ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಗತ್ಯವಿರುವಲ್ಲಿ ಸೇವೆಮಾಡುವಾಗ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಿ

ಅಗತ್ಯವಿರುವಲ್ಲಿ ಸೇವೆಮಾಡುವಾಗ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಿ

“ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ.”—ಕೀರ್ತ. 119:11.

ಗೀತೆಗಳು: 142, 92

1-3. (ಎ) ಜೀವನದಲ್ಲಿ ನಾವು ಯಾವುದಕ್ಕೆ ಆದ್ಯತೆ ಕೊಡಬೇಕು? (ಬಿ) ಹೊಸ ಭಾಷೆ ಕಲಿಯುವವರಿಗೆ ಯಾವ ಸವಾಲುಗಳಿರುತ್ತವೆ? (ಸಿ) ಇದರಿಂದ ಯಾವ ಪ್ರಶ್ನೆಗಳು ಏಳುತ್ತವೆ? (ಲೇಖನದ ಆರಂಭದ ಚಿತ್ರ ನೋಡಿ.)

“ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ” ಸುವಾರ್ತೆ ಸಾರಬೇಕೆಂದು ಬೈಬಲಿನಲ್ಲಿದೆ. ಅದರಂತೆ ಇಂದು ಅನೇಕ ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುತ್ತಿದ್ದಾರೆ. (ಪ್ರಕ. 14:6) ಅವರಲ್ಲಿ ನೀವೂ ಒಬ್ಬರಾ? ನೀವು ಸಹ ಒಂದು ಹೊಸ ಭಾಷೆಯನ್ನು ಕಲಿಯುತ್ತಿದ್ದೀರಾ? ಕೆಲವರು ಮಿಷನರಿಗಳಾಗಿ ಅಥವಾ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಊರಿನಲ್ಲೇ ಬೇರೆ ಭಾಷೆಯ ಸಭೆಗೆ ನೆರವು ನೀಡುತ್ತಿದ್ದಾರೆ.

2 ದೇವರ ಸೇವಕರಾಗಿರುವ ನಾವೆಲ್ಲರೂ ನಮ್ಮ ಮತ್ತು ನಮ್ಮ ಕುಟುಂಬದ ಆಧ್ಯಾತ್ಮಿಕ ಆರೋಗ್ಯಕ್ಕೆ ಆದ್ಯತೆ ಕೊಡಬೇಕು. (ಮತ್ತಾ. 5:3) ದಿನನಿತ್ಯದ ಕೆಲಸಗಳ ಜಂಜಾಟದಿಂದಾಗಿ ಕೆಲವೊಮ್ಮೆ ಅರ್ಥಭರಿತ ವೈಯಕ್ತಿಕ ಅಧ್ಯಯನಕ್ಕೆ ಸಮಯಮಾಡಿಕೊಳ್ಳುವುದು ದೊಡ್ಡ ಸವಾಲಾಗಿರುತ್ತದೆ. ಅಗತ್ಯವಿರುವಲ್ಲಿ ಹೋಗಿ ಸೇವೆಮಾಡುವವರಿಗೆ ಇನ್ನೂ ಹೆಚ್ಚಿನ ಸವಾಲುಗಳಿವೆ.

3 ಬೇರೆ ಭಾಷೆಯ ಸಭೆಯಲ್ಲಿ ಸೇವೆಮಾಡುತ್ತಿರುವವರು ಹೊಸ ಭಾಷೆ ಕಲಿಯಬೇಕು. ಜೊತೆಗೆ, ದೇವರ ಅಗಾಧವಾದ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಾ ಇರಬೇಕು. (1 ಕೊರಿಂ. 2:10) ಆದರೆ ಸಭೆಯಲ್ಲಿ ಹೇಳುವ ವಿಷಯಗಳೇ ಅರ್ಥವಾಗದಿದ್ದಾಗ ದೇವರ ಅಗಾಧವಾದ ವಿಷಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಬೇರೆ ಭಾಷೆಯ ಸಭೆಗಳಿಗೆ ಹಾಜರಾಗುವ ಹೆತ್ತವರು ತಮ್ಮ ಮಕ್ಕಳ ಹೃದಯಕ್ಕೆ ಸತ್ಯ ತಲುಪುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

ನಮ್ಮ ಆಧ್ಯಾತ್ಮಿಕತೆಗೆ ಬರುವ ಕುತ್ತು

4. ಆಧ್ಯಾತ್ಮಿಕತೆಗೆ ಯಾವಾಗ ಹಾನಿಯಾಗುತ್ತದೆ? ಉದಾಹರಣೆ ಕೊಡಿ.

