು ಓದುವ ಮುಂಚೆ ಯೆಹೋವನಿಗೆ ಪ್ರಾರ್ಥಿಸಬೇಕು. ತೆರೆದ ಮನಸ್ಸನ್ನು ಕೊಡುವಂತೆ ಮತ್ತು ನಾವು ಕಲಿಯಬೇಕೆಂದು ಆತನು ಬಯಸುವ ಪಾಠಗಳನ್ನು ಅರ್ಥಮಾಡಿಕೊಳ್ಳಲು ವಿವೇಕವನ್ನು ಕೊಡುವಂತೆ ಬೇಡಬೇಕು.—ಯಾಕೋಬ 1:5 ಓದಿ.

ನೀವು ಬೈಬಲ್‌ ಓದುವಿಕೆಯಿಂದ ಪೂರ್ತಿ ಪ್ರಯೋಜನ ಪಡೆಯುತ್ತಿದ್ದೀರಾ? (ಪ್ಯಾರ 7 ನೋಡಿ)

8, 9. (ಎ) ಬೈಬಲ್‌ ಓದುವಾಗ ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು? (ಬಿ) ಕ್ರೈಸ್ತ ಹಿರಿಯರ ಅರ್ಹತೆಗಳ ಪಟ್ಟಿಯಿಂದ ನಾವು ಯೆಹೋವನ ಬಗ್ಗೆ ಏನು ಕಲಿಯುತ್ತೇವೆ?

8 ಪ್ರಶ್ನೆಗಳನ್ನು ಕೇಳಿಕೊಳ್ಳಿ. ನೀವು ಬೈಬಲನ್ನು ಓದುತ್ತಿರುವಾಗ ಮಧ್ಯೆಮಧ್ಯೆ ಸ್ವಲ್ಪ ನಿಲ್ಲಿಸಿ ಹೀಗೆ ಕೇಳಿಕೊಳ್ಳಿ: ‘ಇದು ಯೆಹೋವ ದೇವರ ಕುರಿತು ನನಗೆ ಏನನ್ನು ತಿಳಿಸುತ್ತದೆ? ಈ ಮಾಹಿತಿಯನ್ನು ನನ್ನ ಜೀವನದಲ್ಲಿ ಹೇಗೆ ಅನ್ವಯಿಸಲಿ? ಇದನ್ನು ಬೇರೆಯವರಿಗೆ ಸಹಾಯವಾಗುವಂತೆ ಹೇಗೆ ಉಪಯೋಗಿಸಲಿ?’ ನಾವು ಈ ಪ್ರಶ್ನೆಗಳ ಬಗ್ಗೆ ಧ್ಯಾನಿಸುವಾಗ ಬೈಬಲ್‌ ಓದುವಿಕೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತೇವೆ. ನಾವೀಗ ಒಂದು ಉದಾಹರಣೆಯನ್ನು ಗಮನಿಸೋಣ. ಕ್ರೈಸ್ತ ಹಿರಿಯರಲ್ಲಿ ಇರಬೇಕಾದ ಅರ್ಹತೆಗಳ ಬಗ್ಗೆ ಬೈಬಲ್‌ ತಿಳಿಸುತ್ತದೆ. (1 ತಿಮೊಥೆಯ 3:2-7 ಓದಿ.) ನಮ್ಮಲ್ಲಿ ಹೆಚ್ಚಿನವರು ಹಿರಿಯರಲ್ಲದ ಕಾರಣ ಈ ಮಾಹಿತಿಯಿಂದ ನಮಗೇನೂ ಪ್ರಯೋಜನವಿಲ್ಲವೆಂದು ನೆನಸಬಹುದು. ಆದರೆ ನಿಜ ಏನೆಂದರೆ ಈ ಅರ್ಹತೆ ಪಟ್ಟಿಯಿಂದ ನಾವೆಲ್ಲರೂ ಪ್ರಯೋಜನ ಪಡೆಯಬಹುದು. ಹೇಗೆಂದು ತಿಳಿಯಲು ಮೇಲೆ ಕೊಡಲಾದ ಮೂರು ಪ್ರಶ್ನೆಗಳನ್ನು ಬಳಸೋಣ.

