ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಜನರನ್ನು ನಡಿಸುತ್ತಾನೆ

ಯೆಹೋವನು ತನ್ನ ಜನರನ್ನು ನಡಿಸುತ್ತಾನೆ

‘ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾನೆ.’—ಯೆಶಾ. 58:11.

ಗೀತೆಗಳು: 152, 22

1, 2. (ಎ) ಯೆಹೋವನ ಸಾಕ್ಷಿಗಳಿಗೂ ಬೇರೆ ಧರ್ಮಗಳಿಗೂ ಇರುವ ವ್ಯತ್ಯಾಸ ಏನು? (ಬಿ) ನಾವು ಈ ಎರಡು ಲೇಖನಗಳಲ್ಲಿ ಏನು ಚರ್ಚಿಸಲಿದ್ದೇವೆ?

“ನಿಮ್ಮ ನಾಯಕ ಯಾರು?” ಅನ್ನುವ ಪ್ರಶ್ನೆಯನ್ನು ಜನರು ಯೆಹೋವನ ಸಾಕ್ಷಿಗಳಾದ ನಮಗೆ ಕೇಳುತ್ತಾರೆ. ಬೇರೆ ಧರ್ಮಗಳಿಗೆ ಯಾರಾದರೂ ಒಬ್ಬರು ನಾಯಕ ಅಥವಾ ನಾಯಕಿ ಅಂತಿರುತ್ತಾರೆ, ಆದ್ದರಿಂದ ಈ ಪ್ರಶ್ನೆ ಹಾಕುತ್ತಾರೆ. ಆದರೆ ನಮ್ಮ ನಾಯಕ ಒಬ್ಬ ಅಪರಿಪೂರ್ಣ ಮನುಷ್ಯನಲ್ಲ. ಯೇಸು ಕ್ರಿಸ್ತನೇ ನಮ್ಮ ನಾಯಕ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ. ಯೇಸುವಿಗೂ ಒಬ್ಬ ನಾಯಕನಿದ್ದಾನೆ. ಅದು ಅವನ ತಂದೆಯಾದ ಯೆಹೋವ ದೇವರು.—ಮತ್ತಾ. 23:10.

2 ದೇವಜನರನ್ನು ನಡೆಸಲು ಈ ಭೂಮಿಯ ಮೇಲೆ ಒಂದು ಗುಂಪು ಸಹ ಇದೆ. ಅದನ್ನು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಎಂದು ಕರೆಯಲಾಗಿದೆ. (ಮತ್ತಾ. 24:45) ಆದರೆ ಯೆಹೋವನು ತನ್ನ ಮಗನಾದ ಯೇಸುವಿನ ಮೂಲಕ ನಮ್ಮನ್ನು ನಡಿಸುತ್ತಿದ್ದಾನೆ ಎಂದು ನಮಗೆ ಹೇಗೆ ಗೊತ್ತು? ಇದಕ್ಕೆ ಮೂರು ಕಾರಣಗಳನ್ನು ನೋಡಲಿದ್ದೇವೆ. ಹಿಂದಿನ ಕಾಲದಲ್ಲೂ ತನ್ನ ಜನರನ್ನು ನಡಿಸಲು ಯೆಹೋವನು ಕೆಲವು ಮನುಷ್ಯರನ್ನು ಉಪಯೋಗಿಸಿದನು. ಆದರೆ ವಾಸ್ತವದಲ್ಲಿ ಅವರ ಮೂಲಕ ಯೆಹೋವನೇ ತನ್ನ ಜನರನ್ನು ಮಾರ್ಗದರ್ಶಿಸುತ್ತಿದ್ದನು. ಇಂದು ಕೂಡ ಆತನೇ ನಮ್ಮನ್ನು ನಡೆಸುತ್ತಿದ್ದಾನೆ ಅನ್ನುವುದಕ್ಕೆ ಈ ಎರಡು ಲೇಖನಗಳಲ್ಲಿ ಕೆಲವು ಪುರಾವೆಗಳನ್ನು ನೋಡಲಿದ್ದೇವೆ.—ಯೆಶಾ. 58:11.

ಪವಿತ್ರಾತ್ಮದ ಸಹಾಯ

3. ಇಸ್ರಾಯೇಲ್ಯರ ನಾಯಕನಾದ ಮೋಶೆಗೆ ಯಾವುದರ ಸಹಾಯ ಇತ್ತು?

3 ದೇವರ ಪ್ರತಿನಿಧಿಗಳಿಗೆ ಪವಿತ್ರಾತ್ಮ ಸಹಾಯ ಮಾಡಿತು. ಇಸ್ರಾಯೇಲ್ಯರ ಮೇಲೆ ಮೋಶೆಯನ್ನು ನಾಯಕನಾಗಿ ನೇಮಿಸಿದವನು ಸ್ವತಃ ಯೆಹೋವನು. ಈ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು ಮೋಶೆಗೆ ಯಾವುದು ಸಹಾಯಮಾಡಿತು? ಯೆಹೋವನು ಮೋಶೆಗೆ ‘ತನ್ನ ಪವಿತ್ರಾತ್ಮ’ ಕೊಟ್ಟನು. (ಯೆಶಾಯ 63:11-14 ಓದಿ.) ಹಾಗಾಗಿ ಯೆಹೋವನೇ ತನ್ನ ಜನರನ್ನು ನಡೆಸುತ್ತಿದ್ದನು ಎಂಬುದು ಸ್ಪಷ್ಟವಾಗುತ್ತದೆ.

4. ಮೋಶೆಗೆ ಪವಿತ್ರಾತ್ಮ ಸಹಾಯಮಾಡುತ್ತಿತ್ತು ಎಂಬುದಕ್ಕೆ ಯಾವ ಆಧಾರ ಇತ್ತು? (ಲೇಖನದ ಆರಂಭದ ಚಿತ್ರ ನೋಡಿ.)

