ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ’

‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ’

“ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; . . . ನಂಬಿಕೆಯನ್ನು ಅನುಸರಿಸು.”—ಕೀರ್ತ. 37:3.

ಗೀತೆಗಳು: 133, 63

1. ಯೆಹೋವನು ಮನುಷ್ಯರಿಗೆ ಯಾವ ವಿಶೇಷವಾದ ಸಾಮರ್ಥ್ಯಗಳನ್ನು ಕೊಟ್ಟಿದ್ದಾನೆ?

ಯೆಹೋವನು ಮನುಷ್ಯರಿಗೆ ವಿಶೇಷವಾದ ಸಾಮರ್ಥ್ಯಗಳನ್ನು ಕೊಟ್ಟಿದ್ದಾನೆ. ಉದಾಹರಣೆಗೆ, ಬುದ್ಧಿಶಕ್ತಿ ಕೊಟ್ಟಿದ್ದಾನೆ. ತೀರ್ಮಾನಗಳನ್ನು ತೆಗೆದುಕೊಳ್ಳಲು, ಸಮಸ್ಯೆಗಳನ್ನು ಬಗೆಹರಿಸಲು ಇದು ಸಹಾಯ ಮಾಡುತ್ತದೆ. (ಜ್ಞಾನೋ. 2:11) ದೇವರು ನಮಗೆ ಶಕ್ತಿ ಕೊಟ್ಟಿದ್ದಾನೆ. ಇದರಿಂದ ಕೆಲಸಗಳನ್ನು ಮಾಡಲಿಕ್ಕೆ, ಗುರಿಗಳನ್ನು ಮುಟ್ಟಲಿಕ್ಕೆ ಆಗುತ್ತದೆ. (ಫಿಲಿ. 2:13) ನಮಗೆ ಮನಸ್ಸಾಕ್ಷಿಯನ್ನೂ ಕೊಟ್ಟಿದ್ದಾನೆ. ಸರಿ ಮತ್ತು ತಪ್ಪು ಯಾವುದು ಎಂದು ಇದು ತಿಳಿಸುತ್ತದೆ. ಪಾಪ ಮಾಡದಂತೆ ತಡೆಯುತ್ತದೆ. ಒಂದುವೇಳೆ ನಮ್ಮಿಂದ ತಪ್ಪಾದರೆ ತಿದ್ದಿಕೊಳ್ಳಲೂ ಸಹಾಯ ಮಾಡುತ್ತದೆ.—ರೋಮ. 2:15.

2. ನಮ್ಮ ಸಾಮರ್ಥ್ಯಗಳನ್ನು ಹೇಗೆ ಬಳಸಬೇಕೆಂದು ಯೆಹೋವನು ಬಯಸುತ್ತಾನೆ?

2 ನಮಗಿರುವ ಸಾಮರ್ಥ್ಯಗಳನ್ನು ಒಳ್ಳೇ ರೀತಿಯಲ್ಲಿ ಬಳಸಬೇಕು ಎಂದು ಯೆಹೋವನು ಬಯಸುತ್ತಾನೆ. ಯಾಕೆ? ಯಾಕೆಂದರೆ ಆತನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಾವು ಸಂತೋಷವಾಗಿ ಇರಬೇಕೆಂದು ಬಯಸುತ್ತಾನೆ. ಈ ಸಾಮರ್ಥ್ಯಗಳನ್ನು ಚೆನ್ನಾಗಿ ಬಳಸಿದರೆ ನಾವು ಸಂತೋಷವಾಗಿರುತ್ತೇವೆ ಎಂದು ಆತನಿಗೆ ಗೊತ್ತು. ಹಾಗಾಗಿ ಹೀಬ್ರು ಶಾಸ್ತ್ರಗ್ರಂಥದಲ್ಲಿ ಆತನು, “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಸಿಗುತ್ತದೆ, ಆದ್ದರಿಂದ ‘ನಿಮ್ಮ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ಪೂರ್ಣ ಶಕ್ತಿಯಿಂದ ಮಾಡಿ’ ಎಂದು ಹೇಳಿದ್ದಾನೆ. (ಜ್ಞಾನೋ. 21:5; ಪ್ರಸಂ. 9:10) ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ, “ಅನುಕೂಲಕರವಾದ ಸಮಯವು ಇರುವ ವರೆಗೆ ಎಲ್ಲರಿಗೂ ಒಳ್ಳೇದನ್ನು” ಮಾಡುವಂತೆ ಹೇಳಿದ್ದಾನೆ. ‘ಪ್ರತಿಯೊಬ್ಬರು ತಮಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಒಬ್ಬರಿಗೊಬ್ಬರು ಸೇವೆ ಸಲ್ಲಿಸಿರಿ’ ಎಂದು ಹೇಳಿದ್ದಾನೆ. (ಗಲಾ. 6:10; 1 ಪೇತ್ರ 4:10) ನಮಗೂ ಬೇರೆಯವರಿಗೂ ಪ್ರಯೋಜನ ತರುವಂಥ ಕೆಲಸಗಳನ್ನು ನಾವು ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಎಂದು ಇದರಿಂದ ಗೊತ್ತಾಗುತ್ತದೆ.

3. ನಮಗೆ ಯಾವ ಇತಿಮಿತಿಗಳಿವೆ?