9 “ಇದು ಯೆಹೋವ ದೇವರ ಕುರಿತು ನನಗೆ ಏನನ್ನು ತಿಳಿಸುತ್ತದೆ?” ಹಿರಿಯರಲ್ಲಿ ಇರಬೇಕಾದ ಅರ್ಹತೆಗಳ ಪಟ್ಟಿಯನ್ನು ನಮಗೆ ಕೊಟ್ಟವನು ಯೆಹೋವನು. ಸಭೆಯನ್ನು ನೋಡಿಕೊಳ್ಳುವ ಪುರುಷರಿಗಾಗಿ ಆತನು ಉನ್ನತ ಮಟ್ಟಗಳನ್ನು ಇಟ್ಟಿದ್ದಾನೆ. ಆತನಿಗೆ ಸಭೆಯು ತುಂಬಾ ಅಮೂಲ್ಯ ಎಂಬುದನ್ನು ಇದು ತೋರಿಸುತ್ತದೆ. ದೇವರು ಸಭೆಯನ್ನು “ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡನು.” (ಅ. ಕಾ. 20:28) ಆದ್ದರಿಂದ ಹಿರಿಯರು ಒಳ್ಳೆಯ ಮಾದರಿಯಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ಅವರು ಸಭೆಯ ಸದಸ್ಯರನ್ನು ನೋಡಿಕೊಳ್ಳುವ ಮತ್ತು ಅವರೊಂದಿಗೆ ನಡೆದುಕೊಳ್ಳುವ ವಿಧದ ಬಗ್ಗೆ ಆತನಿಗೆ ಲೆಕ್ಕ ಒಪ್ಪಿಸಬೇಕು. ನಾವು ಅವರ ಆರೈಕೆಯಲ್ಲಿ ಸುರಕ್ಷಿತರಾಗಿರುವಂತೆ ಆತನು ಬಯಸುತ್ತಾನೆ. (ಯೆಶಾ. 32:1, 2) ಹಾಗಾಗಿ ಈ ಅರ್ಹತೆಗಳ ಬಗ್ಗೆ ನಾವು ಓದುವಾಗ ಯೆಹೋವನು ನಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾನೆ ಎಂದು ಗೊತ್ತಾಗುತ್ತದೆ.

10, 11. (ಎ) ಹಿರಿಯರ ಅರ್ಹತೆಗಳ ಬಗ್ಗೆ ಓದುವಾಗ ಆ ಮಾಹಿತಿಯನ್ನು ನಮ್ಮ ಸ್ವಂತ ಜೀವನದಲ್ಲಿ ಹೇಗೆ ಅನ್ವಯಿಸಬಹುದು? (ಬಿ) ಆ ಮಾಹಿತಿಯನ್ನು ಬೇರೆಯವರಿಗೆ ಸಹಾಯವಾಗುವಂತೆ ಹೇಗೆ ಬಳಸಬಹುದು?