4 ತನ್ನ ಕರ್ತವ್ಯವನ್ನು ನಿರ್ವಹಿಸಲು ಮೋಶೆಗೆ ಪವಿತ್ರಾತ್ಮ ಸಹಾಯಮಾಡುತ್ತಿದೆ ಎಂದು ಜನರಿಗೆ ಹೇಗೆ ಗೊತ್ತಾಯಿತು? ಯೆಹೋವನ ಪವಿತ್ರಾತ್ಮದ ಸಹಾಯದಿಂದಲೇ ಅವನು ಅದ್ಭುತಗಳನ್ನು ಮಾಡಿದನು ಮತ್ತು ಐಗುಪ್ತದ ಮಹಾರಾಜ ಫರೋಹನ ಮುಂದೆ ನಿಂತು ದೇವರ ಹೆಸರನ್ನು ಕೆಚ್ಚೆದೆಯಿಂದ ತಿಳಿಸಿದನು. (ವಿಮೋ. 7:1-3) ಮೋಶೆ ಒಬ್ಬ ಪ್ರೀತಿಯುಳ್ಳ ನಾಯಕನಾಗಿರಲು, ತಾಳ್ಮೆ ತೋರಿಸಲು ಪವಿತ್ರಾತ್ಮ ಸಹಾಯ ಮಾಡಿತು. ಬೇರೆ ದೇಶಗಳ ಕ್ರೂರ, ಸ್ವಾರ್ಥ ನಾಯಕರಂತೆ ಅವನು ಇರಲಿಲ್ಲ. (ವಿಮೋ. 5:2, 6-9) ಇದನ್ನೆಲ್ಲಾ ನೋಡುವಾಗ, ತನ್ನ ಜನರ ಮೇಲೆ ನಾಯಕತ್ವ ವಹಿಸಲು ಮೋಶೆಯನ್ನು ಯೆಹೋವನೇ ಆರಿಸಿದ್ದಾನೆ ಅನ್ನುವುದು ಸ್ಪಷ್ಟವಾಗಿತ್ತು.

5. ತನ್ನ ಜನರನ್ನು ನಡೆಸಲು ಯೆಹೋವನು ಇನ್ಯಾರಿಗೆ ಪವಿತ್ರಾತ್ಮ ಕೊಟ್ಟನು?

5 ತನ್ನ ಜನರನ್ನು ನಡೆಸಲು ಯೆಹೋವನು ಇನ್ಯಾರಿಗೆ ತನ್ನ ಪವಿತ್ರಾತ್ಮ ಕೊಟ್ಟನು? ಬೈಬಲ್‌ ಹೇಳುತ್ತದೆ: “ನೂನನ ಮಗ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದ್ದನು.” (ಧರ್ಮೋ. 34:9, ಪವಿತ್ರ ಗ್ರಂಥ ಭಾಷಾಂತರ) “ಯೆಹೋವನ ಆತ್ಮವು ಗಿದ್ಯೋನನ ಮೇಲೆ ಬಂತು.” (ನ್ಯಾಯ. 6:34, ಪವಿತ್ರ ಗ್ರಂಥ ಭಾಷಾಂತರ) “ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು.” (1 ಸಮು. 16:13) ಈ ಸಾಮಾನ್ಯ ಮನುಷ್ಯರು ಪವಿತ್ರಾತ್ಮದ ಸಹಾಯದಿಂದ ಅಸಾಮಾನ್ಯ ವಿಷಯಗಳನ್ನು ಮಾಡಿದರು. (ಯೆಹೋ. 11:16, 17; ನ್ಯಾಯ. 7:7, 22; 1 ಸಮು. 17:37, 50) ಇದನ್ನೆಲ್ಲಾ ಮಾಡಲು ಯೆಹೋವನೇ ಅವರಿಗೆ ಸಹಾಯ ಕೊಟ್ಟದ್ದರಿಂದ ಎಲ್ಲಾ ಕೀರ್ತಿ ಆತನಿಗೇ ಸಲ್ಲಬೇಕು.

6. ತಮ್ಮ ನಾಯಕರನ್ನು ಇಸ್ರಾಯೇಲ್ಯರು ಗೌರವಿಸಬೇಕೆಂದು ಯೆಹೋವನು ಯಾಕೆ ಹೇಳಿದನು?

6 ಮೋಶೆ, ಯೆಹೋಶುವ, ಗಿದ್ಯೋನ ಮತ್ತು ದಾವೀದ ಪವಿತ್ರಾತ್ಮದ ಸಹಾಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಂತ ತಿಳಿದಾಗ ಇಸ್ರಾಯೇಲ್ಯರು ಏನು ಮಾಡಬೇಕಿತ್ತು? ಅವರಿಗೆ ಗೌರವ ಕೊಡಬೇಕಿತ್ತು. ಅದರ ಬದಲು ಅವರು ಮೋಶೆಯ ವಿರುದ್ಧ ಗುಣುಗುಟ್ಟಿದರು. ಆಗ ಯೆಹೋವನು ಏನು ಹೇಳಿದನೆಂದು ಗಮನಿಸಿ: “ಈ ಜನರು ಇನ್ನು ಎಷ್ಟರ ಮಟ್ಟಿಗೆ ನನ್ನನ್ನು ಅಲಕ್ಷ್ಯಮಾಡುವರೋ” ಎಂದನು. (ಅರ. 14:2, 11) ತನ್ನ ಜನರನ್ನು ನಡೆಸಲು ಈ ಪುರುಷರನ್ನು ಯೆಹೋವನೇ ಆರಿಸಿದ್ದಾನೆ ಎಂಬುದು ಸ್ಪಷ್ಟವಾಗಿತ್ತು. ಜನರು ಈ ಪುರುಷರಿಗೆ ವಿಧೇಯತೆ ತೋರಿಸಿದಾಗ ಯೆಹೋವನಿಗೇ ವಿಧೇಯತೆ ತೋರಿಸಿದಂತೆ, ಯೆಹೋವನನ್ನೇ ತಮ್ಮ ನಾಯಕನಾಗಿ ಸ್ವೀಕರಿಸಿದಂತೆ ಇತ್ತು.