3 ನಮಗೆ ಇತಿಮಿತಿಗಳೂ ಇವೆ ಎಂದು ಯೆಹೋವನಿಗೆ ಗೊತ್ತು. ಅಪರಿಪೂರ್ಣತೆ, ಪಾಪ, ಮರಣವನ್ನು ನಮ್ಮಿಂದ ತೆಗೆದುಹಾಕಲು ಆಗುವುದಿಲ್ಲ. (1 ಅರ. 8:46) ಬೇರೆಯವರ ಜೀವನದ ಮೇಲೆ ನಮಗೆ ನಿಯಂತ್ರಣ ಕೂಡ ಇಲ್ಲ. ಯಾಕೆಂದರೆ ಪ್ರತಿಯೊಬ್ಬರಿಗೂ ಆಯ್ಕೆ ಮಾಡುವ ಸ್ವಾತಂತ್ರ್ಯ ಇದೆ. ನಮಗೆಷ್ಟೇ ಜ್ಞಾನ, ಅನುಭವ ಇದ್ದರೂ ಸಾಕಾಗಲ್ಲ. ಯೆಹೋವನ ಮಾರ್ಗದರ್ಶನ ಬೇಕೇ ಬೇಕು.—ಯೆಶಾ. 55:9.

‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಬೇಕಾದ’ ಸನ್ನಿವೇಶಗಳು

4. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

4 ನಮಗೆ ಇತಿಮಿತಿಗಳು ಇರುವುದರಿಂದ ಯೆಹೋವನು ಕೊಡುವ ಮಾರ್ಗದರ್ಶನದಂತೆ ಯಾವಾಗಲೂ ನಡೆಯಬೇಕು. ಆತನು ನಮಗೆ ಸಹಾಯ ಮಾಡುತ್ತಾನೆ ಮತ್ತು ನಮ್ಮಿಂದ ಆಗದಿರುವುದನ್ನು ಆತನು ನಮಗೋಸ್ಕರ ಮಾಡುತ್ತಾನೆ ಎಂದು ಭರವಸೆ ಇಡಬೇಕು. ಅದರ ಜೊತೆಗೆ, ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಬೇರೆಯವರಿಗೆ ಸಹಾಯ ಮಾಡಲು ನಮ್ಮಿಂದ ಆಗುವುದನ್ನು ಮಾಡಬೇಕು. ಯೆಹೋವನು ಇದನ್ನೇ ಬಯಸುತ್ತಾನೆ. (ಕೀರ್ತನೆ 37:3 ಓದಿ.) ‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಬೇಕು’ ಮತ್ತು ‘ನಂಬಿಕೆಯನ್ನು ಅನುಸರಿಸಬೇಕು.’ ಇದನ್ನು ಮಾಡುವುದು ಹೇಗೆಂದು ಯೆಹೋವನ ಮೇಲೆ ಭರವಸೆ ಇಟ್ಟ ನೋಹ, ದಾವೀದ ಮತ್ತು ಇನ್ನೂ ಕೆಲವು ನಂಬಿಗಸ್ತರ ಉದಾಹರಣೆಯಿಂದ ತಿಳಿಯೋಣ. ಅವರಿಂದ ಏನು ಮಾಡಲು ಆಗಲಿಲ್ಲವೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಏನು ಮಾಡಲು ಆಯಿತೋ ಅದಕ್ಕೆ ಗಮನ ಕೊಟ್ಟರು. ಈ ಲೇಖನದಲ್ಲಿ ಇದನ್ನೇ ಚರ್ಚಿಸಲಿದ್ದೇವೆ.

ಲೋಕದಲ್ಲಿರುವ ಕೆಟ್ಟತನವನ್ನು ನೋಡುವಾಗ

5. ನೋಹನ ಕಾಲದ ಪರಿಸ್ಥಿತಿ ಹೇಗಿತ್ತು?

5 ನೋಹನ ಕಾಲದಲ್ಲಿ ಕೆಟ್ಟತನ, ‘ಅನ್ಯಾಯ ಲೋಕವನ್ನು ತುಂಬಿಕೊಂಡಿತ್ತು.’ (ಆದಿ. 6:4, 9-13) ಕೆಟ್ಟ ಜನರನ್ನು ಯೆಹೋವನು ನಾಶ ಮಾಡುತ್ತಾನೆ ಎಂದು ನೋಹನಿಗೆ ಗೊತ್ತಿತ್ತು. ಆದರೂ ಅವರನ್ನು ನೋಡಿದಾಗ ನೋಹನಿಗೆ ತುಂಬ ಬೇಜಾರು ಆಗಿರುತ್ತದೆ. ಆದರೆ ತನ್ನಿಂದ ಲೋಕವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡ. ತನ್ನಿಂದ ಮಾಡಲು ಸಾಧ್ಯವಿದ್ದ ಕೆಲಸದ ಮೇಲೆ ಮನಸ್ಸಿಟ್ಟ.

ಸುವಾರ್ತೆ ಬೇಡವೆಂದಾಗ (ಪ್ಯಾರ 6-9 ನೋಡಿ)

6, 7. (ಎ) ನೋಹನಿಗೆ ಏನು ಮಾಡಲು ಆಗಲಿಲ್ಲ? (ಬಿ) ನಮ್ಮ ಪರಿಸ್ಥಿತಿ ನೋಹನ ಪರಿಸ್ಥಿತಿಯಂತಿದೆ ಹೇಗೆ?