10 “ಈ ಮಾಹಿತಿಯನ್ನು ನನ್ನ ಜೀವನದಲ್ಲಿ ಹೇಗೆ ಅನ್ವಯಿಸಲಿ?” ನೀವು ಈಗಾಗಲೇ ಒಬ್ಬ ಹಿರಿಯರಾಗಿದ್ದರೆ ಈ ಅರ್ಹತೆಗಳ ಪಟ್ಟಿಯನ್ನು ಆಗಾಗ ಪರಿಶೀಲಿಸುತ್ತಾ, ಇನ್ನಷ್ಟು ಪ್ರಗತಿ ಮಾಡಲು ಪ್ರಯತ್ನಿಸುತ್ತಾ ಇರಬೇಕು. ಆದರೆ ನೀವಿನ್ನೂ ಆ ಜವಾಬ್ದಾರಿಯನ್ನು ‘ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ’ ಆ ಅರ್ಹತೆಗಳನ್ನು ಮುಟ್ಟಲು ನಿಮ್ಮಿಂದಾದ ಎಲ್ಲವನ್ನು ಮಾಡುತ್ತಾ ಇರಬೇಕು. (1 ತಿಮೊ. 3:1) ಎಲ್ಲಾ ಕ್ರೈಸ್ತರು ಕೂಡ ಈ ಅರ್ಹತೆಗಳ ಪಟ್ಟಿಯಿಂದ ಪಾಠಗಳನ್ನು ಕಲಿಯಬಹುದು. ಉದಾಹರಣೆಗೆ, ಹಿರಿಯರು ಮಾತ್ರವಲ್ಲ ನಮ್ಮಲ್ಲಿ ಪ್ರತಿಯೊಬ್ಬರೂ ನ್ಯಾಯಸಮ್ಮತರು, ಸ್ವಸ್ಥಚಿತ್ತರು ಆಗಿರಬೇಕೆಂದು ಯೆಹೋವನು ಬಯಸುತ್ತಾನೆ. (ಫಿಲಿ. 4:5; 1 ಪೇತ್ರ 4:7) ಹಿರಿಯರು “ಮಂದೆಗೆ ಮಾದರಿ”ಗಳಾಗಿರುವಾಗ ನಾವು ಅವರಿಂದ ಕಲಿಯಲು ಮತ್ತು ‘ಅವರ ನಂಬಿಕೆಯನ್ನು ಅನುಕರಿಸಲು’ ಆಗುತ್ತದೆ.—1 ಪೇತ್ರ 5:3; ಇಬ್ರಿ. 13:7.

11 “ಇದನ್ನು ಬೇರೆಯವರಿಗೆ ಸಹಾಯವಾಗುವಂತೆ ಹೇಗೆ ಉಪಯೋಗಿಸಲಿ?” ಕ್ರೈಸ್ತ ಹಿರಿಯರು ಚರ್ಚ್‌ ಪಾದ್ರಿಗಳಿಗಿಂತ ಹೇಗೆ ಭಿನ್ನರೆಂದು ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಜನರಿಗೆ ತೋರಿಸಲು ನಾವು ಹಿರಿಯರ ಅರ್ಹತೆಗಳ ಪಟ್ಟಿಯನ್ನು ಬಳಸಬಹುದು. ಈ ಪಟ್ಟಿಯು ಹಿರಿಯರು ಸಭೆಗಾಗಿ ಮಾಡುವ ಪ್ರಯಾಸದ ಕೆಲಸವನ್ನು ನೆನಪಿನಲ್ಲಿಡಲು ನಮಗೆ ಕೂಡ ಸಹಾಯಮಾಡುತ್ತದೆ. ಅವರ ಪ್ರಯಾಸಕ್ಕಾಗಿ ಅವರನ್ನು ಗೌರವಿಸುವಂತೆ ಇದು ನಮ್ಮನ್ನು ಪ್ರಚೋದಿಸುತ್ತದೆ. (1 ಥೆಸ. 5:12) ನಾವು ಅವರನ್ನು ಎಷ್ಟು ಹೆಚ್ಚು ಗೌರವಿಸುತ್ತೇವೋ ಅಷ್ಟೇ ಹೆಚ್ಚು ಆನಂದದಿಂದ ಅವರು ತಮ್ಮ ಕೆಲಸವನ್ನು ಮಾಡಲು ಆಗುತ್ತದೆ.—ಇಬ್ರಿ. 13:17.

12, 13. (ಎ) ನಮ್ಮ ಪ್ರಕಾಶನಗಳನ್ನು ಬಳಸಿ ನಾವು ಯಾವುದರ ಬಗ್ಗೆ ಸಂಶೋಧನೆ ಮಾಡಬಹುದು? (ಬಿ) ಕೂಡಲೇ ಗಮನಕ್ಕೆ ಬಾರದ ಪಾಠಗಳನ್ನು ತಿಳಿದುಕೊಳ್ಳಲು ಹಿನ್ನೆಲೆ ಮಾಹಿತಿ ಹೇಗೆ ಸಹಾಯಮಾಡುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

12 ಸಂಶೋಧನೆ ಮಾಡಿ. ಬೈಬಲನ್ನು ನಾವು ಅಧ್ಯಯನ ಮಾಡುವಾಗ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಬೇಕು.