ದೇವದೂತರ ಸಹಾಯ

7. ದೇವದೂತರು ಮೋಶೆಗೆ ಹೇಗೆ ಸಹಾಯ ಮಾಡಿದರು?

7 ದೇವರ ಪ್ರತಿನಿಧಿಗಳಿಗೆ ದೇವದೂತರು ಸಹಾಯ ಮಾಡಿದರು. (ಇಬ್ರಿಯ 1:7, 14 ಓದಿ.) ಮೋಶೆಗೆ ಮಾರ್ಗದರ್ಶನ ನೀಡಲು ಯೆಹೋವನು ದೇವದೂತರನ್ನು ಬಳಸಿದನು. ಮೊದಲನೇದಾಗಿ, ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿಕೊಂಡು ಬರಲು ದೇವರು ಮೋಶೆಗೆ “ಮುಳ್ಳಿನ ಪೊದೆಯಲ್ಲಿ ಕಾಣಿಸಿಕೊಂಡ ದೇವದೂತನ” ಮೂಲಕ ನೇಮಕವನ್ನು ಕೊಟ್ಟನು. (ಅ. ಕಾ. 7:35) ಎರಡನೇದಾಗಿ, ಯೆಹೋವನು ಧರ್ಮಶಾಸ್ತ್ರವನ್ನು “ದೇವದೂತರ ಮುಖಾಂತರ” ಕೊಟ್ಟನು ಮತ್ತು ಅದನ್ನು ಆಧರಿಸಿ ಮೋಶೆ ಜನರಿಗೆ ನಿರ್ದೇಶನಗಳನ್ನು ಕೊಟ್ಟನು. (ಗಲಾ. 3:19) ಮೂರನೇದಾಗಿ, “ನಾನು ನಿನಗೆ ಹೇಳಿದ ದೇಶಕ್ಕೆ ಈ ಜನರನ್ನು ನಡಿಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆಯಲ್ಲಿ ನಡೆಯುವನು” ಎಂದು ಯೆಹೋವನು ಮೋಶೆಗೆ ಹೇಳಿದನು. (ವಿಮೋ. 32:34) ದೇವದೂತರು ಇದನ್ನೆಲ್ಲಾ ಮಾಡುವುದು ಜನರ ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ ದೇವದೂತರು ಅವನಿಗೆ ಸಹಾಯ ಮಾಡುತ್ತಿದ್ದಾರೆ ಅನ್ನುವುದು ಮೋಶೆ ಕೊಟ್ಟ ನಿರ್ದೇಶನಗಳಿಂದ ಮತ್ತು ಜನರನ್ನು ನಡೆಸಿದ ವಿಧದಿಂದ ಸ್ಪಷ್ಟವಾಗಿತ್ತು.

8. ಯೆಹೋಶುವ ಮತ್ತು ಹಿಜ್ಕೀಯನಿಗೆ ದೇವದೂತರು ಹೇಗೆ ಸಹಾಯ ಮಾಡಿದರು?

8 ದೇವದೂತರು ಬೇರೆ ಯಾರಿಗೆ ಸಹಾಯ ಮಾಡಿದರು? ಕಾನಾನ್ಯರ ವಿರುದ್ಧ ಒಂದು ಯುದ್ಧವನ್ನು ಗೆಲ್ಲಲು “ಯೆಹೋವನ ಸೇನಾಪತಿ” ಅಂದರೆ ಒಬ್ಬ ದೇವದೂತ ಯೆಹೋಶುವನಿಗೆ ಸಹಾಯ ಮಾಡಿದನು ಎಂದು ಬೈಬಲ್‌ ಹೇಳುತ್ತದೆ. (ಯೆಹೋ. 5:13-15; 6:2, 21) ಕಾಲಾನಂತರ ಹಿಜ್ಕೀಯನು ರಾಜನಾಗಿದ್ದ ಸಮಯದಲ್ಲಿ ಅಶ್ಶೂರ್ಯರ ಮಹಾ ಸೈನ್ಯ ಯೆರೂಸಲೇಮಿಗೆ ಮುತ್ತಿಗೆ ಹಾಕಿ ಅದನ್ನು ನಾಶಮಾಡುವ ಬೆದರಿಕೆ ಹಾಕಿತು. ಆದರೆ “ಯೆಹೋವನ ದೂತನು ಹೊರಟುಬಂದು” ಒಂದೇ ರಾತ್ರಿಯಲ್ಲಿ “ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು.”—2 ಅರ. 19:35.

9. ದೇವರ ಪ್ರತಿನಿಧಿಗಳು ಅಪರಿಪೂರ್ಣರಾಗಿದ್ದರೂ ಇಸ್ರಾಯೇಲ್ಯರು ಏನು ಮಾಡಬೇಕಿತ್ತು?

9 ದೇವದೂತರು ಪರಿಪೂರ್ಣರಾಗಿದ್ದರೂ ಅವರಿಂದ ಸಹಾಯ ಪಡೆದ ಈ ಪುರುಷರು ಪರಿಪೂರ್ಣರಾಗಿರಲಿಲ್ಲ. ಮೋಶೆ ಒಮ್ಮೆ ದೇವರಿಗೆ ಗೌರವ ಕೊಡಲು ತಪ್ಪಿಹೋದನು. (ಅರ. 20:12) ಗಿಬ್ಯೋನ್ಯರು ಒಪ್ಪಂದ ಮಾಡಿಕೊಳ್ಳಲು ಬಂದಾಗ ಯೆಹೋಶುವ ದೇವರನ್ನು ವಿಚಾರಿಸದೆ ಒಪ್ಪಿಗೆ ಕೊಟ್ಟನು. (ಯೆಹೋ. 9:14, 15) ಒಂದು ಸಂದರ್ಭದಲ್ಲಿ ಹಿಜ್ಕೀಯ ಅಹಂಕಾರದಿಂದ ವರ್ತಿಸಿದನು. (2 ಪೂರ್ವ. 32:25, 26) ಈ ಪುರುಷರು ಅಪರಿಪೂರ್ಣರಾಗಿದ್ದರೂ ಇಸ್ರಾಯೇಲ್ಯರು ಇವರ ಮಾತನ್ನು ಕೇಳಿ ಅದರಂತೆ ನಡೆಯಬೇಕಿತ್ತು. ಯಾಕೆಂದರೆ ಯೆಹೋವನು ದೇವದೂತರ ಮೂಲಕ ಈ ಪುರುಷರಿಗೆ ಬೆಂಬಲ ಕೊಡುತ್ತಿದ್ದಾನೆಂದು ಇಸ್ರಾಯೇಲ್ಯರು ಗ್ರಹಿಸಲು ಸಾಧ್ಯವಿತ್ತು. ಯೆಹೋವನೇ ತನ್ನ ಜನರನ್ನು ನಡೆಸುತ್ತಿದ್ದನೆಂಬುದು ಸ್ಪಷ್ಟವಾಗಿತ್ತು.