6 ನೋಹನಿಗೆ ಏನು ಮಾಡಲು ಆಗಲಿಲ್ಲ: ಯೆಹೋವನು ಕೊಟ್ಟ ಎಚ್ಚರಿಕೆಯ ಸಂದೇಶವನ್ನು ಎಲ್ಲರಿಗೂ ಸಾರಿದನಾದರೂ ಎಲ್ಲರೂ ಕೇಳಲೇಬೇಕು ಎಂದು ಅವನು ಒತ್ತಾಯ ಮಾಡುವಂತಿರಲಿಲ್ಲ. ಜಲಪ್ರಳಯ ಬೇಗ ಬರುವಂತೆ ಮಾಡುವುದು ಕೂಡ ಅವನ ಕೈಯಲ್ಲಿ ಇರಲಿಲ್ಲ. ಹಾಗಾಗಿ ಯೆಹೋವನು ಮಾತುಕೊಟ್ಟಂತೆ, ಆತನು ನಿಗದಿಪಡಿಸಿದ ಸಮಯದಲ್ಲಿ ಕೆಟ್ಟತನವನ್ನು ತೆಗೆದುಹಾಕುತ್ತಾನೆ ಎಂದು ಸಂಪೂರ್ಣ ಭರವಸೆ ಇಟ್ಟ.—ಆದಿ. 6:17.

7 ಇಂದು ಸಹ ಈ ಲೋಕದಲ್ಲಿ ಕೆಟ್ಟತನ ತುಂಬಿ ತುಳುಕುತ್ತಿದೆ. ಈ ಕೆಟ್ಟತನವನ್ನು ತೆಗೆದುಹಾಕುತ್ತೇನೆಂದು ಯೆಹೋವನು ಮಾತು ಕೊಟ್ಟಿದ್ದಾನೆ. (1 ಯೋಹಾ. 2:17) ಅಲ್ಲಿಯವರೆಗೆ, ಜನರು ‘ಸುವಾರ್ತೆಯನ್ನು’ ಕೇಳಲೇಬೇಕು ಎಂದು ನಾವು ಒತ್ತಾಯ ಮಾಡಲು ಆಗುವುದಿಲ್ಲ. “ಮಹಾ ಸಂಕಟ” ಬೇಗ ಶುರುವಾಗುವಂತೆ ಮಾಡಲೂ ನಮ್ಮಿಂದ ಆಗುವುದಿಲ್ಲ. (ಮತ್ತಾ. 24:14, 21) ಹಾಗಾಗಿ ನೋಹನಂತೆ ನಾವು ದೇವರ ಮೇಲೆ ನಂಬಿಕೆ ಇಡಬೇಕು. ಆತನು ಕೆಟ್ಟತನವನ್ನು ಆದಷ್ಟು ಬೇಗ ತೆಗೆದುಹಾಕುತ್ತಾನೆ ಎಂದು ಭರವಸೆ ಇಡಬೇಕು. (ಕೀರ್ತ. 37:10, 11) ಯಾಕೆಂದರೆ ಯೆಹೋವನು ಈ ದುಷ್ಟಲೋಕಕ್ಕೆ ಅಂತ್ಯ ತರಲು ನಿಗದಿ ಮಾಡಿರುವ ದಿನವನ್ನು ಮುಂದೂಡುವುದಿಲ್ಲ.—ಹಬ. 2:3.

8. ನೋಹ ಯಾವುದಕ್ಕೆ ಗಮನಕೊಟ್ಟ? (ಲೇಖನದ ಆರಂಭದ ಚಿತ್ರ ನೋಡಿ.)

8 ನೋಹನಿಗೆ ಏನು ಮಾಡಲು ಆಯಿತು: ನೋಹ ತನ್ನಿಂದ ಏನು ಮಾಡಲು ಆಗಲಿಲ್ಲವೋ ಅದರ ಬಗ್ಗೆ ಯೋಚಿಸುತ್ತಾ ಕೂರಲಿಲ್ಲ. ತನಗೆ ಏನು ಮಾಡಲು ಸಾಧ್ಯವಿತ್ತೋ ಅದಕ್ಕೆ ಗಮನ ಕೊಟ್ಟ. ಅಂದರೆ ಯೆಹೋವನು ಕೊಟ್ಟ ಸಂದೇಶವನ್ನು ಎಲ್ಲರಿಗೂ ಸಾರಿದ. (2 ಪೇತ್ರ 2:5) ಇದು ಅವನ ನಂಬಿಕೆಯನ್ನು ಇನ್ನೂ ಬಲಗೊಳಿಸಿತು. ಸಾರುವ ಕೆಲಸದ ಜೊತೆಗೆ ಯೆಹೋವನು ಕೊಟ್ಟ ನಿರ್ದೇಶನದಂತೆ ನಾವೆಯನ್ನೂ ಕಟ್ಟಿದ.ಇಬ್ರಿಯ 11:7 ಓದಿ.

9. ನಾವು ನೋಹನನ್ನು ಹೇಗೆ ಅನುಕರಿಸಬಹುದು?