4 ಹೊಸ ಭಾಷೆಯಲ್ಲಿ ಬೈಬಲ್‌ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಆಗ ಆಧ್ಯಾತ್ಮಿಕತೆಗೆ ಹಾನಿಯಾಗುತ್ತದೆ. ನೆಹೆಮೀಯನು ಯೆರೂಸಲೇಮಿಗೆ ವಾಪಸ್ಸಾದಾಗ ಒಂದು ವಿಷಯ ಅವನ ಗಮನಕ್ಕೆ ಬಂತು. ಅಲ್ಲಿನ ಕೆಲವು ಮಕ್ಕಳಿಗೆ ಹೀಬ್ರು ಭಾಷೆ ಬರುತ್ತಿರಲಿಲ್ಲ. (ನೆಹೆಮೀಯ 13:23, 24 ಓದಿ.) ಹಾಗಾಗಿ ದೇವರ ವಾಕ್ಯ ಅರ್ಥವಾಗುತ್ತಿರಲಿಲ್ಲ. ಇದರಿಂದ ಆ ಮಕ್ಕಳಿಗೆ ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಲು ಆಗಲಿಲ್ಲ.—ನೆಹೆ. 8:2, 8

5, 6. ಹೆತ್ತವರು ತಮ್ಮ ಮಕ್ಕಳಲ್ಲಿ ಏನನ್ನು ಗಮನಿಸಿದ್ದಾರೆ? ಅದಕ್ಕೆ ಕಾರಣವೇನು?

5 ಹೊಸ ಭಾಷೆಯ ಸಭೆಗೆ ಹೋದಾಗಿನಿಂದ ಮಕ್ಕಳ ಆಧ್ಯಾತ್ಮಿಕತೆ ಕ್ಷೀಣಿಸುತ್ತಾ ಬಂದಿದೆ ಎಂದು ಹೆತ್ತವರು ಗಮನಿಸಿದ್ದಾರೆ. ಕಾರಣ, ಕೂಟಗಳಲ್ಲಿ ಹೇಳಲಾಗುವ ವಿಷಯ ಮಕ್ಕಳಿಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಹಾಗಾಗಿ ಆ ವಿಷಯಗಳು ಅವರ ಹೃದಯವನ್ನು ಪ್ರೇರೇಪಿಸುವುದಿಲ್ಲ. “ಆಧ್ಯಾತ್ಮಿಕ ವಿಷಯಗಳ ಕುರಿತು ಮಾತಾಡುವಾಗ ಅದರಲ್ಲಿ ನಮ್ಮ ಹೃದಯ ಮತ್ತು ಭಾವನೆಗಳು ಒಳಗೂಡಲೇಬೇಕು” ಎಂದು ದಕ್ಷಿಣ ಅಮೆರಿಕಾದಿಂದ ಆಸ್ಟ್ರೇಲಿಯಾಗೆ ಸ್ಥಳಾಂತರಿಸಿರುವ ಪೆಡ್ರೋ [1] ಹೇಳಿದರು.—ಲೂಕ 24:32.

6 ಸ್ವಂತ ಭಾಷೆಯಲ್ಲಿ ಓದುವಾಗ ನಮ್ಮ ಭಾವನೆಗಳು ಪ್ರೇರೇಪಿಸಲ್ಪಡುವ ಹಾಗೆ ಬೇರೆ ಭಾಷೆಯಲ್ಲಿ ಓದುವಾಗ ಪ್ರೇರೇಪಿಸಲ್ಪಡುವುದಿಲ್ಲ. ಜೊತೆಗೆ ಬೇರೆ ಭಾಷೆಯಲ್ಲಿ ಸಂವಾದ ಮಾಡಲು ಕಷ್ಟವಾಗುವುದರಿಂದ ಅದು ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ನಮ್ಮನ್ನು ನಿಶಕ್ತರನ್ನಾಗಿ ಮಾಡಬಹುದು. ಹಾಗಾಗಿ ಬೇರೆ ಭಾಷೆಯ ಸಭೆಗಳಲ್ಲಿ ಸೇವೆ ಮಾಡುವುದು ನಮ್ಮ ಬಯಕೆಯಾಗಿರುವಲ್ಲಿ ಯೆಹೋವನೊಂದಿಗಿನ ನಮ್ಮ ಆಪ್ತಸಂಬಂಧವನ್ನು ಸಹ ಕಾಪಾಡಿಕೊಳ್ಳಬೇಕು.—ಮತ್ತಾ. 4:4.

ಅವರು ಆಧ್ಯಾತ್ಮಿಕತೆ ಕಾಪಾಡಿಕೊಂಡರು

7. ದಾನಿಯೇಲನು ತಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಒಪ್ಪಿಕೊಳ್ಳುವಂತೆ ಬಾಬೆಲಿನವರು ಹೇಗೆ ಒತ್ತಾಯಿಸಿದರು?