ದೇವರ ವಾಕ್ಯದ ಸಹಾಯ

10. ದೇವರು ಕೊಟ್ಟ ಧರ್ಮಶಾಸ್ತ್ರದಿಂದ ಮೋಶೆಗೆ ಹೇಗೆ ಸಹಾಯವಾಯಿತು?

10 ದೇವರ ಪ್ರತಿನಿಧಿಗಳಿಗೆ ಆತನ ವಾಕ್ಯ ಸಹಾಯ ಮಾಡಿತು. ಇಸ್ರಾಯೇಲ್ಯರಿಗೆ ಕೊಡಲಾದ ಧರ್ಮಶಾಸ್ತ್ರವನ್ನು “ಮೋಶೆಯ ಧರ್ಮಶಾಸ್ತ್ರ” ಎಂದು ಕರೆಯಲಾಗಿದೆ. (1 ಅರ. 2:3) ಆದರೆ ಧರ್ಮಶಾಸ್ತ್ರವನ್ನು ಕೊಟ್ಟದ್ದು ಯೆಹೋವನು ಎಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ಮೋಶೆ ಸಹ ಅದರಲ್ಲಿದ್ದ ನಿಯಮಗಳಿಗೆ ವಿಧೇಯತೆ ತೋರಿಸಬೇಕಿತ್ತು. (2 ಪೂರ್ವ. 34:14) ಉದಾಹರಣೆಗೆ, ದೇವದರ್ಶನ ಗುಡಾರವನ್ನು ಹೇಗೆ ಕಟ್ಟಬೇಕೆಂಬ ನಿರ್ದೇಶನಗಳನ್ನು ಯೆಹೋವನು ಮೋಶೆಗೆ ಕೊಟ್ಟನು. “ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.”—ವಿಮೋ. 40:1-16.

11, 12. (ಎ) ಯೆಹೋಶುವ ಮತ್ತು ಇಸ್ರಾಯೇಲಿನ ರಾಜರು ಏನು ಮಾಡಬೇಕಿತ್ತು? (ಬಿ) ಇವರನ್ನು ದೇವರ ವಾಕ್ಯ ಹೇಗೆ ಮಾರ್ಗದರ್ಶಿಸಿತು?

11 ಯೆಹೋಶುವ ನಾಯಕನಾದಾಗ ಅವನ ಬಳಿ ದೇವರ ವಾಕ್ಯವಿತ್ತು. ಯೆಹೋವನು ಅವನಿಗೆ, “ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ” ಎಂದಿದ್ದನು. (ಯೆಹೋ. 1:8) ನಂತರ ಇಸ್ರಾಯೇಲ್ಯರ ಮೇಲೆ ರಾಜರಾಗಿ ನೇಮಕಗೊಂಡವರು ಪ್ರತಿ ದಿನ ಧರ್ಮಶಾಸ್ತ್ರವನ್ನು ಓದಬೇಕಿತ್ತು. ಅದರ ಒಂದು ಪ್ರತಿಯನ್ನು ಕೈಯಾರೆ ಬರೆದು ‘ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸಬೇಕಿತ್ತು.’ಧರ್ಮೋಪದೇಶಕಾಂಡ 17:18-20 ಓದಿ.

12 ಮುಂದಾಳತ್ವ ವಹಿಸಿದ ಪುರುಷರನ್ನು ದೇವರ ವಾಕ್ಯ ಹೇಗೆ ಮಾರ್ಗದರ್ಶಿಸಿತು? ರಾಜ ಯೋಷೀಯನ ಉದಾಹರಣೆ ನೋಡೋಣ. ದೇವಾಲಯದಲ್ಲಿ ಮೋಶೆಯ ಧರ್ಮಶಾಸ್ತ್ರ ಸಿಕ್ಕಿದಾಗ ಲೇಖಕನಾದ ಶಾಫಾನನು ಅದನ್ನು ಯೋಷೀಯನ ಮುಂದೆ ಓದಿದನು. * ‘ಅರಸನು ಧರ್ಮೋಪದೇಶಗ್ರಂಥದ ವಾಕ್ಯಗಳನ್ನು ಕೇಳಿದಾಗ ಬಟ್ಟೆಗಳನ್ನು ಹರಿದುಕೊಂಡನು.’ ದೇವರ ವಾಕ್ಯದಲ್ಲಿ ಓದಿದ ವಿಷಯಗಳಿಂದ ಪ್ರಚೋದಿತನಾಗಿ ದೇಶದಲ್ಲೆಲ್ಲಾ ಇದ್ದ ವಿಗ್ರಹಗಳನ್ನು ತೆಗೆದು ನಾಶಮಾಡಿದನು ಮತ್ತು ತುಂಬ ದೊಡ್ಡ ಪಸ್ಕಹಬ್ಬಕ್ಕಾಗಿ ಏರ್ಪಾಡು ಮಾಡಿದನು. (2 ಅರ. 22:11; 23:1-23) ಯೋಷೀಯ ಮತ್ತು ಬೇರೆ ನಂಬಿಗಸ್ತ ನಾಯಕರು ದೇವರ ವಾಕ್ಯದ ಮಾರ್ಗದರ್ಶನ ಪಾಲಿಸಿದ್ದರಿಂದ ಜನರನ್ನು ಮತ್ತೆ ಸರಿ ದಾರಿಯಲ್ಲಿ ನಡೆಸಲು ಸಾಧ್ಯವಾಯಿತು. ಹೀಗೆ ದೇವಜನರೆಲ್ಲರೂ ದೇವರ ಮಾತಿಗೆ ವಿಧೇಯರಾಗಲು ಸಾಧ್ಯವಾಯಿತು.