9 ನೋಹನಂತೆ ನಾವು “ಕರ್ತನ ಕೆಲಸವನ್ನು” ಮಾಡುವುದಕ್ಕೆ ಗಮನ ಕೊಡಬೇಕು. (1 ಕೊರಿಂ. 15:58) ಈ ಕೆಲಸದಲ್ಲಿ ರಾಜ್ಯ ಸಭಾಗೃಹ ಮತ್ತು ಸಮ್ಮೇಳನ ಸಭಾಂಗಣ ಕಟ್ಟಿ ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುವುದು, ಸಮ್ಮೇಳನ ಮತ್ತು ಅಧಿವೇಶನಗಳಲ್ಲಿ ಸ್ವಯಂಸೇವೆ ಮಾಡುವುದು, ಬೆತೆಲ್‌ ಅಥವಾ ಪ್ರಾದೇಶಿಕ ಭಾಷಾಂತರ ಕಚೇರಿಯಲ್ಲಿ ಸೇವೆ ಮಾಡುವುದು ಸೇರಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಾರುವ ಕೆಲಸಕ್ಕೆ ಗಮನ ಕೊಡಬೇಕು. ಇದರಿಂದ ನಮ್ಮ ನಿರೀಕ್ಷೆ ಬಲಗೊಳ್ಳುತ್ತದೆ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದಕ್ಕೆ ಗಮನಕೊಟ್ಟ ಸಹೋದರಿಯೊಬ್ಬರು ಹೇಳುವುದು: “ದೇವರು ಮನುಷ್ಯರಿಗೆ ಕೊಡಲಿರುವ ಆಶೀರ್ವಾದಗಳ ಬಗ್ಗೆ ಜನರಿಗೆ ಏನೂ ಗೊತ್ತಿಲ್ಲ. ತಮ್ಮ ಕಷ್ಟಗಳಿಗೆ ಕೊನೆಯೇ ಇಲ್ಲ ಅಂದುಕೊಂಡಿದ್ದಾರೆ.” ಆದರೆ ದೇವರು ಕೊಟ್ಟಿರುವ ನಿರೀಕ್ಷೆ ಬಗ್ಗೆ ನಮಗೆ ಗೊತ್ತು. ಅದರ ಬಗ್ಗೆ ಬೇರೆಯವರ ಹತ್ತಿರ ಮಾತಾಡುವಾಗ ಆ ನಿರೀಕ್ಷೆ ಇನ್ನೂ ಬಲವಾಗುತ್ತದೆ. ಜೀವದ ಓಟವನ್ನು ನಿಲ್ಲಿಸದೆ ಓಡುತ್ತಾ ಇರಲು ಸಹಾಯ ಸಿಗುತ್ತದೆ!—1 ಕೊರಿಂ. 9:24.

ತಪ್ಪು ಮಾಡಿದಾಗ

10. ದಾವೀದ ಯಾವ ಪಜೀತಿಯಲ್ಲಿ ಸಿಕ್ಕಿಬಿದ್ದ?

10 ರಾಜ ದಾವೀದ ದೇವರಿಗೆ ನಂಬಿಗಸ್ತನಾಗಿದ್ದ ವ್ಯಕ್ತಿ. ಯೆಹೋವನಿಗೆ ದಾವೀದನೆಂದರೆ ತುಂಬ ಇಷ್ಟ. (ಅ. ಕಾ. 13:22) ಆದರೂ ದಾವೀದ ದೊಡ್ಡ ತಪ್ಪುಗಳನ್ನು ಮಾಡಿದ. ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ. ಅಷ್ಟೇ ಅಲ್ಲ, ತಾನು ಮಾಡಿದ ತಪ್ಪನ್ನು ಮುಚ್ಚಿಹಾಕಲು ಬತ್ಷೆಬೆಯ ಗಂಡನಾದ ಊರೀಯನು ಯುದ್ಧದಲ್ಲಿ ಸಾಯುವಂತೆ ಮಾಡಿದ. ಆ ಒಳಸಂಚಿನ ಬಗ್ಗೆ ದಾವೀದ ಸೇನಾಪತಿಗೆ ಬರೆದ ಪತ್ರವನ್ನು ಊರೀಯನ ಕೈಯಲ್ಲೇ ಕೊಟ್ಟುಕಳುಹಿಸಿದ! (2 ಸಮು. 11:1-21) ಆದರೆ ದಾವೀದನ ಪಾಪಗಳು ಬೆಳಕಿಗೆ ಬಂದವು. (ಮಾರ್ಕ 4:22) ಅವನು ಸಿಕ್ಕಿಬಿದ್ದಾಗ ಏನು ಮಾಡಿದ?

ತಪ್ಪು ಮಾಡಿದಾಗ (ಪ್ಯಾರ 11-14 ನೋಡಿ)

11, 12. (ಎ) ದಾವೀದ ಪಾಪ ಮಾಡಿದ ಮೇಲೆ ಅವನಿಂದ ಏನು ಮಾಡಲು ಆಗಲಿಲ್ಲ? (ಬಿ) ನಾವು ಪಶ್ಚಾತ್ತಾಪಪಟ್ಟರೆ ಯೆಹೋವನು ಏನು ಮಾಡುತ್ತಾನೆ?