7 ದಾನಿಯೇಲ ಮತ್ತು ಅವನ ಗೆಳೆಯರನ್ನು ಬಾಬೆಲಿಗೆ ಬಂಧಿವಾಸಿಗಳಾಗಿ ಕರೆದುಕೊಂಡು ಬಂದಾಗ, ಬಾಬೆಲಿನವರು ತಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಹೇಗೆ? ಹೇಗೆಂದರೆ, ಬಂಧಿವಾಸದಲ್ಲಿದ್ದವರಿಗೆ “ಕಸ್ದೀಯ ಪಂಡಿತರ ಭಾಷೆಯನ್ನು” ಕಲಿಸಿದರು ಮತ್ತು ಬಾಬೆಲಿನಲ್ಲಿ ಇಟ್ಟುಕೊಳ್ಳುವ ಹೆಸರುಗಳನ್ನು ಅವರಿಗಿಟ್ಟರು. (ದಾನಿ. 1:3-7) ದಾನಿಯೇಲನಿಗೆ ಇಟ್ಟ ಹೊಸ ಹೆಸರು ಬಾಬೆಲಿನಲ್ಲಿ ಆರಾಧಿಸುತ್ತಿದ್ದ ಬೇಲ್‌ ಎಂಬ ದೇವರ ಹೆಸರಾಗಿತ್ತು. ದಾನಿಯೇಲನು ತನ್ನ ದೇವರಾದ ಯೆಹೋವನಿಗಿಂತ, ಬಾಬೆಲಿನ ದೇವರಿಗೆ ಹೆಚ್ಚು ಶಕ್ತಿಯಿದೆ ಎಂದು ನಂಬಬೇಕೆಂಬ ಉದ್ದೇಶದಿಂದ ರಾಜ ನೆಬೂಕದ್ನೆಚ್ಚರನು ಹೀಗೆ ಮಾಡಿದನು.—ದಾನಿ. 4:8.

8. ದಾನಿಯೇಲನು ಯೆಹೋವನೊಂದಿಗಿನ ತನ್ನ ಆಪ್ತತೆಯನ್ನು ಹೇಗೆ ಬಲಪಡಿಸಿಕೊಂಡನು?

8 ಬಾಬೆಲಿನಲ್ಲಿ ದಾನಿಯೇಲನಿಗೆ ರಾಜನ ಭೋಜನಪದಾರ್ಥಗಳನ್ನು ಕೊಡಲಾಯಿತು. ಆದರೆ ಅವನು ದೇವರ ಆಜ್ಞೆಗೆ ಅವಿಧೇಯನಾಗಿ ನಡೆಯಬಾರದೆಂದು ಹೃದಯದಲ್ಲಿ ‘ನಿಶ್ಚಯಿಸಿಕೊಂಡಿದ್ದನು.’ (ದಾನಿ. 1:8) ತನ್ನ ಮಾತೃಭಾಷೆಯಲ್ಲಿದ್ದ “ಪವಿತ್ರ ಪುಸ್ತಕಗಳನ್ನು” ಆತನು ಅಧ್ಯಯನ ಮಾಡುತ್ತಾ ಇದ್ದದ್ದರಿಂದ, ಬೇರೆ ದೇಶದಲ್ಲಿದ್ದರೂ ಯೆಹೋವನೊಂದಿಗಿನ ತನ್ನ ಆಪ್ತತೆಯನ್ನು ಬಲಪಡಿಸಿಕೊಂಡನು. (ದಾನಿ. 9:2) ಅವನು ಬಾಬೆಲಿಗೆ ಬಂದು 70 ವರ್ಷಗಳಾದ ನಂತರವು ಆತನನ್ನು ದಾನಿಯೇಲ ಎಂಬ ಹೀಬ್ರು ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು.—ದಾನಿ. 5:13.

9. ಕೀರ್ತನೆ 119⁠ರ ಬರಹಗಾರನಿಗೆ ದೇವರ ವಾಕ್ಯದ ಕಡೆಗೆ ಯಾವ ಮನೋಭಾವವಿತ್ತು?

9 ರಾಜನ ಆಸ್ಥಾನದಲ್ಲಿದ್ದವರು ತನ್ನ ವಿರುದ್ಧವಾಗಿ ಮಾತಾಡಿದ ಮಾತುಗಳನ್ನು ಕೀರ್ತನೆ 119⁠ರ ಬರಹಗಾರನು ಸಹಿಸಬೇಕಾಗಿತ್ತು. ಆದರೆ ಅವನು ದೇವರ ವಾಕ್ಯದಿಂದ ಬಲಪಡೆದುಕೊಂಡನು. ಇತರರಿಗಿಂತ ಭಿನ್ನನಾಗಿರಲು ಅದೇ ಅವನಿಗೆ ನೆರವಾಯಿತು. (ಕೀರ್ತ. 119:23, 61) ದೇವರ ವಾಕ್ಯವು ಅವನ ಮನಸ್ಸನ್ನು ಆಳವಾಗಿ ಪ್ರಭಾವಿಸುವಂತೆ ಅವನು ಬಿಟ್ಟುಕೊಟ್ಟನು.ಕೀರ್ತನೆ 119:11, 46 ಓದಿ.

ಯೆಹೋವನೊಂದಿಗಿನ ಆಪ್ತತೆ ಬಲವಾಗಿರಲಿ

10, 11. (ಎ) ದೇವರ ವಾಕ್ಯದ ಅಧ್ಯಯನಮಾಡುವಾಗ ನಮ್ಮ ಮುಖ್ಯ ಗುರಿ ಏನಾಗಿರಬೇಕು? (ಬಿ) ಆ ಗುರಿಯನ್ನು ಮುಟ್ಟಲು ನಾವೇನು ಮಾಡಬೇಕು? ಉದಾಹರಣೆ ಕೊಡಿ.