13. ಇಸ್ರಾಯೇಲಿನ ನಾಯಕರು ಮತ್ತು ಬೇರೆ ಜನಾಂಗಗಳ ನಾಯಕರ ಮಧ್ಯೆ ಇದ್ದ ವ್ಯತ್ಯಾಸ ತಿಳಿಸಿರಿ.

13 ಬೇರೆ ಜನಾಂಗಗಳ ನಾಯಕರಿಗೆ ದೇವರ ವಾಕ್ಯದ ಮಾರ್ಗದರ್ಶನ ಇರಲಿಲ್ಲ, ಮಾನವ ಜ್ಞಾನ ಮಾತ್ರ ಇತ್ತು. ಕಾನಾನಿನ ನಾಯಕರು ಮತ್ತು ಜನರು ಘೋರವಾದ ವಿಷಯಗಳನ್ನು ಮಾಡುತ್ತಿದ್ದರು. ನಿಷಿದ್ಧವಾದ ರಕ್ತಸಂಬಂಧಿಗಳೊಡನೆ ಮದುವೆ ಮಾಡಿಕೊಳ್ಳುತ್ತಿದ್ದರು, ಸಲಿಂಗಕಾಮ ಇತ್ತು, ಪಶು ಮತ್ತು ಮನುಷ್ಯನ ಸಂಭೋಗ ನಡೆಯುತ್ತಿತ್ತು, ಮಕ್ಕಳನ್ನು ಬಲಿ ಕೊಡುತ್ತಿದ್ದರು ಮತ್ತು ವಿಗ್ರಹಾರಾಧನೆ ಇತ್ತು. (ಯಾಜ. 18:6, 21-25) ಶುದ್ಧತೆಯ ವಿಷಯದಲ್ಲಿ ದೇವರು ಇಸ್ರಾಯೇಲ್ಯರಿಗೆ ಕೆಲವು ನಿಯಮಗಳನ್ನು ಕೊಟ್ಟಿದ್ದನು. ಇಂಥ ನಿಯಮಗಳು ಬಾಬೆಲಿನ ಮತ್ತು ಐಗುಪ್ತದ ನಾಯಕರಿಗೆ ಇರಲಿಲ್ಲ. (ಅರ. 19:13) ಆದರೆ ಇಸ್ರಾಯೇಲಿನ ನಾಯಕರು ತಮ್ಮ ಜನರಿಗೆ ಆರಾಧನೆಯನ್ನು ಶುದ್ಧವಾಗಿಡುವಂತೆ, ಶಾರೀರಿಕವಾಗಿ ಶುದ್ಧವಾಗಿರುವಂತೆ ಮತ್ತು ಲೈಂಗಿಕ ಅಶುದ್ಧತೆಯಿಂದ ದೂರವಿರುವಂತೆ ಹೇಳುತ್ತಿದ್ದರು. ಯೆಹೋವನೇ ಈ ಎಲ್ಲಾ ನಿರ್ದೇಶನಗಳನ್ನು ಕೊಡುತ್ತಿದ್ದನು ಎಂಬುದು ಸ್ಪಷ್ಟ.

14. ಯೆಹೋವನು ತನ್ನ ಜನರ ಮೇಲೆ ನೇಮಿಸಿದ್ದ ಕೆಲವು ನಾಯಕರಿಗೆ ಯಾಕೆ ಶಿಕ್ಷೆ ಕೊಡಬೇಕಾಯಿತು?

14 ಇಸ್ರಾಯೇಲಿನ ಕೆಲವು ಅರಸರು ದೇವರ ನಿರ್ದೇಶನಗಳನ್ನು ಪಾಲಿಸಲಿಲ್ಲ. ಈ ಅಪನಂಬಿಗಸ್ತ ರಾಜರು ಪವಿತ್ರಾತ್ಮ, ದೇವದೂತರು, ದೇವರ ವಾಕ್ಯ ಕೊಟ್ಟ ಮಾರ್ಗದರ್ಶನವನ್ನು ತಿರಸ್ಕರಿಸಿದರು. ಇಂಥ ಕೆಲವು ನಾಯಕರಿಗೆ ಯೆಹೋವನು ಶಿಕ್ಷೆ ಕೊಟ್ಟನು, ಕೆಲವರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು. (1 ಸಮು. 13:13, 14) ಮುಂದಕ್ಕೆ ಒಬ್ಬ ಪರಿಪೂರ್ಣ ನಾಯಕನನ್ನು ನೇಮಿಸಿದನು.

ಒಬ್ಬ ಪರಿಪೂರ್ಣ ನಾಯಕ

15. (ಎ) ಒಬ್ಬ ಪರಿಪೂರ್ಣ ನಾಯಕ ಬರಲಿದ್ದಾನೆಂದು ಪ್ರವಾದಿಗಳು ಹೇಗೆ ತೋರಿಸಿಕೊಟ್ಟರು? (ಬಿ) ಆ ಪರಿಪೂರ್ಣ ನಾಯಕ ಯಾರು?