11 ದಾವೀದನಿಗೆ ಏನು ಮಾಡಲು ಆಗಲಿಲ್ಲ: ದಾವೀದ ಹಿಂದೆ ಹೋಗಿ ತನ್ನಿಂದಾದ ತಪ್ಪನ್ನು ಸರಿಪಡಿಸಲು ಆಗಲಿಲ್ಲ. ಇದರ ಕೆಲವು ಪರಿಣಾಮಗಳನ್ನು ಜೀವನಪೂರ್ತಿ ಅನುಭವಿಸಬೇಕಾಯಿತು. (2 ಸಮು. 12:10-12, 14) ಆಗೆಲ್ಲ ಅವನು ದೇವರ ಮೇಲೆ ಬಲವಾದ ನಂಬಿಕೆ ಇಡಬೇಕಿತ್ತು. ತಾನು ನಿಜವಾಗಲೂ ಪಶ್ಚಾತ್ತಾಪಪಟ್ಟರೆ ಯೆಹೋವನು ತನ್ನನ್ನು ಕ್ಷಮಿಸುತ್ತಾನೆ, ಮಾತ್ರವಲ್ಲ ತನ್ನ ಪಾಪಗಳ ಕೆಟ್ಟ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಹಾಯ ಮಾಡುತ್ತಾನೆ ಎಂದು ನಂಬಬೇಕಿತ್ತು.

12 ನಾವೆಲ್ಲರೂ ಅಪರಿಪೂರ್ಣರಾದ ಕಾರಣ ತಪ್ಪುಮಾಡುತ್ತೇವೆ. ಕೆಲವೊಮ್ಮೆ ದೊಡ್ಡ ತಪ್ಪುಗಳನ್ನೂ ಮಾಡಿಬಿಡುತ್ತೇವೆ. ಅದನ್ನು ಸರಿಪಡಿಸಲು ನಮ್ಮಿಂದ ಕೆಲವೊಮ್ಮೆ ಆಗುವುದಿಲ್ಲ. ‘ಮಾಡಿದ್ದುಣ್ಣೋ ಮಾರಾಯ’ ಎನ್ನುವಂತೆ ನಮ್ಮ ತಪ್ಪಿನಿಂದಾಗುವ ಪರಿಣಾಮಗಳನ್ನು ನಾವು ಅನುಭವಿಸಬೇಕಾಗುತ್ತದೆ. (ಗಲಾ. 6:7) ಇಂಥ ಸಂದರ್ಭದಲ್ಲಿ ನಾವು ದೇವರ ಮೇಲೆ ಭರವಸೆ ಇಡಬೇಕು. ನಾವು ಪಶ್ಚಾತ್ತಾಪಪಟ್ಟರೆ ಕಷ್ಟಗಳನ್ನು ಸಹಿಸಿಕೊಳ್ಳಲು ದೇವರು ಸಹಾಯ ಮಾಡುತ್ತಾನೆ. ಆ ಕಷ್ಟಗಳು ನಮ್ಮ ತಪ್ಪಿನಿಂದ ಬಂದಿರುವುದಾದರೂ ಆತನು ನಮಗೆ ಸಹಿಸಿಕೊಳ್ಳಲು ಸಹಾಯ ಮಾಡುತ್ತಾನೆ ಎಂದು ನಂಬಬೇಕು.ಯೆಶಾಯ 1:18, 19; ಅಪೊಸ್ತಲರ ಕಾರ್ಯಗಳು 3:19 ಓದಿ.

13. ಯೆಹೋವನ ಜೊತೆ ಇದ್ದ ಸಂಬಂಧ ಹಾಳಾದಾಗ ದಾವೀದ ಏನು ಮಾಡಿದ?

13 ದಾವೀದನಿಗೆ ಏನು ಮಾಡಲು ಆಯಿತು: ದಾವೀದ ತಪ್ಪುಮಾಡಿದಾಗ ಯೆಹೋವನ ಜೊತೆ ಅವನಿಗಿದ್ದ ಸಂಬಂಧ ಹಾಳಾಯಿತು. ಇದನ್ನು ಸರಿಪಡಿಸಿಕೊಳ್ಳಲು ಬಯಸಿದ ದಾವೀದ ದೇವರು ಕೊಟ್ಟ ಸಹಾಯವನ್ನು ಸ್ವೀಕರಿಸಿದನು. ಯೆಹೋವನ ಪ್ರವಾದಿಯಾದ ನಾತಾನನು ದಾವೀದನನ್ನು ತಿದ್ದಿದಾಗ ಅದಕ್ಕೆ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದ. (2 ಸಮು. 12:13) ಅಷ್ಟೇ ಅಲ್ಲ ಯೆಹೋವನಿಗೆ ಪ್ರಾರ್ಥಿಸಿ ‘ತಪ್ಪು ಮಾಡಿಬಿಟ್ಟೆ ದೇವರೇ, ಕ್ಷಮಿಸಿಬಿಡು’ ಎಂದು ಬೇಡಿಕೊಂಡ. ಹೀಗೆ ತನಗೆ ದೇವರ ಅನುಗ್ರಹ ಪುನಃ ಬೇಕು ಎಂದು ತೋರಿಸಿಕೊಟ್ಟ. (ಕೀರ್ತ. 51:1-17) ಆಗಿ ಹೋದ ತಪ್ಪಿನ ಬಗ್ಗೆ ಕೊರಗುತ್ತಾ ಕೂರುವ ಬದಲು ತನ್ನ ತಪ್ಪಿನಿಂದ ಪಾಠ ಕಲಿತ. ಆ ತಪ್ಪುಗಳನ್ನು ಮುಂದೆಂದೂ ಮಾಡಲಿಲ್ಲ. ದಾವೀದ ಕೊನೇ ತನಕ ನಂಬಿಗಸ್ತನಾಗಿದ್ದ. ಅವನು ಸತ್ತು ಶತಮಾನಗಳೇ ಕಳೆದರೂ ಯೆಹೋವನು ಅವನ ನಂಬಿಗಸ್ತಿಕೆಯನ್ನು ಮರೆಯಲಿಲ್ಲ.—ಇಬ್ರಿ. 11:32-34.