  • ಬೈಬಲಿನ ಈ ಭಾಗವನ್ನು ಬರೆದವರು ಯಾರು?

  • ಇದನ್ನು ಎಲ್ಲಿ ಮತ್ತು ಯಾವಾಗ ಬರೆಯಲಾಯಿತು?

  • ಈ ಪುಸ್ತಕವನ್ನು ಬರೆದಾಗ ಯಾವ ಮಹತ್ವದ ಘಟನೆಗಳು ನಡೆದವು?

ಇಂಥ ಹಿನ್ನೆಲೆ ಮಾಹಿತಿಯು, ಒಂದು ಭಾಗವನ್ನು ಓದಿದ ಕೂಡಲೇ ಗಮನಕ್ಕೆ ಬಾರದ ಪಾಠಗಳನ್ನು ಹುಡುಕಲು ಸಹಾಯಮಾಡುತ್ತದೆ.

13 ಉದಾಹರಣೆಗೆ ಯೆಹೆಜ್ಕೇಲ 14:13, 14 ಹೀಗನ್ನುತ್ತದೆ: “ಅಪರಾಧವನ್ನು ನಡಿಸಿ ನನಗೆ ವಿರುದ್ಧವಾಗಿ ಪಾಪಮಾಡಿದ ದೇಶದ ಮೇಲೆ ನಾನು ಕೈಯೆತ್ತಿ ಅದರ ಜೀವನಾಧಾರವನ್ನು ತೆಗೆದುಬಿಟ್ಟು ಕ್ಷಾಮವನ್ನು ಬರಮಾಡಿ ಜನಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ ನೋಹ ದಾನಿಯೇಲ ಯೋಬ ಎಂಬೀ ಮೂವರು ಪುರುಷರು ಅದರಲ್ಲಿದ್ದರೂ ತಮ್ಮ ಸದಾಚಾರದಿಂದ [“ನೀತಿಯಿಂದ,” ಪವಿತ್ರ ಗ್ರಂಥ ಭಾಷಾಂತರ] ಸ್ವಂತಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರು; ಇದು ಕರ್ತನಾದ ಯೆಹೋವನ ನುಡಿ.” ಇದರ ಬಗ್ಗೆ ನಾವು ಸ್ವಲ್ಪ ಸಂಶೋಧನೆ ಮಾಡುವಾಗ ಯೆಹೆಜ್ಕೇಲನು ಈ ಮಾತುಗಳನ್ನು ಸುಮಾರು ಕ್ರಿ.ಪೂ. 612⁠ರಲ್ಲಿ ಬರೆದನೆಂದು ಗೊತ್ತಾಗುತ್ತದೆ. ಆ ಸಮಯದಲ್ಲಿ ನೋಹ ಮತ್ತು ಯೋಬ ಸತ್ತು ನೂರಾರು ವರ್ಷ ಕಳೆದಿದ್ದರೂ ಯೆಹೋವನು ಅವರ ನಂಬಿಗಸ್ತಿಕೆಯನ್ನು ಇನ್ನೂ ನೆನಪಿಸಿಕೊಂಡನು. ಆದರೆ ದಾನಿಯೇಲ ಆ ಸಮಯದಲ್ಲಿ ಬದುಕಿದ್ದನು. ಆಗ ಅವನಿಗೆ ಬಹುಶಃ 20 ವರ್ಷ. ಆದರೂ ಅವನು ನೋಹ ಮತ್ತು ಯೋಬನಂತೆ ನೀತಿವಂತನು ಎಂದು ಯೆಹೋವನು ಹೇಳಿದನು. ಇದರಿಂದ ನಾವೇನು ಕಲಿಯುತ್ತೇವೆ? ಯೆಹೋವನು ತನ್ನ ನಂಬಿಗಸ್ತ ಸೇವಕರೆಲ್ಲರನ್ನು, ಯೌವನಸ್ಥರನ್ನೂ ಗಮನಿಸುತ್ತಾನೆ ಮತ್ತು ಅಮೂಲ್ಯರೆಂದು ಎಣಿಸುತ್ತಾನೆ.—ಕೀರ್ತ. 148:12-14.