15 ಯೆಹೋವನು ತನ್ನ ಜನರ ಮೇಲೆ ಒಬ್ಬ ಪರಿಪೂರ್ಣ ನಾಯಕನನ್ನು ನೇಮಿಸುತ್ತೇನೆಂದು ನೂರಾರು ವರ್ಷಗಳಿಂದ ಹೇಳುತ್ತಾ ಬಂದನು. “ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರರಲ್ಲಿ ನನ್ನಂಥ ಪ್ರವಾದಿಯನ್ನು [ನಿಮಗೆ] ಏರ್ಪಡಿಸುವನು; ಅವನಿಗೇ ನೀವು ಕಿವಿಗೊಡಬೇಕು” ಎಂದು ಮೋಶೆ ಇಸ್ರಾಯೇಲ್ಯರಿಗೆ ಹೇಳಿದನು. (ಧರ್ಮೋ. 18:15) ಈ ವ್ಯಕ್ತಿಯನ್ನು “ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ” ನೇಮಿಸಲಾಗುವುದೆಂದು ಯೆಶಾಯ ಹೇಳಿದನು. (ಯೆಶಾ. 55:4) ಮೆಸ್ಸೀಯನು “ಪ್ರಭು” ಆಗಿರುವನೆಂದು ದಾನಿಯೇಲ ತಿಳಿಸಿದನು. (ದಾನಿ. 9:25) ಕೊನೆಗೆ ಸ್ವತಃ ಯೇಸುವೇ ತಾನು ದೇವಜನರ “ನಾಯಕ” ಎಂದು ಹೇಳಿದನು. (ಮತ್ತಾಯ 23:10 ಓದಿ.) ಯೇಸುವಿನ ಶಿಷ್ಯರು ಅವನನ್ನು ಸಂತೋಷದಿಂದ ಹಿಂಬಾಲಿಸಿದರು. ಏಕೆಂದರೆ ಯೇಸುವನ್ನು ತಮ್ಮ ಮೇಲೆ ನಾಯಕನಾಗಿ ಯೆಹೋವನೇ ನೇಮಿಸಿದ್ದಾನೆ ಎಂದು ಅವರು ಅರ್ಥಮಾಡಿಕೊಂಡರು. (ಯೋಹಾ. 6:68, 69) ಆದರೆ ಇದನ್ನು ನಂಬಲು ಅವರಿಗೆ ಯಾವ ಆಧಾರವಿತ್ತು?

16. ಯೇಸುವಿಗೆ ಪವಿತ್ರಾತ್ಮ ಸಹಾಯ ಮಾಡುತ್ತಿತ್ತೆಂದು ಯಾವುದು ತೋರಿಸುತ್ತದೆ?

16 ಯೇಸುವಿಗೆ ಪವಿತ್ರಾತ್ಮ ಸಹಾಯ ಮಾಡಿತು. ಯೇಸು ದೀಕ್ಷಾಸ್ನಾನ ತೆಗೆದುಕೊಂಡಾಗ “ಆಕಾಶವು ವಿಭಾಗಿಸಲ್ಪಡುವುದನ್ನು ಮತ್ತು ಪವಿತ್ರಾತ್ಮವು ಪಾರಿವಾಳದ ರೂಪದಲ್ಲಿ [ಅವನ] ಮೇಲೆ ಇಳಿದುಬರುತ್ತಿರುವುದನ್ನು” ಯೋಹಾನ ನೋಡಿದನು. ಇದಾದ ಕೂಡಲೆ “ಅರಣ್ಯಕ್ಕೆ ಹೋಗುವಂತೆ ಪವಿತ್ರಾತ್ಮವು ಅವನನ್ನು ಪ್ರಚೋದಿಸಿತು.” (ಮಾರ್ಕ 1:10-12) ಯೇಸು ಭೂಮಿಯಲ್ಲಿದ್ದಾಗ ಎಷ್ಟೋ ವಿಷಯಗಳನ್ನು ಬೋಧಿಸಿದನು, ಅನೇಕ ಅದ್ಭುತಗಳನ್ನು ಮಾಡಿದನು. ಇದನ್ನೆಲ್ಲಾ ಮಾಡಲು ಪವಿತ್ರಾತ್ಮ ಅವನಿಗೆ ಸಹಾಯ ಮಾಡಿತು. (ಅ. ಕಾ. 10:38) ಪ್ರೀತಿ, ಆನಂದ, ಬಲವಾದ ನಂಬಿಕೆ ಎಂಬ ಗುಣಗಳನ್ನು ತೋರಿಸಲೂ ಅವನಿಗೆ ಸಹಾಯ ಮಾಡಿತು. (ಯೋಹಾ. 15:9; ಇಬ್ರಿ. 12:2) ಪವಿತ್ರಾತ್ಮ ತನಗೆ ಸಹಾಯ ಮಾಡುತ್ತಿದೆ ಎಂಬುದಕ್ಕೆ ಇಷ್ಟು ಬಲವಾದ ಪುರಾವೆಯನ್ನು ಬೇರೆ ಯಾವ ನಾಯಕನೂ ಕೊಟ್ಟಿರಲಿಲ್ಲ. ಯೆಹೋವನು ಯೇಸುವನ್ನು ನಾಯಕನಾಗಿ ಆರಿಸಿದ್ದನೆಂಬುದು ಸ್ಪಷ್ಟ.

ಯೇಸುವಿನ ದೀಕ್ಷಾಸ್ನಾನವಾದ ನಂತರ ದೇವದೂತರು ಅವನಿಗೆ ಹೇಗೆ ಸಹಾಯ ಮಾಡಿದರು? (ಪ್ಯಾರ 17 ನೋಡಿ)

17. ಯೇಸುವಿಗೆ ದೇವದೂತರು ಹೇಗೆ ಸಹಾಯ ಮಾಡಿದರು?

17 ಯೇಸುವಿಗೆ ದೇವದೂತರು ಸಹಾಯ ಮಾಡಿದರು. ಯೇಸುವಿಗೆ ದೀಕ್ಷಾಸ್ನಾನವಾಗಿ ಕೆಲವು ದಿನಗಳಾದ ಮೇಲೆ “ದೇವದೂತರು ಬಂದು ಅವನಿಗೆ ಉಪಚಾರಮಾಡಲು ಆರಂಭಿಸಿದರು.” (ಮತ್ತಾ. 4:11) ಅವನು ಸಾಯಲಿಕ್ಕಿದ್ದ ಕೆಲವು ತಾಸುಗಳ ಮುಂಚೆ “ಸ್ವರ್ಗದಿಂದ ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡು ಅವನನ್ನು ಬಲಪಡಿಸಿದನು.” (ಲೂಕ 22:43) ತಾನು ಬೇಡಿಕೊಂಡರೆ ಯೆಹೋವನು ದೂತಗಣವನ್ನೇ ಕಳುಹಿಸುವನೆಂಬ ನಂಬಿಕೆ ಯೇಸುವಿಗಿತ್ತು.—ಮತ್ತಾ. 26:53.