10 ಸಭೆಯಲ್ಲಿ ಮತ್ತು ನಮ್ಮ ಕೆಲಸದಲ್ಲಿ ನಾವೆಷ್ಟೇ ಕಾರ್ಯಮಗ್ನರಾಗಿರಲಿ ವೈಯಕ್ತಿಕ ಅಧ್ಯಯನಕ್ಕೆ ಮತ್ತು ಕುಟುಂಬ ಆರಾಧನೆಗೆ ಸಮಯ ಕೊಡಲೇಬೇಕು. (ಎಫೆ. 5:15, 16) ಹಾಗಂತ ಇಂತಿಷ್ಟು ಪುಟಗಳನ್ನು ಓದಿ ಮುಗಿಸಬೇಕು, ಕೂಟಗಳಿಗೆ ತಯಾರಿ ಮಾಡಬೇಕು ಎನ್ನುವುದೇ ನಮ್ಮ ಗುರಿಯಾಗಿರಬಾರದು. ನಮ್ಮ ಮುಖ್ಯ ಗುರಿ ದೇವರ ವಾಕ್ಯ ಹೃದಯವನ್ನು ತಲುಪುವಂತೆ ಬಿಟ್ಟು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವುದೇ ಆಗಿರಬೇಕು.

11 ಈ ಗುರಿಯನ್ನು ಮುಟ್ಟಲು ನಾವು ನಮ್ಮ ಅಧ್ಯಯನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಅಂದರೆ ನಾವು ಅಧ್ಯಯನ ಮಾಡುವಾಗ ಇದು ಬೇರೆಯವರಿಗೆ ಹೇಗೆಲ್ಲ ಅನ್ವಯಿಸುತ್ತದೆ ಎಂದು ಯೋಚಿಸುವುದಲ್ಲದೆ ನನಗೆ ಹೇಗೆ ಅನ್ವಯಿಸುತ್ತದೆ ಎಂದೂ ಯೋಚಿಸಬೇಕು. (ಫಿಲಿ. 1:9, 10) ನಾವು ಸೇವೆಗಾಗಿ, ಕೂಟಗಳಿಗಾಗಿ ಅಥವಾ ಭಾಷಣ ಕೊಡಲು ತಯಾರಿಮಾಡುವಾಗ ಹೆಚ್ಚಾಗಿ ಬೇರೆಯವರನ್ನು ಮನಸ್ಸಿನಲ್ಲಿಟ್ಟೇ ತಯಾರಿಸುತ್ತೇವೆ. ಆದರೆ ನಮ್ಮ ಅಗತ್ಯಗಳ ಕಡೆಗೂ ನಾವು ಗಮನಕೊಡಬೇಕು. ಉದಾಹರಣೆಗೆ, ಅಡುಗೆಭಟ್ಟ ಊಟ ಬಡಿಸುವ ಮುಂಚೆ ರುಚಿ ನೋಡುತ್ತಾನೆ. ಹಾಗಂತ ಕೇವಲ ರುಚಿ ನೋಡಿಕೊಂಡೆ ತನ್ನ ಜೀವನ ಸಾಗಿಸುತ್ತಾನಾ? ಇಲ್ಲ ತಾನೆ. ಆರೋಗ್ಯವಾಗಿರಲು ತನಗೋಸ್ಕರ ಅಡುಗೆ ಮಾಡಿಕೊಂಡು ಅವನು ಸಹ ಊಟಮಾಡಲೇಬೇಕು. ಅದೇ ರೀತಿ ನಾವು ಸಹ ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ತಪ್ಪದೇ ಬೈಬಲ್‌ ಅಧ್ಯಯನ ಮಾಡಲೇಬೇಕು. ಹಾಗೇ ಮಾಡಿದರೆ ಮಾತ್ರ ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.

12, 13. ಅನೇಕರು ತಮ್ಮ ಸ್ವಂತ ಭಾಷೆಯಲ್ಲಿ ಬೈಬಲನ್ನು ಅಧ್ಯಯನ ಮಾಡುವುದು ಉತ್ತಮವೆಂದು ಏಕೆ ಅಭಿಪ್ರಾಯಪಟ್ಟಿದ್ದಾರೆ?

12 “ನಮ್ಮ ಸ್ವಂತ ಭಾಷೆಯಲ್ಲಿ” ತಪ್ಪದೇ ಬೈಬಲ್‌ ಅಧ್ಯಯನ ಮಾಡುವುದು ಉತ್ತಮ ಎನ್ನುವುದು ಬೇರೆ ಭಾಷೆಯ ಸಭೆಗಳಲ್ಲಿ ಸೇವೆ ಮಾಡುವವರ ಅಭಿಪ್ರಾಯವಾಗಿದೆ. (ಅ. ಕಾ. 2:8) ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುತ್ತಾ ಮುಂದುವರಿಯಬೇಕಾದರೆ ಕೇವಲ ಕೂಟಗಳಲ್ಲಿ ಕಿವಿಗೊಟ್ಟರೆ ಸಾಲದು ಎಂದು ಮಿಷನರಿಗಳು ಸಹ ಒಪ್ಪಿಕೊಳ್ಳುತ್ತಾರೆ.