ವಿವಿಧ ಪ್ರಕಾಶನಗಳಿಂದ ಪ್ರಯೋಜನ ಪಡೆಯಿರಿ

14. (ಎ) ಯುವ ಜನರಿಗಾಗಿ ತಯಾರಿಸಲಾದ ಮಾಹಿತಿ ಅವರಿಗೆ ಹೇಗೆ ನೆರವಾಗುತ್ತದೆ? (ಬಿ) ಅದನ್ನು ಓದುವುದರಿಂದ ಬೇರೆಯವರಿಗೂ ಹೇಗೆ ಪ್ರಯೋಜನವಾಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

14 ಯುವ ಜನರಿಗಾಗಿರುವ ಸಾಹಿತ್ಯ. ಬೈಬಲಿನ ಎಲ್ಲ ಭಾಗಗಳಿಂದ ಪ್ರಯೋಜನ ಪಡೆಯಸಾಧ್ಯವಿದೆಯೆಂದು ನಾವು ಕಲಿತೆವು. ಅದೇ ರೀತಿ ನಮ್ಮ ಎಲ್ಲ ಪ್ರಕಾಶನಗಳಿಂದಲೂ ನಾವು ಪ್ರಯೋಜನ ಪಡೆಯಸಾಧ್ಯವಿದೆ. ಕೆಲವು ಉದಾಹರಣೆಗಳನ್ನು ನಾವು ಗಮನಿಸೋಣ. ಇತ್ತೀಚಿನ ವರ್ಷಗಳಲ್ಲಿ ಯೆಹೋವನು ಯುವ ಜನರಿಗಾಗಿ ಬಹಳಷ್ಟು ಮಾಹಿತಿಯನ್ನು ಒದಗಿಸಿದ್ದಾನೆ. [1] ಈ ಮಾಹಿತಿಯು ಅವರಿಗೆ ಶಾಲೆ-ಕಾಲೇಜಿನಲ್ಲಿ ಬರುವ ಒತ್ತಡಗಳನ್ನು ಮತ್ತು ಯೌವನ ಪ್ರಾಯದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಹಾಯಮಾಡುತ್ತದೆ. ಆದರೆ ಈ ಎಲ್ಲ ಲೇಖನಗಳು ಮತ್ತು ಪುಸ್ತಕಗಳನ್ನು ಓದುವುದರಿಂದ ನಾವೆಲ್ಲರೂ ಹೇಗೆ ಪ್ರಯೋಜನ ಪಡೆಯಬಹುದು? ಈ ಮಾಹಿತಿಯನ್ನು ಓದುವಾಗ ಯುವ ಜನರಿಗೆ ಎಂಥಾ ಸಮಸ್ಯೆಗಳು ಬರುತ್ತವೆಂದು ನಮಗೆ ಗೊತ್ತಾಗುತ್ತದೆ. ಅಲ್ಲದೆ ಅವರಿಗೆ ಹೇಗೆ ನೆರವು, ಪ್ರೋತ್ಸಾಹ ಕೊಡಬಹುದೆಂದು ನಾವು ತಿಳಿಯುತ್ತೇವೆ.

15. ಯುವ ಜನರಿಗಾಗಿರುವ ಮಾಹಿತಿಯು ವಯಸ್ಕ ಕ್ರೈಸ್ತರಿಗೆ ಕೂಡ ಬೇಕಿದೆ ಏಕೆ?