18, 19. ಯೇಸುವಿನ ಜೀವನ ಮತ್ತು ಸೇವೆಯನ್ನು ದೇವರ ವಾಕ್ಯ ಹೇಗೆ ಮಾರ್ಗದರ್ಶಿಸಿತು?

18 ಯೇಸುವಿಗೆ ದೇವರ ವಾಕ್ಯ ಸಹಾಯ ಮಾಡಿತು. ಯೇಸು ಈ ಭೂಮಿಯ ಮೇಲೆ ತನ್ನ ಸೇವೆಯನ್ನು ಆರಂಭಿಸಿದ ಆ ಮೊದಲ ಕ್ಷಣದಿಂದ ಯಾತನಾ ಕಂಬದ ಮೇಲೆ ಕೊನೆ ಉಸಿರೆಳೆಯುವ ವರೆಗೆ ದೇವರ ವಾಕ್ಯ ತನ್ನನ್ನು ಮಾರ್ಗದರ್ಶಿಸುವಂತೆ ಬಿಟ್ಟನು. ಇನ್ನೇನು ಜೀವ ಹೋಗಲಿಕ್ಕಿದ್ದಾಗಲೂ ಮೆಸ್ಸೀಯನಿಗೆ ಸಂಬಂಧಿಸಿದ ಕೆಲವು ಪ್ರವಾದನೆಗಳಿಗೆ ಸೂಚಿಸಿ ಮಾತಾಡಿದನು. (ಮತ್ತಾ. 4:4; 27:46; ಲೂಕ 23:46) ಆದರೆ ಆ ಕಾಲದಲ್ಲಿದ್ದ ಧರ್ಮಗುರುಗಳು ಹಾಗಿರಲಿಲ್ಲ. ದೇವರ ವಾಕ್ಯಕ್ಕಿಂತ ಅವರ ಸಂಪ್ರದಾಯಗಳಿಗೇ ಹೆಚ್ಚು ಮಹತ್ವ ಕೊಡುತ್ತಿದ್ದರು. ಯೆಶಾಯನ ಮೂಲಕ ಯೆಹೋವನು ಹೇಳಿದ ಮಾತುಗಳನ್ನು ಉಲ್ಲೇಖಿಸುತ್ತಾ ಯೇಸು ಅವರ ಬಗ್ಗೆ ಹೇಳಿದ್ದು: “ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ಬಹಳ ದೂರವಾಗಿದೆ. ಅವರು ಮನುಷ್ಯರ ಆಜ್ಞೆಗಳನ್ನೇ ಸಿದ್ಧಾಂತಗಳಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುತ್ತಿರುವುದು ವ್ಯರ್ಥ.” (ಮತ್ತಾ. 15:7-9) ತನ್ನ ಜನರನ್ನು ನಡೆಸಲು ಯೆಹೋವನು ಇಂಥವರನ್ನು ಖಂಡಿತ ಉಪಯೋಗಿಸಲಿಲ್ಲ.

19 ಯೇಸು ಬೋಧಿಸುವಾಗಲೂ ದೇವರ ವಾಕ್ಯವನ್ನು ಉಪಯೋಗಿಸಿದನು. ಧರ್ಮಗುರುಗಳು ಅವನನ್ನು ಸಿಕ್ಕಿಸಿಹಾಕಲು ಏನೇನೋ ಪ್ರಯತ್ನ ಮಾಡುತ್ತಿದ್ದಾಗ ಅವನು ತನ್ನ ಬುದ್ಧಿವಂತಿಕೆ ಅಥವಾ ಅನುಭವದ ಮೇಲಾಧರಿಸಿ ಉತ್ತರ ಕೊಡಲಿಲ್ಲ. ದೇವರ ವಾಕ್ಯದಲ್ಲಿ ಏನಿತ್ತೋ ಅದನ್ನೇ ಉಲ್ಲೇಖಿಸಿ ಮಾತಾಡುತ್ತಿದ್ದನು. (ಮತ್ತಾ. 22:33-40) ಸ್ವರ್ಗದಲ್ಲಿ ತನ್ನ ಜೀವನ ಹೇಗಿತ್ತು, ಈ ವಿಶಾಲವಾದ ವಿಶ್ವವನ್ನು ಸೃಷ್ಟಿ ಮಾಡುವಾಗ ಏನೆಲ್ಲಾ ಆಯಿತು ಎಂಬ ಕಥೆಗಳನ್ನು ಹೇಳುತ್ತಾ ಯೇಸು ಜನರ ಗಮನವನ್ನು ತನ್ನ ಕಡೆ ಸೆಳೆಯಬಹುದಿತ್ತು. ಆದರೆ ಅವನು ದೇವರ ವಾಕ್ಯವನ್ನು ಪ್ರೀತಿಸಿದ್ದರಿಂದ ಅದರ ಬಗ್ಗೆ ಮಾತಾಡಲು ತುಂಬ ಇಷ್ಟಪಟ್ಟನು. ‘ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವನು ಅವರ ಮನಸ್ಸುಗಳನ್ನು ಪೂರ್ಣವಾಗಿ ತೆರೆದನು.’—ಲೂಕ 24:32, 45.

20. (ಎ) ಯೇಸು ಯೆಹೋವನಿಗೆ ಹೇಗೆ ಗೌರವ ಕೊಟ್ಟನು? (ಬಿ) ಯೇಸು ಮತ್ತು Iನೇ ಹೆರೋದ ಅಗ್ರಿಪ್ಪನ ಮನೋಭಾವದಲ್ಲಿ ಇದ್ದ ವ್ಯತ್ಯಾಸವನ್ನು ತಿಳಿಸಿ.