13 ಸುಮಾರು ಎಂಟು ವರ್ಷಗಳಿಂದ ಪರ್ಷಿಯನ್‌ ಭಾಷೆಯನ್ನು ಕಲಿಯುತ್ತಿರುವ ಆ್ಯಲಾ ಹೇಳುವುದು: “ನಾನು ಪರ್ಷಿಯನ್‌ ಭಾಷೆಯಲ್ಲಿ ಕೂಟಗಳಿಗಾಗಿ ತಯಾರಿಸುವಾಗ ಕೇವಲ ಆ ಭಾಷೆಯ ಕಡೆಗೆ ಗಮನಕೊಡುತ್ತೇನೆ. ನಾನು ಓದಿದ ಆಧ್ಯಾತ್ಮಿಕ ವಿಷಯಗಳು ನನ್ನ ಹೃದಯದಾಳಕ್ಕೆ ಇಳಿಯುವುದಿಲ್ಲ. ಹಾಗಾಗಿ ಬೈಬಲನ್ನು ಮತ್ತು ಬೇರೆ ಪತ್ರಿಕೆಗಳನ್ನು ನನ್ನ ಸ್ವಂತ ಭಾಷೆಯಲ್ಲಿ ಅಧ್ಯಯನ ಮಾಡಲು ಸಮಯಮಾಡಿಕೊಳ್ಳುತ್ತೇನೆ.”

ನಿಮ್ಮ ಮಕ್ಕಳ ಹೃದಯವನ್ನು ಸ್ಪರ್ಶಿಸಿ

14. ಹೆತ್ತವರು ಯಾವ ವಿಷಯವನ್ನು ನೋಡಿಕೊಳ್ಳಬೇಕು? ಏಕೆ?

14 ಸತ್ಯವು ತಮ್ಮ ಮಕ್ಕಳ ಮನಸ್ಸು ಮತ್ತು ಹೃದಯವನ್ನು ತಲುಪುವಂತೆ ಕ್ರೈಸ್ತ ಹೆತ್ತವರು ನೋಡಿಕೊಳ್ಳಬೇಕು. ಮೂರಕ್ಕೂ ಹೆಚ್ಚು ವರ್ಷಗಳಿಂದ ಬೇರೆ ಭಾಷೆಯ ಸಭೆಯಲ್ಲಿ ಸೇವೆಸಲ್ಲಿಸುತ್ತಿರುವ ಸರ್ಜ್‌ ಮತ್ತು ಅವನ ಪತ್ನಿ ಮ್ಯುರಿಯಲ್‌ ಉದಾಹರಣೆಯನ್ನು ಗಮನಿಸಿ. ಅವರ 17 ವರ್ಷದ ಮಗ ಸೇವೆಯಲ್ಲಿ ಮತ್ತು ಕೂಟದಲ್ಲಿ ತನ್ನ ಸಂತೋಷ ಕಳೆದುಕೊಳ್ಳುತ್ತಿರುವುದನ್ನು ಅವರು ಗಮನಿಸಿದರು. ಮ್ಯುರಿಯಲ್‌ ಹೇಳುವುದು: “ನಮ್ಮ ಭಾಷೆ ಫ್ರೆಂಚ್‌. ಆ ಭಾಷೆಲಿ ಸುವಾರ್ತೆ ಸಾರಲಿಕ್ಕೆ ನಮ್ಮ ಮಗ ತುಂಬಾ ಇಷ್ಟಪಡುತ್ತಿದ್ದ. ಆದರೆ ಹೊಸ ಭಾಷೆಲಿ ಸಾರಲಿಕ್ಕೆ ಅವನಿಗೆ ಇಷ್ಟ ಆಗ್ತಿರಲಿಲ್ಲ.” ಸರ್ಜ್‌ ಹೀಗೆ ಹೇಳುತ್ತಾರೆ: “ಈ ಹೊಸ ಬದಲಾವಣೆ ನಮ್ಮ ಮಗನ ಆಧ್ಯಾತ್ಮಿಕ ಬೆಳವಣಿಗೆಯನ್ನ ಕಡಿಮೆಗೊಳಿಸುತ್ತಿದೆ ಅಂತ ನಮಗೆ ಗೊತ್ತಾದಾಗ ನಾವು ಪುನಃ ಹಿಂದಿನ ಸಭೆಗೆ ಹೋಗೋ ನಿರ್ಣಯಮಾಡಿದ್ವಿ.”

ಸತ್ಯವು ನಿಮ್ಮ ಮಕ್ಕಳ ಹೃದಯವನ್ನು ತಲುಪುವಂತೆ ನೋಡಿಕೊಳ್ಳಿ (ಪ್ಯಾರ 14, 15 ನೋಡಿ)

15. (ಎ) ತಮ್ಮ ಮಕ್ಕಳಿಗೆ ಚೆನ್ನಾಗಿ ಅರ್ಥವಾಗುವಂಥ ಭಾಷೆಯ ಸಭೆಗೆ ಹೋಗುವ ಮುಂಚೆ ಹೆತ್ತವರು ಯಾವ ವಿಷಯಗಳನ್ನು ಪರಿಗಣಿಸಬೇಕು? (ಬಿ) ಧರ್ಮೋಪದೇಶಕಾಂಡ 6:5-7⁠ರಲ್ಲಿ ಹೆತ್ತವರಿಗೆ ಯಾವ ನಿರ್ದೇಶನಗಳಿವೆ?