15 ಯುವ ಜನರಿಗಾಗಿರುವ ಮಾಹಿತಿಯು ತಮಗಲ್ಲ, ತಾವದನ್ನು ಓದಬೇಕಿಲ್ಲ ಎಂದು ವಯಸ್ಕ ಕ್ರೈಸ್ತರು ನೆನಸಬಾರದು. ಯುವ ಜನರಿಗಾಗಿರುವ ಲೇಖನಗಳಲ್ಲಿ ಚರ್ಚಿಸಲಾದ ಹೆಚ್ಚಿನ ಸಮಸ್ಯೆಗಳು ಕ್ರೈಸ್ತರೆಲ್ಲರಿಗೂ ಬರುತ್ತವೆ. ಉದಾಹರಣೆಗೆ ನಮ್ಮ ನಂಬಿಕೆಗಳನ್ನು ಸಮರ್ಥಿಸಲು, ಭಾವನೆಗಳನ್ನು ನಿಯಂತ್ರಿಸಲು, ಸಮಪ್ರಾಯದವರ ಒತ್ತಡಗಳನ್ನು ತಿರಸ್ಕರಿಸಲು, ಕೆಟ್ಟ ಸಹವಾಸ ಮತ್ತು ಕೆಟ್ಟ ಮನರಂಜನೆಯನ್ನು ದೂರವಿಡಲು ಎಲ್ಲರಿಗೂ ಸಹಾಯ ಬೇಕಾಗಿದೆ. ಈ ಪ್ರಕಾಶನಗಳು ಯುವ ಜನರಿಗಾಗಿ ಬರೆಯಲಾಗಿದ್ದರೂ ಅವುಗಳಲ್ಲಿರುವ ಮಾಹಿತಿಯು ಬೈಬಲಿನಿಂದ ಬಂದದ್ದಾಗಿದೆ. ಆದ್ದರಿಂದ ಎಲ್ಲ ಕ್ರೈಸ್ತರು ಅದರಿಂದ ಪ್ರಯೋಜನ ಹೊಂದಬಹುದು.

16. ನಮ್ಮ ಪ್ರಕಾಶನಗಳು ಯುವ ಜನರಿಗೆ ಬೇರೆ ಯಾವ ಸಹಾಯವನ್ನೂ ಕೊಡುತ್ತವೆ?

16 ಯುವ ಜನರಿಗಾಗಿ ಬರೆಯಲಾದ ಪ್ರಕಾಶನಗಳು ಯೆಹೋವನೊಂದಿಗೆ ಅವರ ಸ್ನೇಹವನ್ನು ಬಲಗೊಳಿಸಲು ಸಹ ನೆರವಾಗುತ್ತವೆ. (ಪ್ರಸಂಗಿ 12:1, 13 ಓದಿ.) ವಯಸ್ಕರಿಗೂ ಇದರಿಂದ ಪ್ರಯೋಜನವಾಗುತ್ತದೆ. ಉದಾಹರಣೆಗೆ, ಜುಲೈ 2009 ರ ಎಚ್ಚರ! ಪತ್ರಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು—ಬೈಬಲ್‌ ಓದುವುದರಲ್ಲಿ ಹೇಗೆ ಆನಂದಿಸಲಿ?” ಎಂಬ ಲೇಖನವಿತ್ತು. ಆ ಲೇಖನದಲ್ಲಿ ಅನೇಕ ಸಹಾಯಕರ ಸಲಹೆಗಳು ಇದ್ದವು. ಅಲ್ಲದೆ, ಅದರಲ್ಲಿ ಒಂದು ಚೌಕ ಇತ್ತು. ಅದನ್ನು ಕತ್ತರಿಸಿ ತೆಗೆದು ಅಧ್ಯಯನ ಮಾಡುವಾಗೆಲ್ಲ ಬಳಸಬಹುದಿತ್ತು. ಈ ಲೇಖನದಿಂದ ವಯಸ್ಕರಿಗೆ ಪ್ರಯೋಜನವಾಯಿತಾ? ಒಬ್ಬ ತಾಯಿಗೆ ಬೈಬಲ್‌ ಓದುವಿಕೆ ತುಂಬ ಕಷ್ಟದ ಕೆಲಸವೆಂದು ಅನಿಸುತ್ತಿತ್ತು. ಆದರೆ ಎಚ್ಚರ!ದಲ್ಲಿ ಬಂದ ಆ ಲೇಖನದಲ್ಲಿ ಕೊಡಲಾದ ಸಲಹೆಗಳನ್ನು ಅವಳು ಅನ್ವಯಿಸಿದಳು. ಈಗ ಅವಳಿಗೆ ಬೈಬಲ್‌ ಓದುವುದೆಂದರೆ ತುಂಬ ಖುಷಿ. ಏಕೆಂದರೆ ಅದರಲ್ಲಿನ ಪುಸ್ತಕಗಳು ಒಂದಕ್ಕೊಂದು ಸಂಬಂಧಿಸಿರುವ ಒಂದು ಸುಂದರ ಚಿತ್ರದಂತೆ ಕಾಣಿಸುತ್ತದೆ. “ಬೈಬಲ್‌ ಓದುವುದರಲ್ಲಿ ನಾನು ಹಿಂದೆಂದೂ ಇಷ್ಟು ಆನಂದಿಸಿರಲಿಲ್ಲ” ಎನ್ನುತ್ತಾಳೆ ಅವಳು.