20 ಯೇಸು ಮಾತಾಡುತ್ತಿದ್ದ ರೀತಿಯನ್ನು ನೋಡಿ ಜನರು ಆಶ್ಚರ್ಯಪಡುತ್ತಿದ್ದರು. ಆದರೂ ಅವನು ಯಾವಾಗಲೂ ಎಲ್ಲಾ ಕೀರ್ತಿಯನ್ನು ತನ್ನ ಬೋಧಕನಾದ ಯೆಹೋವನಿಗೆ ಕೊಡುತ್ತಿದ್ದನು. (ಲೂಕ 4:22) ಒಮ್ಮೆ ಒಬ್ಬ ಶ್ರೀಮಂತನು ಯೇಸುವನ್ನು ಗೌರವಿಸಲಿಕ್ಕಾಗಿ “ಒಳ್ಳೇ ಬೋಧಕನೇ” ಎಂಬ ಬಿರುದನ್ನು ಬಳಸಿದನು. ಯೇಸು ದೀನತೆಯಿಂದ ಅವನಿಗೆ, “ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ” ಎಂದು ಹೇಳಿದನು. (ಮಾರ್ಕ 10:17, 18) ಯೇಸು ತೀರಿಹೋಗಿ ಸುಮಾರು ಎಂಟು ವರ್ಷಗಳ ಬಳಿಕ Iನೇ ಹೆರೋದ ಅಗ್ರಿಪ್ಪನು ಯೂದಾಯದ ರಾಜ ಅಥವಾ ನಾಯಕನಾದ. ಯೇಸುವಿನಲ್ಲಿದ್ದ ದೀನಮನಸ್ಸು ಇವನಲ್ಲಿ ಸ್ವಲ್ಪವೂ ಇರಲಿಲ್ಲ. ಒಂದು ದಿನ, ತುಂಬ ಆಕರ್ಷಕವಾದ ದುಬಾರಿ ವಸ್ತ್ರವನ್ನು ಹಾಕಿಕೊಂಡು ಒಂದು ವಿಶೇಷ ಕೂಟಕ್ಕೆ ಬಂದ. ಜನರು ಅವನನ್ನು ನೋಡಿದಾಗ, ಅವನ ಭಾಷಣವನ್ನು ಕೇಳಿಸಿಕೊಂಡಾಗ “ಇದು ಮನುಷ್ಯನ ಧ್ವನಿಯಲ್ಲ, ದೇವರ ಧ್ವನಿಯೇ!” ಎಂದು ಹೊಗಳಿ ಅಟ್ಟಕ್ಕೇರಿಸಿದರು. ಈ ಹೊಗಳಿಕೆಯ ಅಲೆಯಲ್ಲಿ ತೇಲುತ್ತಿದ್ದ “ಹೆರೋದನು ದೇವರಿಗೆ ಮಹಿಮೆಯನ್ನು ಸಲ್ಲಿಸದ ಕಾರಣ ಕೂಡಲೆ ಯೆಹೋವನ ದೂತನು ಅವನನ್ನು ಹೊಡೆದನು; ಅವನು ಹುಳಬಿದ್ದು ಸತ್ತನು.” (ಅ. ಕಾ. 12:21-23) ಯೆಹೋವನು ಈ ಹೆರೋದನನ್ನು ನಾಯಕನಾಗಿ ಆರಿಸಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು. ಆದರೆ ಯೇಸುವಿನ ವಿಷಯದಲ್ಲಿ ಹೀಗಿರಲಿಲ್ಲ. ತನ್ನನ್ನು ನಾಯಕನಾಗಿ ಆರಿಸಿದ್ದು ಯೆಹೋವನೇ ಎಂದು ಯೇಸು ತೋರಿಸಿಕೊಟ್ಟನು. ಯೆಹೋವನೇ ತನ್ನ ಜನರ ಅತ್ಯುನ್ನತ ನಾಯಕನೆಂದು ಯಾವಾಗಲೂ ಗೌರವಿಸಿದನು.

21. ನಾವು ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

21 ಯೇಸು ಸ್ವಲ್ಪ ಕಾಲಕ್ಕೆ ಮಾತ್ರವಲ್ಲ, ಮುಂದೆಯೂ ನಾಯಕನಾಗಿ ಇರಬೇಕೆಂದು ಯೆಹೋವನು ಬಯಸಿದನು. ಯೇಸುವಿನ ಪುನರುತ್ಥಾನವಾದ ಮೇಲೆ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ . . . . ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:18-20) ಆದರೆ ಯೇಸು ಸ್ವರ್ಗದಲ್ಲಿದ್ದಾನೆ, ಅವನನ್ನು ನೋಡಲಿಕ್ಕೂ ಆಗಲ್ಲ. ಹೀಗಿರುವಾಗ ಆತನು ನಮ್ಮನ್ನು ನಡೆಸಲು ಹೇಗೆ ಸಾಧ್ಯ? ಯೇಸುವನ್ನು ಪ್ರತಿನಿಧಿಸಲು ಯೆಹೋವನು ಈ ಭೂಮಿಯ ಮೇಲೆ ಯಾರನ್ನು ಉಪಯೋಗಿಸುತ್ತಿದ್ದಾನೆ? ದೇವರ ಈ ಪ್ರತಿನಿಧಿಗಳು ಯಾರೆಂದು ಕ್ರೈಸ್ತರು ಹೇಗೆ ಕಂಡುಹಿಡಿಯಬಹುದು? ಈ ಪ್ರಶ್ನೆಗಳಿಗೆ ಮುಂದಿನ ಲೇಖನ ಉತ್ತರ ಕೊಡುತ್ತದೆ.

^ ಪ್ಯಾರ. 12 ಇದು ಮೋಶೆ ಬರೆದ ಮೂಲಪ್ರತಿ ಆಗಿರಬಹುದು.