15 ತಮ್ಮ ಮಕ್ಕಳಿಗೆ ಚೆನ್ನಾಗಿ ಅರ್ಥವಾಗುವಂಥ ಭಾಷೆಯ ಸಭೆಗೆ ವಾಪಸ್‌ ಹೋಗುವ ಮುಂಚೆ ಹೆತ್ತವರು ಯಾವ ವಿಷಯಗಳನ್ನು ಪರಿಗಣಿಸಬೇಕು? ಮೊದಲನೆಯದಾಗಿ, ತಮ್ಮ ಮಕ್ಕಳಲ್ಲಿ ಯೆಹೋವನ ಕಡೆಗೆ ಪ್ರೀತಿ ಬೆಳೆಸಲು ಮತ್ತು ಅವರಿಗೆ ಹೊಸ ಭಾಷೆಯನ್ನು ಕಲಿಸಲು ಬೇಕಾದ ಸಮಯ ಮತ್ತು ಶಕ್ತಿ ತಮ್ಮಲ್ಲಿದೆಯಾ ಎಂದು ಹೆತ್ತವರು ಯೋಚಿಸಬೇಕು. ಎರಡನೆಯದಾಗಿ, ತಮ್ಮ ಮಕ್ಕಳು ಸುವಾರ್ತೆ ಸಾರಲು, ಕೂಟಗಳಿಗೆ ಹಾಜರಾಗಲು ಅಥವಾ ಬೇರೆ ಭಾಷೆಯನ್ನಾಡುವ ಕ್ಷೇತ್ರದಲ್ಲಿ ಸೇವೆ ಮಾಡಲು ಇಷ್ಟಪಡುತ್ತಾರೋ, ಇಲ್ಲವೋ ಎಂದು ಗಮನಿಸಬೇಕು. ಈ ವಿಷಯಗಳನ್ನು ಪರಿಗಣಿಸಿದ ನಂತರ ಹೆತ್ತವರು ಮಕ್ಕಳಿಗೆ ಚೆನ್ನಾಗಿ ಅರ್ಥವಾಗುವ ಭಾಷೆಯ ಸಭೆಗೆ ಹೋಗಬೇಕೋ, ಬೇಡವೋ ಎಂದು ನಿರ್ಧರಿಸಬೇಕು. ಯಾವಾಗ ಮಕ್ಕಳು ಯೆಹೋವನೊಂದಿಗೆ ಬಲವಾದ ಆಪ್ತತೆಯನ್ನು ಬೆಳೆಸಿಕೊಳ್ಳುತ್ತಾರೋ, ಆಗ ಹೆತ್ತವರು ಪುನಃ ಬೇರೆ ಭಾಷೆಯ ಸಭೆಗೆ ಸ್ಥಳಾಂತರಿಸಲು ನಿರ್ಧರಿಸಬಹುದು.ಧರ್ಮೋಪದೇಶಕಾಂಡ 6:5-7 ಓದಿ.

16, 17. ಯೆಹೋವನ ಬಗ್ಗೆ ತಮ್ಮ ಮಕ್ಕಳಿಗೆ ಕಲಿಸಲು ಕೆಲವು ಹೆತ್ತವರಿಗೆ ಯಾವುದು ಸಹಾಯಮಾಡಿತು?

16 ಬೇರೆ ಭಾಷೆಯ ಸಭೆ ಅಥವಾ ಗುಂಪಿನ ಕೂಟಗಳಿಗೆ ಹಾಜರಾಗುತ್ತಲೆ, ತಮ್ಮ ಸ್ವಂತ ಭಾಷೆಯಲ್ಲಿ ಯೆಹೋವನ ಬಗ್ಗೆ ಮಕ್ಕಳಿಗೆ ಕಲಿಸಲು ಕೆಲವು ಹೆತ್ತವರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಚಾರ್ಲ್ಸ್‌ ಎಂಬವರಿಗೆ 9⁠ರಿಂದ 13 ವರ್ಷದ ನಡುವಿನ ಮೂರು ಹೆಣ್ಣು ಮಕ್ಕಳಿದ್ದಾರೆ. ಅವರು ಲಿಂಗಾಲ ಭಾಷೆಯ ಗುಂಪಿಗೆ ಹೋಗುತ್ತಾರೆ. ಚಾರ್ಲ್ಸ್‌ ಹೇಳುವುದು: “ಮಕ್ಕಳ ಜೊತೆಗೆ ಮಾಡೋ ಬೈಬಲ್‌ ಅಧ್ಯಯನವನ್ನ ಮತ್ತು ಕುಟುಂಬ ಆರಾಧನೆಯನ್ನ ನಾವು ನಮ್ಮ ಸ್ವಂತ ಭಾಷೆಲೇ ಮಾಡಬೇಕು ಅಂತ ನಿರ್ಧಾರ ಮಾಡಿದ್ವಿ. ಆದ್ರೆ ಅದೇ ಸಮಯದಲ್ಲಿ ಲಿಂಗಾಲ ಭಾಷೆಯ ಪ್ರಾಕ್ಟಿಸ್‌ ಸೆಷನ್‌ಗಳನ್ನ ಮತ್ತು ಆಟಗಳನ್ನ ಅದರಲ್ಲಿ ಸೇರಿಸಿದ್ವಿ. ಹೀಗೆ ಮಾಡೋದ್ರಿಂದ ಮಕ್ಳು ಆಟ ಆಡ್ತಾನೆ ಹೊಸ ಭಾಷೆನಾ ಕಲಿಯೋಕೆ ಸಾಧ್ಯವಾಗುತ್ತಿದೆ.”