17, 18. ಸಾರ್ವಜನಿಕರಿಗಾಗಿ ಬರೆಯಲಾದ ಮಾಹಿತಿಯಿಂದ ನಮಗೆ ಹೇಗೆ ಪ್ರಯೋಜನವಾಗುತ್ತದೆ? ಒಂದು ಉದಾಹರಣೆ ಕೊಡಿ.

17 ಸಾರ್ವಜನಿಕರಿಗಾಗಿ ಸಾಹಿತ್ಯ: 2008 ರಿಂದ ಕಾವಲಿನಬುರುಜು ಅಧ್ಯಯನ ಆವೃತ್ತಿಯನ್ನು ನಾವು ಓದಿ ಆನಂದಿಸಿದ್ದೇವೆ. ಈ ಆವೃತ್ತಿಯನ್ನು ಮುಖ್ಯವಾಗಿ ಯೆಹೋವನ ಸಾಕ್ಷಿಗಳಿಗಾಗಿ ಬರೆಯಲಾಗಿದೆ. ಸಾರ್ವಜನಿಕರಿಗಾಗಿ ಬರೆಯಲಾದ ಪತ್ರಿಕೆಗಳೂ ನಮ್ಮಲ್ಲಿವೆ. ಇವುಗಳಿಂದಲೂ ನಾವು ಹೇಗೆ ಪ್ರಯೋಜನ ಪಡೆಯಬಹುದು? ಒಬ್ಬ ಆಸಕ್ತ ವ್ಯಕ್ತಿಯನ್ನು ನಾವು ರಾಜ್ಯ ಸಭಾಗೃಹಕ್ಕೆ ಆಮಂತ್ರಿಸಿದ್ದೇವೆಂದು ನೆನಸಿ. ಅವನು ಬಂದಾಗ ನಮಗೆ ತುಂಬ ಸಂತೋಷವಾಗುತ್ತದೆ. ಭಾಷಣಕಾರನು ಭಾಷಣ ಕೊಡುವಾಗ ನಾವು ಕಿವಿಗೊಡುತ್ತೇವೆ ಮತ್ತು ಆ ಆಸಕ್ತ ವ್ಯಕ್ತಿಯ ಕುರಿತು ಯೋಚಿಸುತ್ತೇವೆ. ಅವನು ಕೇಳಿಸಿಕೊಳ್ಳುತ್ತಿರುವ ಮಾಹಿತಿ ಬಗ್ಗೆ ಅವನಿಗೆ ಹೇಗನಿಸುತ್ತದೆ ಮತ್ತು ಅದು ಅವನ ಜೀವನವನ್ನು ಹೇಗೆ ಬದಲಾಯಿಸಬಲ್ಲದು ಎಂದೂ ಆಲೋಚಿಸುತ್ತೇವೆ. ಪರಿಣಾಮವಾಗಿ ನಮ್ಮ ಹೃದಯವು ಪುಳಕಿತಗೊಳ್ಳುತ್ತದೆ ಮತ್ತು ಆ ವಿಷಯಕ್ಕಾಗಿ ನಾವು ಹೆಚ್ಚು ಕೃತಜ್ಞರಾಗಿರುತ್ತೇವೆ.