14. ನಾವು ದಾವೀದನಿಂದ ಯಾವ ಪಾಠ ಕಲಿಯುತ್ತೇವೆ?

14 ದಾವೀದನಿಂದ ನಾವು ಕಲಿಯುವ ಪಾಠವೇನು? ನಾವು ತಪ್ಪು ಮಾಡಿದಾಗ ಪಶ್ಚಾತ್ತಾಪ ಪಡಬೇಕು, ಯೆಹೋವನ ಹತ್ತಿರ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಆತನ ಕ್ಷಮೆ ಕೇಳಬೇಕು. (1 ಯೋಹಾ. 1:9) ಹಿರಿಯರ ಹತ್ತಿರನೂ ಇದರ ಬಗ್ಗೆ ಮಾತಾಡಬೇಕು. ಅವರು ಯೆಹೋವನ ಜೊತೆ ನಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ. (ಯಾಕೋಬ 5:14-16 ಓದಿ.) ಯೆಹೋವನು ಕೊಡುವ ಸಹಾಯವನ್ನು ಪಡೆದುಕೊಳ್ಳುವ ಮೂಲಕ ಆತನು ನಮ್ಮನ್ನು ಕ್ಷಮಿಸುತ್ತಾನೆ ಎನ್ನುವ ಭರವಸೆ ನಮಗಿದೆ ಎಂದು ತೋರಿಸಿಕೊಡುತ್ತೇವೆ. ಅಷ್ಟೇ ಅಲ್ಲ, ನಮ್ಮ ತಪ್ಪುಗಳಿಂದ ಪಾಠ ಕಲಿತು ಆತನ ಸೇವೆಯನ್ನು ದೃಢವಿಶ್ವಾಸದಿಂದ ಮಾಡುತ್ತಾ ಇರಬೇಕು.—ಇಬ್ರಿ. 12:12, 13.

ಬೇರೆ ಸನ್ನಿವೇಶಗಳನ್ನು ಎದುರಿಸುವಾಗ

ಆರೋಗ್ಯ ಹಾಳಾದಾಗ (ಪ್ಯಾರ 15 ನೋಡಿ)

15. ಹನ್ನ ಯಾವ ವಿಷಯದಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾಳೆ?

15 ಕಷ್ಟದ ಸನ್ನಿವೇಶಗಳಲ್ಲಿ ಕೈಲಾದದ್ದನ್ನು ಮಾಡಿ ಉಳಿದದ್ದನ್ನು ದೇವರ ಕೈಗೆ ಬಿಟ್ಟ ಇತರ ನಂಬಿಗಸ್ತರ ಬಗ್ಗೆ ನಾವು ಬೈಬಲಲ್ಲಿ ಓದುತ್ತೇವೆ. ಹನ್ನಳ ಬಗ್ಗೆ ನಿಮಗೆ ಗೊತ್ತಿದೆ. ಅವಳಿಗೆ ಮಕ್ಕಳಿರಲಿಲ್ಲ. ಏನು ಮಾಡಬೇಕೆಂದೂ ಗೊತ್ತಾಗಲಿಲ್ಲ. ಆದರೆ ಯೆಹೋವನು ಕೈಬಿಡಲ್ಲ ಎಂಬ ನಂಬಿಕೆ ಅವಳಿಗಿತ್ತು. ಆದ್ದರಿಂದ ಅವಳು ದೇವದರ್ಶನ ಗುಡಾರಕ್ಕೆ ಹೋಗಿ ಆರಾಧನೆ ಮಾಡುವುದನ್ನು, ಪ್ರಾರ್ಥಿಸುವುದನ್ನು ನಿಲ್ಲಿಸಲಿಲ್ಲ. ತನ್ನ ನೋವನ್ನು ಯೆಹೋವನ ಹತ್ತಿರ ತೋಡಿಕೊಂಡಳು. (1 ಸಮು. 1:9-11) ಹನ್ನ ಎಂಥ ಉತ್ತಮ ಮಾದರಿ ಇಟ್ಟಿದ್ದಾಳೆ ಅಲ್ವಾ? ನಮಗೆ ಗುಣಪಡಿಸಲಿಕ್ಕಾಗದ ಒಂದು ಕಾಯಿಲೆ ಬರಬಹುದು ಅಥವಾ ಸರಿಪಡಿಸಲಿಕ್ಕಾಗದ ಒಂದು ಸಮಸ್ಯೆ ಎದುರಾಗಬಹುದು. ಆಗ ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಬೇಕು. ಏಕೆಂದರೆ ಯೆಹೋವನಿಗೆ ನಮ್ಮ ಬಗ್ಗೆ ತುಂಬಾ ಕಾಳಜಿ ಇದೆ. (1 ಪೇತ್ರ 5:6, 7) ಕ್ರೈಸ್ತ ಕೂಟಗಳಲ್ಲಿ ಮತ್ತು ಯೆಹೋವನ ಸಂಘಟನೆ ಏರ್ಪಾಡು ಮಾಡುವ ಬೇರೆ ಕಾರ್ಯಕ್ರಮಗಳಲ್ಲಿ ನಮಗೆ ಬೇಕಾದ ಬಲ ಸಿಗುತ್ತದೆ. ನೀವು ಇದರಿಂದ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದೀರಾ?—ಇಬ್ರಿ. 10:24, 25.