ಸ್ಥಳೀಯ ಭಾಷೆಯನ್ನು ಕಲಿಯುವ ಪ್ರಯತ್ನಮಾಡಿ ಮತ್ತು ಕೂಟಗಳಲ್ಲಿ ಭಾಗವಹಿಸಿ (ಪ್ಯಾರ 16, 17 ನೋಡಿ)

17 ಕೆವಿನ್‌ ಎಂಬವರಿಗೆ 5 ಮತ್ತು 8 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಸತ್ಯವನ್ನು ಕಲಿಸಲು ಕೆವಿನ್‌ ಬಹಳಷ್ಟು ಶ್ರಮಪಡುತ್ತಾರೆ. ಬೇರೆ ಭಾಷೆಯ ಕೂಟಗಳಿಗೆ ಹಾಜರಾಗುತ್ತಿರುವುದರಿಂದ ಅಲ್ಲಿ ಹೇಳಲಾಗುವ ವಿಷಯಗಳು ಆ ಮಕ್ಕಳಿಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಕೆವಿನ್‌ ಹೀಗನ್ನುತ್ತಾರೆ: “ನಾನು, ನನ್ನ ಹೆಂಡತಿ ಇಬ್ರೂ ಸೇರಿ ನಮ್ಮ ಮಕ್ಕಳೊಂದಿಗೆ ಮಾತೃ ಭಾಷೆಯಾದ ಫ್ರೆಂಚ್‌ನಲ್ಲೇ ವೈಯಕ್ತಿಕ ಅಧ್ಯಯನ ಮಾಡ್ತೇವೆ. ಅಲ್ಲದೆ, ಫ್ರೆಂಚ್‌ ಭಾಷೆಯಲ್ಲಿ ನಡೆಯುವ ಕೂಟಗಳಿಗೆ ತಿಂಗಳಲ್ಲಿ ಒಂದ್‌ ಸರಿಯಾದ್ರೂ ಹಾಜರಾಗ್ಬೇಕು ಅಂತ ಗುರಿ ಇಟ್ಟಿದ್ದೀವಿ. ನಮ್ಮ ಸ್ವಂತ ಭಾಷೆಲಿ ನಡೆಯೋ ಅಧಿವೇಶನಗಳಿಗೆ ಹೋಗಲಿಕ್ಕೆ ನಮ್ಮ ರಜೆಗಳನ್ನ ಉಪಯೋಗಿಸ್ತೀವಿ.”

18. (ಎ) ಮಕ್ಕಳಿಗೆ ನೆರವಾಗುವಂಥ ಉತ್ತಮ ನಿರ್ಧಾರವನ್ನು ಮಾಡಲು ರೋಮನ್ನರಿಗೆ 15:1, 2 ಹೇಗೆ ಸಹಾಯಮಾಡುತ್ತದೆ? (ಬಿ) ಈ ವಿಷಯದಲ್ಲಿ ಕೆಲವು ಹೆತ್ತವರು ಯಾವ ಸಲಹೆಗಳನ್ನು ನೀಡಿದ್ದಾರೆ? (ಕೊನೆ ಟಿಪ್ಪಣಿ ನೋಡಿ.)