18 ಸಾರ್ವಜನಿಕರಿಗಾಗಿ ಬರೆಯಲಾಗಿರುವ ಸಾಹಿತ್ಯವನ್ನು ಓದುವಾಗ ಇದೇ ರೀತಿಯ ಅನುಭವ ನಮಗಾಗಬಹುದು. ಉದಾಹರಣೆಗೆ, ಕಾವಲಿನಬುರುಜು ಸಾರ್ವಜನಿಕ ಆವೃತ್ತಿ ಮತ್ತು jw.orgನಲ್ಲಿರುವ ಲೇಖನಗಳು ಸುಲಭವಾದ ಸರಳ ಮಾತುಗಳಲ್ಲಿ ಬೈಬಲನ್ನು ವಿವರಿಸುತ್ತವೆ. ನಾವು ಈ ಮಾಹಿತಿಯನ್ನು ಓದುವಾಗ ನಮಗೆ ಈಗಾಗಲೇ ತಿಳಿದಿರುವ ಬೈಬಲ್‌ ಸತ್ಯಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅವುಗಳ ಮೇಲಿನ ಪ್ರೀತಿ ಹೆಚ್ಚುತ್ತದೆ. ಅಲ್ಲದೆ, ಸೇವೆಯಲ್ಲಿ ನಮ್ಮ ನಂಬಿಕೆಗಳನ್ನು ವಿವರಿಸುವ ಹೊಸ ವಿಧಾನಗಳನ್ನೂ ಕಲಿಯಬಹುದು. ಇದೇ ರೀತಿಯಲ್ಲಿ ಎಚ್ಚರ! ಪತ್ರಿಕೆಯು ಸಹ ಸೃಷ್ಟಿಕರ್ತನು ಇದ್ದಾನೆಂಬ ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ. ನಮ್ಮ ನಂಬಿಕೆಗಳಿಗೆ ಕಾರಣವನ್ನು ಹೇಗೆ ವಿವರಿಸುವುದೆಂದು ಕಲಿಯಲು ಕೂಡ ಅದು ನಮಗೆ ನೆರವಾಗುತ್ತದೆ.—1 ಪೇತ್ರ 3:15 ಓದಿ.

19. ಆಧ್ಯಾತ್ಮಿಕ ಆಹಾರಕ್ಕಾಗಿ ನಾವು ಯೆಹೋವನಿಗೆ ಹೇಗೆ ಕೃತಜ್ಞತೆ ತೋರಿಸಬಹುದು?

19 ನಿಜವಾಗಿಯೂ ಯೆಹೋವನು ನಮ್ಮ ಪ್ರಯೋಜನಕ್ಕಾಗಿ ಬಹಳಷ್ಟು ಉಪದೇಶ, ಸಲಹೆಯನ್ನು ಕೊಟ್ಟಿದ್ದಾನೆ. (ಮತ್ತಾ. 5:3) ಅವೆಲ್ಲವನ್ನು ನಾವು ಓದುತ್ತಾ ಅನ್ವಯಿಸುತ್ತಾ ಇರೋಣ. ಇದರಿಂದ ನಾವು ಪ್ರಯೋಜನ ಪಡೆಯುವೆವು ಮತ್ತು ಆತನು ಕೊಡುವ ಆಧ್ಯಾತ್ಮಿಕ ಆಹಾರಕ್ಕಾಗಿ ಸದಾ ಕೃತಜ್ಞರೆಂದು ತೋರಿಸಿಕೊಡುವೆವು.—ಯೆಶಾ. 48:17.

^ [1] (ಪ್ಯಾರ 14) ಉದಾಹರಣೆಗೆ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕ ಹಾಗೂ ಎಚ್ಚರ! ಪತ್ರಿಕೆಯಲ್ಲಿ ಬಂದಿರುವ “ಯುವ ಜನರ ಪ್ರಶ್ನೆ” ಲೇಖನಗಳು.