ಮಕ್ಕಳು ಸತ್ಯ ಬಿಟ್ಟು ಹೋದಾಗ (ಪ್ಯಾರ 16 ನೋಡಿ)

16. ಸಮುವೇಲನಿಂದ ಹೆತ್ತವರು ಯಾವ ಪಾಠ ಕಲಿಯುತ್ತಾರೆ?

16 ಮಕ್ಕಳು ಸತ್ಯ ಬಿಟ್ಟುಹೋದಾಗ ಹೆತ್ತವರು ಏನು ಮಾಡಬೇಕು? ಸಮುವೇಲನಿಗೆ ಬೆಳೆದ ಮಕ್ಕಳಿದ್ದರು. ಅವರು ದೇವರಿಗೆ ಇಷ್ಟವಾಗದ ಕೆಲಸಗಳನ್ನು ಮಾಡುತ್ತಿದ್ದರು. ಇಷ್ಟು ದೊಡ್ಡ ಮಕ್ಕಳನ್ನು ಹೊಡೆದು ಬಡೆದು ಸರಿದಾರಿಗೆ ತರಲು ಸಮುವೇಲನಿಗೆ ಸಾಧ್ಯವಿರಲಿಲ್ಲ. (1 ಸಮು. 8:1-3) ಅವನು ಎಲ್ಲವನ್ನೂ ಯೆಹೋವನ ಕೈಯಲ್ಲಿ ಬಿಟ್ಟುಬಿಟ್ಟು, ತನ್ನ ನಿಷ್ಠೆಯನ್ನು ಕಾಪಾಡಿಕೊಂಡ. (ಜ್ಞಾನೋ. 27:11) ಇಂದು ಅನೇಕ ಹೆತ್ತವರು ಇಂಥದ್ದೇ ಪರಿಸ್ಥಿತಿಯಲ್ಲಿದ್ದಾರೆ. ಯೆಹೋವ ದೇವರು ಪೋಲಿಹೋದ ಮಗನ ಕಥೆಯಲ್ಲಿರುವ ತಂದೆಯಂತೆ ಇದ್ದಾನೆ ಎಂದು ಇವರು ಮರೆಯಬಾರದು. ತಪ್ಪುಮಾಡಿದ ವ್ಯಕ್ತಿ ವಾಪಸ್ಸು ಬಂದಾಗ ಆತನು ಸ್ವೀಕರಿಸಲು ಕಾತುರದಿಂದ ಕಾಯುತ್ತಿದ್ದಾನೆ ಎಂದು ಮನಸ್ಸಲ್ಲಿಡುತ್ತಾರೆ. (ಲೂಕ 15:20) ಅದೇ ಸಮಯದಲ್ಲಿ ಇವರು ಸತ್ಯದಲ್ಲಿ ಸ್ಥಿರವಾಗಿರಲು ಸಕಲ ಪ್ರಯತ್ನ ಮಾಡುತ್ತಾರೆ. ಆಗ ಸತ್ಯವನ್ನು ಬಿಟ್ಟುಹೋದ ಮಕ್ಕಳು ತಮ್ಮ ಮಾದರಿಯನ್ನು ನೋಡಿ ಒಂದಲ್ಲ ಒಂದು ದಿನ ವಾಪಸ್ಸು ಬರಬಹುದು ಎಂದು ನಂಬುತ್ತಾರೆ.

ಹಣಕಾಸಿನ ತೊಂದರೆ ಇದ್ದಾಗ (ಪ್ಯಾರ 17 ನೋಡಿ)

17. ಬಡ ವಿಧವೆಯಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ?

17 ಯೇಸುವಿನ ಕಾಲದಲ್ಲಿದ್ದ ಬಡ ವಿಧವೆಯ ಉದಾಹರಣೆ ನೋಡೋಣ. (ಲೂಕ 21:1-4 ಓದಿ.) ಅವಳು ಬಡತನದಲ್ಲೇ ದಿನದೂಡಬೇಕಾಗಿತ್ತು. ಆಲಯದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಇರಬೇಕಾಗಿತ್ತು. (ಮತ್ತಾ. 21:12, 13) ಆದರೂ ಅವಳು ಯೆಹೋವನ ಮೇಲೆ ಭರವಸೆ ಇಟ್ಟಿದ್ದಳು. ಉದಾರ ಮನಸ್ಸಿನಿಂದ ತನ್ನ ಹತ್ತಿರ ಇದ್ದದ್ದನ್ನೆಲ್ಲ ಕೊಟ್ಟು ಸತ್ಯಾರಾಧನೆಯನ್ನು ಬೆಂಬಲಿಸಿದಳು. ತನ್ನ ಹತ್ತಿರ ‘ಎರಡೇ ಚಿಕ್ಕ ನಾಣ್ಯಗಳಿದ್ದರೂ’ ಅದನ್ನು ಕಾಣಿಕೆಯಾಗಿ ಕೊಟ್ಟಳು. ಜೀವನದಲ್ಲಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ಟರೆ, ತನ್ನ ಅಗತ್ಯಗಳನ್ನು ಯೆಹೋವನು ಪೂರೈಸುತ್ತಾನೆ ಎಂದು ಸಂಪೂರ್ಣವಾಗಿ ನಂಬಿದಳು. ಅದೇ ರೀತಿ ನಾವು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಬೇಕು. ಹಾಗೆ ಮಾಡಿದರೆ ನಮಗೆ ಬೇಕಾಗಿರುವುದನ್ನು ಆತನು ಕೊಡುತ್ತಾನೆ.—ಮತ್ತಾ. 6:33.