18 ಪ್ರತಿಯೊಂದು ಕುಟುಂಬ ತಮ್ಮ ಮಕ್ಕಳಿಗೆ ಮತ್ತು ಯೆಹೋವನೊಂದಿಗಿನ ಅವರ ಆಪ್ತತೆಗೆ ಏನು ಮಾಡಿದರೆ ಉತ್ತಮವೆಂದು ನಿರ್ಧರಿಸಬೇಕು. [2] (ಗಲಾ. 6:5) ಈಗಾಗಲೇ ನೋಡಿದಂಥ ಮ್ಯುರಿಯಲ್‌ ಎನ್ನುವವರಿಗೆ ಮತ್ತು ಅವರ ಗಂಡನಿಗೆ ಬೇರೆ ಭಾಷೆಯ ಸಭೆಯಲ್ಲಿ ಸೇವೆ ಮಾಡಬೇಕೆಂದು ತುಂಬಾ ಮನಸ್ಸಿದ್ದರೂ, ಮಗನ ಆಧ್ಯಾತ್ಮಿಕತೆಗಾಗಿ ಮತ್ತು ಯೆಹೋವನ ಕಡೆಗೆ ಅವನಿಗಿರುವ ಪ್ರೀತಿಯನ್ನು ಬಲಪಡಿಸಲಿಕ್ಕಾಗಿ ಪುನಃ ತಮ್ಮ ಹಿಂದಿನ ಸಭೆಗೆ ಹೋಗಲು ನಿರ್ಧರಿಸಿದರು. (ರೋಮನ್ನರಿಗೆ 15:1,2 ಓದಿ.) ಅವರ ಗಂಡ ಸರ್ಜ್‌ಗೆ ಅವರು ತೆಗೆದುಕೊಂಡಂಥ ನಿರ್ಧಾರ ಸರಿಯಾಗಿತ್ತು ಎಂಬ ಸಮಾಧಾನವಿದೆ. ಅವರು ಹೇಳುವುದು: “ನಾವು ನಮ್ಮ ಹಿಂದಿನ ಸಭೆಗೆ ವಾಪಸ್‌ ಬಂದಾಗಿನಿಂದ ನಮ್ಮ ಮಗ ಆಧ್ಯಾತ್ಮಿಕವಾಗಿ ಬಲಗೊಂಡ ಮತ್ತು ದೀಕ್ಷಾಸ್ನಾನ ಸಹ ತಗೊಂಡ. ಈಗ ಅವನು ರೆಗ್ಯುಲರ್‌ ಪಯನೀಯರಾಗಿದ್ದಾನೆ. ಜೊತೆಗೆ ಬೇರೆ ಭಾಷೆಯ ಸಭೆಗೆ ವಾಪಸ್‌ ಹೋಗ್ಬೇಕು ಅಂತ ಮನಸ್ಸು ಕೂಡ ಮಾಡ್ತಿದ್ದಾನೆ.”

ದೇವರ ವಾಕ್ಯ ನಿಮ್ಮ ಹೃದಯಗಳನ್ನು ತಲುಪಲಿ

19, 20. ದೇವರ ವಾಕ್ಯದ ಕಡೆಗೆ ನಮಗಿರುವ ಪ್ರೀತಿಯನ್ನು ನಾವು ಹೇಗೆ ವ್ಯಕ್ತಪಡಿಸಬಹುದು?

19 ಯೆಹೋವನು ಎಲ್ಲರನ್ನು ಪ್ರೀತಿಸುತ್ತಾನೆ. ಹಾಗಾಗಿ ತನ್ನ ವಾಕ್ಯವಾಗಿರುವ ಬೈಬಲನ್ನು ಸಾವಿರಾರು ಭಾಷೆಗಳಲ್ಲಿ ಸಿಗುವಂತೆ ಮಾಡಿ ‘ಎಲ್ಲ ರೀತಿಯ ಜನರು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ’ ಮಾಡಿದ್ದಾನೆ. (1 ತಿಮೊ. 2:4) ನಮ್ಮ ಹೃದಯಕ್ಕೆ ಹತ್ತಿರವಿರುವ ಭಾಷೆಯಲ್ಲಿ ಬೈಬಲನ್ನು ಓದಿದಾಗಲೇ ಆತನೊಂದಿಗಿನ ನಮ್ಮ ಆಪ್ತತೆ ಬಲಗೊಳ್ಳುತ್ತದೆಂದು ಯೆಹೋವನಿಗೆ ಚೆನ್ನಾಗಿ ಗೊತ್ತು.

20 ಯೆಹೋವನೊಂದಿಗಿನ ನಮ್ಮ ಆಪ್ತತೆಯನ್ನು ಬಲವಾಗಿರಿಸಲು ನಾವೆಲ್ಲರೂ ಸಾಕಷ್ಟು ಪ್ರಯತ್ನಹಾಕಬೇಕು. ಅದಕ್ಕಾಗಿ ನಾವು ಬೈಬಲನ್ನು ನಮ್ಮ ಸ್ವಂತ ಭಾಷೆಯಲ್ಲಿ ಪ್ರತಿದಿನ ತಪ್ಪದೇ ಓದಬೇಕು. ಹೀಗೆ ಮಾಡುವಾಗ ನಾವು ನಮ್ಮ ಮತ್ತು ನಮ್ಮ ಕುಟುಂಬದ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಲು ಮತ್ತು ದೇವರ ವಾಕ್ಯದ ಕಡೆಗೆ ನಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.—ಕೀರ್ತ. 119:11.

^ [1] (ಪ್ಯಾರ 5) ಹೆಸರುಗಳನ್ನು ಬದಲಾಯಿಸಲಾಗಿದೆ.

^ [2] (ಪ್ಯಾರ 18) ನಿಮ್ಮ ಕುಟುಂಬಕ್ಕೆ ಸಹಾಯವಾಗುವಂಥ ಬೈಬಲ್‌ ತತ್ವಗಳ ಬಗ್ಗೆ ಚರ್ಚಿಸಲು ಅಕ್ಟೋಬರ್‌ 15, 2002⁠ರ ಕಾವಲಿನಬುರುಜುವಿನಲ್ಲಿ ಬಂದಿರುವ “ವಿದೇಶವೊಂದರಲ್ಲಿ ಮಕ್ಕಳನ್ನು ಬೆಳೆಸುವುದು—ಅದರ ಪಂಥಾಹ್ವಾನಗಳು ಮತ್ತು ಬಹುಮಾನಗಳು” ಎಂಬ ಲೇಖನವನ್ನು ನೋಡಿ.