18. ಸರಿಯಾದ ಮನೋಭಾವದಿಂದ ಯೆಹೋವನ ಸೇವೆ ಮಾಡಿದ ಒಬ್ಬ ಸಹೋದರನ ಅನುಭವ ಹೇಳಿ.

18 ಇಂದು ಸಹ ನಮ್ಮ ಸಹೋದರ ಸಹೋದರಿಯರು ತಮಗೆ ಯೆಹೋವನ ಮೇಲೆ ಎಷ್ಟು ಭರವಸೆ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ತಮಗೆ ಮಾಡಲು ಆಗದಿರುವ ವಿಷಯದ ಬಗ್ಗೆ ಕೊರಗುವುದನ್ನು ಬಿಟ್ಟು, ತಮ್ಮಿಂದ ಮಾಡಲು ಆಗುವ ವಿಷಯಕ್ಕೆ ಗಮನಕೊಟ್ಟಿದ್ದಾರೆ. ಅಂಥವರಲ್ಲಿ ಒಬ್ಬರು ಮ್ಯಾಲ್ಕಮ್‌ ಎಂಬ ಸಹೋದರ. ಇವರು ಕೊನೇ ಉಸಿರಿರುವ ತನಕ ದೇವರಿಗೆ ನಂಬಿಗಸ್ತರಾಗಿದ್ದರು. ಅವರು ಮತ್ತು ಅವರ ಪತ್ನಿ ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ಅನುಭವಿಸಿದರು. “ಜೀವನದಲ್ಲಿ ಯಾವಾಗ ಏನಾಗುತ್ತೆ ಅಂತ ಹೇಳೋದು ತುಂಬ ಕಷ್ಟ. ಜೀವನ ಮಾಡುವುದೇ ಕೆಲವೊಮ್ಮೆ ಕಷ್ಟ. ಆದರೆ ಯೆಹೋವನ ಮೇಲೆ ಭರವಸೆ ಇಟ್ಟರೆ ಆತನು ನಮ್ಮನ್ನು ಆಶೀರ್ವದಿಸುತ್ತಾನೆ” ಎಂದಿದ್ದರು ಆ ಸಹೋದರ. ಅವರು ಕೊಟ್ಟ ಸಲಹೆ ಏನೆಂದರೆ, “ಯೆಹೋವನ ಸೇವೆ ಎಷ್ಟು ಮಾಡಕ್ಕಾಗುತ್ತೋ ಅಷ್ಟನ್ನು ಒಳ್ಳೇದಾಗಿ ಮಾಡಲು ಸಹಾಯ ಕೊಡಪ್ಪಾ ಎಂದು ಯೆಹೋವನನ್ನು ಕೇಳಿ. ನಿಮಗೆ ಏನು ಮಾಡಕ್ಕಾಗುತ್ತೋ ಅದಕ್ಕೆ ಗಮನಕೊಡಿ. ಏನು ಮಾಡಕ್ಕಾಗಲ್ಲವೋ ಅದನ್ನು ಬಿಟ್ಟುಬಿಡಿ.” *

19. (ಎ) 2017⁠ರ ವರ್ಷವಚನ ಏನು ಮಾಡುವಂತೆ ಹೇಳುತ್ತದೆ? (ಬಿ) ವರ್ಷವಚನವನ್ನು ನಿಮ್ಮ ಜೀವನದಲ್ಲಿ ಹೇಗೆ ಅನ್ವಯಿಸಲಿದ್ದೀರಿ?

19 ಈ ಲೋಕ “ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ” ಹೋಗುತ್ತಿದೆ. ಇದರಿಂದ ನಮ್ಮ ಕಷ್ಟಗಳು ದಿನೇ ದಿನೇ ಹೆಚ್ಚಾಗುತ್ತಿವೆ. (2 ತಿಮೊ. 3:1, 13) ಹಾಗಾಗಿ ಕಷ್ಟಗಳು ಬಂದಾಗ ಅದರ ಬಗ್ಗೆನೇ ಚಿಂತೆ ಮಾಡುತ್ತಾ ಕೂರಬೇಡಿ. ಯೆಹೋವನ ಮೇಲೆ ಪೂರ್ಣ ಭರವಸೆ ಇಡಿ ಮತ್ತು ನಿಮ್ಮಿಂದ ಏನು ಮಾಡಲು ಆಗುತ್ತದೋ ಅದಕ್ಕೆ ಗಮನಕೊಡಿ. 2017⁠ರ ವರ್ಷವಚನ ಇದನ್ನೇ ಮಾಡಲು ಹೇಳುತ್ತದೆ: ‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ.’—ಕೀರ್ತ. 37:3.

2017ರ ವರ್ಷವಚನ: ‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ’—ಕೀರ್ತ. 37:3.

^ ಪ್ಯಾರ. 18 ಅಕ್ಟೋಬರ್‌ 15, 2013⁠ರ ಕಾವಲಿನಬುರುಜು ಪುಟ 17⁠ರಿಂದ 20⁠ರಲ್ಲಿರುವ ಸಹೋದರ ಮ್ಯಾಲ್ಕಮ್‌ ಅವರ ಅನುಭವ ನೋಡಿ. ಇವರು 2015⁠ರಲ್ಲಿ ತೀರಿಕೊಂಡರು.